वाचनम्
ಭಾಗಸೂಚನಾ
ಹನುಮಂತನು ಅಂತಃಪುರದಲ್ಲಿ ಮಲಗಿದ್ದ ರಾವಣನನ್ನು ಮತ್ತು ಅವನ ಪತ್ನೀಯರನ್ನು ನೋಡಿದುದು, ಮಂಡೋದರಿಯನ್ನು ಸೀತೆಯೆಂದು ಭಾವಿಸಿ ಹೃಷ್ಟನಾದುದು
ಮೂಲಮ್ - 1
ತತ್ರ ದಿವ್ಯೋಪಮಂ ಮುಖ್ಯಂ ಸ್ಫಾಟಿಕಂ ರತ್ನಭೂಷಿತಮ್ ।
ಅವೇಕ್ಷಮಾಣೋ ಹನುಮಾನ್ ದದರ್ಶ ಶಯನಾಸನಮ್ ॥
ಮೂಲಮ್ - 2
ದಾಂತಕಾಂಚನಚಿತ್ರಾಂಗೈಃ ವೈಡೂರ್ಯೈಶ್ಚ ವರಾಸನೈಃ ।
ಮಹಾರ್ಹಾಸ್ತರಣೋಪೇತೈಃ ಉಪಪನ್ನಂ ಮಹಾಧನೈಃ ॥
ಅನುವಾದ
ಹನುಮಂತನು ಆ ದಿವ್ಯಶಾಲೆಯಲ್ಲಿ ಸೀತಾದೇವಿಯನ್ನು ಹುಡುಕುತ್ತಿದ್ದಾಗ, ಬಹುಮೂಲ್ಯವಾದ, ಶ್ರೇಷ್ಠವಾದ ಆಸನಗಳಿಂದ ಕೂಡಿದ್ದ ಮಹಾಪರ್ಯಂಕವನ್ನು ನೋಡಿದನು. ಆ ಶಯನಾಸನಗಳು ಸ್ವರ್ಗದಲ್ಲಿರುವ ಶಯನಾಸನಗಳಿಗೆ ಅನುರೂಪವಾಗಿದ್ದವು. ಸ್ಫಟಿಕಮಯವಾಗಿಯೂ, ರತ್ನಭೂಷಿತವಾಗಿಯೂ, ದಂತದಿಂದಲೂ, ಸುವರ್ಣದಿಂದಲೂ ಚಿತ್ರಿತವಾಗಿದ್ದ ಕಾಲುಗಳೇ ಮುಂತಾದ ಭಾಗಗಳಿಂದ ಕೂಡಿದ್ದವು. ಬೆಲೆಬಾಳುವ ರತ್ನಗಂಬಳಿಗಳು ಹಾಸಿದ್ದು, ವೈಡೂರ್ಯ ಮಣಿಗಳಿಂದ ಸಮಲಂಕೃತವಾಗಿದ್ದವು.॥1-2॥
ಮೂಲಮ್ - 3
ತಸ್ಯ ಚೈಕತಮೇ ದೇಶೇ ದಿವ್ಯಮಾಲಾವಿಭೂಷಿತಮ್ ।
ದದರ್ಶ ಪಾಂಡರಂ ಛತ್ರಂ ತಾರಾಧಿಪತಿಸನ್ನಿಭಮ್ ॥
ಅನುವಾದ
ಆ ಪರ್ಯಂಕದ ಮೇಲ್ಭಾಗದಲ್ಲಿ ದಿವ್ಯವಾದ ಮಾಲೆಗಳಿಂದ ಅಲಂಕೃತವಾಗಿದ್ದು, ಚಂದ್ರನ ಕಾಂತಿಯಂತೆ ಬೆಳಗುತ್ತಿದ್ದ ಒಂದು ಬಿಳಿಯ ಛತ್ರಿಯನ್ನು ಆ ಮಾರುತಿಯು ನೋಡಿದನು.॥3॥
ಮೂಲಮ್ - 4
ಜಾತರೂಪಪರಿಕ್ಷಿಪ್ತಂ ಚಿತ್ರಭಾನುಸಮಪ್ರಭಮ್ ।
ಅಶೋಕಮಾಲಾವಿತತಂ ದದರ್ಶ ಪರಮಾಸನಮ್ ॥
ಅನುವಾದ
ಬಂಗಾರದಿಂದ ನಿರ್ಮಿಸಲ್ಪಟ್ಟ, ಸೂರ್ಯ ಕಿರಣಗಳಂತೆ ಬೆಳಗುತ್ತಾ ರಾರಾಜಿಸುತ್ತಿದ್ದ ಆ ಪರಮಾಸನವು (ಪರ್ಯಂಕವು) ಅಶೋಕ ಪುಷ್ಪಗಳ ಮಾಲೆಗಳಿಂದ ಸಮಲಂಕೃತವಾಗಿತ್ತು. ಅಂತಹ ಮನಃ ಪ್ರಶಾಂತಿ ದೊರಕುವ, ದುಃಖಗಳು ದೂರಾಗಿಸುವ ಮಂಚವನ್ನು ಹನುಮಂತನು ನೋಡಿದನು.॥4॥
ಮೂಲಮ್ - 5
ವಾಲವ್ಯಜನಹಸ್ತಾಭಿರ್ವೀಜ್ಯಮಾನಂ ಸಮಂತತಃ ।
ಗಂಧೈಶ್ಚ ವಿವಿಧೈರ್ಜುಷ್ಟಂ ವರಧೂಪೇನ ಧೂಪಿತಮ್ ॥
ಮೂಲಮ್ - 6
ಪರಮಾಸ್ತರಣಾಸ್ತೀರ್ಣಮಾವಿಕಾಜಿನಸಂವೃತಮ್ ।
ದಾಮಭಿರ್ವರಮಾಲ್ಯಾನಾಂ ಸಮಂತಾದುಪಶೋಭಿತಮ್ ॥
ಅನುವಾದ
ಅಲ್ಲಿ ಚಾಮರಗಳನ್ನು ಕೈಗಳಲ್ಲಿ ಹಿಡಿದುಕೊಂಡು ರಾವಣನಿಗೆ ಗಾಳಿ ಬೀಸಲು ಅನೇಕ ಸ್ತ್ರೀಯರು ಸುತ್ತಲೂ ನಿಂತಿದ್ದರು. ಅಲ್ಲಿ ಉತ್ತಮವಾದ ಸುಗಂಧ ಧೂಪಗಳಿಂದ ಸುವಾಸಿತವಾಗಿತ್ತು. ಅದು ಉಣ್ಣೆಯ ಕಂಬಳಿ ಗಳಿಂದ ಸಮಾವೃತವಾಗಿತ್ತು. ಎಲ್ಲ ಕಡೆಗಳಲ್ಲಿಯೂ ಶ್ರೇಷ್ಠವಾದ ಪುಷ್ಪಮಾಲಿಕೆಗಳಿಂದ ಅಲಂಕರಿಸಲ್ಪಟ್ಟಿದ್ದ ಆ ಪರಮಾಸನವು ಅತ್ಯಂತ ಶೋಭಾಯಮಾನವಾಗಿ ಕಂಗೊಳಿಸುತ್ತಿತ್ತು.॥5-6॥
ಮೂಲಮ್ - 7
ತಸ್ಮಿನ್ ಜೀಮೂತಸಂಕಾಶಂ ಪ್ರದೀಪ್ತೋತ್ತಮಕುಂಡಲಮ್ ।
ಲೋಹಿತಾಕ್ಷಂ ಮಹಾಬಾಹುಂ ಮಹಾರಜತವಾಸಸಮ್ ॥
ಮೂಲಮ್ - 8
ಲೋಹಿತೇನಾನು ಲಿಪ್ತಾಂಗಂ ಚಂದನೇನ ಸುಗಂಧಿನಾ ।
ಸಂಧ್ಯಾರಕ್ತಮಿವಾಕಾಶೇ ತೋಯದಂ ಸತಟಿದ್ಗಣಮ್ ॥
ಮೂಲಮ್ - 9
ವೃತಮಾಭರಣೈರ್ದಿವ್ಯೈಃ ಸುರೂಪಂ ಕಾಮರೂಪಿಣಮ್ ।
ಸವೃಕ್ಷವನಗುಲ್ಮಾಢ್ಯಂ ಪ್ರಸುಪ್ತಮಿವ ಮಂದರಮ್ ॥
ಮೂಲಮ್ - 10
ಕ್ರೀಡಿತ್ವೋಪರತಂ ರಾತ್ರೌ ವರಾಭರಣಭೂಷಿತಮ್ ।
ಪ್ರಿಯಂ ರಾಕ್ಷಸಕನ್ಯಾನಾಂ ರಾಕ್ಷಸಾನಾಂ ಸುಖಾವಹಮ್ ॥
ಮೂಲಮ್ - 11
ಪೀತ್ವಾಪ್ಯುಪರತಂ ಚಾಪಿ ದದರ್ಶ ಸ ಮಹಾಕಪಿಃ ।
ಭಾಸ್ವರೇ ಶಯನೇ ವೀರಂ ಪ್ರಸುಪ್ತಂ ರಾಕ್ಷಸಾಧಿಪಮ್ ॥
ಅನುವಾದ
ಅಂತಹ ಶ್ರೇಷ್ಠವಾದ ಪರ್ಯಂಕದಲ್ಲಿ ಮಲಗಿದ್ದ ರಾಕ್ಷಸೇಶ್ವರನನ್ನು ಆ ಕಪಿವರನಾದ ಹನುಮಂತನು ನೋಡಿದನು. ಅವನು ಕಪ್ಪಾದ ಮೋಡದಂತೆ ಇದ್ದನು. ಅವನ ಕರ್ಣಕುಂಡಲಗಳು ಮೆರೆಯುತ್ತಿದ್ದವು. ಅವನ ಕಣ್ಣುಗಳು ಕೆಂಡದಂತೆ ಕೆಂಪಾಗಿದ್ದವು. ಮಹಾಬಾಹುವಾದ ಅವನು ಸುವರ್ಣ ಜರಿಯಿಂದ ಕೂಡಿರುವ ವಸ್ತ್ರವನ್ನು ಉಟ್ಟಿದ್ದನು. ಅವನ ಅಂಗಾಂಗಗಳೆಲ್ಲವೂ ಪರಿಮಳಯುಕ್ತ ಗಂಧದಿಂದ ಪೂಸಲ್ಪಟ್ಟಿದ್ದವು. ಳ-ಳನೇ ಹೊಳೆಯುತ್ತಿದ್ದ ದಿವ್ಯಾಭರಣಗಳಿಂದ ಭೂಷಿತನಾಗಿ ಸ್ಫುರದ್ರೂಪಿಯೂ, ಕಾಮರೂಪಿಯೂ ಆದ ಆತನು ಸಂಧ್ಯಾಕಾಲದ ರಕ್ತವರ್ಣದಿಂದಲೂ, ಮಿಂಚುಗಳಿಂದಲೂ ಕೂಡಿದ ಮೇಘದಂತೆ ಪ್ರಕಾಶಿಸುತ್ತಿದ್ದನು. ಅವನು ವೃಕ್ಷಗಳಿಂದಲೂ, ವನಗಳಿಂದಲೂ, ಲತೆಗಳಿಂದಲೂ ಕೂಡಿ ಶಾಂತವಾಗಿ ನಿದ್ರಿಸುತ್ತಿರುವ ಮಂದರಪರ್ವತದಂತೆ ಕಾಣುತ್ತಿದ್ದನು. ಅಮೂಲ್ಯವಾದ ಆಭರಣಗಳನ್ನು ತೊಟ್ಟಿರುವವನೂ, ರಾಕ್ಷಸ ಕನ್ಯೆಯರಿಗೆ ಪ್ರೀತಿಪಾತ್ರನೂ, ರಾಕ್ಷಸರಿಗೆ ಸುಖವನ್ನು ಕೊಡುವವನೂ, ಸುರತ ಕ್ರೀಡೆಯಿಂದ ವಿರಮಿಸಿ ಗಾಢವಾಗಿ ಮಲಗಿದ್ದ ಆ ರಾವಣನನ್ನು ಹನುಮಂತನು ನೋಡಿದನು.॥7-11॥
ಮೂಲಮ್ - 12
ನಿಃಶ್ವಸಂತಂ ಯಥಾ ನಾಗಂ ರಾವಣಂ ವಾನರರ್ಷಭಃ ।
ಆಸಾದ್ಯ ಪರಮೋದ್ವಿಗ್ನಃ ಸೋಪಾಸರ್ಪತ್ ಸುಭೀತವತ್ ॥
ಅನುವಾದ
ಆನೆಯಂತೆ ಗೊರಕೆ ಹೊಡೆಯುತ್ತಿದ್ದ ರಾವಣನನ್ನು ಸಮೀಪಿಸಿದ ಆ ಕಪಿವರನಾದ ಮರುತಿಯು ಹೆಚ್ಚಾಗಿ ಉದ್ವಿಗ್ನನಾಗಿ ‘‘ಛೀ! ಇವನು ಪರಸ್ತ್ರೀಯನ್ನು ಅಪಹರಿಸಿಕೊಂಡು ತಂದ ದುರ್ಮಾರ್ಗಿಯು. ಇವನಿಂದ ದೂರವಿರುವುದೇ ಉಚಿತವು’’ ಎಂದುಕೊಂಡು ಅವನು ತುಂಬಾ ಭಯಪಟ್ಟವನಂತೆ ರಾವಣನಿಂದ ದೂರಕ್ಕೆ ಸರಿದನು.*॥12॥
ಟಿಪ್ಪನೀ
- ಶಕಟಂ ಪಂಚ ಹಸ್ತೇನ ದಶಹಸ್ತೇಷು ವಾಜಿನಮ್ । ಗಜಂ ಸಹಸ್ರಹಸ್ತೇಷು ದುಷ್ಟಂ ದೂರೇಣ ವರ್ಜಯೇತ್ ॥
ಶಕಟ(ಬಂಡಿ)ದಿಂದ ಐದು ಮಾರುದೂರ, ಕುದುರೆಯಿಂದ ಹತ್ತು ಮಾರು ದೂರ, ಆನೆಯಿಂದ ಸಾವಿರ ಮಾರು ದೂರವಿದ್ದು ದುಷ್ಟನನ್ನು ಅತಿ ದೂರವಿಡಬೇಕು.
ಮೂಲಮ್ - 13
ಅಥಾರೋಹಣಮಾಸಾದ್ಯ ವೇದಿಕಾಂತರಮಾಶ್ರಿತಃ ।
ಕ್ಷೀಬಂ ರಾಕ್ಷಸಶಾರ್ದೂಲಂ ಪ್ರೇಕ್ಷತೇ ಸ್ಮ ಮಹಾಕಪಿಃ ॥
ಅನುವಾದ
ಅನಂತರ ಆ ಮಹಾಕಪಿಯು ಸೋಪಾನಮಾರ್ಗದಿಂದ ಮತ್ತೊಂದು ವೇದಿಕೆಯನ್ನು ಏರಿ ಕುಳಿತು ಗಾಢನಿದ್ದೆಯಲ್ಲಿದ್ದ ರಾವಣನನ್ನು ನೋಡುತ್ತಲೇ ಇದ್ದನು.॥13॥
ಮೂಲಮ್ - 14
ಶುಶುಭೇ ರಾಕ್ಷಸೇಂದ್ರಸ್ಯ ಸ್ವಪತಃ ಶಯನೋತ್ತಮಮ್ ।
ಗಂಧಹಸ್ತಿನಿ ಸಂವಿಷ್ಟೇ ಯಥಾ ಪ್ರಸ್ರವಣಂ ಮಹತ್ ॥
ಅನುವಾದ
ಮಲಗಿದ್ದ ರಾವಣನ ಮಹಾತಲ್ಪವು, ಒಂದು ಮದಭರಿತ ಗಂಧಹಸ್ತಿಯು ಪ್ರವೇಶಿಸಿದ ಜಲಾಶಯದಂತೆ ಪ್ರಕಾಶಿಸುತ್ತಿತ್ತು. (ಗಂಧಹಸ್ತಿ ಅಂದರೆ ತನ್ನ ಮದೋದಕ ಗಂಧದಿಂದ ಇತರ ಗಂಡು ಆನೆಗಳು ಭಯಪಟ್ಟು ಓಡಿಹೋಗುವವು. ಈ ಮದಗಜವು ಸರೋವರದಲ್ಲಿ ಪ್ರವೇಶಿಸುತ್ತಲೇ ಉಳಿದ ಗಂಡು ಆನೆಗಳು ಓಡಿಹೋಗುವವು. ಹೆಣ್ಣು ಆನೆಗಳು ಅಲ್ಲೇ ಇರುವವು.)॥14॥
ಮೂಲಮ್ - 15
ಕಾಂಚನಾಂಗದಸನ್ನದ್ಧೌ ಚ ದದರ್ಶ ಸ ಮಹಾತ್ಮನಃ ।
ವಿಕ್ಷಿಪ್ತೌ ರಾಕ್ಷಸೇಂದ್ರಸ್ಯ ಭುಜಾವಿಂದ್ರಧ್ವಜೋಪವೌ ॥
ಮೂಲಮ್ - 16
ಐರಾವತವಿಷಾಣಾಗ್ರೈರಾಪೀಡನಕೃತವ್ರಣೌ ।
ವಜ್ರೋಲ್ಲಿಖಿತಪೀನಾಂಸೌ ವಿಷ್ಣುಚಕ್ರಪರಿಕ್ಷತೌ ॥
ಮೂಲಮ್ - 17
ಪೀನೌ ಸಮಸುಜಾತಾಂಸೌ ಸಂಗತೌ ಬಲಸಂಯುತೌ ।
ಸುಲಕ್ಷಣನಖಾಂಗುಷ್ಠೌ ಸ್ವಂಗುಲೀಯಕಲಕ್ಷಿತೌ ॥
ಮೂಲಮ್ - 18
ಸಂಹತೌ ಪರಿಘಾಕಾರೌ ವೃತ್ತೌ ಕರಿಕರೋಪಮೌ ।
ವಿಕ್ಷಿಪ್ರೌ ಶಯನೇ ಶುಭ್ರೇ ಪಂಚಶೀರ್ಷಾವಿವೋರಗೌ ॥
ಮೂಲಮ್ - 19
ಶಶಕ್ಷತಜಕಲ್ಪೇನ ಸುಶೀತೇನ ಸುಗಂಧಿನಾ ।
ಚಂದನೇನ ಪರಾರ್ಧ್ಯೇನ ಸ್ವನುಲಿಪ್ತೌ ಸ್ವಲಂಕೃತೌ ॥
ಮೂಲಮ್ - 20
ಉತ್ತಮಸ್ತ್ರೀವಿಮೃದಿತೌ ಗಂಧೋತ್ತಮನಿಷೇವಿತೌ ।
ಯಕ್ಷಪನ್ನಗಗಂಧರ್ವದೇವದಾನವರಾವಿಣೌ ॥
ಮೂಲಮ್ - 21
ದದರ್ಶ ಸ ಕಪಿಸ್ತಸ್ಯ ಬಾಹೂ ಶಯನಸಂಸ್ಥಿತೌ ।
ಮಂದರಸ್ಯಾಂತರೇ ಸುಪ್ತೌ ಮಹಾಹೀ ರುಷಿತಾವಿವ ॥
ಮೂಲಮ್ - 22
ತಾಭ್ಯಾಂ ಸ ಪರಿಪೂರ್ಣಾಭ್ಯಾಂ ಭುಜಾಭ್ಯಾಂ ರಾಕ್ಷಸೇಶ್ವರಃ ।
ಶುಶುಭೇಽಚಲಸಂಕಾಶಃ ಶೃಂಗಾಭ್ಯಾಮಿವ ಮಂದರಃ ॥
ಅನುವಾದ
ಸುವರ್ಣಮಯವಾದ ಭುಜಕೀರ್ತಿಗಳಿಂದ ಯುಕ್ತವಾಗಿದ್ದು, ಇಂದ್ರಧ್ವಜ ಸದೃಶವಾಗಿದ್ದು ಹೊರಚಾಚಿಕೊಂಡಿದ್ದ ರಾಕ್ಷಸೇಂದ್ರನಾದ ರಾವಣನ ತೋಳುಗಳಲ್ಲಿ ಇಂದ್ರನೊಡನೆ ಮಾಡಿದ ಯುದ್ಧದಲ್ಲಿ ಐರಾವತದ ದಂತಗಳಿಂದ ತವಿಯಲ್ಪಟ್ಟು ಉಂಟಾದ ಗಾಯದ ಗುರ್ತುಗಳು ಕಂಡುಬರುತ್ತಿದ್ದವು. ಬಲಿಷ್ಠವಾದ ಆ ಭುಜಗಳಲ್ಲಿ ವಜ್ರಾಯುಧದ ಏಟಿನ ಮಚ್ಚೆಯಿಂದಲೂ, ಉಪೇಂದ್ರನ ವಿಷ್ಣುಚಕ್ರದ ಚಿಹ್ನೆಗಳು ಮೂಡಿದ್ದವು. ಆ ಎಲ್ಲ ಪ್ರಹಾರಗಳಿಂದಲೂ ಆ ತೋಳುಗಳು ಜಡ್ಡುಕಟ್ಟಿ ಹೋಗಿತ್ತಲ್ಲದೆ, ಸ್ಥೂಲವಾಗಿಯೂ, ಸುಂದರವಾಗಿಯೂ, ಬಲಿಷ್ಠವಾಗಿದ್ದವು. ಸುಂದರವಾದ ಸುಲಕ್ಷಣವಾದ ಉಗುರಗಳುಳ್ಳ ಅಂಗುಷ್ಠಗಳಿಂದ ಕೂಡಿದ್ದವು. ಚೆಲುವಾದ ಬೆರಳುಗಳಿಂದಲೂ ಶೋಭಾಯಮಾನವಾಗಿ ಕಾಣುತ್ತಿದ್ದವು. ದುಂಡಾಗಿಯೂ, ಸಂಧಿಬಂಧಗಳು ಪುಷ್ಟವಾಗಿಯೂ ಇದ್ದ ಆ ತೋಳುಗಳು ಪರಿಘಾಯುಧದಂತೆಯೂ, ಆನೆಯ ಸೊಂಡಿಲುಗಳಂತೆಯೂ, ಐದು ಹೆಡೆಗಳ ಎರಡು ಸರ್ಪಗಳಂತೆ ಕಾಣುತ್ತಿದ್ದವು. ಮೊಲದ ರಕ್ತದಂತೆ ಶೀತಲವಾದ ಸುಗಂಧಯುಕ್ತವಾದ ಹೆಚ್ಚು ಬೆಲೆಬಾಳುವ ಶ್ರೇಷ್ಠವಾದ ಚಂದನದಿಂದ ಅವು ಲೇಪಿತವಾಗಿದ್ದವು. ಕನಕಾಂಗದ ಕೇಯೂರಾದಿ ಆಭರಣಗಳಿಂದ ಸಮಲಂಕೃತವಾಗಿದ್ದವು. ಶ್ರೇಷ್ಠರಾದ ಸ್ತ್ರೀಯರು ಉತ್ತಮವಾದ ಗಂಧದಿಂದ ಲೇಪಿತವಾಗಿದ್ದ ರಾವಣನ ಆ ತೋಳುಗಳನ್ನು ಸುಖಕರವಾದ ರೀತಿಯಲ್ಲಿ ಒತ್ತುತ್ತಿದ್ದರು. ಯಕ್ಷ, ಗಂಧರ್ವ, ಪನ್ನಗ, ದೇವ, ದಾನವರನ್ನು ಭಯದಿಂದ ಕೂಗಿಕೊಳ್ಳುವಂತೆ ಮಾಡಲು ರಾವಣನ ಆ ಮಹಾಬಾಹುಗಳು ಸಮರ್ಥವಾಗಿದ್ದವು. ಮಂದರ ಪರ್ವತದಲ್ಲಿ ಮಲಗಿರುವ ರೋಷಗೊಂಡ ಸರ್ಪಗಳಂತೆ ಇದ್ದ ರಾವಣನ ಆ ತೋಳುಗಳನ್ನು ಹನುಮಂತನು ನೋಡಿದನು. ಪರಿಪುಷ್ಟವಾಗಿದ್ದ ಅಂತಹ ತೋಳುಗಳಿಂದ ಶೋಭಿತನಾಗಿದ್ದ ಪರ್ವತೋಪಮನಾದ ರಾವಣನು ಎರಡು ಶಿಖರಗಳಿಂದ ಕೂಡಿರುವ ಮಂದರ ಪರ್ವತದಂತೆ ಪ್ರಕಾಶಿಸುತ್ತಿದ್ದನು.॥15-22॥
ಮೂಲಮ್ - 23
ಚೂತಪುಂನಾಗಸುರಭಿರ್ಬಕುಲೋತ್ತಮಸಂಯುತಃ ।
ಮೃಷ್ಟಾನ್ನರಸಸಂಯುಕ್ತಃ ಪಾನಗಂಧಪುರಃಸರಃ ॥
ಮೂಲಮ್ - 24
ತಸ್ಯ ರಾಕ್ಷಸಸಿಂಹಸ್ಯ ನಿಶ್ಚಕ್ರಾಮ ಮಹಾಮುಖಾತ್ ।
ಶಯಾನಸ್ಯ ವಿನಿಃಶ್ವಾಸಃ ಪೂರಯನ್ನಿವ ತದ್ಗೃಹಂ ॥
ಅನುವಾದ
ಮಲಗಿದ್ದ ರಾಕ್ಷಸರಾಜನ ಮುಖದಿಂದ ಹೊರಬರುತ್ತಿದ್ದ ಸುದೀರ್ಘವಾದ ಉಸುರಿನ ಶಬ್ದವು ಆ ಅರಮನೆಯನ್ನೇ ತುಂಬುವುದೋ ಎಂಬಂತೆ ಕೇಳಿಬರುತ್ತಿದ್ದಿತು. ಅವನು ಬಿಡುತ್ತಿದ್ದ ಉಸಿರು ಸಿಹಿಮಾವು, ಸುರಹೊನ್ನೆಮರಗಳ ಹೂವಿನವಾಸನೆಯಂತೆ ಸುವಾಸನೆಯಿಂದ ಕೂಡಿತ್ತು. ಉತ್ತಮವಾದ ಬಕುಳ ಪುಷ್ಪದ ಸುಗಂಧದಿಂದಲೂ, ಷಡ್ರಸೋಪೇತವಾದ ಮೃಷ್ಟಾನ್ನದ ವಾಸನೆಯಿಂದಲೂ, ಮಧುವಿನ ವಾಸನೆಯಿಂದಲೂ ಕೂಡಿತ್ತು.॥23-24॥
ಮೂಲಮ್ - 25
ಮುಕ್ತಾಮಣಿವಿಚಿತ್ರೇಣ ಕಾಂಚನೇನ ವಿರಾಜಿತಮ್ ।
ಮುಕುಟೇನಾಪವೃತ್ತೇನ ಕುಂಡಲೋಜ್ಜ್ವಲಿತಾನನಮ್ ॥
ಅನುವಾದ
ಅನಂತರ ಹನುಮಂತನು ರಾವಣನ ಮುಖವನ್ನು ನೋಡಿದನು. ಆ ಮುಖವು ಉಜ್ವಲವಾದ ಕರ್ಣಕುಂಡಲಗಳಿಂದ ಅಲಂಕೃತವಾಗಿತ್ತು. ಮುತ್ತಿನ ಮಣಿಗಳಿಂದ ಚಿತ್ರಿತವಾಗಿ ಥಳ-ಥಳಿಸುತ್ತಿದ್ದ ಸುವರ್ಣಖಚಿತವಾದ, ಸ್ವಲ್ಪ ಓರೆಯಾಗಿದ್ದ ಕಿರೀಟದಿಂದ ಕಂಗೊಳಿಸುತ್ತಿತ್ತು.॥25॥
ಮೂಲಮ್ - 26
ರಕ್ತಚಂದನದಿಗ್ಧೇನ ತಥಾ ಹಾರೇಣ ಶೋಭಿನಾ ।
ಪೀನಾಯತವಿಶಾಲೇನ ವಕ್ಷಸಾಭಿವಿರಾಜಿತಮ್ ॥
ಅನುವಾದ
ರಾವಣನ ವಕ್ಷಸ್ಥಲವು ರಕ್ತಚಂದನದಿಂದ ಲೇಪಿತವಾಗಿತ್ತು. ರತ್ನ ಹಾರಗಳಿಂದ ಶೋಭಿಸುತ್ತಿದ್ದು, ಎತ್ತರವಾಗಿಯೂ, ದಪ್ಪವಾಗಿಯೂ ವಿಶಾಲವಾಗಿಯೂ ವಿರಾಜಿಸುತ್ತಿತ್ತು.॥26॥
ಮೂಲಮ್ - 27
ಪಾಂಡರೇಣಾಪವಿದ್ಧೇನ ಕ್ಷೌಮೇಣ ಕ್ಷತಜೇಕ್ಷಣಮ್ ।
ಮಹಾರ್ಹೇಣ ಸುಸಂವೀತಂ ಪೀತೇನೋತ್ತಮವಾಸಸಾ ॥
ಅನುವಾದ
ಅವನು ಬಿಳುಪಾದ ಪಟ್ಟವಸ್ತ್ರವನ್ನು ಉಟ್ಟಿದ್ದನು. ನಿದ್ದೆಯಲ್ಲಿರುವುದರಿಂದ ಅದು ಸ್ವಲ್ಪ ಅತ್ತ-ಇತ್ತ ಸರಿದಿತ್ತು. ಹೊಂಬಣ್ಣದ ಮಹಾಮೌಲ್ಯದ ಮೇಲು ಹೊದಿಕೆಯಿಂದ ಸಮಲಂಕೃತವಾಗಿದ್ದನು.॥27॥
ಮೂಲಮ್ - 28
ಮಾಷರಾಶಿಪ್ರತೀಕಾಶಂ ನಿಃಶ್ವಸಂತಂ ಭುಜಂಗವತ್ ।
ಗಾಂಗೇ ಮಹತಿ ತೋಯಾಂತೇ ಪ್ರಸುಪ್ತಮಿವ ಕುಂಜರಮ್ ॥
ಅನುವಾದ
ಅವನು ಉದ್ದಿನ ರಾಶಿಯಂತೆ ನೀಲವರ್ಣದವನಾಗಿದ್ದನು. ಮಹಾಸರ್ಪವು ಬುಸುಗುಟ್ಟುವಂತೆ ಅವನು ನಿಟ್ಟುಸಿರುಬಿಡುತ್ತಿದ್ದನು. ರತ್ನಪರ್ಯಂಕದಲ್ಲಿ ಮಲಗಿದ್ದ ಅವನು ಗಂಗಾನದಿಯ ಮಹಾಪ್ರವಾಹದಲ್ಲಿ ಮಲಗಿರುವ ಆನೆಯಂತೆ ಕಂಗೊಳಿಸುತ್ತಿದ್ದನು. ॥28॥
ಮೂಲಮ್ - 29
ಚತುರ್ಭಿಃ ಕಾಂಚನೈರ್ದೀಪೈರ್ದೀಪ್ಯಮಾನಚತುರ್ದಿಶಮ್ ।
ಪ್ರಕಾಶೀಕೃತಸರ್ವಾಂಗಂ ಮೇಘಂ ವಿದ್ಯುದ್ಗಣೈರಿವ ॥
ಅನುವಾದ
ನಾಲ್ಕೂ ದಿಕ್ಕುಗಳನ್ನು ಬೆಳಗುವ ಸುವರ್ಣದ ನಾಲ್ಕು ದೀಪಗಳನ್ನು ರಾವಣನ ಪರ್ಯಂಕದ ಸುತ್ತಲೂ ಇಟ್ಟಿದ್ದರು. ಮಿಂಚಿನಿಂದ ಮೇಘಗಳು ಪ್ರಕಾಶಿಸುವಂತೆ ಆ ದೀಪಗಳಿಂದ ರಾವಣನ ಸರ್ವಾಂಗಗಳೂ ಜಾಜ್ವಲ್ಯಮಾನವಾಗಿ ಬೆಳಗುತ್ತಿದ್ದವು.॥29॥
ಮೂಲಮ್ - 30
ಪಾದಮೂಲಗತಾಶ್ಚಾನ್ಯಾ ದದರ್ಶ ಸುಮಹಾತ್ಮನಃ ।
ಪತ್ನೀಃ ಸ ಪ್ರಿಯಭಾರ್ಯಸ್ಯ ತಸ್ಯ ರಕ್ಷಃಪತೇರ್ಗೃಹೇ ॥
ಅನುವಾದ
ಭಾರ್ಯೆಯರಿಗೆ ಅತ್ಯಂತ ಪ್ರಿಯನಾಗಿದ್ದ, ಮಹಾತ್ಮನಾದ, ರಾಕ್ಷಸಾಧಿಪತಿಯಾದ ರಾವಣನ ಅರಮನೆಯಲ್ಲಿ ಅವನ ಪದತಲದಲ್ಲಿ ಮಲಗಿದ್ದ ಮುದ್ದು ಪತ್ನಿಯರನ್ನು ಹನುಮಂತನು ನೋಡಿದನು.॥30॥
ಮೂಲಮ್ - 31
ಶಶಿಪ್ರಕಾಶವದನಾಶ್ಚಾರುಕುಂಡಲಭೂಷಿತಾಃ ।
ಅಮ್ಲಾನಮಾಲ್ಯಾಭರಣಾ ದದರ್ಶ ಹರಿಯೂಥಪಃ ॥
ಅನುವಾದ
ಚಂದ್ರನಂತೆ ಮುಖವುಳ್ಳವರೂ, ಮನೋಹರವಾದ ಕುಂಡಲಗಳಿಂದ ಅಲಂಕೃತರೂ, ಹೂಮಾಲೆಗಳನ್ನು ಆಭರಣಗಳನ್ನು ಧರಿಸಿರುವ, ಇಂತಹ ರಾವಣನ ಪತ್ನೀಯರನ್ನು ಕಪೀಶ್ವರನು ನೋಡಿದನು.॥31॥
ಮೂಲಮ್ - 32
ನೃತ್ತವಾದಿತ್ರಕುಶಲಾ ರಾಕ್ಷಸೇಂದ್ರಭುಜಾಂಕಗಾಃ ।
ವರಾಭರಣಧಾರಿಣ್ಯೋ ನಿಷಣ್ಣಾ ದದೃಶೇ ಹರಿಃ ॥
ಅನುವಾದ
ಅವರೆಲ್ಲರೂ ನೃತ್ಯ-ವಾದ್ಯ ಕಲೆಗಳಲ್ಲಿ ಕುಶಲೆಯರಾಗಿದ್ದರು. ಶ್ರೇಷ್ಠವಾದ ಆಭರಣಗಳನ್ನು ಧರಿಸಿದ್ದರು. ರಾಕ್ಷಸೇಂದ್ರನ ಭುಜಗಳನ್ನೂ, ತೊಡೆಗಳನ್ನೂ ಆಶ್ರಯಿಸಿ ಚೆನ್ನಾಗಿ ನಿದ್ದೆಹೋದ ರಾವಣನ ಭಾರ್ಯೆಯರನ್ನು ಕಪಿವರನಾದ ಹನುಮಂತನು ನೋಡಿದನು.॥32॥
ಮೂಲಮ್ - 33
ವಜ್ರವೈಡೂರ್ಯಗರ್ಭಾಣಿ ಶ್ರವಣಾಂತೇಷು ಯೋಷಿತಾಮ್ ।
ದದರ್ಶ ತಾಪನೀಯಾನಿ ಕುಂಡಲಾನ್ಯಂಗದಾನಿ ಚ ॥
ಅನುವಾದ
ಆ ಕಾಂತೆಯರು ಕಿವಿಗಳಲ್ಲಿ ಧರಿಸಿದ್ದ ವಜ್ರ-ವೈಡೂರ್ಯ ಖಚಿತವಾದ ಭಂಗಾರದ ಕುಂಡಲಗಳನ್ನು, ಭುಜದಲ್ಲಿ ಧರಿಸಿದ್ದ ಅಂಗದಗಳನ್ನು ಮಾರುತಿಯು ನೋಡಿದನು.॥33॥
ಮೂಲಮ್ - 34
ತಾಸಾಂ ಚಂದ್ರೋಪಮೈರ್ವಕ್ತ್ರೈಃ ಶುರ್ಭೆರ್ಲಲಿತಕುಂಡಲೈಃ ।
ವಿರರಾಜ ವಿಮಾನಂ ತತ್ ನಭಸ್ತಾರಾಗಣೈರಿವ ॥
ಅನುವಾದ
ಚಂದ್ರ ಸದೃಶವಾದ ಮುಖಗಳಿಂದಲೂ ಶುಭಪ್ರದವಾದ ಹಾಗೂ ಸುಂದರವಾದ ಕುಂಡಲಗಳಿಂದಲೂ ಯುಕ್ತವಾಗಿದ್ದ ರಾವಣನ ಪತ್ನೀಯರ ಆ ವಿಮಾನಾಕೃತಿಯ ಪರ್ಯಂಕವು ಚಂದ್ರನಿಂದಲೂ, ನಕ್ಷತ್ರಸಮೂಹಗಳಿಂದಲೂ ಕೂಡಿರುವ ಆಕಾಶದಂತೆ ಕಾಣುತ್ತಿದ್ದಿತು.॥34॥
ಮೂಲಮ್ - 35
ಮದವ್ಯಾಯಾಮಖಿನ್ನಾಸ್ತಾ ರಾಕ್ಷಸೇಂದ್ರಸ್ಯ ಯೋಷಿತಃ ।
ತೇಷು ತೇಷ್ವವಕಾಶೇಷು ಪ್ರಸುಪ್ತಾಸ್ತನುಮಧ್ಯಮಾಃ ॥
ಅನುವಾದ
ಮದ್ಯಪಾನದ ಮದದಿಂದಲೂ, ರತಿಕೀಡೆಯಿಂದಲೂ ಆಯಾಸಗೊಂಡಿದ್ದ, ಕೃಶವಾದ ನಡುವಿನಿಂದ ಕೂಡಿದ್ದ ರಾವಣನ ಮಡದಿಯರು ಅವಕಾಶವಿದ್ದೆಡೆಗಳಲ್ಲಿ ಅಸ್ತವ್ಯಸ್ತವಾಗಿ ಮಲಗಿದ್ದರು.॥35॥
ಮೂಲಮ್ - 36
ಅಂಗಹಾರೈಸ್ತಥೈವಾನ್ಯಾ ಕೋಮಲೈರ್ನೃತ್ತಶಾಲಿನೀ ।
ವಿನ್ಯಸ್ತ ಶುಭಸರ್ವಾಂಗೀ ಪ್ರಸುಪ್ತಾ ವರವರ್ಣಿನೀ ॥
ಅನುವಾದ
ನೃತ್ಯದಲ್ಲಿ ಪಳಗಿದ್ದ ಓರ್ವ ಶುಭಾಂಗಿಯು ನೃತ್ಯವನ್ನು ಮಾಡುತ್ತಿರುವವಳಂತೆ ಮನೋಹರವಾದ ಅಂಗಹಾರಗಳಿಂದ (ಆಂಗಿಕವಾದ ಅಭಿನಯಗಳಿಂದ) ನೃತ್ಯದ ಭಂಗಿಯಲ್ಲೇ ಮಲಗಿದ್ದಳು.॥36॥
ಮೂಲಮ್ - 37
ಕಾಚಿದ್ವೀಣಾಂ ಪರಿಷ್ವಜ್ಯ ಪ್ರಸುಪ್ತಾ ಸಂಪ್ರಕಾಶತೇ ।
ಮಹಾನದೀಪ್ರಕೀರ್ಣೇವ ನಲಿನೀ ಪೋತಮಾಶ್ರಿತಾ ॥
ಅನುವಾದ
ವೀಣೆಯನ್ನೇ ತಬ್ಬಿಕೊಂಡು ಮಲಗಿದ್ದ ರಾವಣನ ಮತ್ತೊಬ್ಬ ತರುಣೀಮಣಿಯು ಹರಿಗೋಲಿಗೆ ಸುತ್ತಿಕೊಂಡು ಹರಡಿಕೊಂಡಿರುವ ಕಮಲದ ಬಳ್ಳಿಯಂತೆ ಮನೋಹರವಾಗಿದ್ದಳು.॥37॥
ಮೂಲಮ್ - 38
ಅನ್ಯಾ ಕಕ್ಷಗತೇನೈವ ಮಡ್ಡುಕೇನಾಸಿತೇಕ್ಷಣಾ ।
ಪ್ರಸುಪ್ತಾ ಭಾಮಿನೀ ಭಾತಿ ಬಾಲಪುತ್ರೇವ ವತ್ಸಲಾ ॥
ಅನುವಾದ
‘ಮಡ್ಡುಕ’ವೆಂಬ ಚರ್ಮವಾದ್ಯವನ್ನು ಕಂಕುಳಲ್ಲಿ ಅಪ್ಪಿಕೊಂಡು ಮಲಗಿದ್ದ ಓರ್ವ ಯುವತಿಯು ವಾತ್ಸಲ್ಯದಿಂದ ಚಿಕ್ಕಮಗುವನ್ನು ಕಂಕುಳಲ್ಲೆತ್ತಿಕೊಂಡೇ ಮಲಗಿದ್ದ ಭಾಮಿನಿಯಂತೆ ಕಾಣುತ್ತಿದ್ದಳು.॥38॥
ಮೂಲಮ್ - 39
ಪಟಹಂ ಚಾರುಸರ್ವಾಂಗೀ ಪೀಡ್ಯ ಶೇತೇ ಶುಭಸ್ತನಿ ।
ಚಿರಸ್ಯ ರಮಣಂ ಲಬ್ಧ್ವಾ ಪರಿಷ್ವಜ್ಯೇವ ಭಾಮಿನೀ ॥
ಅನುವಾದ
ಭೇರಿಯನ್ನು ಆಲಿಂಗಿಸಿಕೊಂಡು ಮಲಗಿದ್ದ ಸುಂದರವಾದ ಕುಚಗಳುಳ್ಳ ಸರ್ವಾಂಗಸುಂದರಿಯಾದ ಓರ್ವ ರಮಣಿಯು ಬಹಳ ಕಾಲಾನಂತರ ಆಗಮಿಸಿದ ರಮಣನನ್ನು ಗಟ್ಟಿಯಾಗಿ ತಬ್ಬಿಕೊಂಡು ಮಲಗಿರುವಳೋ ಎಂಬಂತೆ ಕಂಡುಬರುತ್ತಿದ್ದಳು.॥39॥
ಮೂಲಮ್ - 40
ಕಾಚಿದ್ವಂಶಂ ಪರಿಷ್ವಜ್ಯ ಸುಪ್ತಾ ಕಮಲಲೋಚನಾ ।
ರಹಃ ಪ್ರಿಯತಮಂ ಗೃಹ್ಯ ಸಕಾಮೇವ ಚ ಕಾಮಿನೀ ॥
ಅನುವಾದ
ಕೊಳಲನ್ನು ಅಪ್ಪಿಕೊಂಡು ಮಲಗಿದ್ದ ಕಮಲಾಕ್ಷಿಯಾದ, ಕಮನೀಯರೂಪಳಾದ ಓರ್ವ ಕಾಂತೆಯು ಪ್ರಿಯತಮನನ್ನು ಏಕಾಂತ ಸ್ಥಳಕ್ಕೆ ಕರಕೊಂಡುಹೋಗಿ ತನ್ನ ಬಯಕೆಯನ್ನು ಪೂರ್ಣಗೊಳಿಸುತ್ತಿರುವಳೋ ಎಂಬಂತೆ ಕಾಣುತ್ತಿತ್ತು.॥40॥
ಮೂಲಮ್ - 41
ವಿಪಂಚೀಂ ಪರಿಗೃಹ್ಯಾನ್ಯಾ ನಿಯತಾ ನೃತ್ತಶಾಲಿನೀ ।
ನಿದ್ರಾವಶಮನುಪ್ರಾಪ್ತಾ ಸಹಕಾಂತೇವ ಭಾಮಿನೀ ॥
ಅನುವಾದ
ವಿಪಂಚಿ ಎಂಬ ಏಳುತಂತಿಯ ವೀಣೆಯನ್ನು ಹಿಡಿದು ನೃತ್ಯ ಭಂಗಿಯಲ್ಲೇ ಮಲಗಿದ್ದ ಓರ್ವ ಲಲನಾಮಣಿಯು ಪ್ರಿಯತಮನೊಡನೆ ನಿದ್ದೆ ಮಾಡುತ್ತಿರುವಳೋ ಎಂದು ಕಂಡುಬರುತ್ತಿದ್ದಳು.॥41॥
ಮೂಲಮ್ - 42
ಅನ್ಯಾ ಕನಕಸಂಕಾಶೈರ್ಮೃದುಪೀನೈರ್ಮನೋರಮೈಃ ।
ಮೃದಂಗಂ ಪರಿಪೀಡ್ಯಾಂಗೈಃ ಪ್ರಸುಪ್ತಾ ಮತ್ತಲೋಚನಾ ॥
ಅನುವಾದ
ಮಧುಪಾನದಿಂದ ಮತ್ತವಾದ ಕಣ್ಣುಗಳಿಂದ ಕೂಡಿದ್ದ ಓರ್ವ ರಾವಣನ ಪ್ರಿಯತಮೆಯು, ಮೃದುವಾಗಿಯೂ, ಸ್ಥೂಲವಾಗಿಯೂ, ಮನೋಹರವಾಗಿಯೂ ಇದ್ದ ಸುವರ್ಣ ಸದೃಶವಾದ ಅಂಗಗಳಿಂದ ಮೃದಂಗವನ್ನೇ ತಬ್ಬಿಕೊಂಡು ಮಲಗಿದ್ದಳು.॥42॥
ಮೂಲಮ್ - 43
ಭುಜಪಾರ್ಶ್ವಾಂತರಸ್ಥೇನ ಕಕ್ಷಗೇನ ಕೃಶೋದರೀ ।
ಪಣವೇನ ಸಹಾನಿಂದ್ಯಾ ಸುಪ್ತಾ ಮದಕೃತಶ್ರಮಾ ॥
ಅನುವಾದ
ಮಧುಪಾನಾದಿ ಕ್ರೀಡೆಗಳಿಂದ ಆಯಾಸಗೊಂಡಿದ್ದ, ತೆಳ್ಳನೆಯ ಹೊಟ್ಟೆಯಿಂದ ಕೂಡಿದ್ದ, ಅನಿಂದ್ಯಳಾದ ಸುಂದರಿಯೋರ್ವಳು ಭುಜಗಳ ಮಧ್ಯದ ಕಂಕುಳಲ್ಲಿದ್ದ ಮದ್ದಲೆಯೊಡನೆ ನಿದ್ದೆ ಮಾಡುತ್ತಿದ್ದಳು.॥43॥
ಮೂಲಮ್ - 44
ಡಿಂಡಿಮಂ ಪರಿಗೃಹ್ಯಾನ್ಯಾ ತಥೈವಾಸಕ್ತಡಿಂಡಿಮಾ ।
ಪ್ರಸುಪ್ತಾ ತರುಣಂ ವತ್ಸಮುಪಗೂಹ್ಯೇವಭಾಮಿನೀ ॥
ಅನುವಾದ
ಡಿಂಡಿಮ ವಾದ್ಯವನ್ನೇ ತಬ್ಬಿಕೊಂಡು ಮಲಗಿದ್ದ ಮತ್ತೋರ್ವ ತರುಣಿಯು ಮಗುವನ್ನು ಅಪ್ಪಿಕೊಳ್ಳುವಂತೆ ಡಿಂಡಿಮದಲ್ಲಿ ಆಸಕ್ತನಾದ ತರುಣನನ್ನು ಅಪ್ಪಿಕೊಂಡು ಮಲಗಿರುವಳೋ ಎಂಬಂತೆ ಕಾಣುತ್ತಿದ್ದಳು.॥44॥
ಮೂಲಮ್ - 45
ಕಾಚಿದಾಡಂಬರಂ ನಾರೀ ಭುಜಸಂಯೋಗಪೀಡಿತಮ್ ।
ಕೃತ್ವಾ ಕಮಲಪತ್ರಾಕ್ಷೀ ಪ್ರಸುಪ್ತಾ ಮದಮೋಹಿತಾ ॥
ಅನುವಾದ
ಕಮಲಪತ್ರಾಕ್ಷಿಯಾದ ಮದದಿಂದ ಮೋಹಿತಳಾಗಿದ್ದ ಓರ್ವ ಕಾಂತೆಯು ‘ಆಡಂಬರ’ ಎಂಬ ತೂರ್ಯವಾದ್ಯವನ್ನು ಭುಜಗಳಿಂದ ಗಟ್ಟಿಯಾಗಿ ತಬ್ಬಿಕೊಂಡು ಪರವಶಳಾಗಿ ಮಲಗಿದ್ದಳು.॥45॥
ಮೂಲಮ್ - 46
ಕಲಶೀಮಪವಿಧ್ಯಾನ್ಯಾ ಪ್ರಸುಪ್ತಾ ಭಾತಿ ಭಾಮಿನೀ ।
ವಸಂತೇ ಪುಷ್ಪ ಶಬಲಾ ಮಾಲೇವ ಪರಿಮಾರ್ಜಿತಾ ॥
ಅನುವಾದ
ಓರ್ವ ತರುಣಿಯು ಅತ್ತಲಿತ್ತ ಹೊರಳಾಡುವಾಗ ತನ್ನ ಬಳಿಯಲ್ಲಿದ್ದ ಪನ್ನೀರ ತುಂಬಿದ ಕಲಶವನ್ನು ಕೆಳಕ್ಕೆ ಬೀಳಿಸಿ ನೀರಿನಿಂದ ತೊಯ್ದುಹೋಗಿದ್ದರೂ ಹಾಗೆಯೇ ಗಾಢವಾಗಿ ಮಲಗಿದ್ದಳು. ಆಗ ಅವಳು ವಸಂತ ಕಾಲದಲ್ಲಿ ಬಾಡದಿರಲೆಂದು ನೀರಿನಿಂದ ಚುಮುಕಿಸಲ್ಪಟ್ಟ ಹಲವು ಬಣ್ಣಗಳಿಂದ ಕೂಡಿದ ಪುಷ್ಪಮಾಲೆಯಂತೆ ಕಂಡುಬರುತ್ತಿದ್ದಳು.॥46॥
ಮೂಲಮ್ - 47
ಪಾಣಿಭ್ಯಾಂ ಚ ಕುಚೌ ಕಾಚಿತ್ ಸುವರ್ಣಕಲಶೋಪಮೌ ।
ಉಪಗೂಹ್ಯಾಬಲಾ ಸುಪ್ತಾ ನಿದ್ರಾಬಲಪರಾಜಿತಾ ॥
ಅನುವಾದ
ಗಾಢವಾದ ನಿದ್ದೆಯಿಂದ ವಿವಶಳಾಗಿದ್ದ ಓರ್ವ ಅಬಲೆಯು ಸುವರ್ಣ ಕಲಶಗಳಂತೆ ಇದ್ದ ತನ್ನೆರಡೂ ಸ್ತನಗಳನ್ನು ಎರಡೂ ಕೈಗಳಿಂದ ಮುಚ್ಚಿಕೊಂಡು ಮಲಗಿದ್ದಳು.॥47॥
ಮೂಲಮ್ - 48
ಅನ್ಯಾ ಕಮಲಪತ್ರಾಕ್ಷೀ ಪೂರ್ಣೇಂದುಸದೃಶಾನನಾ ।
ಅನ್ಯಾಮಾಲಿಂಗ್ಯ ಸುಶ್ರೋಣೀಂ ಪ್ರಸುಪ್ತಾ ಮದವಿಹ್ವಲಾ ॥
ಅನುವಾದ
ಚಂದ್ರಬಿಂಬದಂತಿರುವ ಮುಖವುಳ್ಳ ಓರ್ವ ಕಮಲಲೋಚನೆಯು ಮದನಾವೇಶಕ್ಕೆ ಒಳಗಾಗಿ ಮತ್ತೊಬ್ಬ ರಮಣಿಯನ್ನು ಆಲಿಂಗಿಸಿಕೊಂಡು ಮಲಗಿದ್ದಳು.॥48॥
ಮೂಲಮ್ - 49
ಆತೋದ್ಯಾನಿ ವಿಚಿತ್ರಾಣಿ ಪರಿಷ್ವಜ್ಯ ವರಾಸ್ತ್ರೀಯಃ ।
ನಿಪೀಡ್ಯ ಚ ಕುಚೈಃ ಸುಪ್ತಾಃ ಕಾಮಿನ್ಯಃ ಕಾಮುಕಾನಿವ ॥
ಅನುವಾದ
ರಾವಣನ ಶ್ರೇಷ್ಠರಾದ ಇನ್ನೂ ಅನೇಕ ನಾರೀಮಣಿಗಳು - ಕಾಮಿನಿಯರು ಕಾಮುಕರನ್ನು ತಬ್ಬಿಕೊಂಡು ಸ್ತನಗಳಿಂದ ಪೀಡಿಸುವಂತೆ ವಿಚಿತ್ರವಾದ ಬಗೆ-ಬಗೆಯ ವಾದ್ಯಗಳನ್ನು ಎದೆಯಮೇಲೆ ತಬ್ಬಿಕೊಂಡು ಮಲಗಿದ್ದರು.॥49॥
ಮೂಲಮ್ - 50
ತಾಸಾಮೇಕಾಂತವಿನ್ಯಸ್ತೇ ಶಯಾನಾಂ ಶಯನೇ ಶುಭೇ ।
ದದರ್ಶ ರೂಪಸಂಪನ್ನಾಮಪರಾಂ ಸ ಕಪಿಃ ಸ್ತ್ರಿಯಮ್ ॥
ಅನುವಾದ
ಆ ವರಸ್ತ್ರೀಯರಿದ್ದ ಸ್ಥಳದಿಂದ ಪ್ರತ್ಯೇಕವಾಗಿದ್ದ ಏಕಾಂತ ಸ್ಥಳದಲ್ಲಿ ಸುಂದರವಾದ ಹಾಸಿಗೆಯಲ್ಲಿ ಮಲಗಿದ್ದ ರೂಪ ಸಂಪನ್ನೆಯಾದ ಮತ್ತೊಬ್ಬ ಸ್ತ್ರೀರತ್ನವನ್ನು ಕಪಿಶ್ರೇಷ್ಠನಾದ ಹನುಮಂತನು ನೋಡಿದನು.॥50॥
ಮೂಲಮ್ - 51
ಮುಕ್ತಾಮಣಿಸಮಾಯುಕ್ತೈರ್ಭೂಷಣೈಃ ಸುವಿಭೂಷಿತಾಮ್ ।
ವಿಭೂಷಯಂತೀಮಿವ ತತ್ ಸ್ವಶ್ರಿಯಾ ಭವನೋತ್ತಮಮ್ ॥
ಅನುವಾದ
ಆ ನಾರೀಮಣಿಯು ಮುತ್ತಿನ ಮಣಿಗಳಿಂದ ನಿರ್ಮಿತವಾದ ಸುಂದರವಾದ ಒಡವೆಗಳಿಂದ ಸಮಲಂಕೃತವಾಗಿದ್ದಳು. ದಿವ್ಯವಾದ ಹಾಗೂ ಶ್ರೇಷ್ಠವಾದ ಆ ಭವನವನ್ನೇ ತನ್ನ ಅಂಗಕಾಂತಿಯಿಂದ ಬೆಳಗಿಸುತ್ತಿರುವಳೋ ಎಂಬಂತೆ ಕಾಣುತ್ತಿದ್ದಳು. ॥51॥
ಮೂಲಮ್ - 52
ಗೌರೀಂ ಕನಕವರ್ಣಾಂಗೀಮಿಷ್ಟಾಮಂತಃಪುರೇಶ್ವರೀಮ್ ।
ಕಪಿರ್ಮಂದೋದರೀಂ ತತ್ರ ಶಯಾನಾಂ ಚಾರುರೂಪಿಣೀಮ್ ॥
ಅನುವಾದ
ಅವಳು ಗೌರಾಂಗಳೂ, ಸುವರ್ಣಸದೃಶಳೂ, ಆಗಿದ್ದಳು. ರಾವಣನಿಗೆ ಇಷ್ಟಳಾಗಿದ್ದು, ಸುಮನೋಹರವಾದ ರೂಪಿನಿಂದ ಕಂಗೊಳಿಸುತ್ತಿದ್ದಳು. ಅಂತಃಪುರಕ್ಕೆ ಒಡತಿಯೂ, ಸರ್ವಾಂಗ ಸುಂದರಳೂ, ಏಕಾಂತಸ್ಥಳದಲ್ಲಿ ಮಲಗಿದ್ದ ಆ ಮಂದೋದರಿಯನ್ನು ಹನುಮಂತನು ನೋಡಿದನು.॥52॥
ಮೂಲಮ್ - 53
ಸ ತಾಂ ದೃಷ್ಟ್ವಾ ಮಹಾಬಾಹುರ್ಭೂಷಿತಾಂ ಮಾರುತಾತ್ಮಜಃ ।
ತರ್ಕಯಾಮಾಸ ಸೀತೇತಿ ರೂಪಯೌವನಸಂಪದಾ ।
ಹರ್ಷೇಣ ಮಹತಾ ಯುಕ್ತೋ ನನಂದ ಹರಿಯೂಥಪಃ ॥
ಅನುವಾದ
ಮಹಾಬಾಹುವಾದ ವಾಯುಪುತ್ರನಾದ ಮಾರುತಿಯು ಸರ್ವಾಭರಣಗಳಿಂದಲೂ ಭೂಷಿತೆಯಾಗಿದ್ದ ಮಂದೋದರಿಯನ್ನು ನೋಡಿ ಅವಳಲ್ಲಿದ್ದ ರೂಪಸಂಪತ್ತಿನಿಂದ ಅವಳು ಸೀತೆಯೇ ಇರಬಹುದೆಂದು ಊಹಿಸಿದನು. ಸೀತೆಯನ್ನು ಕಂಡೆನೆಂದು ಭಾವಿಸಿದ ಹನುಮಂತನು ಮಹಾಹರ್ಷ ಯುಕ್ತನಾಗಿ ಆನಂದ ತುಂದಿಲನಾದನು.॥53॥
ಮೂಲಮ್ - 54
ಆಸ್ಫೋಟಯಾಮಾಸ ಚುಚುಂಬ ಪುಚ್ಛಂ
ನನಂದ ಚಿಕ್ರೀಡ ಜಗೌ ಜಗಾಮ ।
ಸ್ತಂಭಾನರೋಹನ್ನಿಪಪಾತ ಭೂಮೌ
ನಿದರ್ಶಯನ್ ಸ್ವಾಂ ಪ್ರಕೃತಿಂ ಕಪೀನಾಮ್ ॥
ಅನುವಾದ
ಸೀತೆಯನ್ನು ನೋಡಿದೆನೆಂಬ ಆನಂದಾತಿರೇಕದಿಂದ ಮಹತ್ತರವಾದ ಕಾರ್ಯವನ್ನು ಸಾಧಿಸಿದವನಂತೆ ತನ್ನೆರಡೂ ಭುಜಗಳನ್ನು ತಟ್ಟಿಕೊಂಡನು. ಬಾಲಕ್ಕೆ ಮುತ್ತಿಟ್ಟು ಆನಂದಿಸಿ, ಕುಣಿದಾಡಿದನು. ಹಾರಿದನು, ಅತ್ತಿಂದಿತ್ತ ತಿರುಗಾಡಿದನು. ವಿಜಯೋತ್ಸಾಹದಿಂದ ಕಂಬವನ್ನು ಹತ್ತಿ ಕೆಳಕ್ಕೆ ಧುಮುಕಿದನು. (ವಾನರರಿಗೆ ಸ್ವಾಮಿ ಭಕ್ತಿ ಪರಾಯಣತ್ವವು ಸ್ವಾಭಾವಿಕವಾಗಿರುವುದರಿಂದ ಹನುಮಂತನಿಗೆ ಶ್ರೀರಾಮನ ಮೇಲೆ ಭಕ್ತಿ ಉತ್ಸಾಹಗಳೇ ಅವನ ಇಂತಹ ಚರ್ಯೆಗಳಿಗೆ ಪ್ರೇರಕವು.)॥54॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ದಶಮಃ ಸರ್ಗಃ ॥ 10 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಹತ್ತನೆಯ ಸರ್ಗವು ಮುಗಿಯಿತು.