०५७ अङ्गदेन स्वकष्टनिरूपणम्

वाचनम्
ಭಾಗಸೂಚನಾ

ಅಂಗದನು ಸಂಪಾತಿಯನ್ನು ಪರ್ವತದಿಂದ ಕೆಳಗಿಳಿಸಿ ಜಟಾಯುವಿನ ಮರಣದ ಕಾರಣವನ್ನೂ, ರಾಮ-ಸುಗ್ರೀವರ ಸಖ್ಯವನ್ನು, ವಾಲಿಯ ವಧೆಯನ್ನು ತಿಳಿಸಿ, ತಮ್ಮ ಪ್ರಾಯೋಪವೇಶದ ಕಾರಣವನ್ನು ತಿಳಿಸಿದುದು

ಮೂಲಮ್ - 1

ಶೋಕಾದ್ ಭ್ರಷ್ಟ ಸ್ವರಮಪಿ ಶ್ರುತ್ವಾ ತೇ ಹರಿಯೂಥಪಾಃ ।
ಶ್ರದ್ದಧುರ್ನೈವತದ್ವಾಕ್ಯಂ ಕರ್ಮಣಾ ತಸ್ಯ ಶಂಕಿತಾಃ ॥

ಅನುವಾದ

ಶೋಕದ ಕಾರಣದಿಂದ ವಿಕೃತ ಸ್ವರದಿಂದ ಹೇಳಿದ ಸಂಪಾತಿಯ ಮಾತನ್ನು ಕೇಳಿಯೂ ವಾನರ ಯೂಥಪತಿಗಳು ಅದನ್ನು ನಂಬಲಿಲ್ಲ; ಏಕೆಂದರೆ ಅವರು ಅವನ ಕರ್ಮದಿಂದ ಶಂಕಿತರಾಗಿದ್ದರು.॥1॥

ಮೂಲಮ್ - 2

ತೇ ಪ್ರಾಯಮುಪವಿಷ್ಟಾಸ್ತು ದೃಷ್ಟ್ವಾ ಗೃಧ್ರಂ ಪ್ಲವಂಗಮಾಃ ।
ಚಕ್ರುರ್ಬುದ್ಧಿಂ ತದಾ ರೌದ್ರಾಂ ಸರ್ವಾನ್ನೋಭಕ್ಷಯಿಷ್ಯತಿ ॥

ಅನುವಾದ

ಆಮರಣ ಉಪವಾಸಕ್ಕಾಗಿ ಕುಳಿತಿರುವ ವಾನರರು ಆ ಗೃಧ್ರನನ್ನು ನೋಡಿ ‘ಇದು ನಮ್ಮೆಲ್ಲರನ್ನು ತಿಂದು ಬಿಡಲಿಕ್ಕಿಲ್ಲವಲ್ಲ’ ಎಂಬ ಭಯಂಕರ ಮಾತು ಯೋಚಿಸಿದರು.॥2॥

ಮೂಲಮ್ - 3

ಸರ್ವಥಾ ಪ್ರಾಯಮಾಸೀನಾನ್ಯದಿ ನೋ ಭಕ್ಷಯಿಷ್ಯತಿ ।
ಕೃತಕೃತ್ಯಾ ಭವಿಷ್ಯಾಮಃ ಕ್ಷಿಪ್ರಂ ಸಿದ್ಧಿಮಿತೋ ಗತಾಃ ॥

ಅನುವಾದ

ಸರಿ, ನಾವಾದರೋ ಎಲ್ಲ ಪ್ರಕಾರದಿಂದ ಉಪವಾಸದ ವ್ರತವನ್ನು ಕೈಗೊಂಡು ಕುಳಿತಿದ್ದೇವೆ. ಈ ಪಕ್ಷಿಯು ನಮ್ಮನ್ನು ತಿಂದುಬಿಟ್ಟರೆ ನಮ್ಮ ಕಾರ್ಯವೂ ಆಗುವುದು. ನಮಗೆ ಬೇಗನೇ ಸಿದ್ಧಿ ದೊರಕುವುದು.॥3॥

ಮೂಲಮ್ - 4

ಏತಾಂ ಬುದ್ಧಿಂ ತತಶ್ಚಕ್ರುಃ ಸರ್ವೇ ತೇ ಹರಿಯೂಥಪಾಃ ।
ಅವತಾರ್ಯ ಗಿರೇಃ ಶೃಂಗಾದ್ ಗೃಧ್ರಮಾಹಾಂಗದಸ್ತದಾ ॥

ಅನುವಾದ

ಮತ್ತೆ ಆ ಸಮಸ್ತ ವಾನರ ಯೂಥಪತಿಗಳು ಹೀಗೆ ನಿಶ್ಚಯಿಸಿ, ಆ ಗೃಧ್ರನನ್ನು ಆ ಪರ್ವತ ಶಿಖರದಿಂದ ಕೆಳಗಿಳಿಸಿ ಅಂಗದನು ಹೇಳಿದನು .॥4॥

ಮೂಲಮ್ - 5

ಬಭೂವರ್ಕ್ಷರಜೋ ನಾಮ ವಾನರೇಂದ್ರಃ ಪ್ರತಾಪವಾನ್ ।
ಮಮಾರ್ಯಃ ಪಾರ್ಥಿವಃ ಪಕ್ಷಿನ್ಧಾರ್ಮಿಕೌತ್ತಸ್ಯ ಚಾತ್ಮಜೌ ॥

ಮೂಲಮ್ - 6

ಸುಗ್ರೀವಶ್ಚೈವ ವಾಲೀ ಚ ಪುತ್ರೌ ಘನಬಲಾವುಭೌ ।
ಲೋಕೇ ವಿಶ್ರುತಕರ್ಮಾಭೂದ್ರಾಜಾ ವಾಲೀ ಪಿತಾ ಮಮ ॥

ಅನುವಾದ

ಪಕ್ಷಿರಾಜನೇ! ಮೊದಲು ಓರ್ವ ಪ್ರತಾಪಿ ಋಕ್ಷರಾಜನೆಂಬ ವಾನರ ರಾಜನಾಗಿ ಹೋಗಿದ್ದನು. ಋಕ್ಷರಾಜನು ನನಗೆ ತಾತನಾಗಬೇಕು. ಅವರಿಗೆ ವಾಲಿ ಮತ್ತು ಸುಗ್ರೀವರೆಂಬ ಇಬ್ಬರು ಧರ್ಮಾತ್ಮಾ ಪುತ್ರರಾದರು. ಅವರಲ್ಲಿ ವಾಲಿಯು ನನ್ನ ತಂದೆಯು. ಜಗತ್ತಿನಲ್ಲಿ ತನ್ನ ಪರಾಕ್ರಮದಿಂದ ಅವನ ಖ್ಯಾತಿ ಬಹಳವಾಗಿತ್ತು.॥5-6॥

ಮೂಲಮ್ - 7

ರಾಜಾ ಕೃತ್ಸ್ನಸ್ಯ ಜಗತ ಇಕ್ಷ್ವಾಕೂಣಾಂ ಮಹಾರಥಃ ।
ರಾಮೋ ದಾಶರಥಿಃ ಶ್ರೀಮಾನ್ಪ್ರವಿಷ್ಟೋ ದಂಡಕಾವನಮ್ ॥

ಮೂಲಮ್ - 8

ಲಕ್ಷ್ಮಣೇನ ಸಹ ಭ್ರಾತ್ರಾ ವೈದೇಹ್ಯಾ ಸಹ ಭಾರ್ಯಯಾ ।
ಪಿತುರ್ನಿದೇಶನಿರತೋ ಧರ್ಮ್ಯಂ ಪಂಥಾನಮಾಶ್ರಿತಃ ॥

ಅನುವಾದ

ಇಂದಿನಿಂದ ಕೆಲವು ವರ್ಷಗಳ ಹಿಂದೆ ಇಕ್ಷ್ವಾಕುವಂಶದ ಮಹಾರಥೀ ವೀರ, ಸಂಪೂರ್ಣ ಜಗತ್ತಿನ ರಾಜನಾದ ದಶರಥ ಕುಮಾರ ಶ್ರೀಮಾನ್ ರಾಮಚಂದ್ರನು ಪಿತೃವಾಕ್ಯಪಾಲನೆಯಲ್ಲಿ ತತ್ಪರನಾಗಿ, ಧರ್ಮಮಾರ್ಗವನ್ನು ಆಶ್ರಯಿಸಿ ದಂಡಕಾರಣ್ಯಕ್ಕೆ ಬಂದಿದ್ದನು. ಅವನೊಂದಿಗೆ ಅವನ ತಮ್ಮ ಲಕ್ಷ್ಮಣ ಮತ್ತು ಅವನ ಧರ್ಮಪತ್ನೀ ವಿದೇಹಕುಮಾರಿ ಸೀತೆಯೂ ಬಂದಿದ್ದಳು.॥7-8॥

ಮೂಲಮ್ - 9

ತಸ್ಯ ಭಾರ್ಯಾ ಜನಸ್ಥಾನಾದ್ರಾವಣೇನ ಹೃತಾ ಬಲಾತ್ ।
ರಾಮಸ್ಯ ತು ಪಿತುರ್ಮಿತ್ರಂ ಜಟಾಯುರ್ನಾಮ ಗೃಧ್ರರಾಟ್ ॥

ಮೂಲಮ್ - 10

ದದರ್ಶ ಸೀತಾಂ ವೈದೇಹೀಂ ಹ್ರಿಯಮಾಣಾಂ ವಿಹಾಯಸಾ ।
ರಾವಣಂ ವಿರಥಂ ಕೃತ್ವಾ ಸ್ಥಾಪಯಿತ್ವಾ ಚ ಮೈಥಿಲೀಮ್ ।
ಪರಿಶ್ರಾಂತಶ್ಚ ವೃದ್ಧಶ್ಚ ರಾವಣೇನ ಹತೋ ರಣೇ ॥

ಅನುವಾದ

ಜನಸ್ಥಾನಕ್ಕೆ ಬಂದ ಮೇಲೆ ಅವನ ಪತ್ನೀ ಸೀತೆಯನ್ನು ರಾವಣನು ಬಲವಂತವಾಗಿ ಅಪಹರಿಸಿದನು. ಆಗ ಶ್ರೀರಾಮನ ತಂದೆಯ ಮಿತ್ರನಾಗಿದ್ದ ಗೃಧ್ರರಾಜ ಜಟಾಯುವು ರಾವಣನು ಆಕಾಶಮಾರ್ಗದಿಂದ ವೈದೇಹಿಯನ್ನು ಕೊಂಡುಹೋಗುವು ದನ್ನು ನೋಡಿದನು. ನೋಡುತ್ತಲೇ ಅವನು ರಾವಣನ ಮೇಲೆ ಎರಗಿದನು, ಅವನ ರಥವನ್ನು ಪುಡಿ-ಪುಡಿ ಮಾಡಿ, ಅವನು ಮೈಥಿಲಿಯನ್ನು ಸುರಕ್ಷಿತವಾಗಿ ಭೂಮಿಯಲ್ಲಿ ನಿಲ್ಲಿಸಿದನು, ಆದರೆ ಅವನು ವೃದ್ಧನಾಗಿದ್ದನು. ಯುದ್ಧ ಮಾಡುತ್ತಾ ಬಳಲಿ ಹೋಗಿ ಕೊನೆಗೆ ರಣರಂಗದಲ್ಲಿ ರಾವಣನ ಕೈಯಿಂದ ಕೊಲ್ಲಲ್ಪಟ್ಟನು.॥9-10॥

ಮೂಲಮ್ - 11

ಏವಂ ಗೃಧ್ರೋ ಹತಸ್ತೇನ ರಾವಣೇನ ಬಲೀಯಸಾ ।
ಸಂಸ್ಕೃತಶ್ಚಾಪಿ ರಾಮೇಣ ಜಗಾಮ ಗತಿಮುತ್ತಮಾಮ್ ॥

ಅನುವಾದ

ಈ ಪ್ರಕಾರ ಮಹಾ ಬಲೀ ರಾವಣನಿಂದ ಜಟಾಯುವಿನ ವಧೆಯಾಯಿತು. ಸ್ವತಃ ಶ್ರೀರಾಮಚಂದ್ರನೇ ಅವನ ದಹನ ಸಂಸ್ಕಾರ ಮಾಡಿದನು ಮತ್ತು ಅವನು ಉತ್ತಮ ಗತಿಯನ್ನು ಪಡೆದನು.॥11॥

ಮೂಲಮ್ - 12

ತತೋ ಮಮ ಪಿತೃವ್ಯೇಣ ಸುಗ್ರೀವೇಣ ಮಹಾತ್ಮನಾ ।
ಚಕಾರ ರಾಘವಃ ಸಖ್ಯಂ ಸೋಽವಧೀತ್ಪಿತರಂ ಮಮ ॥

ಅನುವಾದ

ಅನಂತರ ಶ್ರೀರಾಮನು ನನ್ನ ಚಿಕ್ಕಪ್ಪ ಮಹಾತ್ಮಾ ಸುಗ್ರೀವನೊಂದಿಗೆ ಮೈತ್ರಿ ಮಾಡಿಕೊಂಡನು. ಸುಗ್ರೀವನು ಹೇಳಿದಂತೆ ಶ್ರೀರಾಮನು ನನ್ನ ಪಿತನನ್ನು ವಧಿಸಿದನು.॥12॥

ಮೂಲಮ್ - 13

ಮಮ ಪಿತ್ರಾ ವಿರುದ್ಧೋ ಹಿ ಸುಗ್ರೀವಃ ಸಚಿವೈಃ ಸಹ ।
ನಿಹತ್ಯ ವಾಲಿನಂ ರಾಮಸ್ತತಸ್ತಮಭಿಷೇಚಯತ್ ॥

ಅನುವಾದ

ನನ್ನ ತಂದೆಯು ಮಂತ್ರಿಗಳ ಸಹಿತ ಸುಗ್ರೀವನನ್ನು ರಾಜ್ಯಸುಖದಿಂದ ವಂಚಿತನಾಗಿಸಿದ್ದನು. ಅದಕ್ಕಾಗಿ ಶ್ರೀರಾಮ ಚಂದ್ರನು ನನ್ನ ತಂದೆ ವಾಲಿಯನ್ನು ಕೊಂದು ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿಸಿದನು.॥13॥

ಮೂಲಮ್ - 14

ಸ ರಾಜ್ಯೇ ಸ್ಥಾಪಿತಸ್ತೇನ ಸುಗ್ರೀವೋ ವಾನರೇಶ್ವರಃ ।
ರಾಜಾ ವಾನರಮುಖ್ಯಾನಾಂ ತೇನ ಪ್ರಸ್ಥಾಪಿತಾ ವಯಮ್ ॥

ಅನುವಾದ

ಅವನೇ ಸುಗ್ರೀವನನ್ನು ವಾಲಿಯ ರಾಜ್ಯದಲ್ಲಿ ಸ್ಥಾಪಿಸಿದನು. ಈಗ ಸುಗ್ರೀವನೇ ವಾನರರ ಒಡೆಯನಾಗಿದ್ದಾನೆ. ಮುಖ್ಯ-ಮುಖ್ಯ ವಾನರರಿಗೂ ರಾಜ ನಾಗಿದ್ದಾನೆ. ಅವನು ನಮ್ಮನ್ನು ಸೀತಾನ್ವೇಷಣೆಗಾಗಿ ಕಳಿಸಿರುವನು.॥14॥

ಮೂಲಮ್ - 15

ಏವಂ ರಾಮಪ್ರಯುಕ್ತಾಸ್ತು ಮಾರ್ಗಮಾಣಾಸ್ತತಸ್ತತಃ ।
ವೈದೇಹೀಂ ನಾಧಿಗಚ್ಛಾಮೋ ರಾತ್ರೌ ಸೂರ್ಯಪ್ರಭಾಮಿವ ॥

ಅನುವಾದ

ಈ ರೀತಿ ಶ್ರೀರಾಮನಿಂದ ಪ್ರೇರಿತರಾಗಿ ನಾವು ಅಲ್ಲಲ್ಲಿ ವಿದೇಹಕುಮಾರಿ ಸೀತೆಯನ್ನು ಹುಡುಕುತ್ತಾ ತಿರುಗಾಡುತ್ತಿದ್ದೇವೆ, ಆದರೆ ಇಷ್ಟರವರೆಗೆ ಅವಳು ಕಾಣಸಿಗಲಿಲ್ಲ. ರಾತ್ರಿಯಲ್ಲಿ ಸೂರ್ಯನ ದರ್ಶನವಾಗದಿರುವಂತೆಯೇ ನಮಗೆ ಈ ವನದಲ್ಲಿ ಜಾನಕಿಯ ದರ್ಶನವಾಗಲಿಲ್ಲ.॥15॥

ಮೂಲಮ್ - 16

ತೇ ವಯಂ ದಂಡಕಾರಣ್ಯಂ ವಿಚಿತ್ಯ ಸುಸಮಾಹಿತಾಃ ।
ಅಜ್ಞಾನಾತ್ತು ಪ್ರವಿಷ್ಟಾಃ ಸ್ಮ ಧರಣ್ಯಾ ವಿವೃತಂ ಬಿಲಮ್ ॥

ಅನುವಾದ

ನಾವು ಮನಸ್ಸನ್ನು ಏಕಾಗ್ರಗೊಳಿಸಿ ದಂಡಕಾರಣ್ಯದಲ್ಲಿ ಚೆನ್ನಾಗಿ ಹುಡುಕುತ್ತಿರುವಾಗ, ತಿಳಿಯದೆ ಭೂಮಿಯೊಳಗಿನ ಒಂದು ಬಿಲದಲ್ಲಿ ನುಗ್ಗಿದೆವು.॥16॥

ಮೂಲಮ್ - 17

ಮಯಸ್ಯ ಮಾಯಾವಿದಿತಂ ತದ್ಬಿಲಂ ಚ ವಿಚಿನ್ವತಾಮ್ ।
ವ್ಯತೀತಸ್ತತ್ರ ನೋ ಮಾಸೋ ಯೋ ರಾಜ್ಞಾ ಸಮಯಃ ಕೃತಃ ॥

ಅನುವಾದ

ಆ ಗುಹೆಯನ್ನು ಮಯಾಸುರನು ಮಾಯೆಯಿಂದ ನಿರ್ಮಿಸಿದ್ದನು. ಅದರಲ್ಲಿ ಹುಡುಕುತ್ತಾ-ಹುಡುಕುತ್ತಾ ನಮಗೆ ಒಂದು ತಿಂಗಳು ಕಳೆದು ಹೋಯಿತು. ಅದನ್ನು ಸುಗ್ರೀವರಾಜನು ನಾವು ಮರಳುವ ಅವಧಿಯನ್ನು ನಿಶ್ಚಯಿಸಿದ್ದನು.॥17॥

ಮೂಲಮ್ - 18

ತೇ ವಯಂ ಕಪಿರಾಜಸ್ಯ ಸರ್ವೇ ವಚನಕಾರಿಣಃ ।
ಕೃತಾಂ ಸಂಸ್ಥಾಮತಿಕ್ರಾಂತಾ ಭಯಾತ್ಪ್ರಾಯಮುಪಾಸಿತಾಃ ॥

ಅನುವಾದ

ನಾವೆಲ್ಲರೂ ಕಪಿರಾಜ ಸುಗ್ರೀವನ ಆಜ್ಞಾಕಾರಿಯಾಗಿದ್ದೇವೆ, ಆದರೂ ಅವನು ವಿಧಿಸಿದ ಅವಧಿಯನ್ನು ಮೀರಿದ್ದೇವೆ. ಆದ್ದರಿಂದ ಅವನ ಭಯದಿಂದ ನಾವು ಇಲ್ಲಿ ಆಮರಣ ಉಪವಾಸವನ್ನು ಮಾಡುತ್ತಿದ್ದೇವೆ.॥18॥

ಮೂಲಮ್ - 19

ಕ್ರುದ್ಧೇ ತಸ್ಮಿಂಸ್ತು ಕಾಕುತ್ಸ್ಥೇ ಸುಗ್ರೀವೇ ಚ ಸಲಕ್ಷ್ಮಣೇ ।
ಗತಾನಾಮಪಿ ಸರ್ವೇಷಾಂ ತತ್ರ ನೋ ನಾಸ್ತಿ ಜೀವಿತಮ್ ॥

ಅನುವಾದ

ಕಕುತ್ಸ್ಥ ಕುಲಭೂಷಣ ಶ್ರೀರಾಮ-ಲಕ್ಷ್ಮಣ ಮತ್ತು ಸುಗ್ರೀವ ಮೂವರೂ ನಮ್ಮ ಮೇಲೆ ಕುಪಿತರಾಗುವರು. ಆ ಸ್ಥಿತಿಯಲ್ಲಿ ನಾವು ಅಲ್ಲಿಗೆ ಮರಳಿದ ಬಳಿಕ ಯಾರೂ ಬದುಕಿರಲಾರೆವು.॥19॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಐವತ್ತೇಳನೆಯ ಸರ್ಗ ಸಂಪೂರ್ಣವಾಯಿತು. ॥57॥