वाचनम्
ಭಾಗಸೂಚನಾ
ಹನುಮಂತನು ಸಮುದ್ರವನ್ನು ದಾಟುವ ಉತ್ಸಾಹವನ್ನು ಪ್ರಕಟಿಸಿದುದು, ಜಾಂಬವಂತನ ಪ್ರಶಂಸೆ, ವೇಗವಾಗಿ ಹಾರುವ ಸಲುವಾಗಿ ಹನುಮಂತನು ಮಹೇಂದ್ರಪರ್ವತದ ಶಿಖರವನ್ನು ಹತ್ತಿದುದು
ಮೂಲಮ್ - 1
ತಂ ದೃಷ್ಟ್ವಾ ಜೃಂಭಮಾಣಂ ತೇ ಕ್ರಮಿತುಂ ಶತಯೋಜನಮ್ ।
ವೇಗೋನಾಪೂರ್ಯಮಾಣಂ ಚ ಸಹಸಾ ವಾನರೋತ್ತಮಮ್ ॥
ಮೂಲಮ್ - 2
ಸಹಸಾ ಶೋಕಮೃತ್ಸೃಜ್ಯ ಪ್ರಹರ್ಷೇಣ ಸಮನ್ವಿತಾಃ ।
ವಿನೇದುಸ್ತುಷ್ಟು ವುಶ್ಚಾಪಿ ಹನುಮಂತಂ ಮಹಾಬಲಮ್ ॥
ಅನುವಾದ
ನೂರು ಯೋಜನ ಸಮುದ್ರವನ್ನು ದಾಟಲಿಕ್ಕಾಗಿ ವಾನರ ಶ್ರೇಷ್ಠ ಹನುಮಂತನು ಒಮ್ಮೆಗೆ ಬೆಳೆಯುತ್ತಾ ವೇಗಪೂರ್ಣ ನಾದುದನ್ನು ನೋಡಿ ಎಲ್ಲ ವಾನರರು ತತ್ಕ್ಷಣ ಶೋಕವನ್ನು ಬಿಟ್ಟು ಅತ್ಯಂತ ಹರ್ಷಗೊಂಡು, ಮಹಾಬಲಿ ಹನುಮಂತನನ್ನು ಸ್ತುತಿಸುತ್ತಾ ಜೋರು-ಜೋರಾಗಿ ಗರ್ಜಿಸತೊಡಗಿದರು.॥1-2॥
ಮೂಲಮ್ - 3
ಪ್ರಹೃಷ್ಟಾ ವಿಸ್ಮಿತಾಶ್ಚಾಪಿ ತೇ ವೀಕ್ಷಂತೇ ಸಮಂತತಃ ।
ತ್ರಿವಿಕ್ರಮಂಕೃತೋತ್ಸಾಹಂ ನಾರಾಯಣಮಿವ ಪ್ರಜಾಃ ॥
ಅನುವಾದ
ಅವರು ಸುತ್ತಲೂ ಸೇರಿ ನಿಂತುಕೊಂಡು ಪ್ರಸನ್ನ ಮತ್ತು ಚಕಿತರಾಗಿ ನಾರಾಯಣಾವತಾರ ವಾಮನನನ್ನು ಸಮಸ್ತ ಪ್ರಜೆಗಳು ನೋಡಿದ್ದರೋ ಹಾಗೆಯೇ ನೋಡತೊಡಗಿದರು.॥3॥
ಮೂಲಮ್ - 4
ಸಂಸ್ತೂಯಮಾನೋ ಹನುಮಾನ್ವ್ಯವರ್ಧತ ಮಹಾಬಲಃ ।
ಸಮಾವಿಧ್ಯ ಚ ಲಾಂಗೂಲಂ ಹರ್ಷಾದ್ಬಲಮುಪೇಯಿವಾನ್ ॥
ಅನುವಾದ
ತನ್ನ ಪ್ರಶಂಸೆಯನ್ನು ಕೇಳಿ ಮಹಾಬಲಿ ಹನುಮಂತನು ಶರೀರವನ್ನು ಇನ್ನೂ ಬೆಳೆಸಿದನು. ಜೊತೆಗೆ ಹರ್ಷದಿಂದ ತನ್ನ ಬಾಲವನ್ನು ಪದೇ-ಪದೇ ತಿರುಗಿಸುತ್ತಾ ತನ್ನ ಮಹಾಬಲವನ್ನು ಸ್ಮರಿಸಿಕೊಂಡನು.॥4॥
ಮೂಲಮ್ - 5
ತಸ್ಯ ಸಂಸ್ತೂಯಮಾನಸ್ಯ ವೃದ್ಧೈರ್ವಾನರಪುಂಗವೈಃ ।
ತೇಜಸಾಽಽಪೂರ್ಯಮಾಣಸ್ಯ ರೂಪಮಾಸೀದನುತ್ತಮಮ್ ॥
ಅನುವಾದ
ಹಿರಿಯ ವಾನರಶಿರೋಮಣಿಗಳ ಬಾಯಿಯಿಂದ ತನ್ನ ಪ್ರಶಂಸೆ ಕೇಳುತ್ತಾ, ತೇಜದಿಂದ ಸಂಪೂರ್ಣನಾದ ಹನುಮಂತನ ರೂಪವು ಆಗ ಪರಮೋತ್ತಮನಾಗಿ ಕಂಡು ಬರುತ್ತಿತ್ತು.॥5॥
ಮೂಲಮ್ - 6
ಯಥಾ ವಿಜೃಂಭತೇ ಸಿಂಹೋ ವಿವೃತೇ ಗಿರಿಗಹ್ವರೇ ।
ಮಾರುತಸ್ಯೌರಸಃ ಪುತ್ರಸ್ತಥಾ ಸಂಪ್ರತಿ ಜೃಂಭತೇ ॥
ಅನುವಾದ
ಪರ್ವತದ ವಿಶಾಲ ಕಂದರಗಳಲ್ಲಿ ಸಿಂಹವು ವಿಜೃಂಭಿಸುವಂತೆಯೇ ವಾಯುದೇವನ ಔರಸ ಪುತ್ರನಾದ ಹನುಮಂತನ ಭಾರೀ ಶರೀರವು ವಿಜೃಂಭಿಸುತ್ತಿತ್ತು.॥6॥
ಮೂಲಮ್ - 7
ಅಶೋಭತ ಮುಖಂ ತಸ್ಯ ಜೃಂಭಮಾಣಸ್ಯ ಧೀಮತಃ ।
ಅಂಬರೀಷೋಪಮಂ ದೀಪ್ತಂ ವಿಧೂಮ ಇವ ಪಾವಕಃ ॥
ಅನುವಾದ
ಉತ್ಸಾಹದಿಂದ ವಿಕಸಿತವಾಗುತ್ತಿದ್ದ ಧೀಮಂತ ಹನುಮಂತನ ಮುಖವು ಸೂರ್ಯಮಂಡಲದಂತೆಯೂ, ಕೆಂಪಗೆ ಕಾದ ಓಡಿದಂತೆಯೂ, ಹೊಗೆಯಿಲ್ಲದ ಅಗ್ನಿಯಂತೆ ಶೋಭಿಸುತ್ತಿತ್ತು.॥7॥
ಮೂಲಮ್ - 8
ಹರೀಣಾಮುತ್ಥಿತೋ ಮಧ್ಯಾತ್ಸಂಪ್ರಹೃಷ್ಟ ತನೂರುಹಃ ।
ಅಭಿವಾದ್ಯ ಹರೀನ್ವದ್ಧಾನ್ಹನೂಮಾನಿದಮಬ್ರವೀತ್ ॥
ಅನುವಾದ
ಅವನು ವಾನರರ ನಡುವೆ ಎದ್ದು ನಿಂತನು. ಅವನ ಸರ್ವಾಂಗವೂ ರೋಮಾಂಚನವಾಗಿತ್ತು. ಆ ಸ್ಥಿತಿಯಲ್ಲಿ ಹನುಮಂತನು ಹಿರಿಯ ವಾನರರಿಗೆ ವಂದಿಸಿ ಈ ಪ್ರಕಾರ ಹೇಳಿದನು.॥8॥
ಮೂಲಮ್ - 9
ಅರುಜನ್ಪರ್ವತಾಗ್ರಾಣಿ ಹುತಾಶನಸಖೋಽನಿಲಃ ।
ಬಲವಾನಪ್ರಮೇಯಶ್ಚ ವಾಯುರಾಕಾಶಗೋಚರಃ ॥
ಅನುವಾದ
ಆಕಾಶದಲ್ಲಿ ವಿಚರಿಸುವ ವಾಯುದೇವತೆಯು ಬಹಳ ಬಲವಂತನಾಗಿದ್ದು, ಅವನ ಶಕ್ತಿಗೆ ಯಾವುದೇ ಸೀಮೆಯೇ ಇರಲಿಲ್ಲ. ಅವನು ಅಗ್ನಿಯ ಸಖನಾಗಿದ್ದು, ತನ್ನ ವೇಗದಿಂದ ದೊಡ್ಡ - ದೊಡ್ಡ ಪರ್ವತ ಶಿಖರಗಳನ್ನು ಪುಡಿ ಮಾಡುವನು.॥9॥
ಮೂಲಮ್ - 10
ತಸ್ಯಾಹಂ ಶೀಘ್ರವೇಗಸ್ಯ ಶೀಘ್ರಗಸ್ಯ ಮಹಾತ್ಮನಃ ।
ಮಾರುತಸ್ಯೌರಸಃ ಪುತ್ರಃ ಪ್ಲವನೇನಾಸ್ಮಿ ತತ್ಸಮಃ ॥
ಅನುವಾದ
ಅತ್ಯಂತ ಶೀಘ್ರವೇಗದಿಂದ ನಡೆಯುವ ಆ ಶೀಘ್ರಗಾಮಿ ಮಹಾತ್ಮಾ ವಾಯುವಿನ ಔರಸ ಪುತ್ರನಾನಾಗಿದ್ದೇನೆ. ನಾನು ಹಾರುವುದರಲ್ಲಿಯೂ ಅವನಂತೆಯೇ ಆಗಿರುವೆನು.॥10॥
ಮೂಲಮ್ - 11
ಉತ್ಸಹೇಯಂ ಹಿ ವಿಸ್ತೀರ್ಣಮಾಲಿಖಂತಮಿವಾಂಬರಮ್ ।
ಮೇರುಂ ಗಿರಿಮಸಂಗೇನ ಪರಿಗಂತುಂ ಸಹಸ್ರಶಃ ॥
ಅನುವಾದ
ಅನೇಕ ಯೋಜನಗಳವರೆಗೆ ಹರಡಿರುವ, ಆಕಾಶದ ಬಹಳ ದೊಡ್ಡ ಭಾಗವನ್ನು ಮುಚ್ಚಿರುವ, ಆಕಾಶದಲ್ಲಿ ಗೆರೆ ಎಳೆದಂತೆ ಕಾಣುವ ಮೇರುಗಿರಿಯನ್ನು ನಾನು ವಿಶ್ರಮಿಸದೆ ಸಾವಿರ ಬಾರಿ ಪ್ರಕ್ಷಿಣೆ ಮಾಡಬಲ್ಲೆ.॥11॥
ಮೂಲಮ್ - 12
ಬಾಹುವೇಗಪ್ರಣುನ್ನೇನ ಸಾಗರೇಣಾಹಮುತ್ಸಹೇ ।
ಸಮಾಪ್ಲಾವಯಿತುಂ ಲೋಕಂ ಸಪರ್ವತನದೀಹ್ರದಮ್ ॥
ಅನುವಾದ
ನನ್ನ ಭುಜಗಳ ವೇಗದಿಂದ ಸಮುದ್ರವನ್ನು ವಿಕ್ಷುಬ್ಧಗೊಳಿಸಿ ಅದರ ನೀರಿನಿಂದ ನಾನು ಪರ್ವತ, ನದಿ ಮತ್ತು ಜಲಾಶಯಗಳ ಸಹಿತ ಸಂಪೂರ್ಣ ಜಗತ್ತನ್ನು ನೆನೆಸಿಬಿಡುವೆನು.॥12॥
ಮೂಲಮ್ - 13
ಮಮೋರುಜಂಘಾವೇಗೇನ ಭವಿಷ್ಯತಿ ಸಮುತ್ಥಿತಃ ।
ಸಮುತ್ಥಿತಮಹಾಗ್ರಾಹಃ ಸಮುದ್ರೋ ವರುಣಾಲಯಃ ॥
ಅನುವಾದ
ವರುಣನ ನಿವಾಸ ಸ್ಥಾನವಾದ ಈ ಮಹಾಸಾಗರವು ನನ್ನ ತೊಡೆಗಳ ಮತ್ತು ಕಣಕಾಲುಗಳ ವೇಗದಿಂದ ಉಬ್ಬಿಬಂದೀತು, ಇದರೊಳಗೆ ಇರುವ ದೊಡ್ಡ-ದೊಡ್ಡ ಮೊಸಳೆಗಳು ಮೇಲಕ್ಕೆ ಬರುವವು.॥13॥
ಮೂಲಮ್ - 14
ಪನ್ನಗಾಶನಮಾಕಾಶೇ ಪತಂತಂ ಪಕ್ಷಿಸೇವಿತಮ್ ।
ವೈನತೇಯಮಹಂ ಶಕ್ತಃ ಪರಿಗಂತುಂ ಸಹಸ್ರಶಃ ॥
ಅನುವಾದ
ಸಮಸ್ತ ಪಕ್ಷಿಗಳು ಸೇವಿಸುವ ಸರ್ಪಭೋಜೀ ವಿನತಾ ನಂದನ ಗರುಡನು ಆಕಾಶದಲ್ಲಿ ಹಾರುತ್ತಿದ್ದರೂ ನಾನು ಸಾವಿರಾರು ಬಾರಿ ಅವನ ಸುತ್ತಲೂ ತಿರುಗಬಲ್ಲೆನು.॥14॥
ಮೂಲಮ್ - 15
ಉದಯಾತ್ಪ್ರಸ್ಥಿತಂ ವಾಪಿ ಜ್ವಲಂತಂ ರಶ್ಮಿಮಾಲಿನಮ್ ।
ಅನಸ್ತಮಿತಮಾದಿತ್ಯಮಹಂ ಗಂತುಂ ಸಮುತ್ಸಹೇ ॥
ಮೂಲಮ್ - 16
ತತೋ ಭೂಮಿಮಸಂಸ್ಪೃಷ್ಟಾ ಪುನರಾಗಂತು ಮುತ್ಸಹೇ ।
ಪ್ರವೇಗೇನೈವ ಮಹತಾ ಭೀಮೇನ ಪ್ಲವಗರ್ಷಭಾಃ ॥
ಅನುವಾದ
ಶ್ರೇಷ್ಠವಾನರರೇ! ಉದಯಾಚಲದಿಂದ ಹೊರಟು ತನ್ನ ತೇಜದಿಂದ ಪ್ರಜ್ವಲಿಸುವ ಸೂರ್ಯನು ಅಸ್ತನಾಗುವ ಮೊದಲೇ ನಾನು ಮುಟ್ಟಬಲ್ಲೆ ಹಾಗೂ ಅಲ್ಲಿಂದ ಪೃಥಿಯವರೆಗೆ ಬಂದು ಕಾಲಿಡದೇ ಪುನಃ ಅವನ ಬಳಿಗೆ ಭಾರೀ ಭಯಂಕರ ವೇಗದಿಂದ ಹೋಗಬಲ್ಲೆನು.॥15-16॥
ಮೂಲಮ್ - 17
ಉತ್ಸಹೇಯಮತಿಕ್ರಾಂತುಂ ಸರ್ವಾನಾಕಾಶಗೋಚರಾನ್ ।
ಸಾಗರಾನ್ ಕ್ಷೋಭಯಿಷ್ಯಾಮಿ ದಾರಯಿಷ್ಯಾಮಿ ಮೇದಿನೀಮ್ ॥
ಮೂಲಮ್ - 18
ಪರ್ವತಾಂಶ್ಚೂರ್ಣಯಿಷ್ಯಾಮಿ ಪ್ಲವಮಾನಃ ಪ್ಲವಂಗಮಃ ।
ಹರಿಷ್ಯಾಮ್ಯುರುವೇಗೇನ ಪ್ಲವಮಾನೋ ಮಹಾರ್ಣವಮ್ ॥
ಅನುವಾದ
ಆಕಾಶಚಾರೀ ಸಮಸ್ತ ಗ್ರಹ-ನಕ್ಷತ್ರ ಮುಂತಾದುವನ್ನು ದಾಟಿ ಮುಂದೆ ಹೋಗುವ ಉತ್ಸಾಹ ಹೊಂದಿದ್ದೇನೆ. ನಾನು ಬಯಸಿದರೆ ಸಮುದ್ರವನ್ನು ಒಣಗಿಸಬಲ್ಲೆ, ಪೃಥಿವಿಯನ್ನು ವಿದೀರ್ಣಗೊಳಿಸಬಲ್ಲೆ; ಪರ್ವತಗಳನ್ನು ಹಾರಿ-ಹಾರಿ ಪುಡಿ-ಪುಡಿಯಾಗಿಸಬಲ್ಲೆನು; ಏಕೆಂದರೆ ನಾನು ದೂರದವರೇಗೆ ಹಾರುವ ವಾನರನಾಗಿದ್ದೇನೆ. ಮಹಾವೇಗದಿಂದ ನೆಗೆದು ಈ ಮಹಾಸಾಗರವನ್ನು ದಾಟಿ ಬಿಡುವೆನು.॥17-18॥
ಮೂಲಮ್ - 19
ಲತಾನಾಂ ವಿವಿಧಂ ಪುಷ್ಪಂ ಪಾದಪಾನಾಂ ಚ ಸರ್ವಶಃ ।
ಅನುಯಾಸ್ಯತಿ ಮಾಮದ್ಯ ಪ್ಲವಮಾನಂ ವಿಹಾಯಸಾ ॥
ಅನುವಾದ
ಇಂದು ಆಕಾಶದಲ್ಲಿ ವೇಗವಾಗಿ ಹೋಗುವಾಗ ಲತೆಗಳು ಮತ್ತು ವೃಕ್ಷಗಳ ನಾನಾ ಪ್ರಕರಾದ ಹೂವುಗಳು ನನ್ನೊಂದಿಗೆ ಹಾರುತ್ತಾ ಬರುವವು.॥19॥
ಮೂಲಮ್ - 20½
ಭವಿಷ್ಯತಿ ಹಿ ಮೇ ಪಂಥಾಃ ಸ್ವಾತೇಃ ಪಂಥಾ ಇವಾಮಂಬರೇ ।
ಚರಂತಂ ಘೋರಮಾಕಾಶಮುತ್ಪತಿಷ್ಯಂತಮೇವ ಚ ॥
ದ್ರಕ್ಷ್ಯಂತಿ ನಿಪತಂತಂ ಚ ಸರ್ವಭೂತಾನಿ ವಾನರಾಃ ।
ಅನುವಾದ
ಅನೇಕ ಹೂವುಗಳು ಚೆಲ್ಲಿಹೋದದ್ದರಿಂದ ನನ್ನ ಮಾರ್ಗವು ಆಕಾಶದಲ್ಲಿ ಅನೇಕ ನಕ್ಷತ್ರ ಪುಂಜಗಳಿಂದ ಸುಶೋಭಿಸುವ ಸ್ವಾತಿ ನಕ್ಷತ್ರದಂತೆ ಕಂಡು ಬಂದೀತು, ವಾನರರೇ! ಇಂದು ಸಮಸ್ತ ಪ್ರಾಣಿಗಳು ನಾನು ಭಯಂಕರ ಆಕಾಶದಲ್ಲಿ ನೇರವಾಗಿ ಹೋಗುವುದನ್ನು, ಮೇಲಕ್ಕೆ ನೆಗೆಯುವುದನ್ನು, ಕೆಳಕ್ಕೆ ಇಳಿಯುವುದನ್ನು ನೋಡುವವು.॥20½॥
ಮೂಲಮ್ - 21
ಮಹಾಮೇರುಪ್ರತೀಕಾಶಂ ಮಾಂ ದ್ರಕ್ಷ್ಯಧ್ವಂ ಪ್ಲವಂಗಮಾಃ ॥
ಮೂಲಮ್ - 22
ದಿವಮಾವೃತ್ಯ ಗಚ್ಛಂತಂ ಗ್ರಸಮಾನಮಿವಾಂಬರಮ್ ।
ವಿಧಮಿಷ್ಯಾಮಿ ಜೀಮೂತಾನ್ಕಂಪಯಿಷ್ಯಾಮಿ ಪರ್ವತಾನ್ ।
ಸಾಗರಂ ಶೋಷಯಿಷ್ಯಾಮಿ ಪ್ಲವಮಾನಃ ಸಮಾಹಿತಃ ॥
ಅನುವಾದ
ಕಪಿವರರೇ! ನೀವು ನೋಡುವಿರಿ, ನಾನು ಮಹಾಗಿರಿ ಮೇರುವಿನಂತೆ ವಿಶಾಲ ಶರೀರ ಧರಿಸಿ ಸ್ವರ್ಗವನ್ನು ಆವರಿಸಿ, ಆಕಾಶವನ್ನು ನುಂಗುವಂತೆ ಮುಂದೆ ಹೋಗುವೆನು, ಮೋಡಗಳನ್ನು ಛಿನ್ನ-ಭಿನ್ನ ಮಾಡಿ ಬಿಡುವೆನು. ಪರ್ವತಗಳನ್ನು ಅಲ್ಲಾಡಿಸಿ ಬಿಡುವೆನು. ಏಕಚಿತ್ತನಾಗಿ ನೆಗೆದು ಮುಂದಕ್ಕೆ ಹೋದಾಗ ಸಮುದ್ರವನ್ನು ಒಣಗಿಸಿ ಬಿಡುವೆನು.॥21-22॥
ಮೂಲಮ್ - 23
ವೈನತೇಯಸ್ಯ ವಾ ಶಕ್ತಿರ್ಮಮ ವಾ ಮಾರುತಸ್ಯ ವಾ ।
ಋತೇ ಸುಪರ್ಣರಾಜಾನಂ ಮಾರುತಂ ವಾ ಮಹಾಬಲಮ್ ।
ನ ತದ್ಭೂತಂ ಪ್ರಪಶ್ಯಾಮಿ ಯನ್ಮಾಂ ಪ್ಲುತಮನುವ್ರಜೇತ್ ॥
ಅನುವಾದ
ವಿನತಾನಂದನ ಗರುಡನಲ್ಲಿ, ನನ್ನಲ್ಲಿ ಅಥವಾ ವಾಯುದೇವರಲ್ಲೇ ಸಮುದ್ರವನ್ನು ದಾಟಿ ಹೋಗುವ ಶಕ್ತಿ ಇದೆ. ಪಕ್ಷಿರಾಜ ಗರುಡ ಅಥವಾ ಮಹಾಬಲಿ ವಾಯುದೇವತೆಯನ್ನು ಬಿಟ್ಟು ಇಲ್ಲಿಂದ ನೆಗೆದು ನನ್ನೊಂದಿಗೆ ಹಾರಬಲ್ಲ ಬೇರೆ ಯಾವ ಪ್ರಾಣಿಯನ್ನು ನಾನು ನೋಡುವುದಿಲ್ಲ.॥23॥
ಮೂಲಮ್ - 24
ನಿಮೇಷಾಂತರಮಾತ್ರೇಣ ನಿರಾಲಂಬನಮಂಬರಮ್ ।
ಸಹಸಾ ನಿಪತಿಷ್ಯಾಮಿ ಘನಾದ್ವಿದ್ಯುದಿವೋತ್ಥಿತಾ ॥
ಅನುವಾದ
ಮೋಡಗಳಲ್ಲಿ ಉಂಟಾದ ವಿದ್ಯುತ್ತಿನಂತೆ ರೆಪ್ಪೆ ಮಿಟಿಕಿಸುವಷ್ಟರಲ್ಲಿ ನಾನು ಒಮ್ಮೆಗೆ ನಿರಾಧಾರ ಆಕಾಶದಲ್ಲಿ ಹಾರಿ ಹೋಗುವೆನು.॥24॥
ಮೂಲಮ್ - 25
ಭವಿಷ್ಯತಿ ಹಿ ಮೇ ರೂಪಂ ಪ್ಲವಮಾನಸ್ಯ ಸಾಗರಮ್ ।
ವಿಷ್ಣೋಃ ಪ್ರಕ್ರಮಮಾಣಸ್ಯ ತದಾ ತ್ರೀನ್ವಿಕ್ರಮಾನಿವ ॥
ಅನುವಾದ
ಮೂರು ಪಾದಗಳನ್ನು ಬೆಳೆಸಿದ ವಾಮನರೂಪಧಾರಿ ಭಗವಾನ್ ವಿಷ್ಣುವಿನ ರೂಪವಿದ್ದಂತೆ ಸಮುದ್ರವನ್ನು ದಾಟು ವಾಗ ನನ್ನ ರೂಪವೂ ಪ್ರಕಟವಾಗುವುದು.॥25॥
ಮೂಲಮ್ - 26
ಬುದ್ಧ್ಯಾ ಚಾಹಂ ಪ್ರಪಶ್ಯಾಮಿ ಮನಶ್ಚೇಷ್ಟಾ ಚ ಮೇ ತಥಾ ।
ಅಹಂ ದ್ರಕ್ಷ್ಯಾಮಿ ವೈದೇಹಿಂ ಪ್ರಮೋದಧ್ವಂ ಪ್ಲವಂಗಮಾಃ ॥
ಅನುವಾದ
ವಾನರರೇ! ನಾನು ಬುದ್ಧಿಯಿಂದ ಯೋಚಿಸಿದಂತೆಯೇ ನನ್ನ ಮನಸ್ಸಿನ ಚೇಷ್ಟೆಯು ನಡೆಯುತ್ತದೆ. ನಾನು ವಿದೇಹಕುಮಾರಿಯನ್ನು ದರ್ಶಿಸುವೆನು, ಅದರಿಂದ ನೀವು ಆನಂದಿತರಾಗುವಿರಿ ಎಂದು ನನಗೆ ನಿಶ್ಚಯವಾಗಿದೆ.॥26॥
ಮೂಲಮ್ - 27
ಮಾರುತಸ್ಯ ಸಮೋ ವೇಗೇ ಗರುಡಸ್ಯ ಸಮೋ ಜವೇ ।
ಅಯುತಂ ಯೋಜನಾನಾಂ ತು ಗಮಿಷ್ಯಾಮೀತಿ ಮೇ ಮತಿಃ ॥
ಅನುವಾದ
ನಾನು ವೇಗದಲ್ಲಿ ವಾಯುದೇವರು ಹಾಗೂ ಗರುಡನಂತೆ ಇದ್ದೇನೆ. ಈಗ ನಾನು ಹತ್ತುಸಾವಿರ ಯೋಜನಗಳವರೆಗೆ ಹೋಗಬಲ್ಲೆ ಎಂಬ ವಿಶ್ವಾಸ ಉಂಟಾಗಿದೆ.॥27॥
ಮೂಲಮ್ - 28½
ವಾಸವಸ್ಯ ಸವಜ್ರಸ್ಯ ಬ್ರಹ್ಮಣೋ ವಾ ಸ್ವಯಂಭುವಃ ।
ವಿಕ್ರಮ್ಯ ಸಹಸಾ ಹಸ್ತಾದಮೃತಂ ತದಿಹಾನಯೇ ॥
ಲಂಕಾಂ ವಾಪಿ ಸಮುತ್ಕ್ಷಿಪ್ಯ ಗಚ್ಛೇಯಮಿತಿ ಮೇ ಮತಿಃ ।
ಅನುವಾದ
ವಜ್ರಧಾರೀ ಇಂದ್ರ ಅಥವಾ ಸ್ವಯಂಭೂ ಬ್ರಹ್ಮದೇವರ ಕೈಯಿಂದಲೂ ನಾನು ಬಲವಂತವಾಗಿ ಒಮ್ಮೆಗೆ ಅಮೃತವನ್ನು ಕಸಿದುಕೊಂಡು ತರಬಲ್ಲೆನು. ಇಡೀ ಲಂಕೆಯನ್ನು ಭೂಮಿಯಿಂದ ಕಿತ್ತು ಅಂಗೈಯಲ್ಲಿ ಎತ್ತಿ ತರಬಲ್ಲೆನು, ಎಂಬ ವಿಶ್ವಾಸ ನನಗಿದೆ.॥28½॥
ಮೂಲಮ್ - 29½
ತಮೇವಂ ವಾನರಶ್ರೇಷ್ಠಂ ಗರ್ಜಂತಮಮಿತಪ್ರಭಮ್ ॥
ಪ್ರಹೃಷ್ಟಾ ಹರಯಸ್ತತ್ರ ಸಮುದೈಕ್ಷಂತ ವಿಸ್ಮಿತಾಃ ।
ಅನುವಾದ
ಅಮಿತ ತೇಜಸ್ವೀ ವಾನರಶ್ರೇಷ್ಠ ಹನುಮಂತನು ಈ ಪ್ರಕಾರ ಗರ್ಜಿಸುತ್ತಿರುವಾಗ ಸಮಸ್ತ ವಾನರರು ಅತ್ಯಂತ ಹರ್ಷಗೊಂಡು, ಚಕಿತರಾಗಿ ಅವನ ಕಡೆಗೆ ನೋಡುತ್ತಾ ಇದ್ದರು.॥29½॥
ಮೂಲಮ್ - 30½
ತಚ್ಚಾಸ್ಯ ನ ಚನಂ ಶ್ರುತ್ವಾ ಜ್ಞಾತೀನಾಂ ಶೋಕನಾಶನಮ್ ॥
ಉವಾಚ ಪರಿಸಂಹೃಷ್ಟೋ ಜಾಂಬವಾನ್ ಪ್ಲವಗೇಶ್ವರಃ ।
ಅನುವಾದ
ಹನುಮಂತನ ಮಾತುಗಳು ಬಾಂಧವರ ಶೋಕವನ್ನು ನಾಶ ಮಾಡುವಂತಹುದಾಗಿತ್ತು. ಅವನ್ನು ಕೇಳಿ ವಾನರ ಸೇನಾಪತಿ ಜಾಂಬವಂತನಿಗೆ ಬಹಳ ಸಂತೋಷವಾಗಿ ನುಡಿದನು.॥30½॥
ಮೂಲಮ್ - 31½
ವೀರ ಕೇಸರಿಣಃ ಪುತ್ರ ವೇಗವನ್ಮಾರುತಾತ್ಮಜ ॥
ಜ್ಞಾತೀನಾಂ ವಿಪುಲಃ ಶೋಕಸ್ತ್ವಯಾ ತಾತ ಪ್ರಣಾಶಿತಃ ।
ಅನುವಾದ
ವೀರನೇ! ಕೇಸರೀ ಸುಪುತ್ರ! ವೇಗಶಾಲೀ ಪವನಕುಮಾರ! ಅಯ್ಯಾ! ನೀನು ನಿನ್ನ ಬಂಧುಗಳ ಮಹಾನ್ ಶೋಕವನ್ನು ನಾಶ ಮಾಡಿಬಿಟ್ಟೆ.॥31½॥
ಮೂಲಮ್ - 32½
ತವ ಕಲ್ಯಾಣರುಚಯಃ ಕಪಿಮುಖ್ಯಾಃ ಸಮಾಗತಾಃ ॥
ಮಂಗಲಾನ್ಯರ್ಥ ಸಿದ್ಧ್ಯರ್ಥಂ ಕರಿಷ್ಯಂತಿ ಸಮಾಹಿತಾಃ ।
ಅನುವಾದ
ಇಲ್ಲಿಗೆ ಬಂದಿರುವ ಶ್ರೇಷ್ಠ ವಾನರರೆಲ್ಲರೂ ನಿನ್ನ ಮಂಗಲ ಕಾಮನೆ ಮಾಡುತ್ತಿದ್ದಾರೆ. ಈಗ ಇವರು ಕಾರ್ಯಸಿದ್ಧಿಗಾಗಿ ಏಕಾಗ್ರಚಿತ್ತರಾಗಿ ನಿನಗಾಗಿ ಮಂಗಲಕೃತ್ಯ-ಸ್ವಸ್ತಿವಾಚನ ಮುಂತಾದ ಅನುಷ್ಠಾನ ಮಾಡುವರು.॥32॥
ಮೂಲಮ್ - 33½
ಋಷೀಣಾಂ ಚ ಪ್ರಸಾದೇನ ಕಪಿವೃದ್ಧಮತೇನ ಚ ॥
ಗುರೂಣಾಂ ಚ ಪ್ರಸಾದೇನ ಸಂಪ್ಲವ ತ್ವಂ ಮಹಾರ್ಣವಮ್ ।
ಅನುವಾದ
ಋಷಿಗಳ ಪ್ರಸಾದ, ವೃದ್ಧವಾನರರ ಅನುಮತಿ ಹಾಗೂ ಗುರು ಹಿರಿಯರ ಕೃಪೆಯಿಂದ ನೀನು ಈ ಮಹಾಸಾಗರವನ್ನು ದಾಟಿ ಹೋಗುವೆ.॥33॥
ಮೂಲಮ್ - 34½
ಸ್ಥಾಸ್ಯಾಮಶ್ಚೈಕಪಾದೇನ ಯಾವದಾಗಮನಂ ತವ ॥
ತ್ವದ್ಗತಾನಿ ಚ ಸರ್ವೇಷಾಂ ಜೀವನಾನಿ ವನೌಕಸಾಮ್ ।
ಅನುವಾದ
ನೀನು ಮರಳಿ ಬರುವ ತನಕ ನಾವು ನಿನ್ನ ಪ್ರತೀಕ್ಷೆಯಲ್ಲಿ ಒಂಟಿ ಕಾಲಿನಲ್ಲಿ ನಿಂತಿರುತ್ತೇವೆ; ಏಕೆಂದರೆ ನಮ್ಮೆಲ್ಲ ವಾನರರ ಜೀವನ ನಿನ್ನ ಅಧೀನದಲ್ಲೇ ಇದೆ.॥34॥
ಮೂಲಮ್ - 35½
ತತಶ್ಚ ಹರಿಶಾರ್ದೂಲಸ್ತಾನುವಾಚ ವನೌಕಸಃ ॥
ಕೋಽಪಿ ಲೋಕೇನ ಮೇ ವೇಗಂ ಪ್ಲವನೇ ಧಾರಯಿಷ್ಯತಿ ।
ಅನುವಾದ
ಅನಂತರ ಕಪಿಶ್ರೇಷ್ಠ ಹನುಮಂತನು ಆ ವನವಾಸಿ ವಾನರರಲ್ಲಿ ಹೇಳಿದನು - ನಾನು ಇಲ್ಲಿಂದ ಹಾರಿ ಹೋಗುವಾಗ ಜಗತ್ತಿನಲ್ಲಿ ಯಾರೂ ಕೂಡ ನನ್ನ ವೇಗವನ್ನು ಧರಿಸಲಾರರು.॥35½॥
ಮೂಲಮ್ - 36
ಏತಾನೀಹ ನಗಸ್ಯಾಸ್ಯ ಶಿಲಾಸಂಕಟಶಾಲಿನಃ ॥
ಮೂಲಮ್ - 37½
ಶಿಖರಾಣಿ ಮಹೇಂದ್ರಸ್ಯ ಸ್ಥಿರಾಣಿ ಚ ಮಾಹಾಂತಿ ಚ ।
ಯೇಷು ವೇಗಂ ಗಮಿಷ್ಯಾಮಿ ಮಹೇಂದ್ರಶಿಖರೇಷ್ವಹಮ್ ॥
ನಾನಾದ್ರುಮವಿಕೀರ್ಣೇಷು ಧಾತುನಿಷ್ಪಂದ ಶೋಭಿಷು ।
ಅನುವಾದ
ಶಿಲೆಗಳ ಸಮೂಹದಿಂದ ಶೋಭಿಸುವ ಕೇವಲ ಈ ಮಹೇಂದ್ರ ಪರ್ವತದ ಈ ಶಿಖರವೇ ಎತ್ತರವಾಗಿದ್ದು, ಸ್ಥಿರವಾಗಿದೆ. ಅದರ ಮೇಲೆ ನಾನಾ ಪ್ರಕಾರದ ವೃಕ್ಷಗಳು ಹರಡಿಕೊಂಡಿದ್ದು, ಗೈರಿಕಾದಿ ಧಾತುಗಳು ಶೋಭಿಸುತ್ತಿವೆ. ಈ ಮಹೇಂದ್ರ ಶಿಖರಗಳಲ್ಲೇ ವೇಗವಾಗಿ ಕಾಲನ್ನಿಟ್ಟು ನಾನು ಇಲ್ಲಿಂದ ಹಾರುವೆನು.॥36-37½॥
ಮೂಲಮ್ - 38½
ಏತಾನಿ ಮಮ ವೇಗಂ ಹಿ ಶಿಖರಾಣಿ ಮಹಾಂತಿ ಚ ॥
ಪ್ಲವತೋ ಧಾರಯಿಷ್ಯಂತಿ ಯೋಜನಾನಾಮಿತಃ ಶತಮ್ ।
ಅನುವಾದ
ಇಲ್ಲಿಂದ ನೂರು ಯೋಜನಕ್ಕಾಗಿ ಹಾರುವಾಗ ಮಹೇಂದ್ರ ಪರ್ವತದ ಈ ಶಿಖರವೇ ನನ್ನ ವೇಗವನ್ನು ಧರಿಸಬಲ್ಲದು.॥38½॥
ಮೂಲಮ್ - 39
ತತಸ್ತು ಮಾರುತಪ್ರಖ್ಯಃ ಸ ಹರಿರ್ಮಾರುತಾತ್ಮಜಃ ।
ಆರುರೋಹ ನಗಶ್ರೇಷ್ಠಂ ಮಹೇಂದ್ರಮರಿಮರ್ದನಃ ॥
ಅನುವಾದ
ಹೀಗೆ ಹೇಳಿ ವಾಯುವಿನಂತೆ ಮಹಾಪರಾಕ್ರಮಿ ಶತ್ರುಮರ್ದನ ಪವನಕುಮಾರ ಹನುಮಂತನು ಪರ್ವತಶ್ರೇಷ್ಠ ಮಹೇಂದ್ರವನ್ನು ಹತ್ತಿದನು.॥39॥
ಮೂಲಮ್ - 40
ವೃತಂ ನಾನಾವಿಧೈಃ ರ್ವೃಕ್ಷೈರ್ಮೃಗಸೇವಿತಶಾದ್ವಲಮ್ ।
ಲತಾಕುಸುಮಸಂಬಾಧಂ ನಿತ್ಯಪುಷ್ಪಲದ್ರುಮಮ್ ॥
ಅನುವಾದ
ಆ ಪರ್ವತವು ನಾನಾಪ್ರಕಾರದ ಪುಷ್ಪಯುಕ್ತ ವೃಕ್ಷಗಳಿಂದ ತುಂಬಿತ್ತು. ಕಾಡುಮೃಗಗಳು ಅಲ್ಲಿಯ ಹಸುರಾದ ಹುಲ್ಲನ್ನು ಮೇಯುತ್ತಿದ್ದವು. ಲತೆಗಳಿಂದ ಹೂವುಗಳಿಂದ ದಟ್ಟವಾಗಿ ಕಾಣುತ್ತಿತ್ತು ಮತ್ತು ಅಲ್ಲಿಯ ವೃಕ್ಷಗಳು ಸದಾ ಹೂವು-ಹಣ್ಣುಗಳನ್ನು ಬಿಡುತ್ತಿದ್ದವು.॥40॥
ಮೂಲಮ್ - 41
ಸಿಂಹಶಾರ್ದೂಲಸಹಿತಂ ಮತ್ತಮಾತಂಗ ಸೇವಿತಮ್ ।
ಮತ್ತದ್ವಿಜಗಣೋದ್ಘುಷ್ಟಂ ಸಲಿಲೋತ್ಪೀಡ ಸಂಕುಲಮ್ ॥
ಅನುವಾದ
ಮಹೇಂದ್ರ ಪರ್ವತದ ಅರಣ್ಯದಲ್ಲಿ ಹುಲಿ, ಸಿಂಹಗಳು ವಾಸಿಸುತ್ತಿದ್ದವು, ಮತ್ತಗಜಗಳು ಸಂಚರಿಸುತ್ತಿದ್ದವು, ಮದಮತ್ತ ಪಕ್ಷಿಗಳ ಸಮೂಹ ಕಲರವ ಮಾಡುತ್ತಿದ್ದವು. ನೀರಿನ ಝರಿಗಳಿಂದ, ಜಲಪಾತಗಳಿಂದ ಆ ಪರ್ವತವು ವ್ಯಾಪ್ತವಾಗಿ ಕಾಣುತ್ತಿತ್ತು.॥41॥
ಮೂಲಮ್ - 42
ಮಹದ್ಭಿರುಚ್ಛ್ರಿತಂ ಶೃಂಗೈರ್ಮಹೇಂದ್ರಂ ಸ ಮಹಾಬಲಃ ।
ವಿಚಚಾರ ಹರಿಶ್ರೇಷ್ಠೋ ಮಹೇಂದ್ರಸಮವಿಕ್ರಮಃ ॥
ಅನುವಾದ
ದೊಡ್ಡ-ದೊಡ್ಡ ಶಿಖರಗಳಿಂದ ಎತ್ತರವಾಗಿ ಕಾಣುವ ಮಹೇಂದ್ರ ಪರ್ವತದ ಮೇಲೆ ಆರೂಢನಾಗಿ ಇಂದ್ರನಂತಹ ಪರಾಕ್ರಮಿ ಮಹಾಬಲಿ ಕಪಿಶ್ರೇಷ್ಠ ಹನುಮಂತನು ಅಲ್ಲಿ ಅತ್ತ-ಇತ್ತ ಅಲೆಯತೊಡಗಿದನು.॥42॥
ಮೂಲಮ್ - 43
ಪಾದಾಭ್ಯಾಂ ಪೀಡಿತಸ್ತೇನ ಮಹಾಶೈಲೋ ಮಹಾತ್ಮನಾ ।
ರರಾಸ ಸಿಂಹಾಭಿಹತೋ ಮಹಾನ್ಮತ್ತ ಇವ ದ್ವಿಪಃ ॥
ಅನುವಾದ
ಮಹಾಕಾಯ ಹನುಮಂತನ ಎರಡೂ ಕಾಲುಗಳಂದ ಒತ್ತಲ್ಪಟ್ಟ ಆ ಮಹಾನ್ ಪರ್ವತವು ಸಿಂಹನಿಂದ ಆಕ್ರಾಂತರಾದ ಮಹಾ ಮದಮತ್ತ ಗಜರಾಜನಂತೆ ಚೀತ್ಕರಿಸತೊಡಗಿತು. (ಅಲ್ಲಿ ಇರುವ ಪ್ರಾಣಿಗಳ ಶಬ್ದವೇ ಅದರ ಆರ್ತ ಚೀತ್ಕಾರದಂತೆ ಇತ್ತು..॥43॥
ಮೂಲಮ್ - 44
ಮುಮೋಚ ಸಲಿಲೋತ್ಪೀಡಾನ್ವಿಪ್ರಕೀರ್ಣಶೀಲೋಚ್ಚಯಃ ।
ವಿತ್ರಸ್ತಮೃಗಮಾತಂಗಃ ಪ್ರಕಂಪತಮಹಾದ್ರುಮಃ ॥
ಅನುವಾದ
ಅದರ ಶಿಲಾಖಂಡಗಳು ಅತ್ತ-ಇತ್ತ ಚದುರಿಹೋದವು. ಅದರಿಂದ ಹೊಸ-ಹೊಸ ಝರಿಗಳು ಹುಟ್ಟಿ ಹರಿದವು. ಅಲ್ಲಿ ಇರುವ ಜಿಂಕೆಗಳು, ಆನೆಗಳು ಭಯದಿಂದ ನಡುಗಿ ಹೋದವು. ದೊಡ್ಡ-ದೊಡ್ಡ ವೃಕ್ಷಗಳು ಕಂಪಿಸತೊಡಗಿದವು.॥44॥
ಮೂಲಮ್ - 45
ನಾಗಗಂಧರ್ವಮಿಥುನೈಃ ಪಾನಸಂಸರ್ಗಕರ್ಕಶೈಃ ।
ಉತ್ಪತದ್ಭಿರ್ವಿಹಂಗೈಶ್ಚ ವಿದ್ಯಾಧರಗಣೈರಪಿ ॥
ಮೂಲಮ್ - 46
ತ್ಯಜ್ಯಮಾನಮಹಾಸಾನುಃ ಸಂನಿಲೀನಮಹೋರಗಃ ।
ಶೈಲಶೃಂಗಶಿಲೋತ್ಪಾತಸ್ತದಾಭೂತ್ಸ ಮಹಾಗಿರಿಃ ॥
ಅನುವಾದ
ಮಧುಪಾನದಿಂದ ಉನ್ಮತ್ತರಾದ ಅನೇಕಾನೇಕ ಗಂಧರ್ವರ ಜೋಡಿಗಳು, ವಿದ್ಯಾಧರರ ಸಮುದಾಯಗಳು ಮತ್ತು ಹಾರಾಡುತ್ತಿರುವ ಪಕ್ಷಿಗಳೂ ಕೂಡ ಆ ಪರ್ವತದ ವಿಶಾಲ ಶಿಖರಗಳನ್ನು ಬಿಟ್ಟು ಹೋದವು. ದೊಡ್ಡ-ದೊಡ್ಡ ಸರ್ಪಗಳು ಬಿಲದಲ್ಲಿ ಅಡಗಿಕೊಂಡವು. ಪರ್ವತ ಶಿಖರಗಳಿಂದ ಬಂಡೆ ಕಲ್ಲುಗಳು ಪುಡಿ-ಪುಡಿಯಾಗಿ ಬೀಳತೊಡಗಿದವು. ಹೀಗೆ ಆ ಪರ್ವತವು ದೊಡ್ಡ ದುರವಸ್ಥೆಗೆ ಈಡಾಯಿತು.॥45-46॥
ಮೂಲಮ್ - 47
ನಿಃಶ್ವಸದ್ಭಿಸ್ತದಾ ತೈಸ್ತು ಭುಜಂಗೈರರ್ಧನಿಃಸೃತೈಃ ।
ಸಪತಾಕ ಇವಾಭಾತಿ ಸ ತದಾ ಧರಣೀಧರಃ ॥
ಅನುವಾದ
ಬಿಲಗಳಿಂದ ಅರ್ಧ ಹೊರಗೆ ಬಂದು ದೀರ್ಘವಾಗಿ ಬುಸುಗುಟ್ಟುತ್ತಿರುವ ಸರ್ಪಗಳಿಂದ ಆ ಮಹಾ ಪರ್ವತವು ಆಗ ಅನೇಕಾನೇಕ ಪತಾಕೆಗಳಿಂದ ಅಲಂಕೃತವಾಗಿರುವಂತೆ ಕಂಡುಬರುತ್ತಿತ್ತು.॥47॥
ಮೂಲಮ್ - 48
ಋಷಿಭಿಸ್ತ್ರಾ ಸಸಂಭ್ರಾಂತೈಸ್ತ್ಯಜ್ಯಮಾನಃ ಶಿಲೋಚ್ಚಯಃ ।
ಸೀದನ್ಮಹತಿ ಕಾಂತಾರೇ ಸಾರ್ಥಹೀನ ಇವಾಧ್ವಗಃ ॥
ಅನುವಾದ
ಭಯದಿಂದ ಗಾಬರಿಗೊಂಡ ಋಷಿಮುನಿಗಳು ಆ ಪರ್ವತವನ್ನು ಬಿಟ್ಟು ನಡೆದರು. ವಿಶಾಲ ವನದಲ್ಲಿ ಸಂಗಡಿಗರಿಂದ ಅಗಲಿ ಒಬ್ಬಂಟಿಗನಾದ ದಾರಿಹೋಕನಂತೆ, ಆ ಮಹಾನ್ ಮಹೇಂದ್ರ ಪರ್ವತದ ಸ್ಥಿತಿ ಉಂಟಾಗಿತ್ತು.॥48॥
ಮೂಲಮ್ - 49
ಸ ವೇಗವಾನ್ ವೇಗಸಮಾಹಿತಾತ್ಮಾ
ಹರಿಪ್ರವೀರಃ ಪರವೀರಹಂತಾ ।
ಮನಃ ಸಮಾಧಾಯ ಮಹಾನುಭಾವೋ
ಜಗಮಾ ಲಂಕಾಂ ಮನಸಾ ಮನಸ್ವೀ ॥
ಅನುವಾದ
ಶತ್ರುವೀರರನ್ನು ಸಂಹರಿಸುವ ವಾನರಸೈನ್ಯದ ಶ್ರೇಷ್ಠವೀರ, ವೇಗಶಾಲಿ, ಮಹಾಮನಸ್ವೀ, ಮಹಾನುಭಾವ, ಹನುಮಂತನ ಮನಸ್ಸು ವೇಗವಾಗಿ ಹಾರುವ ಯೋಜನೆಯಲ್ಲಿ ತೊಡಗಿತ್ತು. ಅವನು ಚಿತ್ತವನ್ನು ಏಕಾಗ್ರಗೊಳಿಸಿ ಮನಸ್ಸಿನಲ್ಲೇ ಲಂಕೆಯನ್ನು ಸ್ಮರಿಸಿದನು.॥49॥
ಮೂಲಮ್ (ಸಮಾಪ್ತಿಃ)
ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡ ಅರವತ್ತೇಳನೆಯ ಸರ್ಗ ಪೂರ್ಣವಾಯಿತು ॥67॥
ಅನುವಾದ (ಸಮಾಪ್ತಿಃ)
ಕಿಷ್ಕಿಂಧಾಕಾಂಡವು ಮುಗಿಯಿತು.