०१८ अशोकवाटिकायां रावणागमनम्

वाचनम्
ಭಾಗಸೂಚನಾ

ರಾವಣನು ಅಂತಃಪುರದ ಸ್ತ್ರೀಯರಿಂದ ಪರಿವೃತನಾಗಿ ಅಶೋಕವನಕ್ಕೆ ಬಂದುದನ್ನು ಹನುಮಂತನು ನೋಡಿದುದು

ಮೂಲಮ್ - 1

ತಥಾ ವಿಪ್ರೇಕ್ಷಮಾಣಸ್ಯ ವನಂ ಪುಷ್ಪಿತಪಾದಪಮ್ ।
ವಿಚಿನ್ವತಶ್ಚ ವೈದೇಹೀಂ ಕಿಂಚಿಚ್ಛೇಷಾ ನಿಶಾಭವತ್ ॥

ಅನುವಾದ

ಆಗ ಹನುಮಂತನು ಪುಷ್ಪಿತವಾದ ವೃಕ್ಷಗಳಿಂದ ನಿಬಿಡವಾಗಿದ್ದ ಅಶೋಕವನದಲ್ಲಿ ಜಾನಕಿಯನ್ನು ಹುಡುಕುತ್ತಿರುವಾಗಲೇ ರಾತ್ರಿಯ ಬಹುಭಾಗವು ಕಳೆದು ಸ್ವಲ್ಪಭಾಗಮಾತ್ರ ಉಳಿದಿತ್ತು.॥1॥

ಮೂಲಮ್ - 2

ಷಡಂಗವೇದವಿದುಷಾಂ ಕ್ರತುಪ್ರವರಯಾಜಿನಾಮ್ ।
ಶುಶ್ರಾವ ಬ್ರಹ್ಮಘೋಷಾಂಶ್ಚ ವಿರಾತ್ರೇ ಬ್ರಹ್ಮರಕ್ಷಸಾಮ್ ॥

ಅನುವಾದ

ರಾತ್ರಿಯು ಕಳೆಯುತ್ತಿದ್ದ ಆ ಸಮಯದಲ್ಲಿ ಸಾಂಗವೇದಾಧ್ಯಯನ ಮಾಡಿದ್ದ, ಮಹಾಯಜ್ಞಗಳ ಯಾಜಕರಾಗಿದ್ದ ಬ್ರಹ್ಮರಾಕ್ಷಸರು ಮಾಡುತ್ತಿದ್ದ ವೇದಘೋಷಗಳನ್ನು ಹನುಮಂತನು ಕೇಳಿದನು.॥2॥

ಮೂಲಮ್ - 3

ಅಥ ಮಂಗಲವಾದಿತ್ರೈಃ ಶಬ್ದೈಃ ಶ್ರೋತ್ರಮನೋಹರೈಃ ।
ಪ್ರಾಬುಧ್ಯತ ಮಹಾಬಾಹುರ್ದಶಗ್ರೀವೋ ಮಹಾಬಲಃ ॥

ಅನುವಾದ

ಅದೇ ಸಮಯದಲ್ಲಿ ಕಿವಿಗಳಿಗೆ ಇಂಪಾಗಿದ್ದ ಮಂಗಳವಾದ್ಯಗಳ ನಿನಾದದಿಂದ ದೀರ್ಘ ಬಾಹುವೂ, ಮಹಾಬಲಶಾಲಿಯೂ ಆದ ದಶಗ್ರೀವನನ್ನು ಅನುಚರರು ಎಚ್ಚರಿಸಿದರು.॥3॥

ಮೂಲಮ್ - 4

ವಿಬುಧ್ಯ ತು ಯಥಾಕಾಲಂ ರಾಕ್ಷಸೇಂದ್ರಃ ಪ್ರತಾಪವಾನ್ ।ಸ್ರಸ್ತಮಾಲ್ಯಾಂಬರಧರೋ ವೈದೇಹೀಮನ್ವಚಿಂತಯತ್ ॥

ಅನುವಾದ

ಪ್ರತಾಪಶಾಲಿಯಾದ, ರಾಕ್ಷಸೇಂದ್ರನಾದ, ರಾವಣನು ಸಕಾಲದಲ್ಲಿ ಮೇಲೆದ್ದನು. ಅವನು ಧರಿಸಿದ್ದ ಮಾಲೆಗಳೂ, ಹಾರಗಳೂ, ಅಸ್ತವ್ಯಸ್ತವಾಗಿದ್ದವು. ಎದ್ದಾಗಲೇ ವೈದೇಹಿಯ ವಿಷಯವಾಗಿ ಯೋಚಿಸತೊಡಗಿದನು.॥4॥

ಮೂಲಮ್ - 5

ಭೃಶಂ ನಿಯುಕ್ತಸ್ತಸ್ಯಾಂ ಚ ಮದನೇನ ಮದೋತ್ಕಟಃ ।
ನ ಸ ತಂ ರಾಕ್ಷಸಃ ಕಾಮಂ ಶಶಾಕಾತ್ಮನಿ ಗೂಹಿತುಮ್ ॥

ಅನುವಾದ

ಮಾದಕ ಪದಾರ್ಥಗಳ ಸೇವನೆಯಿಂದ, ಮದೋತ್ಕಟನಾಗಿದ್ದು, ಮನ್ಮಥನ ಪ್ರಭಾವದಿಂದ ಸೀತಾದೇವಿಯಲ್ಲಿ ಅತ್ಯಾಸಕ್ತನಾಗಿದ್ದ ರಾವಣನು ಕಾಮದ ಉದ್ವೇಗವನ್ನು ಅಡಗಿಸದಾದನು.॥5॥

ಮೂಲಮ್ - 6

ಸ ಸರ್ವಾಭರಣೈರ್ಯುಕ್ತೋ ಬಿಭ್ರಚ್ಛ್ರಿಯಮನುತ್ತಮಾಮ್ ।
ತಾಂ ನಗೈರ್ಬಹುಭಿರ್ಜುಷ್ಟಾಂ ಸರ್ವಪುಷ್ಪಫಲೋಪಗೈಃ ॥

ಮೂಲಮ್ - 7

ವೃತಾಂ ಪುಷ್ಕರಣೀಭಿಶ್ಚ ನಾನಾ ಪುಷ್ಪೋಪಶೋಭಿತಾಮ್ ।
ಸದಾಮದೈಶ್ಚ ವಿಹಗೈರ್ವಿಚಿತ್ರಾಂ ಪರಮಾದ್ಭುತೈಃ ॥

ಮೂಲಮ್ - 8

ಈಹಾಮೃಗೈಶ್ಚ ವಿವಿಧೈರ್ಜುಷ್ಟಾಂ ದೃಷ್ಟಿಮನೋಹರೈಃ ।
ವೀಥೀಃ ಸಂಪ್ರೇಕ್ಷಮಾಣಶ್ಚ ಮಣಿಕಾಂಚನ ತೋರಣಾಃ ॥

ಮೂಲಮ್ - 9

ನಾನಾಮೃಗಗಣಾಕೀರ್ಣಾಂ ಫಲೈಃ ಪ್ರಪತಿತೈರ್ವೃತಾಮ್ ।
ಅಶೋಕವನಿಕಾಮೇವ ಪ್ರಾವಿಶತ್ ಸಂತತದ್ರುಮಾಮ್ ॥

ಅನುವಾದ

ಒಡನೆಯೇ ಆಭರಣಗಳೆಲ್ಲವನ್ನು ತೊಟ್ಟುಕೊಂಡು, ನಯನ ಮನೋಹರವಾಗಿ ಸಿಂಗರಿಸಿಕೊಂಡು ಪರಮಶ್ರೇಷ್ಠವಾದ ಕಾಂತಿಯಿಂದ ರಾರಾಜಿಸುತ್ತಾ, ಫಲ-ಪುಷ್ಪಗಳಿಂದ ಸಮೃದ್ಧವಾಗಿದ್ದ ಅನೇಕ ವೃಕ್ಷಗಳಿಂದ ಕೂಡಿದ್ದ ಆ ಅಶೋಕವನವು ನಾನಾ ವಿಧವಾದ ಸರೋವರಗಳಿಂದ ಸಮಲಂಕೃತವಾಗಿದ್ದ, ನಾನಾವಿಧವಾದ ಪುಷ್ಪಗಳಿಂದ ಶೋಭಿಸುತ್ತಿದ್ದ, ನಿರಂತರ ಮದಿಸಿದ ಪಕ್ಷಿಗಳ ಕಲಕಲನಿನಾದದಿಂದ ಅದ್ಭುತವಾಗಿದ್ದು ಚಿತ್ರವಿಚಿತ್ರವಾಗಿದ್ದ, ಕಣ್ಣುಗಳಿಗೆ ಹಬ್ಬವನ್ನುಂಟುಮಾಡುತ್ತಿದ್ದ ವಿಧ-ವಿಧವಾದ ಕ್ರೀಡಾಮೃಗಗಳಿಂದ ಸಮಾವೃತವಾಗಿದ್ದ, ಮಣಿಮಯ, ಮತ್ತು ಕಾಂಚನಮಯ ತೋರಣಗಳಿಂದ ಅಲಂಕೃತವಾದ, ವಿಶಾಲವಾದ ವೀಥಿಗಳನ್ನು ನೋಡುತ್ತಾ ರಾವಣನು ಮುಂದರಿದನು. ಹಲವು ಬಗೆಯ ಜಿಂಕೆಗಳ ಗುಂಪುಗಳು ಅಲಲ್ಲಿ ಶೋಭಿಸುತ್ತಿದ್ದವು. ಪಕ್ವವಾಗಿ ಕೆಳಕ್ಕೆಬಿದ್ದ ಹಣ್ಣುಗಳಿಂದ ಆ ಭೂಪ್ರದೇಶವು ಮುಚ್ಚಿಹೋಗಿದ್ದಿತು. ದಟ್ಟವಾಗಿದ್ದ ವೃಕ್ಷಗಳಿಂದ ಕೂಡಿದ್ದ ಆ ಅಶೋಕವನವನ್ನು ಪ್ರವೇಶಿಸಿದನು.॥6-9॥

ಮೂಲಮ್ - 10

ಅಂಗನಾಃ ಶತಮಾತ್ರಂ ತು ತಂ ವ್ರಜಂತಮನುವ್ರಜನ್ ।
ಮಹೇಂದ್ರಮಿವ ಪೌಲಸ್ತ್ಯಂ ದೇವಗಂಧರ್ವಯೋಷಿತಃ ॥

ಅನುವಾದ

ದೇವ-ಗಂಧರ್ವ ಕಾಂತೆಯರು ಮಹೇಂದ್ರನನ್ನು ಅನುಸರಿಸಿಹೋಗುವಂತೆ ನೂರಾರು ಮಂದಿ ಅಂತಃಪುರದ ನಾರಿಯರು ಪೌಲಸ್ತ್ಯ ವಂಶಜನಾದ ರಾವಣನನ್ನು ಅನುಸರಿಸಿ ಹೋಗುತ್ತಿದ್ದರು.॥10॥

ಮೂಲಮ್ - 11

ದೀಪಿಕಾಃ ಕಾಂಚನೀಃ ಕಾಶ್ಚಿಜ್ಜಗೃಹುಸ್ತತ್ರ ಯೋಷಿತಃ ।
ವಾಲವ್ಯಜನಹಸ್ತಾಶ್ಚ ತಾಲವೃಂತಾನಿ ಚಾಪರಾಃ ॥

ಅನುವಾದ

ಅವರಲ್ಲಿ ಕೆಲವು ಯುವತಿಯರು ಸುವರ್ಣಮಯವಾದ ದಿವಟಿಗೆಯನ್ನು ಹಿಡಿದು ಮುಂದೆ ಹೋಗುತ್ತಿದ್ದರು. ಕೆಲವರು ಬೀಸಣಿಗೆಗಳನ್ನು, ಚಾಮರಗಳನ್ನು ಹಿಡಿದ್ದಿರು.॥11॥

ಮೂಲಮ್ - 12

ಕಾಂಚನೈರಪಿ ಭೃಂಗಾರೈರ್ಜಹ್ರುಃ ಸಲಿಲಮಗ್ರತಃ ।
ಮಂಡಲಾಗ್ರಾ ಬೃಸೀಶ್ಚೈವ ಗೃಹ್ಯಾನ್ಯಾಃ ಪೃಷ್ಠತೋ ಯಯುಃ ॥

ಅನುವಾದ

ಇನ್ನು ಕೆಲವರು ಸುವರ್ಣಮಯವಾದ ಕಲಶಗಳಲ್ಲಿ ನೀರನ್ನು ತುಂಬಿಕೊಂಡು ಮುಂದೆ ಹೋಗುತ್ತಿದ್ದರು. ಮತ್ತೂ ಕೆಲವರು ಖಡ್ಗಗಳನ್ನು, ಮಂಡಲಾಕಾರದ ಆಸನಗಳನ್ನು ಹಿಡಿದುಕೊಂಡು ಜೊತೆಯಲ್ಲಿ ಹೋಗುತ್ತಿದ್ದರು.॥12॥

ಮೂಲಮ್ - 13

ಕಾಚಿದ್ರತ್ನಮಯಾಂ ಸ್ಥಾಲೀಂ ಪೂರ್ಣಾಂ ಪಾನಸ್ಯ ಭಾಮಿನೀ ।
ದಕ್ಷಿಣಾ ದಕ್ಷಿಣೇನೈವ ತದಾ ಜಗ್ರಾಹ ಪಾಣಿನಾ ॥

ಅನುವಾದ

ಕುಶಲೆಯಾದ ಅಂಗನೆಯೊಬ್ಬಳು ಮದಿರೆಯಿಂದ ತುಂಬಿದ ರತ್ನಖಚಿತವಾದ ಪಾನಪಾತ್ರೆಯನ್ನು ಬಲಗೈಯಲ್ಲಿ ಹಿಡಿದುಕೊಂಡು ರಾವಣನ ಪಕ್ಕದಲ್ಲೇ ನಡೆಯುತ್ತಿದ್ದಳು.॥13॥

ಮೂಲಮ್ - 14

ರಾಜಹಂಸಪ್ರತೀಕಾಶಂ ಛತ್ರಂ ಪೂರ್ಣಶಶಿಪ್ರಭಮ್ ।
ಸೌವರ್ಣದಂಡಮಪರಾ ಗೃಹೀತ್ವಾ ಪೃಷ್ಠ ತೋ ಯಯೌ ॥

ಅನುವಾದ

ಇನ್ನೋರ್ವ ತರುಣಿಯು ರಾಜಹಂಸದಂತೆ ಬೆಳ್ಳಗಿದ್ದ ಪೂರ್ಣ ಚಂದ್ರನಂತೆ ಅಮಿತ ಪ್ರಭೆಯಿಂದ ಕೂಡಿದ್ದು , ಬಂಗಾರದ ದಂಡವಿದ್ದ ಶ್ವೇತಚ್ಛತ್ರವನ್ನು ಹಿಡಿದುಕೊಂಡು ರಾವಣನ ಹಿಂದಿನಿಂದ ಹೋಗುತ್ತಿದ್ದಳು.॥14॥

ಮೂಲಮ್ - 15

ನಿದ್ರಾಮದಪರೀತಾಕ್ಷೋ ರಾವಣಸ್ಯೋತ್ತಮಾಃ ಸ್ತ್ರಿಯಃ ।
ಅನುಜಗ್ಮುಃ ಪತಿಂ ವೀರಂ ಘನಂ ವಿದ್ಯುಲ್ಲತಾ ಇವ ॥

ಅನುವಾದ

ಮಧುಪಾನದಿಂದ ಮತ್ತರಾಗಿದ್ದ ರಾವಣನ ಅನಂಗಸತಿಯರ ಕಣ್ಣುಗಳು ನಿದ್ರಾಮತ್ತಿನಿಂದ ಮುಚ್ಚುತ್ತಿದ್ದವು. ಕೋಲು ಮಿಂಚುಗಳು ಮೋಡವನ್ನು ಅನುಸರಿಸಿ ಹೋಗುವಂತೆ ಅಂತಃಪುರದ ಸ್ತ್ರೀಯರು ವೀರನಾದ ರಾವಣನನ್ನು ಅನುಸರಿಸಿ ಹೋಗುತ್ತಿದ್ದರು.॥15॥

ಮೂಲಮ್ - 16

ವ್ಯಾವಿದ್ಧಹಾರಕೇಯೂರಾಃ ಸಮಾಮೃದಿತವರ್ಣಕಾಃ ।
ಸಮಾಗಲಿತಕೇಶಾಂತಾಃ ಸಸ್ವೇದವದನಾಸ್ತಥಾ ॥

ಅನುವಾದ

ರಾವಣನ ಪ್ರಿಯ ಸತಿಯರೂ, ಮಧುಲೋಚನೆಯರಾದ ಆ ತರುಣೀಮಣಿಗಳ ಹಾರ ಕೇಯೂರಗಳು ಅಸ್ತವ್ಯಸ್ತವಾಗಿದ್ದವು. ಅಂಗರಾಗಗಳೆಲ್ಲವೂ ಅಳಿಸಿಹೋಗಿತ್ತು. ತಲೆ ಕೂದಲು ಕೆದರಿ ಹೋಗಿ ಮುಖದಲ್ಲಿ ಬೆವರು ತುಂಬಿತ್ತು.॥16॥

ಮೂಲಮ್ - 17

ಘೂರ್ಣಂತ್ಯೋ ಮದಶೇಷೇಣ ನಿದ್ರಯಾ ಚ ಶುಭಾನನಾಃ ।
ಸ್ವೇದಕ್ಲಿಷ್ಟಾಂಗಕುಸುಮಾಃ ಸುಮಾಲ್ಯಾಕುಲಮೂರ್ಧಜಾಃ ॥

ಅನುವಾದ

ಸುಂದರ ಮುಖಿಯರಾಗಿದ್ದ ಅವರು ಪೂರ್ತಿ ಇಳಿಯದ ಮಧುವಿನ ಮತ್ತಿನಿಂದಲೂ, ನಿದ್ರೆಯಿಂದಲೂ ಜೋಲಾಡುತ್ತಿದ್ದರು. ಅವರು ಧರಿಸಿದ್ದ ಹಾರಗಳು ಬೆವರಿನಿಂದ ಬಾಡಿಹೋಗಿದ್ದವು. ತಲೆಯಲ್ಲಿ ಮುಡಿದ ಹೂವಿನ ದಂಡೆಗಳು ಬಾಡಿ ಅತ್ತಲಿತ್ತ ತೂಗುತ್ತಿದ್ದವು.॥17॥

ಮೂಲಮ್ - 18

ಪ್ರಯಾಂತಂ ನೈರ್ಋತಪತಿಂ ನಾರ್ಯೋ ಮದಿರಲೋಚನಾಃ ।
ಬಹುಮಾನಾಚ್ಚ ಕಾಮಾಚ್ಚ ಪ್ರಿಯಾ ಭಾರ್ಯಾಸ್ತಮನ್ವಯುಃ ॥

ಅನುವಾದ

ಮಧುಲೋಚನೆಯರಾದ ಆ ನಾರಿಯರಿಗೆ ಪತಿಯಾದ ರಾಕ್ಷಸಾಧಿಪತಿಯ ಮೇಲಿನ ಆದರಾಭಿಮಾನದಿಂದ, ಕಾಮಾತುರರಾಗಿ ಅವನನ್ನು ಹಿಂಬಾಲಿಸುತ್ತಿದ್ದರು.॥18॥

ಮೂಲಮ್ - 19

ಸ ಚ ಕಾಮಪರಾಧೀನಃ ಪತಿಸ್ತಾಸಾಂ ಮಹಾಬಲಃ ।
ಸೀತಾಸಕ್ತಮನಾ ಮಂದೋ ಮದಾಂಚಿತಗತಿರ್ಬಭೌ ॥

ಅನುವಾದ

ಅವರಿಗೆಲ್ಲ ಪತಿಯಾದ, ಮಹಾಬಲಶಾಲಿಯಾದ ಆ ರಾವಣನು ಕಾಮಪರವಶನಾಗಿ, ಮಂದಬುದ್ಧಿಯಿಂದ ಸೀತೆಯ ಮೇಲಿನ ಆಸಕ್ತಿಯಿಂದ ಮದಭರಿತ ಆನೆಯಂತೆ ಮುನ್ನಡೆಯುತ್ತಿದ್ದನು.॥19॥

ಮೂಲಮ್ - 20

ತತಃ ಕಾಂಚೀನಿನಾದಂ ಚ ನೂಪುರಾಣಾಂ ಚ ನಿಃಸ್ವನಮ್ ।
ಶುಶ್ರಾವ ಪರಮಸ್ತ್ರೀಣಾಂ ಸ ಕಪಿರ್ಮಾರುತಾತ್ಮಜಃ ॥

ಅನುವಾದ

ಶಿಂಶುಪಾವೃಕ್ಷದಲ್ಲಿ ಉಡುಗಿಕೊಂಡಿದ್ದ ವಾಯುಪುತ್ರನಾದ ಹನುಮಂತನು ಸುಂದರಿಯರಾದ ಆ ರಾವಣನ ಭಾರ್ಯೆಯರ ಒಡ್ಯಾಣಗಳ ಮತ್ತು ಕಾಲಂದುಗೆಗಳ ಧ್ವನಿಯನ್ನು ಕೇಳಿದನು.॥20॥

ಮೂಲಮ್ - 21

ತಂ ಚಾಪ್ರತಿಮಕರ್ಮಾಣಮಚಿಂತ್ಯಬಲಪೌರುಷಮ್ ।
ದ್ವಾರದೇಶಮನುಪ್ರಾಪ್ತಂ ದದರ್ಶ ಹನುಮಾನ್ ಕಪಿಃ ॥

ಅನುವಾದ

ಸಾಟಿಯಿಲ್ಲದ ದುಃಸಾಹಸ ಕಾರ್ಯಗಳನ್ನು ಮಾಡು ವವನೂ, ಅಮಿತ ಬಲಪರಾಕ್ರಮಿಯೂ ಆದ ರಾವಣನು ಅಶೋಕ ವನದ್ವಾರದಿಂದ ಬರುತ್ತಿರುವುದನ್ನು ವಾನರೋತ್ತಮನಾದ ಮಾರುತಿಯು ನೋಡಿದನು.॥21॥

ಮೂಲಮ್ - 22

ದೀಪಿಕಾಭಿರನೇಕಾಭಿಃ ಸಮಂತಾದವಭಾಸಿತಮ್ ।
ಗಂಧತೈಲಾವಸಿಕ್ತಾಭಿರ್ಧ್ರಿಯಮಾಣಾಭಿರಗ್ರತಃ ॥

ಅನುವಾದ

ಅವನ ಮುಂದೆ ಉತ್ತಮರಾದ ಸ್ತ್ರೀಯರು ಸುಗಂಧಯುಕ್ತವಾದ ಎಣ್ಣೆಯಿಂದ ನೆನೆಸಿದ ಅನೇಕ ದೀವಟಿಗಗಳನ್ನು ಒಯ್ಯುತ್ತಿದ್ದರು. ಆ ದೀಪಗಳ ಬೆಳಕಿನಿಂದ ರಾವಣನು ಅತ್ಯಂತ ಪ್ರಕಾಶಮಾನವಾಗಿ ಕಾಣುತ್ತಿದ್ದನು.॥22॥

ಮೂಲಮ್ - 23

ಕಾಮದರ್ಪಮದೈರ್ಯುಕ್ತಂ ಜಿಹ್ಮತಾಮ್ರಾಯತೇಕ್ಷಣಮ್ ।
ಸಮಕ್ಷಮಿವ ಕಂದರ್ಪಮಪವಿದ್ಧಶರಾಸನಮ್ ॥

ಅನುವಾದ

ಕಾಮ, ಮದ, ದರ್ಪಗಳಿಂದ ಕೂಡಿದ್ದ ಅವನ ಕಣ್ಣುಗಳು ಕೆಂಪಾಗಿಯೂ, ವಿಶಾಲವಾಗಿಯೂ, ವಕ್ರವಾಗಿಯೂ ಇದ್ದವು. ಅವನು ಕುಸುಮ ಚಾಪವನ್ನು ತೊರೆದು ಪ್ರತ್ಯಕ್ಷವಾಗಿ ಕಾಣಿಸಿಕೊಂಡ ಕಾಮದೇವನಂತೆ ಕಾಣುತ್ತಿದ್ದನು.॥23॥

ಮೂಲಮ್ - 24

ಮಥಿತಾಮೃತೇನಾಭಮರಜೋವಸ್ತ್ರಮುತ್ತಮಮ್ ।
ಸಲೀಲಮನುಕರ್ಷಂತಂ ವಿಮುಕ್ತಂ ಸಕ್ತಮಂಗದೇ ॥

ಅನುವಾದ

ಹಾಲನ್ನು ಕಡೆದಾಗ ಹೊರಬರುವ ನೊರೆಯಂತೆ ಬಿಳುಪಾದ, ಶುಭ್ರವಾದ, ಶ್ರೇಷ್ಠವಾದ ವಸ್ತ್ರಗಳನ್ನುಟ್ಟಿದ್ದು, ಉತ್ತರೀಯವು ಹೆಗಲಿನಿಂದ ಜಾರಿ ಕೇಯೂರಕ್ಕೆ ಸಿಕ್ಕಿಕೊಂಡು ನೆಲದ ಮೇಲೆ ಹೊರಳಾಡುತ್ತಿತ್ತು.॥24॥

ಮೂಲಮ್ - 25

ತಂ ಪತ್ರವಿಟಪೇ ಲೀನಃ ಪತ್ರಪುಷ್ಪಘನಾವೃತಃ ।
ಸಮೀಪಮುಪಸಂಕ್ರಾಂತಂ ನಿಧ್ಯಾತುಮುಪಚಕ್ರಮೇ ॥

ಅನುವಾದ

ದಟ್ಟವಾದ ಎಲೆಗಳಿಂದಲೂ, ಪುಷ್ಪಗಳಿಂದಲೂ ಸಮಾವೃತವಾದ ಶಿಂಶುಪಾ ವೃಕ್ಷದಲ್ಲಿ ಉಡುಗಿ ಕುಳಿತಿದ್ದ ಹನುಮಂತನು ಸಮೀಪಿಸುತ್ತಿರುವ ರಾವಣನನ್ನು ಸೂಕ್ಷ್ಮವಾಗಿ ಗಮನಿಸಿದನು.॥25॥

ಮೂಲಮ್ - 26

ಅವೇಕ್ಷಮಾಣಸ್ತು ತತೋ ದದರ್ಶ ಕಪಿಕುಂಜರಃ ।
ರೂಪಯೌವನಸಂಪನ್ನಾ ರಾವಣಸ್ಯ ವರಸ್ತ್ರಿಯಃ ॥

ಅನುವಾದ

ಹಾಗೆಯೇ ರಾವಣನ ಕಡೆಗೆ ನೋಡುತ್ತಿದ್ದಾಗ, ಅವನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ರೂಪ-ಯೌವನ ಸಂಪನ್ನೆಯರಾದ, ಶ್ರೇಷ್ಠರಾದ ರಾವಣನ ವರಸ್ತ್ರೀಯರನ್ನು ಕಪಿವರನು ನೋಡಿದನು.॥26॥

ಮೂಲಮ್ - 27

ತಾಭಿಃ ಪರಿವೃತೋ ರಾಜಾ ಸುರೂಪಾಭಿರ್ಮಹಾಯಶಾಃ ।
ತನ್ಮೃಗದ್ವಿಜಸಂಘುಷ್ಟಂ ಪ್ರವಿಷ್ಟಃ ಪ್ರಮದಾವನಮ್ ॥

ಅನುವಾದ

ಹೀಗೆ ಕಡುಚೆಲುವೆಯರಾಗಿದ್ದ ಆ ವರನಾರಿಯರಿಂದ ಪರಿವೃತನಾಗಿದ್ದು ಮಹಾಯಶಸ್ವಿಯಾದ ರಾಕ್ಷಸೇಶ್ವರನು ಮೃಗ-ಪಕ್ಷಿಗಳಿಂದ ನಿನಾದಿತವಾಗಿದ್ದ ಪ್ರಮದಾವನವನ್ನು ಪ್ರವೇಶಿಸಿದನು.॥27॥

ಮೂಲಮ್ - 28

ಕ್ಷೀಭೋ ವಿಚಿತ್ರಾಭರಣಃ ಶಂಕುಕರ್ಣೋ ಮಹಾಬಲಃ ।
ತೇನ ವಿಶ್ರವಸಃ ಪುತ್ರಃ ಸ ದೃಷ್ಟೋ ರಾಕ್ಷಸಾಧಿಪಃ ॥

ಅನುವಾದ

ಆಗ ಮದೋನ್ಮತ್ತನಾದ ರಾವಣನು ವಿಚಿತ್ರವಾದ ಆಭರಣಗಳನ್ನು ಧರಿಸಿದ್ದನು. ಕೋನವುಳ್ಳ ಕರ್ಣಾಭರಣಗಳನ್ನು ಧರಿಸಿದ್ದು, ಗರ್ವದಿಂದ ಅವುಗಳು ನೆಟ್ಟಗಾಗಿದ್ದವು. ಮಹಾಬಲಶಾಲಿಯೂ, ವಿಶ್ರವಸುವಿನ ಮಗನೂ, ರಾಕ್ಷಸರ ಅಧಿಪತಿಯೂ ಆದ ರಾವಣನನ್ನು ಹನುಮಂತನು ನೋಡಿದನು.॥28॥

ಮೂಲಮ್ - 29

ವೃತಃ ಪರಮನಾರೀಭಿಸ್ತಾರಾಭಿರಿವ ಚಂದ್ರಮಾಃ ।
ತಂ ದದರ್ಶ ಮಹಾತೇಜಾಸ್ತೇಜೋವಂತಂ ಮಹಾಕಪಿಃ ॥

ಅನುವಾದ

ಅವನು ನಕ್ಷತ್ರಗಳಿಂದ ಪರಿವೃತನಾದ ಚಂದ್ರನಂತೆ, ವರನಾರಿಯರಿಂದ ಸುತ್ತುವರಿಯಲ್ಪಟ್ಟ, ತೇಜೋವಿಶಿಷ್ಟನಾದ ಆ ರಾವಣೇಶ್ವರನನ್ನು, ಮಹಾತೇಜಸ್ವಿಯಾದ, ಕಪೀಶ್ವರನಾದ ಹನುಮಂತನು ನೋಡಿದನು.॥29॥

ಮೂಲಮ್ - 30

ರಾವಣೋಽಯಂ ಮಹಾಬಾಹುರಿತಿ ಸಂಚಿಂತ್ಯ ವಾನರಃ ।
ಸೋಽಯಮೇವ ಪುರಾ ಶೇತೇ ಪುರಮಧ್ಯೇ ಗೃಹೋತ್ತಮೇ ।
ಅವಪ್ಲುತೋ ಮಹಾತೇಜಾ ಹನುಮಾನ್ ಮಾರುತಾತ್ಮಜಃ ॥

ಅನುವಾದ

‘ಮಹಾಬಾಹುವಾದ ರಾವಣನು ಇವನೇ. ಹಿಂದೆ ಲಂಕೆಯ ಶ್ರೇಷ್ಠವಾದ ಅರಮನೆಯಲ್ಲಿ ಮಲಗಿದ್ದವನೂ ಇವನೇ. ಎಂಬುದಾಗಿ ನಿಶ್ಚಯಿಸಿ, ರಾವಣನ ಚೇಷ್ಟೆಗಳನ್ನು ಗಮನಿಸಲು ತಾನು ಕುಳಿತ್ತಿದ್ದ ರೆಂಬೆಯಿಂದ ಕೆಳಗಿನ ರೆಂಬೆಗೆ ಧುಮುಕಿದನು.॥30॥

ಮೂಲಮ್ - 31

ಸ ತಥಾಪ್ಯುಗ್ರತೇಜಾಃ ಸನ್ನಿರ್ಧೂತಸ್ತಸ್ಯ ತೇಜಸಾ ।
ಪತ್ರಗುಲ್ಮಾಂತರೇ ಸಕ್ತೋ ಹನುಮಾನ್ ಸಂವೃತೋಽಭವತ್ ॥

ಅನುವಾದ

ಹನುಮಂತನು ಬುದ್ಧಿವಂತನೂ, ಮಹಾಮೇಧಾವಿಯೂ, ತೀಕ್ಷ್ಣವಾದ ತೇಜಸ್ಸುಳ್ಳವನೂ ಆಗಿದ್ದರೂ ರಾವಣನ ರಾಕ್ಷಸೀ ತೇಜಸ್ಸಿನಿಂದ ನಡುಗುವವನಂತೆ ಗುಹೆಯಂತಿದ್ದ ಎಲೆಗಳ ಮಧ್ಯದಲ್ಲಿ ಪುನಃ ಉಡುಗಿದನು.॥31॥

ಮೂಲಮ್ - 32

ಸ ತಾಮಸಿತಕೇಶಾಂತಾಂ ಸುಶ್ರೋಣೀಂ ಸಂಹತಸ್ತನೀಮ್ ।
ದಿದೃಕ್ಷುರಸಿತಾಪಾಂಗಾಮುಪಾವರ್ತತ ರಾವಣಃ ॥

ಅನುವಾದ

ಕಪ್ಪಾದ ತಲೆಗೂದಲುಗಳಿಂದ ಕೂಡಿದ್ದ, ಸುಂದರವಾದ ಕಟಿಪ್ರದೇಶವುಳ್ಳ, ವಕ್ಷಸ್ಥಳವನ್ನು ಮುಚ್ಚಿಕೊಂಡು ಕುಳಿತಿದ್ದ, ನೇತ್ರ ಸೌಂದರ್ಯದಿಂದ ಒಡಗೂಡಿದ ಆ ಸೀತಾದೇವಿಯನ್ನು ನೋಡುವ ಬಯಕೆಯಿಂದ ರಾವಣನು ಅಲ್ಲಿಗೆ ಆಗಮಿಸಿದನು.॥32॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಅಷ್ಟಾದಶಃ ಸರ್ಗಃ ॥ 18 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹದಿನೆಂಟನೆಯ ಸರ್ಗವು ಮುಗಿಯಿತು.