०६२ सम्पातिना स्वकथानिरूपणम्

वाचनम्
ಭಾಗಸೂಚನಾ

ನಿಶಾಕರ ಮುನಿಯು ಸಂಪಾತಿಗೆ ಸಾಂತ್ವನ ನೀಡುತ್ತಾ ಮುಂದೆ ಶ್ರೀರಾಮಚಂದ್ರನ ಕಾರ್ಯದಲ್ಲಿ ಸಹಾಯ ಮಾಡಲು ಬದುಕಿ ಇರುವಂತೆ ಆದೇಶಿಸಿದುದು

ಮೂಲಮ್ - 1

ಏವಮುಕ್ತ್ವಾ ಮುನಿಶ್ರೇಷ್ಠಮರುದಂ ಭೃಶದುಃಖಿತಃ ।
ಅಥ ಧ್ಯಾತ್ವಾ ಮುಹೂರ್ತಂ ಚ ಭಗವಾನಿದಮಬ್ರವೀತ್ ॥

ಅನುವಾದ

ವಾನರರೇ! ಆ ಮುನಿಶ್ರೇಷ್ಠರಲ್ಲಿ ಹೀಗೆ ಹೇಳಿ ನಾನು ಬಹಳ ದುಃಖಿತನಾಗಿ ವಿಲಾಪಿಸತೊಡಗಿದೆ. ನನ್ನ ಮಾತನ್ನು ಕೇಳಿ ಸ್ವಲ್ಪ ಹೊತ್ತು ಧ್ಯಾನಮಾಡಿ ಮಹರ್ಷಿ ನಿಶಾಕರ ಮುನಿಗಳು ಹೇಳಿದರು .॥1॥

ಮೂಲಮ್ - 2

ಪಕ್ಷೌ ಚ ತೇ ಪ್ರಪಕ್ಷೌ ಚ ಪುನರನ್ಯೌ ಭವಿಷ್ಯತಃ ।
ಚಕ್ಷುಷೀ ಚೈವ ಪ್ರಾಣಾಶ್ಚ ವಿಕ್ರಮಶ್ಚ ಬಲಂ ಚ ತೇ ॥

ಅನುವಾದ

ಸಂಪಾತಿಯೇ! ಚಿಂತಿಸ ಬೇಡ. ನಿನ್ನ ಚಿಕ್ಕ ಮತ್ತು ದೊಡ್ಡ ಎರಡು ರೀತಿಯ ರೆಕ್ಕೆಗಳು ಪುನಃ ಹುಟ್ಟುವವು. ಕಣ್ಣುಗಳೂ ಸರಿಯಾಗುವವು, ಕಳೆದು ಹೋದ ಪ್ರಾಣಶಕ್ತಿ, ಬಲ-ಪರಾಕ್ರಮ ಎಲ್ಲವೂ ಮರಳಿ ಬರುವುದು.॥2॥

ಮೂಲಮ್ - 3

ಪುರಾಣೇ ಸುಮಹತ್ಕಾರ್ಯಂ ಭವಿಷ್ಯಂ ಹಿ ಮಯಾಶ್ರುತಮ್ ।
ದೃಷ್ಟಂ ಮೇ ತಪಸಾ ಚೈವಶ್ರುತ್ವಾಚ ವಿದಿತಂ ಮಮ ॥

ಅನುವಾದ

ಮುಂದೆ ಆಗುವ ಅನೇಕ ದೊಡ್ಡ-ದೊಡ್ಡ ಕಾರ್ಯಗಳ ಕುರಿತು ಪುರಾಣಗಳಲ್ಲಿ ನಾನು ಕೇಳಿರುವೆನು. ಕೇಳಿ ತಪಸ್ಸಿನಿಂದಲೂ ನಾನು ಆ ಎಲ್ಲ ಮಾತುಗಳನ್ನು ಪ್ರತ್ಯಕ್ಷವಾಗಿ ತಿಳಿದಿರುವೆನು.॥3॥

ಮೂಲಮ್ - 4

ರಾಜಾ ದಶರಥೋ ನಾಮ ಕಶ್ಚಿದಿಕ್ಷ್ವಾಕುವರ್ಧನಃ ।
ತಸ್ಯ ಪುತ್ರೋ ಮಹಾತೇಜಾ ರಾಮೋ ನಾಮ ಭವಿಷ್ಯತಿ ॥

ಅನುವಾದ

ಇಕ್ಷ್ವಾಕುವಂಶವರ್ಧನನಾದ ದಶರಥ ಎಂಬ ಹೆಸರಿನಿಂದ ಒಬ್ಬ ಪ್ರಸಿದ್ಧ ರಾಜನಾಗುವನು. ಅವನಿಗೆ ಮಹಾತೇಜಸ್ವೀ ಶ್ರೀರಾಮನೆಂಬ ಹೆಸರಿನಿಂದ ಪ್ರಸಿದ್ಧನಾದ ಪುತ್ರನು ಹುಟ್ಟುವನು.॥4॥

ಮೂಲಮ್ - 5

ಅರಣ್ಯಂ ಚ ಸಹ ಭ್ರಾತ್ರಾ ಲಕ್ಷ್ಮಣೇನ ಗಮಿಷ್ಯತಿ ।
ಅಸ್ಮಿನ್ನರ್ಥೇ ನಿಯುಕ್ತಃ ಸನ್ ಪ್ರಿತ್ರಾ ಸತ್ಯಪರಾಕ್ರಮಃ ॥

ಅನುವಾದ

ಸತ್ಯ ಪರಾಕ್ರಮಿ ಶ್ರೀರಾಮಚಂದ್ರನು ತನ್ನ ಪತ್ನೀ ಸೀತೆ ಮತ್ತು ಲಕ್ಷ್ಮಣನೊಂದಿಗೆ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ಹೋಗುವನು.॥5॥

ಮೂಲಮ್ - 6

ನೈರ್ಋತೋ ರಾವಣೋ ನಾಮ ತಸ್ಯ ಭಾರ್ಯಾಂ ಹರಿಷ್ಯತಿ ।
ರಾಕ್ಷಸೇಂದ್ರೋ ಜನಸ್ಥಾನೇ ಅವಧ್ಯಃ ಸುರದಾನವೈಃ ॥

ಅನುವಾದ

ವನವಾಸ ಕಾಲದಲ್ಲಿ ಜನಸ್ಥಾನದಲ್ಲಿ ಇರುವಾಗ, ಅವನ ಪತ್ನೀ ಸೀತೆಯನ್ನು ರಾಕ್ಷಸರ ರಾಜನಾದ ದೇವತೆಗಳಿಗೆ ಮತ್ತು ದಾನವರಿಗೂ ಅವಧ್ಯನಾದ ರಾವಣನೆಂಬ ಅಸುರನು ಕದ್ದುಕೊಂಡು ಹೋಗುವನು.॥6॥

ಮೂಲಮ್ - 7

ಸಾ ಚ ಕಾಮೈಃ ಪ್ರಲೋಭ್ಯಂತೀ ಭಕ್ಷ್ಯೈರ್ಭೋಜ್ಯೈಶ್ಚ ಮೈಥಿಲೀ ।
ನ ಭೋಕ್ಷ್ಯತಿ ಮಹಾಭಾಗಾ ದುಃಖ ಮಗ್ನಾ ಯಶಸ್ವಿನೀ ॥

ಅನುವಾದ

ಮಿಥಿಲೇಶ ಕುಮಾರಿ ಸೀತೆಯು ಬಹಳ ಯಶಸ್ವಿನಿಯೂ, ಸೌಭಾಗ್ಯವತಿಯೂ, ಆಗುವಳು. ರಾಕ್ಷಸರಾಜನು ಆಕೆಗೆ ಅನೇಕ ಭೋಗಗಳನ್ನು, ಭಕ್ಷ-ಭೋಜ್ಯಾದಿ ಪದಾರ್ಥಗಳ ಪ್ರಲೋಭನೆ ಒಡ್ಡಿದರೂ, ಅವನ್ನು ಆಕೆಯು ಸ್ವೀಕರಿಸಲಾರಳು ಹಾಗೂ ನಿರಂತರ ತನ್ನ ಪತಿಗಾಗಿ ಚಿಂತಿತಳಾಗಿ ದುಃಖದಲ್ಲಿ ಮುಳುಗಿರುವಳು.॥7॥

ಮೂಲಮ್ - 8

ಪರಮಾನ್ನಂ ಚ ವೈದೇಹ್ಯಾ ಜ್ಞಾತ್ವಾದಾಸ್ಯತಿ ವಾಸವಃ ।
ಯದನ್ನಮಮೃತಪ್ರಖ್ಯಂ ಸುರಾಣಾಮಪಿ ದುರ್ಲಭಮ್ ॥

ಅನುವಾದ

ಸೀತೆಯು ರಾಕ್ಷಸನ ಅನ್ನವನ್ನು ಸ್ವೀಕರಿಸುವುದಿಲ್ಲವೆಂದು ತಿಳಿದು ದೇವೇಂದ್ರನು ಆಕೆಗಾಗಿ ಅಮೃತದಂತೆ ದೇವತೆಗಳಿಗೂ ದುರ್ಲಭವಾದ ಪಾಯಸ ವನ್ನು ನಿವೇದಿಸುವನು.॥8॥

ಮೂಲಮ್ - 9

ತದನ್ನಂ ಮೈಥಿಲೀ ಪ್ರಾಪ್ಯ ವಿಜ್ಞಾಯೇಂದ್ರಾದಿದಂ ತ್ವಿತಿ ।
ಅಗ್ರಮುದ್ಧೃತ್ಯ ರಾಮಾಯ ಭೂತಲೇ ನಿರ್ವಪಿಷ್ಯತಿ ॥

ಅನುವಾದ

ಆ ಪಾಯಸವನ್ನು ಇಂದ್ರನು ಕೊಟ್ಟಿರುವನೆಂದು ತಿಳಿದು ಜಾನಕಿಯು ಸ್ವೀಕರಿಸುವಳು ಮತ್ತು ಮೊಟ್ಟ ಮೊದಲು ಅದರ ಮೇಲಿನ ಸ್ವಲ್ಪ ಭಾಗವನ್ನು ತೆಗೆದು ಶ್ರೀರಾಮನ ಉದ್ದೇಶದಿಂದ ನೆಲದಲ್ಲಿ ಇಡುವಳು.॥9॥

ಮೂಲಮ್ - 10

ಯದಿ ಜೀವತಿ ಮೇ ಭರ್ತಾ ಲಕ್ಷ್ಮಣೋ ವಾಪಿ ದೇವರಃ ।
ದೇವತ್ವಂ ಗಚ್ಛತೋರ್ವಾಪಿ ತಯೋರನ್ನಮಿದಂ ತ್ವಿತಿ ॥

ಅನುವಾದ

ಆಗ ಅವಳು ನನ್ನ ಪತಿ ಭಗವಾನ್ ಶ್ರೀರಾಮ ಮತ್ತು ಮೈದುನ ಲಕ್ಷ್ಮಣನು ಜೀವಂತರಾಗಿದ್ದರೆ, ಅಥವಾ ದೇವತ್ವವನ್ನು ಪಡೆದಿದ್ದರೂ ಈ ಅನ್ನವು ಅವರಿಗಾಗಿ ಸಮರ್ಪಿತವಾಗಿದೆ ಎಂದು ಹೇಳುವಳು.॥10॥

ಮೂಲಮ್ - 11

ಏಷ್ಯಂತಿ ಪ್ರೇಷಿತಾಸ್ತತ್ರ ರಾಮದೂತಾಃ ಪ್ಲವಂಗಮಾಃ ।
ಆಖ್ಯೇಯಾ ರಾಮಮಹಿಷೀ ತ್ವಯಾ ತೇಭ್ಯೋ ವಿಹಂಗಮ ॥

ಅನುವಾದ

ಸಂಪಾತಿಯೇ! ರಘುನಾಥನು ಸೀತಾನ್ವೇಷಣೆಗಾಗಿ ಕಳಿಸಿದ ವಾನರರು ಇಲ್ಲಿಗೆ ಬರುವರು. ಅವರಿಗೆ ಶ್ರೀರಾಮ ಪತ್ನಿಯಾದ ಸೀತೆಯು ಎಲ್ಲಿರುವಳೆಂದು ನೀನು ತಿಳಿಸುವುದು.॥11॥

ಮೂಲಮ್ - 12

ಸರ್ವಥಾ ತು ನ ಗಂತವ್ಯಮೀದೃಶಃ ಕ್ವ ಗಮಿಷ್ಯಸಿ ।
ದೇಶಕಾಲೌ ಪ್ರತೀಕ್ಷಸ್ವ ಪಕ್ಷೌ ತ್ವಂ ಪ್ರತಿಪತ್ಸ್ಯಸೇ ॥

ಅನುವಾದ

ಇಲ್ಲಿಂದ ಯಾವ ರೀತಿಯಿಂದಲೂ ಎಲ್ಲಿಗೂ ಹೋಗಬಾರದು. ಇಂತಹ ಸ್ಥಿತಿಯಲ್ಲಿ ನೀನು ಹೋಗುವುದಾದರೂ ಎಲ್ಲಿಗೆ? ದೇಶಕಾಲವನ್ನು ಪ್ರತೀಕ್ಷೆ ಮಾಡುತ್ತಾ ಇರು. ನಿನಗೆ ಮತ್ತೆ ಹೊಸ ರೆಕ್ಕೆಗಳು ಮೂಡುವವು.॥12॥

ಮೂಲಮ್ - 13

ಉತ್ಸಹೇಯಮಹಂ ಕರ್ತುಮದ್ಯೈವ ತ್ವಾಂ ಸಪಕ್ಷಕಮ್ ।
ಇಹಸ್ಥಸ್ತ್ವಂ ಹಿ ಲೋಕಾನಾಂ ಹಿತಂ ಕಾರ್ಯಂ ಕರಿಷ್ಯಸಿ ॥

ಅನುವಾದ

ನಾನು ಇಂದೇ ನಿನ್ನನ್ನು ಪಕ್ಷಯುಕ್ತವಾಗಿಸಬಲ್ಲೆನು, ಆದರೆ ನೀನು ಇಲ್ಲೇ ಇರುವುದರಿಂದ ಜಗತ್ತಿಗೆ ಹಿತಕರ ಕಾರ್ಯ ಮಾಡಬಲ್ಲೆ, ಆದ್ದರಿಂದ ಹಾಗೆ ನಾನು ಮಾಡುವುದಿಲ್ಲ.॥13॥

ಮೂಲಮ್ - 14

ತ್ವಯಾಪಿ ಖಲು ತತ್ಕಾರ್ಯಂ ತಯೋಶ್ಚ ನೃಪಪುತ್ರಯೋಃ ।
ಬ್ರಾಹ್ಮಣಾನಾಂ ಗುರೂಣಾಂ ಚ ಮುನೀನಾಂ ವಾಸವಸ್ಯ ಚ ॥

ಅನುವಾದ

ನೀನೂ ಆ ಇಬ್ಬರೂ ರಾಜಕುಮಾರರ ಕಾರ್ಯದಲ್ಲಿ ಸಹಾಯ ಮಾಡು. ಆ ಕಾರ್ಯವು ಕೇವಲ ಅವನದ್ದೇ ಅಲ್ಲ, ಸಮಸ್ತ ಬ್ರಾಹ್ಮಣರ, ಗುರುಹಿರಿಯರ, ಮುನಿಗಳ ಮತ್ತು ದೇವೇಂದ್ರನ ಕಾರ್ಯವೂ ಆಗಿದೆ.॥14॥

ಮೂಲಮ್ - 15

ಇಚ್ಛಾಮ್ಯಹಮಪಿ ದ್ರಷ್ಟುಂ ಭ್ರಾತುರೌ ರಾಮಲಕ್ಷ್ಮಣೌ ।
ನೇಚ್ಛೇ ಚಿರಂ ಧಾರಯಿತುಂ ಪ್ರಾಣಾಂಸ್ತ್ಯಕ್ಷ್ಯೇ ಕಲೇವರಮ್ ।
ಮಹರ್ಷಿಸ್ತ್ವ ಬ್ರವೀದೇವಂ ದೃಷ್ಟತತ್ತ್ವಾರ್ಥದರ್ಶನಃ ॥

ಅನುವಾದ

ನಾನೂ ಕೂಡ ಅವರಿಬ್ಬರನ್ನು ದರ್ಶಿಸಬೇಕೆಂದಿದ್ದರೂ ಹೆಚ್ಚು ಕಾಲದವರೆಗೆ ಈ ಪ್ರಾಣಗಳನ್ನು ಧರಿಸಿಕೊಳ್ಳುವುದು ನನಗೆ ಇಚ್ಛೆ ಇಲ್ಲ. ಆದ್ದರಿಂದ ಆ ಸಮಯ ಬರುವ ಮೊದಲೇ ನಾನು ಪ್ರಾಣತ್ಯಾಗ ಮಾಡುವೆನು. ಎಂದು ಆ ತತ್ತ್ವದರ್ಶಿ ಮಹರ್ಷಿಯು ನನ್ನಲ್ಲಿ ಹೇಳಿದ್ದರು.॥15॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಅರವತ್ತೆರಡನೆಯ ಸರ್ಗ ಸಂಪೂರ್ಣವಾಯಿತು.॥62॥