वाचनम्
ಭಾಗಸೂಚನಾ
ಸೀತಾದೇವಿಯು ರಾವಣನಿಗೆ ಹಿತವಾಕ್ಯವನ್ನು ಹೇಳಿ, ಶ್ರೀರಾಮನ ಮಹಿಮೆಯನ್ನು ಕೊಂಡಾಡಿದುದು
ಮೂಲಮ್ - 1
ತಸ್ಯ ತದ್ವಚನಂ ಶ್ರುತ್ವಾ ಸೀತಾ ರೌದ್ರಸ್ಯ ರಕ್ಷಸಃ ।
ಆರ್ತಾ ದೀನಸ್ವರಾ ದೀನಂ ಪ್ರತ್ಯುವಾಚ ಶನೈರ್ವಚಃ ॥
ಅನುವಾದ
ಭಯಂಕರವಾಗಿರುವ ರಾಕ್ಷಸರಾಜನಾದ ರಾವಣನ ಮಾತುಗಳನ್ನು ಕೇಳಿ, ದುಃಖಿತಳಾದ ಸೀತಾದೇವಿಯು ಆರ್ತಳಾಗಿ ದೀನಸ್ವರದಿಂದ ನಿಧಾನವಾಗಿ ಹೀಗೆ ಹೇಳಿದಳು.॥1॥
ಮೂಲಮ್ - 2
ದುಃಖಾರ್ತಾ ರುದತೀ ಸೀತಾ ವೇಪಮಾನಾ ತಪಸ್ವಿನೀ ।
ಚಿಂತಯಂತೀ ವರಾರೋಹಾ ಪತಿಮೇವ ಪತಿವ್ರತಾ ॥
ಮೂಲಮ್ - 3
ತೃಣಮಂತರತಃ ಕೃತ್ವಾ ಪ್ರತ್ಯುವಾಚ ಶುಚಿಸ್ಮಿತಾ ।
ನಿವರ್ತಯ ಮನೋ ಮತ್ತಃ ಸ್ವಜನೇ ಕ್ರಿಯತಾಂ ಮನಃ ॥
ಅನುವಾದ
ಸುಂದರಾಂಗಿಯಾದ ಸೀತಾದೇವಿಯು ದುಃಖಪೀಡಿತಳಾಗಿದ್ದಳು. ಅಳುತ್ತಾ ತರ-ತರನೇ ನಡುಗುತ್ತಿದ್ದಳು. ಪತಿಯನ್ನೇ ಯಾವಾಗಲೂ ಚಿಂತಿಸುತ್ತಿದ್ದಳು. ಶುಚಿಸ್ಮಿತೆಯಾದ ಆ ಸಾಧ್ವಿಯು ಪರಪುರುಷರೋಡನೆ ನೇರವಾಗಿ ಮಾತನಾಡಕೂಡದೆಂಬ ಅಭಿಪ್ರಾಯದಿಂದ ಹುಲ್ಲುಕಡ್ಡಿಯೊಂದನ್ನು ಮಧ್ಯದಲ್ಲಿ ಅಡ್ಡಲಾಗಿಟ್ಟು ಇಂತೆಂದಳು ‘‘ಎಲೈ ರಾಕ್ಷಸರಾಜನೇ! ನಿನ್ನ ಮನಸ್ಸನ್ನು ನನ್ನಿಂದ ತೊಲಗಿಸಿ ಬಿಡು. ನಿನ್ನ ಭಾರ್ಯೆಯರಲ್ಲೇ ಅದು ಅನುರಕ್ತವಾಗಲಿ.॥2-3॥
ಮೂಲಮ್ - 4
ನ ಮಾಂ ಪ್ರಾರ್ಥಯಿತುಂ ಯುಕ್ತಂ ಸುಸಿದ್ಧಿಮಿವ ಪಾಪಕೃತ್ ।
ಅಕಾರ್ಯಂ ನ ಮಯಾ ಕಾರ್ಯಮೇಕಪತ್ನ್ಯಾ ವಿಗರ್ಹಿತಮ್ ॥
ಮೂಲಮ್ - 5
ಕುಲಂ ಸಂಪ್ರಾಪ್ತಯಾ ಪುಣ್ಯಂ ಕುಲೇ ಮಹತಿ ಜಾತಯಾ ।ಏವಮುಕ್ತ್ವಾ ತು ವೈದೇಹೀ ರಾವಣಂ ತಂ ಯಶಸ್ವಿನೀ ॥
ಅನುವಾದ
ಪಾಪಿಷ್ಠನು ಒಳ್ಳೆಯ ಸಿದ್ಧಿಯನ್ನು ಬಯಸುವಂತೆ, ನೀನು ನನ್ನನ್ನು ಬಯಸುವುದು ಯುಕ್ತವಲ್ಲ. ಪಾಪಿಷ್ಠನಿಗೆ ಸಿದ್ಧಿಯು ಸಿದ್ಧಿಸದಂತೆ ನಾನು ನಿನಗೆ ದೊರಕತಕ್ಕವಳಲ್ಲ. ನಾನು ಮಹಾಕುಲದಲ್ಲಿ ಹುಟ್ಟಿ ಪುಣ್ಯಕುಲಕ್ಕೆ ಸೇರಿದವಳು. ಶ್ರೀರಾಮನ ಏಕಪತ್ನಿಯಾಗಿರುವವಳು (ಪತಿವ್ರತೆಯಾಗಿರುವವಳು). ನೀನು ಸೂಚಿಸುತ್ತಿರುವ ಅತಿನಿಂದ್ಯವಾದ ಕಾರ್ಯವನ್ನು ಮಾಡುವುದು ನನಗೆ ಯುಕ್ತವಲ್ಲ.’’ ಯಶೋವತಿಯಾದ ಸೀತಾದೇವಿಯು ಹೀಗೆ ಹೇಳಿ ರಾವಣನನ್ನು ಪೂರ್ಣವಾಗಿ ತಿರಸ್ಕರಿಸುತ್ತಾ ಪುನಃ ಹೀಗೆ ಹೇಳಿದಳು.॥4-5॥
ಮೂಲಮ್ - 6
ರಾಕ್ಷಸಂ ಪೃಷ್ಠತಃ ಕೃತ್ವಾ ಭೂಯೋ ವಚನಮಬ್ರವೀತ್ ।
ನಾಹಮೌಪಯಿಕೀ ಭಾರ್ಯಾ ಪರಭಾರ್ಯಾ ಸತೀ ತವ ॥
ಮೂಲಮ್ - 7
ಸಾಧು ಧರ್ಮಮವೇಕ್ಷಸ್ವ ಸಾಧು ಸಾಧುವ್ರತಂ ಚರ ।
ಯಥಾ ತವ ತಥಾನ್ಯೇಷಾಂ ದಾರಾ ರಕ್ಷ್ಯಾ ನಿಶಾಚರ ॥
ಅನುವಾದ
‘‘ಪತಿವ್ರತೆಯಾಗಿರುವ ನಾನು ಶ್ರೀರಾಮಚಂದ್ರನ ಭಾರ್ಯೆಯು. ನಿನಗೆ ಪರಸತಿಯಾಗಿರುವೆ. ಸತ್ಪುರುಷರ ಧರ್ಮವನ್ನು ಚೆನ್ನಾಗಿ ತಿಳಿದುಕೊಂಡು, ಅವರು ಆಚರಿಸುವಂತೆ ನೀನೂ ಆಚರಿಸು. ಎಲೈ ನಿಶಾಚರನೇ! ನಿನ್ನ ಸತಿಯರು ಪರಪುರುಷರ ವಶರಾಗದಂತೆ ನೀನು ರಕ್ಷಿಸುವಂತೆ, ಪರಪತ್ನಿಯರನ್ನೂ ಅವರ ಶೀಲಕ್ಕೆ ಭಂಗವುಂಟಾಗದಂತೆ ರಕ್ಷಿಸಬೇಕು. ಹೀಗೆ ಗ್ರಹಿಸಿ, ನಿನಗೆ ನೀನೇ ಉಪಮಾನವಾಗಿಸಿಕೊಂಡು ನಿನ್ನ ಭಾರ್ಯೆಯರಲ್ಲೇ ರಮಿಸುವವನಾಗು.’’॥6-7॥
ಮೂಲಮ್ - 8
ಆತ್ಮಾನಮುಪಮಾಂ ಕೃತ್ವಾ ಸ್ವೇಷು ದಾರೇಷು ರಮ್ಯತಾಮ್ ।
ಅತುಷ್ಟಂ ಸ್ವೇಷು ದಾರೇಷು ಚಪಲಂ ಚಲಿತೇಂದ್ರಿಯಮ್ ॥
ಮೂಲಮ್ - 9
ನಯಂತಿ ನಿಕೃತಿಪ್ರಜ್ಞಂ ಪರದಾರಾಃ ಪರಾಭವಮ್ ।
ಇಹ ಸಂತೋ ನ ವಾ ಸಂತಿ ಸತೋ ವಾ ನಾನುವರ್ತಸೇ ॥
ಮೂಲಮ್ - 10
ತಥಾ ಹಿ ವಿಪರೀತಾ ತೇ ಬುದ್ಧಿರಾಚಾರವರ್ಜಿತಾ ।
ವಚೋ ಮಿಥ್ಯಾಪ್ರಣೀತಾತ್ಮಾ ಪಥ್ಯಮುಕ್ತಂ ವಿಚಕ್ಷಣೈಃ ॥
ಮೂಲಮ್ - 11
ರಾಕ್ಷಸಾನಾಮಭಾವಾಯ ತ್ವಂ ವಾ ನ ಪ್ರತಿಪದ್ಯಸೇ ।
ಅಕೃತಾತ್ಮಾನಮಾಸಾದ್ಯ ರಾಜಾನಮನಯೇ ರತಮ್ ॥
ಮೂಲಮ್ - 12
ಸಮೃದ್ಧಾನಿ ವಿನಶ್ಯಂತಿ ರಾಷ್ಟ್ರಾಣಿ ನಗರಾಣಿ ಚ ।
ತಥೇಯಂ ತ್ವಾಂ ಸಮಾಸಾದ್ಯ ಲಂಕಾ ರತ್ನೌಘ ಸಂಕುಲಾ ॥
ಅನುವಾದ
ತನ್ನ ಪತ್ನಿಯರಲ್ಲಿ ತೃಪ್ತಿಹೊಂದದೇ ಇರುವ, ಅಸಭ್ಯನಾದ, ಚಂಚಲವಾದ ಮನಸ್ಸುಳ್ಳ, ವಂಚಕ ಬುದ್ಧಿಯಿಂದ ಕೂಡಿರುವವನು ಪರಸತಿಯರಿಂದ ಪರಾಭವಗೊಳ್ಳುತ್ತಾನೆ. ನಿನ್ನ ಬುದ್ಧಿಯು ಸದಾಚಾರ-ಸದ್ವ್ಯವಹಾರಗಳಿಂದ ದೂರವಾಗಿರುವುದನ್ನು, ವಿರುದ್ಧವಾಗಿರುವುದನ್ನು ನೋಡಿದರೆ, ನಿನ್ನ ರಾಜ್ಯದಲ್ಲಿ ಸತ್ಪುರುಷರೇ ಇಲ್ಲವೆಂದು ಭಾವಿಸಬೇಕಾಗುತ್ತದೆ. ಇದ್ದರೂ ಅವರ ಮಾರ್ಗವನ್ನು ನೀನು ಅನುಸರಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ನೀನು ವ್ಯರ್ಥವಾಗಿ ಪ್ರಣಯ ಪ್ರಲಾಪಗಳನ್ನು ಮಾಡುತ್ತಿರುವೆ. ಸತ್ಪುರುಷರ ಸದುಪದೇಶವನ್ನು ಕೇಳುವುದಿಲ್ಲ. ರಾಕ್ಷಸರ ನಾಶಕ್ಕಾಗಿ ನೀನು ತೊಡಗಿರುವಂತೆ ಕಾಣುತ್ತದೆ. ಸತ್ಪುರುಷರ ಉಪದೇಶಗಳನ್ನು ಗ್ರಹಿಸದಿರುವ ಅನೀತಿವಂತನಾದ ರಾಜನನ್ನು ಪಡೆದ ಸಮೃದ್ಧವಾದ ರಾಷ್ಟ್ರಗಳೂ, ನಗರಗಳೂ ವಿನಾಶ ಹೊಂದುತ್ತವೆ. ಅದೇ ರೀತಿಯಲ್ಲಿ ರತ್ನಗಳ ರಾಶಿಗಳಿಂದ ಸಮೃದ್ಧವಾಗಿರುವ ಈ ಲಂಕೆಯು ಅನೀತಿವಂತನಾದ, ಜಿತೇಂದ್ರಿಯನಲ್ಲದ ನಿನ್ನಂತಹ ರಾಜನನ್ನು ಪಡೆದು, ನೀನೊಬ್ಬನ ಅಪರಾಧದಿಂದಲೇ ಬಹಳ ಬೇಗ ವಿನಾಶಹೊಂದುತ್ತದೆ. ॥8-12॥
ಮೂಲಮ್ - 13
ಅಪರಾಧಾತ್ತವೈಕಸ್ಯ ನ ಚಿರಾದ್ವಿನಶಿಷ್ಯತಿ ।
ಸ್ವಕೃತೈರ್ಹನ್ಯಮಾನಸ್ಯ ರಾವಣಾ ದೀರ್ಘದರ್ಶಿನಃ ॥
ಮೂಲಮ್ - 14
ಅಭಿನಂದಂತಿ ಭೂತಾನಿ ವಿನಾಶೇ ಪಾಪಕರ್ಮಣಃ ।
ಏವಂ ತ್ವಾಂ ಪಾಪಕರ್ಮಾಣಂ ವಕ್ಷ್ಯಂತಿ ನಿಕೃತಾ ಜನಾಃ ॥
ಅನುವಾದ
ಎಲೈ ರಾವಣಾ! ದೂರದೃಷ್ಟಿಯಿಲ್ಲದೆ ತಾನು ಮಾಡುವ ಪಾಪಕರ್ಮದಿಂದಲೇ ವಿನಾಶಹೊಂದುವ ಪಾಪಕರ್ಮಿಯ ನಾಶದಿಂದ ಎಲ್ಲ ಪ್ರಾಣಿಗಳೂ ಸಂತೋಷಗೊಳ್ಳುತ್ತವೆ. ಪಾಪಿಯಾದ ನೀನು ನಾಶಹೊಂದಿದಾಗ ನಿನ್ನಿಂದ ವಂಚಿತರಾದ ಜನರು (ಅಹಿಂಸಕರಾದ ದೇವಗಂಧರ್ವರು) ಸಂತೋಷಗೊಂಡು ‘ಭಯಂಕರನಾದ ಕ್ರೂರಿಯಾದ ರಾವಣನು ದೈವಯೋಗದಿಂದ ವಿನಾಶಹೊಂದಿದನು’, ಇದು ತುಂಬಾ ಒಳ್ಳೆಯದಾಯಿತು ಎಂದು ಹೇಳಿಕೊಳ್ಳುವರು.॥13-14॥
ಮೂಲಮ್ - 15
ದಿಷ್ಟ್ಯೈ ತದ್ವ್ಯಸನಂ ಪ್ರಾಪ್ತೋ ರೌದ್ರ ಇತ್ಯೇವ ಹರ್ಷಿತಾಃ ।
ಶಕ್ಯಾ ಲೋಭಯಿತುಂ ನಾಹಮೈಶ್ವರ್ಯೇಣ ಧನೇನ ವಾ ॥
ಅನುವಾದ
ರಾವಣನೇ! ಐಶ್ವರ್ಯದಿಂದಾಗಲೀ, ಧರ್ಮದಿಂದಾಗಲೀ, ನನ್ನನ್ನು ಪ್ರಲೋಭನಗೊಳಿಸುವುದು ಸರ್ವಥಾ ಸಾಧ್ಯವಿಲ್ಲ. ಸೂರ್ಯನೊಡನೆ ಪ್ರಭೆಯು ಸೇರಿರುವಂತೆ ರಾಘವನೊಡನೆ ನಾನು ಯಾವಾಗಲೂ ಸೇರಿಕೊಂಡೇ ಇರುವೆನು.॥15॥
ಮೂಲಮ್ - 16
ಅನನ್ಯಾ ರಾಘವೇಣಾಹಂ ಭಾಸ್ಕರೇಣ ಪ್ರಭಾ ಯಥಾ ।
ಉಪಧಾಯ ಭುಜಂ ತಸ್ಯ ಲೋಕನಾಥಸ್ಯ ಸತ್ಕೃತಮ್ ॥
ಅನುವಾದ
ಲೋಕನಾಥನಾದ ಶ್ರೀರಾಮನ ತ್ರಿಲೋಕ ಸತ್ಕೃತವಾದ ಭುಜವನ್ನೇ ತಲೆದಿಂಬಾಗಿಸಿಕೊಳ್ಳುತ್ತಿದ್ದ ನಾನು ಬೇರೊಬ್ಬನ ಭುಜವನ್ನು ಹೇಗೆತಾನೇ ಆಶ್ರಯಿಸುವೆ?॥16॥
ಮೂಲಮ್ - 17
ಕಥಂ ನಾಮೋಪಧಾಸ್ಯಾಮಿ ಭುಜಮನ್ಯಸ್ಯ ಕಸ್ಯಚಿತ್ ।
ಅಹಮೌಪಯಿಕೀ ಭಾರ್ಯಾ ತಸ್ಮೈವ ವಸುಧಾಪತೇಃ ॥
ಅನುವಾದ
ವೇದವ್ರತಗಳಿಂದ ಸ್ನಾತನಾದ, ಆತ್ಮಜ್ಞಾನಿಯಾದ ಬ್ರಾಹ್ಮಣನಿಗೆ ಬ್ರಹ್ಮವಿದ್ಯೆಯು ಯೋಗ್ಯವಾಗಿರುವಂತೆ, ಭೂಮಿಗೆ ಒಡೆಯನಾದ ಶ್ರೀರಾಮನಿಗೆ ಮಾತ್ರವೇ ನಾನು ಯೋಗ್ಯ ಭಾರ್ಯೆಯಾಗಿರುವೆನು.॥17॥
ಮೂಲಮ್ - 18
ವ್ರತಸ್ನಾತಸ್ಯ ವಿಪ್ರಸ್ಯ ವಿದ್ಯೇವ ವಿದಿತಾತ್ಮನಃ ।
ಸಾಧುರಾವಣ ರಾಮೇಣ ಮಾಂ ಸಮಾನಯ ದುಃಖಿತಾಮ್ ॥
ಮೂಲಮ್ - 19
ವನೇ ವಾಸಿತಯಾ ಸಾರ್ಧಂ ಕರೇಣ್ವೇವ ಗಜಾಧಿಪಮ್ ।
ಮಿತ್ರಮೌಪಯಿಕಂ ಕರ್ತುಂ ರಾಮಃ ಸ್ಥಾನಂ ಪರೀಪ್ಸತಾ ॥
ಮೂಲಮ್ - 20
ವಧಂ ಚಾನಿಚ್ಛತಾ ಘೋರಂ ತ್ವಯಾಸೌ ಪುರುಷರ್ಷಭಃ ।
ವಿದಿತಃ ಸ ಹಿ ಧರ್ಮಜ್ಞಃ ಶರಣಾಗತವತ್ಸಲಃ ॥
ಅನುವಾದ
ಎಲೈ ಸಾಧುರಾವಣಾ! *ಅರಣ್ಯದಲ್ಲಿ ಸಂಚರಿಸುತ್ತಿರುವ ಹೆಣ್ಣಾನೆಯನ್ನು ಗಜರಾಜನೊಂದಿಗೆ ಸೇರಿಸುವಂತೆ, ಪತಿವಿಯೋಗದಿಂದ ದುಃಖಿತಳಾದ ನನ್ನನ್ನು ಶ್ರೀರಾಮನೊಡನೆ ಸೇರಿಸು. ಇದು ನಿನಗೆ ಉಚಿತವಾಗಿದೆ. ನಿನಗೆ ನಿನ್ನ ರಾಜ್ಯವನ್ನು ಉಳಿಸಿಕೊಳ್ಳಬೇಕೆಂಬ ಇಚ್ಛೆ ಇದ್ದರೆ, ರಾಕ್ಷಸರ ಘೋರವಾದ ವಧೆಯಲ್ಲಿ ನಿನಗೆ ಇಚ್ಛೆ ಇಲ್ಲದಿದ್ದರೆ, ಪುರುಷ ಶ್ರೇಷ್ಠನಾದ ಶ್ರೀರಾಮನಲ್ಲಿ ಸ್ನೇಹಬೆಳೆಸುವುದು ಮೇಲು. ಶ್ರೀರಾಮಚಂದ್ರನು ಸರ್ವಧರ್ಮಗಳನ್ನು ತಿಳಿದವನೂ, ಶರಣಾಗತವತ್ಸಲನೂ ಎಂದು ಪ್ರಸಿದ್ಧನಾದವನು. ನಿನಗೆ ಬದುಕುವ ಇಚ್ಛೆ ಇದ್ದರೆ ಅವನ ಸ್ನೇಹವನ್ನು ಬೆಳೆಸಿಕೊ.॥18-20॥
ಟಿಪ್ಪನೀ
- ಇಲ್ಲಿ ಸಾಧುರಾವಣ ಎಂದು ಸಂಬೋಧಿಸಿದ ಭಾವ ಉಪದೇಶಿಸುವಾಗ ಗೌರವ ಸೂಚಕವಾದ ಸಂಬೋಧನೆ. ಮೊದಲು ಸೀತಾಪಹರಣದ ಸಮಯದಲ್ಲಿ ಸಾಧುವೇಷದಿಂದ ಬಂದಿದ್ದ ಎಂದು.
ಮೂಲಮ್ - 21
ತೇನ ಮೈತ್ರೀ ಭವತು ತೇ ಯದಿ ಜೀವಿತುಮಿಚ್ಛಸಿ ।
ಪ್ರಸಾದಯಸ್ವ ತ್ವಂ ಚೈನಂ ಶರಣಾಗತವತ್ಸಲಮ್ ॥
ಅನುವಾದ
ಶರಣಾಗತವತ್ಸಲನಾದ ಶ್ರೀರಾಮನನ್ನು ನೀನು ಪ್ರಸನ್ನಗೊಳಿಸು. ಶುದ್ಧಹೃದಯದಿಂದ ವಿನೀತನಾಗಿ ನನ್ನನ್ನು ಅವನಿಗೆ ಒಪ್ಪಿಸಿಕೊಡು. ಅದೇ ನಿನಗೆ ಉಚಿತವಾಗಿದೆ. ಇದರಿಂದ ಅವನೂ ಪ್ರಸನ್ನನಾಗುವನು.॥21॥
ಮೂಲಮ್ - 22
ಮಾಂ ಚಾಸ್ಮೈ ಪ್ರಯತೋ ಭೂತ್ವಾ ನಿರ್ಯಾತಯಿತುಮರ್ಹಸಿ ।
ಏವಂ ಹಿ ತೇ ಭವೇತ್ ಸ್ವಸ್ತಿ ಸಂಪ್ರದಾಯ ರಘೂತ್ತಮೇ ॥
ಅನುವಾದ
ಎಲೈ ರಾವಣಾ! ನನ್ನ ಮಾತಿನಂತೆ ನನ್ನನ್ನು ಶ್ರೀರಾಮ ಚಂದ್ರಪ್ರಭುವಿಗೆ ಸಮರ್ಪಿಸುವುದರಿಂದ ನಿನಗೆ ಮಂಗಳ ಉಂಟಾದೀತು. ಇದಕ್ಕೆ ತಪ್ಪಿದರೆ ಮರಣವು ತಪ್ಪದು.॥22॥
ಮೂಲಮ್ - 23
ಅನ್ಯಥಾ ತ್ವಂ ಹಿ ಕುರ್ವಾಣೋ ವಧಂ ಪಾಪ್ಸ್ಯಸಿ ರಾವಣ ।
ವರ್ಜಯೇದ್ವಜ್ರಮುತ್ಸೃಷ್ಟಂವರ್ಜಯೇದಂತಕಶ್ಚಿರಮ್ ॥
ಅನುವಾದ
ಇಂದ್ರನು ಪ್ರಯೋಗಿಸಿದ ವಜ್ರಾಯುಧವಾದರೂ ನಿನ್ನನ್ನು ಕೊಲ್ಲದೆ ಇರಬಹುದು. ಯಮನು ಬಹಳಕಾಲ ನಿನ್ನ ಬಳಿಗೆ ಬರದೇ ಇರಬಹುದು, ಆದರೆ ಜಗತ್ಪತಿಯಾದ ರಾಘವನು ಕೋಪಗೊಂಡರೆ ನಿನ್ನಂತಹ ದುರುಳನನ್ನು ಜೀವಸಹಿತವಾಗಿ ಬಿಡಲಾರನು.॥23॥
ಮೂಲಮ್ - 24
ತ್ವದ್ವಿಧಂ ತು ನ ಸಂಕ್ರುದ್ಧೋ ಲೋಕನಾಥಃ ಸ ರಾಘವಃ ।
ರಾಮಸ್ಯ ಧನುಷಃ ಶಬ್ದಂ ಶ್ರೋಷ್ಯಸಿ ತ್ವಂ ಮಹಾಸ್ವನಮ್ ॥
ಅನುವಾದ
ಇಂದ್ರನು ಪ್ರಯೋಗಿಸಿದ ವಜ್ರಾಯುಧದ ಭಾರೀ ಶಬ್ದದಂತೆ-ಭೂಮ್ಯಾಕಾಶಗಳನ್ನು ನಡುಗಿಸುವಂತಹ ಶ್ರೀರಾಮನ ಧನುಷ್ಟಂಕಾರವನ್ನು ನೀನು ಬೇಗನೇ ಕೇಳಲಿರುವೆ.॥24॥
ಮೂಲಮ್ - 25
ಶತಕ್ರತುವಿಸೃಷ್ಟಸ್ಯ ನಿರ್ಘೋಷಮಶನೇರಿವ ।
ಇಹ ಶೀಘ್ರಂ ಸುಪರ್ವಾಣೋ ಜ್ವಲಿತಾಸ್ಯಾ ಇವೋರಗಾಃ ॥
ಮೂಲಮ್ - 26
ಇಷವೋ ನಿಪತಿಷ್ಯಂತಿ ರಾಮಲಕ್ಷ್ಮಣಲಕ್ಷಣಾಃ ।
ರಕ್ಷಾಂಸಿ ಪರಿನಿಘ್ನಂತಃ ಪುರ್ಯಾಮಸ್ಯಾಂ ಸಮಂತತಃ ॥
ಅನುವಾದ
ಒಳ್ಳೆಯ ಗಿಣ್ಣುಗಳನ್ನು ಹೊಂದಿರುವ ಬುಸುಗುಟ್ಟುವ ಮಹಾಸರ್ಪಗಳಂತೆ ಪ್ರಜ್ವಲಿಸುವ ತೀಕ್ಷ್ಣವಾದ ಅಗ್ರಭಾಗಗಳುಳ್ಳ ರಾಮ-ಲಕ್ಷ್ಮಣರ ಗುರುತು ಇರುವ ದಿವ್ಯವಾದ ಬಾಣಗಳು ಈ ಲಂಕಾ ಪಟ್ಟಣದ ಮೇಲೆ ಬೀಳುವವು. ಶ್ರೀರಾಮ-ಲಕ್ಷ್ಮಣರ ಗರಿಕಟ್ಟಿದ ಬಾಣಗಳು ಈ ಲಂಕಾನಗರದ ಮೇಲೆ ಮಳೆಯಂತೆ ಸುರಿದು ರಾಕ್ಷಸರನ್ನು ಸಂಹರಿಸುತ್ತಾ ಎಲ್ಲೆಡೆ ತುಂಬಿಹೋಗುತ್ತವೆ.॥25-26॥
ಮೂಲಮ್ - 27
ಅಸಂಪಾತಂ ಕರಿಷ್ಯಂತಿ ಪತಂತಃ ಕಂಕವಾಸಸಃ ।
ರಾಕ್ಷಸೇಂದ್ರಮಹಾಸರ್ಪಾನ್ ಸ ರಾಮಗರುಡೋ ಮಹಾನ್ ॥
ಅನುವಾದ
ವೈನತೇಯನು ಸರ್ಪಗಳನ್ನು ಕ್ಷಣಮಾತ್ರದಲ್ಲಿ ಮೇಲೆತ್ತಿಕೊಂಡು ಹೋಗಿ ಕೊಲ್ಲುವಂತೆ ಮಹಾ ಪರಾಕ್ರಮಶಾಲಿಯದ ಶ್ರೀರಾಮರೂಪಿ ಗರುಡನು ಸರ್ಪರೂಪಿ ರಾಕ್ಷಸರನ್ನು ಬಹಳ ಬೇಗನೇ ಸಂಹರಿಸಲಿದ್ದಾನೆ.॥27॥
ಮೂಲಮ್ - 28
ಉದ್ಧರಿಷ್ಯತಿ ವೇಗೇನ ವೈನತೇಯ ಇವೋರಗಾನ್ ।
ಅಪನೇಷ್ಯತಿ ಮಾಂ ಭರ್ತಾ ತ್ವತ್ತಃ ಶೀಘ್ರಮರಿಂದಮಃ ॥
ಅನುವಾದ
ಮಹಾವಿಷ್ಣುವು ತ್ರಿವಿಕ್ರಮನಾಗಿ ಮೂರೇ ಹೆಜ್ಜೆಗಳಿಂದ ಅಸುರರ ಅಪಾರ ಸಂಪತ್ತನ್ನು ಅಪಹರಿಸಿದಂತೆ, ಶತ್ರು ಸಂಹಾರಕನಾದ ನನ್ನ ಪತಿಯು ನಿನ್ನಿಂದ ನನ್ನನ್ನು ಕ್ಷಣಮಾತ್ರದಲ್ಲಿ ಬಿಡಿಸಿಕೊಂಡು ಹೋಗುತ್ತಾನೆ.॥28॥
ಮೂಲಮ್ - 29
ಅಸುರೇಭ್ಯಃ ಶ್ರಿಯಂ ದೀಪ್ತಾಂ ವಿಷ್ಣುಸಿಭಿರಿವ ಕ್ರಮೈಃ ।
ಜನಸ್ಥಾನೇ ಹತಸ್ಥಾನೇ ನಿಹತೇ ರಕ್ಷಸಾಂ ಬಲೇ ॥
ಅನುವಾದ
ಎಲೈ ರಾವಣಾ! ಜನಸ್ಥಾನದಲ್ಲಿ ಖರದೂಷಣಾದಿ ಸಹಿತ ಹದಿನಾಲ್ಕು ಸಾವಿರ ರಾಕ್ಷಸರು ಶ್ರೀರಾಮನಿಂದ ಮಣ್ಣುಗೂಡಿದರು. ಅದರಿಂದ ನಿನ್ನ ಅಧಿಕಾರದಲ್ಲಿದ್ದ ಒಂದು ಸೈನ್ಯವಸಾಹತು ಕೈಬಿಟ್ಟು ಹೋಯಿತು. ಅಷ್ಟೇ ಅಲ್ಲದೆ ಶ್ರೀರಾಮನನ್ನು ಸಂಗ್ರಾಮದಲ್ಲಿ ಎದುರಿಸಲು ಸಾಮರ್ಥ್ಯವಿಲ್ಲದೆ ನೀನು ನನ್ನನ್ನು ಅಪಹರಿಸಿಕೊಂಡು ಬಂದು ದುಷ್ಕಾರ್ಯವನ್ನು ಮಾಡಿರುವೆ.॥29॥
ಮೂಲಮ್ - 30
ಅಶಕ್ತೇನ ತ್ವಯಾ ರಕ್ಷಃ ಕೃತಮೇತದಸಾಧು ವೈ ।
ಆಶ್ರಮಂ ತು ತಯೋಃ ಶೂನ್ಯಂ ಪ್ರವಿಶ್ಯ ನರಸಿಂಹಯೋಃ ॥
ಅನುವಾದ
ಎಲೈ ಅಧಮಾಧಮನೇ! ಸಿಂಹಸದೃಶ ಪರಾಕ್ರಮಿಗಳಾದ ರಾಮ-ಲಕ್ಷ್ಮಣರಿಬ್ಬರೂ ಹೊರಗೆ ಹೋಗಿದ್ದಾಗ, ನೀನು ಕಳ್ಳನಂತೆ ಆಶ್ರಮವನ್ನು ಪ್ರವೇಶಿಸಿ ನನ್ನನ್ನು ಅಪಹರಿಸಿಕೊಂಡು ಬಂದಿರುವೆ.॥30॥
ಮೂಲಮ್ - 31
ಗೋಚರಂ ಗತಯೋರ್ಭ್ರಾತ್ರೋರಪನೀತಾ ತ್ವಯಾಧಮ ।
ನ ಹಿ ಗಂಧಮುಪಾಘ್ರಾಯ ರಾಮಲಕ್ಷ್ಮಣಯೋಸ್ತ್ವಯಾ ॥
ಅನುವಾದ
ಜೋಡಿ ಸಿಂಹಗಳ ವಾಸನೆಯನ್ನು ಮೂಸಿದ ನಾಯಿಗೆ ಅವುಗಳನ್ನು ದಿಟ್ಟಿಸಿ ನೋಡಲು ಸಾಧ್ಯವಾಗದಿರುವಂತೆ ರಾಮ-ಲಕ್ಷ್ಮಣರ ವಾಸನೆಯನ್ನು ಆಘ್ರಾಣಿಸಿದ ನೀನು ಅವರನ್ನು ನೋಡುವುದಾಗಲೀ, ಅವರ ಎದುರು ನಿಲ್ಲುವುದಾಗಲೀ, ಸಾಧ್ಯವಾಗದು.॥31॥
ಮೂಲಮ್ - 32
ಶಕ್ಯಂ ಸಂದರ್ಶನೇ ಸ್ಥಾತುಂ ಶುನಾ ಶಾರ್ದೂಲಯೋರಿವ ।
ತಸ್ಯ ತೇ ವಿಗ್ರಹೇ ತಾಭ್ಯಾಂ ಯುಗಗ್ರಹಣಮಸ್ಥಿರಮ್ ॥
ಅನುವಾದ
ದೇವೇಂದ್ರನ ಎರಡು ತೋಳುಗಳೊಡನೆ ವೃತ್ರಾಸುರನು ಒಂದು ಬಾಹುವಿನಿಂದ ಪರಾಜಿತನಾದಂತೆ, ಚೋರವೃತ್ತಿಯವನಾದ ನಿನಗೆ ರಾಮ-ಲಕ್ಷ್ಮಣರೊಡನೆ ಯುದ್ಧ ಸಂಭವಿಸಿದರೆ ನಿನ್ನ ಪರಾಜಯವು ನಿಶ್ಚಿತವು.॥32॥
ಮೂಲಮ್ - 33
ವೃತ್ರಸ್ಯೇವೇಂದ್ರ ಬಾಹುಭ್ಯಾಂ ಬಾಹೋರೇಕಸ್ಯ ನಿಗ್ರಹಃ ।
ಕ್ಷಿಪ್ರಂ ತವ ಸ ನಾಥೋ ಮೇ ರಾಮಃ ಸೌಮಿತ್ರಿಣಾ ಸಹ ।
ತೋಯಮಲ್ಪಮಿವಾದಿತ್ಯಃ ಪ್ರಾಣಾನಾದಾಸ್ಯತೇ ಶರೈಃ ॥
ಮೂಲಮ್ - 34
ಗಿರಿಂ ಕುಬೇರಸ್ಯ ಗತೋಥವಾಲಯಂ
ಸಭಾಂ ಗತೋ ವಾ ವರುಣಸ್ಯ ರಾಜ್ಞಃ ।
ಅಸಂಶಯಂ ದಾಶರಥೇರ್ನ ಮೋಕ್ಷ್ಯಸೇ
ಮಹಾದ್ರುಮಃ ಕಾಲಹತೋಶನೇರಿವ ॥
ಅನುವಾದ
ಭಗವಾನ್ ಸೂರ್ಯನು ತನ್ನ ಕಿರಣಗಳಿಂದ ಸ್ವಲ್ಪ ನೀರಿರುವ ಹೊಂಡವನ್ನು ಒಣಗಿಸಿ ಬಿಡುವಂತೆ, ನನ್ನ ಪತಿಯಾದ ಶ್ರೀರಾಮನು ಸೌಮಿತ್ರಿಯಿಂದೊಡಗೂಡಿ ಬೇಗನೇ ಬಂದು ತೀಕ್ಷ್ಣವಾದ ಬಾಣಗಳಿಂದ ನಿನ್ನ ಪ್ರಾಣಗಳನ್ನು ಹೀರಿಬಿಡುತ್ತಾನೆ. ನಿನಗೆ ವಿನಾಶಕಾಲವು ಸಮೀಪಿಸಿದೆ. ಮಹಾವೃಕ್ಷವು ಸಿಡಿಲಿನಿಂದ ತಪ್ಪಿಸಿಕೊಳ್ಳಲಾರದೋ, ಹಾಗೆಯೇ ಕಾಲಹತನಾಗಿರುವ ನೀನು ಕೈಲಾಸವನ್ನು ಹೊಕ್ಕರೂ, ಕುಬೇರನ ಅಲಕಾವತಿಯನ್ನು ಪ್ರವೇಶಿಸಿದರೂ, ವರುಣನ ಸಭೆಯಲ್ಲಿ ಆಶ್ರಯಪಡೆದರೂ ದಾಶರಥಿಯ ಬಾಣಗಳಿಂದ ತಪ್ಪಿಸಿಕೊಳ್ಳಲಾರೆ. ಇದರಲ್ಲಿ ಸಂಶಯವೇ ಇಲ್ಲ.॥33-34॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಏಕವಿಂಶಃ ಸರ್ಗಃ ॥ 21 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತೊಂದನೆಯ ಸರ್ಗವು ಮುಗಿಯಿತು.