वाचनम्
ಭಾಗಸೂಚನಾ
ಚಂದ್ರಶೋಭಾವರ್ಣನೆ, ಹನುಮಂತನು ರಾವಣನ ಅಂತಃಪುರದಲ್ಲಿ ಸೀತೆಯನ್ನು ಹುಡುಕಿ ಅವಳು ಸಿಕ್ಕದ ಕಾರಣ ದುಃಖಿತನಾದುದು
ಮೂಲಮ್ - 1
ತತಃ ಸ ಮಧ್ಯಂ ಗತಮಂಶುಮಂತಂ
ಜ್ಯೋತ್ಸ್ನಾವಿತಾನಂ ಮಹದುದ್ವಮಂತಮ್ ।
ದದರ್ಶ ಧೀಮಾನ್ ದಿವಿ ಭಾನುಮಂತಂ
ಗೋಷ್ಠೇ ವೃಷಂ ಮತ್ತಮಿವ ಭ್ರಮಂತಮ್ ॥
ಅನುವಾದ
ಅನಂತರ ಗೋಶಾಲೆಯೊಳಗೆ ಗೋವುಗಳ ಮಧ್ಯದಲ್ಲಿ ಸುತ್ತಾಡುತ್ತಿರುವ ಮದಿಸಿದ ಹೋರಿಯಂತೆ ಆಕಾಶದ ಮಧ್ಯ ಭಾಗದಲ್ಲಿ ಅತ್ತಲಿತ್ತ ಸಂಚರಿಸುತ್ತಾ ಪೃಥ್ವಿಯಮೇಲೆ ಅಪಾರವಾದ ಬೆಳದಿಂಗಳನ್ನು ಹೊರಚೆಲ್ಲುತ್ತಾ, ನಕ್ಷತ್ರಗಳೊಡನೆ ಸಂಚರಿಸುತ್ತಿದ್ದ ಚಂದ್ರನನ್ನು ಧೀಮಂತನಾದ ಹನುಮಂತನು ನೋಡಿದನು. ॥1॥
ಮೂಲಮ್ - 2
ಲೋಕಸ್ಯ ಪಾಪಾನಿ ವಿನಾಶಯಂತಂ
ಮಹೋದಧಿಂ ಚಾಪಿ ಸಮೇಧಯಂತಮ್ ।
ಭೂತಾನಿ ಸರ್ವಾಣಿ ವಿರಾಜಯಂತಂ
ದದರ್ಶ ಶೀತಾಂಶುಮಥಾಭಿಯಾಂತಮ್ ॥
ಅನುವಾದ
ಲೋಕದ ಜನರ ದುಃಖವನ್ನು ತನ್ನ ಆಹ್ಲಾದಕರವಾದ ಬೆಳದಿಂಗಳಿನಿಂದ ನಿವಾರಿಸುತ್ತಿದ್ದ, ಸಮುದ್ರವನ್ನು ಉಕ್ಕಿಸುತ್ತಿದ್ದ, ಸರ್ವಪ್ರಾಣಿಗಳನ್ನು ಪ್ರಕಾಶಗೊಳಿಸುತ್ತಿದ್ದ, ಆಕಾಶದಲ್ಲಿ ಸಾಗುತ್ತಿದ್ದ ಅಮೃತ ಕಿರಣಗಳನ್ನು ಸುರಿಸುತ್ತಿದ್ದ ಚಂದ್ರನನ್ನು ಮಾರುತಿಯು ನೋಡಿದನು. ॥2॥
ಮೂಲಮ್ - 3
ಯಾ ಭಾತಿ ಲಕ್ಷ್ಮೀರ್ಭುವಿ ಮಂದರಸ್ಥಾ
ತಥಾ ಪ್ರದೋಷೇಷು ಚ ಸಾಗರಸ್ಥಾ ।
ತಥೈವ ತೋಯೇಷು ಚ ಪುಷ್ಕರಸ್ಥಾ
ರರಾಜ ಸಾ ಚಾರುನಿಶಾಕರಸ್ಥಾ ॥
ಅನುವಾದ
ಪ್ರಪಂಚದಲ್ಲಿ ಮಂದರಪರ್ವತದಲ್ಲಿರುವ ಕಾಂತಿಯು ಪ್ರಕಾಶಿಸುವಂತೆ, ಪ್ರದೋಷಕಾಲದಲ್ಲಿ ಸಾಗರದ ಕಾಂತಿಯು ಪ್ರಕಾಶಿಸುವಂತೆ, ಸರೋವರಗಳಲ್ಲಿರುವ ಕಮಲಗಳ ಕಾಂತಿಯು ಪ್ರಕಾಶಿಸುವಂತೆ, ಚಂದ್ರನಲ್ಲಿದ್ದ ಮನೋಹರವಾದ ಕಾಂತಿಯು ಪ್ರಕಾಶಿಸುತಿತ್ತು. ॥3॥
ಮೂಲಮ್ - 4
ಹಂಸೋ ಯಥಾ ರಾಜತಪಂಜರಸ್ಥಃ
ಸಿಂಹೋ ಯಥಾ ಮಂದರಕಂದರಸ್ಥಃ ।
ವೀರೋ ಯಥಾ ಗರ್ವಿತಕುಂಜರಸ್ಥ-
ಶ್ಚಂದ್ರೋಪಿ ಬಭ್ರಾಜ ತಥಾಂಬರಸ್ಥಃ ॥
ಅನುವಾದ
ಬೆಳ್ಳಿಯ ಪಂಜರದಲ್ಲಿರುವ ಹಂಸದಂತೆ, ಮಂದರಾಚಲದ ಗುಹೆಯಲ್ಲಿದ್ದ ಸಿಂಹವು ಪ್ರಕಾಶಿಸುವಂತೆ, ಮದಿಸಿದ ಆನೆಯ ಮೇಲೆ ಕುಳಿತಿರುವ ವೀರನಂತೆ, ಚಂದ್ರನು ಅಂಬರದಲ್ಲಿ ದೇದೀಪ್ಯ ಮಾನವಾಗಿ ಪ್ರಕಾಶಿಸುತ್ತಿದ್ದನು.॥4॥
ಮೂಲಮ್ - 5
ಸ್ಥಿತಃ ಕಕುದ್ಮಾನಿವ ತೀಕ್ಷ್ಣಶೃಂಗೋ
ಮಹಾಚಲಃ ಶ್ವೇತ ಇವೋಚ್ಚಶೃಂಗಃ ।
ಹಸ್ತೀವ ಜಾಂಬೂನದಬದ್ಧ ಶೃಂಗೋ
ರರಾಜ ಚಂದ್ರಃ ಪರಿಪೂರ್ಣಶೃಂಗಃ ॥
ಅನುವಾದ
ಚೂಪಾದ ಕೋಡುಗಳುಳ್ಳ ಗೂಳಿಯಂತೆಯೂ, ಎತ್ತರವಾದ ಶಿಖರಗಳಿರುವ ಪರ್ವತ ದಂತೆಯೂ, ಭಂಗಾರದ ಪಟ್ಟಿಗಳಿಂದ ಅಲಂಕೃತವಾದ ದಂತಗಳುಳ್ಳ ಆನೆಯಂತೆಯೂ, ಪರಿಪೂರ್ಣ ಷೋಡಶ ಕಲೆಗಳಿಂದ ಚಂದ್ರನು ವಿರಾಜಿಸುತ್ತಿದ್ದನು. ॥5॥
ಮೂಲಮ್ - 6
ವಿನಷ್ಟ ಶೀತಾಂಬುತುಷಾರಪಂಕೋ
ಮಹಾಗ್ರಹಗ್ರಾಹವಿನಷ್ಟಪಂಕಃ ।
ಪ್ರಕಾಶಲಕ್ಷ್ಮ್ಯಾಶ್ರಯನಿರ್ಮಲಾಂಕೋ
ರರಾಜ ಚಂದ್ರೋ ಭಗವಾನ್ ಶಶಾಂಕಃ ॥
ಅನುವಾದ
ಮಂಜಿನ ತುಂತುರುಗಳೆಂಬ ಮಾಲಿನ್ಯವನ್ನು ದೂರಮಾಡಿದ್ದ ಗ್ರಹರಾಜನಾದ ಸೂರ್ಯನ ಕಿರಣಗಳ ಪ್ರತಿಲನದಿಂದಾಗಿ ಉಜ್ವಲವಾದ ಬೆಳಕನ್ನು ಹೊಂದಿ ಕತ್ತಲೆಯನ್ನು ಹೋಗಲಾಡಿಸಿದ್ದ, ಪ್ರಕಾಶ ಲಕ್ಷ್ಮೀಯ ಆಶ್ರಯದಿಂದ ನಿರ್ಮಲವಾಗಿ ಕಾಣುತ್ತಿದ್ದ ಮೃಗಲಾಂಛನವನ್ನು ಹೊಂದಿದ್ದ, ಭಗವಾನ್ ಚಂದ್ರನು ರಾರಾಜಿಸುತ್ತಿದ್ದನು.॥6॥
ಮೂಲಮ್ - 7
ಶಿಲಾತಲಂ ಪ್ರಾಪ್ಯ ಯಥಾ ಮೃಗೇಂದ್ರೋ
ಮಹಾರಣಂ ಪ್ರಾಪ್ಯ ಯಥಾ ಗಜೇಂದ್ರಃ ।
ರಾಜ್ಯಂ ಸಮಾಸಾದ್ಯ ಯಥಾ ನರೇಂದ್ರ-
ಸ್ತಥಾ ಪ್ರಕಾಶೋ ವಿರರಾಜ ಚಂದ್ರಃ ॥
ಅನುವಾದ
ಆಗಸದಲ್ಲಿ ವಿರಾಜಮಾನನಾದ ಶಶಾಂಕನು, ಶಿಲೆಯ ಮೇಲೆ ಸ್ಥಿರವಾಗಿ ನಿಂತಿರುವ ಸಿಂಹದಂತೆ, ಮಹಾರಣರಂಗದಲ್ಲಿ ನಿಂತಿರುವ ಗಜರಾಜನಂತೆ, ಕಳೆದುಹೋದ ರಾಜ್ಯವನ್ನು ಪಡೆದುಕೊಂಡ ಚಕ್ರವರ್ತಿಯಂತೆ, ಪ್ರಕಾಶಮಾನವಾಗಿ ಬೆಳಗುತ್ತಿದ್ದನು.॥7॥
ಮೂಲಮ್ - 8
ಪ್ರಕಾಶಚಂದ್ರೋದಯನಷ್ಟದೋಷಃ
ಪ್ರವೃದ್ಧರಕ್ಷಃ ಪಿಶಿತಾಶದೋಷಃ ।
ರಾಮಾಭಿರಾಮೇರಿತ ಚಿತ್ತದೋಷಃ
ಸ್ವರ್ಗಪ್ರಕಾಶೋ ಭಗವಾನ್ ಪ್ರದೋಷಃ ॥
ಅನುವಾದ
ಪೌರ್ಣಮಿಯ ಪೂರ್ಣ ಚಂದ್ರೋದಯದಿಂದ ಅಂಧಕಾರವು ತೊಲಗಿ ಜಗತ್ತಿನ ಜನರೆಲ್ಲರೂ ಹರ್ಷಿತರಾದರು. ನಿಶಾಚರರು ಮಾಂಸಭಕ್ಷಣಕ್ಕೆ ಪ್ರವೃತ್ತರಾಗಿ ಸಂತೋಷಗೊಂಡರು. ಸ್ತ್ರೀ ಪುರುಷರು ಅನುರಾಗಸೌಖ್ಯದಲ್ಲಿ ಮುಳುಗಿದ್ದರು. ತಮ್ಮ ಮನಸ್ತಾಪಗಳನ್ನು ಕಳೆದುಕೊಂಡು ಎಲ್ಲರಿಗೂ ಆನಂದದಾಯಕವಾದ ಪ್ರದೋಷ ಕಾಲವು ಸೀತಾನ್ವೇಷಣ ತತ್ಪರನಾದ ಹನುಮಂತನಿಗೆ ಸ್ವರ್ಗದಂತೆ ಸುಖದಾಯಕವಾಯಿತು.* ॥8॥
ಟಿಪ್ಪನೀ
- ‘‘ಭಗವಾನ್ ಪ್ರದೋಷಃ’’ –
ಐಶ್ಚರ್ಯಸ್ಯ ಸಮಗ್ರಸ್ಯ ಧರ್ಮಸ್ಯ ಯಶಸಃ ಶ್ರಿಯಃ । ಜ್ಞಾನವೈರಾಗ್ಯಯೋಶ್ಚೈವ ಷಣ್ಣಾಂ ಭಗ ಇತೀರಣಾ॥
ಸಮಗ್ರವಾದ ಐಶ್ಚರ್ಯ, ಸಮಗ್ರವಾದ ಧರ್ಮ, ಸತ್ಕೀರ್ತಿ, ಪೂರ್ಣಸಂಪತ್ತು, ಅಖಂಡ ಜ್ಞಾನ, ನಿರ್ಮಲವಾದ ವೈರಾಗ್ಯ ಈ ಆರು ಭಗ(ಐಶ್ವರ್ಯ)ಗಳುಳ್ಳವವನು ಭಗವಂತನು ಷಡ್ಗುಣೈಶ್ಚರ್ಯ ಸಂಪನ್ನನಾದ ಹನುಮಂತನಿಗೆ ಭಗವತ್ಸ್ವರೂಪವಾದ ಈ ಪ್ರದೋಷಕಾಲವು ಸ್ವರ್ಗತುಲ್ಯವಾಗಿ ಸುಖಾನಂದಗಳನ್ನು ಕೊಟ್ಟಿತು.
ಮೂಲಮ್ - 9
ತಂತ್ರೀಸ್ವನಾಃ ಕರ್ಣಸುಖಾಃ ಪ್ರವೃತ್ತಾಃ
ಸ್ವಪಂತಿ ನಾರ್ಯಃ ಪತಿಭಿಃ ಸುವೃತ್ತಾಃ ।
ನಕ್ತಂಚರಾಶ್ಚಾಪಿ ತಥಾ ಪ್ರವೃತ್ತಾ
ವಿಹರ್ತುಮತ್ಯದ್ಭುತರೌದ್ರವೃತ್ತಾಃ ॥
ಅನುವಾದ
ಆಗ ಲಂಕೆಯಲ್ಲಿ ಕರ್ಣಾನಂದಕರವಾದ ವೀಣಾವಾದನದ ಮಧುರ ಶಬ್ದಗಳು ಕೇಳಿ ಬರುತ್ತಿದ್ದುವು. ಒಳ್ಳೆಯ ಸ್ವಭಾವವುಳ್ಳ ಸ್ತ್ರೀಯರು ತಮ್ಮ ಪತಿಗಳೊಡನೆ ನಿದ್ರಿಸಿದ್ದರು. ಅದ್ಭುತವಾದ ಮತ್ತು ಭಯಂಕರವಾದ ಆಚರಣೆಯುಳ್ಳ ರಾಕ್ಷಸರು ವಿಹರಿಸಲು ಹೊರಟಿದ್ದರು.॥9॥
ಮೂಲಮ್ - 10
ಮತ್ತಪ್ರಮತ್ತಾನಿ ಸಮಾಕುಲಾನಿ
ರಥಾಶ್ವಭದ್ರಾಸನಸಂಕುಲಾನಿ ।
ವೀರಶ್ರಿಯಾ ಚಾಪಿ ಸಮಾಕುಲಾನಿ
ದದರ್ಶ ಧೀಮಾನ್ ಸ ಕಪಿಃ ಕುಲಾನಿ ॥
ಅನುವಾದ
ಧೀರನೂ, ಪ್ರಜ್ಞಾಶಾಲಿಯೂ ಆದ ಹನುಮಂತನು ಅನೇಕ ಭವನಗಳನ್ನು ನೋಡಿದನು. ಕೆಲವು ಮನೆಗಳಲ್ಲಿ ಮದಿರಾಪಾನ ಮತ್ತರಾದ ರಾಕ್ಷಸರಿದ್ದರು. ಕೆಲವು ಮನೆಗಳು ರಥ, ಅಶ್ವ ಮತ್ತು ಭದ್ರಾಸನ (ಆನೆ)ಗಳಿಂದ ಸಂಪನ್ನವಾಗಿದ್ದುವು. ಇನ್ನು ಕೆಲವು ಗೃಹಗಳಲ್ಲಿ ಐಶ್ಚರ್ಯಮದದಿಂದ ಕೊಬ್ಬಿದ ರಾಕ್ಷಸರನ್ನು ನೋಡಿದನು.॥10॥
ಮೂಲಮ್ - 11
ಪರಸ್ಪರಂ ಚಾಧಿಕಮಾಕ್ಷಿಪಂತಿ
ಭುಜಾಂಶ್ಚ ಪೀನಾನಧಿವಿಕ್ಷಿಪಂತಿ ।
ಮತ್ತಪ್ರಲಾಪಾನಧಿವಿಕ್ಷಿಪಂತಿ
ಮತ್ತಾನಿ ಚಾನ್ಯೋನ್ಯಮಧಿಕ್ಷಿಪಂತಿ ॥
ಅನುವಾದ
ಆ ಮನೆಗಳಲ್ಲಿದ್ದ ರಾಕ್ಷಸರಲ್ಲಿ ಕೆಲವರು ಪರಸ್ಪರ ಆಕ್ಷೇಪಿಸುತ್ತಿದ್ದರು. ತಮ್ಮ ಉಬ್ಬಿದ ಬಾಹುಗಳನ್ನು ಇನ್ನೊಬ್ಬರ ಹೆಗಲಗಳಲ್ಲಿ ಚಾಚಿದ್ದರು. ಮದ್ಯವನ್ನು ಕುಡಿದು ಮತ್ತರಾದ ಕೆಲವರು ಅಸಂಬದ್ಧವಾದ ಮಾತುಗಳನ್ನಾಡುತ್ತಿದ್ದರು. ಮದವೇರಿದ ರಾಕ್ಷಸರು ಅನ್ಯೋನ್ಯವಾಗಿ ಬೈದಾಡುತ್ತಿದ್ದರು.॥11॥
ಮೂಲಮ್ - 12
ರಕ್ಷಾಂಸಿ ವಕ್ಷಾಂಸಿ ಚ ವಿಕ್ಷಿಪಂತಿ
ಗಾತ್ರಾಣಿ ಕಾಂತಾಸು ಚ ವಿಕ್ಷಿಪಂತಿ ।
ರೂಪಾಣಿ ಚಿತ್ರಾಣಿ ಚ ವಿಕ್ಷಿಪಂತಿ
ದೃಢಾನಿ ಚಾಪಾನಿ ಚ ವಿಕ್ಷಿಪಂತಿ ॥ 12 ॥
ಅನುವಾದ
ಕೆಲವು ರಾಕ್ಷಸರು ಪರಾಕ್ರಮ ಸೂಚಕವಾಗಿ ಎದೆಗಳನ್ನು ತಟ್ಟಿಕೊಳ್ಳುತ್ತಿದ್ದರು. ಕೆಲವರು ತಮ್ಮ ಅಂಗನೆಯರ ಮೇಲೆ ಅಂಗಾಂಗಗಳನ್ನು ಚೆಲ್ಲಿದ್ದರು. ಕೆಲವರು ಸುಂದರವಾದ ಚಿತ್ರಪಟಗಳನ್ನು ಅಲ್ಲಿ ಜೋಡಿಸುತ್ತಿದ್ದರು. ಕೆಲವರು ದೃಢವಾದ ಬಿಲ್ಲಿನ ನಾಣನ್ನು ಕಿವಿವರೆಗೂ ಸೆಳೆದು ಅಭ್ಯಾಸ ಮಾಡುತ್ತಿದ್ದುದನ್ನು ಹನುಮಂತನು ನೋಡಿದನು.॥12॥
ಮೂಲಮ್ - 13
ದದರ್ಶ ಕಾಂತಾಶ್ಚ ಸಮಾಲಪಂತ್ಯ-
ಸ್ತಥಾಪರಾಸ್ತತ್ರ ಪುನಃ ಸ್ವಪಂತ್ಯಃ ।
ಸುರೂಪವಕಾಶ್ಚ ತಥಾ ಹಸಂತ್ಯಃ
ಕ್ರುದ್ಧಾಃ ಪರಾಶ್ಚಾಪಿ ವಿನಿಃಶ್ವಸಂತ್ಯಃ ॥
ಅನುವಾದ
ಆ ಭವನಗಳಲ್ಲಿ ರಾಕ್ಷಸರ ಪತ್ನಿಯರಲ್ಲಿ ಕೆಲವರು ಅಂಗ ರಾಗಾದಿಗಳನ್ನು ಲೇಪಿಸಿಕೊಳ್ಳುತ್ತಿದ್ದರು. ಇನ್ನು ಕೆಲವು ಸ್ತ್ರೀಯರು ಮರಳಿ ನಿದ್ದೆಹೋದರು. ಸುಂದರಮುಖವುಳ್ಳ ಕೆಲವರು ಸಂತೋಷ ಸೂಚಕ ನಗುತ್ತಿದ್ದರು. ಕೆಲವು ಪತ್ನಿಯರು ಪತಿಯ ಮೇಲೆ ಕುಪಿತರಾಗಿ ನಿಟ್ಟುಸಿರುಡುತ್ತಿದ್ದರು.॥13॥
ಮೂಲಮ್ - 14
ಮಹಾಗಜೈಶ್ಚಾಪಿ ತಥಾ ನದದ್ಭಿಃ
ಸುಪೂಜಿತೈಶ್ಚಾಪಿ ತಥಾ ಸುಸದ್ಭಿಃ ।
ರರಾಜ ವೀರೈಶ್ಚ ವಿನಿಶ್ವಸದ್ಭಿಃ
ಹ್ರದೋ ಭುಜಂಗೈರಿವ ನಿಃಶ್ವಸದ್ಭಿಃ ॥
ಅನುವಾದ
ಆ ಲಂಕಾಪಟ್ಟಣವು ಆನೆಗಳ ಘೀಂಕಾರಗಳಿಂದ ತುಂಬಿಹೋಗಿತ್ತು. ಪೂಜ್ಯರಾದ ಸಭಾಸದರಿಂದಲೂ ಕೂಡಿದ್ದು, ನಿಟ್ಟುಸಿರು ಬಿಡುತ್ತಿದ್ದ ವೀರರನ್ನೊಳಗೊಂಡು ಬುಸುಗುಟ್ಟುವ ಸರ್ಪಗಳಿಂದ ತುಂಬಿದ ಸರೋವರ ದಂತೆ ಕಂಗೊಳಿಸುತ್ತಿತ್ತು.॥14॥
ಮೂಲಮ್ - 15
ಬುದ್ಧಿಪ್ರಧಾನಾನ್ ರುಚಿರಾಭಿಧಾನಾನ್
ಸಂಶ್ರದ್ದಧಾನಾನ್ ಜಗತಃ ಪ್ರಧಾನಾನ್ ।
ನಾನಾವಿಧಾನಾನ್ ರುಚಿರಾಭಿಧಾನಾನ್
ದದರ್ಶ ತಸ್ಯಾಂ ಪುರಿ ಯಾತುಧಾನಾನ್ ॥
ಅನುವಾದ
ಆ ಲಂಕೆಯಲ್ಲಿ ಮಹಾಬುದ್ಧಿಶಾಲೀ ರಾಕ್ಷಸರನ್ನು, ಸುಮಧುರವಾಗಿ ಮಾತಾಡುವವರನ್ನು, ಶ್ರದ್ಧಾಳುಗಳನ್ನು, ಅತ್ತಿಂದಿತ್ತ ತಿರುಗಾಡುತ್ತಿದ್ದ ಪ್ರಧಾನರಾದ ರಾಕ್ಷರನ್ನು, ನಾನಾವಿಧವಾದ ವೇಷಗಳನ್ನು ಧರಿಸಿದವರನ್ನು, ಮನೋಹರವಾದ ನಾಮಧೇಯ ವುಳ್ಳವರನ್ನೂ ಮಾರುತಿಯು ನೋಡಿದನು.॥15॥
ಮೂಲಮ್ - 16
ನನಂದ ದೃಷ್ಟ್ವಾ ಚ ಸ ತಾನ್ ಸುರೂಪಾನ್
ನಾನಾಗುಣಾನಾತ್ಮಗುಣಾನುರೂಪಾನ್ ।
ವಿದ್ಯೋತಮಾನಾನ್ ಸ ತದಾನುರೂಪಾನ್
ದದರ್ಶ ಕಾಂಶ್ಚಿಚ್ಚ ಪುನರ್ವಿರೂಪಾನ್ ॥
ಅನುವಾದ
ಅಲ್ಲಿ ಬುದ್ಧಿಶಾಲಿಗಳನ್ನು, ಹೆಚ್ಚಾಗಿ ಅಂದವಾಗಿರುವವನ್ನು, ಸದ್ಗುಣ ಸಂಪನ್ನರನ್ನು,* ತಮ್ಮ ಸ್ವಭಾವಕ್ಕನುಸಾರ ವರ್ತಿಸುತ್ತಾ, ಹೆಸರುವಾಸಿಯಾದವರನ್ನು ನೋಡಿ ಆ ಕಪಿವರನು ಬಹಳ ಸಂತೋಷಪಟ್ಟನು. ಹಾಗೆಯೇ ಅವನು ವಿಕೃತಾಕಾರರಾದವನ್ನೂ, ಅದಕ್ಕನುಸಾರ ವರ್ತಿಸುವವರನ್ನೂ ಕೂಡ ನೋಡಿದನು.॥16॥
ಟಿಪ್ಪನೀ
- ವಿಭೀಷಣಾದಿ ಸಜ್ಜನರನ್ನು ನೋಡಿ ಹನುಮಂತನು ಆನಂದದಲ್ಲಿ ಮುಳುಗಿಹೋದನು.
ಮೂಲಮ್ - 17
ತತೋ ವರಾರ್ಹಾಃ ಸುವಿಶುದ್ಧಭಾವಾ-
ಸ್ತೇಷಾಂ ಸ್ತ್ರಿಯಸ್ತತ್ರ ಮಹಾನುಭಾವಾಃ ।
ಪ್ರಿಯೇಷು ಪಾನೇಷು ಚ ಸಕ್ತಭಾವಾ
ದದರ್ಶ ತಾರಾ ಇವ ಸುಪ್ರಭಾವಾಃ ॥
ಅನುವಾದ
ಅನಂತರ ಆಂಜನೇಯನು ಶ್ರೇಷ್ಠ ಪುರುಷರಿಗೆ ಯೋಗ್ಯವಾದ ಸತಿಯರನ್ನು, ಪತಿಗಳಲ್ಲಿ ಪ್ರೇಮಾನುರಾಗವುಳ್ಳವರನ್ನು, ಉತ್ತಮ ಶೀಲವತಿಯರನ್ನು, ಅಲ್ಲದೆ ತಮ್ಮ ಪ್ರಿಯಕರನಲ್ಲಿ ಪ್ರೀತಿಯನ್ನುಂಟುಮಾಡುವ, ಪಾನಾದಿಗಳಲ್ಲಿ ಆಸಕ್ತರಾಗಿದ್ದ, ನಕ್ಷತ್ರಗಳಂತೆ ಒಳ್ಳೆಯ ಪ್ರಭೆಯಿಂದ ಕೂಡಿದ್ದ ರಾಕ್ಷಸಸ್ತ್ರೀಯರನ್ನು ನೋಡಿದನು.॥17॥
ಮೂಲಮ್ - 18
ಶ್ರಿಯಾ ಜ್ವಲಂತೀಸ್ತ್ರಪಯೋಪಗೂಢಾ
ನಿಶೀಥಕಾಲೇ ರಮಣೋಪಗೂಢಾಃ ।
ದದರ್ಶ ಕಾಶ್ಚಿತ್ ಪ್ರಮದೋಪಗೂಢಾ
ಯಥಾ ವಿಹಂಗಾಃ ಕುಸುಮೋಪಗೂಢಾಃ ॥
ಅನುವಾದ
ರೂಪಾದಿ ಸಂಪತ್ತುಗಳಿಂದ ಪ್ರಕಾಶಮಾನರಾಗಿದ್ದ ಕೆಲವು ಸ್ತ್ರೀಯರು ನಾಚಿಕೆಯುಳ್ಳವರಾಗಿದ್ದರು. ಮತ್ತೆ ಕೆಲವರು ಪತಿಗಳಿಂದ ಆಲಿಂಗಿಸಲ್ಪಟ್ಟವರಾಗಿ ಪ್ರಮೋದಾ ಮೋದಗಳಲ್ಲಿದ್ದರು. ಪುಷ್ಪವೃಕ್ಷಗಳಲ್ಲಿ ವಿಹರಿಸುವ ಪಕ್ಷಿಗಳಂತೆ, ಕೆಲವು ಸ್ತ್ರೀಯರು ಕುಸುಮಿತವಾದ ಲತಾಕುಂಜಗಳಲ್ಲಿ ತಮ್ಮ ಪತಿಗಳೊಡನೆ ವಿಹರಿಸುತ್ತಿದ್ದರು.॥18॥
ಮೂಲಮ್ - 19
ಅನ್ಯಾಃ ಪುನರ್ಹರ್ಮ್ಯತಲೋಪವಿಷ್ಟಾ-
ಸ್ತತ್ರ ಪ್ರಿಯಾಂಕೇಷು ಸುಖೋಪವಿಷ್ಟಾಃ ।
ಭರ್ತುಃ ಪ್ರಿಯಾ ಧರ್ಮಪರಾ ನಿವಿಷ್ಟಾ
ದದರ್ಶ ಧೀಮಾನ್ ಮದನಾಭಿವಿಷ್ಟಾಃ ॥
ಅನುವಾದ
ಕೆಲವರು ಉಪ್ಪರಿಗೆಗಳಲ್ಲಿ ಕುಳಿತ್ತಿದ್ದರು. ಕೆಲವರು ಗಂಡಂದಿರ ತೊಡೆಗಳ ಮೇಲೆ ಸುಖವಾಗಿ ಕುಳಿತ್ತಿದ್ದರು. ಕೆಲವು ಧಾರ್ಮಿಕ ಸ್ತ್ರೀಯರು ಪತಿಗಳ ಸೇವೆಯಲ್ಲಿ ನಿರತರಾಗಿದ್ದರು. ಕೆಲವರು ಕಾಮಪರವಶರಾಗಿ ಪ್ರಿಯಕರರೊಡನೆ ಕಾಮಕೇಳಿಯಲ್ಲಿ ನಿರತರಾಗಿದ್ದರು. ಹೀಗೆ ಎಲ್ಲ ಬಗೆಯ ಸ್ತ್ರೀಯರನ್ನು ಹನುಮಂತನು ಅಲ್ಲಿ ನೋಡಿದನು.॥19॥
ಮೂಲಮ್ - 20
ಅಪ್ರಾವೃತಾಃ ಕಾಂಚನರಾಜಿವರ್ಣಾಃ
ಕಾಶ್ಚಿತ್ ಪರಾರ್ಧ್ಯಾಸ್ತಪನೀಯವರ್ಣಾಃ ।
ಪುನಶ್ಚ ಕಾಶ್ಚಿಚ್ಛಶಲಕ್ಷ್ಮ ವರ್ಣಾಃ
ಕಾಂತಪ್ರಹೀಣಾ ರುಚಿರಾಂಗವರ್ಣಾಃ ॥
ಅನುವಾದ
ಕೆಲವರು ಮೇಲು ಹೊದಿಕೆಯಿಲ್ಲದೆ ಸುವರ್ಣ ರೇಖೆಗೆ ಸದೃಶ ಕಾಂತಿಯಿಂದ ಕೂಡಿ ರಾರಾಜಿಸುತ್ತದ್ದರು. ಕೆಲವರು ಶ್ರೇಷ್ಠರಾದ ಸ್ತ್ರೀಯರು ಪುಟವಿಟ್ಟ ಚಿನ್ನದಂತೆ ಬಣ್ಣವುಳ್ಳವರಾಗಿದ್ದರು. ಕೆಲವರು ಚಂದ್ರನ ಕಾಂತಿಗೆ ಸಮಾನವಾದ ಕಾಂತಿಯಿಂದ ಕೂಡಿದ್ದರು. ಕೆಲವು ಸುಂದರಾಂಗಿಯರು ಪ್ರಿಯತಮನ ವಿರಹ ತಾಪದಿಂದ ಖಿನ್ನಮನಸ್ಕರಾಗಿದ್ದರು. ಕೆಲವರು ಸುಂದರವಾದ ಅಂಗ ಕಾಂತಿಯಿಂದ ಕೂಡಿದ್ದರು. ಇಂತಹ ಲತಾಂಗಿಯರನ್ನು ಮರುತ್ಮಂತನು ನೋಡಿದನು.॥20॥
ಮೂಲಮ್ - 21
ತತಃ ಪ್ರಿಯಾನ್ ಪ್ರಾಪ್ಯಮನೋಭಿರಾಮಾನ್
ಸುಪ್ರೀತಿಯುಕ್ತಾಃ ಪ್ರಸಮೀಕ್ಷ್ಯರಾಮಾಃ ।
ಗೃಹೇಷು ಹೃಷ್ಟಾಃ ಪರಮಾಭಿರಾಮಾ
ಹರಿಪ್ರವೀರಃ ಸ ದದರ್ಶ ರಾಮಾಃ ॥
ಅನುವಾದ
ಕೆಲವು ಮನೆಗಳಲ್ಲಿ ಮನಸ್ಸಿಗೆ ಆನಂದವನ್ನುಂಟುಮಾಡುವ ಪ್ರಿಯರನ್ನು ಹೊಂದಿ ಪ್ರೀತಿಯುಕ್ತರಾಗಿ, ಪುಷ್ಪಗಳಿಂದ ಸಿಂಗರಿಸಿಕೊಂಡು ಕಂಗೊಳಿಸುತ್ತಿದ್ದರು. ಪರಮ ಹೃಷ್ಟರಾಗಿದ್ದ, ಕಡು ಚೆಲುವೆಯರಾಗಿದ್ದ ಸ್ತ್ರೀಯರನ್ನು ನೋಡಿದನು. ॥21॥
(ಶ್ಲೋಕ - 22
ಮೂಲಮ್
ಚಂದ್ರಪ್ರಕಾಶಾಶ್ಚ ಹಿ ವಕ್ತ್ರಮಾಲಾ
ವಕ್ತ್ರಾಕ್ಷಿಪಕ್ಷ್ಮಾಶ್ಚ ಸುನೇತ್ರಮಾಲಾಃ ।
ವಿಭೂಷಣಾನಾಂ ಚ ದದರ್ಶ ಮಾಲಾಃ
ಶತಹ್ರದಾನಾಮಿವ ಚಾರುಮಾಲಾಃ ॥
ಅನುವಾದ
ಬೆಳದಿಂಗಳಿನಂತೆ ಪ್ರಕಾಶಮಾನವಾಗಿ ಕಾಣುತ್ತಿದ್ದ ಸ್ತ್ರೀಯರ ಸುಂದರ ಮುಖಾವಲಿ (ಸಾಲು)ಗಳನ್ನು, ಸುಂದರವಾದ ಹಾಗೂ ವಕ್ರವಾದ ಹುಬ್ಬುಗಳ ಕೂದಲಿನಿಂದ ಕೂಡಿದ ಕಣ್ಣುಗಳ ಸಾಲುಗಳನ್ನೂ, ಮಿಂಚಿನ ಸಾಲುಗಳಂತೆ ಕಾಣುತ್ತಿದ್ದ ಸುಂದರವಾದ ಆಭರಣಗಳ ಸಾಲುಗಳನ್ನು* ಹನುಮಂತ ನೋಡಿದನು. ॥22॥
ಟಿಪ್ಪನೀ
- ಮಾನುಷಸ್ತ್ರೀಯರಿಗೂ, ರಾಕ್ಷಸಸ್ತ್ರೀಯರಿಗೂ ಇರುವ ವ್ಯತ್ಯಾಸವನ್ನು ಗುರುತಿಸಲು ಅಲ್ಲಿಯ ಸ್ತ್ರೀಯರ ಅಲಂಕಾರಗಳನ್ನು, ಮುಖ, ನೇತ್ರಗಳನ್ನೂ, ಸೀತಾನ್ವೇಷಣ ತತ್ಪರನಾದ ಹನುಮಂತನು ಪರಿಕಿಸಿದನು.
ಮೂಲಮ್ - 23
ನ ತ್ವೇವ ಸೀತಾಂ ಪರಮಾಭಿಜಾತಾಂ
ಪಥಿ ಸ್ಥಿತೇ ರಾಜಕುಲೇ ಪ್ರಜಾತಾಮ್ ।
ಲತಾಂ ಪ್ರಫುಲ್ಲಾಮಿವ ಸಾಧು ಜಾತಾಂ
ದದರ್ಶ ತನ್ವೀಂ ಮನಸಾಭಿಜಾತಾಮ್ ॥ 23 ॥
ಅನುವಾದ
ಆದರೆ ಕಡುಚೆಲುವೆಯಾದ, ಅಯೋನಿಜೆಯಾಗಿದ್ದ ವಿಕಸಿತ ಲತೆಯಂತಿದ್ದ, ಧರ್ಮಮಾರ್ಗದಲ್ಲಿಯೇ ಸ್ಥಿರಳಾಗಿದ್ದ, ರಾಜಕುಲದಲ್ಲಿ ಬೆಳೆದ ಸೀತಾದೇವಿಯನ್ನು ಮಾರುತಿಯು ಎಲ್ಲಿಯೂ ನೋಡಲಿಲ್ಲ. ॥23 ॥
ಮೂಲಮ್ - 24
ಸನಾತನೇ ವರ್ತ್ಮನಿ ಸಂನಿವಿಷ್ಟಾಂ
ರಾಮೇಕ್ಷಣಾಂ ತಾಂ ಮದನಾಭಿವಿಷ್ಟಾಮ್ ।
ಭರ್ತುರ್ಮನಃ ಶ್ರೀಮದನುಪ್ರವಿಷ್ಟಾಮ್
ಸ್ತ್ರಿಭ್ಯೋ ವರಾಭ್ಯಶ್ಚ ಸದಾ ವಿಶಿಷ್ಟಾಮ್ ॥ 24 ॥
ಅನುವಾದ
ಅವಿಚ್ಛಿನ್ನವಾದ ಪಾತಿವ್ರತ್ಯ ಮಾರ್ಗದಲ್ಲಿ ಸುಸ್ಥಿರಳಾಗಿದ್ದ, ಶ್ರೀರಾಮಚಂದ್ರನ ಅಗಲುವಿಕೆಯಿಂದ ದುಃಖಿತಳಾಗಿದ್ದು, ಅವನನ್ನು ನೋಡಬೇಕೆಂಬ ಕಾತರತೆಯಿಂದಿದ್ದ, ತನ್ನ ಪವಿತ್ರವಾದ ಮನಸ್ಸಿನಲ್ಲಿ ಶ್ರೀರಾಮನನ್ನು ಸದಾಕಾಲ ನಿಲ್ಲಿಸಿಕೊಂಡಿದ್ದ, ನಾರೀರತ್ನಗಳಲ್ಲಿ ಅತ್ಯುತ್ತಮವಾದ ಸೀತಾದೇವಿಯನ್ನು ಮಾತ್ರ ಅವನು ನೋಡಲಿಲ್ಲ. ॥24 ॥
ಮೂಲಮ್ - 25
ಉಷ್ಣಾರ್ದಿತಾಂ ಸಾನುಸೃತಾಸ್ರಕಂಠೀಂ
ಪುರಾ ವರಾರ್ಹೋತ್ತಮನಿಷ್ಕಕಂಠೀಮ್ ।
ಸುಜಾತಪಕ್ಷ್ಮಾಮಭಿರಕ್ತಕಂಠೀಂ
ವನೇ ಪ್ರನೃತ್ತಾಮಿವ ನೀಲಕಂಠೀಮ್ ॥ 25 ॥
ಅನುವಾದ
ಶ್ರೀರಾಮನ ವಿರಹದಿಂದ ಪರಿತಪಿಸುತ್ತಿರುವ, ಕಣ್ಣೀರಕೋಡಿ ಹರಿಯುತ್ತಿದ್ದು, ಗದ್ಗದ ಕಂಠದಿಂದ ವಿಲಾಪಿಸುತ್ತಿದ್ದ, ಶ್ರೇಷ್ಠವಾದ ಭಂಗಾರದ ಕಂಠಾಭರಣಗಳನ್ನು ಧರಿಸಿದ್ದ, ಅಂದವಾದ ಹುಬ್ಬುಗಳುಳ್ಳವಳೂ, ಮಧುರವಾದ ಕಂಠಸ್ಪರವುಳ್ಳವಳೂ, ಅರಣ್ಯದಲ್ಲಿ ಚೆನ್ನಾಗಿ ನರ್ತಿಸುವ ಹೆಣ್ಣುನವಿಲಿನಂತಿರುವ ಸೀತಾದೇವಿಯು ಮಾತ್ರ ಕಂಡುಬರಲಿಲ್ಲ. ॥25 ॥
ಮೂಲಮ್ - 26
ಅವ್ಯಕ್ತರೇಖಾಮಿವ ಚಂದ್ರರೇಖಾಂ
ಪಾಂಸುಪ್ರದಿಗ್ಧಾಮಿವ ಹೇಮರೇಖಾಮ್ ।
ಕ್ಷತಪ್ರರೂಢಾಮಿವ ಬಾಣರೇಖಾಂ
ವಾಯುಪ್ರಭಿನ್ನಾಮಿವ ಮೇಘರೇಖಾಮ್ ॥ 26 ॥
ಅನುವಾದ
ಕಂಡೂ-ಕಾಣದಂತಿರುವ ಚಂದ್ರರೇಖೆಯಂತೆ ಅತ್ಯಂತ ಕೃಶಳಾಗಿದ್ದ, ಧೂಳಿ ಧೂಸರಿತ ಬಂಗಾರದ ಸಲಾಕೆಯಂತಿದ್ದ, ಬಾಣದ ಗಾಯದಂತೆ ರೂಢಮೂಲವಾಗಿದ್ದ ಮಾನಸಿಕ ಗಾಯದಿಂದ ಪರಿತಪಿಸುತ್ತಿದ್ದ, ವಾಯುವಿನಿಂದ ಛಿದ್ರ-ಛಿದ್ರವಾಗಿ ಚದುರಿಹೋದ ಮೇಘಗಳಂತೆ ಭಗ್ನಮನೋರಥವುಳ್ಳ ಜಾನಕೀದೇವಿಯು ಹನುಮಂತನಿಗೆ ಎಲ್ಲೆಲ್ಲೂ ಕಾಣಲಿಲ್ಲ.* ॥26 ॥
ಟಿಪ್ಪನೀ
- ಮಾರುತಿಯು ಎಷ್ಟೋ ಮಂದಿ ಸುಂದರೀ ಮಣಿಗಳನ್ನು ನೋಡಿದನು. ಆದರೆ ಅವರಲ್ಲಿ ಒಬ್ಬರೂ ಸೀತಾದೇವಿ ಅಲ್ಲವೆಂದು ನಿಶ್ಚಯಿಸಿದನು. ಏಕೆಂದರೆ ಅವನು ತನ್ನ ಮನಸ್ಸಿನಲ್ಲಿ ಮುದ್ರಿಸಿಕೊಂಡ ಸೀತಾದೇವಿಯ ಊಹಾ ಚಿತ್ರ ಹೀಗಿತ್ತು-ವಾಸ್ತವವಾಗಿ ಹದಿನಾರು ಕಲೆಗಳಿಂದ ಕೂಡಿದ ಚಂದ್ರನಂತೆ ಇರುವ ಸೀತಾದೇವಿಯು ಶ್ರೀರಾಮನ ಅಗಲುವಿಕೆಯಿಂದ ಈಗ ಮಂಜುಮುಸುಕಿದ ಚಂದ್ರನಂತೆ ಕಾಂತಿಹೀನಳಾಗಿರಬಹುದು. ಸಹಜವಾಗಿ ಭಂಗಾರ ಕಾಂತಿಯಿಂದಿರುವ ಆಕೆಯ ದೇಹವು ಧೂಳಿ ಧೂಸರಿತವಾದ ಸುವರ್ಣರೇಖೆಯಂತೆ ಇರಬಹುದು. ಬಾಣದ ಗಾಯವು ವಾಸಿಯಾದರೂ ಉಳಿಯುವ ಗುರುತಿನಂತೆ ಸೀತಾದೇವಿಯ ಮನಸ್ಸಿನಮೇಲೆ ಬಿದ್ದ ರಾವಣನ ವಾಗ್ಬಾಣಗಳ ಗುರುತು ಮಾತ್ರ ಆಕೆಯ ಮುಖಕಮಲದಲ್ಲಿ ಕಂಡುಬಂದಿತು. ಗಾಳಿಯು ಮೋಡಗಳನ್ನು ಭಿನ್ನ-ಭಿನ್ನ ಮಾಡುವಂತೆ ರಾವಣನೆಂಬ ವಾಯುವಿನ ಘಾತದಿಂದ ರಾಮನೆಂಬ ಮೇಘವು ಚೂರು-ಚೂರು ಆಗಿ ಸೀತಾದೇವಿಯು ಕಾಂತಿಹೀನಳಾಗಿರಬಹುದು. ಅಂತಹ ಜಾನಕೀ ದೇವಿ ಮಾತ್ರ ಎಷ್ಟೇ ಹುಡುಕಿದರೂ ಅಲ್ಲಿ ತರುಣಿ ಮಣಿಗಳಲ್ಲಿ ಮಾರುತಿಗೆ ಕಂಡುಬರಲಿಲ್ಲ.
ಮೂಲಮ್ - 27
ಸೀತಾಮಪಶ್ಯನ್ ಮನುಜೇಶ್ಚರಸ್ಯ
ರಾಮಸ್ಯ ಪತ್ನೀಂ ವದತಾಂ ವರಸ್ಯ ।
ಬಭೂವ ದುಃಖಾಭಿಹತಶ್ಚಿರಸ್ಯ
ಪ್ಲವಂಗಮೋ ಮಂದ ಇವಾಚಿರಸ್ಯ ॥
ಅನುವಾದ
ವಾಗ್ಮಿಗಳಲ್ಲಿ ಶ್ರೇಷ್ಠನಾದ, ಮನುಜೇಶ್ವರನಾದ ಶ್ರೀರಾಮನ ಪತ್ನಿಯನ್ನು ಎಷ್ಟು ಹುಡುಕಿದರೂ ಆಕೆಯು ಕಾಣದಿದ್ದಾಗ ಕಪೀಶ್ವರನಾದ ಹನುಮಂತನು ದುಃಖಾಕ್ರಾಂತನಾಗಿ ಕ್ಷಣಕಾಲ ಮಾತ್ರ ಅಜ್ಞಾನಿಯಂತೆ ದಿಕ್ಕುತೋಚದಾದನು. ॥27॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಪಂಚಮಃ ಸರ್ಗಃ ॥ 5 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಐದನೆಯ ಸರ್ಗವು ಮುಗಿಯಿತು.