वाचनम्
ಭಾಗಸೂಚನಾ
ಮಲಗಿರುವವಳು ಸೀತೆಯಲ್ಲವೆಂಬುದನ್ನು ನಿಶ್ಚಯಿಸಿದ ಹನುಮಂತನು ಅಂತಃಪುರದಲ್ಲಿ ಮತ್ತು ಪಾನಗೃಹಗಳಲ್ಲಿ ಪುನಃ ಸೀತೆಯನ್ನು ಹುಡುಕಲು ತೊಡಗುವುದು. ಅವನ ಮನಸ್ಸಿನಲ್ಲಿ ಧರ್ಮಲೋಪದ ಶಂಕೆ ಉಂಟಾಗುವುದು. ಅದನ್ನು ತಾನೇ ಪರಿಹರಿಸಿಕೊಳ್ಳುವುದು
ಮೂಲಮ್ - 1
ಅವಧೂಯ ಚ ತಾಂ ಬುದ್ಧಿಂ ಬಭೂವಾವಸ್ಥಿತಸ್ತದಾ ।
ಜಗಾಮ ಚಾಪರಾಂ ಚಿಂತಾಂ ಸೀತಾಂ ಪ್ರತಿ ಮಹಾಕಪಿಃ ॥
ಅನುವಾದ
ಸೀತಾದೇವಿಯ ಪಾತಿವ್ರತ್ಯವೇ ಮೊದಲಾದ ಮಹಾಗುಣಗಳನ್ನು ಸ್ಮರಿಸಿದ ಹನುಮಂತನು ರಾವಣನ ಅಂತಃಪುರದಲ್ಲಿ ಮಲಗಿರುವವಳು ಸೀತೆಯಲ್ಲವೆಂದು ನಿಶ್ಚಯಿಸಿ ಸ್ಥಿರತೆಯನ್ನು ಹೊಂದಿ, ಸೀತಾದೇವಿಯು ಸಿಕ್ಕದಿರುವ ಬಗ್ಗೆ ಪುನಃ ಯೋಚಿಸತೊಡಗಿದನು.॥1॥
ಮೂಲಮ್ - 2
ನ ರಾಮೇಣ ವಿಯುಕ್ತಾ ಸಾ ಸ್ವಪ್ತುಮರ್ಹತಿ ಭಾಮಿನೀ ।
ನ ಭೋಕ್ತುಂ ನಾಪ್ಯಲಂಕರ್ತುಂ ನ ಪಾನಮುಪಸೇವಿತುಮ್ ॥
ಅನುವಾದ
ಶ್ರೀರಾಮನಿಂದ ಬೇರ್ಪಟ್ಟಿರುವ ಸೀತಾದೇವಿಯು ನಿಶ್ಚಿಂತಳಾಗಿ ಮಲಗಿರಲಾರಳು. ಆ ಸ್ಥಿತಿಯಲ್ಲಿ ಅನ್ನ-ಪಾನಾದಿಗಳ ಕಡೆಗೆ ಮನಸ್ಸಾಗದು. ಅಲಂಕಾರ ಮಾಡಿಕೊಳ್ಳಲಾರಳು.॥2॥
ಮೂಲಮ್ - 3
ನಾನ್ಯಂ ನರಮುಪಸ್ಥಾತುಂ ಸುರಾಣಾಮಪಿ ಚೇಶ್ವರಮ್ ।
ನ ಹಿ ರಾಮಸಮಃ ಕಶ್ಚಿದ್ವಿದ್ಯತೇ ತ್ರಿದಶೇಷ್ವಪಿ ॥
ಅನುವಾದ
ಅನ್ಯ ಮನುಷ್ಯನ ಅಥವಾ ದೇವತೆಗಳ ಒಡೆಯನಾದ ಇಂದ್ರನ ಬಳಿಯಲ್ಲಿಯೂ, ಅವಳು ಸ್ವಸ್ಥ ಚಿತ್ತಳಾಗಿ ಕುಳಿತುಕೊಳ್ಳಲಾರಳು; ಯಾರ ಬಳಿಗೂ ಹೋಗಲಾರಳು. ಏಕೆಂದರೆ ಶ್ರೀರಾಮನಿಗೆ ಸದೃಶನಾದವನು ದೇವತೆಗಳಲ್ಲಿಯೂ ಯಾರು ಇಲ್ಲ.॥3॥
ಮೂಲಮ್ - 4
ಅನ್ಯೇಯಮಿತಿ ನಿಶ್ಚಿತ್ಯ ಭೂಯಸ್ತತ್ರ ಚಚಾರ ಸಃ ।
ಪಾನಭೂವೌ ಹರಿಶ್ರೇಷ್ಠಃ ಸೀತಾಸಂದರ್ಶನೋತ್ಸುಕಃ ॥
ಅನುವಾದ
ಆದುದರಿಂದ ಇಲ್ಲಿ ಮಲಗಿರುವವಳು ‘‘ಸೀತಾದೇವಿಯಂತೂ ಅಲ್ಲವೇ ಅಲ್ಲ’’ ಎಂದು ನಿಶ್ಚಯಿಸಿಕೊಂಡು ಆ ಕಪಿವರನು ಸೀತಾ ಸಂದರ್ಶನಕ್ಕಾಗಿ ಉತ್ಸಾಹದಿಂದ ಅಂತಃಪುರದಲ್ಲಿ ಹಾಗೂ ಪಾನಗೃಹಗಳಲ್ಲಿ ಪುನಃ ಹುಡುಕತೊಡಗಿದನು.॥4॥
ಮೂಲಮ್ - 5
ಕ್ರೀಡಿತೇನಾಪರಾಃ ಕ್ಲಾಂತಾ ಗೀತೇನ ಚ ತಥಾಪರಾಃ ।
ನೃತ್ತೇನ ಚಾಪರಾಃ ಕ್ಲಾಂತಾಃ ಪಾನವಿಪ್ರಹತಾಸ್ತಥಾ ॥
ಅನುವಾದ
ಆ ಪಾನಭೂಮಿಯಲ್ಲಿ ಕೆಲವು ಸ್ತ್ರೀಯರು ಕ್ರೀಡಾವಿಹಾರದಿಂದ ಬಳಲಿ ಮಲಗಿದ್ದರು. ಕೆಲವರು ಹಾಡಿ-ಹಾಡಿ ಆಯಾಸಗೊಂಡು ಮಲಗಿದ್ದರು. ಇನ್ನೂ ಕೆಲವರು ನೃತ್ಯಮಾಡಿ ದಣಿದು ಮಲಗಿದ್ದರು. ಮತ್ತೂ ಕೆಲವರು ಅತಿಯಾದ ಮಧುಪಾನದಿಂದ ಪ್ರಜ್ಞಾಶೂನ್ಯರಾಗಿ ಪವಡಿಸಿದ್ದರು.॥5॥
ಮೂಲಮ್ - 6
ಮುರಜೇಷು ಮೃದಂಗೇಷು ಪೀಠಿಕಾಸು ಚ ಸಂಸ್ಥಿತಾಃ ।
ತಥಾಽಽಸ್ತರಣಮುಖ್ಯೇಷು ಸಂವಿಷ್ಟಾಶ್ಚಾಪರಾಃ ಸ್ತ್ರಿಯಃ ॥
ಅನುವಾದ
ಕೆಲವರು ಡೋಲು-ಮೃದಂಗ ವಾದ್ಯಗಳನ್ನು ನುಡಿಸುವುದರಲ್ಲಿ ಆಸಕ್ತರಾಗಿ ನಿದ್ದೆಹೋಗಿದ್ದರು. ಕೆಲವರು ಶ್ರೇಷ್ಠವಾದ ಹಂಸತೂಲಿಕಾ ತಲ್ಪಗಳಲ್ಲಿ ಮಲಗಿದ್ದರು.॥6॥
ಮೂಲಮ್ - 7
ಅಂಗನಾನಾಂ ಸಹಸ್ರೇಣ ಭೂಷಿತೇನ ವಿಭೂಷಣೈಃ ।
ರೂಪಸಲ್ಲಾಪಶೀಲೇನ ಯುಕ್ತಗೀತಾರ್ಥಭಾಷಿಣಾ ॥
ಮೂಲಮ್ - 8
ದೇಶಕಾಲಾಭಿಯುಕ್ತೇನ ಯುಕ್ತವಾಕ್ಯಾಭಿಧಾಯಿನಾ ।
ರತಾಭಿರತಸಂಸುಪ್ತಂ ದದರ್ಶ ಹರಿಯೂಥಪಃ ॥
ಅನುವಾದ
ಅಂತಃಪುರದ ಸಮೀಪದಲ್ಲಿಯೇ ಇದ್ದ ಪಾನಗೃಹಗಳಲ್ಲಿಯೂ ಸಾವಿರಾರು ಅಂಗನೆಯರು ಇದ್ದರು. ಅವರೆಲ್ಲರೂ ಸುಂದರವಾದ ಹಾಗೂ ಶ್ರೇಷ್ಠವಾದ ಆಭರಣಗಳಿಂದ ಸಮಲಂಕೃತರಾಗಿದ್ದರು. ತಮ್ಮ ರೂಪ ಸೌಂದರ್ಯಗಳನ್ನು ಬಗೆ-ಬಗೆಯಾಗಿ ವರ್ಣಿಸಿ ಹೇಳುವ ಸ್ವಭಾವ ದವರಾಗಿದ್ದರು. ಅಂತೆಯೇ ರಾವಣನ ರೂಪವನ್ನು, ವೀರ್ಯ-ಪರಾಕ್ರಮಗಳನ್ನು ನಾನಾ ರೀತಿಯಿಂದ ಬಣ್ಣಿಸುತ್ತಿದ್ದರು. ತತ್ಕಾಲೋಚಿತವಾದ ಗೀತೆಗಳನ್ನು ಹಾಡಿ ಅವುಗಳ ಅರ್ಥವನ್ನು ಹೇಳುತ್ತಿದ್ದರು. ಎಲ್ಲರೂ ದೇಶ-ಕಾಲೋಚಿತವಾಗಿ ಮಾತನಾಡುವ ಕುಶಲತೆಯಿಂದ ಕೂಡಿದ್ದರು.॥7-8॥
ಮೂಲಮ್ - 9
ಅನ್ಯತ್ರಾಪಿ ವರಸ್ತ್ರೀಣಾಂ ರೂಪಸಂಲಾಪಶಾಲಿನಾಮ್ ।
ಸಹಸ್ರಂ ಯುವತೀನಾಂ ತು ಪ್ರಸುಪ್ತಂ ಸ ದದರ್ಶ ಹ ॥
ಅನುವಾದ
ಮತ್ತೊಂದೆಡೆಯಲ್ಲಿ ರೂಪ-ಸಂಪತ್ತಿನಿಂದ ಕೂಡಿದ್ದ, ಸಲ್ಲಾಪ ಕುಶಲೆಯರಾದ, ನವಯುವತಿಯರಾದ ಸಾವಿರಾರು ಸ್ತ್ರೀಯರೂ ಮಲಗಿರುವುದನ್ನು ಆ ಹನುಮಂತನು ನೋಡಿದನು.॥9॥
ಮೂಲಮ್ - 10
ತಾಸಾಂ ಮಧ್ಯೇ ಮಹಾಬಾಹುಃ ಶುಶುಭೇ ರಾಕ್ಷಸೇಶ್ವರಃ ।
ಗೋಷ್ಠೇ ಮಹತಿ ಮುಖ್ಯಾನಾಂ ಗವಾಂ ಮಧ್ಯೇ ಯಥಾ ವೃಷಃ ॥
ಅನುವಾದ
ಒಂದು ವಿಶಾಲವಾದ ಗೋಶಾಲೆಯಲ್ಲಿ ಉತ್ತಮ ಜಾತಿಯ ಆಕಳುಗಳ ಮಧ್ಯದಲ್ಲಿರುವ ಒಂದು ಕೊಬ್ಬಿದ ಗೂಳಿಯಂತೆ, ಮಹಾಬಾಹುವಾದ ರಾವಣನು ಆ ತರುಣಿಯರ ಮಧ್ಯದಲ್ಲಿ ರಾರಾಜಿಸುತ್ತಿದ್ದನು.॥10॥
ಮೂಲಮ್ - 11
ಸ ರಾಕ್ಷಸೇಂದ್ರಃ ಶುಶುಭೇ ತಾಭಿಃ ಪರಿವೃತಃ ಸ್ವಯಮ್ ।
ಕರೇಣುಭಿರ್ಯಥಾರಣ್ಯೇ ಪರಿಕೀರ್ಣೋ ಮಹಾದ್ವಿಪಃ ॥
ಅನುವಾದ
ಮಹಾರಣ್ಯದಲ್ಲಿ ಹೆಣ್ಣಾನೆಗಳಿಂದ ಸುತ್ತುವರಿಯಲ್ಪಟ್ಟ ಸಲಗದೋಪಾದಿ ರಾಕ್ಷಸರಾಜನು ಆ ಕಡು ಚೆಲುವೆಯರಾಗಿದ್ದ ನವಯುವತಿಯರಿಂದ ಪರಿವೃತನಾಗಿದ್ದನು.॥11॥
ಮೂಲಮ್ - 12
ಸರ್ವಕಾಮೈರುಪೇತಾಂ ಚ ಪಾನಭೂಮಿಂ ಮಹಾತ್ಮನಃ ।
ದದರ್ಶ ಕಪಿಶಾರ್ದೂಲಸ್ತಸ್ಯ ರಕ್ಷಃಪತೇರ್ಗೃಹೇ ॥
ಅನುವಾದ
ಕಪಿಶ್ರೇಷ್ಠನಾದ ಹನುಮಂತನು ಮಹಾವೀರನಾದ ರಾಕ್ಷಸೇಶ್ವರನ ಅರಮನೆಯಲ್ಲಿ, ಸಕಲ ವಿಧವಾದ ಕಾಮನಾ ವಸ್ತುಗಳಿಂಲೂ ಸಮೃದ್ಧವಾಗಿದ್ದ ಪಾನಗೃಹಗಳನ್ನು ನೋಡಿದನು.॥12॥
ಮೂಲಮ್ - 13
ಮೃಗಾಣಾಂ ಮಹಿಷಾಣಾಂ ಚ ವರಾಹಾಣಾಂ ಚ ಭಾಗಶಃ ।
ತತ್ರ ನ್ಯಸ್ತಾನಿ ಮಾಂಸಾನಿ ಪಾನಭೂಮೌ ದದರ್ಶ ಸಃ ॥
ಅನುವಾದ
ಆ ಪಾನಮಂದಿರದ ಒಂದು ಭಾಗದಲ್ಲಿ ಮೃಗ-ಮಹಿಷ-ವರಾಹ ಮುಂತಾದ ಕಾಡುಪ್ರಾಣಿಗಳ ಮಾಂಸಖಂಡಗಳನ್ನು ಇಟ್ಟಿದ್ದನ್ನು ಆ ಕಪಿವರನು ನೋಡಿದನು.॥13॥
ಮೂಲಮ್ - 14
ರೌಕ್ಮೇಷು ಚ ವಿಶಾಲೇಷು ಭಾಜನೇಷ್ವರ್ಧಭಕ್ಷಿತಾನ್ ।
ದದರ್ಶ ಕಪಿಶಾರ್ದೂಲೋ ಮಯೂರಾನ್ ಕುಕ್ಕುಟಾಂಸ್ತಥಾ ॥
ಅನುವಾದ
ಮತ್ತೊಂದೆಡೆಯಲ್ಲಿ ಸುವರ್ಣ ಮಯವಾದ ವಿಶಾಲವಾದ ಪಾತ್ರೆಗಳಲ್ಲಿ ಅರ್ಧ ಭಾಗವನ್ನು ಮಾತ್ರವೇ ತಿಂದುಳಿಸಿದ್ದ ನವಿಲುಗಳ ಮತ್ತು ಕೋಳಿಗಳ ಮಾಂಸವಿದ್ದುದನ್ನು ಹನುಮಂತನು ನೋಡಿದನು.॥14॥
ಮೂಲಮ್ - 15
ವರಾಹವಾಧ್ರೀಣಸಕಾನ್ ದಧಿಸೌವರ್ಚಲಾಯುತಾನ್ ।
ಶಲ್ಯಾನ್ ಮೃಗಮಯೂರಾಂಶ್ಚ ಹನುಮಾನನ್ವವೈಕ್ಷತ ॥
ಅನುವಾದ
ಉಪ್ಪಿನಿಂದಲೂ ಮೊಸರಿನಿಂದಲೂ ಸಂಸ್ಕರಿಸಿದ್ದ ಹಂದಿ, ಮುಳ್ಳುಹಂದಿ, ಖಡ್ಗಮೃಗ, ಜಿಂಕೆ ಮತ್ತು ನವಿಲುಗಳ ಮಾಂಸವನ್ನು ಪಾನಗೃಹದ ಮತ್ತೊಂದು ಭಾಗದಲ್ಲಿ ನೋಡಿದನು.॥15॥
ಮೂಲಮ್ - 16
ಕ್ರಕರಾನ್ ವಿವಿಧಾನ್ ಸಿದ್ಧಾನ್ ಚಕೋರಾನರ್ಧಭಕ್ಷಿತಾನ್ ।
ಮಹಿಷಾನೇಕಶಲ್ಯಾಂಶ್ಚ ಚ್ಛಾಗಾಂಶ್ಚ ಕೃತನಿಷ್ಠಿತಾನ್ ॥
ಅನುವಾದ
ಇನ್ನೊಂದು ಭಾಗದಲ್ಲಿ ಕತ್ತರಿಸಿ ಪಕ್ವ ಮಾಡಿದ್ದ ಕಾಡುಕೊಕ್ಕರೆಗಳ, ಚಕೋರಪಕ್ಷಿಗಳ, ಎಮ್ಮೆ, ಆಡು ಮತ್ತು ಮೀನುಗಳ ಮಾಂಸವನ್ನು ಸುವರ್ಣಮಯವಾದ ತಟ್ಟೆಗಳಲ್ಲಿ ಅರ್ಧ ತಿಂದು ಬಿಟ್ಟಿದ್ದನ್ನು ಮಾರುತಿಯು ನೋಡಿದನು.॥16॥
ಮೂಲಮ್ - 17
ಲೇಹ್ಯಾನುಚ್ಚಾವಚಾನ್ ಪೇಯಾನ್ ಭೋಜ್ಯಾನಿ ವಿವಿಧಾನಿ ಚ ।
ತಥಾಮ್ಲ ಲವಣೋತ್ತಂಸೈರ್ವಿವಿಧೈ ರಾಗಷಾಡವೈಃ ॥
ಅನುವಾದ
ದ್ರಾಕ್ಷಿ, ದಾಳಿಂಬೆಗಳ ರಸದಿಂದಲೂ, ಕಷಾಯಗಳಿಂದಲೂ, ಹುಳಿಯೇ ಪ್ರಧಾನವಾದ ಹಾಗೂ ಉಪ್ಪು ಪ್ರಧಾನವಾದ ರಸಗಳಿಂದಲೂ ಕೂಡಿದ್ದ ಅನೇಕ ವಿಧವಾದ ಲೇಹ್ಯಗಳನ್ನೂ, ಪಾನೀಯಗಳನ್ನು, ಅನೇಕ ವಿಧವಾದ ಭಕ್ಷ್ಯಗಳನ್ನು, ರಾಗ-ಖಾಂಡವ (ಭಕ್ಷ್ಯವಿಶೇಷ)ಗಳನ್ನು ಹನುಮಂತನು ನೋಡಿದನು.॥17॥
ಮೂಲಮ್ - 18
ಹಾರನೂಪುರಕೇಯೂರೈರಪವಿದ್ಧೈರ್ಮಹಾಧನೈಃ ।
ಪಾನಭಾಜನವಿಕ್ಷಿಪ್ತೈಃ ಫಲೈಶ್ಚ ವಿವಿಧೈರಪಿ ॥
ಅನುವಾದ
ಅಲ್ಲಿ-ಇಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅಮೂಲ್ಯ ಹಾರಗಳನ್ನೂ, ಕಾಲಂದುಗೆಗಳನ್ನೂ, ಕೇಯೂರಗಳನ್ನೂ, ವಿವಿಧವಾದ ಫಲರಸಗಳಿಂದ ತುಂಬಿದ ಪಾನಪಾತ್ರೆಗಳನ್ನು ಆ ಮಾರುತಿಯು ನೋಡಿದನು.॥18॥
ಮೂಲಮ್ - 19
ಕೃತಪುಷ್ಪೋಪಹಾರಾ ಭೂರಧಿಕಂ ಪುಷ್ಯತಿ ಶ್ರಿಯಂ ।
ತತ್ರ ತತ್ರ ಚ ವಿನ್ಯಸ್ತೈಃ ಸುಶ್ಲಿಷ್ಟೈಃ ಶಯನಾಸನೈಃ ॥
ಅನುವಾದ
ಅಲ್ಲಲ್ಲಿ ಸುವ್ಯವಸ್ಥಿತವಾಗಿ ಜೋಡಿಸಲ್ಪಟ್ಟ ಹಂಸತೂಲಿಕಾತಲ್ಪಗಳಿಂದಲೂ, ಆಸನಗಳಿಂದಲೂ ಸಂಪನ್ನ ವಾಗಿದ್ದ ಆ ಪಾನಗೃಹವು ಪುಷ್ಪಬಲಿಯನ್ನು ಅರ್ಪಿಸಿದ ಭೂಮಿಯಂತೆ ಕಾಣುತ್ತಿದ್ದು ಆ ಅರಮನೆಯ ಕಾಂತಿಯನ್ನು ಹೆಚ್ಚಿಸುತ್ತಿತ್ತು.॥19॥
ಮೂಲಮ್ - 20
ಪಾನಭೂಮಿರ್ವಿನಾ ವಹ್ನಿಂ ಪ್ರದೀಪ್ತೇವೋಪಲಕ್ಷ್ಯತೇ ।
ಬಹುಪ್ರಕಾರೈರ್ವಿವಿಧೈರ್ವರಸಂಸ್ಕಾರಸಂಸ್ಕೃತೈಃ ॥
ಮೂಲಮ್ - 21
ಮಾಂಸೈಃ ಕುಶಲಸಂಯುಕ್ತೈಃ ಪಾನಭೂಮಿಗತೈಃ ಪೃಥಕ್ ।
ದಿವ್ಯಾಃ ಪ್ರಸನ್ನಾ ವಿವಿಧಾಃ ಸುರಾಃ ಕೃತಸುರಾ ಅಪಿ ॥
ಮೂಲಮ್ - 22
ಶರ್ಕರಾಸವಮಾಧ್ವೀಕಪುಷ್ಪಾಸವಫಲಾಸವಾಃ ।
ವಾಸಚೂರ್ಣೈಶ್ಚ ವಿವಿಧೈರ್ದೃಷ್ಟಾಸ್ತೈ ಸ್ತೈಃ ಪೃಥಕ್ ಪೃಥಕ್ ॥
ಅನುವಾದ
ಆ ಪಾನಭೂಮಿಯು ಅಗ್ನಿಯೇ ಇಲ್ಲದಿದ್ದರೂ ವಿವಿಧ ಜ್ವಾಲೆಗಳಿಂದ ಹೊಳೆಯುತ್ತಿತ್ತು. ಅಲ್ಲಿ ಅನೇಕ ಪ್ರಕಾರದಿಂದ ವಿಧ-ವಿಧವಾದ ಶ್ರೇಷ್ಠವಾದ ಸಂಸ್ಕಾರಗಳಿಂದ ಸಂಸ್ಕೃತವಾಗಿ ಸಿದ್ಧಗೊಳಿಸಿದ ಘಮ-ಘಮಿಸುತ್ತಿರುವ ಚೆನ್ನಾಗಿ ತಯಾರಿಸಿದ ಭಕ್ಷ್ಯಗಳಿದ್ದವು. ಆ ಪಾನಶಾಲೆಯಲ್ಲಿ ಕುಶಲರಾದ ಪಾಚಕರಿಂದ ಪ್ರತ್ಯೇಕ-ಪ್ರತ್ಯೇಕವಾಗಿ ಸಿದ್ಧಗೊಳಿಸಿದ ಮಾಂಸವು ರಾಶಿ-ರಾಶಿಯಾಗಿ ಬಿದ್ದಿತ್ತು. ಉತ್ತಮವಾದ ರುಚಿಕರವಾದ ವಿಧವಿಧವಾದ ಸಹಜ ಮದ್ಯಗಳನ್ನೂ (ಈಚಲ, ತೆಂಗು, ಮತ್ತು ತಾಳೆಮರಗಳಿಂದ ಭಟ್ಟಿ ಇಳಿಸಿದ ಮದ್ಯಗಳನ್ನು) ವಿಧ-ವಿಧವಾದ ವಾಸನಾಚೂರ್ಣಗಳಿಂದಲೂ, ಸಕ್ಕರೆಯಿಂದಲೂ, ಜೇನುತುಪ್ಪದಿಂದಲೂ, ಪುಷ್ಪ ರಸಗಳಿಂದಲೂ, ದ್ರಾಕ್ಷಿಯೇ ಮೊದಲಾದ ಫಲಗಳಿಂದ ತಯಾರಿಸಿದ ಕೃತ್ರಿಮವಾದ ಪಾನೀಯಗಳನ್ನು ನೋಡಿದನು.॥20-22॥
ಮೂಲಮ್ - 23
ಸಂತತಾ ಶುಶುಭೇ ಭೂಮಿರ್ಮಾಲ್ಯೈಶ್ಚ ಬಹುಸಂಸ್ಥಿತೈಃ ।
ಹಿರಣ್ಮಯೈಶ್ಚ ವಿವಿಧೈರ್ಭಾಜನೈಃ ಸ್ಪಾಟಿಕೈರಪಿ ॥
ಅನುವಾದ
ಅಲಂಕಾರಾರ್ಥವಾಗಿ ಅಲ್ಲಲ್ಲಿ ಹಾಕಿದ್ದ ಹೂಮಾಲೆಗಳಿಂದಲೂ, ಸುವರ್ಣ ಕಲಶಗಳಿಂದಲೂ, ಸ್ಫಟಿಕಮಯ ಪಾತ್ರೆಗಳಿಂದಲೂ, ವ್ಯಾಪ್ತವಾದ ಆ ಭೂಮಿಯು ಪ್ರಕಾಶಿಸುತ್ತಿತ್ತು.॥23॥
ಮೂಲಮ್ - 24
ಜಾಂಬೂನದಮಯೈಶ್ಚಾನ್ಯೈಃ ಕರಕೈರಭಿಸಂವೃತಾ ।
ರಾಜತೇಷು ಚ ಕುಂಭೇಷುಜಾಂಬೂನದಮಯೇಷು ಚ ॥
ಮೂಲಮ್ - 25
ಪಾನಶ್ರೇಷ್ಠಂ ತಥಾ ಭೂರಿ ಕಪಿಸ್ತತ್ರ ದದರ್ಶ ಸಃ ।
ಸೋಽಪಶ್ಯಚ್ಛಾತಕುಂಭಾನಿ ಶೀಧೋರ್ಮಣಿಮಯಾನಿ ಚ ॥
ಅನುವಾದ
ಸುವರ್ಣಮಯವಾದ ಗಿಂಡಿಗಳಿಂದಲೂ, ಆ ಭೂಮಿಯು ಬಹಳವಾಗಿ ಶೋಭಿಸುತ್ತಿತ್ತು. ಚಿನ್ನ ಮತ್ತು ಬೆಳ್ಳಿಯ ಬಿಂದಿಗೆಗಳಲ್ಲಿ ಶ್ರೇಷ್ಠವಾದ ಪಾನೀಯಗಳನ್ನು ಅಲ್ಲಿ ತುಂಬಿಟ್ಟಿದ್ದರು. ಸುವರ್ಣಮಯವಾದ ಮತ್ತು ಮಣಿಮಯವಾದ ಮದ್ಯದ ಗಡಿಗೆಗಳೂ, ಪಾನಪಾತ್ರೆಗಳೂ ಹೇರಳವಾಗಿದ್ದುದನ್ನು ಕಪೀಶ್ವರನು ನೋಡಿದನು.॥24-25॥
ಮೂಲಮ್ - 26
ರಾಜತಾನಿ ಚ ಪೂರ್ಣಾನಿ ಭಾಜನಾನಿ ಮಹಾಕಪಿಃ ।
ಕ್ವಚಿದರ್ಧಾವಶೇಷಾಣಿ ಕ್ವಚಿತ್ ಪೀತಾನಿ ಸರ್ವಶಃ ॥
ಮೂಲಮ್ - 27
ಕ್ವಚಿನ್ನೆವ ಪ್ರಪೀತಾನಿ ಪಾನಾನಿ ಸ ದದರ್ಶ ಹ ।
ಕ್ವಚಿಧ್ಭಕ್ಷ್ಯಾಂಶ್ಚ ವಿವಿಧಾನ್ ಕ್ವಚಿತ್ ಪಾನಾನಿ ಭಾಗಶಃ ॥
ಮೂಲಮ್ - 28
ಕ್ವಚಿದನ್ನಾವಶೇಷಾಣಿ ಪಶ್ಯನ್ ವೈ ವಿಚಚಾರ ಹ ।
ಕ್ವಚಿತ್ ಪ್ರಭಿನ್ನಃ ಕರಕೈಃ ಕ್ವಚಿದಾಲೋಲಿತೈರ್ಘಟೈಃ ॥
ಮೂಲಮ್ - 29
ಕ್ವಚಿತ್ ಸಂಪೃಕ್ತಮಾಲ್ಯಾನಿ ಮೂಲಾನಿ ಚ ಫಲಾನಿ ಚ ।
ಶಯನಾನ್ಯತ್ರ ನಾರೀಣಾಂ ಶುಭ್ರಾಣಿ ಬಹುಧಾ ಪುನಃ ॥
ಅನುವಾದ
ಕೆಲವು ಕಡೆಗಳಲ್ಲಿ ಬೆಳ್ಳಿ-ಭಂಗಾರದ ಪಾತೆಗಳಲ್ಲಿದ್ದ ಸುರೆಯಲ್ಲಿ ಅರ್ಧಭಾಗವನ್ನು ಮಾತ್ರ ಕುಡಿದು ಉಳಿದ ಅರ್ಧ ಭಾಗವನ್ನು ಹಾಗೆಯೇ ಉಳಿಸಿದ್ದರು. ಕೆಲವು ಕಡೆಗಳಲ್ಲಿ ಸಂಪೂರ್ಣವಾಗಿ ಕುಡಿದಿದ್ದರು. ಕೆಲವು ಕಡೆಗಳಲ್ಲಿ ಪಾನಪಾತ್ರೆಗಳು ಸುರೆಯಿಂದ ತುಂಬಿದ್ದವು. ಅವೆಲ್ಲವನ್ನು ಹನುಮಂತನು ನೋಡುತ್ತಾ ಹೋದನು. ಪಾನಗೃಹದ ಕೆಲವೆಡೆಗಳಲ್ಲಿ ವಿಧ-ವಿಧವಾದ ಭಕ್ಷ್ಯಗಳನ್ನೂ, ಕೆಲವು ಕಡೆಗಳಲ್ಲಿ ಭಾಗಶಃ ಕುಡಿದು, ಭಾಗಶಃ ಮದ್ಯವಿದ್ದ ಪಾತ್ರೆಗಳನ್ನೂ, ಕೆಲವು ಕಡೆಗಳಲ್ಲಿ ಅರ್ಧಭಾಗದಷ್ಟು ತುಂಬಿದ್ದ ಸುರಾಪಾತ್ರೆಗಳನ್ನೂ ನೋಡುತ್ತಾ ಆ ಕಪಿವರನು ಅಲ್ಲಲ್ಲೇ ಸುತ್ತಾಡಿದನು. ಪಾನಗೃಹಗಳಲ್ಲಿದ್ದ ಅನೇಕ ಹಾಸಿಗೆಗಳು ಬರಿದ್ದಾಗಿದ್ದವು. ಏಕೆಂದರೆ ಶ್ರೇಷ್ಠರಾದ ಕೆಲವು ಸ್ತ್ರೀಯರು ತಮ್ಮ ಹಾಸಿಗೆಗಳನ್ನು ಬಿಟ್ಟು ಇತರ ಸ್ತ್ರೀಯರನ್ನು ಗಾಢವಾಗಿ ಆಲಿಂಗಿಸಿಕೊಂಡು ಮಲಗಿದ್ದರು.॥26-29॥
ಮೂಲಮ್ - 30
ಪರಸ್ಪರಂ ಸಮಾಶ್ಲಿಷ್ಯ ಕಾಶ್ಚಿತ್ ಸುಪ್ತಾ ವರಾಂಗನಾಃ ।
ಕಾಚಿಚ್ಚ ವಸ್ತ್ರಮನ್ಯಸ್ಯಾಃ ಸ್ವಪಂತ್ಯಾಃ ಪರಿಧಾಯ ಚ ॥
ಅನುವಾದ
ನಿದ್ರಾದೇವಿಯ ಬಲದಿಂದ ಪರಾಜಿತಳಾದ ಓರ್ವ ನಾರೀ ಮಣಿಯು, ಮಲಗಿದ್ದ ಮತ್ತೊಬ್ಬ ನಾರಿಯ ವಸ್ತ್ರವನ್ನು ಎಳೆದುಕೊಂಡು ಅದನ್ನೇ ಹೊದ್ದುಕೊಂಡು ಮಲಗಿದ್ದಳು.॥30॥
ಮೂಲಮ್ - 31
ಆಹೃತ್ಯ ಚಾಬಲಾಃ ಸುಪ್ತಾ ನಿದ್ರಾಬಲಪರಾಜಿತಾಃ ।
ತಾಸಾಮುಚ್ಛ್ವಾಸವಾತೇನ ವಸ್ತ್ರಂ ಮಾಲ್ಯಂ ಚ ಗಾತ್ರಜಮ್ ॥
ಅನುವಾದ
ಆ ವರನಾರಿಯರ ಉಚ್ಛ್ವಾಸದ ಗಾಳಿಯಿಂದ ಅವರ ಶರೀರದಲ್ಲಿದ್ದ ಚಿತ್ರಿತ ವಸ್ತ್ರಗಳೂ, ವಿಚಿತ್ರವಾದ ಮಾಲೆಗಳೂ ಸ್ವಲ್ಪವೇ ಕದಲುತ್ತಿದ್ದವು.॥31॥
ಮೂಲಮ್ - 32
ನಾತ್ಯರ್ಥಂ ಸ್ಪಂದತೇ ಚಿತ್ರಂ ಪ್ರಾಪ್ಯ ಮಂದಮಿವಾನಿಲಮ್ ।
ಚಂದನಸ್ಯ ಚ ಶೀತಸ್ಯ ಶೀರ್ಧ್ಮೋಧುರಸಸ್ಯ ಚ ॥
ಮೂಲಮ್ - 33
ವಿವಿಧಸ್ಯ ಚ ಮಾಲ್ಯಸ್ಯ ಧೂಪಸ್ಯ ವಿವಿಧಸ್ಯ ಚ ।
ಬಹುಧಾ ಮಾರುತಸ್ತತ್ರ ಗಂಧಂ ವಿವಿಧಮುದ್ವಹನ್ ॥
ಮೂಲಮ್ - 34
ರಸಾನಾಂ ಚಂದನಾನಾಂ ಚ ಧೂಪಾನಾಂ ಚೈವ ಮೂರ್ಛಿತಃ ।
ಪ್ರವವೌ ಸುರಭಿರ್ಗಂಧೋ ವಿಮಾನೇ ಪುಷ್ಪಕೇ ತದಾ ॥
ಮೂಲಮ್ - 35
ಶ್ಯಾಮಾವದಾತಾಸ್ತತ್ರಾನ್ಯಾಃ ಕಾಶ್ಚಿತ್ ಕೃಷ್ಣಾ ವರಾಂಗನಾಃ ।
ಕಾಶ್ಚಿತ್ ಕಾಂಚನವರ್ಣಾಂಗ್ಯಃ ಪ್ರಮದಾ ರಾಕ್ಷಸಾಲಯೇ ॥
ಮೂಲಮ್ - 36
ತಾಸಾಂ ನಿದ್ರಾವಶತ್ವಾಚ್ಚ ಮದನೇನ ಚ ಮೂರ್ಛಿತಮ್ ।
ಪದ್ಮಿನೀನಾಂ ಪ್ರಸುಪ್ತಾನಾಂ ರೂಪಮಾಸೀದ್ಯಥೈವ ಹಿ ॥
ಮೂಲಮ್ - 37
ಏವಂ ಸರ್ವಮಶೇಷೇಣ ರಾವಣಾಂತಃಪುರಂ ಕಪಿಃ ।
ದದರ್ಶ ಸುಮಹಾತೇಜಾ ನ ದದರ್ಶ ಚ ಜಾನಕೀಮ್ ॥
ಅನುವಾದ
ಉಚ್ಛ್ವಾಸದ ಗಾಳಿಗಳು ಮಂದಮಾರುತದಂತೆ ಹಿತಕರವಾಗಿದ್ದವು. ಆ ಗಾಳಿಯು ಶೀತಲ ಚಂದನ, ಮದ್ಯ, ಮಧುರಸ, ವಿಧ-ವಿಧವಾದ ಪುಷ್ಪಗಳೂ, ವಿಧ-ವಿಧವಾದ ಮಾಲೆಗಳೂ, ಷಡ್ರಸಗಳೂ, ಚಂದನಗಳೂ, ಧೂಪಗಳೂ ಮುಂತಾದ ವಾಸನೆಯನ್ನು ಹೊತ್ತು ಪುಷ್ಪಕವಿಮಾನವನ್ನು ಪರಿಮಳಭರಿತವನ್ನಾಗಿಸುತ್ತಿತ್ತು. ರಾಕ್ಷಸನ ಆ ಅರಮನೆಯಲ್ಲಿ ಶ್ಯಾಮಲವರ್ಣದ, ಶ್ವೇತವರ್ಣದ, ಕೃಷ್ಣವರ್ಣದ, ಹೊಂಬಣ್ಣದ ಅನೇಕ ಪ್ರಮದೆಯರು ಇದ್ದರು. ಅವರೆಲ್ಲರೂ ನಿದ್ರಾವಶರಾಗಿದ್ದುದರಿಂದಲೂ, ರತಿಕ್ರೀಡೆಯಿಂದ ಆಯಾಸಗೊಂಡಿದ್ದ ರಿಂದಲೂ, ಅವರ ರೂಪವು ಮುಕುಳಿತವಾದ ಕಮಲಗಳಂತೆ ಕಾಣುತ್ತಿತ್ತು. ಹೀಗೆ ಮಹಾತೇಜಸ್ವಿಯಾದ ಕಪಿವರನಾದ ಮಾರುತಿಯು ರಾವಣನ ಅಂತಃಪುರದಲ್ಲಿ ಯಾವುದನ್ನೂ ಬಿಡದೇ ಎಲ್ಲವನ್ನು ನೋಡಿದನು. ಆದರೆ ಸೀತಾದೇವಿಯನ್ನು ಮಾತ್ರ ಅವನು ಕಾಣಲಿಲ್ಲ.॥32-37॥
ಮೂಲಮ್ - 38
ನಿರೀಕ್ಷಮಾಣಶ್ಚ ತದಾ ತಾಃ ಸ್ತ್ರೀಯಃ ಸ ಮಹಾಕಪಿಃ ।
ಜಗಾಮ ಮಹತೀಂ ಚಿಂತಾಂ ಧರ್ಮಸಾಧ್ವಸಶಂಕಿತಃ ॥
ಮೂಲಮ್ - 39
ಪರದಾರಾವರೋಧಸ್ಯ ಪ್ರಸುಪ್ತಸ್ಯ ನಿರೀಕ್ಷಣಮ್ ।
ಇದಂ ಖಲು ಮಮಾತ್ಯರ್ಥಂ ಧರ್ಮಲೋಪಂ ಕರಿಷ್ಯತಿ ॥
ಅನುವಾದ
ರಾವಣಾಂತಃಪುರದಲ್ಲಿ ಆ ಸ್ತ್ರೀಯರನ್ನು ನೋಡಿದ ಕಪಿವರನು ‘ಇದರಿಂದಾಗಿ ಧರ್ಮಲೋಪವಾಗಿಲ್ಲವಲ್ಲ!’ ಎಂದು ಯೋಚಿಸುತ್ತಾ ತೀವ್ರವಾದ ಸಂದೇಹದಲ್ಲಿ ಬಿದ್ದನು. ಅಂತಃಪುರದಲ್ಲಿ ಗಾಢನಿದ್ದೆಯಲ್ಲಿ ಮಲಗಿದ್ದ ಪರಸ್ತ್ರೀಯರನ್ನು ಈ ರೀತಿ ನೋಡಿದೆನು. ಅದರಿಂದಾಗಿ ನನ್ನ ಬ್ರಹ್ಮಚರ್ಯ ನಿಷ್ಠೆಯಲ್ಲಿ ಲೋಪ ಉಂಟಾಗಿಲ್ಲವಲ್ಲ! ಆದರೆ ಪರಸತಿಯರ ವಿಷಯದಲ್ಲಿ ನನಗೆ ಎಂದೂ ವಿಷಯವಾಸನಾ ದೃಷ್ಟಿಯೇ ಇರಲಿಲ್ಲ. ಈ ಪರಸ್ತ್ರೀಯರನ್ನು ನಾನು ವಿಷಯಾಸಕ್ತಿಯಿಂದ ನೋಡಿಲ್ಲ. ಅದರಿಂದ ಧರ್ಮ ಲೋಪವಾಗುವುದಿಲ್ಲ. ಆದರೆ ಪರಸ್ತ್ರೀಯರ ಅಪಹಾರಕನಾದ ಈ ದುಷ್ಟ ರಾವಣನು ನನಗೆ ಕಂಡುಬಂದನು.॥38-39॥
ಮೂಲಮ್ - 40
ನ ಹಿ ಮೇ ಪರದಾರಾಣಾಂ ದೃಷ್ಟಿರ್ವಿಷಯವರ್ತಿನೀ ।
ಅಯಂ ಚಾತ್ರ ಮಯಾ ದೃಷ್ಟಃ ಪರದಾರಪರಿಗ್ರಹಃ ॥
ಅನುವಾದ
ಮನನಶೀಲನಾದ, ನಿಯತವಾದ ಮನಸ್ಸುಳ್ಳ ಹನುಮಂತನು ನಿಶ್ಚಯಿಸಿಕೊಂಡ ಲಕ್ಷ್ಯದಿಂದ, ಏಕಾಗ್ರವಾದ ಚಿತ್ತವು ಕದಲಲಾರದು. ಮನಸ್ಸಿನಲ್ಲಿದ್ದ ಕರ್ತವ್ಯವನ್ನು ನಿಶ್ಚಯಿಸಿದ್ದ ಆ ಮಾರುತಿಯು ಹೀಗೆ ಯೋಚಿಸಿದನು.॥40॥
ಮೂಲಮ್ - 41
ತಸ್ಯ ಪ್ರಾದುರಭೂಚ್ಚಿಂತಾ ಪುನರನ್ಯಾ ಮನಸ್ವಿನಃ ।
ನಿಶ್ಚಿತೈಕಾಂತಚಿತ್ತಸ್ಯ ಕಾರ್ಯನಿಶ್ಚಯದರ್ಶಿನೀ ॥
ಅನುವಾದ
‘‘ಪರಪುರುಷರು ನೋಡಲಾರರೆಂಬ ದೃಢವಿಶ್ವಾಸದಿಂದ ಮಲಗಿದ್ದ ರಾವಣನ ಪತ್ನಿಯರನ್ನು ನಿಃಶಂಕಭಾವದಿಂದ ನಾನು ಚೆನ್ನಾಗಿ ನೋಡಿದೆ. ಆದರೆ ಅಸ್ತವ್ಯಸ್ತವಾದ ಸ್ಥಿತಿಯಲ್ಲಿದ್ದ ಇವರನ್ನು ನೋಡಿಯೂ ನನ್ನ ಮನಸ್ಸಿನಲ್ಲಿ ಸ್ವಲ್ಪವೂ ವಿಕಾರ ಭಾವವು ಉಂಟಾಗಲಿಲ್ಲ.॥41॥
ಮೂಲಮ್ - 42
ಕಾಮಂ ದೃಷ್ಟಾ ಮಯಾ ಸರ್ವಾ ವಿಶ್ವಸ್ತಾ ರಾವಣಸ್ತ್ರಿಯಃ ।
ನ ಹಿ ಮೇ ಮನಸಃ ಕಿಂಚಿದ್ವೈಕೃತ್ಯಮುಪಪದ್ಯತೇ ॥
ಅನುವಾದ
ಪಾಪ-ಪುಣ್ಯಗಳ ಕರ್ಮಗಳಲ್ಲಿ ಇಂದ್ರಿಯಗಳು ಪ್ರವರ್ತಿಸಬೇಕಾದರೆ ಮನಸ್ಸೇ ಮುಖ್ಯ ಕಾರಣ ವಾಗುತ್ತದೆ. ಮನಸ್ಸಿನ ಮೂಲಕವೇ ಇಂದ್ರಿಯಗಳು ಶುಭ-ಅಶುಭ ಕರ್ಮಗಳಲ್ಲಿ ತೊಡಗುತ್ತವೆ. ಈ ವಿಷಯದಲ್ಲಿ ನನ್ನ ಮನಸ್ಸು ಸುವ್ಯವಸ್ಥಿತವಾಗಿದೆ, ಧರ್ಮಮಾರ್ಗದಲ್ಲಿ ಸ್ಥಿರವಾಗಿದೆ. ಇಂದ್ರಿಯಗಳನ್ನು ಪಾಪಕರ್ಮಗಳಿಗೆ ಪ್ರಚೋದಿಸುತ್ತಿಲ್ಲ.॥42॥
ಮೂಲಮ್ - 43
ಮನೋ ಹಿ ಹೇತುಃ ಸರ್ವೇಷಾಮಿಂದ್ರಿಯಾಣಾಂ ಪ್ರವರ್ತನೇ ।
ಶುಭಾಶುಭಾಸ್ವವಸ್ಥಾಸು ತಚ್ಚಮೇ ಸುವ್ಯವಸ್ಥಿತಮ್ ॥
ಅನುವಾದ
ಸ್ತ್ರೀಯರ ಸಮೂಹವಲ್ಲದೆ ಬೇರೆ ಸ್ಥಳಗಳಲ್ಲಿ ಸೀತೆಯನ್ನು ಹುಡುಕುವ ಅಥವಾ ಕಾಣುವ ಸಾಧ್ಯತೆಯಿಲ್ಲ. ಏಕೆಂದರೆ ಸ್ತ್ರೀಯರ ಮಧ್ಯದಲ್ಲಿಯೇ ಜಾನಕಿಯು ಇರುವ ಸಂಭವವಿದೆ. ಸ್ತ್ರೀಯರನ್ನು ಹುಡುಕಬೇಕಾದರೆ ಸ್ತ್ರೀಯರ ಸಮೂಹದಲ್ಲೇ ಹುಡುಕಬೇಕು. ಸಾಮಾನ್ಯವಾಗಿ ಅವರು ಅಲ್ಲೇ ಇರುತ್ತಾರೆ.॥43॥
ಮೂಲಮ್ - 44
ನಾನ್ಯತ್ರ ಚ ಮಯಾ ಶಕ್ಯಾ ವೈದೇಹೀ ಪರಿಮಾರ್ಗಿತುಮ್ ।
ಸ್ತ್ರೀಯೋ ಹಿ ಸ್ತ್ರೀಷು ದೃಶ್ಯಂತೇ ಸರ್ವಥಾ ಪರಿಮಾರ್ಗಣೇ ॥
ಮೂಲಮ್ - 45
ಯಸ್ಯ ಸತ್ತ್ವಸ್ಯ ಯಾ ಯೋನಿಸ್ತಸ್ಯಾಂ ತತ್ ಪರಿಮೃಗ್ಯತೇ ।
ನ ಶಕ್ಯಾ ಪ್ರಮದಾ ನಷ್ಟಾ ಮೃಗೀಷು ಪರಿಮಾರ್ಗಿತುಮ್ ॥
ಅನುವಾದ
ತಪ್ಪಿಸಿಕೊಂಡ ಪ್ರಾಣಿಯನ್ನು ಆ ಜಾತಿಯ ಪ್ರಾಣಿಗಳಲ್ಲಿಯೇ ಹುಡುಕಬೇಕು. ಆದುದರಿಂದ ಕಳೆದುಹೋಗಿರುವ ಸ್ತ್ರೀಯನ್ನು ಜಿಂಕೆಗಳ ಹಿಂಡಿನಲ್ಲಿ ಹುಡುಕುವುದಕ್ಕಾಗುವುದಿಲ್ಲ, ಸ್ತ್ರೀಯರ ಮಧ್ಯದಲ್ಲೇ ಹುಡುಕಬೇಕು.॥45॥
ಮೂಲಮ್ - 46
ತದಿದಂ ಮಾರ್ಗಿತಂ ತಾವಚ್ಛುದ್ಧೇನ ಮನಸಾ ಮಯಾ ।
ರಾವಣಾಂತಃಪುರಂ ಸರ್ವಂ ದೃಶ್ಯತೇ ನ ಚ ಜಾನಕೀ ॥
ಅನುವಾದ
ಈ ಕಾರಣದಿಂದಲೇ ನಾನು ಶುದ್ಧವಾದ ಮನಸ್ಸಿನಿಂದ ರಾವಣನ ಅಂತಃಪುರದಲ್ಲಿ ಸ್ತ್ರೀಯರ ಮಧ್ಯದಲ್ಲೇ ಸೀತಾದೇವಿಯು ಇರಬಹುದೆಂದು ಹುಡುಕಿದೆನು. ಆದರೆ ಅವಳು ಮಾತ್ರ ಇಲ್ಲಿ ಕಂಡುಬರಲ್ಲಿಲ್ಲ.॥46॥
ಮೂಲಮ್ - 47
ದೇವಗಂಧರ್ವ ಕನ್ಯಾಶ್ಚ ನಾಗಕನ್ಯಾಶ್ಚ ವೀರ್ಯವಾನ್ ।
ಅವೇಕ್ಷಮಾಣೋ ಹನುಮಾನ್ನೈವಾಪಶ್ಯತ ಜಾನಕೀಮ್ ॥
ಅನುವಾದ
ಹೀಗೆ ಸ್ತ್ರೀಯರ ಮಧ್ಯದಲ್ಲಿ ಸೀತಾನ್ವೇಷಣೆಯನ್ನು ಸಮರ್ಥಿಸಿಕೊಂಡ ಪರಾಕ್ರಮಶಾಲಿಯಾದ ಹನುಮಂತನು ಪುನಃ ದೇವ-ಗಂಧರ್ವ-ನಾಗಕನ್ಯೆಯರ ಮಧ್ಯದಲ್ಲಿ ಜಾನಕಿಯನ್ನು ಹುಡುಕಿದನು. ಆದರೆ ಅಲ್ಲಿಯೂ ಅವಳನ್ನು ಕಾಣಲಾಗಲಿಲ್ಲ. ॥47॥
ಮೂಲಮ್ - 48
ತಾಮಪಶ್ಯನ್ ಕಪಿಸ್ತತ್ರ ಪಶ್ಯಂಶ್ಚಾನ್ಯಾ ವರಸ್ತ್ರಿಯಃ ।
ಅಪಕ್ರಮ್ಯ ತದಾ ವೀರಃ ಪ್ರಧ್ಯಾತುಮುಪಚಕ್ರಮೇ ॥
ಮೂಲಮ್ - 49
ಸ ಭೂಯಸ್ತು ಪರಂ ಶ್ರೀಮಾನ್ ಮಾರುತಿರ್ಯತ್ನಮಾಸ್ಥಿತಃ ।
ಆಪಾನಭೂಮಿಮುತ್ಸೃಜ್ಯ ತಾಂ ವಿಚೇತುಂ ಪ್ರಚಕ್ರಮೇ ॥
ಅನುವಾದ
ವೀರನಾದ ಹನುಮಂತನು ಅಲ್ಲೆಲ್ಲೂ ಸೀತಾದೇವಿಯನ್ನು ಕಾಣದೆ, ಇತರ ಶ್ರೇಷ್ಠರಾದ ಸ್ತ್ರೀಯರನ್ನೇ ಅನುಲಕ್ಷಿಸುತ್ತಾ ನಿರಾಶನಾಗಿ ಅಲ್ಲಿಂದ ಹೊರಡಲನುವಾದನು. ಸರ್ವ ಶುಭ ಲಕ್ಷಣಗಳಿಂದ ಕೂಡಿದ್ದ ಮಾರುತಿಯು ಆ ಪಾನ ಭೂಮಿಯಿಂದ ನಿರ್ಗಮಿಸಿ, ತನ್ನ ಪ್ರಯತ್ನದಲ್ಲಿ ಕೃತನಿಶ್ಚಯವುಳ್ಳವನು ಪುನಃ ಆ ರಾವಣಾಂತಃಪುರದಲ್ಲಿ ಸೀತಾದೇವಿಯನ್ನು ಹುಡುಕುತ್ತಾ ಸಾಗಿದನು.॥48-49॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಏಕಾದಶಃ ಸರ್ಗಃ ॥ 11 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹನ್ನೊಂದನೆಯ ಸರ್ಗವು ಮುಗಿಯಿತು.