०६३ सम्पातिना नूतनपक्षप्राप्तिः

वाचनम्
ಭಾಗಸೂಚನಾ

ಸಂಪಾತಿಗೆ ರೆಕ್ಕೆ ಮೂಡಿದುದು, ವಾನರರನ್ನು ಪ್ರೋತ್ಸಾಹಿಸಿ ಸಂಪಾತಿಯು ಹಾರಿಹೋದುದು, ವಾನರರು ದಕ್ಷಿಣ ದಿಕ್ಕಿಗೆ ಪ್ರಯಾಣಮಾಡಿದುದು

ಮೂಲಮ್ - 1

ಏತೈರನ್ಯೈಶ್ಚ ಬಹುಭಿರ್ವಾಕ್ಯೈರ್ವಾಕ್ಯವಿಶಾರದಃ ।
ಮಾಂ ಪ್ರಶಸ್ಯಾಭ್ಯನುಜ್ಞಾಪ್ಯಪ್ರವಿಷ್ಟಃ ಸ ಸ್ವಮಾಲಯಮ್ ॥

ಅನುವಾದ

ಕಪಿಶ್ರೇಷ್ಠರೇ! ವಾಕ್ಯವಿಶಾರದನಾದ ನಿಶಾಕರ ಮುನಿಯು ಈ ಮಾತುಗಳಿಂದ ಇನ್ನೂ ಅನೇಕ ಸವಿನುಡಿಗಳಿಂದ ನನ್ನನ್ನು ಪ್ರಶಂಸಿಸಿ, ನನಗೆ ಆಜ್ಞೆಯನ್ನಿತ್ತು ತಮ್ಮ ಆಶ್ರಮದೊಳಗೆ ಹೊರಟುಹೋದರು.॥1॥

ಮೂಲಮ್ - 2

ಕಂದರಾತ್ ತು ವಿಸರ್ಪಿತ್ವಾ ಪರ್ವತಸ್ಯ ಶನೈಃ ಶೆನೈಃ ।
ಅಹಂ ವಿಂಧ್ಯಂ ಸಮಾರುಹ್ಯ ಭವತಃ ಪ್ರತಿಪಾಲಯೇ ॥

ಅನುವಾದ

ಅನಂತರ ಕಂದರಗಳಿಂದ ನಿಧಾನವಾಗಿ ಹೊರಟು ನಾನು ವಿಂಧ್ಯಪರ್ವತದ ಶಿಖರವನ್ನು ಹತ್ತಿಬಂದೆ. ಅಂದಿನಿಂದ ನಿಮ್ಮಗಳ ದಾರಿ ಕಾಯುತ್ತಾ ಇದ್ದೇನೆ.॥2॥

ಮೂಲಮ್ - 3

ಅದ್ಯ ತ್ವೇತಸ್ಯ ಕಾಲಸ್ಯವರ್ಷಂ ಸಾಗ್ರವರ್ಷಶತಂ ಗತಮ್ ।
ದೇಶಕಾಲಪ್ರತೀಕ್ಷೋಽಸ್ಮಿ ಹೃದಿ ಕೃತ್ವಾ ಮುನೇರ್ವಚಃ ॥

ಅನುವಾದ

ಮುನಿಯೊಡನೆ ಮಾತುಕತೆಯಾಡಿದ ಬಳಿಕ ಇಂದಿನವರೆಗೆ ಕಳೆದ ಸಮಯದಲ್ಲಿ ಎಂಟುಸಾವಿರಕ್ಕಿಂತ ಹೆಚ್ಚು ವರ್ಷಗಳು ಕಳೆದುಹೋಗಿವೆ. ಮುನಿಯು ಹೇಳಿದುದನನ್ನು ಮನಸ್ಸಿನಲ್ಲಿಟ್ಟುಕೊಂಡು ದೇಶ-ಕಾಲವನ್ನು ಪ್ರತೀಕ್ಷೆಮಾಡುತ್ತಿದ್ದೇನೆ.॥3॥

ಮೂಲಮ್ - 4

ಮಹಾಪ್ರಸ್ಥಾನಮಾಸಾದ್ಯ ಸ್ವರ್ಗತೇ ತು ನಿಶಾಕರೇ ।
ಮಾಂ ನಿರ್ದಹತಿ ಸಂತಾಪೋ ವಿತರ್ಕೈರ್ಬಹುಭಿರ್ವೃತಮ್ ॥

ಅನುವಾದ

ನಿಶಾಕರ ಮುನಿಯು ಮಹಾಪ್ರಸ್ಥಾನ ಮಾಡಿ ಸ್ವರ್ಗ ಲೋಕಕ್ಕೆ ಹೊರಟುಹೋದಂದಿನಿಂದ ನಾನು ಅನೇಕ ಪ್ರಕಾರದ ತರ್ಕ-ವಿತರ್ಕಗಳ ಸಂತಾಪದ ಅಗ್ನಿಯು ನನ್ನನ್ನು ಹಗಲು-ರಾತ್ರೆ ಸುಡುತ್ತಿದೆ.॥4॥

ಮೂಲಮ್ - 5½

ಉದಿತಾಂ ಮರಣೇ ಬುದ್ಧಿಂ ಮುನಿವಾಕ್ಯೈರ್ನಿವರ್ತಯೇ ।
ಬುದ್ಧಿರ್ಯಾ ತೇನ ಮೇ ದತ್ತಾ ಪ್ರಾಣಾನಾಂ ರಕ್ಷಣೇ ಮಮ ॥
ಸಾ ಮೇಽಪನಯತೇ ದುಃಖಂ ದೀಪ್ತೇವಾಗ್ನಿಶಿಖಾ ತಮಃ ।

ಅನುವಾದ

ನನ್ನ ಮನಸ್ಸಿನಲ್ಲಿ ಅನೇಕ ಸಲ ಪ್ರಾಣ ತ್ಯಾಗದ ಇಚ್ಛೆ ಉಂಟಾಗಿತ್ತು, ಆದರೆ ಮುನಿಯ ಮಾತನ್ನು ನೆನೆದು ನಾನು ಆ ಸಂಕಲ್ಪವನ್ನು ತ್ಯಜಿಸುತ್ತಿದ್ದೆ. ಪ್ರಾಣಗಳನ್ನು ಧರಿಸಿಕೊಂಡಿರ ಬೇಕೆಂದು ಅವರು ಹೇಳಿದ ಮಾತು-ಉರಿಯುವ ಬೆಂಕಿಯ ಅಂಧಕಾರವನ್ನು ದೂರ ಗೊಳಿಸುವಂತೆಯೇ, ನನ್ನ ದುಃಖವನ್ನು ದೂರಗೊಳಿಸುತ್ತಾ ಇದೆ.॥5॥

ಮೂಲಮ್ - 6½

ಬುದ್ಧ್ಯತಾ ಚ ಮಯಾ ವೀರ್ಯಂ ರಾವಣಸ್ಯ ದುರಾತ್ಮನಃ ॥
ಪುತ್ರಃ ಸಂತರ್ಜಿತೋ ವಾಗ್ಭಿರ್ನ ತ್ರಾತಾ ಮೈಥಿಲೀ ಕಥಮ್ ।

ಅನುವಾದ

ದುರಾತ್ಮಾ ರಾವಣನಲ್ಲಿ ಇರುವ ಬಲವನ್ನು ನಾನು ತಿಳಿದಿದ್ದೇನೆ. ಅದಕ್ಕಾಗಿ ನಾನು ನನ್ನ ಮಗನನ್ನು - ನೀನು ಸೀತೆಯನ್ನು ಏಕೆ ರಕ್ಷಿಸಲಿಲ್ಲ? ಎಂದು ಕಟುವಚನಗಳಿಂದ ಗದರಿಸಿದ್ದೆ.॥6॥

ಮೂಲಮ್ - 7½

ತಸ್ಯಾ ವಿಲಪಿತಂ ಶ್ರುತ್ವಾ ತೌ ಚ ಸೀತಾವಿಯೋಜಿತೌ ॥
ನ ಮೇ ದಶರಥಸ್ನೇಹಾತ್ಪುತ್ರೇಣೋತ್ಪಾದಿತಂ ಪ್ರಿಯಮ್ ।

ಅನುವಾದ

ಸೀತಾದೇವಿಯ ವಿಲಾಪವನ್ನು ಕೇಳಿಯೂ, ರಾಮ-ಲಕ್ಷ್ಮಣರು ಸೀತೆಯಿಂದ ಅಗಲಿರುವ ರೆಂದು ತಿಳಿದೂ, ನನ್ನ ಮಗನು ದಶರಥನೊಡನೆ ನನಗಿದ್ದ ಸ್ನೇಹಕ್ಕೆ ಅನುಗುಣನಾಗಿ ನನಗೆ ಯಾವ ವಿಧವಾದ ಸಂತೋಷವನ್ನು ಉಂಟುಮಾಡಲಿಲ್ಲ.॥7॥

ಮೂಲಮ್ - 8½

ತಸ್ಯ ತ್ವೇವಂ ಬ್ರುವಾಣಸ್ಯ ಸಂಹತೈರ್ವಾನರೈಃ ಸಹ ॥
ಉತ್ಪೇತತುಸ್ತದಾ ಪಕ್ಷೌ ಸಮಕ್ಷಂ ವನಚಾರಿಣಾಮ್ ।

ಅನುವಾದ

ಅಲ್ಲಿ ಒಟ್ಟಿಗೆ ಕುಳಿತಿದ್ದ ವಾನರರೊಂದಿಗೆ ಸಂಪಾತಿಯು ಹೀಗೆ ಮಾತನಾಡುತ್ತಿರವಾಗಲೇ ಆ ವಾನರರ ಸಮಕ್ಷಮದಲ್ಲಿ ಅವನಿಗೆ ಎರಡು ಹೊಸ ರೆಕ್ಕೆಗಳು ಮೂಡಿದವು.॥8॥

ಮೂಲಮ್ - 9½

ಸ ದೃಷ್ಟ್ವಾಸ್ವಾಂ ತನುಂ ಪಕ್ಷೈರುದ್ಗತೈರರುಣಚ್ಛದೈಃ ॥
ಪ್ರಹರ್ಷಮತುಲಂ ಲೇಭೇ ವಾನರಾಂಶ್ಚೇದಮಬ್ರವೀತ್ ।

ಅನುವಾದ

ತನ್ನ ಶರೀರದಲ್ಲಿ ಮೂಡಿದ ಹೊಸ ಕೆಂಪಾದ ರೆಕ್ಕೆಗಳನ್ನು ನೋಡಿ ಸಂಪಾತಿಗೆ ಬಹಳ ಹರ್ಷವಾಯಿತು. ಅವನು ವಾನರರಲ್ಲಿ ಹೀಗೆ ಹೇಳಿದನು.॥9॥

ಮೂಲಮ್ - 10½

ನಿಶಾಕರಸ್ಯ ರಾಜರ್ಷೇಃ ಪ್ರಸಾದಾದಮಿತೌಜಸಃ ॥
ಆದಿತ್ಯರಶ್ಮಿನಿರ್ದಗ್ಧೌ ಪಕ್ಷೌ ಮೇ ಪುನರುಪತ್ಥಿತೌ ।

ಅನುವಾದ

ಕಪೀಶ್ವರರೇ! ಅಮಿತತೇಜಸ್ವೀ ರಾಜರ್ಷಿ ನಿಶಾಕರನ ಪ್ರಸಾದದಿಂದ ಸೂರ್ಯಕಿರಣಗಳ ಮೂಲಕ ಸುಟ್ಟುಹೋದ ನನ್ನ ಎರಡೂ ರೆಕ್ಕೆಗಳು ಪುನಃ ಮೂಡಿಕೊಂಡಿವೆ.॥10॥

ಮೂಲಮ್ - 11½

ಯೌವನೇ ವರ್ತಮಾನಾಸ್ಯ ಮಮಾಸೀದ್ ಯಃ ಪರಾಕ್ರಮಃ ॥
ತಮೇವಾದ್ಯಾವಗಚ್ಛಾಮಿ ಬಲಂ ಪೌರುಷಮೇವ ಚ ।

ಅನುವಾದ

ಯೌವನದಲ್ಲಿ ನನ್ನಲ್ಲಿ ಇದ್ದ ಬಲ-ಪರಾಕ್ರಮಗಳು, ಪುರುಷಾರ್ಥಗಳನ್ನೇ ನಾನು ಇಂದು ಅನುಭವಿಸುತ್ತಿದ್ದೇನೆ.॥11॥

ಮೂಲಮ್ - 12½

ಸರ್ವಥಾ ಕ್ರಿಯತಾಂ ಯತ್ನಃ ಸೀತಾಮಧಿಗಮಿಷ್ಯಥ ॥
ಪಕ್ಷಲಾಭೋ ಮಮಾಯಾಂ ವಃ ಸಿದ್ಧಿಪ್ರತ್ಯಯಕಾರಕಃ ।

ಅನುವಾದ

ವಾನರರೇ! ನೀವು ಎಲ್ಲ ಪ್ರಕಾರದಿಂದ ಪ್ರಯತ್ನ ಮಾಡಿರಿ. ನಿಶ್ಚಯವಾಗಿ ನಿಮಗೆ ಸೀತೆಯ ದರ್ಶನವಾಗುವುದು, ನನಗೆ ರೆಕ್ಕೆಗಳು ದೊರೆಯುವುದು, ನಿಮ್ಮ ಕಾರ್ಯಸಿದ್ಧಿಯ ವಿಶ್ವಾಸ ಕೊಡುವಂತಹುದಾಗಿದೆ.॥12॥

ಮೂಲಮ್ - 13½

ಇತ್ಯುಕ್ತ್ವಾ ತಾನ್ ಹರೀನ್ಸರ್ವಾನ್ ಸಂಪಾತಿಃ ಪತಗೋತ್ತಮಃ ॥
ಉತ್ಪಪಾತ ಗಿರೇಃ ಶೃಂಗಾಜ್ಜಿಜ್ಞಾಸುಃ ಖಗಮೋ ಗತಿಮ್ ।

ಅನುವಾದ

ಆ ಸಮಸ್ತ ವಾನರರಲ್ಲಿ ಹೀಗೆ ಹೇಳಿ ಪಕ್ಷಿಗಳಲ್ಲಿ ಶ್ರೇಷ್ಠ ಸಂಪಾತಿಯು ಆಕಾಶ ಗಮನದ ಶಕ್ತಿಯ ಪರಿಚಯ ಪಡೆಯಲು ಆ ಪರ್ವತ ಶಿಖರದಿಂದ ಹಾರಿಹೋದನು.॥13॥

ಮೂಲಮ್ - 14

ತಸ್ಯ ತದ್ವಚನಂ ಶ್ರುತ್ವಾ ಪ್ರೀತಿ ಸಂಹೃಷ್ಟಮಾನಸಾಃ ।
ಬಭೂವುರ್ಹರಿಶಾರ್ದೂಲಾ ವಿಕ್ರಮಾಭ್ಯುದಯೋನ್ಮುಖಾಃ ॥

ಅನುವಾದ

ಅವನ ಮಾತನ್ನು ಕೇಳಿ ಆ ಶ್ರೇಷ್ಠವಾನರರ ಹೃದಯಗಳು ಪ್ರಸನ್ನತೆಯಿಂದ ಅರಳಿದವು. ಅವರು ಪರಾಕ್ರಮಸಾಧ್ಯ ಅಭ್ಯುದಯಕ್ಕಾಗಿ ಉದ್ಯುಕ್ತರಾದರು.॥14॥

ಮೂಲಮ್ - 15

ಅಥ ಪವನಸಮಾನವಿಕ್ರಮಾಃ
ಪ್ಲವಗವರಾಃ ಪ್ರತಿಲಬ್ಧ ಪೌರುಷಾಃ ।
ಅಭಿಜಿದಭಿಮುಖಾಂ ದಿಶಂ ಯಯು-
ರ್ಜನಕಸುತಾಪರಿಮಾರ್ಗಣೋನ್ಮುಖಾಃ ॥

ಅನುವಾದ

ಅನಂತರ ವಾಯುವಿನಂತಹ ಪರಾಕಮಿ ಆ ಶ್ರೇಷ್ಠ ವಾನರರು ತಾವು ಮರೆತು ಹೋದ ಪುರುಷಾರ್ಥವನ್ನು ಪುನಃ ಪಡೆದುಕೊಂಡರು ಮತ್ತು ಜಾನಕಿಯನ್ನು ಹುಡುಕಲು ಉತ್ಸುಕರಾಗಿ ಅಭಿಜಿತ್ ನಕ್ಷತ್ರದಿಂದ ಯುಕ್ತವಾದ ದಕ್ಷಿಣ ದಿಕ್ಕಿನ ಕಡೆಗೆ ಹೊರಟರು.॥15॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾ ಕಾಂಡದ ಅರವತ್ತಮೂರನೆಯ ಸರ್ಗ ಸಂಪೂರ್ಣವಾಯಿತು.॥63॥