००६ अन्तःपुरवर्णनम्

वाचनम्
ಭಾಗಸೂಚನಾ

ಹನುಮಂತನು ರಾವಣನ ಅರಮನೆಯಲ್ಲಿಯೂ, ಇತರ ರಾಕ್ಷಸರ ಮನೆಗಳಲ್ಲಿಯೂ, ಸೀತೆಯನ್ನು ಹುಡುಕಿದುದು

ಮೂಲಮ್ - 1

ಸ ನಿಕಾಮಂ ವಿಮಾನೇಷು ವಿಷಣ್ಣಃ ಕಾಮರೂಪಧೃತ್ ।
ವಿಚಚಾರ ಪುನರ್ಲಂಕಾಂ ಲಾಘವೇನ ಸಮನ್ವಿತಃ ॥

ಅನುವಾದ

ಮನಬಂದಂತೆ ರೂಪಧರಿಸುವ ಶಕ್ತಿಯನ್ನು ಹೊಂದಿದ್ದ ಆ ಕಪೀಶ್ವರನು, ಉಪ್ಪರಿಗೆಗಳಿಂದ ಕೂಡಿದ್ದ ಅರಮನೆಗಳಲ್ಲಿ ಸಂಚರಿಸುತ್ತಾ ಸೀತೆಯನ್ನು ಕಾಣದೆ ದುಃಖಿತನಾಗಿ, ಲಂಕೆಯ ಸುತ್ತಲೂ ಪುನಃ ಹುಡುಕುವ ಸಲುವಾಗಿ ವೇಗದಿಂದ ನಡೆಯತೊಡಗಿದನು. ॥1॥

ಮೂಲಮ್ - 2

ಆಸಸಾದಾಥ ಲಕ್ಷ್ಮೀವಾನ್ ರಾಕ್ಷಸೇಂದ್ರನಿವೇಶನಮ್ ।
ಪ್ರಾಕಾರೇಣಾರ್ಕವರ್ಣೇನ ಭಾಸ್ವರೇಣಾಭಿಸಂವೃತಮ್ ॥

ಅನುವಾದ

ಶುಭಲಕ್ಷಣ ಸಂಪನ್ನನಾದ ಮಾರುತಿಯು ಸೂರ್ಯಕಾಂತಿಯಂತೆ ಪ್ರಕಾಶಿಸುತ್ತಿರುವ ಪ್ರಾಕಾರಗಳಿಂದ ಸುತ್ತುವರಿಯಲ್ಪಟ್ಟ ರಾಕ್ಷಸೇಂದ್ರನಾದ ರಾವಣನ ಅರಮನೆಗೆ ಬಂದನು. ॥2॥

ಮೂಲಮ್ - 3

ರಕ್ಷಿತಂ ರಾಕ್ಷಸೈರ್ಭೀಮೈಃ ಸಿಂಹೈರಿವ ಮಹದ್ವನಮ್ ।
ಸಮೀಕ್ಷಮಾಣೋ ಭವನಂ ಚಕಾಶೇ ಕಪಿಕುಂಜರಃ ॥

ಅನುವಾದ

ಸಿಂಹಗಳಿಂದ ರಕ್ಷಿತವಾದ ಮಹಾರಣ್ಯದಂತೆ ಆ ರಾವಣನ ಭವನವನ್ನು ಭಯಂಕರರಾದ ರಾಕ್ಷಸರಿಂದ ರಕ್ಷಿಸಲ್ಪಡುತ್ತಿತ್ತು. ಅಂತಹ ಭವನವನ್ನು ಪರಿಕಿಸಿ ನೋಡಿದ ಆ ಕಪಿವರನು ಆಶ್ಚರ್ಯ ಚಕಿತನಾದನು. ॥3॥

ಮೂಲಮ್ - 4

ರೂಪ್ಯಕೋಪಹಿತೈಶ್ಚಿತ್ರೈಸ್ತೋರಣೈರ್ಹೇಮ ಭೂಷಿತೈಃ ।
ವಿಚಿತ್ರಾಭಿಶ್ಚ ಕಕ್ಷ್ಯಾಭಿರ್ದ್ವಾರೈಶ್ಚ ರುಚಿರೈರ್ವೃತಮ್ ॥

ಅನುವಾದ

ರಾವಣನ ಆ ಅರಮನೆಯು ಬೆಳ್ಳಿಯಿಂದ ಮಾಡಿದ ಚಿತ್ರಗಳಿಂದ ಅಲಂಕೃತವಾಗಿತ್ತು. ಸುವರ್ಣಭೂಷಿತವಾದ ಹೊರ ಬಾಗಿಲುಗಳಿಂದ ಕೂಡಿದ್ದಿತು. ವಿಚಿತ್ರವಾದ ಅಂತಃಪುರಗಳಿಂದಲೂ, ಸುಂದರವಾದ ಒಳಬಾಗಿಲುಗಳಿಂದಲೂ ಕೂಡಿದ್ದ ರಾವಣನ ಅಂತಃಪುರವನ್ನು ಹನುಮಂತನು ವೀಕ್ಷಿಸಿದನು.॥4॥

ಮೂಲಮ್ - 5

ಗಜಾಸ್ಥಿತೈರ್ಮಹಾಮಾತ್ರೈಃ ಶೂರೈಶ್ಚ ವಿಗತಶ್ರಮೈಃ ।
ಉಪಸ್ಥಿತಮಸಂಹಾರ್ಯೈರ್ಹಯೈಃ ಸ್ಸ್ಯಂದನಯಾಯಿಭಿಃ ॥

ಅನುವಾದ

ಆ ಅರಮನೆಯು ಆನೆಗಳ ಮೇಲೆ ಕುಳಿತ್ತಿದ್ದ ಮಾವಟಿಗರಿಂದಲೂ, ಬಳಲಿಕೆಯೇ ಇಲ್ಲದ ಶೂರರಿಂದಲೂ, ಅಪ್ರತಿಹತವಾದ ವೇಗವುಳ್ಳ ರಥಗಳನ್ನೆಳೆಯುವ ಕುದುರೆಗಳಿಂದಲೂ, ವಿಚಿತ್ರವಾದ ರಥಗಳಿಂದಲೂ ಸಮಾವೃತವಾಗಿತ್ತು. ॥5॥

ಮೂಲಮ್ - 6

ಸಿಂಹವ್ಯಾಘ್ರತನುತ್ರಾಣೈರ್ದಾಂತಕಾಂಚನರಾಜತೈಃ ।
ಘೋಷವದ್ಭಿರ್ವಿಚಿತ್ರೈಶ್ಚ ಸದಾ ವಿಚರಿತಂ ರಥೈಃ ॥

ಅನುವಾದ

ಆ ರಥಗಳು ಸಿಂಹ-ವ್ಯಾಘ್ರಗಳ ಚರ್ಮಗಳಿಂದ ಹೊದಿಸಲ್ಪಟ್ಟಿದ್ದು ದಂತ, ಚಿನ್ನ, ಬೆಳ್ಳಿಗಳಿಂದ ಮಾಡಿದ ಪ್ರತಿಮೆಗಳಿಂದ ಸಮಾವೃತವಾಗಿದ್ದವು. ವಿಚಿತ್ರವಾದ ಶಬ್ದಗಳನ್ನು ಮಾಡುತ್ತಾ ಅತ್ತಂದಿತ್ತ ಸಂಚರಿಸುತ್ತಿದ್ದುವು. ॥6॥

ಮೂಲಮ್ - 7

ಬಹು ರತ್ನಸಮಾಕೀರ್ಣಂ ಪರಾರ್ಧ್ಯಾಸನಭಾಜನಮ್ ।
ಮಹಾರಥಸಮಾವಾಸಂ ಮಹಾರಥಮಹಾಸ್ವನಮ್ ॥

ಅನುವಾದ

ರಾವಣನ ಆ ಅರಮನೆಯು ಹೇರಳವಾದ ಮುತ್ತುಗಳಿಂದಲೂ, ನಾನಾ ಬಗೆಯ ರತ್ನಗಳಿಂದಲೂ, ಅನರ್ಘ್ಯವಾದ ಆಸನಗಳಿಂದಲೂ, ಪಾತ್ರೆಗಳಿಂದಲೂ, ಅಲಂಕರಿಸಲ್ಪಟ್ಟಿತ್ತು. ಮಹಾರಥಿಕರಿಗೆ ನಿವಾಸ ಸ್ಥಾನವಾಗಿತ್ತು. ಮಹಾರಥಗಳ ಧ್ವನಿಗಳಿಂದ ಕೂಡಿತ್ತು. ॥7॥

ಮೂಲಮ್ - 8

ದೃಶ್ಯೈಶ್ಚ ಪರಮೋದಾರೈಸ್ತೈಸ್ತೈಶ್ಚ ಮೃಗಪಕ್ಷಿಭಿಃ ।
ವಿವಿಧೈರ್ಬಹುಸಾಹಸ್ರೈಃ ಪರಿಪೂರ್ಣಂ ಸಮಂತತಃ ॥

ಅನುವಾದ

ಆ ಅರಮನೆಯ ಸುತ್ತಲೂ ಸುಂದರವಾದ ಅನೇಕ ದೃಶ್ಯಗಳಿದ್ದವು. ಜಿಂಕೆಗಳೇ ಮುಂತಾದ ಮೃಗಗಳೂ, ಶಾರಿಕಾದಿ ಅನೇಕ ವಿಧವಾದ ಪಕ್ಷಿಗಳು, ಅನೇಕ ಸಾವಿರ ಮೃಗಪಕ್ಷಿಗಳು ಅರಮನೆಯ ಸುತ್ತಲೂ ವಾಸಿಸುತ್ತಿದ್ದವು. ॥8॥

ಮೂಲಮ್ - 9

ವಿನೀತೈರಂತಪಾಲೈಶ್ಚ ರಕ್ಷೋಭಿಶ್ಚ ಸುರಕ್ಷಿತಮ್ ।
ಮುಖ್ಯಾಭಿಶ್ಚ ವರಸ್ತ್ರೀಭಿಃ ಪರಿಪೂರ್ಣಂ ಸಮಂತತಃ ॥

ಅನುವಾದ

ಆ ಅಂತಃಪುರವು ಸುಶಿಕ್ಷಿತರೂ, ವಿನೀತರೂ ಆದ ಕಾವಲುಗಾರರಿಂದಲೂ, ರಾಕ್ಷಸರಿಂದಲೂ ಸುರಕ್ಷಿತವಾಗಿತ್ತು. ಮುಖ್ಯರಾದ, ಶ್ರೇಷ್ಠರಾದ ವನಿತಾರತ್ನಗಳಿಂದ ತುಂಬಿ ಹೋಗಿತ್ತು. ॥9॥

ಮೂಲಮ್ - 10

ಮುದಿತಪ್ರಮದಾರತ್ನಂ ರಾಕ್ಷಸೇಂದ್ರನಿವೇಶನಮ್ ।
ವರಾಭರಣಸಂಹ್ರಾದೈಃ ಸಮುದ್ರಸ್ವನನಿಃಸ್ವನಮ್ ॥

ಅನುವಾದ

ಆ ರಾಕ್ಷಸೇಂದ್ರನ ನಿವಾಸವು ಸಂತೋಷಭರಿತರಾದ ಉತ್ತಮ ಸ್ತ್ರೀಯರಿಂದ ಸಂಪನ್ನವಾಗಿತ್ತು. ರತ್ನಪ್ರಾಯರಾದ ಸ್ತ್ರೀಯರು ತೊಟ್ಟಿದ್ದ ಶ್ರೇಷ್ಠವಾದ ಆಭರಣಗಳ ನಿನಾದವು ಭೋರ್ಗರೆಯುವ ಸಮುದ್ರದ ಶಬ್ದವನ್ನೇ ಅನುಕರಿಸುತ್ತಿತ್ತು. ॥10॥

ಮೂಲಮ್ - 11

ತದ್ರಾಜಗುಣಸಂಪನ್ನಂ ಮುಖ್ಯೈಶ್ಚ ವರಚಂದನೈಃ ।
ಮಹಾಜನ್ಯೆಃ ಸಮಾಕೀರ್ಣಂ ಸಿಂಹೈರಿವ ಮಹದ್ವನಮ್ ॥

ಅನುವಾದ

ಆ ಅರಮನೆಯು ಛತ್ರ-ಚಾಮರ-ಸಿಂಹಾಸನಾದಿ ರಾಜ ಚಿಹ್ನೆಗಳಿಂದ ಒಪ್ಪುತ್ತಿತ್ತು. ಶ್ರೇಷ್ಠವಾದ ಅಗರು-ಚಂದನಗಳಿಂದ ಸುವಾಸಿತವಾಗಿತ್ತು. ಸಿಂಹಗಳಿಂದ ನಿಬಿಡವಾದ ಮಹಾವನದಂತೆ ಬಲಿಷ್ಠರಾದ ರಾಕ್ಷಸರಿಂದ ನಿಬಿಡವಾಗಿತ್ತು. ॥11॥

ಮೂಲಮ್ - 12

ಭೇರೀಮೃದಂಗಾಭಿರುತಂ ಶಂಖಘೋಷವಿನಾದಿತಮ್ ।
ನಿತ್ಯಾರ್ಚಿತಂ ಪರ್ವಹುತಂ ಪೂಜಿತಂ ರಾಕ್ಷಸೈಃ ಸದಾ ॥

ಅನುವಾದ

ಭೇರಿ-ಮೃದಂಗ ಮುಂತಾದ ವಾದ್ಯಗಳಿಂದಲೂ, ಶಂಖಧ್ವನಿಯಿಂದಲೂ ನಿನಾದಿತವಾಗಿತ್ತು. ರಾಕ್ಷಸರು ಆ ಅರಮನೆಯನ್ನು ನಿತ್ಯವೂ ಪೂಜಿಸಿ ಸಿಂಗರಿಸುತ್ತಿದ್ದರು. ಪರ್ವದಿನಗಳಲ್ಲಿ ಶಾಂತಿಗಾಗಿ ಹೋಮ ಮಾಡುತ್ತಿದ್ದರು. ॥12॥

ಮೂಲಮ್ - 13

ಸಮುದ್ರಮಿವ ಗಂಭೀರಂ ಸಮುದ್ರಮಿವ ನಿಃಸ್ವನಮ್ ।
ಮಹಾತ್ಮನೋ ಮಹದ್ವೇಶ್ಮ ಮಹಾರತ್ನ ಪರಿಚ್ಛದಮ್ ॥

ಮೂಲಮ್ - 14

ಮಹಾರತ್ನ ಸಮಾಕೀರ್ಣಂ ದದರ್ಶ ಸ ಮಹಾಕಪಿಃ ।
ವಿರಾಜಮಾನಂ ವಪುಷಾ ಗಜಾಶ್ವ ರಥಸಂಕುಲಮ್ ॥

ಮೂಲಮ್ - 15

ಲಂಕಾಭರಣಮಿತ್ಯೇವ ಸೋಽಮನ್ಯತ ಮಹಾಕಪಿಃ ।
ಚಚಾರ ಹನುಮಾಂಸ್ತತ್ರ ರಾವಣಸ್ಯ ಸಮೀಪತಃ ॥

ಅನುವಾದ

ಆ ಅರಮನೆಯು ಸಮುದ್ರದಂತೆ ಗಂಭೀರವೂ, ಆಳವೂ, ರಾವಣನ ಭಯದಿಂದ ನಿಶ್ಶಬ್ದವಾಗಿತ್ತು. ಮಹಾರತ್ನಗಳಿಂದ ಸಮಲಂಕೃತವಾಗಿತ್ತು. ಆನೆ, ಕುದುರೆ, ರಥಗಳಿಂದ ಅದು ತುಂಬಿಹೋಗಿತ್ತು. ಮಹಾರತ್ನಗಳಿಂದ ವ್ಯಾಪ್ತವಾಗಿದ್ದು ತನ್ನ ಕಾಂತಿಯಿಂದಲೇ ದೇದೀಪ್ಯಮಾನವಾಗಿ ಬೆಳಗುತ್ತಿತ್ತು. ಮಹಾಕಾಯನಾದ ರಾವಣನ ಅಂತಹ ಸೌಧವನ್ನು ಹನುಮಂತನು ನೋಡಿದನು. ಆ ಸುಂದರವಾದ ಅರಮನೆಯನ್ನು ಲಂಕಾಧಿದೇವತೆಯ ಆಭರಣವೆಂದೇ ಹನುಮಂತನು ಭಾವಿಸಿದನು. ಆಗ ಅವನು ರಾವಣನ ಬಳಿಯಲ್ಲೇ ಸಂಚರಿಸುತ್ತಿದ್ದನು. ॥13-15॥

ಮೂಲಮ್ - 16

ಗೃಹಾದ್ಗೃಹಂ ರಾಕ್ಷಸಾನಾಮುದ್ಯಾನಾನಿ ಚ ವಾನರಃ ।
ವೀಕ್ಷಮಾಣೋ ಹ್ಯಸಂತ್ರಸ್ತಃ ಪ್ರಾಸಾದಾಂಶ್ಚ ಚಚಾರ ಸಃ ॥

ಅನುವಾದ

ವಾನರಶ್ರೇಷ್ಠನಾದ ಮಾರುತಿಯು ಸೀತೆಯನ್ನು ಹುಡುಕಲು ರಾಕ್ಷಸರ ಒಂದು ಮನೆಯಿಂದ ಮತ್ತೊಂದು ಮನೆಗೆ ಹೋಗುತ್ತಿದ್ದನು. ಸುತ್ತಲೂ ಇದ್ದ ಉದ್ಯಾನವನಗಳಲ್ಲಿಯೂ ಎಲ್ಲ ಪ್ರಾಸಾದಗಳಲ್ಲಿಯೂ ನಿರ್ಭಯನಾಗಿ ಸಂಚರಿಸಿದನು.॥16॥

ಮೂಲಮ್ - 17

ಅವಪ್ಲುತ್ಯ ಮಹಾವೇಗಃ ಪ್ರಹಸ್ತಸ್ಯ ನಿವೇಶನಮ್ ।
ತತೋಽನ್ಯತ್ ಪುಪ್ಲುವೇ ವೇಶ್ಮ ಮಹಾಪಾರ್ಶ್ವಸ್ಯವೀರ್ಯವಾನ್ ॥

ಮೂಲಮ್ - 18

ಅಥ ಮೇಘಪ್ರತೀಕಾಶಂ ಕುಂಭಕರ್ಣನಿವೇಶನಮ್ ।
ವಿಭೀಷಣಸ್ಯ ಚ ತಥಾ ಪುಪ್ಲುವೇ ಸ ಮಹಾಕಪಿಃ ॥

ಮೂಲಮ್ - 19

ಮಹೋದರಸ್ಯ ಚ ಗೃಹಂ ವಿರೂಪಾಕ್ಷಸ್ಯ ಚೈವ ಹಿ ।
ವಿದ್ಯುಜ್ಜಿಹ್ವಸ್ಯ ಭವನಂ ವಿದ್ಯುನ್ಮಾಲೇಸ್ತಥೈವ ಚ ॥

ಮೂಲಮ್ - 20

ವಜ್ರದಂಷ್ಟ್ರಸ್ಯ ಚ ತಥಾ ಪುಪ್ಲುವೇ ಸ ಮಹಾಕಪಿಃ ।
ಶುಕಸ್ಯ ಚ ಮಹಾವೇಗಃ ಸಾರಣಸ್ಯ ಚ ಧೀಮತಃ ॥

ಮೂಲಮ್ - 21

ತಥಾ ಚೇಂದ್ರಜಿತೋ ವೇಶ್ಮ ಜಗಾಮ ಹರಿಯೂಥಪಃ ।
ಜಂಬುಮಾಲೇಃ ಸುಮಾಲೇಶ್ಚ ಜಗಾಮ ಭವನಂ ತತಃ ॥

ಅನುವಾದ

ಮಹಾವೇಗಶಾಲಿಯೂ, ಪರಾಕ್ರಮಿಯೂ ಆದ ವಾಯು ನಂದನನು ಹಾರಿಕೊಂಡೇ ಪ್ರಹಸ್ತನ ಮನೆಗೆ ಹೋದನು. ಅಲ್ಲಿಂದ ಮಹಾಪಾರ್ಶ್ವನೆಂಬ ರಾಕ್ಷಸಮುಖ್ಯನ ಮನೆಗೆ ಹಾರಿದನು. ಅಲ್ಲೆಲ್ಲೂ ಸೀತೆಯನ್ನು ಕಾಣದೆ ಮೇಘಸದೃಶನಾದ ಕುಂಭಕರ್ಣನ ಮನೆಗೆ ಹೋದನು. ಅಲ್ಲಿಂದ ಮುಂದೆ ವಿಭೀಷಣನ ಮನೆಗೂ ಹೋದನು. ಅಲ್ಲಿಯೂ ಸೀತಾದೇವಿಯನ್ನು ಕಾಣದೆ ಮುಂದೆ ರಾಕ್ಷಸಮುಖ್ಯರಾದ ಮಹೋದರ, ವಿರೂಪಾಕ್ಷ, ವಿದ್ಯುಜ್ಜಿಹ್ವ, ವಿದ್ಯುನ್ಮಾಲಿಗಳ ಮನೆಗಳಿಗೆ ಅನುಕ್ರಮವಾಗಿ ಹಾರಿಕೊಂಡೇ ಹೋದನು. ಅಲ್ಲೆಲ್ಲೂ ಸೀತೆಯು ಕಾಣದಿದ್ದಾಗ ಬೆಕ್ಕಿನಷ್ಟೇ ಗಾತ್ರದಲ್ಲಿದ್ದ ಕಪಿ ಮುಖ್ಯನಾದ ಹನುಮಂತನು ವಜ್ರದಂಷ್ಟ್ರನೆಂಬ ರಾಕ್ಷಸನ ಮನೆಗೂ, ಧೀಮಂತನಾದ ಶುಕನ ಮತ್ತು ಸಾರಣನ ಮನೆಗಳಿಗೂ ಕುಪ್ಪಳಿಸಿದನು. ಮುಂದೆ ಇಂದ್ರಜಿತುವಿನ ಮನೆಗೂ, ಜಂಬುಮಾಲಿ ಮತ್ತು ಸುಮಾಲಿಗಳೆಂಬುವರ ಮನೆಗಳಿಗೂ ಹೋದನು. ॥17-21॥

ಮೂಲಮ್ - 22

ರಶ್ಮಿಕೇತೋಶ್ಚ ಭವನಂ ಸೂರ್ಯಶತ್ರೋಸ್ತಥೈವ ಚ ।
ವಜ್ರಕಾಯಸ್ಯ ಚ ತಥಾ ಪುಪ್ಲುವೇ ಸ ಮಹಾಕಪಿಃ ॥

ಮೂಲಮ್ - 23

ಧೂಮ್ರಾಕ್ಷಸ್ಯ ಚ ಸಂಪಾತೇರ್ಭವನಂ ಮಾರುತಾತ್ಮಜಃ ।
ವಿದ್ಯುದ್ರೂಪಸ್ಯ ಭೀಮಸ್ಯ ಘನಸ್ಯ ವಿಘನಸ್ಯ ಚ ॥

ಮೂಲಮ್ - 24

ಶುಕನಾಸಸ್ಯ ವಕ್ರಸ್ಯ ಶಠಸ್ಯ ವಿಕಟಸ್ಯ ಚ ।
ಹ್ರಸ್ವಕರ್ಣಸ್ಯ ದಂಷ್ಟ್ರಸ್ಯ ರೋಮಶಸ್ಯ ಚ ರಕ್ಷಸಃ ॥

ಮೂಲಮ್ - 25

ಯುದ್ಧೋನ್ಮತ್ತಸ್ಯ ಮತ್ತಸ್ಯ ಧ್ವಜಗ್ರೀವಸ್ಯ ರಕ್ಷಸಃ ।
ವಿದ್ಯುಜ್ಜಿಹ್ವೇಂದ್ರಜಿಹ್ವಾನಾಂ ತಥಾ ಹಸ್ತಿಮುಖಸ್ಯ ಚ ॥

ಮೂಲಮ್ - 26

ಕರಾಲಸ್ಯ ಪಿಶಾಚಸ್ಯ ಶೋಣಿತಾಕ್ಷಸ್ಯ ಚೈವ ಹಿ ।
ಕ್ರಮಮಾಣಃ ಕ್ರಮೇಣೈವ ಹನುಮಾನ್ ಮಾರುತಾತ್ಮಜಃ ॥

ಅನುವಾದ

ಸೀತಾದೇವಿಯನ್ನು ಹುಡುಕಲು ಮುಂದುವರಿಯುತ್ತಾ ಮಾರುತಿಯು ರಶ್ಮಿಕೇತು, ಸೂರ್ಯಶತ್ರು, ವಜ್ರಕಾಯ ಇವರ ಮನೆಗಳಿಗೂ ಹಾರಿಕೊಂಡೇ ಹೋದನು. ಬಳಿಕ ಧೂಮ್ರಾಕ್ಷ, ಸಂಪಾತಿ, ವಿದ್ಯುದ್ರೂಪ, ಭೀಮ, ಘನ, ವಿಘನ ಮುಂತಾದವರ ಮನೆಗಳಲ್ಲಿ ನೆಗೆ-ನೆಗೆದು ಹುಡುಕಿದನು. ಮುಂದೆ ಶುಕನಾಸ, ವಕ್ರ, ಶಠ, ವಿಕಟ, ಹ್ರಸ್ವಕರ್ಣ, ದಂಷ್ಟ್ರ, ಲೋಮಶ ಮುಂತಾದ ರಾಕ್ಷಸಶ್ರೇಷ್ಠರ ಮನೆಗಳಿಗೂ ಹೋದನು. ಅಲ್ಲೆಲ್ಲೂ ಸೀತೆಯು ಸಿಕ್ಕದ ಕಾರಣ ಮುಂದೆ ಯುದ್ಧೋನ್ಮತ್ತ, ಮತ್ತ, ಧ್ವಜಗ್ರೀವ, ವಿದ್ಯುಜ್ಜಿಹ್ವ, ದ್ವಿಜಿಹ್ವ, ಹಸ್ತಿಮುಖ, ಕರಾಲ, ಪಿಶಾಚ, ಶೋಣಿತಾಕ್ಷ ಇವರೆಲ್ಲರ ಮನೆಗಳಿಗೆ ಅನುಕ್ರಮವಾಗಿ ಹಾರಿಕೊಂಡೇ ಹೋದನು. ॥22-26॥

ಮೂಲಮ್ - 27

ತೇಷು ತೇಷು ಮಹಾರ್ಹೇಷು ಭವನೇಷು ಮಹಾಯಶಾಃ ।
ತೇಷಾಮೃದ್ಧಿಮತಾಮೃದ್ಧಿಂ ದದರ್ಶ ಸ ಮಹಾಕಪಿಃ ॥

ಅನುವಾದ

ಮಹಾಯಶಸ್ವಿಯಾದ ಆ ಮಹಾಕಪಿಯು ಬಹುಮೂಲ್ಯವಾದ ಆ ಅರಮನೆಗಳಲ್ಲಿ ಸಂಚರಿಸಿ ಸಮೃದ್ಧಿಶಾಲಿಗಳಾದ ರಾಕ್ಷಸರ ಅಪಾರವಾದ ಸಂಪತ್ತನ್ನು ನೋಡಿದನು. ॥27॥

ಮೂಲಮ್ - 28

ಸರ್ವೇಷಾಂ ಸಮತಿಕ್ರಮ್ಯ ಭವನಾನಿ ಸಮಂತತಃ ।
ಆಸಸಾದಾಥ ಲಕ್ಷ್ಮೀವಾನ್ ರಾಕ್ಷಸೇಂದ್ರನಿವೇಶನಮ್ ॥

ಅನುವಾದ

ಆ ಎಲ್ಲ ರಾಕ್ಷಸರ ಮನೆಗಳಲ್ಲಿಯೂ ಸೀತಾದೇವಿಯನ್ನು ಹುಡುಕಿ ನಿರಾಶನಾಗಿ ಶುಭಲಕ್ಷಣಸಂಪನ್ನನಾದ ಮಾರುತಿಯು ರಾಕ್ಷಸೇಂದ್ರನಾದ ರಾವಣನ ಅರಮನೆಯನ್ನು ಪುನಃ ಸೇರಿದನು. ॥28॥

ಮೂಲಮ್ - 29

ರಾವಣಸ್ಯೋಪಶಾಯಿನ್ಯೋ ದದರ್ಶ ಹರಿಸತ್ತಮಃ ।
ವಿಚರನ್ ಹರಿಶಾರ್ದೂಲೋ ರಾಕ್ಷಸೀರ್ವಿಕೃತೇಕ್ಷಣಾಃ ॥

ಅನುವಾದ

ರಾವಣನ ಅರಮನೆಯಲ್ಲಿ ಸಂಚರಿಸುತ್ತಿದ್ದಾಗ ರಾವಣೇಶ್ವರನ ಪರ್ಯಂಕವನ್ನು ರಕ್ಷಿಸುತ್ತಾ ಸಮೀಪದಲ್ಲಿ ಮಲಗಿದ್ದ, ವಿಕಾರವಾದ ಕಣ್ಣುಗಳನ್ನು ಹೊಂದಿದ್ದ ರಾಕ್ಷಸಿಯರನ್ನು ನೋಡಿದನು.॥29॥

ಮೂಲಮ್ - 30

ಶೂಲಮುದ್ಗರಹಸ್ತಾಶ್ಚ ಶಕ್ತಿತೋಮರಧಾರಿಣೀಃ ।
ದದರ್ಶ ವಿವಿಧಾನ್ ಗುಲ್ಮಾಂಸ್ತಸ್ಯ ರಕ್ಷಃಪತೇರ್ಗೃಹೇ ॥

ಅನುವಾದ

ಆ ರಾಕ್ಷಸ ಸ್ತ್ರೀಯರಲ್ಲಿ ಕೆಲವರು ಶೂಲ, ಮುದ್ಗರ, ಶಕ್ತಿ, ತೋಮರ ಮುಂತಾದ ಆಯುಧಗಳನ್ನು ಧರಿಸಿದ್ದರು. ರಾಕ್ಷಸರ ನಾನಾವಿಧವಾದ ಸೇನೆಯ ತುಕಡಿಗಳನ್ನು ರಾವಣನ ನಿಲಯದಲ್ಲಿ ವೀಕ್ಷಿಸಿದನು. ॥30॥

ಮೂಲಮ್ - 31

ರಾಕ್ಷಸಾಂಶ್ಚ ಮಹಾಕಾಯಾನ್ ನಾನಾಪ್ರಹರಣೋದ್ಯತಾನ್ ।
ರಕ್ತಾನ್ ಶ್ವೇತಾನ್ ಸಿತಾಂಶ್ಚಾಪಿ ಹರೀಂಶ್ಚಾಪಿಮಹಾಜವಾನ್ ॥

ಅನುವಾದ

ಆ ಅರಮನೆಯಲ್ಲಿ ಹನುಮಂತನು ಮಹಾಕಾಯರಾದ ವಿಧ-ವಿಧವಾದ ಆಯುಧಗಳನ್ನು ಮೇಲಕ್ಕೆತ್ತಿಕೊಂಡು ನಿಂತಿದ್ದ ರಾಕ್ಷಸರನ್ನು, ಕೆಂಪಾಗಿರುವ, ಬಿಳಿಯ ಬಣ್ಣದ ಮಹಾವೇಗವುಳ್ಳ ಬಂಧಿಸಲ್ಪಟ್ಟ ಕುದುರೆಗಳನ್ನು ನೋಡಿದನು. ॥31॥

ಮೂಲಮ್ - 32

ಕುಲೀನಾನ್ ರೂಪಸಂಪನ್ನಾನ್ ಗಜಾನ್ ಪರಗಜಾರುಜಾನ್ ।
ನಿಷ್ಠಿತಾನ್ ಗಜಶಿಕ್ಷಾ ಯಾಮೈರಾವತಸಮಾನ್ ಯುಧಿ ॥

ಮೂಲಮ್ - 33

ನಿಹಂತೄನ್ ಪರಸೈನ್ಯಾನಾಂ ಗೃಹೇ ತಸ್ಮಿನ್ ದದರ್ಶ ಸಃ ।
ಕ್ಷರತಶ್ಚ ಯಥಾ ಮೇಘಾನ್ ಸ್ರವತಶ್ಚ ಯಥಾಗಿರೀನ್ ॥

ಮೂಲಮ್ - 34

ಮೇಘಸ್ತನಿತನಿರ್ಘೋಷಾನ್ ದುರ್ಧರ್ಷಾನ್ ಸಮರೇ ಪರೈಃ ।
ಸಹಸ್ರಂ ವಾಹಿನೀಸ್ತತ್ರ ಜಾಂಬೂನದಪರಿಷ್ಕೃತಾಃ ॥

ಮೂಲಮ್ - 35

ಹೇಮಜಾಲ ಪರಿಚ್ಛನ್ನಾಸ್ತರುಣಾದಿತ್ಯ ವರ್ಚಸಃ ।
ದದರ್ಶ ರಾಕ್ಷಸೇಂದ್ರಸ್ಯ ರಾವಣಸ್ಯ ನಿವೇಶನೇ ॥

ಅನುವಾದ

ಒಳ್ಳೆಯ ಜಾತಿಯಲ್ಲಿ ಹುಟ್ಟಿದ್ದ, ಒಳ್ಳೆಯ ರೂಪವನ್ನು ಹೊಂದಿದ್ದ, ಶತ್ರುಗಳ ಆನೆಗಳನ್ನು ಗಾಯಗೊಳಿಸುವುದರಲ್ಲಿ ಸಮರ್ಥವಾದ, ಯುದ್ಧವೇ ಮುಂತಾದ ವಿದ್ಯೆಗಳಲ್ಲಿ ಸುಶಿಕ್ಷಿತವಾದ, ಐರಾವತಕ್ಕೆ ಸಮಾನವಾಗಿ ಯುದ್ಧ ಮಾಡಲು ಸಾಮರ್ಥ್ಯವನ್ನು ಹೊಂದಿದ್ದ, ಶತ್ರುಸೈನ್ಯವನ್ನು ಸಂಹರಿಸಲು ಸಮರ್ಥವಾದ ಆನೆಗಳನ್ನು ನೋಡಿದನು. ಆ ಆನೆಗಳು ನೀರನ್ನು ಸುರಿಸುವ ಮೇಘಗಳಳಂತೆ ಹಾಗೂ ಪ್ರವಾಹ ರೂಪವಾಗಿ ನೀರನ್ನು ಸುರಿಸುವ ಬೆಟ್ಟಗಳಂತೆ ಮದೋದಕವನ್ನು ಸುರಿಸುತ್ತಿದ್ದವು. ಮೇಘಗಳಂತೆ ಗರ್ಜಿಸುತ್ತಿದ್ದವು. ಶತ್ರುಗಳಿಂದ ಎದುರಿಸಲು ಅಸಾಧ್ಯವಾಗಿದ್ದ ಆನೆಗಳನ್ನು ಆ ರಾವಣನ ನಿಲಯದಲ್ಲಿ ಕಪಿವರನು ನೋಡಿದನು. ಅವುಗಳು ಭಂಗಾರದ ಆಭರಣಗಳಿಂದ ಶೃಂಗರಿಸಲ್ಪಟ್ಟು, ಮಧ್ಯಾಹ್ನದ ಸೂರ್ಯನಂತೆ ಕಂಗೊಳಿಸುವ ಸಾವಿರಾರು ಪದಾತಿ ಸೈನಿಕರನ್ನು ಆ ರಾವಣನ ನಿವೇಶನದಲ್ಲಿ ಹನುಮಂತನು ನೋಡಿದನು. ॥32-35॥

ಮೂಲಮ್ - 36

ಶಿಬಿಕಾ ವಿವಿಧಾಕಾರಾಃ ಸ ಕಪಿರ್ಮಾರುತಾತ್ಮಜಃ ।
ಲತಾಗೃಹಾಣಿ ಚಿತ್ರಾಣಿ ಚಿತ್ರಶಾಲಾಗೃಹಾಣಿ ಚ ॥

ಮೂಲಮ್ - 37

ಕ್ರೀಡಾಗೃಹಾಣಿ ಚಾನ್ಯಾನಿ ದಾರುಪರ್ವತಕಾನಪಿ ।
ಕಾಮಸ್ಯ ಗೃಹಕಂ ರಮ್ಯಂ ದಿವಾಗೃಹಕಮೇವ ಚ ॥

ಅನುವಾದ

ಬಳಿಕ ವಾಯುಪುತ್ರನಾದ ಹನುಮಂತನು ರಾವಣನ ಅರಮನೆಯಲ್ಲಿ ವಿವಿಧಾಕಾರಗಳಲ್ಲಿದ್ದ ಶೃಂಗರಿಸಲ್ಪಟ್ಟ ಪಲ್ಲಕ್ಕಿಗಳನ್ನು ಲತಾಗೃಹಗಳನ್ನು, ಚಿತ್ರಶಾಲೆಗಳನ್ನು, ಆಟದಮನೆಗಳನ್ನು, ಮರದಿಂದ ಮಾಡಿದ ಕೃತ್ರಮ ಕ್ರೀಡಾಪರ್ವತಗಳನ್ನು, ರಮ್ಯವಾದ ರತಿಮಂದಿರಗಳನ್ನು ಹಗಲಿನ ವಿಹಾರ ಗೃಹಗಳನ್ನು ನೋಡಿದನು.॥36-37॥

ಮೂಲಮ್ - 38

ದದರ್ಶ ರಾಕ್ಷಸೇಂದ್ರಸ್ಯ ರಾವಣಸ್ಯ ನಿವೇಶನೇ ।
ಸ ಮಂದರಗಿರಿಪ್ರಖ್ಯಂ ಮಯೂರಸ್ಥಾನ ಸಂಕುಲಮ್ ॥

ಮೂಲಮ್ - 39

ಧ್ವಜಯಷ್ಟಿಭಿರಾಕೀರ್ಣಂ ದದರ್ಶ ಭವನೋತ್ತಮಮ್ ।
ಅನೇಕರತ್ನಸಂಕೀರ್ಣಂ ನಿಧಿಜಾಲಸಮಾವೃತಾಮ್ ॥

ಮೂಲಮ್ - 40

ಧೀರನಿಷ್ಠಿತ ಕರ್ಮಾಂತಂ ಗೃಹಂ ಭೂತಪತೇರಿವ ।
ಅರ್ಚಿರ್ಭಿಶ್ಚಾಪಿ ರತ್ನಾನಾಂ ತೇಜಸಾ ರಾವಣಸ್ಯ ಚ ॥

ಮೂಲಮ್ - 41

ವಿರರಾಜಾಥ ತದ್ವೇಶ್ಮ ರಶ್ಮಿಮಾನಿವ ರಶ್ಮಿಭಿಃ ।
ಜಂಬೂನದಮಯಾನ್ಯೇವ ಶಯನಾನ್ಯಾಸನಾನಿ ಚ ॥

ಅನುವಾದ

ಆ ಅರಮನೆಯು ಮಂದರ ಪರ್ವತದಂತೆ ಸುವರ್ಣಮಯವಾಗಿದ್ದು ಉನ್ನತವಾಗಿತ್ತು. ನವಿಲುಗಳ ಕ್ರೀಡಾ ಗೃಹಗಳಿಂದ ಸಮಾಕುಲವಾಗಿತ್ತು. ಧ್ವಜದಂಡಗಳಿಂದ ವ್ಯಾಪ್ತವಾಗಿದ್ದ ರಾವಣನ ಉತ್ತಮೋತ್ತಮವಾದ ಪ್ರಾಸಾದವನ್ನು ನೋಡಿದನು. ಭವ್ಯವಾದ ಆ ಅರಮನೆಯು ಅನೇಕವಾದ ರತ್ನಗಳ ರಾಶಿಗಳಿಂದ ತುಂಬಿಹೋಗಿತ್ತು. ಮಹಾಪದ್ಮಾದಿ ನವನಿಧಿಗಳ ಸಮೂಹಗಳಿಂದ ವ್ಯಾಪ್ತವಾಗಿತ್ತು. ಸದಾಶಿವನ ನಿವಾಸವಾದ ಕೈಲಾಸ ಪರ್ವತದಂತೆ, ದೃಢವ್ರತಿಗಳಿಗೆ ಪ್ರಾಪ್ತವಾದ ತಪಃ ಫಲದಂತೆ, ರತ್ನಗಳ ಕಾಂತಿಯಿಂದಲೂ ರಾವಣನ ತೇಜಸ್ಸಿನಿಂದಲೂ ಆ ಮಹಾ ಪ್ರಾಸಾದವು ಕಿರಣಗಳಿಂದ ಕೂಡಿದ ಸೂರ್ಯನಂತೆ ಪ್ರಕಾಶಮಾನವಾಗಿತ್ತು. ಅಲ್ಲಿದ್ದ ಹಾಸಿಗೆಗಳು, ಆಸನಗಳೂ, ಮುಖ್ಯವಾದ ಪಾತ್ರೆಗಳೂ ಎಲ್ಲವೂ ಸುವರ್ಣಮಯವೇ ಆಗಿದ್ದವು.॥38-41॥

ಮೂಲಮ್ - 42

ಭಾಜನಾನಿ ಚ ಶುಭ್ರಾಣಿ ದದರ್ಶ ಹರಿಯೂಥಪಃ ।
ಮಧ್ವಾಸವಕೃತಕ್ಲೇದಂ ಮಣಿಭಾಜನಸಂಕುಲಮ್ ॥

ಮೂಲಮ್ - 43

ಮನೋರಮಮಸಂಬಾಧಂ ಕುಬೇರಭವನಂ ಯಥಾ ।
ನೂಪುರಾಣಾಂ ಚ ಘೋಷೇಣ ಕಾಂಚೀನಾಂ ನಿನದೇನ ಚ ॥

ಮೂಲಮ್ - 44

ಮೃದಂಗತಲಘೋಷೈಶ್ಚ ಘೋಷವದ್ಭಿರ್ವಿನಾದಿತಮ್ ।
ಪ್ರಾಸಾದಸಂಘಾತಯುತಂ ಸ್ತ್ರೀರತ್ನಶತಸಂಕುಲಮ್ ।
ಸುವ್ಯೆಢಕಕ್ಷ್ಯಂ ಹನುಮಾನ್ ಪ್ರವಿವೇಶ ಮಹಾಗೃಹಮ್ ॥

ಅನುವಾದ

ರಾವಣನ ಆ ಅರಮನೆಯಲ್ಲಿ ಮಧುವಿನಿಂದಲೂ, ಆಸವ ಗಳಿಂದಲೂ, ತುಂಬಿದ್ದ ಅನೇಕ ಮಣಿಮಯವಾದ ಪಾತ್ರೆಗಳಿದ್ದವು. ಅದು ಕುಬೇರನ ಅರಮನೆಯಂತೆ ಮನೋಹರವಾಗಿಯೂ, ವಿಶಾಲವಾಗಿಯೂ ಇತ್ತು. ಅದು ಹೆಂಗಸರ ಕಾಲಂದುಗೆಗಳ, ಒಡ್ಯಾಣಗಳ ಹಾಗೂ ಮೃದಂಗ-ತಾಳಗಳ ಧ್ವನಿಗಳಿಂದ ನಿನಾದಿತವಾಗಿತ್ತು. ಪ್ರಾಸಾದಗಳ ಸಮೂಹಗಳಿಂದ ಕೂಡಿದ್ದು, ರತ್ನಪ್ರಾಯರಾದ ನೂರಾರು ಸ್ತ್ರೀಯರಿಂದ ವ್ಯಾಪಿಸಿತ್ತು. ವಿಶಾಲವಾದ ಅನೇಕ ಒಳಹಜಾರಗಳು ಅಲ್ಲಿದ್ದವು. ಅಂತಹ ಅತ್ಯಂತ ಸುಂದರವಾದ ಮಹಾಭವನವನ್ನು ಹನುಮಂತನು ಪ್ರವೇಶಿಸಿದನು.॥42-44॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಷಷ್ಠಃ ಸರ್ಗಃ ॥ 6 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಆರನೆಯ ಸರ್ಗವು ಮುಗಿಯಿತು.