०५५ वानरकृतशीघ्रान्वेषणनिश्चयः

वाचनम्
ಭಾಗಸೂಚನಾ

ಅಂಗದ ಸಹಿತ ವಾನರರ ಪ್ರಾಯೋಪವೇಶ

ಮೂಲಮ್ - 1

ಶ್ರುತ್ವಾ ಹನುಮತೋ ವಾಕ್ಯಂ ಪ್ರಶ್ರಿತಂ ಧರ್ಮಸಂಹಿತಮ್ ।
ಸ್ವಾಮಿಸತ್ಕಾರಸಂಯುಕ್ತಮಂಗದೋ ವಾಕ್ಯಮಬ್ರವೀತ್ ॥

ಅನುವಾದ

ಹನುಮಂತನ ಮಾತು ವಿನಯಯುಕ್ತ, ಧರ್ಮಾನುಕೂಲ ಮತ್ತು ಸ್ವಾಮಿಯ ಕುರಿತು ಸಮ್ಮಾನದಿಂದ ಕೂಡಿತ್ತು. ಅದನ್ನು ಕೇಳಿ ಅಂಗದನು ಹೇಳಿದನು .॥1॥

ಮೂಲಮ್ - 2

ಸ್ಥೈರ್ಯಮಾತ್ಮಃ ಮನಃಶೌಚಮಾನೃಶಂಸ್ಯಮಥಾರ್ಜವಮ್ ।
ವಿಕ್ರಮಶ್ಚೈವ ಧೈರ್ಯಂ ಚ ಸುಗ್ರೀವೇ ನೋಪಪದ್ಯತೇ ॥

ಅನುವಾದ

ಕಪಿಶ್ರೇಷ್ಠನೇ! ಸುಗ್ರೀವ ರಾಜನಲ್ಲಿ ಸ್ಥಿರತೆ, ಶರೀರ-ಮನಸ್ಸಿನ ಪವಿತ್ರತೆ, ಕ್ರೂರತೆಯ ಅಭಾವ, ಸರಳತೆ, ಪರಾಕ್ರಮ, ಧೈರ್ಯ ಇವುಗಳಿವೆ ಎಂಬ ಮಾನ್ಯತೆ ಸರಿ ಎಂದು ತೋರುವುದಿಲ್ಲ.॥2॥

ಮೂಲಮ್ - 3

ಭ್ರಾತುರ್ಜ್ಯೇಷ್ಠಸ್ಯ ಯೋ ಭಾರ್ಯಾಂ ಜೀವತೋ ಮಹಿಷೀಂ ಪ್ರಿಯಾಮ್ ।
ಧರ್ಮೇಣ ಮಾತರಂ ಯಸ್ತು ಸ್ವೀಕರೋತಿಜುಗುಪ್ಸಿತಃ ॥

ಮೂಲಮ್ - 4

ಕಥಂ ಸ ಧರ್ಮಂ ಜಾನೀತೇ ಯೇನ ಭ್ರಾತ್ರಾ ಮಹಾತ್ಮನಾ ।
ಯುದ್ಧಾಯಾಭಿನಿಯುಕ್ತೇನ ಬಿಲಸ್ಯ ಪಿಹಿತಂ ಮುಖಮ್ ॥

ಅನುವಾದ

ತನ್ನ ಅಣ್ಣನು ಬದುಕಿರವಾಗಲೇ ಧರ್ಮತಃ ತಾಯಿಯಂತೆ ಇದ್ದ ಅವನ ಪ್ರಿಯ ಮಹಾರಾಣಿಯನ್ನು ಕುತ್ಸಿತ ಭಾವದಿಂದ ಸ್ವೀಕರಿಸಿದ್ದ ಅವನು ಧರ್ಮವನ್ನು ಬಲ್ಲವನೆಂದು ಹೇಗೆ ಹೇಳಬಹುದು? ಯಾವ ದುರಾತ್ಮನು ಯುದ್ಧಕ್ಕಾಗಿ ಹೋಗಿರುವ ಅಣ್ಣನಿಂದ ಬಿಲದ ರಕ್ಷಣೆಯ ಕಾರ್ಯದಲ್ಲಿ ನಿಯುಕ್ತನಾಗಿದ್ದರೂ ಬಂಡೆಯಿಂದ ಅದರ ಬಾಗಿಲನ್ನು ಮುಚ್ಚಿದ್ದನೋ ಅವನನ್ನು ಧರ್ಮಜ್ಞನೆಂದು ಹೇಗೆ ಹೇಳಬಹುದು.॥3-4॥

ಮೂಲಮ್ - 5

ಸತ್ಯಾತ್ಪಾಣಿಗೃಹೀತಶ್ಚ ಕೃತಕರ್ಮಾ ಮಹಾಯಶಾಃ ।
ವಿಸ್ಮೃತೋ ರಾಘವೋ ಯೇನ ಸ ಕಸ್ಯ ಸುಕೃತಂ ಸ್ಮರೇತ್ ॥

ಅನುವಾದ

ಸತ್ಯದ ಸಾಕ್ಷಿಯಿಂದ ಯಾರ ಕೈ ಹಿಡಿದಿದ್ದನೋ, ಮೊದಲೇ ತನ್ನ ಕಾರ್ಯವನ್ನು ಸಾಧಿಸಿಕೊಂಡನೋ, ಅವನು ಮಹಾ ಯಶಸ್ವೀ ಭಗವಾನ್ ಶ್ರೀರಾಮನನ್ನೇ ಮರೆತಿರುವಾಗ ಬೇರೆ ಯಾರದಾದರೂ ಉಪಕಾರವನ್ನು ಸ್ಮರಿಸಬಲ್ಲನೇ.॥5॥

ಮೂಲಮ್ - 6

ಲಕ್ಷ್ಮಣಸ್ಯ ಭಯೇನೇಹ ನಾಧರ್ಮಭಯಭೀರುಣಾ ।
ಆದಿಷ್ಟಾ ಮಾರ್ಗಿತುಂ ಸೀತಾಂ ಧರ್ಮಸ್ತಸ್ಮಿನ್ಕಥಂ ಭವೇತ್ ॥

ಅನುವಾದ

ಅವನು ಅಧರ್ಮದ ಭಯದಿಂದಲ್ಲ, ಲಕ್ಷ್ಮಣನ ಭಯದಿಂದಲೇ ಹೆದರಿ ನಮ್ಮನ್ನು ಸೀತಾನ್ವೇಷಣೆಗೆ ಕಳಿಸಿರುವನು. ಹೀಗಿರುವಾಗ ಅವನಲ್ಲಿ ಧರ್ಮದ ಸಂಭಾವನೆ ಹೇಗೆ ಇರಬಲ್ಲದು.॥6॥

ಮೂಲಮ್ - 7

ತಸ್ಮಿನ್ಪಾಪೇ ಕೃತಘ್ನೇ ತು ಸ್ಮೃತಿಭಿನ್ನೇ ಚಲಾತ್ಮನಿ ।
ಆರ್ಯಃ ಕೋ ವಿಶ್ವಸೇಜ್ಜಾತು ತತ್ಕುಲೀನೋ ವಿಶೇಷತಃ ॥

ಅನುವಾದ

ಆ ಪಾಪೀ, ಕೃತಘ್ನ, ಸ್ಮರಣಶಕ್ತಿಹೀನ, ಚಂಚಲಚಿತ್ತನಾದ ಸುಗ್ರೀವನ ಮೇಲೆ ಉತ್ತಮ ಕುಲದಲ್ಲಿ ಹುಟ್ಟಿದ ಯಾವನೇ ಶ್ರೇಷ್ಠ ಪುರುಷನು ಎಂದಾದರೂ ವಿಶ್ವಾಸ ಇಡಬಲ್ಲನೇ.॥7॥

ಮೂಲಮ್ - 8

ರಾಜ್ಯೇ ಪುತ್ರಃ ಪ್ರತಿಷ್ಠಾಪ್ಯ ಸುಗುಣೋ ನಿರ್ಗುಣೋಽಪಿ ವಾ ।
ಕಥಂ ಶತ್ರುಕುಲೀನಂ ಮಾಂ ಸುಗ್ರೀವೋ ಜೀವಯಿಷ್ಯತಿ ॥

ಅನುವಾದ

ತನ್ನ ಮಗ ಗುಣವಂತನಾಗಿರಲಿ ಅಥವಾ ಗುಣಹೀನನಾಗಿರಲಿ, ಅವನನ್ನೇ ರಾಜನನ್ನಾಗಿಸಬೇಕು. ಇಂತಹ ಧಾರಣೆಯುಳ್ಳ ಸುಗ್ರೀವನು ನನ್ನನ್ನು ಶತ್ರುಕುಲದಲ್ಲಿ ಹುಟ್ಟಿದ ಬಾಲಕನಂತೆ ಹೇಗೆ ಬದುಕಲು ಬಿಡುವನು.॥8॥

ಮೂಲಮ್ - 9

ಭಿನ್ನಮಂತ್ರೋಽಪರಾದ್ಧಶ್ಚ ಭಿನ್ನಶಕ್ತಿಃ ಕಥಂ ಹ್ಯಹಮ್ ।
ಕಿಷ್ಕಿಂಧಾಂ ಪ್ರಾಪ್ಯ ಜೀವೇಯಮನಾಥ ಇವ ದುರ್ಬಲಃ ॥

ಅನುವಾದ

ಸುಗ್ರೀವನಿಂದ ಬೇರೆಯಾಗಿರಬೇಕೆಂಬ ನನ್ನ ಗುಪ್ತ ವಿಚಾರವು ಇಂದು ಪ್ರಕಟವಾಗಿದೆ. ಜೊತೆಗೆ ಅವನ ಆಜ್ಞೆಯನ್ನು ಪಾಲಿಸದೇ ಇದ್ದುದರಿಂದ ನಾನು ಅಪರಾಧಿಯೂ ಆಗಿದ್ದೇನೆ. ಇಷ್ಟೇ ಅಲ್ಲ, ನನ್ನ ಶಕ್ತಿ ಕ್ಷೀಣಿಸಿಹೋಗಿದೆ. ನಾನು ಅನಾಥನಂತೆ ದುರ್ಬಲನಾಗಿದ್ದೇನೆ. ಇಂತಹ ಸ್ಥಿತಿಯಲ್ಲಿ ಕಿಷ್ಕಿಂಧೆಗೆ ಹೋಗಿ ಹೇಗೆ ಬದುಕಿರಬಲ್ಲೆ.॥9॥

ಮೂಲಮ್ - 10

ಉಪಾಂಶುದಂಡೇನ ಹಿ ಮಾಂ ಬಂಧನೇನೋಪಪಾದಯೇತ್ ।
ಶತಃ ಕ್ರೂರೋ ನೃಶಂಸಶ್ಚ ಸುಗ್ರೀವೋ ರಾಜ್ಯಕಾರಣಾತ್ ॥

ಅನುವಾದ

ಸುಗ್ರೀವನು ಮೂರ್ಖ, ಕ್ರೂರೀ, ನಿರ್ದಯಿಯಾಗಿದ್ದಾನೆ. ಅವನು ರಾಜ್ಯಕ್ಕಾಗಿ ನನ್ನನ್ನು ಗುಪ್ತವಾಗಿ ದಂಡಿಸುವನು ಅಥವಾ ಎಂದೆಂದಿಗೂ ಬಂಧನದಲ್ಲಿ ಇಡಬಹುದು.॥10॥

ಮೂಲಮ್ - 11

ಬಂಧನಾಚ್ಚಾವಸಾದಾನ್ಮೇ ಶ್ರೇಯಃ ಪ್ರಾಯೋಪವೇಶನಮ್ ।
ಅನುಜಾನಂತು ಮಾಂ ಸರ್ವೇ ಗೃಹಂ ಗಚ್ಛಂತು ವಾನರಾಃ ॥

ಅನುವಾದ

ಈ ಪ್ರಕಾರ ಬಂಧುಜನಿತ ಕಷ್ಟ ಭೋಗಿಸುವುದಕ್ಕಿಂತ ಉಪವಾಸ ಮಾಡಿ ಪ್ರಾಣ ಕಳೆದುಕೊಳ್ಳುವುದೇ ನನಗೆ ಶ್ರೇಯಸ್ಕರವಾಗಿದೆ. ಆದ್ದರಿಂದ ಎಲ್ಲ ವಾನರರು ನನಗೆ ಇಲ್ಲಿಯೇ ಇರಲು ಅಪ್ಪಣೆ ಕೊಟ್ಟು, ತಮ್ಮ-ತಮ್ಮ ಮನೆಗೆ ಹೋಗಲಿ.॥11॥

ಮೂಲಮ್ - 12

ಅಹಂ ವಃ ಪ್ರತಿಜಾನಾಮಿ ನಗಮಿಷ್ಯಾಮ್ಯಹಂ ಪುರೀಮ್ ।
ಇಹೈವ ಪ್ರಾಯಮಾಸಿಷ್ಯೇ ಶ್ರೇಯೋ ಮರಣಮೇವ ಮೇ ॥

ಅನುವಾದ

ನಾನು ಕಿಷ್ಕಿಂಧೆಗೆ ಹೋಗುವುದಿಲ್ಲ ಎಂದು ಪ್ರತಿಜ್ಞಾಪೂರ್ವಕ ನಿಮ್ಮಲ್ಲಿ ಹೇಳುತ್ತೇನೆ. ಇಲ್ಲೇ ಮರಣಾಂತ ಉಪವಾಸ ಮಾಡುವೆನು. ನಾನು ಸತ್ತುಹೋಗುವುದೇ ಒಳಿತಾಗಿದೆ.॥12॥

ಮೂಲಮ್ - 13

ಅಭಿವಾದನಪೂರ್ವಂ ತು ರಾಜಾ ಕುಶಲಮೇವ ಚ ।
ಅಭಿವಾದನಪೂರ್ವಂ ತು ರಾಘವೌ ಬಲಶಾಲಿನೌ ॥

ಅನುವಾದ

ನೀವು ರಾಜಾ ಸುಗ್ರೀವನಿಗೆ ಪ್ರಣಾಮಗೈದು ಅವನಲ್ಲಿ ನನ್ನ ಸಮಾಚಾರ ತಿಳಿಸಿರಿ. ತಮ್ಮ ಬಲದಿಂದ ಶೋಭಿಸುವ ರಘು ವಂಶೀ ಇಬ್ಬರೂ ಬಂಧುಗಳಿಗೂ ನನ್ನ ಸಾದರ ಪ್ರಣಾಮ ವನ್ನು ನಿವೇದಿಸುತ್ತಾ ಕ್ಷೇಮ ಸಮಾಚಾರ ತಿಳಿಸಿರಿ.॥13॥

ಮೂಲಮ್ - 14

ವಾಚ್ಯಸ್ತಾತೋ ಯವೀಯಾನ್ಮೇ ಸುಗ್ರೀವೋ ವಾನರೇಶ್ವರಃ ।
ಆರೋಗ್ಯಪೂರ್ವಂ ಕುಶಲಂ ವಾಚ್ಯಾ ಮಾತಾ ರುಮಾ ಚ ಮೇ ॥

ಅನುವಾದ

ನನ್ನ ಚಿಕ್ಕಪ್ಪ ವಾನರರಾಜ ಸುಗ್ರೀವ ಮತ್ತು ಮಾತೆ ರುಮೆಯಲ್ಲೂ ನನ್ನ ಆರೋಗ್ಯಪೂರ್ವಕ ಕ್ಷೇಮ ಸಮಾಚಾರ ತಿಳಿಸಿರಿ.॥14॥

ಮೂಲಮ್ - 15

ಮಾತರಂ ಚೈವ ಮೇ ತಾರಾಮಾಶ್ವಾಸಯಿತುಮರ್ಹಥ ।
ಪ್ರಕೃತ್ಯಾ ಪ್ರಿಯಪುತ್ರಾ ಸಾ ಸಾನುಕ್ರೋಶಾ ತಪಸ್ವಿನೀ ॥

ಅನುವಾದ

ನನ್ನ ತಾಯಿ ತಾರೆಗೂ ಧೈರ್ಯ ತುಂಬಿರಿ. ಆ ಬಡಪಾಯಿ ಸ್ವಭಾವದಿಂದಲೇ ದಯಾಳು ಮತ್ತು ಪುತ್ರನ ಮೇಲೆ ಪ್ರೇಮವನ್ನು ಇಡುವಳು.॥15॥

ಮೂಲಮ್ - 16½

ವಿನಷ್ಟಮಿಹ ಮಾಂ ಶ್ರುತ್ವಾವ್ಯಕ್ತಂ ಹಾಸ್ಯತಿ ಜೀವಿತಮ್ ।
ಏತಾವದುಕ್ತ್ವಾ ವಚನಂ ವೃದ್ಧಾಂಸ್ತಾನಭಿವಾದ್ಯ ಚ ॥
ವಿವೇಶ ಚಾಂಗದೋ ಭೂಮೌ ರುದನ್ ದರ್ಭೇಷು ದುರ್ಮನಾಃ ।

ಅನುವಾದ

ಇಲ್ಲಿ ನಾನು ನಷ್ಟವಾದ ಸಮಾಚಾರ ಕೇಳಿ ಅವಳು ನಿಶ್ಚಯವಾಗಿ ತನ್ನ ಪ್ರಾಣಗಳನ್ನು ಕಳೆದುಕೊಳ್ಳುವಳು. ಇಷ್ಟು ಹೇಳಿ ಅಂಗದನು ಆ ಎಲ್ಲ ವೃದ್ಧ ವಾನರರಿಗೆ ವಂದಿಸಿ, ನೆಲದಲ್ಲಿ ದರ್ಭೆ ಹಾಸಿ, ಉದಾಸನಾಗಿ, ಅಳುತ್ತಾ ಅವನು ಆಮರಣಾಂತ ಉಪವಾಸಕ್ಕಾಗಿ ಕುಳಿತುಬಿಟ್ಟನು.॥16॥

ಮೂಲಮ್ - 17

ತಸ್ಯ ಸಂವಿಶತಸ್ತತ್ರ ರುದಂತೋ ವಾನರರ್ಷಭಾಃ ॥

ಮೂಲಮ್ - 18½

ನಯನೇಭ್ಯಃ ಪ್ರಮುಮುಚುರುಷ್ಣಂ ವೈ ವಾರಿ ದುಃಖಿತಾಃ ।
ಸುಗ್ರೀವಂ ಚೈವ ನಿಂದಂತಃ ಪ್ರಶಂಸಂತಶ್ಚ ವಾಲಿನಮ್ ॥
ಪರಿವಾರ್ಯಾಂಗದಂ ಸರ್ವೇ ವ್ಯವಸನ್ಯಮಾಸಿತುಮ್ ।

ಅನುವಾದ

ಅವನು ಹೀಗೆ ಕುಳಿತುಕೊಂಡಾಗ ಎಲ್ಲ ವಾನರಶ್ರೇಷ್ಠರು ಅಳತೊಡಗಿದರು ಮತ್ತು ದುಃಖಿತರಾಗಿ ಕಣ್ಣುಗಳಿಂದ ಬಿಸಿಯಾದ ಕಂಬನಿಗಳನ್ನು ಸುರಿಸಿದರು. ಸುಗ್ರೀವನ ನಿಂದೆ ಮತ್ತು ವಾಲಿಯ ಪ್ರಶಂಸೆ ಮಾಡುತ್ತಾ ಅವರೆಲ್ಲರೂ ಅಂಗದ ನನ್ನು ಸುತ್ತುವರೆದು ಆಮರಣ ಉಪವಾಸ ಮಾಡಲು ನಿಶ್ಚಯಿಸಿದರು.॥17-18॥

ಮೂಲಮ್ - 19

ತದ್ ವಾಕ್ಯಂ ವಾಲಿಪುತ್ರಸ್ಯ ವಿಜ್ಞಾಯ ಪ್ಲವಗರ್ಷಭಾಃ ॥

ಮೂಲಮ್ - 20½

ಉಪಸ್ಪೃಶ್ಯೋದಕಂ ಸರ್ವೇ ಪ್ರಾಙ್ಮುಖಾಃ ಸಮುಪಾವಿಶನ್ ।
ದಕ್ಷಿಣಾಗ್ರೇಷು ದರ್ಭೇಷು ಉದಕ್ತೀರಂ ಸಮಾಶ್ರಿತಾಃ ॥
ಮುಮೂರ್ಷವೋ ಹರಿಶ್ರೇಷ್ಠಾ ಏತತ್ಕ್ಷಮಮಿತಿ ಸ್ಮ ಹ ।

ಅನುವಾದ

ವಾಲಿಕುಮಾರನ ಮಾತಿನಲ್ಲಿ ವಿಚಾರ ಮಾಡಿ ಆ ಶ್ರೇಷ್ಠ ವಾನರರು ಸಾಯುವುದೇ ಉಚಿತ ವೆಂದು ತಿಳಿದು, ಮೃತ್ಯುವಿನ ಇಚ್ಛೆಯಿಂದ ಆಚಮನ ಮಾಡಿ ಸಮುದ್ರದ ಉತ್ತರ ತೀರದಲ್ಲಿ ದಕ್ಷಿಣಾಗ್ರ ದರ್ಭೆಗಳನ್ನು ಹಾಸಿ ಅವರೆಲ್ಲರೂ ಪೂರ್ವಾಭಿಮುಖರಾಗಿ ಕುಳಿತುಬಿಟ್ಟರು.॥19-20॥

ಮೂಲಮ್ - 21

ರಾಮಸ್ಯ ವನವಾಸಂ ಚ ಕ್ಷಯಂ ದಶರಥಸ್ಯ ಚ ॥

ಮೂಲಮ್ - 22

ಜನಸ್ಥಾನವಧಂ ಚೈವ ವಧಂ ಚೈವ ಜಟಾಯುಷಃ ।
ಹರಣಂ ಚೈವ ವೈದೇಹ್ಯಾ ವಾಲಿನಶ್ಚ ವಧಂ ತಥಾ ।
ರಾಮಕೋಪಂ ಚ ವದತಾಂ ಹರೀಣಾಂ ಭಯಮಾಗತಮ್ ॥

ಅನುವಾದ

ಶ್ರೀರಾಮನ ವನವಾಸ, ರಾಜಾ ದಶರಥನ ಮೃತ್ಯು, ಜನಸ್ಥಾನದಲ್ಲಿ ರಾಕ್ಷಸರ ಸಂಹಾರ, ವೀದೇಹಕುಮಾರಿ ಸೀತೆಯ ಅಪಹರಣ, ಜಟಾಯುವಿನ ಮರಣ, ವಾಲಿಯ ವಧೆ ಮತ್ತು ಶ್ರೀರಾಮನ ಕ್ರೋಧದ ಕುರಿತು ಚರ್ಚಿಸುತ್ತಿರುವ ಆ ವಾನರರ ಮೇಲೆ ಒಂದು ಮತ್ತೊಂದು ಭಯ ಬಂದು ಬಿತ್ತು.॥21-22॥

ಮೂಲಮ್ - 23

ಸ ಸಂವಿಶ ವದದ್ಭಿರ್ಬಹುಭಿರ್ಮಹೀಧರೋ
ಮಹಾದ್ರಿಕೂಟಪ್ರತಿಮೈಃ ಪ್ಲವಂಗಮೈಃ ।
ಬಭೂವ ಸಂನಾದಿತನಿರ್ದರಾಂತರೋ
ಭೃಶಂ ನದದ್ಭಿರ್ಜಲದೈರಿವಾಂಬರಮ್ ॥

ಅನುವಾದ

ಮಹಾನ್ ಪರ್ವತ ಶಿಖರದಂತೆ ಶರೀರವಿದ್ದು, ಅಲ್ಲಿ ಕುಳಿತಿರುವ ಅಸಂಖ್ಯ ವಾನರರು ಭಯದಿಂದಾಗಿ ಜೋರು- ಜೋರಾಗಿ ಅಳತೊಡಗಿದರು, ಅದರಿಂದ ಆ ಪರ್ವತದ ಕಂದರಗಳು ಪ್ರತಿಧ್ವನಿಸಿದವು ಹಾಗೂ ಗರ್ಜಿಸುವ ಮೇಘಗಳಿಂದ ಕೂಡಿದ ಆಕಾಶದಂತೆ ಕಂಡು ಬಂದವು.॥23॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಐವತ್ತೈದನೆಯ ಸರ್ಗ ಸಂಪೂರ್ಣವಾಯಿತು.॥55॥