वाचनम्
ಭಾಗಸೂಚನಾ
ರಾವಣನನ್ನು ನೋಡಿ ದುಃಖ, ಭಯ ಮತ್ತು ಚಿಂತೆಗಳಲ್ಲಿ ಮಗ್ನಳಾದ ಸೀತಾದೇವಿಯ ಸ್ವರೂಪವರ್ಣನೆ
ಮೂಲಮ್ - 1
ತಸ್ಮಿನ್ನೇವ ತತಃ ಕಾಲೇ ರಾಜಪುತ್ರೀ ತ್ವನಿಂದಿತಾ ।
ರೂಪಯೌವನಸಂಪನ್ನಂ ಭೂಷಣೋತ್ತಮಭೂಷಿತಮ್ ॥
ಮೂಲಮ್ - 2
ತತೋ ದೃಷ್ಟ್ವೈವ ವೈದೇಹೀ ರಾವಣಂ ರಾಕ್ಷಸಾಧಿಪಮ್ ।
ಪ್ರಾವೇಪತ ವರಾರೋಹಾ ಪ್ರವಾತೇ ಕದಲೀ ಯಥಾ ॥
ಅನುವಾದ
ರೂಪ-ಯೌವನ ಸಂಪನ್ನನೂ, ಉತ್ತಮವಾದ ಆಭರಣಗಳನ್ನು ಧರಿಸಿದವನೂ ಆದ ರಾಕ್ಷಸಾಧಿಪತಿಯಾದ ರಾವಣನು ಬಂದ ಮರುಕ್ಷಣವೇ, ಸೌಶೀಲ್ಯವತಿಯೂ, ಸೌಂದರ್ಯರಾಶಿಯೂ ಆದ ಜನಕಸುತೆಯಾದ ವೈದೇಹಿಯು ಆತನನ್ನು ನೋಡಿ ಬಿರುಗಾಳಿಗೆ ಸಿಕ್ಕಿದ ಬಾಳೆಮರದಂತೆ ನಡುಗತೊಡಗಿದಳು.॥1-2॥
ಮೂಲಮ್ - 3
ಆಚ್ಛಾದ್ಯೋದರಮೂರುಭ್ಯಾಂ ಬಾಹುಭ್ಯಾಂ ಚ ಪಯೋಧರೌ ।
ಉಪವಿಷ್ಟಾ ವಿಶಾಲಾಕ್ಷೀ ರುದಂತೀ ವರವರ್ಣಿನೀ ॥
ಅನುವಾದ
ವರವರ್ಣಿನಿಯಾದ ವಿಶಾಲಾಕ್ಷಿಯಾದ ಸೀತಾದೇವಿಯು ರಾವಣನನ್ನು ಕಾಣುತ್ತಲೇ ತೊಡೆಗಳಿಂದ ಹೊಟ್ಟೆಯನ್ನು, ತೋಳುಗಳಿಂದ ವಕ್ಷಸ್ಥಳವನ್ನು ಮುಚ್ಚಿಕೊಂಡು (ಮಡಚಿಕೊಂಡು) ಅಳತೊಡಗಿದಳು.॥3॥
ಮೂಲಮ್ - 4
ದಶಗ್ರೀವಸ್ತು ವೈದೇಹೀಂ ರಕ್ಷಿತಾಂ ರಾಕ್ಷಸೀಗಣೈಃ ।
ದದರ್ಶ ಸೀತಾಂ ದುಃಖಾರ್ತಾಂ ನಾವಂ ಸನ್ನಾಮಿವಾರ್ಣವೇ ॥
ಅನುವಾದ
ಸೀತೆಯು ರಾಕ್ಷಸಸ್ತ್ರೀಯರಿಂದ ರಕ್ಷಿಸಲ್ಪಡುತ್ತಿದ್ದು, ಮಹಾಸಮುದ್ರದಲ್ಲಿ ಮುಳುಗಿಹೋಗುತ್ತಿರುವ ನೌಕೆಯಂತೆ ಶೋಕಸಾಗರದಲ್ಲಿ ಮುಳುಗಿದ್ದಳು. ಇಂತಹ ದುಃಖಾರ್ತಳಾದ ವೈದೇಹಿಯನ್ನು ರಾವಣನು ನೋಡಿದನು.॥4॥
ಮೂಲಮ್ - 5
ಅಸಂವೃತಾಯಾಮಾಸೀನಾಂ ಧರಣ್ಯಾಂ ಸಂಶಿತವ್ರತಾಮ್ ।
ಛಿನ್ನಾಂ ಪ್ರಪತಿತಾಂ ಭೂಮೌ ಶಾಖಾಮಿವ ವನಸ್ಪತೇಃ ॥
ಅನುವಾದ
ಕತ್ತರಿಸಿದ ಮರದ ಕೊಂಬೆಯು ಭೂಮಿಗೆ ಬೀಳುವಂತೆ, ಕಠೋರವ್ರತ ದೀಕ್ಷೆಯಲ್ಲಿದ್ದ ಸೀತಾದೇವಿಯು ಯಾವುದೇ ಆಸನವಿಲ್ಲದೆ ಬರಿನೆಲದ ಮೇಲೆ ಕುಳಿತ್ತಿದ್ದಳು.॥5॥
ಮೂಲಮ್ - 6
ಮಲಮಂಡನದಿಗ್ಧಾಂಗೀಂ ಮಂಡನಾರ್ಹಾಮಮಂಡಿತಾಮ್ ।
ಮೃಣಾಲೀ ಪಂಕದಿಗ್ಧೇವ ವಿಭಾತಿ ನ ವಿಭಾತಿ ಚ ॥
ಅನುವಾದ
ಶರೀರವು ಧೂಳಿಧೂಸರಿತವಾಗಿದ್ದರೂ ಅವಳೂ ಸಹಜ-ಕಾಂತಿಯಿಂದ ಪ್ರಕಾಶಿಸುತ್ತಿದ್ದಳು. ಆಭರಣಾದಿಗಳನ್ನು ಧರಿಸಲು ಯೋಗ್ಯಳಾಗಿದ್ದರೂ ಆ ಸೌಭಾಗ್ಯವತಿಯು (ಪತಿಯನ್ನು ಅಗಲಿದ್ದ ಕಾರಣ) ಭೂಷಣಗಳನ್ನು ಧರಿಸದಿದ್ದರೂ ಅವಳು-ಕೆಸರಿನಿಂದ ಯುಕ್ತವಾದ ಕಮಲದ ಬಳ್ಳಿಯಂತೆ ಪ್ರಕಾಶಮಾನಳಾಗಿಯೂ, ಅಪ್ರಕಾಶಮಾನಳಾಗಿಯೂ ಕಾಣುತ್ತಿದ್ದಳು.॥6॥
ಮೂಲಮ್ - 7
ಸಮೀಪಂ ರಾಜಸಿಂಹಸ್ಯ ರಾಮಸ್ಯ ವಿದಿತಾತ್ಮನಃ ।
ಸಂಕಲ್ಪಹಯಸಂಯುಕ್ತೈರ್ಯಾಂತೀಮಿವ ಮನೋರಥೈಃ ॥
ಅನುವಾದ
ಸಂಕಲ್ಪರೂಪವಾದ ಕುದುರೆಗಳಿಂದ ಕೂಡಿರುವ ಮನೋರಥವೆಂಬ ರಥದ ಮೂಲಕವಾಗಿ ಜಗದ್ವಿಖ್ಯಾತನೂ, ರಾಜಶ್ರೇಷ್ಠನೂ ಆದ ಶ್ರೀರಾಮಚಂದ್ರನ ಬಳಿಗೆ ಹೋಗುತ್ತಿರುವಳೋ ಎಂಬಂತೆ ಕಾಣುತ್ತಿದ್ದಳು.॥7॥
ಮೂಲಮ್ - 8
ಶುಷ್ಯಂತೀಂ ರುದತೀಮೇಕಾಂ ಧ್ಯಾನಶೋಕಪರಾಯಣಾಮ್ ।
ದುಃಖಸ್ಯಾಂತಮಪಶ್ಯಂತೀಂ ರಾಮಾಂ ರಾಮಮನುವ್ರತಾಮ್ ॥
ಅನುವಾದ
ಏಕಾಕಿನಿಯಾಗಿ ಕುಳಿತು ಅವಳು ರೋದಿಸುತ್ತಿದ್ದಳು. ಸದಾ ಶ್ರೀರಾಮನನ್ನೇ ಧ್ಯಾನಿಸುತ್ತಾ ಶೋಕಪಡುತ್ತಿದ್ದಳು. ದುಃಖದ ಪಾರವನ್ನೇ ಕಾಣದವಳಾಗಿದ್ದು, ಶ್ರೀರಾಮನಲ್ಲೇ ನೆಟ್ಟು ಹೋದ ಮನಸ್ಸುಳ್ಳವಳೂ ಆಗಿದ್ದಳು.॥8॥
ಮೂಲಮ್ - 9
ವೇಷ್ಟಮಾನಾಂ ತಥಾವಿಷ್ಟಾಂ ಪನ್ನಗೇಂದ್ರವಧೂಮಿವ ।
ಧೂಪ್ಯಮಾನಾಂ ಗ್ರಹೇಣೇವ ರೋಹಿಣೀಂ ಧೂಮಕೇತುನಾ ॥
ಅನುವಾದ
ಮಣಿ-ಮಂತ್ರದಿಂದ ಬಂಧಿಸಲ್ಪಟ್ಟು ಚಡಪಡಿಸುವ ಹೆಣ್ಣುಸರ್ಪದಂತೆ ರಾವಣನಿಂದ ಬಂಧಿಸಲ್ಪಟ್ಟು ಅವಳು ಚಡಪಡಿಸುತ್ತಿದ್ದಳು. ಧೂಮಕೇತುವಿನಿಂದ ಪೀಡಿಸಲ್ಪಟ್ಟ ರೋಹಿಣಿಯಂತೆ ಆಕೆಯು ಪರಿತಪಿಸುತ್ತಿದ್ದಳು.॥9॥
ಮೂಲಮ್ - 10
ವೃತ್ತಶೀಲಕುಲೇ ಜಾತಾಮಾಚಾರವತಿ ಧಾರ್ಮಿಕೇ ।
ಪುನಃ ಸಂಸ್ಕಾರಮಾಪನ್ನಾಂ ಜಾತಾಮಿವ ಚ ದುಷ್ಕುಲೇ ॥
ಅನುವಾದ
ಸೀತಾದೇವಿಯು ಧಾರ್ಮಿಕ ಸಂಪ್ರದಾಯಗಳಿಗೆ ಪ್ರಸಿದ್ಧವಾದ, ಉತ್ತಮಶೀಲಸಂಪನ್ನ ಜನಕರಾಜನ ನಿಮಿವಂಶದಲ್ಲಿ ಹುಟ್ಟಿದವಳು. ವಿವಾಹ ಸಂಸ್ಕಾರಫಲದಿಂದ *ಆಕೆಯು ಪವಿತ್ರವಾದ ಇಕ್ಷ್ವಾಕುವಂಶವನ್ನು ಮೆಟ್ಟಿದವಳು. (ವಿವಾಹವಾಗಿ ಬಂದವಳು,) ಅಂತಹ ಜಾನಕಿಯು ಈಗ ಮಲಿನ ವಸ್ತ್ರಧಾರಣಾದಿ ದುಃಸ್ಥಿತಿಯಲ್ಲಿದ್ದು ದುಷ್ಕುಲದಲ್ಲಿ ಹುಟ್ಟಿದಳೋ ಎಂಬಂತೆ ಕಾಣುತ್ತಿದ್ದಳು.॥10॥
ಟಿಪ್ಪನೀ
- ‘ವೈವಾಹಿಕೋ ವಿಧಿಃ ಸ್ತ್ರೀಣಾಮೌಪನಾಯನಿಕಃ ಸ್ಮೃತಃ ’ ಸ್ತ್ರೀಯರಿಗೆ ವಿವಾಹವಿಧಿಯು ಬಾಲಕರ ಉಪನಯನ ಸಂಸ್ಕಾರಕ್ಕೆ ಸಮವಾದುದು ಎಂದು ಸ್ಮೃತಿಯಲ್ಲಿ ಹೇಳಿದೆ. ‘‘ಕುಮಾರಾಣಾಂ ಉಪನಯನಮಿವ ಕುಮಾರಿಣಾಂ ವಿವಾಹೋದ್ವಿತಿಯ ಜನ್ಮಮ್’’ ಬಾಲಕರಿಗೆ ಉಪನಯನವು ದ್ವಿತೀಯ ಜನ್ಮವಿದ್ದಂತೆ ಕನ್ಯೆಯರಿಗೆ ವಿವಾಹವು ದ್ವಿತೀಯ ಜನ್ಮವು.
ಇಲ್ಲಿ ‘ದುಷ್ಕುಲ’ ಕೆಟ್ಟವಸ್ತುವೆಂದೂ, ಕೆಟ್ಟಕುಲವೆಂದೂ ಶ್ಲೇಷವನ್ನು ಗಮನಿಸಿರಿ.
ಮೂಲಮ್ - 11
ಅಭೂತೇನಾಪವಾದೇನ ಕೀರ್ತಿಂ ನಿಪತಿತಾಮಿವ ।
ಆಮ್ನಾ ಯಾನಾಮಯೋಗೇನ ವಿದ್ಯಾಂ ಪ್ರಶಿಥಿಲಾಮಿವ ॥
ಅನುವಾದ
ಇಲ್ಲದಿರುವ ದೋಷಾರೊಪಣೆಯಿಂದ ಕಳೆದುಹೋದ ಕೀರ್ತಿಯಂತೆಯೂ, ಚೆನ್ನಾಗಿ ಅಭ್ಯಾಸ ಮಾಡದ ಕಾರಣ ಶಿಥಿಲವಾದ (ಮರೆತು ಹೋದ) ವೇದಾದಿ ವಿದ್ಯೆಯಂತೆಯೂ ಅವಳು ಗೋಚರಿಸುತ್ತಿದ್ದಳು.॥11॥
ಮೂಲಮ್ - 12
ಸನ್ನಾಮಿವ ಮಹಾಕೀರ್ತಿಂ ಶ್ರದ್ಧಾಮಿವ ವಿಮಾನಿತಾಮ್ ।
ಪ್ರಜ್ಞಾಮಿವ ಪರಿಕ್ಷೀಣಾಮಾಶಾಂ ಪ್ರತಿಹತಾಮಿವ ॥
ಅನುವಾದ
ಕ್ಷೀಣಿಸಿದ ಕೀರ್ತಿಯಂತೆಯೂ, ಅಪಮಾನದಿಂದ ಶಿಥಿಲವಾದ ಶ್ರದ್ಧೆಯಂತೆಯೂ, ಪೂಜಾದ್ರವ್ಯಗಳೇ ಇಲ್ಲದ ಪೂಜೆಯಂತೆ, ನಿಷ್ಫಲವಾದ ಆಸೆಯಂತೆ ಆಕೆಯು ಅತಿದೀನಾವಸ್ಥೆಗೆ ಗುರಿಯಾಗಿರುವಂತೆ ಇದ್ದಳು.॥12॥
ಮೂಲಮ್ - 13
ಆಯತೀಮಿವ ವಿಧ್ವಸ್ತಾಮಾಜ್ಞಾಂ ಪ್ರತಿಹತಾಮಿವ ।
ದೀಪ್ತಾಮಿವ ದಿಶಂ ಕಾಲೇ ಪೂಜಾಮಪಹೃತಾಮಿವ ॥
ಅನುವಾದ
ಅವಳ ಸ್ಥಿತಿಯು ನಷ್ಟವಾಗಿ ಹೋದ ಆದಾಯದಂತೆ, ಆಚರಿಸದಿರುವ ಆಜ್ಞೆಯಂತೆ, ಉತ್ಪಾತ ಕಾಲದಲ್ಲಿ ಇರುವ ದಿಕ್ಕುಗಳಂತೆಯೂ, ಪೂಜಾದ್ರವ್ಯಗಳನ್ನು ಅಪಹರಿಸಿದಾಗ ಭಂಗವಾದ ಪೂಜೆಯಂತೆ ಇದ್ದಳು.॥13॥
ಮೂಲಮ್ - 14
ಪದ್ಮಿನೀಮಿವ ವಿಧ್ವಸ್ತಾಂ ಹತಶೂರಾಂ ಚಮೂಮಿವ ।
ಪ್ರಭಾಮಿವ ತಮೋಧ್ವಸ್ತಾಮುಪಕ್ಷೀಣಾಮಿವಾಪಗಾಮ್ ॥
ಅನುವಾದ
ವಿಧ್ವಸ್ತಗೊಂಡ ತಾವರೆ ಬಳ್ಳಿಯಂತೆಯೂ, ಶೂರರನ್ನು ಕಳೆದುಕೊಂಡ ಸೈನ್ಯದಂತೆ, ಕತ್ತಲೆಯಿಂದ ವಿನಾಶಗೊಳಿಸಲ್ಪಟ್ಟ ಪ್ರಭೆಯಂತೆ, ಬತ್ತಿಹೋದ ನದಿಯಂತೆ ಅವಳು ದೀನಾವಸ್ಥೆಯಲ್ಲಿದ್ದಳು.॥14॥
ಮೂಲಮ್ - 15
ವೇದೀಮಿವ ಪರಾಮೃಷ್ಟಾಂ ಶಾಂತಾಮಗ್ನಿ ಶಿಖಾಮಿವ ।
ಪೌರ್ಣಮಾಸೀಮಿವ ನಿಶಾಂ ರಾಹುಗ್ರಸ್ತೇಂದುಮಂಡಲಾಮ್ ॥
ಅನುವಾದ
ಅಯೋಗ್ಯರಿಂದ ಅಪವಿತ್ರಗೊಳಿಸಲ್ಪಟ್ಟ ಯಜ್ಞವೇದಿಯಂತೆ, ಆರಿಹೋದ ಅಗ್ನಿಶಿಖೆಯಂತೆಯೂ, ರಾಹುಗ್ರಸ್ತವಾದ ಚಂದ್ರಗ್ರಹಣದಿಂದ ಮಸಕಾದ ಹುಣ್ಣಿಮೆಯ ರಾತ್ರಿಯಂತೆ ಅವಳು ನಿಸ್ತೇಜವಾಗಿದ್ದಳು.॥15॥
ಮೂಲಮ್ - 16
ಉತ್ಕೃಷ್ಟ ಪರ್ಣಕಮಲಾಂ ವಿತ್ರಾಸಿತವಿಹಂಗಮಾಮ್ ।
ಹಸ್ತಿಹಸ್ತಪರಾಮೃಷ್ಟಾಮಾಕುಲಾಂ ಪದ್ಮಿನೀಮಿವ ॥
ಅನುವಾದ
ಆನೆಯು ತನ್ನ ಸೊಂಡಿಲಿನಿಂದ ಕಿತ್ತುಹಾಕಿದ ಕಮಲ ಮತ್ತು ಕಮಲದಬಳ್ಳಿಗಳು, ಅದರಲ್ಲಿದ್ದ ಜಲಪಕ್ಷಿಗಳು ಭಯಪಟ್ಟು ಹಾರಿ ಹೋಗಿ ಶೋಭಾವಿಹೀನವಾದ ಪದ್ಮಸರೋವರದಂತೆ ಸೀತಾದೇವಿಯು ವ್ಯಾಕುಲಚಿತ್ತದಿಂದ ಅಲ್ಲಿದ್ದಳು.॥16॥
ಮೂಲಮ್ - 17
ಪತಿಶೋಕಾತುರಾಂ ಶುಷ್ಕಾಂ ನದೀಂ ವಿಸ್ರಾವಿತಾಮಿವ ।
ಪರಯಾ ಮೃಜಯಾ ಹೀನಾಂ ಕೃಷ್ಣ ಪಕ್ಷನಿಶಾಮಿವ ॥
ಅನುವಾದ
ಅಭ್ಯಂಗ ಸ್ನಾನಾದಿ ಸಂಸ್ಕಾರಗಳಿಲ್ಲದೆ, ಪತಿಶೋಕದಿಂದ ಪರಿತಪಿಸುತ್ತಿರುವ ಸೀತಾದೇವಿಯು, ತೀರಪ್ರದೇಶವು ಕೊಚ್ಚಿಹೋಗಿ ಪ್ರವಾಹವು ಬೆರೆಡೆಗೆ ಹರಿದುಹೋದ ಕಾರಣ ಬತ್ತಿಹೋದ ನದಿಯಂತೆ, ಕೃಷ್ಣಪಕ್ಷದ ಕತ್ತಲೆಯ ರಾತ್ರಿಯಂತೆ ಕಳೆಗುಂದಿದ್ದಳು.॥17॥
ಮೂಲಮ್ - 18
ಸುಕುಮಾರೀಂ ಸುಜಾತಾಂಗೀಂ ರತ್ನಗರ್ಭಗೃಹೋಚಿತಾಮ್ ।
ತಪ್ಯಮಾನಾಮಿವೋಷ್ಣೇನ ಮೃಣಾಲೀಮಚಿರೋದ್ಧೃತಾಮ್॥
ಅನುವಾದ
ಸುಕುಮಾರಿಯೂ, ಸುಂದರಾಂಗಿಯೂ ಆದ ಸೀತಾದೇವಿಯು ರತ್ನಖಚಿತ ಹರ್ಮ್ಯದಲ್ಲಿ ವಾಸಿಸಲು ಯೋಗ್ಯಳಾದವಳು. ಆದರೆ ಇಂದು ಆಗ ತಾನೇ ಕಿತ್ತುಹಾಕಿ ಬಾಡಿಹೋದ ತಾವರೆಯ ಬಳ್ಳಿಯಂತೆ ಕಾಣುತ್ತಿದ್ದಳು.॥18॥
ಮೂಲಮ್ - 19
ಗೃಹೀತಾಮಾಲಿತಾಂ ಸ್ತಂಭೇ ಯೂಥಪೇನ ವಿನಾಕೃತಾಮ್ ।
ನಿಃಶ್ವಸಂತೀಂ ಸುದುಃಖಾರ್ತಾಂ ಗಜರಾಜವಧೂಮಿವ ॥
ಅನುವಾದ
ಬೇಟೆಗಾರರು ಸೆರೆಹಿಡಿದು ಕಟ್ಟಿಹಾಕಲ್ಪಟ್ಟ ಗಂಡಾನೆಯಿಂದ ಬೇರ್ಪಟ್ಟ ಹೆಣ್ಣಾನೆಯಂತೆ ಇವಳು ದುಃಖಪೀಡಿತಳಾಗಿ ದೀರ್ಘವಾದ ನಿಟ್ಟುಸಿರು ಬಿಡುತ್ತಿದ್ದಳು.॥19॥
ಮೂಲಮ್ - 20
ಏಕಯಾ ದೀರ್ಘಯಾ ವೇಣ್ಯಾ ಶೋಭಮಾನಾಮಯತ್ನತಃ ।
ನೀಲಯಾ ನೀರದಾಪಾಯೇ ವನರಾಜ್ಯಾ ಮಹೀಮಿವ ॥
ಅನುವಾದ
ಮೋಡವಿಲ್ಲದ ಸಮಯದಲ್ಲಿ ನೀಲರ್ವಣ ವನಶ್ರೀಯಿಂದ ಶೋಭಿಸುವ ಭೂದೇವಿಯಂತೆ ಸೀತಾದೇವಿಯು ಹೆಣೆಯಲ್ಪಡದ ನೀಳವಾದ ಒಂದೇ ಜಡೆಯಿಂದ ಕೂಡಿದ್ದು ಕೇಶಸಂಸ್ಕಾರವಿಲ್ಲದೆ ಶೋಭಾಯಮಾನಳಾಗಿ ಕಾಣುತ್ತಿದ್ದಾಳೆ.॥20॥
ಮೂಲಮ್ - 21
ಉಪವಾಸೇನ ಶೋಕೇನ ಧ್ಯಾನೇನ ಚ ಭಯೇನ ಚ ।
ಪರಿಕ್ಷೀಣಾಂ ಕೃಶಾಂ ದೀನಾಮಲ್ಪಾಹಾರಾಂ ತಪೋಧನಾಮ್ ॥
ಮೂಲಮ್ - 22
ಆಯಾಚಮಾನಾಂ ದುಃಖಾರ್ತಾಂ ಪ್ರಾಂಜಲೀಂ ದೇವತಾಮಿವ ।ಭಾವೇನ ರಘುಮುಖ್ಯಸ್ಯ ದಶಗ್ರೀವಪರಾಭವಮ್ ॥
ಅನುವಾದ
ಅವಳು ಉಪವಾಸದಿಂದಲೂ, ಶೋಕದಿಂದಲೂ, ಚಿಂತೆಯಿಂದಲೂ, ಭಯದಿಂದಲೂ, ವಾಯುಮಾತ್ರ ಆಹಾರದಿಂದ ತಪೋವ್ರತ ನಿಯಮಗಳನ್ನು ಆಚರಿಸುತ್ತಾ ಬಹಳ ಕೃಶಳಾಗಿ, ಕ್ಷೀಣಿಸಿ, ದೀನದೆಶೆಯಲ್ಲಿದ್ದಳು. ದುಃಖ ಪೀಡಿತಳಾದ ಸೀತಾದೇವಿಯು ಶ್ರೀರಾಮಚಂದ್ರನ ಮೂಲಕ ರಾವಣನ ಪರಾಜಯವಾಗಲಿ ಎಂಬ ಒಂದೇ ಭಾವದಿಂದ ಕೈಮುಗಿದುಕೊಂಡು ಕುಲ ದೇವತೆಯನ್ನು ಪ್ರಾರ್ಥಿಸುತ್ತಿರುವಳೋ ಎಂಬಂತೆ ಕಾಣುತ್ತಿತ್ತು.॥21-22॥
ಮೂಲಮ್ - 23
ಸಮೀಕ್ಷಮಾಣಾಂ ರುದತೀಮನಿಂದಿತಾಂ
ಸುಪಕ್ಷ್ಮ ತಾಮ್ರಾಯತಶುಕ್ಲಲೋಚನಾಮ್ ।
ಅನುವ್ರತಾಂ ರಾಮಮತೀವ ಮೈಥಿಲೀಂ
ಪ್ರಲೋಭಯಾಮಾಸ ವಧಾಯ ರಾವಣಃ ॥
ಅನುವಾದ
ನಿಷ್ಕಳಂಕಳಾದ ಸೀತಾದೇವಿಯು ರಕ್ಷಕನಿಗಾಗಿ ಅತ್ತಿತ್ತ ಗಮನವಿಟ್ಟು ನೋಡುತ್ತಾ ಅಳುತ್ತಿದ್ದಳು. ಸುಂದರವಾದ ರೆಪ್ಪೆಗಳಿಂದ ಶೋಭಿಸುತ್ತಿದ್ದು, ವಿಶಾಲವಾಗಿಯೂ, ಕೆಂಪಾಗಿಯೂ, ಬಿಳುಪಾಗಿಯೂ ಇದ್ದ ಕಣ್ಣುಗಳನ್ನು ಹೊಂದಿದ್ದಳು. ಅವಳು ಶ್ರೀರಾಮನೇ ತನ್ನ ಸರ್ವಸ್ವವೆಂದು ಭಾವಿಸಿ, ಪತಿವ್ರತಾ ಧರ್ಮದಲ್ಲಿ ನಿರತಳಾಗಿದ್ದಳು. ಅಂತಹ ವೈದೇಹಿಯನ್ನು ರಾವಣನು ತನ್ನ ವಿನಾಶಕ್ಕಾಗಿಯೇ ಪ್ರಲೋಭನಗೊಳಿಸಲು ಉಪಕ್ರಮಿಸಿದನು.॥23॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಏಕೋನವಿಂಶಃ ಸರ್ಗಃ ॥ 19 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹತ್ತೊಂಭತ್ತನೆಯ ಸರ್ಗವು ಮುಗಿಯಿತು.