वाचनम्
ಭಾಗಸೂಚನಾ
ಸಮುದ್ರದ ವಿಶಾಲತೆಯನ್ನು ನೋಡಿ ವಿಷಾದಗೊಂಡ ವಾನರರನ್ನು ಅಂಗದನು ಆಶ್ವಾಸನೆಯನ್ನೀಯುತ್ತಾ, ಸಮುದ್ರಲಂಘನೆಯಲ್ಲಿ ಯಾರು ಎಷ್ಟು ಯೋಜನ ಹಾರಬಲ್ಲಿರಿ ಎಂದು ಪ್ರಶ್ನಿಸಿದುದು
ಮೂಲಮ್ - 1
ಆಖ್ಯಾತಾ ಗೃಧ್ರರಾಜೇನ ಸಮುತ್ಪ್ಲುತ್ಯ ಪ್ಲವಂಗಮಾಃ ।
ಸಂಗತಾಃ ಪ್ರೀತಿಸಂಯುಕ್ತಾ ವಿನೇದುಃ ಸಿಂಹವಿಕ್ರಮಾಃ ॥
ಅನುವಾದ
ಗೃಧ್ರರಾಜ ಸಂಪಾತಿಯು ಹೀಗೆ ಹೇಳಿದಾಗ, ಸಿಂಹದಂತೆ ಪರಾಕ್ರಮಿಗಳಾದ ಎಲ್ಲ ವಾನರರು ಬಹಳ ಪ್ರಸನ್ನರಾಗಿ, ಪರಸ್ಪರ ಸೇರಿ ಕುಣಿಯುತ್ತಾ, ನೆಗೆಯುತ್ತಾ, ಗರ್ಜಿಸತೊಡಗಿದರು.॥1॥
ಮೂಲಮ್ - 2
ಸಂಪಾತೇರ್ವಚನಂ ಶ್ರುತ್ವಾ ಹರಯೋ ರಾವಣಕ್ಷಯಮ್ ।
ಹೃಷ್ಟಾಃ ಸಾಗರಮಾಜಗ್ಮುಃ ಸೀತಾದರ್ಶನಕಾಂಕ್ಷಿಣಃ ॥
ಅನುವಾದ
ಸಂಪಾತಿಯ ಮಾತುಗಳಿಂದ ರಾವಣನ ನಿವಾಸಸ್ಥಾನ ಹಾಗೂ ಮುಂದೆ ಅವನ ವಿನಾಶದ ಸೂಚನೆ ಸಿಕ್ಕಿತ್ತು. ಅದನ್ನು ಕೇಳಿ ಹರ್ಷಗೊಂಡ ಎಲ್ಲ ವಾನರರು ಸೀತೆಯ ದರ್ಶನದ ಇಚ್ಛೆಯಿಂದ ಸಮುದ್ರತೀರಕ್ಕೆ ಬಂದರು.॥2॥
ಮೂಲಮ್ - 3
ಅಭಿಗಮ್ಯ ತು ತುಂ ದೇಶಂ ದದೃಶುರ್ಭೀಮವಿಕ್ರಮಾಃ ।
ಕೃತ್ಸ್ನಂ ಲೋಕಸ್ಯ ಮಹತಃ ಪ್ರತಿಬಿಂಬಮವಸ್ಥಿತಮ್ ॥
ಅನುವಾದ
ಆ ಭಯಂಕರ ಪರಾಕ್ರಮಿ ವಾನರರು ಹೋಗಿ ಸಮುದ್ರವನ್ನು ನೋಡಿದರು. ಅದು ವಿರಾಟ್ ವಿಶ್ವದ ಸಂಪೂರ್ಣ ಪ್ರತಿಬಿಂಬದಂತೆ ಸ್ಥಿತವಾಗಿತ್ತು.॥3॥
ಮೂಲಮ್ - 4
ದಕ್ಷಿಣಸ್ಯ ಸಮುದ್ರಸ್ಯ ಸಮಾಸಾದ್ಯೋತ್ತರಾಂ ದಿಶಮ್ ।
ಸಂನಿವೇಶಂ ತತಶ್ಚಕ್ರುರ್ಹರಿವೀರಾ ಮಹಾಬಲಾಃ ॥
ಅನುವಾದ
ದಕ್ಷಿಣ ಸಮುದ್ರದ ಉತ್ತರ ತೀರಕ್ಕೆ ಹೋಗಿ ಅಲ್ಲಿ ಆ ಮಹಾಬಲಿ ವಾನರ ವೀರರು ಬೀಡುಬಿಟ್ಟರು.॥4॥
ಮೂಲಮ್ - 5
ಪ್ರಸುಪ್ತಮಿವ ಚಾನ್ಯತ್ರ ಕೀಡಂತಮಿವ ಚಾನ್ಯತಃ ।
ಕ್ವಚಿತ್ಪರ್ವತಮಾತ್ರೈಶ್ಚ ಜಲರಾಶಿಭಿರಾವೃತಮ್ ॥
ಅನುವಾದ
ಆ ಸಮುದ್ರವು ಕೆಲವೆಡೆ ತರಂಗಗಳಿಲ್ಲದೆ ಶಾಂತವಾದ್ದರಿಂದ ಮಲಗಿದಂತೆ ಕಂಡು ಬಂದರೆ, ಇನ್ನೊಂದೆಡೆ ಸ್ವಲ್ಪವಾಗಿ ಏಳುವ ಅಲೆಗಳಿಂದಾಗಿ ಕ್ರೀಡಿಸುತ್ತಿರುವಂತೆ ಕಾಣುತ್ತಿತ್ತು. ಮತ್ತೊಂದೆಡೆ ಎತ್ತರವಾಗಿ ಏಳುತ್ತಿರುವ ತರಂಗಗಳಿಂದ ಪರ್ವತದಂತಹ ಜಲರಾಶಿಯಿಂದ ಕೂಡಿದಂತೆ ತೋರುತ್ತಿತ್ತು.॥5॥
ಮೂಲಮ್ - 6
ಸಂಕುಲಂ ದಾನವೇಂದ್ರೈಶ್ಚ ಪಾತಾಲತಲವಾಸಿಭಿಃ ।
ರೋಮಹರ್ಷಕರಂ ದೃಷ್ಟ್ವಾವಿಷೇದುಃ ಕಪಿಕುಂಜರಾಃ ॥
ಅನುವಾದ
ಆ ಇಡೀ ಸಮುದ್ರವು ಪಾತಾಳನಿವಾಸೀ ದಾನವರಾಜರಿಂದ ವ್ಯಾಪ್ತವಾಗಿತ್ತು. ಆ ರೋಮಾಂಚಕರ ಸಮುದ್ರವನ್ನು ನೋಡಿ ಆ ಸಮಸ್ತ ವಾನರ ಶ್ರೇಷ್ಠರು ಬಹಳ ವಿಷಾದಕ್ಕೊಳಗಾದರು.॥6॥
ಮೂಲಮ್ - 7
ಆಕಾಶಮಿವ ದುಷ್ಪಾರಂ ಸಾಗರಂ ಪ್ರೇಕ್ಷ್ಯವಾನರಾಃ ।
ವಿಷೇದುಃ ಸಹಿತಾಃ ಸರ್ವೇ ಕಥಂ ಕಾರ್ಯಮಿತಿ ಬ್ರುವನ್ ॥
ಅನುವಾದ
ಆಕಾಶದಂತೆ ದಾಟಲಶಕ್ಯವಾದ ಸಮುದ್ರದ ಕಡೆಗೆ ನೋಡುತ್ತಾ ಎಲ್ಲ ವಾನರರು ‘ಈಗ ಏನು ಮಾಡುವುದು?’ ಎಂದು ಹೇಳುತ್ತಾ ಒಟ್ಟಿಗೆ ಕುಳಿತುಕೊಂಡು ಚಿಂತಿಸತೊಡಗಿದರು.॥7॥
ಮೂಲಮ್ - 8
ವಿಷಣ್ಣಾಂ ವಾಹಿನೀಂ ದೃಷ್ಟ್ವಾ ಸಾಗರಸ್ಯ ನಿರೀಕ್ಷಣಾತ್ ।
ಆಶ್ವಾಸಯಾಮಾಸ ಹರೀನ್ಭಯಾರ್ತಾನ್ಹರಿಸತ್ತಮಃ ॥
ಅನುವಾದ
ಆ ಮಹಾಸಾಗರವನ್ನು ದರ್ಶಿಸಿ ಇಡೀ ವಾನರ ಸೈನ್ಯವು ವಿಷಾದದಲ್ಲಿ ಮುಳುಗಿರುವುದನ್ನು ನೋಡಿ ಕಪಿಶ್ರೇಷ್ಠ ಅಂಗದನು ಆ ಭಯಾತುರ ವಾನರರಿಗೆ ಆಶ್ವಾಸನೆಯನ್ನು ಕೊಡುತ್ತಾ ನುಡಿದನು.॥8॥
ಮೂಲಮ್ - 9
ನ ವಿಷಾದೇ ಮನಃ ಕಾರ್ಯಂ ವಿಷಾದೋ ದೋಷವತ್ತರಃ ।
ವಿಷಾದೋ ಹಂತಿ ಪುರುಷಂ ಬಾಲಂ ಕ್ರುದ್ಧ ಇವೋರಗಃ ॥
ಅನುವಾದ
ವೀರರೇ! ನೀವು ವಿಷಾದ ಪಡಬಾರದು; ಏಕೆಂದರೆ ವಿಷಾದದಲ್ಲಿ ಬಹಳ ದೊಡ್ಡ ದೋಷವಿದೆ. ಕ್ರೋಧಗೊಂಡ ಸರ್ಪವು ತನ್ನ ಬಳಿಗೆ ಬಂದ ಬಾಲಕನನ್ನು ಕಡಿಯುವಂತೆ ವಿಷಾದವು ಪುರುಷನನ್ನು ನಾಶ ಮಾಡುತ್ತದೆ.॥9॥
ಮೂಲಮ್ - 10
ಯೋ ವಿಷಾದಂ ಪ್ರಸಹತೇ ವಿಕ್ರಮೇ ಸಮುಪಸ್ಥಿತೇ ।
ತೇಜಸಾ ತಸ್ಯ ಹೀನಸ್ಯ ಪುರುಷಾರ್ಥೋ ನ ಸಿಧ್ಯತಿ ॥
ಅನುವಾದ
ಪರಾಕ್ರಮದ ಅವಕಾಶ ಬಂದಾಗ ವಿಷಾದಗ್ರಸ್ಥನಾಗುವವನ ತೇಜ ನಾಶವಾಗುತ್ತದೆ. ಆ ತೇಜೋಹೀನ ಪುರುಷನ ಪುರುಷಾರ್ಥವು ಸಿದ್ಧವಾಗುವುದಿಲ್ಲ.॥10॥
ಮೂಲಮ್ - 11
ತಸ್ಯಾಂ ರಾತ್ರ್ಯಾಂ ವ್ಯತೀತಾಯಾಮಂಗದೋ ವಾನರೈಃ ಸಹ ।
ಹರಿವೃದ್ಧೈಃ ಸಮಾಗಮ್ಯ ಪುನರ್ಮಂತ್ರ ಮಮಂತ್ರಯತ್ ॥
ಅನುವಾದ
ಆ ರಾತ್ರಿಯು ಕಳೆದು ಹೋಗಿ ದೊಡ್ಡ-ದೊಡ್ಡ ವಾನರರೊಂದಿಗೆ ಸೇರಿ ಅಂಗದನು ಪುನಃ ವಿಚಾರ ಪ್ರಾರಂಭಿಸಿದನು.॥11॥
ಮೂಲಮ್ - 12
ಸಾ ವಾನರಾಣಾಂ ಧ್ವಜಿನೀ ಪರಿವಾರ್ಯಾಂಗದಂ ಬಭೌ ।
ವಾಸವಂ ಪರಿವಾರ್ಯೇವ ಮರುತಾಂ ವಾಹಿನೀ ಸ್ಥಿತಾ ॥
ಅನುವಾದ
ಆಗ ಅಂಗದನನ್ನು ಆವರಿಸಿ ಕುಳಿತುಕೊಂಡ ಸೇನೆಯು ಇಂದ್ರನನ್ನು ಸುತ್ತುವರಿದು ಕುಳಿತಿರುವ ದೇವತೆಗಳ ವಿಶಾಲ ವಾಹಿನಿಯಂತೆ ಶೋಭಿಸುತ್ತಿತ್ತು.॥12॥
ಮೂಲಮ್ - 13
ಕೋಽನ್ಯಸ್ತಾಂ ವಾನರೀಂ ಸೇನಾಂ ಶಕ್ತಃ ಸ್ತಂಭಯಿತುಂ ಭವೇತ್ ।
ಅನ್ಯತ್ರ ವಾಲಿತನಯಾದನ್ಯತ್ರ ಚ ಹನೂಮತಃ ॥
ಅನುವಾದ
ವಾಲಿಪುತ್ರ ಅಂಗದ ಹಾಗೂ ಪವನಕುಮಾರ ಹನುಮಂತ ಇವರನ್ನು ಬಿಟ್ಟರೆ ಬೇರೆ ಯಾವ ವೀರನು ಆ ವಾನರರನ್ನು ಸುಸ್ಥಿತರಾಗಿ ಇಡಬಲ್ಲನು.॥13॥
ಮೂಲಮ್ - 14
ತತಸ್ತಾನ್ಹರಿವೃದ್ಧಾಂಶ್ಚ ತಚ್ಚ ಸೈನ್ಯಮರಿಂದಮಃ ।
ಅನುಮಾನ್ಯಾಂಗದಃ ಶ್ರೀಮಾನ್ವಾಕ್ಯಮರ್ಥವದಬ್ರವೀತ್ ॥
ಅನುವಾದ
ಶತ್ರುವೀರರನ್ನು ದಮನ ಮಾಡುವ ಶ್ರೀಮಾನ್ ಅಂಗದನು ಆ ಹಿರಿಯ-ಕಿರಿಯ ವಾನರರನ್ನು ಸಮ್ಮಾನಿಸುತ್ತಾ ಅವರಲ್ಲಿ ಅರ್ಥಯುಕ್ತ ಹೀಗೆ ಹೇಳಿದನು.॥14॥
ಮೂಲಮ್ - 15
ಕ ಇದಾನೀಂ ಮಹಾತೇಜಾ ಲಂಘಯಿಷ್ಯತಿ ಸಾಗರಮ್ ।
ಕಃ ಕರಿಷ್ಯತಿ ಸುಗ್ರೀವಂ ಸತ್ಯಸಂಧಮರಿಂದಮಮ್ ॥
ಅನುವಾದ
ಸಜ್ಜನರೇ! ನಿಮ್ಮಲ್ಲಿ ಈಗ ಸಮುದ್ರವನ್ನು ದಾಟಿ ಹೋಗಿ ಶತ್ರುದಮನ ಸುಗ್ರೀವನನ್ನು ಸತ್ಯಪ್ರತಿಜ್ಞನಾಗಿಸುವ ಮಹಾ ತೇಜಸ್ವೀ ವೀರನು ಯಾರು ಇದ್ದಾನೆ.॥15॥
ಮೂಲಮ್ - 16
ಕೋ ವೀರೋ ಯೋಜನಶತಂ ಲಂಘಯೇತ ಪ್ಲವಂಗಮಃ ।
ಇಮಾಂಶ್ಚ ಯೂಥಪಾನ್ಸರ್ವಾನ್ಮೋ ಯೇತ್ ಮಹಾಭಯಾತ್ ॥
ಅನುವಾದ
ಯಾವ ವಾನರವೀರನು ನೂರು ಯೋಜನ ಸಮುದ್ರವನ್ನು ದಾಟಬಲ್ಲನು? ಯಾರು ಈ ಸಮಸ್ತ ಯೂಥಪತಿಗಳ ಮಹಾಭಯದಿಂದ ಮುಕ್ತಗೊಳಿಸಬಲ್ಲನು.॥16॥
ಮೂಲಮ್ - 17
ಕಸ್ಯ ಪ್ರಸಾದಾದ್ ದಾರಾಂಶ್ಚ ಪುತ್ರಾಂಶ್ಚೈವ ಗೃಹಾಣಿ ಚ ।
ಇತೋ ನಿವೃತ್ತಾಃ ಪಶ್ಯೇಮ ಸಿದ್ಧಾರ್ಥಾಃ ಸುಖಿನೋ ವಯಮ್ ॥
ಅನುವಾದ
ಯಾರ ಪ್ರಸಾದದಿಂದ ನಾವು ಸಲ ಮನೋರಥರಾಗಿ, ಸುಖವಾಗಿ ಇಲ್ಲಿಂದ ಮರಳಿ, ಮನೆ, ಮಠ ಮತ್ತು ಪತ್ನೀ-ಪುತ್ರರ ಮುಖಗಳನ್ನು ನೋಡ ಬಲ್ಲೆವು.॥17॥
ಮೂಲಮ್ - 18
ಕಸ್ಯ ಪ್ರಸಾದಾದ್ರಾಮಂ ಚ ಲಕ್ಷ್ಮಣಂ ಚ ಮಹಾಬಲಮ್ ।
ಅಭಿಗಚ್ಛೇಮ ಸಂಹೃಷ್ಟಾಃ ಸುಗ್ರೀವಂ ಚ ಮಹಾಬಲಮ್ ॥
ಅನುವಾದ
ಯಾರ ಪ್ರಸಾದದಿಂದ ನಾವು ಹರ್ಷೋತ್ಫುಲ್ಲರಾಗಿ ಶ್ರೀರಾಮ, ಮಹಾಬಲಿ ಲಕ್ಷ್ಮಣ ಹಾಗೂ ವಾನರವೀರ ಸುಗ್ರೀವನ ಬಳಿಗೆ ಹೋಗಬಲ್ಲೆವು?॥18॥
ಮೂಲಮ್ - 19
ಯದಿ ಕಶ್ಚಿತ್ಸಮರ್ಥೋ ವಃ ಸಾಗರಪ್ಲವನೇ ಹರಿಃ ।
ಸ ದದಾತ್ವಿಹ ನಃ ಶೀಘ್ರಂ ಪುಣ್ಯಾಮಭಯದಕ್ಷಿಣಾಮ್ ॥
ಅನುವಾದ
ನಿಮ್ಮಲ್ಲಿ ಯಾರಾದರೂ ವಾನರವೀರನು ಸಮುದ್ರವನ್ನು ದಾಟಿ ಹೋಗಲು ಸಮರ್ಥನಾಗಿದ್ದರೆ, ಅವನು ಬೇಗನೇ ಇಲ್ಲಿ ನಮಗೆ ಪರಮ ಪವಿತ್ರ ಅಭಯದಾನ ಕೊಡಲಿ.॥19॥
ಮೂಲಮ್ - 20
ಅಂಗದಸ್ಯ ವಚಃ ಶ್ರುತ್ವಾ ನ ಕಶ್ಚಿತ್ ಕಿಂಚಿದಬ್ರವೀತ್ ।
ಸ್ತಿಮಿತೇವಾಭವತ್ಸರ್ವಾ ಸಾ ತತ್ರ ಹರಿವಾಹಿನೀ ॥
ಅನುವಾದ
ಅಂಗದನ ಮಾತನ್ನು ಕೇಳಿ ಯಾರೂ ಏನನ್ನೂ ಮಾತನಾಡಲಿಲ್ಲ. ಆ ಸಮಸ್ತ ವಾನರ ಸೈನ್ಯವು ಅಲ್ಲಿ ಜಡದಂತೆ ಸ್ಥಿರವಾಗಿತ್ತು.॥20॥
ಮೂಲಮ್ - 21
ಪುನರೇವಾಂಗದಃ ಪ್ರಾಹ ತಾನ್ ಹರೀನ್ ಹರಿಸತ್ತಮಃ ।
ಸರ್ವೇ ಬಲವತಾಂ ಶ್ರೇಷ್ಠಾ ಭವಂತೋ ದೃಢವಿಕ್ರಮಾಃ ।
ವ್ಯಪದೇಶಕುಲೇ ಜಾತಾಃ ಪೂಜಿತಾಶ್ಚಾಪ್ಯಭೀಕ್ಷ್ಣಶಃ ॥
ಅನುವಾದ
ಆಗ ವಾನರಶ್ರೇಷ್ಠ ಅಂಗದನು ಪುನಃ ಅವರೆಲ್ಲರಲ್ಲಿ ಹೇಳಿದನು - ಬಲಿಷ್ಠರಲ್ಲಿ ಶ್ರೇಷ್ಠರಾದ ವಾನರರೇ! ನೀವೆಲ್ಲರೂ ದೃಢತೆಯಿಂದ ಪರಾಕ್ರಮವನ್ನು ಪ್ರಕಟಪಡಿಸುವವರಾಗಿದ್ದೀರಿ. ನೀವು ಕಳಂಕರಹಿತ ಉತ್ತಮವಾದ ಕುಲದಲ್ಲಿ ಹುಟ್ಟಿರುವಿರಿ. ಅದಕ್ಕಾಗಿಯೇ ಪದೇ-ಪದೇ ನಿಮ್ಮ ಪ್ರಶಂಸೆ ಆಗುತ್ತಾ ಇರುತ್ತದೆ.॥21॥
ಮೂಲಮ್ - 22
ನಹಿವೋ ಗಮನೇ ಸಂಗಃ ಕದಾಚಿದ್ ಕಸ್ಯಚಿದ್ ಭವೇತ್ ।
ಬ್ರುವಧ್ವಂ ಯಸ್ಯ ಯಾ ಶಕ್ತಿಃ ಪ್ಲವನೇ ಪ್ಲವಗರ್ಷಭಾಃ ॥
ಅನುವಾದ
ಶ್ರೇಷ್ಠವಾನರರೇ! ನಿಮ್ಮಲ್ಲಿ ಎಂದೂ ಯಾರ ಗತಿಯೂ ಎಲ್ಲಿಯೂ ಕುಂಠಿತವಾಗುವುದಿಲ್ಲ. ಅದಕ್ಕಾಗಿ ಸಮುದ್ರವನ್ನು ದಾಟುವುದರಲ್ಲಿ ಯಾರಿಗೆ ಎಷ್ಟು ಶಕ್ತಿ ಇದೆ ಎಂಬುದನ್ನು ತಿಳಿಸಿರಿ.॥22॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಅರವತ್ತನಾಲ್ಕನೆಯ ಸರ್ಗ ಸಂಪೂರ್ಣವಾಯಿತು.॥64॥