वाचनम्
ಭಾಗಸೂಚನಾ
ಸೀತಾದೇವಿಯು ಮರಣ ಹೊಂದಿರಬಹುದೆಂದು ಶಂಕಿಸಿ ಹನುಮಂತನು ದುಃಖಿತನಾದುದು, ಪುನಃ ಉತ್ಸಾಹದಿಂದ ಹುಡುಕಲು ಹೊರಟ್ಟಿದ್ದು, ಎಷ್ಟು ಹುಡುಕಿದರೂ ಸೀತೆಯು ದೊರಕದಿರಲು ಪುನಃ ಚಿಂತಾಮಗ್ನನಾದುದು
ಮೂಲಮ್ - 1
ಸ ತಸ್ಯ ಮಧ್ಯೇ ಭವನಸ್ಯ ಮಾರುತಿಃ
ಲತಾಗೃಹಾಂಶ್ಚಿತ್ರಗೃಹಾನ್ನಿಶಾಗೃಹಾನ್ ।
ಜಗಾಮ ಸೀತಾಂಪ್ರತಿ ದರ್ಶನೋತ್ಸುಕೋ
ನ ಚೈವ ತಾಂ ಪಶ್ಯತಿ ಚಾರುದರ್ಶನಾಮ್ ॥
ಅನುವಾದ
ಸೀತಾದೇವಿಯನ್ನು ನೋಡುವ ಉತ್ಸಾಹದಿಂದ ಕೂಡಿದ್ದ ಹನುಮಂತನು ರಾವಣನ ಅರಮನೆಯ ಮಧ್ಯಭಾಗದಲ್ಲಿದ್ದ ಲತಾಗೃಹಗಳನ್ನು, ಚಿತ್ರಗೃಹಗಳನ್ನು, ರಾತ್ರಿಗಳನ್ನು ಕಳೆಯುವ ವಿಹಾರಗೃಹಗಳನ್ನು ಹುಡುಕಿದನು. ಆದರೆ ಕಡು ಚೆಲುವೆಯಾದ ವೈದೇಹಿಯನ್ನು ಅಲ್ಲೆಲ್ಲೂ ಕಾಣಲಿಲ್ಲ.॥1॥
ಮೂಲಮ್ - 2
ಸ ಚಿಂತಯಾಮಾಸ ತತೋ ಮಹಾಕಪಿಃ
ಪ್ರಿಯಾಮಪಶ್ಯನ್ ರಘುನಂದನಸ್ಯ ತಾಮ್ ।
ಧ್ರುವಂ ನ ಸೀತಾ ಧ್ರಿಯತೇ ಯಥಾ ನ ಮೇ
ವಿಚಿನ್ವತೋ ದರ್ಶನಮೇತಿ ಮೈಥಿಲೀ ॥
ಅನುವಾದ
ಮಹಾಕಪಿಯಾದ ಆಂಜನೇಯನು ರಘುನಂದನನಾದ ಶ್ರೀರಾಮನ ಭಾರ್ಯೆಯಾದ ಸೀತಾದೇವಿಯನ್ನು ಕಾಣದೆ ಇಂತು ಚಿಂತಿಸಿದನು ‘‘ಎಲ್ಲ ಕಡೆಗಳಲ್ಲಿ ಹುಡುಕಿದರೂ ಕಣ್ಣಿಗೆ ಕಾಣದಿರುವುದರಿಂದ ಸೀತಾದೇವಿಯು ನಿಶ್ಚಯವಾಗಿ ಪ್ರಾಣಗಳನ್ನು ತೊರೆದಿರಬಹುದೇ?॥2॥
ಮೂಲಮ್ - 3
ಸಾ ರಾಕ್ಷಸಾನಾಂ ಪ್ರವರೇಣ ಜಾನಕೀ
ಸ್ವಶೀಲಸಂರಕ್ಷಣತತ್ಪರಾ ಸತೀ ।
ಅನೇನ ನೂನಂ ಪ್ರತಿದುಷ್ಟಕರ್ಮಣಾ
ಹತಾ ಭವೇದಾರ್ಯಪಥೇ ವರೇ ಸ್ಥಿತಾ ॥
ಅನುವಾದ
ಆರ್ಯರ ಶ್ರೇಷ್ಠವಾದ ಮಾರ್ಗವನ್ನೇ ಅನುಸರಿಸುತ್ತಿದ್ದ ಅವಳು ತನ್ನ ಶೀಲದ ಸಂರಕ್ಷಣೆಯಲ್ಲೇ ನಿರತಳಾಗಿದ್ದ ಕಾರಣ ರಾಕ್ಷಸಶ್ರೇಷ್ಠನಾದ ದುಷ್ಕರ್ಮಿಯಾದ ಈ ರಾವಣನಿಂದ ಪತಿವ್ರತೆಯಾದ ಜಾನಕಿಯು ವಧಿಸಲ್ಪಟ್ಟಿರಲೂಬಹುದು.॥3॥
ಮೂಲಮ್ - 4
ವಿರೂಪರೂಪಾ ವಿಕೃತಾ ವಿವರ್ಚಸೋ
ಮಹಾನನಾ ದೀರ್ಘವಿರೂಪದರ್ಶನಾಃ ।
ಸಮೀಕ್ಷ್ಯ ಸಾ ರಾಕ್ಷಸರಾಜಯೋಷಿತೋ
ಭಯಾದ್ವಿನಷ್ಟಾ ಜನಕೇಶ್ವರಾತ್ಮಜಾ ॥
ಅನುವಾದ
ರಾವಣನ ದಾಸಿಯರಾದ ರಾಕ್ಷಸಿಯರು ವಿಕಾರ ರೂಪವುಳ್ಳವರು. ಭಯಂಕರ ಆಕಾರವುಳ್ಳವರೂ, ವಿಶಾಲವಾದ ಮುಖವುಳ್ಳವರೂ, ದೀರ್ಘವಾಗಿಯೂ, ವಿಕಾರವಾಗಿಯೂ, ಕಣ್ಣುಗಳುಳ್ಳವರು. ಇಂತಹ ಭಯಂಕರ ರೂಪಿಣಿಯರಾದ ಕಾಂತಿಹೀನ ರಾಕ್ಷಸಿಯರನ್ನು ನೋಡಿ, ಭಯವಿಹ್ವಲಳಾದ ಜನಕನಂದಿನಿಯು ಕಣ್ಮರೆಯಾಗಿರಲೂಬಹುದು.॥4॥
ಮೂಲಮ್ - 5
ಸೀತಾಮದೃಷ್ಟ್ವಾ ಹ್ಯನವಾಪ್ಯ ಪೌರುಷಂ
ವಿಹೃತ್ಯ ಕಾಲಂ ಸಹ ವಾನರೈಶ್ಚಿರಮ್ ।
ನಮೇಽಸ್ತಿ ಸುಗ್ರೀವಸಮೀಪಗಾ ಗತಿಃ
ಸುತೀಕ್ಷ್ಣದಂಡೋ ಬಲವಾಂಶ್ಚ ವಾನರಃ ॥
ಅನುವಾದ
ಅಂಗದಾದಿ ವಾನರರೊಡನೆ ಬಹಳ ಕಾಲದವರೆಗೆ ಅಲೆದಾಡಿ, ಸೀತೆಯನ್ನು ಹುಡುಕಲು ಇಲ್ಲಿಗೆ ಬಂದರೂ ಅವಳನ್ನು ಇದುವರೆಗೂ ಕಾಣಲಾಗಲಿಲ್ಲ. ಎಲ್ಲ ಪುರುಷ ಪ್ರಯತ್ನಗಳೂ ನಿಷ್ಫಲವಾದುವು. ಆದುದರಿಂದ ಸುಗ್ರೀವನ ಬಳಿಗೆ ಹೋಗುವ ಮಾರ್ಗವು ನನಗಾಗಿ ಮುಚ್ಚಿಹೋಗಿದೆ. ಏಕೆಂದರೆ, ಬಲಿಷ್ಠನಾದ ಸುಗ್ರೀವನು ಅಪರಾಧವನ್ನು ಮಾಡಿದವರಿಗೆ ತೀಕ್ಷ್ಣವಾದ ದಂಡನೆಯನ್ನು ವಿಧಿಸುವನು.॥5॥
ಮೂಲಮ್ - 6
ದೃಷ್ಟಮಂತಃಪುರಂ ಸರ್ವಂ ದೃಷ್ಟಾ ರಾವಣಯೋಷಿತಃ ।
ನ ಸೀತಾ ದೃಶ್ಯತೇ ಸಾಧ್ವೀ ವೃಥಾಜಾತೋ ಮಮಶ್ರಮಃ ॥
ಅನುವಾದ
ರಾವಣನ ಅಂತಃಪುರದ ಎಲ್ಲ ಸ್ಥಳಗಳನ್ನು ನೋಡಿಯಾಯಿತು. ರಾಕ್ಷಸೇಶ್ವರನ ಪತ್ನಿಯರ ಮಧ್ಯದಲ್ಲಿ ಹುಡುಕಿದ್ದಾಯಿತು. ಆದರೆ ಸಾಧ್ವಿಯಾದ ಸೀತಾದೇವಿಯು ಎಲ್ಲೆಲ್ಲೂ ಕಾಣಲಿಲ್ಲ. ಇದರಿಂದಾಗಿ ಸಮುದ್ರವನ್ನು ಹಾರಿಕೊಂಡು ಇಲ್ಲಿಗೆ ಬಂದ ನನ್ನ ಪ್ರಯತ್ನವೆಲ್ಲ ನಿರರ್ಥಕವಾಯಿತಲ್ಲ.॥6॥
ಮೂಲಮ್ - 7
ಕಿಂ ನು ಮಾಂ ವಾನರಾಃ ಸರ್ವೇ ಗತಂ ವಕ್ಷ್ಯಂತಿ ಸಂಗತಾಃ ।
ಗತ್ವಾ ತತ್ರ ತ್ವಯಾ ವೀರ ಕಿಂ ಕೃತಂ ತದ್ವದಸ್ವ ನಃ ॥
ಅನುವಾದ
ನಾನೇನಾದರೂ ಈಗ ಹಿಂದಕ್ಕೆ ಹೋದರೆ ವಾನರರೆಲ್ಲರೂ ಸುತ್ತಲೂ ಸೇರಿ ನನ್ನನ್ನು ಪ್ರಶ್ನಿಸಲಿಕ್ಕಿಲ್ಲವೇ? ‘ವೀರನೇ! ನೀನು ಲಂಕೆಗೆ ಹೋಗಿ ಅಲ್ಲೇನುಮಾಡಿ ಬಂದೆ? ಎಂದು ಹೇಳು’ ಮುಂತಾಗಿ ಪ್ರಶ್ನಿಸುವರು.॥7॥
ಮೂಲಮ್ - 8
ಅದೃಷ್ಟ್ವಾ ಕಿಂ ಪ್ರವಕ್ಷ್ಯಾಮಿ ತಾಮಹಂ ಜನಕಾತ್ಮಜಮ್ ।
ಧ್ರುವಂ ಪ್ರಾಯಮುಪೈಷ್ಯಂತಿ ಕಾಲಸ್ಯ ವ್ಯತಿವರ್ತನೇ ॥
ಅನುವಾದ
ಜಾನಕಿಯನ್ನು ಕಾಣದಿರುವ ನಾನು ಅವರಿಗೆ ಏನೆಂದು ಸಮಾಧಾನ ಹೇಳಲೀ? ಮೇಲಾಗಿ ಸುಗ್ರೀವನು ಇತ್ತಿರುವ ಗಡುವು ಮೀರಿಹೋಗುತ್ತಿದೆ. ಅದರಿಂದ ಅವರೆಲ್ಲರೂ ಪ್ರಾಯೋಪವೇಶವನ್ನೇ ಮಾಡುವರು.॥8॥
ಮೂಲಮ್ - 9
ಕಿಂ ವಾ ವಕ್ಷ್ಯತಿ ವೃದ್ಧಶ್ಚ ಜಾಂಬವಾನಂಗದಶ್ಚ ಸಃ ।
ಗತಂ ಪಾರಂ ಸಮುದ್ರಸ್ಯ ವಾನರಾಶ್ಚ ಸಮಾಗತಾಃ ॥
ಅನುವಾದ
ನಾನು ಸಮುದ್ರದ ಉತ್ತರ ತೀರವನ್ನು ತಲುಪಿದೊಡನೆ ನನ್ನೊಡನೆ ಬಂದ ವೃದ್ಧರಾದ ಜಾಂಬವಂತರು ಏನನ್ನುತ್ತಾರೋ! ಅಂಗದನು ಏನನ್ನುವನೋ? ಉಳಿದ ಕಪಿಗಳು ಏನೆಂದು ಹೇಳುವರು? ನನ್ನನ್ನು ಖಂಡಿತವಾಗಿ ಧಿಕ್ಕರಿಸುವರು. ಆದುದರಿಂದ ನಾನು ಕೃತಕೃತ್ಯನಾಗದೆ ಹಿಂದಿರುಗುವಂತೆಯೇ ಇಲ್ಲ.॥9॥
ಮೂಲಮ್ - 10
ಅನಿರ್ವೇದಃ ಶ್ರಿಯೋ ಮೂಲಮನಿರ್ವೇದಃ ಪರಂಸುಖಮ್ ।
ಭೂಯಸ್ತತ್ರ ವಿಚೇಷ್ಯಾಮಿ ನ ಯತ್ರ ವಿಚಯಃ ಕೃತಃ ॥
ಅನುವಾದ
ಕಳವಳಗೊಳ್ಳದೆ ಉತ್ಸಾಹಶೀಲನಾಗುವುದೇ ಶ್ರೇಯಃ ಸಾಧನೆಗೆ ಮೂಲ. ಅದೇ ಪರಮ ಸುಖವನ್ನು ಕೊಡುತ್ತದೆ. ಆದುದರಿಂದ ನಾನು ಇದುವರೆಗೆ ಸೀತೆಯನ್ನು ಹುಡುಕದೇ ಇರುವ ಪ್ರದೇಶಗಳನ್ನು ಪುನಃ ಹುಡುಕುತ್ತೇನೆ.॥10॥
ಮೂಲಮ್ - 11
ಅನಿರ್ವೇದೋ ಹಿ ಸತತಂ ಸರ್ವಾರ್ಥೇಷು ಪ್ರವರ್ತಕಃ ।
ಕರೋತಿ ಸಫಲಂ ಜಂತೋಃ ಕರ್ಮ ಯತ್ತತ್ ಕರೋತಿ ಸಃ ॥
ಅನುವಾದ
ಉತ್ಸಾಹವೆಂಬುದೇ ಮನುಷ್ಯನನ್ನು ಯಾವಾಗಲೂ ಎಲ್ಲ ಕರ್ತವ್ಯಗಳಲ್ಲಿ ಪ್ರವರ್ತಿಸುತ್ತದೆ. ಪ್ರಯತ್ನದಲ್ಲಿ ನಿರಾಶನಾಗದೆ ಇರುವ ಮನುಷ್ಯನೇ ಪ್ರಾರಂಭಿಸಿದ ಕಾರ್ಯವನ್ನು ಸಫಲ ಗೊಳಿಸುತ್ತಾನೆ.॥11॥
ಮೂಲಮ್ - 12
ತಸ್ಮಾದನಿರ್ವೇದಕರಂ ಯತ್ನಂ ಚೇಷ್ಟೇಽಹಮುತ್ತಮಮ್ ।
ಅದೃಷ್ಟಾಂಶ್ಚ ವಿಚೇಷ್ಯಾಮಿ ದೇಶಾನ್ ರಾವಣಪಾಲಿತಾನ್ ॥
ಅನುವಾದ
ಆದುದರಿಂದ ಪ್ರಯತ್ನದಲ್ಲಿ ನಿರಾಶನಾಗದೆ ಉತ್ಸಾಹದಿಂದ ಚೆನ್ನಾದ ಪ್ರಯತ್ನವನ್ನು ಮುಂದವರಿಸುತ್ತೇನೆ. ರಾವಣನಿಂದ ಪಾಲಿಸಲ್ಪಟ್ಟ, ಇದುವರೆವಿಗೂ ಹುಡುಕದೇ ಇರುವ ಸ್ಥಳಗಳಲ್ಲಿ ಪುನಃ ಸೀತೆಯನ್ನು ಹುಡುಕುತ್ತೇನೆ.॥12॥
ಮೂಲಮ್ - 13
ಆಪಾನಶಾಲಾ ವಿಚಿತಾಸ್ತಥಾ ಪುಷ್ಪಗೃಹಾಣಿ ಚ ।
ಚಿತ್ರಶಾಲಾಶ್ಚ ವಿಚಿತಾ ಭೂಯಃ ಕ್ರೀಡಾಗೃಹಾಣಿ ಚ ॥
ಮೂಲಮ್ - 14
ನಿಷ್ಕುಟಾಂತರರಥ್ಯಾಶ್ಚ ವಿಮಾನಾನಿ ಚ ಸರ್ವಶಃ ।
ಇತಿ ಸಂಚಿಂತ್ಯ ಭೂಯೋಽಪಿ ವಿಚೇತುಮುಪಚಕ್ರಮೇ ॥
ಅನುವಾದ
ನಾನಿದುವರೆಗೆ ಪಾನಶಾಲೆಗಳಲ್ಲಿ, ಪುಷ್ಪಗೃಹಗಳಲ್ಲಿ, ಚಿತ್ರಶಾಲೆಗಳಲ್ಲಿ, ಕ್ರೀಡಾಗೃಹಗಳಲ್ಲಿ, ಅರಮನೆಯ ಕೈದೋಟಗಳಲ್ಲಿ, ಓಣಿಗಳಲ್ಲಿ, ಪುಷ್ಪಕವೇ ಮೊದಲಾದ ವಿಮಾನಗಳಲ್ಲಿ ಅರಮನೆಯ ಎಲ್ಲೆಡೆಗಳಲ್ಲೂ ಹುಡುಕಿದೆ. ಮುಂದೆ ಇವುಗಳನ್ನು ಬಿಟ್ಟು ಬೇರೆಡೆಗಳಲ್ಲಿ ಹುಡುಕುತ್ತೇನೆ. ಎಂದು ನಿಶ್ಚಯಿಸಿ ಪುನಃ ಹುಡುಕಲು ಪ್ರಾರಂಭಿಸಿದನು.॥13-14॥
ಮೂಲಮ್ - 15
ಭೂಮೀಗೃಹಾಂಶ್ಚೆತ್ಯಗೃಹಾನ್ ಗೃಹಾತಿಗೃಹಕಾನಪಿ ।
ಉತ್ಪತನ್ನಿಷ್ಪತಂಶ್ಚಾಪಿ ತಿಷ್ಠನ್ ಗಚ್ಛನ್ ಪುನಃ ಪುನಃ ॥
ಮೂಲಮ್ - 16
ಅಪಾವೃಣ್ವಂಶ್ಚ ದ್ವಾರಾಣಿ ಕಪಾಟಾನ್ಯವಘಾಟಯನ್ ।
ಪ್ರವಿಶನ್ನಿಷ್ಪತಂಶ್ಚಾಪಿ ಪ್ರಪತನ್ನುತ್ಪತನ್ನಪಿ ॥
ಮೂಲಮ್ - 17
ಸರ್ವಮಪ್ಯವಕಾಶಂ ಸ ವಿಚಚಾರ ಮಹಾಕಪಿಃ ।
ಚತುರಂಗುಲಮಾತ್ರೊಽಪಿ ನಾವಕಾಶಃ ಸ ವಿದ್ಯತೇ ॥
ಮೂಲಮ್ - 18
ರಾವಣಾಂತಃಪುರೇ ತಸ್ಮಿನ್ ಯಂ ಕಪಿರ್ನಜಗಾಮ ಸಃ ।
ಪ್ರಾಕಾರಾಂತರರಥ್ಯಾಶ್ಚ ವೇದಿಕಾಶ್ಚೈತ್ಯಸಂಶ್ರಯಾಃ ॥
ಅನುವಾದ
ನೆಲಮಾಳಿಗೆಗಳಲ್ಲಿಯೂ, ದೇವಾಲಯಗಳಲ್ಲಿಯೂ, ಮಂಟಪಗಳಲ್ಲಿಯೂ, ಮನೆಗಳಿಗೆ ಸ್ವಲ್ಪ ದೂರದಲ್ಲಿ ಸ್ವೇಚ್ಛಾ ವಿಹಾರ್ಥವಾಗಿ ನಿರ್ಮಿಸಿದ ಮನೆಗಳಲ್ಲಿಯೂ, ಪುನಃ-ಪುನಃ ಸೀತಾದೇವಿಯನ್ನು ಹುಡುಕತೊಡಗಿದನು. ಹಾಗೆ ಹೋಗುತ್ತಿರುವಾಗ ಹನುಮಂತನು ಒಮ್ಮೆ ನೆಗೆಯುತ್ತಾ, ಮತ್ತೊಮ್ಮೆ ಮೇಲಿನಿಂದ ಕೆಳಕ್ಕೆ ಧುಮುಕುತ್ತಾ, ಮಗದೊಮ್ಮೆ ಒಂದೆಡೆಯಲ್ಲಿ ನಿಂತು ನೋಡುತ್ತಿದ್ದನು. ಅನಂತರ ಪುನಃ ಮುಂದಕ್ಕೆ ಹೋಗುತ್ತಿದ್ದನು. ಮನೆಗಳ ಬಾಗಿಲುಗಳನ್ನು ತೆರೆಯುತ್ತಾ, ಚಿಕ್ಕ-ಚಿಕ್ಕ ಬಾಗಿಲುಗಳನ್ನು ತಟ್ಟುತ್ತಾ, ಒಮ್ಮೆ ಮನೆಯೊಳಗೆ ಪ್ರವೇಶಿಸುತ್ತಾ, ಅಲ್ಲಿ ಸೀತೆಯನ್ನು ಕಾಣದೆ ಹೊರಬಂದು, ಮನೆಯ ಮೇಲಕ್ಕೆ ಹಾರುತ್ತಾ, ಮೆಲಿನಿಂದ ಕೆಳಕ್ಕೆ ಧುಮುಕುತ್ತಾ ಹುಡುಕುತ್ತಿದ್ದನು. ಒಳಗೆ ಹೋಗಲು ಅವಕಾಶವಿದ್ದ ಎಲ್ಲ ಸ್ಥಳಗಳಲ್ಲಿಯೂ ಮಹಾ ಕಪಿಯಾದ ಹನುಮಂತನು ಸಂಚರಿಸಿದನು. ರಾವಣನ ಅಂತಃಪುರದಲ್ಲಿ ಹುಡುಕದಿರುವ ನಾಲ್ಕು ಅಂಗುಲ ಜಾಗವೂ ಉಳಿಯಲಿಲ್ಲ. ಪ್ರಾಕಾರದ ಒಳಭಾಗದಲ್ಲಿದ್ದ ಬೀದಿಗಳನ್ನು, ಚೌಕಗಳಲ್ಲಿರುವ ಜಗುಲಿಗಳನ್ನೂ, ಹಳ್ಳಗಳನ್ನೂ, ಸರೋವರಗಳನ್ನೂ, ಇತರ ಎಲ್ಲ ಪ್ರದೇಶಗಳನ್ನೂ ಅವನು ವೀಕ್ಷಿಸಿದನು.॥15-18॥
ಮೂಲಮ್ - 19
ದೀರ್ಘಿಕಾಃ ಪುಷ್ಕರಿಣ್ಯಶ್ಚ ಸರ್ವಂ ತೇನಾವಲೋಕಿತಮ್ ।
ರಾಕ್ಷಸ್ಯೋ ವಿವಿಧಾಕಾರಾ ವಿರೂಪಾ ವಿಕೃತಾಸ್ತದಾ ॥
ಅನುವಾದ
ವಿಧ-ವಿಧವಾದ ಆಕಾರಗಳನ್ನು ಹೊಂದಿದ್ದ, ವಿಕಾರ ರೂಪಿಣಿಯರಾಗಿದ್ದ, ವಿಕೃತರಾಗಿ ಕಾಣುತ್ತಿದ್ದ ರಾಕ್ಷಸಿಯರನ್ನು ಹನುಮಂತನು ಆ ಎಲ್ಲ ಸ್ಥಳಗಳಲ್ಲಿಯೂ ನೋಡಿದನು. ಆದರೆ ಜನಕನ ಮಗಳು ಮಾತ್ರ ಎಲ್ಲಿಯೂ ಕಾಣಲಿಲ್ಲ.॥19॥
ಮೂಲಮ್ - 20
ದೃಷ್ಟಾ ಹನುಮತಾ ತತ್ರ ನ ತು ಸಾ ಜನಕಾತ್ಮಜಾ ।
ರೂಪೇಣಾಪ್ರತಿಮಾ ಲೋಕೇ ವರಾ ವಿದ್ಯಾಧರಸ್ತ್ರಿಯಃ ॥
ಅನುವಾದ
ರೂಪದಲ್ಲಿ ಅಪ್ರತಿಮೆಯರಾದ ಶ್ರೇಷ್ಠರಾದ ವಿದ್ಯಾಧರ ಸ್ತ್ರೀಯರನ್ನು, ಹನುಮಂತನು ಅಲ್ಲಿ ನೋಡಿದನು. ಆದರೆ ರಾಘವನಿಗೆ ಆನಂದವನ್ನುಂಟುಮಾಡುವ ಸೀತೆಯನ್ನು ಮಾತ್ರ ನೋಡಲಿಲ್ಲ.॥20॥
ಮೂಲಮ್ - 21
ದೃಷ್ಟಾ ಹನುಮತಾ ತತ್ರ ನ ತು ರಾಘವನಂದಿನೀ ।
ನಾಗಕನ್ಯಾ ವರಾರೋಹಾಃ ಪೂರ್ಣಚಂದ್ರನಿಭಾನನಾಃ ॥
ಅನುವಾದ
ಪೂರ್ಣಚಂದ್ರನಂತೆ ಅಂದವಾದ ಮುಖಗಳನ್ನು ಹೊಂದಿದವರೂ, ರೂಪವೈಭವಸಂಪನ್ನರೂ, ಆದ ನಾಗಕನ್ಯೆಯರನ್ನು ಅಲ್ಲಿ ನೋಡಿದನು. ಆದರೆ ಹನುಮಂತನಿಗೆ ಸಾಧ್ವಿಯಾದ ಸೀತಾದೇವಿಯು ಕಂಡುಬರಲಿಲ್ಲ.॥21॥
ಮೂಲಮ್ - 22
ದೃಷ್ಟಾ ಹನುಮತಾ ತತ್ರ ನ ತು ಸೀತಾ ಸುಮಧ್ಯಮಾ ।
ಪ್ರಮಥ್ಯ ರಾಕ್ಷಸೇಂದ್ರೇಣ ನಾಗಕನ್ಯಾ ಬಲಾದ್ಧೃತಾಃ ॥
ಅನುವಾದ
ರಾವಣನು ಬಲಾತ್ಕಾರದಿಂದ ಸೆಳೆದು ತಂದು, ನಿರ್ಬಂಧದಲ್ಲಟ್ಟ ನಾಗಕನ್ಯೆಯರನ್ನು ನೋಡಿದನು. ಆದರೆ ಜನಕನಂದಿನಿಯನ್ನು ಮಾತ್ರ ನೋಡಲಿಲ್ಲ.॥22॥
ಮೂಲಮ್ - 23
ದೃಷ್ಟಾ ಹನುಮತಾ ತತ್ರ ನ ಸಾ ಜನಕನಂದಿನೀ ।
ಸೋಽಪಶ್ಯಂಸ್ತಾಂ ಮಹಾಬಾಹುಃ ಪಶ್ಯಂಶ್ಚಾನ್ಯಾ ವರಸ್ತ್ರಿಯಃ ॥
ಅನುವಾದ
ಮಹಾಬಾಹುವೂ, ಬುದ್ಧಿಶಾಲಿಯೂ ಆದ ವಾಯುನಂದನನು ಇತರ ಎಲ್ಲ ಶ್ರೇಷ್ಠ ನಾರಿಯರನ್ನು ಕಂಡರೂ ಸೀತಾದೇವಿಯನ್ನು ಕಾಣದೆ ವಿಚಾರಗ್ರಸ್ತನಾದನು.॥23॥
ಮೂಲಮ್ - 24
ವಿಷಸಾದ ಮುಹುರ್ಧೀಮಾನ್ ಹನುಮಾನ್ ಮಾರುತಾತ್ಮಜಃ ।
ಉದ್ಯೋಗಂ ವಾನರೇಂದ್ರಾಣಾಂ ಪ್ಲವನಂ ಸಾಗರಸ್ಯ ಚ ॥
ಮೂಲಮ್ - 25
ವ್ಯರ್ಥಂ ವೀಕ್ಷ್ಯಾನಿಲಸುತಶ್ಚಿಂತಾಂ ಪುನರುಪಾಗಮತ್ ।
ಅವತೀರ್ಯ ವಿಮಾನಾಚ್ಚ ಹನುಮಾನ್ ಮಾರುತಾತ್ಮಜಃ ।
ಚಿಂತಾಮುಪಜಗಾಮಾಥ ಶೋಕೋಪಹತಚೇತನಃ ॥
ಅನುವಾದ
ಸೀತಾನ್ವೇಷಣೆಗಾಗಿ ಕಿಷ್ಕಿಂಧೆಯಿಂದ ಹೊರಟು ಎಲ್ಲ ದಿಕ್ಕುಗಳಿಗೂ ತೆರಳಿದ ವಾನರರ ಪ್ರಯತ್ನಗಳೂ, ತಾನು ಸಮುದ್ರವನ್ನು ಲಂಘಿಸಿದುದು ವ್ಯರ್ಥವಾಯಿತಲ್ಲ ಎಂದು ಭಾವಿಸಿ, ಅನಿಲ ನಂದನನು ಪುನಃ ಚಿಂತೆಯಲ್ಲಿ ಮುಳುಗಿದನು. ವಾಯುಸುತನಾದ ಹನುಮಂತನು ಪುಷ್ಪಕವಿಮಾನದಿಂದ ಕೆಳಗಿಳಿದು, ಶೋಕದಿಂದ ಕಂಗೆಟ್ಟು ಆಲೋಚಿಸತೊಡಗಿದನು. ॥24-25॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ದ್ವಾದಶಃ ಸರ್ಗಃ ॥ 12 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹನ್ನೆರಡನೆಯ ಸರ್ಗವು ಮುಗಿಯಿತು.