००८ पुष्पकविमानवर्णनम्

वाचनम्
ಭಾಗಸೂಚನಾ

ಹನುಮಂತನು ಪುನಃ ಪುಷ್ಪಕವಿಮಾನವನ್ನು ಸಂದರ್ಶಿಸಿದುದು

ಮೂಲಮ್ - 1

ಸ ತಸ್ಯ ಮಧ್ಯೇ ಭವನಸ್ಯ ಸಂಸ್ಥಿತಂ
ಮಹದ್ವಿಮಾನಂ ಬಹು ರತ್ನ ಚಿತ್ರಿತಮ್ ।
ಪ್ರತಪ್ತಜಾಂಬೂನದಜಾಲಕೃತ್ರಿಮಂ
ದದರ್ಶ ವೀರಃ ಪವನಾತ್ಮಜಃ ಕಪಿಃ ॥

ಅನುವಾದ

ಧೀಮಂತನಾದ, ವಾಯುಪುತ್ರನಾದ ಹನುಮಂತನು ಮಣಿಗಳಿಂದಲೂ, ರತ್ನಗಳಿಂದಲೂ ನಿಬದ್ಧವಾಗಿ ಚಿತ್ರಿತವಾಗಿದ್ದ, ಪುಟಕ್ಕೆ ಹಾಕಿದ ಚಿನ್ನದಿಂದಲೇ ನಿರ್ಮಿತವಾದ ಮಹಾವಿಮಾನವನ್ನು ರಾವಣನ ಆ ಮಹಾಸೌಧದ ಮಧ್ಯದಲ್ಲಿ ನೋಡಿದನು.॥1॥

ಮೂಲಮ್ - 2

ತದಪ್ರಮೇಯಾಪ್ರತಿಕಾರಕೃತ್ರಿಮಂ
ಕೃತಂ ಸ್ವಯಂ ಸಾಧ್ವಿತಿ ವಿಶ್ವಕರ್ಮಣಾ ।
ದಿವಂ ಗತಂ ವಾಯುಪಥೇ ಪ್ರತಿಷ್ಠಿತಂ
ವ್ಯರಾಜತಾದಿತ್ಯಪಥಸ್ಯ ಲಕ್ಷ್ಮವತ್ ॥

ಅನುವಾದ

ಆ ಪುಷ್ಪಕವಿಮಾನವು ಅಪ್ರಮೇಯವಾದ ಸೌಂದರ್ಯದಿಂದ ಕೂಡಿರುವ ಪ್ರತಿಮೆಯಂತೆ ನಿರ್ಮಿತವಾಗಿತ್ತು. ಲೋಕವೇ ಮೆಚ್ಚುಕೊಳ್ಳುವಂತಹ ಊಹಾತೀತವಾದ, ಸಾಟಿಯಿಲ್ಲದ ಆ ಪುಷ್ಪಕವಿಮಾನವನ್ನು ಸ್ವತಃ ವಿಶ್ವಕರ್ಮನೇ ನಿರ್ಮಿಸಿದ್ದನು. ಅದು ಆಕಾಶಕ್ಕೆ ಹೋಗುವ ವಾಯುಮಾರ್ಗದಲ್ಲಿ ಪ್ರತಿಷ್ಠಿತವಾಗಿತ್ತು. (ನೆಲಬಿಟ್ಟು ಅಂತರಾಳದಲ್ಲಿತ್ತು) ಸೂರ್ಯನಮಾರ್ಗಕ್ಕೆ ತೋರುಗಲ್ಲಿನಂತೆ ಕಾಣುತ್ತಿದ್ದ ಆ ದಿವ್ಯವಿಮಾನವನ್ನು ಹನುಮಂತನು ನೋಡಿದನು.॥2॥

ಮೂಲಮ್ - 3

ನ ತತ್ರ ಕಿಂಚಿನ್ನ ಕೃತಂ ಪ್ರಯತ್ನತೋ
ನ ತತ್ರ ಕಿಂಚಿನ್ನ ಮಹಾರ್ಹರತ್ನವತ್ ।
ನ ತೇ ವಿಶೇಷಾ ನಿಯತಾಃ ಸುರೇಷ್ವಪಿ
ನ ತತ್ರ ಕಿಂಚಿನ್ನ ಮಹಾವಿಶೇಷವತ್ ॥

ಅನುವಾದ

ಪ್ರಯತ್ನಪೂರ್ವಕವಾಗಿ ಮಾಡದಿರುವ ಯಾವುದೊಂದು ಭಾಗವೂ ಆ ವಿಮಾನದಲ್ಲಿರಲಿಲ್ಲ. ಬಹುಮೂಲ್ಯವಾದ ರತ್ನಗಳಿಂದ ಕೂಡಿರದ ಯಾವ ಭಾಗವೂ ಆ ವಿಮಾನದಲ್ಲಿರಲಿಲ್ಲ. ಅತಿರಚನಾ ವಿಶಿಷ್ಟವಲ್ಲದ ಯಾವ ಭಾಗವೂ ಅದರಲ್ಲಿರಲಿಲ್ಲ. ಅದರಲ್ಲಿನ ಎಲ್ಲ ಭಾಗಗಳೂ ಶಿಲ್ಪಚಾತುರ್ಯದ ವೈಶಿಷ್ಟ್ಯದಿಂದಲೇ ಕೂಡಿದ್ದವು. ದೇವತೆಗಳಲ್ಲಿಯೂ ಅಂತಹ ವಿಶಿಷ್ಟ ರೀತಿಯಿಂದ ನಿರ್ಮಿಸಿದ ವಿಮಾನ ಇರಲಿಲ್ಲ. ॥3 ॥

ಮೂಲಮ್ - 4

ತಪಃಸಮಾಧಾನ ಪರಾಕ್ರಮಾರ್ಜಿತಂ
ಮನಃಸಮಾಧಾನವಿಚಾರ ಚಾರಿಣಮ್ ।
ಅನೇಕ ಸಂಸ್ಥಾನವಿಶೇಷನಿರ್ಮಿತಂ
ತತಸ್ತ ತಸ್ತುಲ್ಯ ವಿಶೇಷದರ್ಶನಮ್ ॥

ಅನುವಾದ

ತಪೋನುಷ್ಠಾನದಿಂದಲೂ, ಪರಾಕ್ರಮದಿಂದಲೂ ರಾವಣನು ಆ ಪುಷ್ಪಕವಿಮಾನವನ್ನು ಸಂಪಾದಿಸಿದ್ದನು. ಅದರಲ್ಲಿ ಆಸೀನರಾದವರು ಮನಸ್ಸಿನಲ್ಲಿ ನಿಶ್ಚಯಿಸಿದ ಸ್ಥಳಕ್ಕೆ ಅದು ಸಂಚರಿಸುತ್ತಿತ್ತು. ಆ ವಿಮಾನದಲ್ಲಿ ಅನೇಕ ವಿಧವಾದ ವಿಲಕ್ಷಣವಾದ ಸಭಾಭವನಗಳೂ, ಕ್ರೀಡಾವನಗಳೂ, ಭೋಜನ ಶಾಲೆಗಳೂ, ವಿನೋದ ಮಂದಿರಗಳೂ, ಗೋಪುರಗಳೂ ಮುಂತಾದ ಬೇರೆ ಬೇರೆ ಭಾಗಗಳೂ ಸೌಕರ್ಯಕ್ಕಾಗಿ ನಿರ್ಮಿಸಿದ್ದವು. ಆ ವಿಮಾನಕ್ಕೆ ಅನುಗುಣವಾಗಿ ಸೂಕ್ಷ್ಮವಾದ ಚಿತ್ರಕಲೆ, ಕುಸುರಿ ಕೆಲಸಗಳಿಂದ ಕೂಡಿದ್ದು, ವಿಶೇಷ ದರ್ಶನ ಯೋಗ್ಯವಾಗಿತ್ತು. ಅಂತಹ ವಿಮಾನವು ಬೇರೆ ಎಲ್ಲಿಯೂ ಇರಲಿಲ್ಲ. ॥4॥

ಮೂಲಮ್ - 5

ಮನಃ ಸಮಾಧಾಯ ತು ಶೀಘ್ರಗಾಮಿನಂ
ದುರಾವರಂ ಮಾರುತತುಲ್ಯಗಾಮಿನಮ್ ।
ಮಹಾತ್ಮನಾಂ ಪುಣ್ಯಕೃತಾಂ ಮಹರ್ದ್ಧಿನಾಂ
ಯಶಸ್ವಿನಾಮಗ್ರ್ಯಮುದಾಮಿವಾಲಯಮ್ ॥

ಅನುವಾದ

ಸ್ವಾಮಿಯ ಮನಸ್ಸಿಗೆ ಅನುಸಾರವಾಗಿ ಅತಿಶೀಘ್ರವಾಗಿ ಆ ವಿಮಾನವು ನಿರ್ದಿಷ್ಟವಾದ ಸ್ಥಳಕ್ಕೆ ಹೋಗುತ್ತಿತ್ತು. ಅದರ ಗಮನವನ್ನು ಶತ್ರುಗಳಿಂದಲೂ ಎದುರಿಸಲು ಅಸಾಧ್ಯವಾಗಿತ್ತು. ಅದು ವಾಯುವೇಗದಿಂದ ಸಾಗುತ್ತಿತ್ತು. ಮಹಾತ್ಮರಾದ, ಪುಣ್ಯಾತ್ಮರಾದ, ತೇಜಸ್ಸಂಪನ್ನರಾದ, ಸುಪ್ರಸಿದ್ಧರ ಅರಮನೆಗಳಂತೆ, ಇಂದ್ರಾದಿದೇವತೆಗಳ ಸ್ವರ್ಗದಂತೆ ಸುಖ, ಸಂತೋಷದಾಯಕವಾಗಿತ್ತು. ॥5॥

ಮೂಲಮ್ - 6

ವಿಶೇಷಮಾಲಂಬ್ಯ ವಿಶೇಷಸಂಸ್ಥಿತಂ
ವಿಚಿತ್ರಕೂಟಂ ಬಹುಕೂಟಮಂಡಿಮ್ ।
ಮನೋಽಭಿರಾಮಂ ಶರದಿಂದು ನಿರ್ಮಲಂ
ವಿಚಿತ್ರಕೂಟಂ ಶಿಖರಂ ಗಿರೇರ್ಯಥಾ ॥

ಅನುವಾದ

ಅಕಾಶ ಗಮನವೇ ಮುಂತಾದ ವಿಶೇಷಗುಣಗಳನ್ನು ಹೊಂದಿದ್ದು ವಾಯುಮಾರ್ಗದಲ್ಲಿ ಅದು ಸ್ಥಾಪಿಸಲ್ಪಟ್ಟಿತ್ತು. ಚಿತ್ರ-ವಿಚಿತ್ರವಾದ ಅನೇಕ ಶಿಖರಗಳಿಂದ ಅಲಂಕೃತವಾಗಿತ್ತು. ಶರತ್ಕಾಲದ ಚಂದ್ರನಂತೆ ನಿರ್ಮಲವಾಗಿದ್ದು, ಮನಸ್ಸಿಗೆ ಆಹ್ಲಾದವನ್ನುಂಟುಮಾಡುತ್ತಿತ್ತು. ಅನೇಕ ಸಣ್ಣ ಶಿಖರಗಳಿಂದ ಕೂಡಿದ ಪರ್ವತದ ದೊಡ್ಡ ಶಿಖರದಂತೆ ಇದ್ದ ಪುಷ್ಪಕವಿಮಾನವನ್ನು ಹನುಂತನು ನೋಡಿದನು. ॥6॥

ಮೂಲಮ್ - 7

ವಹಂತಿ ಯಂ ಕುಂಡಲಶೋಭಿತಾನನಾ
ಮಹಾಶನಾ ವ್ಯೋಮಚರಾ ನಿಶಾಚರಾಃ ।
ವಿವೃತ್ತವಿಧ್ವತ್ತವಿಶಾಲಲೋಚನಾ
ಮಹಾಜವಾ ಭೂತಗಣಾಃ ಸಹಸ್ರಶಃ ॥

ಅನುವಾದ

ಕರ್ಣಕುಂಡಲಗಳಿಂದ ಶೋಭಿತವಾದ ಮುಖಗಳುಳ್ಳವರೂ, ಮಹಾಕಾಯರೂ, ಆಕಾಶದಲ್ಲಿ ಸಂಚರಿಸುವ ರಾಕ್ಷಸರು, ತಮ್ಮ ಪ್ರಭುವಿಗೆ ಅನುಕೂಲವಾಗಿ ನಡೆಯುವವರೂ, ವಿಶಾಲನೇತ್ರರೂ, ಅತಿವೇಗವಾಗಿ ಸಂಚರಿಸುವ ಸಾವಿರಾರು ಭೂತಗಣಗಳು ಆ ವಿಮಾನವನ್ನು ಹೊರುತ್ತಿರುವಂತೆ ಹೊರಭಾಗದಲ್ಲಿ ಶಿಲ್ಪಗಳಿದ್ದವು. ॥7॥
(ಸ್ವೇಚ್ಛೆಯಿಂದ ಹೋಗುವ ‘ಕಾಮಗ’ ವಿಮಾನಕ್ಕೆ ಹೊರುವವರ ಅಪೇಕ್ಷೆಯಿಲ್ಲದಿರುವುದರಿಂದ ಗೋಪುರಗಳಲ್ಲಿ ರಥಗಳಲ್ಲಿ ಕೆತ್ತಲ್ಪಟ್ಟ ಭೂತಗಳಂತೆ ಇಲ್ಲಿಯೂ ಪ್ರತಿಮಾ ರೂಪದಿಂದ ಇದ್ದವು.)

ಮೂಲಮ್ - 8

ವಸಂತಪುಷ್ಪೋತ್ಕರಚಾರುದರ್ಶನಂ
ವಸಂತಮಾಸಾದಪಿ ಕಾಂತದರ್ಶನಮ್ ।
ಸ ಪುಷ್ಪಕಂ ತತ್ರ ವಿಮಾನಮುತ್ತಮಂ
ದದರ್ಶ ತದ್ವಾನರವೀರಸತ್ತಮಃ ॥

ಅನುವಾದ

ವಸಂತ ಕಾಲದ ಪುಷ್ಪಗಳ ಸಮೂಹದಂತೆ ಬಹಳ ಸುಂದರವಾಗಿ ಕಾಣುತ್ತಿದ್ದ, ವಸಂತಮಾಸಕ್ಕಿಂತಲೂ ಹೆಚ್ಚು ಚೆಲುವಾಗಿದ್ದ, ಉತ್ತಮೋತ್ತಮವಾದ ಆ ಪುಷ್ಪಕವಿಮಾನವನ್ನು ವಾನರಶ್ರೇಷ್ಠನಾದ ಮಾರುತಿಯು ನೋಡಿದನು.॥8॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಅಷ್ಟಮಃ ಸರ್ಗಃ ॥ 8 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಎಂಟನೆಯ ಸರ್ಗವು ಮುಗಿಯಿತು.