०५९ सम्पातिना सीतावर्णनम्

वाचनम्
ಭಾಗಸೂಚನಾ

ಸಂಪಾತಿಯು ತನ್ನ ಮಗ ಸುಪಾರ್ಶ್ವನು ಸೀತೆ ಮತ್ತು ರಾವಣರನ್ನು ನೋಡಿದ ಘಟನೆಯನ್ನು ವಾನರರಿಗೆ ವಿವರಿಸಿ ಹೇಳಿದುದು

ಮೂಲಮ್ - 1

ತತಸ್ತದಮೃತಾಸ್ವಾದಂ ಗೃಧ್ರರಾಜೇನ ಭಾಷಿತಮ್ ।
ನಿಶಮ್ಯ ವದತಾ ಹೃಷ್ಟಾಸ್ತೇ ವಚಃ ಪ್ಲವಗರ್ಷಭಾಃ ॥

ಅನುವಾದ

ಆಗ ಮಾತುಕತೆಯಾಡುವಾಗ ಗೃಧ್ರರಾಜನು ಹೇಳಿದ ಅಮೃತದಂತೆ ಸ್ವಾದಿಷ್ಟ ಮಧುರವಾದ ಮಾತನ್ನು ಕೇಳಿ ಎಲ್ಲ ವಾನರಶ್ರೇಷ್ಠರು ಹರ್ಷಗೊಂಡರು.॥1॥

ಮೂಲಮ್ - 2

ಜಾಂಬವಾನ್ವಾರಶ್ರೇಷ್ಠಃ ಸಹ ಸರ್ವೈಃ ಪ್ಲವಂಗಮೈಃ ।
ಭೂತಲಾತ್ಸಹಸೋತ್ಥಾಯ ಗೃಧ್ರರಾಜಾನಮಬ್ರವೀತ್ ॥

ಅನುವಾದ

ವಾನರರಲ್ಲಿ ಮತ್ತು ಕರಡಿಗಳಲ್ಲಿ ಶ್ರೇಷ್ಠರಾದ ಜಾಂಬವಂತರು ಎಲ್ಲ ವಾನರರೊಂದಿಗೆ ಸಟ್ಟನೆ ಎದ್ದುನಿಂತು, ಗೃಧ್ರರಾಜನಲ್ಲಿ ಹೇಳಿದರು .॥2॥

ಮೂಲಮ್ - 3

ಕ್ವ ಸೀತಾ ಕೇನ ವಾ ದೃಷ್ಟಾ ಕೋ ವಾ ಹರತಿ ಮೈಥಿಲೀಮ್ ।
ತದಾಖ್ಯಾತು ಭವಾನ್ಸರ್ವಂ ಗತಿರ್ಭವ ವನೌಕಸಾಮ್ ॥

ಅನುವಾದ

ಪಕ್ಷಿರಾಜನೇ! ಸೀತೆ ಎಲ್ಲಿರುವಳು? ಯಾರು ಆಕೆಯನ್ನು ನೋಡಿರುವರು? ಆ ಮಿಥಿಲೇಶಕುಮಾರಿಯನ್ನು ಯಾರು ಅಪಹರಿಸಿರುವರು? ಇವೆಲ್ಲವನ್ನು ಹೇಳಿ ವನವಾಸಿ ವಾನರರಾದ ನಮಗೆ ಆಶ್ರಯದಾತರಾಗಿರಿ.॥3॥

ಮೂಲಮ್ - 4

ಕೋ ದಾಶರಥಿಬಾಣಾನಾಂ ವಜ್ರವೇಗನಿಪಾತಿನಾಮ್ ।
ಸ್ವಯಂ ಲಕ್ಷ್ಮಣಮುಕ್ತಾನಾಂ ನ ಚಿಂತಯತಿ ವಿಕ್ರಮಮ್ ॥

ಅನುವಾದ

ವಜ್ರದಂತೆ ವೇಗದಿಂದ ಬೀಳುವ ಶ್ರೀರಾಮನ ಮತ್ತು ಲಕ್ಷ್ಮಣನ ಬಾಣಗಳ ಬಲವೇನೆಂಬುದನ್ನು ತಿಳಿಯದೆ ಇಂತಹ ಕಾರ್ಯವನ್ನು ಯಾವನು ಮಾಡಿದನು.॥4॥

ಮೂಲಮ್ - 5

ಸ ಹರೀನ್ಪ್ರತಿಸಮ್ಮುಕ್ತಾನ್ ಸೀತಾಶ್ರುತಿ ಸಮಾಹಿತಾನ್ ।
ಪುನರಾಶ್ವಾಸಯನ್ಪ್ರೀತ ಇದಂ ವಚನಮಬ್ರವೀತ್ ॥

ಅನುವಾದ

ಆಗ ಉಪವಾಸದಿಂದ ಕುಳಿತಿರುವ, ಸೀತೆಯ ವೃತ್ತಾಂತವನ್ನು ಕೇಳಲು ಏಕಾಗ್ರಚಿತ್ತರಾದ ವಾನರರಲ್ಲಿ, ಪ್ರಸನ್ನತೆಯಿಂದ ಪುನಃ ಆಶ್ವಾಸನೆಯನ್ನೀಯುತ್ತಾ ಸಂಪಾತಿಯು ಈ ಮಾತನ್ನು ಹೇಳಿದನು .॥5॥

ಮೂಲಮ್ - 6

ಶ್ರೂಯತಾಮಿಹ ವೈದೇಹ್ಯಾ ಯಥಾ ಮೇ ಹರಣಂ ಶ್ರುತಮ್ ।
ಯೇನ ಚಾಪಿ ಮಮಾಖ್ಯಾತಂ ಯತ್ರ ಚಾಯತಲೋಚನಾ ॥

ಅನುವಾದ

ವಾನರರೇ! ವಿದೇಹಕುಮಾರಿಯ ಅಪಹರಣ ಹೇಗಾಯಿತು? ವಿಶಾಲಲೋಚನೆ ಸೀತೆ ಈಗ ಎಲ್ಲಿರುವಳು? ಯಾರು ನನ್ನಲ್ಲಿ ಈ ಮಾತನ್ನು ಹೇಳಿದರೋ, ನಾನು ಹೇಗೆ ಕೇಳಿದೆನೋ, ಅದೆಲ್ಲವನ್ನು ಹೇಳುತ್ತೇನೆ, ಕೇಳಿರಿ.॥6॥

ಮೂಲಮ್ - 7

ಅಹಮಸ್ಮಿನ್ಗಿರೌ ದುರ್ಗೇ ಬಹುಯೋಜನಮಾಯತೇ ।
ಚಿರಾನ್ನಿಪತಿತೋ ವೃದ್ಧಃ ಕ್ಷೀಣಪ್ರಾಣ ಪರಾಕ್ರಮಃ ॥

ಅನುವಾದ

ಈ ದುರ್ಗಮ ಪರ್ವತವು ಅನೇಕ ಯೋಜನಗಳವರೆಗೆ ಚಾಚಿಕೊಂಡಿದೆ. ಬಹಳ ಹಿಂದೆ ನಾನು ಈ ಪರ್ವತದ ಮೇಲೆ ಬಿದ್ದಿದ್ದಾಗ, ನನ್ನ ಪ್ರಾಣಶಕ್ತಿ ಕ್ಷೀಣವಾಗಿ, ನಾನು ಮುದುಕ ನಾಗಿದ್ದೆ.॥7॥

ಮೂಲಮ್ - 8

ತಂ ಮಾಮೇವಂ ಗತಂ ಪುತ್ರಃ ಸುಪಾರ್ಶ್ವೋ ನಾಮ ನಾಮತಃ ।
ಆಹಾರೇಣ ಯಥಾಕಾಲಂ ಬಿಭರ್ತಿ ಪತತಾಂ ವರಃ ॥

ಅನುವಾದ

ಈ ಸ್ಥಿತಿಯಲ್ಲಿ ನನ್ನ ಮಗ ಪಕ್ಷಿಪ್ರವರ ಸುಪಾರ್ಶ್ವನೇ ಸಮಯಕ್ಕೆ ಸರಿಯಾಗಿ ಆಹಾರವನ್ನು ತಂದು ಕೊಟ್ಟು ಪ್ರತಿದಿನ ನನ್ನನ್ನು ಸಾಕುತ್ತಿದ್ದನು.॥8॥

ಮೂಲಮ್ - 9

ತೀಕ್ಷ್ಣ ಕಾಮಾಸ್ತು ಗಂಧರ್ವಾಸ್ತೀಕ್ಷ್ಣ ಕೋಪಾ ಭುಜಂಗಮಾಃ ।
ಮೃಗಾಣಾಂ ತು ಭಯಂ ತೀಕ್ಷ್ಣಂ ತತಸ್ತೀಕ್ಷ್ಣಕ್ಷುಧಾ ವಯಮ್ ॥

ಅನುವಾದ

ಗಂಧರ್ವರಿಗೆ ಕಾಮಭಾವ ಹೆಚ್ಚಾಗಿರುತ್ತದೆ, ಸರ್ಪಗಳಿಗೆ ಕ್ರೋಧ ತೀವ್ರವಾಗಿರುತ್ತದೆ, ಜಿಂಕೆಗಳಿಗೆ ಭಯ ಹೆಚ್ಚಾಗಿರುತ್ತದೆ, ಹಾಗೆಯೇ ನಮ್ಮ ಜಾತಿಗೆ ಹಸಿವು ತುಂಬಾ ಹೆಚ್ಚಿರುತ್ತದೆ.॥9॥

ಮೂಲಮ್ - 10

ಸ ಕದಾಚಿತ್ ಕ್ಷುಧಾರ್ತಸ್ಯ ಮಮಾಹಾರಾಭಿಕಾಂಕ್ಷಿಣಃ ।
ಗತಸೂರ್ಯೇಽಹನಿ ಪ್ರಾಪ್ತೋ ಮಮ ಪುತ್ರೋ ಹ್ಯನಾಮಿಷಃ ॥

ಅನುವಾದ

ಒಂದು ದಿನ ನಾನು ಹಸಿವಿನಿಂದ ಪೀಡಿತನಾಗಿ ಆಹಾರವನ್ನು ಬಯಸುತ್ತಿದ್ದೆ. ನನ್ನ ಮಗನು ನನಗೆ ಆಹಾರ ಹುಡುಕಲು ಹೋಗಿದ್ದನು, ಆದರೆ ಸೂರ್ಯಾಸ್ತವಾದ ಬಳಿಕ ಮಾಂಸ ಸಿಗದೆ ಬರಿಗೈಯಿಂದ ಮರಳಿ ಬಂದನು.॥10॥

ಮೂಲಮ್ - 11

ಸ ಮಯಾಽಽಹಾರ ಸಂರೋಧಾತ್ಪೀಡಿತಃ ಪ್ರೀತಿವರ್ಧನಃ ।
ಅನುಮಾನ್ಯ ಯಥಾತತ್ತ್ವಮಿದಂ ವಚನಮಬ್ರವೀತ್ ॥

ಅನುವಾದ

ಊಟವು ದೊರೆಯದೇ ಇದ್ದುದರಿಂದ ಪ್ರೀತಿಪಾತ್ರನಾದರೂ ಆ ಮಗನಿಗೆ ನಾನು ಅನೇಕ ಕಠೋರವಾದ ಮಾತನ್ನು ಹೇಳಿದೆ, ಆದರೆ ಅವನು ನಮ್ರತೆಯಿಂದ ನನ್ನನ್ನು ಆದರಿಸುತ್ತಾ ಈ ಯಥಾರ್ಥವನ್ನು ಹೇಳಿದನ.॥11॥

ಮೂಲಮ್ - 12

ಅಹಂ ತಾತ ಯಥಾಕಾಲಮಾಮಿಷಾರ್ಥೀ ಖಮಾಪ್ಲುತಃ ।
ಮಹೇಂದ್ರಸ್ಯ ಗಿರೇರ್ದ್ವಾರಮಾವೃತ್ಯ ಸುಸಮಾಶ್ರಿತಃ ॥

ಅನುವಾದ

ಅಪ್ಪಾ! ನಾನು ಸಮಯಕ್ಕೆ ಸರಿಯಾಗಿ ಮಾಂಸವನ್ನು ತರುವ ಇಚ್ಛೆಯಿಂದ ಆಕಾಶಕ್ಕೆ ಹಾರಿ ಮಹೇಂದ್ರ ಪರ್ವತದ ಬಾಗಿಲನ್ನು ತಡೆದು ನಿಂತುಬಿಟ್ಟೆ.॥12॥

ಮೂಲಮ್ - 13

ತತ್ರ ಸತ್ತ್ವಸಹಸ್ರಾಣಾಂ ಸಾಗರಾಂತರಚಾರಿಣಾಮ್ ।
ಪಂಥಾನಮೇಕೋಽಧ್ಯವಸಂ ಸಂನಿರೋದ್ಧುಮವಾಙ್ಮುಖಃ ॥

ಅನುವಾದ

ಅಲ್ಲಿ ಕೊಕ್ಕನ್ನು ಕೆಳಗಾಗಿಸಿ ನಾನು ಸಮುದ್ರದಲ್ಲಿ ಸಂಚರಿಸುವ ಸಾವಿರಾರು ಜಂತುಗಳ ಮಾರ್ಗವನ್ನು ತಡೆದು ಒಬ್ಬನೇ ನಿಂತಿದ್ದೆ.॥13॥

ಮೂಲಮ್ - 14

ತತ್ರ ಕಶ್ಚಿನ್ಮಯಾ ದೃಷ್ಟಃ ಸೂರ್ಯೋದಯ ಸಮಪ್ರಭಾಮ್ ।
ಸ್ತ್ರಿಯಮಾದಾಯ ಗಚ್ಛನ್ ವೈ ಭಿನ್ನಾಂಜನಚಯೋಪಮಃ ॥

ಅನುವಾದ

ಆಗ ನಾನು ನೋಡಿದೆ ಗಣಿಯಿಂದ ಅಗೆದು ತೆಗೆದ ಇದ್ದಲಿನ ರಾಶಿಯಂತೆ ಕಪ್ಪಾದ ಯಾವನೋ ಒಂದು ಸ್ತ್ರೀಯನ್ನು ಹಿಡಿದುಕೊಂಡು ಹೋಗುತ್ತಿದ್ದನು. ಆ ಸ್ತ್ರೀಯ ಕಾಂತಿಯು ಸೂರ್ಯೋದಯದ ಪ್ರಭೆಯಂತೆ ಪ್ರಕಾಶಿತವಾಗುತ್ತಿತ್ತು.॥14॥

ಮೂಲಮ್ - 15

ಸೋಽಹಮಭ್ಯವಹಾರಾರ್ಥಂ ತೌ ದೃಷ್ಟ್ವಾ ಕೃತನಿಶ್ಚಯಃ ।
ತೇನ ಸಾಮ್ನಾ ವಿನೀತೇನ ಪಂಥಾನಮನುಯಾಚಿತಃ ॥

ಅನುವಾದ

ಆ ಸ್ತ್ರೀ ಮತ್ತು ಪುರುಷನನ್ನು ನೋಡಿ ಅವನನ್ನು ನಿನ್ನ ಆಹಾರಕ್ಕಾಗಿ ತರಲು ನಿಶ್ಚಯಿಸಿದೆ, ಆದರೆ ಆ ಪುರುಷನು ನಮ್ರತೆಯಿಂದ ಮಧುರವಾಗಿ ನನ್ನಲ್ಲಿ ದಾರಿಯನ್ನು ಕೇಳಿದನು.॥15॥

ಮೂಲಮ್ - 16

ನ ಹಿ ಸಾಮೋಪಪನ್ನಾನಾಂ ಪ್ರಹರ್ತಾ ವಿದ್ಯತೇ ಭುವಿ ।
ನೀಚೇಷ್ವಪಿ ಜನಃ ಕಶ್ಚಿತ್ ಕಿಮಂಗ ಬತ ಮದ್ವಿಧಃ ॥

ಅನುವಾದ

ಅಪ್ಪಾ! ವಿನಯದಿಂದ ಮಧುರವಾಗಿ ಮಾತನಾಡುವವರ ಮೇಲೆ ಪ್ರಹಾರ ಮಾಡುವಂತಹ ನೀಚ ಪುರುಷನು ಭೂತಳದಲ್ಲಿ ಯಾರೂ ಇರಲಾರನು. ಹಾಗಿರುವಾಗ ನನ್ನಂತಹ ಕುಲೀನ ಪುರುಷನು ಹೇಗೆ ಪ್ರಹಾರ ಮಾಡಬಲ್ಲನು.॥16॥

ಮೂಲಮ್ - 17

ಸ ಯಾತಸ್ತೇಜಸಾ ವ್ಯೋಮ ಸಂಕ್ಷಿಪನ್ನಿವ ವೇಗತಃ ।
ಅಥಾಹಂ ಖೇಚರೈರ್ಭೂತೈರಭಿಗಮ್ಯ ಸಭಾಜಿತಃ ॥

ಅನುವಾದ

ಮತ್ತೆ ಅವನು ತೇಜದಿಂದ ಆಕಾಶವನ್ನು ವ್ಯಾಪಿಸಿ ವೇಗವಾಗಿ ಹೊರಟು ಹೋದನು. ಅವನು ಹೊರಟು ಹೋದ ಮೇಲೆ ಆಕಾಶಚಾರೀ ಸಿದ್ಧ-ಚಾರಣರೇ ಮೊದಲಾದವರು ಬಂದು ನನ್ನನ್ನು ತುಂಬಾ ಸಮ್ಮಾನಿಸಿದರು.॥17॥

ಮೂಲಮ್ - 18

ದಿಷ್ಟ್ಯಾ ಜೀವತಿ ಸೀತೇತಿ ಹ್ಯಬ್ರುವನ್ ಮಾಂ ಮಹರ್ಷಯಃ ।
ಕಥಂಚಿತ್ ಸಕಲತ್ರೋಽಸೌ ಗತಸ್ತೇ ಸ್ವಸ್ತ್ಯಸಂಶಯಮ್ ॥

ಅನುವಾದ

ಆ ಮಹರ್ಷಿಗಳು ನನ್ನಲ್ಲಿ ಹೇಳಿದರು-ಸೀತೆಯು ಜೀವಿಸಿ ಇರುವುದು ಸೌಭಾಗ್ಯದ ಮಾತಾಗಿದೆ. ನಿನ್ನ ಕಣ್ಣಿಗೆ ಬಿದ್ದ ಮೇಲೆಯೂ ಸ್ತ್ರೀಯಳೊಂದಿಗೆ ಬಂದ ಆ ಪುರುಷನು ಹೇಗೋ ಬದುಕಿಕೊಂಡನು; ಆದ್ದರಿಂದ ಅವಶ್ಯವಾಗಿ ನಿನಗೆ ಮಂಗಳವಾಗಲ.॥18॥

ಮೂಲಮ್ - 19

ಏವಮುಕ್ತಸ್ತತೋಽಹಂ ತೈಃ ಸಿದ್ಧೈ ಪರಮಶೋಭನೈಃ ।
ಸ ಚ ಮೇ ರಾವಣೋ ರಾಜಾ ರಕ್ಷಸಾಂ ಪ್ರತಿವೇದಿತಃ ॥

ಅನುವಾದ

ಆ ಪರಮ ಶೋಭಾಯಮಾನ ಸಿದ್ಧ ಪುರುಷರು ನನಗೆ ಹೀಗೆ ಹೇಳಿರುವರು. ಅನಂತರ ಆ ಕಪ್ಪು ಪುರುಷನು ರಾಕ್ಷಸರ ರಾಜಾ ರಾವಣನಾಗಿದ್ದಾನೆ ಎಂದೂ ಹೇಳಿರುವರು.॥19॥

ಮೂಲಮ್ - 20

ಪಶ್ಯನ್ ದಾಶರಥೇರ್ಭಾರ್ಯಾಂ ರಾಮಸ್ಯ ಜನಕಾತ್ಮಜಾಮ್ ।
ಭ್ರಷ್ಟಾಭರಣಕೌಶೇಯಾಂ ಶೋಕವೇಗ ಪರಾಜಿತಾಮ್ ॥

ಮೂಲಮ್ - 21

ರಾಮಲಕ್ಷ್ಮಣಯೋರ್ನಾಮ ಕ್ರೋಶಂತೀಂ ಮುಕ್ತಮೂರ್ಧಜಾಮ್ ।
ಏಷ ಕಾಲಾತ್ಯಯಸ್ತಾತ ಇತಿ ವಾಕ್ಯವಿದಾಂ ವರಃ ॥

ಮೂಲಮ್ - 22

ಏತಮರ್ಥಂ ಸಮಗ್ರಂ ಮೇ ಸುಪಾರ್ಶ್ವಃ ಪ್ರತ್ಯವೇದಯತ್ ।
ತಚ್ಛ್ರುತ್ವಾಪಿ ಹಿ ಮೇ ಬುದ್ಧಿರ್ನಾಸೀತ್ ಕಾಚಿತ್ಪರಾಕ್ರಮೇ ॥

ಅನುವಾದ

ಅಪ್ಪಾ! ದಶರಥನಂದನ ಶ್ರೀರಾಮನ ಪತ್ನೀ ಜನಕ ಕಿಶೋರಿ ಸೀತೆಯು ಶೋಕವೇಗದಿಂದ ಪರಾಜಿತಳಾಗಿದ್ದಳು. ಆಕೆಯ ಆಭೂಷಣಗಳು ಬೀಳುತ್ತಿದ್ದವು ಹಾಗೂ ರೇಶ್ಮೆಸೀರೆಯೂ ಅಸ್ತವ್ಯಸ್ತವಾಗಿತ್ತು. ಆಕೆಯ ಕೂದಲು ಕೆದರಿತ್ತು ಮತ್ತು ಶ್ರೀರಾಮ-ಲಕ್ಷ್ಮಣರ ಹೆಸರನ್ನೆತ್ತಿ ಅವರನ್ನು ಕರೆಯುತ್ತಿದ್ದಳು. ನಾನು ಆಕೆಯ ಈ ದಯನೀಯ ಸ್ಥಿತಿಯನ್ನು ನೋಡುತ್ತಲೇ ಇದ್ದೆ. ಇದೇ ನನಗೆ ವಿಳಂಬವಾದ ಕಾರಣವಾಗಿದೆ. ಹೀಗೆ ವಾಕ್ಯವಿಶಾರದ ಸುಪಾರ್ಶ್ವನು ನನ್ನ ಎದುರಿಗೆ ಇದೆಲ್ಲವನ್ನು ವರ್ಣಿಸಿದನು. ಇದೆಲ್ಲವನ್ನು ಕೇಳಿಯೂ ಪರಾಕ್ರಮ ತೋರುವ ಯಾವುದೇ ವಿಚಾರ ನನ್ನಲ್ಲಿ ಉಂಟಾಗಲಿಲ್ಲ.॥20-22॥

ಮೂಲಮ್ - 23½

ಅಪಕ್ಷೋ ಹಿ ಕಥಂ ಪಕ್ಷೀ ಕರ್ಮ ಕಿಂಚಿತ್ ಸಮಾರಭೇತ್ ।
ಯತ್ತು ಶಕ್ಯಂ ಮಯಾ ಕರ್ತುಂ ವಾಗ್ಬುದ್ಧಿಗುಣವರ್ತಿನಾ ॥
ಶ್ರೂಯತಾಂ ತತ್ರವಕ್ಷ್ಯಾಮಿ ಭವತಾಂ ಪೌರುಷಾಶ್ರಯಮ್ ।

ಅನುವಾದ

ರೆಕ್ಕೆಗಳಿಲ್ಲದ ಪಕ್ಷಿಯು ಏನಾದರು ಪರಾಕ್ರಮ ಮಾಡ ಬಲ್ಲುದೆ? ನನ್ನ ವಾಣಿ ಮತ್ತು ಬುದ್ಧಿಯ ಮೂಲಕ ಸಾಧ್ಯ ವಾಗುವ ಉಪಕಾರವನ್ನು ಮಾಡುವುದು ನನ್ನ ಸ್ವಭಾವವೇ ಆಗಿದೆ. ಈ ಸ್ವಭಾವದಿಂದ ನಾನು ಮಾಡಬಹುದಾದುದನ್ನು ನಿಮಗೆ ತಿಳಿಸುತ್ತಿದ್ದೇನೆ, ಕೇಳಿರಿ. ಆ ಕಾರ್ಯವು ನಿಮ್ಮ ಪುರುಷಾರ್ಥದಿಂದ ಸಿದ್ಧವಾಗುವುದಾಗಿದೆ.॥23॥

ಮೂಲಮ್ - 24½

ವಾಙ್ಮತಿಭ್ಯಾಂ ಹಿ ಸರ್ವೇಷಾಂ ಕರಿಷ್ಯಾಮಿ ಪ್ರಿಯಂ ಹಿ ವಃ ॥
ಯದ್ಧಿ ದಾಶರಥೇ ಕಾರ್ಯಂ ಮಮ ತನ್ನಾತ್ರಸಂಶಯಃ ।

ಅನುವಾದ

ನಾನು ವಾಣಿ ಮತ್ತು ಬುದ್ಧಿಯ ಮೂಲಕ ನಿಮ್ಮೆಲರ ಪ್ರಿಯ ಕಾರ್ಯವನ್ನು ಅವಶ್ಯವಾಗಿ ಮಾಡುವೆನು; ಏಕೆಂದರೆ ದಶರಥನಂದನ ಶ್ರೀರಾಮನ ಕಾರ್ಯವು ನನ್ನ ಕಾರ್ಯವೇ ಆಗಿದೆ, ಇದರಲ್ಲಿ ಸಂಶಯವಿಲ್ಲ.॥24॥

ಮೂಲಮ್ - 25½

ತದ್ಭವಂತೋ ಮತಿಶ್ರೇಷ್ಠಾ ಬಲವಂತೋ ಮನಸ್ವಿನಃ ॥
ಪ್ರಹಿತಾಃ ಕಪಿರಾಜೇನ ದೇವೈರಪಿ ದುರಸದಾಃ ।

ಅನುವಾದ

ನೀವೆಲ್ಲರೂ ಉತ್ತಮ ಬುದ್ಧಿಯಿಂದ ಕೂಡಿದ, ಬಲವಂತ, ಮನಸ್ವೀ ಹಾಗೂ ದೇವತೆಗಳಿಗೂ ದುರ್ಜಯರಾಗಿರುವಿರಿ. ಇದಕ್ಕಾಗಿ ವಾನರರಾಜ ಸುಗ್ರೀವನು ನಿಮ್ಮನ್ನು ಈ ಕಾರ್ಯಕ್ಕಾಗಿ ಕಳಿಸಿರುವನು.॥25॥

ಮೂಲಮ್ - 26½

ರಾಮಲಕ್ಷ್ಮಣಬಾಣಾಶ್ಚ ವಿಹಿತಾಃ ಕಂಕಪತ್ರಿಣಃ ॥
ತ್ರಯಾಣಾಮಪಿ ಲೋಕಾನಾಂ ಪರ್ಯಾಪ್ತಾಸ್ತ್ರಾಣನಿಗ್ರಹೇ ।

ಅನುವಾದ

ಶ್ರೀರಾಮ-ಲಕ್ಷ್ಮಣರ ಕಂಕಪತ್ರದಿಂದ ಕೂಡಿದ ಬಾಣಗಳು ಸಾಕ್ಷಾತ್ ವಿಧಾತನೇ ನಿರ್ಮಿಸಿದ್ದನು. ಅವು ಮೂರು ಲೋಕಗಳ ಸಂರಕ್ಷಣ ಮತ್ತು ದಮನ ಮಾಡಲು ಸಮರ್ಥವಾಗಿವೆ.॥26॥

ಮೂಲಮ್ - 27½

ಕಾಮಂ ಖಲು ದಶಗ್ರೀವಸ್ತೇಜೋಬಲಸಮನ್ವಿತಃ ।
ಭವತಾಂ ತು ಸಮರ್ಥಾನಾಂ ನ ಕಿಂಚಿದಪಿ ದುಷ್ಕರಮ್ ॥

ಅನುವಾದ

ನಿಮ್ಮ ವಿಪಕ್ಷಿ ದಶಗ್ರೀವ ರಾವಣನು ತೇಜಸ್ವೀ ಮತ್ತು ಬಲವಂತನಾಗಿದ್ದರೂ ನಿಮ್ಮಂತಹ ಸಾಮರ್ಥ್ಯಶಾಲೀ ವೀರರಿಗೆ ಅವನನ್ನು ಸೋಲಿಸುವುದು ಕಷ್ಟದ ಕಾರ್ಯವಲ್ಲ.॥27॥

ಮೂಲಮ್ - 28

ತದಲಂ ಕಾಲಸಂಗೇನ ಕ್ರಿಯತಾಂ ಬುದ್ಧಿ ನಿಶ್ಚಯಃ ।
ನ ಹಿ ಕರ್ಮಸು ಸಜ್ಜಂತೇ ಬುದ್ಧಿಮಂತೋ ಭವದ್ವಿಧಾಃ ॥

ಅನುವಾದ

ಆದ್ದರಿಂದ ಈಗ ಹೆಚ್ಚು ಸಮಯ ಕಳೆಯುವುದು ಆವಶ್ಯಕತೆ ಇಲ್ಲ. ನಿಮ್ಮ ಬುದ್ಧಿಯಿಂದ ದೃಢವಾಗಿ ನಿಶ್ಚಯಿಸಿ ಸೀತೆಯ ದರ್ಶನಕ್ಕಾಗಿ ಉದ್ಯೋಗ ಮಾಡಿರಿ; ಏಕೆಂದರೆ ನಿಮ್ಮಂತಹ ಬುದ್ಧಿವಂತ ಜನರು ಕಾರ್ಯಸಿದ್ಧಿಯಲ್ಲಿ ವಿಳಂಬ ಮಾಡುವುದಿಲ್ಲ.॥28॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಐವತ್ತೊಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥59॥