वाचनम्
ಭಾಗಸೂಚನಾ
ಜಾಂಬವಂತನು ಹನುಮಂತನಿಗೆ ಅವನ ಹುಟ್ಟಿನ ಕಥೆಯನ್ನು ವಿವರಿಸಿ ಹೇಳಿ, ಸಮುದ್ರವನ್ನು ದಾಟಲು ಪ್ರೋತ್ಸಾಹಿಸಿದುದು
ಮೂಲಮ್ - 1
ಅನೇಕಶತಸಾಹಸ್ರೀಂ ವಿಷಣ್ಣಾಂ ಹರಿವಾಹಿನೀಮ್ ।
ಜಾಂಬವಾನ್ಸಮುದೀಕ್ಷ್ಯೈವಂ ಹನೂಮಂತಮಥಾಬ್ರವೀತ್ ॥
ಅನುವಾದ
ನಿರುತ್ಸಾಹಿಗಳಾಗಿ ಕುಳಿತಿದ್ದ ಅನೇಕ ಲಕ್ಷ ಕಪಿಸೈನಿಕರನ್ನು ನೋಡಿ ಜಾಂಬವಂತನು ಹನುಮಂತನಿಗೆ ಹೇಳಿದನು.॥1॥
ಮೂಲಮ್ - 2
ವೀರ ವಾನರಲೋಕಸ್ಯ ಸರ್ವಶಾಸ್ತ್ರ ವಿದಾಂವರ ।
ತೂಷ್ಣೀಮೇಕಾಂತಮಾಶ್ರಿತ್ಯ ಹನೂಮನ್ಕಿಂ ನ ಜಲ್ಪಸಿ ॥
ಅನುವಾದ
ವಾನರ ಜಗತ್ತಿನ ವೀರನೇ! ಸಮಸ್ತ ಶಾಸ್ತ್ರವೇತ್ತರಲ್ಲಿ ಶ್ರೇಷ್ಠನಾದ ಹನುಮಂತನೇ! ನೀನು ಏಕಾಂತದಲ್ಲಿ ಬಂದು ಸುಮ್ಮನೆ ಏಕೆ ಕುಳಿತಿರುವೆ? ಏನಾದರು ಏಕೆ ಮಾತನಾಡುವುದಿಲ್ಲ.॥2॥
ಮೂಲಮ್ - 3
ಹನೂಮನ್ಹರಿರಾಜಸ್ಯ ಸುಗ್ರೀವಸ್ಯ ಸಮೋ ಹ್ಯಸಿ ।
ರಾಮಲಕ್ಷ್ಮಣಯೋಶ್ಚಾಪಿ ತೇಜಸಾ ಚ ಬಲೇನ ಚ ॥
ಅನುವಾದ
ಹನುಮಂತನೇ! ನೀನಾದರೋ ವಾನರರಾಜ ಸುಗ್ರೀವನಂತೆ ಪರಾಕ್ರಮಿಯಾಗಿರುವೆ. ತೇಜ ಮತ್ತು ಬಲದದಲ್ಲಿ ಶ್ರೀರಾಮ-ಲಕ್ಷ್ಮಣರಿಗೆ ತುಲ್ಯನಾಗಿರುವೆ.॥3॥
ಮೂಲಮ್ - 4
ಅರಿಷ್ಟನೇಮಿನಃ ಪುತ್ರೋ ವೈನತೇಯೋ ಮಹಾಬಲಃ ।
ಗುರುತ್ಮಾನಿವ ವಿಖ್ಯಾತ ಉತ್ತಮಃ ಸರ್ವಪಕ್ಷಿಣಾಮ್ ॥
ಅನುವಾದ
ಕಶ್ಯಪನ ಮಹಾಬಲಿ ಪುತ್ರ ಮತ್ತು ಸಮಸ್ತ ಪಕ್ಷಿಗಳಲ್ಲಿ ಶ್ರೇಷ್ಠ ವಿನತಾನಂದನ ಗರುಡನಂತೆಯೇ ನೀನು ವಿಖ್ಯಾತ ಶಕ್ತಿಶಾಲಿ ಹಾಗೂ ತೀವ್ರ ಗಾಮಿಯಾಗಿರುವೆ.॥4॥
ಮೂಲಮ್ - 5
ಬಹುಶೋ ಹಿ ಮಯಾ ದೃಷ್ಟಃ ಸಾಗರೇ ಸ ಮಹಾಬಲಃ ।
ಭುಜಂಗಾನುದ್ಧರನ್ ಪಕ್ಷೀ ಮಹಾಬಾಹುರ್ಮಹಾಬಲಃ ॥
ಅನುವಾದ
ಮಹಾಬಲೀ ಮಹಾಬಾಹು ಪಕ್ಷಿರಾಜ ಗರುಡನನ್ನು ನಾನು ಸಮುದ್ರದಲ್ಲಿ ಅನೇಕ ಬಾರಿ ನೋಡಿರುವೆ. ಅವನು ಅನೇಕ ದೊಡ್ಡ-ದೊಡ್ಡ ಸರ್ಪಗಳನ್ನು ಅಲ್ಲಿಂದ ಎತ್ತಿಕೊಂಡು ಹೋಗುತ್ತಿದ್ದನು.॥5॥
ಮೂಲಮ್ - 6
ಪಕ್ಷಯೋರ್ಯದ್ಬಲಂ ತಸ್ಯ ಭುಜವೀರ್ಯಬಲಂ ತವ ।
ವಿಕ್ರಮಶ್ಚಾಪಿ ವೇಗಶ್ಚ ನ ತೇ ತೇನಾಪಹೀಯತೇ ॥
ಅನುವಾದ
ಅವನ ಎರಡು ರೆಕ್ಕೆಗಳಲ್ಲಿ ಇರುವ ಬಲವೇ, ಪರಾಕ್ರಮವೇ ನಿನ್ನ ಎರಡು ಭುಜಗಳಲ್ಲಿಯೂ ಇದೆ. ಅದರಿಂದ ನಿನ್ನ ವೇಗ ಮತ್ತು ವಿಕ್ರಮ ಅವನಿಗೆ ಕಡಿಮೆ ಇಲ್ಲ.॥6॥
ಮೂಲಮ್ - 7
ಬಲಂ ಬುದ್ಧಿಶ್ಚ ತೇಜಶ್ಚ ಸತ್ತ್ವಂ ಚ ಹರಿಪುಂಗವ ।
ವಿಶಿಷ್ಟಂ ಸರ್ವಭೂತೇಷು ಕಿಮಾತ್ಮಾನಂ ನ ಸಜ್ಜಸೇ ॥
ಅನುವಾದ
ವಾನರ ಶಿರೋಮಣಿಯೇ! ನಿನ್ನ ಬಲ, ಬುದ್ಧಿ, ತೇಜ, ಧೈರ್ಯ ಇವೂ ಕೂಡ ಸಮಸ್ತ ಪ್ರಾಣಿಗಳಿಗಿಂತ ಮಿಗಿಲಾಗಿದೆ. ಹಾಗಿರುವಾಗ ನೀನು ಸಮುದ್ರವನ್ನು ದಾಟಲು ಏಕೆ ಸಿದ್ಧನಾಗುವುದಿಲ್ಲ.॥7॥
ಮೂಲಮ್ - 8
ಅಪ್ಸರಾಽಪ್ಸರಸಾಂ ಶ್ರೇಷ್ಠಾ ವಿಖ್ಯಾತಾ ಪುಂಜಿಕಸ್ಥಲಾ ।
ಆಂಜನೇತಿಪರಿಖ್ಯಾತಾ ಪತ್ನೀ ಕೇಸರಿಣೋ ಹರೇಃ ॥
ಮೂಲಮ್ - 9½
ವಿಖ್ಯಾತಾ ತ್ರಿಷು ಲೋಕೇಷು ರೂಪೇಣಾಪ್ರತಿಮಾ ಭುವಿ ।
ಅಭಿಶಾಪಾದಭೂತ್ತಾತ ಕಪಿತ್ವೇ ಕಾಮರೂಪಿಣೀ ॥
ದುಹಿತಾ ವಾನರೇಂದ್ರಸ್ಯ ಕುಂಜರಸ್ಯ ಮಹಾತ್ಮನಃ ।
ಅನುವಾದ
(ವೀರವರನೇ! ನಿನ್ನ ಪ್ರಾದುರ್ಭಾವದ ಕಥೆ ಇಂತಿದೆ -) ಪುಂಜಿಕಸ್ಥಲಾ ಎಂಬ ವಿಖ್ಯಾತ ಅಪ್ಸರೆಯು ಸಮಸ್ತ ಅಪ್ಸರೆಯರಲ್ಲಿ ಅಗ್ರಗಣ್ಯಳಾಗಿದ್ದಾಳೆ. ಅಯ್ಯಾ! ಒಮ್ಮೆ ಶಾಪವಶದಿಂದ ಆಕೆಯು ಕಪಿಯೋನಿಯಲ್ಲಿ ಅವತರಿಸಿದಳು. ಆಗ ಅವಳು ವಾನರರಾಜ ಮಹಾಮನಸ್ವೀ ಕುಂಜರನ ಪುತ್ರಿಯಾಗಿ ಇಚ್ಛಾನುಸಾರ ರೂಪವನ್ನು ಧರಿಸುವವಳಾಗಿದ್ದಳು. ಈ ಭೂತಳದಲ್ಲಿ ಆಕೆಗೆ ಸಮಾನರಾದ ರೂಪವತಿಯು ಬೇರೆ ಯಾರೂ ಇರಲಿಲ್ಲ. ಅವಳು ಮೂರು ಲೋಕಗಳಲ್ಲಿ ವಿಖ್ಯಾತಳಾಗಿದ್ದು, ಅಂಜನೆ ಎಂಬ ಹೆಸರಿನ ಆಕೆಯು ವಾನರ ರಾಜಕೇಸರಿಯ ಪತ್ನಿಯಾದಳು.॥8-9॥
ಮೂಲಮ್ - 10
ಮಾನುಷಂ ವಿಗ್ರಹಂ ಕೃತ್ವಾ ರೂಪಯೌವನಶಾಲಿನೀ ॥
ಮೂಲಮ್ - 11
ವಿಚಿತ್ರಮಾಲ್ಯಾಭರಣಾ ಕದಾಚಿತ್ ಕ್ಷೌಮಧಾರಿಣೀ ।
ಅಚರತ್ಪರ್ವತಸ್ಯಾಗ್ರೇ ಪ್ರಾವೃಡಂಬುದಸಂನಿಭೇ ॥
ಅನುವಾದ
ಒಮ್ಮೆ ರೂಪ ಯೌವನದಿಂದ ಸುಶೋಭಿತವಾದ ಅಂಜನೆಯು ಮಾನವ ಸ್ತ್ರೀಯ ರೂಪ ಧರಿಸಿ, ವರ್ಷಾಕಾಲದ ಮೇಘದಂತೆ ಶ್ಯಾಮಲ ಕಾಂತಿಯುಳ್ಳ ಒಂದು ಪರ್ವತದ ಶಿಖರದಲ್ಲಿ ವಿಚರಿಸುತ್ತಿದ್ದಳು. ಆಕೆಯು ರೇಶ್ಮೆಯ ಸೀರೆಯನ್ನು ಉಟ್ಟಿದ್ದು, ಹೂವುಗಳ ವಿಚಿತ್ರ ಆಭೂಷಣಗಳಿಂದ ವಿಭೂಷಿತಳಾಗಿದ್ದಳು.॥10-11॥
ಮೂಲಮ್ - 12
ತಸ್ಯಾ ವಸ್ತ್ರಂ ವಿಶಾಲಾಕ್ಷ್ಯಾಃ ಪೀತಂ ರಕ್ತದಶಂ ಶುಭಮ್ ।
ಸ್ಥಿತಾಯಾಃ ಸರ್ವತಸ್ಯಾಗ್ರೇ ಮಾರುತೋಽಪಹರಚ್ಛನೈಃ ॥
ಅನುವಾದ
ಆ ವಿಶಾಲ ಲೋಚನೆಯ ಸುಂದರ ವಸ್ತ್ರವು ಹಳದಿ ಬಣ್ಣದಾಗಿದ್ದು, ಅಂಚುಗಳು ಕೆಂಪಗಾಗಿದ್ದವು. ಅವಳು ಪರ್ವತಾಗ್ರದಲ್ಲಿ ನಿಂತಿದ್ದಳು. ಆಗಲೇ ವಾಯುದೇವರು ಆಕೆಯ ವಸ್ತ್ರವನ್ನು ನಿಧಾನವಾಗಿ ಹಾರಿಸಿದರು.॥12॥
ಮೂಲಮ್ - 13
ಸ ದದರ್ಶ ತತಸ್ತಸ್ಯಾ ವೃತ್ತಾವೂರೂ ಸುಸಂಹತೌ ।
ಸ್ತನೌ ಚ ಪೀನೌ ಸಹಿತೌ ಸುಜಾತಂ ಚಾರು ಚಾನನಮ್ ॥
ಅನುವಾದ
ಅನಂತರ ಆಕೆಯ ಪರಸ್ಪರ ಸೇರಿಕೊಂಡಿದ್ದ ದುಂಡು-ದುಂಡಾದ ತೊಡೆಗಳನ್ನು, ಒಂದಕ್ಕೊಂದು ಅಂಟಿಕೊಂಡಿದ್ದ ಸ್ಥೂಲವಾದ ಸ್ತನದ್ವಯವನ್ನು, ಮನೋಹರ ಮುಖವನ್ನು ವಾಯುದೇವರು ನೋಡಿದರು.॥13॥
ಮೂಲಮ್ - 14
ತಾಂ ಬಲಾದಾಯತಶ್ರೋಣೀಂ ತನುಮಧ್ಯಾಂ ಯಶಸ್ವಿನೀಮ್ ।
ದೃಷ್ಟ್ವೈವ ಶುಭಸರ್ವಾಂಗೀಂ ಪವನಃ ಕಾಮಮೋಹಿತಃ ॥
ಅನುವಾದ
ಎತ್ತರವಾಗಿಯೂ, ವಿಸ್ತೃತವಾದ ಇದ್ದ ನಿತಂಬಗಳನ್ನು, ತೆಳುವಾದ ಕಟಿಪ್ರದೇಶವನ್ನು, ಪರಮ ಸುಂದರಾಂಗಳಾದ ಯಶಸ್ವಿನೀ ಅಂಜನೆಯನ್ನು, ಬಲವಂತವಾಗಿ ನೋಡಿ ಪವನ ದೇವನು ಕಾಮಮೋಹಿತನಾದನು.॥14॥
ಮೂಲಮ್ - 15
ಸ ತಾಂ ಭುಜಾಭ್ಯಾಂ ದೀರ್ಘಾಭ್ಯಾಂ ಪರ್ಯಷ್ವಜತ ಮಾರುತಃ ।
ಮನ್ಮಥಾವಿಷ್ಟಸರ್ವಾಂಗೋ ಗತಾತ್ಮಾ ತಾಮನಿಂದಿತಾಮ್ ॥
ಅನುವಾದ
ಅವನ ಸರ್ವಾಂಗಗಳಲ್ಲಿ ಕಾಮಭಾವವು ಆವೇಶಿತವಾಗಿತ್ತು. ಮನಸ್ಸು ಅಂಜನೆಯಲ್ಲೆ ನೆಟ್ಟಿತು. ಅವನು ಆ ಅನಿಂದ್ಯ ಸುಂದರಿಯನ್ನು ತನ್ನ ವಿಶಾಲ ಬಾಹುಗಳಿಂದ ಬಾಚಿ ತಬ್ಬಿಕೊಂಡನು.॥15॥
ಮೂಲಮ್ - 16
ಸಾ ತು ತತ್ರೈವ ಸಂಭ್ರಾಂತಾ ಸುವ್ರತಾ ವಾಕ್ಯಮಬ್ರವೀತ್ ।
ಏಕಪತ್ನೀವ್ರತಮಿದಂ ಕೋ ನಾಶಯಿತುಮಿಚ್ಛತಿ ॥
ಅನುವಾದ
ಅಂಜನೆಯು ಉತ್ತಮ ವ್ರತವನ್ನು ಪಾಲಿಸುವ ಸಾಧ್ವೀನಾರಿಯಾಗಿದ್ದಳು. ಆದ್ದರಿಂದ ಆ ಅವಸ್ಥೆಯಲ್ಲಿ ಆಕೆಯು ಗಾಬರಿಗೊಂಡು - ‘ಯಾರು ನನ್ನ ಈ ಪಾತಿವ್ರತ್ಯವನ್ನು ನಾಶ ಮಾಡಲು ಬಯಸುತ್ತಿರುವನು?’ ಎಂದು ಹೇಳಿದಳು.॥16॥
ಮೂಲಮ್ - 17
ಅಂಜನಾಯಾ ವಚಃ ಶ್ರುತ್ವಾ ಮಾರುತಃ ಪ್ರತ್ಯಭಾಷತ ।
ನ ತ್ವಾಂ ಹಿಂಸಾಮಿ ಸುಶ್ರೋಣಿ ಮಾ ಭೂತ್ತೇ ಮನಸೋ ಭಯಮ್ ॥
ಅನುವಾದ
ಅಂಜನೆಯ ಈ ಮಾತನ್ನು ಕೇಳಿ ವಾಯುದೇವನು ಉತ್ತರಿಸಿದನು - ಸುಂದರಿಯೇ! ನಾನು ನಿನ್ನ ಏಕಪತ್ನೀ ವ್ರತವನ್ನು ಕೆಡಿಸಿಲ್ಲ. ಆದ್ದರಿಂದ ನಿನ್ನ ಮನಸ್ಸಿನಲ್ಲಿರುವ ಭಯವನ್ನು ಬಿಡು.॥17॥
ಮೂಲಮ್ - 18
ಮನಸಾಸ್ಮಿ ಗತೋ ಯತ್ತ್ವಾಂ ಪರಿಷ್ವಜ್ಯ ಯಶಸ್ವಿನೀ ।
ವೀರ್ಯವಾನ್ಬುದ್ಧಿ ಸಂಪನ್ನಸ್ತವ ಪುತ್ರೋ ಭವಿಷ್ಯತಿ ॥
ಅನುವಾದ
ಯಶಸ್ವಿನೀ! ನಾನು ಅವ್ಯಕ್ತ ರೂಪದಿಂದ ನಿನ್ನನ್ನು ಆಲಿಂಗಿಸಿ ಮಾನಸಿಕ ಸಂಕಲ್ಪದಿಂದ ನಿನ್ನೊಂದಿಗೆ ಸಮಾಗಮ ಮಾಡಿರುವೆನು. ಇದರಿಂದ ನಿನಗೆ ಬಲ-ಪರಾಕ್ರಮ ಸಂಪನ್ನ ಹಾಗೂ ಬುದ್ಧಿವಂತ ಪುತ್ರನು ಹುಟ್ಟುವನು.॥18॥
ಮೂಲಮ್ - 19
ಮಹಾಸತ್ತ್ವೋ ಮಹಾತೇಜಾ ಮಹಾಬಲಪರಾಕ್ರಮಃ ।
ಲಂಘನೇ ಪ್ಲವನೇ ಚೈವ ಭವಿಷ್ಯತಿ ಮಯಾ ಸಮಃ ॥
ಅನುವಾದ
ಅವನು ಮಹಾ ಧೈರ್ಯವಂತ, ಮಹಾತೇಜಸ್ವೀ, ಮಹಾಬಲಿ, ಮಹಾಪರಾಕ್ರಮಿ ಹಾಗೂ ಹಾರುವುದರಲ್ಲಿ, ನೆಗೆಯುವುದರಲ್ಲಿ ನನಗೆ ಸಮಾನನಾಗುವನು.॥19॥
ಮೂಲಮ್ - 20
ಏವಮುಕ್ತಾ ತತಸ್ತುಷ್ಟಾ ಜನನೀ ತೇ ಮಹಾಕಪೇ ।
ಗುಹಾಯಾಂ ತ್ವಾಂ ಮಹಾಬಾಹೋ ಪ್ರಜಜ್ಞೇ ಪ್ಲವಗರ್ಷಭ ॥
ಅನುವಾದ
ಮಹಾಕಪಿಯೇ! ವಾಯುದೇವನು ಹೀಗೆ ಹೇಳಿದಾಗ ನಿನ್ನ ತಾಯಿ ಪ್ರಸನ್ನಗೊಂಡಳು. ಮಹಾಬಾಹೋ! ವಾನರ ಶ್ರೇಷ್ಠನೇ! ಮತ್ತೆ ಅವಳು ಗುಹೆಯೊಂದರಲ್ಲಿ ನಿನಗೆ ಜನ್ಮ ನೀಡಿದಳು.॥20॥
ಮೂಲಮ್ - 21
ಅಭ್ಯುತ್ಥಿತಂ ತತಃ ಸೂರ್ಯಂ ಬಾಲೋ ದೃಷ್ಟ್ವಾ ಮಹಾವನೇ ।
ಫಲಂ ಚೇತಿ ಜಿಘೃಕ್ಷುಸ್ತ್ವ ಮುತ್ಪ್ಲುತ್ಯಾಭ್ಯುತ್ಪತೋ ದಿವಮ್ ॥
ಅನುವಾದ
ಬಾಲ್ಯದಲ್ಲಿ ಒಂದು ದಿನ ವಿಶಾಲ ಕಾಡಿನಲ್ಲಿ ಉದಯಿಸುತ್ತಿರುವ ಸೂರ್ಯನನ್ನು ನೋಡಿ, ಯಾವುದೋ ಫಲವಾಗಿದೆ ಎಂದು ನೀನು ತಿಳಿದು ಕೂಡಲೇ ಅದನ್ನು ತರಲು ಆಕಾಶಕ್ಕೆ ನೆಗೆದೆ.॥21॥
ಮೂಲಮ್ - 22
ಶತಾನಿ ತ್ರೀಣಿ ಗತ್ವಾಥ ಯೋಜನಾನಾಂ ಮಹಾಕಪೇ ।
ತೇಜಸಾ ತಸ್ಯ ನಿರ್ಧೂತೋ ನ ವಿಷಾದಂ ಗತಸ್ತತಃ ॥
ಅನುವಾದ
ಮಹಾಕಪಿಯೇ! ಮೂರುನೂರು ಯೋಜನ ಎತ್ತರಕ್ಕೆ ಹೋದಾಗಲೂ ಸೂರ್ಯನ ತೇಜದಿಂದ ಆಕ್ರಾಂತನಾಗಿದ್ದರೂ ನಿನ್ನ ಮನಸ್ಸಿನಲ್ಲಿ ಖೇದ ಅಥವಾ ಚಿಂತೆಯಾಗಲಿಲ್ಲ.॥22॥
ಮೂಲಮ್ - 23
ತ್ವಾಮಪ್ಯುಗತಂ ತೂರ್ಣಮಂತರಿಕ್ಷಂ ಮಹಾಕಪೇ ।
ಕ್ಷಿಪ್ತಮಿಂದ್ರೇಣ ತೇ ವಜ್ರಂ ಕ್ರೋಧಾವಿಷ್ಟೇನ ಧೀಮತಾ ॥
ಅನುವಾದ
ಕಪಿಪ್ರವರನೇ! ಅಂತರಿಕ್ಷಕ್ಕೆ ಹೋಗಿ ನೀನು ಸೂರ್ಯನ ಬಳಿಗೆ ತಲುಪಿದಾಗ ಇಂದ್ರನು ಸಿಟ್ಟುಗೊಂಡು ನಿನ್ನ ಮೇಲೆ ತೇಜಸ್ಸುಳ್ಳ ವಜ್ರಾಯುಧವನ್ನು ಪ್ರಯೋಗಿಸಿದನು.॥23॥
ಮೂಲಮ್ - 24
ತದಾ ಶೈಲಾಗ್ರಶಿಖರೇ ವಾಮೋ ಹನುರಭಜ್ಯತ ।
ತತೋ ಹಿ ನಾಮಧೇಯಂ ತೇ ಹನುಮಾನಿತಿ ಕೀರ್ತಿತಮ್ ॥
ಅನುವಾದ
ಆಗ ಉದಯಗಿರಿಯ ಮೇಲೆ ವಜ್ರಾಯುಧದ ಏಟಿನಿಂದ ನಿನ್ನ ಹನು(ಗದ್ದ)ವಿನ ಎಡಭಾಗ ಜಜ್ಜಿಹೋಯಿತು. ಅಂದಿನಿಂದ ನಿನ್ನ ಹೆಸರು ಹನುಮಂತ ಎಂದಾಯಿತು.॥24॥
ಮೂಲಮ್ - 25
ತತಸ್ತ್ವಾಂ ನಿಹತಂ ದೃಷ್ಟ್ವಾ ವಾಯುರ್ಗಂಧವಹಃ ಸ್ವಯಮ್ ।
ತ್ರೈಲೋಕ್ಯಂ ಭೃಶಸಂಕ್ರುದ್ಧೋ ನ ವವೌ ವೈ ಪ್ರಭಂಜನಃ ॥
ಅನುವಾದ
ನಿನ್ನನ್ನು ಪ್ರಹರಿಸಿದುದನ್ನು ನೋಡಿ ವಾಯುದೇವನಿಗೆ ಭಾರೀ ಕ್ರೋಧ ಉಂಟಾಯಿತು. ಆ ಪ್ರಭಂಜನನು ಮೂರೂ ಲೋಕಗಳಲ್ಲಿ ಬೀಸುವುದು ನಿಲ್ಲಿಸಿಬಿಟ್ಟನು.॥25॥
ಮೂಲಮ್ - 26
ಸಂಭ್ರಾಂತಾಶ್ಚ ಸುರಾಃ ಸರ್ವೇ ತ್ರೈಲೋಕ್ಯೇ ಕ್ಷೋಭಿತೇ ಸತಿ ।
ಪ್ರಸಾದಯಂತಿ ಸಂಕ್ರುದ್ಧಂ ಮಾರುತಂ ಭುವನೇಶ್ವರಾಃ ॥
ಅನುವಾದ
ಇದರಿಂದ ಸಂಪೂರ್ಣ ದೇವತೆಗಳು ಗಾಬರಿಗೊಂಡರು; ಏಕೆಂದರೆ ವಾಯುವು ನಿಂತುಹೋದದ್ದರಿಂದ ಮೂರು ಲೋಕಗಳು ಕ್ಷೋಭೆಗೊಂಡವು. ಆಗ ಸಮಸ್ತ ಲೋಕ ಪಾಲಕರು ಕುಪಿತನಾದ ವಾಯುವನ್ನು ಸಮಾಧಾನಪಡಿಸತೊಡಗಿದರು.॥26॥
ಮೂಲಮ್ - 27
ಪ್ರಸಾದಿತೇ ಚ ಪವನೇ ಬ್ರಹ್ಮಾ ತುಭ್ಯಂ ವರಂ ದದೌ ।
ಅಶಸ್ತ್ರ ವಧ್ಯತಾಂ ತಾತ ಸಮರೇ ಸತ್ಯವಿಕ್ರಮ ॥
ಅನುವಾದ
ಅಯ್ಯಾ, ಸತ್ಯಪರಾಕ್ರಮಿಯೇ! ಪವನದೇವನು ಪ್ರಸನ್ನನಾದಾಗ ಬ್ರಹ್ಮದೇವರು ನಿನಗೆ ‘ನೀನು ರಣರಂಗದಲ್ಲಿ ಯಾವುದೇ ಅಸ್ತ್ರ-ಶಸ್ತ್ರದಿಂದ ಸಾಯಲಾರೆ’ ಎಂಬ ವರವನ್ನು ಕೊಟ್ಟರು.॥27॥
ಮೂಲಮ್ - 28½
ವಜ್ರಸ್ಯ ಚ ನಿಪಾತೇನ ವಿರುಜಂ ತ್ವಾಂ ಸಮೀಕ್ಷ್ಯಚ ।
ಸಹಸ್ರನೇತ್ರಃ ಪ್ರೀತಾತ್ಮಾ ದದೌ ತೇ ವರಮುತ್ತಮಮ್ ॥
ಸ್ವಚ್ಛಂದತಶ್ಚ ಮರಣಂ ತವ ದಾಸ್ಯತಿ ವೈ ಪ್ರಭೋ ।
ಅನುವಾದ
ಪ್ರಭೋ! ವಜ್ರಾಘಾತದಿಂದಲೂ ನೀನು ಪೀಡಿತನಾಗಿದಿದ್ದರಿಂದ ಸಹಸ್ರಾಕ್ಷ ಇಂದ್ರನು ಪ್ರಸನ್ನನಾಗಿ ನಿನಗೆ - ‘ಮೃತ್ಯುವು ನಿನ್ನ ಅಧೀನದಲ್ಲಿ ಇದ್ದೀತು, ನೀನು ಬಯಸಿದಾಗ ಸಾಯುವೆ, ಇಲ್ಲವೇ ಸಾಯಲಾರೆ’ ಎಂಬ ಉತ್ತಮ ವರವನ್ನು ಕೊಟ್ಟನು.॥28॥
ಮೂಲಮ್ - 29½
ಸ ತ್ವಂ ಕೇಸರಿಣಃ ಪುತ್ರಃ ಕ್ಷೇತ್ರಜ್ಞೋ ಭೀಮವಿಕ್ರಮಃ ॥
ಮಾರುತಸ್ಯೌರಸಃ ಪುತ್ರಸ್ತೇಜಸಾ ಚಾಪಿ ತತ್ಸಮಃ ।
ಅನುವಾದ
ಈ ಪ್ರಕಾರ ನೀನು ಕೇಸರಿಯ ಕ್ಷೇತ್ರಜ ಪುತ್ರನಾಗಿರುವೆ. ನಿನ್ನ ಪರಾಕ್ರಮ ಶತ್ರುಗಳಿಗೆ ಭಯಂಕರವಾಗಿದೆ. ನೀನು ವಾಯುದೇವರ ಔರಸ ಪುತ್ರನಾಗಿರುವೆ, ಅದರಿಂದ ತೇಜದಿಂದಲೂ ಅವನಂತೆಯೇ ಆಗಿರುವೆ.॥29॥
ಮೂಲಮ್ - 30
ತ್ವಂ ಹಿ ವಾಯುಸುತೋ ವತ್ಸ ಪ್ಲವನೇ ಚಾಪಿ ತತ್ಸಮಃ ॥
ಮೂಲಮ್ - 31
ವಯಮದ್ಯ ಗತಪ್ರಾಣಾ ಭವಾನ್ ಸ್ಮಾಸು ಸಾಂಪ್ರತಮ್ ।
ದಾಕ್ಷ ವಿಕ್ರಮಸಂಪನ್ನಃ ಪಕ್ಷಿರಾಜ ಇವಾಪರಃ ॥
ಅನುವಾದ
ವತ್ಸ! ನೀನು ಪವ ಪುತ್ರನಾಗಿರುವೆ, ಆದ್ದರಿಂದ ಹಾರುವುದರಲ್ಲಿಯೂ ಅವನಂತೆಯೇ ಆಗಿರುವೆ. ನಮ್ಮ ಪ್ರಾಣಶಕ್ತಿಯು ಹೊರಟು ಹೋಗಿದೆ. ಈಗ ನೀನೇ ನಮಗೆ ಇನ್ನೊಬ್ಬ ವಾನರರಾಜನಂತೆ ಚಾತುರ್ಯ ಹಾಗೂ ಪೌರುಷದಿಂದ ಸಂಪನ್ನನಾಗಿರುವೆ.॥30-31॥
ಮೂಲಮ್ - 32
ತ್ರಿವಿಕ್ರಮೇ ಮಯಾ ತಾತ ಸಶೈಲವನಕಾನನಾ ।
ತ್ರಿಃಸಪ್ತಕೃತ್ವಃ ಪೃಥಿವೀ ಪರಿಕ್ರಾಂತಾ ಪ್ರದಕ್ಷಿಣಮ್ ॥
ಅನುವಾದ
ಅಯ್ಯಾ! ಭಗವಾನ್ ವಾಮನನು ಮೂರು ಲೋಕಗಳನ್ನು ಅಳೆಯಲು ಕಾಲು ಚಾಚಿದಾಗ ನಾನು ವನ, ಪರ್ವತ, ಕಾನನಗಳ ಸಹಿತ ಇಡೀ ಪೃಥಿವಿಯನ್ನು ಇಪ್ಪತ್ತೊಂದು ಸಲ ಪ್ರದಕ್ಷಿಣೆ ಮಾಡಿರುವೆನು.॥32॥
ಮೂಲಮ್ - 33
ತಥಾ ಚೌಷಧಯೋಽಸ್ಮಾಭಿಃ ಸಂಚಿತಾ ದೇವತಾಸನಾತ್ ।
ನಿರ್ಮಥ್ಯಮಮೃತಂ ಯಾಭಿಸ್ತದಾನೀಂನ್ನೋ ಮಹದ್ಬಲಮ್ ॥
ಅನುವಾದ
ಸಮುದ್ರ ಮಂಥನದ ಸಮಯ ದೇವತೆಗಳ ಆಣತಿಯಂತೆ ಸಮುದ್ರವನ್ನು ಕಡೆದು ಅಮೃತ ತೆಗೆಯಲು ಬೇಕಾದ ಔಷಧಿಗಳನ್ನು ನಾನು ಸಂಗ್ರಹಿಸಿ ಕೊಟ್ಟಿದ್ದೆ. ಆ ದಿನಗಳಲ್ಲಿ ನನ್ನಲ್ಲಿ ಮಹಾನ್ ಬಲವಿತ್ತು.॥33॥
ಮೂಲಮ್ - 34
ಸ ಇದಾನೀಮಹಂ ವೃದ್ಧಃ ಪರಿಹೀನ ಪರಾಕ್ರಮಃ ।
ಸಾಂಪ್ರತಂ ಕಾಲಮಸ್ಮಾಕಂ ಭವಾನ್ಸರ್ವಗುಣಾನ್ವಿತಃ ॥
ಅನುವಾದ
ಈಗ ನಾನು ಮುದುಕನಾಗಿದ್ದೇನೆ. ನನ್ನ ಪರಾಕ್ರಮ ಕುಂದಿದೆ. ಈಗ ನಮ್ಮಲ್ಲಿ ನೀನೇ ಎಲ್ಲ ಗುಣಗಳಿಂದ ಸಂಪನ್ನನಾಗಿರುವೆ.॥34॥
ಮೂಲಮ್ - 35
ತದ್ವಿಜೃಂಭಸ್ವ ವಿಕ್ರಾಂತ ಪ್ಲವತಾಮುತ್ತಮೋ ಹ್ಯಸಿ ।
ತ್ವದ್ವೀರ್ಯಂ ದ್ರಷ್ಟುಕಾಮಾ ಹಿ ಸರ್ವಾ ವಾನರವಾಹಿನೀ ॥
ಅನುವಾದ
ಆದ್ದರಿಂದ ಪರಾಕ್ರಮಿ ವೀರನೇ! ನೀನು ನಿನ್ನ ಅಸೀಮ ಬಲವನ್ನು ವಿಸ್ತರಿಸು. ಹಾರುವುದರಲ್ಲಿ ನೀನು ಎಲ್ಲರಿಗಿಂತ ಶ್ರೇಷ್ಠನಾಗಿರುವೆ. ಈ ವಾನರಸೈನ್ಯವೆಲ್ಲ ನಿನ್ನ ಬಲ-ಪರಾಕ್ರಮವನ್ನು ನೋಡಲು ಬಯಸುತ್ತಿದೆ.॥35॥
ಮೂಲಮ್ - 36
ಉತ್ತಿಷ್ಠ ಹರಿಶಾರ್ದೂಲ ಲಂಘಯಸ್ವ ಮಹಾರ್ಣವಮ್ ।
ಪರಾ ಹಿ ಸರ್ವಭೂತಾನಾಂ ಹನುಮನ್ ಯಾ ಗತಿಸ್ತವ ॥
ಅನುವಾದ
ವಾನರಶ್ರೇಷ್ಠನೇ! ಏಳು, ಈ ಮಹಾಸಾಗರವನ್ನು ದಾಟು; ಏಕೆಂದರೆ ನಿನ್ನ ಗತಿಯು ಎಲ್ಲ ಪ್ರಾಣಿಗಳಿಗಿಂತ ಮಿಗಿಲಾಗಿದೆ.॥36॥
ಮೂಲಮ್ - 37
ವಿಷಣ್ಣಾ ಹರಯಃ ಸರ್ವೇ ಹನೂಮನ್ಕಿಮುಪೇಕ್ಷಸೇ ।
ವಿಕ್ರಮಸ್ವ ಮಹಾವೇಗ ವಿಷ್ಣು ಸ್ತ್ರೀನ್ವಿಕ್ರಮಾನಿವ ॥
ಅನುವಾದ
ಹನುಮಂತನೇ! ಸಮಸ್ತ ವಾನರರು ಚಿಂತಿತರಾಗಿದ್ದಾರೆ. ನೀನು ಇವರನ್ನು ಏಕೆ ಉಪೇಕ್ಷಿಸು ತ್ತಿರುವೆ? ಮಹಾವೇಗಶಾಲೀ ವೀರನೇ! ಭಗವಾನ್ ವಿಷ್ಣುವು ಮೂರು ಲೋಕಗಳನ್ನು ಅಳೆಯಲು ಪಾದವನ್ನು ಬೆಳೆಸಿದಂತೆಯೇ ನೀನೂ ಪಾದವನ್ನು ಬೆಳೆಸು.॥37॥
ಮೂಲಮ್ - 38
ತತಃ ಕಪೀನಾಮೃಷಭೇಣ ಚೋದಿತಃ
ಪ್ರತೀತವೇಗಃ ಪವನಾತ್ಮಜಃ ಕಪಿಃ ।
ಪ್ರಹರ್ಷಯಂಸ್ತಾಂ ಹರಿವೀರವಾಹಿನೀಂ
ಚಕಾರ ರೂಪಂ ಮಹದಾತ್ಮನಸ್ತದಾ ॥
ಅನುವಾದ
ಈ ಪ್ರಕಾರ ವಾನರರಲ್ಲಿ ಮತ್ತು ಕರಡಿಗಳಲ್ಲಿ ಶ್ರೇಷ್ಠ ಜಾಂಬವಂತನ ಪ್ರೇರಣೆಯಿಂದ ಕಪಿವರ ಪವನ ಕುಮಾರ ಹನುಮಂತನಿಗೆ ತನ್ನ ಮಹಾವೇಗದಲ್ಲಿ ವಿಶ್ವಾಸ ಉಂಟಾಯಿತು. ಅವನು ವಾನರ ವೀರರ ಆ ಸೈನ್ಯದ ಹರ್ಷವನ್ನು ಹೆಚ್ಚಿಸುತ್ತಾ ಆಗ ತನ್ನ ವಿರಾಟ್ರೂಪವನ್ನು ಪ್ರಕಟಿಸಿದನು.॥38॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಅರವತ್ತಾರನೆಯ ಸರ್ಗ ಸಂಪೂರ್ಣವಾಯಿತು. ॥66॥