वाचनम्
ಭಾಗಸೂಚನಾ
ಹನುಮಂತನು ಲಂಕಾಧಿದೇವತೆಯನ್ನು ದಂಡಿಸಿದುದು, ಲಂಕೆಯನ್ನು ಪ್ರವೇಶಿಸಿದುದು
ಮೂಲಮ್ - 1
ಸ ಲಂಬಶಿಖರೇ ಲಂಬೇ ಲಂಬತೋಯದಸಂನಿಭೇ ।
ಸತ್ತ್ವಮಾಸ್ಥಾಯ ಮೇಧಾವೀ ಹನುಮಾನ್ ಮಾರುತಾತ್ಮಜಃ ॥
ಮೂಲಮ್ - 2
ನಿಶಿ ಲಂಕಾಂ ಮಹಾಸತ್ತ್ವೋ ವಿವೇಶ ಕಪಿಕುಂಜರಃ ।
ರಮ್ಯಕಾನನತೋಯಾಢ್ಯಾಂ ಪುರೀಂ ರಾವಣಪಾಲಿತಾಮ್ ॥
ಅನುವಾದ
ಹೆಚ್ಚಿನ ಪ್ರಜ್ಞಾಶಾಲಿಯೂ, ವಾಯುಸುತನೂ, ಮಹಾಬಲ ಸಂಪನ್ನನಾದ ಕಪಿಶ್ರೇಷ್ಠನು ಎತ್ತರವಾದ ಶಿಖರದಿಂದ ಇಳಿದು, ಜೋಲಾಡುತ್ತಿರುವ ಮೇಘದೋಪಾದಿಯಲ್ಲಿದ್ದ ವಿಸ್ತೀರ್ಣವಾದ ಲಂಬ (ತ್ರಿಕೂಟ) ಪರ್ವತದ ಶಿಖರದಲ್ಲಿ, ರಮ್ಯವಾದ ಅರಣ್ಯಗಳಿಂದ ಸಮಾವೃತವಾಗಿದ್ದ, ಜಲಸಮೃದ್ಧಿಯಿಂದ ಕೂಡಿದ, ರಾವಣನಿಂದ ಪಾಲಿತವಾದ ಲಂಕಾಪಟ್ಟಣವನ್ನು ಧೈರ್ಯದಿಂದ ರಾತ್ರಿಯಲ್ಲಿ ಪ್ರವೇಶಿಸಿದನು. ॥1-2॥
ಮೂಲಮ್ - 3
ಶಾರದಾಂಬುಧರಪ್ರಖ್ಯೈರ್ಭವನೈರುಪಶೋಭಿತಾಮ್ ।
ಸಾಗರೋಪಮನಿರ್ಘೋಷಾಂ ಸಾಗರಾನಿಲಸೇವಿತಾಮ್ ॥
ಅನುವಾದ
ಆ ಲಂಕಾನಗರವು ಶರತ್ಕಾಲದ ಮೇಘಗಳಂತೆ ಶ್ವೇತಭವನಗಳಿಂದ ಶೋಭಾಯಮಾನವಾಗಿತ್ತು. ಸಮುದ್ರ ಘೋಷವನ್ನು ಮೀರಿ ರಾಕ್ಷಸರ ಭಯಂಕರ ಧ್ವನಿಗಳಿಂದ ತುಂಬಿ ಹೋಗಿತ್ತು. ಸಮುದ್ರದ ಮೇಲಿನಿಂದ ಬೀಸುವಂತಹ ಗಾಳಿಯು ಎಲ್ಲೆಡೆ ಬೀಸುತಿತ್ತು.॥3॥
ಮೂಲಮ್ - 4
ಸುಪುಷ್ಟಬಲಸಂಘುಷ್ಟಾಂ ಯಥೈವ ವಿಟಪಾವತೀಮ್ ।
ಚಾರುತೋರಣನಿರ್ಯೂಹಾಂ ಪಾಂಡರದ್ವಾರತೋರಣಾಮ್ ॥
ಅನುವಾದ
ಅಲ್ಲಿ ಪುಷ್ಟರಾದ ಸೈನಿಕರ ಜಯಘೋಷಗಳು ಕೇಳಿಬರುತ್ತಿದ್ದುವು. ಸುಂದರವಾದ ತೋರಣಗಳಿಂದ ಕೂಡಿದ ಗೋಪುರಗಳಿದ್ದುವು. ಮಹಾದ್ವಾರದಲ್ಲಿ ಬಿಳುಪಾದ ತೋರಣವನ್ನು ಹೊಂದಿದ್ದು, ಅಲಕಾಪುರಿಗೆ ಸಮಾನವಾಗಿದ್ದ ಲಂಕಾಪಟ್ಟಣವನ್ನು ಹನುಮಂತನು ಸುತ್ತಲೂ ನೋಡಿದನು.॥4॥
ಮೂಲಮ್ - 4
ಭುಜಗಾಚರಿತಾಂ ಗುಪ್ತಾಂ ಶುಭಾಂ ಭೋಗವತೀಮಿವ ।
ತಾಂ ಸವಿದ್ಯುದ್ಘನಾಕೀರ್ಣಾಂ ಜ್ಯೋತಿರ್ಗಣನಿಷೇವಿತಾಮ್ ॥
ಅನುವಾದ
ಸರ್ಪಗಳ ಸಂಚಾರವುಳ್ಳ ಹಾಗೂ ಸರ್ಪಗಳ ಪಟ್ಟಣವಾದ ಭೋಗವತಿ (ಪಾತಾಳ)ಯಂತೆಯೇ ಲಂಕಾಪಟ್ಟಣವು ರಾಕ್ಷಸರಿಂದ ರಕ್ಷಿತವಾಗಿತ್ತು. ಅದು ಇಂದ್ರನ ಅಮರಾವತಿಯಂತೆ, ಮಿಂಚಿನಿಂದ ಕೂಡಿದ ಮೇಘಗಳಿಂದ ವ್ಯಾಪ್ತವಾದ ನಕ್ಷತ್ರ ಮಂಡಲದಂತೆ ಶೋಭಿಸುತಿತ್ತು. ಅಲ್ಲಿ ತಂಗಾಳಿಯು ಬೀಸುತಿದ್ದು, ಸಕಲ ವೈಭವದಿಂದ ವಿರಾಜಮಾನವಾಗಿತ್ತು.॥5॥
ಮೂಲಮ್ - 6
ಮಂದಮಾರುತಸಂಚಾರಾಂ ಯಥಾ ಚಾಪ್ಯಮರಾವತೀಮ್ ।
ಶಾತಕುಂಭೇನ ಮಹತಾ ಪ್ರಾಕಾರೇಣಾಭಿಸಂವೃತಾಮ್ ॥
ಅನುವಾದ
ಆ ಲಂಕಾಪುರಿಯು ಎತ್ತರವಾದ ಸುವರ್ಣಮಯ ಪ್ರಾಕಾರಗಳಿಂದ ಸುತ್ತುವರಿಯಲ್ಪಟ್ಟಿತ್ತು. ಶಬ್ದ ಮಾಡುತ್ತಿದ್ದ ಕಿರು ಗಂಟೆಗಳಿಂದ ಕೂಡಿದ್ದ ಪತಾಕೆಗಳಿಂದ ಸಮಲಂಕೃತವಾಗಿತ್ತು.॥6॥
ಮೂಲಮ್ - 7
ಕಿಂಕಿಣೀಜಾಲಘೋಷಾಭಿಃ ಪತಾಕಾಭಿರಲಂಕೃತಾಮ್ ।
ಆಸಾದ್ಯ ಸಹಸಾ ಹೃಷ್ಟಃ ಪ್ರಾಕಾರಮಭಿಪೇದಿವಾನ್ ॥
ಅನುವಾದ
ಅಂತಹ ಲಂಕಾಪಟ್ಟಣದ ಪ್ರಾಕಾರವನ್ನು ಸೇರಿ ಹನುಮಂತನು ಪರಮಹೃಷ್ಟನಾಗಿ ಹಾರಿ ಮೇಲೆ ಕುಳಿತನು. ಅಲ್ಲಿಂದ ನಗರದ ಎಲ್ಲ ಭಾಗಗಳನ್ನು ನೋಡಿ ಅತ್ಯಂತ ವಿಸ್ಮಿತನಾದನು.॥7॥
ಮೂಲಮ್ - 8
ವಿಸ್ಮಯಾವಿಷ್ಟಹೃದಯಃ ಪುರೀಮಾಲೋಕ್ಯ ಸರ್ವತಃ ।
ಜಾಂಬೂನದಮಯೈರ್ದ್ವಾರೈರ್ವೈಡೂರ್ಯಕೃತವೇದಿಕೈಃ ॥
ಮೂಲಮ್ - 9
ವಜ್ರಸ್ಫಟಿಕಮುಕ್ತಾಭಿರ್ಮಣಿಕುಟ್ಟಿಮ ಭೂಷಿತೈಃ ।
ತಪ್ತಹಾಟಕನಿರ್ಯೂಹೈ ರಾಜತಾಮಲಪಾಂಡರೈಃ ॥
ಮೂಲಮ್ - 10
ವೈಡೂರ್ಯತಲಸೋಪಾನೈಃ ಸ್ಫಾಟಿಕಾಂತರಪಾಂಸುಭಿಃ ।
ಚಾರುಸಂಜವನೋಪೇತೈಃ ಖಮಿವೋತ್ಪತಿತೈಃ ಶುಭೈಃ ॥
ಅನುವಾದ
ಲಂಕಾನಗರಿಯ ಸೌಧಗಳ ಬಾಗಿಲುಗಳೆಲ್ಲವೂ ಸುವರ್ಣಮಯವಾಗಿದ್ದುವು. ವೈಡೂರ್ಯದಿಂದಲೇ ನಿರ್ಮಿತವಾದ ಜಗುಲಿಗಳಿದ್ದವು. ವಜ್ರಗಳಿಂದಲೂ, ಸ್ಫಟಿಕಗಳಿಂದಲೂ, ಮುತ್ತುಗಳಿಂದಲೂ, ಮಣಿಗಳಿಂದಲೂ ಕೂಡಿದ ನೆಲಗಳಿಂದ ಸಮಲಂಕೃತವಾಗಿದ್ದುವು. ಸೌಧಗಳು ಪುಟವಿಟ್ಟ ಭಂಗಾರದಿಂದ ನಿರ್ಮಿತವಾದ ಗೋಪುರಗಳಿಂದ ಕೂಡಿದ್ದು, ಹೊರಭಾಗವು ಪರಿಶುದ್ಧವಾದ ಬೆಳ್ಳಿಯಂತೆ ಬಿಳುಪಾಗಿದ್ದವು. ವೈಡೂರ್ಯದಿಂದಲೇ ನಿರ್ಮಿತವಾದ ಸೋಪಾನಗಳಿಂದ (ಮಹಡಿ ಮೆಟ್ಟಲು) ಕೂಡಿದ್ದವು. ಸ್ಫಟಿಕಮಯವಾದ ಒಳ ಅಂಗಣಗಳು ಧೂಳುರಹಿತವಾಗಿದ್ದುವು. ರಮಣೀಯವಾದ ಚತುಃಶಾಲಗಳಿಂದ (ಸಭಾಭವನಗಳು) ಪರಿಶೋಭಿಸುತ್ತಿದ್ದುವು. ಅವುಗಳು ಹೆಚ್ಚು ಎತ್ತರವಾಗಿದ್ದು ಅಂಬರವನ್ನು ಚುಂಬಿಸುತ್ತಿರುವಂತೆ ಕಾಣುತ್ತಿದ್ದು ಶುಭಾವಹಗಳಾಗಿದ್ದವು.॥8-10॥
ಮೂಲಮ್ - 11
ಕ್ರೌಂಚಬರ್ಹಿಣಸಂಘುಷ್ಟೈ ರಾಜಹಂಸನಿಷೇವಿತೈಃ ।
ತೂರ್ಯಾಭರಣನಿರ್ಘೋಷೈಃ ಸರ್ವತಃ ಪ್ರತಿನಾದಿತಾಮ್ ॥
ಮೂಲಮ್ - 12
ವಸ್ವೋಕಸಾರಾಪ್ರತಿಮಾಂ ಸಮೀಕ್ಷ್ಯ ನಗರೀಂ ತತಃ ।
ಖಮಿವೋತ್ಪತಿತಾಂ ಲಂಕಾಂ ಜಹರ್ಷ ಹನುಮಾನ್ ಕಪಿಃ ॥
ಅನುವಾದ
ಅಲ್ಲಿಯ ಉದ್ಯಾನವನಗಳಲ್ಲಿ ಕ್ರೌಂಚಪಕ್ಷಿಗಳೂ, ನವಿಲುಗಳೂ ನಿನಾದ ಮಾಡುತ್ತಿದ್ದುವು. ಸರೋವರಗಳಲ್ಲಿ ರಾಜಹಂಸಗಳು ವಾಸವಾಗಿದ್ದುವು. ಮಂಗಳವಾದ್ಯಗಳ ಘೋಷಗಳೂ, ಆಭರಣಗಳ ಕಿಣಿ-ಕಿಣಿಧ್ವನಿಗಳೂ ನಗರದ ಎಲ್ಲೆಡೆ ಕೇಳಿಬರುತ್ತಿದ್ದುವು. ಕುಬೇರನ ಅಲಕಾಪುರಿಗೆ ಸಮಾನವಾಗಿ ಶೋಭಿಸುತ್ತಾ ತ್ರಿಕೂಟ ಪರ್ವತದ ಶಿಖರದಲ್ಲಿದ್ದುದರಿಂದ ಆ ಪಟ್ಟಣವು ಆಕಾಶಕ್ಕೆ ನೆಗೆಯಲು ಸಿದ್ಧವಾಗಿದೆಯೋ ಎಂಬಂತೆ ಎದ್ದು ಕಾಣುತ್ತಿತ್ತು. ಅಂತಹ ಅತ್ಯಂತ ಸುಂದರವಾದ ಲಂಕೆಯನ್ನು ನೋಡಿ ಹನುಮಂತನು ಹೆಚ್ಚಿನ ಸಂತಸಗೊಂಡನು.॥11-12॥
ಮೂಲಮ್ - 13
ತಾಂ ಸಮೀಕ್ಷ್ಯ ಪುರೀಂ ಲಂಕಾಂ ರಾಕ್ಷಸಾಧಿಪತೇಃ ಶುಭಾಮ್ ।
ಅನುತ್ತಮಾಮೃದ್ಧಿಮತೀಂ ಚಿಂತಯಾಮಾಸ ವೀರ್ಯವಾನ್ ॥
ಅನುವಾದ
ಅತ್ಯುತ್ತಮವಾದ, ಸಕಲ ಸಂಪತ್ತಿನಿಂದ ಸಮೃದ್ಧವಾದ, ಸುಂದರವೂ, ಮಂಗಳಪ್ರದವೂ ಆದ ರಾಕ್ಷಸಾಧಿಪತಿ ರಾವಣನ ಆ ಪಟ್ಟಣವನ್ನು ನೋಡಿ ಮಹಾಪರಾಕ್ರಮಿಯಾದ ಮಾರುತಿಯು ಆಲೋಚಿಸ ತೊಡಗಿದನು.॥13॥
ಮೂಲಮ್ - 14
ನೇಯಮನ್ಯೇನ ನಗರೀ ಶಕ್ಯಾ ಧರ್ಷಯಿತುಂ ಬಲಾತ್ ।
ರಕ್ಷಿತಾ ರಾವಣಬಲೈರುದ್ಯತಾಯುಧಧಾರಿಭಿಃ ॥
ಅನುವಾದ
‘‘ಆಯುಧಗಳನ್ನು ಮೇಲೆತ್ತಿ ಹಿಡಿದು ಯುದ್ಧಕ್ಕೆ ಸಜ್ಜಾಗಿ ನಿಂತಿರುವ ರಾವಣನ ಸೈನಿಕರಿಂದ ಎಲ್ಲ ಕಾಲದಲ್ಲಿಯೂ ರಕ್ಷಿಸುತ್ತಿರುವ ಈ ಲಂಕಾಪಟ್ಟಣವನ್ನು ಬೇರೆ ಯಾರಿಂದಲೂ ಬಲಪೂರ್ವಕವಾಗಿ ಆಕ್ರಮಿಸಲು ಸಾಧ್ಯವಾಗದು.॥14॥
ಮೂಲಮ್ - 15
ಕುಮುದಾಂಗದಯೋರ್ವಾಪಿ ಸುಷೇಣಸ್ಯ ಮಹಾಕಪೇಃ ।
ಪ್ರಸಿದ್ಧೇಯಂ ಭವೇದ್ಭೂಮಿರ್ಮೈಂದದ್ವಿವಿದಯೋರಪಿ ॥
ಮೂಲಮ್ - 16
ವಿವಸ್ವತಸ್ತನೂಜಸ್ಯ ಹರೇಶ್ಚ ಕುಶಪರ್ವಣಃ ।
ಋಕ್ಷಸ್ಯ ಕೇತುಮಾಲಸ್ಯ ಮಮ ಚೈವ ಗತಿರ್ಭವೇತ್ ॥
ಅನುವಾದ
ಇದನ್ನು ಕುಮುದ, ವಾಲೀಪುತ್ರ ಅಂಗದ, ಮಹಾಕಪಿಯಾದ ಸುಷೇಣ, ಮೈಂದ, ದ್ವಿವಿದ, ಸೂರ್ಯಪುತ್ರನಾದ ಸುಗ್ರೀವ, ಕುಶಪರ್ವ, ಋಕ್ಷರಾಜ ಜಾಂಬವಂತ, ಕೇತುಮಾಲಿ ಮತ್ತು ನಾನು ಇಷ್ಟು ಮಂದಿಗೆ ಮಾತ್ರ ಪ್ರವೇಶಿಸಲು ಸಾಧ್ಯವಾಗಬಹುದು.’’॥15-16॥
ಮೂಲಮ್ - 17
ಸಮೀಕ್ಷ್ಯ ಚ ಮಹಾಬಾಹೋ ರಾಘವಸ್ಯ ಪರಾಕ್ರಮಮ್ ।
ಲಕ್ಷ್ಮಣಸ್ಯ ಚ ವಿಕ್ರಾಂತಮಭವತ್ ಪ್ರೀತಿಮಾನ್ ಕಪಿಃ ॥
ಅನುವಾದ
ಬಳಿಕ ಹನುಮಂತನು ಸ್ವಲ್ಪ ಹೊತ್ತು ಹಾಗೆಯೇ ಯೋಚಿಸುತ್ತಿದ್ದು ಮಹಾಬಾಹುವಾದ ಶ್ರೀರಾಮನ ಮತ್ತು ಲಕ್ಷ್ಮಣನ ಅತುಲ ಪರಾಕ್ರಮಗಳನ್ನು ನೆನೆದು (ಲಂಕೆಯು ಎಂತಹುದೇ ಇರಲಿ ರಾಮ-ಲಕ್ಷ್ಮಣನ ಅತುಲ ಪರಾಕ್ರಮದ ಮುಂದೆ ಅದು ನಿಲ್ಲಲಾರದು.) ಹೆಚ್ಚಿನ ಸಂತಸಗೊಂಡನು.॥17॥
ಮೂಲಮ್ - 18
ತಾಂ ರತ್ನವಸನೋಪೇತಾಂ ಕೋಷ್ಠಾಗಾರಾವತಂಸಕಾಮ್ ।
ಯಂತ್ರಾಗಾರಸ್ತನೀಮೃದ್ಧಾಂ ಪ್ರಮದಾಮಿವ ಭೂಷಿತಾಮ್ ॥
ಮೂಲಮ್ - 19
ತಾಂ ನಷ್ಟ ತಿಮಿರಾಂ ದೀಪೈರ್ಭಾಸ್ವರೈಶ್ಚ ಮಹಾಗೃಹೈಃ ।
ನಗರೀಂ ರಾಕ್ಷಸೇಂದ್ರಸ್ಯ ದದರ್ಶ ಸ ಮಹಾಕಪಿಃ ॥
ಅನುವಾದ
ಆಗ ಹನುಮಂತನಿಗೆ ಕ್ಷಣಕಾಲ ಲಂಕಾನಗರವು ಸರ್ವಾಲಂಕಾರಯುಕ್ತ ಸುಂದರಿಯಂತೆ ಕಂಡಿತು. ರತ್ನಮಯವಾದ ಕೋಟೆಯು ಲಂಕಾಸುಂದರಿಯ ವಸ್ತ್ರವೂ, ಗಗನಚುಂಬಿಯಾದ ಸಭಾಭವನಗಳೇ ಅವಳ ಶಿರೋಭೂಷಣ, ಪ್ರಾಕಾರದ ಮೇಲಿದ್ದ ಯಂತ್ರಾಗಾರಗಳೇ ಯುವತಿಯ ಸ್ತನಗಳು. ಕಡುಚೆಲುವೆಯಾದ ಲಂಕಾಯುವತಿಯು ದೊಡ್ಡ-ದೊಡ್ಡ ಸೌಧಗಳ ಪ್ರಕಾಶಮಾನವಾದ ದೀಪಗಳಿಂದ ಕತ್ತಲೆಯನ್ನು ದೂರಮಾಡಿ ದೇದೀಪ್ಯಮಾನಳಾಗಿ ಬೆಳಗುತ್ತಿದ್ದಳು. ರಾಕ್ಷಸೇಂದ್ರನ ಮಡದಿಯಾದ ಅಂತಹ ಲಂಕಾ ಯುವತಿಯನ್ನು ಹನುಮಂತನು ನೋಡಿದನು.॥18-19॥
ಮೂಲಮ್ - 20
ಅಥ ಸಾ ಹರಿಶಾರ್ದೂಲಂ ಪ್ರವಿಶಂತಂ ಮಹಾಬಲಂ ।
ನಗರೀ ಸ್ವೇನ ರೂಪೇಣ ದದರ್ಶ ಪವನಾತ್ಮಜಮ್ ॥
ಅನುವಾದ
ಸುಂದರವಾದ ಲಂಕಾನಗರಿಯು ಸೊಬಗನ್ನು ನೋಡುತ್ತಾ ಪ್ರವೇಶಿಸುವುದರಲ್ಲಿದ್ದ ಮಹಾಬಲಶಾಲಿಯಾದ ವಾನರ ಶ್ರೇಷ್ಠನಾದ ಮಾರುತಿಯನ್ನು ಲಂಕೆಯ ಅಧಿದೇವತೆಯು ಸ್ವಸ್ವರೂಪದಿಂದ ನೋಡಿದಳು.॥20॥
ಮೂಲಮ್ - 21
ಸಾ ತಂ ಹರಿವರಂ ದೃಷ್ಟ್ವಾ ಲಂಕಾ ರಾವಣಪಾಲಿತಾ ।
ಸ್ವಯಮೇವೋತ್ಥಿತಾ ತತ್ರ ವಿಕೃತಾನನದರ್ಶನಾ ॥
ಮೂಲಮ್ - 22
ಪುರಸ್ತಾತ್ ಕಪಿವರ್ಯಸ್ಯ ವಾಯುಸೂನೋರತಿಷ್ಠತ ।
ಮುಂಚಮಾನಾ ಮಹಾನಾದಮಬ್ರವೀತ್ ಪವನಾತ್ಮಜಮ್ ॥
ಅನುವಾದ
ಹನುಮಂತನನ್ನು ನೋಡುತ್ತಲೇ ಇಷ್ಟ ಬಂದ ರೂಪವನ್ನು ಧರಿಸುವ ಲಂಕಾಧಿದೇವತೆಯಾದ ಲಂಕಿಣಿಯು ವಿಕಾರವಾದ ಮುಖವುಳ್ಳ ರೂಪವನ್ನ ಧರಿಸಿ ತಾನಾಗಿಯೇ ಎದ್ದು ನಿಂತಳು. ಬಳಿಕ ವೀರನಾದ ವಾಯುಕುಮಾರನ ಬಳಿಗೆ ಹೋಗಿ ಎದುರಾಗಿ ನಿಂತು ಗಟ್ಟಿಯಾಗಿ ಗರ್ಜಿಸಿ ಕೇಳಿದಳು.॥21-22॥
ಮೂಲಮ್ - 23
ಕಸ್ತ್ವಂ ಕೇನ ಚ ಕಾರ್ಯೇಣ ಇಹ ಪ್ರಾಪ್ತೋ ವನಾಲಯ ।
ಕಥಯಸ್ವೇಹ ಯತ್ತತ್ತ್ವಂ ಯಾವತ್ ಪ್ರಾಣಾ ಧರಂತಿ ತೇ ॥
ಅನುವಾದ
ಎಲೈ ವನಚರನೇ! ನೀನು ಯಾರು? ಯಾವ ಕಾರ್ಯಕ್ಕಾಗಿ ಇಲ್ಲಿಗೆ ಬಂದಿರುವೆ? ನನ್ನ ಕೈಯಿಂದ ನೀನು ಸಾಯುವ ಮೊದಲು ಎಲ್ಲ ವಿಷಯಗಳನ್ನು ಯಥಾವತ್ತಾಗಿ ಹೇಳು.॥23॥
ಮೂಲಮ್ - 24
ನ ಶಕ್ಯಂ ಖಲ್ವಿಯಂ ಲಂಕಾ ಪ್ರವೇಷ್ಟುಂ ವಾನರ ತ್ವಯಾ ।
ರಕ್ಷಿತಾ ರಾವಣಬಲೈರಭಿಗುಪ್ತಾ ಸಮಂತತಃ ॥
ಮೂಲಮ್ - 25
ಅಥ ತಾಮಬ್ರವೀದ್ವೀರೋ ಹನುಮಾನಗ್ರತಃ ಸ್ಥಿತಾಮ್ ।
ಕಥಯಿಷ್ಯಾಮಿ ತೇ ತತ್ತ್ವಂ ಯನ್ಮಾಂ ತ್ವಂ ಪರಿಪೃಚ್ಛಸಿ ॥
ಅನುವಾದ
ಎಲೈ ವಾನರಾ! ರಾವಣನ ಸೈನಿಕರಿಂದ ಸುತ್ತಲೂ ಸಂರಕ್ಷಿತವಾದ ಈ ಲಂಕೆಯನ್ನು ಪ್ರವೇಶಿಸುವುದು ನಿನ್ನಿಂದ ಸಾಧ್ಯವಿಲ್ಲ. ಲಂಕಾಧಿದೇವತೆಯ ಆ ಮಾತನ್ನು ಕೇಳಿ ಹನುಮಂತನು ಯಥೋಚಿತವಾಗಿ ಉತ್ತರಿಸಿದನು ‘‘ಎಲೈ ಭಯಂಕರ ಸ್ವರೂಪಳೇ! ನೀನು ಕೇಳಿರುವ ಎಲ್ಲ ಪ್ರಶ್ನೆಗಳಿಗೂ ನಾನು ಯಥಾವತ್ತಾಗಿ ಉತ್ತರಿಸುವೆನು. ಆದರೆ ಮೊದಲು ನೀನಾರೆಂಬುದನ್ನು ನನಗೆ ಹೇಳು.॥24-25॥
ಮೂಲಮ್ - 26
ಕಾ ತ್ವಂ ವಿರೂಪನಯನಾ ಪುರದ್ವಾರೇವತಿಷ್ಠಸಿ ।
ಕಿಮರ್ಥಂ ಚಾಪಿ ಮಾಂ ರುದ್ಧ್ವಾ ನಿರ್ಭರ್ತ್ಸಯಸಿ ದಾರುಣಾ ॥
ಅನುವಾದ
ವಿಕಾರವಾದ ಕಣ್ಣುಗಳನ್ನೂ, ಆಕಾರವನ್ನೂ ಹೊಂದಿರುವ ನೀನಾರು? ಏತಕ್ಕಾಗಿ ಪಟ್ಟಣದ ಬಾಗಿಲಲ್ಲಿ ನಿಂತಿರುವೆ? ಭಯಂಕರ ಸ್ವರೂಪಳೇ! ಯಾವ ಕಾರಣದಿಂದ ನೀನು ನನ್ನನ್ನು ತಡೆದು ಭಯಪಡಿಸುತ್ತಿರುವೆ?’’ ॥26॥
ಮೂಲಮ್ - 27
ಹನೂಮದ್ವಚನಂ ಶ್ರುತ್ವಾ ಲಂಕಾ ಸಾ ಕಾಮರೂಪಿಣೀ ।
ಉವಾಚ ವಚನಂ ಕ್ರುದ್ಧಾ ಪರುಷಂ ಪವನಾತ್ಮಜಮ್ ॥
ಅನುವಾದ
ಕಾಮರೂಪಿಣಿಯಾದ ಆ ಲಂಕಾಧಿದೇವತೆಯು ಹನುಮಂತನ ಮಾತನ್ನು ಕೇಳಿ ಕೋಪದಿಂದ ಕಿಡಿಕಿಡಿಯಾದಳು. ವಾಯುಪುತ್ರನನ್ನು ಕುರಿತು ಅತಿಕಠೋರವಾದ ಮಾತುಗಳನ್ನು ಹೇಳಿದಳು.॥27॥
ಮೂಲಮ್ - 28
ಅಹಂ ರಾಕ್ಷಸರಾಜಸ್ಯ ರಾವಣಸ್ಯ ಮಹಾತ್ಮನಃ ।
ಆಜ್ಞಾ ಪ್ರತೀಕ್ಷಾ ದುರ್ಧರ್ಷಾ ರಕ್ಷಾಮಿ ನಗರೀಮಿಮಾಂ ॥
ಅನುವಾದ
ಇತರರಿಂದ ಎದುರಿಸಲು ಅಸಾಧ್ಯಳಾದ ನಾನು - ರಾಕ್ಷಸರ ರಾಜನಾದ ಮಹಾತ್ಮನಾದ ರಾವಣನ ಆಜ್ಞಾಧಾರಕಳಾಗಿ ಈ ನಗರವನ್ನು ರಕ್ಷಿಸುತ್ತಿರುವೆನು.॥28॥
ಮೂಲಮ್ - 29
ನ ಶಕ್ಯಾ ಮಾಮವಜ್ಞಾಯ ಪ್ರವೇಷ್ಟುಂ ನಗರೀ ತ್ವಯಾ ।
ಅದ್ಯ ಪ್ರಾಣೈಃ ಪರಿತ್ಯಕ್ತಃ ಸ್ವಪ್ಸ್ಯಸೇ ನಿಹತೋ ಮಯಾ ॥
ಅನುವಾದ
ನನ್ನನ್ನು ಅನಾದರಣೆ ಮಾಡಿ ಈ ನಗರವನ್ನು ಪ್ರವೇಶಿಸಲು ನಿನ್ನಿಂದಾಗದು. ಈಗ ನಿನಗೆ ನನ್ನ ಕೈಯಿಂದ ಸಾವು ತಪ್ಪದು. ನೀನು ಅಸುನೀಗಿ ದೀರ್ಘ ನಿದ್ರೆಯಲ್ಲಿ ಮಲಗುವೆ. ॥29॥
ಮೂಲಮ್ - 30
ಅಹಂ ಹಿ ನಗರೀ ಲಂಕಾ ಸ್ವಯಮೇವ ಪ್ಲವಂಗಮ ।
ಸರ್ವತಃ ಪರಿರಕ್ಷಾಮಿ ಹ್ಯೇತತ್ತೇ ಕಥಿತಂ ಮಯಾ ॥
ಅನುವಾದ
ಎಲೈ ಕಪೀಶ್ವರಾ! ನಾನೇ ಈ ಲಂಕೆಗೆ ಅಧಿದೇವತೆಯಾಗಿರುವೆನು. ಎಲ್ಲ ವಿಧದಿಂದ ನಾನೇ ಸಾಕ್ಷಾತ್ತಾಗಿ ಈ ನಗರವನ್ನು ರಕ್ಷಿಸುತ್ತಿರುವೆನು. ಈ ಕಾರಣದಿಂದ ನಾನು ನಿನಗೆ ನಗರವನ್ನು ಪ್ರವೇಶಿಸಬಾರದು ಎಂದು ಹೇಳುತ್ತಿದ್ದೇನೆ.’’ ॥30॥
ಮೂಲಮ್ - 31
ಲಂಕಾಯಾ ವಚನಂ ಶ್ರುತ್ವಾ ಹನೂಮಾನ್ ಮಾರುತಾತ್ಮಜಃ ।
ಯತ್ನವಾನ್ ಸ ಹರಿಶ್ರೇಷ್ಠಃ ಸ್ಥಿತಃ ಶೈಲ ಇವಾಪರಃ ॥
ಅನುವಾದ
ಲಂಕಾಧಿದೇವತೆಯ ಆ ಮಾತನ್ನು ಕೇಳಿ ವಾಯುಪುತ್ರನೂ, ಹರಿಶ್ರೇಷ್ಠನೂ, ಪ್ರಯತ್ನಶೀಲನೂ ಆದ ಹನುಮಂತನು ಅವಳ ಮುಂದೆ ಮತ್ತೊಂದು ಪರ್ವತದಂತೆಯೇ ಅಚಲವಾಗಿ ನಿಂತನು.॥31॥
ಮೂಲಮ್ - 32
ಸ ತಾಂ ಸೀರೂಪವಿಕೃತಾಂ ದೃಷ್ಟ್ವಾ ವಾನರಪುಂಗವಃ ।
ಆಬಭಾಷೇಥ ಮೇಧಾವೀ ಸತ್ತ್ವವಾನ್ ಪ್ಲವಗರ್ಷಭಃ ॥
ಅನುವಾದ
ಬಳಿಕ ವಾನರೋತ್ತಮನೂ, ಹೆಚ್ಚಿನ ಪ್ರಜ್ಞಾಶಾಲಿಯೂ, ಮಹಾಬಲ ಸಂಪನ್ನನಾದ ಹನುಮಂತನು ವಿಕಾರವಾದ ಸ್ತ್ರೀರೂಪವನ್ನು ಧರಿಸಿದ ಲಂಕಾಧಿದೇವತೆಯನ್ನು ನೋಡಿ ಅವಳಲ್ಲಿ ಹೀಗೆ ಮಾತಾಡಿದನು.॥32॥
ಮೂಲಮ್ - 33
ದ್ರಕ್ಷ್ಯಾಮಿ ನಗರೀಂ ಲಂಕಾಂ ಸಾಟ್ಟಪ್ರಾಕಾರತೋರಣಾಮ್ ।
ಇತ್ಯರ್ಥಮಿಹ ಸಂಪ್ರಾಪ್ತಃ ಪರಂ ಕೌತೂಹಲಂ ಹಿ ಮೇ ॥
ಅನುವಾದ
‘‘ಲಂಕಾಧಿದೇವತೆಯೇ! ಉಪ್ಪರಿಗೆಗಳಿಂದಲೂ, ಕೋಟೆ-ಕೊತ್ತಲುಗಳಿಂದಲೂ, ತೋರಣಗಳಿಂದಲೂ, ಒಪ್ಪುವ ಮನೋಹರವಾದ ಲಂಕಾನಗರವನ್ನು ನೋಡುವ ಸಲುವಾಗಿ ನಾನಿಲ್ಲಿಗೆ ಬಂದಿರುವೆನು. ಇದನ್ನು ನೋಡುವ ಕೂತೂಹಲ ನನಗೆ ಹೆಚ್ಚಾಗಿದೆ. ॥33 ॥
ಮೂಲಮ್ - 34
ವನಾನ್ಯುಪವನಾನೀಹ ಲಂಕಾಯಾಃ ಕಾನನಾನಿ ಚ ।
ಸರ್ವತೋ ಗೃಹಮುಖ್ಯಾನಿ ದ್ರಷ್ಟುಮಾಗಮನಂ ಹಿ ಮೇ ॥
ಅನುವಾದ
ಇಲ್ಲಿಯ ವನಗಳನ್ನು, ಉಪವನಗಳನ್ನು, ಅರಣ್ಯಗಳನ್ನು ಎಲ್ಲ ಕಡೆಗಳಲ್ಲಿಯೂ ಇರುವ ಶ್ರೇಷ್ಠವಾದ ಸೌಧಗಳನ್ನು ನೋಡುವುದೇ ನನ್ನ ಆಗಮನದ ಉದ್ದೇಶವಾಗಿದೆ.’’ ॥34 ॥
ಮೂಲಮ್ - 35
ತಸ್ಯ ತದ್ವಚನಂ ಶ್ರುತ್ವಾ ಲಂಕಾ ಸಾ ಕಾಮರೂಪಿಣೀ ।
ಭೂಯ ಏವ ಪುನರ್ವಾಕ್ಯಂ ಬಭಾಷೇ ಪರುಷಾಕ್ಷರಮ್ ॥
ಮೂಲಮ್ - 36
ಮಾಮನಿರ್ಜಿತ್ಯ ದುರ್ಬುದ್ಧೇ ರಾಕ್ಷಸೇಶ್ವರಪಾಲಿತಾಮ್ ।
ನ ಶಕ್ಯಮದ್ಯ ತೇ ದ್ರಷ್ಟುಂ ಪುರೀಯಂ ವಾನರಾಧಮ ॥
ಅನುವಾದ
ಹನುಮಂತನ ಈ ಮಾತುಗಳನ್ನು ಕೇಳಿ, ಕಾಮರೂಪಿಣಿಯಾದ ಲಂಕಿಣಿಯು ಅತಿ ಕಠೋರವಾದ ಅಕ್ಷರಗಳಿಂದ ಕೂಡಿರುವ ವಾಕ್ಯವನ್ನು ಹೇಳಿದಳು ‘‘ದುಷ್ಟಬುದ್ಧಿಯ ವಾನರಾಧಮನೇ! ನನ್ನನ್ನು ಜಯಿಸದೆ ರಾಕ್ಷಸೇಶ್ವರ ರಾವಣನಿಂದ ಪರಿಪಾಲಿಸಲ್ಪಡುತ್ತಿರುವ ಈ ಲಂಕೆಯನ್ನು ನೀನು ನೋಡಲಾರೆ’’ ॥35-36॥
ಮೂಲಮ್ - 37
ತತಃ ಸ ಹರಿಶಾರ್ದೂಲಸ್ತಾಮುವಾಚ ನಿಶಾಚರೀಮ್ ।
ದೃಷ್ಟ್ವಾ ಪುರೀಮಿಮಾಂ ಭದ್ರೇ ಪುನರ್ಯಾಸ್ಯೇಯಥಾಗತಮ್ ॥
ಅನುವಾದ
ಅದಕ್ಕೆ ಹನುಮಂತನು ರಾಕ್ಷಸಿಗೆ ಪುನಃ ಹೇಳಿದನು ‘‘ಎಲೈ ಶುಭಾಂಗಿಯೇ! ಈ ಪಟ್ಟಣವನ್ನು ಒಮ್ಮೆ ನೋಡಿ, ನಾನು ಎಲ್ಲಿಂದ ಬಂದಿರುವನೋ ಅಲ್ಲಿಗೆ ಮರಳಿ ಹೋಗುತ್ತೇನೆ’’ ಎಂದು ವಿನಮ್ರನಾಗಿ ನುಡಿದನು. ॥37॥
ಮೂಲಮ್ - 38
ತತಃ ಕೃತ್ವಾ ಮಹಾನಾದಂ ಸಾ ವೈ ಲಂಕಾ ಭಯಾವಹಮ್ ।
ತಲೇನ ವಾನರಶ್ರೇಷ್ಠಂ ತಾಡಯಾಮಾಸ ವೇಗಿತಾ ॥
ಅನುವಾದ
ಹನುಮಂತನು ಹೀಗೆ ಹೇಳಲು ಲಂಕಾಧಿದೇವತೆಯು ಪರಮಕ್ರುದ್ಧಳಾಗಿ ಭಯಂಕರವಾಗಿ ಗರ್ಜನೆಯನ್ನು ಮಾಡುತ್ತಾ ಅಂಗೈನಿಂದ ವಾನರಶ್ರೇಷ್ಠನನ್ನು ವೇಗವಾಗಿ ಪ್ರಹರಿಸಿದಳು. ॥38॥
ಮೂಲಮ್ - 39
ತತಃ ಸ ಕಪಿಶಾರ್ದೂಲೋ ಲಂಕಯಾ ತಾಡಿತೋ ಭೃಶಮ್ ।
ನನಾದ ಸುಮಹಾನಾದಂ ವೀರ್ಯವಾನ್ ಪವನಾತ್ಮಜಃ ॥
ಅನುವಾದ
ರಾಕ್ಷಸಿಯಿಂದ ಬಲವಾಗಿ ಪ್ರಹರಿಸಲ್ಪಟ್ಟ ವೀರ್ಯವಂತನಾದ, ವಾಯುಪುತ್ರನಾದ ಹರಿಶ್ರೇಷ್ಠ ಹನುಮಂತನು ಅತ್ಯಂತ ಬಿರುಸಾಗಿ ಗರ್ಜಿಸಿದನು.॥39॥
ಮೂಲಮ್ - 40
ತತಃ ಸಂವರ್ತಯಾಮಾಸ ವಾಮಹಸ್ತಸ್ಯ ಸೋಂಗುಲೀಃ ।
ಮುಷ್ಟಿನಾಭಿಜಘಾನೈನಾಂ ಹನೂಮಾನ್ ಕ್ರೋಧಮೂರ್ಛಿತಃ ॥
ಅನುವಾದ
ಕ್ರೋಧದಿಂದ ಮೈಮರೆತ್ತಿದ್ದರೂ ಹನುಮಂತನು ಎಡಗೈಯ ಮುಷ್ಟಿಬಿಗಿದುಕೊಂಡು ರಾಕ್ಷಸಿಯನ್ನು ಮೆಲ್ಲಗೆ ಮುಷ್ಟಿಯಿಂದ ಹೊಡೆದನು.॥40॥
ಮೂಲಮ್ - 41
ಸ್ತ್ರೀ ಚೇತಿ ಮನ್ಯಮಾನೇನ ನಾತಿಕ್ರೋಧಃ ಸ್ವಯಂ ಕೃತಃ ।
ಸಾ ತು ತೇನ ಪ್ರಹಾರೇಣ ವಿಹ್ವಲಾಂಗೀ ನಿಶಾಚರೀ ॥
ಮೂಲಮ್ - 42
ಪಪಾತ ಸಹಸಾ ಭೂಮೌ ವಿಕೃತಾನನದರ್ಶನಾ ।
ತತಸ್ತು ಹನುಮಾನ್ ಪ್ರಾಜ್ಞಸ್ತಾಂ ದೃಷ್ಟ್ವಾ ವಿನಿಪಾತಿತಾಮ್ ॥
ಮೂಲಮ್ - 43
ಕೃಪಾಂ ಚಕಾರ ತೇಜಸ್ವೀ ಮನ್ಯಮಾನಃ ಸ್ತ್ರಿಯಂ ತು ತಾಮ್ ।
ತತೋ ವೈ ಭೃಶಸಂವಿಗ್ನಾ ಲಂಕಾ ಸಾ ಗದ್ಗದಾಕ್ಷರಮ್ ॥
ಮೂಲಮ್ - 44
ಉವಾಚಾಗರ್ವಿತಂ ವಾಕ್ಯಂ ಹನೂಮಂತಂ ಪ್ಲವಂಗಮಮ್ ।
ಪ್ರಸೀದ ಸುಮಹಾಬಾಹೋ ತ್ರಾಯಸ್ವ ಹರಿಸತ್ತಮ ॥
ಮೂಲಮ್ - 45
ಸಮಯೇ ಸೌಮ್ಯ ತಿಷ್ಠಂತಿ ಸತ್ತ್ವವಂತೋ ಮಹಾಬಲಾಃ ।
ಅಹಂ ತು ನಗರೀ ಲಂಕಾ ಸ್ವಯಮೇವ ಪ್ಲವಂಗಮ ॥
ಮೂಲಮ್ - 46
ನಿರ್ಜಿತಾಹಂ ತ್ವಯಾ ವೀರ ವಿಕ್ರಮೇಣ ಮಹಾಬಲ ।
ಇದಂ ಚ ತಥ್ಯಂ ಶೃಣು ವೈ ಬ್ರುವಂತ್ಯಾ ಮೇ ಹರೀಶ್ವರ ॥
ಅನುವಾದ
ಲಂಕಾಧಿದೇವತೆಯನ್ನು ಸ್ತ್ರೀಯೆಂದು ಭಾವಿಸಿ ಹನುಮಂತನು ಅವಳ ಮೇಲೆ ಹೆಚ್ಚು ಕೋಪಗೊಳ್ಳಲಿಲ್ಲ. ಸಾಧಾರಣವಾದ ರೀತಿಯಲ್ಲಿ ಅದೂ ಎಡಗೈಯ ಮುಷ್ಟಿಯಿಂದ ಹೊಡೆದಿದ್ದನು. ಆ ಅಲ್ಪ ಪ್ರಹಾರದಿಂದಲೇ ಅವಳ ಶರೀರವು ಜರ್ಜರಿತವಾಯಿತು. ವಿಕಾರವಾದ ಮುಖದಿಂದ ಭೂಮಿಯ ಮೇಲೆ ಬಿದ್ದಳು. ಬಳಿಕ ತೇಜಸ್ವಿಯಾದ, ಪ್ರಾಜ್ಞನಾದ ಹನುಮಂತನು ಲಂಕಾದೇವತೆಯು ಬಿದ್ದುದನ್ನು ನೋಡಿ ಸ್ತ್ರೀಯೆಂದು ಭಾವಿಸಿ ಅವಳ ಮೇಲೆ ಕೃಪೆದೋರಿದನು. ಪೆಟ್ಟುತಿಂದು ಉದ್ವಿಗ್ನಳಾಗಿದ್ದ ರಾಕ್ಷಸಿಯು ಹನುಮಂತನಿಗೆ ಗರ್ವ ರಹಿತಳಾಗಿ ಗದ್ಗದಧ್ವನಿಯಿಂದ ಹೀಗೆ ಹೇಳಿದಳು ಓ ಮಹಾ ಪುರುಷಾ! ಪ್ರಸನ್ನನಾಗು. ಹರಿಶ್ರೇಷ್ಠನೇ! ಸೌಮ್ಯನೇ! ನನ್ನನ್ನು ಕಾಪಾಡು. ಮಹಾಬಲರಾದ ಧೈರ್ಯವಂತರಾದ ಪುರುಷರು ಎಂದಿಗೂ ಶಾಸ್ತ್ರ ಮಾರ್ಯಾದೆಯನ್ನು ಮೀರಿ ನಡೆದುಕೊಳ್ಳುವುದಿಲ್ಲ. ಧರ್ಮಮಾರ್ಗದಲ್ಲಿಯೇ ಸ್ಥಿರವಾಗಿರುತ್ತಾರೆ. ಶಾಸ್ತ್ರಗಳಲ್ಲಿ ಸ್ತ್ರೀಯು ಅವಧ್ಯಳೆಂದು ಹೇಳಿದೆ. ಆದುದರಿಂದ ನೀನು ನನ್ನ ಪ್ರಾಣಹರಣ ಮಾಡಬೇಡ. ಓ ವಾನರೋತ್ತಮಾ! ನಾನು ಮೂರ್ತಸ್ವರೂಪಳಾದ ಲಂಕಾಧಿದೇವತೆಯು. ಮಹಾಬಲಶಾಲಿಯಾದ ಓ ವೀರನೇ! ಪರಾಕ್ರಮದಿಂದ ನೀನಿಂದು ನನ್ನನ್ನು ಜಯಿಸಿರುವೆ. ನಾನು ಹೇಳಲಿರುವ ಸತ್ಯವಾಕ್ಯವನ್ನು ಕೇಳು.॥41-46॥
ಮೂಲಮ್ - 47
ಸ್ವಯಂಭುವಾ ಪುರಾ ದತ್ತಂ ವರದಾನಂ ಯಥಾ ಮಮ ।
ಯದಾ ತ್ವಾಂ ವಾನರಃ ಕಶ್ಚಿದ್ವಿಕ್ರಮಾದ್ವಶಮಾನಯೇತ್ ॥
ಮೂಲಮ್ - 48
ತದಾ ತ್ವಯಾ ಹಿ ವಿಜ್ಞೇಯಂ ರಕ್ಷಸಾಂ ಭಯಮಾಗತಮ್ ।
ಸ ಹಿ ಮೇ ಸಮಯಃ ಸೌಮ್ಯ ಪ್ರಾಪ್ತೋಽದ್ಯ ತವ ದರ್ಶನಾತ್ ॥
ಅನುವಾದ
‘‘ಹಿಂದೆ ನನಗೆ ಬ್ರಹ್ಮದೇವರು ಒಂದು ವರವನ್ನು ಅನುಗ್ರಹಿಸಿದ್ದರು ವಾನರನೊಬ್ಬನು ನಿನ್ನ ಬಳಿಗೆ ಬಂದು ಪರಾಕ್ರಮದಿಂದ ನಿನ್ನನ್ನು ಜಯಿಸಿದಾಗ ರಾಕ್ಷಸರಿಗೆ ಭಯವು ಒದಗಿಬಂದಿತೆಂದು ತಿಳಿಯಬೇಕು,’’ ಬ್ರಹ್ಮದೇವರ ವರದಂತೆ ಇಂದು ನಿನ್ನ ದರ್ಶನದಿಂದ ಆ ಸಮಯವು ಒದಗಿತೆಂದು ತಿಳಿಯುತ್ತೇನೆ. ॥47-48॥
ಮೂಲಮ್ - 49
ಸ್ವಯಂಭುವಿಹಿತಃ ಸತ್ಯೋ ನ ತಸ್ಯಾಸ್ತಿ ವ್ಯತಿಕ್ರಮಃ ।
ಸೀತಾನಿಮಿತ್ತಂ ರಾಜ್ಞಸ್ತು ರಾವಣಸ್ಯ ದುರಾತ್ಮನಃ ॥
ಮೂಲಮ್ - 50
ರಕ್ಷಸಾಂ ಚೈವ ಸರ್ವೇಷಾಂ ವಿನಾಶಃ ಸಮುಪಸ್ಥಿತಃ ।
ತತ್ ಪ್ರವಿಶ್ಯ ಹರಿಶ್ರೇಷ್ಠ ಪುರೀಂ ರಾವಣಪಾಲಿತಾಮ್ ।
ವಿಧತ್ಸ್ವ ಸರ್ವಕಾರ್ಯಾಣಿ ಯಾನಿ ಯಾನೀಹ ವಾಂಛಸಿ ॥
ಅನುವಾದ
ಬ್ರಹ್ಮದೇವರು ಹೇಳಿದ ಮಾತು ಸತ್ಯವಾಗಿ ಪರಿಣಮಿಸಿದೆ. ಅವರು ಹೇಳಿದ ಮಾತು ಬದಲಾಗದು. ಸೀತಾನಿಮಿತ್ತವಾಗಿ ದುರಾತ್ಮನಾದ ರಾವಣನಿಗೂ ಎಲ್ಲ ರಾಕ್ಷಸರಿಗೂ ವಿನಾಶವು ಸನ್ನಿಹಿತವಾಗಿದೆ. ಹರಿಶ್ರೇಷ್ಠನೇ! ನೀನೀಗ ರಾವಣನಿಂದ ಪರಿಪಾಲಿಸಲ್ಪಡುತ್ತಿರುವ ಈ ಲಂಕಾಪಟ್ಟಣವನ್ನು ಪ್ರವೇಶಿಸಿ, ನೀನು ಅಪೇಕ್ಷಿಸಿದ ಎಲ್ಲ ಕಾರ್ಯವನ್ನು ನಿರ್ವಹಿಸು. ॥49-50॥
ಮೂಲಮ್ - 51
ಪ್ರವಿಶ್ಯ ಶಾಪೋಪಹತಾಂ ಹರೀಶ್ವರ
ಪುರೀಂ ಶುಭಾಂ ರಾಕ್ಷಸಮುಖ್ಯಪಾಲಿತಾಮ್ ।
ಯದೃಚ್ಛಯಾ ತ್ವಂ ಜನಕಾತ್ಮಜಾಂ ಸತೀಂ
ವಿಮಾರ್ಗ ಸರ್ವತ್ರ ಗತೋ ಯಥಾಸುಖಮ್ ॥51॥
ಅನುವಾದ
ಹರೀಶ್ವರನೇ! ‘‘ರಾಕ್ಷಸರಾಜನಾದ ರಾವಣನಿಂದ ಪರಿಪಾಲಿಸಲ್ಪಡುತ್ತಿರುವ ಸುಂದರವಾದ ಈ ಲಂಕಾನಗರಿಯು ಆಗಲೇ ಶಾಪದಿಂದ ವಿನಾಶಹೊಂದಿದೆ. ಶುಭಕರವಾದ ಈ ಲಂಕೆಯನ್ನು ಪ್ರವೇಶಿಸಿ, ಸ್ವೆಚ್ಛೆಯಿಂದ ಎಲ್ಲ ಕಡೆಗಳಲ್ಲಿಯೂ ಸುಖವಾಗಿ ಸಂಚರಿಸುತ್ತಾ ನಿರಾತಂಕವಾಗಿ ಸಾಧ್ವಿಯಾದ ಜನಕನ ಮಗಳನ್ನು ಹುಡುಕು.’’ ॥51॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ತೃತೀಯಃ ಸರ್ಗಃ ॥ 3 ॥
ಅನುವಾದ (ಸಮಾಪ್ತಿಃ)
ಮಹರ್ಷಿ ವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡಏದಲ್ಲಿ ಮೂರನೇ ಸರ್ಗವು ಮುಗಿಯಿತು.