०६० सम्पातिना स्वकथानिरूपणम्

वाचनम्
ಭಾಗಸೂಚನಾ

ಸಂಪಾತಿಯ ಆತ್ಮಕಥೆ

ಮೂಲಮ್ - 1

ತತಃ ಕೃತೋದಕಂ ಸ್ನಾತಂ ತಂ ಗೃಧ್ರಂ ಹರಿಯೂಥಪಾಃ ।
ಉಪವಿಷ್ಟಾ ಗಿರೌರಮ್ಯೇ ಪರಿವಾರ್ಯ ಸಮಂತತಃ ॥

ಅನುವಾದ

ಗೃಧ್ರರಾಜ ಸಂಪಾತಿಯು ತನ್ನ ತಮ್ಮನಿಗೆ ಜಲಾಂಜಲಿಯನ್ನು ಕೊಟ್ಟು, ಸ್ನಾನ ಮಾಡಿದ ಮೇಲೆ ಆ ರಮಣೀಯ ಪರ್ವತದ ಮೇಲೆ ಸಮಸ್ತ ವಾನರ ಯೂಥಪತಿಗಳು ಅವನನ್ನು ಸುತ್ತುವರೆದು ಕುಳಿತುಬಿಟ್ಟರು.॥1॥

ಮೂಲಮ್ - 2

ತಮಂಗದಮುಪಾಸೀನಂ ತೈಃ ಸರ್ವೈರ್ಹರಿಭಿರ್ವೃತಮ್ ।
ಜನಿತಪ್ರತ್ಯಯೋ ಹರ್ಷಾತ್ಸಂಪಾತಿಃ ಪುನರಬ್ರವೀತ್ ॥

ಅನುವಾದ

ಆ ಸಮಸ್ತ ವಾನರರಿಂದ ಸುತ್ತುವರಿದ ಅಂಗದನು ಅವನ ಬಳಿಯಲ್ಲಿ ಕುಳಿತಿದ್ದನು. ಸಂಪಾತಿಯು ಎಲ್ಲರ ಹೃದಯದಲ್ಲಿ ತನ್ನ ಕುರಿತು ವಿಶ್ವಾಸ ಉಂಟುಮಾಡಿಕೊಂಡಿದ್ದನು. ಅವನು ಹರ್ಷದಿಂದ ಹೀಗೆ ಹೇಳತೊಡಗಿದನು.॥2॥

ಮೂಲಮ್ - 3

ಕೃತ್ವಾ ನಿಃಶಬ್ದ ಮೇಕಾಗ್ರಾಃ ಶೃಣ್ವಂತು ಹರಯೋ ಮಮ ।
ತಥ್ಯಂ ಸಂಕೀರ್ತಯಿಷ್ಯಾಮಿ ಯಥಾ ಜಾನಾಮಿ ಮೈಥಿಲೀಮ್ ॥

ಅನುವಾದ

ಎಲ್ಲ ವಾನರರು ಏಕಾಗ್ರಚಿತ್ತರಾಗಿ, ಮೌನದಿಂದ ನನ್ನ ಮಾತನ್ನು ಕೇಳಿರಿ. ನಾನು ಮಿಥಿಲೇಶ ಕುಮಾರಿಯನ್ನು ತಿಳಿದಿರುವ ಎಲ್ಲ ಪ್ರಸಂಗವನ್ನು ಸರಿಯಾಗಿ ಹೇಳುತ್ತಿದ್ದೇನೆ.॥3॥

ಮೂಲಮ್ - 4

ಅಸ್ಯ ವಿಂಧ್ಯಸ್ಯ ಶಿಖರೇ ಪತಿತೋಽಸ್ಮಿ ಪುರಾ ವನೇ ।
ಸೂರ್ಯತಾಪಪರೀತಾಂಗೋ ನಿರ್ದಗ್ಧಃ ಸೂರ್ಯರಶ್ಮಿಭಿಃ ॥

ಅನುವಾದ

ನಿಷ್ಪಾಪ ಅಂಗದನೇ! ಪ್ರಾಚೀನ ಕಾಲದಲ್ಲಿ ನಾನು ಸೂರ್ಯನ ಕಿರಣಗಳಿಂದ ಸುಟ್ಟುಹೋಗಿ ಈ ವಿಂಧ್ಯಪರ್ವತದ ಶಿಖರದಲ್ಲಿ ಬಿದ್ದಿದ್ದೆ. ಆಗ ನನ್ನ ಅಂಗವೆಲ್ಲ ಸೂರ್ಯನ ಪ್ರಚಂಡ ತಾಪದಿಂದ ಸುಡುತ್ತಿತ್ತು.॥4॥

ಮೂಲಮ್ - 5

ಲಬ್ಧಸಂಜ್ಞಸ್ತು ಷಡ್ರಾತ್ರಾದ್ವಿವಶೋ ವಿಹ್ವಲನ್ನಿವ ।
ವೀಕ್ಷಮಾಣೋ ದಿಶಃ ಸರ್ವಾ ನಾಭಿಜಾನಾಮಿ ಕಿಂಚನ ॥

ಅನುವಾದ

ಆರು ರಾತ್ರೆಗಳು ಕಳೆದಾಗ ನನಗೆ ಎಚ್ಚರ ಬಂದು ವಿವಶನಾಗಿ ವಿಹ್ವಲನಾಗಿ ಸಮಸ್ತ ದಿಕ್ಕುಗಳ ಕಡೆಗೆ ನೋಡತೊಡಗಿದೆ. ಆಗ ನಾನು ಒಮ್ಮೆಗೆ ಯಾವುದೇ ವಸ್ತುವನ್ನು ಗುರುತಿಸದವನಾಗಿದ್ದೆ.॥5॥

ಮೂಲಮ್ - 6

ತತಸ್ತು ಸಾಗರಾನ್ ಶೈಲಾನ್ನದೀಃ ಸರ್ವಾಃ ಸರಾಂಸಿ ಚ ।
ವನಾನಿ ಚ ಪ್ರದೇಶಾಂಶ್ಚ ನಿರೀಕ್ಷ್ಯಮತಿರಾಗತಾ ॥

ಅನುವಾದ

ಅನಂತರ ನಿಧಾನವಾಗಿ ಸಮುದ್ರ, ಪರ್ವತ, ನದಿಗಳು, ಸರೋವರಗಳು, ವನ ಮತ್ತು ಇಲ್ಲಿಯ ಬೇರೆ-ಬೇರೆ ಪ್ರದೇಶಗಳನ್ನು ನೋಡಿದಾಗ ನನ್ನ ಸ್ಮರಣಶಕ್ತಿ ಮರಳಿ ನನಗೆ ಬಂತು.॥6॥

ಮೂಲಮ್ - 7

ಹೃಷ್ಟಪಕ್ಷಿಗಣಾಕೀರ್ಣಃ ಕಂದರೋದರಕೂಟವಾನ್ ।
ದಕ್ಷಿಣಸ್ಯೋದಧೇಸ್ತೀರೇ ವಿಂಧ್ಯೋಽಯಮಿತಿ ನಿಶ್ಚಿತಃ ॥

ಅನುವಾದ

ಇದು ದಕ್ಷಿಣ ಸಮುದ್ರ ತೀರದ ವಿಂಧ್ಯಪರ್ವತವಾಗಿದೆ ಎಂದು ನಾನು ನಿಶ್ಚಯಿಸಿದೆ. ಈ ಪರ್ವತವು ಹರ್ಷೊತ್ಫುಲ್ಲ ವಿಹಂಗಗಳಿಂದ ವ್ಯಾಪ್ತವಾಗಿದ್ದು, ಅನೇಕ ಕಂದರಗಳು, ಗುಹೆಗಳು, ಶಿಖರಗಳು ಇವೆ.॥7॥

ಮೂಲಮ್ - 8

ಆಸೀಚ್ಚಾತ್ರಾಶ್ರಮಂ ಪುಣ್ಯಂ ಸುರೈರಪಿ ಸುಪೂಜಿತಮ್ ।
ಋಷಿರ್ನಿಶಾಕರೋ ನಾಮ ಯಸ್ಮಿನ್ನುಗ್ರತಪಾಽಭವತ್ ॥

ಅನುವಾದ

ಹಿಂದಿನ ಕಾಲದಲ್ಲಿ ದೇವತೆಗಳೂ ಕೂಡ ಸಮ್ಮಾನಿಸುತ್ತಿದ್ದ ಒಂದು ಪವಿತ್ರ ಆಶ್ರಮ ಇಲ್ಲಿ ಇತ್ತು. ಅದರಲ್ಲಿ ನಿಶಾಕರ (ಚಂದ್ರಮಾ) ಎಂಬ ಹೆಸರುಳ್ಳ ದೊಡ್ಡ ಉಗ್ರ ತಪಸ್ವಿಗಳಾದ ಒಬ್ಬ ಋಷಿಗಳು ಇದ್ದರು.॥8॥

ಮೂಲಮ್ - 9

ಅಷ್ಟೌ ವರ್ಷಸಹಸ್ರಾಣಿ ತೇನಾಸ್ಮಿನ್ನೃಷಿಣಾ ಗಿರೌ ।
ವಸತೋ ಮಮ ಧರ್ಮಜ್ಞೇ ಸ್ವರ್ಗತೇ ತು ನಿಶಾಕರೇ ॥

ಅನುವಾದ

ಈ ಧರ್ಮಾಜ್ಞ, ನಿಶಾಕರ ಮುನಿಯು ಈಗ ಸ್ವರ್ಗಸ್ಥರಾಗಿದ್ದಾರೆ. ಆ ಮಹರ್ಷಿಗಳನ್ನು ಬಿಟ್ಟು ಈ ಪರ್ವತದ ಮೇಲೆ ನಾನು ಎಂಟುಸಾವಿರ ವರ್ಷದಿಂದ ಇದ್ದೇನೆ.॥9॥

ಮೂಲಮ್ - 10

ಅವತೀರ್ಯ ಚ ವಿಂಧ್ಯಾಗ್ರಾತ್ಕೃಚ್ಛ್ರೇಣ ವಿಷಮಾಚ್ಛನೈಃ ।
ತೀಕ್ಷ್ಣದರ್ಭಾಂ ವಸುಮತೀಂ ದುಃಖೇನ ಪುನರಾಗತಃ ॥

ಅನುವಾದ

ಎಚ್ಚರಗೊಂಡ ಬಳಿಕ ನಾನು ಈ ಪರ್ವತದ ಎತ್ತರ-ತಗ್ಗಾದ ಶಿಖರಗಳಿಂದ ನಿಧಾನವಾಗಿ ಬಹಳ ಕಷ್ಟದಿಂದ ನೆಲಕ್ಕೆ ಇಳಿದು ಬಂದಾಗ ಅಲ್ಲಿ ಚೂಪಾದ ದರ್ಭೆಗಳು ಹುಟ್ಟಿದ್ದವು. ಮತ್ತೆ ಅಲ್ಲಿಂದಲೂ ಕಷ್ಟಗಳನ್ನು ಅನುಭವಿಸುತ್ತಾ ಮುಂದರಿದೆ.॥10॥

ಮೂಲಮ್ - 11

ತಮೃಷಿಂ ದ್ರಷ್ಟು ಕಾಮೋಽಸ್ಮಿ ದುಃಖೇನಾಭ್ಯಾಗತೋ ಭೃಶಮ್ ।
ಜಟಾಯುಷಾ ಮಯಾ ಚೈವ ಬಹುಶೋಽಧಿಗತೋ ಹಿ ಸಃ ॥

ಅನುವಾದ

ನಾನು ಆ ಮಹರ್ಷಿಯನ್ನು ದರ್ಶಿಸಬೇಕೆಂದು ಬಯಸುತ್ತಿದ್ದೆ, ಅದಕ್ಕಾಗಿ ಅತ್ಯಂತ ಕಷ್ಟಪಟ್ಟು ಅಲ್ಲಿಗೆ ಹೋಗಿದ್ದೆ. ಇದಕ್ಕೆ ಮೊದಲು ನಾನು ಮತ್ತು ಜಟಾಯು ಇಬ್ಬರು ಅನೇಕ ಸಲ ಅವರನ್ನು ಭೆಟ್ಟಿಯಾಗಿದ್ದೆವು.॥11॥

ಮೂಲಮ್ - 12

ತಸ್ಯಾಶ್ರಮಪದಾಭ್ಯಾಶೇ ವವುರ್ವಾತಾಃ ಸುಗಂಧಿನಃ ।
ವೃಕ್ಷೋ ನಾಪುಷ್ಪಿತಃ ಕಶ್ಚಿದಲೋ ವಾ ನ ದೃಶ್ಯತೇ ॥

ಅನುವಾದ

ಅವರ ಆಶ್ರಮದ ಸನಿಹದಲ್ಲಿ ಸದಾ ಸುಗಂಧಿತ ಗಾಳಿ ಬೀಸುತ್ತಿತ್ತು. ಅಲ್ಲಿಯ ಯಾವುದೇ ವೃಕ್ಷವೂ ಕೂಡ ಫಲ-ಪುಷ್ಪರಹಿತವಾಗಿ ಕಾಣುತ್ತಿದ್ದಿಲ್ಲ.॥12॥

ಮೂಲಮ್ - 13

ಉಪೇತ್ಯ ಚಾಶ್ರಮಂ ಪುಣ್ಯಂ ವೃಕ್ಷಮೂಲಮುಪಾಶ್ರಿತಃ ।
ದ್ರಷ್ಟುಕಾಮಃ ಪ್ರತೀಕ್ಷೇಚ ಭಗವಂತಂ ನಿಶಾಕರಮ್ ॥

ಅನುವಾದ

ಆ ಪವಿತ್ರ ಆಶ್ರಮಕ್ಕೆ ತಲುಪಿ ನಾನು ಒಂದು ಮರದ ಕೆಳಗೆ ನಿಂತು, ಭಗವಾನ್ ನಿಶಾಕರನ ದರ್ಶನದ ಇಚ್ಛೆಯಿಂದ ಅವರ ನಿರೀಕ್ಷೆ ಮಾಡುತ್ತಾ ಇದ್ದೆ.॥13॥

ಮೂಲಮ್ - 14

ಅಥಾಪಶ್ಯಾಮಿದೂರಸ್ಥ ಮೃಷಿಂ ಜ್ವಲಿತತೇಜಸಮ್ ।
ಕೃತಾಭಿಷೇಕಂ ದುರ್ಧರ್ಷಮುಪಾವೃತ್ತಮುದಙ್ಮುಖಮ್ ॥

ಅನುವಾದ

ಸ್ವಲ್ಪ ಹೊತ್ತಿನಲ್ಲೇ ಮಹರ್ಷಿಗಳು ದೂರದಿಂದ ಬರುವುದನ್ನು ನೋಡಿದೆ. ಅವರು ತಮ್ಮ ದುರ್ಧರ್ಷ ತೇಜದಿಂದ ಬೆಳಗುತ್ತಿದ್ದರು. ಸ್ನಾನಮಾಡಿ ಉತ್ತರಾಭಿಮುಖರಾಗಿ ಹಿಂದಿರುಗುತ್ತಿದ್ದರು.॥14॥

ಮೂಲಮ್ - 15

ತಮೃಕ್ಷಾಃ ಸೃಮರಾ ವ್ಯಾಘ್ರಾಃ ಸಿಂಹಾ ನಾನಾ ಸರೀಸೃಪಾಃ ।
ಪರಿವಾರ್ಯೋಪಗಚ್ಛಂತಿ ಧಾತಾರಂ ಪ್ರಾಣಿನೋ ಯಥಾ ॥

ಅನುವಾದ

ಯಾಚಕರು ದಾತೃವನ್ನು ಸುತ್ತುವರೆದಂತೆ ಅನೇಕ ಕರಡಿಗಳು, ಜಿಂಕೆಗಳು, ಸಿಂಹ, ಹುಲಿ ಹಾಗೂ ನಾನಾ ಪ್ರಕಾರದ ಸರ್ಪಗಳು ಅವರನ್ನು ಸುತ್ತುವರೆದು ಬರುತ್ತಿದ್ದರು.॥15॥

ಮೂಲಮ್ - 16

ತತಃ ಪ್ರಾಪ್ತಮೃಷಿಂ ಜ್ಞಾತ್ವಾ ತಾನಿ ಸತ್ತ್ವಾನಿ ವೈ ಯಯುಃ ।
ಪ್ರವಿಷ್ಟೇ ರಾಜನಿ ಯಥಾ ಸರ್ವಂ ಸಾಮಾತ್ಯಕಂ ಬಲಮ್ ॥

ಅನುವಾದ

ರಾಜನು ಅಂತಃಪುರವನ್ನು ಪ್ರವೇಶಿಸಿದಾಗ ಮಂತ್ರಿಗಳ ಸಹಿತ ಎಲ್ಲ ಸೈನ್ಯವು ತಮ್ಮ-ತಮ್ಮ ವಿಶ್ರಾಮ ಸ್ಥಾನಗಳಿಗೆ ಮರಳುವಂತೆ ಋಷಿಗಳು ಆಶ್ರಮಕ್ಕೆ ಬಂದುದನ್ನು ನೋಡಿ ಆ ಪ್ರಾಣಿಗಳು ಮರಳಿಹೋಗುತ್ತಿದ್ದವು.॥16॥

ಮೂಲಮ್ - 17

ಋಷಿಸ್ತು ದೃಷ್ಟ್ವಾ ಮಾಂ ತುಷ್ಟಃ ಪ್ರವಿಷ್ಟಶ್ಚಾಶ್ರಮಂ ಪುನಃ ।
ಮುಹೂರ್ತಮಾತ್ರಾನ್ನಿರ್ಗಮ್ಯ ತತಃ ಕಾರ್ಯಮಪೃಚ್ಛತ ॥

ಅನುವಾದ

ಋಷಿಗಳು ನನ್ನನ್ನು ನೋಡಿ ಬಹಳ ಪ್ರಸನ್ನರಾದರು. ಆಶ್ರಮದೊಳಗೆ ಹೋಗಿ ಎರಡು ಗಳಿಗೆಯಲ್ಲಿ ಪುನಃ ಹೊರಗೆ ಬಂದರು. ಮತ್ತೆ ನನ್ನ ಬಳಿಗೆ ಬಂದು ಬಂದ ಕಾರಣವನ್ನು ವಿಚಾರಿಸಿದರು.॥17॥

ಮೂಲಮ್ - 18

ಸೌಮ್ಯ ವೈಕಲ್ಯತಾಂ ದೃಷ್ಟ್ವಾ ರೋಮ್ಣಾಂ ತೇ ನಾವಗಮ್ಯತೇ ।
ಅಗ್ನಿದಗ್ಧಾವಿಮೌ ಪಕ್ಷೌಪ್ರಾಣಾಶ್ಚಾಪಿ ಶರೀರಕೇ ॥

ಅನುವಾದ

ಅವರು ಕೇಳಿದರು-ಸೌಮ್ಯ! ನಿನ್ನ ರೋಮ ಉದುರಿದೆ, ಎರಡೂ ರೆಕ್ಕೆಗಳೂ ಸುಟ್ಟುಹೋಗಿವೆ, ಇಷ್ಟಾದರೂ ನಿನ್ನ ಶರೀರದಲ್ಲಿ ಪ್ರಾಣಗಳು ನೆಲೆಸಿವೆ; ಇದರ ಕಾರಣ ತಿಳಿಯದು.॥18॥

ಮೂಲಮ್ - 19

ಗೃಧ್ರೌ ದ್ವೌ ದೃಷ್ಟಪೂರ್ವೌ ಮೇ ಮಾತರಿಶ್ವಸಮೌ ಜವೇ ।
ಗೃಧ್ರಾಣಾಂ ಚೈವ ರಾಜಾನೌ ಭ್ರಾತರೌ ಕಾಮರೂಪಿಣೌ ॥

ಅನುವಾದ

ನಾನು ಹಿಂದೆ ವಾಯುವೇಗದಂತಹ ವೇಗಶಾಲಿ ಎರಡು ಹದ್ದುಗಳನ್ನು ನೋಡಿದ್ದೆ. ಅವರು ಅಣ್ಣ-ತಮ್ಮರಾಗಿದ್ದು, ಇಚ್ಛಾನುಸಾರ ರೂಪ ಧರಿಸುವವರಾಗಿದ್ದರು. ಜೊತೆಗೆ ಅವರು ಗೃಧ್ರರಾಜರೂ ಆಗಿದ್ದರು.॥19॥

ಮೂಲಮ್ - 20

ಜ್ಯೇಷ್ಠೋಽವಿತಸ್ತ್ವಂ ಸಂಪಾತೇ ಜಟಾಯುರನುಜಸ್ತವ ।
ಮಾನುಷಂ ರೂಪಮಾಸ್ಥಾಯ ಗೃಹ್ಣೀತಾಂ ಚರಣೌ ಮಮ ॥

ಅನುವಾದ

ಸಂಪಾತಿಯೇ! ನಾನು ನಿನ್ನನ್ನು ಗುರುತಿಸಿದೆ. ನೀನು ಆ ಇಬ್ಬರಲ್ಲಿ ಹಿರಿಯವನಾಗಿರುವೆ. ಜಟಾಯು ನಿನ್ನ ತಮ್ಮ. ನೀವಿಬ್ಬರೂ ಮನುಷ್ಯ ರೂಪವನ್ನು ಧರಿಸಿ ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸಿದ್ದೀರಿ.॥20॥

ಮೂಲಮ್ - 21

ಕಿಂ ತೇ ವ್ಯಾಧಿಸಮುತ್ಥಾನಂ ಪಕ್ಷಯೋಃ ಪತನಂ ಕಥಮ್ ।
ದಂಡೋ ವಾಯುಂ ಕೃತಃ ಕೇನ ಸರ್ವಮಾಖ್ಯಾಹಿ ಪೃಚ್ಛತಃ ॥

ಅನುವಾದ

ನಿನಗೆ ಎಂತಹ ಈ ರೋಗ ತಗುಲಿತು? ನಿನ್ನ ಎರಡು ರೆಕ್ಕೆಗಳು ಹೇಗೆ ಬಿದ್ದುಹೋದವು? ಯಾರು ಶಿಕ್ಷಿಸಿದರು? ನಾನು ಕೇಳಿದುದನ್ನು ಸ್ಪಷ್ಟವಾಗಿ ಎಲ್ಲವನ್ನೂ ಹೇಳು.॥21॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಅರವತ್ತನೆಯ ಸರ್ಗ ಸಂಪೂರ್ಣವಾಯಿತು.॥60॥