००९ रावणान्तःपुरवर्णनम्

वाचनम्
ಭಾಗಸೂಚನಾ

ಹನುಮಂತನು ರಾವಣನ ಅಂತಃಪುರದಲ್ಲಿ ಮಲಗಿದ್ದ ಸ್ತ್ರೀಯರನ್ನು ನೋಡಿದುದು

ಮೂಲಮ್ - 1

ತಸ್ಯಾಲಯವರಿಷ್ಠಸ್ಯ ಮಧ್ಯೇ ವಿಪುಲಮಾಯತಮ್ ।
ದದರ್ಶ ಭವನಶ್ರೇಷ್ಠಂ ಹನುಮಾನ್ ಮಾರುತಾತ್ಮಜಃ ॥

ಅನುವಾದ

ಮರುತಾತ್ಮಜನಾದ ಹನುಮಂತನು ಶ್ರೇಷ್ಠವಾದ ಆ ಪುಷ್ಪಕ ವಿಮಾನದ ಮಧ್ಯಭಾಗದಲ್ಲಿ ನಿರ್ಮಲವಾಗಿಯೂ, ವಿಸ್ತಾರವಾಗಿಯೂ ಇದ್ದ ಸರ್ವಸುಖ ಸಂಪನ್ನವಾದ ಒಂದು ರಾಜಭವನವನ್ನು ನೋಡಿದನು. ॥1॥

ಮೂಲಮ್ - 2

ಅರ್ಧಯೋಜನವಿಸ್ತೀರ್ಣಮಾಯತಂ ಯೋಜನಂ ಹಿ ತತ್ ।
ಭವನಂ ರಾಕ್ಷಸೇಂದ್ರಸ್ಯ ಬಹುಪ್ರಾಸಾದಸಂಕುಲಮ್ ॥

ಅನುವಾದ

ಪುಷ್ಪಕ ವಿಮಾನದಲ್ಲಿದ್ದ ರಾವಣನ ಆ ಮಹಾಭವನದ ಸುತ್ತಲೂ ಅನೇಕ ಪ್ರಾಕಾರಗಳಿದ್ದವು. ಆ ಪುಷ್ಪಕ ಭವನವು ಅರ್ಧಯೋಜನದಷ್ಟು ಅಗಲವಾಗಿದ್ದು, ಒಂದು ಯೋಜನದಷ್ಟು ಉದ್ದವಾಗಿ ವಿಸ್ತಾರವಾಗಿತ್ತು. ॥2॥

ಮೂಲಮ್ - 3

ಮಾರ್ಗಮಾಣಸ್ತು ವೈದೇಹಿಂ ಸೀತಾಮಾಯತಲೋಚನಾಮ್ ।
ಸರ್ವತಃ ಪರಿಚಕ್ರಾಮ ಹನುಮಾನರಿಸೂದನಃ ॥

ಅನುವಾದ

ಶತ್ರುಸಂಹಾರಕನೂ, ಸಮರ್ಥನೂ ಆದ ಹನುಮಂತನು ವಿಶಾಲನೇತ್ರೆಯಾದ ವಿದೇಹನಂದಿನಿ ಸೀತಾದೇವಿಯನ್ನು ಹುಡುಕುತ್ತಾ ಆ ಭವನಗಳೆಲ್ಲವನ್ನು ಜಾಲಾಡಿದನು. ॥3 ॥

ಮೂಲಮ್ - 4

ಉತ್ತಮಂ ರಾಕ್ಷಸಾವಾಸಂ ಹನುಮಾನವಲೋಕಯನ್ ।
ಆಸಸಾದಾಥ ಲಕ್ಷ್ಮೀವಾನ್ ರಾಕ್ಷಸೇಂದ್ರನಿವೇಶನಮ್ ॥

ಅನುವಾದ

ಸರ್ವಶುಭಲಕ್ಷಣಗಳಿಂದ ಕೂಡಿದ ಹನುಮಂತನು ರಾಕ್ಷಸರ ಶ್ರೇಷ್ಠವಾದ ಸೌಧಗಳೆಲ್ಲವನ್ನು ನೋಡಿಕೊಂಡು ರಾಕ್ಷಸೇಂದ್ರನಾದ ರಾವಣನ ಪ್ರಾಸಾದಕ್ಕೂ ತಲುಪಿದನು.॥4॥

ಮೂಲಮ್ - 5

ಚತುರ್ವಿಷಾಣೈರ್ದ್ವಿರದೈಸ್ತ್ರಿವಿಷಾಣೈಸ್ತಥೈವ ಚ ।
ಪರಿಕ್ಷಿಪ್ತಮಸಂಬಾಧಂ ರಕ್ಷ್ಯಮಾಣಮುದಾಯುಧೈಃ ॥

ಅನುವಾದ

ಆ ವಿಶಾಲವಾದ ಅರಮನೆಯು ಎರಡು, ಮೂರು, ನಾಲ್ಕು ದಂತಗಳುಳ್ಳ ಮತ್ತಗಜಗಳಿಂದ ಪರಿವೃತವಾಗಿತ್ತು. ಆಯುಧಗಳನ್ನು ಎತ್ತಿ ಹಿಡಿದುಕೊಂಡು ಸರ್ವ ಸನ್ನದ್ಧರಾದ ರಾಕ್ಷಸರು ಅದನ್ನು ಎಲ್ಲ ಕಾಲದಲ್ಲಿಯೂ ರಕ್ಷಿಸುತ್ತಿದ್ದರು.॥5॥

ಮೂಲಮ್ - 6

ರಾಕ್ಷಸೀಭಿಶ್ಚ ಪತ್ನೀಭೀ ರಾವಣಸ್ಯ ನಿವೇಶನಮ್ ।
ಆಹೃತಾಭಿಶ್ಚ ವಿಕ್ರಮ್ಯ ರಾಜಕನ್ಯಾಭಿರಾವೃತಮ್ ॥

ಅನುವಾದ

ಆ ಮಹಾಪ್ರಾಸಾದದಲ್ಲಿ ರಾವಣನ ರಾಕ್ಷಸಸ್ತ್ರೀಯರು ಹಾಗೂ ಪರಾಕ್ರಮದಿಂದ ಸೆಳೆದುತಂದ ರಾಜಕನ್ಯೆಯರೂ ಆವೃತವಾಗಿದ್ದರು.॥6॥

ಮೂಲಮ್ - 7

ತನ್ನಕ್ರಮಕರಾಕೀರ್ಣಂ ತಿಮಿಂಗಿಲಝಷಾಕುಲಮ್ ।
ವಾಯುವೇಗಸಮಾಧೂತಂ ಪನ್ನಗೈರಿವ ಸಾಗರಮ್ ॥

ಅನುವಾದ

ರಾಕ್ಷಸ ರಾಜನಾದ ರಾವಣನ ಆ ಅರಮನೆಯು ಮೊಸಳೆಗಳಿಂದಲೂ, ಮೀನುಗಳಿಂದಲೂ, ತಿಮಿಂಗಿಲಗಳಿಂದಲೂ, ಮಹಾಮತ್ಸ್ಯಗಳಿಂದಲೂ ಕೂಡಿರುವ ವಾಯುವೇಗದಿಂದ ಅಲ್ಲೋಲ-ಕಲ್ಲೋಲವಾಗಿ ಆಗಸಕ್ಕೆ ಮುಟ್ಟುವ ತರಂಗಗಳಿಂದ ಕೂಡಿದ ಸರ್ಪಭರಿತವಾದ ಸಾಗರದಂತೆ ಕಾಣುತ್ತಿತ್ತು.॥7॥

ಮೂಲಮ್ - 8

ಯಾ ಹಿ ವೈಶ್ರವಣೇ ಲಕ್ಷ್ಮೀರ್ಯಾಚೇಂದ್ರೇ ಹರಿವಾಹನೇ ।
ಸಾ ರಾವಣಗೃಹೇ ಸರ್ವಾ ನಿತ್ಯಮೇವಾನಪಾಯಿನೀ ॥

ಅನುವಾದ

ಕುಬೇರನ ಅರಮನೆಯಲ್ಲಿರುವ ಲಕ್ಷ್ಮಿಯು (ಐಶ್ವರ್ಯವು), ಹರಿವಾಹನ(ಐರಾವತ)ನಾದ ಇಂದ್ರನ ಅರಮನೆಯಲ್ಲಿರುವ ಸುರಮ್ಯವಾದ ಲಕ್ಷ್ಮಿಯೇ ರಾವಣನ ಅರಮನೆಯಲ್ಲೂ ಶಾಶ್ವತವಾಗಿ ವಾಸವಾಗಿದ್ದಳು.॥8॥

ಮೂಲಮ್ - 9

ಯಾ ಚ ರಾಜ್ಞಃ ಕುಬೇರಸ್ಯ ಯಮಸ್ಯ ವರುಣಸ್ಯ ಚ ।
ತಾದೃಶೀ ತದ್ವಿಶಿಷ್ಟಾ ವಾ ಋದ್ಧೀ ರಕ್ಷೋಗೃಹೇಷ್ವಿಹ ॥

ಅನುವಾದ

ಧನಪತಿಯಾದ ಕುಬೇರನ ಬಳಿ ಇರುವ, ಯಮ, ವರುಣರ ಬಳಿ ಇದ್ದ ಸಂಪತ್ಸಮೃದ್ಧಿಯೇ ಅದಕ್ಕಿಂತಲೂ ಮಿಗಿಲಾದ ಸಂಪತ್ಸಮೃದ್ಧಿಯು ಲಂಕೆಯಲ್ಲಿದ್ದ ರಾವಣನ ಬಳಿ ಹಾಗೂ ಅವನ ಸಹೋದರ, ಪುತ್ರ, ಮಂತ್ರಿಗಳೇ ಮುಂತಾದ ಎಲ್ಲ ರಾಕ್ಷಸರ ಮನೆಗಳಲ್ಲಿಯೂ ಇದ್ದಿತು.॥9॥

ಮೂಲಮ್ - 10

ತಸ್ಯ ಹರ್ಮ್ಯಸ್ಯ ಮಧ್ಯಸ್ಥಂ ವೇಶ್ಮ ಚಾನ್ಯತ್ ಸುನಿರ್ಮಿತಮ್ ।
ಬಹುನಿರ್ಯೂಹಸಂಕೀರ್ಣಂ ದದರ್ಶ ಪವನಾತ್ಮಜಃ ॥

ಅನುವಾದ

ರಾವಣನ ಆ ಮಹಾಪ್ರಾಸಾದದ ಮಧ್ಯಭಾಗದಲ್ಲಿ ಸುಂದರವಾಗಿ ನಿರ್ಮಿಸಲ್ಪಟ್ಟಿದ್ದ ಮದಿಸಿದ ಹಲವಾರು ಕೃತ್ರಿಮವಾದ ಆನೆಗಳು ಸಮಾವೃತವಾಗಿದ್ದುದನ್ನು ಆ ಹನುಮಂತನು ನೋಡಿದನು.॥10॥

ಮೂಲಮ್ - 11

ಬ್ರಹ್ಮಣೋಽರ್ಥೇ ಕೃತಂ ದಿವ್ಯಂ ದಿವಿ ಯದ್ವಿಶ್ವಕರ್ಮಣಾ ।
ವಿಮಾನಂ ಪುಷ್ಪಕಂ ನಾಮ ಸರ್ವರತ್ನವಿಭೂಷಿತಮ್ ॥

ಅನುವಾದ

ಬ್ರಹ್ಮನ ಸಲುವಾಗಿ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟಿದ್ದ ಸರ್ವರತ್ನವಿಭೂಷಿತವಾದ ದಿವ್ಯಪುಷ್ಪಕವೆಂಬ ವಿಮಾನವು ಅದಾಗಿತ್ತು.॥11॥

ಮೂಲಮ್ - 12

ಪರೇಣ ತಪಸಾ ಲೇಭೇ ಯತ್ ಕುಬೇರಃ ಪಿತಾಮಹಾತ್ ।
ಕುಬೇರಮೋಜಸಾ ಜಿತ್ವಾ ಲೇಭೇ ತದ್ರಾಕ್ಷಸೇಶ್ವರಃ ॥

ಅನುವಾದ

ಬ್ರಹ್ಮನಿಗಾಗಿ ವಿಶ್ವಕರ್ಮನಿಂದ ರಚಿಸಲ್ಪಟ್ಟ ಆ ಪುಷ್ಪಕವಿಮಾನವನ್ನು ಮಹಾತಪಸ್ಸಿನಿಂದ ಕುಬೇರನು ಬ್ರಹ್ಮನಿಂದ ಪಡೆದುಕೊಂಡಿದ್ದನು. ಅನಂತರ ರಾವಣೇಶ್ವರನು ಭುಜ-ಬಲ ಪರಾಕ್ರಮಗಳಿಂದ ಕುಬೇರನನ್ನು ಜಯಿಸಿ ಆ ಪುಷ್ಪಕವಿಮಾನವನ್ನು ಪಡೆದುಕೊಂಡಿದ್ದನು.॥12॥

ಮೂಲಮ್ - 13

ಈಹಾಮೃಗಸಮಾಯುಕ್ತೈಃ ಕಾರ್ತಸ್ವರಹಿರಣ್ಮಯೈಃ ।
ಸುಕೃತೈರಾಚಿತಂ ಸ್ತಂಭೈಃ ಪ್ರದೀಪ್ತಮಿವ ಚ ಶ್ರಿಯಾ ॥

ಅನುವಾದ

ಆ ಪುಷ್ಪಕವಿಮಾನವು ಅಪರಂಜಿ ಚಿನ್ನದಿಂದ ನಿರ್ಮಿತವಾದ ಕ್ರೀಡಾಮೃಗ ಮುಂತಾದ ಪ್ರತಿಮೆಗಳಿಂದ, ಕಲಾತ್ಮಕವಾಗಿ ತಯಾರಿಸಿದ ಬೆಳ್ಳಿಯ ಸ್ತಂಭಗಳಿಂದ ಅಲಂಕೃತವಾಗಿತ್ತು. ಅದ್ಭುತ ಕಾಂತಿಯಿಂದ ಶೋಭಾಯಮಾನವಾಗಿ ಕಾಣುತ್ತಿತ್ತು.॥13॥

ಮೂಲಮ್ - 14

ಮೇರುಮಂದರಸಂಕಾಶೈಃ ಆಲ್ಲಿಖದ್ಭಿರಿವಾಂಬರಮ್ ।
ಕೂಟಾಗಾರೈಃ ಶುಭಾಕಾರೈಃ ಸರ್ವತಃ ಸಮಲಂಕೃತಮ್ ॥

ಅನುವಾದ

ಮೇರು-ಮಂದರ ಪರ್ವತಗಳಿಗೆ ಸದೃಶವಾಗಿದ್ದು ಆಕಾಶವನ್ನು ಉಜ್ಜುತ್ತಿರುವುದೋ ಎಂಬಂತೆ ಕಾಣುತ್ತಿತ್ತು. ಅಗ್ನಿ-ಸೂರ್ಯರ ಪ್ರಕಾಶಕ್ಕೆ ಸಮಾನವಾದ ಪ್ರಕಾಶದಿಂದ ಬೆಳಗುತ್ತಾ ಚಂದ್ರಶಾಲೆಗಳಿಂದಲೂ, ಗುಪ್ತಗೃಹಗಳಿಂದಲೂ ಸಮಲಂಕೃತವಾಗಿದ್ದಿತು. ॥14॥

ಮೂಲಮ್ - 15

ಜ್ವಲನಾರ್ಕಪ್ರತೀಕಾಶಂ ಸುಕೃತಂ ವಿಶ್ವಕರ್ಮಣಾ ।
ಹೇಮಸೋಪಾನಸಂಯುಕ್ತಂ ಚಾರುಪ್ರವರವೇದಿಕಮ್ ॥

ಅನುವಾದ

ವಿಶ್ವಕರ್ಮನಿಂದ ಚಾಕಚಕ್ಯತೆಯಿಂದ ನಿರ್ಮಿತವಾದ ಪುಷ್ಪಕವು ಸೂರ್ಯಾಗ್ನಿಗಳಂತೆ ಪ್ರಕಾಶಮಾನವಾಗಿತ್ತು. ಸುವರ್ಣಮಯವಾದ ಸೋಪಾನಗಳಿಂದಲೂ, ಶ್ರೇಷ್ಠವಾದ ಜಗುಲಿಗಳಿಂದಲೂ ಕೂಡಿದ ಸರ್ವಶ್ರೇಷ್ಠವಾದ ಆ ವಿಮಾನವನ್ನು ಹನುಮಂತನು ನೋಡಿದನು.॥15॥

ಮೂಲಮ್ - 16

ಜಾಲವಾತಾಯನೈರ್ಯುಕ್ತಂ ಕಾಂಚನೈಃ ಸ್ಫಾಟಿಕೈರಪಿ ।
ಇಂದ್ರನೀಲಮಹಾನೀಲ ಮಣಿಪ್ರವರವೇದಿಕಮ್ ॥

ಅನುವಾದ

ಆ ವಿಮಾನವು ಸುವರ್ಣ ಮಯವಾದ ಹಾಗೂ ಸ್ಫಟಿಕಮಯವಾದ ಜಾಲರಿಗಳಿಂದ ಕೂಡಿದ ಕಿಟಕಿಗಳಿಂದ ಸಮಲಂಕೃತವಾಗಿತ್ತು. ಅದರಲ್ಲಿದ್ದ ಜಗುಲಿಗಳು ಶ್ರೇಷ್ಠವಾದ ಇಂದ್ರನೀಲಮಣಿಗಳಿಂದ ಮತ್ತು ಸಿಂಹಳ ದ್ವೀಪದಲ್ಲಿ ಲಭಿಸುವ ಮಹಾನೀಲಗಳಿಂದ ನಿರ್ಮಿಸಲ್ಪಟ್ಟಿದ್ದವು.॥16॥

ಮೂಲಮ್ - 17

ವಿದ್ರುಮೇಣ ವಿಚಿತ್ರೇಣ ಮಣಿಭಿಶ್ಚ ಮಹಾಧನೈಃ ।
ನಿಸ್ತುಲಾಭಿಶ್ಚ ಮುಕ್ತಾಭಿಸ್ತಲೇನಾಭಿವಿರಾಜಿತಮ್ ॥

ಅನುವಾದ

ಅದರ ತಳಭಾಗವು (ನೆಲ) ವಿಚಿತ್ರವಾದ ಹವಳಗಳಿಂದಲೂ, ಅಪಾರ ವೌಲ್ಯದ ಮಣಿಗಳಿಂದಲೂ, ಉಪಮಾನ ರಹಿತವಾದ ದುಂಡಾಗಿರುವ ಮುತ್ತುಗಳಿಂದ ಚಿತ್ರಿತವಾಗಿ ರಾರಾಜಿಸುತ್ತಿತ್ತು.॥17॥

ಮೂಲಮ್ - 18

ಚಂದನೇನ ಚ ರಕ್ತೇನ ತಪನೀಯನಿಭೇನ ಚ ।
ಸುಪುಣ್ಯಗಂಧಿನಾ ಯುಕ್ತಮಾದಿತ್ಯತರುಣೋಪಮಮ್ ॥

ಅನುವಾದ

ಅದು ಸುವರ್ಣ ಸದೃಶವಾದ ಪುಣ್ಯ ಗಂಧದಿಂದ ಯುಕ್ತವಾದ ರಕ್ತ ಚಂದನದಿಂದ ಸುವಾಸಿತವಾಗಿತ್ತು. ಕಾದ ಭಂಗಾರದ ಕಾಂತಿಯಿಂದ ಮಧ್ಯಾಹ್ನದ ಸೂರ್ಯನಂತೆ ತೇಜಃಪುಂಜವಾಗಿತ್ತು.॥18॥

ಮೂಲಮ್ - 19

ಕೂಟಾಗಾರೈರ್ವರಾಕಾರೈಃ ವಿವಿಧೈಃ ಸಮಲಂಕೃತಮ್ ।
ವಿಮಾನಂ ಪುಷ್ಪಕಂ ದಿವ್ಯಮಾರುರೋಹ ಮಹಾಕಪಿಃ ॥

ಅನುವಾದ

ವಿವಿಧವಾದ ಸುಂದರಾಕೃತಿಗಳುಳ್ಳ ಗುಪ್ತಗೃಹಗಳಿಂದ (ಕೂಟಾಗಾರ) ಕೂಡಿದ್ದು ಆ ಪುಷ್ಪಕ ವಿಮಾನವು ಅಲಂಕೃತವಾಗಿತ್ತು. ಅಂತಹ ದಿವ್ಯವಿಮಾನವನ್ನು ಮಹಾಕಪಿಯಾದ ಹನುಮಂತನು ಏರಿದನು.॥19॥

ಮೂಲಮ್ - 20

ತತ್ರಸ್ಥಃ ಸ ತದಾ ಗಂಧಂ ಪಾನಭಕ್ಷ್ಯಾನ್ನಸಂಭವಮ್ ।
ದಿವ್ಯಂ ಸಂಮೂರ್ಛಿತಂ ಜಿಘ್ರದ್ರೂಪವಂತಮಿವಾನಿಲಮ್ ।
ಸ ಗಂಧಸ್ತಂ ಮಹಾಸತ್ತ್ವಂ ಬಂಧುರ್ಬಂಧುಮಿವೋತ್ತಮಮ್ ॥

ಅನುವಾದ

ಆಗ ಅಲ್ಲಿ ಭಕ್ಷ್ಯ-ಪಾನೀಯಗಳಿಂದ ಹಾಗೂ ಅನ್ನಭಂಡಾರದಿಂದ ಹೊರ ಸೂಸುತ್ತಿದ್ದ, ಮೆೃ-ಮನ ಮರೆಸುವಂತಹ ದಿವ್ಯಪರಿಮಳವು ಸರ್ವತ್ರ ಪಸರಿಸಿತ್ತು. ಆ ಸುವಾಸನೆಯು ನಾಸಾಪುಟಕ್ಕೆ ತಗಲುತ್ತಲೇ ಹನುಮಂತನು ನಿರಾಕಾರವಾದ ವಾಯುದೇವರೇ ಮೂರ್ತಿಭವಿಸಿ ಪರಿಮಳ ರೂಪದಿಂದ ಬಂದಿರುವಂತೆ ಭಾವಿಸಿದನು.॥20॥

ಮೂಲಮ್ - 21

ಇತ ಏಹೀತ್ಯುವಾಚೇವ ತತ್ರ ಯತ್ರ ಸ ರಾವಣಃ ।
ತತಸ್ತಾಂ ಪ್ರಸ್ಥಿತಃ ಶಾಲಾಂ ದದರ್ಶ ಮಹತೀಂ ಶುಭಾಮ್ ॥

ಅನುವಾದ

ಪಾನ-ಭಕ್ಷ್ಯಾದಿಗಳಿಂದ ಹೊರಹೊಮ್ಮುತ್ತಿದ್ದ ಆ ದಿವ್ಯ ಗಂಧವು (ವಾಯುದೇವರು) ಬಂಧುವೊಬ್ಬನನ್ನು ಮತ್ತೊಬ್ಬ ಉತ್ತಮನಾದ ಬಂಧುವು ‘ಇತ್ತ ಬಾ, ಇತ್ತ ಬಾ’ ಎಂದು ಹೇಳಿಕೊಂಡು ರಾವಣನಿರುವ ಸ್ಥಳಕ್ಕೆ ಕರೆಯುತ್ತಿರುವನೋ ಎಂಬಂತೆ ಕಾಣುತ್ತಿತ್ತು.॥21॥

ಮೂಲಮ್ - 22

ರಾವಣಸ್ಯ ಮನಃಕಾಂತಾಂ ಕಾಂತಾಮಿವ ವರಸ್ತ್ರಿಯಮ್ ।
ಮಣಿಸೋಪಾನವಿಕೃತಾಂ ಹೇಮಜಾಲವಿರಾಜಿತಾಮ್ ॥

ಅನುವಾದ

ಅಲ್ಲಿಂದ ಮುಂದೆ ಹೋದ ಹನುಮಂತನು ಶುಭಾಕೃತಿಯ ಒಂದು ವಿಶಾಲವಾದ, ಸುಂದರವಾದ ಶಾಲೆಯನ್ನು ನೋಡಿದನು. ಅದು ಕಡುಚೆಲುವೆಯಾದ ಮನೋಹರವಾದ ಕಾಂತಿಯುಕ್ತ ಕಾಂತೆಯು ಕಾಂತನಿಗೆ ಪ್ರಿಯವಾಗುವಂತೆ ರಾವಣನಿಗೆ ಅತ್ಯಂತ ಪ್ರಿಯವಾಗಿತ್ತು.॥22॥

ಮೂಲಮ್ - 23

ಸ್ಫಾಟಿಕೈರಾವೃತತಲಾಂ ದಂತಾಂತರಿತರೂಪಿಕಾಮ್ ।
ಮುಕ್ತಾಭಿಶ್ಚ ಪ್ರವಾಲೈಶ್ಚ ರೂಪ್ಯಚಾಮೀಕರೈರಪಿ ॥

ಅನುವಾದ

ಆ ಶಾಲೆಯ ಸೋಪಾನಗಳು ಮಣಿಮಯವಾಗಿದ್ದವು. ಸುವರ್ಣಮಯವಾದ ಬಲೆಗಳಿಂದ ವಿರಾಜಿಸುವ ಗವಾಕ್ಷಗಳು ಮಂಗಳ ಕರವಾಗಿದ್ದವು. ನೆಲಕ್ಕೆ ಸ್ಫಟಿಕ ಶಿಲೆಗಳನ್ನು ಹಾಸಿ ಅಲ್ಲಲ್ಲಿ ದಂತದ ಚಿತ್ರಗಳನ್ನು ಕೆತ್ತಿದ್ದರು.॥23॥

ಮೂಲಮ್ - 24

ವಿಭೂಷಿತಾಂ ಮಣಿಸ್ತಂಭೈಃ ಸುಬಹುಸ್ತಂಭಭೂಷಿತಾಮ್ ।
ಸಮೈರ್ಋಜುಭಿರತ್ಯುಚ್ಚೈಃ ಸಮಂತಾತ್ ಸುವಿಭೂಷಿತೈಃ ॥

ಅನುವಾದ

ಮುತ್ತು ಹವಳ ವಜ್ರಗಳಿಂದಲೂ ಬೆಳ್ಳಿ ಭಂಗಾರದ ತಗಡುಗಳಿಂದಲೂ ಸಮಲಂಕೃತವಾದ ಮಣಿಮಯ ಸ್ತಂಭಗಳೇ ಅಲ್ಲದೆ ಇನ್ನೂ ಅನೇಕ ಸುಂದರವಾದ ಸ್ತಂಭಗಳಿಂದ ಆ ದಿವ್ಯಶಾಲೆಯು ಭೂಷಿತವಾಗಿತ್ತು.॥24॥

(ಶ್ಲೋಕ - 25

ಮೂಲಮ್

ಸ್ತಂಭೈಃ ಪಕ್ಷೈರಿವಾತ್ಯುಚ್ಚೈರ್ದಿವಂ ಸಂಪ್ರಸ್ಥಿತಾಮಿವ ।
ಮಹತ್ಯಾ ಕುಥಯಾಸ್ತೀರ್ಣಾಂ ಪೃಥಿವೀಲಕ್ಷಣಾಂಕಯಾ ॥

ಅನುವಾದ

ಆ ಸ್ತಂಭಗಳು ಸ್ವಲ್ಪವೂ ಡೊಂಕಿಲ್ಲದಂತೆ ನೇರವಾಗಿದ್ದು, ಆಮೂಲಾಗ್ರವಾಗಿ ಅಲಂಕೃತವಾಗಿ ಎತ್ತರವಾಗಿದ್ದವು. ಗಗನಚುಂಬಿಗಳಾದ ಆ ಕಂಬಗಳು ಪಕ್ಷಿಗಳ ರೆಕ್ಕೆಗಳಂತೆ ಕಾಣುತ್ತಿದ್ದು, ಆಕಾಶದ ಕಡೆಗೆ ಹಾರಲು ಸಿದ್ಧವಾಗಿರುವಂತೆ ಕಾಣುತ್ತಿದ್ದವು.॥25॥

ಮೂಲಮ್ - 26

ಪೃಥಿವೀಮಿವ ವಿಸ್ತೀರ್ಣಾಂ ಸರಾಷ್ಟ್ರಗೃಹಮಾಲಿನೀಮ್ ।
ನಾದಿತಾಂ ಮತ್ತವಿಹಗೈರ್ದಿವ್ಯಗಂಧಾಧಿವಾಸಿತಾಮ್ ॥

ಅನುವಾದ

ಆ ದಿವ್ಯ ಶಾಲೆಯ ಮಧ್ಯದಲ್ಲಿ ನದಿ-ಸಮುದ್ರ, ಅರಣ್ಯಗಳ ಕಸೂತಿಯಿಂದ ಕೂಡಿದ ವಿಶಾಲವಾದ ರತ್ನಗಂಬಳಿಯನ್ನು ಹಾಸಿದ್ದರು. ಅದು ರಾಷ್ಟ್ರ, ಗೃಹಗಳ ಸಾಲುಗಳು ಮುಂತಾದ ಚಿತ್ರಗಳಿಂದ ಅಲಂಕೃತವಾಗಿತ್ತು, ಆ ದಿವ್ಯ ಶಾಲೆಯು ಭೂಮಿಯಂತೆ ವಿಸ್ತಾರವಾಗಿ ಕಾಣುತ್ತಿತ್ತು. ॥26॥

ಮೂಲಮ್ - 27

ಪರಾರ್ಧ್ಯಾಸ್ತರಣೋಪೇತಾಂ ರಕ್ಷೋಽಧಿಪನಿಷೇವಿತಾಮ್ ।
ಧೂಮ್ರಾಮಗರುಧೂಪೇನ ವಿಮಲಾಂ ಹಂಸಪಾಂಡರಾಮ್ ॥

ಅನುವಾದ

ಅಲ್ಲಿ ಮದಿಸಿದ ಪಕ್ಷಿಗಳು ಕಲ-ಕಲಧ್ವನಿಮಾಡುತ್ತಿದ್ದವು. ದಿವ್ಯಗಂಧಗಳಿಂದ ಆ ಶಾಲೆಯು ಸುವಾಸಿತವಾಗಿತ್ತು. ಅಲ್ಲಿ ಬಹುಮೂಲ್ಯ ರತ್ನಗಂಬಳಿಯನ್ನು ಹಾಸಿದ್ದರು. ರಾಕ್ಷಸಾಧಿಪತಿಯಾದ ರಾವಣನು ಆ ದಿವ್ಯ ಶಾಲೆಯಲ್ಲಿ ವಾಸಮಾಡುತ್ತಿದ್ದನು. ॥27 ॥

ಮೂಲಮ್ - 28

ಚಿತ್ರಾಂ ಪುಷ್ಪೋಪಹಾರೇಣ ಕಲ್ಮಾಷೀಮಿವ ಸುಪ್ರಭಾಮ್ ।
ಮನಃಸಂಹ್ಲಾದಜನನೀಂ ವರ್ಣಸ್ಯಾಪಿ ಪ್ರಸಾದಿನೀಮ್ ॥

ಅನುವಾದ

ಅಗರು ಧೂಪಗಳಿಂದ ಧೂಪಿತವಾದ ಆ ಶಾಲೆಯು ಧೂಮ್ರವರ್ಣದ್ದಾಗಿ ಕಾಣುತ್ತಿತ್ತು. ಆದರೆ ವಾಸ್ತವವಾಗಿ ಹಂಸದಂತೆ ಬಿಳುಪಾಗಿಯೂ, ನಿರ್ಮಲವಾಗಿಯೂ ಇತ್ತು. ಅದು ನಾನಾಬಣ್ಣಗಳ ಪುಷ್ಪಹಾರಗಳಿಂದ ಚಿತ್ರವರ್ಣದಂತೆ ವಿರಾಜಿತವಾಗಿದ್ದು, ಚಿತ್ರ-ವಿಚಿತ್ರ ವರ್ಣಗಳಿಂದ ಶೋಭಿತವಾದ ವಸಿಷ್ಠರ ಧೇನುವಿನಂತೆ* ಸಕಲ ಕಾಮನಾ ವಸ್ತುಗಳನ್ನು ಕೊಡುತ್ತಿದ್ದಿತು.॥28॥

ಟಿಪ್ಪನೀ

*ವಸಿಷ್ಠ ಮಹರ್ಷಿಗಳ ಕಾಮಧೇನುವು ಎಲ್ಲರ ಮನೋರಥಗಳನ್ನು ಈಡೇರಿಸುವಂತೆ ‘‘ಶಬಲ’’ (ಕಲ್ಮಾಷಿ) ವರ್ಣಶೋಭಿತವಾದ ಈ ಭವನವು ಅಲ್ಲಿ ವಾಸಿಸುವರೆಲ್ಲರ ಕೋರಿಕೆಗಳನ್ನು ಈಡೇರಿಸುತ್ತಿತ್ತು.

ಮೂಲಮ್ - 29

ತಾಂ ಶೋಕನಾಶಿನೀಂ ದಿವ್ಯಾಂ ಶ್ರಿಯಃ ಸಂಜನನೀಮಿವ ।
ಇಂದ್ರಿಯಾಣೀಂದ್ರಿಯಾರ್ಥೈಶ್ಚ ಪಂಚ ಪಂಚಭಿರುತ್ತಮೈಃ ॥

ಅನುವಾದ

ಅದು ಒಳ್ಳೆಯ ಪ್ರಭೆಯಿಂದ ರಾರಾಜಿಸುತ್ತಾ ಮನಸ್ಸಿಗೆ ಆಮೋದವನ್ನು ಉಂಟು ಮಾಡುತ್ತಿತ್ತು. ಸುಂದರ ಬಣ್ಣಗಳ ಸೌಂದರ್ಯವನ್ನು ಹೆಚ್ಚಿಸುವಂತ್ತಿತ್ತು. ಎಲ್ಲ ಶೋಕಗಳನ್ನು ಪರಿಹರಿಸುತ್ತಿತ್ತು. ದಿವ್ಯಸಂಪತ್ತಿನ ಉಗಮಸ್ಥಾನವೇ ಆಗಿರುವುದೋ ಎಂಬತ್ತಿದ್ದ ಆ ಶಾಲೆಯನ್ನು ಹನುಮಂತನು ನೋಡಿದನು.॥29॥

ಮೂಲಮ್ - 30

ತರ್ಪಯಾಮಾಸ ಮಾತೇವ ತದಾ ರಾವಣಪಾಲಿತಾ ।
ಸ್ವರ್ಗೋಽಯಂ ದೇವಲೋಕೋಽಯಂ ಇಂದ್ರಸ್ಯೇಯಂ ಪುರೀ ಭವೇತ್ ॥

ಅನುವಾದ

ರಾವಣನಿಂದ ಪಾಲಿತವಾದ ಆ ದಿವ್ಯಶಾಲೆಯು ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ಐದು ಇಂದ್ರಿಯ ವಿಷಯಗಳಿಂದ ಕಿವಿ, ಚರ್ಮ, ಕಣ್ಣು, ನಾಲಿಗೆ, ಮೂಗು ಹೀಗೆ ಹನುಮಂತನ ಐದು ಇಂದ್ರಿಯಗಳನ್ನು ತಾಯಿಯೋಪಾದಿಯಲ್ಲಿ ತೃಪ್ತಿಗೊಳಿಸುತ್ತಿತ್ತು. ಆ ದಿವ್ಯಶಾಲೆಯಲ್ಲಿ ಪಂಚೇಂದ್ರಿಯಗಳಿಗೂ ತೃಪ್ತಿಯುಂಟಾಗುತ್ತಿತ್ತು. ॥30॥

ಮೂಲಮ್ - 31

ಸಿದ್ಧಿರ್ವೇಯಂ ಪರಾ ಹಿ ಸ್ಯಾತ್ ಇತ್ಯಮನ್ಯತ ಮಾರುತಿಃ ।
ಪ್ರಧ್ಯಾಯತ ಇವಾಪಶ್ಯತ್ ಪ್ರದೀಪಾಂಸ್ತತ್ರ ಕಾಂಚನಾನ್ ॥

ಅನುವಾದ

ಅಂತಹ ದಿವ್ಯಶಾಲೆಯನ್ನು ಅದರ ಅನುಪಮವಾದ ಸೌಂದರ್ಯವನ್ನು ನೋಡಿ ಮಾರುತಿಯು - ‘‘ಇದು ನಿಶ್ಚಯವಾಗಿಯೂ ಎಲ್ಲರೂ ಪಡೆಯುವ ಸ್ವರ್ಗಲೋಕವೇ ಸರಿ. ದೇವತೆಗಳು ವಾಸಿಸುವ ದೇವಲೋಕವಾದರೂ ಇರಬಹುದು. ಅಥವಾ ಇಂದ್ರನ ಅಮರಾವತಿಯಿರಬಹುದೇ? ಅದಕ್ಕಿಂತಲೂ ಮಿಗಿಲಾದ ತಪಸ್ಸಿದ್ಧಿರೂಪವಾದ ಲೋಕವೇ ಆಗಿರಬಹುದು’’ ಎಂದುಕೊಂಡನು. ॥31॥

ಮೂಲಮ್ - 32

ಧೂರ್ತಾನಿವ ಮಹಾಧೂರ್ತೈಃ ದೇವನೇನ ಪರಾಜಿತಾನ್ ।
ದೀಪಾನಾಂ ಚ ಪ್ರಕಾಶೇನ ತೇಜಸಾ ರಾವಣಸ್ಯ ಚ ॥

ಮೂಲಮ್ - 33

ಅರ್ಚಿರ್ಭಿರ್ಭೂಷಣಾನಾಂ ಚ ಪ್ರದೀಪ್ತೇವಾಭ್ಯಮನ್ಯತ ।
ತತೋಽಪಶ್ಯತ್ ಕುಥಾಸೀನಂ ನಾನಾವರ್ಣಾಂಬರಸ್ರಜಮ್ ॥

ಅನುವಾದ

ಸುವರ್ಣಮಯವಾದ ದೀಪಸ್ತಂಭಗಳಲ್ಲಿ ಅಲ್ಲಾಡದೆ ಉರಿಯುತ್ತಿದ್ದ ಮಣಿದೀಪಗಳ ಸಾಲುಗಳನ್ನು ಹನುಮಂತನು ನೋಡಿದನು. ಜೂಜಿನಲ್ಲಿ ಮಹಾಧೂರ್ತರಿಂದ ಪರಾಜಿತರಾಗಿ ಚಿಂತಾಮಗ್ನರಾಗಿ (ಧ್ಯಾನಮಗ್ನರಾಗಿ) ಕುಳಿತಿರುವ ಸಾಧಾರಣ ಧೂರ್ತರಂತೆ ಅವು ಕಾಣುತ್ತಿದ್ದವು. ಆದರೆ ಆ ದೀಪಗಳು ರಾವಣನ ದಿವ್ಯತೇಜಸ್ಸಿನ ಮುಂದೆ ಮಸಕು-ಮಸಕಾಗಿ ಕಾಣುತ್ತಿದ್ದವು. ದೀಪಗಳ ಪ್ರಕಾಶದಿಂದಲೂ ರಾವಣನ ತೇಜಸ್ಸಿನಿಂದಲೂ, ಆಭರಣಗಳ ಕಾಂತಿಯಿಂದಲೂ ಆ ದಿವ್ಯ ಶಾಲೆಯು ಜಾಜ್ವಲ್ಯಮಾನವಾಗಿದೆಯೋ ಎಂಬಂತೆ ಹನುಮಂತನಿಗೆ ಭಾಸವಾಯಿತು. ॥32-33॥

ಮೂಲಮ್ - 34

ಸಹಸ್ರಂ ವರನಾರೀಣಾಂ ನಾನಾವೇಷವಿಭೂಷಿತಮ್ ।
ಪರಿವೃತ್ತೇಽರ್ಧರಾತ್ರೇ ತು ಪಾನನಿದ್ರಾವಶಂಗತಮ್ ॥

ಅನುವಾದ

ಅನಂತರ ಮಾರುತಿಯು ಆ ದಿವ್ಯಶಾಲೆಯಲ್ಲಿ ಸಾವಿರಾರು ಉತ್ತಮ ಸುಂದರ ಸ್ತ್ರೀಯರನ್ನು ನೋಡಿದನು. ಅವರೆಲ್ಲರೂ ರತ್ನಗಂಬಳಿಗಳ ಮೇಲೆ ಕುಳಿತ್ತಿದ್ದು, ಬಗೆ-ಬಗೆಯ ಬಣ್ಣಗಳ ವಸ್ತ್ರಗಳನ್ನು, ಮಾಲೆಗಳನ್ನು ಧರಿಸಿದ್ದರು. ನಾನಾವಿಧವಾದ ವೇಷ-ಭೂಷಣಗಳಿಂದ ಸಮಲಂಕೃತರಾಗಿದ್ದರು. ಅವರಲ್ಲಿ ಕೆಲವರು ಅರ್ಧರಾತ್ರಿಯವರೆಗೆ ಕ್ರೀಡಾದಿಗಳಿಂದ ವಿರತರಾಗಿ ಮಧುಪಾನ ಮತ್ತರಾಗಿ ತೂರಾಡುತ್ತಿದ್ದರು. ॥34॥

ಮೂಲಮ್ - 35

ಕ್ರೀಡಿತ್ವೋಪರತಂ ರಾತ್ರೌ ಪ್ರಸುಪ್ತಂ ಬಲವತ್ತದಾ ।
ತತ್ ಪ್ರಸುಪ್ತಂ ವಿರುರುಚೇ ನಿಃಶಬ್ದಾಂತರಭೂಷಣಮ್ ॥

ಮೂಲಮ್ - 36

ನಿಃಶಬ್ದ ಹಂಸಭ್ರಮರಂ ಯಥಾ ಪದ್ಮವನಂ ಮಹತ್ ।
ತಾಸಾಂ ಸಂವೃತದಂತಾನಿ ಮೀಲಿತಾಕ್ಷೀಣಿ ಮಾರುತಿಃ ॥

ಅನುವಾದ

ಕ್ರೀಡೆಯ ಆಯಾಸದಿಂದಲೂ, ಮಧುಪಾನದಿಂದಲೂ ಅವರು ಬಲವಂತವಾಗಿ ನಿದ್ರಾದೇವಿಯನ್ನು ಆಲಿಂಗಿಸಬೇಕಾಯಿತು. ನಿದ್ರಾಮುದ್ರಿತರಾದ ನಾರಿಯರ ಕಾಲಂದುಗೆ, ಗೊಲಸು, ಓಡ್ಯಾಣ ಇವೇ ಮುಂತಾದ ಆಭರಣಗಳು ನಿಶ್ಚಲವಾಗಿದ್ದರಿಂದ ಅಲ್ಲಿ ನಿಶ್ಶಬ್ದವು ತಾಂಡವವಾಡುತ್ತಿತ್ತು. ಅದನ್ನು ನೋಡಿದರೆ ಹಂಸಗಳಿಂದಲೂ, ದುಂಬಿಗಳಿಂದಲೂ ಕೂಡಿದ ಶಾಂತವಾದ ಪದ್ಮಸರೋವರದಂತೆ ಕಂಗೊಳಿಸುತ್ತಿತ್ತು. ಮಲಗಿದ್ದ ಸಮಯದಲ್ಲಿ ಆ ಸ್ತ್ರೀಯರೆಲ್ಲರ ತುಟಿಗಳು, ಕಣ್ಣುಗಳು ಮುಚ್ಚಿದ್ದವು. ಅವರ ಮುಖಗಳು ಸುಗಂಧಯುಕ್ತವಾಗಿದ್ದು ಪದ್ಮಗಳಂತೆ ಪ್ರಕಾಶಿಸುತ್ತಿರುವ ಸ್ತ್ರೀಯರನ್ನು ಹನುಮಂತನು ನೋಡಿದನು. ॥35-36॥

ಮೂಲಮ್ - 37

ಅಪಶ್ಯತ್ ಪದ್ಮಗಂಧೀನಿ ವದನಾನಿ ಸುಯೋಷಿತಾಮ್ ।
ಪ್ರಬುದ್ಧಾನೀವ ಪದ್ಮಾನಿ ತಾಸಾಂ ಭೂತ್ವಾ ಕ್ಷಪಾಕ್ಷಯೇ ॥

ಅನುವಾದ

‘‘ಆ ರಾಕ್ಷಸ ಸ್ತ್ರೀಯರ ಮುಖಗಳು ಹಗಲಿನಲ್ಲಿ ವಿಕಸಿತವಾದ ಪದ್ಮಗಳಂತೆ ಇದ್ದವು. ಆದರೆ ಆಗ ರಾತ್ರಿಯಾಗುತ್ತಲೇ ಮುಕುಳಿತವಾದ ಪದ್ಮಗಳಂತೆ ಒಪ್ಪುತ್ತಿದ್ದವು. ॥37॥

ಮೂಲಮ್ - 38

ಪುನಃ ಸಂವೃತಪತ್ರಾಣಿ ರಾತ್ರಾವಿವ ಬಭುಸ್ತದಾ ।
ಇಮಾನಿ ಮುಖಪದ್ಮಾನಿ ನಿಯತಂ ಮತ್ತಷಟ್ಪದಾಃ ॥

ಮೂಲಮ್ - 39

ಅಂಬುಜಾನೀವ ಫುಲ್ಲಾನಿ ಪ್ರಾರ್ಥಯಂತಿ ಪುನಃ ಪುನಃ ।
ಇತಿ ಚಾಮನ್ಯತ ಶ್ರೀಮಾನ್ ಉಪಪತ್ತ್ಯಾ ಮಾಹಾಕಪಿಃ ॥

ಮೂಲಮ್ - 40

ಮೇನೇ ಹಿ ಗುಣತಸ್ತಾನಿ ಸಮಾನಿ ಸಲಿಲೋದ್ಭವೈಃ ।
ಸಾ ತಸ್ಯ ಶುಶುಭೇ ಶಾಲಾ ತಾಭಿಃ ಸ್ತ್ರೀಭಿರ್ವಿರಾಜಿತಾ ॥

ಅನುವಾದ

ಮದಿಸಿದ ದುಂಬಿಗಳಿಂದ ಕೂಡಿದ ಪದ್ಮಸರೋವರಕ್ಕೂ, ದಿವ್ಯ ಶಾಲೆಯಲ್ಲಿದ್ದ ವರಸ್ತ್ರೀಯರ ಮುಖಪದ್ಮಗಳಿಗೂ ವ್ಯತ್ಯಾಸವೇ ಗೊತ್ತಾಗುತ್ತಿರಲಿಲ್ಲ. ಮದಿಸಿದ ದುಂಬಿಗಳು ಅರಳಿದ ಕಮಫಲಗಳನ್ನು ನಿತ್ಯವೂ ಆಶಿಸುವಂತೆ, ಉತ್ತಮ ಸ್ತ್ರೀಯರ ಆ ಮುಖ ಪದ್ಮಗಳು ರಸಾಸ್ವಾದನೆಗಾಗಿ ಅಭಿಲಾಷಿಸುವಂತಿತ್ತು. ಸರ್ವಶುಭಲಕ್ಷಣಗಳಿಂದ ಒಪ್ಪುತ್ತಿದ್ದ ಆ ಮಹಾಕಪಿಯು ಹೀಗೆ ಯುಕ್ತಿ-ಯುಕ್ತವಾಗಿ ಆಲೋಚಿಸಿ ಸೌಭರಾದಿ ಗುಣಸಾಮ್ಯದಿಂದ ತಟಸ್ಥಭಾವದಿಂದ ನೋಡುತ್ತಿರುವ ಅವನಿಗೆ ಆ ಸ್ತ್ರೀಯರ ಮುಖಗಳು ಕಮಲಕ್ಕೆ ಸಮಾನವೆಂದೇ ಕಂಡುಬಂದಿತು.॥38-40॥

ಮೂಲಮ್ - 41

ಶಾರದೀವ ಪ್ರಸನ್ನಾ ದ್ಯೌಸ್ತಾರಾಭಿರಭಿಶೋಭಿತಾ ।
ಸ ಚ ತಾಭಿಃ ಪರಿವೃತಃ ಶುಶುಭೇ ರಾಕ್ಷಸಾಧಿಪಃ ॥

ಅನುವಾದ

ಅಂತಹ ಭಾಮಿನಿಯರಿಂದ ವಿರಾಜಿಸುತ್ತಿದ್ದ ರಾವಣನ ಆ ಭವ್ಯಶಾಲೆಯು ನಕ್ಷತ್ರಗಳಂತೆ ಶೋಭಿಸುತ್ತಿತ್ತು. ಆ ದಿವ್ಯ ಶಾಲೆಯು ತಾರೆಗಳಿಂದ ಶೋಭಿಸುವ ಶರತ್ಕಾಲದ ನಿರ್ಮಲಾಕಾಶದಂತೆ ವಿರಾಜಿಸುತ್ತಿತ್ತು.॥41॥

ಮೂಲಮ್ - 42

ಯಥಾಹ್ಯುಡುಪತಿಃ ಶ್ರೀಮಾನ್ಸ್ತಾರಾಭಿರಭಿಸಂವೃತಃ ।
ಯಾಶ್ಚ್ಯವಂತೇಂಬರಾತ್ತಾರಾಃ ಪುಣ್ಯಶೇಷಸಮಾವೃತಾಃ ॥

ಅನುವಾದ

ತರುಣೀಮಣಿಗಳಿಂದ ಪರಿವೇಷ್ಟಿತವಾದ ರಾವಣೇಶ್ವರನು ನಕ್ಷತ್ರಗಳಿಂದ ಪರಿವೃತವಾದ ಕಳಾನಿಧಿ ಚಂದ್ರನಂತೆ ಪ್ರಕಾಶಿಸುತ್ತಿದ್ದನು.॥42॥

ಮೂಲಮ್ - 43

ಇಮಾಸ್ತಾಃ ಸಂಗತಾಃ ಕೃತ್ಸ್ನಾ ಇತಿ ಮೇನೇ ಹರಿಸ್ತದಾ ।
ತಾರಾಣಾಮಿವ ಸುವ್ಯಕ್ತಂ ಮಹತೀನಾಂ ಶುಭಾರ್ಚಿಷಾಮ್ ॥

ಅನುವಾದ

ಸೌಂದರ್ಯದ ಖನಿಯಂತಿದ್ದ ಆ ಸ್ತ್ರೀಸಮೂಹವನ್ನು ನೋಡಿ, ಸ್ವರ್ಗಭೋಗಗಳನ್ನು ಅನುಭವಿಸಿ ಮಿಕ್ಕ ಪುಣ್ಯಶೇಷದಿಂದ ಭೂಲೋಕಕ್ಕಿಳಿದ ಎಲ್ಲ ತಾರೆಗಳು ಒಟ್ಟಾಗಿ ಈ ದಿವ್ಯಶಾಲೆಯಲ್ಲಿ ಸೇರಿಕೊಂಡಿರುವೆಯೋ ಎಂದು ಮಾರುತಿಯು ಭಾವಿಸಿದನು.॥43॥

ಮೂಲಮ್ - 44

ಪ್ರಭಾ ವರ್ಣಪ್ರಸಾದಾಶ್ಚ ವಿರೇಜುಸ್ತತ್ರ ಯೋಷಿತಾಮ್ ।
ವ್ಯಾವೃತ್ತ ಗುರುಪೀನಸ್ರಕ್ ಪ್ರಕೀರ್ಣವರಭೂಷಣಾಃ ॥

ಅನುವಾದ

ರಾತ್ರಿಯ ನಿರ್ಮಲಾಕಾಶದಲ್ಲಿದ್ದ ಮಹಾನಕ್ಷತ್ರಗಳು ಉಜ್ವಲತೆ, ಕಾಂತಿ, ಶುಭ್ರತೆಗಳಿಂದ ಹೊಳೆಯುತ್ತಿರುವಂತೆ, ರಾವಣನ ಆ ದಿವ್ಯ ಶಾಲೆಯಲ್ಲಿದ್ದ ಶುಭಕರ ರಮಣೀಯರ ದೇಹಗಳ ಕಾಂತಿಯು, ರೂಪಗಳೂ, ಪ್ರಸನ್ನತೆಗಳೂ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು. ಆ ದಿವ್ಯ ಶಾಲೆಯಲ್ಲಿದ್ದ ನಾರೀಮಣಿಗಳು ಮಧುಪಾನಾನಂತರ ರಾವಣನನ್ನು ಸಂತೋಷಪಡಿಸಲು, ನೃತ್ಯ-ಗೀತ-ಕ್ರೀಡೆಗಳಲ್ಲಿ ಆಸಕ್ತರಾಗಿದ್ದಾಗ ಅವರ ತಲೆಗೂದಲುಗಳು ಕೆದರಿಹೋಗಿತ್ತು. ಹಾರಗಳು ಅಸ್ತವ್ಯಸ್ತವಾಗಿದ್ದವು. ಆಭರಣಗಳು ಚೆಲ್ಲಾಪಿಲ್ಲಿಯಾಗಿ ಹೋಗಿದ್ದವು. ॥44॥

ಮೂಲಮ್ - 45

ಪಾನವ್ಯಾಯಾಮಕಾಲೇಷು ನಿದ್ರಾಪಹೃತಚೇತಸಃ ।
ವ್ಯಾವೃತ್ತತಿಲಕಾಃ ಕಾಶ್ಚಿತ್ ಕಾಶ್ಚಿದುದ್ಭ್ರಾಂತನೂಪುರಾಃ ॥

ಮೂಲಮ್ - 46

ಪಾರ್ಶ್ವೇ ಗಲಿತಹಾರಾಶ್ಚ ಕಾಶ್ಚಿತ್ ಪರಮಯೋಷಿತಃ ।
ಮುಕ್ತಾಹಾರಾವೃತಾಶ್ಚಾನ್ಯಾಃ ಕಾಶ್ಚಿದ್ವಿಸ್ರಸ್ತವಾಸಸಃ ॥

ಮೂಲಮ್ - 47

ವ್ಯಾವಿದ್ಧರಶನಾದಾಮಾಃ ಕಿಶೋರ್ಯ ಇವ ವಾಹಿತಾಃ ।
ಸುಕುಂಡಲಧರಾಶ್ಚಾನ್ಯಾ ವಿಚ್ಛಿನ್ನ ಮೃದಿತಸ್ರಜಃ ॥

ಮೂಲಮ್ - 48

ಗಜೇಂದ್ರಮೃದಿತಾಃ ಫುಲ್ಲಾ ಲತಾ ಇವ ಮಹಾವನೇ ।
ಚಂದ್ರಾಂಶುಕಿರಣಾಭಾಶ್ಚ ಹಾರಾಃ ಕಾಸಾಂಚಿದುತ್ಕಟಾಃ ॥

ಅನುವಾದ

ಮಧುಪಾನದಿಂದ ಮತ್ತು ಆಯಾಸದಿಂದ ಪ್ರಮತ್ತರಾಗಿ ನಿದ್ರೆಯಿಂದ ಜ್ಞಾನಶೂನ್ಯರಾಗಿದ್ದರು. ಅಲ್ಲಿದ್ದ ಸಾವಿರಾರು ವರನಾರಿಯರಲ್ಲಿ ಕೆಲವರ ಹಣೆಯ ಕಸ್ತೂರೀ, ಸಿಂಧೂರಾದಿ ತಿಲಕಗಳು ಅಳಿಸಿಹೋಗಿದ್ದವು. ಕೆಲವರ ಕಾಲಂದುಗೆಗಳು ಕಳಚಿಬಿದ್ದಿದ್ದವು. ಕೆಲವರ ಕಂಠಹಾರಗಳು ಕಳಚಿ ಪಕ್ಕಕ್ಕೆ ಬಿದ್ದಿದ್ದವು. ಕೆಲವರ ಮುತ್ತಿನಹಾರಗಳು ಕಡಿದು ಹೋಗಿದ್ದವು. ಕೆಲವರ ವಸ್ತ್ರಗಳು ಸಡಿಲವಾಗಿದ್ದವು. ಒಡ್ಯಾಣಗಳು ಕಳಚಿಬಿದ್ದಿದ್ದವು. ಅವರೆಲ್ಲರೂ ರಥವನ್ನೆಳೆದ ಹೆಣ್ಣುಕುದುರೆ ಮರಿಗಳು ರಥದಿಂದ ಬಿಚ್ಚಿದೊಡನೆ ಶ್ರಮಪರಿಹಾರಕ್ಕಾಗಿ ಕಾಲುಗಳನ್ನು ಅಸ್ತವ್ಯಸ್ತವಾಗಿ ಚೆಲ್ಲಿ ಮಲಗಿಬಿಡುವಂತೆ ಆ ವರನಾರಿಯರು ಅಸ್ತವ್ಯಸ್ತವಾಗಿ ಮಲಗಿದ್ದರು. ಕೆಲವರು ಅಂದವಾದ ಕುಂಡಲಗಳನ್ನು ಧರಿಸಿದ್ದರು. ಕೆಲವು ತರುಣೀ ಮಣಿಗಳು ಧರಿಸಿದ್ದ ಪುಷ್ಪಮಾಲಿಕೆಗಳು ಕಡಿದುಬಿದ್ದು ಮರ್ದಿತವಾಗಿದ್ದವು. ಆಗ ಅವರು ಮಹಾವನದಲ್ಲಿ ಗಜೇಂದ್ರನಿಂದ ತುಳಿಯಲ್ಪಟ್ಟ ಚೆನ್ನಾಗಿ ವಿಕಸಿತವಾದ ಲತೆಗಳಂತೆ ಕಾಣುತ್ತಿದ್ದರು.॥45-48॥

ಮೂಲಮ್ - 49

ಹಂಸಾ ಇವ ಬಭುಃ ಸುಪ್ತಾಃ ಸ್ತನಮಧ್ಯೇಷು ಯೋಷಿತಾಮ್ ।
ಅಪರಾಸಾಂ ಚ ವೈಡೂರ್ಯಾಃ ಕಾದಂಬಾ ಇವ ಪಕ್ಷಿಣಃ ॥

ಅನುವಾದ

ಕೆಲವು ಮಂದಿ ಸ್ತ್ರೀಯರ ಸ್ತನಗಳ ಮಧ್ಯದಲ್ಲಿ ತೊಟ್ಟಿದ್ದ ಮುತ್ತಿನ ಹಾರಗಳು ಸೂರ್ಯ-ಚಂದ್ರಕಿರಣಗಳಂತೆ ಆಹ್ಲಾದಕರವಾದ ಪ್ರಭೆಯಿಂದ ಕೂಡಿದ್ದು ಮಿರ-ಮಿರನೆ ಹೊಳೆಯುತ್ತಿದ್ದರು. ಅವು ಮಲಗಿದ್ದ ಶ್ರೇಷ್ಠಹಂಸಗಳಂತೆ ಕಾಣುತ್ತಿದ್ದವು.॥49॥

ಮೂಲಮ್ - 50

ಹೇಮಸೂತ್ರಾಣಿ ಚಾನ್ಯಾಸಾಂ ಚಕ್ರವಾಕಾ ಇವಾಭವನ್ ।
ಹಂಸಕಾರಂಡವಾಕೀರ್ಣಾಶ್ಚಕ್ರವಾಕೋಪಶೋಭಿತಾಃ ॥

ಅನುವಾದ

ಮತ್ತೆ ಕೆಲವು ಕಾಂತೆಯರ ಎದೆಯ ಮೇಲೆ ಧರಿಸಿದ್ದ ವೈಡೂರ್ಯ ಮಣಿಮಾಲೆಗಳು ಕಲಹಂಸಗಳಂತೆ ಇದ್ದವು. ಇನ್ನೂ ಕೆಲವು ತರುಣಿಯರ ಸ್ತನಗಳ ಮಧ್ಯದಲ್ಲಿ ಎದ್ದು ಕಾಣುತ್ತಿದ್ದ ಹೇಮ ಸೂತ್ರಗಳು ಚಕ್ರವಾಕ ಪಕ್ಷಿಗಳಂತೆ ಕಾಣುತ್ತಿದ್ದವು. ॥50॥

ಮೂಲಮ್ - 51

ಆಪಗಾ ಇವ ತಾ ರೇಜುಃ ಜಘನೈಃ ಪುಲಿನೈರಿವ ।
ಕಿಂಕಿಣೀಜಾಲಸಂಕೋಶಾಃ ತಾಹೈಮವಿಪುಲಾಂಬುಜಾಃ ॥

ಅನುವಾದ

ಮತ್ತೆ ಕೆಲವು ಕಾಂತೆಯರ ಎದೆಯ ಮೇಲೆ ಧರಿಸಿದ್ದ ವೈಡೂರ್ಯ ಮಣಿಮಾಲೆಗಳು ಕಲಹಂಸಗಳಂತೆ ಇದ್ದವು. ಇನ್ನೂ ಕೆಲವು ತರುಣಿಯರ ಸ್ತನಗಳ ಮಧ್ಯದಲ್ಲಿ ಎದ್ದು ಕಾಣುತ್ತಿದ್ದ ಹೇಮ ಸೂತ್ರಗಳು ಚಕ್ರವಾಕ ಪಕ್ಷಿಗಳಂತೆ ಕಾಣುತ್ತಿದ್ದವು. ॥50॥

ಮೂಲಮ್ - 52

ಭಾವಗ್ರಾಹಾ ಯಶಸ್ತೀರಾಃ ಸುಪ್ತಾ ನದ್ಯ ಇವಾಬಭುಃ ।
ಮೃದುಷ್ವಂಗೇಷು ಕಾಸಾಂಚಿತ್ ಕುಚಾಗ್ರೇಷು ಚ ಸಂಸ್ಥಿತಾಃ ॥

ಅನುವಾದ

ಅವರು ಕಾಲಲ್ಲಿ ತೊಟ್ಟಿದ್ದ ಕಿರುಗೆಜ್ಜೆಗಳೇ ಕಮಲದ ಮೊಗ್ಗಿನಂತಿದ್ದವು. ಸುವರ್ಣಾಭರಣಗಳು ನದಿಯಲ್ಲಿರುವ ಕಮಲಗಳಂತಿದ್ದವು. ಅವರು ನಿದ್ದೆಯಲ್ಲಿಯೂ ವಾಸನಾಬಲದಿಂದ ಮಾಡುತ್ತಿದ್ದ ಶಂಗಾರ ಚೇಷ್ಟೆಗಳು ಮೊಸಳೆಗಳಂತ್ತಿದ್ದವು. ಅವರ ದೇಹಕಾಂತಿಯು ನದಿಯ ತೀರಗಳಂತೆ ಇದ್ದವು. ॥52॥

ಮೂಲಮ್ - 53

ಬಭೂವುರ್ಭೂಷಣಾನೀವ ಶುಭಾ ಭೂಷಣರಾಜಯಃ ।
ಅಂಶುಕಾಂತಾಶ್ಚ ಕಾಸಾಂಚಿತ್ ಮಖಮಾರುತಕಂಪಿತಾಃ ॥

ಮೂಲಮ್ - 54

ಉಪರ್ಯುಪರಿ ವಕ್ತ್ರಾಣಾಂ ವ್ಯಾಧೂಯಂತೇ ಪುನಃ ಪುನಃ ।
ತಾಃ ಪತಾಕಾ ಇವೋದ್ಧೂತಾ ಪತ್ನೀನಾಂ ರುಚಿರಪ್ರಭಾಃ ॥

ಮೂಲಮ್ - 55

ನಾನಾವರ್ಣ ಸುವರ್ಣಾನಾಂ ವಕ್ತ್ರಮೂಲೇಷು ರೇಜಿರೇ ।
ವವಲ್ಗುಶ್ಚಾತ್ರ ಕಾಸಾಂಚಿತ್ ಕುಂಡಲಾನಿ ಶುಭಾರ್ಚಿಷಾಮ್ ॥

ಮೂಲಮ್ - 56

ಮುಖಮಾರುತಸಂಪರ್ಕಾತ್ ಮಂದಂ ಮಂದಂ ಸುಯೋಷಿತಾಮ್ ।
ಶರ್ಕರಾಸವಗಂಧೈಶ್ಚ ಪ್ರಕೃತ್ಯಾ ಸುರಭಿಃ ಸುಖಃ ॥

ಮೂಲಮ್ - 57

ತಾಸಾಂ ವದನನಿಃಶ್ವಾಸಃ ಸಿಷೇವೇ ರಾವಣಂ ತದಾ ।
ರಾವಣಾನನಸಂಕಾಶ್ಚ ಕಾಶ್ಚಿದ್ರಾವಣಯೋಷಿತಃ ॥

ಮೂಲಮ್ - 58

ಮುಖಾನಿ ಸ್ಮ ಸಪತ್ನೀನಾಮುಪಾಜಿಘ್ರನ್ ಪುನಃ ಪುನಃ ।
ಅತ್ಯರ್ಥಂ ಸಕ್ತಮನಸೋ ರಾವಣೇ ತಾ ವರಸ್ತ್ರಿಯಃ ॥

ಅನುವಾದ

ಕೆಲವು ಸ್ತ್ರೀಯರ ಮೃದುವಾದ ಅಂಗಗಳಲ್ಲಿಯೂ, ಸ್ತನಭಾಗಗಳಲ್ಲಿಯೂ ಧರಿಸಿದ್ದ ಆಭರಣಗಳ ಗುರ್ತುಗಳು (ಅವುಗಳು ಒತ್ತುವಿಕೆಯಿಂದ) ಆಭರಣಗಳಂತೆ ಚೆನ್ನಾಗಿ ಮೂಡಿದ್ದವು. ಕೆಲವು ಸ್ತ್ರೀಯರ ಮುಖಗಳು ತಮ್ಮ ಸೆರಗುಗಳಿಂದ ಮುಚ್ಚಿಹೋಗಿದ್ದವು. ಅವು ಬಾಯಿಂದ ಹೊರಬರುತ್ತಿದ್ದ ಉಸಿರಿನ ಗಾಳಿಯಿಂದ ಮೇಲೆ ಕೆಳಗೆ ಹಾರಾಡುತ್ತಿದ್ದವು. ಆ ರಾವಣನ ಸ್ತ್ರೀಯರು ಉಟ್ಟಿದ್ದ ಸುಂದರವಾದ ರೂಪುಗಳಿಂದಲೂ, ಶೋಭಾಯಮಾನವಾದ ನಾನಾವರ್ಣಗಳಿಂದಲೂ, ಪರಿಶೋಭಿಸುತ್ತಿದ್ದ ಸೀರೆಗಳ ಸೆರಗುಗಳು ನಿಃಶ್ವಾಸದಿಂದ ಧ್ವಜಪಟಗಳಂತೆ ಹಾರಾಡುತ್ತಾ ಪ್ರಕಾಶಿಸುತ್ತಿದ್ದವು. ಮನೋಹರವಾದ ಕಾಂತಿಯಿಂದ ಕೂಡಿದ್ದ ಕೆಲವು ಸ್ತ್ರೀಯರ ಕುಂಡಲಗಳು ಅವರ ಮುಖಗಳಿಂದ ಬರುತ್ತಿದ್ದ ಉಸುರಿನ ಗಾಳಿಯ ಸಂಸರ್ಗದಿಂದ ಮೆಲ್ಲ-ಮೆಲ್ಲನೇ ಕುಣಿದಾಡುತ್ತಿದ್ದವು. ಸುಂದರ ಸ್ತ್ರೀಯರ ಮುಖದಿಂದ ಸಹಜವಾಗಿ ಹೊರಬರುತ್ತಿದ್ದ ಸುಖಕರ, ಸುಗಂಧಯುಕ್ತ ನಿಃಶ್ವಾಸವು ಸಕ್ಕರೆಯಿಂದ ತಯಾರಿಸಿದ ಆಸವಗಂಧದಂತೆ ಇದ್ದು ಅದು ಸುಖದಾಯಕವಾಗಿ ರಾವಣನನ್ನು ಸೇವಿಸುತ್ತಿತ್ತು. (ರಾವಣನನ್ನು ಚುಂಬಿಸುತ್ತಿದ್ದರು.) ರಾವಣನ ಕೆಲವು ಮಡದಿಯರು ಪಾನಮತ್ತರಾಗಿ ತಮ್ಮ ಜೊತೆಯಲ್ಲಿ ಮಲಗಿದ್ದ ಸವತಿಯರ ಮುಖಗಳನ್ನೇ ರಾವಣನ ಮುಖವೆಂದು ಭ್ರಮಿಸಿ ಪುನಃ-ಪುನಃ ಆಘ್ರಾಣಿಸುತ್ತಿದ್ದರು. (ಚುಂಬಿಸುತ್ತಿದ್ದರು.) ॥53-58॥

ಮೂಲಮ್ - 59

ಅಸ್ವತಂತ್ರಾಃ ಸಪತ್ನೀನಾಂ ಪ್ರಿಯಮೇವಾಚರಂಸ್ತದಾ ।
ಬಾಹೂನುಪನಿಧಾಯಾನ್ಯಾಃ ಪಾರಿಹಾರ್ಯವಿಭೂಷಿತಾನ್ ॥

ಅನುವಾದ

ರಾವಣನಲ್ಲೇ ಅತ್ಯಾಸಕ್ತರಾಗಿದ್ದ ಮನಸ್ಸುಳ್ಳ ತರುಣೀಮಣಿಗಳು ಮಧುಪಾನದಿಂದ ಪರವಶರಾಗಿ ರಾವಣನೇ ತಮ್ಮನ್ನು ಮುದ್ದಾಡುತ್ತಿರುವನೆಂದು ಭಾವಿಸಿ ಅವರು ಸವತಿಯರನ್ನೇ ಸಂತಸದಿಂದ ಅಪ್ಪಿಕೊಳ್ಳುತ್ತಿದ್ದರು.॥59॥

ಮೂಲಮ್ - 60

ಅಂಶುಕಾನಿ ಚ ರಮ್ಯಾಣಿ ಪ್ರಮದಾಸ್ತತ್ರ ಶಿಶ್ಶಿರೇ ।
ಅನ್ಯಾ ವಕ್ಷಸಿ ಚಾನ್ಯಸ್ಯಾಸ್ತಸ್ಯಾಃ ಕಾಶ್ಚಿತ್ ಪುನರ್ಭುಜಮ್ ॥

ಅನುವಾದ

ಕೆಲವು ಪ್ರಮದೆಯರು ಕಡಗಗಳಿಂದ ಸಮಲಂಕೃತವಾದ ತೋಳುಗಳನ್ನು, ರಮ್ಯವಾದ ವಸ್ತ್ರಗಳನ್ನು ತಲೆದಿಂಬುಗಳಾಗಿಸಿಕೊಂಡು ಮಲಗಿದ್ದರು. ॥60॥

ಮೂಲಮ್ - 61

ಅಪರಾ ತ್ವಂಕಮನ್ಯಸ್ಯಾಸ್ತಸ್ಯಾಶ್ಚಾಪ್ಯಪರಾ ಭುಜೌ ।
ಊರುಪಾರ್ಶ್ವಕಟೀಪೃಷ್ಠಂ ಅನ್ಯೋನ್ಯಸ್ಯ ಸಮಾಶ್ರಿತಾಃ ॥

ಅನುವಾದ

ಓರ್ವಳು ಮತ್ತೊಬ್ಬಳ ವಕ್ಷಸ್ಥಳದಲ್ಲಿ ತಲೆಯನ್ನಿಟ್ಟುಕೊಂಡು ಮಲಗಿದ್ದಳು. ಮತ್ತೊಬ್ಬಳು ಬೇರೊಬ್ಬಳ ತೊಡೆಯನ್ನೇ ದಿಂಬಾಗಿಸಿಕೊಂಡು ಮಲಗಿದ್ದಳು. ಇನ್ನೋರ್ವ ಸುಂದರಿಯು ಸವತಿಯ ಭುಜದ ಮೇಲೆ ತಲೆಯನ್ನಿಟ್ಟು ಮಲಗಿದ್ದಳು. ॥61॥

ಮೂಲಮ್ - 62

ಪರಸ್ಪರನಿವಿಷ್ಟಾಂಗ್ಯೋ ಮದಸ್ನೇಹವಶಾನುಗಾಃ ।
ಅನ್ಯೋನ್ಯಸ್ಯಾಂಗಸಂಸ್ಪರ್ಶಾತ್ ಪ್ರೀಯಮಾಣಾಃ ಸುಮಧ್ಯಮಾಃ ॥

ಅನುವಾದ

ಮಧುಪಾನದಿಂದ ಮತ್ತರಾಗಿ, ಸ್ನೇಹವಶರಾಗಿದ್ದ ಆ ವರಸ್ತ್ರೀಯರು ಪರಸ್ಪರವಾಗಿ ಒಬ್ಬಳು ಮತ್ತೊಬ್ಬಳ ತೊಡೆಗಳನ್ನೂ, ಪಾರ್ಶ್ವಗಳನ್ನೂ, ಕಟಿ ಪ್ರದೇಶವನ್ನೂ, ಪೃಷ್ಠಭಾಗಗಳನ್ನೂ ಆಶ್ರಯಿಸಿ, ಒಬ್ಬಳ ಅಂಗಗಳನ್ನು ಮತ್ತೊಬ್ಬಳ ಅಂಗಗಳ ಮೇಲಿಟ್ಟುಕೊಂಡು ಮಲಗಿದ್ದರು. ॥62॥

ಮೂಲಮ್ - 63

ಏಕೀಕೃತಭುಜಾಃ ಸರ್ವಾಃ ಸುಷುಪುಸ್ತತ್ರ ಯೋಷಿತಃ ।
ಅನ್ಯೋನ್ಯಭುಜಸೂತ್ರೇಣ ಸ್ತ್ರೀಮಾಲಾ ಗ್ರಥಿತಾ ಹಿ ಸಾ ॥

ಮೂಲಮ್ - 64

ಮಾಲೇವ ಗ್ರಥಿತಾ ಸೂತ್ರೇ ಶುಶುಭೇ ಮತ್ತಷಟ್ಪದಾ ।
ಲತಾನಾಂ ಮಾಧವೇ ಮಾಸಿ ಫುಲ್ಲಾನಾಂ ವಾಯುಸೇವನಾತ್ ॥

ಮೂಲಮ್ - 65

ಅನ್ಯೋನ್ಯಮಾಲಾಗ್ರಥಿತಂ ಸಂಸಕ್ತಕುಸುಮೋಚ್ಚಯಮ್ ।
ವ್ಯತಿವೇಷ್ಟಿತಸುಸ್ಕಂಧಮನ್ಯೋನ್ಯಭ್ರಮರಾಕುಲಮ್ ॥

ಅನುವಾದ

ಕೆಲವು ತರುಣೀಮಣಿಗಳು ಪರಸ್ಪರ ತೋಳುಗಳನ್ನು ಅಪ್ಪಿಕೊಂಡಿದ್ದರು. ಅದು ಹೂವಿನಹಾರದಂತೆ ಗೋಚರಿಸುತ್ತಿತ್ತು. ಮಾಲೆಯಂತ್ತಿದ್ದ ಆ ಭುಜಸೂತ್ರದಲ್ಲಿ ಮದಿಸಿದ ದುಂಬಿಗಳಂತೆ ಅವರ ಕೇಶಪಾಶಗಳು ಓಲಾಡುತ್ತಿದ್ದವು. ರಾವಣನ ಸ್ತ್ರೀ ಸಮುದಾಯವು (ಸ್ತ್ರೀವನವು) ಒಂದು ಲತಾವನದಂತೆ ಭಾಸವಾಗುತ್ತಿತ್ತು. ವಸಂತ ಋತುವಿನಲ್ಲಿ ಬೀಸುವ ಮಲಯಾನಿಲದಿಂದ ವಿಕಸಿತವಾದ ಹೂವುಗಳು ಕಂಪಿಸುವಂತೆ ಆ ಸ್ತ್ರೀಯರ ನಿಃಶ್ವಾಸದಿಂದ ಲತಾರೂಪವಾದ ಅವರ ಸೆರಗುಗಳು ಕಂಪಿಸುತ್ತಿದ್ದವು. ಗಾಳಿಯು ಬೀಸುವುದರಿಂದ ಪುಷ್ಪಗುಚ್ಛಗಳಿರುವ ಲತೆಗಳೆಲ್ಲವೂ ಒಂದಕ್ಕೊಂದು ಸೇರಿಕೊಂಡು ಮಾಲೆಯಂತೆ ಕಾಣುತ್ತಿರುವಂತೇ ಆ ಸ್ತ್ರೀವನದಲ್ಲಿ ಭುಜಗಳೆಂಬ ದಾರದಲ್ಲಿ ಸ್ತ್ರೀ ಕುಸುಮಗಳು ಮಾಲೆಯ ರೂಪದಲ್ಲಿ ಪೋಣಿಸಲ್ಪಟ್ಟಿದ್ದವು. ಗಾಳಿಯ ಹೊಡೆತಕ್ಕೆ ರೆಂಬೆಗಳು (ಸ್ಕಂಧಗಳು) ಒಂದಕ್ಕೊಂದು ಸೇರಿಕೊಳ್ಳುವಂತೆ ರಾವಣನ ಸ್ತ್ರೀವನದಲ್ಲಿ ಸ್ತ್ರೀಯರ ಸ್ಕಂಧಗಳು (ಹೆಗಲುಗಳು) ಪರಸ್ಪರ ಸೇರಿಕೊಂಡಿದ್ದವು. ವಸಂತದಲ್ಲಿ ವನವು ದುಂಬಿಗಳಿಂದ ಸಮಾಕುಲವಾಗಿರುವಂತೆ ಆ ಸ್ತ್ರೀವನವು ಸ್ತ್ರೀಯರ ಕೇಶರಾಶಿಗಳ ರೂಪವಾದ ಭ್ರಮರಗಳಿಂದ ಸಮಾಕುಲವಾಗಿದ್ದಿತು. ಹೀಗೆ ರಾವಣೇಶ್ವರನ ಶಾಲೆಯಲ್ಲಿದ್ದ ಸ್ತ್ರೀವನವು ಮಧುಮಾಸದ ಅರಣ್ಯದಂತೆ ಕಂಗೊಳಿಸುತ್ತಿದ್ದಿತು.॥63-65॥

ಮೂಲಮ್ - 66

ಆಸೀದ್ವನಮಿವೋದ್ಧೂತಂ ಸ್ತ್ರೀವನಂ ರಾವಣಸ್ಯ ತತ್ ।
ಉಚಿತೇಷ್ವಪಿ ಸುವ್ಯಕ್ತಂ ನ ತಾಸಾಂ ಯೋಷಿತಾಂ ತದಾ ॥

ಮೂಲಮ್ - 67

ವಿವೇಕಃ ಶಕ್ಯ ಆಧಾತುಂ ಭೂಷಣಾಂಗಾಂಬರಸ್ರಜಾಮ್ ।
ರಾವಣೇ ಸುಖಸಂವಿಷ್ಟೇ ತಾಃ ಸ್ತ್ರಿಯೋ ವಿವಿಧಪ್ರಭಾಃ ॥

ಮೂಲಮ್ - 68

ಜ್ವಲಂತಃ ಕಾಂಚನಾ ದೀಪಾಃ ಪ್ರೈಕ್ಷಂತಾನಿಮಿಷಾ ಇವ ।
ರಾಜರ್ಷಿಪಿತೃ ದೈತ್ಯಾನಾಂ ಗಂಧರ್ವಾಣಾಂ ಚ ಯೋಷಿತಃ ॥

ಮೂಲಮ್ - 69

ರಾಕ್ಷಸಾನಾಂ ಚ ಯಾಃ ಕನ್ಯಾಸ್ತಸ್ಯ ಕಾಮವಶಂ ಗತಾಃ ।
ಯುದ್ಧಕಾಮೇನ ತಾಃ ಸರ್ವಾ ರಾವಣೇನ ಹೃತಾಃ ಸ್ತ್ರಿಯಃ ।
ಸಮದಾ ಮದನೇನೈವ ಮೋಹಿತಾಃ ಕಾಶ್ಚಿದಾಗತಾಃ ॥

ಅನುವಾದ

ಆಭರಣಗಳೂ, ವಸ್ತ್ರಗಳೂ, ಮಾಲೆಗಳೂ ಇರಬೇಕಾದ ಉಚಿತ ಸ್ಥಳಗಳಲ್ಲೇ ಇದ್ದರೂ ಆಗ ರಾವಣನ ವರಸ್ತ್ರೀಯರೆಲ್ಲರೂ ಪರಸ್ಪರವಾಗಿ ತಬ್ಬಿಕೊಂಡು ಮಲಗಿದ್ದರಿಂದ ಯಾವ ಆಭರಣಗಳು ಯಾರವು? ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ರಾವಣನು ಗಾಢವಾಗಿ ನಿದ್ರಿಸುತ್ತಿರುವಾಗ ನಾನಾಪ್ರಕಾರ ವಾದ ಪ್ರಭೇದಗಳಿಂದ ಯುಕ್ತರಾದ ಆ ಸ್ತ್ರೀಯರು ಪ್ರಜ್ವಲಿಸುತ್ತಿದ್ದ ಸುವರ್ಣಮಯವಾದ ಮಣಿ ದೀಪಗಳಂತೆ ರೆಪ್ಪೆಗಳನ್ನೂ ಆಡಿಸದೆ ನೋಡುತ್ತಿದ್ದರು. ರಾಜರ್ಷಿಗಳ, ಪಿತೃದೇವತೆಗಳ, ದೈತ್ಯರ, ಗಂಧರ್ವರ ಕನ್ಯೆಯರೂ, ರಾಕ್ಷಸಕನ್ಯೆಯರೂ ರಾವಣನಲ್ಲಿರುವ ಮೋಹದಿಂದಲೂ, ಕಾಮವಶರಾಗಿಯೂ ಬಂದು ಸೇರಿಕೊಂಡಿದ್ದರು. ಆ ಎಲ್ಲ ಸ್ತ್ರೀಯರು ಯುದ್ಧಾಕಾಂಕ್ಷಿಯಾದ ರಾವಣನಿಂದ ಅಪಹರಿಸಿ ತಂದವರೇ ಆಗಿದ್ದರು. ಆದರೆ ಇನ್ನೂ ಕೆಲವು ಜವ್ವನೆಯರು ಮಾತ್ರ ಕಾಮಾತುರರಾಗಿ ರಾವಣನನ್ನು ಮೋಹಿಸಿ ತಾವೇ-ತಾವಾಗಿ ಬಂದಿದ್ದರು.॥66-69॥

ಮೂಲಮ್ - 70

ನ ತತ್ರ ಕಾಶ್ಚಿತ್ ಪ್ರಮದಾಃ ಪ್ರಸಹ್ಯ
ವೀರ್ಯೋಪಪನ್ನೇನ ಗುಣೇನ ಲಬ್ಧಾಃ ।
ನ ಚಾನ್ಯಕಾಮಾಪಿ ನ ಚಾನ್ಯ ಪೂರ್ವಾ
ವಿನಾ ವರಾರ್ಹಾಂ ಜನಕಾತ್ಮಜಾಂ ತಾಮ್ ॥

ಅನುವಾದ

ಪೂಜಾರ್ಹಳಾದ ಜನಕನ ಮಗಳಾದ ಸೀತಾದೇವಿಯೊಬ್ಬಳನ್ನು ಬಿಟ್ಟು, ವೀರ್ಯ, ಗುಣಸಂಪನ್ನನಾದ ರಾವಣನ ಅಂತಃಪುರ ದಲ್ಲಿದ್ದ ಯಾವಳೇ ಸ್ತ್ರೀಯನ್ನು ತಂದಿರಲಿಲ್ಲ. ಅವರೆಲ್ಲರೂ ಅವನಲ್ಲಿ ಆಕರ್ಷಿತರಾಗಿ ಬಂದವರು. ಬೇರೆಯವರನ್ನು ಕಾಮಿಸಿದ್ದ ಸ್ತ್ರೀಯಾಗಲೀ, ಬೇರೆಯವರೊಡನೆ ವಿವಾಹವಾಗಿದ್ದ ಸ್ತ್ರೀಯಾಗಲೀ ರಾವಣನ ಅಂತಃಪುರದಲ್ಲಿ ಇರಲಿಲ್ಲ. ॥70 ॥

ಮೂಲಮ್ - 71

ನ ಚಾಕುಲೀನಾ ನ ಚ ಹೀನರೂಪಾ
ನಾದಕ್ಷಿಣಾ ನಾನುಪಚಾರಯುಕ್ತಾ ।
ಭಾರ್ಯಾಭವತ್ತಸ್ಯ ನ ಹೀನಸತ್ತ್ವಾ
ನ ಚಾಪಿ ಕಾಂತಸ್ಯ ನ ಕಾಮನೀಯಾ ॥

ಅನುವಾದ

ರಾವಣನ ಆ ಭಾರ್ಯೆಯರಲ್ಲಿ ಹೀನಕುಲದವಳಾಗಲೀ, ಕುರೂಪಿಯಾಗಲೀ, ಮೂರ್ಖರಾಗಲೀ, ಉತ್ತಮ ಭೂಷಣಗಳಿಂದ ರಹಿತರಾದವರಾಗಲೀ, ದುರ್ಬಲರಾಗಲೀ, ಕಾಂತನಾದ ರಾವಣನ ಮೋಹಕ್ಕೊಳಗಾಗದವಳೂ ಯಾರೂ ಇರಲಿಲ್ಲ. (ಎಲ್ಲರೂ ಎಲ್ಲ ವಿಧದಿಂದ ಯೋಗ್ಯತೆಯುಳ್ಳವರೇ)॥71॥

ಮೂಲಮ್ - 72

ಬಭೂವ ಬುದ್ಧಿಸ್ತು ಹರೀಶ್ವರಸ್ಯ
ಯದೀದೃಶೀ ರಾಘವಧರ್ಮಪತ್ನೀ ।
ಇಮಾ ಯಥಾ ರಾಕ್ಷಸರಾಜಭಾರ್ಯಾಃ
ಸುಜಾತಮಸ್ಯೇತಿ ಹಿ ಸಾಧುಬುದ್ಧೇಃ ॥

ಅನುವಾದ

ರಾಕ್ಷಸರಾಜನಾದ ರಾವಣನ ಭಾರ್ಯೆಯರೆಲ್ಲರೂ ತಮ್ಮ ಗಂಡನಾದ ರಾವಣನೊಡನೆ ಸುಖವಾಗಿರುವಂತೆ ರಾಘವನ ಧರ್ಮಪತ್ನಿಯಾದ ಸೀತಾದೇವಿಯು ಶ್ರೀರಾಮನೊಂದಿಗೆ ಸಂತೋಷವಾಗಿ ಇರುವಂತಾದರೆ ಈ ರಾವಣನಿಗೆ ಮಂಗಳವಾಗುತ್ತಿತ್ತು ಎಂದು ಬುದ್ಧಿಶಾಲಿಯಾದ ಕಪೀಶ್ವರನಿಗೆ ಅನಿಸಿತು.॥72॥

ಮೂಲಮ್ - 73

ಪುನಶ್ಚ ಸೋಽಚಿಂತಯ ದಾರ್ತರೂಪೋ
ಧ್ರುವಂ ವಿಶಿಷ್ಟಾ ಗುಣತೋ ಹಿ ಸೀತಾ ।
ಅಥಾಯಮಸ್ಯಾಂ ಕೃತವಾನ್ ಮಹಾತ್ಮಾ
ಲಂಕೇಶ್ವರಃ ಕಷ್ಟಮನಾರ್ಯಕರ್ಮ ॥

ಅನುವಾದ

‘‘ಸೀತಾದೇವಿಯು ನಿಶ್ಚಯವಾಗಿ ಉತ್ತಮಗುಣ ಸಂಪನ್ನಳೆಂಬುದು ತ್ರಿವಾರ ಸತ್ಯವಾಗಿದೆ. ಆದರೆ ರಾವಣನೂ ಉತ್ತಮ ಕುಲೋತ್ಪನ್ನನೂ, ಲಂಕೆಗೆ ಪ್ರಭುವಾಗಿದ್ದು ದೊಡ್ಡ ಶಿವಭಕ್ತನಾಗಿದ್ದರೂ ಕೂಡ ಅವನು ತನ್ನ ವಂಶಕ್ಕೆ, ತನ್ನ ಅರಸೊತ್ತಿಗೆಗೆ, ತನ್ನ ಶಿವಭಕ್ತಿಗೆ ತಕ್ಕದಾದ ಕಾರ್ಯವನ್ನು ಮಾಡದೇ, ಸೀತಾದೇವಿಯನ್ನು ಅಪಹರಿಸಿ ತಂದು ಇವಳ ವಿಷಯದಲ್ಲಿ ಅನಾರ್ಯರು ಮಾಡುವ ಅತಿಕುತ್ಸಿತವಾದ ಕಾರ್ಯವನ್ನೇ ಮಾಡಿರುವನು’’ ಎಂದು ಚಿಂತಿಸುತ್ತಾ ಹನುಮಂತನು ದುಃಖಿತನಾದನು.॥73॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ನವಮಃ ಸರ್ಗಃ ॥ 9 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಒಂಭತ್ತನೆಯ ಸರ್ಗವು ಮುಗಿಯಿತು.