वाचनम्
ಭಾಗಸೂಚನಾ
ಸಂಪಾತಿಯು ತನ್ನ ರೆಕ್ಕೆಗಳು ಸುಟ್ಟುಹೋದ ಕಥೆಯನ್ನು ಹೇಳಿದುದು, ಸೀತೆ ಮತ್ತು ರಾವಣನು ಇರುವ ಸ್ಥಳವನ್ನು ತಿಳಿಸಿ, ವಾನರರ ಸಹಾಯದಿಂದ ಸಮುದ್ರತೀರಕ್ಕೆ ಹೋಗಿ ತಮ್ಮನಿಗೆ ಜಲಾಂಜಲಿಯನ್ನು ನೀಡಿದುದು
ಮೂಲಮ್ - 1
ಇತ್ಯುಕ್ತಃ ಕರುಣಂ ವಾಕ್ಯಂ ವಾನರೈಸ್ತ್ಯಕ್ತಜೀವಿತೈಃ ।
ಸಬಾಷ್ಪೋ ವಾನರಾನ್ ಗೃಧ್ರಃ ಪ್ರತ್ಯುವಾಚ ಮಹಾಸ್ವನಃ ॥
ಅನುವಾದ
ಬದುಕಿರುವ ಆಸೆಯನ್ನೇ ಬಿಟ್ಟು ಕುಳಿತಿರುವ ವಾನರರು ಹೇಳಿದ ಕರುಣಾಜನಕ ಮಾತನ್ನು ಕೇಳಿ ಸಂಪಾತಿಯ ಕಣ್ಣುಗಳಲ್ಲಿ ನೀರು ಸುರಿಯಿತು. ಅವನು ಗಟ್ಟಿಯಾಗಿ ಹೇಳುತ್ತಾನೆ .॥1॥
ಮೂಲಮ್ - 2
ಯವೀಯಾನ್ ಸ ಮಮ ಭ್ರಾತಾ ಜಟಾಯುರ್ನಾಮ ವಾನರಾಃ ।
ಯಮಾಖ್ಯಾತ ಹತಂ ಯುದ್ಧೇ ರಾವಣೇನ ಬಲೀಯಸಾ ॥
ಅನುವಾದ
ವಾನರರೇ! ಮಹಾಬಲಿ ರಾವಣನಿಂದ ಯುದ್ಧದಲ್ಲಿ ಹತನಾದ ಜಟಾಯು ನನ್ನ ತಮ್ಮನಾಗಿದ್ದನು.॥2॥
ಮೂಲಮ್ - 3
ವೃದ್ಧಭಾವಾದಪಕ್ಷತ್ವಾಚ್ಛಣ್ವಂಸ್ತದಪಿ ಮರ್ಷಯೇ ।
ನ ಹಿ ಮೇ ಶಕ್ತಿರಸ್ತ್ಯದ್ಯ ಭ್ರಾತುರ್ವೈರವಿಮೋಕ್ಷಣೇ ॥
ಅನುವಾದ
ನಾನು ಮುದುಕನಾದೆ, ನನ್ನ ರೆಕ್ಕೆ ಸುಟ್ಟುಹೋಗಿವೆ. ಅದರಿಂದ ನನ್ನ ತಮ್ಮನ ವೈರಿಯ ಪ್ರತೀಕಾರ ಮಾಡುವ ಶಕ್ತಿ ನನ್ನಲ್ಲಿ ಉಳಿದಿಲ್ಲ. ಅದರಿಂದಲೇ ಈ ಅಪ್ರಿಯ ಮಾತು ಕೇಳಿಯೂ ಸಹಿಸಿಕೊಂಡು ನಾನು ಸುಮ್ಮನಿದ್ದೇನೆ.॥3॥
ಮೂಲಮ್ - 4
ಪುರಾ ವೃತ್ರವಧೇ ವೃತ್ತೇ ಸ ಚಾಹಂ ಚ ಜಯೈಷಿಣೌ ।
ಆದಿತ್ಯಮುಪಯಾತೌ ಸ್ವೋ ಜ್ವಲಂತಂ ರಶ್ಮಿಮಾಲಿನಮ್ ॥
ಮೂಲಮ್ - 5
ಆವೃತ್ಯಾಕಾಶಮಾರ್ಗೇಣ ಜವೇನ ಸ್ವರ್ಗತೌ ಭೃಶಮ್ ।
ಮಧ್ಯಂ ಪ್ರಾಪ್ತೇ ತು ಸೂರ್ಯೇತು ಜಟಾಯುರವಸೀದತಿ ॥
ಅನುವಾದ
ಬಹಳ ಹಿಂದಿನ ಮಾತು - ಇಂದ್ರನು ವೃತ್ರಾಸುರನನ್ನು ವಧಿಸಿದಾಗ, ಇಂದ್ರನನ್ನು ಪ್ರಬಲನೆಂದು ತಿಳಿದು ನಾವಿಬ್ಬರೂ ಅವನನ್ನು ಗೆಲ್ಲುವ ಇಚ್ಛೆಯಿಂದ ಆಕಾಶಮಾರ್ಗದಿಂದ ವೇಗವಾಗಿ ಸ್ವರ್ಗಲೋಕಕ್ಕೆ ಹೋದೆವು. ಇಂದ್ರನನ್ನು ಗೆದ್ದು ಮರಳುವಾಗ ನಾವು ಇಬ್ಬರೂ ಸ್ವರ್ಗವನ್ನು ಪ್ರಕಾಶಿತಗೊಳಿಸುವ ಅಂಶಮಾಲಿ ಸೂರ್ಯನ ಬಳಿಗೆ ಹೋದೆವು. ನಮ್ಮಲ್ಲಿ ಜಟಾಯು ಸೂರ್ಯನ ಮಧ್ಯಾಹ್ನದ ಉರಿಬಿಸಿಲಿನಿಂದ ಶಿಥಿಲನಾಗ ತೊಡಗಿದನು.॥4-5॥
ಮೂಲಮ್ - 6
ತಮಹಂ ಭ್ರಾತರಂ ದೃಷ್ಟ್ವಾ ಸೂರ್ಯರಶ್ಮಿಭಿರರ್ದಿತಮ್ ।
ಪಕ್ಷಾಭ್ಯಾಂ ಛಾದಯಾಮಾಸ ಸ್ನೇಹಾತ್ಪರಮವಿಹ್ವಲಮ್ ॥
ಅನುವಾದ
ಸೂರ್ಯಕಿರಣಗಳಿಂದ ಪೀಡಿತನಾಗಿ, ಅತ್ಯಂತ ವ್ಯಾಕುಲನಾದ ತಮ್ಮನನ್ನು ನೋಡಿ ನಾನು ಸ್ನೇಹ ವಶದಿಂದ ನನ್ನ ಎರಡೂ ರೆಕ್ಕೆಗಳಿಂದ ಅವನನ್ನು ಮುಚ್ಚಿಬಿಟ್ಟೆ.॥6॥
ಮೂಲಮ್ - 7
ನಿರ್ದಗ್ಧಪಕ್ಷಃ ಪತಿತೋ ವಿಂಧ್ಯೇಽಹಂ ವಾನರರ್ಷಭಾಃ ।
ಅಹಮಸ್ಮಿನ್ವಸನ್ ಭ್ರಾತುಃ ಪ್ರವೃತ್ತಿಂ ನೋಪಲಕ್ಷಯೇ ॥
ಅನುವಾದ
ವಾನರ ಶಿರೋಮಣಿಗಳೇ! ಆಗ ನನ್ನ ಎರಡೂ ರೆಕ್ಕೆಗಳು ಸುಟ್ಟುಹೋದುವು ಮತ್ತು ನಾನು ಈ ವಿಂಧ್ಯಪರ್ವತದಲ್ಲಿ ಬಿದ್ದೆನು. ಇಲ್ಲಿ ಇದ್ದು ನನಗೆ ಎಂದೂ ತಮ್ಮನ ಸಮಾಚಾರ ಸಿಗಲಿಲ್ಲ. (ಇಂದು ಮೊಟ್ಟಮೊದಲಿಗೆ ನಿಮ್ಮಿಂದ ಅವನ ಸಾವಿನ ಸುದ್ದಿಯನ್ನು ಕೇಳುತ್ತಿದ್ದೇನೆ..॥7॥
ಮೂಲಮ್ - 8
ಜಟಾಯುಷಸ್ತ್ವೇವಮುಕ್ತೋ ಭ್ರಾತ್ರಾ ಸಂಪಾತಿನಾ ತದಾ ।
ಯುವರಾಜೋ ಮಹಾಪ್ರಾಜ್ಞಃ ಪ್ರತ್ಯುವಾಚಾಂಗದಸ್ತದಾ ॥
ಅನುವಾದ
ಜಟಾಯುವಿನ ಅಣ್ಣ ಸಂಪಾತಿಯು ಹೀಗೆ ಹೇಳಿದಾಗ ಪರಮ ಬುದ್ಧಿವಂತ ಯುವರಾಜ ಅಂಗದನು ಇಂತೆಂದನು.॥8॥
ಮೂಲಮ್ - 9
ಜಟಾಯುಷೋ ಯದಿ ಭ್ರಾತಾ ಶ್ರುತಂ ತೇ ಗದಿತಂ ಮಯಾ ।
ಆಖ್ಯಾಹಿ ಯದಿ ಜಾನಾಸಿ ನಿಲಯಂ ತಸ್ಯ ರಕ್ಷಸಃ ॥
ಅನುವಾದ
ಗೃಧ್ರರಾಜನೇ! ನೀನು ಜಟಾಯುವಿನ ಅಣ್ಣನಾಗಿದ್ದರೆ, ನಾನು ಹೇಳಿದ ಮಾತನ್ನು ನೀನು ಕೇಳಿದ್ದರೆ, ನೀನು ಆ ರಾಕ್ಷಸನ ನಿವಾಸಸ್ಥಾನ ತಿಳಿಯುತ್ತಿದ್ದರೆ, ನಮಗೆ ಹೇಳು.॥9॥
ಮೂಲಮ್ - 10
ಅದೀರ್ಘದರ್ಶಿನಂ ತಂ ವೈ ರಾವಣಂ ರಾಕ್ಷಸಾಧಮಮ್ ।
ಅಂತಿಕೇ ಯದಿ ವಾ ದೂರೇ ಯದಿ ಜಾನಾಸಿ ಶಂಸ ನಃ ॥
ಅನುವಾದ
ಮುಂದಾಗುವ ಅನರ್ಥವನ್ನು ತಿಳಿಯದಿರುವ ನೀಚ ರಾಕ್ಷಸ ರಾವಣನು ಇಲ್ಲಿಗೆ ಹತ್ತಿರದಲ್ಲಿರಲೀ, ದೂರದಲ್ಲಿರಲೀ, ನೀನು ತಿಳಿದಿದ್ದರೆ ನಮಗೆ ತಿಳಿಸು.॥10॥
ಮೂಲಮ್ - 11
ತತೋಽಬ್ರವೀನ್ಮಹಾತೇಜಾ ಭ್ರಾತಾ ಜ್ಯೇಷ್ಠೋ ಜಟಾಯುಷಃ ।
ಆತ್ಮಾನುರೂಪಂ ವಚನಂ ವಾನರಾನ್ ಸಂಪ್ರಹರ್ಷಯನ್ ॥
ಅನುವಾದ
ಜಟಾಯುವಿನ ಅಣ್ಣ ಮಹಾತೇಜಸ್ವೀ ಸಂಪಾತಿಯು ವಾನರರ ಹರ್ಷವನ್ನು ಬೆಳೆಸುತ್ತಾ ತನ್ನ ಘನತೆಗೆ ತಕ್ಕುದಾದ ಮಾತನ್ನು ಹೇಳಿದನು.॥11॥
ಮೂಲಮ್ - 12
ನಿರ್ದಗ್ಧಪಕ್ಷೋ ಗೃಧ್ರೋಽಹಂ ಗತವೀರ್ಯಃ ಪ್ಲವಂಗಮಾಃ ।
ರಾಙ್ಮಾತ್ರೇಣ ತು ರಾಮಸ್ಯ ಕರಿಷ್ಯೇಸಾಹ್ಯಮುತ್ತಮಮ್ ॥
ಅನುವಾದ
ವಾನರರೇ! ನನ್ನ ರೆಕ್ಕೆಗಳು ಸುಟ್ಟುಹೋಗಿವೆ, ಶಕ್ತಿಗುಂದಿ ಹೋಗಿದೆ. (ಆದ್ದರಿಂದ ಶರೀರದಿಂದ ಯಾವುದೇ ಸಹಾಯ ಮಾಡಲಾರೆ ಆದರೆ) ಮಾತಿನಿಂದ ಶ್ರೀರಾಮನಿಗೆ ಉತ್ತಮ ಸಹಾಯ ಖಂಡಿತವಾಗಿ ಮಾಡುವೆನು.॥12॥
ಮೂಲಮ್ - 13
ಜಾನಾಮಿ ವಾರುಣಾಲ್ಲೋಕಾನ್ವಿಷ್ಣೋ ಸ್ತ್ರೈವಿಕ್ರಮಾನಪಿ ।
ಮಹಾಸುರವಿಮರ್ದಾಂಶ್ಚಹ್ಯಮೃತಸ್ಯ ವಿಮಂಥನಮ್ ॥
ಅನುವಾದ
ನಾನು ವರುಣ ಲೋಕವನ್ನು ತಿಳಿದಿರುವೆನು. ವಾಮನಾವತಾರದಲ್ಲಿ ಭಗವಾನ್ ವಿಷ್ಣು ಮೂರು ಹೆಜ್ಜೆಗಳನ್ನು ಎಲ್ಲೆಲ್ಲಿ ಇಟ್ಟಿದ್ದನೋ ಆ ಸ್ಥಾನಗಳನ್ನು ಬಲ್ಲೆನು. ಅಮೃತಮಂಥನ - ದೇವಾಸುರರ ಸಂಗ್ರಾಮ ಇದೂ ಕೂಡ ನಾನು ನೋಡಿದ, ತಿಳಿದ ಘಟನೆಗಳಾಗಿವೆ.॥13॥
ಮೂಲಮ್ - 14
ರಾಮಸ್ಯ ಯದಿದಂ ಕಾರ್ಯಂ ಕರ್ತವ್ಯಂ ಪ್ರಥಮಂ ಮಯಾ ।
ಜರಯಾ ಚ ಹೃತಂ ತೇಜಃ ಪ್ರಾಣಾಶ್ಚ ಶಿಥಿಲಾ ಮಮ ॥
ಅನುವಾದ
ವೃದ್ಧಾವಸ್ಥೆಯು ನನ್ನ ತೇಜಸ್ಸು ಕಸಿದುಕೊಂಡಿದೆ, ನನ್ನ ಪ್ರಾಣಶಕ್ತಿಯೂ ಶಿಥಿಲವಾಗಿದೆ, ಹೀಗಿದ್ದರೂ ಶ್ರೀರಾಮಚಂದ್ರನ ಈ ಕಾರ್ಯವನ್ನು ನಾನು ಮೊಟ್ಟ ಮೊದಲಿಗೆ ಮಾಡಬೇಕು.॥14॥
ಮೂಲಮ್ - 15
ತರುಣೀ ರೂಪಸಂಪನ್ನಾ ಸರ್ವಾಭರಣಭೂಷಿತಾ ।
ಹ್ರಿಯಮಾಣಾ ಮಯಾ ದೃಷ್ಟಾ ರಾವಣೇನ ದುರಾತ್ಮನಾ ॥
ಅನುವಾದ
ಒಂದು ದಿನ ದುರಾತ್ಮಾ ರಾವಣನು ಎಲ್ಲ ಪ್ರಕರಾದ ಒಡವೆಗಳಿಂದ ಅಲಂಕೃತಳಾದ ಓರ್ವ ರೂಪವತಿ ಯುವತಿಯನ್ನು ಕದ್ದು ಕೊಂಡು ಹೋಗುವುದನ್ನು ನಾನು ನೋಡಿದ್ದೆ.॥15॥
ಮೂಲಮ್ - 16
ಕ್ರೋಶಂತೀ ರಾಮರಾಮೇತಿ ಲಕ್ಷ್ಮಣೇತಿ ಚ ಭಾಮಿನೀ ।
ಭೂಷಣಾನ್ಯಪವಿಧ್ಯಂತೀ ಗಾತ್ರಾಣಿ ಚ ವಿಧುನ್ವತೀ ॥
ಅನುವಾದ
ಆ ಮಾನಿನೀದೇವಿಯು ಹಾ ರಾಮಾ! ಹಾ ರಾಮಾ! ಹಾ ಲಕ್ಷ್ಮಣಾ! ಎಂದು ಕೂಗುತ್ತಾ, ತನ್ನ ಒಡವೆಗಳನ್ನು ಕಿತ್ತೊಗೆಯುತ್ತಾ, ಶರೀರ ನಡುಗುತ್ತಾ ಇದ್ದು ಚಡಪಡಿಸುತ್ತಿದ್ದಳು.॥16॥
ಮೂಲಮ್ - 17
ಸೂರ್ಯಪ್ರಭೇವ ಶೈಲಾಗ್ರೇ ತಸ್ಯಾಃ ಕೌಶೇಯಮುತ್ತಮಮ್ ।
ಅಸಿತೇ ರಾಕ್ಷಸೇಭಾತಿ ಯಥಾ ವಾ ತಡಿದಂಬುದೇ ॥
ಅನುವಾದ
ಆಕೆಯ ಸುಂದರ ರೇಶ್ಮೆಪೀತಾಂಬರವು ಉದಯಾ ಚಲದಲ್ಲಿ ಚೆಲ್ಲಿದ ಬಾಲಸೂರ್ಯನ ಪ್ರಭೆಯಂತೆ ಸುಶೋಭಿತವಾಗಿತ್ತು. ಅವಳು ಆ ಕಪ್ಪಾದ ರಾಕ್ಷಸನ ಬಳಿಯಲ್ಲಿ ಕರಿಮೋಡಗಳಲ್ಲಿ ಹೊಳೆಯುತ್ತಿದ್ದ ವಿದ್ಯುತ್ತಿನಂತೆ ಪ್ರಕಾಶಿಸುತ್ತಿದ್ದಳು.॥17॥
ಮೂಲಮ್ - 18
ತಾಂ ತು ಸೀತಾಮಹಂ ಮನ್ಯೇ ರಾಮಸ್ಯ ಪರಿಕೀರ್ತನಾತ್ ।
ಶ್ರೂಯತಾಂ ಮೇ ಕಥಯತೋ ನಿಲಯಂ ತಸ್ಯ ರಕ್ಷಸಃ ॥
ಅನುವಾದ
ಶ್ರೀರಾಮನ ಹೆಸರನ್ನು ಕೂಗುತ್ತಿರುವುದರಿಂದ ಅವಳು ಸೀತೆಯೇ ಆಗಿದ್ದಳು ಎಂದು ನಾನು ತಿಳಿದೆ. ಈಗ ನಾನು ಆ ರಾಕ್ಷಸನಿರುವ ಸ್ಥಳವನ್ನು, ಮನೆಯನ್ನು ಹೇಳುತ್ತೇನೆ, ಕೇಳಿರಿ.॥18॥
ಮೂಲಮ್ - 19
ಪುತ್ರೋವಿಶ್ರವಸಃ ಸಾಕ್ಷಾದ್ಭ್ರಾತಾ ವೈಶ್ರವಣಸ್ಯ ಚ ।
ಅಧ್ಯಾಸ್ತೇ ನಗರೀಂ ಲಂಕಾಂ ರಾವಣೋ ನಾಮ ರಾಕ್ಷಸಃ ॥
ಅನುವಾದ
ರಾವಣನೆಂಬ ರಾಕ್ಷಸನು ಮಹರ್ಷಿ ವಿಶ್ರವಸ್ಸುವಿನ ಪುತ್ರನು, ಕುಬೇರನ ತಮ್ಮನು. ಅವನು ಲಂಕೆ ಎಂಬ ನಗರಿಯಲ್ಲಿ ವಾಸವಾಗಿದ್ದಾನೆ.॥19॥
ಮೂಲಮ್ - 20
ಇತೋ ದ್ವೀಪೇ ಸಮುದ್ರಸ್ಯ ಸಂಪೂರ್ಣೇ ಶತಯೋಜನೇ ।
ತಸ್ಮಿಂಲ್ಲಂಕಾ ಪುರೀ ರಮ್ಯಾ ನಿರ್ಮಿತಾ ವಿಶ್ವಕರ್ಮಣಾ ॥
ಅನುವಾದ
ಇಲ್ಲಿಂದ ಪೂರಾ ನೂರು ಯೋಜನ ಅಂತರದ ಸಮುದ್ರದಲ್ಲಿ ಒಂದು ದ್ವೀಪವಿದೆ. ಅಲ್ಲಿ ವಿಶ್ವಕರ್ಮನು ಅತ್ಯಂತ ರಮಣೀಯ ಲಂಕಾಪುರಿಯನ್ನು ನಿರ್ಮಿಸಿರುವನು.॥20॥
ಮೂಲಮ್ - 21
ಜಾಂಬೂನದಮಯೈರ್ದ್ವಾರೈಶ್ಚಿತ್ರೈಃ ಕಾಂಚನವೇದಿಕೈಃ ।
ಪ್ರಾಸಾದೈರ್ಹೇಮವರ್ಣೈಶ್ಚ ಮಹದ್ಭಿಃ ಸುಸಮಾಕೃತಾ ॥
ಅನುವಾದ
ಅದರ ವಿಚಿತ್ರ ಬಾಗಿಲುಗಳು, ದೊಡ್ಡ-ದೊಡ್ಡ ಭವನಗಳು ಚಿನ್ನದಿಂದ ಮಾಡಿದ್ದಾಗಿವೆ. ಅದರೊಳಗೆ ಬಂಗಾರದ ವೇದಿಗಳು ಎಲ್ಲೆಡೆ ಕಾಣುತ್ತವೆ.॥21॥
ಮೂಲಮ್ - 22
ಪ್ರಾಕಾರೇಣಾರ್ಕವರ್ಣೇನ ಮಹತಾ ಚ ಸಮನ್ವಿತಾ ।
ತಸ್ಯಾಂ ವಸತಿ ವೈದೇಹಿ ದೀನಾ ಕೌಶೇಯವಾಸಿನೀ ॥
ಅನುವಾದ
ಆ ನಗರದ ಸುತ್ತಲ ಕೋಟೆ ಬಹಳ ದೊಡ್ಡದಾಗಿದ್ದು ಸೂರ್ಯನಂತೆ ಹೊಳೆಯುತ್ತಿದೆ. ಅದರೊಳಗೆ ಹಳದಿಬಣ್ಣದ ರೇಶ್ಮೆಸೀರೆಯನ್ನುಟ್ಟಿದ್ದ ವೈದೇಹಿಯು ಬಹಳ ದುಃಖದಿಂದ ವಾಸಿಸುತ್ತಿರುವಳು.॥22॥
ಮೂಲಮ್ - 23
ರಾವಣಾಂತಃಪುರೇ ರುದ್ಧಾ ರಾಕ್ಷಸೀಭಿಃ ಸುರಕ್ಷಿತಾ ।
ಜನಕಸ್ಯಾತ್ಮಜಾಂ ರಾಜ್ಞಸ್ತಸ್ಯಾಂ ದ್ರಕ್ಷ್ಯಥ ಮೈಥಿಲೀಮ್ ॥
ಮೂಲಮ್ - 24
ಲಂಕಾಯಾಮಥ ಗುಪ್ತಾಯಾಂ ಸಾಗರೇಣ ಸಮಂತತಃ ।
ಸಂಪ್ರಾಪ್ಯ ಸಾಗರಸ್ಯಾಂತಂ ಸಂಪೂರ್ಣಂ ಶತಯೋಜನಮ್ ॥
ಮೂಲಮ್ - 25
ಆಸಾದ್ಯ ದಕ್ಷಿಣಂ ತೀರಂ ತತೋ ದ್ರಕ್ಷ್ಯಥ ರಾವಣಮ್ ।
ತತ್ರೈವ ತ್ವರಿತಾಃ ಕ್ಷಿಪ್ರಂ ವಿಕ್ರಮಧ್ವಂ ಪ್ಲವಂಗಮಾಃ ॥
ಅನುವಾದ
ಲಂಕೆಯು ಸುತ್ತಲೂ ಸಮುದ್ರದಿಂದ ಸುರಕ್ಷಿತವಾಗಿದೆ. ನೂರು ಯೋಜನ ಸಮುದ್ರವನ್ನು ದಾಟಿ ಅದರ ದಕ್ಷಿಣ ತೀರಕ್ಕೆ ಮುಟ್ಟಿದಾಗ ನೀವು ರಾವಣನನ್ನು ನೋಡಬಹುದು. ಆದ್ದರಿಂದ ವಾನರರೇ! ಸಮುದ್ರವನ್ನು ದಾಟುವುದರಲ್ಲೇ ಬೇಗನೇ ತಮ್ಮ ಪರಾಕ್ರಮವನ್ನು ಪ್ರಕಟಿಸಿರಿ.॥23-25॥
ಮೂಲಮ್ - 26
ಜ್ಞಾನೇನ ಖಲು ಪಶ್ಯಾಮಿ ದೃಷ್ಟ್ವಾಪ್ರತ್ಯಾಗಮಿಷ್ಯಥ ।
ಆದ್ಯಃ ಪಂಥಾಃ ಕುಲಿಂಗಾನಾಂ ಯೇ ಚಾನ್ಯೇ ಧಾನ್ಯಜೀವಿನಃ ॥
ಅನುವಾದ
ನಿಶ್ಚಯವಾಗಿ ನೀವು ಸೀತೆಯ ದರ್ಶನ ಮಾಡಿ ಮರಳುವಿರಿ, ಎಂದು ನಾನು ಜ್ಞಾನದೃಷ್ಟಿಯಿಂದ ನೋಡುತ್ತಿದ್ದೇನೆ. ಆಕಾಶದ ಮೊದಲ ಮಾರ್ಗ ಗುಬ್ಬಚ್ಚಿ ಹಾಗೂ ಧಾನ್ಯ ತಿನ್ನುವ ಪಕ್ಷಿಗಳದ್ದಾಗಿದೆ.॥26॥
ಮೂಲಮ್ - 27
ದ್ವಿತೀಯೋ ಬಲಿಭೋಜಾನಾಂ ಯೇ ಚ ವೃಕ್ಷಫಲಾಶನಾಃ ।
ಭಾಸಾಸ್ತೃತೀಯಂ ಗಚ್ಛಂತಿ ಕ್ರೌಂಚಾಶ್ಚ ಕುರರೈಃ ಸಹ ॥
ಅನುವಾದ
ಅದರ ಮೇಲಿನ ಮಾರ್ಗ ಕಾಗೆಗಳ ಹಾಗೂ ಮರಗಳ ಹಣ್ಣು ತಿಂದು ಇರುವ ಇತರ ಪಕ್ಷಿಗಳದ್ದಾಗಿದೆ. ಅದರ ಮೇಲಿನ ಆಕಾಶದ ಮೂರನೆಯ ಮಾರ್ಗದಲ್ಲಿ ಭಾಸಪಕ್ಷಿಗಳು, ಕ್ರೌಂಚ ಮತ್ತು ಕುರರ ಪಕ್ಷಿಗಳು ಹಾರಬಲ್ಲರು.॥27॥
ಮೂಲಮ್ - 28
ಶ್ಯೇನಾಶ್ಚತುರ್ಥಂ ಗಚ್ಛಂತಿ ಗೃಧ್ರಾ ಗಚ್ಛಂತಿ ಪಂಚಮಮ್ ।
ಬಲವೀರ್ಯೋಪಪನ್ನಾನಾಂ ರೂಪಯೌವನಶಾಲಿನಾಮ್ ॥
ಮೂಲಮ್ - 29
ಷಷ್ಠಸ್ತು ಪಂಥಾ ಹಂಸಾನಾಂ ವೈನತೇಯಗತಿಃ ಪರಾ ।
ವೈನತೇಯಾಚ್ಚ ನೋ ಜನ್ಮ ಸರ್ವೇಷಾಂ ವಾನರರ್ಷಭಾಃ ॥
ಅನುವಾದ
ಗಿಡುಗಗಳು ನಾಲ್ಕನೆಯ ಮತ್ತು ಹದ್ದು ಐದನೆಯ ಮಾರ್ಗದಲ್ಲಿ ಹಾರಾಡುತ್ತವೆ. ರೂಪ, ಬಲ, ಪರಾಕ್ರಮದಿಂದ ಸಂಪನ್ನ, ಯೌವನದಿಂದ ಸುಶೋಭಿತ ಹಂಸಗಳ ಮಾರ್ಗ ಆರನೆಯದಾಗಿದೆ. ಅದಕ್ಕಿಂತಲೂ ಎತ್ತರ ಗರುಡ ಹಾರಬಲ್ಲನು. ವಾನರ ಶಿರೋಮಣಿಗಳೇ! ನಮ್ಮೆಲ್ಲರ ಜನ್ಮ ಗರುಡನಿಂದಲೇ ಆಗಿದೆ.॥28-29॥
ಮೂಲಮ್ - 30
ಗರ್ಹಿತಂತು ಕೃತಂ ಕರ್ಮ ಯೇನ ಸ್ಮ ಪಿಶಿತಾಶಿನಃ ।
ಪ್ರತಿಕಾರ್ಯಂ ಚ ಮೇ ತಸ್ಯ ವೈರಂ ಭ್ರಾತೃಕೃತಂ ಭವೇತ್ ॥
ಅನುವಾದ
ಆದರೆ ಹಿಂದಿನ ಜನ್ಮದಲ್ಲಿ ನಮ್ಮಿಂದ ಯಾವುದೋ ನಿಂದಿತಕರ್ಮ ನಡೆದು ಹೋಗಿತ್ತು, ಇದರಿಂದಾಗಿ ಈಗ ನಾವು ಮಾಂಸಾಹಾರಿಗಳಾಗಬೇಕಾಯಿತು. ನಿಮಗೆ ಸಹಾಯ ಮಾಡಿ ರಾವಣನಿಗೆ ನನ್ನ ತಮ್ಮನ ವೈರದ ಪ್ರತಿಕಾರ ಮಾಡಬೇಕಾಗಿದೆ.॥30॥
ಮೂಲಮ್ - 31
ಇಹಸ್ಥೋಽಹಂ ಪ್ರಪಶ್ಯಾಮಿ ರಾವಣಂ ಜಾನಕೀಂ ತಥಾ ।
ಅಸ್ಮಾಕಮಪಿ ಸೌಪರ್ಣಂ ದಿವ್ಯಂ ಚಕ್ಷುರ್ಬಲಂ ತಥಾ ॥
ಅನುವಾದ
ನಾನು ಇಲ್ಲಿಂದಲೇ ರಾವಣ ಮತ್ತು ಜಾನಕಿಯನ್ನು ನೋಡುತ್ತೇನೆ. ನಮ್ಮಲ್ಲಿಯೂ ಗರುಡನಂತೆ ದೂರದವರೆಗೆ ನೋಡುವ ದಿವ್ಯಶಕ್ತಿ ಇದೆ.॥31॥
ಮೂಲಮ್ - 32
ತಸ್ಮಾದಾಹಾರವೀರ್ಯೇಣ ನಿಸರ್ಗೇಣ ಚ ವಾನರಾಃ ।
ಆಯೋಜನಶತಾತ್ಸಾಗ್ರಾದ್ವಯಂ ಪಶ್ಯಾಮ ನಿತ್ಯಶಃ ॥
ಅನುವಾದ
ಅದಕ್ಕಾಗಿ ವಾನರರೇ! ನಾವು ಭೋಜನ ಜನಿತ ಬಲದಿಂದ ಹಾಗೂ ಸ್ವಾಭಾವಿಕ ಶಕ್ತಿಯಿಂದಲೂ ನೂರು ಯೋಜನ ಮತ್ತು ಅದಕ್ಕಿಂತಲೂ ಮುಂದೆಯೂ ನೋಡಬಲ್ಲೆವು.॥32॥
ಮೂಲಮ್ - 33
ಅಸ್ಮಾಕಂ ವಿಹಿತಾ ವೃತ್ತಿರ್ನಿಸರ್ಗೇಣ ಚ ದೂರತಃ ।
ವಿಹಿತಾ ವೃಕ್ಷಮೂಲೇ ತು ವೃತ್ತಿಶ್ಚರಣಯೋಧಿನಾಮ್ ॥
ಅನುವಾದ
ಜಾತಿಯ ಸ್ವಭಾವಕ್ಕನುಸಾರ ನಮ್ಮ ಜೀವನ ವೃತ್ತಿ ದೂರದಿಂದ ನೋಡಿ ದೂರದಲ್ಲಿರುವ ಭಕ್ಷ್ಯವಿಶೇಷದಿಂದ ನಿಯಮಿಸಲ್ಪಟ್ಟಿದೆ. ಕೋಳಿಯೇ ಮೊದಲಾದ ಪಕ್ಷಿಗಳ ಜೀವನ ವೃತ್ತಿಯು ಮರಗಳ ಬೇರುಗಳವರೆಗೆ ಸೀಮಿತವಾಗಿದೆ - ಅವುಗಳು ಅಲ್ಲಿ ಸಿಗುವುದರಿಂದಲೇ ಜೀವನ ನಿರ್ವಾಹ ಮಾಡುವವು.॥33॥
ಮೂಲಮ್ - 34
ಉಪಾಯೋ ದೃಶ್ಯತಾಂಕಶ್ಚಿಲ್ಲಂಘನೇ ಲವಣಾಂಭಸಃ ।
ಅಭಿಗಮ್ಯ ತು ವೈದೇಹೀಂಸಮೃದ್ಧಾರ್ಥಾ ಗಮಿಷ್ಯಥ ॥
ಅನುವಾದ
ಈಗ ನೀವು ವಿದೇಹಕುಮಾರೀ ಸೀತೆಯ ಬಳಿಗೆ ಹೋಗಿ ಸಫಲ ಮನೋರಥರಾಗಿ ಕಿಷ್ಕಿಂಧೆಗೆ ಮರಳಲು ಈ ಉಪ್ಪುನೀರಿನ ಸಮುದ್ರವನ್ನು ದಾಟುವ ಯಾವುದಾದರೂ ಉಪಾಯ ಯೋಚಿಸಿರಿ.॥34॥
ಮೂಲಮ್ - 35
ಸಮುದ್ರಂ ನೇತುಮಿಚ್ಛಾಮಿ ಭವದ್ಭಿರ್ವರುಣಾಲಯಮ್ ।
ಪ್ರದಾಸ್ಯಾಮ್ಯುದಕಂಭ್ರಾತುಃ ಸ್ವರ್ಗತಸ್ಯ ಮಹಾತ್ಮನಃ ॥
ಅನುವಾದ
ಈಗ ನಾನು ನಿಮ್ಮ ಸಹಾಯದಿಂದ ಸಮುದ್ರದ ತೀರಕ್ಕೆ ಹೋಗಲು ಬಯಸುತ್ತೇನೆ. ಅಲ್ಲಿ ನನ್ನ ಸ್ವರ್ಗಸ್ಥನಾದ ತಮ್ಮ ಮಹಾತ್ಮಾ ಜಟಾಯುವಿಗೆ ಜಲಾಂಜಲಿಯನ್ನು ಕೊಡುವೆನು.॥35॥
ಮೂಲಮ್ - 36
ತತೋ ನೀತ್ವಾ ತು ತಂ ದೇಶಂ ತೀರೇ ನದನದೀಪತೇಃ ।
ನಿರ್ದಗ್ಧಪಕ್ಷಂ ಸಂಪಾತಿಂ ವಾನರಾಃ ಸುಮಹೌಜಸಃ ॥
ಮೂಲಮ್ - 37
ತಂ ಪುನಃ ಪ್ರಾಪಯಿತ್ವಾ ಚ ತಂ ದೇಶಂ ಪತಗೇಶ್ವರಮ್ ।
ಬಭೂವುರ್ವಾನರಾ ಹೃಷ್ಟಾಃ ಪ್ರವೃತ್ತಿಮುಪಲಭ್ಯತೇ ॥
ಅನುವಾದ
ಇದನ್ನು ಕೇಳಿ ಮಹಾಪರಾಕ್ರಮಿ ವಾನರರು ರೆಕ್ಕೆ ಸುಟ್ಟು ಹೋದ ಪಕ್ಷಿರಾಜ ಸಂಪಾತಿಯನ್ನು ಎತ್ತಿಕೊಂಡು ಸಮುದ್ರದ ತೀರಕ್ಕೆ ಕೊಂಡು ಹೋದರು ಹಾಗೂ ಜಲಾಂಜಲಿ ಕೊಟ್ಟ ಬಳಿಕ ಪುನಃ ಹಿಂದಿನ ಜಾಗಕ್ಕೆ ತಂದರು. ಅವನ ಬಾಯಿಯಿಂದ ಸೀತೆಯ ಸಮಾಚಾರ ಕೇಳಿ ವಾನರರಿಗೆ ಬಹಳ ಪ್ರಸನ್ನತೆ ಉಂಟಾಯಿತು.॥36-37॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಐವತ್ತೆಂಟನೆಯ ಸರ್ಗ ಸಂಪೂರ್ಣವಾಯಿತು. ॥58॥