वाचनम्
ಭಾಗಸೂಚನಾ
ರಾವಣನು ಸೀತೆಗೆ ಎರಡು ತಿಂಗಳ ಗಡುವನ್ನು ನೀಡಿದುದು, ಸೀತೆಯು ನಿರಾಕರಿಸಿದುದು ರಾವಣನು ಸೀತೆಯನ್ನು ರಾಕ್ಷಸಿಯರ ವಶಕ್ಕೊಪ್ಪಿಸಿ ಅರಮನೆಯನ್ನು ಸೇರಿದುದು
ಮೂಲಮ್ - 1
ಸೀತಾಯಾ ವಚನಂ ಶ್ರುತ್ವಾ ಪರುಷಂ ರಾಕ್ಷಸಾಧಿಪಃ ।
ಪ್ರತ್ಯುವಾಚ ತತಃ ಸೀತಾಂ ವಿಪ್ರಿಯಂ ಪ್ರಿಯದರ್ಶನಾಮ್ ॥
ಅನುವಾದ
ರಾಕ್ಷಸೇಶ್ವರನಾದ ರಾವಣನು ಸೀತಾದೇವಿಯ ಕಠೋರವಾದ ಮಾತುಗಳನ್ನು ಕೇಳಿ ಪ್ರಿಯದರ್ಶನಳಾದ ಸೀತಾದೇವಿಗೆ ಅಪ್ರಿಯವಾಗಿ ಹೀಗೆ ಹೇಳಿದನು -॥1॥
ಮೂಲಮ್ - 2
ಯಥಾ ಯಥಾ ಸಾಂತ್ವಯಿತಾ ವಶ್ಯಃ ಸ್ತ್ರೀಣಾಂ ತಥಾ ತಥಾ ।
ಯಥಾ ಯಥಾ ಪ್ರಿಯಂ ವಕ್ತಾ ಪರಿಭೂತಸ್ತಥಾ ತಥಾ ॥
ಅನುವಾದ
‘‘ಲೋಕದಲ್ಲಿ ಪುರುಷನು ಸ್ತ್ರೀಯನ್ನು ಸಾಂತ್ವನಗೊಳಿಸಿದಷ್ಟು ಅವನು ಸ್ತ್ರೀಯಳಿಗೆ ಅಧೀನನಾಗುತ್ತಾನೆ. ಅವರನ್ನು ತನಗೆ ಅನುಕೂಲವಾಗಿಸಿಕೊಳ್ಳಲು ಪ್ರಿಯವಚನಗಳನ್ನು ಆಡಿದಷ್ಟು ಅವರಿಂದ ಇನ್ನೂ ತಿರಸ್ಕಾರಕ್ಕೆ ಗುರಿಯಾಗುತ್ತಾನೆ.॥2॥
ಮೂಲಮ್ - 3
ಸಂನಿಯಚ್ಛತಿ ಮೇ ಕ್ರೋಧಂ ತ್ವಯಿ ಕಾಮಃ ಸಮುತ್ಥಿತಃ ।
ದ್ರವತೋಮಾರ್ಗಮಾಸಾದ್ಯ ಹಯಾನಿವ ಸುಸಾರಥಿಃ ॥
ಅನುವಾದ
ಹದ್ದುಮೀರಿ ಹೋಗುತ್ತಿರುವ ಕುದುರೆಗಳನ್ನು ನಿಪುಣನಾದ ಸಾರಥಿಯು ಸರಿದಾರಿಗೆ ತರುವಂತೆ, ನಿನ್ನ ಮಾತನ್ನು ಕೇಳಿ ಉಕ್ಕಿಬರುತ್ತಿರುವ ನನ್ನ ಕೋಪವನ್ನು ನಿನ್ನ ವಿಷಯದಲ್ಲಿ ನನಗುಂಟಾದ ಪ್ರೇಮವು ತಡೆಯುತ್ತಿದೆ.॥3॥
ಮೂಲಮ್ - 4
ವಾಮಃ ಕಾಮೋ ಮನುಷ್ಯಾಣಾಂ ಯಸ್ಮಿನ್ ಕಿಲ ನಿಬಧ್ಯತೇ ।
ಜನೇ ತಸ್ಮಿಂಸ್ತ್ವನುಕ್ರೋಶಃ ಸ್ನೇಹಶ್ಚ ಕಿಲ ಜಾಯತೇ ॥
ಅನುವಾದ
ಉತ್ಕಟವಾದ ವ್ಯಾಮೋಹವಿರುವ ಜನರು ನಮಗೆ ಪ್ರತಿಕೂಲವಾಗಿ ಪ್ರವರ್ತಿಸಿದರೂ ಅವರ ಮೇಲೆ ಕೋಪವು ಬರುವುದಿಲ್ಲವಲ್ಲ! ಅವರ ಕುರಿತು ದಯೆ, ಪ್ರೇಮ, ಹೆಚ್ಚುತ್ತಲೇ ಇದ್ದು, ಶಕ್ತಿಯು ಕುಂಠಿತವಾಗುತ್ತದೆ.॥4॥
ಮೂಲಮ್ - 5
ಏತಸ್ಮಾತ್ ಕಾರಣಾನ್ನ ತ್ವಾಂ ಘಾತಯಾಮಿ ವರಾನನೇ ।
ವಧಾರ್ಹಾಮವಮಾನಾರ್ಹಾಂ ಮಿಥ್ಯಾಪ್ರವ್ರಜಿತೇ ರತಾಮ್ ॥
ಅನುವಾದ
ಎಲೈ ಸುಮುಖಿಯೇ! ಈ ಕಾರಣದಿಂದಲೇ ನೀನು ವಧಾರ್ಹಳಾಗಿದ್ದರೂ, ಅಪಮಾನಗೊಳಿಸಲು ತಕ್ಕವಳಾದರೂ, ಕಪಟ ಸಂನ್ಯಾಸಿಯಂತೆ ಕಾಡಿನಲ್ಲಿ ಅಲೆದಾಡುತ್ತಿರುವ ರಾಮನಲ್ಲಿಯೇ ಅನುರಕ್ತಳಾಗಿರುವ ನಿನ್ನನ್ನು ಶಿಕ್ಷಿಸುತ್ತಿಲ್ಲ.॥5॥
ಮೂಲಮ್ - 6
ಪರುಷಾಣೀಹ ವಾಕ್ಯಾನಿ ಯಾನಿ ಯಾನಿ ಬ್ರವೀಷಿಮಾಮ್ ।
ತೇಷು ತೇಷು ವಧೋ ಯುಕ್ತಸ್ತವ ಮೈಥಿಲಿ ದಾರುಣಃ ॥
ಅನುವಾದ
ಎಲೈ ಮೈಥಿಲಿ! ನೀನು ನನ್ನ ವಿಷಯದಲ್ಲಿ ಆಡಿದ ಕರ್ಣ ಕಠೋರವಾದ ಒಂದೊಂದು ಮಾತಿಗೂ ದಾರುಣವಾದ ಮರಣದಂಡನೆಯನ್ನು ವಿಧಿಸಲು ಅರ್ಹವಾಗಿದೆ.॥6॥
ಮೂಲಮ್ - 7
ಏವಮುಕ್ತ್ವಾ ತು ವೈದೇಹೀಂ ರಾವಣೋ ರಾಕ್ಷಸಾಧಿಪಃ ।
ಕ್ರೋಧಸಂರಂಭಸಂಯುಕ್ತಃ ಸೀತಾಮುತ್ತರಮಬ್ರವೀತ್ ॥
ಅನುವಾದ
ರಾಕ್ಷಸ ರಾಜನಾದ ರಾವಣನು ವೈದೇಹಿಯ ಬಳಿ ಹೀಗೆ ಹೇಳಿ ಕೋಪೋದ್ರಿಕ್ತನಾಗಿ ಮರಳಿ ಅವಳಲ್ಲಿ ಹೀಗೆ ನುಡಿದನು.॥7॥
ಮೂಲಮ್ - 8
ದ್ವೌ ಮಾಸೌ ರಕ್ಷಿತವ್ಯೌ ಮೇ ಯೋವಧಿಸ್ತೇ ಮಯಾ ಕೃತಃ ।
ತತಃ ಶಯನಮಾರೋಹ ಮಮ ತ್ವಂ ವರವರ್ಣಿನಿ ॥
ಅನುವಾದ
ಎಲೈ ವರವರ್ಣಿನಿ! ನಾನು ಈ ಹಿಂದೆ ನನಗೆ ವಶಳಾಗಲು ಹನ್ನೆರಡು ತಿಂಗಳುಗಳ ಅವಧಿಯನ್ನು ನಿನಗೆ ಕೊಟ್ಟಿದ್ದೆ. ಅವುಗಳಲ್ಲಿ ಎರಡು ಮಾಸಗಳೂ ಮಾತ್ರ ಉಳಿದಿವೆ. ಆ ಎರಡು ಮಾಸಗಳು ನಾನು ಪ್ರತೀಕ್ಷೆ ಮಾಡುತ್ತೇನೆ. ಅಷ್ಟರೋಳಗಾಗಿ ನೀನು ನನಗೆ ವಶಳಾಗಬೇಕು.॥8॥
ಮೂಲಮ್ - 9
ದ್ವಾಭ್ಯಾಮೂರ್ಧ್ವಂತುಮಾಸಾಭ್ಯಾಂ ಭರ್ತಾರಂಮಾಮನಿಚ್ಛತೀಮ್ ।
ಮಮ ತ್ವಾಂ ಪ್ರಾತರಾಶಾರ್ಥೇಮಾಲಭಂತೇ ಮಹಾನಸೇ ॥
ಅನುವಾದ
ಈ ಎರಡು ತಿಂಗಳು ಕಳೆದ ನಂತರವೂ ನೀನು ನನ್ನನ್ನು ಪತಿಯನ್ನಾಗಿ ಸ್ವೀಕರಿಸದಿದ್ದರೆ, ನನ್ನ ಅಡಿಗೆಯವರು ನಿನ್ನನ್ನು ಬೆಳಗ್ಗಿನ ಉಪಾಹಾರಕ್ಕಾಗಿ ಕತ್ತರಿಸಿ ತುಂಡು-ತುಂಡುಮಾಡಿ ಬಿಡುತ್ತಾರೆ.’’॥9॥
ಮೂಲಮ್ - 10
ತಾಂ ತರ್ಜ್ಯಮಾನಾಂ ಸಂಪ್ರೇಕ್ಷ್ಯ ರಾಕ್ಷಸೇಂದ್ರೇಣ ಜಾನಕೀಮ್ ।
ದೇವಗಂಧರ್ವಕನ್ಯಾಸ್ತಾ ವಿಷೇದುರ್ವಿಕೃತೇಕ್ಷಣಾಃ ॥
ಅನುವಾದ
ರಾಕ್ಷಸೇಂದ್ರನಾದ ರಾವಣನು ಈ ವಿಧವಾಗಿ ಸೀತಾದೇವಿಯನ್ನು ಬೆದರಿಸುತ್ತಿರಲು, ಅವನ ಸಮೀಪದಲ್ಲಿದ್ದ ದೇವ, ಗಂಧರ್ವಕನ್ಯೆಯರು ವಿಷಾದಪಟ್ಟರು. ಅವರ ಕಣ್ಣುಗಳಲ್ಲಿ ನೀರು ತುಂಬಿ ವಿಕಾರವಾಗಿ ಕಾಣುತ್ತಿದ್ದರು.॥10॥
ಮೂಲಮ್ - 11
ಓಷ್ಠ ಪ್ರಕಾರೈರಪರಾ ವಕ್ತ್ರೈ ರ್ನೇತ್ರೈಸ್ತಥಾಪರಾಃ ।
ಸೀತಾಮಾಶ್ವಾಸಯಾಮಾಸುಸ್ತರ್ಜಿತಾಂ ತೇನ ರಕ್ಷಸಾ ॥
ಅನುವಾದ
ಅವರಲ್ಲಿ ಕೆಲವರು ತುಟಿಗಳ ಸ್ಪಂದನದಿಂದಲೂ, ಕೆಲವರು ಕಣ್ಣುಗಳ ನೋಟದಿಂದಲೂ, ಕೆಲವರು ಮುಖಭಾವಗಳಿಂದಲೂ, ಸೀತಾದೇವಿಯನ್ನು ಸಂತೈಸಿದರು. ರಾವಣನ ಭಯದಿಂದ ಯಾರೂ ಮಾತಾಡದೆ ಮುಖ-ನೇತ್ರ, ಅಧರ ಸಂಜ್ಞೆಗಳಿಂದಲೇ ಅನುಕಂಪವನ್ನು ತೋರಿಸುತ್ತಿದ್ದರು.॥11॥
ಮೂಲಮ್ - 12
ತಾಭಿರಾಶ್ವಾಸಿತಾ ಸೀತಾ ರಾವಣಂ ರಾಕ್ಷಸಾಧಿಪಮ್ ।
ಉವಾಚಾತ್ಮಹಿತಂ ವಾಕ್ಯಂ ವೃತ್ತಶೌಂಡೀರ್ಯಗರ್ವಿತಮ್ ॥
ಅನುವಾದ
ಈ ವಿಧವಾಗಿ ಅವರಿಂದ ಸಮಾಧಾನಗೊಳಿಸಲ್ಪಟ್ಟ ಸೀತಾದೇವಿಯು ರಾವಣನಿಗೆ ತನ್ನ ಪಾತಿವ್ರತ್ಯದ ಬಲ - ಗರ್ವದಿಂದ ಅವನ ಆತ್ಮಹಿತಕ್ಕೆ ಸಾಧಕವಾದ ಈ ಮಾತುಗಳನ್ನು ಹೇಳಿದಳು -॥12॥
ಮೂಲಮ್ - 13
ನೂನಂ ನ ತೇ ಜನಃ ಕಶ್ಚಿದಸ್ತಿ ನಿಃಶ್ರೇಯಸೇ ಸ್ಥಿತಃ ।
ನಿವಾರಯತಿ ಯೋ ನ ತ್ವಾಂ ಕರ್ಮಣೋಸ್ಮಾದ್ವಿಗರ್ಹಿತಾತ್ ॥
ಅನುವಾದ
‘‘ನಿಶ್ಚಯವಾಗಿಯೂ ಈ ಲಂಕೆಯಲ್ಲಿ ನಿನ್ನ ಅಭ್ಯುದಯದಲ್ಲಿ ಆಸಕ್ತನಾಗಿರುವ ಯಾರೊಬ್ಬನೂ ಇಲ್ಲವೆಂದೇ ತೋರುತ್ತದೆ. ಏಕೆಂದರೆ, ಇಂತಹ ನಿಂದನೀಯ ಕಾರ್ಯದಿಂದ ವಿಮುಖನನ್ನಾಗಿಸಲು ಯಾರೂ ಮುಂದೆ ಬರುತ್ತಿಲ್ಲವಲ್ಲ.॥13॥
ಮೂಲಮ್ - 14
ಮಾಂ ಹಿ ಧರ್ಮಾತ್ಮನಃ ಪತ್ನೀಂ ಶಚೀಮಿವ ಶಚೀಪತೇಃ ।
ತ್ವದನ್ಯಸ್ತ್ರೀಷು ಲೋಕೇಷು ಪ್ರಾರ್ಥಯೇನ್ಮನಸಾಪಿ ಕಃ ॥
ಅನುವಾದ
ದೇವೇಂದ್ರನಿಗೆ ಶಚಿದೇವಿಯಂತೆ, ಧರ್ಮಾತ್ಮನಾದ ಶ್ರೀರಾಮನಿಗೆ ನಾನು ಧರ್ಮಪತ್ನಿಯು. ಅಂತಹ ನನ್ನನ್ನು ಈ ಮೂರ್ಲೋಕಗಳಲ್ಲಿ ಯಾರೂ ಮನಸ್ಸಿನಿಂದ ಬಯಸಲಾರರು. ನೀನು ಮಾತ್ರ ಇಂತಹ ದುಸ್ಸಾಹಸಕ್ಕೆ ಕೈಯಿಕ್ಕಿರುವೆ.॥14॥
ಮೂಲಮ್ - 15
ರಾಕ್ಷಸಾಧಮ ರಾಮಸ್ಯ ಭಾರ್ಯಾಮಮಿತತೇಜಸಃ ।
ಉಕ್ತವಾನಸಿ ಯತ್ ಪಾಪಂ ಕ್ವ ಗತಸ್ತಸ್ಯ ಮೋಕ್ಷ್ಯಸೇ ॥
ಅನುವಾದ
ಎಲೈ ರಾಕ್ಷಸಾಧಮನೆ! ಮಹಾತೇಜಸ್ವಿಯಾದ ಶ್ರೀರಾಮನ ಭಾರ್ಯೆಯಾದ ನನ್ನ ಕುರಿತು ಮಹಾಪಾಪಕರವಾದ ಮಾತುಗಳನ್ನಾಡುತ್ತಿರುವ ನೀನು ಎಲ್ಲಿಗೆ ಹೋಗಿ ಈ ಪಾಪದಿಂದ ತಪ್ಪಿಸಿಕೊಳ್ಳುವೆ?॥15॥
ಮೂಲಮ್ - 16
ಯಥಾ ದೃಪ್ತಶ್ಚ ಮಾತಂಗಃ ಶಶಶ್ಚ ಸಹಿತೋ ವನೇ ।
ತಥಾ ದ್ವಿರದವದ್ರಾಮಸ್ತ್ವಂ ನೀಚ ಶಶವತ್ ಸ್ಮೃತಃ ॥
ಅನುವಾದ
ನೀನು ರಾಮನೊಡನೆ ಯುದ್ಧಕ್ಕೆ ಸಿದ್ಧನಾದರೆ, ಕಾಡಿನಲ್ಲಿರುವ ಮೊಲವು ಮದಭರಿತವಾದ ಗಜವನ್ನು ಇದಿರಿಸಿದಂತೇ ಆದೀತು. ರಾಮನು ಮದಗಜದಂತಿದ್ದರೆ ನೀನು ಕ್ಷುದ್ರವಾದ ಮೊಲದಂತಿರುವೆ.॥16॥
ಮೂಲಮ್ - 17
ಸ ತ್ವಮಿಕ್ಷ್ವಾಕುನಾಥಂ ವೈ ಕ್ಷಿಪನ್ನಿಹ ನ ಲಜ್ಜಸೇ ।
ಚಕ್ಷುಷೋರ್ವಿಷಯಂ ತಸ್ಯ ನ ತಾವದುಪಗಚ್ಛಸಿ ॥
ಅನುವಾದ
ಅಂದು ಇಕ್ಷ್ವಾಕುಪ್ರಭುವಾದ ಶ್ರೀರಾಮನನ್ನು ಮಾಯಾಮೃಗದ ನೆಪದಿಂದ ಆಶ್ರಮದಿಂದ ದೂರ ಹೋಗುವಂತೆ ಮಾಡಿ, ನನ್ನನ್ನು ಅಪಹರಿಸಿರುವಿ. ಅವನ ಪರೋಕ್ಷದಲ್ಲಿ ಈಗ ಈ ರೀತಿಗಳಹಲು ನಿನಗೆ ನಾಚಿಕೆಯಾಗುವುದಿಲ್ಲವೇ?॥17॥
ಮೂಲಮ್ - 18
ಇಮೇ ತೇ ನಯನೇ ಕ್ರೂರೇ ವಿರೂಪೇ ಕೃಷ್ಣಪಿಂಗಲೇ ।
ಕ್ಷಿತೌ ನ ಪತಿತೇ ಕಸ್ಮಾನ್ಮಾಮನಾರ್ಯ ನಿರೀಕ್ಷತಃ ॥
ಅನುವಾದ
ಎಲೈ ಅನಾರ್ಯನೇ! ನನ್ನನ್ನೇ ದುರ-ದುರನೆ ನೋಡುತ್ತಿರುವ ನಿನ್ನ ವಿರೂಪವಾದ, ಕ್ರೂರವಾದ, ಕೃಷ್ಣಪಿಂಗಳ ವರ್ಣವುಳ್ಳ ಕಣ್ಣುಗಳೇಕೆ ಇನ್ನೂ ಕಳಚಿ ಬೀಳುತ್ತಿಲ್ಲ?॥18॥
ಮೂಲಮ್ - 19
ತಸ್ಯ ಧರ್ಮಾತ್ಮನಃ ಪತ್ನೀಂ ಸ್ನುಷಾಂ ದಶರಥಸ್ಯ ಚ ।
ಕಥಂ ವ್ಯಾಹರತೋ ಮಾಂ ತೇ ನ ಜಿಹ್ವಾ ವ್ಯವಶೀರ್ಯತೇ ॥
ಅನುವಾದ
ಎಲೈ ಪಾಪಿಷ್ಠನೇ! ನಾನು ಧರ್ಮಾತ್ಮನಾದ ಶ್ರೀರಾಮನ ಭಾರ್ಯೆಯು. ದಶರಥ ಮಹಾರಾಜರ ಸೊಸೆಯು. ನನ್ನ ಕುರಿತು ಆಡಬಾರದ ಮಾತುಗಳನ್ನು ಆಡುತ್ತಿರುವ ನಿನ್ನ ನಾಲಿಗೆ ಏಕೆ ಸೀಳಿಹೋಗುವುದಿಲ್ಲ?॥19॥
ಮೂಲಮ್ - 20
ಅಸಂದೇಶಾತ್ತು ರಾಮಸ್ಯ ತಪಸಶ್ಚಾನು ಪಾಲನಾತ್ ।
ನ ತ್ವಾಂ ಕುರ್ಮಿ ದಶಗ್ರೀವ ಭಸ್ಮ ಭಸ್ಮಾರ್ಹತೇಜಸಾ ॥
ಅನುವಾದ
ದಶಕಂಠನೇ! ನೀನು ಭಸ್ಮವಾಗಲೂ ಅರ್ಹನಾದವನು. ನನ್ನ ತಪಃಪ್ರಭಾವದಿಂದ, ಪಾತಿವ್ರತ್ಯದ ಮಹಿಮೆಯಿಂದ ನಿನ್ನನ್ನು ಭಸ್ಮಮಾಡಿ ಬಿಡಬಲ್ಲೆ! ಆದರೆ ಹೀಗೆ ಮಾಡಲು ರಾಮನ ಆಜ್ಞೆಯಿಲ್ಲ. ಅದರಿಂದ ನೀನು ಬದುಕಿರುವೆ.॥20॥
ಮೂಲಮ್ - 21
ನಾಪಹರ್ತುಮಹಂ ಶಕ್ಯಾ ತಸ್ಯ ರಾಮಸ್ಯ ಧೀಮತಃ ।
ವಿಧಿಸ್ತವ ವಧಾರ್ಥಾಯ ವಿಹಿತೋ ನಾತ್ರ ಸಂಶಯಃ ॥
ಅನುವಾದ
ಧೀಮಂತನಾದ ಶ್ರೀರಾಮನ ಪತ್ನಿಯಾದ ನನ್ನನ್ನು ಅಪಹರಿಸಿಕೊಂಡು ಬರಲು ನಿನಗೆ ಖಂಡಿತವಾಗಿ ಸಾಧ್ಯವಾಗುತ್ತಿರಲಿಲ್ಲ. ಆದರೆ ನಿನಗೆ ಸಾವು ಬಳಿ ಬಂದಿರುವುದರಿಂದಲೇ ವಿಧಿಯು ಈ ಸಂಚು ಹೂಡಿದೆ. ಇದರಲ್ಲಿ ಸಂದೇಹವೇ ಇಲ್ಲ.॥21॥
ಮೂಲಮ್ - 22
ಶೂರೇಣ ಧನದಭ್ರಾತ್ರಾ ಬಲೈಃ ಸಮುದಿತೇನ ಚ ।
ಅಪೋಹ್ಯ ರಾಮಂ ಕಸ್ಮಾದ್ಧಿ ದಾರಚೌರ್ಯಂ ತ್ವಯಾ ಕೃತಮ್ ॥
ಅನುವಾದ
‘‘ನಾನು ಪರಾಕ್ರಮಿಯು, ಕುಬೇರನ ಸಹೋದರನು, ಅಪಾರ ಬಲಸಂಪನ್ನನು, ಅಮಿತ ಸೇನೆ ನನ್ನ ಬಳಿ ಇದೆ’’ ಎಂದು ಜಂಬ ಕೊಚ್ಚಿಕೊಳ್ಳುತ್ತಿರುವೆಯಲ್ಲ! ಅಂತಹ ನೀನು ಮೋಸದಿಂದ ಶ್ರೀರಾಮನನ್ನು ಬಹಳ ದೂರಕ್ಕೆ ಹೋಗುವಂತೆಮಾಡಿ, ಕಳ್ಳನಂತೆ ಪರಸತಿಯನ್ನು ಏಕೆ ಅಪಹರಿಸಿಕೊಂಡು ಬಂದೆ? ನಿನ್ನಲ್ಲಿ ನಿಜವಾದ ಶಕ್ತಿಯಿದ್ದಿದ್ದರೆ ಅವನೆದುರು ಏಕೆ ಬರಲಿಲ್ಲ?॥22॥
ಮೂಲಮ್ - 23
ಸೀತಾಯಾ ವಚನಂ ಶ್ರುತ್ವಾ ರಾವಣೋ ರಾಕ್ಷಸಾಧಿಪಃ ।
ವಿವೃತ್ಯ ನಯನೇ ಕ್ರೂರೇ ಜಾನಕೀಮನ್ವವೈಕ್ಷತ ॥
ಅನುವಾದ
ರಾಕ್ಷಸಾಧಿಪತಿಯಾದ ರಾವಣನು ಸೀತಾದೇವಿಯ ಮಾತನ್ನು ಕೇಳಿ ಪರಮಕ್ರುದ್ಧನಾಗಿ ಕ್ರೂರವಾದ ಕಣ್ಣುಗಳನ್ನು ಅಗಲಿಸಿ ಜಾನಕಿಯನ್ನು ದುರು-ದುರನೆ ನೋಡಿದನು.॥23॥
ಮೂಲಮ್ - 24
ನೀಲಜೀಮೂತಸಂಕಾಶೋ ಮಹಾಭುಜಶಿರೋಧರಃ ।
ಸಿಂಹಸತ್ತ್ವಗತಿಃ ಶ್ರೀಮಾನ್ ದೀಪ್ತಜಿಹ್ವಾಗ್ರಲೋಚನಃ ॥
ಮೂಲಮ್ - 25
ಚಲಾಗ್ರಮುಕುಟಪ್ರಾಂಶುಶ್ಚಿತ್ರ ಮಾಲ್ಯಾನುಲೇಪನಃ ।
ರಕ್ತಮಾಲ್ಯಾಂಬರಧರಸ್ತಪ್ತಾಂಗದವಿಭೂಷಣಃ ॥
ಮೂಲಮ್ - 26
ಶ್ರೋಣಿಸೂತ್ರೇಣ ಮಹತಾ ಮೇಚಕೇನ ಸುಸಂವೃತಃ ।
ಅಮೃತೋತ್ಪಾದನದ್ಧೇನ ಭುಜಂಗೇನೇವ ಮಂದರಃ ॥
ಮೂಲಮ್ - 27
ತಾಭ್ಯಾಂ ಸ ಪರಿಪೂರ್ಣಾಭ್ಯಾಂ ಭುಜಾಭ್ಯಾಂ ರಾಕ್ಷಸೇಶ್ವರಃ ।
ಶುಶುಭೇಚಲಸಂಕಾಶಃ ಶೃಂಗಾಭ್ಯಾಮಿವ ಮಂದರಃ ॥
ಅನುವಾದ
ರಾವಣನು ನೀಲಮೇಘ ಸದೃಶನಾಗಿದ್ದನು. ಅವನಿಗೆ ದೊಡ್ಡ ಭುಜಗಳಿದ್ದವು. ದಪ್ಪವಾದ ಕುತ್ತಿಗೆಯಿತ್ತು. ಅವನು ಸಿಂಹ ಪರಾಕ್ರಮನೂ, ಸಿಂಹದಂತೆ ನಡಿಗೆಯುಳ್ಳವನೂ ಆಗಿದ್ದನು. ಶ್ರೀಸಂಪನ್ನನಾಗಿದ್ದನು. ಅವನ ನಾಲಿಗೆಯ ತುದಿಯೂ, ಕಣ್ಣುಗಳೂ ದೇದೀಪ್ಯಮಾನವಾಗಿ ಹೊಳೆಯುತ್ತಿದ್ದವು. ಕೋಪದ ಕಾರಣದಿಂದ ಅವನ ಕಿರೀಟದ ತುದಿಯು ಅಲ್ಲಾಡುತ್ತಿದ್ದು ಬಹಳ ಎತ್ತರವಾಗಿರುವಂತೆ ಕಾಣುತ್ತಿದ್ದನು. ವಿಚಿತ್ರವಾದ ಮಾಲೆಗಳನ್ನು ಧರಿಸಿದ್ದು, ಮೈಗೆ ಗಂಧವನ್ನು ಪೂಸಿಕೊಂಡಿದ್ದನು. ಕೆಂಪಾದ ಮಾಲೆಗಳನ್ನು ಮತ್ತು ವಸ್ತ್ರಗಳನ್ನು ಧರಿಸಿದ್ದನು. ಪುಟಕ್ಕೆ ಹಾಕಿದ ಚಿನ್ನದಿಂದ ಮಾಡಿದ ತೋಳ್ಬಳೆಗಳಿಂದ ವಿಭೂಷಿತನಾಗಿದ್ದನು. ಅಮೃತಕ್ಕಾಗಿ ಸಮುದ್ರವನ್ನು ಕಡೆದಾಗ ವಾಸುಕಿಯಿಂದ ಸುತ್ತುವರಿಯಲ್ಪಟ್ಟ ಮಂದರ ಪರ್ವತದಂತೆ, ಮಹಾಮೌಲ್ಯದ ನೀಲವರ್ಣದ ಕಟಿಸೂತ್ರದಿಂದ ಸಮಾವೃತನಾಗಿದ್ದನು. ಪರ್ವತಸದೃಶನಾದ ರಾಕ್ಷಸೇಶ್ವನು ಸುಪ್ರಸಿದ್ಧವಾದ ಅತಿ ಪುಷ್ಟವಾದ ಎರಡು ಬಾಹುಗಳಿಂದ ಕೂಡಿದ್ದು ಎರಡು ಶಿಖರವುಳ್ಳ ಮಂದರಾಚಲದಂತೆ ಶೋಭಿಸುತ್ತಿದ್ದನು.॥24-27॥
ಮೂಲಮ್ - 28
ತರುಣಾದಿತ್ಯವರ್ಣಾಭ್ಯಾಂ ಕುಂಡಲಾಭ್ಯಾಂ ವಿಭೂಷಿತಃ ।
ರಕ್ತಪಲ್ಲವಪುಷ್ಪಾಭ್ಯಾಮಶೋಕಾಭ್ಯಾಮಿವಾಚಲಃ ॥
ಅನುವಾದ
ಬಾಲಸೂರ್ಯನಂತೆ ಥಳ-ಥಳಿಸುತ್ತಿದ್ದ ಕುಂಡಲಗಳನ್ನು ಧರಿಸಿದ್ದ ರಾವಣನು ಕೆಂಪಾದ ಚಿಗುರುಗಳಿಂದಲೂ, ಹೂವುಗಳಿಂದಲೂ, ಕೂಡಿದ ಎರಡು ಅಶೋಕವೃಕ್ಷಗಳಿಂದ ಶೋಭಿಸುವ ಪರ್ವತದಂತೆ ಶೋಭಿಸುತ್ತಿದ್ದನು.॥28॥
ಮೂಲಮ್ - 29
ಸ ಕಲ್ಪವೃಕ್ಷಪ್ರತಿಮೋ ವಸಂತ ಇವ ಮೂರ್ತಿಮಾನ್ ।
ಶ್ಮಶಾನಚೈತ್ಯಪ್ರತಿಮೋ ಭೂಷಿತೋಪಿ ಭಯಂಕರಃ ॥
ಅನುವಾದ
ಅವನು ಕಲ್ಪವೃಕ್ಷಸದೃಶವಾದ ಆಕೃತಿಯನ್ನು ಹೊಂದಿದ ವಸಂತನಂತೆ ಸರ್ವಾಲಂಕಾರ ಭೂಷಿತನಾಗಿದ್ದನು. ಆದರೂ ಅವನು ಸ್ಮಶಾನದಲ್ಲಿರುವ ಮಂಟಪದಂತೆ ಭಯಂಕರನಾಗಿದ್ದನು.॥29॥
ಮೂಲಮ್ - 30
ಅವೇಕ್ಷಮಾಣೋ ವೈದೇಹೀಂ ಕೋಪಸಂರಕ್ತಲೋಚನಃ ।
ಉವಾಚ ರಾವಣಃ ಸೀತಾಂ ಭುಜಂಗ ಇವ ನಿಃಶ್ವಸನ್ ॥
ಅನುವಾದ
ಅಂತಹ ರಾವಣನು ವೈದೇಹಿಯನ್ನು ದುರುಗುಟ್ಟಿ ನೋಡುತ್ತಾ ಕೋಪದಿಂದ ಕೆಂಪಾದ ಕಣ್ಣುಗಳುಳ್ಳವನಾಗಿ ಹಾವಿನಂತೆ ಬುಸುಗುಟ್ಟುತ್ತಾ ಅವಳಲ್ಲಿ ಹೀಗೆ ಹೇಳಿದನು.॥30॥
ಮೂಲಮ್ - 31
ಅನಯೇನಾಭಿಸಂಪನ್ನಮರ್ಥಹೀನಮನುವ್ರತೇ ।
ನಾಶಯಾಮ್ಯಹಮದ್ಯ ತ್ವಾಂ ಸೂರ್ಯಃ ಸಂಧ್ಯಾಮಿವೌಜಸಾ ॥
ಅನುವಾದ
ಎಲೈ ಸೀತೆ! ರಾಮನು ನೀತಿದಪ್ಪಿದವನು. ಧನಹೀನನು. ಅಂತಹವನನ್ನು ಅನುಸರಿಸುತ್ತಿರುವ ನಿನ್ನನ್ನು, ಸೂರ್ಯನು ಮುಂಜಾನೆಯ ಕತ್ತಲನ್ನು ತನ್ನ ತೇಜಸ್ಸಿನಿಂದ ಹೋಗಲಾಡಿಸುವಂತೆ ಈಗಲೇ ಇಲ್ಲವಾಗಿಸುತ್ತೇನೆ.॥31॥
ಮೂಲಮ್ - 32
ಇತ್ಯುಕ್ತ್ವಾ ಮೈಥಿಲೀಂ ರಾಜಾ ರಾವಣಃ ಶತ್ರು ರಾವಣಃ ।
ಸಂದಿದೇಸ ತತಃ ಸರ್ವಾ ರಾಕ್ಷಸೀರ್ಘೋರದರ್ಶನಾಃ ॥
ಅನುವಾದ
ರಾಕ್ಷಸರಿಗೆ ರಾಜನೂ, ಶತ್ರುಗಳನ್ನು ವಧಿಸುವವನೂ ಆದ ರಾವಣನು ಸೀತಾದೇವಿಯ ಬಳಿ ಹೀಗೆ ಹೇಳಿ ಭಯಂಕರರಾಗಿದ್ದ ಕಾವಲಿನ ರಕ್ಕಸಿಯರಿಗೆ ಆಜ್ಞಾಪಿಸಿದನು.॥32॥
ಮೂಲಮ್ - 33
ಏಕಾಕ್ಷೀಮೇಕಕರ್ಣಾಂ ಚ ಕರ್ಣಪ್ರಾವರಣಾಂ ತಥಾ ।
ಗೋಕರ್ಣೀಂ ಹಸ್ತಿಕರ್ಣೀಂ ಚ ಲಂಬಕರ್ಣೀಮಕರ್ಣಿಕಾಮ್ ॥
ಮೂಲಮ್ - 34
ಹಸ್ತಿಪಾದ್ಯಶ್ವಪಾದ್ಯೌ ಚ ಗೋಪದೀಂ ಪಾದಚೂಲಿಕಾಮ್ ।
ಏಕಾಕ್ಷೀಮೇಕಪಾದೀಂ ಚ ಪೃಥುಪಾದೀಮಪಾದಿಕಾಮ್ ॥
ಮೂಲಮ್ - 35
ಅತಿಮಾತ್ರಶಿರೋಗ್ರೀವಾಮತಿಮಾತ್ರಕುಚೋದರೀಮ್ ।
ಅತಿಮಾತ್ರಾಸ್ಯನೇತ್ರಾಂ ಚ ದೀರ್ಘಜಿಹ್ವಾಮಜಿಹ್ವಿಕಾಮ್ ॥
ಮೂಲಮ್ - 36
ಅನಾಸಿಕಾಂ ಸಿಂಹಮುಖೀಂ ಗೋಮುಖೀಂ ಸೂಕರೀಮುಖೀಮ್ ।
ಯಥಾ ಮದ್ವಶಗಾ ಸೀತಾ ಕ್ಷಿಪ್ರಂ ಭವತಿ ಜಾನಕೀ ॥
ಮೂಲಮ್ - 37
ತಥಾ ಕುರುತ ರಾಕ್ಷಸ್ಯಃ ಸರ್ವಾಃ ಕ್ಷಿಪ್ರಂ ಸಮೇತ್ಯ ಚ ।
ಪ್ರತಿಲೋಮಾನುಲೋಮೈಶ್ಚ ಸಾಮದಾನಾದಿಭೇದನೈಃ ॥
ಅನುವಾದ
ಆ ರಾಕ್ಷಸಿಯರಲ್ಲಿ ಕೆಲವರಿಗೆ ಒಂದೇ ಕಣ್ಣಿತ್ತು. ಕೆಲವರಿಗೆ ಒಂದೇ ಕಿವಿಯಿತ್ತು. ಕೆಲವರು ಕಿವಿಗಳನ್ನು ತಲೆಯ ಸುತ್ತಲೂ ಸುತ್ತಿಕೊಂಡಿದ್ದರು. ಕೆಲವರಿಗೆ ಗೋವಿನ ಕಿವಿಗಳೂ, ಕೆಲವರಿಗೆ ಆನೆಯ ಕಿವಿಗಳೂ ಇದ್ದವು. ಕೆಲವರಿಗೆ ನೇತಾಡುತ್ತಿರುವ ಕಿವಿಗಳಿದ್ದವು. ಕೆಲವರಿಗೆ ಕಿವಿಗಳೇ ಇರಲಿಲ್ಲ. ಕೆಲವರಿಗೆ ಆನೆಯ ಕಾಲುಗಳೂ, ಕೆಲವರಿಗೆ ಕುದುರೆಯ ಕಾಲುಗಳೂ, ಕೆಲವರಿಗೆ ಹಸುವಿನ ಕಾಲುಗಳೂ ಇದ್ದುವು. ಕೆಲವರಿಗೆ ಕಾಲುಗಳಲ್ಲಿ ಕೂದಲುಗಳ ಜುಟ್ಟು ಇತ್ತು. ಕೆಲವರಿಗೆ ಒಂದೇ ಕಣ್ಣು ಇತ್ತು. ಕೆಲವರಿಗೆ ಒಂದೇ ಕಾಲಿತ್ತು. ಕೆಲವರಿಗೆ ಅತಿ ದೋಡ್ಡದಾದ ಕಾಲುಗಳಿದ್ದವು. ಕೆಲವರಿಗೆ ಕಾಲುಗಳೇ ಇರಲಿಲ್ಲ. ಕೆಲವರು ಅಳತೆ ಮೀರಿದ ತಲೆಗಳನ್ನು, ಕುತ್ತಿಗೆಗಳನ್ನು, ಹೊಂದಿದ್ದರು. ಕೆಲವರು ಮಿತಿಮೀರಿದ ಸ್ತನಗಳನ್ನೂ, ಹೊಟ್ಟೆಗಳನ್ನೂ ಹೊಂದಿದ್ದರು. ಕೆಲವರು ಅಳತೆ ಮೀರಿದ ಮುಖಗಳನ್ನು, ಕಣ್ಣುಗಳನ್ನು ಹೊಂದಿದ್ದರು. ಕೆಲವರಿಗೆ ಉದ್ದವಾದ ನಾಲಿಗೆಗಳಿದ್ದವು. ಕೆಲವರಿಗೆ ನಾಲಿಗೆ, ಮೂಗುಗಳೇ ಇರಲಿಲ್ಲ. ಕೆಲವರಿಗೆ ಸಿಂಹದ ಮುಖಗಳೂ, ಕೆಲವರಿಗೆ ಗೋವಿನ ಮುಖಗಳೂ, ಕೆಲವರಿಗೆ ಹಂದಿಯ ಮುಖಗಳೂ ಇದ್ದವು. ಇಂತಹ ನಾನಾವಿಕಾರ ರೂಪರಾಗಿದ್ದ ರಾಕ್ಷಸಿಯರಿಗೆ ರಾವಣನು ಅಪ್ಪಣೆ ಇತ್ತನು ಎಲೈ ರಾಕ್ಷಸಿಯರೇ! ನೀವೆಲ್ಲರೂ ಒಟ್ಟಾಗಿ ಸೇರಿ ಅನುಕೂಲ ವಿಧಾನದಿಂದಾಗಲೀ, ಪ್ರತಿಕೂಲ ವಿಧಾನದಿಂದಾಗಲೀ (ಚಂದವಾಗಿ ಮಾತಾಡಿ, ಭಯವನ್ನು ತೋರಿ) ಸಾಮ-ದಾನ-ಭೇದೋಪಾಯಗಳಿಂದಲೂ, ಕಡೆಗೆ ದಂಡೋಪಾಯದಿಂದಾದರೂ ಬಹಳ ಶೀಘ್ರವಾಗಿ ವೈದೇಹಿಯು ನನ್ನ ವಶಳಾಗುವಂತೆ ಮಾಡಿರಿ.॥33-37॥
ಮೂಲಮ್ - 38
ಆವರ್ಜಯತ ವೈದೇಹೀಂ ದಂಡಸ್ಯೋದ್ಯಮನೇನ ಚ ।
ಇತಿ ಪ್ರತಿಸಮಾದಿಶ್ಯ ರಾಕ್ಷಸೇಂದ್ರಃ ಪುನಃ ಪುನಃ ॥
ಮೂಲಮ್ - 39
ಕಾಮಮನ್ಯುಪರೀತಾತ್ಮಾ ಜಾನಕೀಂ ಪರ್ಯತರ್ಜಯತ್ ।
ಉಪಗಮ್ಯ ತತಃ ಕ್ಷಿಪ್ರಂ ರಾಕ್ಷಸೀ ಧಾನ್ಯಮಾಲಿನೀ ॥
ಮೂಲಮ್ - 40
ಪರಿಷ್ವಜ್ಯ ದಶಗ್ರೀವಮಿದಂ ವಚನಮಬ್ರವೀತ್ ।
ಮಯಾ ಕ್ರೀಡ ಮಹಾರಾಜ ಸೀತಯಾ ಕಿಂ ತವಾನಯಾ ॥
ಮೂಲಮ್ - 41
ವಿವರ್ಣಯಾ ಕೃಪಣಯಾ ಮಾನುಷ್ಯಾ ರಾಕ್ಷಸೇಶ್ವರ ।
ನೂನಮಸ್ಯಾ ಮಹಾರಾಜ ನ ದಿವ್ಯಾನ್ ಭೋಗಸತ್ತಮಾನ್ ॥
ಮೂಲಮ್ - 42
ವಿದಧಾತ್ಯಮರಶ್ರೇಷ್ಠಸ್ತವ ಬಾಹುಬಲಾರ್ಜಿತಾನ್ ।
ಅಕಾಮಾಂ ಕಾಮಯಾನಸ್ಯ ಶರೀರಮುಪತಪ್ಯತೇ ॥
ಮೂಲಮ್ - 43
ಇಚ್ಛಂತೀಂ ಕಾಮಯಾನಸ್ಯ ಪ್ರೀತಿರ್ಭವತಿ ಶೋಭನಾ ।
ಏವಮುಕ್ತಸ್ತು ರಾಕ್ಷಸ್ಯಾ ಸಮುತ್ಕ್ಷಿಪ್ತಸ್ತತೋ ಬಲೀ ॥
ಅನುವಾದ
ಕಾಮಕ್ರೋಧಗಳಿಂದ ಆಕ್ರಾಂತನಾಗಿದ್ದ, ರಾಕ್ಷಸೇಂದ್ರನಾದ ರಾವಣನು ರಾಕ್ಷಸಿಯರಿಗೆ ಪದೇ-ಪದೇ ನಿರ್ದೇಶಿಸುತ್ತಾ ಜಾನಕಿಯನ್ನು ಹೆದರಿಸಿ ಹೊರಟನು. ಆಗ ಧಾನ್ಯಮಾಲಿನೀ ಎಂಬ ರಕ್ಕಸಿಯು ಕೂಡಲೇ ರಾವಣನ ಬಳಿಗೆ ಹೋಗಿ ಅವನನ್ನು ಆಲಿಂಗಿಸಿಕೊಂಡು ಹೇಳಿದಳು ಓ ಮಹಾರಾಜಾ! ಈ ಸೀತಾದೇವಿಯು ಮನುಷ್ಯ ಸ್ತ್ರೀಯು. ಕಾಂತಿಹೀನಳು. ದೀನಳೂ ಆದ ಇವಳಿಂದ ನಿನಗೇನು ಆಗಬೇಕಾಗಿದೆ? ನನ್ನೊಡನೆ ರಮಿಸು. ಒಡೆಯಾ! ನಿನ್ನ ಬಾಹುಬಲದಿಂದ ಉಪಾರ್ಜಿತವಾಗಿರುವ ದಿವ್ಯವಾದ ಭೋಗಸಾಮಗ್ರಿಗಳನ್ನು ಅನುಭವಿಸಲು ಸೃಷ್ಟಿಕರ್ತನಾದ ಬ್ರಹ್ಮನು ಇವಳ ಹಣೆಯಲ್ಲಿ ಬರೆದಿಲ್ಲವೆಂಬುದು ನಿಜ. ತನಗೆ ಒಲಿಯದಿರುವವಳನ್ನು ಕಾಮಿಸಿದರೆ ಶರೀರದಲ್ಲಿ ತಾಪವೂ ಹೆಚ್ಚುತ್ತದೆ. ತಾನಾಗಿ ಬಯಸಿ ಬಂದವಳನ್ನು ಕಾಮಿಸುವವನಿಗೆ ಅವಳ ಸಂಗದಿಂದ ಆನಂದವು ಹೆಚ್ಚುತ್ತದೆ. ಧಾನ್ಯಮಾಲಿನಿಯು ರಾಕ್ಷಸೇಶ್ವರನಿಗೆ ಹೀಗೆ ಹೇಳಿ ರಾವಣನನ್ನು ಬೇರೆಡೆಗೆ ಒಯ್ದಳು. ಬಲಿಷ್ಠನಾದ ಮೇಘ ಸದೃಶನಾದ ರಾವಣನು ಗಹ-ಗಹಿಸಿ ನಗುತ್ತಾ ಆ ಸ್ಥಳದಿಂದ ಹಿಂದಿರುಗಿದನು.॥38-43॥
ಮೂಲಮ್ - 44
ಪ್ರಹಸನ್ ಮೇಘಸಂಕಾಶೋ ರಾಕ್ಷಸಃ ಸ ನ್ಯವರ್ತತ ।
ಪ್ರಸ್ಥಿತಃ ಸ ದಶಗ್ರೀವಃ ಕಂಪಯನ್ನಿವ ಮೇದಿನೀಮ್ ॥
ಅನುವಾದ
ಅಶೋಕವನದಿಂದ ಹೊರಟ ರಾವಣನು ಭೂಮಿಯನ್ನು ನಡುಗಿಸುತ್ತಾ, ಹೆಜ್ಜೆಗಳನ್ನಿಡುತ್ತಾ ಸೂರ್ಯನಂತೆ ಹೊಳೆಯುತ್ತಿರುವ ತನ್ನ ಅರಮನೆಯನ್ನು ಪ್ರವೇಶಿಸಿದನು.॥44॥
ಮೂಲಮ್ - 45
ಜ್ವಲದ್ಭಾಸ್ಕರವರ್ಣಾಭಂ ಪ್ರವಿವೇಶ ನಿವೇಶನಮ್ ।
ದೇವಗಂಧರ್ವಕನ್ಯಾಶ್ಚ ನಾಗಕನ್ಯಾಶ್ಚ ಸರ್ವತಃ ।
ಪರಿವಾರ್ಯ ದಶಗ್ರೀವಂ ವಿವಿಶುಸ್ತದ್ಗೃಹೋತ್ತಮಮ್ ॥
ಅನುವಾದ
ದೇವ, ಗಂಧರ್ವ, ನಾಗಕನ್ಯೆಯರು ದಶಗ್ರೀವನನ್ನು ಸುತ್ತುವರೆದು ಅವನ ಜೊತೆಯಲ್ಲೇ ಉತ್ತಮೋತ್ತಮವಾದ ಅರಮನೆಯನ್ನು ಪ್ರವೇಶಿದರು.॥45॥
ಮೂಲಮ್ - 46
ಸ ಮೈಥಿಲೀಂ ಧರ್ಮಪರಾಮವಸ್ಥಿತಾಂ
ಪ್ರವೇಪಮಾನಾಂ ಪರಿಭರ್ತ್ಸ್ಯ ರಾವಣಃ ।
ವಿಹಾಯ ಸೀತಾಂ ಮದನೇನ ಮೋಹಿತಃ
ಸ್ವಮೇವ ವೇಶ್ಮ ಪ್ರವಿವೇಶ ಭಾಸ್ವರಮ್ ॥
ಅನುವಾದ
ಮದನಮೋಹಿತನಾದ ರಾವಣನು ಪತಿವ್ರತಾಧರ್ಮ ಪರಾಯಣೆಯಾದ, ಭಯದಿಂದ ಥರ-ಥರನೆ ನಡುಗುತ್ತಿದ್ದ ಸೀತೆಯನ್ನು ಗರ್ಜನೆಯಿಂದ ಮತ್ತಷ್ಟು ಹೆದರಿಸಿ, ಅವಳನ್ನು ಅಲ್ಲಿಯೇ ಬಿಟ್ಟು ಪ್ರಕಾಶಮಾನವಾದ ತನ್ನ ಅರಮನೆಯನ್ನು ಹೊಕ್ಕನು.॥46॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ದ್ವಾವಿಂಶಃ ಸರ್ಗಃ ॥ 22 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತೆರಡನೆಯ ಸರ್ಗವು ಮುಗಿಯಿತು.