००७ हनुमता पुष्पकविमानदर्शनम्

वाचनम्
ಭಾಗಸೂಚನಾ

ರಾವಣನ ಅರಮನೆ ಮತ್ತು ಪುಷ್ಪಕವಿಮಾನದ ವರ್ಣನೆ

ಮೂಲಮ್ - 1

ಸ ವೇಶ್ಮ ಜಾಲಂ ಬಲವಾನ್ ದದರ್ಶ
ವ್ಯಾಸಕ್ತವೈಡೂರ್ಯಸುವರ್ಣಜಾಲಮ್ ।
ಯಥಾ ಮಹತ್ ಪ್ರಾವೃಷಿ ಮೇಘಜಾಲಂ
ವಿದ್ಯುತ್ಪಿನದ್ಧಂ ಸವಿಹಂಗಜಾಲಮ್ ॥

ಅನುವಾದ

ಬಲಿಷ್ಠನಾದ ಹನುಮಂತನು ಆ ಮಹಾಂತಃಪುರದ ಸಮುಚ್ಚಯದಲ್ಲಿ ಸುಂದರವಾದ ಮನೆಗಳ ಸಮೂಹಗಳನ್ನು ನೋಡಿದನು. ಎಲ್ಲ ಮನೆಗಳು ಮಿಂಚಿನಿಂದ ಕೂಡಿದ ಮೇಘಗಳ ಸಾಲಿನಂತ್ತಿದ್ದವು. ವೈಡೂರ್ಯಮಣಿಗಳಿಂದ ನಿಬದ್ಧವಾದ ಚಿನ್ನದ ಬಲೆಗಳಿಂದ ಕೂಡಿದ್ದವು. ಪಕ್ಷಿಗಳ ಸಮೂಹಗಳಿಂದ ಶೋಭಾಯಮಾನವಾಗಿದ್ದವು.॥1॥

ಮೂಲಮ್ - 2

ನಿವೇಶನಾನಾಂ ವಿವಿಧಾಶ್ಚ ಶಾಲಾಃ
ಪ್ರಧಾನಶಂಖಾಯುಧಚಾಪಶಾಲಾಃ ।
ಮನೋಹರಾಶ್ಚಾಪಿ ಪುನರ್ವಿಶಾಲಾಃ
ದದರ್ಶ ವೇಶ್ಮಾದ್ರಿಷು ಚಂದ್ರಶಾಲಾಃ ॥

ಅನುವಾದ

ಅಲ್ಲಿ ಪ್ರಶಸ್ತವಾದ ಶಂಖಗಳೂ, ಆಯುಧಗಳೂ, ಧನುಸ್ಸುಗಳೂ, ಇವುಗಳಿಂದ ಶೋಭಿತವಾದ ಅಂತರ್ಗೃಹಗಳನ್ನೂ, ಪರ್ವತ ಸದೃಶವಾದ ಪ್ರಾಸಾದಗಳಲ್ಲಿ ಮನೋಹರವಾದ, ವಿಶಾಲವಾದ ಚಂದ್ರಶಾಲೆಗಳನ್ನೂ ಹನುಮಂತನು ನೋಡಿದನು.॥2॥

ಮೂಲಮ್ - 3

ಗೃಹಾಣಿ ನಾನಾವಸುರಾಜಿತಾನಿ
ದೇವಾಸುರೈಶ್ಚಾಪಿ ಸುಪೂಜಿತಾನಿ ।
ಸರ್ವೈಶ್ಚ ದೋಷೈಃ ಪರಿವರ್ಜಿತಾನಿ
ಕಪಿರ್ದದರ್ಶ ಸ್ವಬಲಾರ್ಜಿತಾನಿ ॥

ಅನುವಾದ

ಅವು ನಾನಾವಿಧವಾದ ಸಂಪತ್ತುಗಳಿಂದ ದೇದೀಪ್ಯಮಾನವಾಗಿ ಕಾಣುತ್ತಿದ್ದು, ದೇವಾಸುರರಿಂದಲೂ ಪ್ರಶಂಸಿಸಲ್ಟಡುತ್ತಿದ್ದುವು. ಸಕಲ ವಿಧವಾದ ಭೋಗಸಾಮಗ್ರಿಗಳು ವಿಪುಲವಾಗಿದ್ದು, ಯಾವುದರ ಕೊರತೆಯೂ ಇರಲಿಲ್ಲ. ರಾವಣನು ಸ್ವಬಲ ಪರಾಕ್ರಮಗಳಿಂದ ಸಂಪಾದಿಸಿದ್ದು, ಅಂತಹ ಭವ್ಯವಾದ, ಸುಂದರವಾದ ಗೃಹಗಳನ್ನು ಮಾರುತಿಯು ನೋಡಿದನು.॥3॥

ಮೂಲಮ್ - 4

ತಾನಿ ಪ್ರಯತ್ನಾಭಿಸಮಾಹಿತಾನಿ
ಮಯೇನ ಸಾಕ್ಷಾದಿವ ನಿರ್ಮಿತಾನಿ ।
ಮಹಿತಲೇ ಸರ್ವಗುಣೋತ್ತರಾಣಿ
ದದರ್ಶ ಲಂಕಾಧಿಪತೇರ್ಗೃಹಾಣಿ ॥ 4 ॥

ಅನುವಾದ

ಪ್ರಯತ್ನಪೂರ್ವಕವಾಗಿ ಬಹಳ ಸುಂದರವಾಗಿ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಆ ಸೌಧಗಳಲ್ಲಿನ ಮಾಯಾವಿಶೇಷಗಳಿಂದಾಗಿ ಮಯನಿಂದಲೇ ನಿರ್ಮಿಸಲ್ಪಟ್ಟಿರುವುದೋ ಎಂಬಂತೆ ಕಾಣುತ್ತಿತ್ತು. ಭೂಮಂಡಲದಲ್ಲೇ ಸಕಲಗುಣಗಳಿಂದಲೂ ವಿಶಿಷ್ಟವಾಗಿದ್ದ ಲಂಕಾಧಿಪತಿಯಾದ ರಾವಣನ ಪ್ರಾಸಾದಗಳನ್ನು ಹನುಮಂತನು ನೋಡಿದನು.॥4॥

ಮೂಲಮ್ - 5

ತತೋ ದದರ್ಶೋಚ್ಛ್ರಿತಮೇಘರೂಪಂ
ಮನೋಹರಂ ಕಾಂಚನಚಾರುರೂಪಮ್ ।
ರಕ್ಷೋಧಿಪಸ್ಯಾತ್ಮ ಬಲಾನುರೂಪಂ
ಗೃಹೋತ್ತಮಂ ಹ್ಯಪ್ರತಿರೂಪರೂಪಮ್ ॥

ಅನುವಾದ

ರಾವಣನ ಉತ್ತಮೋತ್ತಮವಾದ ಅರಮನೆಯು ಎತ್ತರದಲ್ಲಿರುವ ಮೇಘದಂತೆ ಮನೋಹರವಾಗಿತ್ತು. ಸುವರ್ಣದಂತೆ ಸುಂದರವಾಗಿಯೂ ರಾಕ್ಷಸರ ಅಧಿಪತಿಯಾದ ರಾವಣನ ಅಂತಸ್ತಿಗೆ ಅನುರೂಪವಾಗಿ ವಿರಾಜಿಸುತ್ತಿತ್ತು.॥5॥

ಮೂಲಮ್ - 6

ಮಹೀತಲೇ ಸ್ವರ್ಗಮಿವ ಪ್ರಕೀರ್ಣಂ
ಶ್ರಿಯಾ ಜ್ವಲಂತಂ ಬಹುರತ್ನಕೀರ್ಣಮ್ ।
ನಾನಾತರೂಣಾಂ ಕುಸುಮಾವಕೀರ್ಣಂ
ಗಿರೇರಿವಾಗ್ರಂ ರಜಸಾವಕೀರ್ಣಮ್ ॥

ಅನುವಾದ

ಅದು ಭೂಮಿಗೆ ಇಳಿದು ಬಂದ ಸ್ವರ್ಗದಂತೆ ಶೋಭಿಸುತ್ತಾ ಹೊಳೆಯುತ್ತಿತ್ತು. ಅನೇಕ ರತ್ನರಾಶಿಗಳಿಂದ ಸಮೃದ್ಧವಾಗಿತ್ತು. ವಕ್ಷಗಳ ಕುಸುಮಗಳಿಂದಲೂ ವ್ಯಾಪ್ತವಾಗಿದ್ದು, ಕುಸುಮ ಪರಾಗದಿಂದ ಆಚ್ಛಾದಿತವಾದ ಪರ್ವತ ಶಿಖರದಂತೆ ವಿರಾಜಿಸುತ್ತಿತ್ತು.॥6॥

ಮೂಲಮ್ - 7

ನಾರೀಪ್ರವೇಕೈರಿವ ದೀಪ್ಯಮಾನಂ
ತಟಿದ್ಭಿರಂಭೋದವದರ್ಚ್ಯಮಾನಮ್ ।
ಹಂಸಪ್ರವೇಕೈರಿವ ವಾಹ್ಯಮಾನಂ
ಶ್ರಿಯಾ ಯುತಂ ಖೇ ಸುಕೃತಾಂ ವಿಮಾನಮ್ ॥

ಅನುವಾದ

ಅನಂತರ ಹನುಮಂತನು ಅತ್ಯಂತ ಶೋಭೆಯಿಂದ ಮೆರೆಯುವ ಪುಷ್ಪಕವಿಮಾನವನ್ನು ನೋಡಿದನು. ಅದು ವಿದ್ಯುನ್ಮಾಲೆಗಳಿಂದ ಶೋಭಿತವಾದ ಮೇಘದಂತೆ ಶ್ರೇಷ್ಠರಾದ ನಾರೀಮಣಿಯರಿಂದ ಬೆಳಗುತ್ತಿತ್ತು. ಶ್ರೇಷ್ಠವಾದ ಹಂಸಗಳಿಂದ ಆಕಾಶದಲ್ಲಿ ಒಯ್ಯಲ್ಪಡುತ್ತಿರುವಂತೆ ಕಾಣುತ್ತಿತ್ತು. ಬ್ರಹ್ಮಾದಿ ಪುಣ್ಯಪುರುಷರ ವಿಮಾನದಂತೆ ಶೋಭಿಸುತ್ತಿತ್ತು.॥7॥

ಮೂಲಮ್ - 8

ಯಥಾ ನಗಾಗ್ರಂ ಬಹುಧಾತುಚಿತ್ರಂ
ಯಥಾ ನಭಶ್ಚ ಗ್ರಹಚಂದ್ರಚಿತ್ರಮ್ ।
ದದರ್ಶ ಯುಕ್ತೀಕೃತಮೇಘಚಿತ್ರಂ
ವಿಮಾನರತ್ನಂ ಬಹುರತ್ನಚಿತ್ರಮ್ ॥

ಅನುವಾದ

ಆ ಪುಷ್ಪಕವಿಮಾನವು ಅನೇಕ ವಿಧವಾದ ಗೈರಿಕಾದಿ ಧಾತುಗಳಿಂದ ಚಿತ್ರಿತವಾದ ಪರ್ವತದಂತೆ ಕಾಣುತ್ತಿತ್ತು. ಗ್ರಹಗಳಿಂದಲೂ, ಚಂದ್ರನಿಂದಲೂ ಚಿತ್ರಿತವಾದ ಆಕಾಶದಂತೆ ರಾರಾಜಿಸುತ್ತಿತ್ತು. ಒಟ್ಟುಗೂಡಿದ ಮೇಘಗಳ ಸಮೂಹದಂತೆ ಕಾಣುತ್ತಿದ್ದ ಆ ವಿಮಾನರತ್ನವು ಅಪಾರವಾದ ರತ್ನಗಳಿಂದ ಚಿತ್ರಿತವಾಗಿತ್ತು.॥8॥

ಮೂಲಮ್ - 9

ಮಹೀ ಕೃತಾ ಪರ್ವತರಾಜಿಪೂರ್ಣಾ
ಶೈಲಾಃ ಕೃತಾ ವೃಕ್ಷವಿತಾನಪೂರ್ಣಾಃ ।
ವೃಕ್ಷಾಃ ಕೃತಾಃ ಪುಷ್ಪವಿತಾನಪೂರ್ಣಾಃ
ಪುಷ್ಪಂ ಕೃತಂ ಕೇಸರಪತ್ರಪೂರ್ಣಮ್ ॥

ಅನುವಾದ

ಆ ಪುಷ್ಪಕವಿಮಾನದಲ್ಲಿ ಅನೇಕ ಚಿತ್ರಗಳನ್ನು ಬಿಡಿಸಿದ್ದರು. ಅದರಲ್ಲಿ ಚಿತ್ರಿತವಾದ ಶಿಲ್ಪದಲ್ಲಿ ಪರ್ವತದ ಸಾಲುಗಳಿಂದ ಯುಕ್ತವಾದ ಭೂಮಿಯಿತ್ತು. ಪರ್ವತಗಳು ವೃಕ್ಷಗಳ ಸಮೂಹಗಳಿಂದ ವ್ಯಾಪ್ತವಾಗಿದ್ದವು. ವೃಕ್ಷಗಳು ಪುಷ್ಪಗುಚ್ಛಗಳಿಂದ ಸಮೃದ್ಧವಾಗಿದ್ದವು. ಆ ಪುಷ್ಪಗಳು ಕೇಸರಗಳಿಂದಲೂ, ದಳಗಳಿಂದಲೂ, ಕೂಡಿ ಬಹುಸುಂದರವಾಗಿ ಗೋಚರಿಸುತ್ತಿದ್ದವು. ॥9॥

ಮೂಲಮ್ - 10

ಕೃತಾನಿ ವೇಶ್ಮಾನಿ ಚ ಪಾಂಡರಾಣಿ
ತಥಾ ಸುಪುಷ್ಪಾಣ್ಯಪಿ ಪುಷ್ಕರಾಣಿ ।
ಪುನಶ್ಚ ಪದ್ಮಾನಿ ಸಕೇಸರಾಣಿ
ಧನ್ಯಾನಿ ಚಿತ್ರಾಣಿ ತಥಾ ವನಾನಿ ॥

ಅನುವಾದ

ಆ ಪುಷ್ಪಕವಿಮಾನದ ಚಿತ್ರಗಳಲ್ಲಿ ಶ್ವೇತವರ್ಣದ ಭವನಗಳಿದ್ದವು. ಕೇಸರಗಳಿಂದ ಕೂಡಿದ ಸರೋವರಗಳು ರಂಗು ರಂಗಾದ ಹೂವುಗಳಿಂದ ಶೋಭಿಸುತ್ತಿದ್ದವು. ಅದರಲ್ಲಿ ಕೇಸರಗಳಿಂದ ಕೂಡಿದ ಪದ್ಮಗಳೂ ರಾರಾಜಿಸುತ್ತಿದ್ದವು. ಅದರಲ್ಲಿ ಚಿತ್ರಿತವಾದ ವನಗಳು ಅದ್ಭುತವಾಗಿದ್ದವು. ॥10॥

ಮೂಲಮ್ - 11

ಪುಷ್ಪಾಹ್ವಯಂ ನಾಮ ವಿರಾಜಮಾನಂ
ರತ್ನಪ್ರಭಾಭಿಶ್ಚ ವಿವರ್ಧಮಾನಮ್ ।
ವೇಶ್ಮೋತ್ತಮಾನಾಮಪಿ ಚೋಚ್ಚಮಾನಂ
ಮಹಾಕಪಿಸ್ತತ್ರ ಮಹಾವಿಮಾನಮ್ ॥

ಅನುವಾದ

ಅದು ತನ್ನಲ್ಲಿದ್ದ ರತ್ನಗಳ ಪ್ರಭೆಯನ್ನು ದಶದಿಕ್ಕುಗಳಿಗೂ ಪಸರಿಸುತ್ತಾ, ಆಕಾಶದಲ್ಲಿ ಹಾರಾಡುತ್ತಿದೆಯೋ ಎಂಬತ್ತಿತ್ತು. ಉತ್ತಮೋತ್ತಮ ಪ್ರಾಸಾದಗಳಿಗೂ ಶ್ರೇಷ್ಠತಮವಾಗಿರುವ ಪ್ರಾಸಾದದಂತೆ ಕಂಗೊಳಿಸುತ್ತಿತ್ತು. ಅಂತಹ ‘ಪುಷ್ಪಕ’ವೆಂಬ ಹೆಸರಿನ ಮಹಾ ವಿಮಾನವನ್ನು ಹನುಮಂತನು ನೋಡಿದನು. ॥11॥

ಮೂಲಮ್ - 12

ಕೃತಾಶ್ಚ ವೈಡೂರ್ಯಮಯಾ ವಿಹಂಗಾಃ
ರೂಪ್ಯಪ್ರವಾಲೈಶ್ಚ ಯಥಾ ವಿಹಂಗಾಃ ।
ಚಿತ್ರಾಶ್ಚ ನಾನಾವಸುಭಿರ್ಭುಜಂಗಾ
ಜಾತ್ಯಾನು ರೂಪಾಸ್ತುರಗಾಃ ಶುಭಾಂಗಾಃ ॥

ಅನುವಾದ

ಆ ವಿಮಾನದಲ್ಲಿ ವೈಡೂರ್ಯಮಯವಾದ ಪಕ್ಷಿಗಳೂ, ಬೆಳ್ಳಿಯಿಂದಲೂ ಹಾಗೂ ಹವಳಗಳಿಂದಲೂ ಮಾಡಿದ ಪಕ್ಷಿಗಳೂ ಇದ್ದವು. ನಾನಾವಿಧವಾದ ಮುತ್ತು-ರತ್ನಗಳಿಂದ ಚಿತ್ರಿತವಾದ ಹಾವುಗಳಿದ್ದವು. ಜಾತಿಗೆ ಅನುರೂಪವಾದ ಶುಭಲಕ್ಷಣಗಳಿಂದ ಕೂಡಿದ ಕುದುರೆಗಳಿದ್ದವು.॥12॥

ಮೂಲಮ್ - 13

ಪ್ರವಾಲಜಾಂಬೂನದಪುಷ್ಪಪಕ್ಷಾಃ
ಸಲೀಲಮಾವರ್ಜಿತಜಿಹ್ಮಪಕ್ಷಾಃ ।
ಕಾಮಸ್ಯ ಸಾಕ್ಷಾದಿವ ಭಾಂತಿ ಪಕ್ಷಾಃ
ಕೃತಾ ವಿಹಂಗಾಃ ಸುಮುಖಾಃ ಸುಪಕ್ಷಾಃ ॥

ಅನುವಾದ

ಆ ವಿಮಾನದಲ್ಲಿ ಹವಳ ಹಾಗೂ ಸುವರ್ಣಪುಷ್ಪಗಳೇ ರೆಕ್ಕೆಗಳ ರೂಪದಲ್ಲಿದ್ದ ಪಕ್ಷಿಗಳು ಇದ್ದವು. ಅವುಗಳು ವಕ್ರವಾಗಿದ್ದ ರೆಕ್ಕೆಗಳನ್ನು ಲೀಲಾಜಾಲವಾಗಿ ಒಳಕ್ಕೆ ಎಳೆದುಕೊಳ್ಳುತ್ತಿದ್ದವು. ಕಾಮದೇವನಿಗೆ ಒತ್ತಾಸೆ ನೀಡುವ ವಸ್ತುಗಳೋ ಎಂಬಂತೆ ಆ ಹಕ್ಕಿಗಳು ಪ್ರಕಾಶಿಸುತ್ತಿದ್ದವು. ಅಂತಹ ಸುಂದರವಾದ, ಅನುಪಮವಾದ ರೆಕ್ಕೆಗಳಿಂದಲೂ, ಸುಂದರವಾದ ಮುಖಗಳಿಂದಲೂ ಕೂಡಿದ ಪಕ್ಷಿಗಳು ಅದರಲ್ಲಿ ಚಿತ್ರಿತವಾಗಿದ್ದವು.॥13॥

ಮೂಲಮ್ - 14

ನಿಯುಜ್ಯಮಾನಾಸ್ತು ಗಜಾಃ ಸುಹಸ್ತಾಃ
ಸಕೇಸರಾಶ್ಚೋತ್ಪಲಪತ್ರಹಸ್ತಾಃ ।
ಬಭೂವ ದೇವೀ ಚ ಕೃತಾ ಸುಹಸ್ತಾ
ಲಕ್ಷ್ಮೀಸ್ತಥಾ ಪದ್ಮಿನಿ ಪದ್ಮಹಸ್ತಾ ॥

ಅನುವಾದ

ಆ ಭವನದಲ್ಲಿ ಲಕ್ಷ್ಮೀದೇವಿಯು ತನ್ನ ಮನೋಹರ ಹಸ್ತಗಳಲ್ಲಿ ಪದ್ಮಗಳನ್ನು ಧರಿಸಿ ಪದ್ಮಸರೋವರದಲ್ಲಿ ವಿರಾಜಿಸುತ್ತಿರುವಂತೆ ಚಿತ್ರಿತವಾಗಿತ್ತು. ಅವಳ ಇಕ್ಕೆಡೆಗಳಲ್ಲಿ ಸುಂದರವಾದ ಸೊಂಡಿಲುಗಳುಳ್ಳ ಆನೆಗಳನ್ನು ಚಿತ್ರಿಸಿದ್ದರು. ಅವುಗಳ ಸೊಂಡಿಲುಗಳಲ್ಲಿ ತಾವರೆ ಹೂವುಗಳನ್ನು, ಎಲೆಗಳನ್ನು ಹಿಡಿದುಕೊಂಡು, ದೇವಿಗೆ ಆತ್ಮಾರ್ಪಣ ಬುದ್ಧಿಯಿಂದ ಅಭಿಷೇಕ ಮಾಡುತ್ತಿರುವಂತೆ ಇತ್ತು.॥14॥

ಮೂಲಮ್ - 15

ಇತೀವ ತದ್ಗೃಹಮಭಿಗಮ್ಯ ಶೋಭನಂ
ಸವಿಸ್ಮಯೋ ನಗಮಿವ ಚಾರುಶೋಭನಮ್ ।
ಪುನಶ್ಚ ತತ್ ಪರಮ ಸುಗಂಧಿ ಸುಂದರಂ
ಹಿಮಾತ್ಯಯೇ ನಗಮಿವ ಚಾರುಕಂದರಮ್ ॥

ಅನುವಾದ

ಪರ್ವತದಂತೆ ಉನ್ನತವಾದ, ಆಹ್ಲಾದಕರವಾಗಿ ಶೋಭಿಸುತ್ತಿರುವ ಗೃಹವನ್ನು (ಪುಷ್ಪಕವನ್ನು) ನೋಡಿ ಹನುಮಂತನು ಆಶ್ಚರ್ಯಚಕಿತನಾದನು. ಸುಂದರವಾದ ಪೊಟರೆಯಿಂದ ಕೂಡಿದ ಸುಗಂಧಯುಕ್ತವಾದ ವೃಕ್ಷಗಳಂತೆಯೂ, ವಸಂತಕಾಲದಲ್ಲಿ ಸುಂದರವಾದ ಗುಹೆಯಿಂದ ಕೂಡಿದ ಪರ್ವತದಂತೆಯೂ ಶೋಭಾಯಮಾನವಾದ ಆ ಭವನವನ್ನು ಅವನು ಮಗದೊಮ್ಮೆ ಪ್ರವೇಶಿಸಿದನು.॥15॥

ಮೂಲಮ್ - 16

ತತಃ ಸ ತಾಂ ಕಪಿರಭಿಪತ್ಯ ಪೂಜಿತಾಂ
ಚರನ್ ಪುರೀಂ ದಶಮುಖಬಾಹುಪಾಲಿತಾಮ್ ।
ಅದೃಶ್ಯ ತಾಂ ಜನಕಸುತಾಂ ಸುಪೂಜಿತಾಂ
ಸುದುಃಖಿತಃ ಪತಿಗುಣವೇಗನಿರ್ಜಿತಾಮ್ ॥

ಅನುವಾದ

ಹೀಗೆ ಹನುಮಂತನು ರಾವಣೇಶ್ವರನಿಂದ ಪರಿಪಾಲಿಸಲ್ಪಡುತ್ತಿದ್ದ ಹಾಗೂ ಸಕಲರಿಂದ ಪೂಜಿಸಲ್ಪಡುತ್ತಿದ್ದ ಲಂಕಾಪಟ್ಟಣದ ಎಲ್ಲ ಕಡೆಗಳಲ್ಲಿಯೂ ಸಂಚರಿಸಿ ಸೀತಾದೇವಿಯನ್ನು ಹುಡುಕಿದನು. ಆದರೂ ಪರಮ ಪೂಜ್ಯಳೂ, ಶ್ರೀರಾಮನ ಸದ್ಗುಣ ಪ್ರಭಾವಗಳಿಂದ ಜಯಿಸಲ್ಪಟ್ಟ ; ಅಷ್ಟೇ ಅಲ್ಲ ಶ್ರೀರಾಮನು ಶಿವಧನುಸ್ಸಿನ ಗುಣವನ್ನು (ನಾರಾಚವನ್ನು) ಬಲವಾಗಿಸೆಳೆದು ಧನುರ್ಭಂಗ ಮಾಡಿ ಜಯಿಸಲ್ಪಟ್ಟವಳಾದ ಆ ಜಾನಕಿಯನ್ನು ಕಾಣದೆ ಅವನು ವಿಚಾರಗ್ರಸ್ತನಾದನು.॥16॥

ಮೂಲಮ್ - 17

ತತಸ್ತದಾ ಬಹುವಿಧಭಾವಿತಾತ್ಮನಃ
ಕೃತಾತ್ಮನೋ ಜನಕಸುತಾಂ ಸುವರ್ತ್ಮನಃ ।
ಅಪಶ್ಯತೋಽಭವದತಿದುಃಖಿತಂ ಮನಃ
ಸುಚಕ್ಷುಷಃ ಪ್ರವಿಚರತೋ ಮಹಾತ್ಮನಃ ॥

ಅನುವಾದ

ಆ ಸಮುದಲ್ಲಿ ಲಂಕಾಪಟ್ಟಣದಲ್ಲಿ ಸಂಚರಿಸುತ್ತಿದ್ದ ಮಹಾತ್ಮನಾದ ಬಹುವಿಧವಾಗಿ ಆಗುಹೋಗುಗಳನ್ನು ಮನಸ್ಸಿನಲ್ಲಿಯೇ ವಿಚಾರಮಾಡುತ್ತಿದ್ದ, ತೀಕ್ಷ್ಣಬುದ್ಧಿಯವನಾದ, ಸದಾಚಾರ ಸಂಪನ್ನನಾದ, ಹನುಮಂತನು ಸೂಕ್ಷ್ಮದೃಷ್ಟಿಯಿಂದ ಹೂಡುಕಿದರೂ ಸೀತೆಯನ್ನು ಕಾಣದೆ ಅವನ ಮನಸ್ಸು ಅತಿ ದುಃಖಿತವಾಯಿತು. ॥17॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಸಪ್ತಮಃ ಸರ್ಗಃ ॥ 7 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಏಳನೆಯ ಸರ್ಗವು ಮುಗಿಯಿತು.