००४ लङ्कापुरीप्रवेशः

वाचनम्
ಭಾಗಸೂಚನಾ

ಹನುಮಂತನು ರಾವಣಾಂತಃಪುರವನ್ನು ಪ್ರವೇಶಿಸಿದುದು

ಮೂಲಮ್ - 1

ಸ ನಿರ್ಜಿತ್ಯ ಪುರೀಂ ಶ್ರೇಷ್ಠಾಂ ಲಂಕಾಂ ತಾಂ ಕಾಮರೂಪಿಣೀಂ ।
ವಿಕ್ರಮೇಣ ಮಹಾತೇಜಾ ಹನೂಮಾನ್ ಕಪಿಸತ್ತಮಃ ॥

ಅನುವಾದ

ಮಹಾತೇಜಸ್ವಿಯಾದ, ಮಹಾಸತ್ತ್ವನಾದ, ಮಹಾವೀರ್ಯನಾದ, ಕಪಿಶ್ರೇಷ್ಠನಾದ ಹನುಮಂತನು ಕಾಮರೂಪಿಣಿಯಾದ, ಶ್ರೇಷ್ಠರಾಕ್ಷಸಿಯಾದ ಲಂಕೆಯ ಅಧಿದೇವತೆಯನ್ನು ಪರಾಕ್ರಮದಿಂದ ಜಯಿಸಿದನು. ॥1॥

ಮೂಲಮ್ - 2

ಅದ್ವಾರೇಣ ಮಹಾಬಾಹುಃ ಪ್ರಾಕಾರಮಭಿಪುಪ್ಲುವೇ ।
ನಿಶಿ ಲಂಕಾಂ ಮಹಾಸತ್ತ್ವೋ ವಿವೇಶ ಕಪಿಕುಂಜರಃ ॥

ಅನುವಾದ

ಸುಗ್ರೀವನಿಗೆ ಹಿತವನ್ನುಂಟುಮಾಡುವ ಮಹಾಬಾಹುವಾದ ಆ ಹನುಮಂತನು ಮುಖ್ಯದ್ವಾರವನ್ನು ಬಿಟ್ಟು ಅದ್ವಾರದಿಂದ* ಕೋಟೆಯನ್ನು ಹಾರಿ ಲಂಕಾನಗರವನ್ನು ಪ್ರವೇಶಿಸಿದನು. ॥2॥

ಟಿಪ್ಪನೀ
  • ಗ್ರಾಮಂವಾ ನಗರಂವಾಪಿ ಪತ್ತನಂ ವಾ ಪರಸ್ಯ ಹಿ । ವಿಶೇಷಾತ್ ಸಮಯೇ ಸೌಮ್ಯ ನದ್ವಾರೇಣ ವಿಷೇನ್ನೃಪಃ ॥
    (ನೀತಿಶಾಸ್ತ್ರ)
    ಎಲೈ ಸೌಮ್ಯ! ಶತ್ರುಗಳ ಗ್ರಾಮವನ್ನಾಗಲೀ, ನಗರವನ್ನಾಗಲೀ, ಪಟ್ಟಣವನ್ನಾಗಲೀ, ವಿಶೇಷ ಸಮಯದಲ್ಲಿ ರಾಜನು ಮುಖ್ಯದ್ವಾರದಿಂದ ಪ್ರವೇಶಿಸಬಾರದು.
    ‘‘ಅದ್ವಾರೇಣ ಪ್ರವಿಶೇಚ್ಛತ್ರುವಿನಾಶಾಯ’’ - ಶತ್ರುವಿನ ವಿನಾಶವನ್ನು ಬಯಸುವವನು ಹೆಬ್ಬಾಗಿಲಿನ ಮೂಲಕ ನಗರವನ್ನು ಪ್ರವೇಶಿಸಬಾರದು. ಎಂಬ ನೀತಿಯನ್ನು ಅನುಸರಿಸಿ ಹನುಮಂತನು ಹೆಬ್ಬಾಗಿಲಿನಿಂದ ಲಂಕೆಯನ್ನು ಪ್ರವೇಶಿಸಲಿಲ್ಲ.
ಮೂಲಮ್ - 3

ಪ್ರವಿಶ್ಯ ನಗರೀಂ ಲಂಕಾಂ ಕಪಿರಾಜಹಿತಂಕರಃ ।
ಚಕ್ರೇಽಥ ಪಾದಂ ಸವ್ಯಂ ಚ ಶತ್ರೂಣಾಂ ಸ ತು ಮೂರ್ಧನಿ ॥

ಅನುವಾದ

ಸತ್ತ್ವಸಂಪನ್ನನಾದ ಆ ಮಾರುತಿಯು ಲಂಕಾಪಟ್ಟಣವನ್ನು ಪ್ರವೇಶಿಸುವಾಗ ಎಡಗಾಲನ್ನು ಮುಂದಿಟ್ಟನು. ಹಾಗೆಯೇ ಶತ್ರುಗಳ ತಲೆಯನ್ನೇ ಎಡಗಾಲಿನಿಂದ ಮೆಟ್ಟಿದನೋ** ಎಂಬಂತೆ ರಾತ್ರಿಯಲ್ಲಿ ನಗರವನ್ನು ಪ್ರವೇಶಿಸಿದನು. ॥3॥

ಟಿಪ್ಪನೀ

** ‘‘ಪ್ರಯಾಣಕಾಲೇ ಸ್ವಗೃಹ ಪ್ರವೇಶೇ ವಿವಾಹ ಕಾಲೇಽಪಿ ಚ ದಕ್ಷಿಣಾಂಘ್ರಿಮ್ ।
ಕೃತ್ವಾಗ್ರತಃ ಶತ್ರುಪುರಪ್ರವೇಶೇ ವಾಮಂ ನಿಧಧ್ಯಾಚ್ಚರಣ ನೃಪಾಲಃ ॥
ಪ್ರಯಾಣ ಕಾಲದಲ್ಲಿಯೂ, ತನ್ನ ಮನೆಯನ್ನು ಪ್ರವೇಶಿಸಲುವಾಗಲೂ, ವಿವಾಹಕಾಲದಲ್ಲಿಯೂ, ಬಲಗಾಲನ್ನು ಮುಂದಿಡಬೇಕು. ರಾಜನಾದವನು (ಅಥವಾ ರಾಜದೂತನು) ಶತ್ರುಪುರ ಪ್ರವೇಶಕಾಲದಲ್ಲಿ ಎಡಗಾಲನ್ನೇ ಮುಂದಿಟ್ಟು ಪ್ರವೇಶಿಸಬೇಕು.

ಮೂಲಮ್ - 4

ಪ್ರವಿಷ್ಟಃ ಸತ್ತ್ವಸಂಪನ್ನೋ ನಿಶಾಯಾಂ ಮಾರುತಾತ್ಮಜಃ ।
ಸ ಮಹಾಪಥಮಾಸ್ಥಾಯ ಮುಕ್ತಪುಷ್ಪವಿರಾಜಿತಮ್ ॥

ಅನುವಾದ

ಆ ಮಹಾಕಪಿಯು ಮುತ್ತುಗಳಿಂದಲೂ, ಪುಷ್ಪಗಳಿಂದಲೂ ಅಲಂಕರಿಸಲ್ಪಟ್ಟು ರಾರಾಜಿಸುತ್ತಿದ್ದ ರಾಜಮಾರ್ಗವನ್ನು ಅನುಸರಿಸಿ ರಮ್ಯವಾದ ಲಂಕಾಪಟ್ಟಣಕ್ಕೆ ಅಭಿಮುಖನಾಗಿ ಪಯಣಿಸುತ್ತಿದ್ದನು. ॥4॥

ಮೂಲಮ್ - 5

ತತಸ್ತು ತಾಂ ಪುರೀಂ ಲಂಕಾಂ ರಮ್ಯಾಮಭಿಯಯೌ ಕಪಿಃ ।
ಹಸಿತೋತ್ಕೃಷ್ಟನಿನದೈಸ್ತೂರ್ಯಘೋಷಪುರಃಸರೈಃ ॥

ಮೂಲಮ್ - 6

ವಜ್ರಾಂಕುಶನಿಕಾಶೈಶ್ಚ ವಜ್ರಜಾಲವಿಭೂಷಿತೈಃ ।
ಗೃಹಮುಖ್ಯೈಃ ಪುರೀ ರಮ್ಯಾ ಬಭಾಸೇ ದ್ಯೌರಿವಾಂಬುದೈಃ ॥

ಮೂಲಮ್ - 7

ಪ್ರಜಜ್ವಾಲ ತದಾ ಲಂಕಾ ರಕ್ಷೋಗಣಗೃಹೈಃ ಶುಭೈಃ ।
ಸಿತಾಭ್ರಸದೃಶೈಶ್ಚಿತ್ರೈಃ ಪದ್ಮಸ್ವಸ್ತಿಕಸಂಸ್ಥಿತೈಃ ॥

ಅನುವಾದ

ಅಲ್ಲಿಯ ಗೃಹಗಳು ಉತ್ಕೃಷ್ಟವಾದ ನಗು-ಅಟ್ಟಹಾಸಗಳಿಂದಲೂ ಮಂಗಳವಾದ್ಯ ಘೋಷಗಳಿಂದಲೂ ನಿನಾದಿತವಾಗಿದ್ದವು. ಆ ಸೌಧಗಳು ಐರಾವತದಂತೆ ಬೆಳ್ಳಗಿದ್ದು ಉನ್ನತವಾಗಿದ್ದವು. ಅವುಗಳ ಕಿಟಕಿಗಳು ವಜ್ರಖಚಿತ ಬಲೆಗಳಿಂದ ಕೂಡಿದ್ದು ಅತ್ಯಂತ ಶೋಭಾಯಮಾನಮಾಗಿ ಕಾಣುತ್ತಿದ್ದುವು. ಇಂತಹ ಸುಂದರ ಸೌಧಗಳಿಂದ ಲಂಕಾಪಟ್ಟಣವು ರಾರಾಜಿಸುತ್ತಿತ್ತು. ಆ ಸಮಯದಲ್ಲಿ ಲಂಕಾಪಟ್ಟಣವು ಬಿಳಿಯ ಮೋಡಕ್ಕೆ ಸದೃಶವಾಗಿದ್ದು, ಶುಭಪ್ರದವಾಗಿದ್ದ ಪದ್ಮ-ಸ್ವಸ್ತಿಕ ಮತ್ತು ವರ್ಧಮಾನಗಳೆಂಬ* ಆಕೃತಿಗಳಿಂದ ಕೂಡಿದ್ದ, ಸರ್ವತ್ರ ಶೃಂಗರಿಸಿದ್ದ ರಾಕ್ಷಸರ ಮನೆಗಳಿಂದ ಪ್ರಜ್ವಲಿಸುತ್ತಿದ್ದಿತು. ॥5-7॥

ಟಿಪ್ಪನೀ
  • ಪದ್ಮ-ಸ್ವಸ್ತಿಕ,ವರ್ಧಮಾನಗಳು ಆಯಾ ಲಕ್ಷಣಗಳಿಂದ ಕೂಡಿದ ಗೃಹಗಳ ಪ್ರಭೇದಗಳು
    ಚತುಃ ಶಾಲಂ ಚತುರ್ದ್ವಾರಂ ಸರ್ವತೋಭದ್ರಸಂಜ್ಞಕಮ್ ।
    ಪಶ್ಚಿಮದ್ವಾರರಹಿತಂ ನಂದ್ಯಾವರ್ತಾಹ್ವಯಂ ತು ತತ್ ॥
    ದಕ್ಷಿಣದ್ವಾರರಹಿತುಂ ವರ್ಧಮಾನಂ ಧನಪ್ರದಮ್ ।
    ಪ್ರಾಗ್ವಾರರಹಿತಂ ಸ್ವಸ್ತಿಕಾಖ್ಯಂ ಪುತ್ರಧನಪ್ರದಮ್ ॥
    (ವರಾಹಮಿಹಿರ ಸಂಹಿತಾ)
    ನಾಲ್ಕು ಪ್ರಾಂಗಣಗಳುಳ್ಳ ಮತ್ತು ನಾಲ್ಕು ಬಾಗಿಲುಗಳುಳ್ಳ ಮನೆಗೆ ಸರ್ವತೋಭದ್ರವೆಂದು ಹೆಸರು. ಪಶ್ಚಿಮದಲ್ಲಿ ಬಾಗಿಲು ಇಲ್ಲದಿರುವುದಕ್ಕೆ ನಂದ್ಯಾವರ್ತವೆಂದು ಹೆಸರು. ದಕ್ಷಿಣದಲ್ಲಿ ಬಾಗಿಲು ಇಲ್ಲದಿರುವುದಕ್ಕೆ ವರ್ಧಮಾನವೆಂದು ಹೆಸರು. ಇದು ಧನಪ್ರದವಾಗಿದೆ. ಪೂರ್ವದಿಕ್ಕಿಗೆ ಬಾಗಿಲು ಇಲ್ಲದಿರುವುದಕ್ಕೆ ಸ್ವಸ್ತಿಕವೆಂದು ಹೆಸರು. ಇಂತಹ ಮನೆಯಲ್ಲಿರುವುದರಿಂದ ಪುತ್ರಾಭಿವೃದ್ಧಿಯೂ, ಧನಾಭಿವೃದ್ಧಿಯೂ ಆಗುವುದು.
ಮೂಲಮ್ - 8

ವರ್ಧಮಾನಗೃಹೈಶ್ಚಾಪಿ ಸರ್ವತಃ ಸುವಿಭೂಷಿತೈಃ ।
ತಾಂ ಚಿತ್ರಮಾಲ್ಯಾಭರಣಾಂ ಕಪಿರಾಜಹಿತಂಕರಃ ॥

ಅನುವಾದ

ಕಪಿರಾಜನಾದ ಸುಗ್ರೀವನಿಗೆ ಸಚಿವನಾದ, ಸ್ವಾಮಿ ಕಾರ್ಯ ಸಾಧಕ ದಕ್ಷನಾದ ಹನುಮಂತನು ಶ್ರೀರಾಘವನ ಕಾರ್ಯಾರ್ಥವಾಗಿ ಸಂಚರಿಸುತ್ತಾ ವಿಚಿತ್ರವಾದ ಮಾಲೆಗಳಿಂದಲೂ, ಆಭರಣಗಳಿಂದಲೂ ಸಮಲಂಕೃತವಾಗಿದ್ದ ಲಂಕೆಯನ್ನು ನೋಡಿ ಆನಂದಿಸಿದನು. ॥8॥

ಮೂಲಮ್ - 9

ರಾಘವಾರ್ಥಂ ಚರನ್ ಶ್ರೀಮಾನ್ ದದರ್ಶ ಚ ನನಂದ ಚ ।
ಭವನಾದ್ಭವನಂ ಗಚ್ಛನ್ ದದರ್ಶ ಪವನಾತ್ಮಜಃ ॥

ಅನುವಾದ

ರಾಜಮಾರ್ಗದಲ್ಲಿ ನಡೆದು ಹೋಗುತ್ತಿದ್ದಾಗ ಒಂದೊಂದು ಭವನವನ್ನು ನೋಡುತ್ತಾ ಹೋಗುತ್ತಿದ್ದ ವಾಯುನಂದನನು ಪದ್ಮ-ಸ್ವಸ್ತಿಕ ಮೊದಲಾದ ಆಕಾರಗಳಿಂದಲೂ, ವರ್ಣಗಳಿಂದಲೂ ಕೂಡಿದ್ದ ಭವನಗಳನ್ನು ನೋಡಿದನು. ॥9॥

ಮೂಲಮ್ - 10

ವಿವಿಧಾಕೃತಿರೂಪಾಣಿ ಭವನಾನಿ ತತಸ್ತತಃ ।
ಶುಶ್ರಾವ ಮಧುರಂ ಗೀತಂ ತ್ರಿಸ್ಥಾನಸ್ವರಭೂಷಿತಮ್ ॥

ಅನುವಾದ

ಹಾಗೆಯೇ ಹೋಗುತ್ತಿದ್ದಾಗ ಮದನ ಪರವಶರಾಗಿದ್ದ ಸ್ವರ್ಗದ ಅಪ್ಸರೆಯರಂತೆ ಇದ್ದ ಸ್ತ್ರೀಯರ ಎದೆ - ಕತ್ತು - ಶಿರಸ್ಸು ಎಂಬ ಮೂರು ಸ್ಥಾನಗಳಲ್ಲಿ ಹುಟ್ಟುವ ಮಂದ್ರ - ಮಧ್ಯಮ - ತಾರ ಸ್ವರಗಳಿಂದ ಕೂಡಿದ್ದ ಸುಮಧುರ ಸಂಗೀತ ಗೀತೆಗಳನ್ನು ಕೇಳಿದನು. ॥10॥

ಮೂಲಮ್ - 11

ಸ್ತ್ರೀಣಾಂ ಮದಸಮೃದ್ಧಾನಾಂ ದಿವಿ ಚಾಪ್ಸರಸಾಮಿವ ।
ಶುಶ್ರಾವ ಕಾಂಚೀನಿನದಂ ನೂಪುರಾಣಾಂ ಚ ನಿಃಸ್ವನಮ್ ॥

ಅನುವಾದ

ಹೆಚ್ಚಿನ ಸಂಪನ್ನರಾದ ರಾಕ್ಷಸರ ಭವನಗಳಲ್ಲಿ ಸ್ತ್ರೀಯರು ತೊಟ್ಟಿದ್ದ ಒಡ್ಯಾಣಗಳ ಧ್ವನಿಯನ್ನೂ, ಕಾಲಂದುಗೆಗಳ ಧ್ವನಿಯನ್ನೂ, ಅವರು ಮಹಡಿಯಿಂದ ಇಳಿದು ಬರುತ್ತಿದ್ದಾಗ ಆಗುವ ಕಾಲುಗಳ ಸಪ್ಪಳವನ್ನು ಹನುಮಂತನು ಕೇಳಿದನು. ॥11॥

ಮೂಲಮ್ - 12

ಸೋಪಾನನಿನದಾಂಶ್ಚೈವ ಭವನೇಷು ಮಹಾತ್ಮನಾಮ್ ।
ಆಸ್ಫೋಟಿತನಿನಾದಾಂಶ್ಚ ಕ್ಷ್ವೇಲಿತಾಂಶ್ಚ ತತಸ್ತತಃ ॥

ಅನುವಾದ

ಅಲ್ಲಲ್ಲಿ ರಾಕ್ಷಸರ ಮನೆಗಳಲ್ಲಿ ಯೋಧರು ಭುಜಗಳನ್ನು ತಟ್ಟಿಕೊಳ್ಳುತ್ತಿದ್ದ ಶಬ್ದಗಳೂ, ಅವರ ಸಿಂಹಗರ್ಜನೆ ಗಳೂ ಕೆಲವರು ಮಾಡುತ್ತಿದ್ದ ಜಪದ ಮಂತ್ರಗಳ ಧ್ವನಿಗಳೂ ಮಾರುತಿಗೆ ಕೇಳಿಬಂದುವು. ॥12॥

ಮೂಲಮ್ - 13

ಶುಶ್ರಾವ ಜಪತಾಂ ತತ್ರ ಮಂತ್ರಾನ್ ರಕ್ಷೋಗೃಹೇಷು ವೈ ।
ಸ್ವಾಧ್ಯಾಯನಿರತಾಂಶ್ಚೈವ ಯಾತುಧಾನಾನ್ ದದರ್ಶ ಸಃ ॥

ಅನುವಾದ

ಅಧ್ಯಯನದಲ್ಲೆ ನಿರತರಾದ ರಾಕ್ಷಸರನ್ನೂ, ರಾವಣನನ್ನೇ ಸ್ತುತಿಸುತ್ತಿರುವವರನ್ನು, ಗರ್ಜಿಸುತ್ತಿರುವ ರಾಕ್ಷಸರನ್ನು ನೋಡಿದನು. ॥13॥

ಮೂಲಮ್ - 14

ರಾವಣಸ್ತವಸಂಯುಕ್ತಾನ್ ಗರ್ಜತೋ ರಾಕ್ಷಸಾನಪಿ ।
ರಾಜಮಾರ್ಗಂ ಸಮಾವೃತ್ಯ ಸ್ಥಿತಂ ರಕ್ಷೋಬಲಂ ಮಹತ್ ॥

ಅನುವಾದ

ರಾಜಮಾರ್ಗವನ್ನು ಆವರಿಸಿ ನಿಂತಿದ್ದ ರಾಕ್ಷಸರ ಸಮೂಹಗಳನ್ನು ನೋಡುತ್ತಾ ಮಾರುತಿಯು ಮುನ್ನಡೆದನು. ಲಂಕೆಯ ಮಧ್ಯಮ ಕಕ್ಷೆಯಲ್ಲಿ ಸೇನಾನಿವೇಶನದಲ್ಲಿ ರಾಕ್ಷಸರಾಜನ ಅನೇಕ ಗೂಢಚಾರರನ್ನೂ ನೋಡಿದನು. ॥14॥

ಮೂಲಮ್ - 15

ದದರ್ಶ ಮಧ್ಯಮೇ ಗುಲ್ಮೇ ರಾಕ್ಷಸಸ್ಯ ಚರಾನ್ ಬಹೂನ್ ।
ದೀಕ್ಷಿತಾನ್ ಜಟಿಲಾನ್ ಮುಂಡಾನ್ ಗೋಽಜಿನಾಂಬರವಾಸಸಃ ॥

ಅನುವಾದ

ಅವರಲ್ಲಿ ಕೆಲವರು ಯಜ್ಞದೀಕ್ಷಿತರಾಗಿದ್ದರು. ಕೆಲವರು ಜಟೆಗಳನ್ನು ಧರಿಸಿದ್ದರು. ಕೆಲವರು ಆಯುಧಗಳ ರೂಪದಲ್ಲಿ ದರ್ಭೆಗಳನ್ನೇ ಮುಷ್ಟಿಯಲ್ಲಿ ಧರಿಸಿದ್ದರು.* ಕೃತ್ಯಾದಿ ಶಕ್ತಿಗಳನ್ನು ಆಯುಧ ರೂಪವಾಗಿ ಸೃಷ್ಟಿಸಬಲ್ಲ ಅಗ್ನಿಕುಂಡಗಳನ್ನು ಕೆಲವರು ಆರಾಧಿಸುತ್ತಿದ್ದರು. ॥15॥

ಟಿಪ್ಪನೀ
  • ‘ಯಥಾ ವಜ್ರಂ ಹರೇಃ ಪಾಣೌ ತಥಾ ವಿಪ್ರಕರೇ ಕುಶಾಃ’
    ಮಂತ್ರಜ್ಞನಾದ ಬ್ರಾಹ್ಮಣನ ಕೈಯಲ್ಲಿರುವ ದರ್ಭೆಯು ವಜ್ರಾಯುಧಕ್ಕೆ ಸಮಾನವಾದುದು.
ಮೂಲಮ್ - 16

ದರ್ಭಮುಷ್ಟಿಪ್ರಹರಣಾನಗ್ನಿಕುಂಡಾಯುಧಾಂಸ್ತಥಾ ।
ಕೂಟಮುದ್ಗರಪಾಣೀಂಶ್ಚ ದಂಡಾಯುಧಧರಾನಪಿ ॥

ಅನುವಾದ

ಹಾಗೆಯೇ ಮುಂದರಿಯುತ್ತಿದ್ದಂತೆ ಕೆಲವರು ಶೂಲಾಯುಧಗಳನ್ನು, ಕೆಲವರು ಮುದ್ಗರವನ್ನು** ಕೆಲವರು ದಂಡಾಯುಧಗಳನ್ನು ಹಿಡಿದಿದ್ದರು. ॥16॥

ಟಿಪ್ಪನೀ

** ಮುದ್ಗರಃ ದೊಡ್ಡದಾದ ಕಬ್ಬಿಣದ ಸಲಾಕೆ (ಹಾರೆ)

ಮೂಲಮ್ - 17

ಏಕಾಕ್ಷಾನೇಕಕರ್ಣಾಂಶ್ಚ ಲಂಬೋದರಪಯೋಧರಾನ್ ।
ಕರಾಲಾನ್ ಭುಗ್ನವಕ್ತ್ರಾಂಶ್ಚ ವಿಕಟಾನ್ ವಾಮನಾಂಸ್ತಥಾ ॥

ಮೂಲಮ್ - 18

ಧನ್ವಿನಃ ಖಡ್ಗಿನಶ್ಚೈವ ಶತಘ್ನೀಮುಸಲಾಯುಧಾನ್ ।
ಪರಿಘೋತ್ತಮಹಸ್ತಾಂಶ್ಚ ವಿಚಿತ್ರಕವಚೋಜ್ಜ್ವಲಾನ್ ॥

ಮೂಲಮ್ - 19

ನಾತಿಸ್ಥೂಲಾನ್ನಾತಿಕೃಶಾನ್ನಾತಿದಿರ್ಘಾತಿಹ್ರಸ್ವಕಾನ್ ।
ನಾತಿಗೌರಾನ್ನಾತಿಕೃಷ್ಣಾನ್ನಾತಿಕುಬ್ಜಾನ್ನ ವಾಮನಾನ್ ॥

ಅನುವಾದ

ಅವರಲ್ಲಿ ಕೆಲವರಿಗೆ ಒಂದೇ ಕಣ್ಣಿತ್ತು. ಕೆಲವರಿಗೆ ಒಂದೇ ಕಿವಿಯಿತ್ತು. ಕೆಲವರು ಉದ್ದವಾದ ಹೊಟ್ಟೆಗಳನ್ನು, ಸ್ತನಗಳನ್ನು ಹೊಂದಿದ್ದರು. ಎಲ್ಲರೂ ಭಯಂಕರವಾದ ಆಕಾರವುಳ್ಳವರಾಗಿದ್ದರು. ವಕ್ರಮುಖರೂ, ಕುಟಿಲಮುಖರೂ ಅಲ್ಲಿದ್ದರು. ಕೆಲವರು ಏರುಪೇರಾದ ಅಂಗವುಳ್ಳವರೂ, ಕುಳ್ಳರೂ ಆಗಿದ್ದರು. ಹಲವಾರು ಮಂದಿ ಧನುಸ್ಸು, ಖಡ್ಗ, ಶತಘ್ನೀ, ಮುಸಲ ಇವೇ ಮುಂತಾದ ಆಯುಧಗಳನ್ನು ಧರಿಸಿದ್ದರು. ಕೆಲವರು ಉತ್ತಮವಾದ ಪರಿಘಾಯುಧಗಳನ್ನು, ಕೆಲವರು ವಿಚಿತ್ರವಾದ ಕವಚಗಳನ್ನು ಧರಿಸಿ ಪ್ರಜ್ವಲಿಸುತ್ತಿದ್ದರು. ಹೆಚ್ಚು ಸ್ಥೂಲರಲ್ಲದವರನ್ನು, ಅತ್ಯಂತ ಕೃಶರಲ್ಲದವರನ್ನು, ಹೆಚ್ಚು ಎತ್ತರವಾಗಿಲ್ಲದವರನ್ನು, ಮೋಟರಲ್ಲದ ವರನ್ನು, ಹೆಚ್ಚು ಬಿಳುಪಾಗಿಲ್ಲದವರನ್ನು, ಹೆಚ್ಚುಕಪ್ಪಾಗಿಲ್ಲದವರನ್ನು, ಹೆಚ್ಚು ಕುಳ್ಳರಲ್ಲದವರನ್ನು ನೋಡಿದನು. ॥17-19॥

ಮೂಲಮ್ - 20

ವಿರೂಪಾನ್ ಬಹುರೂಪಾಂಶ್ಚ ಸುರೂಪಾಂಶ್ಚ ಸುವರ್ಚಸಃ ।
ಧ್ವಜೀನ್ ಪತಾಕಿನಶ್ಚೈವ ದದರ್ಶ ವಿವಿಧಾಯುಧಾನ್ ॥

ಮೂಲಮ್ - 21

ಶಕ್ತಿವೃಕ್ಷಾಯುಧಾಂಶ್ಚೈವ ಪಟ್ಟಿಶಾಶನಿಧಾರಿಣಃ ।
ಕ್ಷೇಪಣೀಪಾಶಹಸ್ತಾಂಶ್ಚ ದದರ್ಶ ಸ ಮಹಾಕಪಿಃ ॥

ಅನುವಾದ

ವಿರೂಪರನ್ನು, ಬಹುರೂಪರನ್ನು, ಸುರೂಪರನ್ನು, ಒಳ್ಳೆಯ ತೇಜಸ್ವಿಗಳನ್ನು ಹನುಮಂತನು ಅಲ್ಲಿ ನೋಡಿದನು. ಧ್ವಜ, ಪತಾಕೆಗಳನ್ನು ಕೈಗಳಲ್ಲಿ ಹಿಡಿದಿರುವವರನ್ನು ಶಕ್ತಿ, ವೃಕ್ಷ, ಪಟ್ಟಿಶ, ವಜ್ರ, ಕಣವೆ, ಹಗ್ಗ ಮುಂತಾದ ಹಲವು ಬಗೆಯ ಆಯುಧಗಳನ್ನು ಹಿಡಿದು ನಿಂತಿದ್ದ ರಾಕ್ಷಸರನ್ನು ಮಹಾಕಪಿಯು ನೋಡಿದನು. ॥20-21॥

ಮೂಲಮ್ - 22

ಸ್ರಗ್ವಿಣಸ್ತ್ವನುಲಿಪ್ತಾಂಶ್ಚ ವರಾಭರಣಭೂಷಿತಾನ್ ।
ನಾನಾವೇಷಸಮಾಯುಕ್ತಾನ್ ಯಥಾಸ್ವೈರಗತಾನ್ ಬಹೂನ್ ॥

ಮೂಲಮ್ - 23

ತೀಕ್ಷ್ಣ ಶೂಲಧರಾಂಶ್ಚೈವ ವಜ್ರಿಣಶ್ಚ ಮಹಾಬಲಾನ್ ।
ಶತಸಾಹಸ್ರಮವ್ಯಗ್ರಮಾರಕ್ಷಂ ಮಧ್ಯಮಂ ಕಪಿಃ ॥

ಅನುವಾದ

ಸ್ವೇಚ್ಛೆಯಿಂದ ಸಂಚರಿಸುತ್ತಿದ್ದವರನ್ನೂ, ಮಾಲಾಧಾರಿಗಳನ್ನು, ಗಂಧ ಬಳಿದುಕೊಂಡಿದ್ದವರನ್ನು, ಶ್ರೇಷ್ಠವಾದ ಆಭರಣಗಳಿಂದ ಅಲಂಕೃತರಾದವರನ್ನು, ನಾನಾ ವಿಧವಾದ ವೇಷಧಾರಿಗಳನ್ನು ತೀಕ್ಷ್ಣವಾದ ಶೂಲಗಳನ್ನು ಧರಿಸಿದ್ದವರನ್ನು, ವಜ್ರಾಯುಧಧಾರಿಗಳನ್ನು, ಮಹಾ ಬಲಶಾಲಿಗಳನ್ನು ಹನುಮಂತನು ಅಲ್ಲಿ ನೋಡಿದನು.॥21-23॥

ಮೂಲಮ್ - 24

ರಕ್ಷೋಽಧಿಪತಿನಿರ್ದಿಷ್ಟಂ ದದರ್ಶಾಂತಃಪುರಾಗ್ರತಃ ।
ಸ ತದಾ ತದ್ಗೃಹಂ ದೃಷ್ಟ್ವಾ ಮಹಾಹಾಟಕತೋರಣಮ್ ॥

ಮೂಲಮ್ - 25

ರಾಕ್ಷಸೇಂದ್ರಸ್ಯ ವಿಖ್ಯಾತಮದ್ರಿಮೂರ್ಧ್ನಿ ಪ್ರತಿಷ್ಠಿತಮ್ ।
ಪುಂಡರೀಕಾವತಂಸಾಭಿಃ ಪರಿಖಾಭಿಃ ಸಮಾವೃತಮ್ ॥

ಅನುವಾದ

ನಗರ ರಕ್ಷಣೆಯಲ್ಲಿಯೇ ಏಕಾಗ್ರತೆಯಿಂದ ನಿರತರಾಗಿದ್ದ, ರಾಕ್ಷಸಾಧಿಪತಿಯಾದ ರಾವಣನಿಂದ ಆಜ್ಞಪ್ತರಾದ ಲಕ್ಷ ಮಂದಿ ರಾಕ್ಷಸರನ್ನು ಅಂತಃಪುರದ ಮುಂಭಾಗದಲ್ಲಿದ್ದವರನ್ನು ಅವನು ನೋಡಿದನು. ಅನಂತರ ಹನುಮಂತನು ರಾಕ್ಷಸೇಂದ್ರನಾದ ರಾವಣನ ಸುವಿಖ್ಯಾತವಾದ, ಪರ್ವತದ ಅಗ್ರಭಾಗದಲ್ಲಿದ್ದ ಭವ್ಯವಾದ ಅರಮನೆಯನ್ನು ನೋಡಿದನು. ಆ ಅರಮನೆಗೆ ಸುವರ್ಣಮಯವಾದ ಸಿಂಹದ್ವಾರವಿತ್ತು. ಬಿಳಿಯ ಕಮಲಗಳಿಂದ ವಿಭೂಷಿತವಾಗಿದ್ದ ಕಂದಕಗಳಿಂದ ಅದು ಸುತ್ತುವರಿಯಲ್ಪಟ್ಟಿತ್ತು. ಸುತ್ತಲೂ ಪ್ರಾಕಾರಗಳಿದ್ದವು. ಸ್ವರ್ಗ ಸದೃಶವಾಗಿದ್ದ ಆ ರಾಜ ಭವನವು ದಿವ್ಯನಾದದಿಂದ ನಿನಾದಿತವಾಗಿದ್ದಿತು. ॥24-25॥

ಮೂಲಮ್ - 26

ಪ್ರಾಕಾರಾವೃತಮತ್ಯಂತಂ ದದರ್ಶ ಸ ಮಹಾಕಪಿಃ ।
ತ್ರಿವಿಷ್ಟಪನಿಭಂ ದಿವ್ಯಂ ದಿವ್ಯನಾದವಿನಾದಿತಮ್ ॥

ಮೂಲಮ್ - 27

ವಾಜಿಹೇಷಿತಸಂಘುಷ್ಟಂ ನಾದಿತಂ ಭೂಷಣೈಸ್ತಥಾ ।
ರಥೈರ್ಯಾನೈರ್ವಿಮಾನೈಶ್ಚ ತಥಾ ಗಜಹಯೈಃ ಶುಭೈಃ ॥

ಮೂಲಮ್ - 28

ವಾರಣೈಶ್ಚ ಚತುರ್ದಂತೈಃ ಶ್ವೇತಾಭ್ರನಿಚಯೋಪಮೈಃ ।
ಭೂಷಿತಂ ರುಚಿರದ್ವಾರಂ ಮತ್ತೈಶ್ಚ ಮೃಗಪಕ್ಷಿಭಿಃ ॥

ಮೂಲಮ್ - 29

ರಕ್ಷಿತಂ ಸುಮಹಾವೀರ್ಯೈರ್ಯಾತುಧಾನೈಃ ಸಹಸ್ರಶಃ ।
ರಾಕ್ಷಸಾಧಿಪತೇರ್ಗುಪ್ತಮಾವಿವೇಶ ಗೃಹಂ ಕಪಿಃ ॥

ಅನುವಾದ

ಅಲ್ಲಿ ಕುದುರೆಗಳ ಹೇಷಾರವವು ಕೇಳಿ ಬರುತ್ತಿತ್ತು. ಅದ್ಭುತವಾದ ಕುದುರೆಗಳೂ, ರಥಗಳೂ, ಯಾನಗಳೂ, ವಿಮಾನಗಳೂ, ಶುಭ ಲಕ್ಷಣದಿಂದ ಕೂಡಿದ ಆನೆ-ಕುದುರೆಗಳೂ, ಬಿಳಿಯ ಮೋಡಗಳ ರಾಶಿಯಂತೆ ಕಾಣುತ್ತಿದ್ದ ನಾಲ್ಕು ದಂತಗಳುಳ್ಳ ಮದಿಸಿದ ಆನೆಗಳೂ, ಮೃಗ-ಪಕ್ಷಿಗಳೂ ಆ ಅರಮನೆಯಲ್ಲಿದ್ದವು. ಅರಮನೆಗೆ ಸುಂದರವಾದ ಮಹಾದ್ವಾರವಿತ್ತು. ಮಹಾಪರಾಕ್ರಮಿಗಳಾದ ಸಾವಿರಾರು ರಾಕ್ಷಸರು ಆ ದಿವ್ಯ ಭವನವನ್ನು ಎಲ್ಲ ಕಾಲಗಳಲ್ಲಿಯೂ ರಕ್ಷಿಸುತ್ತಿದ್ದರು. ಅಂತಹ ಅತಿಗೋಪ್ಯವಾದ ರಾಕ್ಷಸೇಶ್ವರ ರಾವಣನ ಅರಮನೆಯನ್ನು ಹನುಮಂತನು ಪ್ರವೇಶಿಸಿದನು. ॥26-29॥

ಮೂಲಮ್ - 30

ಸಹೇಮಜಾಂಬೂನದಚಕ್ರವಾಲಂ
ಮಹಾರ್ಹಮುಕ್ತಾಮಣಿಭೂಷಿತಾಂತಮ್ ।
ಪರಾರ್ಧ್ಯಕಾಲಾಗರುಚಂದನಾಕ್ಷಂ
ಸ ರಾವಣಾಂತಃಪುರಮಾವಿವೇಶ ॥

ಅನುವಾದ

ರಾವಣನ ಅಂತಃಪುರವು ತಪ್ತಕಾಂಚನದಿಂದ ನಿರ್ಮಿತವಾದ ಪ್ರಾಕಾರದಿಂದ ಕೂಡಿದ್ದಿತು. ಒಳಭಾಗವು ಅನರ್ಘ್ಯವಾದ ಮುತ್ತಿನ ಮಣಿಗಳಿಂದ ಸಮಲಂಕೃತವಾಗಿತ್ತು. ಶ್ರೇಷ್ಠವಾದ ಕಾಲಾಗರು, ಚಂದನ ಧೂಪಗಳಿಂದ ಧೂಪಿತವಾಗಿತ್ತು. ಅಂತಹ ಪರಮಾದ್ಭುತವಾದ ಕಾಂತಿಯಿಂದ ಕೂಡಿದ್ದ ಅಂತಃಪುರವನ್ನು ಆ ಕಪಿವರನು ಪ್ರವೇಶಿಸಿದನು. ॥30॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಚತುರ್ಥಃ ಸರ್ಗಃ ॥ 4 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ನಾಲ್ಕನೇ ಸರ್ಗವು ಮುಗಿಯಿತು.