वाचनम्
ಭಾಗಸೂಚನಾ
ಸಂಪಾತಿಯಿಂದ ವಾನರರಿಗೆ ಭಯ, ಜಟಾಯುವಿನ ಮರಣವಾರ್ತೆಯನ್ನು ಕೇಳಿದ ಸಂಪಾತಿಯ ದುಃಖ, ಪರ್ವತದಿಂದ ಕೆಳಗಿಳಿಸಲು ವಾನರರಲ್ಲಿ ಸಂಪಾತಿಯ ಕೋರಿಕೆ
ಮೂಲಮ್ - 1
ಉಪವಿಷ್ಟಾಸ್ತು ತೇ ಸರ್ವೇ ಯಸ್ಮಿನ್ ಪ್ರಾಯಂ ಗಿರಿಸ್ಥಲೇ ।
ಹರಯೋ ಗೃಧ್ರರಾಜಶ್ಚ ತಂ ದೇಶಮುಪಚಕ್ರಮೇ ॥
ಮೂಲಮ್ - 2
ಸಂಪಾತಿರ್ನಾಮ ನಾಮ್ನಾ ತು ಚಿರಜೀವಿ ವಿಹಂಗಮಃ ।
ಭ್ರಾತಾ ಜಟಾಯುಷಃ ಶ್ರೀಮಾನ್ವಿಖ್ಯಾತ ಬಲಪೌರುಷಃ ॥
ಅನುವಾದ
ಆ ಎಲ್ಲ ವಾನರರು ಆಮರಣ ಉಪವಾಸಕ್ಕೆ ಕುಳಿತಿದ್ದ ಪರ್ವತದ ಪ್ರದೇಶಕ್ಕೆ ಚಿರಂಜೀವಿ ಪಕ್ಷಿ ಶ್ರೀಮಾನ್ ಗೃಧ್ರರಾಜ ಸಂಪಾತಿಯು ಬಂದಿದ್ದನು. ಅವನು ಜಟಾಯುವಿನ ಅಣ್ಣನಾಗಿದ್ದು, ತನ್ನ ಬಲ ಮತ್ತು ಪುರುಷಾರ್ಥದಲ್ಲಿ ಎಲ್ಲೆಡೆ ಪ್ರಸಿದ್ಧನಾಗಿದ್ದನು.॥1-2॥
ಮೂಲಮ್ - 3
ಕಂದರಾದಭಿನಿಷ್ಕ್ರಮ್ಯ ಸ ವಿಂಧ್ಯಸ್ಯ ಮಹಾಗಿರೇಃ ।
ಉಪವಿಷ್ಟಾನ್ಹರೀನ್ದೃಷ್ಟ್ವಾ ಹೃಷ್ಟಾತ್ಮಾ ಗಿರಮಬ್ರವೀತ್ ॥
ಅನುವಾದ
ಮಹಾಗಿರಿ ವಿಂಧ್ಯದ ಕಂದರದಿಂದ ಹೊರಟ ಸಂಪಾತಿಯು ಕುಳಿತಿರುವ ವಾನರರನ್ನು ನೋಡಿದಾಗ ಅವನು ಹರ್ಷಗೊಂಡು ಈ ಪ್ರಕಾರ ಹೇಳಿದನು .॥3॥
ಮೂಲಮ್ - 4
ವಿಧಿಃ ಕಿಲಂ ನರಂ ಲೋಕೇ ವಿಧಾನೇನಾನುವರ್ತತೇ ।
ಯಥಾಯಂ ವಿಹಿತೋ ಭಕ್ಷ್ಯಶ್ಚಿರಾನ್ಮಹ್ಯಮುಪಾಗತಃ ॥
ಮೂಲಮ್ - 5
ಪರಂಪರಾಣಾಂ ಭಕ್ಷಿಷ್ಯೇ ವಾನರಾಣಾಂ ಮೃತಂ ಮೃತಮ್ ।
ಉವಾಚೇದಂ ವಚಃ ಪಕ್ಷೀ ತಾನ್ನಿರೀಕ್ಷ್ಯ ಪ್ಲವಂಗಮಾನ್ ॥
ಅನುವಾದ
ಜಗತ್ತಿನಲ್ಲಿ ಪೂರ್ವಜನ್ಮಕ್ಕನುಸಾರ ಮನುಷ್ಯನಿಗೆ ಅವನು ಮಾಡಿದುದರ ಫಲ ತಾನಾಗಿ ದೊರೆಯುತ್ತದೆ, ಹಾಗೆಯೇ ಇಂದು ಬಹಳ ಕಾಲದ ಬಳಿಕ ಈ ಭೋಜನವು ನನಗೆ ತಾನಾಗಿ ದೊರೆತಿದೆ. ಆವಶ್ಯವಾಗಿ ಇದು ನನ್ನ ಯಾವುದೋ ಕರ್ಮದ ಫಲವಾಗಿದೆ. ಈ ವಾನರರಲ್ಲಿ ಯಾರು - ಯಾರು ಸಾಯುತ್ತಾ ಹೋಗುವರೋ ಅವರನ್ನು ನಾನು ಕ್ರಮವಾಗಿ ತಿನ್ನುತ್ತಾ ಹೋಗುವೆನು. ಅಲ್ಲಿರುವ ಎಲ್ಲ ವಾನರರನ್ನು ನೋಡಿ ಆ ಪಕ್ಷಿಯು ಈ ಮಾತನ್ನು ಹೇಳಿದ್ದನು.॥4-5॥
ಮೂಲಮ್ - 6
ತಸ್ಯ ತದವಚನಂ ಶ್ರುತ್ವಾ ಭಕ್ಷ್ಯಲುಬ್ಧಸ್ಯ ಪಕ್ಷಿಣಃ ।
ಅಂಗದಃ ಪರಮಾಯಸ್ತೋ ಹನೂಮಂತಮಥಾಬ್ರವೀತ್ ॥
ಅನುವಾದ
ಊಟಕ್ಕಾಗಿ ಆತುರವಾದ ಆ ಪಕ್ಷಿಯ ಈ ಮಾತನ್ನು ಕೇಳಿ ಅಂಗದನಿಗೆ ಬಹಳ ದುಃಖವಾಯಿತು ಮತ್ತು ಅವನು ಹನುಮಂತನಲ್ಲಿ ಹೇಳಿದನು .॥6॥
ಮೂಲಮ್ - 7
ಪಶ್ಯ ಸೀತಾಪದೇಶೇನ ಸಾಕ್ಷಾದ್ವೈವಸ್ವತೋ ಯಮಃ ।
ಇಮಂ ದೇಶಮನುಪ್ರಾಪ್ತೋ ವಾನರಾಣಾಂ ವಿಪತ್ತಯೇ ॥
ಅನುವಾದ
ನೋಡು, ಸೀತೆಯ ನಿಮಿತ್ತದಿಂದ ವಾನರರನ್ನು ವಿಪತ್ತಿನಲ್ಲಿ ಹಾಕಲು ಸಾಕ್ಷಾತ್ ಸೂರ್ಯಪುತ್ರ ಯಮನೇ ಈ ಪ್ರದೇಶಕ್ಕೆ ಬಂದಿರುವಂತಿದೆ.॥7॥
ಮೂಲಮ್ - 8
ರಾಮಸ್ಯ ನ ಕೃತಂ ಕಾರ್ಯಂ ನ ಕೃತಂ ರಾಜಶಾಸನಮ್ ।
ಹರೀಣಾಮಿಯಮಜ್ಞಾತಾ ವಿಪತ್ತಿಃ ಸಹಸಾಽಽಗತಾ ॥
ಅನುವಾದ
ನಾವು ಶ್ರೀರಾಮಚಂದ್ರನ ಕಾರ್ಯ ಮಾಡಲಿಲ್ಲ, ರಾಜನ ಆಜ್ಞೆಯನ್ನು ಪಾಲಿಸಲಿಲ್ಲ. ಅದರ ನಡುವೆ ವಾನರರ ಮೇಲೆ ಈ ಅಜ್ಞಾತ ವಿಪತ್ತು ಒಮ್ಮೆಗೆ ಎರಗಿದೆ.॥8॥
ಮೂಲಮ್ - 9
ವೈದೇಹ್ಯಾಃ ಪ್ರಿಯಕಾಮೇನ ಕೃತಂ ಕರ್ಮ ಜಟಾಯುಷಾ ।
ಗೃಧ್ರರಾಜೇನ ಯತ್ತತ್ರ ಶ್ರುತಂ ವಸ್ತದಶೇಷತಃ ॥
ಅನುವಾದ
ವಿದೇಹಕುಮಾರಿ ಸೀತೆಯ ಪ್ರಿಯವನ್ನುಂಟು ಮಾಡುವ ಇಚ್ಛೆಯಿಂದ ಗೃಧ್ರರಾಜ ಜಟಾಯುವು ಮಾಡಿದ ಸಾಹಸಪೂರ್ಣ ಕಾರ್ಯವನ್ನು ನೀವೆಲ್ಲ ಕೇಳಿರಬಹುದು.॥9॥
ಮೂಲಮ್ - 10
ತಥಾ ಸರ್ವಾಣಿಭೂತಾನಿ ತಿರ್ಯಗ್ಯೋನಿಗತಾನ್ಯಪಿ ।
ಪ್ರಿಯಂ ಕುರ್ವಂತಿ ರಾಮಸ್ಯ ತ್ಯಕ್ತ್ವಾ ಪ್ರಾಣಾನ್ಯಥಾ ವಯಮ್ ॥
ಅನುವಾದ
ಸಮಸ್ತ ಪ್ರಾಣಿಗಳಲ್ಲಿ ಪಶು-ಪಕ್ಷಿಗಳ ಯೋನಿಯಲ್ಲಿ ಹುಟ್ಟಲೇನು, ನಮ್ಮಂತೆ ಪ್ರಾಣ ಕೊಟ್ಟಾದರೂ ಶ್ರೀರಾಮಚಂದ್ರನ ಪ್ರಿಯ ಕಾರ್ಯ ಮಾಡುತ್ತವೆ.॥10॥
ಮೂಲಮ್ - 11
ಅನ್ಯೋನ್ಯಮುಪಕುರ್ವಂತಿ ಸ್ನೇಹಕಾರುಣ್ಯಯಂತ್ರಿತಾಃ ।
ತತಸ್ತಸ್ಯೋಪಕಾರಾರ್ಥಂ ತ್ಯಜತಾತ್ಮಾನಮಾತ್ಮನಾ ॥
ಅನುವಾದ
ಶಿಷ್ಟ ಪುರುಷರು ಸ್ನೇಹ ಮತ್ತು ಕರುಣೆಗೆ ವಶೀಭೂತರಾಗಿ ಒಬ್ಬರು ಮತ್ತೊಬ್ಬರಿಗೆ ಉಪಕಾರ ಮಾಡುತ್ತಾರೆ, ಆದ್ದರಿಂದ ನೀವುಗಳೂ ಕೂಡ ಶ್ರೀರಾಮನ ಉಪಕಾರಕ್ಕಾಗಿ ಸ್ವತಃ ತಮ್ಮ ಶರೀರಗಳನ್ನು ತ್ಯಜಿಸುತ್ತಿದ್ದೀರಿ.॥11॥
ಮೂಲಮ್ - 12½
ಪ್ರಿಯಂ ಕೃತಂ ಹಿ ರಾಮಸ್ಯ ಧರ್ಮಜ್ಞೇನ ಜಟಾಯುಷಾ ।
ರಾಘವಾರ್ಥೇ ಪರಿಶ್ರಾಂತಾ ವಯಂ ಸಂತ್ಯಕ್ತ ಜೀವಿತಾಃ ॥
ಕಾಂತಾರಾಣಿ ಪ್ರಪನ್ನಾಃ ಸ್ಮ ನ ಚ ಪಶ್ಯಾಮ ಮೈಥಿಲೀಮ್ ।
ಅನುವಾದ
ಧರ್ಮಜ್ಞ ಜಟಾಯುವೂ ಕೂಡ ಶ್ರೀರಾಮನ ಪ್ರಿಯ ಮಾಡಿದನು. ನಾವು ಶ್ರೀರಘುನಾಥನಿಗಾಗಿ ನಮ್ಮ ಜೀವನದ ಮೋಹ ಬಿಟ್ಟು ಪರಿಶ್ರಮ ಪಡುತ್ತಾ ಈ ದುರ್ಗಮ ವನಕ್ಕೆ ಬಂದೆವು, ಆದರೆ ಮಿಥಿಲೇಶ ಕುಮಾರಿಯ ದರ್ಶನವಾಗಲಿಲ್ಲ.॥12॥
ಮೂಲಮ್ - 13
ಸ ಸುಖೀ ಗೃಧ್ರರಾಜಸ್ತು ರಾವಣೇನ ಹತೋ ರಣೇ ।
ಮುಕ್ತಶ್ಚ ಸುಗ್ರೀವಭಯಾದ್ಗತಶ್ಚ ಪರಮಾಂ ಗತಿಮ್ ॥
ಅನುವಾದ
ಯುದ್ಧದಲ್ಲಿ ರಾವಣನ ಕೈಯಿಂದ ಹತನಾಗಿ, ಪರಮಗತಿಯನ್ನು ಪಡೆದ ಗೃಧ್ರರಾಜ ಜಟಾಯುವೇ ಸುಖಿಯಾಗಿದ್ದಾನೆ. ಅವನು ಸುಗ್ರೀವನ ಭಯದಿಂದ ಮುಕ್ತನಾಗಿದ್ದಾನೆ.॥13॥
ಮೂಲಮ್ - 14
ಜಟಾಯುಷೋ ವಿನಾಶೇನ ರಾಜ್ಞೋ ದಶರಥಸ್ಯ ಚ ।
ಹರಣೇನ ಚ ವೈದೇಹ್ಯಾಃ ಸಂಶಯಂ ಹರಯೋ ಗತಾಃ ॥
ಅನುವಾದ
ದಶರಥ ರಾಜನ ಮೃತ್ಯು, ಜಟಾಯುವಿನ ವಿನಾಶ, ವಿದೇಹಕುಮಾರಿ ಸೀತೆಯ ಅಪಹರಣ - ಈ ಘಟನೆಗಳಿಂದ ಈಗ ವಾನರರ ಜೀವನ ಸಂಶಯದಲ್ಲಿ ಬಿದ್ದಿರುವುದು.॥14॥
ಮೂಲಮ್ - 15
ರಾಮಲಕ್ಷ್ಮಣಯೋರ್ವಾಸಮರಣ್ಯೇ ಸಹ ಸೀತಯಾ ।
ರಾಘವಸ್ಯ ಚ ಬಾಣೇನ ವಾಲಿನಶ್ಚ ತಥಾ ವಧಃ ॥
ಮೂಲಮ್ - 16
ರಾಮಕೋಷಾದಶೇಷಾಣಾಂ ರಕ್ಷಸಾಂ ಚ ತಥಾ ವಧಮ್ ।
ಕೈಕೇಯ್ಯಾ ವರದಾನೇನ ಇದಂ ಚ ವಿಕೃತಂ ಕೃತಮ್ ॥
ಅನುವಾದ
ಶ್ರೀರಾಮ-ಲಕ್ಷ್ಮಣರಿಗೆ ಸೀತೆಯೊಂದಿಗೆ ವನದಲ್ಲಿ ವಾಸಿಸಬೇಕಾಯಿತು. ಶ್ರೀರಘುನಾಥನ ಬಾಣದಿಂದ ವಾಲಿಯ ವಧೆ ಆಯಿತು. ಇನ್ನು ಶ್ರೀರಾಮನ ಕೋಪದಿಂದ ಸಮಸ್ತ ರಾಕ್ಷಸರ ಸಂಹಾರವಾಗುವುದು - ಇದೆಲ್ಲ ಕೆಡುಕುಗಳು ಕೈಕೇಯಿಗೆ ಕೊಟ್ಟ ವರದಿಂದಲೇ ಉಂಟಾಗಿದೆ.॥15-16॥
ಮೂಲಮ್ - 17
ತದಸುಖಮನುಕೀರ್ತಿತಂ ವಚೋ
ಭುವಿ ಪತಿತಾಂಶ್ಚ ನಿರೀಕ್ಷ್ಯ ವಾನರಾನ್ ।
ಭೃಶಚಲಿತಮತಿರ್ಮಹಾಮತಿಃ
ಕೃಪಣಮುದಾಹೃತವಾನ್ ಸ ಗೃಧ್ರರಾಜಃ ॥
ಅನುವಾದ
ವಾನರರು ಪದೇ-ಪದೇ ಹೇಳಿದ ಈ ದುಃಖಮಯ ವಚನಗಳನ್ನು ಕೇಳಿ ಹಾಗೂ ಅವರೆಲ್ಲರೂ ನೆಲದಲ್ಲಿ ಬಿದ್ದಿರುವುದನ್ನು ನೋಡಿ, ಪರಮ ಬುದ್ಧಿವಂತ ಸಂಪಾತಿಯ ಹೃದಯವು ಅತ್ಯಂತ ಕ್ಷುಬ್ಧವಾಗಿ, ಅವನು ದೀನವಾಣಿಯಿಂದ ನುಡಿಯಲು ಮುಂದಾದನು.॥17॥
ಮೂಲಮ್ - 18
ತತ್ತು ಶ್ರುತ್ವಾ ತದಾ ವಾಕ್ಯಮಂಗದಸ್ಯ ಮುಖೋದ್ಗತಮ್ ।
ಅಬ್ರವೀದ್ವಚನಂ ಗೃಧ್ರಸ್ತೀಕ್ಷ್ಣ ತುಂಡೋ ಮಹಾಸ್ವನಃ ॥
ಅನುವಾದ
ಅಂಗದನು ಹೇಳಿದ ಆ ಮಾತನ್ನು ಕೇಳಿ, ಚೂಪಾದ ಕೊಕ್ಕು ಉಳ್ಳ ಆ ಗೃಧ್ರನು ಗಟ್ಟಿಯಾಗಿ ಹೀಗೆ ಕೇಳಿದನು .॥18॥
ಮೂಲಮ್ - 19
ಕೋಽಯಂ ಗಿರಾ ಘೋಷಯತಿ ಪ್ರಾಣೈಃ ಪ್ರಿಯತರಸ್ಯ ಮೇ ।
ಜಟಾಯುಷೋ ವಧಂ ಭ್ರಾತುಃ ಕಂಪಯನ್ನಿವ ಮೇ ಮನಃ ॥
ಅನುವಾದ
ನನಗೆ ಪ್ರಾಣಗಳಿಗಿಂತಲೂ ಹೆಚ್ಚು ಪ್ರಿಯನಾದ ತಮ್ಮ ಜಟಾಯುವಿನ ವಧೆಯ ಮಾತನ್ನು ಹೇಳಿದವರು ಯಾರು? ಇದನ್ನು ಕೇಳಿ ನನ್ನ ಹೃದಯ ನಡುಗುತ್ತಿದೆ.॥19॥
ಮೂಲಮ್ - 20
ಕಥಾಮಾಸೀಜ್ಜನಸ್ಥಾನೇ ಯುದ್ಧಂ ರಾಕ್ಷಸಗೃಧ್ರಯೋಃ ।
ನಾಮಧೇಯಮಿದಂ ಭ್ರಾತುಶ್ಚಿರಸ್ಯಾದ್ಯ ಮಯಾ ಶ್ರುತಮ್ ॥
ಅನುವಾದ
ಜನಸ್ಥಾನ ದಲ್ಲಿ ರಾಕ್ಷಸ ನೊಡನೆ ಜಟಾಯುವಿನ ಯುದ್ಧ ಹೇಗಾಗಿತ್ತು? ನನ್ನ ತಮ್ಮನ ಪ್ರಿಯ ಹೆಸರು ಇಂದು ಬಹಳ ದಿನಗಳ ಬಳಿಕ ನನ್ನ ಕಿವಿಗೆ ಬಿದ್ದಿದೆ.॥20॥
ಮೂಲಮ್ - 21
ಇಚ್ಛೇಯಂ ಗಿರಿದುರ್ಗಾಚ್ಚ ಭವದ್ಭಿರವತಾರಿತುಮ್ ।
ಯವೀಯಸೋ ಗುಣಜ್ಞಸ್ಯ ಶ್ಲಾಘನೀಯಸ್ಕ ವಿಕ್ರಮೈಃ ॥
ಮೂಲಮ್ - 22
ಅತಿದೀರ್ಘಸ್ಯ ಕಾಲಸ್ಯ ಪರಿತುಷ್ಪೋಽಸ್ಮಿ ಕೀರ್ತನಾತ್ ।
ತದಿಚ್ಛೇಯಮಹಂ ಶ್ರೋತುಂ ವಿನಾಶಂ ವಾನರರ್ಷಭಾಃ ॥
ಅನುವಾದ
ಜಟಾಯು ನನಗಿಂತ ಸಣ್ಣವನು, ಗುಣಜ್ಞ ಮತ್ತು ಪರಾಕ್ರಮದಿಂದಾಗಿ ಪ್ರಶಂಸೆಗೆ ಯೋಗ್ಯನಾಗಿದ್ದನು. ದೀರ್ಘಕಾಲದ ಬಳಿಕ ಇಂದು ಅವನ ಹೆಸರು ಕೇಳಿ ನನಗೆ ಬಹಳ ಸಂತೋಷವಾಗಿದೆ. ಪರ್ವತದ ಈ ದುರ್ಗಮ ಸ್ಥಾನದಿಂದ ನೀವು ನನ್ನನ್ನು ಕೆಳಗೆ ಇಳಿಸಬೇಕೆಂದು ನಾನು ಬಯಸುತ್ತೇನೆ. ಶ್ರೇಷ್ಠ ವಾನರರೇ! ನನ್ನ ತಮ್ಮನ ವಿನಾಶದ ವೃತ್ತಾಂತವನ್ನು ಕೇಳುವ ಇಚ್ಛೆ ನನಗಿದೆ.॥21-22॥
ಮೂಲಮ್ - 23½
ಭ್ರಾತುರ್ಜಟಾಯುಷಸ್ತಸ್ಯ ಜನಸ್ಥಾನನಿವಾಸಿನಃ ।
ತಸ್ಯೈವ ಚ ಮಮ ಭ್ರಾತುಃ ಸಖಾದಶರಥಃ ಕಥಮ್ ॥
ಯಸ್ಯ ರಾಮಃ ಪ್ರಿಯಃ ಪುತ್ರೋ ಜ್ಯೇಷ್ಠೋ ಗುರುಜನಪ್ರಿಯಃ ।
ಅನುವಾದ
ನನ್ನ ತಮ್ಮನಾದರೋ ಜನಸ್ಥಾನದಲ್ಲಿ ಇರುತ್ತಿದ್ದನು. ಗುರು ಜನರ ಪ್ರೇಮಿ ಶ್ರೀರಾಮ ಚಂದ್ರನು ಯಾರ ಜೇಷ್ಠ ಪ್ರಿಯಪುತ್ರನೋ, ಆ ದಶರಥ ಮಹಾರಾಜನು ನನ್ನ ತಮ್ಮನ ಮಿತ್ರನು ಹೇಗಾದನು.॥23॥
ಮೂಲಮ್ - 24
ಸೂಯಾಂಶುದಗ್ಧ ಪಕ್ಷತ್ವಾನ್ನ ಶಕ್ನೋಮಿವಿಸರ್ಪಿತುಮ್ ।
ಇಚ್ಛೇಯಂ ಪರ್ವತಾದಸ್ಮಾದವತರ್ತುಮರಿಂದಮಾಃ ॥
ಅನುವಾದ
ಶತ್ರುದಮನ ವೀರರೇ! ನನ್ನ ರೆಕ್ಕೆಗಳು ಸೂರ್ಯನ ಕಿರಣಗಳಿಂದ ಸುಟ್ಟುಹೋಗಿವೆ, ಅದಕ್ಕಾಗಿ ನಾನು ಹಾರಲಾರೆನು; ಆದರೂ ಈ ಪರ್ವತದಿಂದ ಕೆಳಗಿಳಿಯಲು ಬಯಸುತ್ತಿದ್ದೇನೆ.॥24॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಐವತ್ತಾರನೆಯ ಸರ್ಗ ಸಂಪೂರ್ಣವಾಯಿತು. ॥56॥