०५४ हनुमता-अङ्गदोपदेशः

वाचनम्
ಭಾಗಸೂಚನಾ

ಹನುಮಂತನು ಭೇದ ನೀತಿಯ ಮೂಲಕ ವಾನರರನ್ನು ತನ್ನ ಕಡೆಗೆ ಸೆಳೆದುಕೊಂಡು ಅಂಗದನನ್ನು ಸಮಾಧಾನಪಡಿಸಿದುದು

ಮೂಲಮ್ - 1

ತಥಾ ಬ್ರುವತಿ ತಾರೇ ತು ತಾರಾಧಿಪತಿವರ್ಚಸಿ ।
ಅಥ ಮೇನೇ ಹೃತಂ ರಾಜ್ಯಂ ಹನುಮಾನಂಗದೇನ ತತ್ ॥

ಅನುವಾದ

ತಾರಾಧಿಪನಾದ ಚಂದ್ರನಂತೆ ತೇಜಸ್ವಿಯಾಗಿದ್ದ ತಾರನು ಅಂಗದನಿಗೆ ಅನುಕೂಲಕರವಾದ ಮಾತನ್ನು ಹೇಳಲು ಅಂಗದನು ಕಪಿರಾಜ್ಯವನ್ನು ಇಷ್ಟರವರೆಗೆ ಸುಗ್ರೀವನ ಅಧಿಕಾರದಲ್ಲಿದ್ದ ಸುಗ್ರೀವನಿಂದ ಅಪಹರಿಸಿಬಿಟ್ಟನೆಂದೇ ಹನುಮಂತನು ಭಾವಿಸಿದನು. (ಈ ರೀತಿ ವಾನರರಲ್ಲಿ ಮತಭೇದ ಉಂಟಾಗಿ ಅನೇಕ ವಾನರರು ಅಂಗದನಿಗೆ ಸಹಾಯಕರರಾಗುವರು ಮತ್ತು ಬಲವಂತ ಅಂಗದನು ಸುಗ್ರೀವನ್ನು ವಂಚಿಸಿ ರಾಜ್ಯವನ್ನು ಕಸಿದುಕೊಳ್ಳುವನು..॥1॥

ಮೂಲಮ್ - 2

ಬುದ್ಧ್ಯಾ ಹ್ಯಷ್ಟಾಂಗಯಾ ಯುಕ್ತಂ ಚತುರ್ಬಲಸಮನ್ವಿತಮ್ ।
ಚತುರ್ದಶಗುಣಂ ಮೇನೇ ಹನುಮಾನ್ವಾಲಿನಃ ಸುತಮ್ ॥

ಅನುವಾದ

ವಾಲಿಕುಮಾರ ಅಂಗದನು ಎಂಟು1 ಗುಣವುಳ್ಳ ಬುದ್ಧಿಯಿಂದ, ನಾಲ್ಕು2 ರೀತಿಯ ಬಲದಿಂದ, ಹದಿನಾಲ್ಕು3 ಗುಣಗಳಿಂದ ಸಂಪನ್ನನಾಗಿರುವುದು ಹನುಮಂತನು ಚೆನ್ನಾಗಿ ತಿಳಿದಿದ್ದನು.॥2॥

ಟಿಪ್ಪನೀ

(1) ಬುದ್ಧಿಯ ಎಂಟು ಗುಣಗಳು - ಕೇಳುವ ಇಚ್ಛೆ, ಕೇಳಿ ತಿಳಿದುಕೊಳ್ಳುವುದು, ಗ್ರಹಿಸಿ ಧರಿಸುವುದು, ಊಹಾಪೋಹ ಮಾಡುವುದು, ಅರ್ಥ ಅಥವಾ ತಾತ್ಪರ್ಯವನ್ನು ಚೆನ್ನಾಗಿ ತಿಳಿಯುವುದು, ತತ್ತ್ವಜ್ಞಾನದಿಂದ ಸಂಪನ್ನನಾಗುವುದು.
(2) ಚತುರ್ಬಲಗಳು - ಬಾಹುಬಲ, ಮನೋಬಲ, ಉಪಾಯಬಲ ಮತ್ತು ಬಂಧುಬಲ. ಸಾಮ, ದಾನ, ಭೇದ, ದಂಡ ಇವು ನಾಲ್ಕು ಉಪಾಯಗಳು
(3) ಈ ಹದಿನಾಲ್ಕು ಗುಣಗಳನ್ನು ಹೀಗೆ ಹೇಳುತ್ತಾರೆ - ದೇಶಕಾಲದ ಜ್ಞಾನ, ದೃಢತೆ, ಎಲ್ಲ ಪ್ರಕಾರದ ಕ್ಲೇಶಗಳನ್ನು ಸಹಿಸುವುದು, ಎಲ್ಲ ವಿಷಯಗಳ ಜ್ಞಾನ, ಚತುರತೆ, ಉತ್ಸಾಹ ಅಥವಾ ಬಲ, ಮಂತ್ರಾಲೋಚನೆ ಗುಪ್ತವಾಗಿರಿಸುವುದು, ಪರಸ್ಪರ ಮಾತುಗಳನ್ನು ಆಡದಿರುವುದು, ಶೌರ್ಯ, ತನ್ನ ಮತ್ತು ಶತ್ರುವಿನ ಶಕ್ತಿಯ ಜ್ಞಾನ, ಕೃತಜ್ಞತೆ, ಶರಣಾಗತ ವತ್ಸಲತೆ, ಅಮರ್ಷಶೀತತೆ ಮತ್ತು ಅಚಂಚಲತೆ (ಸ್ಥಿರತೆ ಅಥವಾ ಗಂಭೀರತೆ)

ಮೂಲಮ್ - 3

ಆಪೂರ್ಯಮಾಣಂ ಶಶ್ವಚ್ಚ ತೇಜೋಬಲಪರಾಕ್ರಮೈಃ ।
ಶಶಿನಂ ಶುಕ್ಲಪಕ್ಷಾದೌ ವರ್ಧಮಾನಮಿವ ಶ್ರಿಯಾ ॥

ಅನುವಾದ

ಇವನು ತೇಜ, ಬಲ, ಪರಾಕ್ರಮದಿಂದ ಸದಾ ಪರಿಪೂರ್ಣವಾಗಿರುತ್ತಾನೆ. ಶುಕ್ಲಪಕ್ಷದ ಚಂದ್ರನಂತೆ ರಾಜಕುಮಾರ ಅಂಗದನ ಶ್ರೀಯು ದಿನೇದಿನೇ ಹೆಚ್ಚುತ್ತಾ ಇರುತ್ತದೆ.॥3॥

ಮೂಲಮ್ - 4

ಬೃಹಸ್ಪತಿಸಮಂ ಬುದ್ಧ್ಯಾ ವಿಕ್ರಮೇ ಸದೃಶಂ ಪಿತುಃ ।
ಶುಶ್ರೂಷಮಾಣಂ ತಾರಸ್ಯ ಶುಕ್ರಸ್ಯೇನ ಪುರಂದರಮ್ ॥

ಅನುವಾದ

ಇವನು ಬುದ್ಧಿಯಲ್ಲಿ ಬೃಹಸ್ಪತಿಯಂತೇ, ಪರಾಕ್ರಮದಲ್ಲಿ ತನ್ನ ತಂದೆ ವಾಲಿಗೆ ಸಮಾನನಾಗಿದ್ದಾನೆ. ದೇವೇಂದ್ರನು ಬೃಹಸ್ಪತಿಯಿಂದ ನೀತಿಯ ಮಾತನ್ನು ಕೇಳುವಂತೆಯೇ ಅಂಗದನು ತಾರನ ಮಾತನ್ನು ಕೇಳುತ್ತಾನೆ.॥4॥

ಮೂಲಮ್ - 5

ಭರ್ತುರರ್ಥೇ ಪರಿಶ್ರಾಂತಂ ಸರ್ವಶಾಸ್ತ್ರವಿಶಾರದಃ ।
ಅಭಿಸಂಧಾತುಮಾರೇಭೇ ಹನುಮಾನಂಗದಂ ತತಃ ॥

ಅನುವಾದ

ತನ್ನ ಸ್ವಾಮಿ ಸುಗ್ರೀವನ ಕಾರ್ಯ ನಿರ್ವಹಿಸಲು ಬಹಳ ಶ್ರಮಿಸಿ ಬಳಲಿಹೋಗಿದ್ದ ಅಂಗದನನ್ನು ಸರ್ವಶಾಸ್ತ್ರವಿಶಾರದ ಹನುಮಂತನು ಸಮಾಧಾನಗೊಳಿಸಲು ಉಪಕ್ರಮಿಸಿದನು.॥5॥

ಮೂಲಮ್ - 6

ಸ ಚತುರ್ಣಾಮುಪಾಯಾನಾಂ ತೃತೀಯಮುಪವರ್ಣಯನ್ ।
ಭೇದಯಾಮಾಸ ತಾನ್ಸರ್ವಾನ್ವಾನರಾನ್ವಾಕ್ಯಸಂಪದಾ ॥

ಅನುವಾದ

ಸಾಮ, ದಾನ, ಭೇದ, ದಂಡ - ಈ ನಾಲ್ಕು ಉಪಾಯಗಳಲ್ಲಿ ಮೂರನೆಯದಾದ ಭೇದೋ ಪಾಯವನ್ನಾಶ್ರಯಿಸಿ ತನ್ನ ಮಾತಿನ ಮೋಡಿಯಿಂದ ವಾನರ ಸಮೂಹದಲ್ಲಿ ಅಭಿಪ್ರಾಯ ಭೇದವನ್ನು ಕಲ್ಪಿಸಿದನು.॥6॥

ಮೂಲಮ್ - 7

ತೇಷು ಸರ್ವೇಷು ಭಿನ್ನೇಷು ತತೋಽಭಿಷಯದಂಗದಮ್ ।
ಭೀಷಣೈರ್ವಿವಿಧೈರ್ವಾಕ್ಯೈಃ ಕೋಪೋಪಾಯಸಮನ್ವಿತೈಃ ॥

ಅನುವಾದ

ಆ ಎಲ್ಲ ವಾನರರಲ್ಲಿ ಭೇದವುಂಟಾದಾಗ ಅವನು ದಂಡೋಪಾಯದಿಂದ ಕೂಡಿದ ನಾನಾ ಪ್ರಕಾರದ ಭಯದಾಯಕ ಮಾತುಗಳಿಂದ ಅಂಗದನನ್ನು ಹೆದರಿಸಲು ಪ್ರಾರಂಭಿಸಿದನು.॥7॥

ಮೂಲಮ್ - 8

ತ್ವಂ ಸಮರ್ಥತರಃ ಪಿತ್ರಾ ಯುದ್ದೇ ತಾರೇಯವೈ ಧುವಮ್ ।
ದೃಢಂ ಧಾರಯಿತುಂ ಶಕ್ತಃ ಕಪಿರಾಜ್ಯಂ ಯಥಾ ಪಿತಾ ॥

ಅನುವಾದ

ತಾರಾನಂದನನೇ! ನೀನು ಯುದ್ಧದಲ್ಲಿ ನಿನ್ನ ತಂದೆಯಂತೆ ಅತ್ಯಂತ ಶಕ್ತಿಶಾಲಿಯಾಗಿರುವುದು ನಿಶ್ಚಿತವಾಗಿ ಎಲ್ಲರಿಗೂ ವಿದಿತವಾಗಿದೆ. ನಿನ್ನ ತಂದೆಯು ವಾನರರಾಜ್ಯವನ್ನು ಆಳುವಂತೆಯೇ ನೀನು ಅದನ್ನು ದೃಢತೆಯಿಂದ ಧರಿಸಲು ಸಮರ್ಥನಾಗಿರುವೆ.॥8॥

ಮೂಲಮ್ - 9

ನಿತ್ಯಮಸ್ತಿರಚಿತ್ತಾ ಹಿ ಕಪಯೋ ಹರಿಪುಂಗವ ।
ನಾಜ್ಞಾಪ್ಯಂ ವಿಷಹಿಷ್ಯಂತಿ ಪುತ್ರದಾರಂ ವಿನಾ ತ್ವಯಾ ॥

ಅನುವಾದ

ಆದರೆ ವಾನರಶ್ರೇಷ್ಠನೇ! ಈ ಕಪಿಗಳು ಸದಾ ಚಂಚಲರಾಗಿರುತ್ತಾರೆ. ತಮ್ಮ ಪತ್ನೀ ಪುತ್ರರಿಂದ ಅಗಲಿ ಇದ್ದು, ನಿನ್ನ ಆಜ್ಞೆಯನ್ನು ಪಾಲಿಸುವುದು ಇವರಿಂದ ಸಹಿಸಲಾಗದು.॥9॥

ಮೂಲಮ್ - 10

ತ್ವಾಂ ನೈತೇ ಹ್ಯನುರಂಜೇಯುಃ ಪ್ರತ್ಯಕ್ಷಂ ಪ್ರವದಾಮಿ ತೇ ।
ಯಥಾಯಂ ಜಾಂಬವಾನ್ನೀಲಃ ಸುಹೋತ್ರಶ್ಚ ಮಹಾಕಪಿಃ ॥

ಮೂಲಮ್ - 11

ನಹ್ಯಹಂ ತೇ ಇಮೇ ಸರ್ವೇ ಸಾಮದಾನಾದಿಭಿಗುಣೈಃ ।
ದಂಡೇನ ನ ತ್ವಯಾ ಶಕ್ಯಾಃ ಸುಗ್ರೀವಾದಪಕರ್ಷಿತುಮ್ ॥

ಅನುವಾದ

ನಾನು ನಿನ್ನಲ್ಲಿ ಹೇಳುತ್ತೇನೆ - ಇವರು ಯಾರೂ ವಾನರರು ಸುಗ್ರೀವನೊಂದಿಗೆ ವಿರೋಧ ಕಟ್ಟಿಕೊಂಡು ನಿನ್ನ ಕುರಿತು ಅನುರಕ್ತರು ಆಗಲಾರರು. ಈ ಜಾಂಬವಂತ, ನೀಲ, ಮಹಾಕಪಿ ಸುಹೋತ್ರ ಇರುವಂತೆಯೇ ನಾನೂ ಆಗಿದ್ದೇನೆ. ನನ್ನನ್ನು ಹಾಗೂ ಇವರೆಲ್ಲರನ್ನು ಸಾಮ, ದಾನಾದಿ ಉಪಾಯ ಗಳಿಂದ ಸುಗ್ರೀವನಿಂದ ಆಗಲಿಸಲಾಗದು. ನೀನು ದಂಡದ ಮೂಲಕವೂ ನಮ್ಮೆಲ್ಲರನ್ನು ವಾನರ ರಾಜನಿಂದ ದೂರಗೊಳಿ ಸುವುದೂ ಸಂಭವವಿಲ್ಲ. (ಆದ್ದರಿಂದ ಸುಗ್ರೀವನು ನಿನಗಿಂತ ಹೆಚ್ಚು ಪ್ರಬಲನಾಗಿದ್ದಾನೆ..॥10-11॥

ಮೂಲಮ್ - 12

ವಿಗೃಹ್ಯಾಸನಮಪ್ಯಾಹುರ್ದುರ್ಬಲೇನ ಬಲೀಯಸಾ ।
ಆತ್ಮರಕ್ಷಾಕರಸ್ತಸ್ಮಾನ್ನ ವಿಗೃಹ್ಣೀತ ದುರ್ಬಲಃ ॥

ಅನುವಾದ

ದುರ್ಬಲನೊಂದಿಗೆ ವಿರೋಧ ಕಟ್ಟಿಕೊಂಡು ಬಲವಂತ ಪುರುಷನು ಸುಮ್ಮನೆ ಕುಳಿತುಕೊಳ್ಳಬಲ್ಲನು, ಆದರೆ ಬಲವಂತನೊಡನೆ ವೈರ ಕಟ್ಟಿಕೊಂಡ ಯಾವನೇ ದುರ್ಬಲ ಪುರುಷನು ಎಲ್ಲಿಯೂ ಸುಖವಾಗಿ ಇರಲಾರನು. ಆದ್ದರಿಂದ ತನ್ನ ರಕ್ಷಣೆ ಬಯಸುವ ದುರ್ಬಲ ಪುರುಷನು ಬಲವಂತನೊಂದಿಗೆ ದ್ವೇಷ ಕಟ್ಟಿಕೊಳ್ಳಬಾರದು ಎಂದು ನೀತಿಜ್ಞ ಜನರು ಹೇಳುತ್ತಾರೆ.॥12॥

ಮೂಲಮ್ - 13

ಯಾಂ ಚೇಮಾಂ ಮನ್ಯಸೇ ಧಾತ್ರೀಮೇತದ್ಬಿಲಮಿತಿ ಶ್ರುತಮ್ ।
ಏತಲ್ಲಕ್ಷ್ಮಣಬಾಣಾನಾಮೀಷತ್ಕಾರ್ಯಂ ವಿದಾರಣಮ್ ॥

ಅನುವಾದ

ಈ ಗುಹೆಯು ನಮಗೆ ತಾಯಿಯಂತೆ ಮಡಿಲಲ್ಲಿ ಅಡಗಿಸಿಕೊಂಡೀತು, ಇದರಿಂದ ನಮ್ಮ ರಕ್ಷಣೆಯಾಗಬಹುದು, ಹಾಗೂ ಬಿಲವು ಅಭೇದ್ಯವೆಂದು ನೀನು ತಾರನ ಮುಖದಿಂದ ಕೇಳಿ ತಿಳಿದುದು ಎಲ್ಲವೂ ವ್ಯರ್ಥವಾಗಿದೆ. ಏಕೆಂದರೆ ಈ ಗುಹೆಯನ್ನು ಲಕ್ಷ್ಮಣನಿಗೆ ತನ್ನ ಬಾಣದಿಂದ ವಿದೀರ್ಣಗೊಳಿಸುವುದು ಎಡಕೈಯ ಆಟವಾಗಿದೆ.॥13॥

ಮೂಲಮ್ - 14

ಸ್ವಲ್ಪಂ ಹಿ ಕೃತಮಿಂದ್ರೇಣ ಕ್ಷಿಪತಾ ಹ್ಯಶನಿಂ ಪುರಾ ।
ಲಕ್ಷ್ಮಣೋ ನಿಶಿತೈರ್ಬಾಣೈರ್ಭಿಂದಯಾತ್ ಪತ್ರಪುಟಂ ಯಥಾ ॥

ಅನುವಾದ

ಹಿಂದೆ ಇಲ್ಲಿ ವಜ್ರದ ಪ್ರಹಾರದಿಂದ ಇಂದ್ರನು ಈ ಗುಹೆಯನ್ನು ಸ್ವಲ್ಪ ಹಾಳುಗೆಡಹಿದ್ದನು; ಆದರೆ ಲಕ್ಷ್ಮಣನು ತನ್ನ ಹರಿತ ಬಾಳಗಳಿಂದ ಎಲೆಯ ದೊನ್ನೆಯಂತೆ ನಾಶಮಾಡಬಲ್ಲನು.॥14॥

ಮೂಲಮ್ - 15

ಲಕ್ಷ್ಮಣಸ್ಯ ತು ನಾರಾಚಾ ಬಹವಃ ಸಂತಿ ತದ್ವಿಧಾಃ ।
ವಜ್ರಾಶನಿಸಮಸ್ಪರ್ಶಾ ಗಿರೀಣಾಮಪಿ ದಾರಕಾಃ ॥

ಅನುವಾದ

ಲಕ್ಷ್ಮಣನ ಬಳಿ ಇರುವ ಬಾಣಗಳ ಅಲ್ಪ ಸ್ಪರ್ಶವೂ ವಜ್ರ ಮತ್ತು ವಿದ್ಯುತ್ತಿನಂತೆ ಏಟು ಕೊಡುವುದಿದ್ದು, ಆ ನಾರಾಚಗಳು ಪರ್ವತಗಳನ್ನು ವಿದೀರ್ಣಗೊಳಸಬಲ್ಲವು.॥15॥

ಮೂಲಮ್ - 16

ಅವಸ್ಥಾನಂ ಯದೈವ ತ್ವಮಾಸಿಷ್ಯಸಿ ಪರಂತಪ ।
ತದೈವ ಹರಯಃ ಸರ್ವೇ ತ್ಯಕ್ಷ್ಯಂತಿ ಕೃತನಿಶ್ಚಯಾಃ ॥

ಅನುವಾದ

ಪರಂತಪ ವೀರನೇ! ನೀನು ಈ ಗುಹೆಯಲ್ಲಿ ವಾಸಿಸಲು ಪ್ರಾರಂಭಿಸುತ್ತಿದ್ದಂತೆ ಇವೆಲ್ಲ ವಾನರರು ನಿನ್ನನ್ನು ತ್ಯಜಿಸುವರು; ಏಕೆಂದರೆ ಹೀಗೆ ಮಾಡಲು ಇವರು ನಿಶ್ಚಯಿಸಿರುವರು.॥16॥

ಮೂಲಮ್ - 17

ಸ್ಮರಂತಃ ಪುತ್ರದಾರಾಣಾಂ ನಿತ್ಯೋದ್ವಿಗ್ನಾ ಬುಭುಕ್ಷಿತಾಃ ।
ಖೇದಿತಾ ದುಃಖಶಯ್ಯಾಭಿಸ್ತ್ವಾಂ ಕರಿಷ್ಯಂತಿ ಪೃಷ್ಠತಃ ॥

ಅನುವಾದ

ಇವರು ತಮ್ಮ ಮಕ್ಕಳು - ಮರಿಗಳನ್ನು ನೆನೆದು ಸದಾ ಉದ್ವಿಗ್ನರಾಗುವರು. ಇಲ್ಲಿ ಇವರಿಗೆ ಹಸಿವಿನ ಕಷ್ಟವಾದಾಗ ಮತ್ತು ದುಃಖಕರ ಶಯ್ಯೆಯಲ್ಲಿ ಮಲಗುವ ದುರವಸ್ಥೆಯಿಂದ ಮನಸ್ಸಿನಲ್ಲಿ ಖೇದಗೊಂಡಾಗ, ಇವರು ನಿನ್ನನ್ನು ಬಿಟ್ಟು ಹೊರಟುಹೋಗುವರು.॥17॥

ಮೂಲಮ್ - 18

ಸ ತ್ವಂ ಹೀನಃ ಸುಹೃದ್ಭಿಶ್ಚ ಹಿತಕಾಮೈಶ್ಚ ಬಂಧುಭಿಃ ।
ತೃಣಾದಪಿ ಭೃಶೋದ್ವಿಗ್ನಃ ಸ್ಪಂದಮಾನಾದ್ಭವಿಷ್ಯಸಿ ॥

ಅನುವಾದ

ಇಂತಹ ಸ್ಥಿತಿಯಲ್ಲಿ ನೀನು ಹಿತೈಷಿ ಬಂಧುಗಳ, ಸುಹೃದರ ಸಹಯೋಗದಿಂದ ವಂಚಿತನಾಗಿ ತೃಣದಂತೆ ತುಚ್ಛನಾಗುವೆ ಮತ್ತು ಸದಾ ಹೆಚ್ಚು ಹೆದರುತ್ತಾ ಇರುವೆ.॥18॥

ಮೂಲಮ್ - 19

ನ ಚ ಜಾತು ನ ಹಿಂಸ್ಯುಸ್ತ್ವಾಂ ಘೋರಾ ಲಕ್ಷ್ಮಣಸಾಯಕಾಃ ।
ಅಪವೃತ್ತಂ ಜಿಘಾಂಸಂತೋ ಮಹಾವೇಗಾ ದುರಾಸದಾಃ ॥

ಅನುವಾದ

ಲಕ್ಷ್ಮಣನ ಬಾಣಗಳು ಘೋರ, ಮಹಾವೇಗಶಾಲಿ ಮತ್ತು ದುರ್ಜಯವಾಗಿವೆ. ಶ್ರೀರಾಮನ ಕಾರ್ಯದಿಂದ ವಿಮುಖನಾದಾಗ ನಿನ್ನನ್ನು ಅವನು ಕೊಲ್ಲದೆ ಇರಲಾರನು.॥19॥

ಮೂಲಮ್ - 20

ಅಸ್ಮಾಭಿಸ್ತು ಗತಂ ಸಾರ್ಧಂ ವಿನೀತವದುಪಸ್ಥಿತಮ್ ।
ಆನುಪೂರ್ವ್ಯಾತ್ತು ಸುಗ್ರೀವೋ ರಾಜ್ಯೇ ತ್ವಾಂ ಸ್ಥಾಪಯಿಷ್ಯತಿ ॥

ಅನುವಾದ

ನಮ್ಮೊಂದಿಗೆ ಹೊರಟು ನೀನು ವಿನೀತ ಪುರುಷನಂತೆ ಅವನ ಸೇವೆಯಲ್ಲಿ ಉಪಸ್ಥಿತನಾದಾಗ ಸುಗ್ರೀವನು ಕ್ರಮವಾಗಿ ತನ್ನ ಬಳಿಕ ನಿನಗೇ ರಾಜ್ಯವನ್ನು ಕೊಡುವನು.॥20॥

ಮೂಲಮ್ - 21

ಧರ್ಮರಾಜಃ ಪಿತೃವ್ಯಸ್ತೇ ಪ್ರೀತಿಕಾಮೋ ದೃಢವ್ರತಃ ।
ಶುಚಿಃ ಸತ್ಯಪ್ರತಿಜ್ಞಶ್ಚ ಸ ತ್ವಾಂ ಜಾತು ನ ನಾಶಯೇತ್ ॥

ಅನುವಾದ

ನಿನ್ನ ಚಿಕ್ಕಪ್ಪ ಸುಗ್ರೀವನು ಧರ್ಮಮಾರ್ಗದಲ್ಲಿ ನಡೆಯುವ ರಾಜನಾಗಿದ್ದಾನೆ. ಅವನು ಸದಾ ನಿನ್ನ ಸಂತೋಷವನ್ನು ಬಯಸುವ, ದೃಢವ್ರತ, ಪವಿತ್ರ ಮತ್ತು ಸತ್ಯಪ್ರತಿಜ್ಞನಾಗಿದ್ದಾನೆ. ಆದ್ದರಿಂದ ಎಂದಿಗೂ ನಿನ್ನ ನಾಶ ಮಾಡಲಾರನು.॥21॥

ಮೂಲಮ್ - 22

ಪ್ರಿಯಕಾಮಶ್ಚ ತೇ ಮಾತುಸ್ತದರ್ಥಂ ಚಾಸ್ಯ ಜೀವಿತಮ್ ।
ತಸ್ಯಾಪತ್ಯಂ ಚ ನಾಸ್ತ್ಯನ್ಯತ್ ತಸ್ಮಾದಂಗದ ಗಮ್ಯತಾಮ್ ॥

ಅನುವಾದ

ಅಂಗದ! ಅವನ ಮನಸ್ಸಿನಲ್ಲಿ ನಿನ್ನ ತಾಯಿಯ ಪ್ರಿಯವನ್ನು ಮಾಡುವ ಇಚ್ಛೆ ಇರುತ್ತದೆ. ಆಕೆಯ ಪ್ರಸನ್ನತೆಗಾಗಿಯೇ ಅವನು ಬದುಕಿರುವನು. ಸುಗ್ರೀವನಿಗೆ ನೀನಲ್ಲದೆ ಬೇರೆ ಪುತ್ರನಿಲ್ಲ, ಅದಕ್ಕಾಗಿ ನೀನು ಅವನ ಬಳಿಗೆ ಹೋಗಬೇಕು.॥22॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಐವತ್ತನಾಲ್ಕನೆಯ ಸರ್ಗ ಸಂಪೂರ್ಣವಾಯಿತು.॥54॥