०६५ वानरैः सागरोल्लङ्घनभयम्

वाचनम्
ಭಾಗಸೂಚನಾ

ವಾನರವೀರರು ಹಾರುವ ವಿಷಯದಲ್ಲಿ ತಮಗಿರುವ ಶಕ್ತಿಯನ್ನು ವಿವರಿಸಿ ಹೇಳಿದುದು, ಅಂಗದ ಜಾಂಬವಂತರ ಸಂಭಾಷಣೆ, ಜಾಂಬವಂತನು ಸಮುದ್ರೋಲ್ಲಂಘನೆಗೆ ಹನುಮಂತನನ್ನು ಹುರಿದುಂಬಿಸಲು ಅವನ ಬಳಿಗೆ ಹೋದುದು

ಮೂಲಮ್ - 1

ಅಥಾಂಗದವಚಃ ಶ್ರುತ್ವಾ ತೇ ಸರ್ವೇ ವಾನರರ್ಷಭಾಃ ।
ಸ್ವಂ ಸ್ವಂ ಗತೌ ಸಮುತ್ಸಾಹಮೂಚುಸ್ತತ್ರ ಯಥಾಕ್ರಮಮ್ ॥

ಅನುವಾದ

ಅಂಗದನ ಮಾತನ್ನು ಕೇಳಿ ಆ ಶ್ರೇಷ್ಠ ವಾನರರೆಲ್ಲರೂ ತಮ್ಮ-ತಮ್ಮ ಹಾರುವ ಸಾಮರ್ಥ್ಯವನ್ನು ಉತ್ಸಾಹದೊಂದಿಗೆ ಯಥಾನುಕ್ರಮವಾಗಿ ಹೇಳಿದರು.॥1॥

ಮೂಲಮ್ - 2

ಗಜೋ ಗವಾಕ್ಷೋ ಗವಯಃ ಶರಭೋ ಗಂಧಮಾದನಃ ।
ಮೈಂದಶ್ಚ ದ್ವಿವಿದಶ್ಚೈವ ಸುಷೇಣೋ ಜಾಂಬವಾಂಸ್ತಥಾ ॥

ಅನುವಾದ

ಅಲ್ಲಿ ನೆರೆದಿದ್ದ ಗಜ, ಗವಯ, ಗವಾಕ್ಷ, ಶರಭ, ಗಂಧಮಾದನ, ಮೈದ, ದ್ವಿವಿದ, ಸುಷೇಣ, ಜಾಂಬವಂತರೇ ಮುಂತಾದ ಕಪಿಶ್ರೇಷ್ಠರು ತಮಗಿರುವ ಸಾಮರ್ಥ್ಯವನ್ನು ಹೇಳಿಕೊಂಡರು.॥2॥

ಮೂಲಮ್ - 3

ಆಬಭಾಷೇ ಗಜಸ್ತತ್ರ ಪ್ಲವೇಯಂ ದಶಯೋಜನಮ್ ।
ಗವಾಕ್ಷೋ ಯೋಜನಾನ್ಯಾಹ ಗಮಿಷ್ಯಾಮಿತಿ ವಿಂಶತಿಮ್ ॥

ಅನುವಾದ

ಇವರಲ್ಲಿ ಗಜನು ಹೇಳಿದನು - ನಾನು ಹತ್ತು ಯೋಜನಗಳಷ್ಟು ದೂರ ಹಾರಬಲ್ಲೆನು. ಗವಾಕ್ಷನು - ನಾನು ಇಪ್ಪತ್ತು ಯೋಜನಗಳಷ್ಟು ದೂರ ಹಾರಬಲ್ಲೆ ಎಂದನು.॥3॥

ಮೂಲಮ್ - 4

ಶರಭೋ ವಾನರಸ್ತತ್ರ ವಾನರಾಂಸ್ತಾನುವಾಚ ಹ ।
ತ್ರಿಂಶತಂ ತು ಗಮಿಷ್ಯಾಮಿ ಯೋಜನಾನಾಂ ಪ್ಲವಂಗಮಾಃ ॥

ಅನುವಾದ

ಇದಾದ ಬಳಿಕ ಅಲ್ಲಿ ಶರಭ ಎಂಬ ವಾನರನು ಆ ಕಪಿವರರಲ್ಲಿ- ವಾನರರೇ! ನಾನು ಮೂವತ್ತು ಯೋಜನದವರೆಗೆ ಒಮ್ಮೆಗೆ ಹಾರಬಲ್ಲೆನು ಎಂದು ಹೇಳಿದನು.॥4॥

ಮೂಲಮ್ - 5

ಋಷಭೋ ವಾನರಸ್ತತ್ರ ವಾನರಾಂ ಸ್ತಾನುವಾಚ ಹ ।
ಚತ್ವಾರಂಶದ್ಗಮಿಷ್ಯಾಮಿ ಯೋಜನಾನಾಂ ನ ಸಂಶಯಃ ॥

ಅನುವಾದ

ಬಳಿಕ ಕಪಿವರ ಋಷಭನು ಆ ವಾನರರಲ್ಲಿ - ನಾನು ನಲವನತ್ತು ಯೋಜನ ಹೋಗಬಲ್ಲೆ, ಇದರಲ್ಲಿ ಸಂಶಯವಿಲ್ಲ ಎಂದು ಹೇಳಿದನು.॥5॥

ಮೂಲಮ್ - 6

ವಾನರಾಂಸ್ತು ಮಹಾತೇಜಾ ಅಬ್ರವೀದ್ಗಂಧಮಾದನಃ ।
ಯೋಜನಾನಾಂ ಗಮಿಷ್ಯಾಮಿ ಪಂಚಾಶತ್ತು ನ ಸಂಶಯಃ ॥

ಅನುವಾದ

ಆಗ ಮಹಾತೇಜಸ್ವೀ ಗಂಧಮಾದನನು ಆ ವಾನರರಲ್ಲಿ ಹೇಳಿದನು - ನಾನು ಐವತ್ತು ಯೋಜನದ ದೂರವನ್ನು ಒಮ್ಮೆಗೆ ಹಾರಬಲ್ಲೆನು; ಇದರಲ್ಲಿ ಸಂಶಯವೇ ಇಲ್ಲ.॥6॥

ಮೂಲಮ್ - 7

ಮೈಂದಸ್ತು ವಾನರಸ್ತತ್ರ ವಾನರಾಂಸ್ತಾನುವಾಚ ಹ ।
ಯೋಜನಾನಾಂ ಪರಂ ಷಷ್ಟಿ ಮಹಂ ಪ್ಲವಿತುಮುತ್ಸಹೇ ॥

ಅನುವಾದ

ಅನಂತರ ವಾನರವೀರ ಮೈಂದನು ವಾನರರಲ್ಲಿ - ನಾನು ಅರವತ್ತುಯೋಜನ ಹಾರಿಹೋಗುವ ಉತ್ಸಾಹ ನನ್ನಲ್ಲಿ ಇದೆ ಎಂದು ಹೇಳಿದನು.॥7॥

ಮೂಲಮ್ - 8

ತತಸ್ತತ್ರ ಮಹಾತೇಜಾ ದ್ವಿವಿದಃ ಪ್ರತ್ಯಭಾಷತ ।
ಗಮಿಷ್ಯಾಮಿ ನ ಸಂದೇಹಃ ಸಪ್ತತಿಂ ಯೋಜನಾನ್ಯಹಮ್ ॥

ಅನುವಾದ

ಮತ್ತೆ ಮಹಾತೇಜಸ್ವೀ ದ್ವಿವಿದನು - ನಾನು ಎಪ್ಪತ್ತು ಯೋಜನದವರೆಗೆ ಹಾರಬಲ್ಲೆ, ಇದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದನು.॥8॥

ಮೂಲಮ್ - 9

ಸುಷೇಣಸ್ತು ಮಹಾತೇಜಾಃ ಸತ್ತ್ವವಾನ್ ಕಪಿಸತ್ತಮಃ ।
ಅಶೀತಿಂ ಪ್ರತಿಜಾನೇಹಂ ಯೋಜನಾನಾಂ ಪರಾಕ್ರಮೇ ॥

ಅನುವಾದ

ಬಳಿಕ ಧೈರ್ಯ ಶಾಲೀ ಕಪಿಶ್ರೇಷ್ಠ ಮಹಾತೇಜಸ್ವಿ ಸುಷೇಣನು - ನಾನು ಒಂದೇ ನೆಗೆತದಲ್ಲಿ ಎಂಭತ್ತು ಯೋಜನ ದೂರ ಹೋಗುವ ಪ್ರತಿಜ್ಞೆ ಮಾಡುತ್ತೇನೆ ಎಂದನು.॥9॥

ಮೂಲಮ್ - 10

ತೇಷಾಂ ಕಥಯುತಾಂ ತತ್ರ ಸರ್ವಾಂಸ್ತಾನನುಮಾನ್ಯ ಚ ।
ತತೋ ವೃದ್ಧ ತಮಸ್ತೇಷಾಂ ಜಾಂಬವಾನ್ ಪ್ರತ್ಯಭಾಷತ ॥

ಅನುವಾದ

ಈ ಪ್ರಕಾರ ಹೇಳಿದ ಎಲ್ಲ ವಾನರರನ್ನು ಸಮ್ಮಾನಿಸಿ, ಎಲ್ಲರಿಗಿಂತ ಮುದುಕನಾಗಿದ್ದ ಋಕ್ಷರಾಜ ಜಾಂಬವಂತನು ಹೇಳಿದನು.॥10॥

ಮೂಲಮ್ - 11

ಪೂರ್ವಮಸ್ಮಾಕಮಪ್ಯಾಸೀತ್ ಕಶ್ಚಿದ್ ಗತಿಪರಾಕ್ರಮಃ ।
ತೇ ವಯಂ ವಯಸಃ ಪಾರಮನುಪ್ರಾಪ್ತಾಃಸ್ಮ ಸಾಂಪ್ರತಮ್ ॥

ಮೂಲಮ್ - 12

ಕಿಂ ತು ನೈವಂ ಗತೇ ಶಕ್ಯಮಿದಂ ಕಾರ್ಯಮುಪೇಕ್ಷಿತುಮ್ ।
ಯದರ್ಥಂ ಕಪಿರಾಜಶ್ಚ ರಾಮಶ್ಚ ಕೃತನಿಶ್ಚಯೌ ॥

ಮೂಲಮ್ - 13

ಸಾಂಪ್ರತಂ ಕಾಲಮಸ್ಮಾಕಂ ಯಾ ಗತಿಸ್ತಾಂ ನಿಬೋಧತ ।
ನವತಿಂ ಯೋಜನಾನಾಂ ತು ಗಮಿಷ್ಯಾಮಿ ನ ಸಂಶಯಃ ॥

ಅನುವಾದ

ಮೊದಲು ತಾರುಣ್ಯದಲ್ಲಿ ನನ್ನಲ್ಲಿ ದೂರದವರೆಗೆ ಹಾರುವ ಶಕ್ತಿ ಇತ್ತು. ಈಗ ನಾನು ಆ ವಯಸ್ಸನ್ನು ದಾಟಿದ್ದರೂ ಯಾವ ಕಾರ್ಯಕ್ಕಾಗಿ ವಾನರರಾಜ ಸುಗ್ರೀವ ಹಾಗೂ ಭಗವಾನ್ ಶ್ರೀರಾಮನು ದೃಢನಿಶ್ಚಯ ಮಾಡಿರುವರೋ, ಅದನ್ನು ನಾನು ಉಪೇಕ್ಷೆ ಮಾಡಲಾರೆನು. ಈಗ ನನ್ನಲ್ಲಿ ಇರುವ ಶಕ್ತಿಯನ್ನು ಕೇಳಿರಿ - ನಾನು ಒಂದೇ ನೆಗೆತದಲ್ಲಿ ತೊಂಭತ್ತು ಯೋಜನ ದೂರಕ್ಕೆ ಹೋಗಬಲ್ಲೆನು ಇದರಲ್ಲಿ ಸಂದೇಹವೇ ಇಲ್ಲ ಎಂದು ಹೇಳಿದನು.॥11-13॥

ಮೂಲಮ್ - 14

ತಾಂಶ್ಚ ಸರ್ವಾನ್ ಹರಿಶ್ರೇಷ್ಠಾನ್ ಜಾಂಬವಾನಿದಮಬ್ರವೀತ್ ।
ನ ಖಲ್ವೇತಾವದೇವಾಸೀದ್ಗಮನೇ ಮೇ ಪರಾಕ್ರಮಃ ॥

ಮೂಲಮ್ - 15

ಮಯಾ ವೈರೋಚನೇ ಯಜ್ಞೇ ಪ್ರಭವಿಷ್ಣುಃ ಸನಾತನಃ ।
ಪ್ರದಕ್ಷಿಣೀಕೃತಃ ಪೂರ್ವಂ ಕ್ರಮಮಾಣಸ್ತ್ರಿವಿಕ್ರಮಮ್ ॥

ಅನುವಾದ

ಹೀಗೆ ಹೇಳಿ ಜಾಂಬವಂತನು ಆ ಸಮಸ್ತ ವಾನರಶ್ರೇಷ್ಠರಲ್ಲಿ ಪುನಃ ಹೇಳಿದನು - ಹಿಂದಿನ ಕಾಲದಲ್ಲಿ ನನ್ನೊಳಗೆ ಇಷ್ಟೇ ದೂರ ಹೋಗುವ ಶಕ್ತಿ ಇತ್ತು ಎಂದಲ್ಲ. ಮೊದಲು ರಾಜಾ ಬಲಿಯ ಯಜ್ಞದಲ್ಲಿ ಸರ್ವವ್ಯಾಪೀ ಹಾಗೂ ಎಲ್ಲರ ಕಾರಣಭೂತ ಸನಾತನ ಭಗವಾನ್ ವಿಷ್ಣು ಮೂರು ಹೆಜ್ಜೆ ಭೂಮಿಯನ್ನು ಅಳೆಯಲು ಕಾಲು ಬೆಳೆಸಿದಾಗ ನಾನು ಅವನ ಆ ವಿರಾಟ ಸ್ವರೂಪವನ್ನು ಸ್ವಲ್ಪ ಸಮಯದಲ್ಲೇ ಪ್ರದಕ್ಷಿಣೆ ಮಾಡಿದ್ದೆ.॥14-15॥

ಮೂಲಮ್ - 16

ಸ ಇದಾನೀಮಹಂ ವೃದ್ಧಃ ಪ್ಲವನೇ ಮಂದವಿಕ್ರಮಃ ।
ಯೌವನೇ ಚ ತದಾಸೀನ್ಮೇ ಬಲಮಪ್ರತಿಮಂ ಪರಮ್ ॥

ಅನುವಾದ

ಈಗಲಾದರೋ ನಾನು ಮುದುಕನಾಗಿದ್ದೇನೆ, ಆದ್ದರಿಂದ ಹಾರುವ ನನ್ನ ಶಕ್ತಿಯು ಕಡಿಮೆಯಾಗಿದೆ. ಆದರೆ ಯೌವನದಲ್ಲಿ ನನ್ನಲ್ಲಿ ಅಪ್ರತಿಮವಾದ ಬಲ ತುಂಬಿತ್ತು.॥16॥

ಮೂಲಮ್ - 17

ಸಂಪ್ರತ್ಯೇತಾವದೇವಾದ್ಯ ಶಕ್ಯಂ ಮೇ ಗಮನೇ ಸ್ವತಃ ।
ನೈತಾವತಾ ಚ ಸಂಸಿದ್ಧಿಃ ಕಾರ್ಯಸ್ಯಾಸ್ಯ ಭವಿಷ್ಯತಿ ॥

ಅನುವಾದ

ಇಂದು ನನ್ನಲ್ಲಿ ನಡೆಯುವಷ್ಟೇ ಶಕ್ತಿ ಇದೆ, ಆದರೆ ಇಷ್ಟೇಗತಿಯಿಂದ ಸಮುದ್ರವನ್ನು ದಾಟುವ ಈ ಸದ್ಯದ ಕಾರ್ಯವು ಸಿದ್ಧವಾಗಲಾರದು.॥17॥

ಮೂಲಮ್ - 18

ಅಥೋತ್ತರಮುದಾರಾರ್ಥಮಬ್ರವೀದಂಗದಸ್ತದಾ ।
ಅನುಮಾನ್ಯ ತದಾ ಪ್ರಾಜ್ಞೋ ಜಾಂಬವಂತಂ ಮಹಾಕಪಿಃ ॥

ಅನುವಾದ

ಅನಂತರ ಬುದ್ಧಿವಂತ ಮಹಾಕಪಿ ಅಂಗದನು ಆಗ ಜಾಂಬವಂತರನ್ನು ವಿಶೇಷವಾಗಿ ಆದರಿಸಿ, ಹೀಗೆ ಉದಾರತಾಪೂರ್ಣ ಮಾತನ್ನು ಹೇಳಿದನು.॥18॥

ಮೂಲಮ್ - 19

ಅಹಮೇತದ್ಗಮಿಷ್ಯಾಮಿ ಯೋಜನಾನಾಂ ಶತಂ ಮಹತ್ ।
ನಿವರ್ತನೇ ತು ಮೇ ಶಕ್ತಿಃ ಸ್ಯಾನ್ನ ವೇತಿ ನ ನಿಶ್ಚಿತಮ್ ॥

ಅನುವಾದ

ನಾನು ಈ ಮಹಾಸಾಗರವನ್ನು ನೂರು ಯೋಜನ ದೂರವನನ್ನು ಹಾರಿ ಹೋಗಬಲ್ಲೆ. ಆದರೆ ಅಲ್ಲಿಂದ ಮರಳಿ ಬರಲು ನನ್ನಲ್ಲಿ ಶಕ್ತಿ ಇದ್ದೀತೇ ಅಥವಾ ಇಲ್ಲವೇ ಎಂಬುದನ್ನು ನಿಶ್ಚಿತವಾಗಿ ಹೇಳಲಾಗುವುದಿಲ್ಲ.॥19॥

ಮೂಲಮ್ - 20

ತಮುವಾಚ ಹರಿಶ್ರೇಷ್ಠಂಜಾಂಬವಾನ್ವಾಕ್ಯ ಕೋವಿದಃ ।
ಜ್ಞಾಯತೇ ಗಮನೇ ಶಕ್ತಿಸ್ತವ ಹರ್ಯೃಕ್ಷಸತ್ತಮ ॥

ಅನುವಾದ

ಆಗ ವಾಕ್ಯಕೋವಿದನಾದ ಜಾಂಬವಂತನು ಕಪಿಶ್ರೇಷ್ಠ ಅಂಗದನಲ್ಲಿ ಹೇಳಿದನು - ಕರಡಿ ಮತ್ತು ವಾನರರಲ್ಲಿ ಶ್ರೇಷ್ಠ ಯುವರಾಜನೇ! ನಿನ್ನ ಗಮನಶಕ್ತಿಯು ನಮಗೆ ಚೆನ್ನಾಗಿ ಪರಿಚಿತವಾಗಿದೆ.॥20॥

ಮೂಲಮ್ - 21

ಕಾಮಂ ಶತಂ ಸಹಸ್ರಂ ವಾ ನಹ್ಯೇಷ ವಿಧಿರುಚ್ಯತೇ ।
ಯೋಜನಾನಾಂ ಭವಾನ್ ಶಕ್ತೋ ಗಂತುಂ ಪ್ರತಿನಿವರ್ತಿತುಮ್ ॥

ಅನುವಾದ

ನೀನು ಒಂದುಲಕ್ಷ ಯೋಜನದವರೆಗೆ ಹೊರಟು ಹೋದರೂ, ನೀನು ಎಲ್ಲರ ಸ್ವಾಮಿಯಾಗಿದ್ದರಿಂದ ನಿನ್ನನ್ನು ಕಳಿಸುವುದು ನಮಗೆ ಉಚಿತವಲ್ಲ. ನೀನು ಲಕ್ಷಯೋಜನ ಹೋಗಿ ಬರಲು ಸಮರ್ಥನಾಗಿರುವೆ.॥21॥

ಮೂಲಮ್ - 22

ನ ಹಿ ಪ್ರೇಷಯಿತಾ ತಾತ ಸ್ವಾಮೀ ಪ್ರೇಷ್ಯಃ ಕಥಂಚನ ।
ಭವತಾಯಂ ಜನಃ ಸರ್ವಃ ಪ್ರೇಷ್ಯಃ ಪ್ಲವಗಸತ್ತಮ ॥

ಅನುವಾದ

ಆದರೆ ಅಯ್ಯಾ! ವಾನರಶಿರೋಮಣಿಯೇ! ಎಲ್ಲರನ್ನು ಕಳಿಸಿಕೊಡುವ ಸ್ವಾಮಿಯಾದವನು ಯಾವ ರೀತಿಯಿಂದಲೂ ಪ್ರೇಷ್ಯ (ಆಜ್ಞಾಪಾಲಕ)ನಾಗಲಾರನು. ಇವರೆಲ್ಲರೂ ನಿನ್ನ ಸೇವಕರಾಗಿದ್ದಾರೆ, ನೀನು ಇವರಲ್ಲಿ ಯಾರನ್ನಾದರೂ ಕಳಿಸು.॥22॥

ಮೂಲಮ್ - 23

ಭವಾನ್ಕಲತ್ರಮಸ್ಮಾಕಂ ಸ್ವಾಮಿಭಾವೇ ವ್ಯವಸ್ಥಿತಃ ।
ಸ್ವಾಮೀ ಕಲತ್ರಂ ಸೈನ್ಯಸ್ಯ ಗತಿರೇಷಾ ಪರಂತಪ ॥

ಅನುವಾದ

ನೀನು ಸ್ತ್ರೀಯಂತೆ ರಕ್ಷಣೀಯನಾಗಿರುವೆ. (ನಾರಿಯು ಪತಿಯ ಹೃದಯದ ಸ್ವಾಮಿನಿಯಾಗಿರುವಂತೆಯೇ) ನೀನು ನಮ್ಮ ಸ್ವಾಮಿಯಾಗಿರುವೆ. ಪರಂತಪ! ಸ್ವಾಮಿಯು ಸೇವೆಗಾಗಿ ಕಲತ್ರ (ಸ್ತ್ರೀ)ದಂತೆ ಸಂರಕ್ಷಣೀಯನಾಗುತ್ತಾನೆ. ಇದೇ ಲೋಕದ ಮಾನ್ಯತೆ ಆಗಿದೆ.॥23॥

ಮೂಲಮ್ - 24

ಅಪಿ ವೈ ತಸ್ಯ ಕಾರ್ಯಸ್ಯ ಭವಾನ್ಮೂಲಮರಿಂದಮ ।
ತಸ್ಮಾತ್ಕಲತ್ರವತ್ತಾತ ಪ್ರತಿಪಾಲ್ಯಃ ಸದಾ ಭವಾನ್ ॥

ಅನುವಾದ

ಶತ್ರುದಮನ! ಅಯ್ಯಾ! ನೀನೇ ಈ ಕಾರ್ಯಕ್ಕೆ ಮೂಲನಾಗಿರುವೆ, ಆದ್ದರಿಂದ ಸದಾ ಕಲತ್ರದಂತೆ ನಿನ್ನನ್ನು ಪಾಲಿಸುವುದು ಉಚಿತವಾಗಿದೆ.॥24॥

ಮೂಲಮ್ - 25

ಮೂಲಮರ್ಥಸ್ಯ ಸಂರಕ್ಷ ಮೇಷ ಕಾರ್ಯವಿದಾಂ ನಯಃ ।
ಮೂಲೇ ಹಿ ಸತಿ ಸಿಧ್ಯಂತಿ ಗುಣಾಃ ಸರ್ವೇ ಫಲೋದಯಾಃ ॥

ಅನುವಾದ

ಕಾರ್ಯದ ಮೂಲವನ್ನು ರಕ್ಷಿಸಬೇಕು. ಕಾರ್ಯದ ತತ್ತ್ವವನ್ನು ತಿಳಿದಿರುವ ವಿದ್ವಾಂಸರ ನೀತಿ ಇದೇ ಆಗಿದೆ; ಏಕೆಂದರೆ ಮೂಲ (ಬೇರು) ಉಳಿದಾಗಲೇ ಎಲ್ಲ ಗುಣಗಳು ಸಲ ಸಿದ್ಧವಾಗುತ್ತವೆ.॥25॥

ಮೂಲಮ್ - 26

ತದ್ಭವಾನಸ್ಯ ಕಾರ್ಯಸ್ಯ ಸಾಧನಂ ಸತ್ಯವಿಕ್ರಮ ।
ಬುದ್ಧಿವಿಕ್ರಮಸಂಪನ್ನೋ ಹೇತುರತ್ರ ಪರಂತಪ ॥

ಅನುವಾದ

ಆದ್ದರಿಂದ ಶತ್ರುಪರಾಕ್ರಮಿ ಶತ್ರುದಮನ ವೀರನೇ! ನೀನೇ ಈ ಕಾರ್ಯದ ಸಾಧನ - ಬುದ್ಧಿ ಹಾಗೂ ಪರಾಕ್ರಮದಿಂದ ಸಂಪನ್ನತೆಯ ಹೇತುವಾಗಿರುವೆ.॥26॥

ಮೂಲಮ್ - 27

ಗುರುಶ್ಚ ಗುರುಪುತ್ರಶ್ಚ ತ್ವಂ ಹಿ ನಃ ಕಪಿಸತ್ತಮ ।
ಭವಂತಮಾಶ್ರಿತ್ಯ ವಯಂ ಸಮರ್ಥಾ ಹ್ಯರ್ಥಸಾಧನೇ ॥

ಅನುವಾದ

ಕಪಿಶ್ರೇಷ್ಠನೇ! ನೀನೇ ನಮಗೆ ಗುರು ಮತ್ತು ಗುರುಪುತ್ರನಾಗಿರುವೆ. ನಿನ್ನ ಆಶ್ರಯ ಪಡೆದೇ ನಾವೆಲ್ಲರೂ ಕಾರ್ಯಸಾಧನೆಯಲ್ಲಿ ಸಮರ್ಥರಾಗಬಲ್ಲೆವು.॥27॥

ಮೂಲಮ್ - 28

ಉಕ್ತವಾಕ್ಯಂ ಮಹಾಪ್ರಾಜ್ಞಂ ಜಾಂಬವಂತಂ ಮಹಾಕಪಿಃ ।
ಪ್ರತ್ಯುವಾಚೋತ್ತರಂ ವಾಕ್ಯಂ ವಾಲಿಸೂನುರಥಾಂಗದಃ ॥

ಅನುವಾದ

ಪರಮ ಬುದ್ಧಿವಂತ ಜಾಂಬವಂತನು ಹಿಂದಿನಂತೆ ಹೇಳಿದಾಗ ಮಹಾಕಪಿ ವಾಲಿಕುಮಾರ ಅಂಗದನು ಅವನಿಗೆ ಈ ಪ್ರಕಾರ ಉತ್ತರಿಸಿದನು.॥28॥

ಮೂಲಮ್ - 29

ಯದಿ ನಾಹಂ ಗಮಿಷ್ಯಾಮಿ ನಾನ್ಯೋ ವಾನರಪುಂಗವಃ ।
ಪುನಃ ಖಲ್ವಿದಮಸ್ಮಾಭಿಃ ಕಾರ್ಯಂ ಪ್ರಾಯೋಪವೇಶನಮ್ ॥

ಅನುವಾದ

ನಾನು ಹೋಗದಿದ್ದರೆ, ಬೇರೆ ಯಾವ ಶ್ರೇಷ್ಠ ವಾನರನೂ ಹೋಗಲು ಸಿದ್ಧನಾಗದಿದ್ದರೆ ಮತ್ತೆ ನಾವು ನಿಶ್ಚಯವಾಗಿ ಮರಣಾಂತ ಉಪವಾಸವನ್ನೇ ಮಾಡಬೇಕು.॥29॥

ಮೂಲಮ್ - 30

ನಹ್ಯಕೃತ್ವಾ ಹರಿಪತೇಃ ಸಂದೇಶಂ ತಸ್ಯ ಧೀಮತಃ ।
ತತ್ರಾಪಿ ಗತ್ವಾ ಪ್ರಾಣಾನಾಂ ನ ಪಶ್ಯೇ ಪರಿರಕ್ಷಣಮ್ ॥

ಅನುವಾದ

ಧೀಮಂತ ಸುಗ್ರೀವನ ಆದೇಶವನ್ನು ಪಾಲಿಸದೆ ನಾವು ಕಿಷ್ಕಿಂಧೆಗೆ ಮರಳಿ ಹೋದರೂ ನಮಗೆ ನಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳುವ ಯಾವುದೇ ಉಪಾಯ ಕಾಣುವುದಿಲ್ಲ.॥30॥

ಮೂಲಮ್ - 31

ಸ ಹಿ ಪ್ರಸಾದೇ ಚಾತ್ಯರ್ಥಕೋಪೇ ಚ ಹರಿರೀಶ್ವರಃ ।
ಅತೀತ್ಯತಸ್ಯ ಸಂದೇಶಂ ವಿನಾಶೋಗಮನೇ ಭವೇತ್ ॥

ಅನುವಾದ

ಅವನು ನಮ್ಮ ಮೇಲೆ ಕೃಪೆ ಮಾಡಲು ಮತ್ತು ಅತ್ಯಂತ ಕುಪಿತನಾಗಿ ನಮಗೆ ದಂಡಿಸಲು ಸಮರ್ಥನಾಗಿದ್ದಾನೆ. ಅವನ ಆಜ್ಞೆಯನ್ನು ಉಲ್ಲಂಘನೆ ಮಾಡಿ ಹೋದರೆ ನಮ್ಮ ವಿನಾಶ ಖಂಡಿತವಾಗುವುದು.॥31॥

ಮೂಲಮ್ - 32

ತತ್ತಥಾ ಹ್ಯಸ್ಯ ಕಾರ್ಯಸ್ಯ ನ ಭವತ್ಯನ್ಯಥಾ ಗತಿಃ ।
ತದ್ಭವಾನೇವ ದೃಷ್ಟಾರ್ಥಃ ಸಂಚಿಂತಯಿತುಮರ್ಹತಿ ॥

ಅನುವಾದ

ಆದ್ದರಿಂದ ಯಾವುದೇ ಉಪಾಯದಿಂದ ಸೀತಾ ದರ್ಶನರೂಪೀ ಕಾರ್ಯದ ಸಿದ್ಧಿಯಲ್ಲಿ ಯಾವುದೇ ತಡೆ ಉಂಟಾಗದಂತೆ ನೀವು ವಿಚಾರ ಮಾಡಿರಿ; ಏಕೆಂದರೆ ನಿಮಗೆ ಎಲ್ಲ ಮಾತುಗಳ ಅನುಭವವಿದೆ.॥32॥

ಮೂಲಮ್ - 33

ಸೋಂಽಗದೇನ ತದಾ ವೀರಃ ಪ್ರತ್ಯುಕ್ತಃ ಪ್ಲವಗರ್ಷಭಃ ।
ಜಾಂಬವಾನುತ್ತಮಂ ವಾಕ್ಯಂ ಪ್ರೋವಾಚೇದಂ ತತೋಂಽಗದಮ್ ॥

ಅನುವಾದ

ಆಗ ಅಂಗದನು ಹೀಗೆ ಹೇಳಿದಾಗ ವೀರವಾನರ ಶಿರೋಮಣಿ ಜಾಂಬವಂತನು ಅವನಲ್ಲಿ ಹೀಗೆ ಹೇಳಿದನು.॥33॥

ಮೂಲಮ್ - 34

ತಸ್ಯ ತೇ ವೀರ ಕಾರ್ಯಸ್ಯ ನ ಕಿಂಚಿತ್ಪರಿಹಾಸ್ಯತೇ ।
ಏಷ ಸಂಚೋದಯಾಮ್ಯೇನಂ ಯಃ ಕಾರ್ಯಂ ಸಾಧಯಿಷ್ಯತಿ ॥

ಅನುವಾದ

ವೀರನೇ! ನಿನ್ನ ಕಾರ್ಯದಲ್ಲಿ ಕೊಂಚವೂ ಕೊರತೆ ಬರಲಾರದು. ಈಗ ನಾನು ಈ ಕಾರ್ಯವನ್ನು ಸಿದ್ಧಪಡಿಸ ಬಲ್ಲ ವೀರನನ್ನು ಪ್ರೇರೇಪಿಸುತ್ತಿರುವೆನು.॥34॥

ಮೂಲಮ್ - 35

ತತಃ ಪ್ರತೀತಂ ಪ್ಲವತಾಂ ವರಿಷ್ಠ-
ಮೇಕಾಂತಮಾಶ್ರಿತ್ಯ ಸುಖೋಪವಿಷ್ಟಮ್ ।
ಸಂಚೋದಯಾಮಾಸ ಹರಿಪ್ರವೀರೋ
ಹರಿಪ್ರವೀರಂ ಹನುಮಂತಮೇವ ॥

ಅನುವಾದ

ಹೀಗೆ ಹೇಳಿ ವಾನರರ ಮತ್ತು ಕರಡಿಗಳ ವೀರ ಯೂಥಪತಿ ಜಾಂಬವಂತನು ಏಕಾಂತದಲ್ಲಿ ಹೋಗಿ ಆನಂದದಿಂದ ಕುಳಿತಿರುವ ವಾನರ ಸೇನೆಯ ಶ್ರೇಷ್ಠ ವೀರ ಹನುಮಂತನನ್ನು ಪ್ರೇರೇಪಿಸಿದನು. ಅವನಿಗೆ ಯಾವ ಮಾತಿನ ಚಿಂತೆಯೂ ಇರಲಿಲ್ಲ. ಅವನು ದೂರದವರೆಗೆ ಹಾರುವುದರಲ್ಲಿ ಎಲ್ಲರಿಗಿಂತ ಶ್ರೇಷ್ಠನಾಗಿದ್ದನು.॥35॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಅರವತ್ತೈದನೆಯ ಸರ್ಗ ಸಂಪೂರ್ಣವಾಯಿತು.॥65॥