००२ लङ्कापुरीवर्णनम्

वाचनम्
ಭಾಗಸೂಚನಾ

ಲಂಕಾಪಟ್ಟಣದ ವರ್ಣನೆ, ಲಂಕೆಯನ್ನು ಪ್ರವೇಶಿಸಲು ಹನುಮಂತನು ಯೋಚಿಸಿ,ಸೂಕ್ಷ್ಮ ರೂಪವನ್ನು ಧರಿಸಿ ಪಟಣಕ್ಕೆ ಪ್ರವೇಶ, ಚಂದ್ರೋದಯ ವರ್ಣನೆ —

ಮೂಲಮ್ - 1

ಸ ಸಾಗರಮನಾಧೃಷ್ಯಮತಿಕ್ರಮ್ಯ ಮಹಾಬಲಃ ।
ತ್ರಿಕೂಟಶಿಖರೇ ಲಂಕಾಂ ಸ್ಥಿತಾಂ ಸ್ವಸ್ಥೋ ದದರ್ಶ ಹ ॥

ಅನುವಾದ

ಮಹಾಬಲನಾದ ಹನುಮಂತನು ಎದುರಿಸಲು ಅಸಾಧ್ಯವಾದ, ಸಾಮಾನ್ಯರಿಂದ ದಾಟಲು ಅಸಾಧ್ಯವಾದ ಸಮುದ್ರವನ್ನು ಲಂಘಿಸಿ ನಿಶ್ಚಿಂತನಾಗಿ ತ್ರಿಕೂಟ ಪರ್ವತದ ಶಿಖರದಲ್ಲಿದ್ದ ಲಂಕಾನಗರವನ್ನು ನೋಡಿದನು.॥1॥

ಮೂಲಮ್ - 2

ತತಃ ಪಾದಪಮುಕ್ತೇನ ಪುಷ್ಪವರ್ಷೇಣ ವೀರ್ಯವಾನ್ ।
ಅಭಿವೃಷ್ಟಃ ಸ್ಥಿತಸ್ತತ್ರ ಬಭೌ ಪುಷ್ಪಮಯೋ ಯಥಾ ॥

ಅನುವಾದ

ಪರಾಕ್ರಮಶಾಲಿಯಾದ ಹನುಮಂತನು ಆ ಪರ್ವತವನ್ನು ನೋಡುತ್ತಾ ನಿಂತಾಗ ಪುಷ್ಪವೃಕ್ಷಗಳು ಅವನ ಮೇಲೆ ಹೂವುಗಳ ಮಳೆಯನ್ನೇ ಸುರಿಸಿದವು. ಅದರಿಂದ ಹನುಮಂತನು ಪುಷ್ಪಮಯನಾಗಿರುವಂತೆ ಪ್ರಕಾಶಿಸಿದನು.॥2॥

ಮೂಲಮ್ - 3

ಯೋಜನಾನಾಂ ಶತಂ ಶ್ರೀಮಾಂಸ್ತೀರ್ತ್ವಾಪ್ಯುತ್ತಮವಿಕ್ರಮಃ ।
ಅನಿಃಶ್ವಸನ್ ಕಪಿಸ್ತತ್ರ ನ ಗ್ಲಾನಿಮಧಿಗಚ್ಛತಿ ॥

ಅನುವಾದ

ಹೆಚ್ಚಿನ ಪ್ರರಾಕ್ರಮಿಯೂ, ಪ್ರಜ್ಞಾಶಾಲಿಯೂ ಆದ ಹನುಮಂತನು ನೂರು ಯೋಜನ ಸಮುದ್ರವನ್ನು ಲಂಘಿಸಿ ಬಂದಿದ್ದರೂ ಅವನಿಗೆ ಸ್ವಲ್ಪವೂ ಆಯಾಸವೇ ಆಗಿರಲಿಲ್ಲ. ರಾಮದೂತನಾದ ಜಗತ್ರಾಣನಿಗೆ ಎಲ್ಲಿಯ ಆಯಾಸ! ॥3॥

ಮೂಲಮ್ - 4

ಶತಾನ್ಯಹಂ ಯೋಜನಾನಾಂ ಕ್ರಮೇಯಂ ಸುಬಹೂನ್ಯಪಿ ।
ಕಿಂ ಪುನಃ ಸಾಗರಸ್ಯಾಂತಂ ಸಂಖ್ಯಾತಂ ಶತಯೋಜನಮ್ ॥

ಅನುವಾದ

ಸಮುದ್ರವನ್ನು ದಾಟಿದ ಬಳಿಕ ಹನುಮಂತನಿಗನಿಸಿತು ‘‘ಅನೇಕ ಶತ ಯೋಜನಗಳನ್ನಾದರೂ ನಾನು ಲಂಘಿಸಲು ಸಮರ್ಥನಾಗಿರುವೆನು. ಹೀಗಿರುವಾಗ ನೂರು ಯೋಜನ ಪರಿಮಿತವಾದ ಈ ಸಮುದ್ರವನ್ನು ದಾಟುವುದು ನನಗೆ ಲೆಕ್ಕವೆ?’’॥4॥

ಮೂಲಮ್ - 5

ಸ ತು ವೀರ್ಯವತಾಂ ಶ್ರೇಷ್ಠಃ ಪ್ಲವತಾಮಪಿ ಚೋತ್ತಮಃ ।
ಜಗಾಮ ವೇಗವಾನ್ ಲಂಕಾಂ ಲಂಘಯಿತ್ವಾ ಮಹೋದಧಿಮ್ ॥

ಅನುವಾದ

ವೀರ್ಯವಂತರಲ್ಲಿ ಶ್ರೇಷ್ಠನೂ, ಹಾರುವವರಲ್ಲಿ ಉತ್ತಮನೂ, ಮಹಾವೇಗವಂತನೂ ಆದ ಹನುಮಂತನು ಹೀಗೆ ಮಹೋದಧಿಯನ್ನು ಲಂಘಿಸಿ ಲಂಕೆಗೆ ಹೊರಟನು.॥5॥

ಮೂಲಮ್ - 6

ಶಾದ್ವಲಾನಿ ಚ ನೀಲಾನಿ ಗಂಧವಂತಿ ವನಾನಿ ಚ ।
ಗಂಡವಂತಿ ಚ ಮಧ್ಯೇನ ಜಗಾಮ ನಗವಂತಿ ಚ ॥

ಅನುವಾದ

ಅವನು ಹೋಗುತ್ತಿದ್ದ ವನಪ್ರದೇಶವು ಹಚ್ಚ ಹಸಿರಾದ ಗರಿಕೆಯ ಹುಲ್ಲಿನಿಂದ ವಾಪ್ತವಾಗಿ ನೀಲವರ್ಣದ್ದಾಗಿಯೂ ಸುಗಂಧ ಯುಕ್ತವಾಗಿತ್ತು. ಆ ವನದಲ್ಲಿ ಮಧುವಿಶಿಷ್ಟವಾದ ವೃಕ್ಷಗಳಿದ್ದುವು. ಅಲ್ಲಲ್ಲಿ ದಿಬ್ಬಗಳಿಂದ ಕೂಡಿದ ಆ ಸುಂದರವಾದ ಅರಣ್ಯದಲ್ಲಿ ಹನುಮಂತನು ನಡೆದು ಹೋಗುತ್ತಿದ್ದನು.॥6॥

ಮೂಲಮ್ - 7

ಶೈಲಾಂಶ್ಚ ತರುಸಂಶ್ಛನ್ನಾನ್ ವನರಾಜೀಶ್ವ ಪುಷ್ಪಿತಾಃ ।
ಅಭಿಚಕ್ರಾಮ ತೇಜಸ್ವೀ ಹನೂಮಾನ್ ಪ್ಲವಗರ್ಷಭಃ ॥

ಅನುವಾದ

ವಾನರೋತ್ತಮನೂ, ಮಹಾ ತೇಜಸ್ವಿಯೂ ಆದ ಹನುಮಂತನು ವೃಕ್ಷಗಳಿಂದ ತುಂಬಿಹೋದ ಪರ್ವತಗಳನ್ನು, ಪುಷ್ಪಿತವಾದ ಅರಣ್ಯದ ಸಾಲುಗಳನ್ನು ದಾಟಿ ಮುಂದೆ ನಡೆದನು.॥7॥

ಮೂಲಮ್ - 8

ಸ ತಸ್ಮಿನ್ನಚಲೇ ತಿಷ್ಠನ್ ವನಾನ್ಯುಪವನಾನಿ ಚ ।
ಸ ನಗಾಗ್ರೇ ಸ್ಥಿತಾಂ ಲಂಕಾಂ ದದರ್ಶ ಪವನಾತ್ಮಜಃ ॥

ಅನುವಾದ

ಪವನನಂದನನು ಆ ಪರ್ವತದ ಮೇಲೆ ನಿಂತು ವನಗಳನ್ನು, ಉಪವನಗಳನ್ನು, ತ್ರಿಕೂಟಪರ್ವತದ ಮೆಲ್ಭಾಗದಲ್ಲಿದ್ದ ಲಂಕಾ ಪಟ್ಟಣವನ್ನು ನೋಡಿದನು.॥8॥

ಮೂಲಮ್ - 9

ಸರಲಾನ್ ಕರ್ಣಿಕಾರಾಂಶ್ಚ ಖರ್ಜೂರಾಂಶ್ಚ ಸುಪುಷ್ಪಿತಾನ್ ।
ಪ್ರಿಯಾಲಾನ್ ಮುಚುಲಿಂದಾಂಶ್ಚ ಕುಟಜಾನ್ ಕೇತಕಾನಪಿ ॥

ಮೂಲಮ್ - 10

ಪ್ರಿಯಂಗೂನ್ ಗಂಧಪೂರ್ಣಾಂಶ್ಚ ನೀಪಾನ್ ಸಪ್ತಚ್ಛದಾಂ ಸ್ತಥಾ ।
ಅಸನಾನ್ ಕೋವಿದಾರಾಂಶ್ಚ ಕರವೀರಾಂಶ್ಚ ಪುಷ್ಪಿತಾನ್ ॥

ಮೂಲಮ್ - 11

ಪುಷ್ಪಭಾರನಿಬದ್ಧಾಂಶ್ಚ ತಥಾ ಮುಕುಲಿತಾನಪಿ ।
ಪಾದಪಾನ್ ವಿಹಗಾಕೀರ್ಣಾನ್ ಪವನಾಧೂತಮಸ್ತಕಾನ್ ॥

ಅನುವಾದ

ಅಲ್ಲಿಂದಲೇ ಸರಳ (ದೇವದಾರು), ಕರ್ಣಿಕಾರ ವೃಕ್ಷಗಳನ್ನೂ, ಪುಷ್ಪಗಳಿಂದ ಯುಕ್ತವಾದ ಖರ್ಜೂರ ವೃಕ್ಷಗಳನ್ನೂ, ಪ್ರಿಯಾಲ, ಮುಚುಲಿಂದ, ಕುಟಜ (ಬೆಟ್ಟದಮಲ್ಲಿಗೆ), ಕೇದಗೆ ವೃಕ್ಷಗಳನ್ನು, ಸುಗಂಧಯುಕ್ತವಾದ ಹಿಪ್ಪಲಿ ಗಿಡಗಳನ್ನು, ಕದಂಬ ಸಪ್ತಗುಚ್ಛ (ಎಳೆಲೆ ಬಾಳೆ) ಹೊನ್ನೆ, ಕೋವಿದಾರ ವೃಕ್ಷಗಳನ್ನು, ಪುಷ್ಪಿತವಾದ ಕರವೀರ ವೃಕ್ಷಗಳನ್ನು, ನಾನಾ ಬಗೆಯ ಹೂವಿನ ಗಿಡಗಳನ್ನು ನೋಡಿದನು. ಪುಷ್ಪಭಾರದಿಂದ ಬಾಗಿದ ಹಾಗೂ ಮೊಗ್ಗುಗಳಿಂದ ಕೂಡಿದ ಪಕ್ಷಿಗಳಿಂದ ವ್ಯಾಪ್ತವಾಗಿದ್ದ, ಗಾಳಿಯಿಂದ ಬಗ್ಗಿದ ಅಗ್ರಭಾಗಗಳುಳ್ಳ, ನಾನಾವಿಧವಾದ ವೃಕ್ಷಗಳನ್ನು ನೋಡಿದನು.॥9-11॥

ಮೂಲಮ್ - 12

ಹಂಸಕಾರಂಡವಾಕೀರ್ಣಾ ವಾಪೀಃ ಪದ್ಮೋತ್ಪಲಾಯುತಾಃ ।
ಆಕ್ರೀಡಾನ್ ವಿವಿಧಾನ್ ರಮ್ಯಾನ್ ವಿವಿಧಾಂಶ್ಚ ಜಲಾಶಯಾನ್ ॥

ಅನುವಾದ

ಹಂಸ, ಕಾರಂಡವ ಪಕ್ಷಿಗಳಿಂದಲೂ, ಸಾವಿರಾರು ಕಮಲಗಳಿಂದಲೂ ಶೋಭಿಸುತ್ತಿದ್ದ ಅನೇಕ ಸರೋವರಗಳನ್ನು ವಿವಿಧ ಕ್ರೀಡಾಸ್ಥಾನಗಳನ್ನು, ಜಲಾಶಯಗಳನ್ನು ನೋಡಿದನು.॥12॥

ಮೂಲಮ್ - 13

ಸಂತತಾನ್ ವಿವಿಧೈರ್ವೃಕ್ಷೈಃ ಸರ್ವರ್ತುಫಲಪುಷ್ಪಿತೈಃ ।
ಉದ್ಯಾನಾನಿ ಚ ರಮ್ಯಾಣಿ ದದರ್ಶ ಕಪಿಕುಂಜರಃ ॥

ಅನುವಾದ

ಸುತ್ತಲೂ ಹಚ್ಚಹಸಿರಾಗಿದ್ದ ಪ್ರದೇಶಗಳನ್ನು, ಎಲ್ಲ ಋತುಗಳಲ್ಲಿಯೂ ಫಲ-ಪುಷ್ಪಭರಿತವಾದ ನಾನಾವಿಧ ವೃಕ್ಷಗಳಿಂದ ನಿಬಿಡವಾಗಿದ್ದ ರಮ್ಯವಾದ ಉದ್ಯಾನವನಗಳನ್ನು ವೀಕ್ಷಿಸಿದನು.॥13॥

ಮೂಲಮ್ - 14

ಸಮಾಸಾದ್ಯ ಚ ಲಕ್ಷ್ಮೀವಾನ್ ಲಂಕಾಂ ರಾವಣಪಾಲಿತಾಮ್ ।
ಪರಿಖಾಭಿಃ ಸಪದ್ಮಾಭಿಃ ಸೋತ್ಪಲಾಭಿರಲಂಕೃತಾಮ್ ॥

ಅನುವಾದ

ಸರ್ವಶುಭ ಲಕ್ಷ್ಮಣ ಸಂಪನ್ನನಾದ ಹನುಮಂತನು ಇನ್ನು ಮುಂದೆ ಹೋಗಿ, ಕಮಲಗಳಿಂದಲೂ, ಕನ್ನೈದಿಲೆಗಳಿಂದಲೂ ಸಮಲಂಕೃತವಾಗಿದ್ದು, ಕಂದಕಗಳಿಂದ ಸುತ್ತುವರಿಯಲ್ಟಟ್ಟ, ರಾವಣನಿಂದ ಪಾಲಿತವಾದ ಲಂಕಾಪಟ್ಟಣವನ್ನು ನೋಡಿದನು.॥14॥

ಮೂಲಮ್ - 15

ಸೀತಾಪಹರಣಾರ್ಥೇನ ರಾವಣೇನ ಸುರಕ್ಷಿತಾಮ್ ।
ಸಮಂತಾದ್ವಿಚರದ್ಭಿಶ್ಚ ರಾಕ್ಷಸೈಃ ಉಗ್ರಧನ್ವಿಭಿಃ ॥

ಅನುವಾದ

ಸೀತಾಪಹರಣ ಕಾರಣದಿಂದ ಶ್ರೀರಾಮನಿಗೆ ಹೆದರಿದ್ದ ರಾವಣನಿಂದ ನಿಯುಕ್ತರಾದ ರಾಕ್ಷಸರು ಭಯಂಕರ ಧನುಸ್ಸುಗಳನ್ನು ಹಿಡಿದು ಸುತ್ತಲೂ ತಿರುಗುತ್ತಿದ್ದರು. ಹೀಗೆ ನಿರಂತರ ರಕ್ಷಿತವಾದ ಲಂಕೆಯನ್ನು ಹನುಮಂತನು ವೀಕ್ಷಿಸಿದನು.॥15॥

ಮೂಲಮ್ - 16

ಕಾಂಚನೇನಾವೃತಾಂ ರಮ್ಯಾಂ ಪ್ರಾಕಾರೇಣ ಮಹಾಪುರೀಮ್ ।
ಗೃಹೈಶ್ಚ ಗ್ರಹಸಂಕಾಶೈಃ ಶಾರದಾಂಬುದಸನ್ನಿಭೈಃ ॥

ಅನುವಾದ

ಸುವರ್ಣಮಯವಾದ ಪ್ರಾಕಾರದಿಂದ ಸಮಾವೃತವಾಗಿದ್ದ ಮಹಾಪುರಿಯಾದ ಲಂಕೆಯಲ್ಲಿ ಶರತ್ಕಾಲದ ಬಿಳಿಯ ಮೇಘಗಳಂತೆ ಹಾಗೂ ಪರ್ವತಗಳಂತೆ ಅತಿ ದೊಡ್ಡದಾದ ಸೌಧಗಳಿದ್ದವು.॥16॥

ಮೂಲಮ್ - 17

ಪಾಂಡರಾಭಿಃ ಪ್ರತೋಲೀಭಿರುಚ್ಚಾಭಿರಭಿಸಂವೃತಾಮ್ ।
ಅಟ್ಟಾಲಕಶತಾಕೀರ್ಣಾಂ ಪತಾಕಾಧ್ವಜಶೋಭಿತಾಮ್ ॥

ಮೂಲಮ್ - 18

ತೋರಣೈಃ ಕಾಂಚನೈರ್ದೀಪ್ತಾಂ ಲತಾಪಂಕ್ತಿವಿಚಿತ್ರಿತೈಃ ।
ದದರ್ಶ ಹನುಮಾನ್ ಲಂಕಾಂ ದಿವಿ ದೇವಪುರೀಮಿವ ॥

ಅನುವಾದ

ಆ ಲಂಕಾಪಟ್ಟಣದಲ್ಲಿ ಸ್ವಚ್ಛವಾದ, ವಿಶಾಲವಾದ, ಉದ್ದುದ್ದವಾಗಿದ್ದ ರಾಜಬೀದಿಗಳಿದ್ದವು. ಅಲ್ಲೆಡೆಗಳಲ್ಲಿಯೂ ಧ್ವಜಗಳೂ, ಪತಾಕೆಗಳೂ ಹಾರಾಡುತ್ತಿದ್ದುವು. ದಿವ್ಯವಾದ ಭಂಗಾರದ ತೋರಣಗಳಿಂದ ಶೋಭಾಯ ಮಾನವಾಗಿ ಕಾಣುತ್ತಿತ್ತು. ವಿಚಿತ್ರವಾದ ಲತೆಗಳ ಸಾಲುಗಳಿಂದ ಕೂಡಿದ್ದು ಸುಮನೋಹರವಾಗಿತ್ತು. ಆ ಲಂಕೆಯು ಸ್ವರ್ಗದ ಅಮರಾವತಿಯಂತೆ ಭಾಸವಾಗುತಿತ್ತು. ಅಂತಹ ಲಂಕೆಯನ್ನು ಆ ಕಪಿಶ್ರೇಷ್ಠನು ನೋಡಿದನು. ॥17-18॥

ಮೂಲಮ್ - 19

ಗಿರಿಮೂರ್ಧ್ನಿ ಸ್ಥಿತಾಂ ಲಂಕಾಂ ಪಾಂಡರೈರ್ಭವನೈಃ ಶುಭೈಃ ।
ಸ ದದರ್ಶ ಕಪಿಃ ಶ್ರೀಮಾನ್ ಪುರಮಾಕಾಶಗಂ ಯಥಾ ॥

ಅನುವಾದ

ತ್ರಿಕೂಟಪರ್ವತದ ಶಿಖರದಲ್ಲಿದ್ದ ಶುಭಾವಹವಾದ, ಬಿಳಿಯ ಬಣ್ಣದ ಸೌಧಗಳಿಂದ ಸಮಾಕುಲವಾಗಿದ್ದ, ಆಕಾಶನಗರಿಯಂತೆ ಕಾಣುತ್ತಿದ್ದ ಸುಂದರವಾದ ಲಂಕಾನಗರವನ್ನು ಮಾರುತಿಯು ನೋಡಿದನು.॥19॥

ಮೂಲಮ್ - 20

ಪಾಲಿತಾಂ ರಾಕ್ಷಸೇಂದ್ರೇಣ ನಿರ್ಮಿತಾಂ ವಿಶ್ವಕರ್ಮಣಾ ।
ಪ್ಲವಮಾನಾಮಿವಾಕಾಶೇ ದದರ್ಶ ಹನುಮಾನ್ ಪುರೀಮ್ ॥

ಅನುವಾದ

ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟಿದ್ದು, ರಾಕ್ಷಸರಾಜನಾದ ರಾವಣನಿಂದ ಪರಿಪಾಲಿಸಲ್ಪಡುತ್ತಿದ್ದು, ಆಕಾಶದಲ್ಲಿ ತೇಲುತ್ತಿರರುವುದೋ ಎಂಬಂತೆ ಕಾಣುತ್ತಿತ್ತು.॥20॥

ಮೂಲಮ್ - 21

ವಪ್ರಪ್ರಾಕಾರಜಘನಾಂ ವಿಪುಲಾಂಬುವನಾಂಬರಾಮ್ ।
ಶತಘ್ನೀ ಶೂಲಕೇಶಾಂತಾಮಟ್ಟಾಲಕವತಂಸಕಾಮ್ ॥

ಮೂಲಮ್ - 22

ಮನಸೇವ ಕೃತಾಂ ಲಂಕಾಂ ನಿರ್ಮಿತಾಂ ವಿಶ್ವಕರ್ಮಣಾ ।
ದ್ವಾರಮುತ್ತರಮಾಸಾದ್ಯ ಚಿಂತಯಾಮಾಸ ವಾನರಃ ॥

ಅನುವಾದ

ಆ ಲಂಕೆಯು ಕೋಟೆ-ಪ್ರಾಕಾರಗಳೇ ಕಟಿಪ್ರದೇಶ, ಸಾಗರ ಮತ್ತು ವನೋಪವನಗಳೇ ವಸ್ತ್ರರೂಪದಲ್ಲಿದ್ದು, ಶತಘ್ನಿ, ಶೂಲಗಳೇ ಕೇಶಪಾಶಗಳು, ಉಪ್ಪರಿಗೆಗಳು ಕರ್ಣಾಧರಣಗಳಂತಿದ್ದ ಓರ್ವ ಸುಂದರಿಯಂತೆ ಭಾಸವಾಗಿತ್ತು. ವಿಶ್ವಕರ್ಮನು ಪೂರ್ಣ ಮನಸ್ಸಿಟ್ಟು ಅದನ್ನು ನಿರ್ಮಿಸಿದ್ದನು. ಹನುಮಂತನು ಅಂತಹ ಲಂಕಾಪಟ್ಟಣದ ಉತ್ತರದಿಕ್ಕಿನ ಮಹಾದ್ವಾರವನ್ನು ಸೇರಿ ವೈದೇಹಿಯನ್ನು ನೋಡುವುದು ಹೇಗೆಂದು ಆಲೋಚಿಸತೊಡಗಿದನು.॥21-22॥

ಮೂಲಮ್ - 23

ಕೈಲಾಸನಿಲಯ ಪ್ರಖ್ಯಮಾಲಿಖಂತಮಿವಾಂಬರಮ್ ।
ಡೀಯಮಾಣಮಿವಾಕಾಶಮುಚ್ಛ್ರಿತೈರ್ಭವನೋತ್ತಮೈಃ ॥

ಅನುವಾದ

ಲಂಕೆಯು ಕೈಲಾಸಶಿಖರಕ್ಕೆ ಸಮಾನವಾಗಿದ್ದು, ಆಕಾಶದಲ್ಲಿ ರೇಖೆಯನ್ನು ಎಳೆಯುತ್ತಿದೆಯೋ ಎಂಬಂತೆ ಕಾಣುತಿತ್ತು. ಎತ್ತರವಾದ ಶ್ರೇಷ್ಠ ಭವನಗಳನ್ನು ಹೊಂದಿದ್ದು ಆಕಾಶವನ್ನೇ ಎತ್ತಿಕೊಂಡು ಹೋಗುತ್ತಿರುವುದೋ ಎಂಬಂತೆ ಶೋಭಿಸುತಿತ್ತು.॥23॥

ಮೂಲಮ್ - 24

ಸಂಪೂರ್ಣಾಂ ರಾಕ್ಷಸೈರ್ಘೋರೈರ್ನಾಗೈರ್ಭೋಗವತೀಮಿವ ।
ಅಚಿಂತ್ಯಾಂ ಸುಕೃತಾಂ ಸ್ಪಷ್ಟಾಂ ಕುಬೇರಾಧ್ಯುಷಿತಾಂ ಪುರಾ ॥

ಅನುವಾದ

ಭೋಗವತಿ (ಪಾತಾಳಲೋಕ)ಯು ನಾಗಗಳಿಂದ ತುಂಬಿರುವಂತೆ, ಲಂಕಾಪಟ್ಟಣವು ಘೋರರೂಪಿಗಳಾದ ರಾಕ್ಷಸರಿಂದ ನಿಬಿಡವಾಗಿತ್ತು. ಅದು ವಿಶ್ವಕರ್ಮನಿಂದ ಸುಂದರವಾಗಿ ನಿರ್ಮಿಸಲ್ಪಟ್ಟು ಊಹೆಗೂ ನಿಲುಕದಷ್ಟು ಚೆಲುವಾಗಿತ್ತು. ಹಿಂದೆ ಆ ಪಟ್ಟಣವು ಕುಬೇರನ ವಾಸಸ್ಥಾನವಾಗಿತ್ತು.॥24॥

ಮೂಲಮ್ - 25

ದಂಷ್ಟ್ರಿಭಿರ್ಬಹುಭಿಃ ಶೂರೈಃ ಶೂಲಪಟ್ಟಿಶಪಾಣಿಭಿಃ ।
ರಕ್ಷಿತಾಂ ರಾಕ್ಷಸೈರ್ಘೋರೈರ್ಗುಹಾಮಾಶೀವಿಷೈರಿವ ॥

ಅನುವಾದ

ವಿಷ ಸರ್ಪಗಳು ಗುಹೆಯನ್ನು ರಕ್ಷಿಸುವಂತೆ ಶೂಲ, ಪಟ್ಟಿಶಪಾಣಿಗಳಾದ, ಕೋರೆದಾಡೆಗಳುಳ್ಳ, ಶೂರರಾದ, ಘೋರರೂಪಿಗಳಾದ ರಾಕ್ಷಸರು ಆ ಪಟ್ಟಣವನ್ನು ರಕ್ಷಿಸುತ್ತಿದ್ದರು.॥25॥

ಮೂಲಮ್ - 26

ತಸ್ಯಾಶ್ಚ ಮಹತೀಂ ಗುಪ್ತಿಂ ಸಾಗರಂ ಚ ಸಮೀಕ್ಷ್ಯ ಸಃ ।
ರಾವಣಂ ಚ ರಿಪುಂ ಘೋರಂ ಚಿಂತಯಾಮಾಸ ವಾನರಃ ॥

ಅನುವಾದ

ಅಂತಹ ಸುಭದ್ರವಾದ ರಕ್ಷಣೆಯನ್ನು, ಪಟ್ಟಣದ ಸುತ್ತಲೂ ಇದ್ದ ಸಮುದ್ರವನ್ನು ವೀಕ್ಷಿಸುತ್ತಾ ಕಪಿವರನು ರಾವಣನು ಓರ್ವ ಭಯಂಕರ ಶತ್ರುವೆಂದು ಗಮನಿಸಿ ಹೀಗೆ ಆಲೋಚಿಸತೊಡಗಿದನು.॥26॥

ಮೂಲಮ್ - 27

ಆಗತ್ಯಾಪೀಹ ಹರಯೋ ಭವಿಷ್ಯಂತಿ ನಿರರ್ಥಕಾಃ ।
ನ ಹಿ ಯುದ್ಧೇನ ವೈ ಲಂಕಾ ಶಕ್ಯಾ ಜೇತುಂ ಸುರೈರಪಿ ॥

ಅನುವಾದ

‘‘ಕಪಿವೀರರು ಕಷ್ಟಪಟ್ಟುಕೊಂಡು ಇಲ್ಲಿಗೆ ಬಂದರೂ ಪ್ರಯೋಜನವಾಗಲಾರದು. ಏಕೆಂದರೆ, ಯುದ್ಧಮಾಡಿ ಲಂಕೆಯನ್ನು ಗೆಲ್ಲುವುದು ದೇವತೆಗಳಿಗೂ ಸಾಧ್ಯವಾಗಲಾರದು.॥27॥

ಮೂಲಮ್ - 28

ಇಮಾಂ ತು ವಿಷಮಾಂ ದುರ್ಗಾಂ ಲಂಕಾಂ ರಾವಣಪಾಲಿತಾಮ್ ।
ಪ್ರಾಪ್ಯಾಪಿ ಸ ಮಹಾಬಾಹುಃ ಕಿಂ ಕರಿಷ್ಯತಿ ರಾಘವಃ ॥

ಅನುವಾದ

ಈ ನಗರಿಯು ಸಮತಟ್ಟಾದ ಸ್ಥಾನದಲ್ಲಿದೆ. ಅತ್ಯಂತ ದುರ್ಗಮವಾಗಿದೆ. ಮಹಾವೀರನಾದ ರಾವಣನೇ ಇದನ್ನು ರಕ್ಷಿಸುತ್ತಿದ್ದಾನೆ. ಇಂತಹ ಅಭೇದ್ಯವಾದ, ಅತ್ಯಂತ ದುರ್ಗಮವಾದ ಸ್ಥಳಕ್ಕೆ ಬಂದರೂ ಮಹಾಬಾಹುವಾದ ಶ್ರೀರಾಮನೂ ಸಹ ಏನು ಮಾಡಬಲ್ಲನು?॥28॥

ಮೂಲಮ್ - 29

ಅವಕಾಶೋ ನ ಸಾನ್ತ್ವಸ್ಯ ರಾಕ್ಷಸೇಷ್ವಭಿಗಮ್ಯತೇ ।
ನ ದಾನಸ್ಯ ನ ಭೇದಸ್ಯ ನೈವ ಯುದ್ಧಸ್ಯ ದೃಶ್ಯತೇ ॥

ಅನುವಾದ

ಈ ರಾಕ್ಷಸರನ್ನು ಜಯಿಸುವ ವಿಷಯದಲ್ಲಿ ಇವರು ಆಸುರೀ ಪ್ರಕೃತಿಯ ಕಾರಣ ಸಾಮೋಪಾಯನಡೆಯದು. ಇವರು ಅತುಲ ಸಂಪತ್ತನ್ನು ಪಡೆದವರಾದ ಕಾರಣ ದಾನೋಪಾಯವು ಸಾಗದು. ಬಲ ದರ್ಪಿತರಾದ ಇವರೊಡನೆ ಭೇದೋಪಾಯಕ್ಕೂ ಅವಕಾಶವಿಲ್ಲ. ಪರಾಕ್ರಮಶಾಲಿಗಳಾದ ಇವರೊಡನೆ ಯುದ್ಧಮಾಡಿ ಗೆಲ್ಲು ವುದಂತೂ ಸಾಧ್ಯವಾಗದ ವಿಷಯ (ಹಾಗಿರುವಾಗ ಚತುರೋಪಾಯಗಳು ಇವರಲ್ಲಿ ನಿರರ್ಥಕವೇ.)॥29॥

ಮೂಲಮ್ - 30

ಚತುರ್ಣಾಮೇವ ಹಿ ಗತಿರ್ವಾನರಾಣಾಂ ಮಹಾತ್ಮನಾಮ್ ।
ವಾಲಿಪುತ್ರಸ್ಯ ನೀಲಸ್ಯ ಮಮ ರಾಜ್ಞಶ್ಚ ಧೀಮತಃ ॥

ಅನುವಾದ

ವಾಲಿ ಪುತ್ರನಾದ ಅಂಗದ, ನೀಲ, ನಮ್ಮ ರಾಜನಾದ ಧೀಮಂತ ಸುಗ್ರೀವ ಮತ್ತು ನಾನು, ಹೀಗೆ ಬಲಿಷ್ಠರಾದ ವೇಗವುಳ್ಳ ನಾಲ್ವರಿಗೆ ಮಾತ್ರ ಇಲ್ಲಿಗೆ ಬರಲು ಸಾಧ್ಯವಾದೀತು. ಆದುದರಿಂದ ಸೈನ್ಯವನ್ನು ಇಲ್ಲಿಗೆ ಕರತರುವ ಸಾಧ್ಯತೆಯೇ ಇಲ್ಲ.॥30॥

ಮೂಲಮ್ - 31

ಯಾವಜ್ಜಾನಾಮಿ ವೈದೇಹೀಂ ಯದಿ ಜೀವತಿ ವಾ ನ ವಾ ।
ತತ್ರೈವ ಚಿಂತಯಿಷ್ಯಾಮಿ ದೃಷ್ಟ್ವಾ ತಾಂ ಜನಕಾತ್ಮಜಾಮ್ ॥

ಅನುವಾದ

ಹೇಗಾದರೂ ಮಾಡಿ ವೈದೇಹಿಯು ಜೀವಿಸಿರುವಳೇ? ಇಲ್ಲವೇ? ಎಂಬುದನ್ನು ಮೊದಲಿಗೆ ತಿಳಿಯಬೇಕು. ಸೀತಾದೇವಿಯನ್ನು ಕಂಡ ಬಳಿಕ ಮುಂದೇನು ಮಾಡಬೇಕೆಂಬುದನ್ನು ಆಲೋಚಿಸುವುದು ಯುಕ್ತವು.’’॥31॥

ಮೂಲಮ್ - 32

ತತಃ ಸ ಚಿಂತಯಾಮಾಸ ಮುಹೂರ್ತಂ ಕಪಿಕುಂಜರಃ ।
ಗಿರಿಶೃಂಗೇ ಸ್ಥಿತಸ್ತಸ್ಮಿನ್ ರಾಮಸ್ಯಾಭ್ಯುದಯೇ ರತಃ ॥

ಅನುವಾದ

ಬಳಿಕ ಶ್ರೀರಾಮನ ಅಭ್ಯುದಯ ಕಾರ್ಯಸಾಧನೆಯಲ್ಲಿ ನಿರತನಾದ ಕಪಿಶ್ರೇಷ್ಠನಾದ ಹನುಮಂತನು ಆ ಪರ್ವತ ಶಿಖರದಲ್ಲಿ ನಿಂತು ಮುಹೂರ್ತಕಾಲದವರೆಗೆ ನಾನಾ ರೀತಿಯಿಂದ ಯೋಚಿಸುತ್ತಲೇ ಇದ್ದನು.॥32॥

ಮೂಲಮ್ - 33

ಅನೇನ ರೂಪೇಣ ಮಯಾ ನ ಶಕ್ಯಾ ರಕ್ಷಸಾಂ ಪುರೀ ।
ಪ್ರವೇಷ್ಟುಂ ರಾಕ್ಷಸೈರ್ಗುಪ್ತಾ ಕ್ರೂರೈರ್ಬಲಸಮನ್ವಿತೈಃ ॥

ಅನುವಾದ

‘‘ಮಹಾಕ್ರೂರಿಗಳಾದ, ಬಲಿಷ್ಠರಾದ ರಾಕ್ಷಸರಿಂದ ರಕ್ಷಿತವಾದ ಈ ರಾಕ್ಷಸನಗರಿಯನ್ನು ಈಗ ನಾನು ತಾಳಿರುವ ಆಕಾರದಿಂದಲೇ ಪ್ರವೇಶಿಸುವುದು ಅಸಾಧ್ಯವು.॥33॥

(ಶ್ಲೋಕ - 34

ಮೂಲಮ್

ಉಗ್ರೌಜಸೋ ಮಹಾವೀರ್ಯಾ ಬಲವಂತಶ್ಚ ರಾಕ್ಷಸಾಃ ।
ವಂಚನೀಯಾ ಮಯಾ ಸರ್ವೇ ಜಾನಕೀಂ ಪರಿಮಾರ್ಗತಾ ॥

ಅನುವಾದ

ಜಾನಕಿಯನ್ನು ಹುಡುಕಲು ಹೊರಟಿರುವ ನಾನು ಭಯಂಕರವಾದ ತೇಜಸ್ಸಿನಿಂದ ಕೂಡಿರುವ, ಮಹಾಪರಾಕ್ರಮಿಗಳಾದ, ಬಲಿಷ್ಠರಾದ ರಾಕ್ಷಸರ ಕಣ್ಣುತಪ್ಪಿಸಿ ಮುಂದರಿಯಬೇಕು.॥34॥

ಮೂಲಮ್ - 35

ಲಕ್ಷ್ಯಾಲಕ್ಷ್ಯೇಣ ರೂಪೇಣ ರಾತ್ರೌ ಲಂಕಾಪುರೀ ಮಯಾ ।
ಪ್ರವೇಷ್ಟುಂ ಪ್ರಾಪ್ತಕಾಲೋ ಮೇ ಕೃತ್ಯಂ ಸಾಧಯಿತುಂ ಮಹತ್ ॥

ಅನುವಾದ

ಲಕ್ಷ್ಯ (ಕಂಡು ಬರುವ) ರೂಪದಿಂದ ಹೋದರೆ ನನ್ನನ್ನು ರಾಕ್ಷಸರು ಮುತ್ತುವರು. ಅಲಕ್ಷ್ಯ (ಕಾಣದಿರುವ) ರೂಪದಿಂದ ಸೀತಾನ್ವೇಷಣೆ ಮಾಡಲು ಸಾಧ್ಯವಾಗದು. ಅದರಿಂದ ಕಂಡು-ಕಾಣದಂತಹ ಸೂಕ್ಷ್ಮರೂಪವನ್ನು ಧರಿಸಿದರೆ ರಾತ್ರಿಯಲ್ಲಿ ಲಂಕಾಪಟ್ಟಣವನ್ನು ಪ್ರವೇಶಿಸಲು ಸಾಧ್ಯವಾಗಬಹುದು. ಸೀತಾನ್ವೇಷಣೆಯ ಮಹಾಕಾರ್ಯವನ್ನು ಸಾಧಿಸಲು ಮುಂದಿರುವ ರಾತ್ರಿಕಾಲವೇ ಪ್ರಶಸ್ತವಾಗಿದೆ.’’॥35॥

ಮೂಲಮ್ - 36

ತಾಂ ಪುರೀಂ ತಾದೃಶೀಂ ದೃಷ್ಟ್ವಾ ದುರಾಧರ್ಷಾಂ ಸುರಾಸುರೈಃ ।
ಹನೂಮಾಂಶ್ಚಿಂತಯಾಮಾಸ ವಿನಿಃಶ್ಚಿತ್ಯ ಮುಹುರ್ಮುಹುಃ ॥

ಅನುವಾದ

ಸುರಾಸುರರಿಂದಲೂ ಜಯಿಸಲು ಅಸಾಧ್ಯವಾಗಿದ್ದ, ಅತ್ಯಂತ ದುರ್ಭೇದ್ಯವಾದ ಲಂಕೆಯನ್ನು ನೋಡಿ ಹನುಮಂತನು ಬಾರಿ-ಬಾರಿಗೂ ನಿಟ್ಟುಸಿರುಬಿಡುತ್ತಾ ಹೀಗೆ ಆಲೋಚಿಸತೊಡಗಿದನು.॥36॥’’

ಮೂಲಮ್ - 37

ಕೇನೋಪಾಯೇನ ಪಶ್ಯೇಯಂ ಮೈಥಿಲೀಂ ಜನಕಾತ್ಮಜಾಮ್ ।
ಅದೃಷ್ಟೋ ರಾಕ್ಷಸೇಂದ್ರೇಣ ರಾವಣೇನ ದುರಾತ್ಮನಾ ॥

ಅನುವಾದ

ದುರಾತ್ಮನಾದ ರಾಕ್ಷಸೇಂದ್ರನಾದ ರಾವಣನ ಕಣ್ಣಿಗೆ ಬೀಳದಂತೆ ಜನಕನ ಮಗಳಾದ ಜಾನಕಿಯನ್ನು ನಾನು ಯಾವ ಉಪಾಯದಿಂದ ಹುಡುಕಲಿ?॥37॥

ಮೂಲಮ್ - 38

ನ ವಿನಶ್ಯೇತ್ ಕಥಂ ಕಾರ್ಯಂ ರಾಮಸ್ಯ ವಿದಿತಾತ್ಮನಃ ।
ಏಕಾಮೇಕಶ್ಚ ಪಶ್ಯೇಯಂ ರಹಿತೇ ಜನಕಾತ್ಮಜಾಮ್ ॥

ಅನುವಾದ

ಆತ್ಮವಿದನಾದ ಶ್ರೀರಾಮನ ಕಾರ್ಯವು ಕೆಟ್ಟು ಹೋಗದ ರೀತಿಯಲ್ಲಿ ನಾನು ಹೇಗೆ ನಡೆದುಕೊಳ್ಳಲಿ? ನಾನೊಬ್ಬನೇ ಏಕಾಂತದಲ್ಲಿ ಜನಕನ ಮಗಳಾದ ಸೀತಾದೇವಿಯೊಬ್ಬಳನ್ನೇ ಹೇಗೆ ಸಂಧಿಸಲಿ?॥38॥

ಮೂಲಮ್ - 39

ಭೂತಾಶ್ಚಾರ್ಥಾ ವಿಪದ್ಯಂತೇ ದೇಶಕಾಲವಿರೋಧಿತಾಃ ।
ವಿಕ್ಲವಂ ದೂತಮಾಸಾದ್ಯ ತಮಃ ಸೂರ್ಯೋದಯೇ ಯಥಾ ॥

ಅನುವಾದ

ಸೂರ್ಯೋದಯವಾದೊಡನೆಯೇ ವಿನಾಶಹೊಂದುವ ಕತ್ತಲೆಯಂತೆ, ವಿವೇಚನಾ ರಹಿತನಾದ ದೂತನಿಗೊಪ್ಪಿಸಿದ ಕಾರ್ಯವು ಸಿದ್ಧಿಸುವುದರಲ್ಲಿದ್ದರೂ, ದೇಶ-ಕಾಲಕ್ಕೆ ವಿಪರೀತವಾಗಿ ವ್ಯವಹರಿಸುವುದರಿಂದ ಕೆಟ್ಟುಹೋಗುತ್ತದೆ.॥39॥

(ಶ್ಲೋಕ - 40

ಮೂಲಮ್

ಅರ್ಥಾನರ್ಥಾಂತರೇ ಬುದ್ಧಿರ್ನಿಶ್ಚಿತಾಪಿ ನ ಶೋಭತೇ ।
ಘಾತಯಂತಿ ಹಿ ಕಾರ್ಯಾಣಿ ದೂತಾಃ ಪಂಡಿತಮಾನಿನಃ ॥

ಅನುವಾದ

ಕಾರ್ಯಾಕಾರ್ಯಗಳ ವಿಷಯದಲ್ಲಿ ರಾಜನು ಮಂತ್ರಿಗಳೊಡನೆ ಸಮಾಲೋಚಿಸಿ ನಿರ್ಣಯಿಸಿದ ಬುದ್ಧಿಯೂ ಅವಿವೇಕಿಯಾದ ದೂತನಲ್ಲಿ ಶೋಭಿಸುವುದಿಲ್ಲ (ಪರಿಣಾಮಕಾರಿಯಾಗುವುದಿಲ್ಲ.) ತಾನೇ ಮಹಾಪಂಡಿತನೆಂದು ಭಾವಿಸಿ ಸ್ವೆಚ್ಛೆಯಿಂದ ಕಾರ್ಯ ಮಾಡುವ ದೂತನು ಒಡೆಯನ ಕಾರ್ಯವನ್ನು ಹಾಳು ಮಾಡುತ್ತಾನೆ.॥40॥

ಮೂಲಮ್ - 41

ನ ವಿನಶ್ಯೇತ್ ಕಥಂ ಕಾರ್ಯಂ ವೈಕ್ಲವ್ಯಂ ನ ಕಥಂ ಭವೇತ್ ।
ಲಂಘನಂ ಚ ಸಮುದ್ರಸ್ಯ ಕಥಂ ನು ನ ಭವೇದ್ವೃಥಾ ॥

ಅನುವಾದ

ಶ್ರೀರಾಮನ ಕಾರ್ಯವು ಹಾಳಾಗದ ರೀತಿಯಿಂದ ವರ್ತಿಸಬೇಕು. ಇಂತಹ ಸಂದರ್ಭದಲ್ಲಿ ನನಗೆ ಭ್ರಮೆ ಉಂಟಾಗಬಾರದು. ನಾನು ಸಮುದ್ರವನ್ನು ದಾಟಿ ಬಂದುದು ವ್ಯರ್ಥವಾಗಬಾರದು.॥41॥

ಮೂಲಮ್ - 42

ಮಯಿ ದೃಷ್ಟೇ ತು ರಕ್ಷೋಭೀ ರಾಮಸ್ಯ ವಿದಿತಾತ್ಮನಃ ।
ಭವೇದ್ವ್ಯರ್ಥಮಿದಂ ಕಾರ್ಯಂ ರಾವಣಾನರ್ಥಮಿಚ್ಛತಃ ॥

ಮೂಲಮ್ - 43

ನ ಹಿ ಶಕ್ಯಂ ಕ್ವಚಿತ್ ಸ್ಥಾತುಮವಿಜ್ಞಾತೇನ ರಾಕ್ಷಸೈಃ ।
ಅಪಿ ರಾಕ್ಷಸರೂಪೇಣ ಕಿಮುತಾನ್ಯೇನ ಕೇನಚಿತ್ ॥

ಅನುವಾದ

ನನ್ನನ್ನೇನಾದರೂ ರಾಕ್ಷಸರು ನೋಡಿಬಿಟ್ಟರೆ ರಾವಣನ ವಿನಾಶವನ್ನೆ ಬಯಸಿರುವ ಪ್ರಜ್ಞಾಶಾಲಿಯಾದ ಶ್ರೀರಾಮನ ಸೀತಾನ್ವೇಷಣೆಯ ಕಾರ್ಯವು ವ್ಯರ್ಥವಾದೀತು. ರಾಕ್ಷಸರಿಗೆ ತಿಳಿಯದಂತೆ ಈ ಲಂಕೆಯಲ್ಲಿ ಎಲ್ಲಿಯೂ ಇರಲು ಸಾಧ್ಯವಿಲ್ಲ. ರಾಕ್ಷಸರ ರೂಪವನ್ನೇ ಧರಿಸಿದರೂ ಇಲ್ಲಿರಲು ಸಾಧ್ಯವಾಗದಿದ್ದಾಗ ಬೇರೆಯ ರೂಪದಿಂದ ನಾನಿಲ್ಲಿ ಇರಲು ಹೇಗೆ ಸಾಧ್ಯವಾದೀತು?॥42-43॥

ಮೂಲಮ್ - 44

ವಾಯುರಪ್ಯತ್ರ ನಾಜ್ಞಾತಶ್ಚರೇದಿತಿ ಮತಿರ್ಮಮ ।
ನ ಹ್ಯಸ್ತ್ಯವಿದಿತಂ ಕಿಂಚಿದ್ರಾಕ್ಷಸಾನಾಂ ಬಲೀಯಸಾಮ್ ॥

ಮೂಲಮ್ - 45

ಇಹಾಹಂ ಯದಿ ತಿಷ್ಠಾಮಿ ಸ್ವೇನ ರೂಪೇಣ ಸಂವೃತಃ ।
ವಿನಾಶಮುಪಯಾಸ್ಯಾಮಿ ಭರ್ತುರರ್ಥಶ್ಚ ಹೀಯತೇ ॥

ಅನುವಾದ

ಇಲ್ಲಿ ವಾಯುವೂ ಕೂಡ ರಾಕ್ಷಸರಿಗೆ ತಿಳಿಯದಂತೆ ಚಲಿಸಲು ಸಾಧ್ಯವಿಲ್ಲ. ಈ ಲಂಕಾಪಟ್ಟಣದಲ್ಲಿ ಭಯಂಕರರಾದ ರಾಕ್ಷಸರಿಗೆ ತಿಳಿಯದೇ ಇರುವ ಯಾವ ಸ್ಥಾನವೂ ಇಲ್ಲ. ಎಂದು ನಾನು ತಿಳಿಯುತ್ತೇನೆ. ನಾನು ಈ ನನ್ನ ರೂಪದಿಂದಲೇ ಇದ್ದರೆ ಖಂಡಿತವಾಗಿ ವಿನಾಶಹೊಂದಬಹುದು. ನನಗಿಂತಲೂ ಹೆಚ್ಚಾದ ಸ್ವಾಮಿಕಾರ್ಯವೂ ಹಾಳಾಗಬಹುದು.॥44-45॥

ಮೂಲಮ್ - 46

ತದಹಂ ಸ್ವೇನ ರೂಪೇಣ ರಜನ್ಯಾಂ ಹ್ರಸ್ವತಾಂ ಗತಃ ।
ಲಂಕಾಮಭಿಗಮಿಷ್ಯಾಮಿ ರಾಘವಸ್ಯಾರ್ಥಸಿದ್ಧಯೇ ॥

ಅನುವಾದ

ಆದುದರಿಂದ ಈ ರಾತ್ರಿಯಲ್ಲಿ ಚಿಕ್ಕದಾದ ಆಕಾರವನ್ನು ತಳೆದು ಈ ಕಪಿರೂಪದಿಂದಲೇ ಶ್ರೀರಾಮನ ಕಾರ್ಯಸಿದ್ಧಿಗಾಗಿ ಲಂಕೆಯನ್ನು ಪ್ರವೇಶಿಸುತ್ತೇನೆ.॥46॥

ಮೂಲಮ್ - 47

ರಾವಣಸ್ಯ ಪುರೀಂ ರಾತ್ರೌ ಪ್ರವಿಶ್ಯ ಸುದುರಾಸದಾಮ್ ।
ವಿಚಿನ್ವನ್ ಭವನಂ ಸರ್ವಂ ದ್ರಕ್ಷ್ಯಾಮಿ ಜನಕಾತ್ಮಜಾಮ್ ॥

ಅನುವಾದ

ಯಾರಿಂದಲೂ ಪ್ರವೇಶಿಸಲು ಅಶಕ್ಯವಾದ ರಾವಣನ ಈ ಪಟ್ಟಣವನ್ನು ನಾನು ರಾತ್ರಿಯಲ್ಲಿ ಪ್ರವೇಶಿಸಿ, ಇಲ್ಲಿರುವ ಎಲ್ಲ ಭವನಗಳನ್ನು ಒಳಹೊಕ್ಕು ಸೀತಾದೇವಿಯನ್ನು ಹುಡುಕುತ್ತೇನೆ.’’॥47॥

ಮೂಲಮ್ - 48

ಇತಿ ಸಂಚಿಂತ್ಯ ಹನುಮಾನ್ ಸೂರ್ಯಸ್ಯಾಸ್ತಮಯಂ ಕಪಿಃ ।
ಆಚಕಾಂಕ್ಷೇ ತದಾ ವೀರೋ ವೈದೇಹ್ಯಾ ದರ್ಶನೋತ್ಸುಕಃ ॥

ಮೂಲಮ್ - 49

ಸೂರ್ಯೇ ಚಾಸ್ತಂ ಗತೇ ರಾತ್ರೌ ದೇಹಂ ಸಂಕ್ಷಿಪ್ಯ ಮಾರುತಿಃ ।
ವೃಷದಂಶಕಮಾತ್ರಃ ಸನ್ ಬಭೂವಾದ್ಭುತದರ್ಶನಃ ॥

ಅನುವಾದ

ವೀರನಾದ, ಕಪಿಶ್ರೇಷ್ಠನಾದ ಹನುಮಂತನು ಹೀಗೆ ನಿಶ್ಚಯಿಸಿ, ವೈದೇಹಿಯನ್ನು ನೋಡಬೇಕೆನ್ನುವ ಉತ್ಸುಕತೆಯಿಂದ ಸೂರ್ಯನು ಅಸ್ತನಾಗುವುದನ್ನೇ ನಿರೀಕ್ಷಿಸುತ್ತಿದ್ದನು. ಸೂರ್ಯನು ಅಸ್ತಮಿಸುತ್ತಲೇ ಮಾರುತಿಯು ಆ ರಾತ್ರಿಯಲ್ಲಿ ತನ್ನ ದೇಹವನ್ನು ಸಂಕ್ಷೇಪಿಸಿಕೊಂಡು ಬೆಕ್ಕಿನಷ್ಟು ಸಣ್ಣಗಾತ್ರನಾದನು. ಅಷ್ಟು ಚಿಕ್ಕವನಾಗಿದ್ದರೂ ಅವನು ಪರಮಾದ್ಭುತವಾಗಿ ಕಾಣುತ್ತಿದ್ದನು.॥48-49॥

ಮೂಲಮ್ - 50

ಪ್ರದೋಷಕಾಲೇ ಹನೂಮಾಂಸ್ತೂರ್ಣಮುತ್ಪ್ಲುತ್ಯ ವೀರ್ಯವಾನ್ ।
ಪ್ರವಿವೇಶ ಪುರೀಂ ರಮ್ಯಾಂ ಸುವಿಭಕ್ತಮಹಾಪಥಾಮ್ ॥

ಅನುವಾದ

ಪ್ರದೋಷಕಾಲವಾಗುತ್ತಲೇ ವೀರ್ಯವಂತನಾದ ಹನುಮಂತನು ಶೀಘ್ರವಾಗಿ ಮೇಲಕ್ಕೆ ನೆಗೆದು, ಸರಿಯಾಗಿ ವಿಂಗಡಿಸಲ್ಪಟ್ಟ ರಾಜಮಾರ್ಗಗಳುಳ್ಳ ಲಂಕಾಪಟ್ಟಣವನ್ನು ಪ್ರವೇಶಿಸಿದನು.॥50॥

ಮೂಲಮ್ - 51

ಪ್ರಾಸಾದಮಾಲಾವಿತತಾಂ ಸ್ತಂಭೈಃ ಕಾಂಚನರಾಜತೈಃ ।
ಶಾತಕುಂಭಮಯೈರ್ಜಾಲೈರ್ಗಂಧರ್ವನಗರೋಪಮಾಮ್ ॥

ಅನುವಾದ

ಆ ಲಂಕಾಪಟ್ಟಣದಲ್ಲಿ ಪ್ರಾಸಾದಗಳು ಸಾಲು-ಸಾಲಾಗಿ ಶೋಭಿಸುತ್ತಿದ್ದವು. ಆ ಪ್ರಾಸಾದಗಳು ಚಿನ್ನದ ಮತ್ತು ಬಿಳಿಯ ಕಂಬಗಳಿಂದಲೂ, ಸುವರ್ಣಮಯವಾದ ಜಾಲರಿಗಳಿಂದಲೂ ಅಲಂಕೃತವಾಗಿದ್ದು, ಗಂಧರ್ವ ನಗರದಂತೆ ಅದ್ಭುತವಾಗಿತ್ತು.॥51॥

ಮೂಲಮ್ - 52

ಸಪ್ತಭೌಮಾಷ್ಟಭೌಮೈಶ್ಚ ಸ ದದರ್ಶ ಮಹಾಪುರೀಂ ।
ತಲೈಃ ಸ್ಫಟಿಕಸಂಕೀರ್ಣೈಃ ಕಾರ್ತಸ್ವರವಿಭೂಷಿತೈಃ ॥

ಅನುವಾದ

ಆ ನಗರದ ಭವನಗಳು ಸುವರ್ಣಭೂಷಿತವಾಗಿದ್ದು. ಏಳೆಂಟು ಅಂತಸ್ತುಗಳಿಂದ ಶೋಭಿಸುತ್ತಿದ್ದುವು. ಆ ಮಹಾ ಸೌಧಗಳ ಹೊರಾಂಗಣಗಳು ಸ್ಫಟಿಕಮಣಿಗಳಿಂದಲೂ, ಚಿನ್ನದಿಂದಲೂ ವ್ಯಾಪ್ತವಾಗಿದ್ದುವು. ಅಂತಹ ಮಹಾನಗರವನ್ನು ಹನುಮಂತನು ನೋಡಿದನು. ॥52॥

ಮೂಲಮ್ - 53

ವೈಡೂರ್ಯಮಣಿಚಿತ್ರೈಶ್ಚ ಮುಕ್ತಾಜಾಲವಿರಾಜಿತೈಃ ।
ತಲೈಃ ಶುಶುಭಿರೇ ತಾನಿ ಭವನಾನ್ಯತ್ರ ರಕ್ಷಸಾಮ್ ॥

ಅನುವಾದ

ಆ ಲಂಕಾಪುರಿಯಲ್ಲಿ ರಾಕ್ಷಸರ ಭವನಗಳ ಭೂಭಾಗವು ವೈಡೂರ್ಯ ಮಣಿಗಳಿಂದ ಚಿತ್ರಿತವಾಗಿತ್ತು. ಮುತ್ತಿನ ಜಾಲರಿಗಳಿಂದ ವಿಭೂಷಿತವಾಗಿತ್ತು. ॥53॥

ಮೂಲಮ್ - 54

ಕಾಂಚನಾನಿ ವಿಚಿತ್ರಾಣಿ ತೋರಣಾನಿ ಚ ರಕ್ಷಸಾಮ್ ।
ಲಂಕಾಮುದ್ದ್ಯೋತಯಾಮಾಸುಃ ಸರ್ವತಃ ಸಮಲಂಕೃತಾಮ್ ॥

ಅನುವಾದ

ರಾಕ್ಷಸರು ವಾಸಿಸುತ್ತಿದ್ದ ಲಂಕೆಯಲ್ಲಿ ಗೋಪುರಗಳು ಭಂಗಾರದಿಂದ ರಚಿತವಾಗಿದ್ದುವು. ಚಿತ್ರ-ವಿಚಿತ್ರವಾದ ಅಲಂಕೃತವಾದ ಮುಂಬಾಗಿಲುಗಳು ಲಂಕಾಪಟ್ಟಣವನ್ನೇ ಬೆಳಗುತ್ತಿದ್ದುವು. ॥54॥

ಮೂಲಮ್ - 55

ಅಚಿಂತ್ಯಾಮದ್ಭುತಾಕಾರಾಂ ದೃಷ್ಟ್ವಾ ಲಂಕಾಂ ಮಹಾಕಪಿಃ ।
ಆಸೀದ್ವಿಷಣ್ಣೋ ಹೃಷ್ಟಶ್ಚ ವೈದೇಹ್ಯಾ ದರ್ಶನೋತ್ಸುಕಃ ॥

ಅನುವಾದ

ಊಹಿಸಲು ಅಸಾಧ್ಯವಾದ, ಅದ್ಭುತಾಕಾರವಾಗಿದ್ದ ಲಂಕೆಯನ್ನು ನೋಡಿ ಹನುಮಂತನು ವಿಷಾದಕ್ಕೊಳಗಾದನು. ಆದರೆ ವೈದೇಹಿ ದರ್ಶನದ ಕೂತಹಲಿಯಾದ ಅವನು ಹೆಚ್ಚಾಗಿ ಹರ್ಷಿತನಾದನು. ॥55॥

ಮೂಲಮ್ - 56

ಸ ಪಾಂಡರೋದ್ವಿದ್ಧ ವಿಮಾನ ಮಾಲಿನೀಂ
ಮಹಾರ್ಹಜಾಂಬೂನದಜಾಲತೋರಣಾಂ ।
ಯಶಸ್ವಿನೀಂ ರಾವಣಬಾಹುಪಾಲಿತಾಂ
ಕ್ಷಪಾಚರೈರ್ಭೀಮಬಲೈಃ ಸಮಾವೃತಾಮ್ ॥

ಅನುವಾದ

ರಾವಣೇಶ್ವರನ ಭುಜಬಲದಿಂದ ಪಾಲಿಸಲ್ಪಡುತ್ತಿದ್ದ ಆ ಲಂಕೆಯು ಏಳೆಂಟು ಅಂತಸ್ತುಗಳಿಂದ ಕೂಡಿದ್ದು, ಬಿಳುಪಾದ ಭವನಗಳ ಸಾಲುಗಳಿಂದ ಯುಕ್ತವಾಗಿತ್ತು. ಸುವರ್ಣಮಯ ತೋರಣಗಳಿಂದಲೂ, ಜಾಲರಿಗಳಿಂದಲೂ ಸಮಲಂಕೃತವಾಗಿತ್ತು. ಭೀಮ ಬಲರಾದ ರಾಕ್ಷಸರಿಂದ ಸಮಾವೃತವಾಗಿದ್ದ ಆ ಯಶೋವರ್ಧಕವಾದ ಲಂಕೆಯನ್ನು ಹನುಮಂತನು ನೋಡಿದನು.॥56॥

ಮೂಲಮ್ - 57

ಚಂದ್ರೋಽಪಿ ಸಾಚಿವ್ಯಮಿವಾಸ್ಯ ಕುರ್ವನ್
ತಾರಾಗಣೈರ್ಮಧ್ಯಗತೋ ವಿರಾಜನ್ ।
ಜ್ಯೋತ್ಸ್ನಾವಿತಾನೇನ ವಿತತ್ಯ ಲೋಕಮ್
ಉತ್ತಿಷ್ಠತೇ ನೈಕಸಹಸ್ರರಶ್ಮಿಃ ॥

ಅನುವಾದ

ನಕ್ಷತ್ರಗಳ ಸಮೂಹಗಳೊಡನೆ ಹುಟ್ಟಿ ಅವುಗಳ ಮಧ್ಯದಲ್ಲಿ ವಿರಾಜಿಸುತ್ತಿದ್ದ, ಅನೇಕ ಸಹಸ್ರರಶ್ಮಿಗಳಿಂದ ಯುಕ್ತನಾದ ಚಂದ್ರನು ಕೂಡ ಹನುಮಂತನಿಗೆ ಸಹಾಯ ಮಾಡುವ ಇಚ್ಛೆಯಿಂದ ಎಲ್ಲೆಡೆಗಳಲ್ಲಿಯೂ ಬೆಳದಿಂಗಳನ್ನು ಹೊರ ಚೆಲ್ಲುತ್ತಾ ಉದಯಿಸಿದನು. ॥57॥

ಮೂಲಮ್ - 58

ಶಂಖಪ್ರಭಂ ಕ್ಷೀರಮೃಣಾಲವರ್ಣಮ್
ಉದ್ಗಚ್ಛಮಾನಂ ವ್ಯವಭಾಸಮಾನಮ್ ।
ದದರ್ಶ ಚಂದ್ರಂ ಸ ಕಪಿಪ್ರವೀರಃ
ಪೋಪ್ಲೂಯಮಾನಂ ಸರಸೀವ ಹಂಸಮ್ ॥

ಅನುವಾದ

ಆಗ ತಾನೇ ಉದಯಿಸಿದ್ದ ಚಂದ್ರನು ಶಂಖದ ಪ್ರಭೆಯಂತೆ ಪ್ರಭಾಯುಕ್ತನಾಗಿದ್ದು, ಹಾಲಿನಂತೆ ಬೆಳ್ಳಗಿದ್ದು, ತಾವರೆದಂಟಿನ ಬಣ್ಣದಿಂದ ಪ್ರಕಾಶಿಸುತ್ತಿದ್ದನು. ಸರೋವರದಲ್ಲಿ ಹಂಸಪಕ್ಷಿಯು ತೇಲಿಕೊಂಡು ಹೋಗುವಂತೆ, ನಿರ್ಮಲವಾದ ಆಕಾಶದಲ್ಲಿ ತೇಲಿಕೊಂಡು ಹೋಗುತ್ತಿದ್ದನು. ಅಂತಹ ನಯನ ಮನೋಹರನಾದ ಚಂದ್ರನನ್ನು ಹನುಮಂತನು ನೋಡಿದನು. ॥58॥

ಮೂಲಮ್ (ಸಮಾಪ್ತಿಃ)

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ದ್ವಿತೀಯಃ ಸರ್ಗಃ ॥ 2 ॥

ಅನುವಾದ (ಸಮಾಪ್ತಿಃ)

ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಎರಡನೇ ಸರ್ಗವು ಮುಗಿಯಿತು.