०२० सीता-रावणसंवादः

वाचनम्
ಭಾಗಸೂಚನಾ

ರಾವಣನು ಸೀತಾದೇವಿಯನ್ನು ಪ್ರಲೋಭನಗೊಳಿಸಲು ಪ್ರಯತ್ನಿಸಿದುದು

ಮೂಲಮ್ - 1

ಸ ತಾಂ ಪತಿವ್ರತಾಂ ದೀನಾಂ ನಿರಾನಂದಾಂ ತಪಸ್ವಿನೀಮ್ ।
ಸಾಕಾರೈರ್ಮಧುರೈರ್ವಾಕ್ಯೈರ್ನ್ಯದರ್ಶಯತ ರಾವಣಃ ॥

ಅನುವಾದ

ಪತಿವ್ರತೆಯೂ, ತಪಸ್ವಿನಿಯೂ, ದುಃಖಿತೆಯೂ, ದೀನಳೂ ಆದ ಆ ದೇವಿಯ ಬಳಿ ರಾವಣನು ಹಸ್ತಮುಖಾದಿ ಸಂಜ್ಞೆಗಳಿಂದ, ಮಧುರವಾದ ವಚನಗಳಿಂದ ತನ್ನ ಮನೋಭಾವವನ್ನು ವ್ಯಕ್ತಪಡಿಸತೊಡಗಿದನು.॥1॥

ಮೂಲಮ್ - 2

ಮಾಂ ದೃಷ್ಟ್ವಾ ನಾಗನಾಸೋರು ಗೂಹಮಾನಾ ಸ್ತನೋದರಮ್ ।
ಅದರ್ಶನಮಿವಾತ್ಮಾನಂ ಭಯಾನ್ನೇತುಂ ತ್ವಮಿಚ್ಛಸಿ ॥

ಅನುವಾದ

ಎಲೈ ಸುಂದರಿಯಾದ ಸೀತೇ! ನನ್ನನ್ನು ನೋಡಿ ನೀನು ವಕ್ಷಸ್ಥಳವನ್ನು ಕೈಗಳಿಂದ ಮುಚ್ಚಿಕೊಂಡಿರುವೆ. ನನಗೆ ಭಯಪಟ್ಟು ನೀನು ಮುಖವನ್ನು ತೋರಿಸಬಾರದೆಂದು ಅಪೇಕ್ಷಿಸುತ್ತಿರುವೆಯಾ?॥2॥

ಮೂಲಮ್ - 3

ಕಾಮಯೇ ತ್ವಾಂ ವಿಶಾಲಾಕ್ಷಿ ಬಹು ಮನ್ಯಸ್ವ ಮಾಂ ಪ್ರಿಯೇ ।
ಸರ್ವಾಂಗಗುಣಸಂಪನ್ನೇ ಸರ್ವಲೋಕಮನೋಹರೇ ॥

ಅನುವಾದ

ಓ ಸರ್ವಾಂಗಸುಂದರೀ! ಸದ್ಗುಣ ಸಂಪನ್ನೆ! ಸರ್ವಲೋಕಮನೋಹಾರಿಣಿಯೇ! ಓ ವಿಶಾಲಾಕ್ಷಿಯೆ! ನಾನು ನಿನ್ನನ್ನು ಪ್ರೇಮಿಸುತ್ತಿರುವೆನು. ಪ್ರಿಯಳೇ! ನನ್ನನ್ನು ಯಥೋಚಿತವಾಗಿ ಗೌರವಿಸು.॥3॥

ಮೂಲಮ್ - 4

ನೇಹ ಕೇಚಿನ್ಮನುಷ್ಯಾ ವಾ ರಾಕ್ಷಸಾಃ ಕಾಮರೂಪಿಣಃ ।
ವ್ಯಪಸರ್ಪತು ತೇ ಸೀತೇ ಭಯಂ ಮತ್ತಃ ಸಮುತ್ಥಿತಮ್ ॥

ಅನುವಾದ

ಇಲ್ಲಿ ಬೇರೆಯಾವ ಮನುಷ್ಯನಾಗಲೀ, ಕಾಮರೂಪಿಗಳಾದ ರಾಕ್ಷಸರಾಗಲೀ ಇಲ್ಲ. ನನ್ನಿಂದ ನಿನಗೆ ಯಾವುದಾದರೂ ಭಯವಿದ್ದರೆ ಬಿಟ್ಟು ಬಿಡು.॥4॥

ಮೂಲಮ್ - 5

ಸ್ವಧರ್ಮೋ ರಕ್ಷಸಾಂ ಭೀರು ಸರ್ವಥೈವ ನ ಸಂಶಯಃ ।
ಗಮನಂ ವಾ ಪರಸ್ತ್ರೀಣಾಂ ಹರಣಂ ಸಂಪ್ರಮಥ್ಯ ವಾ ॥

ಅನುವಾದ

ಓ ಭಯಸ್ವಭಾವದವಳೇ! ಪರಸ್ತ್ರೀಗಮನವಾಗಲೀ, ಪರಸ್ತ್ರೀಯರನ್ನು ಬಲಾತ್ಕಾರಪೂರ್ವಕ ಅಪಹರಿಸುವುದಾಗಲೀ, ರಾಕ್ಷಸರಿಗೆ ಎಲ್ಲ ವಿಧದಿಂದ ಸ್ವಧರ್ಮವೇ ಆಗಿದೆ. ಈ ವಿಷಯದಲ್ಲಿ ಸಂಶಯವೇ ಇಲ್ಲ.॥5॥

ಮೂಲಮ್ - 6

ಏವಂ ಚೈತದಕಾಮಾಂ ತು ನ ತ್ವಾಂ ಸ್ಪ್ರಕ್ಷ್ಯಾಮಿ ಮೈಥಿಲಿ ।
ಕಾಮಂ ಕಾಮಃ ಶರೀರೇ ಮೇ ಯಥಾಕಾಮಂ ಪ್ರವರ್ತತಾಮ್ ॥

ಅನುವಾದ

ಎಲೈ ಮೈಥಿಲೀ! ಅದು ಹಾಗೇ ಇರಲಿ. ಸಹಜವಾಗಿ ನಾನು ಕಾಮಾತುರನು. ನನ್ನ ಶರೀರದಲ್ಲಿ ಕಾಮದೇವನು ತನಗೆ ಇಚ್ಛೆ ಬಂದಂತೆ ನಡೆದುಕೊಳ್ಳಲಿ. ಆದರೆ ನನ್ನ ಮೇಲೆ ಪ್ರೇಮವಿಲ್ಲದಿರುವ ನಿನ್ನನ್ನು ನಾನು ಮುಟ್ಟುವುದೇ ಇಲ್ಲ. (ನೀನು ವಿಷ್ಣುಪ್ರಿಯೆ.* ಅದರಿಂದ ನಾನು ಮುಟ್ಟಲಾರೆನು.)॥6॥

ಟಿಪ್ಪನೀ

*ಅಕಾರಃ-ವಿಷ್ಣುವು.ಅ-ಕಾಮಾ=ಶ್ರೀವಿಷ್ಣುವಿನಲ್ಲಿ ಪ್ರೇಮವಿಡುವವನು. (ಅಕಾಮಾ = ವಿಷ್ಣುಪ್ರಿಯಾ) ‘‘ವಿಷ್ಣುಕಾಮಾಂ ತ್ವಾಂ ನಸ್ಪ್ರಕ್ಷಾಮಿ ಅಂದರೆ ನೀನು ರಾಮನನ್ನು ಮಾತ್ರ ಇಷ್ಟಪಡುವವಳಾಗಿರುವೆ. ಅದರಿಂದ ನಾನು ನಿನ್ನನ್ನು ಮುಟ್ಟುವುದಿಲ್ಲ ಇದು ಭಕ್ತರ ಭಾವವಾಗಿದೆ.

ಮೂಲಮ್ - 7

ದೇವಿ ನೇಹ ಭಯಂ ಕಾರ್ಯಂ ಮಯಿ ವಿಶ್ವಸಿಹಿ ಪ್ರಿಯೇ ।
ಪ್ರಣಯಸ್ವ ಚ ತತ್ತ್ವೇನ ಮೈವಂ ಭೂಃ ಶೋಕಲಾಲಸಾ ॥

ಅನುವಾದ

ಅದರಿಂದ ಎಲೈ ದೇವಿಯೇ! ನನ್ನಲ್ಲಿ ವಿಶ್ವಾಸವಿಡು. ಭಯಪಡಬೇಡ. ನಿಶ್ಚಿತ ಬುದ್ಧಿಯಿಂದ ನನ್ನನ್ನು ಪ್ರೀತಿಸು. ಹೀಗೆ ವೃಥಾ ದುಃಖಿಸುತ್ತಿರಬೇಡ.॥7॥

ಮೂಲಮ್ - 8

ಏಕವೇಣೀ ಧರಾ ಶಯ್ಯಾ ಧ್ಯಾನಂ ಮಲಿನಮಂಬರಮ್ ।
ಅಸ್ಥಾನೇಽಪ್ಯುಪವಾಸಶ್ಚ ನೈತಾನ್ಯೌಪಯಿಕಾನಿ ತೇ ॥

ಅನುವಾದ

ಜಡೆಯನ್ನು ಹೆಣೆದುಕೊಳ್ಳದೆ ಒಂದೇ ವೇಣಿಯನ್ನು ಹೊಂದಿರುವುದಾಗಲೀ, ಭೂಮಿಯ ಮೇಲೆ ಮಲಗುವುದಾಗಲೀ, ಯಾವಾಗಲೂ ಚಿಂತಿಸುವುದಾಗಲೀ, ಮಲಿನವಾದ ವಸ್ತ್ರಗಳನ್ನು ಧರಿಸುವುದಾಗಲೀ, ನಿಷ್ಕಾರಣವಾಗಿ ಉಪವಾಸ ಮಾಡುವುದಾಗಲೀ, ನಿನಗೆ ಖಂಡಿತವಾಗಿ ಉಚಿತವಲ್ಲ.॥8॥

ಮೂಲಮ್ - 9

ವಿಚಿತ್ರಾಣಿ ಚ ಮಾಲ್ಯಾನಿ ಚಂದನಾನ್ಯಗರೂಣಿ ಚ ।
ವಿವಿಧಾನಿ ಚ ವಾಸಾಂಸಿ ದಿವ್ಯಾನ್ಯಾಭರಣಾನಿ ಚ ॥

ಮೂಲಮ್ - 10

ಮಹಾರ್ಹಾಣಿ ಚ ಪಾನಾನಿ ಶಯನಾನ್ಯಾಸನಾನಿ ಚ ।
ಗೀತಂ ನೃತ್ತಂ ಚ ವಾದ್ಯಂ ಚ ಲಭ ಮಾಂ ಪ್ರಾಪ್ಯ ಮೈಥಿಲಿ ॥

ಅನುವಾದ

ಎಲೈ ಮೈಥಿಲಿಯೇ! ನೀನು ಚಿತ್ರವಿಚಿತ್ರವಾದ ಮಾಲೆಗಳನ್ನು, ಅಗರು, ಚಂದನಗಳನ್ನು, ವಿಧ-ವಿಧವಾದ ವಸ್ತ್ರಗಳನ್ನು, ದಿವ್ಯವಾದ ಆಭರಣಗಳನ್ನು, ಶ್ರೇಷ್ಠವಾದ ಪಾನೀಯಗಳನ್ನು, ಹಾಸಿಗೆಗಳನ್ನು, ಆಸನಗಳನ್ನು, ಉಪಭೋಗಿಸು. ಬೇಕು-ಬೇಕಾದ ಗೀತಗಳನ್ನು, ವಾದ್ಯಗಳನ್ನು ಕೇಳು. ನೃತ್ಯಗಳನ್ನು ಅವಲೋಕಿಸು. ನೀನು ನನ್ನನ್ನು ವರಿಸಿದರೆ ಇವೆಲ್ಲವನ್ನು ಪಡೆಯುವೆ.॥9-10॥

ಮೂಲಮ್ - 11

ಸ್ತ್ರೀರತ್ನಮಸಿ ಮೈವಂ ಭೂಃ ಕುರು ಗಾತ್ರೇಷು ಭೂಷಣಮ್ ।
ಮಾಂ ಪ್ರಾಪ್ಯ ಹಿ ಕಥಂ ನು ಸ್ಯಾಸ್ತ್ವಮನರ್ಹಾ ಸುವಿಗ್ರಹೇ ॥

ಅನುವಾದ

ಎಲೈ ಸುಂದರಾಂಗಿಯೇ! ನೀನು ಸ್ತ್ರೀಯರಲ್ಲೇ ರತ್ನಪ್ರಾಯಳು. ನೀನು ಹೀಗೆ ಇರುವುದು ನನಗೆ ಶೋಭಿಸದು. ಅಂಗಾಂಗಗಳಲ್ಲಿ ಆಭೂಷಣಗಳನ್ನು ಧರಿಸಿಕೊ. ನನ್ನನ್ನು ಹೊಂದಿಯೂ ನೀನು ಸಕಲ ಭೋಗಭಾಗ್ಯಗಳಿಂದ ಹೇಗೆ ವಂಚಿತಳಾಗಿರುವೆ?॥11॥

ಮೂಲಮ್ - 12

ಇದಂ ತೇ ಚಾರು ಸಂಜಾತಂ ಯೌವನಂ ಹ್ಯತಿವರ್ತತೇ ।
ಯದತೀತಂ ಪುನರ್ನೈತಿ ಸ್ರೋತಃ ಶೀಘ್ರಮಪಾಮಿವ ॥

ಅನುವಾದ

ಒದಗಿ ಬಂದಿರುವ ಈ ನಿನ್ನ ಸುಮನೋಹರವಾದ ಯೌವನವೂ ವ್ಯರ್ಥವಾಗುತ್ತದಲ್ಲ! ವೇಗವಾಗಿ ಹರಿಯುವ ನದಿಯ ನೀರು ಹಿಂದಿರುಗಿ ಬರಲಾರದು. ಹಾಗೆಯೇ ಕಳೆದುಹೋದ ನಿನ್ನ ಯೌವನವು ಮರಳಿ ಬರುವುದಿಲ್ಲ.॥12॥

ಮೂಲಮ್ - 13

ತ್ವಾಂ ಕೃತ್ವೋಪರತೋ ಮನ್ಯೇ ರೂಪಕರ್ತಾ ಸ ವಿಶ್ವಸೃಟ್ ।
ನ ಹಿ ರೂಪೋಪಮಾ ತ್ವನ್ಯಾ ತವಾಸ್ತಿ ಶುಭದರ್ಶನೇ ॥

ಅನುವಾದ

ಓ ಶುಭದರ್ಶನಳೇ! ರೂಪಶಿಲ್ಪಿಯಾದ ಬ್ರಹ್ಮದೇವರು ನಿನ್ನನ್ನು ಸೃಷ್ಟಿಸಿದ ಬಳಿಕ ವಿಶ್ರಾಂತನಾಗಿರುವನೆಂದೇ ನಾನು ತಿಳಿಯುತ್ತೇನೆ. ಏಕೆಂದರೆ, ಈ ಲೋಕದಲ್ಲಿ ನಿನಗೆ ಸಾಟಿಯಾದ ಸೌಂದರ್ಯವತಿಯು ಬೇರೆ ಯಾರೂ ಇರಲಾರರು.॥13॥

ಮೂಲಮ್ - 14

ತ್ವಾಂ ಸಮಾಸಾದ್ಯ ವೈದೇಹಿ ರೂಪಯೌವನಶಾಲಿನೀಮ್ ।
ಕಃ ಪುಮಾನತಿವರ್ತೇತ ಸಾಕ್ಷಾದಪಿ ಪಿತಾಮಹಃ ॥

ಅನುವಾದ

ಎಲೈ ವೈದೇಹಿ! ರೂಪಯೌವನಶಾಲಿಯಾದ ನಿನ್ನನ್ನು ಪಡೆದವರು ಸಾಕ್ಷಾತ್ ಸೃಷ್ಟಿಕರ್ತನಾದ ಪಿತಾಮಹನಾದರೂ ಕೂಡ ಬಿಡಲಾರನು.॥14॥

ಮೂಲಮ್ - 15

ಯದ್ಯತ್ ಪಶ್ಯಾಮಿ ತೇ ಗಾತ್ರಂ ಶೀತಾಂಶುಸದೃಶಾನನೇ ।
ತಸ್ಮಿಂಸ್ತಸ್ಮಿನ್ ಪೃಥುಶ್ರೋಣಿ ಚಕ್ಷುರ್ಮಮ ನಿಬಧ್ಯತೇ ॥

ಅನುವಾದ

ಎಲೈ ಚಂದ್ರಮುಖಿಯೇ! ನಿನ್ನ ಅವಯವ ಸೌಂದರ್ಯ ಸೌಭಾಗ್ಯಗಳನ್ನು ನೋಡುತ್ತಾ ಇರುವಾಗ, ಪ್ರತಿ ಅವಯವ ಲಾಲಿತ್ಯವನ್ನು ದರ್ಶಿಸುವಾಗ ನನ್ನ ದೃಷ್ಟಿಯು ಬೇರೆಡೆಗೆ ಹೋಗುವುದೇ ಇಲ್ಲ.॥15॥

ಮೂಲಮ್ - 16

ಭವ ಮೈಥಿಲಿ ಭಾರ್ಯಾ ಮೇ ಮೋಹಮೇನಂ ವಿಸರ್ಜಯ ।
ಬಹ್ವೀನಾಮುತ್ತಮಸ್ತ್ರೀಣಾಂ ಮಮಾಗ್ರಮಹಿಷೀ ಭವ ॥

ಅನುವಾದ

ಎಲೈ ಮೈಥಿಲಿ! ನನ್ನ ಭಾರ್ಯೆಯಾಗು. ನಾನು ನಿನ್ನ ಶತ್ರುವೆಂಬ ಮೋಹವನ್ನು ಬಿಟ್ಟುಬಿಡು. ನಾನು ನಾನಾದೇಶಗಳಿಂದ ಅನೇಕ ಮಂದಿ ಯುವತಿ ಮಣಿಯರನ್ನು ಕರೆ ತಂದಿರುವೆನು. ಅವರೆಲ್ಲರಲ್ಲಿ ನೀನೇ ನನ್ನ ಪಟ್ಟಮಹಿಷಿಯಾಗುವುದು ಮೇಲು. ॥16॥

ಮೂಲಮ್ - 17

ಲೋಕೇಭ್ಯೋ ಯಾನಿ ರತ್ನಾನಿ ಸಂಪ್ರಮಥ್ಯಾಹೃತಾನಿ ವೈ ।
ತಾನಿ ಮೇ ಭೀರು ಸರ್ವಾಣಿ ರಾಜ್ಯಂ ಚೈತದಹಂ ಚ ತೇ ॥

ಅನುವಾದ

ಓ ಭಯ ಸ್ವಭಾವದವಳೇ! ನಾನು ಶತ್ರುಗಳನ್ನು ಜಯಿಸಿ ಅನೇಕ ಲೋಕಗಳಿಂದ ಹೇರಳವಾದ ಅನರ್ಘ್ಯ ರತ್ನಾಭರಣಗಳನ್ನು ತಂದಿರುವೆನು. ಅವೆಲ್ಲವೂ ನಿನ್ನದೇ. ಈ ಲಂಕಾರಾಜ್ಯವನ್ನು ನಿನಗೆ ಸಮರ್ಪಿಸಿಬಿಡುವೆನು.॥17॥

ಮೂಲಮ್ - 18

ವಿಜಿತ್ಯ ಪೃಥಿವೀಂ ಸರ್ವಾಂ ನಾನಾನಗರಮಾಲಿನೀಮ್ ।
ಜನಕಾಯ ಪ್ರದಾಸ್ಯಾಮಿ ತವ ಹೇತೋರ್ವಿಲಾಸಿನಿ ॥

ಅನುವಾದ

ಎಲೈ ವಿಲಾಸಿನಿಯೇ! ಪ್ರಸಿದ್ಧವಾದ ಮಹಾನಗರಗಳಿಂದ ಕೂಡಿದ ಈ ಸಮಸ್ತ ಭೂಮಂಡಲವನ್ನು ನಾನು ಜಯಿಸಿರುವೆನು. ನೀನು ಬಯಸಿದರೆ ಅದನ್ನು ನಿನ್ನ ತಂದೆಯಾದ ಜನಕರಾಜನಿಗೆ ಕೊಟ್ಟುಬಿಡುವೆನು.॥18॥

ಮೂಲಮ್ - 19

ನೇಹ ಪಶ್ಯಾಮಿ ಲೋಕೇಽನ್ಯಂ ಯೋ ಮೇ ಪ್ರತಿಬಲೋ ಭವೇತ್ ।
ಪಶ್ಯ ಮೇ ಸುಮಹದ್ವೀರ್ಯಮಪ್ರತಿದ್ವಂದ್ವಮಾಹವೇ ॥

ಅನುವಾದ

ನನಗೆ ಎದುರಾಗಿ ನಿಲ್ಲಲು ಸಾಮರ್ಥ್ಯವಿರುವ ವೀರನನ್ನು ನಾನು ಈ ಲೋಕದಲ್ಲಿ ಕಾಣುತ್ತಿಲ್ಲ. ರಣರಂಗದಲ್ಲಿ ಸಾಟಿಯಿಲ್ಲದ ನನ್ನ ಪರಾಕ್ರಮವನ್ನು ನೋಡಿ ನೀನು ತಿಳಿದುಕೋ.॥19॥

ಮೂಲಮ್ - 20

ಅಸಕೃತ್ ಸಂಯುಗೇ ಭಗ್ನಾ ಮಯಾ ವಿಮೃದಿತಧ್ವಜಾಃ ।
ಅಶಕ್ತಾಃ ಪ್ರತ್ಯನೀಕೇಷು ಸ್ಥಾತುಂ ಮಮ ಸುರಾಸುರಾಃ ॥

ಅನುವಾದ

ನನ್ನ ಶತ್ರುಗಳು ಹಲವಾರು ಬಾರಿ ಯುದ್ಧಗಳಲ್ಲಿ ಧ್ವಜಗಳನ್ನು ಕಳೆದುಕೊಂಡು ಭಗ್ನರಾಗಿದ್ದಾರೆ. ದೇವತೆಗಳಾಗಲೀ, ಅಸುರರಾಗಲೀ, ಶತ್ರುಗಳಾಗಿ ಯುದ್ಧದಲ್ಲಿ ನನ್ನ ಎದುರಿಗೆ ನಿಲ್ಲಲು ಖಂಡಿತವಾಗಿ ಸಮರ್ಥರಲ್ಲ.॥20॥

ಮೂಲಮ್ - 21

ಇಚ್ಛಯಾ ಕ್ರಿಯತಾಮದ್ಯ ಪ್ರತಿಕರ್ಮ ತವೋತ್ತಮಮ್ ।
ಸುಪ್ರಭಾಣ್ಯವಸಜ್ಯಂತಾಂ ತವಾಂಗೇ ಭೂಷಣಾನಿ ಚ ॥

ಮೂಲಮ್ - 22

ಸಾಧು ಪಶ್ಯಾಮಿ ತೇ ರೂಪಂ ಸಂಯುಕ್ತಂ ಪ್ರತಿಕರ್ಮಣಾ ।
ಪ್ರತಿಕರ್ಮಾಭಿಸಂಯುಕ್ತಾ ದಾಕ್ಷಿಣ್ಯೇನ ವರಾನನೇ ॥

ಮೂಲಮ್ - 23

ಭುಂಕ್ಷ್ವಭೋಗಾನ್ ಯಥಾಕಾಮಂ ಪಿಬ ಭೀರು ರಮಸ್ವ ಚ ।
ಯಥೇಷ್ಟಂ ಚ ಪ್ರಯಚ್ಛ ತ್ವಂ ಪೃಥಿವೀಂ ವಾ ಧನಾನಿ ಚ ॥

ಅನುವಾದ

ಈಗ ನೀನು ಬಯಸಿದ ರೀತಿಯಿಂದ ಅಲಂಕರಿಸಿಕೊ. ಒಳ್ಳೆಯ ಪ್ರಭೆಯಿಂದ ಕೂಡಿರುವ ಆಭರಣಗಳು ನಿನ್ನ ಸರ್ವಾಂಗಗಳನ್ನು ಅಲಂಕರಿಸಲಿ. ಎಲೈ ವರಾನನೆ! ಅಲಂಕಾರ ವಸ್ತುಗಳಿಂದ ಸಿಂಗರಿಸಲ್ಪಟ್ಟಿರುವ ನಿನ್ನ ರೂಪವನ್ನು ಕಾಣಬೇಕೆಂದಿದ್ದೇನೆ. ನನಗೆ ಅನುರೂಪಳಾಗು. ನೀನು ಉದಾರತೆಯಿಂದ ನನ್ನ ಮೇಲೆ ಕೃಪೆದೋರಿ ನಿನ್ನ ಶರೀರವನ್ನು ಯಥಾಯೋಗ್ಯವಾಗಿ ಸಿಂಗರಿಸಿಕೊ. ನಿನಗೆ ಇಷ್ಟವಾದ ಸುಖೋಪಭೋಗಗಳನ್ನು ಯಥೇಚ್ಛವಾಗಿ ಉಪಭೋಗಿಸು. ರುಚಿಕರವಾದ ಪಾನೀಯಗಳನ್ನು ಬೇಕಾದಷ್ಟು ಪಾನಮಾಡು. ನನ್ನೊಡನೆ ಯಥೇಚ್ಛವಾಗಿ ವಿಹರಿಸು. ನಿನಗೆ ಬೇಕಾದವರಿಗೆ ಭೂಮಿಯನ್ನಾಗಲೀ, ಧನವನ್ನಾಗಲೀ, ಔದಾರ್ಯದಿಂದ ಬೇಕಾದಷ್ಟು ಹಂಚಿಬಿಡು.॥21-23॥

ಮೂಲಮ್ - 24

ರಮಸ್ವ ಮಯಿ ವಿಸ್ರಬ್ಧಾ ಧೃಷ್ಟಮಾಜ್ಞಾಪಯಸ್ವ ಚ ।
ಮತ್ಪ್ರಸಾದಾಲ್ಲಲಂತ್ಯಾಶ್ಚ ಲಲಂತಾಂ ಬಾಂಧವಾಸ್ತವ ॥

ಅನುವಾದ

ಯಾವ ವಿಧವಾದ ಭಯವೂ ಇಲ್ಲದೆ ನನ್ನೊಡನೆ ಉಲ್ಲಾಸದಿಂದಿರು. ಧೈರ್ಯದಿಂದ ನನಗೆ ಆಳಿನಂತೆ ಆಜ್ಞಾಪಿಸು. ನನ್ನ ಕೃಪೆಯಿಂದಾಗಿ ನೀನು ಇಲ್ಲಿಯ ಸುಖೋಪಭೋಗಗಳನ್ನು ಅನುಭವಿಸುವಂತೆ ನಿನ್ನ ಬಂಧುಗಳೆಲ್ಲರೂ ಅನುಭವಿಸಲಿ.॥24॥

ಮೂಲಮ್ - 25

ಋದ್ಧಿಂ ಮಮಾನುಪಶ್ಯ ತ್ವಂ ಶ್ರಿಯಂ ಭದ್ರೇ ಯಶಶ್ಚ ಮೇ ।
ಕಿಂ ಕರಿಷ್ಯಸಿ ರಾಮೇಣ ಸುಭಗೇ ಚೀರವಾಸಸಾ ॥

ಅನುವಾದ

ಎಲೈ ಮಂಗಳಪ್ರದಳೇ! ಒಂದು ಬಾರಿ ನನ್ನಲ್ಲಿರುವ ಹೇರಳವಾದ ಐಶ್ವರ್ಯವನ್ನು, ತೇಜಸ್ಸನ್ನು, ಕೀರ್ತಿಯನ್ನು, ಚೆನ್ನಾಗಿ ನೋಡು. ಎಲೈ ಸುಂದರಿಯೇ! ನಾರುಮಡಿಯನ್ನು ಉಟ್ಟಿರುವ ರಾಮನನ್ನು ಕಟ್ಟಿಕೊಂಡು ಏನು ಮಾಡುವೆ?॥25॥

ಮೂಲಮ್ - 26

ನಿಕ್ಷಿಪ್ತವಿಜಯೋ ರಾಮೋ ಗತಶ್ರೀರ್ವನಗೋಚರಃ ।
ವ್ರತೀ ಸ್ಥಂಡಿಲಶಾಯೀ ಚ ಶಂಕೇ ಜೀವತಿ ವಾ ನ ವಾ ॥

ಅನುವಾದ

ಈಗ ರಾಮನು ಜಯವನ್ನೂ, ಸಂಪತ್ತನ್ನೂ, ಕಳೆದುಕೊಂಡಿರುವನು. ಅಡವಿಪಾಲಾಗಿ ಹೋಗಿರುವನು. ಮುನಿವ್ರತವನ್ನು ಕೈಗೊಂಡು ನೆಲದ ಮೇಲೆ ಮಲಗುತ್ತಿರುವನು. ಇನ್ನು ಅವನು ಜೀವಿಸಿರುವನೋ ಇಲ್ಲವೋ?॥26॥

ಮೂಲಮ್ - 27

ನ ಹಿ ವೈದೇಹಿ ರಾಮಸ್ತ್ವಾಂ ದ್ರಷ್ಟುಂ ವಾಪ್ಯುಪಲಪ್ಸ್ಯತೇ ।
ಪುರೋಬಲಾಕೈರಸಿತೈರ್ಮೇಘೈರ್ಜ್ಯೋತ್ಸ್ನಾ ಮಿವಾವೃತಾಮ್ ॥

ಅನುವಾದ

ಎಲೈ ವೈದೇಹಿ! ಅಗ್ರಭಾಗದಲ್ಲಿ ಬೆಳ್ಳಕ್ಕಿಗಳಿರುವ ಕಾರ್ಮುಗಿಲುಗಳಿಂದ ಆವೃತವಾದ ಚಂದ್ರನನ್ನು ನೋಡಲಾಗದಂತೆ ನಿನ್ನನ್ನು ಪಡೆಯುವುದಿರಲೀ, ರಾಮನಿಂದ ನೋಡಲೂ ಕೂಡ ಸಾಧ್ಯವಾಗದು.॥27॥

ಮೂಲಮ್ - 28

ನ ಚಾಪಿ ಮಮ ಹಸ್ತಾತ್ತ್ವಾಂ ಪ್ರಾಪ್ತುಮರ್ಹತಿ ರಾಘವಃ ।
ಹಿರಣ್ಯಕಶಿಪುಃ ಕೀರ್ತಿಮಿಂದ್ರಹಸ್ತಗತಾಮಿವ ॥

ಅನುವಾದ

ಇಂದ್ರನ ಹಸ್ತಗತಳಾದ ಹಿರಣ್ಯಕಶಿಪುವಿನ ಹೆಂಡತಿ (ಕೀರ್ತಿ) ಹಿಂದಕ್ಕೆ ಪಡೆಯಲು ಸಾಧ್ಯವಾಯಿತು. ಆದರೆ ನನ್ನ ಹಸ್ತಗತಳಾಗಿರುವ ನಿನ್ನನ್ನು ರಾಮನು ಮರಳಿ ಪಡೆದುಕೊಳ್ಳಲಾರನು.॥28॥

ಮೂಲಮ್ - 29

ಚಾರುಸ್ಮಿತೇ ಚಾರುದತಿ ಚಾರುನೇತ್ರೇ ವಿಲಾಸಿನಿ ।
ಮನೋ ಹರಸಿ ಮೇ ಭೀರು ಸುಪರ್ಣಃ ಪನ್ನಗಂ ಯಥಾ ॥

ಅನುವಾದ

ಬಲುಸುಂದರವಾದ ಮಂದಹಾಸವುಳ್ಳವಳೇ! ಸುಂದರವಾದ ದಂತಪಂಕ್ತಿಯುಳ್ಳವಳೇ! ಚೆಲುವಾದ ಕಣ್ಣುಗಳುಳ್ಳವಳೇ! ವಿಲಾಸಿನಿಯೇ! ಭೀರುವೇ! ಗರುಡ ಪಕ್ಷಿಯು ಹಾವನ್ನು ಅಪಹರಿಸುವಂತೆ ನನ್ನ ಮನಸ್ಸನ್ನು ನೀನು ಅಪಹರಿಸಿರುವೆ.॥29॥

ಮೂಲಮ್ - 30

ಕ್ಲಿಷ್ಟಕೌಶೇಯವಸನಾಂ ತನ್ವೀಮಪ್ಯನಲಂಕೃತಾಮ್ ।
ತ್ವಾಂ ದೃಷ್ಟ್ವಾಸ್ವೇಷು ದಾರೇಷು ರತಿಂ ನೋಪಲಭಾಮ್ಯಹಮ್ ॥

ಅನುವಾದ

ಮಲಿನವಾದ ಪಟ್ಟವಸವನ್ನು ಧರಿಸಿದ್ದರೂ, ಉಪವಾಸಾದಿಗಳಿಂದ ಕೃಶವಾಗಿದ್ದರೂ, ಅಲಂಕಾರ ಮಾಡಿಕೊಳ್ಳದಿದ್ದರೂ ನಿನ್ನನ್ನು ನೋಡಿದ ಮೇಲೆ ನನ್ನ ಸತಿಯರ ಕಡೆಗೆ ಮನಸ್ಸೇ ಹೋಗುವುದಿಲ್ಲ.॥30॥

ಮೂಲಮ್ - 31

ಅಂತಃಪುರನಿವಾಸಿನ್ಯಃ ಸ್ತ್ರಿಯಃ ಸರ್ವಗುಣಾನ್ವಿತಾಃ ।
ಯಾವತ್ಯೋ ಮಮ ಸರ್ವಾಸಾಮೈಶ್ವರ್ಯಂ ಕುರು ಜಾನಕಿ ॥

ಅನುವಾದ

ನನ್ನ ಅಂತಃಪುರದಲ್ಲಿ ಸಕಲ ಸದ್ಗುಣ ಸಂಪನ್ನೆಯರಾದ ಎಷ್ಟೋ ಸ್ತ್ರೀಯರಿದ್ದಾರೆ. ಅವರೆಲ್ಲರಮೇಲೆ ನೀನು ಪರಮಾಧಿಕಾರವನ್ನು ವಹಿಸು.॥31॥

ಮೂಲಮ್ - 32

ಮಮ ಹ್ಯಸಿತಕೇಶಾಂತೇ ತ್ರೈಲೋಕ್ಯಪ್ರವರಾಃ ಸ್ತ್ರಿಯಃ ।
ತಾಸ್ತ್ವಾಂ ಪರಿಚರಿಷ್ಯಂತಿ ಶ್ರಿಯಮಪ್ಸರಸೋ ಯಥಾ ॥

ಅನುವಾದ

ಎಲೈ ಕಪ್ಪಾದ ಕೂದಲುಳ್ಳವಳೇ! ಮೂರು ಲೋಕಗಳಲ್ಲಿಯೂ ಶ್ರೇಷ್ಠರೆನಿಸಿದ ನನ್ನ ಎಲ್ಲ ಭಾರ್ಯೆಯರು - ಲಕ್ಷ್ಮೀದೇವಿಯನ್ನು ಅಪ್ಸರೆಯರು ಉಪಚರಿಸುವಂತೆ ನಿನ್ನ ಶುಶ್ರೂಷೆಯಲ್ಲಿ ನಿರತರಾಗಿರುತ್ತಾರೆ.॥32॥

ಮೂಲಮ್ - 33

ಯಾನಿ ವೈಶ್ರವಣೇ ಸುಭ್ರೂ ರತ್ನಾನಿ ಚ ಧನಾನಿ ಚ ।
ತಾನಿ ಲೋಕಾಂಶ್ಚ ಸುಶ್ರೋಣಿ ಮಾಂ ಚ ಭುಂಕ್ಷ್ವಯಥಾಸುಖಮ್ ॥

ಅನುವಾದ

ಎಲೈ ಶುಭಾಂಗಿಯೇ! ಕುಬೇರನನ್ನು ಜಯಿಸಿ ನಾನು ತಂದಿರುವ ರತ್ನಗಳನ್ನೂ, ಧನರಾಶಿಗಳನ್ನೂ, ಮೂರು ಲೋಕದ ಸಂಪತ್ತನ್ನೂ ಅನುಭವಿಸುತ್ತಾ ನನ್ನೊಡನೆ ಹಾಯಾಗಿರು.॥33॥

ಮೂಲಮ್ - 34

ನ ರಾಮಸ್ತಪಸಾ ದೇವಿ ನ ಬಲೇನ ನ ವಿಕ್ರಮೈಃ ।
ನ ಧನೇನ ಮಯಾ ತುಲ್ಯಸ್ತೇಜಸಾ ಯಶಸಾಪಿ ವಾ ॥

ಅನುವಾದ

ಓ ದೇವಿಯೇ! ರಾಮನು ತಪಸ್ಸಿನಲ್ಲಾಗಲೀ, ಬಲದಲ್ಲಾಗಲೀ, ಪರಾಕ್ರಮದಲ್ಲಾಗಲೀ, ಧನದಿಂದಾಗಲೀ, ತೇಜಸ್ಸಿನಿಂದಾಗಲೀ, ಯಶಸ್ಸಿನಿಂದಾಗಲೀ, ನನಗೆ ಸರಿಸಮಾನನಾಗಲಾರನು.॥34॥

ಮೂಲಮ್ - 35

ಪಿಬ ವಿಹರ ರಮಸ್ವ ಭುಂಕ್ಷ್ವಭೋಗಾನ್
ಧನನಿಚಯಂ ಪ್ರದಿಶಾಮಿ ಮೇದಿನೀಂ ಚ ।
ಮಯಿ ಲಲ ಲಲನೇ ಯಥಾಸುಖಂ ತ್ವಂ
ತ್ವಯಿ ಚ ಸಮೇತ್ಯ ಲಲಂತು ಬಾಂಧವಾಸ್ತೇ ॥

ಅನುವಾದ

ಎಲೈ ಲಲನಾಮಣಿಯೇ! ಸುರುಚಿರವಾದ ಪಾನೀಯಗಳನ್ನು ಪಾನಮಾಡು. ಯಥೇಚ್ಛವಾಗಿ ವಿಹರಿಸು. ಭೋಗಗಳನ್ನು ಅನಭವಿಸು. ಧನದ ರಾಶಿಗಳನ್ನು, ಭೂಮಂಡಲದ ಭಾಗಗಳನ್ನು ನಿನಗೆ ಬೇಕಾದವರಿಗೆ ಕೊಡು. ನನ್ನೊಡನೆ ಸುಖದಿಂದಲೂ, ವಿಲಾಸದಿಂದಲೂ ಇರು. ನಿನ್ನ ಬಾಂಧವರೆಲ್ಲರೂ ನಿನ್ನೊಡನೆ ಸೇರಿಕೊಂಡು ಸುಖವಾಗಿರಲಿ.॥35॥

ಮೂಲಮ್ - 36

ಕುಸುಮಿತತರುಜಾಲಸಂತತಾನಿ
ಭ್ರಮರಯುತಾನಿ ಸಮುದ್ರತೀರಜಾನಿ ।
ಕನಕವಿಮಲಹಾರಭೂಷಿತಾಂಗಿ
ವಿಹರ ಮಯಾ ಸಹ ಭೀರು ಕಾನನಾನಿ ॥

ಅನುವಾದ

ಎಲೈ ಭಯಸ್ವಭಾವದವಳೇ! ಉತ್ತಮವಾದ ಬಂಗಾರದ ಆಭರಣಗಳನ್ನು ಧರಿಸಿಕೊಂಡು, ಸಮುದ್ರತೀರದಲ್ಲಿ ಚೆನ್ನಾಗಿ ಪುಷ್ಪಿತವಾದ, ದುಂಬಿಗಳಿಂದ ಕೂಡಿರುವ, ವೃಕ್ಷಪಂಕ್ತಿಗಳಿಂದ ನಿಬಿಡವಾದ ವನಗಳಲ್ಲಿ ನನ್ನೊಡನೆ ಸೇರಿ ವಿಹರಿಸು.॥36॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ವಿಂಶಃ ಸರ್ಗಃ ॥ 20 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಇಪ್ಪತ್ತನೆಯ ಸರ್ಗವು ಮುಗಿಯಿತು.