वाचनम्
ಭಾಗಸೂಚನಾ
ಹನುಮಂತನು ಸಮುದ್ರವನ್ನು ದಾಟಿದ್ದು, ಮಾರ್ಗಮಧ್ಯದಲ್ಲಿ ಮೈನಾಕನಿಂದ ಸ್ವಾಗತ, ಸುರಸೆಯ ಪರಾಜಯ, ಸಿಂಹಿಕೆಯ ವಧೆ, ಲಂಕೆಯ ಸೌಂದರ್ಯ ವೀಕ್ಷಣೆ —
ಮೂಲಮ್ - 1
ತತೋ ರಾವಣನೀತಾಯಾಃ ಸೀತಾಯಾಃ ಶತ್ರುಕರ್ಶನಃ ।
ಇಯೇಷ ಪದಮನ್ವೇಷ್ಟುಂ ಚಾರಣಾಚರಿತೇ ಪಥಿ ॥
ಅನುವಾದ
ಶತ್ರುಸಂಹಾರಕನಾದ ಹನುಮಂತನು (ಜಾಂಬವಂತರ ಪ್ರೇರಣೆಯಿಂದ) ಅದ್ಭುತವಾದ ಶಕ್ತಿಯನ್ನು ಸ್ಮರಿಸಿಕೊಂಡು ರಾವಣನಿಂದ ಅಪಹೃತಳಾದ ಸೀತೆಯ ಜಾಡನ್ನು ಹುಡುಕುವ ಸಲುವಾಗಿ, ಚಾರಣಾದಿ ದೇವತೆಗಳು ಸಂಚರಿಸುವ ಆಕಾಶ ಮಾರ್ಗದಿಂದ ಪ್ರಯಾಣ ಮಾಡಲು ಬಯಸಿದನು.॥1॥
ಮೂಲಮ್ - 2
ದುಷ್ಕರಂ ನಿಷ್ಪ್ರತಿದ್ವಂದ್ವಂ ಚಿಕೀರ್ಷನ್ ಕರ್ಮ ವಾನರಃ ।
ಸಮುದಗ್ರಶಿರೋಗ್ರೀವೋ ಗವಾಂ ಪತಿರಿವಾಬಭೌ ॥
ಅನುವಾದ
ಹನುಮಂತನು ಸಾಟಿಯೇ ಇಲ್ಲದ, ಅತ್ಯಂತ ದುಷ್ಕರವಾದ ಕಾರ್ಯವನ್ನು ಮಾಡಲು ನಿರ್ಧರಿಸಿ, ತಲೆ ಮತ್ತು ಕುತ್ತಿಗೆಯನ್ನು ಮೇಲಕ್ಕೆತ್ತಿ ಸೆಟೆದುನಿಂತಿದ್ದ ಅವನು ಗೂಳಿಗಳ ರಾಜನಂತೆ ವಿರಾಜಿಸುತ್ತಿದ್ದನು.॥2॥
ಮೂಲಮ್ - 3
ಅಥ ವೈಡೂರ್ಯವರ್ಣೇಷು ಶಾದ್ವಲೇಷು ಮಹಾಬಲಃ ।
ಧೀರಃ ಸಲಿಲಕಲ್ಪೇಷು ವಿಚಚಾರ ಯಥಾಸುಖಮ್ ॥
ಅನುವಾದ
ಬಳಿಕ ಅಂತಹ ಧೀರನಾದ, ಮಹಾಬಲನಾದ ಹನುಮಂತನು ವೈಡೂರ್ಯದಂತೆ ಶೋಭಿಸುತ್ತಿದ್ದು, ಮೃದುವಾದ, ಸ್ವಚ್ಛವಾದ, ವಿಶಾಲ ಜಲರಾಶಿಯ ವಾಯುಸ್ಪರ್ಶದಿಂದ ಏಳುವ ತರಂಗಗಳಿಂದ ಶೋಭಿಸುತ್ತಿರುವ ಆ ಹಚ್ಚನೆಯ ಹುಲ್ಲುಗಾವಲಿನಲ್ಲಿ, (ಮುಂದಿನ ಕಾರ್ಯವನ್ನು ಯೋಚಿಸುತ್ತ) ಅತ್ತಂದಿತ್ತ ಸಂಚರಿಸಿದನು.॥3॥
ಮೂಲಮ್ - 4
ದ್ವಿಜಾನ್ ವಿತ್ರಾಸಯನ್ ಧೀಮಾನುರಸಾ ಪಾದಪಾನ್ ಹರನ್ ।
ಮೃಗಾಂಶ್ಚ ಸುಬಹೂನ್ನಿಘ್ನನ್ ಪ್ರವೃದ್ಧ ಇವ ಕೇಸರೀ ॥
ಅನುವಾದ
ಪ್ರತಿಭಾಶಾಲಿಯಾದ ಆ ಹನುಮಂತನು ಕೊಬ್ಬಿದ ಸಿಂಹದಂತೆ ವಿಜೃಂಭಿಸಿದನು. ಅವನು ತಿರುಗಾಡುತ್ತಿರುವಾಗ ಅವನ ಉಬ್ಬಿದ ಎದೆಗೆ ಎದುರಾಗಿ ಸಿಕ್ಕಿದ ಅನೇಕ ವೃಕ್ಷಗಳು ಮುರಿದು ಬಿದ್ದುವು. ವೇಗವಾಗಿ ಅವನು ಹೋಗುತ್ತಿರುವಾಗ ಪಕ್ಷಿಗಳು ಭಯಗೊಂಡು ಚದುರಿ ಹಾರಿಹೋಗುತ್ತಿದ್ದವು. ಅನೇಕ ಮೃಗಗಳು ಕಾಲಿನ ತುಳಿತಕ್ಕೆ ಸಿಕ್ಕಿ ಸತ್ತುಹೋದುವು.॥4॥
ಮೂಲಮ್ - 5
ನೀಲಲೋಹಿತಮಾಂಜಿಷ್ಠಪತ್ರವರ್ಣೈಃ ಸಿತಾಸಿತೈಃ ।
ಸ್ವಭಾವವಿಹಿತೈಶ್ಚಿತ್ರೈರ್ಧಾತು ಭಿಃ ಸಮಲಂಕೃತಮ್ ॥
ಅನುವಾದ
ಹನುಮಂತನು ಹೋಗುತ್ತಿದ್ದ ಪರ್ವತವು ಸ್ವಭಾವ ಸಿದ್ಧವಾದ ಕಪ್ಪು, ಕೆಂಪು, ಹಸಿರು, ಎಣ್ಣೆಗೆಂಪು, ಬಿಳಿ ಹಾಗೂ ನೀಲಿ ಬಣ್ಣಗಳ ಧಾತುಗಳಿಂದ ಅಲಂಕೃತವಾಗಿತ್ತು.॥5॥
ಮೂಲಮ್ - 6
ಕಾಮರೂಪಿಭಿರಾವಿಷ್ಟಮಭೀಕ್ಷ್ಣಂ ಸಪರಿಚ್ಛದೈಃ ।
ಯಕ್ಷಕಿನ್ನರಗಂಧರ್ವೈರ್ದೇವಕಲ್ಪೈಶ್ಚ ಪನ್ನಗೈಃ ॥
ಮೂಲಮ್ - 7
ಸ ತಸ್ಯ ಗಿರಿವರ್ಯಸ್ಯ ದಲೇ ನಾಗವರಾಯುತೇ ।
ತಿಷ್ಠನ್ ಕಪಿವರಸ್ತತ್ರ ಹ್ರದೇ ನಾಗ ಇವಾಬಭೌ ॥
ಅನುವಾದ
ಅಲ್ಲಿ ದೇವತೆಗಳಿಗೆ ಸಮಾನರಾದ ಬೇಕುಬೇಕಾದಂತೆ ರೂಪಗಳನ್ನು ಧರಿಸುವ ಸಾಮರ್ಥ್ಯವುಳ್ಳ, ಯಕ್ಷ, ಗಂಧರ್ವ, ಕಿನ್ನರರಿಂದಲೂ, ಪನ್ನಗಗಳಿಂದಲೂ ಹಾಗೂ ಆನೆಗಳಿಂದಲೂ ಕೂಡಿದ್ದ ಆ ಮಹೇಂದ್ರಗಿರಿಯ ತಪ್ಪಲು ಪ್ರದೇಶದಲ್ಲಿ ನಿಂತಿದ್ದ ಹನುಮಂತನು ಜಲರಾಶಿಯ ಮಧ್ಯದಲ್ಲಿರುವ ಒಂದು ಮಹಾಗಜದಂತೆ ಪ್ರಕಾಶಿಸುತ್ತಿದ್ದನು.॥6-7॥
ಮೂಲಮ್ - 8
ಸ ಸೂರ್ಯಾಯ ಮಹೇಂದ್ರಾಯ ಪವನಾಯ ಸ್ವಯಂಭುವೇ ।
ಭೂತೇಭ್ಯಶ್ಚಾಂಜಲಿಂ ಕೃತ್ವಾ ಚಕಾರ ಗಮನೇ ಮತಿಮ್ ॥
ಅನುವಾದ
ಬಳಿಕ ಹನುಮಂತನು ಸೂರ್ಯನಿಗೂ, ಮಹೇಂದ್ರನಿಗೂ, ವಾಯುದೇವರಿಗೂ, ಬ್ರಹ್ಮದೇವರಿಗೂ ಹಾಗೂ ಇತರ ದೇವತೆಗಳಿಗೂ, ಭೂತಗಣಗಳಿಗೂ ಕೈಜೋಡಿಸಿ ನಮಸ್ಕರಿಸಿ ಮುಂದೆ ಹೋಗಲು ನಿಶ್ಚಯಿಸಿದನು.॥8॥
ಮೂಲಮ್ - 9
ಅಂಜಲಿಂ ಪ್ರಾಙ್ಮುಖಃ ಕುರ್ವನ್ ಪವನಾಯಾತ್ಮಯೋನಯೇ ।
ತತೋ ಹಿ ವವೃಧೇ ಗಂತುಂ ದಕ್ಷಿಣೋ ದಕ್ಷಿಣಾಂ ದಿಶಮ್ ॥
ಅನುವಾದ
ಸರ್ವಕಾರ್ಯ ಸಮರ್ಥನಾದ ಮಾರುತಿಯು ಪೂರ್ವಾಭಿಮುಖವಾಗಿ ನಿಂತು ತನ್ನ ಹುಟ್ಟಿಗೆ ಕಾರಣನಾದ ವಾಯುದೇವರಿಗೆ ಪುನಃ ನಮಸ್ಕರಿಸಿದನು. ದಕ್ಷಿಣ ದಿಕ್ಕಿನಲ್ಲಿರುವ ಸಮುದ್ರವನ್ನು ಲಂಘಿಸುವ ಸಲುವಾಗಿ ಎತ್ತರವಾಗಿ ಬೆಳೆಯತೊಡಗಿದನು.॥9॥
ಮೂಲಮ್ - 10
ಪ್ಲವಂಗಪ್ರವರೈರ್ದೃಷ್ಟಃ ಪ್ಲವನೇ ಕೃತನಿಶ್ಚಯಃ ।
ವವೃಧೇ ರಾಮವೃದ್ಧ್ಯರ್ಥಂ ಸಮುದ್ರ ಇವ ಪರ್ವಸು ॥
ಅನುವಾದ
ಹಾರಿಕೊಂಡೇ ಸಮುದ್ರವನ್ನು ದಾಟಬೇಕೆಂದು ದೃಢವಾಗಿ ನಿಶ್ಚಯಿಸಿದ್ದ ಹನುಮಂತನು ಶ್ರೀರಾಮನ ಕಾರ್ಯಸಿದ್ಧಿಗಾಗಿ, ಪರ್ವಕಾಲದಲ್ಲಿ ಸಮುದ್ರವು ಉಕ್ಕೇರುವಂತೆ ಮೈಯುಬ್ಬಿ ಬೆಳೆಯುತ್ತಿರುವುದನ್ನು ಕಪಿನಾಯಕರೆಲ್ಲರೂ ವೀಕ್ಷಿಸಿದರು.॥10॥
ಮೂಲಮ್ - 11
ನಿಷ್ಪ್ರಮಾಣಶರೀರಃಸನ್ ಲಿಲಂಘಯಿಷುರರ್ಣವಮ್ ।
ಬಾಹುಭ್ಯಾಂ ಪೀಡಯಾಮಾಸ ಚರಣಾಭ್ಯಾಂ ಚ ಪರ್ವತಮ್ ॥
ಅನುವಾದ
ಸಾಗರವನ್ನು ಲೀಲಾಜಾಲವಾಗಿ ದಾಟಲು ಮಾರುತಿಯು ಅಪರಿಮಿತವಾಗಿ ಬೆಳೆದು ನಿಂತನು. ಹಾರಲು ಉದ್ಯುಕ್ತನಾದ ಅವನು ಮಹೇಂದ್ರ ಗಿರಿಯನ್ನು ಕೈಗಳಿಂದಲೂ ಕಾಲುಗಳಿಂದಲೂ ಬಲವಾಗಿ ಅದುಮಿದನು.॥11॥
ಮೂಲಮ್ - 12
ಸ ಚಚಾಲಾಚಲಶ್ಚಾಪಿ ಮುಹೂರ್ತಂ ಕಪಿಪೀಡಿತಃ ।
ತರೂಣಾಂ ಪುಷ್ಪಿತಾಗ್ರಾಣಾಂ ಸರ್ವಂ ಪುಷ್ಪಮಶಾತಯತ್ ॥
ಅನುವಾದ
ಕಪೀಶ್ವರನು ಆ ಪರ್ವತವನ್ನು ಅದುಮಿದಾಗ ಸ್ವಲ್ಪ ಹೊತ್ತಿನವರೆಗೆ ಅದು ಅಲುಗಾಡುತ್ತಲೇ ಇತ್ತು. ಮರಗಳ ತುದಿಯಲ್ಲಿ ಅರಳಿನಿಂತ ಪುಷ್ಪಗಳೆಲ್ಲ ಕೆಳಗುದುರಿದವು.॥12॥
ಮೂಲಮ್ - 13
ತೇನ ಪಾದಪಮುಕ್ತೇನ ಪುಷ್ಪೌಘೇಣ ಸುಗಂಧಿನಾ ।
ಸರ್ವತಃ ಸಂವೃತಃ ಶೈಲೋ ಬಭೌ ಪುಷ್ಪಮಯೋ ಯಥಾ ॥
ಅನುವಾದ
ಕೆಳಕ್ಕುದುರಿದ ಸುಗಂಧ ಯುಕ್ತವಾದ ಪುಷ್ಪರಾಶಿಯಿಂದ ಆ ಪರ್ವತವು ತುಂಬಿಹೋಯಿತು. ತತ್ಕಾಲದಲ್ಲಿ ಅದು ಹೂವಿನದೇ ಪರ್ವತವೋ ಎಂಬಂತೆ ಕಾಣುತ್ತಿತ್ತು.॥13॥
ಮೂಲಮ್ - 14
ತೇನ ಚೋತ್ತಮವೀರ್ಯೇಣ ಪೀಡ್ಯಮಾನಃ ಸ ಪರ್ವತಃ ।
ಸಲಿಲಂ ಸಂಪ್ರಸುಸ್ರಾವ ಮದಂ ಮತ್ತ ಇವ ದ್ವಿಪಃ ॥
ಅನುವಾದ
ಮಹಾಪರಾಕ್ರಮಿಯಾದ ಹನುಮಂತನಿಂದ ಅದುಮಲ್ಪಟ್ಟ ಆ ಪರ್ವತವು, ಮದಿಸಿದ ಆನೆಯು ತನ್ನ ಗಂಡಸ್ಥಲದಿಂದ ಮದೋದಕವನ್ನು ಸುರಿಸುವಂತೆ, ಎಲ್ಲ ಕಡೆಗಳಿಂದಲೂ ನೀರನ್ನು ಹೊರಚಿಮ್ಮಿಸಿತು.॥14॥
ಮೂಲಮ್ - 15
ಪೀಡ್ಯಮಾನಸ್ತು ಬಲಿನಾ ಮಹೇಂದ್ರಸ್ತೇನ ಪರ್ವತಃ ।
ರೀತೀರ್ನಿರ್ವರ್ತಯಾಮಾಸ ಕಾಂಚನಾಂ ಜನರಾಜತೀಃ ॥
ಅನುವಾದ
ಮಹಾ ಬಲಿಷ್ಠನಾದ ಮಾರುತಿಯ ಕೈ-ಕಾಲುಗಳಿಂದ ಅದುಮಲ್ಟಟ್ಟ ಮಹೇಂದ್ರಪರ್ವತವು ತನ್ನಲ್ಲಿ ಅಡಗಿದ್ದ ಬಂಗಾರ, ಬೆಳ್ಳಿ, ಕಬ್ಬಿಣ ಮುಂತಾದ ಧಾತುಗಳನ್ನು ಹೊರಹಾಕಿತು.॥15॥
ಮೂಲಮ್ - 16
ಮುಮೋಚ ಚ ಶಿಲಾಃ ಶೈಲೋ ವಿಶಾಲಾಃ ಸುಮನಃಶಿಲಾಃ ।
ಮಧ್ಯಮೇನಾರ್ಚಿಷಾ ಜುಷ್ಟೋ ಧೂಮರಾಜೀರಿವಾನಲಃ ॥
ಅನುವಾದ
ಮಹಾ ಅಗ್ನಿಯ ಸಪ್ತಾರ್ಚಿಗಳಲ್ಲಿ ‘ಸುಲೋಹಿತ’* ಎಂಬುದು ಮಧ್ಯ ಮಾರ್ಚಿಯು ಅದರ ಜ್ವಾಲೆಗಳಿಂದ ಹೊಗೆಯು ಹೊರ ಸೂಸುವಂತೆ ಆಂಜನೇಯನಿಂದ ಅದುಮಲ್ಪಟ್ಟ ಆ ಮಹೇಂದ್ರ ಗಿರಿಯಿಂದ ಮಣಿ ಶಿಲೆಗಳಿಂದ ಯುಕ್ತವಾದ ದೊಡ್ಡ-ದೊಡ್ಡ ಬಂಡೆಗಳು ಸಿಡಿದು ಪುಡಿ-ಪುಡಿಯಾಗಿ ಬಿದ್ದವು.**॥16॥
ಟಿಪ್ಪನೀ
- ಕಾಲೀಕರಾಲೀ ಚ ಮನೋಜವಾ ಚ ಸುಲೋಹಿತಾಯಾ ಚ ಸುಧೂಮ್ರವರ್ಣಾ ।ಸ್ಫುಲಿಂಗಿನೀ ವಿಶ್ವರುಚೀ ಚ ದೇವಿ ಲೇಲಾಯಮಾನಾ ಇತಿ ಸಪ್ತಜಿಹ್ವಾಃ ॥ (ಮುಂಡಕೋಪನಿಷತ್ತು 1/2/4)
ಇವು ಏಳು ಅಗ್ನಿ ಜಾಲೆಗಳು (ನಾಲಿಗೆಗಳು) ಅದರಲ್ಲಿ ಮಧ್ಯದ ಜ್ವಾಲೆಯಾದ ‘ಸುಲೋಹಿತ’ ದಿಂದ ಧೂಮವು ಹೊರಹೊಮ್ಮುತ್ತದೆ.
** ಪರ್ವತದ ಬಂಡೆಗಳ ಹೊಡೆತದಿಂದ ಉಂಟಾದ ಅಗ್ನಿಯಿಂದ ಬೆಂದ ಆ ಪರ್ವತದಿಂದ ಬಂಗಾರ, ಬೆಳ್ಳಿ ಮೊದಲಾದ ಧಾತುಗಳು ಕರಗಿ ನೀರಾಗಿ ಹರಿಯತೊಡಗಿದವು.
ಮೂಲಮ್ - 17
ಗಿರಿಣಾ ಪೀಡ್ಯಮಾನೇನ ಪೀಡ್ಯಮಾನಾನಿ ಸರ್ವತಃ ।
ಗುಹಾವಿಷ್ಟಾನಿ ಭೂತಾನಿ ವಿನೇದುರ್ವಿಕೃತೈಃ ಸ್ವರೈಃ ॥
ಮೂಲಮ್ - 18
ಸ ಮಹಾಸತ್ತ್ವಸಂನಾದಃ ಶೈಲಪೀಡಾನಿಮಿತ್ತಜಃ ।
ಪೃಥಿವೀಂ ಪೂರಯಾಮಾಸ ದಿಶಶ್ಚೋಪವನಾನಿ ಚ ॥
ಅನುವಾದ
ಹನುಮಂತನಿಂದ ಅದುಮಲ್ಪಟ್ಟ ಪರ್ವತವು ಕಂಪಿಸಿದಾಗ, ಪರ್ವತದ ಗುಹೆಗಳಲ್ಲಿದ್ದ ಎಲ್ಲ ಪ್ರಾಣಿಗಳು ತೊಂದರೆಗೊಳಗಾಗಿ ಎಲ್ಲ ಕಡೆಗಳಿಂದಲೂ ವಿಕಾರ ಸ್ವರಗಳಿಂದ ಕೂಗಿಕೊಂಡವು. ಪರ್ವತದ ಕಂಪನದಿಂದ ಗುಹೆಗಳಲ್ಲಿ ವಾಸ ಮಾಡುತ್ತಿದ್ದ ಎಲ್ಲ ಪ್ರಾಣಿಗಳು ಭಯದಿಂದ ಆರ್ತನಾದಗಳನ್ನು ಮಾಡಿದವು ಆ ಆಕ್ರಂದನ ಧ್ವನಿಯು ಭೂಮಂಡಲವನ್ನು, ಉಪವನಗಳನ್ನು, ಹತ್ತು ದಿಕ್ಕುಗಳನ್ನು ವ್ಯಾಪಿಸಿತು.॥17-18॥
ಮೂಲಮ್ - 19
ಶಿರೋಭಿಃ ಪೃಥುಭಿಃ ಸರ್ಪಾ ವ್ಯಕ್ತಸ್ವಸ್ತಿಕಲಕ್ಷಣೈಃ ।
ವಮಂತಃ ಪಾವಕಂ ಘೋರಂ ದದಂಶುರ್ದಶನೈಃ ಶಿಲಾಃ ॥
ಅನುವಾದ
ಸ್ಪಷ್ಟವಾಗಿ ಕಾಣುವ ಸ್ವಸ್ತಿಕ ಲಕ್ಷಣಗಳಿಂದ ಕೂಡಿಕೊಂಡಿದ್ದ ದೊಡ್ಡ-ದೊಡ್ಡ ಹೆಡೆಗಳನ್ನು ಹೊಂದಿದ್ದ ಭಾರೀ ಸರ್ಪಗಳು ಪರ್ವತವು ನಡುಗುವಿಕೆಯಿಂದ ಖತಿಗೊಂಡು ಮುಖದಿಂದ ಘೋರವಾದ ವಿಷಾಗ್ನಿಯನ್ನು ಕಾರುತ್ತಾ ವಿಷದ ಹಲ್ಲುಗಳಿಂದ ಬಂಡೆಗಳನ್ನೇ ಕಚ್ಚುತ್ತಿದ್ದವು.॥19॥
ಮೂಲಮ್ - 20
ತಾಸ್ತದಾ ಸವಿಷೈರ್ದಷ್ಟಾಃ ಕುಪಿತೈಸ್ತೈರ್ಮಹಾಶಿಲಾಃ ।
ಜಜ್ವಲುಃ ಪಾವಕೋದ್ದೀಪ್ತಾ ಬಿಭಿದುಶ್ಚ ಸಹಸ್ರಧಾ ॥
ಅನುವಾದ
ಕೋಪಗೊಂಡ ಆ ಮಹಾವಿಷಸರ್ಪಗಳಿಂದ ಕಚ್ಚಲ್ಪಟ್ಟ ಮಹೇಂದ್ರಪರ್ವತದ ದೊಡ್ಡ-ದೊಡ್ಡ ಬಂಡೆಗಳು ಅಗ್ನಿಯಿಂದ ಉದ್ದೀಪನಗೊಂಡು ಪ್ರಜ್ವಲಿಸುತ್ತಾ ಕ್ಷಣಮಾತ್ರದಲ್ಲಿ ಸಾವಿರಾರು ಚೂರು ಚುರುಗಳಾಗಿ ಒಡೆದುಹೋದವು.॥20॥
ಮೂಲಮ್ - 21
ಯಾನಿ ಔಷಧಜಾಲಾನಿ ತಸ್ಮಿನ್ಜಾತಾನಿ ಪರ್ವತೇ ।
ವಿಷಘ್ನಾನ್ಯಪಿ ನಾಗಾನಾಂ ನ ಶೇಕುಃ ಶಮಿತುಂ ವಿಷಮ್ ॥
ಅನುವಾದ
ಆ ಪರ್ವತದಲ್ಲೇ ಹುಟ್ಟಿ ಬೆಳೆದಿದ್ದ ವಿಷವನ್ನು ಹೋಗಲಾಡಿಸಲು ಸಮರ್ಥವಾಗಿದ್ದ ಔಷಧಿಲತೆಗಳ ಸಮೂಹಗಳು ಕೂಡ ಖತಿಗೊಂಡ ಸರ್ಪಗಳ ವಿಷವನ್ನು ಉಪಶಮನಗೊಳಿಸಲು ಅಸಮರ್ಥವಾದುವು.॥21॥
ಮೂಲಮ್ - 22
ಭಿದ್ಯತೇಽಯಂ ಗಿರಿರ್ಭೂತೈರಿತಿ ಮತ್ವಾ ತಪಸ್ವಿನಃ ।
ತ್ರಸ್ತಾ ವಿದ್ಯಾಧರಾಸ್ತಸ್ಮಾದುತ್ಪೇತುಃ ಸ್ತ್ರೀಗಣೈಃ ಸಹ ॥
ಅನುವಾದ
ಯಾವುದೋ ಮಹಾಪ್ರಾಣಿಗಳಿಂದ ಈ ಮಹೇಂದ್ರ ಪರ್ವತವು ಭೇದಿಸಲ್ಪಡುತ್ತಿದೆ ಎಂದು ಭಾವಿಸಿ, ಅಲ್ಲಿ ಆಶ್ರಯವನ್ನು ಪಡೆದಿದ್ದ ತಪಸ್ವಿಗಳು ಭಯಗೊಂಡು ಅಲ್ಲಿಂದ ಧಾವಿಸಿದರು. ವಿದ್ಯಾಧರರೂ ಭಯದಿಂದ ತಮ್ಮ ಸ್ತ್ರೀಯರೊಡನೆ ಅಂತರಿಕ್ಷದ ಕಡೆಗೆ ಹಾರಿದರು.॥22॥
ಮೂಲಮ್ - 23
ಪಾನಭೂಮಿಗತಂ ಹಿತ್ವಾ ಹೈಮಮಾಸವಭಾಜನಮ್ ।
ಪಾತ್ರಾಣಿ ಚ ಮಹಾರ್ಹಾಣಿ ಕರ್ಕಾಂಶ್ಚ ಹಿರಣ್ಮಯಾನ್ ॥
ಅನುವಾದ
ಆ ವಿದ್ಯಾಧರರು ಪಾನಭೂಮಿಯಲ್ಲಿದ್ದ ಮಧುರ ಪಾನೀಯಗಳನ್ನು, ಬಂಗಾರದ ಪಾತ್ರೆಗಳನ್ನು, ಅಮೂಲ್ಯವಾದ ಭೋಜನ ಪಾತ್ರೆಗಳನ್ನು, ಕನಕ ಕಲಶಗಳನ್ನು ಭಯದಿಂದ ಅಲ್ಲೆ ಬಿಟ್ಟು ಹೋದರು.॥23॥
ಮೂಲಮ್ - 24
ಲೇಹ್ಯಾನುಚ್ಚಾವಚಾನ್ ಭಕ್ಷ್ಯಾನ್ ಮಾಂಸಾನಿ ವಿವಿಧಾನಿ ಚ ।
ಆರ್ಷಭಾಣಿ ಚ ಚರ್ಮಾಣಿ ಖಡ್ಗಾಂಶ್ಚ ಕನಕತ್ಸರೂನ್ ॥
ಅನುವಾದ
ಅವರು ನಾನಾವಿಧವಾದ ಲೇಹ್ಯಗಳನ್ನು, ಬಗೆಬಗೆಯ ಭಕ್ಷ್ಯಗಳನ್ನು, ಚೆನ್ನಾಗಿ ಮಾಗಿದ ವಿವಿಧ ಮಧುರ ರಸ ಫಲಗಳನ್ನು, ಎತ್ತಿನ ಚರ್ಮದಿಂದ ಮಾಡಿದ ಗುರಾಣಿಗಳನ್ನು, ಚಿನ್ನದ ಹಿಡಿಗಳಿಂದ ಕೂಡಿದ ಕತ್ತಿಗಳನ್ನು ಪರಿತ್ಯಜಿಸಿ ಆಕಾಶವನ್ನು ಸೇರಿದರು.॥24॥
ಮೂಲಮ್ - 25
ಕೃತಕಂಠಗುಣಾಃ ಕ್ಷೀಬಾ ರಕ್ತಮಾಲ್ಯಾನುಲೇಪನಾಃ ।
ರಕ್ತಾಕ್ಷಾಃ ಪುಷ್ಕರಾಕ್ಷಾಶ್ಚ ಗಗನಂ ಪ್ರತಿಪೇದಿರೇ ॥
ಅನುವಾದ
ಅವರು ಕಂಠಾಭರಣಗಳನ್ನು, ಕೆಂಪು ಹೂವಿನ ಮಾಲೆಗಳನ್ನು ಧರಿಸಿ, ಗಂಧವನ್ನು ಪೂಸಿಕೊಂಡಿದ್ದರು. ಕೆಂಗಣ್ಣರೂ, ಕಮಲಾಕ್ಷರೂ ಆಗಿದ್ದು, ಪಾನ ಭೂಮಿಯಲ್ಲಿ ಮದ್ಯಾಸವಗಳನ್ನು ಸೇವಿಸುತ್ತಾ ಆನಂದ ತುಂದಿಲರಾಗಿದ್ದ ವಿದ್ಯಾಧರರು ಭಯದಿಂದ ಆಕಾಶಕ್ಕೆ ನೆಗೆದರು.॥25॥
ಮೂಲಮ್ - 26
ಹಾರನೂಪುರಕೇಯೂರಪಾರಿಹಾರ್ಯಧರಾಃ ಸ್ತ್ರೀಯಃ ।
ವಿಸ್ಮಿತಾಃ ಸಸ್ಮಿತಾಸ್ತಸ್ಥುರಾಕಾಶೇ ರಮಣೈಃ ಸಹ ॥
ಅನುವಾದ
ಹಾರಗಳನ್ನು, ಕಾಲಂದುಗೆಗಳನ್ನು, ತೋಳಬಂದಿಗೆಗಳನ್ನು, ಬಳೆಗಳನ್ನು ಧರಿಸಿದ್ದ ವಿದ್ಯಾಧರ ಸ್ತ್ರೀಯರು ಹನುಮಂತನ ಬೃಹದಾಕಾರವನ್ನು, ಪರ್ವತವನ್ನು ಅಲ್ಲಾಡಿಸುತ್ತಿದ್ದ ಅವನ ಹೆಜ್ಜೆಗಳ ಸಂಘಟನೆಯನ್ನು ನೋಡುತ್ತಾ, ಸಂಭ್ರಮಾಶ್ಚರ್ಯಗಳಿಂದ, ಮಂದಹಾಸದಿಂದ ತಮ್ಮ ಪ್ರಿಯಕರರೊಡಗೂಡಿ ಅಂತರಿಕ್ಷದಲ್ಲಿ ನಿಂತಿದ್ದರು.॥26॥
ಮೂಲಮ್ - 27
ದರ್ಶಯಂತೋ ಮಹಾವಿದ್ಯಾಂ ವಿದ್ಯಾಧರಮಹರ್ಷಯಃ ।
ಸಪ್ರಿಯಾಸ್ತಸ್ಥುರಾಕಾಶೇ ವೀಕ್ಷಾಂಚಕ್ರುಶ್ಚ ಪರ್ವತಮ್ ॥
ಅನುವಾದ
ಹೀಗೆ ವಿದ್ಯಾಧರರೂ, ಮಹರ್ಷಿಗಳೂ ನಿರಾಲಂಬರಾಗಿ ಆಕಾಶದಲ್ಲಿ ನಿಂತುಕೊಂಡು, ತಮ್ಮ ವಾಯುಸ್ತಂಭನವೆಂಬ ಮಹಾವಿದ್ಯೆಯನ್ನು ಪ್ರದರ್ಶಿಸುತ್ತಾ ಜೊತೆಗೂಡಿ ನಿಂತು, ತಾವು ಪರಿತ್ಯಜಿಸಿದ ಮಹೇಂದ್ರ ಪರ್ವತವನ್ನು ಕೂತೂಹಲದಿಂದ ವಿಕ್ಷಿಸುತ್ತಿದ್ದರು.॥27॥
ಮೂಲಮ್ - 28
ಶುಶ್ರುವುಶ್ಚ ತದಾ ಶಬ್ದ ಮೃಷೀಣಾಂ ಭಾವಿತಾತ್ಮನಾಮ್ ।
ಚಾರಣಾನಾಂ ಚ ಸಿದ್ಧಾನಾಂ ಸ್ಥಿತಾನಾಂ ವಿಮಲೇಽಂಬರೇ ॥
ಅನುವಾದ
ಅವರು ಆಗ ತಮ್ಮಂತೆಯೇ ಆಕಾಶದಲ್ಲಿ ನಿಂತಿದ್ದ ಪವಿತ್ರಾಂತಃಕರಣರಾದ ಮಹರ್ಷಿಗಳೂ, ಸಿದ್ಧ-ಚಾರಣರೂ ಆಡುತ್ತಿದ್ದ ಮಾತುಗಳನ್ನು ಕೇಳಿದರು.॥28॥
ಮೂಲಮ್ - 29
ಏಷ ಪರ್ವತಸಂಕಾಶೋ ಹನೂಮಾನ್ ಮಾರುತಾತ್ಮಜಃ ।
ತಿತೀರ್ಷತಿ ಮಹಾವೇಗಃ ಸಾಗರಂ ಮಕರಾಲಯಮ್ ॥
ಅನುವಾದ
‘‘ಪರ್ವತಾಕಾರನಾದ ವಾಯುಪುತ್ರನೂ, ಮಹಾವೇಗ ಶಾಲಿಯೂ ಆದ ಹನುಮಂತನು ವರುಣನ ನಿವಾಸಸ್ಥಾನವಾದ ಈ ಸಮುದ್ರವನ್ನು ದಾಟಲು ಮನಸ್ಸು ಮಾಡಿದ್ದಾನೆ.॥29॥
ಮೂಲಮ್ - 30
ರಾಮಾರ್ಥಂ ವಾನರಾರ್ಥಂ ಚ ಚಿಕೀರ್ಷನ್ ಕರ್ಮ ದುಷ್ಕರಮ್ ।
ಸಮುದ್ರಸ್ಯ ಪರಂ ಪಾರಂ ದುಷ್ಪ್ರಾಪಂ ಪ್ರಾಪ್ತುಮಿಚ್ಛತಿ ॥
ಅನುವಾದ
ಶ್ರೀರಾಮನ ಕಾರ್ಯಸಿದ್ಧಿಗಾಗಿಯೂ, ವಾನರರಾಜನಾದ ಸುಗ್ರೀವನ ಅಪ್ಪಣೆಮೇರೆಗೆ ದುಷ್ಕರವಾದ ಕಾರ್ಯವನ್ನು ಮಾಡಲು ಬಯಸಿರುವನು. ಇವನು ಅತಿಕಷ್ಟಸಾಧ್ಯವಾದ ಈ ಸಮುದ್ರದ ಆಚೆಯ ದಡವನ್ನು ಸೇರಲು ಇಚ್ಛಿಸಿದ್ದಾನೆ.’’॥30॥
ಮೂಲಮ್ - 31
ಇತಿ ವಿದ್ಯಾಧರಾಃ ಶ್ರುತ್ವಾ ವಚಸ್ತೇಷಾಂ ತಪಸ್ವಿನಾಮ್ ।
ತಮಪ್ರಮೇಯಂ ದದೃಶುಃ ಪರ್ವತೇ ವಾನರರ್ಷಭಮ್ ॥
ಅನುವಾದ
ಹೀಗೆ ನಿರ್ಮಲವಾದ ಆಕಾಶದಲ್ಲಿ ನಿಂತಿದ್ದ ಸಿದ್ಧ-ಚಾರಣರೂ ಮತ್ತು ತಪಸ್ವಿಗಳೂ ಹೇಳುತ್ತಿದ್ದ ಮಾತುಗಳನ್ನು ಕೇಳಿ ವಿದ್ಯಾಧರರು ಕುತೂಹಲಾವಿಷ್ಟರಾಗಿ ಮಹೇಂದ್ರ ಪರ್ವತದಲ್ಲಿದ್ದ, ಅಪ್ರಮೇಯನಾದ, ವಾನರಶ್ರೇಷ್ಠನಾದ ಹನುಮಂತನನ್ನು ನೋಡುತ್ತಿದ್ದರು.॥31॥
ಮೂಲಮ್ - 32
ದುಧುವೇ ಚ ಸ ರೋಮಾಣಿ ಚಕಂಪೇ ಚಾಚಲೋಪಮಃ ।
ನನಾದ ಸುಮಹಾನಾದಂ ಸ ಮಹಾನಿವ ತೋಯದಃ ॥
ಅನುವಾದ
ಆಗ ಆಂಜನೇಯನು ಮಹಾಪರ್ವತದಂತೆ ಕಾಣುತ್ತಿದ್ದನು. ಅವನ ಶರೀರದ ರೋಮ ಕೋಟಿಗಳು ನಿಮಿರಿನಿಂತಿದ್ದುವು. ಮೈಯನ್ನೊಮ್ಮೆ ಒದರಿ, ಪ್ರಳಯಕಾಲದ ಮೇಘವು ಗರ್ಜಿಸುವಂತೆ ಒಂದು ಮಹಾನಾದವನ್ನು ಮಾಡಿದನು.॥32॥
ಮೂಲಮ್ - 33
ಆನುಪೂರ್ವ್ಯೇಣ ವೃತ್ತಂ ಚ ಲಾಂಗೂಲಂ ರೋಮಭಿಶ್ಚಿತಮ್ ।
ಉತ್ಪತಿಷ್ಯನ್ ವಿಚಿಕ್ಷೇಪ ಪಕ್ಷಿರಾಜ ಇವೋರಗಮ್ ॥
ಅನುವಾದ
ಹಾರಲು ಸನ್ನದ್ಧವಾದ ಮಾರುತಿಯು ಕ್ರಮವನ್ನನುಸರಿಸಿ ಸುತ್ತಿಕೊಂಡಿದ್ದ, ಕೂದಲುಗಳಿಂದ ತುಂಬಿಹೋಗಿದ್ದ ಬಾಲವನ್ನು ಗರುಡನು ಹಾವನ್ನು ಎಸೆಯುವಂತೆ ನೀಲಾಕಾಶದಲ್ಲಿ ಮೇಲಕ್ಕೆ ಚೆಲ್ಲಿದನು.॥33॥
ಮೂಲಮ್ - 34
ತಸ್ಯ ಲಾಂಗೂಲಮಾವಿದ್ಧಮಾತ್ತವೇಗಸ್ಯ ಪೃಷ್ಠತಃ ।
ದದೃಶೇ ಗರುಡೇನೇವ ಹ್ರಿಯಮಾಣೋ ಮಹೋರಗಃ ॥
ಅನುವಾದ
ಆ ಮಾರುತಿಯು ತನ್ನ ಬಾಲವನ್ನು ಜೋರಾಗಿ ಕೊಡಹಿದನು. ಅವನ ಬೆನ್ನ ಹಿಂದೆ ಸಂಬಂಧವಾಗಿದ್ದ ಮಹಾವೇಗವಾದ ಆ ಬಾಲವು ಗರುಡನಿಂದ ಸೆಳೆಯಲ್ಪಡುತ್ತಿದ್ದ ಮಹಾಸರ್ಪದಂತೆ ಕಾಣುತ್ತಿತ್ತು. ॥34॥
ಮೂಲಮ್ - 35
ಬಾಹೂ ಸಂಸ್ಥಂಭಯಾಮಾಸ ಮಹಾಪರಿಘಸನ್ನಿಭೌ ।
ಸಸಾದ ಚ ಕಪಿಃ ಕಟ್ಯಾಂ ಚರಣೌ ಸಂಚುಕೋಚ ಚ ॥
ಅನುವಾದ
ಆ ಕಪೀಶ್ವರನು ಮಹಾಪರಿಘದಂತಿರುವ ತನ್ನೆರಡು ತೋಳುಗಳನ್ನು ಬಿಗಿಗೊಳಿಸಿದನು. ಸೊಂಟದ ಮೇಲೆ ಶರೀರದ ಭಾರವನ್ನಿಟ್ಟನು. ಕಾಲುಗಳನ್ನು ಬಗ್ಗಿಸಿಕೊಂಡನು.॥35॥
ಮೂಲಮ್ - 36
ಸಂಹೃತ್ಯ ಚ ಭುಜೌ ಶ್ರೀಮಾಂಸ್ತಥೈವ ಚ ಶಿರೋಧರಾಮ್ ।
ತೇಜಃ ಸತ್ತ್ವಂ ತಥಾ ವೀರ್ಯಮಾವಿವೇಶ ಸ ವೀರ್ಯವಾನ್ ॥
ಅನುವಾದ
ಶುಭ ಲಕ್ಷಣ ಸಂಪನ್ನನಾದ ಆ ಮಾರುತಿಯು ತನ್ನ ತೋಳುಗಳನ್ನು ಸ್ವಲ್ಪ ಮಡಸಿಕೊಂಡು ಕತ್ತನ್ನು ಚಿಕ್ಕದು ಮಾಡಿಕೊಂಡನು. ಹಾರಲು ಮುಖ್ಯವಾಗಿ ಬೇಕಾಗುವ ತೇಜಸ್ಸು, ಸತ್ತ್ವ(ಬಲ)ವನ್ನು, ಪರಾಕ್ರಮವನ್ನು ತನ್ನಲ್ಲಿ ತುಂಬಿಕೊಂಡನು.॥36॥
ಮೂಲಮ್ - 37
ಮಾರ್ಗಮಾಲೋಕಯನ್ ದೂರಾದೂರ್ಧ್ವಂ ಪ್ರಣಿಹಿತೇಕ್ಷಣಃ ।
ರುರೋಧ ಹೃದಯೇ ಪ್ರಾಣಾನಾಕಾಶಮವಲೋಕಯನ್ ॥
ಅನುವಾದ
ಊರ್ಧ್ವ ದೃಷ್ಟಿಯುಳ್ಳವನಾಗಿದ್ದ ಹನುಮಂತನು ದೂರದಿಂದಲೇ ತಾನು ಸಾಗಬೇಕಾಗಿದ್ದ ಮಾರ್ಗವನ್ನು ಅವಲೋಕಿಸುತ್ತಾ, ಮತ್ತೊಮ್ಮೆ ಆಕಾಶದ ಕಡೆಗೂ ವೀಕ್ಷಿಸುತ್ತಾ, ಹಾರುವ ಸಲುವಾಗಿ ಪ್ರಾಣಗಳನ್ನು ಹೃದಯದಲ್ಲಿ ಸ್ತಂಭಿಸಿದನು. (ಉಸುರು ಬಿಗಿ ಹಿಡಿದನು.) ॥37॥
ಮೂಲಮ್ - 38
ಪದ್ಭ್ಯಾಂ ದೃಢಮವಸ್ಥಾನಂ ಕೃತ್ವಾ ಸ ಕಪಿಕುಂಜರಃ ।
ನಿಕುಂಚ್ಯ ಕರ್ಣೌ ಹನುಮಾನುತ್ಪತಿಷ್ಯನ್ ಮಹಾಬಲಃ ॥
ಮೂಲಮ್ - 39
ವಾನರಾನ್ ವಾನರಶ್ರೇಷ್ಠ ಇದಂ ವಚನಮಬ್ರವೀತ್ ।
ಯಥಾ ರಾಘವನಿರ್ಮುಕ್ತಃ ಶರಃ ಶ್ವಸನವಿಕ್ರಮಃ ॥
ಮೂಲಮ್ - 40
ಗಚ್ಛೇತ್ತದ್ವದ್ಗಮಿಷ್ಯಾಮಿ ಲಂಕಾಂ ರಾವಣಪಾಲಿತಾಮ್ ।
ನ ಹಿ ದ್ರಕ್ಷ್ಯಾಮಿ ಯದಿ ತಾಂ ಲಂಕಾಯಾಂ ಜನಕಾತ್ಮಜಾಮ್ ॥
ಮೂಲಮ್ - 41
ಅನೇನೈವ ಹಿ ವೇಗೇನ ಗಮಿಷ್ಯಾಮಿ ಸುರಾಲಯಮ್ ।
ಯದಿ ವಾ ತ್ರಿದಿವೇ ಸೀತಾಂ ನ ದ್ರಕ್ಷ್ಯಾಮಿ ಕೃತಶ್ರಮಃ ॥
ಮೂಲಮ್ - 42
ಬದ್ಧ್ವಾ ರಾಕ್ಷಸರಾಜಾನಮಾನಯಿಷ್ಯಾಮಿ ರಾವಣಮ್ ।
ಸರ್ವಥಾ ಕೃತಕಾರ್ಯೋಽಹಮೇಷ್ಯಾಮಿ ಸಹ ಸೀತಯಾ ॥
ಮೂಲಮ್ - 43
ಆನಯಿಷ್ಯಾಮಿ ವಾ ಲಂಕಾಂ ಸಮುತ್ಪಾಟ್ಯ ಸರಾವಣಾಮ್ ।
ಏವಮುಕ್ತ್ವಾ ತು ಹನುಮಾನ್ ವಾನರಾನ್ ವಾನರೋತ್ತಮಃ ॥
ಅನುವಾದ
ಹೀಗೆ ಹಾರಲು ಸಿದ್ಧನಾಗಿ ನಿಂತ ಕಪಿಶ್ರೇಷ್ಠನಾದ, ಮಹಾ ಬಲನಾದ ಆಂಜನೇಯನು ಕಾಲುಗಳನ್ನು ನೆಲದಮೇಲೆ ದೃಢವಾಗಿ ಊರಿ, ಎರಡೂ ಕಿವಿಗಳನ್ನೂ ಹಿಂದಕ್ಕೆ ಮಡಚಿಕೊಂಡು, ಪರ್ವತದ ಕೆಳಭಾಗದಲ್ಲಿ ನಿಂತಿದ್ದ ಅಂಗದಾದಿ ವಾನರರಿಗೆ ಹೀಗೆ ಹೇಳಿದನು. ‘‘ವಾನರ ಶ್ರೇಷ್ಠರೇ! ಶ್ರೀರಾಘವನು ಬಿಡುವ ವಾಯು ಸಮಾನವೇಗವುಳ್ಳ ಬಾಣದಂತೆ, ರಾವಣನಿಂದ ಪಾಲಿಸಲ್ಪಡುವ ಲಂಕಾಪಟ್ಟಣಕ್ಕೆ ವೇಗವಾಗಿ ಹೋಗುತ್ತೇನೆ. ಅಲ್ಲಿ ಜನಕನ ಮಗಳಾದ ಸೀತಾದೇವಿಯನ್ನು ಕಾಣದಿದ್ದರೆ, ನಾನು ಅದೇ ಶರವೇಗದಿಂದಲೇ ಸುರಲೋಕಕ್ಕೆ ಹೋಗುತ್ತೇನೆ. ಅಷ್ಟು ಶ್ರಮ ಪಟ್ಟು ಸ್ವರ್ಗಕ್ಕೆ ಹೋಗಿ ಅಲ್ಲಿಯೂ ಸೀತೆಯನ್ನು ಕಾಣದಿದ್ದರೆ ನಾನು ಪುನಃ ಲಂಕಾಪಟ್ಟಣಕ್ಕೆ ಹೋಗಿ ರಾಕ್ಷಸರಾಜನಾದ ರಾವಣನನ್ನು ಬಂಧಿಸಿ ಇಲ್ಲಿಗೆ ಕರೆತರುತ್ತೇನೆ. ಆದರೆ ನಾನು ಅಷ್ಟು ನಿರಾಶನಾಗಬೇಕಾಗಿಲ್ಲ. ಎಲ್ಲ ರೀತಿಯಿಂದ ನಾನು ಕೃತಕೃತ್ಯನಾಗಿ ಸೀತೆಯೊಡನೆ ಇಲ್ಲಿಗೆ ಬರುತ್ತೇನೆ. ಲಂಕಾಪಟ್ಟಣದಲ್ಲಿ ಸೀತೆಯನ್ನು ಹುಡುಕಲು ಸಾಧ್ಯವಾಗದಿದ್ದರೆ ನಾನು ಲಂಕೆಯನ್ನೇ ಕಿತ್ತು ರಾವಣನೊಡನೆ ಇಲ್ಲಿಗೆ ತರುತ್ತೇನೆ. ಆದುದರಿಂದ ನೀವು ನಿಶ್ಚಿಂತರಾಗಿರಿ’’ ಎಂದು ಹೇಳಿ ವಾನರೋತ್ತಮನಾದ ಹನುಮಂತನು ಕಪಿಗಳಿಗೆ ಆಶ್ವಾಸನೆಯನ್ನು ನೀಡಿದನು.॥38-43॥
ಮೂಲಮ್ - 44
ಉತ್ಪಪಾತಾಥ ವೇಗೇನ ವೇಗವಾನವಿಚಾರಯನ್ ।
ಸುಪರ್ಣಮಿವ ಚಾತ್ಮಾನಂ ಮೇನೇ ಸ ಕಪಿಕುಂಜರಃ ॥
ಅನುವಾದ
ಮಹಾಬಲಶಾಲಿಯಾದ ಹನುಮಂತನು ಮುಂದೆ ಬರಬಹುದಾದ ವಿಘ್ನಗಳನ್ನು ಪರಿಗಣಿಸದೆ ವೇಗದಿಂದ ಮೇಲಕ್ಕೆ ಹಾರಿದನು. ಆಗ ಆ ಕಪೀಶ್ವರನು ತನ್ನನ್ನು ಗರುಡನೆಂದೇ ಭಾವಿಸಿಕೊಂಡನು.॥44॥
ಮೂಲಮ್ - 45
ಸಮುತ್ಪತತಿ ತಸ್ಮಿಂಸ್ತು ವೇಗಾತ್ತೇ ನಗರೋಹಿಣಃ ।
ಸಂಹೃತ್ಯ ವಿಟಪಾನ್ ಸರ್ವಾನ್ ಸಮುತ್ಪೇತುಃ ಸಮಂತತಃ ॥
ಅನುವಾದ
ಆತನು ವೇಗದಿಂದ ಮೇಲಕ್ಕೆ ಹಾರಿದ ರಭಸಕ್ಕೆ ಪರ್ವತದ ಮೇಲಿದ್ದ ವೃಕ್ಷಗಳೆಲ್ಲವೂ ಬುಡ ಮೇಲಾಗಿ ಕೊಂಬೆ-ರೆಂಬೆಗಳೊಂದಿಗೆ ಎಲ್ಲ ಕಡೆಗಳಿಂದಲೂ ಹನುಮಂತನನ್ನೆ ಹಿಂಬಾಲಿಸಿದವು.॥45॥
ಮೂಲಮ್ - 46
ಸ ಮತ್ತಕೋಯಷ್ಟಿಬಕಾನ್ ಪಾದಪಾನ್ ಪುಷ್ಪಶಾಲಿನಃ ।
ಉದ್ವಹನ್ನೂರುವೇಗೇನ ಜಗಾಮ ವಿಮಲೇಂಬರೇ ॥
ಅನುವಾದ
ಮದಿಸಿದ ಕೊಕ್ಕರೆಗಳಿಂದಲೂ, ನೀರ್ಕೋಳಿಗಳಿಂದಲೂ ಪುಷ್ಪಗಳಿಂದಲೂ ಯುಕ್ತವಾದ ವೃಕ್ಷಗಳನ್ನು, ಭಾರೀ ವೇಗದಿಂದ ಹಾರಿಸಿಕೊಂಡು ಮಾರುತಿಯು ಶುಭ್ರವಾದ ಆಕಾಶದಲ್ಲಿ ಪ್ರಯಾಣ ಮಾಡಿದನು.॥46॥
ಮೂಲಮ್ - 47
ಉರುವೇಗೋದ್ಧತಾ ವೃಕ್ಷಾ ಮುಹೂರ್ತಂ ಕಪಿಮನ್ವಯುಃ ।
ಪ್ರಸ್ಥಿತಂ ದೀರ್ಘಮಧ್ವಾನಂ ಸ್ವಬಂಧುಮಿವ ಬಾಂಧವಾಃ ॥
ಅನುವಾದ
ಬಹಳ ದೂರ ಪ್ರಯಾಣ ಹೊರಟಿರುವನೆಂಟನೊಬ್ಬನನ್ನು ಅವನ ಬಂಧುಗಳು ಸ್ವಲ್ಪದೂರವರೆಗೆ ಹಿಂಬಾಲಿಸುವಂತೆ ಹನುಮಂತನ ಭಾರೀ ವೇಗದಿಂದ ಬುಡಸಹಿತವಾಗಿ ಕಿತ್ತುಬಂದ ವೃಕ್ಷಗಳು ಸ್ವಲ್ಪ ದೂರದವರೆಗೆ ಕಪಿಶ್ರೇಷ್ಠನಾದ ಹನುಮಂತನನ್ನು ಹಿಂಬಾಲಿಸಿದವು.॥47॥
ಮೂಲಮ್ - 48
ತಮೂರುವೇಗೋನ್ಮಥಿತಾಃ ಸಾಲಾಶ್ಚಾನ್ಯೇ ನಗೋತ್ತಮಾಃ ।
ಅನುಜಗ್ಮುರ್ಹನೂಮಂತಂ ಸೈನ್ಯಾ ಇವ ಮಹೀಪತಿಮ್ ॥
ಮೂಲಮ್ - 49
ಸುಪುಷ್ಟಿತಾಗ್ರೈರ್ಬಹುಭಿಃ ಪಾದಪೈರನ್ವಿತಃ ಕಪಿಃ ।
ಹನೂಮಾನ್ ಪರ್ವತಾಕಾರೋ ಬಭೂವಾದ್ಭುತದರ್ಶನಃ ॥
ಅನುವಾದ
ಹಾಗೆ ಬುಡ ಮೇಲಾದ ಔಷಧ ವೃಕ್ಷಗಳೂ ಹಾಗೂ ಇತರ ಎತ್ತರವಾದ ಸಾಲ ವೃಕ್ಷಗಳೂ ಮಹಾರಾಜನನ್ನು ಅನುಸರಿಸಿ ಸೈನಿಕರು ಹಿಂಬಾಲಿಸಿ ಹೋಗುವಂತೆ ಹಿಂಬಾಲಿಸಲ್ಪಡುತ್ತಿದ್ದ ಹನುಮಂತನು ಪರ್ವತದ ಆಕಾರವನ್ನು ಹೊಂದಿ ಅದ್ಭುತಾಕಾರವಾಗಿ ಶೋಭಿಸಿದನು.॥48-49॥
ಮೂಲಮ್ - 50
ಸಾರವಂತೋಽಥ ಯೇ ವೃಕ್ಷಾ ನ್ಯಮಜ್ಜಲ್ಲವಣಾಂಭಸಿ ।
ಭಯಾದಿವ ಮಹೇಂದ್ರಸ್ಯ ಪರ್ವತಾ ವರುಣಾಲಯೇ ॥
ಅನುವಾದ
ಮಹೇಂದ್ರನ ಭಯದಿಂದ ಪರ್ವತಗಳು ಸಮುದ್ರದಲ್ಲಿ ಮುಳುಗಿಹೋದಂತೆ, ಹನುಮಂತನನ್ನು ಅನುಸರಿಸಿ ಸಾಗುತ್ತಿದ್ದ ಸಾರವತ್ತಾದ (ಭಾರವಾದ) ವೃಕ್ಷಗಳೆಲ್ಲವು ಸ್ವಲ್ಪ ಹೊತ್ತಿನಲ್ಲೇ ಲವಣ ಸಮುದ್ರದಲ್ಲಿ ಮುಳುಗಿಹೋದುವು.॥50॥
ಮೂಲಮ್ - 51
ಸ ನಾನಾಕುಸುಮೈಃ ಕೀರ್ಣಃ ಕಪಿಃ ಸಾಂಕುರಕೋರಕೈಃ ।
ಶುಶುಭೇ ಮೇಘಸಂಕಾಶಃ ಖದ್ಯೋತೈರಿವ ಪರ್ವತಃ ॥
ಅನುವಾದ
ಮೇಘದಂತೆ ವಿಶಾಲಕಾಯನಾದ ಹನುಮಂತನು ತನ್ನ ಭಾರೀ ವೇಗದಿಂದ ತನ್ನನ್ನೇ ಅನುಸರಿಸಿ ಬರುತ್ತಿದ್ದ ವೃಕ್ಷಗಳ ಚಿಗುರುಗಳಿಂದಲೂ, ಮೊಗ್ಗುಗಳಿಂದಲೂ, ಅರಳಿದ ಹೂವುಗಳಿಂದಲೂ ಸಮಾವೃತನಾಗಿ, ರಾತ್ರಿಯಲ್ಲಿ ಮಿಣುಕುಹುಳಗಳಿಂದ ತುಂಬಿದ ಪರ್ವತದಂತೆ ಪ್ರಕಾಶಿಸುತ್ತಿದ್ದನು.॥51॥
ಮೂಲಮ್ - 52
ವಿಮುಕ್ತಾಸ್ತಸ್ಯ ವೇಗೇನ ಮುಕ್ತ್ವಾ ಪುಷ್ಪಾಣಿ ತೇ ದ್ರುಮಾಃ ।
ಅವಶೀರ್ಯಂತ ಸಲಿಲೇ ನಿವೃತ್ತಾಃ ಸುಹೃದೋ ಯಥಾ ।
ತಾರಾಚಿತಮಿವಾಕಾಶಂ ಪ್ರಬಭೌ ಸ ಮಹಾರ್ಣವಃ ॥
ಅನುವಾದ
ಅವನನ್ನೇ ಅನುಸರಿಸಿ ಹೋಗುತ್ತಿದ್ದ ವೃಕ್ಷಗಳು ತಮ್ಮಲ್ಲಿದ ಪುಷ್ಪಗಳನ್ನು ದಾರಿಯುದ್ದಕ್ಕೂ ಸುರಿಸುತ್ತಾ ಸ್ವಲ್ಪ ದೂರದವರೆಗೆ ಹೋದ ನಂತರ ಸಮುದ್ರದ ನೀರಿನಲ್ಲಿ ಬಿದ್ದುಬಿಟ್ಟವು. ಅದನ್ನು ನೋಡಿದರೆ ಮಿತ್ರರನ್ನು ಕೊಂಚ ದೂರ ಅನುಸರಿಸಿ ಹಿಂದಿರುಗಿದವರಂತೆ ಕಾಣುತ್ತಿತ್ತು.॥52॥
ಮೂಲಮ್ - 53
ಲಘುತ್ವೇನೋಪಪನ್ನಂ ತದ್ವಿಚಿತ್ರಂ ಸಾಗರೇಽಪತತ್ ।
ದ್ರುಮಾಣಾಂ ವಿವಿಧಂ ಪುಷ್ಪಂ ಕಪಿವಾಯುಸಮೀರಿತಮ್ ॥
ಅನುವಾದ
ಹನುಮಂತನ ಭಾರೀವೇಗದಿಂದ ಹುಟ್ಟಿದ ಬಿರುಗಾಳಿಯಿಂದ ಬುಡಮೇಲಾಗಿ ಜೊತೆಯಲ್ಲೇ ಸಾಗುತ್ತಿದ್ದ ಮಹಾವೃಕ್ಷಗಳ ಹಗುರವಾದ ಕುಸುಮಗಳು ಸಮುದ್ರವನ್ನು ವ್ಯಾಪಿಸಿದವು. ಹೀಗೆ ಹಲವು ಬಣ್ಣಗಳ ಕುಸುಮಗಳಿಂದ ತುಂಬಿಹೋದ ಲವಣ ಸಮುದ್ರವು ನಕ್ಷತ್ರಗಳಿಂದ ವ್ಯಾಪ್ತವಾದ ಆಕಾಶದಂತೆ ಶೋಭಿಸಿತು.॥53॥
ಮೂಲಮ್ - 54
ಪುಷ್ಟೌಘೇನಾನುವಿದ್ಧೇನ ನಾನಾವರ್ಣೇನ ವಾನರಃ ।
ಬಭೌ ಮೇಘ ಇವೋದ್ಯನ್ ವೈ ವಿದ್ಯುದ್ಗಣವಿಭೂಷಿತಃ ॥
ಅನುವಾದ
ಬಣ್ಣ-ಬಣ್ಣಗಳಿಂದ ಹಾಗೂ ಸುಗಂಧಯುಕ್ತವಾಗಿದ್ದ ಪುಷ್ಪಗಳಿಂದ ಮುಚ್ಚಿಹೋಗಿದ್ದ ಹನುಮಂತನು ಆಗ ಆಕಾಶದಲ್ಲಿ ಮಿಂಚಿನ ಸಮೂಹಗಳಿಂದ ಯುಕ್ತವಾದ ಮೇಘದಂತೆ ವಿರಾಜಿಸುತ್ತಿದ್ದನು.॥54॥
(ಶ್ಲೋಕ - 55 )
ಮೂಲಮ್
ತಸ್ಯ ವೇಗಸಮಾಧೂತೈಃ ಪುಷ್ಪೈಸ್ತೋಯಮದೃಶ್ಯತ ।
ತಾರಾಭಿರಭಿರಾಮಾಭಿರುದಿತಾಭಿರಿವಾಂಬರಮ್ ॥
ಅನುವಾದ
ಹನುಮಂತನ ಭಾರೀ ವೇಗದ ಕಾರಣದಿಂದ ಎಲ್ಲ ಕಡೆಗೆ ಚೆಲ್ಲಿಹೋದ ಹೂವುಗಳಿಂದ ತುಂಬಿಹೋದ ಸಮುದ್ರದ ನೀರು ಆಗ ತಾನೇ ಹುಟ್ಟಿದ ಸುಂದರವಾದ ನಕ್ಷತ್ರಗಳಿಂದ ಪ್ರಕಾಶಿಸುವ ಆಕಾಶದಂತೆ ಕಾಣುತ್ತಿತ್ತು.॥55॥
ಮೂಲಮ್ - 56
ತಸ್ಯಾಂಬರಗತೌ ಬಾಹೂ ದದೃಶಾತೇ ಪ್ರಸಾರಿತೌ ।
ಪರ್ವತಾಗ್ರಾದ್ವಿನಿಷ್ಕ್ರಾಂತೌ ಪಂಚಾಸ್ಯಾವಿವ ಪನ್ನಗೌ ॥
ಅನುವಾದ
ಆಕಾಶದ ಕಡೆಗೆ ಚಾಚಲ್ಟಟ್ಟಿದ್ದ ಹನುಮಂತನ ಎರಡೂ ತೊಳುಗಳು ಪರ್ವತದ ಶಿಖರದಿಂದ ಹೊರಬಂದಿರುವ ಐದು ಹೆಡೆಗಳ ಸರ್ಪಗಳಂತೆ ಕಾಣುತ್ತಿದ್ದವು.॥56॥
ಮೂಲಮ್ - 57
ಪಿಬನ್ನಿವ ಬಭೌ ಶ್ರೀಮಾನ್ ಸೋರ್ಮಿಮಾಲಂ ಮಹಾರ್ಣವಮ್ ।
ಪಿಪಾಸುರಿವ ಚಾಕಾಶಂ ದದೃಶೇ ಸ ಮಹಾಕಪಿಃ ॥
ಅನುವಾದ
ಗರುಡನಂತೆ ಆಕಾಶದಲ್ಲಿ ಹಾರಿ ಹೋಗುತ್ತಿದ್ದ ಹನುಮಂತನು ಉತ್ತುಂಗ ತರಂಗಗಳಿಂದ ಮೆರೆಯುವ ಆ ಸಮುದ್ರವನ್ನು ತನ್ನ ಛಾಯೆಯ ಮೂಲಕ ಕುಡಿದು ಬಿಡುವನೋ ಎಂಬಂತಿತ್ತು. ಇದೇ ರೀತಿ ಅವನು ಆಕಾಶವನ್ನು ಕಬಳಿಸಲು ಬಯಸುತ್ತಿರುವನೋ ಎಂಬಂತೆ ಕಾಣುತ್ತಿತ್ತು.॥57॥
ಮೂಲಮ್ - 58
ತಸ್ಯ ವಿದ್ಯುತ್ಪ್ರಭಾಕಾರೇ ವಾಯುಮಾರ್ಗಾನುಸಾರಿಣಃ ।
ನಯನೇ ಸಂಪ್ರಕಾಶೇತೇ ಪರ್ವತಸ್ಥಾವಿವಾನಲೌ ॥
ಅನುವಾದ
ವಾಯು ಮಾರ್ಗವನ್ನು ಅನುಸರಿಸಿ ಹಾರಿಕೊಂಡ ಹೋಗುತ್ತಿದ್ದ ಹನುಮಂತನ ಎರಡೂ ಕಣ್ಣಗಳು ಮಿಂಚಿನಂತೆ ಹೊಳೆಯುತಿದ್ದು, ಪರ್ವತದಲ್ಲಿನ ಎರಡು ಕಾಡುಗಿಚ್ಚುಗಳಂತೆ ಪ್ರಜ್ವಲಿಸುತ್ತಿದ್ದವು.॥58॥
ಮೂಲಮ್ - 59
ಪಿಂಗೇ ಪಿಂಗಾಕ್ಷಮುಖ್ಯಸ್ಯ ಬೃಹತೀ ಪರಿಮಂಡಲೇ ।
ಚಕ್ಷುಷೀ ಸಂಪ್ರಕಾಶೇತೇ ಚಂದ್ರಸೂರ್ಯಾವಿವೋದಿತೌ ॥
ಅನುವಾದ
ಕಪಿ ಶ್ರೇಷ್ಠನಾದ ಹನುಮಂತನ ಕಂದು ಹಳದೀ ಬಣ್ಣದ, ವಿಶಾಲವಾಗಿದ್ದ, ದುಂಡಾಗಿದ್ದ ಎರಡು ಕಣ್ಣುಗಳು ಆಗ ತಾನೇ ಹುಟ್ಟಿದ ಚಂದ್ರ-ಸೂರ್ಯರಂತೆ ಪ್ರಕಾಶಿಸುತ್ತಿದ್ದವು.॥59॥
ಮೂಲಮ್ - 60
ಮುಖಂ ನಾಸಿಕಯಾ ತಸ್ಯ ತಾಮ್ರಯಾ ತಾಮ್ರಮಾಬಭೌ ।
ಸಂಧ್ಯಯಾ ಸಮಭಿಸ್ಪೃಷ್ಟಂ ಯಥಾ ಸೂರ್ಯಸ್ಯ ಮಂಡಲಂ ॥
ಅನುವಾದ
ಸಂಧ್ಯಾರಾಗದಿಂದ ಮಿಳಿತವಾದ ಸೂರ್ಯಮಂಡಲವು ಕೆಂಪಾದ ಛಾಯೆಯಿಂದ ಪ್ರಕಾಶಿಸುತ್ತಿರುವ ತಾಮ್ರವರ್ಣದ ಮೂಗಿನಿಂದ ಕೂಡಿದ ಹನುಮಂತನ ಮುಖವು ಕೆಂಪು ಛಾಯೆಯಿಂದ ಪ್ರಕಾಶಿಸುತ್ತಿದ್ದಿತು.॥60॥
ಮೂಲಮ್ - 61
ಲಾಂಗೂಲಂ ಚ ಸಮಾವಿದ್ಧಂ ಪ್ಲವಮಾನಸ್ಯ ಶೋಭತೇ ।
ಅಂಬರೇ ವಾಯುಪುತ್ರಸ್ಯ ಶಕ್ರಧ್ವಜ ಇವೋಚ್ಛ್ರಿತಃ ॥
ಅನುವಾದ
ಹನುಮಂತನು ತನ್ನ ಬಾಲವನ್ನು ಮೇಲಕ್ಕೆತ್ತಿಕೊಂಡು ಹೋಗುತ್ತಿದ್ದನು. ಆ ಬಾಲವು ಆಕಾಶದಲ್ಲಿ ಎತ್ತಿಹಿಡಿದ ಇಂದ್ರನ ಧ್ವಜದಂತೆ ಪ್ರಕಾಶಿಸುತ್ತಿತ್ತು.॥61॥
ಮೂಲಮ್ - 62
ಲಾಂಗೂಲಚಕ್ರೇಣ ಮಹಾನ್ ಶುಕ್ಲದಂಷ್ಟ್ರೋನಿಲಾತ್ಮಜಃ ।
ವ್ಯರೋಚತ ಮಹಾಪ್ರಾಜ್ಞಃ ಪರಿವೇಷೀವ ಭಾಸ್ಕರಃ ॥
ಅನುವಾದ
ಕೆಲವೊಮ್ಮೆ ಹನುಮಂತನು ತನ್ನ ಬಾಲವನ್ನು ಚಕ್ರಾಕಾರವಾಗಿ ತನ್ನ ಸುತ್ತಲೂ ಸುತ್ತಿಕೊಂಡಿದ್ದನು. ವಾಯುಪುತ್ರನಿಗೆ ಬಿಳುಪಾದ ಕೋರೆದಾಡೆಗಳಿದ್ದವು. ಅದರಿಂದ ಮಹಾಪ್ರಾಜ್ಞನಾದ ಹನುಮಂತನು ಪರಿವೇಷ (ಸುತ್ತಲೂ ಇರುವ ಪ್ರಭಾಮಂಡಲ)ದಿಂದ ಯುಕ್ತನಾದ ಸೂರ್ಯದೇವನಂತೆ ಕಾಣುತ್ತಿದ್ದನು.॥62॥
ಮೂಲಮ್ - 63
ಸ್ಫಿಗ್ದೇಶೇನಾಭಿತಾಮ್ರೇಣ ರರಾಜ ಸ ಮಹಾಕಪಿಃ ।
ಮಹತಾ ದಾರಿತೇನೇವ ಗಿರಿರ್ಗೈರಿಕಧಾತು ನಾ ॥
ಅನುವಾದ
ತುಂಬಾ ಕೆಂಪಗಾಗಿದ್ದ ಬಾಲದ ಮೂಲಭಾಗವನ್ನು ಹೊಂದಿದ್ದ ಮಹಾಕಪಿಯಾದ ಹನುಮಂತನು ಗೈರಿಕಾದಿ ಧಾತುಗಳಿಂದ ಸೀಳಲ್ಪಟ್ಟ ಪರ್ವತದಂತೆ ಪ್ರಕಾಶಿಸುತ್ತಿದ್ದನು.॥63॥
ಮೂಲಮ್ - 64
ತಸ್ಯ ವಾನರಸಿಂಹಸ್ಯ ಪ್ಲವಮಾನಸ್ಯ ಸಾಗರಮ್ ।
ಕಕ್ಷಾಂತರಗತೋ ವಾಯುರ್ಜೀಮೂತ ಇವ ಗರ್ಜತಿ ॥
ಅನುವಾದ
ಸಮುದ್ರವನ್ನು ಲಂಘಿಸುತ್ತಿದ್ದ ವಾನರಶ್ರೇಷ್ಠನಾದ ಹನುಮಂತನ ಕಂಕುಳಗಳ ಸಂದಿಯಿಂದ ನುಗ್ಗಿ ಹೋಗುತ್ತಿದ್ದ ವಾಯುವು ಮೇಘದಂತೆ ಭಾರೀ ಶಬ್ದ ಮಾಡುತಿತ್ತು.॥64॥
ಮೂಲಮ್ - 65
ಖೇ ಯಥಾ ನಿಪತ ತ್ಯುಲ್ಕಾ ಹ್ಯುತ್ತರಾಂತಾದ್ವಿನಿಃಸೃತಾ ।
ದೃಶ್ಯತೇ ಸಾನುಬಂಧಾ ಚ ತಥಾ ಸ ಕಪಿಕುಂಜರಃ ॥
ಅನುವಾದ
ಆಕಾಶದಲ್ಲಿ ಉತ್ತರದಿಕ್ಕಿನ ಎತ್ತರವಾದ ಪ್ರದೇಶದಿಂದ ಹೊರಟು ಕೆಳಕ್ಕೆ ಬಿಟ್ಟಿದ್ದ ಬಾಲದಿಂದ ಯುಕ್ತನಾದ ಹನುಮಂತನು ಬಾಲದಿಂದ ಕೂಡಿದ ಉಲ್ಕೆಯಂತೆ ದಕ್ಷಿಣ ದಿಕ್ಕಿಗೆ ಹಾರಿಹೋಗುತ್ತಿದ್ದನು. (ಉಲ್ಕಾಪಾತವು ಜನರಿಗೆ, ದೇಶಕ್ಕೆ ಅಶುಭಸೂಚಕವಾಗಿದೆ. ಅದರಂತೆ ಮಾರುತಿಯು ದಕ್ಷಿಣ ದಿಕ್ಕಿಗೆ ಸಾಗುತ್ತಿರುವುದು ಲಂಕೆಗೆ ಅರಿಷ್ಟಸೂಚಕವಾಗಿದೆ.) ॥65॥
ಮೂಲಮ್ - 66
ಪತತ್ಪತಂಗಸಂಕಾಶೋ ವ್ಯಾಯತಃ ಶುಶುಭೇ ಕಪಿಃ ।
ಪ್ರವೃದ್ಧ ಇವ ಮಾತಂಗಃ ಕಕ್ಷಯಾ ಬದ್ಧ್ಯಮಾನಯಾ ॥
ಅನುವಾದ
ಸಾಗಿಹೋಗುತ್ತಿರುವ ಸೂರ್ಯನಿಗೆ ಸದೃಶನಾಗಿದ್ದ, ದೀರ್ಘವಾದ ನೀಳವಾದ ಬಾಲವನ್ನು ಹೊಂದಿದ್ದ ಕಪಿಶ್ರೇಷ್ಠನಾದ ಹನುಮಂತನು ದೊಡ್ಡದಾಗಿ ಬೆಳೆದಿರುವ ಕಾರಣ ಹಗ್ಗದಿಂದ ಬಂಧಿಸಲ್ಟಟ್ಟ ಆನೆಯಂತೆ ಗೋಚರಿಸುತ್ತಿದ್ದನು. ॥66॥
ಮೂಲಮ್ - 67
ಉಪರಿಷ್ಟಾಚ್ಛರೀರೇಣಚ್ಛಾಯಯಾ ಚಾವಗಾಢಯಾ ।
ಸಾಗರೇ ಮಾರುತಾವಿಷ್ಟಾ ನೌರಿವಾಸೀತ್ತದಾ ಕಪಿಃ ॥
ಅನುವಾದ
ಹನುಮಂತನು ಆಕಾಶ ಮಾರ್ಗವಾಗಿ ಸಾಗುತ್ತಿದ್ದನು. ಅವನ ನೆರಳು ಸಮುದ್ರದಲ್ಲಿ ದಟ್ಟವಾಗಿ ಪ್ರತಿಬಿಂಬಿತವಾಗಿ ಬಂದು ಹಡಗಿನಂತೆ ಕಾಣುತ್ತಿತ್ತು. ಅದು ಮಾರುತಿಯಂತೆ ಮುಂದೆ ಸಾಗುತ್ತಿರುವಾಗ, ಸಮುದ್ರದಲ್ಲಿ ಗಾಳಿಯಿಂದ ಪ್ರೇರಿತವಾದ ನೌಕೆಯಂತೆಯೇ ಕಂಡುಬರುತ್ತಿದ್ದನು. (ಹನುಮಂತನ ಶರೀರವೇ ನೌಕೆಯ ಮೇಲುಭಾಗ, ಛಾಯೆಯೇ ಕೆಳಭಾಗ ಇದನ್ನೇ ವಾಯುಪ್ರೇರಿತವಾದ ನೌಕೆಯೆಂದು ಹೇಳಿದ್ದಾರೆ.)॥67॥
ಮೂಲಮ್ - 68
ಯಂ ಯಂ ದೇಶಂ ಸಮುದ್ರಸ್ಯ ಜಗಾಮ ಸ ಮಹಾಕಪಿಃ ।
ಸ ಸ ತಸ್ಯೋರುವೇಗೇನ ಸೋನ್ಮಾದ ಇವ ಲಕ್ಷ್ಯತೇ ॥
ಅನುವಾದ
ಮಹಾಕಪಿಯಾದ ಹನುಮಂತನು ಸಮುದ್ರದ ಯಾವ- ಯಾವ ಭಾಗಗಳಿಂದ ಹಾರಿಹೋಗುತ್ತಿದ್ದನೋ, ಆಯಾ ಭಾಗಗಳು ಅವನ ವೇಗದಿಂದಾಗಿ ಅಲ್ಲೋಲಕಲ್ಲೋಲವಾಗುತ್ತಿತ್ತು.॥68॥
(ಶ್ಲೋಕ - 69
ಮೂಲಮ್
ಸಾಗರಸ್ಯೋರ್ಮಿಜಾಲಾನಾಮುರಸಾ ಶೈಲವರ್ಷ್ಮಣಾ ।
ಅಭಿಘ್ನಂಸ್ತು ಮಹಾವೇಗಃ ಪುಪ್ಲುವೇ ಸ ಮಹಾಕಪಿಃ ॥
ಅನುವಾದ
ಮಹಾವೇಗಶಾಲಿಯಾದ, ಕಪಿಶ್ರೇಷ್ಠ ಹನುಮಂತನು ಪರ್ವತೋಪಮವಾದ ಶರೀರದಿಂದಲೂ, ವಕ್ಷಸ್ಥಳದಿಂದಲೂ, ಸಮುದ್ರದ ಅಲೆಗಳನ್ನು ಭೇದಿಸಿಕೊಂಡು ಮುಂದೆ-ಮುಂದೆ ಹಾರಿಕೊಂಡು ಸಾಗಿಹೋಗುತ್ತಿದ್ದನು.॥69॥
ಮೂಲಮ್ - 70
ಕಪಿವಾತಶ್ಚ ಬಲವಾನ್ ಮೇಘವಾತಶ್ಚ ನಿಃಸೃತಃ ।
ಸಾಗರಂ ಭೀಮನಿರ್ಘೋಷಂ ಕಂಪಯಾಮಾಸತುರ್ಭೃಶಮ್ ॥
ಅನುವಾದ
ಹನುಮಂತನ ಮಹಾವೇಗದಿಂದ ಉಂಟಾದ ಬಲಿಷ್ಠವಾದ ವಾಯು ಮತ್ತು ಮೇಘಮಂಡಲದಿಂದ ಹೊರಹೊಮ್ಮಿದ ವಾಯು ಇವೆರಡೂ ಸೇರಿ, ಮಹಾಭಯಂಕರವಾದ ಧ್ವನಿಯಿಂದ ಗರ್ಜಿಸುತ್ತಿದ್ದ ಸಮುದ್ರವನ್ನು ಇನ್ನು ಹೆಚ್ಚಾಗಿ ಕಂಪನಗೊಳಿಸಿದವು.॥70॥
ಮೂಲಮ್ - 71
ವಿಕರ್ಷನ್ನೂರ್ಮಿಜಾಲಾನಿ ಬೃಹಂತಿ ಲವಣಾಂಭಸಿ ।
ಪುಪ್ಲುವೇ ಕಪಿಶಾರ್ದೂಲೋ ವಿಕಿರನ್ನಿವ ರೋದಸೀ ॥
ಅನುವಾದ
ಲವಣಸಮುದ್ರದಲ್ಲಿದ್ದ ದೊಡ್ಡ-ದೊಡ್ಡ ಅಲೆಗಳನ್ನು ತನ್ನ ಜೊತೆಯಲ್ಲಿಯೇ ಸೆಳೆದೊಯ್ಯುತ್ತಿದ್ದ ಹನುಮಂತನು ಭೂ-ಅಂತರಿಕ್ಷಗಳನ್ನು ವಿಭಾಗಿಸುತ್ತಿರುವನೋ ಎಂಬಂತೆ ಕಾಣುತ್ತಿದ್ದನು.॥71॥
ಮೂಲಮ್ - 72
ಮೇರುಮಂದರ ಸಂಕಾಶಾನುದ್ಗತಾನ್ ಸ ಮಹಾರ್ಣವೇ ।
ಅತ್ಯಕ್ರಾಮನ್ಮಹಾವೇಗಸ್ತರಂಗಾನ್ ಗಣಯನ್ನಿವ ॥
ಅನುವಾದ
ಮಹಾವೇಗಯುಕ್ತನಾದ ಹನುಮಂತನು ಮಹಾಸಮುದ್ರದಲ್ಲಿ ಉಕ್ಕೇರಿಬರುತ್ತಿದ್ದ ಮೇರು-ಮಂದರ ಪರ್ವತಗಳಂತೆ ಇದ್ದ ದೊಡ್ಡ-ದೊಡ್ಡ ಅಲೆಗಳನ್ನು ಅತಿಕ್ರಮಿಸಿ ಹೋಗುತ್ತಿದ್ದಾಗ, ಅವುಗಳನ್ನು ಎಣಿಕೆ ಮಾಡುತ್ತಾ ಹೋಗುತ್ತಿರುವನೋ ಎಂದು ಕಾಣುತ್ತಿತ್ತು. ॥72॥
ಮೂಲಮ್ - 73
ತಸ್ಯ ವೇಗಸಮದ್ಧೂತಂ ಜಲಂ ಸಜಲದಂ ತದಾ ।
ಅಂಬರಸ್ಥಂ ವಿಬಭ್ರಾಜ ಶಾರದಾಭ್ರಮಿವಾತತಮ್ ॥
ಅನುವಾದ
ವಾಯುನಂದನನ ವೇಗದಿಂದ ಮೇಲಕ್ಕೆ ಚಿಮ್ಮಿದ ಸಮುದ್ರದ ನೀರು ಆಕಾಶದಲ್ಲಿದ್ದ ಮೇಘಗಳೊಡನೆ ಸೇರಿಕೊಂಡು ಎಲ್ಲ ಕಡೆಗಳಲ್ಲಿ ವ್ಯಾಪ್ತವಾದ ಶರತ್ಕಾಲದ ಮೇಘದಂತೆ ಬಿಳುಪಾಗಿ ಕಾಣುತ್ತಿದ್ದೀತು.॥73॥
ಮೂಲಮ್ - 74
ತಿಮಿನಕ್ತಝಷಾಃ ಕೂರ್ಮಾ ದೃಶ್ಯಂತೇ ವಿವೃತಾಸ್ತದಾ ।
ವಸ್ತ್ರಾಪಕರ್ಷಣೇನೇವ ಶರೀರಾಣಿ ಶರೀರಿಣಾಮ್ ॥
ಅನುವಾದ
ಸಮುದ್ರದ ನೀರು ಮೇಲಕ್ಕೆ ಚಿಮ್ಮುತ್ತಿದ್ದುದರಿಂದ ಸಮುದ್ರದಲ್ಲಿರುವ ತಿಮಿಂಗಿಲುಗಳು, ಮೊಸಳೆಗಳು, ಮೀನುಗಳು, ಆಮೆಗಳು, ಬಟ್ಟೆಯನ್ನು ತೆಗೆದು ಹಾಕಿದಾಗ ಮನುಷ್ಯನ ಶರೀರವೆಲ್ಲವೂ ಸ್ಪಷ್ಟವಾಗಿ ಕಾಣುವಂತೆ ಬಹಳ ಸ್ಪಷ್ಟವಾಗಿ ಕಾಣುತ್ತಿದ್ದುವು.॥74॥
ಮೂಲಮ್ - 75
ಪ್ಲವಮಾನಂ ಸಮೀಕ್ಷ್ಯಾಥ ಭುಜಂಗಾಃ ಸಾಗರಾಲಯಾಃ ।
ವ್ಯೋಮ್ನಿ ತಂ ಕಪಿಶಾರ್ದೂಲಂ ಸುಪರ್ಣ ಇತಿ ಮೇನಿರೇ ॥
ಅನುವಾದ
ಸಮುದ್ರದಲ್ಲಿದ್ದ ಹಾವುಗಳು ಆಕಾಶದಲ್ಲಿ ಹಾರಿಕೊಂಡು ಹೋಗುತ್ತಿದ್ದ ಕಪಿ ಶಾರ್ದೂಲನನ್ನು ನೋಡಿ, ತಮ್ಮ ಶತ್ರುವಾದ ಗರುಡನೇ ಹಾರಿ ಹೋಗುತ್ತಿರುವನೋ ಎಂದು ಭಾವಿಸಿ ಭಯಗೊಂಡವು.॥75॥
ಮೂಲಮ್ - 76
ದಶಯೋಜನವಿಸ್ತೀರ್ಣಾ ತ್ರಿಶಂದ್ಯೋಜನಮಾಯತಾ ।
ಛಾಯಾ ವಾನರಸಿಂಹಸ್ಯ ಜಲೇ ಚಾರುತರಾಭವತ್ ॥
ಅನುವಾದ
ವಾನರ ಶ್ರೇಷ್ಠನಾದ ಹನುಮಂತನು ವೇಗವಾಗಿ ಹಾರಿಕೊಂಡು ಹೋಗುತ್ತಿರುವಾಗ ಅವನ ನೆರಳು ಹತ್ತು ಯೋಜನ ವಿಸ್ತಾರವಾಗಿಯೂ, ಮೂವತ್ತು ಯೋಜನಗಳಷ್ಟು ಉದ್ದವಾಗಿಯೂ ಸುಮನೋಹರವಾಗಿ ಕಂಗೊಳಿಸುತ್ತಿತ್ತು.* ॥76॥
ಟಿಪ್ಪನೀ
- ಹನುಮಂತನು ಸಂಧ್ಯಾಸಮಯದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹೋಗುತ್ತಿದ್ದನು. ಬೆಳಿಗ್ಗೆ ಮತ್ತು ಸಂಜೆ ಮನುಷ್ಯನ ನೆರಳು ಉದ್ದವಾಗಿ ಕಾಣುವಂತೆ, ಹನುಮಂತನ ನೆರಳೂ ಇಷ್ಟು ವಿಶಾಲವಾಗಿ ಬಿದ್ದಿತ್ತು ಎಂದು ತಿಳಿಯಬೇಕು.
ಮೂಲಮ್ - 77
ಶ್ವೇತಾಭ್ರಘನರಾಜೀವ ವಾಯುಪುತ್ರಾನುಗಾಮಿನೀ ।
ತಸ್ಯ ಸಾ ಶುಶುಭೇ ಛಾಯಾ ವಿತತಾ ಲವಣಾಂಭಸಿ ॥
ಅನುವಾದ
ವಾಯು ಪುತ್ರನನ್ನು ಅನುಸರಿಸಿಕೊಂಡು ಹೋಗುತ್ತಿದ್ದ ಲವಣಾಂಬುಧಿಯಲ್ಲಿ ಬಿದ್ದಿದ್ದ ಅವನ ನೆರಳು ಬಿಳಿಯ ದಟ್ಟವಾದ ಮೋಡಗಳ ಸಾಲಿನಂತೆ ಪ್ರಕಾಶಿಸುತ್ತಿದ್ದಿತು. ॥77॥
ಮೂಲಮ್ - 76
ಶುಶುಭೇ ಸ ಮಹಾತೇಜಾ ಮಹಾಕಾಯೋ ಮಹಾಕಪಿಃ ।
ವಾಯುಮಾರ್ಗೇ ನಿರಾಲಂಬೇ ಪಕ್ಷವಾನಿವ ಪರ್ವತಃ ॥
ಅನುವಾದ
ಮಹಾ ತೇಜಸ್ವಿಯಾದ, ಮಹಾಕಾಯನಾದ, ಮಹಾಕಪಿಯಾದ ಹನುಮಂತನು ಆಲಂಬನವೇ ಇಲ್ಲದ ವಾಯುಮಾರ್ಗದಲ್ಲಿ ರೆಕ್ಕೆಗಳಿಂದ ಕೂಡಿರುವ ಪರ್ವತದಂತೆಯೇ ಭಾಸಮಾನವಾಗುತ್ತಿದ್ದನು. ॥78 ॥
ಮೂಲಮ್ - 79
ಯೇನಾಸೌ ಯಾತಿ ಬಲವಾನ್ ವೇಗೇನ ಕಪಿಕುಂಜರಃ ।
ತೇನ ಮಾರ್ಗೇಣ ಸಹಸಾ ದ್ರೋಣೀಕೃತ ಇವಾರ್ಣವಃ ॥
ಅನುವಾದ
ಕಪಿಶ್ರೇಷ್ಠನಾದ, ಬಲಿಷ್ಠನಾದ ಹನುಮಂತನು ಹೆಚ್ಚಾದ ವೇಗದಿಂದ ಹೋಗುತ್ತಿದ್ದ ಮಾರ್ಗದ ಸಮುದ್ರವು ಅವನಿಗೆ ವಿಶಾಲವಾದ ದೋಣಿಯಾಗಿ ಮಾಡಲ್ಪಟ್ಟಿರುವಂತೆ ಕಾಣುತ್ತಿತ್ತು.॥79॥
ಮೂಲಮ್ - 80
ಆಪಾತೇ ಪಕ್ಷಿಸಂಘಾನಾಂ ಪಕ್ಷಿರಾಜ ಇವಾಬಭೌ ।
ಹನೂಮಾನ್ ಮೇಘಜಾಲಾನಿ ಪ್ರಕರ್ಷನ್ ಮಾರುತೋ ಯಥಾ ॥
ಅನುವಾದ
ಪಕ್ಷಿಗಳ ಸಮೂಹಗಳು ಹಾರಿಕೊಂಡುಹೋಗುತ್ತಿದ್ದ ಆಕಾಶ ಮಾರ್ಗದಲ್ಲಿ ವಾಯುಪುತ್ರನು ಪಕ್ಷಿರಾಜ ಗರುಡನಂತೆ ಹಾರಿಕೊಂಡು ಹೋಗುತ್ತಿದ್ದನು. ಹನುಮಂತನು ಮೇಘಗಳ ಸಮೂಹವನ್ನು ತನ್ನ ಜೊತೆಗೆ ಸೆಳೆದುಕೊಂಡು ಹೋಗುವ ವಾಯುವಿನಂತೆ ಒಪ್ಪುತ್ತಿದ್ದನು. ॥80 ॥
ಮೂಲಮ್ - 81
ಪಾಂಡರಾರುಣವರ್ಣಾನಿ ನೀಲಮಾಂಜಿಷ್ಠಕಾನಿ ಚ ।
ಕಪಿನಾ ಕೃಷ್ಯಮಾಣಾನಿ ಮಹಾಭ್ರಾಣಿ ಚಕಾಶಿರೇ ॥
ಅನುವಾದ
ಹನುಮಂತನಿಂದ ಹಾಗೆ ಸೆಳೆದೊಯ್ಯುಲ್ಪಡುತ್ತಿದ್ದ ಮೇಘಗಳು ಬಿಳಿ, ಎಣ್ಣೆಗೆಂಪು, ನಸುಹಳದಿ ಮುಂತಾದ ವಿಧ-ವಿಧವಾದ ಬಣ್ಣಗಳಿಂದ ಪ್ರಕಾಶಿಸುತ್ತಿದ್ದುವು.॥81॥
ಮೂಲಮ್ - 82
ಪ್ರವಿಶನ್ನಭ್ರಜಾಲಾನಿ ನಿಷ್ಪತಂಶ್ಚ ಪುನಃ ಪುನಃ ।
ಪ್ರಚ್ಛನ್ನಶ್ಚ ಪ್ರಕಾಶಶ್ಚ ಚಂದ್ರಮಾ ಇವ ಲಕ್ಷ್ಯತೇ ॥
ಅನುವಾದ
ಆಕಾಶದಲ್ಲಿದ್ದ ಮೇಘಗಳ ಸಮೂಹಗಳನ್ನು ಹೊಕ್ಕು ಪುನಃ ಹೊರಬರುತ್ತಲೂ ಇದ್ದ ಹನುಮಂತನು ಮೇಘಾವೃತನಾಗಿ ಮತ್ತು ಮೇಘಗಳಿಂದ ಹೊರಬಂದ ಚಂದ್ರನಂತೆ ಕಾಣುತ್ತಿದ್ದನು.॥82॥
ಮೂಲಮ್ - 83
ಪ್ಲವಮಾನಂ ತು ತಂ ದೃಷ್ಟ್ವಾ ಪ್ಲವಗಂ ತ್ವರಿತಂ ತದಾ ।
ವವೃಷುಃ ಪುಷ್ಪವರ್ಷಾಣಿ ದೇವಗಂಧರ್ವದಾನವಾಃ ॥
ಅನುವಾದ
ತ್ವರೆಯಿಂದ ಹಾರಿಕೊಂಡು ಹೋಗುತ್ತಿದ್ದ ಹನುಮಂತನನ್ನು ನೋಡಿ ಅವನ ಮೇಲೆ ದೇವತೆಗಳು, ಗಂಧರ್ವರು, ದಾನವರು ಹೂಗಳ ಮಳೆಗರೆದರು.॥83॥
ಮೂಲಮ್ - 84
ತತಾಪ ನ ಹಿ ತಂ ಸೂರ್ಯಃ ಪ್ಲವಂತಂ ವಾನರೇಶ್ವರಮ್ ।
ಸಿಷೇವೇ ಚ ತದಾ ವಾಯೂ ರಾಮಕಾರ್ಯಾರ್ಥಸಿದ್ಧಯೇ ॥
ಅನುವಾದ
ಶ್ರೀರಾಮನ ಕಾರ್ಯಸಿದ್ಧಿಗಾಗಿ (ಸೀತಾನ್ವೇಷಣ ಕಾರ್ಯವು ಸಿದ್ಧಿಸಲು) ಆಕಾಶ ಮಾರ್ಗವಾಗಿ ಪಯಣಿಸುತ್ತಿದ್ದ ವಾನರೋತ್ತಮನಿಗೆ ಸೂರ್ಯನು ತಾಪವನ್ನುಂಟುಮಾಡಲಿಲ್ಲ. ಅವನ ಶ್ರಮವನ್ನು ತೊಲಗಿಸಲು ವಾಯುದೇವರೂ ಕೂಡ ಮಂದವಾಗಿ ಬೀಸುತ್ತಾ ಅವನನ್ನು ಸೇವಿಸುತ್ತಿದ್ದನು.(ತಂದೆಯಾದ ವಾಯುದೇವರು ತನ್ನ ಪುತ್ರನನ್ನು ಸೇವಿಸುವುದು (ಪೂಜಿಸುವುದು) ಎಂದರೇನು? ಆದರೆ ರಾಮಕಾರ್ಯ ಪ್ರವೃತ್ತನಾದ ರಾಮ ಭಕ್ತನು ಎಲ್ಲರಿಗೂ ಪೂಜಾರ್ಹನೆ. ಇನ್ನೊಂದು ಭಾವ ರಾಮ ಕಾರ್ಯವು ತನಗೆ ಸಿಗದೆ ತನ್ನ ಮಗನಿಗೆ ಸಿಕ್ಕಿತಲ್ಲ ಎಂದು ಆನಂದಪಟ್ಟು ಗೌರವಿಸಿದನು.)॥84॥
ಮೂಲಮ್ - 85
ಋಷಯಸ್ತುಷ್ಟುವುಶ್ಚೈನಂ ಪ್ಲವಮಾನಂ ವಿಹಾಯಸಾ ।
ಜಗುಶ್ಚ ದೇವಗಂಧರ್ವಾಃ ಪ್ರಶಂಸಂತೋ ಮಹೌಜಸಮ್ ॥
ಅನುವಾದ
ಆಕಾಶದ ಮೂಲಕವಾಗಿ ಹಾರಿಕೊಂಡು ಹೋಗುತ್ತಿದ್ದ ತೇಜಸ್ವೀಯಾದ ಹನುಮಂತನನ್ನು ಋಷಿಗಳು ಸ್ತುತಿಸಿದರು. ದೇವತೆಗಳೂ, ಗಂಧರ್ವರೂ ಅವನನ್ನು ಶ್ಲಾಘನೆಮಾಡುತ್ತಾ ಗುಣಗಾನ ಮಾಡಿದರು.॥85॥
ಮೂಲಮ್ - 86
ನಾಗಾಶ್ಚ ತುಷ್ಟುವುರ್ಯಕ್ಷಾ ರಕ್ಷಾಂಸಿ ವಿಬುಧಾಃ ಖಗಾಃ ।
ಪ್ರೇಕ್ಷ್ಯಾಕಾಶೇ ಕಪಿವರಂ ಸಹಸಾ ವಿಗತಕ್ಲಮಮ್ ॥
ಅನುವಾದ
ಇತರರಿಂದ ಮಾಡಲು ಅಸಾಧ್ಯವಾದ ಕಾರ್ಯವನ್ನು ಮಾಡುತ್ತಿದ್ದರೂ ಸ್ವಲ್ಪವೂ ಆಯಾಸಗೊಳ್ಳದಿದ್ದ ಕಪಿವರನನ್ನು ನೋಡಿ ನಾಗಗಳೂ, ಯಕ್ಷರೂ, ರಾಕ್ಷಸರೂ, ದಿಕ್ಪಾಲಕರೂ, ದೇವತೆಗಳೂ ಮುಂತಾದವರೆಲ್ಲರೂ ಪರಿ-ಪರಿಯಾಗಿ ಸ್ತುತಿಸಿದರು. ಪಕ್ಷಿಗಣ ಸಮೂಹಗಳೂ ಸ್ತುತಿಸಿದವು.॥86॥
ಮೂಲಮ್ - 87
ತಸ್ಮಿನ್ ಪ್ಲವಗಶಾರ್ದೂಲೇ ಪ್ಲವಮಾನೇ ಹನೂಮತಿ ।
ಇಕ್ಷ್ವಾಕುಕುಲಮಾನಾರ್ಥೀ ಚಿಂತಯಾಮಾಸ ಸಾಗರಃ ॥
ಮೂಲಮ್ - 88
ಸಾಹಾಯ್ಯಂ ವಾನರೇಂದ್ರಸ್ಯ ಯದಿ ನಾಹಂ ಹನೂಮತಃ ।
ಕರಿಷ್ಯಾಮಿ ಭವಿಷ್ಯಾಮಿ ಸರ್ವವಾಚ್ಯೋ ವಿವಕ್ಷತಾಮ್ ॥
ಮೂಲಮ್ - 89
ಅಹಮಿಕ್ಷ್ವಾಕುನಾಥೇನ ಸಗರೇಣ ವಿವರ್ಧಿತಃ ।
ಇಕ್ಷ್ವಾಕುಸಚಿವಶ್ಚಾಯಂ ನಾವಸೀದಿತುಮರ್ಹತಿ ॥
ಮೂಲಮ್ - 90
ತಥಾ ಮಯಾ ವಿಧಾತವ್ಯಂ ವಿಶ್ರಮೇತ ಯಥಾ ಕಪಿಃ ।
ಶೇಷಂ ಚ ಮಯಿ ವಿಶ್ರಾಂತಃ ಸುಖೇನಾತಿತರಿಷ್ಯತಿ ॥
ಅನುವಾದ
ಕಪಿಕುಂಜರನಾದ ಹನುಮಂತನು ಹೀಗೆ ಸಮುದ್ರದ ಮೇಲೆ ಹಾರಿಕೊಂಡು ಹೋಗುತ್ತಿದ್ದಾಗ, ಅವನನ್ನು ನೋಡಿ ಸಮುದ್ರ ರಾಜನು ತನ್ನ ಹುಟ್ಟಿಗೆ ಕಾರಣವಾದ ಇಕ್ಷ್ವಾಕುವಂಶವನ್ನು ಗೌರವಿಸಲು ಬಯಸಿ ಹೀಗೆ ಯೋಚಿಸಿದನು ‘‘ಶ್ರೀರಾಮನ ಕಾರ್ಯಾರ್ಥಿಯಾಗಿ ಹೊರಟಿರುವ ವಾನರೇಂದ್ರನಾದ ಹನುಮಂತನಿಗೆ ಈಗ ನಾನು ಸಹಾಯವನ್ನು ಮಾಡದಿದ್ದರೆ ಎಲ್ಲ ವಿಧದಿಂದ ಎಲ್ಲರ ದೃಷ್ಟಿಯಲ್ಲಿ ನಿಂದಾರ್ಹನಾಗುವೆನು. ನಾನಾದರೋ ಇಕ್ಷ್ವಾಕುವಂಶದ ರಾಜನಾದ ಸಗರನಿಂದ ಸಂವರ್ಧಿತನಾಗಿದ್ದೇನೆ. ಹನುಮಂತನೂ ಅದೇ ಇಕ್ಷ್ವಾಕು ವಂಶದ ಅರಸನಾದ ಶ್ರೀರಾಮನಿಗೆ ಸಚಿವನಾಗಿದ್ದಾನೆ. ಆದುದರಿಂದ ಇವನು ಯಾವುದೇ ಕಷ್ಟವನ್ನು ಅನುಭವಿಸಬಾರದು. ಈ ಕಪೀಶ್ವರನು ಸ್ವಲ್ಪ ಹೊತ್ತಾದರೂ ಇಲ್ಲಿ ವಿಶ್ರಮಿಸಿಕೊಳ್ಳಲು ನಾನು ವ್ಯವಸ್ಥೆ ಮಾಡಬೇಕಾಗಿದೆ. ವಿಶ್ರಮಿಸಿಕೊಂಡ ಬಳಿಕ ಅವನು ಉಳಿದ ಪ್ರಯಾಣವನ್ನು ಹಾಯಾಗಿ ಮುಂದರಿಸಬಹುದು.’’॥87-90॥
ಮೂಲಮ್ - 91
ಇತಿ ಕೃತ್ವಾ ಮತಿಂ ಸಾಧ್ವೀಂ ಸಮುದ್ರಶ್ಛನ್ನಮಂಭಸಿ ।
ಹಿರಣ್ಯನಾಭಂ ಮೈನಾಕಮುವಾಚ ಗಿರಿಸತ್ತಮಮ್ ॥
ಮೂಲಮ್ - 92
ತ್ವಮಿಹಾಸುರಸಂಗಾನಾಂ ಪಾತಾಲತಲವಾಸಿನಾಮ್ ।
ದೇವರಾಜ್ಞಾ ಗಿರಿಶ್ರೇಷ್ಠ ಪರಿಘಃ ಸಂನಿವೇಶಿತಃ ॥
ಅನುವಾದ
ಹೀಗೆ ಸಮುದ್ರರಾಜನು ಸಮಯೋಚಿತವಾಗಿ ನಿಶ್ಚಯಿಸಿ ತನ್ನಲ್ಲಿಯೇ ಅಡಗಿಕೊಂಡಿದ್ದ ಗಿರಿಶ್ರೇಷ್ಠನಾದ ಹಿರಣ್ಯನಾಭನಾದ (ಭಂಗಾರದ ಶಿಖರಗಳುಳ್ಳ) ಮೈನಾಕನಿಗೆ ಹೇಳಿದನು ‘‘ಎಲೈ ಪರ್ವತೋತ್ತಮನೇ! ಪಾತಾಳವಾಸಿಗಳಾದ ರಾಕ್ಷಸರು ಮೇಲೆ ಬರುವುದನ್ನು ತಡೆಯುವ ಸಲುವಾಗಿ ದೇವರಾಜ ಇಂದ್ರನು ನಿನ್ನನ್ನಿಲ್ಲಿ ಅಗಳಿಯ ರೂಪದಲ್ಲಿ ಸ್ಥಾಪಿಸಿರುವನು. ॥91-92 ॥
ಮೂಲಮ್ - 93
ತ್ವಮೇಷಾಂ ಜಾತವೀರ್ಯಾಣಾಂ ಪುನರೇವೋತ್ಪತಿಷ್ಯತಾಮ್ ।
ಪಾತಾಲಸ್ಯಾಪ್ರಮೇಯಸ್ಯ ದ್ವಾರಮಾವೃತ್ಯ ತಿಷ್ಠಸಿ ॥
ಅನುವಾದ
ಪರಾಕ್ರಮಶಾಲಿಗಳಾದ ಆ ರಾಕ್ಷಸರು ಮರಳಿ ಮೇಲಕ್ಕೆ ಬರಲು ಸಾಧ್ಯವಾಗದಂತೆ ದುರ್ಭೇದ್ಯವಾದ ಈ ಪಾತಾಳದ ಈ ಬಾಗಿಲನ್ನು ಆವರಿಸಿ ನೀನು ನಿಂತಿರುವೆ.* ॥93॥
ಟಿಪ್ಪನೀ
- ಹಿಂದೆ ಬಲಿಚಕ್ರವರ್ತಿಯು ಇಂದ್ರನನ್ನು ಪರಾಜಯಗೊಳಿಸಿ ಸ್ವರ್ಗವನ್ನು ವಶಪಡಿಸಿಕೊಂಡನು. ಅದರಿಂದ ದೇವತೆಗಳು ಕಷ್ಟಪಟ್ಟರು. ಆಗ ಶ್ರೀಮಹಾವಿಷ್ಣುವು ವಾಮನನಾಗಿ ಅವತರಿಸಿ ಬಲಿಚಕ್ರವರ್ತಿಯನ್ನು ಪಾತಾಳದಲ್ಲಿರಿಸಿದನು. ಅವನೊಂದಿಗೆ ರಾಕ್ಷಸರೆಲ್ಲರೂ ಪಾತಾಳವನ್ನು ಸೇರಿದರು. ಅವರು ತಿರುಗಿ ಮೇಲೇರಿಬರದಂತೆ ಆ ಬಾಗಿಲಿಗೆ ಇಂದ್ರನು ಮೈನಾಕವನ್ನು ಅಡ್ಡವಾಗಿ ನಿಲ್ಲಿಸಿದನು.
ಮೂಲಮ್ - 94
ತಿರ್ಯಗೂರ್ಧ್ವಮಧಶ್ಚೈವ ಶಕ್ತಿಸ್ತೇ ಶೈಲ ವರ್ಧಿತುಮ್ ।
ತಸ್ಮಾತ್ ಸಂಚೋದಯಾಮಿ ತ್ವಾಮುತ್ತಿಷ್ಠ ನಗಸತ್ತಮ ॥
ಅನುವಾದ
ಓ ಪರ್ವತ ಶ್ರೇಷ್ಠನೇ! ನಿನಗೆ ಅಡ್ಡವಾಗಿಯೂ, ಎತ್ತರವಾಗಿಯೂ ಬೆಳೆಯುವ ಶಕ್ತಿ ಇದೆ. ಅದರಿಂದಲೇ ನಾನು ನಿನ್ನನ್ನು ಮೇಲೆದ್ದು ನಿಲ್ಲುವಂತೆ ಪ್ರಚೋದಿಸುತ್ತಿದ್ದೇನೆ. ಮೈನಾಕನೇ ಎದ್ದು ನಿಲ್ಲು! ॥94 ॥
ಮೂಲಮ್ - 95
ಸ ಏಷ ಕಪಿಶಾರ್ದೂಲಸ್ತ್ವಾಮುಪೈಷ್ಯತಿ ವೀರ್ಯವಾನ್ ।
ಹನೂಮಾನ್ ರಾಮಕಾರ್ಯಾರ್ಥಂ ಭೀಮಕರ್ಮಾಖಮಾಪ್ಲುತಃ ॥
ಅನುವಾದ
ಅದೋ ನೋಡು! ಪರಾಕ್ರಮಶಾಲಿಯೂ, ಅಸಹಾಯ ಶೂರನೂ ಕಪಿಪ್ರವರನೂ ಆದ ಹನುಮಂತನು ಶ್ರೀರಾಮ ಕಾರ್ಯಾರ್ಥಿಯಾಗಿ ನಿನ್ನ ಮೇಲೆಯೇ ಆಕಾಶ ಮಾರ್ಗವಾಗಿ ಹೋಗುತ್ತಿದ್ದಾನೆ. ॥95॥
ಮೂಲಮ್ - 96
ಅಸ್ಯ ಸಾಹ್ಯಂ ಮಯಾ ಕಾರ್ಯಮಿಕ್ಷ್ವಾಕುಹಿತವರ್ತಿನಃ ।
ಮಮ ಹೀಕ್ಷ್ವಾಕವಃ ಪೂಜ್ಯಾಃ ಪರಂ ಪೂಜ್ಯತಮಾಸ್ತವ ॥
ಮೂಲಮ್ - 97
ಕುರು ಸಾಚಿವ್ಯಮಸ್ಮಾಕಂ ನ ನಃ ಕಾರ್ಯಮತಿಕ್ರಮೇತ್ ।
ಕರ್ತವ್ಯಮಕೃತಂ ಕಾರ್ಯಂ ಸತಾಂ ಮನ್ಯುಮುದೀರಯೇತ್ ॥
ಅನುವಾದ
ಇಕ್ಷ್ವಾಕು ಕುಲ ಸಂಭೂತನಾದ, ಶ್ರೀರಾಮನ ಅನುಯಾಯಿಯಾಗಿರುವ ಹನುಮಂತನಿಗೆ ಈಗ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ. ನನಗೆ ಇಕ್ಷ್ವಾಕು ಕುಲದವರು ಪೂಜ್ಯರು. ನನ್ನಲ್ಲಿ ನೀನು ಇರುವುದರಿಂದ ನಿನಗೂ ಹೆಚ್ಚಿನ ಪೂಜ್ಯರಾಗಿರುವರು. ನಾವು ಮಾಡಬೇಕಾಗಿರುವ ಕಾರ್ಯವು (ಹನುಮಂತನಿಗೆ ವಿಶ್ರಾಂತಿ ಈವುದು) ಸಮಯ ಮೀರುವುದರೊಳಗೆ ಕೈಗೂಡುವಂತೆ ನಾವು ಅವನಿಗೆ ತಕ್ಕ ಸಹಾಯವನ್ನು ಮಾಡಬೇಕು. ಏಕೆಂದರೆ, ಮಾಡಬೇಕಾಗಿರುವ ಕರ್ತವ್ಯವನ್ನು ಸಕಾಲದಲ್ಲಿ ಮಾಡದಿದ್ದರೆ ಹಿರಿಯರು ಕುಪಿತರಾಗುತ್ತಾರೆ.’’ ॥96-97॥
ಮೂಲಮ್ - 98
ಸಲಿಲಾದೂರ್ಧ್ವಮುತ್ತಿಷ್ಠ ತಿಷ್ಠತ್ವೇಷ ಕಪಿಸ್ತ್ವಯಿ ।
ಅಸ್ಮಾಕಮತಿಥಿಶ್ಚೈವ ಪೂಜ್ಯಶ್ಚ ಪ್ಲವತಾಂ ವರಃ ॥
ಅನುವಾದ
‘‘ಮೈನಾಕ! ನೀನೀಗಲೇ ನೀರಿನಿಂದ ಮೇಲಕ್ಕೆ ಎದ್ದುನಿಲ್ಲು. ಈ ಕಪಿವೀರನು ನಮಗೆ ಅತಿಥಿಯಾಗಿರುವನು. ಪರಮ ಪೂಜ್ಯನಾದ ಆಂಜನೇಯನು ನಿನ್ನ ಶಿಖರದಲ್ಲಿ ಸ್ವಲ್ಪ ಹೊತ್ತು ತಂಗಿ ವಿಶ್ರಾಂತಿಪಡೆಯಲಿ.॥98॥
ಮೂಲಮ್ - 99
ಚಾಮೀಕರಮಹಾನಾಭ ದೇವಗಂಧರ್ವಸೇವಿತ ।
ಹನೂಮಾಂಸ್ತ್ವಯಿ ವಿಶ್ರಾಂತಸ್ತತಃ ಶೇಷಂ ಗಮಿಷ್ಯತಿ ॥
ಅನುವಾದ
ದೇವಗಂಧರ್ವ ಸೇವಿತನೇ! ಸುವರ್ಣಮಯವಾದ ಮಹಾಶೃಂಗದಿಂದ ಶೋಭಿಸುತ್ತಿರುವ ಮೈನಾಕನೇ! ಹನುಮಂತನು ನಿನ್ನಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿದ್ದು ಅನಂತರ ಮುಂದೆ ಪಯಣ ಬೆಳೆಸಲಿ. ಪರಾಕ್ರಮಶಾಲಿಯಾದ ವಾನರಶ್ರೇಷ್ಠನು ಇದೋ ನಿನ್ನ ಸಮೀಪಕ್ಕೆ ಬರುತ್ತಿದ್ದಾನೆ.॥99॥
ಮೂಲಮ್ - 100
ಕಾಕುತ್ಸ್ಥಸ್ಯಾನೃಶಂಸ್ಯಂ ಚ ಮೈಥಿಲ್ಯಾಶ್ಚ ವಿವಾಸನಮ್ ।
ಶ್ರಮಂ ಚ ಪ್ಲವಗೇಂದ್ರಸ್ಯ ಸಮೀಕ್ಷ್ಯೋತ್ಥಾತುಮರ್ಹಸಿ ॥
ಅನುವಾದ
ಶ್ರೀರಾಮನ ದಯಾಪರತೆಯನ್ನು, ರಾಮನಿಂದ ಅಗಲಿದ ಸೀತಾ ದೇವಿಯ ದುಃಸ್ಥಿತಿಯನ್ನು, ಪ್ಲವಗ ಶ್ರೇಷ್ಠನಾದ ಹನುಮಂತನ ಕಾರ್ಯಭಾರವನ್ನು (ಶ್ರಮವನ್ನು) ಗಮನಿಸಿ, ನೀನು ಬೇಗನೇ ನೀರಿನಿಂದ ಎದ್ದುನಿಲ್ಲು.’’॥100॥
ಮೂಲಮ್ - 101
ಹಿರಣ್ಯನಾಭೋ ಮೈನಾಕೋ ನಿಶಮ್ಯ ಲವಣಾಂಭಸಃ ।
ಉತ್ಪಪಾತ ಜಲಾತ್ತೂರ್ಣಂ ಮಹಾದ್ರುಮಲತಾಯುತಃ ॥
ಅನುವಾದ
ಸಮುದ್ರ ರಾಜನ ಆ ಮಾತುಗಳನ್ನು ಕೇಳಿದೊಡನೆ ಮಹಾವೃಕ್ಷಗಳಿಂದಲೂ, ಲತೆಗಳಿಂದಲೂ, ಸಮಾವೃತನಾಗಿದ್ದ ಹಿರಣ್ಯಶೃಂಗನಾದ ಮೈನಾಕನು ತನ್ನ ಶಿಖರವನ್ನು ಮೇಲಕ್ಕೆ ಚಾಚಿದನು.॥101॥
ಮೂಲಮ್ - 102
ಸ ಸಾಗರಜಲಂ ಭಿತ್ವಾ ಬಭೂವಾಭ್ಯುತ್ಥಿತಸ್ತದಾ ।
ಯಥಾ ಜಲಧರಂ ಭಿತ್ವಾ ದೀಪ್ತರಶ್ಮಿರ್ದಿವಾಕರಃ ॥
ಅನುವಾದ
ಮೈನಾಕನು ಸಮುದ್ರವನ್ನು ಭೇದಿಸಿಕೊಂಡು ಹೊರ ಬಂದು ಪ್ರದೀಪ್ತವಾದ ಕಿರಣಗಳುಳ್ಳ ಸೂರ್ಯದೇವನು ಮೋಡಗಳನ್ನು ಭೇದಿಸಿಕೊಂಡು ಹೊರಬಂದು ಪ್ರಕಾಶಿಸುವಂತೆ ಪ್ರಕಾಶಿಸಿದನು.॥102॥
ಮೂಲಮ್ - 103
ಸ ಮಹಾತ್ಮಾ ಮುಹೂರ್ತೇನ ಪರ್ವತಃ ಸಲಿಲಾವೃತಃ ।
ದರ್ಶಯಾಮಾಸ ಶೃಂಗಾಣಿ ಸಾಗರೇಣ ನಿಯೋಜಿತಃ ॥
ಅನುವಾದ
ಸಮುದ್ರರಾಜನಿಂದ ಪ್ರೇರಿತನಾದ ಮಹಾತ್ಮನಾದ ಮೈನಾಕನು ನೀರಿನಿಂದ ಸುತ್ತುವರಿಯಲ್ಪಟ್ಟು ಮುಹೂರ್ತ ಮಾತ್ರದಲ್ಲಿ ತನ್ನ ಎಲ್ಲ ಶಿಖರಗಳನ್ನು ಹೊರ ಚಾಚಿದನು.॥103॥
ಮೂಲಮ್ - 104
ಶಾತಕುಂಭಮಯೈಃ ಶೃಂಗೈಃ ಸಕಿಂನರಮಹೋರಗೈಃ ।
ಆದಿತ್ಯೋದಯಸಂಕಾಶೈರಾಲಿಖದ್ಭಿರಿವಾಂಬರಮ್ ॥
ಅನುವಾದ
ಆ ಮೈನಾಕಗಿರಿ ಶಿಖರಗಳು ಭಂಗಾರದ ಕಾಂತಿಯಿಂದ ಶೋಭಿಸುತ್ತಿದ್ದವು. ಅದರಲ್ಲಿ ಕಿನ್ನರರು ವಿಹರಿಸುತ್ತಿದ್ದರು. ಮಹಾಸರ್ಪಗಳು ಹರಿದಾಡುತ್ತಿದ್ದುವು. ಉದಯಿಸಿದ ಸೂರ್ಯನ ಕಾಂತಿಯಂತೆ ಹೊಂದಿದ್ದ, ಆಕಾಶದಲ್ಲಿ ಸ್ವರ್ಣ ರೇಖೆಗಳನ್ನೆಳೆಯಲು ಹೊರಟಿದೆಯೋ ಎಂಬಂತೆ ಆ ಪರ್ವತವು ಅತ್ಯಂತ ಎತ್ತರವಾಗಿ ಶೋಭಿಸುತಿತ್ತು.॥104॥
ಮೂಲಮ್ - 105
ತಪ್ತಜಾಂಬೂನದೈಃ ಶೃಂಗೈಃ ಪರ್ವತಸ್ಯ ಸಮುತ್ಥಿತೈಃ ।
ಆಕಾಶಂ ಶಸ್ತ್ರಸಂಕಾಶಮಭವತ್ ಕಾಂಚನಪ್ರಭಮ್ ॥
ಅನುವಾದ
ಸಮುದ್ರ ಜಲದಿಂದ ಮೇಲಕ್ಕೆದ್ದು ನಿಂತ ಮೈನಾಕ ಪರ್ವತ ಶಿಖರಗಳು ಪುಟವಿಟ್ಟ ಚಿನ್ನದಂತೆ ವಿರಾಜಿಸುತ್ತಿದ್ದುವು. ಅವು ನೀಲವರ್ಣದ ಆಕಾಶದಲ್ಲಿ ಕಾಂಚನ ಪ್ರಭೆಯಂತೆ ಒಪ್ಪುತ್ತಿದ್ದವು. ॥105॥
ಮೂಲಮ್ - 106
ಜಾತರೂಪಮಯೈಃ ಶೃಂಗೈರ್ಭ್ರಾಜಮಾನೈಃ ಸ್ವಯಂಪ್ರಭೈಃ ।
ಆದಿತ್ಯಶತಸಂಕಾಶಃ ಸೋಽಭವದ್ಗಿರಿಸತ್ತಮಃ ॥
ಅನುವಾದ
ಸುವರ್ಣ ಮಯವಾದ ಶಿಖರಗಳಿಂದ ಕೂಡಿ ಮಹಾಪ್ರಭೆಯಿಂದ ಜಾಜ್ವಲ್ಯಮಾನವಾಗಿ ಪ್ರಕಾಶಿಸುತ್ತಿದ್ದ ಶ್ರೇಷ್ಠವಾದ ಮೈನಾಕ ಪರ್ವತವು ನೂರು ಸೂರ್ಯರಿಗೆ ಸದೃಶವಾಗಿತ್ತು. ॥106॥
ಮೂಲಮ್ - 107
ತಮುತ್ಥಿತಮಸಂಗೇನ ಹನುಮಾನಗ್ರತಃ ಸ್ಥಿತಮ್ ।
ಮಧ್ಯೇ ಲವಣತೋಯಸ್ಯ ವಿಘ್ನೋಽಯಮಿತಿ ನಿಶ್ಚಿತಃ ॥
ಅನುವಾದ
ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಲವಣಾಂಬುಧಿಯಿಂದ ಮೇಲೆದ್ದು ಇದಿರ್ಗಡೆ ನಿಂತಿದ್ದ ಮೈನಾಕ ಪರ್ವತದ ಶಿಖರಗಳನ್ನು ನೋಡಿ ಹನುಮಂತನು ಇದೊಂದು ತನಗೆ ವಿಘ್ನಕಾರಿಯೆಂದೇ ಭಾವಿಸಿದನು. ॥107॥
ಮೂಲಮ್ - 108
ಸ ತಮುಚ್ಛ್ರಿತಮತ್ಯರ್ಥಂ ಮಹಾವೇಗೋ ಮಹಾಕಪಿಃ ।
ಉರಸಾ ಪಾತಯಾಮಾಸ ಜೀಮೂತಮಿವ ಮಾರುತಃ ॥
ಅನುವಾದ
ಮಹಾವೇಗದಿಂದ ಸಾಗುತ್ತಿದ್ದ ಮಹಾಕಪಿಯಾದ ಹನುಮಂತನು ಬಹಳ ಎತ್ತರವಾಗಿದ್ದ ಮೈನಾಕ ಪರ್ವತದ ಶಿಖರವನ್ನು-ವಾಯುವು ಕಾರ್ಮುಗಿಲನ್ನು ಚದುರಿಸಿಬಿಡುವಂತೆ ಎದೆಯಿಂದಲೇ ಅಪ್ಪಳಿಸಿ ಕೆಳಕ್ಕುರುಳಿಸಿದನು. ॥108॥
ಮೂಲಮ್ - 109
ಸ ತಥಾ ಪಾತಿತಸ್ತೇನ ಕಪಿನಾ ಪರ್ವತೋತ್ತಮಃ ।
ಬುದ್ಧ್ವಾ ತಸ್ಯ ಕಪೇರ್ವೇಗಂ ಜಗರ್ಷ ಚ ನನಂದ ಚ ॥
ಅನುವಾದ
ಕಪಿವೀರನಿಂದ ಲೀಲಾಜಾಲವಾಗಿ ಅಪ್ಪಳಿಸಲ್ಪಟ್ಟ ಗಿರಿವರನು ಅವನ ವೇಗ-ಬಲವನ್ನು ನೋಡಿ ಆಶ್ಚರ್ಯಚಕಿತನಾಗಿ ಅಬ್ಬಾ! ಇವನ ಅಧಟೇ! ಎಂದು ಹರ್ಷದಿಂದ ಪುಲಕಿತನಾಗಿ ಆನಂದದಲ್ಲಿ ಮುಳುಗಿಹೋದನು. ॥109॥
ಮೂಲಮ್ - 110
ತಮಾಕಾಶಗತಂ ವೀರಮಾಕಾಶೇ ಸಮುಪಸ್ಥಿತಃ ।
ಪ್ರೀತೋ ಹೃಷ್ಟಮನಾ ವಾಕ್ಯಮಬ್ರವೀತ್ ಪರ್ವತಃ ಕಪಿಮ್ ॥
ಅನುವಾದ
ಆ ಮೈನಾಕ ಪರ್ವತವು ಮಾನವ ರೂಪವನ್ನು ಧರಿಸಿ, ಶಿಖರದ ಮೇಲೆ ನಿಂತು ಆಕಾಶಮಾರ್ಗವಾಗಿ ಹೋಗುತ್ತಿದ್ದ ಆ ಕಪಿವೀರನನ್ನು ಪ್ರೇಮದಿಂದ, ಸಂತೋಷಗೊಂಡ ಮನಸ್ಸಿನಿಂದ ನಮಿಸಿ ಇಂತೆಂದನು ॥110॥
ಮೂಲಮ್ - 111
ಮಾನುಷಂ ಧಾರಯನ್ ರೂಪಮಾತ್ಮನಃ ಶಿಖರೇ ಸ್ಥಿತಃ ।
ದುಷ್ಕರಂ ಕೃತವಾನ್ ಕರ್ಮ ತ್ವಮಿದಂ ವಾನರೋತ್ತಮ ॥
ಅನುವಾದ
‘‘ಓ ವಾನರಾತ್ತೋಮಾ! ನೀನು ಅತ್ಯಂತ ದುಷ್ಕರವಾದ ಕಾರ್ಯವನ್ನು ಮಾಡಿರುವೆ. ನನ್ನ ಶಿಖರದ ಮೇಲೆ ಇಳಿದು
ಸ್ವಲ್ಪ ಹೋತ್ತು ವಿಶ್ರಮಿಸಿಕೊಂಡು ಅನಂತರ ಮುಂದಕ್ಕೆ ಪಯಣಿಸು. ॥111॥
ಮೂಲಮ್ - 112
ನಿಪತ್ಯ ಮಮ ಶೃಂಗೇಷು ವಿಶ್ರಮಸ್ವ ಯಥಾಸುಖಮ್ ।
ರಾಘವಸ್ಯ ಕುಲೇ ಜಾತೈರುದಧಿಃ ಪರಿವರ್ಧಿತಃ ॥
ಅನುವಾದ
ರಾಘವನ ವಂಶದಲ್ಲಿ ಹುಟ್ಟಿದವರಿಂದಲೇ ಸಮುದ್ರರಾಜನು ಅಭಿವೃದ್ಧಿಯನ್ನು ಹೊಂದಿದ್ದಾನೆ. ಈ ಕಾರಣದಿಂದ ಸಮುದ್ರರಾಜನು ರಾಮನ ಕಾರ್ಯದಲ್ಲಿಯೇ ಆಸಕ್ತನಾಗಿರುವ ನಿನ್ನನ್ನು ಗೌರವಿಸಲು ಬಯಸಿದ್ದಾನೆ.॥112॥
ಮೂಲಮ್ - 113
ಸ ತ್ವಾಂ ರಾಮಹಿತೇ ಯುಕ್ತಂ ಪ್ರತ್ಯರ್ಚಯತಿ ಸಾಗರಃ ।
ಕೃತೇ ಚ ಪ್ರತಿಕರ್ತವ್ಯಮೇಷ ಧರ್ಮಃ ಸನಾತನಃ ॥
ಅನುವಾದ
ಉಪಕಾರವನ್ನು ಮಾಡಿವರಿಗೆ ಪ್ರತ್ಯುಪಕಾರ ಮಾಡುವುದು ಸನಾತನ ಧರ್ಮವಾಗಿದೆ. ಆದುದರಿಂದ ರಘುವಂಶೀಯರು ತನಗೆ ಮಾಡಿರುವ ಉಪಕಾರಕ್ಕೆ ಈ ರೀತಿಯಲ್ಲಿ ಪ್ರತ್ಯುಪಕಾರ ಮಾಡಲು ಸಮುದ್ರರಾಜನು ಬಯಸಿದ್ದಾನೆ. ಅವನ ಆತಿಥ್ಯವನ್ನು ಅಂಗೀಕರಿಸು. ನೀನು ಸನ್ಮಾನಕ್ಕೆ ಯೋಗ್ಯನಾಗಿರುವೆ.॥113॥
ಮೂಲಮ್ - 114
ಸೋಽಯಂ ತತ್ಪ್ರತಿಕಾರಾರ್ಥೀ ತ್ವತ್ತಃ ಸಂಮಾನಮರ್ಹತಿ ।
ತ್ವನ್ನಿಮಿತ್ತಮನೇನಾಹಂ ಬಹುಮಾನಾತ್ಪ್ರಚೋದಿತಃ ॥
ಮೂಲಮ್ - 115
ಯೋಜನಾನಾಂ ಶತಂ ಚಾಪಿ ಕಪಿರೇಷ ಖಮಾಪ್ಲುತಃ ।
ತವ ಸಾನುಷು ವಿಶ್ರಾಂತಃ ಶೇಷಂ ಪ್ರಕ್ರಮತಾಮಿತಿ ॥
ಅನುವಾದ
ನಿನ್ನ ಸಲುವಾಗಿಯೇ ಸಮುದ್ರರಾಜನು ಬಹುಮಾನ ಪೂರ್ವಕವಾಗಿನನಗೆಹೀಗೆಹೇಳಿರುವನು‘‘ಆಕಾಶಮಾರ್ಗದಲ್ಲಿ ಹಾರಿ ಬರುತ್ತಿರುವ ಕಪೀಶ್ವರನು ನೂರು ಯೋಜನಗಳನ್ನಾದರೂ ಒಂದೇ ನೆಗೆತದಲ್ಲಿ ಹಾರಬಲ್ಲನು. ಆದರೂ ಅವನು ನಿನ್ನ ಶಿಖರದಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಅನಂತರ ಉಳಿದ ಭಾಗವನ್ನು ಲಂಸಲಿ. ಓ ಕಪಿವೀರಾ! ನಾನು ನಿನ್ನಲ್ಲಿ ಪ್ರಾರ್ಥಿಸುತ್ತೇನೆ. ಇಲ್ಲಿಯೇ ಕೊಂಚ ಹೊತ್ತು ನನ್ನ ಮೇಲೆ ವಿಶ್ರಮಿಸಿ ಮುಂದಕ್ಕೆ ಪ್ರಯಾಣಮಾಡು. ॥114-115॥
ಮೂಲಮ್ - 116
ತಿಷ್ಠ ತ್ವಂ ಹರಿಶಾರ್ದೂಲ ಮಯಿ ವಿಶ್ರಮ್ಯ ಗಮ್ಯತಾಮ್ ।
ತದಿದಂ ಗಂಧವತ್ ಸ್ವಾದು ಕಂದಮೂಲಫಲಂ ಬಹು ।
ತದಾಸ್ವಾದ್ಯ ಹರಿಶ್ರೇಷ್ಠ ವಿಶ್ರಾಂತೋಽನುಗಮಿಷ್ಯಸಿ ॥
ಅನುವಾದ
‘‘ಓ ಹರಿವೀರಾ! ಇಲ್ಲಿ ಸುಗಂಧಯುಕ್ತವಾಗಿರುವ ಗೆಡ್ಡೆ-ಗೆಣಸುಗಳು ಮತ್ತು ಫಲಗಳು ಹೇರಳವಾಗಿದ್ದು ತುಂಬಾ ರುಚಿಕರವಾಗಿವೆ. ಇವೆಲ್ಲವನ್ನು ಆಸ್ವಾದಿಸಿ, ವಿಶ್ರಾಂತಿಯನ್ನು ಪಡೆದು ಅನಂತರ ಹೋಗುವೆಯಂತೆ. ॥116॥
ಮೂಲಮ್ - 117
ಅಸ್ಮಾಕಮಪಿ ಸಂಬಂಧಃ ಕಪಿಮುಖ್ಯ ತ್ವಯಾಽಸ್ತಿ ವೈ ।
ಪ್ರಖ್ಯಾತಸ್ತ್ರೀಷು ಲೋಕೇಷು ಮಹಾಗುಣಪರಿಗ್ರಹಃ ॥
ಅನುವಾದ
ಕಪಿಮುಖ್ಯನೇ! ನೀನು ಮಹಾಗುಣಗಳನ್ನು ಮೈಗೂಡಿಸಿಕೊಂಡಿರುವೆ. ಈ ಕಾರಣದಿಂದ ಮೂರು ಲೋಕಗಳಲ್ಲಿ ಖ್ಯಾತನಾಗಿರುವೆ. ಮೇಲಾಗಿ ನೀನು ನಮಗೆ ಸಂಬಂಧಿಯೂ ಆಗಬೇಕು. ॥117॥
ಮೂಲಮ್ - 118
ವೇಗವಂತಃ ಪ್ಲವಂತೋ ಯೇ ಪ್ಲವಗಾ ಮಾರುತಾತ್ಮಜ ।
ತೇಷಾಂ ಮುಖ್ಯತಮಂ ಮನ್ಯೇ ತ್ವಾಮಹಂ ಕಪಿಕುಂಜರ ॥
ಅನುವಾದ
ಓ ಕಪಿಕುಂಜರಾ! ಬಹಳ ವೇಗವಾಗಿ ಹಾರುವ ಸಾಮರ್ಥ್ಯವಿರುವ ಕಪಿಗಳೆಲ್ಲರಿಗೂ ನೀನು ಮುಖ್ಯನಾದವನು ಎಂದು ನಾನು ಭಾವಿಸುತ್ತೇನೆ. ॥118 ॥
ಮೂಲಮ್ - 119
ಅತಿಥಿಃ ಕಿಲ ಪೂಜಾರ್ಹಃ ಪ್ರಾಕೃತೋಽಪಿ ವಿಜಾನತಾ ।
ಧರ್ಮಂ ಜಿಜ್ಞಾಸಮಾನೇನ ಕಿಂ ಪುನರ್ಯಾದೃಶೋ ಮಹಾನ್ ॥
ಅನುವಾದ
ಧರ್ಮಾತ್ಮನಾದ ಬುದ್ಧಿವಂತನು ತನ್ನ ಮನೆಗೆ ಬಂದ ಅತಿಥಿಯು ಸಾಮಾನ್ಯನಾಗಿದ್ದರೂ ಅವನನ್ನು ಪೂಜಾರ್ಹನೆಂದೇ ತಿಳಿಯುತ್ತಾನೆ. ಹೀಗಿರುವಾಗ ನಿನ್ನಂತಹ ಮಹಾತ್ಮನಾದ ಅತಿಥಿಯು ಬಂದಾಗ ಪೂಜಿಸುವ ವಿಷಯದಲ್ಲಿ ಹೇಳುವುದೇನಿದೆ? ॥119 ॥
ಮೂಲಮ್ - 120
ತ್ವಂ ಹಿ ದೇವವರಿಷ್ಠಸ್ಯ ಮಾರುತಸ್ಯ ಮಹಾತ್ಮನಃ ।
ಪುತ್ರಸ್ತಸ್ಯೈವ ವೇಗೇನ ಸದೃಶಃ ಕಪಿಕುಂಜರ ॥
ಅನುವಾದ
ಓ ಕಪೀಶ್ವರಾ! ನೀನಾದರೋ ದೇವಶ್ರೇಷ್ಠನಾದ, ಮಹಾತ್ಮನಾದ ವಾಯುದೇವರ ಪುತ್ರನು; ವೇಗದಲ್ಲಿಯೂ ಅವನಿಗೆ ಸಮಾನನೇ ಆಗಿರುವೆ. ॥120 ॥
ಮೂಲಮ್ - 121
ಪೂಜಿತೇ ತ್ವಯಿ ಧರ್ಮಜ್ಞ ಪೂಜಾಂ ಪ್ರಾಪ್ನೋತಿ ಮಾರುತಃ ।
ತಸ್ಮಾತ್ತ್ವಂ ಪೂಜನೀಯೋ ಮೇ ಶೃಣು ಚಾಪ್ಯತ್ರ ಕಾರಣಮ್ ॥
ಅನುವಾದ
ಓ ಧರ್ಮಜ್ಞನೇ! ನಿನ್ನನ್ನು ಸತ್ಕರಿಸಿದರೆ ವಾಯುದೇವರನ್ನೇ ಸತ್ಕರಿಸಿದಂತಾಗುತ್ತದೆ. ನಿನಗೆ ಮಾಡಿದ ಸತ್ಕಾರವನ್ನು ವಾಯು ದೇವರು ಪಡೆದುಕೊಳ್ಳುತ್ತಾನೆ. ಆದುದರಿಂದ ನೀನು ನನಗೆ ಪೂಜನೀಯನಾಗಿರುವೆ. ಇದರ ಕಾರಣವನ್ನು ಹೇಳುತ್ತೇನೆ, ಆಲಿಸು. ॥121 ॥
ಮೂಲಮ್ - 122
ಪೂರ್ವಂ ಕೃತಯುಗೇ ತಾತ ಪರ್ವತಾಃ ಪಕ್ಷಿಣೋಽಭವನ್ ।
ತೇ ಹಿ ಜಗ್ಮುರ್ದಿಶಃ ಸರ್ವಾ ಗರುಡಾನಿಲವೇಗಿನಃ ॥
ಅನುವಾದ
ಓ ಪೂಜ್ಯನೇ! ಹಿಂದೆ ಕೃತಯುಗದಲ್ಲಿ ಪರ್ವತಗಳಿಗೆ ರೆಕ್ಕೆಗಳಿದ್ದವು. ಅವು ಗರುಡ ಪಕ್ಷಿಯಂತೆ ವೇಗಶಾಲಿಗಳಾಗಿ ಎಲ್ಲ ದಿಕ್ಕುಗಳಿಗೂ ಹಾರಿಕೊಂಡು ಹೋಗುತ್ತಿದ್ದುವು. ॥122॥
ಮೂಲಮ್ - 123
ತತಸ್ತೇಷು ಪ್ರಯಾತೇಷು ದೇವಸಂಘಾಃ ಸಹರ್ಷಿಭಿಃ ।
ಭೂತಾನಿ ಚ ಭಯಂ ಜಗ್ಮುಸ್ತೇಷಾಂ ಪತನಶಂಕಯಾ ॥
ಅನುವಾದ
ಹಾಗೆ ಸ್ವೆಚ್ಛೆಯಿಂದ ಹಾರಿಕೊಂಡು ಹೋಗುತ್ತಿರುವಾಗ ಎಂದಾದರೂ ಇವು ನಮ್ಮ ಮೇಲೆ ಬೀಳಬಹುದೆಂಬ ಸಂದೇಹದಿಂದ ದೇವತೆಗಳೂ, ಋಷಿಗಳೂ, ಸಕಲ ಪ್ರಾಣಿಗಳೂ ಭಯ ಪೀಡಿತರಾದರು. ॥123 ॥
ಮೂಲಮ್ - 124
ತತಃ ಕ್ರುದ್ಧಃ ಸಹಸ್ರಾಕ್ಷಃ ಪರ್ವತಾನಾಂ ಶತಕ್ರತುಃ ।
ಪಕ್ಷಾಂಶ್ಚಿಚ್ಛೇದ ವಜ್ರೇಣ ತತ್ರ ತತ್ರ ಸಹಸ್ರಶಃ ॥
ಅನುವಾದ
ಪರ್ವತಗಳ ಈ ಹಾರಾಟವನ್ನು ಕಂಡ ಇಂದ್ರನು ಕ್ರುದ್ಧನಾಗಿ ಅವುಗಳ ರೆಕ್ಕೆಗಳನ್ನು ವಜ್ರಾಯುಧದಿಂದ ಅವುಗಳಿದ್ದಲ್ಲೇ ಸಾವಿರಾರು ಸಂಖ್ಯೆಯಲ್ಲಿ ಕತ್ತರಿಸಿದನು. ॥124 ॥
ಮೂಲಮ್ - 125
ಸ ಮಾಮುಪಗತಃ ಕ್ರುದ್ಧೋ ವಜ್ರಮುದ್ಯಮ್ಯ ದೇವರಾಟ್ ।
ತತೋಽಹಂ ಸಹಸಾ ಕ್ಷಿಪ್ತಃ ಶ್ವಸನೇನ ಮಹಾತ್ಮನಾ ॥
ಅನುವಾದ
ಕ್ರುದ್ಧನಾದ ದೇವೇಂದ್ರನು ವಜ್ರಾಯುಧವನ್ನೆತ್ತಿಕೊಂಡು ನನ್ನ ರೆಕ್ಕೆಗಳನ್ನು ಕತ್ತರಿಸಲು ಬಳಿಗೆ ಬಂದನು. ಆ ಸಮಯಕ್ಕೆ ಸರಿಯಾಗಿ ಮಹಾತ್ಮನಾದ ನಿನ್ನ ತಂದೆ ವಾಯುದೇವರು ನನ್ನನ್ನು ಹಾರಿಸಿಕೊಂಡು ಹೋಗಿ ಸಮುದ್ರದಲ್ಲಿ ಇರಿಸಿದನು. ॥125 ॥
ಮೂಲಮ್ - 126
ಅಸ್ಮಿನ್ ಲವಣತೋಯೇ ಚ ಪ್ರಕ್ಷಿಪ್ತಃ ಪ್ಲವಗೋತ್ತಮ ।
ಗುಪ್ತಪಕ್ಷಸಮಗ್ರಶ್ಚ ತವ ಪಿತ್ರಾಭಿರಕ್ಷಿತಃ ॥
ಅನುವಾದ
ಓ ವಾನರೋತ್ತಮಾ! ನಿನ್ನ ತಂದೆಯಾದ ವಾಯುದೇವರು ನನ್ನನ್ನು ಸಮುದ್ರದಲ್ಲಿರಿಸಿ, ನನ್ನನ್ನ ಮಾತ್ರವಲ್ಲದೆ, ನನ್ನ ಸಮಗ್ರವಾದ ರೆಕ್ಕೆಗಳನ್ನು ಸಂರಕ್ಷಿಸಿದನು. ಅವನಿಂದಾಗಿ ನಾನು ಈ ಲವಣಸಮುದ್ರದಲ್ಲಿ ಭದ್ರವಾಗಿದ್ದೇನೆ. ॥126॥
ಮೂಲಮ್ - 127
ತತೋಽಹಂ ಮಾನಯಾಮಿ ತ್ವಾಂ ಮಾನ್ಯೋ ಹಿ ಮಮ ಮಾರುತಃ ।
ತ್ವಯಾ ಮೇ ಹ್ಯೇಷ ಸಂಬಂಧಃ ಕಪಿಮುಖ್ಯ ಮಹಾಗುಣಃ ॥
ಮೂಲಮ್ - 128
ಅಸ್ಮಿನ್ನೇವಂ ಗತೇ ಕಾರ್ಯೇ ಸಾಗರಸ್ಯ ಮಮೈವ ಚ ।
ಪ್ರೀತಿಂ ಪ್ರೀತಮನಾಃ ಕರ್ತುಂ ತ್ವಮರ್ಹಸಿ ಮಹಾಕಪೇ ॥
ಅನುವಾದ
ಓ ಕಪಿಮುಖ್ಯನಾದ ಮಾರುತಿಯೇ! ನಿನ್ನೊಡನೆ ನನಗೆ ನಿನ್ನ ತಂದೆಯ ಉಪಕಾರರೂಪವಾದ ಮಹಾಗುಣಯುಕ್ತವಾದ ಈ ಸಂಬಂಧವಿದೆ. ಅದರಿಂದಲೇ ನಾನು ನಿನ್ನನ್ನು ಸನ್ಮಾನಿಸುತ್ತಿದ್ದೇನೆ. ನಿನ್ನ ತಂದೆಯಂತೆ ನೀನೂ ನನಗೆ ಮಾನ್ಯನಾಗಿರುವೆ. ಓ ಮಹಾಮತಿಯಾದ ಕಪೀಶ್ವರಾ! ಇಂತಹ ಸುವರ್ಣಾವಕಾಶದಿಂದ ನೀನು ಸಂತೋಷ ಮನಸ್ಸಿನಿಂದ ಆತಿಥ್ಯವನ್ನು ಸ್ವೀಕರಿಸಿ ನನಗೂ, ಸಮುದ್ರನಿಗೂ ಆನಂದಗೊಳಿಸು.॥127-128॥
ಮೂಲಮ್ - 129
ಶ್ರಮಂ ಮೋಕ್ಷಯ ಪೂಜಾಂ ಚ ಗೃಹಾಣ ಕಪಿಸತ್ತಮ ।
ಪ್ರೀತಿಂ ಚ ಬಹು ಮನ್ಯಸ್ವ ಪ್ರೀತೋಽಸ್ಮಿ ತವ ದರ್ಶನಾತ್ ॥
ಅನುವಾದ
ಓ ಕಪಿಸತ್ತಮಾ! ನಿನ್ನ ದರ್ಶನದಿಂದಲೇ ನಾನು ಪರಮ ಪ್ರೀತನಾಗಿದ್ದೇನೆ. ಇಲ್ಲಿ ಸ್ವಲ್ಪ ವಿಶ್ರಮಿಸಿಕೊಂಡು ಶ್ರಮವನ್ನು ಪರಿಹರಿಸಿಕೊ; ನಮ್ಮ ಸತ್ಕಾರವನ್ನು ಸ್ವೀಕರಿಸು. ನಿನ್ನ ಮೇಲೆ ನನಗುಂಟಾಗಿರುವ ವಿಶ್ವಾಸವನ್ನು ಪುರಸ್ಕರಿಸು.’’ ॥129॥
ಮೂಲಮ್ - 130
ಏವಮುಕ್ತಃ ಕಪಿಶ್ರೇಷ್ಠಸ್ತಂ ನಗೋತ್ತಮಮಬ್ರವೀತ್ ।
ಪ್ರೀತೋಽಸ್ಮಿ ಕೃತಮಾತಿಥ್ಯಂ ಮನ್ಯುರೇಷೋಽಪನೀಯತಾಮ್ ॥
ಅನುವಾದ
ಹೀಗೆ ಮೈನಾಕನು ವಿನೀತನಾಗಿ ಹೇಳಲು ಕಪಿಶ್ರೇಷ್ಠನಾದ ಹನುಮಂತನು ಯಥೋಚಿತವಾಗಿ ಹೀಗೆ ನುಡಿದನು ‘‘ಎಲೈ ಮೈನಾಕನೇ! ನಿನ್ನ ಮಾತುಗಳಿಂದಲೇ ನಾನು ಸುಪ್ರೀತನಾಗಿದ್ದೇನೆ. ನಿನ್ನ ಈ ಸವಿನುಡಿಗಳಿಂದ ನೀನು ಆತಿಥ್ಯವನ್ನು ಮಾಡಿದಂತೆ ಆಗಿದೆ. ‘ಇಷ್ಟು ಪ್ರಾರ್ಥಿಸಿಕೊಂಡರೂ ಆತಿಥ್ಯವನ್ನು ಸ್ವೀಕರಿಸಲಿಲ್ಲವಲ್ಲ’ ಎಂಬ ಬೇಸರವನ್ನು ಬಿಟ್ಟುಬಿಡು. ಅನ್ಯಥಾ ಭಾವಿಸಬೇಡ.॥130॥
ಮೂಲಮ್ - 131
ತ್ವರತೇ ಕಾರ್ಯಕಾಲೋ ಮೇ ಹ್ಯಹಶ್ಚ ವ್ಯತಿವರ್ತತೇ ।
ಪ್ರತಿಜ್ಞಾ ಚ ಮಯಾ ದತ್ತಾ ನ ಸ್ಥಾತವ್ಯಮಿಹಾಂತರೇ ॥
ಅನುವಾದ
ಕಾರ್ಯದ ಸಮಯವು ನನ್ನನ್ನು ಆತುರಗೊಳಿಸುತ್ತದೆ. ಹಗಲು ಕಳೆದುಹೋಗುತ್ತಿದೆ. ‘ಮಾರ್ಗಮಧ್ಯದಲ್ಲಿ ಎಲ್ಲಿಯೂ ನಿಲ್ಲುವುದಿಲ್ಲ’ ಎಂದು ಮಿತ್ರರ ಮುಂದೆ ಪ್ರತಿಜ್ಞೆ ಮಾಡಿರುವೆನು.’’ ॥131॥
ಮೂಲಮ್ - 132
ಇತ್ಯುಕ್ತ್ವಾ ಪಾಣಿನಾ ಶೈಲಮಾಲಭ್ಯ ಹರಿಪುಂಗವಃ ।
ಜಗಾಮಾಕಾಶಮಾವಿಶ್ಯ ವೀರ್ಯವಾನ್ ಪ್ರಹಸನ್ನಿವ ॥
ಅನುವಾದ
ಕಪಿಶ್ರೇಷ್ಠನಾದ, ವೀರ್ಯವಂತನಾದ ಹನುಮಂತನು ಮೈನಾಕನಿಗೆ ಹೀಗೆ ಸಮಾಧಾನ ಹೇಳಿ, ಅವನ ಮೈ ದಡವಿ ಅವನ ಆತಿಥ್ಯವನ್ನು ಸ್ವೀಕರಿಸಿ ನಗು-ನಗುತ್ತಲೇ ಆಕಾಶಮಾರ್ಗವಾಗಿ ಮುಂದಕ್ಕೆ ಹೊರಟನು.॥132॥
ಮೂಲಮ್ - 133
ಸ ಪರ್ವತಸಮುದ್ರಾಭ್ಯಾಂ ಬಹುಮಾನಾದವೇಕ್ಷಿತಃ ।
ಪೂಜಿತಶ್ಚೋಪಪನ್ನಾಭಿರಾಶೀರ್ಭಿರನಿಲಾತ್ಮಜಃ ॥
ಅನುವಾದ
ಆಗ ಸಮುದ್ರರಾಜನೂ, ಮೈನಾಕನೂ ವಾಯುಸೂನು ಮಾರುತಿಯನ್ನು ಹೆಚ್ಚಿನ ಆದರ ಅಭಿಮಾನದಿಂದ ವೀಕ್ಷಿಸುತ್ತಿದ್ದರು. ಭಕ್ತಿತತ್ಪರರಾಗಿ ಪೂಜಿಸಿದರು. ರಾಮಕಾರ್ಯ ಸಿದ್ಧಿಗಾಗಿ ಕಾಲೋಚಿತವಾದ ಆಶೀರ್ವಾದಗಳಿಂದ ಕಾರ್ಯಸಿದ್ಧಿಯಾಗುವಂತೆ ಹರಸಿದರು. ॥133 ॥
ಮೂಲಮ್ - 134
ಅಥೋರ್ಧ್ವಂ ದೂರಮುತ್ಪತ್ಯ ಹಿತ್ವಾ ಶೈಲಮಹಾರ್ಣವೌ ।
ಪಿತುಃ ಪಂಥಾನಮಾಸ್ಥಾಯ ಜಗಾಮ ವಿಮಲೇಽಂಬರೇ ॥
ಅನುವಾದ
ಬಳಿಕ ಮಾರುತಿಯು ಪರ್ವತ-ಸಮುದ್ರ ಇಬ್ಬರಿಂದಲೂ ಬಿಳ್ಕೊಂಡು, ಮೇಲ್ಮುಖವಾಗಿ ಬಹಳ ಎತ್ತರಕ್ಕೆ ಹಾರಿ ವಾಯುಮಾರ್ಗವನ್ನು ಸೇರಿ ಆಕಾಶದಲ್ಲಿ ಪ್ರಯಾಣವನ್ನು ಮುಂದುವರಿಸಿದನು.॥134॥
ಮೂಲಮ್ - 135
ತತಶ್ಚೋರ್ಧ್ವಗತಿಂ ಪ್ರಾಪ್ಯ ಗಿರಿಂ ತಮವಲೋಕಯನ್ ।
ವಾಯುಸೂನುರ್ನಿರಾಲಂಬೇ ಜಗಾಮ ವಿಮಲೇಽಂಬರೇ ॥
ಅನುವಾದ
ಮುಂದೆ-ಮುಂದೆ ಇನ್ನು ಎತ್ತರಕ್ಕೆ ಹಾರಿ ಮೈನಾಕಪರ್ವತವನ್ನೆ ವೀಕ್ಷಿಸುತ್ತಾ ಯಾವ ಅವಲಂಬನೆಯೂ ಇಲ್ಲದೆ ನಿರ್ಮಲಾಕಾಶದಲ್ಲಿ ಹಾರಿಕೊಂಡು ಹೋಗುತ್ತಿದ್ದನು.॥135॥
ಮೂಲಮ್ - 136
ತದ್ದ್ವಿತೀಯಂ ಹನುಮತೋ ದೃಷ್ಟ್ವಾ ಕರ್ಮ ಸದುಷ್ಕರಮ್ ।
ಪ್ರಶಸಂಸುಃ ಸುರಾಃ ಸರ್ವೇ ಸಿದ್ಧಾಶ್ಚ ಪರಮರ್ಷಯಃ ॥
ಅನುವಾದ
ಹನುಮಂತನ ಅತಿದುಷ್ಕರವಾದ ಎರಡನೆಯ ಆ ಕಾರ್ಯವನ್ನು ನೋಡಿ ದೇವತೆಗಳೂ, ಮಹರ್ಷಿಗಳೂ ಮತ್ತು ಸಿದ್ಧರೂ ಮಾರುತಿಯನ್ನು ಬಹಳವಾಗಿ ಶ್ಲಾಘಿಸಿದರು. (ಮೊದಲನೆಯ ಕರ್ಮ ಪರ್ವತದ ತುದಿಯಿಂದ ಆಗಸಕ್ಕೆ ಹಾರಿದುದು. ಎರಡನೆಯದು ಮೈನಾಕನನ್ನು ಜಯಿಸಿದುದು. ಆಗಸದಲ್ಲೇ ನಿಂತು ಮೈನಾಕನನ್ನು ಮುಟ್ಟಿ, ಪರ್ವತದ ಮೇಲೆ ಇಳಿಯದೆ ಪುನಃ ತನ್ನ ವೇಗವನ್ನು ಹೆಚ್ಚಿಸಿಕೊಂಡಿದ್ದು. ಇದು ಪಕ್ಷಿಗಳಿಗೂ ಸಾಧ್ಯವಾಗದ ಕಾರ್ಯವನ್ನು ಪಕ್ಷಗಳಿಲ್ಲದವನಾದ ಹನುಮಂತನು ಮಾಡಿದುದು ನಿಜವಾಗಿ ಮಹತ್ಕಾರ್ಯವೇ ಆಗಿದೆ.)॥136॥
ಮೂಲಮ್ - 137
ದೇವತಾಶ್ಚಾಭವನ್ ಹೃಷ್ಟಾಸ್ತತ್ರಸ್ಥಾಸ್ತಸ್ಯ ಕರ್ಮಣಾ ।
ಕಾಂಚನಸ್ಯ ಸುನಾಭಸ್ಯ ಸಹಸ್ರಾಕ್ಷಶ್ಚ ವಾಸವಃ ॥
ಮೂಲಮ್ - 138
ಉವಾಚ ವಚನಂ ಶ್ರೀಮಾನ್ ಪರಿತೋಷಾತ್ ಸಗದ್ಗದಮ್ ।
ಸುನಾಭಂ ಪರ್ವತಶ್ರೇಷ್ಠಂ ಸ್ವಯಮೇವ ಶಚೀಪತಿಃ ॥
ಅನುವಾದ
ಸುವರ್ಣನಾಭನಾದ ಮೈನಾಕನು ಸಮುದ್ರದಿಂದ ಮೇಲೆದ್ದು ಹನುಮಂತನನ್ನು ಸತ್ಕರಿಸಲು ಆಹ್ವಾನಿಸಿದ್ದಕ್ಕಾಗಿ ಆ ಪ್ರದೇಶದಲ್ಲಿದ್ದ ದೇವತೆಗಳೂ ಹಾಗೂ ಸಾವಿರ ಕಣ್ಣುಗಳುಳ್ಳ ದೇವೇಂದ್ರನೂ ಪರಮ ಸಂತೋಷಗೊಂಡರು. ಧೀಮಂತನಾದ ಶಚೀಪತಿಯು ಅತಿಸಂತೋಷದಿಂದ ತಾನಾಗಿ ಗದ್ಗದ ಧ್ವನಿಯಿಂದ ಕಾಂಚನ ಶಿಖರವುಳ್ಳ ಮೈನಾಕನಿಗೆ ಹೀಗೆ ಹೇಳಿದನು ॥137-138॥
ಮೂಲಮ್ - 139
ಹಿರಣ್ಯನಾಭ ಶೈಲೇಂದ್ರ ಪರಿತುಷ್ಟೋಽಸ್ಮಿ ತೇ ಭೃಶಮ್ ।
ಅಭಯಂ ತೇ ಪ್ರಯಚ್ಛಾಮಿ ತಿಷ್ಠ ಸೌಮ್ಯ ಯಥಾಸುಖಮ್ ॥
ಅನುವಾದ
‘‘ಹಿರಣ್ಯನಾಭನೇ! ಶೈಲಶ್ರೇಷ್ಠನೇ! ನಿನ್ನ ಈ ಕಾರ್ಯದಿಂದ ನಾನು ಹೆಚ್ಚು ಪ್ರೀತನಾಗಿದ್ದೇನೆ. ನಿನಗೆ ಅಭಯವನ್ನು ಇತ್ತಿರುವೆನು. ನನ್ನಿಂದ ನಿನಗೆ ಮುಂದೆ ಯಾವ ಭಯವೂ ಇರದು. ಈ ಸ್ಥಾನದಲ್ಲೇ ನೀನು ಸುಖವಾಗಿರು. ॥139॥
ಮೂಲಮ್ - 140
ಸಾಹ್ಯಂ ಕೃತಂ ತ್ವಯಾ ಸೌಮ್ಯ ವಿಕ್ರಾಂತಸ್ಯ ಹನೂಮತಃ ।
ಕ್ರಮತೋ ಯೋಜನಶತಂ ನಿರ್ಭಯಸ್ಯ ಭಯೇ ಸತಿ ॥
ಮೂಲಮ್ - 141
ರಾಮಸ್ಯೈಷ ಹಿದೂತ್ಯೇನ ಯಾತಿ ದಾಶರಥೇರ್ಹರಿಃ ।
ಸತ್ಕ್ರಿಯಾಂ ಕುರ್ವತಾ ತಸ್ಯ ತೋಷಿತೋಽಸ್ಮಿ ಭೃಶಂ ತ್ವಯಾ ॥
ಅನುವಾದ
ಭಯಪಡುವ ಸಂದರ್ಭವಿದ್ದರೂ ಭಯವಿಲ್ಲದೆ ನೂರು ಯೋಜನಗಳನ್ನು ಹಾರಲು ಹೊರಟಿರುವ ಭಯ ರಹಿತನಾದ, ಮಹಾಪರಾಕ್ರಮಿಯಾದ ಹನುಮಂತನಿಗೆ ನೀನು ಸಹಾಯವನ್ನೆಸಗಲು ಮುಂದೆ ಬಂದಿರುವೆ. ದಶರಥ ನಂದನನಾದ ಶ್ರೀರಾಮನ ಹಿತಕ್ಕಾಗಿಯೇ ಈ ಮಾರುತಿಯು ಲಂಕೆಗೆ ಹೋಗುತ್ತಿದ್ದಾನೆ. ಅಂತಹವನನ್ನು ನೀನು ಸತ್ಕರಿಸಲು ಮುಂದೆ ಬಂದುದಕ್ಕಾಗಿ ನಾನು ಪರಮ ಸಂತುಷ್ಟನಾಗಿರುವೆನು.’’ ॥140-141॥
ಮೂಲಮ್ - 142
ತತಃ ಪ್ರಹರ್ಷಮಗಮದ್ವಿಪುಲಂ ಪರ್ವತೋತ್ತಮಃ ।
ದೇವತಾನಾಂ ಪತಿಂ ದೃಷ್ಟ್ವಾ ಪರಿತುಷ್ಟಂ ಶತಕ್ರತುಮ್ ॥
ಮೂಲಮ್ - 143
ಸ ವೈ ದತ್ತವರಃ ಶೈಲೋ ಬಭೂವಾವಸ್ಥಿತಸ್ತದಾ ।
ಹನೂಮಾಂಶ್ಚ ಮುಹೂರ್ತೇನ ವ್ಯತಿಚಕ್ರಾಮ ಸಾಗರಮ್ ॥
ಅನುವಾದ
ಸಮುದ್ರವಾಸಕ್ಕೆ ಕಾರಣನಾದ ದೇವತೆಗಳ ಒಡೆಯನಾದ ದೇವೇಂದ್ರನು ತನ್ನ ವಿಷಯದಲ್ಲಿ ಪರಿತುಷ್ಟನಾದನೆಂದು ತಿಳಿದು ಮೈನಾಕನು ಪರಮಹೃಷ್ಟನಾದನು. ದೇವೇಂದ್ರನಿಂದ ಅಭಯವನ್ನು ಪಡೆದುಕೊಂಡು ಮೈನಾಕನು ಯಾವುದೇ ಭಯವಿಲ್ಲದೆ ತಾನು ಹಿಂದಿದ್ದ ಸ್ಥಳದಲ್ಲಿಯೇ ಸುಸ್ಥಿರವಾಗಿ ನಿಂತನು. ಇತ್ತ ಹನುಮಂತನು ಆ ಸಾಗರ ಪ್ರದೇಶವನ್ನು ಒಂದು ಕ್ಷಣ ಕಾಲದಲ್ಲಿ ಅತಿಕ್ರಮಿಸಿ ಮುಂದೆ ಸಾಗಿದನು.॥142-143॥
ಮೂಲಮ್ - 144
ತತೋ ದೇವಾಃ ಸಗಂಧರ್ವಾಃ ಸಿದ್ಧಾಶ್ಚ ಪರಮರ್ಷಯಃ ।
ಅಬ್ರುವನ್ ಸೂರ್ಯಸಂಕಾಶಾಂ ಸುರಸಾಂ ನಾಗಮಾತರಮ್ ॥
ಮೂಲಮ್ - 145
ಅಯಂ ವಾತಾತ್ಮಜಃ ಶ್ರೀಮಾನ್ ಪ್ಲವತೇ ಸಾಗರೋಪರಿ ।
ಹನೂಮಾನ್ನಾಮ ತಸ್ಯ ತ್ವಂ ಮುಹೂರ್ತಂ ವಿಘ್ನಮಾಚರ ॥
ಮೂಲಮ್ - 146
ರಾಕ್ಷಸಂ ರೂಪಮಾಸ್ಥಾಯ ಸುಘೋರಂ ಪರ್ವತೋಪಮಮ್ ।
ದಂಷ್ಟ್ರಾಕರಾಲಂ ಪಿಂಗಾಕ್ಷಂ ವಕ್ತ್ರಂ ಕೃತ್ವಾ ನಭಃಸ್ಪೃಶಮ್ ॥
ಅನುವಾದ
ಬಳಿಕ ಗಂಧರ್ವರೂ, ದೇವತೆಗಳೂ, ಸಿದ್ಧರೂ, ಮಹರ್ಷಿಗಳೂ, ಸೂರ್ಯಸದೃಶಳಾದ ನಾಗಮಾತೆಯಾದ ಸುರಸೆಯನ್ನು ಕಂಡು ಹೇಳಿದರು ‘‘ವಾಯುನಂದನನೂ ತೇಜಸ್ವಿಯೂ ಆದ ಕಪಿಶ್ರೇಷ್ಠ ಹನುಮಂತನು ಸಮುದ್ರದ ಮೇಲೆ ಹಾರಿಹೋಗುತ್ತಿದ್ದಾನೆ. ಅವನಿಗೆ ನೀನು ಕ್ಷಣಕಾಲ ವಿಘ್ನವನ್ನುಂಟುಮಾಡು. ಪರ್ವತೋಪಮವಾದ ಘೋರವಾದ ರಾಕ್ಷಸಿಯ ರೂಪವನ್ನು ಧರಿಸಿ, ಕೊರೆದಾಡೆಗಳಿಂದ ಭಯಂಕರವಾಗಿ ಕಾಣುವ, ಕಂದು-ಹಳದಿ ಬಣ್ಣದ ಕಣ್ಣುಗಳಿಂದ ಕೂಡಿರುವ, ಆಕಾಶವನ್ನು ಮುಟ್ಟುವ ಮುಖದಿಂದ ಕೂಡಿ ಅವನ ಗಮನಕ್ಕೆ ವಿಘ್ನವನ್ನುಂಟು ಮಾಡು.॥144-146॥
ಮೂಲಮ್ - 147
ಬಲಮಿಚ್ಛಾಮಹೇ ಜ್ಞಾತುಂ ಭೂಯಶ್ಚಾಸ್ಯ ಪರಾಕ್ರಮಮ್ ।
ತ್ವಾಂ ವಿಜೇಷ್ಯತ್ಯುಪಾಯೇನ ವಿಷಾದಂ ವಾ ಗಮಿಷ್ಯತಿ ॥
ಅನುವಾದ
ಈ ಕಪೀಶ್ವರನ ಬಲವನ್ನು ಪರಾಕ್ರಮವನ್ನು ತಿಳಿಯಬಯಸಿದ್ದೇವೆ. ಇವನು ಉಪಾಯಾಂತರಗಳಿಂದ ನಿನ್ನನ್ನು ಜಯಿಸುತ್ತಾನೋ ಅಥವಾ ವಿಷಾದಪಡುತ್ತಾನೋ ನೋಡೋಣ.’’॥147॥
ಮೂಲಮ್ - 148
ಏವಮುಕ್ತಾ ತು ಸಾ ದೇವಿ ದೈವತೈರಭಿಸತ್ಕೃತಾ ।
ಸಮುದ್ರಮಧ್ಯೇ ಸುರಸಾ ಬಿಭ್ರತೀ ರಾಕ್ಷಸಂ ವಪುಃ ॥
ಅನುವಾದ
ಈ ವಿಧವಾಗಿ ದೇವತೆಗಳಿಂದ ಸತ್ಕೃತಳಾದ ಸುರಸೆಯು ಅವರು ಹೇಳಿದಂತೆ, ಸಮುದ್ರ ಮಧ್ಯದಲ್ಲಿ ವಿಕೃತವಾದ ರಾಕ್ಷಸಿಯ ರೂಪವನ್ನಾಂತು ನಿಂತುಕೊಂಡಳು.॥148॥
ಮೂಲಮ್ - 149
ವಿಕೃತಂ ಚ ವಿರೂಪಂ ಚ ಸರ್ವಸ್ಯ ಚ ಭಯಾವಹಮ್ ।
ಪ್ಲವಮಾನಂ ಹನೂಮಂತಮಾವೃತ್ಯೇದಮುವಾಚ ಹ ॥
ಮೂಲಮ್ - 150
ಮಮ ಭಕ್ಷ್ಯಃ ಪ್ರದಿಷ್ಟಸ್ತ್ವಮೀಶ್ವರೈರ್ವಾನರರ್ಷಭ ।
ಅಹಂ ತ್ವಾಂ ಭಕ್ಷಯಿಷ್ಯಾಮಿ ಪ್ರವಿಶೇದಂ ಮಮಾನನಮ್ ॥
ಅನುವಾದ
ಎಲ್ಲರಿಗೂ ಭಯವನ್ನುಂಟುಮಾಡುವ ವಿಕಾರವಾದ, ಘೋರ ರಾಕ್ಷಸಿಯಾಗಿ ಸುರಸಾದೇವಿಯು ಆಕಾಶಮಾರ್ಗವಾಗಿ ಹಾರಿಹೋಗುತ್ತಿದ್ದ ಹನುಮಂತನ ಮಾರ್ಗವನ್ನು ಅಡ್ಡಗಟ್ಟಿ ಇಂತೆಂದಳು ‘‘ವಾನರ ಶ್ರೇಷ್ಠನೇ! ದೇವತೆಗಳು ನಿನ್ನನ್ನು ನನಗೆ ಆಹಾರವನ್ನಾಗಿ ಕಳಿಸಿಕೊಟ್ಟಿರುತ್ತಾರೆ. ನಾನು ನಿನ್ನನ್ನು ಭಕ್ಷಿಸುವೆನು. ಈ ನನ್ನ ಮುಖದಲ್ಲಿ ಈಗಲೇ ಪ್ರವೇಶಿಸು. ಬ್ರಹ್ಮನೇ ಹಿಂದೆ ನನಗೆ ಈ ವರವನ್ನು ದಯಪಾಲಿಸಿರುವನು.’’ ॥149-150॥
ಮೂಲಮ್ - 151
ಏವಮುಕ್ತಃ ಸುರಸಯಾ ಪ್ರಾಂಜಲಿರ್ವಾನರರ್ಷಭಃ ।
ಪ್ರಹೃಷ್ಟವದನಃ ಶ್ರೀಮಾನ್ ಇದಂ ವಚನಮಬ್ರವೀತ್ ॥
ಅನುವಾದ
ಹೀಗೆ ಹೇಳಿ ಆಹಾರಕ್ಕಾಗಿ ಅವಸರಿಸುತ್ತಿದ್ದ ಸುರಸೆಯು ಬಾಯನ್ನು ಅಗಲವಾಗಿ ತೆರೆದುಕೊಂಡು ಹನುಮಂತನ ಮುಂಭಾಗದಲ್ಲಿ ನಿಂತಳು. ಆಗ ದಿವ್ಯ ಶೋಭೆಯಿಂದ ಕಂಗೊಳಿಸುವ ಕಪಿಶ್ರೇಷ್ಠ ಹನುಮಂತನು ಪ್ರಸನ್ನ ಮುಖಭಾವದಿಂದ ಕೈಜೋಡಿಸಿಕೊಂಡು ಆಕೆಗೆ ಹೇಳಿದನು ॥151॥
ಮೂಲಮ್ - 152
ರಾಮೋ ದಾಶರಥಿಃ ಶ್ರೀಮಾನ್ ಪ್ರವಿಷ್ಟೋ ದಂಡಕಾವನಮ್ ।
ಲಕ್ಷ್ಮಣೇನ ಸಹ ಭ್ರಾತ್ರಾ ವೈದೇಹ್ಯಾ ಚಾಪಿ ಭಾರ್ಯಯಾ ॥
ಅನುವಾದ
‘ತಾಯೇ! ದಶರಥಮಹಾರಾಜನ ಕುಮಾರನಾದ ಶ್ರೀರಾಮನು ತಮ್ಮನಾದ ಲಕ್ಷ್ಮಣ ಹಾಗೂ ಭಾರ್ಯೆಯಾದ ಸೀತಾದೇವಿಯೊಂದಿಗೆ ದಂಡಕಾರಣ್ಯಕ್ಕೆ ಬಂದನು. ॥152॥
ಮೂಲಮ್ - 153
ಅನ್ಯಕಾರ್ಯವಿಷಕ್ತಸ್ಯ ಬದ್ಧವೈರಸ್ಯ ರಾಕ್ಷಸೈಃ ।
ತಸ್ಯ ಸೀತಾ ಹೃತಾ ಭಾರ್ಯಾ ರಾವಣೇನ ಯಶಸ್ವಿನೀ ॥
ಅನುವಾದ
ಶ್ರೀರಾಮನ ಭಾರ್ಯೆಯಾದ, ಯಶಸ್ವಿನಿಯಾದ ಸೀತಾದೇವಿಯನ್ನು ರಾವಣನೆಂಬ ರಾಕ್ಷಸನು ಅಪಹರಿಸಿಕೊಂಡು ಹೋಗಿದ್ದಾನೆ.॥153॥
ಮೂಲಮ್ - 154
ತಸ್ಯಾಃ ಸಕಾಶಂ ದೂತೋಽಹಂ ಗಮಿಷ್ಯೇ ರಾಮಶಾಸನಾತ್ ।
ಕರ್ತುಮರ್ಹಸಿ ರಾಮಸ್ಯ ಸಾಹ್ಯಂ ವಿಷಯವಾಸಿನೀ ॥
ಅನುವಾದ
ನಾನು ಶ್ರೀರಾಮನ ದೂತನು. ನನ್ನ ಸ್ವಾಮಿಯಾದ ಶ್ರೀರಾಮನ ಆಜ್ಞಾನುಸಾರವಾಗಿ ಸೀತಾದೇವಿಯ ಬಳಿಗೆ ಹೋಗುತ್ತಿದ್ದೇನೆ. ಧರ್ಮಾತ್ಮನಾದ ಶ್ರೀರಾಮನ ಆಳ್ವಿಕೆಯಲ್ಲಿ ವಾಸಿಸುತ್ತಿರುವ ನೀನು ಈ ಸಮಯದಲ್ಲಿ ಅವನ ಕಾರ್ಯಕ್ಕೆ ಸಹಕಾರವನ್ನು ನೀಡಬೇಕು.॥154॥
ಮೂಲಮ್ - 155
ಅಥವಾ ಮೈಥಿಲೀಂ ದೃಷ್ಟ್ವಾರಾಮಂ ಚಾಕ್ಲಿಷ್ಟ ಕಾರಿಣಮ್ ।
ಆಗಮಿಷ್ಯಾಮಿ ತೇ ವಕ್ತ್ರಂ ಸತ್ಯಂ ಪ್ರತಿಶೃಣೋಮಿ ತೇ ॥
ಅನುವಾದ
ಬ್ರಹ್ಮನಿತ್ತಿರುವ ವರದಂತೆ ನಾನು ನಿನಗೆ ಆಹಾರವಾಗ ಬೇಕನ್ನುವುದಾದರೆ, ಸೀತಾದೇವಿಯನ್ನು ನೋಡಿ, ಆಕೆಯ ಕುಶಲ ವಾರ್ತೆಯನ್ನು ಕಾರ್ಯನಿರ್ವಹಣಾದಕ್ಷನಾದ ಶ್ರೀರಾಮನಿಗೆ ತಿಳಿಸಿ, ಬಳಿಕ ನಾನು ನಿನ್ನ ಬಾಯಿಗೆ ಬೀಳುತ್ತೇನೆ. ಈ ಮಾತನ್ನು ನಾನು ಸತ್ಯದ ಮೇಲೆ ಆಣೆಯಿಟ್ಟು ಹೇಳುತ್ತೇನೆ.’’॥154-155॥
ಮೂಲಮ್ - 156
ಏವಮುಕ್ತಾ ಹನುಮತಾ ಸುರಸಾ ಕಾಮರೂಪಿಣೀ ।
ಅಬ್ರವೀನ್ನಾ ತಿವರ್ತೇನ್ಮಾಂ ಕಶ್ಚಿದೇಷ ವರೋ ಮಮ ॥
ಅನುವಾದ
ಹನುಮಂತನು ಹೀಗೆ ಹೇಳಲು ಕಾಮರೂಪಿಣಿಯಾದ ಸುರಸೆಯು ಪುನಃ ಇಂತೆಂದಳು ‘‘ವಾನರೇಶ್ವರನೇ! ನನ್ನನ್ನು ಅತಿಕ್ರಮಿಸಿ ಯಾರೂ ಹೋಗಲಾರರು. ಇಂತಹ ಅಮೋಘವಾದ ವರವನ್ನು ನಾನು ಪಡೆದಿರುವೆನು.’’ ॥156॥
ಮೂಲಮ್ - 157
ತಂ ಪ್ರಯಾಂತಂ ಸಮುದ್ವೀಕ್ಷ್ಯ ಸುರಸಾ ವಾಕ್ಯಮಬ್ರವೀತ್ ।
ಬಲಂ ಜಿಜ್ಞಾಸಮಾನಾ ವೈ ನಾಗಮಾತಾ ಹನೂಮತಃ ॥
ಅನುವಾದ
ಹೀಗೆ ಹೇಳಿದರೂ ಲಕ್ಷ್ಯವಿಲ್ಲದೆ ಮುನ್ನಡೆಯುತ್ತಿದ್ದ ಹನುಮಂತನನ್ನು ನೋಡಿ, ಅವನ ಬಲ ಎಷ್ಟಿರಬಹುದೆಂದು ತಿಳಿಯುವ ಬಯಕೆಯಿಂದ ನಾಗಮಾತೆಯಾದ ಸುರಸೆಯು ಮರಳಿ ಹೀಗೆ ಹೇಳಿದಳು.॥157॥
ಮೂಲಮ್ - 158
ಪ್ರವಿಶ್ಯ ವದನಂ ಮೇಽದ್ಯ ಗಂತವ್ಯಂ ವಾನರೋತ್ತಮ ।
ವರ ಏಷ ಪುರಾ ದತ್ತೋ ಮಮ ಧಾತ್ರೇತಿ ಸತ್ವರಾ ॥
ಮೂಲಮ್ - 159
ವ್ಯಾದಾಯ ವಿಪುಲಂ ವಕ್ತ್ರಂ ಸ್ಥಿತಾ ತಾ ಮಾರುತೇಃ ಪುರಃ ।
ಏವಮುಕ್ತಃ ಸುರಸಯಾ ಕ್ರುದ್ಧೋ ವಾನರಪುಂಗವಃ ॥
ಅನುವಾದ
ಓ ವಾನರೋತ್ತಮಾ! ನನ್ನ ಮುಖವನ್ನು ಪ್ರವೇಶಿಸಿಯೇ ನೀನು ಮುಂದೆ ಹೋಗಬೇಕು. ಹಿಂದೆ ಬ್ರಹ್ಮದೇವರು ನನಗೆ ವರ ಕೊಟ್ಟಿರುವನು. ಹೀಗೆ ಹೇಳಿ ಸುರಸೆಯು ಅವಸರದಿಂದ ತನ್ನ ಬಾಯನ್ನು ಅಗಲವಾಗಿ ತೆರೆದುಕೊಂಡು ಮಾರುತಿಯ ಸಮ್ಮುಖದಲ್ಲಿ ನಿಂತುಕೊಂಡಳು. ಅದರಿಂದ ಕ್ರುದ್ಧನಾದ ಹನುಮಂತನು ಇಂತೆಂದನು.॥158-159॥
ಮೂಲಮ್ - 160
ಅಬ್ರವೀತ್ ಕುರು ವೈ ವಕ್ತ್ರಂ ಯೇನ ಮಾಂ ವಿಷಹಿಷ್ಯಸೇ ।
ಇತ್ಯುಕ್ತ್ವಾ ಸುರಸಾಂ ಕ್ರುದ್ಧೋ ದಶಯೋಜನಮಾಯತಃ ॥
ಮೂಲಮ್ - 161
ದಶಯೋಜನವಿಸ್ತಾರೋ ಬಭೂವ ಹನುಮಾಂಸ್ತದಾ ।
ತಂ ದೃಷ್ಟ್ವಾ ಮೇಘಸಂಕಾಶಂ ದಶಯೋಜನಮಾಯತಮ್ ॥
ಮೂಲಮ್ - 162
ಹನೂಮಾಂಸ್ತು ತತಃ ಕ್ರುದ್ಧಃ ತ್ರಿಂಶದ್ಯೋಜನಮಾಯತಃ ।
ಚಕಾರ ಸುರಸಾ ವಕ್ತ್ರಂ ಚತ್ವಾರಿಂಶತ್ತಥಾಯತಮ್ ॥
ಅನುವಾದ
‘‘ಎಲೈ ಸುರಸಾ! ಹಾಗಾದರೆ ನನ್ನ ಭಾರವನ್ನು ಸಹಿಸಲು ಶಕ್ಯವಾಗುವಂತೆ ಹಾಗೂ ನನ್ನನ್ನು ನುಂಗಲು ಸಾಧ್ಯವಾಗುವಂತೆ ನಿನ್ನ ಬಾಯನ್ನು ಅಗಲವಾಗಿ ತೆರೆದುಕೋ.’’ ಒಡನೆಯೇ ಸುರಸೆಯು ತನ್ನ ಬಾಯನ್ನು ಅಗಲವಾಗಿ ತೆರೆದುಕೊಂಡಳು. ಕಪಿಶ್ರೇಷ್ಠನಾದ ಹನುಮಂತನು ಕುಪಿತನಾಗಿ ಹತ್ತು ಯೋಜನಗಳಷ್ಟು ವಿಸ್ತಾರವಾಗಿ ಬೆಳೆದನು. ಮೇಘಸದೃಶನಾದ ಹನುಮಂತನು ಹತ್ತು ಯೋಜನಗಳಷ್ಟು ವಿಸ್ತಾರವಾಗಿ ಬೆಳೆದಿರುವುದನ್ನು ಕಂಡು ಸುರಸೆಯು ಇಪ್ಪತ್ತು ಯೋಜನಗಳಷ್ಟು ಅಗಲವಾಗಿ ಬಾಯಿತೆರೆದಳು. ಒಡನೆಯೇ ಹನುಮಂತನು ಮೂವತ್ತು ಯೋಜನಗಳಷ್ಟು ಬೆಳೆದನು. ಅದನ್ನು ನೋಡಿ ಸುರಸೆಯು ತನ್ನ ಮುಖವನ್ನು ನಲವತ್ತು ಯೋಜನ ವಿಸ್ತಾರವಾಗಿ ತೆರೆದುಕೊಂಡಳು.॥160-162॥
ಮೂಲಮ್ - 163
ಬಭೂವ ಹನುಮಾನ್ವೀರಃ ಪಂಚಾಶದ್ಯೋಜನೋಚ್ಛ್ರಿತಃ ।
ಚಕಾರ ಸುರಸಾ ವಕ್ತ್ರಂ ಷಷ್ಟಿ ಯೋಜನಮಾಯತಮ್ ॥
ಅನುವಾದ
ಆಗ ವೀರನಾದ ಹನುಮಂತನು ಐವತ್ತು ಯೋಜನಗಳಷ್ಟು ವಿಶಾಲವಾಗಿ ತನ್ನ ಶರೀರವನ್ನು ಬೆಳೆಸಿದನು. ಮರುಕ್ಷಣದಲ್ಲೇ ಸುರಸೆಯ ಬಾಯಿ ಅರವತ್ತು ಯೋಜನಗಳಷ್ಟು ವಿಸ್ತಾರವಾಯಿತು.॥163॥
ಮೂಲಮ್ - 164
ತಥೈವ ಹನುಮಾನ್ವೀರಃ ಸಪ್ತತೀಯೋಜನೋಚ್ಛ್ರಿತಃ ।
ಚಕಾರ ಸುರಸಾ ವಕ್ತ್ರಂ ಮಶೀತೀಯೋಜನಾಯತಮ್ ॥
ಅನುವಾದ
ಪುನಃ ಮಾರುತಿಯು ತನ್ನ ಶರೀರವನ್ನು ಎಪ್ಪತ್ತು ಯೋಜನಗಳಷ್ಟು ಅಗಲವಾಗಿಸಿದನು. ಸುರಸೆಯು ತನ್ನ ಮುಖವನ್ನು ಎಂಭತ್ತು ಯೋಜನಗಳಷ್ಟು ಅಗಲವಾಗಿಸಿದಳು. ॥164 ॥
ಮೂಲಮ್ - 165
ಹನೂಮಾನಚಲಪ್ರಖ್ಯೋ ನವತೀಯೋಜನೋಚ್ಛ್ರಿರತಃ ।
ಚಕಾರ ಸುರಸಾ ವಕ್ತ್ರಂ ಶತಯೋಜನಮಾಯತಮ್ ॥
ಅನುವಾದ
ಆಗ ಹನುಮಂತನ ಶರೀರವು ತೊಂಭತ್ತು ಯೋಜನಗಳಷ್ಟು ದೊಡ್ಡದಾಯಿತು. ಅದಕ್ಕೆ ಅನುಗುಣವಾಗಿ ಸುರಸೆಯ ಆಸ್ಯವು ನೂರು ಯೋಜನಗಳಷ್ಟು ವಿಸ್ತಾರವಾಯಿತು. ॥165 ॥
ಮೂಲಮ್ - 166
ತದ್ದೃಷ್ಟ್ವಾ ವ್ಯಾದಿತಂ ತ್ವಾಸ್ಯಂ ವಾಯುಪುತ್ರಃ ಸುಬುದ್ಧಿಮಾನ್ ।
ದೀರ್ಘಜಿಹ್ವಂ ಸುರಸಯಾ ಸುಭೀಮಂ ನರಕೋಪಮಮ್ ॥
ಮೂಲಮ್ - 167
ಸ ಸಂಕ್ಷಿಪ್ಯಾತ್ಮನಃ ಕಾಯಂ ಜೀಮೂತ ಇವ ಮಾರುತಿಃ ।
ತಸ್ಮಿನ್ಮುಹೂರ್ತೇ ಹನೂಮಾನ್ಬಭೂವಾಙ್ಗುಷ್ಠ ಮಾತ್ರಕಃ ॥
ಅನುವಾದ
ನೀಳವಾದ ನಾಲಿಗೆಯಿಂದ ಕೂಡಿದ್ದ, ನರಕ ಸದೃಶವಾಗಿದ್ದ, ಅತ್ಯಂತ ಭಯಂಕರವಾಗಿದ್ದ, ನೂರು ಯೋಜನಗಳಷ್ಟು ಅಗಲವಾಗಿದ್ದ ಸುರಸೆಯ ಮುಖವನ್ನು ನೋಡಿ, ಬುದ್ಧಿವಂತನಾದ ಮಾರುತಿಯು ಮೇಘದಷ್ಟು ವಿಶಾಲವಾಗಿದ್ದ ತನ್ನ ದೊಡ್ಡದಾದ ಶರೀರವನ್ನು ತುಂಬಾ ಸಣ್ಣದಾಗಿಸಿ, ಹೆಬ್ಬೆರಳಷ್ಟು ಗಾತ್ರದವನಾದನು.॥166-167॥
ಮೂಲಮ್ - 168
ಸೋಽಭಿಪತ್ಯಾಶು ತದ್ವಕ್ತ್ರಂ ನಿಷ್ಪತ್ಯ ಚ ಮಹಾಜವಃ ।
ಅಂತರಿಕ್ಷೇ ಸ್ಥಿತಃ ಶ್ರೀಮಾನಿದಂ ವಚನಮಬ್ರವೀತ್ ॥
ಅನುವಾದ
ಮಹಾಬಲಸಂಪನ್ನನಾದ ಆಂಜನೇಯನು ಕ್ಷಣಮಾತ್ರದಲ್ಲಿ ಸುರಸೆಯ ಬಾಯನ್ನು ಹೊಕ್ಕು ಮರುಕ್ಷಣದಲ್ಲಿ ಹೊರಬಂದು ಅಂತರಿಕ್ಷದಲ್ಲಿ ನಿಂತು ಆಕೆಗೆ ಹೇಳಿದನು-॥168॥
ಮೂಲಮ್ - 169
ಪ್ರವಿಷ್ಟೋಽಸ್ಮಿ ಹಿ ತೇ ವಕ್ತ್ರಂ ದಾಕ್ಷಾಯಣಿ ನಮೋಽಸ್ತು ತೇ ।
ಗಮಿಷ್ಯೇ ಯತ್ರ ವೈದೇಹೀ ಸತ್ಯಂಚಾಸೀದ್ವರಸ್ತವ ॥
ಅನುವಾದ
‘‘ಎಲೈ ದಾಕ್ಷಾಯಣಿ! ನಿನಗೆ ನಮಸ್ಕರಿಸುತ್ತೇನೆ. ನಿನ್ನ ಮಾತಿನಂತೆ ನಾನು ನಿನ್ನ ಮುಖವನ್ನು ಪ್ರವೇಶಿಸಿದೆನಲ್ಲ! ವೈದೇಹಿಯಿರುವ ಸ್ಥಳಕ್ಕೆ ನಾನಿನ್ನು ಹೋಗುತ್ತೇನೆ. ನಾನು ಹೀಗೆ ಮಾಡಿದುದರಿಂದ ಬ್ರಹ್ಮನ ವರವು ನೆರವೇರಿ ಸತ್ಯವಾಯಿತಲ್ಲ!’’॥169॥
ಮೂಲಮ್ - 170
ತಂ ದೃಷ್ಟ್ವಾವದನಾನ್ಮುಕ್ತಂ ಚಂದ್ರಂ ರಾಹುಮುಖಾದಿವ ।
ಅಬ್ರವೀತ್ ಸುರಸಾ ದೇವೀ ಸ್ವೇನ ರೂಪೇಣ ವಾನರಮ್ ॥
ಅನುವಾದ
ರಾಹುವಿನಿಂದ ಮುಕ್ತನಾದ ಚಂದ್ರನಂತೆ, ತನ್ನ ಬಾಯಿಂದ ಹೊರಬಂದು ಆಕಾಶದಲ್ಲಿ ಪ್ರಕಾಶಮಾನವಾಗಿ ನಿಂತಿದ್ದ ಮಾರುತಿಯನ್ನು ನೋಡಿ ಸುರಸೆಯು ನಿಜರೂಪವನ್ನು ತಾಳಿ ಹನುಮಂತನ ಬಳಿ ಇಂತೆಂದಳು.॥170॥
ಮೂಲಮ್ - 171
ಅರ್ಥಸಿದ್ಧ್ಯೈ ಹರಿಶ್ರೇಷ್ಠ ಗಚ್ಛ ಸೌಮ್ಯ ಯಥಾಸುಖಮ್ ।
ಸಮಾನಯಸ್ವ ವೈದೇಹೀಂ ರಾಘವೇಣ ಮಹಾತ್ಮನಾ ॥
ಅನುವಾದ
‘‘ಸೌಮ್ಯನಾದ ಓ ಹರಿಶ್ರೇಷ್ಠಾ! ಕಾರ್ಯಸಿದ್ಧಿಗಾಗಿ ಮುಂದೆ ಸುಖವಾಗಿ ಪ್ರಯಾಣ ಮಾಡು. ಮಹಾತ್ಮನಾದ ಶ್ರೀರಾಮನೊಡನೆ ಸೀತಾದೇವಿಯನ್ನು ಸೇರಿಸು.’’॥171॥
ಮೂಲಮ್ - 172
ತತ್ ತೃತೀಯಂ ಹನುಮತೋ ದೃಷ್ಟ್ವಾ ಕರ್ಮ ಸುದುಷ್ಕರಮ್ ।
ಸಾಧು ಸಾಧ್ವಿತಿ ಭೂತಾನಿ ಪ್ರಶಶಂಸುಸ್ತದಾ ಹರಿಮ್ ॥
ಅನುವಾದ
ಆಗ ಹನುಮಂತನ ಕಷ್ಟಸಾಧ್ಯವಾದ ಈ ಮೂರನೆಯ ಸಾಹಸ ಕಾರ್ಯವನ್ನು ನೋಡಿ ಎಲ್ಲ ಪ್ರಾಣಿಗಳು ‘ಸಾಧು! ಸಾಧು!!’ ಎಂದು ಹೇಳುತ್ತಾ ಪ್ರಶಂಸಿಸಿದವು.॥172॥
ಮೂಲಮ್ - 173
ಸ ಸಾಗರ ಮನಾಧೃಷ್ಯಂ ಅಭೇತ್ಯು ವರುಣಾಲಯಮ್ ।
ಜಗಾಮಾಕಾಶಮಾವಿಶ್ಯ ವೇಗೇನ ಗರುಡೋಪಮಃ ॥
ಅನುವಾದ
ಅನಂತರ ಗರುಡಸದೃಶನಾದ ಹನುಮಂತನು ಸಾಮಾನ್ಯರಿಂದ ದಾಟಲು ಅಸಾಧ್ಯವಾದ ವರುಣಾಲಯವಾದ ಸಾಗರದ ಮೇಲ್ಭಾಗಕ್ಕೆ ಜಿಗಿದು ಆಕಾಶವನ್ನು ಸೇರಿ ದಕ್ಷಿಣದ ಕಡೆಗೆ ವೇಗವಾಗಿ ಪಯಣವನ್ನು ಬೆಳೆಸಿದನು.॥173॥
ಮೂಲಮ್ - 174
ಸೇವಿತೇ ವಾರಿಧಾರಾಭಿಃ ಪತಗೈಶ್ಚ ನಿಷೇವಿತೇ ।
ಚರಿತೇ ಕೈಶಿಕಾಚಾರ್ಯೈರೈರಾವತನಿಷೇವಿತೇ ॥
ಮೂಲಮ್ - 175
ಸಿಂಹ ಕುಂಜರ ಶಾರ್ದೂಲ ಪತಗೋರಗವಾಹನೈಃ ।
ವಿಮಾನೈಃ ಸಂಪತದ್ಭಿಶ್ಚ ವಿಮಲೈಃ ಸಮಲಂಕೃತೇ ॥
ಮೂಲಮ್ - 176
ವಜ್ರಾಶನಿಸಮಾಘಾತೈಃ ಪಾವಕೈರುಪಶೋಭಿತೇ ।
ಕೃತಪುಣ್ಯೈರ್ಮಹಾಭಾಗೈಃ ಸ್ವರ್ಗಜಿದ್ಭಿರಲಂಕೃತೇ ॥
ಮೂಲಮ್ - 177
ವಹತಾ ಹವ್ಯಮತ್ಯರ್ಥಂ ಸೇವಿತೇ ಚಿತ್ರಭಾನುನಾ ।
ಗ್ರಹನಕ್ಷತ್ರ ಚಂದ್ರಾರ್ಕತಾರಾಗಣವಿಭೂಷಿತೇ ॥
ಮೂಲಮ್ - 178
ಮಹರ್ಷಿಗಣಗಂಧರ್ವನಾಗಯಕ್ಷ ಸಮಾಕುಲೇ ।
ವಿವಿಕ್ತೇ ವಿಮಲೇ ವಿಶ್ವೇ ವಿಶ್ವಾವಸುನಿಷೇವಿತೇ ॥
ಮೂಲಮ್ - 179
ದೇವರಾಜಗಜಾಕ್ರಾಂತೇ ಚಂದ್ರಸೂರ್ಯಪಥೇ ಶಿವೇ ।
ವಿತಾನೇ ಜೀವಲೋಕಸ್ಯ ವಿತತೇ ಬ್ರಹ್ಮನಿರ್ಮಿತೇ ॥
ಮೂಲಮ್ - 180
ಬಹುಶಃ ಸೇವಿತೇ ವೀರೈರ್ವಿಧ್ಯಾಧರಗಣೈರ್ವರೈಃ ।
ಜಗಾಮ ವಾಯುಮಾರ್ಗೇ ಚ ಗರುತ್ಮಾನಿವ ಮಾರುತಿಃ ॥
ಅನುವಾದ
ವಾಯುಪುತ್ರ ಮಾರುತಿಯು ಪಯಣಿಸುತ್ತಿದ್ದ ಆ ವಾಯು ಮಾರ್ಗವು ನೀರಿನ ಧಾರೆಗಳಿಂದ ವ್ಯಾಪ್ತವಾಗಿದ್ದು, ನಾನಾ ವಿಧವಾದ ಪಕ್ಷಿಗಳಿಂದ ಸೇವಿಸಲ್ಪಡುತ್ತಿತ್ತು. ಗಾನ-ನೃತ್ಯಾದಿಗಳಿಗೆ ಆಚಾರ್ಯರಾದ ತುಂಬುರು ಮೊದಲಾದ ಗಂಧರ್ವರಿಂದ ತುಂಬಿಹೋಗಿತ್ತು. ಐರಾವತವೆಂಬ ಇಂದ್ರನ ಆನೆಯಿಂದ ಸೇವಿಸಲ್ಪಡುತಿತ್ತು. ಸಿಂಹ, ಗಜ, ಶಾರ್ದೂಲ, ಪಕ್ಷಿ, ಸರ್ಪ, ಮುಂತಾದ ದೇವತೆಗಳ ವಾಹನಗಳಿಂದಲೂ, ಹಾರಾಡುತ್ತಿದ್ದ ನಿರ್ಮಲ ವಿಮಾನಗಳಿಂದಲೂ ಸಮಲಂಕೃತವಾಗಿತ್ತು. ವಜ್ರಾಯುಧದಪ್ರಹಾರಗಳಿಂದಲೂ, ಸಿಡಿಲುಗಳ ಸಿಡಿತದಿಂದ ಹುಟ್ಟಿದ ಅಗ್ನಿಯಿಂದ ಪ್ರಕಾಶಮಾನವಾಗಿ ಕಾಣುತಿತ್ತು. ಹನುಮಂತನು ಪಯಣಿಸುತ್ತಿದ್ದ ವಾಯುಮಾರ್ಗವನ್ನು ಪುಣ್ಯಾತ್ಮರಾದ, ಮಹಾಭಾಗ್ಯಶಾಲಿಗಳಾದ, ಸ್ವರ್ಗವನ್ನು ಜಯಿಸಿರುವ ಮಹಾ ಪುರುಷರು ಆಶ್ರಯಿಸಿದ್ದರು. ಅದು ದೇವತೆಗಳಿಗೆ ಅರ್ಪಿಸಿದ ಹವಿಸ್ಸನ್ನು ಹೊತ್ತುಕೊಂಡು ಹೋಗುತ್ತಿರುವ ಹವ್ಯವಾಹನಿಗೆ ಮಾರ್ಗವಾಗಿತ್ತು. ಗ್ರಹ-ನಕ್ಷತ್ರಗಳಿಂದಲೂ, ಸೂರ್ಯ-ಚಂದ್ರರಿಂದಲೂ, ತಾರಾಗಣಗಳಿಂದಲೂ ವಿಭೂಷಿತವಾಗಿತ್ತು. ಮಹರ್ಷಿಗಡಣಗಳಿಂದಲೂ ಗಂಧರ್ವ-ನಾಗ-ಯಕ್ಷರಿಂದಲೂ ವ್ಯಾಪ್ತವಾಗಿತ್ತು. ಅದು ವಿಲಕ್ಷಣವಾಗಿಯೂ, ವಿಶಾಲವಾಗಿಯೂ, ಶುಭ್ರವಾಗಿಯೂ ಇತ್ತು. ವಿಶ್ವಾವಸುವೆಂಬ ಗಂಧರ್ವ ರಾಜನು ಅದನ್ನು ಆಶ್ರಯಿಸಿದ್ದನು. ದೇವರಾಜನ ಆನೆಗಳಿಂದ ಆಕ್ರಮಿಸಲ್ಪಟ್ಟ ಆ ವಾಯುಮಾರ್ಗವು ಚಂದ್ರ-ಸೂರ್ಯರು ಸಂಚರಿಸುವ ಪಥವಾಗಿತ್ತು. ಅದು ಶುಭಕರವಾಗಿದ್ದು, ಜೀವಲೋಕಕ್ಕೆ ಮೇಲು ಛಾವಣಿಯಂತಿತ್ತು. ಬ್ರಹ್ಮನಿಂದಲೇ ನಿರ್ಮಿಲಸ್ಪಟ್ಟ ಆ ವಾಯು ಮಾರ್ಗವು ಮಲರಹಿತವಾಗಿತ್ತು. ಅನೇಕ ವೀರರಿಂದ ಸೇವಿಸಲ್ಪಟ್ಟು, ವಿದ್ಯಾಧರರಿಂದ ವ್ಯಾಪ್ತವಾಗಿತ್ತು. ಅಂತಹ ಮನೋಹರವಾದ ವಾಯುಮಾರ್ಗದಲ್ಲಿ ಗರುಡನಂತೆ ವಾಯುನಂದನನು ಹಾರಿಕೊಂಡು ಹೋಗುತ್ತಿದ್ದನು. ॥174-180 ॥
ಮೂಲಮ್ - 181
ಹನೂಮಾನ್ ಮೇಘಜಾಲಾನಿ ಪ್ರಕರ್ಷನ್ ಮಾರುತೋ ಯಥಾ ।
ಕಾಲಾಗರುಸವರ್ಣಾನಿ ರಕ್ತಪೀತಸಿತಾನಿ ಚ ॥
ಮೂಲಮ್ - 183
ಕಪಿನಾ ಕೃಷ್ಯಮಣಾನಿ ಮಹಾಭ್ರಾಣಿ ಚಕಾಶಿರೇ ।
ಪ್ರವಿಶನ್ನಭ್ರಜಾಲಾನಿ ನಿಷ್ಪತಂಶ್ಚ ಪುನಃ ಪುನಃ ॥
ಅನುವಾದ
ವಾಯುದೇವರಂತೆ ಆಂಜನೇಯನು ಕಪ್ಪಾಗಿಯೂ, ಬಿಳುಪಾಗಿಯೂ, ಕೆಂಪಾಗಿಯೂ, ಹಳದಿಯಾಗಿಯೂ ಇದ್ದ ಮೇಘಸಮೂಹಗಳನ್ನು ತನ್ನೊಡನೆ ಸೆಳೆದುಕೊಂಡು ಹೋಗುತ್ತಿದ್ದನು. ಕಪೀಶ್ವರನಿಂದ ಸೆಳೆಯಲ್ಪಡುತ್ತಿದ್ದ ಆ ಮೇಘಗಳು ಅತ್ಯಂತ ಪ್ರಕಾಶಮಾನವಾಗಿ ಕಾಣುತ್ತಿದ್ದವು. ಕ್ಷಣ-ಕ್ಷಣಕ್ಕೂ ಮೇಘಗಳಲ್ಲಿ ಅಡಗಿ - ಹೊರ ಬರುತ್ತಿದ್ದ ಹನುಮಂತನು ವರ್ಷಾಕಾಲದಲ್ಲಿ ಮೇಘಗಳೆಡೆಯಲ್ಲಿ ಸಂಚರಿಸುವ ಚಂದ್ರನಂತೆ ಪ್ರಕಾಶಿಸುತ್ತಿದ್ದನು.॥181-182॥
ಮೂಲಮ್ - 183
ಪ್ರಾವೃಷೀಂದುರಿವಾಭಾತಿ ನಿಷ್ಪತನ್ ಪ್ರವಿಶಂಸ್ತದಾ ।
ಪ್ರದೃಶ್ಯಮಾನಃ ಸರ್ವತ್ರ ಹನುಮಾನ್ ಮಾರುತಾತ್ಮಜಃ ।
ಭೇಜೇಽಂಬರಂ ನಿರಾಲಂಬಂ ಲಂಬಪಕ್ಷ ಇವಾದ್ರಿರಾಟ್ ॥
ಅನುವಾದ
ವಾಯುಪುತ್ರನಾದ ಹನುಮಂತನು ರೆಕ್ಕೆಗಳನ್ನು ಹೊಂದಿರವ ಪರ್ವತರಾಜನಂತೆ, ನಿರಾಲಂಬನಾಗಿ ಆಕಾಶದಲ್ಲಿ ಹಾರಿ ಹೋಗುತ್ತಿರುವಾಗ ಎಲ್ಲೆಡೆಗಳಲ್ಲಿ ಅವನೇ ಗೋಚರಿಸಿದನು.॥183॥
ಮೂಲಮ್ - 184
ಪ್ಲವಮಾನಂ ತು ತಂ ದೃಷ್ಟ್ವಾ ಸಿಂಹಿಕಾ ನಾಮ ರಾಕ್ಷಸೀ ।
ಮನಸಾ ಚಿಂತಯಾಮಾಸ ಪ್ರವೃದ್ಧಾ ಕಾಮರೂಪಿಣೀ ॥
ಅನುವಾದ
ಹೀಗೆ ಹಾರಿಕೊಂಡು ದಕ್ಷಿಣ ದಿಕ್ಕಿಗೆ ಹೋಗುತ್ತಿದ್ದ ಹನುಮಂತನನ್ನು ಕಾಮರೂಪಿಣಿಯಾದ, ಬೃಹದಾಕಾರವಾಗಿದ್ದ ‘ಸಿಂಹಿಕೆ’ ಎಂಬ ರಾಕ್ಷಸಿಯು ನೋಡಿ ಮನಸ್ಸಿನಲ್ಲೇ ಯೋಚಿಸಿದಳು.॥184॥
ಮೂಲಮ್ - 185
ಅದ್ಯ ದೀರ್ಘಸ್ಯ ಕಾಲಸ್ಯ ಭವಿಷ್ಯಾಮ್ಯಹಮಾಶಿತಾ ।
ಇದಂ ಹಿ ಮೇ ಮಹತ್ಸತ್ತ್ವಂ ಚಿರಸ್ಯ ವಶಮಾಗತಮ್ ॥
ಅನುವಾದ
ಬಹಳ ಕಾಲದ ಮೇಲೆ ನನಗಿಂದು ಒಳ್ಳೆಯ ಭೋಜನವು ದೊರಕಿದೆ. ಬಹಳ ಕಾಲಾನಂತರ ಇದೊಂದು ಮಹಾಪ್ರಾಣಿಯು ನನಗೆ ದಕ್ಕಲಿದೆ.’॥185॥
ಮೂಲಮ್ - 186
ಇತಿ ಸಂಚಿಂತ್ಯ ಮನಸಾ ಛಾಯಾಮಸ್ಯ ಸಮಾಕ್ಷಿಪತ್ ।
ಛಾಯಾಯಾಂ ಗೃಹ್ಯಮಾಣಾಯಾಂ ಚಿಂತಯಾಮಾಸ ವಾನರಃ ॥
ಅನುವಾದ
ಹೀಗೆ ಯೋಚಿಸಿದ ಸಿಂಹಕೆಯು ಸಮುದ್ರದ ಮೇಲೆ ಬಿದ್ದದ್ದ ಹನುಮಂತನ ನೆರಳನ್ನು ಹಿಡಿದುಕೊಂಡಳು. ಆ ಛಾಯಾ ಗ್ರಹಣದಿಂದ ನಡೆ ಕುಗ್ಗಿದ ಹನುಮಂತನು ಯೋಚಿಸತೊಡಗಿದನು.॥186॥
ಮೂಲಮ್ - 187
ಸಮಾಕ್ಷಿಪ್ತೋಽಸ್ಮಿ ಸಹಸಾ ಪಂಗೂಕೃತಪರಾಕ್ರಮಃ ।
ಪ್ರತಿಲೋಮೇನ ವಾತೇನ ಮಹಾನೌರಿವ ಸಾಗರೇ ॥
ಅನುವಾದ
‘‘ಎದುರುಗಾಳಿಯಿಂದ ಸಮುದ್ರದಲ್ಲಿ ದೊಡ್ಡ ಹಡಗಿನ ವೇಗವೂ ಕಡಿಮೆಯಾಗುವಂತೆ-ನನ್ನ ಪರಾಕ್ರಮವೂ ಕಡಿಮೆಯಾಗುತ್ತಿದೆಯಲ್ಲ!’’॥187॥
ಮೂಲಮ್ - 188
ತಿರ್ಯಗೂರ್ಧ್ವಮಧಶ್ಚೈವ ವೀಕ್ಷಮಾಣಸ್ತತಃ ಕಪಿಃ ।
ದದರ್ಶ ಸ ಮಹತ್ ಸತ್ತ್ವಮುತ್ಥಿತಂ ಲವಣಾಂಭಸಿ ॥
ಅನುವಾದ
ಹೀಗೆ ಯೋಚಿಸಿ ತನ್ನನ್ನು ಹಿಂದಕ್ಕೆ ಸೆಳೆಯುತ್ತಿರುವ ಪ್ರಾಣಿಯು ಯಾವುದು ಎಂದು ತಿಳಿಯಲು ಅಕ್ಕ-ಪಕ್ಕಗಳಲ್ಲಿ, ಮೇಲೆ-ಕೆಳಗೆ ಎಲ್ಲೆಡೆ ದೃಷ್ಟಿಯನ್ನು ಹಾಯಿಸಿದನು. ಸಮುದ್ರದ ಕಡೆಗೆ ನೋಡಿದಾಗ ಸಮುದ್ರ ಮಧ್ಯದಿಂದ ಮೇಲೆದ್ದು ಬಂದ ಒಂದು ಮಹಾಪ್ರಾಣಿಯನ್ನು ವೀಕ್ಷಿಸಿದನು. ॥188 ॥ವಿಕಾರವಾದ ಮುಖವುಳ್ಳ ಆ ಪ್ರಾಣಿಯನ್ನು ನೋಡಿ ಮಾರುತಿಯು ತನ್ನಲ್ಲಿ ಹೀಗೆ ಚಿಂತಿಸಿದನು ‘ಕಪಿರಾಜ ಸುಗ್ರೀವನು ಹೇಳಿದಂತೆ,*
ಟಿಪ್ಪನೀ
- ಸುಗ್ರೀವನು ದಕ್ಷಿಣ ದಿಕ್ಕಿಗೆ ಹೋಗುವ ವಾನರನಾಯಕರಿಗೆ ಆ ಪ್ರದೇಶವನ್ನು ಪರಿಚಯಿಸುವಾಗ ಹೀಗೆ ಹೇಳಿದ್ದನು
ದಕ್ಷಿಣಸ್ಯ ಸಮುದ್ರಸ್ಯ ಮಧ್ಯೇ ತಸ್ಯ ತು ರಾಕ್ಷಸೀ ।
ಅಂಗಾರಕೇತಿ ವಿಖ್ಯಾತಾ ಛಾಯಾಮಾಕೃಷ್ಯ ಭೋಜನೀ ॥ 26 ॥
(ಕಿಷ್ಕಿಂಧಾಕಾಂಡ. ಸ-41)
ಮೂಲಮ್ - 189
ತದ್ದೃಷ್ಟ್ವಾ ಚಿಂತಯಾಮಾಸ ಮಾರುತಿರ್ವಿಕೃತಾನನಮ್ ।
ಕಪಿರಾಜೇನ ಕಥಿತಂ ಸತ್ತ್ವಮದ್ಭುತದರ್ಶನಮ್ ॥
ಮೂಲಮ್ - 190
ಛಾಯಾಗ್ರಾಹಿ ಮಹಾವೀರ್ಯಂ ತದಿದಂ ನಾತ್ರ ಸಂಶಯಃ ।
ಸ ತಾಂ ಬುದ್ಧ್ವಾರ್ಥತತ್ತ್ವೇನ ಸಿಂಹಿಕಾಂ ಮತಿಮಾನ್ ಕಪಿಃ ॥
ಅನುವಾದ
ಪರಮಾದ್ಭುತವಾಗಿ ಕಾಣುವ, ಮಹಾಶಕ್ತಿಯಿಂದ ಕೂಡಿದ, ಛಾಯೆಯ ಮೂಲಕ ಪ್ರಾಣಿಗಳನ್ನು ಸೆಳೆದುಕೊಳ್ಳುವ ಸಾಮರ್ಥ್ಯವುಳ್ಳ ಮಹಾಸತ್ತ್ವವು ಇದೇ ಆಗಿರಬೇಕು. ಇದರಲ್ಲಿ ಸಂಶಯವೇ ಇಲ್ಲ.’ ಪ್ರಜ್ಞಾಶಾಲಿಯಾದ ಹನುಮಂತನು ಅದನ್ನು ಸಿಂಹಿಕೆಯೇ ಎಂದು ಗುರುತಿಸಿದನು. ॥189-190॥
ಮೂಲಮ್ - 191
ವ್ಯವರ್ಧತ ಮಹಾಕಾಯಃ ಪ್ರಾವೃಷೀವ ಬಲಾಹಕಃ ।
ತಸ್ಯ ಸಾ ಕಾಯಮುದ್ವೀಕ್ಷ್ಯ ವರ್ಧಮಾನಂ ಮಹಾಕಪೇಃ ॥
ಮೂಲಮ್ - 192
ವಕ್ತ್ರಂ ಪ್ರಸಾರಯಾಮಾಸ ಪಾತಾಲಾಂತರಸಂನಿಭಮ್ ।
ಘನರಾಜೀವ ಗರ್ಜಂತೀ ವಾನರಂ ಸಮಭಿದ್ರವತ್ ॥
ಅನುವಾದ
ಆಗ ಅವನು ವರ್ಷಾ ಕಾಲದ ಮೇಘದಂತೆ ತನ್ನ ಶರೀರವನ್ನು ಹಿಗ್ಗಿಸಿದನು. ಸಿಂಹಿಕೆಯು ಬೆಳೆಯುತ್ತಿದ್ದ ಮಹಾಕಪಿಯ ಶರೀರವನ್ನು ನೋಡಿ ಆಕಾಶ-ಪಾತಾಳ ವ್ಯಾಪಿಸುವಷ್ಟು ವಿಶಾಲವಾದ ತನ್ನ ಬಾಯನ್ನ ತೆರೆದುಕೊಂಡು ಮೇಘಗಳಂತೆ ಗರ್ಜಿಸುತ್ತಾ ಹನುಮಂತನ ಕಡೆಗೆ ಧಾವಿಸಿದಳು.॥191-192॥
ಮೂಲಮ್ - 193
ಸ ದದರ್ಶ ತತಸ್ತಸ್ಯಾ ವಿವೃತಂ ಸುಮಹನ್ಮುಖಮ್ ।
ಕಾಯಮಾತ್ರಂ ಚ ಮೇಧಾವೀ ಮರ್ಮಾಣಿ ಚ ಮಹಾಕಪಿಃ ॥
ಮೂಲಮ್ - 194
ಸ ತಸ್ಯಾ ವಿವೃತೇ ವಕ್ತ್ರೇ ವಜ್ರಸಂಹನನಃ ಕಪಿಃ ।
ಸಂಕ್ಷಿಪ್ಯ ಮುಹುರಾತ್ಮಾನಂ ನಿಪಪಾತ ಮಹಾಬಲಃ ॥
ಅನುವಾದ
ಆಗ ಮೇಧಾವಿಯಾದ ಹನುಮಂತನು ತನ್ನನ್ನು ನುಂಗಲು ದೊಡ್ಡದಾಗಿ ತೆರೆದುಕೊಂಡಿದ್ದ ಅವಳ ವಿಶಾಲವಾದ ಮುಖವನ್ನು, ಅವಳ ದೇಹ ಪ್ರಮಾಣವನ್ನು ವೀಕ್ಷಿಸಿದನು. ಮರ್ಮಸ್ಥಳಗಳನ್ನು ಸಂಕ್ಷೇಪಗೊಳಿಸಿ ವಜ್ರದೇಹಿಯಾದ ಮಹಾಬಲನಾದ ಹನುಮಂತನು ತನ್ನ ಶರೀರವನ್ನು ಕಿರಿದಾಗಿಸಿಕೊಂಡು ದೊಡ್ಡದಾಗಿ ತೆರೆದುಕೊಂಡಿದ್ದ ರಾಕ್ಷಸಿಯ ಬಾಯೊಳಗೆ ವೇಗವಾಗಿ ಧುಮುಕಿದನು.॥193-194॥
ಮೂಲಮ್ - 195
ಆಸ್ಯೇ ತಸ್ಯಾ ನಿಮಜ್ಜಂತಂ ದದೃಶುಃ ಸಿದ್ಧಚಾರಣಾಃ ।
ಗ್ರಸ್ಯಮಾನಂ ಯಥಾ ಚಂದ್ರಂ ಪೂರ್ಣಂ ಪರ್ವಣಿ ರಾಹುಣಾ ॥
ಅನುವಾದ
ಹುಣ್ಣಿಮೆಯಂದು ಗ್ರಹಣಕಾಲದಲ್ಲಿ ನುಂಗಲ್ಪಡುತ್ತಿದ್ದ ಚಂದ್ರನಂತೆ ಸಿಂಹಿಕೆಯ ಬಾಯೊಳಗೆ ಬಿದ್ದ ಹನುಮಂತನನ್ನು ಸಿದ್ಧ-ಚಾರಣರೇ ಆದಿ ಎಲ್ಲರೂ ನೋಡುತ್ತಿದ್ದರು.॥195॥
ಮೂಲಮ್ - 196
ತತಸ್ತಸ್ಯಾ ನಖೈಸ್ತೀಕ್ಷ್ಣೈರ್ಮರ್ಮಾಣ್ಯುತ್ಕೃತ್ಯ ವಾನರಃ ।
ಉತ್ಪಪಾತಾಥ ವೇಗೇನ ಮನಃಸಂಪಾತವಿಕ್ರಮಃ ॥
ಮೂಲಮ್ - 197
ತಾಂ ತು ದೃಷ್ಟ್ಯಾ ಚ ಧೃತ್ಯಾ ಚ ದಾಕ್ಷಿಣ್ಯೇನ ನಿಪಾತ್ಯ ಹಿ ।
ಸ ಕಪಿಪ್ರವರೋ ವೇಗಾದ್ವವೃಧೇ ಪುನರಾತ್ಮವಾನ್ ॥
ಅನುವಾದ
ಮನೋವೇಗಕ್ಕೆ ಸಮಾನವಾದ ವೇಗವುಳ್ಳ ಹನುಮಂತನು ಸಿಂಹಿಕೆಯ ಬಾಯನ್ನು ಪ್ರವೇಶಿಸಿ, ತೀಕ್ಷ್ಣವಾದ ಉಗುರುಗಳಿಂದ ಅವಳ ಮರ್ಮಸ್ಥಾನಗಳನ್ನು ಘಾತಿಸಿ, ಅವಳ ಎದೆಯನ್ನು ಸೀಳಿ ಅತ್ಯಂತವೇಗದಿಂದ ಹೊರಬಂದನು. ಹೀಗೆ ಕಪಿಶ್ರೇಷ್ಠನಾದ, ಜಿತೇಂದ್ರಿಯನಾದ ಹನುಮಂತನು ಸಮಯಸ್ಫೂರ್ತಿಯಿಂದಲೂ, ಧೈರ್ಯದಿಂದಲೂ, ಚತುರತೆಯಿಂದಲೂ ಸಿಂಹಿಕೆಯನ್ನು ಸಂಹರಿಸಿ ಪುನಃ ವೃದ್ಧಿಹೊಂದಿದನು.॥196-197॥
ಮೂಲಮ್ - 198
ಹೃತಹೃತ್ ಸಾ ಹನುಮತಾ ಪಪಾತ ವಿಧುರಾಂಭಸಿ ।
ಸ್ವಯಂಭುವೈವ ಹನುಮಾನ್ ಸೃಷ್ಟಸ್ತಸ್ಯಾ ನಿಪಾತನೇ ॥
ಮೂಲಮ್ - 199
ತಾಂ ಹತಾಂ ವಾನರೇಣಾಶು ಪತಿತಾಂ ವೀಕ್ಷ್ಯ ಸಿಂಹಿಕಾಂ ।
ಭೂತಾನ್ಯಾಕಾಶಚಾರೀಣಿ ತಮೂಚುಃ ಪ್ಲವಗೋತ್ತಮಮ್ ॥
ಅನುವಾದ
ಹನುಮಂತನು ಎದೆಯನ್ನು ಸೀಳಿಕೊಂಡು ಹೊರಬಂದನಂತರ ಸಿಂಹಿಕೆಯು ಆರ್ತನಾದ ಮಾಡುತ್ತಾ ಸಮುದ್ರದ ನೀರಿನಲ್ಲಿ ಬಿದ್ದು ಹೋದಳು. ಅವಳನ್ನು ಕೊಲ್ಲಲೆಂದೇ ಬ್ರಹ್ಮನು ಹನುಮಂತನನ್ನು ಸೃಷ್ಟಿಸಿದ್ದನು. ಅಷ್ಟು ಶೀಘ್ರವಾಗಿ ಹನುಮಂತನು ಸಿಂಹಿಕೆಯನ್ನು ಸಂಹರಿಸಿದುದನ್ನು ನೋಡಿ ಆಕಾಶದಲ್ಲಿ ಸಂಚರಿಸುತ್ತಿದ್ದವರೆಲ್ಲರೂ ಏಕಕಂಠದಿಂದ ಮಾರುತಿಯನ್ನು ಕೊಂಡಾಡಿದರು ‘‘ಕಪಿ ಶ್ರೇಷ್ಠನೇ! ಬಲುದೊಡ್ಡ ಪ್ರಾಣಿಯನ್ನು ಸಂಹರಿಸಿ ಭಯಂಕರ ಕಾರ್ಯವನ್ನು ಮಾಡಿರುವೆ.॥198-199॥
ಮೂಲಮ್ - 200
ಭೀಮಮದ್ಯ ಕೃತಂ ಕರ್ಮ ಮಹತ್ ಸತ್ತ್ವಂ ತ್ವಯಾ ಹತಮ್ ।
ಸಾಧಯಾರ್ಥಮಭಿಪ್ರೇತಮರಿಷ್ಟಂ ಪ್ಲವತಾಂ ವರ ॥
ಮೂಲಮ್ - 201
ಯಸ್ಯ ತ್ವೇತಾನಿ ಚತ್ವಾರಿ ವಾನರೇಂದ್ರ ಯಥಾ ತವ ।
ಧೃತಿರ್ದೃಷ್ಟಿರರ್ಮತಿರ್ದಾಕ್ಷ್ಯಂ ಸ ಕರ್ಮಸು ನ ಸೀದತಿ ॥
ಮೂಲಮ್ - 202
ಸ ತೈಃ ಸಂಭಾವಿತಃ ಪೂಜ್ಯೆಃ ಪ್ರತಿಪನ್ನಪ್ರಯೋಜನಃ ।
ಜಗಾಮಾಕಾಶಮಾವಿಶ್ಯ ಪನ್ನಗಾಶನವತ್ ಕಪಿಃ ॥
ಅನುವಾದ
ಈಗ ನೀನು ಬಯಸಿದ ಸೀತಾನ್ವೇಷಣೆಯ ಕಾರ್ಯವನ್ನು ಯಾವುದೇ ಎಡರು-ತೊಡರುಗಳಿಲ್ಲದೆ ಸಾಧಿಸು. ನಿನ್ನಲ್ಲಿರುವಂತೆ ಧೈರ್ಯ, ದೂರದೃಷ್ಟಿ, ಬುದ್ಧಿ ಮತ್ತು ಕಾರ್ಯಕುಶಲತೆ ಈ ನಾಲ್ಕು ಗುಣಗಳಿರುವವನು ಕಾರ್ಯಸಿದ್ಧಿಯಲ್ಲಿ ಎಂದಿಗೂ ವೈಫಲ್ಯವನ್ನು ಹೊಂದಲಾರರು.’’ ಹೀಗೆ ಕಾರ್ಯಸಿದ್ಧಿಯನ್ನು ಪಡೆದ ಪೂಜ್ಯನಾದ ಹನುಮಂತನು ಆಕಾಶಚಾರಿಗಳಿಂದ ಗೌರವಿಸಲ್ಟಟ್ಟು ಪುನಃ ವಾಯುಮಾರ್ಗವನ್ನು ಹಿಡಿದು ಗರುಡನಂತೆ ಹಾರಿಕೊಂಡು ಸಮುದ್ರದ ದಕ್ಷಿಣತೀರದ ಕಡೆಗೆ ಸಾಗಿದನು.॥200-202॥
ಮೂಲಮ್ - 203
ಪ್ರಾಪ್ತಭೂಯಿಷ್ಠಪಾರಸ್ತು ಸರ್ವತಃ ಪ್ರತಿಲೋಕಯನ್ ।
ಯೋಜನಾನಾಂ ಶತಸ್ಯಾಂತೇ ವನರಾಜಿಂ ದದರ್ಶ ಸಃ ॥
ಮೂಲಮ್ - 204
ದದರ್ಶ ಚ ಪತನ್ನೇವ ವಿವಿಧದ್ರುಮ ಭೂಷಿತಮ್ ।
ದ್ವೀಪಂ ಶಾಖಾಮೃಗಶ್ರೇಷ್ಠೋ ಮಲಯೋಪವನಾನಿ ಚ ॥
ಮೂಲಮ್ - 205
ಸಾಗರಂ ಸಾಗರಾನೂಪಂ ಸಾಗರಾನೂಪಜಾನ್ ದ್ರುಮಾನ್ ।
ಸಾಗರಸ್ಯ ಚ ಪತ್ನೀನಾಂ ಮುಖಾನ್ಯಪಿ ವಿಲೋಕಯನ್ ॥
ಮೂಲಮ್ - 206
ಸ ಮಹಾಮೇಘಸಂಕಾಶಂ ಸಮೀಕ್ಷ್ಯಾತ್ಮಾನಮಾತ್ಮವಾನ್ ।
ನಿರುಂಧಂತಮಿವಾಕಾಶಂ ಚಕಾರ ಮತಿಮಾನ್ ಮತಿಮ್ ॥
ಮೂಲಮ್ - 207
ಕಾಯವೃದ್ಧಿಂ ಪ್ರವೇಗಂ ಚ ಮಮ ದೃಷ್ಟ್ಯೈವ ರಾಕ್ಷಸಾಃ ।
ಮಯಿ ಕೌತೂಹಲಂ ಕುರ್ಯುರಿತಿ ಮೇನೇ ಮಹಾಕಪಿಃ ॥
ಮೂಲಮ್ - 208
ತತಃ ಶರೀರಂ ಸಂಕ್ಷಿಪ್ಯ ತನ್ಮಹೀಧರಸಂನಿಭಮ್ ।
ಪುನಃ ಪ್ರಕೃತಿಮಾಪೇದೇ ವೀತಮೋಹ ಇವಾತ್ಮವಾನ್ ॥
ಅನುವಾದ
ನೂರು ಯೋಜನಗಳಷ್ಟು ಪ್ರಯಾಣಮಾಡಿದ ನಂತರ ‘ಇನ್ನೇನು ದಡವು ಸಿಕ್ಕಿತು’ ಎನ್ನುವಷ್ಟು ಸಮೀಪಕ್ಕೆ ಹೋದ ಹನುಮಂತನು ಎಲ್ಲ ಕಡೆಗಳಲ್ಲಿಯೂ ನೋಡುತ್ತಾ ಅಲ್ಲಿದ್ದ ವನರಾಜಿಯನ್ನು ವೀಕ್ಷಿಸಿದನು. ಆಕಾಶದಿಂದ ಭೂಮಿಗೆ ಇಳಿಯುತ್ತಿರುವಂತೆ ವಿಧ-ವಿಧವಾದ ವೃಕ್ಷಗಳಿಂದ ಅಲಂಕೃತವಾಗಿದ್ದ ಲಂಕಾದ್ವೀಪವನ್ನು, ಮಲಯಪರ್ವತದ ಉಪವನಗಳನ್ನು ನೋಡಿದನು. ಸಮುದ್ರವನ್ನು, ಸಮುದ್ರ ಸಮೀಪದ ಜೌಗು ಪ್ರದೇಶವನ್ನು, ಸಮುದ್ರತೀರದಲ್ಲಿ ಬೆಳೆದಿದ್ದ ಮಹಾ ವೃಕ್ಷಗಳನ್ನು, ತ್ರಿಕೂಟಪರ್ವತದಲ್ಲಿ ಹುಟ್ಟಿ ಹರಿಯುತ್ತಿರುವ ಸಾಗರನ ಪತ್ನಿಯರಾದ ನದಿಗಳು ಸಮುದ್ರಕ್ಕೆ ಸೇರುವ ಸ್ಥಳಗಳನ್ನು ನೋಡಿದನು. ಆಕಾಶವನ್ನೇ ತಡೆಗಟ್ಟುತ್ತಿರುವುದೋ ಎಂಬಂತೆ ಕಾಣುತ್ತಿದ್ದ, ಮಹಾಮೇಘ ಸದೃಶವಾಗಿದ್ದ ಆಗಿನ ತನ್ನ ಬೃಹದಾಕಾರ ಶರೀರವನ್ನು ನೋಡಿಕೊಂಡು, ಬುದ್ಧಿವಂತನೂ, ಜಿತೇಂದ್ರಿಯನೂ ಆದ ಆಂಜನೇಯನು ಹೀಗೆ ನಿಶ್ಚಯಿಸಿದನು. ದೊಡ್ಡದಾಗಿ ಬೆಳೆದಿರುವ ಈ ನನ್ನ ಶರೀರವನ್ನೂ, ಅಮಿತ ವೇಗವನ್ನು ನೋಡಿದೊಡನೆ ಇಲ್ಲಿರುವ ರಾಕ್ಷಸರು ನನ್ನ ವಿಷಯದಲ್ಲಿ ಕುತೂಹಲವುಳ್ಳವರಾಗುತ್ತಾರೆ. ಆದುದರಿಂದ ‘‘ಇದೇ ಶರೀರವನ್ನು ಧರಿಸಿ ಲಂಕೆಯನ್ನು ಪ್ರವೇಶಿಸುವುದು ಸೂಕ್ತವಲ್ಲ’’ ಹೀಗೆ ಯೋಚಿಸಿದ ಹನುಮಂತನು ಜಿತೇಂದ್ರಿಯನಾದ ಯೋಗಿಯು ಮೋಹರಹಿತನಾಗಿ ತನ್ನ ಸ್ವಪ್ವರೂಪದಲ್ಲಿ ಸ್ಥಿರನಾಗುವಂತೆ, ಪರ್ವತೋಪಮವಾಗಿದ್ದ ತನ್ನ ಶರೀರವನ್ನು ಸಂಕ್ಷೇಪಿಸಿಕೊಂಡು ಆತ್ಮಜ್ಞಾನದಿಂದ ಸಂಪನ್ನವಾದ ತನ್ನ ಸಹಜ ಶರೀರವನ್ನೇ ಹೊಂದಿದನು.॥203-208॥
ಮೂಲಮ್ - 209
ತದ್ರೂಪಮತಿಸಂಕ್ಷಿಪ್ಯ ಹನೂಮಾನ್ ಪ್ರಕೃತೌ ಸ್ಥಿತಃ ।
ತ್ರೀನ್ ಕ್ರಮಾನಿವ ವಿಕ್ರಮ್ಯ ಬಲಿವೀರ್ಯಹರೋ ಹರಿಃ ॥
ಅನುವಾದ
ಬಲಿಚಕ್ರ ವರ್ತಿಯ ಸಂಪತ್ತನ್ನು ಜಯಿಸಲು ಹೋದ ವಿಷ್ಣುವು ತ್ರಿವಿಕ್ರಮನಾಗಿ ಬೆಳೆದನು. ಬಳಿಕ ಯಥಾಸ್ಥಿತಿ ವಾಮನನಾದಂತೆ, ಹನುಮಂತನು ತನ್ನ ಬೃಹದಾಕಾರ ಶರೀರವನ್ನು ಸಂಕುಚಿತವಾಗಿಸಿ ನಿಜಸ್ವರೂಪವನ್ನು ತಾಳಿದನು.॥209॥
ಮೂಲಮ್ - 210
ಸ ಚಾರು ನಾನಾವಿಧರೂಪಧಾರೀ
ಪರಂ ಸಮಾಸಾದ್ಯ ಸಮುದ್ರತೀರಮ್ ।
ಪರೈರಶಕ್ಯಂ ಪ್ರತಿಪನ್ನರೂಪಃ
ಸಮೀಕ್ಷಿತಾತ್ಮಾ ಸಮವೇಕ್ಷಿತಾರ್ಥಃ ॥
ಅನುವಾದ
ಸುಂದರವಾದ ನಾನಾ ರೂಪಗಳನ್ನು ಧರಿಸುವ ಸಾಮರ್ಥ್ಯವಿದ್ದ ಹನುಮಂತನು ಇತರರಿಂದ ಹೊಂದಲು ಅಶಕ್ಯವಾದ ಸಮುದ್ರದ ದಕ್ಷಿಣ ತೀರವನ್ನು ಸೇರಿ, ದೊಡ್ಡದಾದ ತನ್ನ ಶರೀರವನ್ನು ನೋಡಿಕೊಂಡು ಮುಂದೆ ಮಾಡಬೇಕಾದ ಕಾರ್ಯದ ಬಗ್ಗೆ ಸಮಾಲೋಚಿಸಿ ವಿಶಾಲವಾಗಿದ್ದ ತನ್ನ ಆ ರೂಪವನ್ನು ತೊರೆದು ಹಿಂದಿನಂತೆ ಸಹಜವಾದ ರೂಪವನ್ನು ಹೊಂದಿದನು.॥210॥
ಮೂಲಮ್ - 211
ತತಃ ಸ ಲಂಬಸ್ಯ ಗಿರೇಃ ಸಮೃದ್ಧೇ
ವಿಚಿತ್ರಕೂಟೇ ನಿಪಪಾತ ಕೂಟೇ ।
ಸಕೇತಕೋದ್ದಾಲಕನಾರಿಕೇಲೇ
ಮಹಾದ್ರಿಕೂಟಪ್ರತಿಮೋ ಮಹಾತ್ಮಾ ॥
ಅನುವಾದ
ವಿಶಾಲವಾದ ಮೇಘಮಂಡಲ ಸದೃಶನಾಗಿದ್ದ ಮಹಾತ್ಮನಾದ ಹನುಮಂತನು ಫಲ-ಪುಷ್ಪಾದಿಗಳಿಂದಲೂ, ಕೇದಗೆ, ಚಳ್ಳೆ, ತೆಂಗು ಮೊದಲಾದ ವೃಕ್ಷಗಳಿಂದಲೂ ಸಮೃದ್ಧವಾಗಿದ್ದ, ವಿಚಿತ್ರ ಶಿಖರಗಳನ್ನು ಹೊಂದಿದ್ದ ಲಂಬವೆಂಬ ಪರ್ವತದ ಪ್ರಧಾನ ಶಿಖರದಲ್ಲಿ ಇಳಿದನು.॥211॥
ಮೂಲಮ್ - 212
ತತಸ್ತು ಸಂಪ್ರಾಪ್ಯ ಸಮುದ್ರತೀರಂ
ಸಮೀಕ್ಷ್ಯ ಲಂಕಾಂ ಗಿರಿರಾಜಮೂರ್ಧ್ನಿ ।
ಕಪಿಸ್ತು ತಸ್ಮಿನ್ನಿಪಪಾತ ಪರ್ವತೇ
ವಿಧೂಯ ರೂಪಂ ವ್ಯಥಯನ್ ಮೃಗದ್ವಿಜಾನ್ ॥
ಅನುವಾದ
ಹನುಮಂತನು ಸಮುದ್ರತೀರಕ್ಕೆ ಬರುತ್ತಲೇ ಶ್ರೇಷ್ಠವಾದ ತ್ರಿಕೂಟ ಪರ್ವತದ ಶಿಖರದಲ್ಲಿದ್ದ ಲಂಕೆಯನ್ನು ನೋಡಿದನು. ತನ್ನ ದೊಡ್ಡದಾದ ರೂಪವನ್ನು ಪರಿತ್ಯಜಿಸಿ ಹಿಂದಿನ ರೂಪವನ್ನು ಹೊಂದಿ, ಆ ಗಿರಿಯ ಮೇಲೆ ಇಳಿದನು. ಅವನು ಇಳಿಯುತ್ತಲೇ ಮೃಗಗಳು, ಪಕ್ಷಿಗಳು ಭಯಗೊಂಡವು.॥212॥
ಮೂಲಮ್ - 213
ಸ ಸಾಗರಂ ದಾನವಪನ್ನಗಾಯುತಂ
ಬಲೇನ ವಿಕ್ರಮ್ಯ ಮಹೋರ್ಮಿಮಾಲಿನಂ ।
ನಿಪತ್ಯ ತೀರೇ ಚ ಮಹೋದಧೇಸ್ತದಾ
ದದರ್ಶ ಲಂಕಾಮಮರಾವತೀಮಿವ ॥
ಅನುವಾದ
ದಾನವರಿಂದಲೂ, ಸರ್ಪಗಳಿಂದಲೂ ವ್ಯಾಪ್ತವಾಗಿದ್ದ ದೊಡ್ಡ-ದೊಡ್ಡ ಅಲೆಗಳಿಂದ ಕೂಡಿದ್ದ ಸಮುದ್ರವನ್ನು ಹನುಮಂತನು ತನ್ನ ಬಲಾತಿಶಯದಿಂದ ದಾಟಿ ಮಹೋದಧಿಯ ತೀರದಲ್ಲಿಳಿದು ಇಂದ್ರನ ಅಮರಾವತಿಯಂತಿದ್ದ ಲಂಕಾಪಟ್ಟಣವನ್ನು ನೋಡಿದನು.॥213॥
ಮೂಲಮ್ (ಸಮಾಪ್ತಿಃ)
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಸುಂದರಕಾಂಡೇ ಪ್ರಥಮಃ ಸರ್ಗಃ ॥ 1 ॥
ಅನುವಾದ (ಸಮಾಪ್ತಿಃ)
ಮಹರ್ಷಿವಾಲ್ಮೀಕಿ ವಿರಚಿತ ಆದಿಕಾವ್ಯವಾದ ಶ್ರೀಮದ್ರಾಮಾಯಣದ ಸುಂದರಕಾಂಡದಲ್ಲಿ ಮೊದಲನೆಯ ಸರ್ಗವು ಮುಗಿಯಿತು.