०५३ प्रायोपवेशनिश्चयः

वाचनम्
ಭಾಗಸೂಚನಾ

ಅವಧಿಯು ಮುಗಿದು ಹೋದರೂ ಕಾರ್ಯಸಿದ್ಧಿಯಾಗದಿರಲು ಸುಗ್ರೀವನ ದಂಡನೆಗೆ ಹೆದರಿದ ಅಂಗದಾದಿಗಳು ಪ್ರಾಯೋಪವೇಶ ಮಾಡಲು ನಿಶ್ಚಯಿಸಿದುದು

ಮೂಲಮ್ - 1

ತತಸ್ತೇ ದದೃಶುರ್ಘೋರಂ ಸಾಗರಂ ವರುಣಾಲಯಮ್ ।
ಅಪಾರಮಭಿಗರ್ಜಂತಂ ಘೋರೈರೂರ್ಮಿಭಿರಾಕುಲಮ್ ॥

ಅನುವಾದ

ಬಳಿಕ ಆ ಶ್ರೇಷ್ಠವಾನರರು ವರುಣನ ಆಲಯವಾದ, ಮಹಾಘೋರವಾಗಿ ಕಾಣುತ್ತಿದ್ದ, ಅಪಾರವಾಗಿದ್ದ, ಭೀಕರವಾಗಿ ಗರ್ಜಿಸುವ, ಭಯಂಕರವಾದ ಅಲೆಗಳಿಂದ ಕೂಡಿದ ಮಹಾ ಸಮುದ್ರವನ್ನು ನೋಡಿದರು.॥1॥

ಮೂಲಮ್ - 2

ಮಯಸ್ಯ ಮಾಯಾವಿಹಿತಂ ಗಿರಿದುರ್ಗಂ ವಿಚಿನ್ವತಾಮ್ ।
ತೇಷಾಂ ಮಾಸೋ ವ್ಯತಿಕ್ರಾಂತೋ ಯೋ ರಾಜ್ಞಾ ಸಮಯಃ ಕೃತಃ ॥

ಅನುವಾದ

ಮಯಾಸುರನು ಮಾಯೆಯಿಂದ ನಿರ್ಮಿಸಿದ ಪರ್ವತದ ದುರ್ಗಮ ಗುಹೆಯಲ್ಲಿ ವಾನರರು ಸೀತೆಯನ್ನು ಹುಡುಕುತ್ತಾ ಸುಗ್ರೀವ ರಾಜನು ಮರಳಲು ನಿಶ್ಚಿತ ಪಡಿಸಿದ ಒಂದು ತಿಂಗಳ ಅವಧಿ ಕಳೆದುಹೋಯಿತು.॥2॥

ಮೂಲಮ್ - 3

ವಿಂಧ್ಯಸ್ಯ ತು ಗಿರೇಃ ಪಾದೇ ಸಂಪ್ರಪುಷ್ಪಿತಪಾದಪೇ ।
ಉಪವಿಶ್ಯ ಮಹಾತ್ಮಾನಶ್ಚಿಂತಾಮಾಪೇದಿರೇ ತದಾ ॥

ಅನುವಾದ

ವಿಂಧ್ಯಗಿರಿಯ ಪಕ್ಕದ ಹೂವುಗಳಿಂದ ತುಂಬಿದ ವೃಕ್ಷಗಳುಳ್ಳ ಪರ್ವತದ ಮೇಲೆ ಕುಳಿತು ಆ ಎಲ್ಲ ಮಹಾತ್ಮಾ ವಾನರರು ಚಿಂತಿಸತೊಡಗಿದರು.॥3॥

ಮೂಲಮ್ - 4

ತತಃ ಪುಷ್ಪಾತಿಭಾರಾಗ್ರಾನ್ ಲ್ಲತಾಶತಸಮಾವೃತಾನ್ ।
ದ್ರುಮಾನ್ವಾಸಂತಿಕಾನ್ದೃಷ್ಟ್ವಾ ಬಭೂವುರ್ಭಯಶಂಕಿತಾಃ ॥

ಅನುವಾದ

ವಸಂತ ಋತುವಿನಲ್ಲಿ ಫಲ ಕೊಡುವ ಮಾವು ಮೊದಲಾದ ವೃಕ್ಷಗಳ ಕೊಂಬೆಗಳು ಹೂವುಗಳ ಭಾರದಿಂದ ಬಾಗಿದ, ನೂರಾರು ಲತೆಗಳಿಂದ ವ್ಯಾಪ್ತವಾದುದನ್ನು ನೋಡಿ ಅವರೆಲ್ಲರೂ ಸುಗ್ರೀವನ ಭಯದಿಂದ ನಡುಗಿ ಹೋದರು. (ಅವರು ಶರದ್ಋತುವಿನಲ್ಲಿ ಹೊರಟಿದ್ದರು, ಈಗ ಶಿಶಿರ ಋತು ಬಂದಿತ್ತು. ಅದರಿಂದ ಅವರ ಭಯವು ಹೆಚ್ಚಾಯಿತು..॥4॥

ಮೂಲಮ್ - 5

ತೇ ವಸಂತಮನುಪ್ರಾಪ್ತಂ ಪ್ರತಿವೇದ್ಯ ಪರಸ್ಪರಮ್ ।
ನಷ್ಟ ಸಂದೇಶಕಾಲಾರ್ಥಾ ನಿಪೇತುರ್ಧರಣೀತಲೇ ॥

ಅನುವಾದ

ಈಗ ವಸಂತ ಕಾಲ ಬರುವುದಿದೆ ಎಂದು ಒಬ್ಬರು ಮತ್ತೊಬ್ಬರಲ್ಲಿ ಹೇಳುತ್ತಾ ರಾಜನ ಆದೇಶಕ್ಕನುಸಾರ ಒಂದು ತಿಂಗಳೊಳಗೆ ಮಾಡಬೇಕಾಗಿದ್ದ ಕಾರ್ಯ ಮಾಡಲಾಗ ದಿದ್ದುದರಿಂದ, ನಾಶವಾಗುವ ಭಯದಿಂದ ನೆಲಕ್ಕೆ ಕುಸಿದುಬಿದ್ದರು.॥5॥

ಮೂಲಮ್ - 6

ತತಸ್ತಾನ್ಕಪಿವೃದ್ಧಾಂಶ್ಚ ಶಿಷ್ಟಾಂಶ್ಚೈವ ವನೌಕಸಃ ।
ವಾಚಾ ಮಧುರಯಾಽಽಭಾಷ್ಯ ಯಥಾವದನುಮಾನ್ಯ ಚ ॥

ಮೂಲಮ್ - 7

ಸ ತು ಸಿಂಹವೃಷಸ್ಕಂಧಃ ಪೀನಾಯತಭುಜಃ ಕಪಿಃ ।
ಯುವರಾಜೋ ಮಹಾಪ್ರಾಜ್ಞ ಅಂಗದೋ ವಾಕ್ಯಮಬ್ರವೀತ್ ॥

ಅನುವಾದ

ಸಿಂಹದಂತೆ ಹೆಗಲುಳ್ಳ, ಎತ್ತಿನಂತೆ ಪುಷ್ಟವಾದ ದೊಡ್ಡ-ದೊಡ್ಡ ಹಾಗೂ ದಪ್ಪವಾದ ಭುಜಗಳುಳ್ಳ, ಬುದ್ಧಿವಂತನಾದ ಯುವರಾಜ ಅಂಗದನು ಆ ಶ್ರೇಷ್ಠ ವಾನರರಿಗೆ ಮತ್ತು ಇತರ ವನವಾಸೀ ಕಪಿಗಳಿಗೆ ಯಥಾವತ್ ಸಮ್ಮಾನ ಕೊಡುತ್ತಾ ಮಧುರವಾಣಿಯಿಂದ ಸಂಬೋಧಿಸಿ ನುಡಿದನು.॥6-7॥

ಮೂಲಮ್ - 8

ಶಾಸನಾತ್ ಕಪಿರಾಜಸ್ಯ ವಯಂ ಸರ್ವೇ ವಿನಿರ್ಗತಾಃ ।
ಮಾಸಂ ಪೂರ್ಣೋ ಬಿಲಸ್ಥಾನಾಂ ಹರಯಃ ಕಿಂ ನ ಬುಧ್ಯತೇ ॥

ಮೂಲಮ್ - 9

ವಯಮಾಶ್ವಯುಜೇ ಮಾಸಿ ಕಾಲಸಂಖ್ಯಾವ್ಯವಸ್ಥಿತಾಃ ।
ಪ್ರಸ್ಥಿತಾಃ ಸೋಽಪಿಚಾತೀತಃ ಕಿಮತಃ ಕಾರ್ಯಮುತ್ತರಮ್ ॥

ಅನುವಾದ

ವಾನರರೇ! ನಾವೆಲ್ಲರೂ ವಾನರರಾಜನ ಆಜ್ಞೆಯಂತೆ ಆಶ್ವೀನಮಾಸ ಕಳೆಯುತ್ತಿದ್ದಂತೆ ಒಂದು ತಿಂಗಳ ಅವಧಿಯನ್ನು ಸ್ವೀಕರಿಸಿ ಸೀತೆಯನ್ನು ಹುಡುಕಲು ಹೊರಟಿದ್ದೆವು. ಆದರೆ ನಮ್ಮ ಆ ಒಂದು ತಿಂಗಳು ಗುಹೆಯಲ್ಲೇ ಪೂರ್ಣವಾಯಿತು; ಇದನ್ನು ನೀವೆಲ್ಲ ತಿಳಿದಿಲ್ಲವೇ? ನಾವು ಹೊರಟಂದಿನಿಂದ ಮರಳಲು ನಿರ್ಧಾರಿತವಾದ ಮಾಸವೂ ಕಳೆದುಹೋಯಿತು. ಆದ್ದರಿಂದ ಈಗ ಮುಂದೆ ಏನು ಮಾಡುವುದು.॥8-9॥

ಮೂಲಮ್ - 10

ಭವಂತಃ ಪ್ರತ್ಯಯಪ್ರಾಪ್ತಾ ನೀತಿಮಾರ್ಗವಿಶಾರದಾಃ ।
ಹಿತೇಷ್ವಭಿರತಾ ಭರ್ತುರ್ನಿಸೃಷ್ಟಾಃ ಸರ್ವಕರ್ಮಸು ॥

ಅನುವಾದ

ನೀವು ರಾಜನ ವಿಶ್ವಾಸ ಪಾತ್ರರಾಗಿದ್ದೀರಿ. ನೀವು ನೀತಿ ಮಾರ್ಗದಲ್ಲಿ ನಿಪುಣರಾಗಿದ್ದೀರಿ ಹಾಗೂ ಸ್ವಾಮಿಯ ಹಿತದಲ್ಲಿ ತತ್ಪರರಾಗಿದ್ದೀರಿ. ಅದಕ್ಕಾಗಿ ನೀವುಗಳು ಯಥಾಸಮಯ ಎಲ್ಲ ಕಾರ್ಯಗಳಲ್ಲಿ ನಿಯುಕ್ತರಾಗಿರುವಿರಿ.॥10॥

ಮೂಲಮ್ - 11

ಕರ್ಮಸ್ವಪ್ರತಿಮಾಃ ಸರ್ವೇ ದಿಕ್ಷು ವಿಶ್ರುತಪೌರುಷಾಃ ।
ಮಾಂ ಪುರಸ್ಕೃತ್ಯ ನಿರ್ಯಾತಾಃ ಪಿಂಗಾಕ್ಷ ಪ್ರತಿಚೋದಿತಾಃ ॥

ಮೂಲಮ್ - 12

ಇದಾನೀಮಕೃತಾರ್ಥಾನಾಂ ಮರ್ತವ್ಯಂ ನಾತ್ರ ಸಂಶಯಃ ।
ಹರಿರಾಜಸ್ಯ ಸಂದೇಶಮಕೃತ್ವಾ ಕಃ ಸುಖೀ ಭವೇತ್ ॥

ಅನುವಾದ

ಕಾರ್ಯಸಿದ್ಧಿ ಮಾಡುವುದರಲ್ಲಿ ನಿಮಗೆ ಸಮಾನರಾದವರು ಯಾರೂ ಇಲ್ಲ. ನೀವೆಲ್ಲರೂ ತನ್ನ ಪುರುಷಾರ್ಥದಲ್ಲಿ ಎಲ್ಲ ದಿಕ್ಕುಗಳಲ್ಲಿ ವಿಖ್ಯಾತರಾಗಿದ್ದೀರಿ. ಈಗ ವಾನರರಾಜ ಸುಗ್ರೀವನ ಆಜ್ಞೆಯಂತೆ ನನ್ನನ್ನು ಮುಂದು ಮಾಡಿ ನೀವು ಹೊರಟಿದ್ದ ಕಾರ್ಯದಲ್ಲಿ ನಾವು ಸಲರಾಗಲಿಲ್ಲ. ಇಂತಹ ಸ್ಥಿತಿಯಲ್ಲಿ ನಾವು ನಮ್ಮ ಪ್ರಾಣಗಳನ್ನು ಕಳೆದು ಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ವಾನರರಾಜನ ಆದೇಶವನ್ನು ಪಾಲಿಸದವನು ಯಾರು ತಾನೇ ಸುಖಿಯಾಗಿರಬಲ್ಲನು.॥11-12॥

ಮೂಲಮ್ - 13

ಅಸ್ಮಿನ್ನತೀತೇ ಕಾಲೇ ತು ಸುಗ್ರೀವೇಣ ಕೃತೇ ಸ್ವಯಮ್ ।
ಪ್ರಾಯೋಪವೇಶನಂ ಯುಕ್ತಂ ಸರ್ವೇಷಾಂ ಚ ವನೌಕಸಾಮ್ ॥

ಅನುವಾದ

ಸ್ವತಃ ಸುಗ್ರೀವನೇ ನಿಶ್ಚಿತಪಡಿಸಿದ್ದ ಸಮಯವು ಕಳೆದು ಹೋದಾಗ ವಾನರರಾದ ನಮಗೆಲ್ಲರಿಗೆ ಉಪವಾಸ ಮಾಡಿ ಪ್ರಾಣತ್ಯಾಗ ಮಾಡುವುದೇ ಸರಿಯೆಂದು ತೋರುತ್ತದೆ.॥13॥

ಮೂಲಮ್ - 14

ತೀಕ್ಷ್ಣಃ ಪ್ರಕೃತ್ಯಾ ಸುಗ್ರೀವಃ ಸಾಮಿಭಾವೇ ವ್ಯವಸ್ಥಿತಃ ।
ನ ಕ್ಷಮಿಷ್ಯತಿ ನಃ ಸರ್ವಾನಪರಾಧಕೃತೋ ಗತಾನ್ ॥

ಅನುವಾದ

ಸುಗ್ರೀವನು ಸ್ವಭಾವತಃ ಕಠೋರನಾಗಿದ್ದಾನೆ, ಮತ್ತೆ ಈಗಲಂತೂ ಅವನು ನಮಗೆ ರಾಜನಾಗಿರುವನು. ನಾವು ಅಪರಾಧ ಮಾಡಿ ಅವನ ಬಳಿಗೆ ಹೋದಾಗ ಅವನು ಎಂದೂ ಕ್ಷಮಿಸಲಾರನು.॥14॥

ಮೂಲಮ್ - 15½

ಅಪ್ರವೃತ್ತೌ ಚ ಸೀತಾಯಾಃ ಪಾಪಮೇವ ಕರಿಷ್ಯತಿ ।
ತಸ್ಮಾತ್ಕ್ಷಮಮಿಹಾದ್ಯೈವ ಗಂತುಂ ಪ್ರಾಯೋಪವೇಶನಮ್ ॥
ತ್ಯಕ್ತ್ವಾ ಪುತ್ರಾಂಶ್ಚ ದಾರಾಂಶ್ಚ ಧನಾನಿ ಚ ಗೃಹಾಣಿ ಚ ।

ಅನುವಾದ

ಅಲ್ಲದೆ ಸೀತೆಯ ಸಮಾಚಾರ ಸಿಗದಿರುವುದರಿಂದ ನಮ್ಮನ್ನು ವಧಿಸಿಯೂ ಬಿಡಬಹುದು; ಆದ್ದರಿಂದ ನಾವು ಇಂದೇ ಇಲ್ಲಿ ಪತ್ನೀ-ಪುತ್ರರು, ಧನ-ಸಂಪತ್ತು, ಮನೆ-ಮಠ ಇವುಗಳ ಮೋಹ ಬಿಟ್ಟು ಮರಣಾಂತ ಉಪವಾಸ ಪ್ರಾರಂಭಿಸಬೇಕು.॥15½॥

ಮೂಲಮ್ - 16½

ಧ್ರುವಂ ನೋ ಹಿಂಸತೇ ರಾಜಾ ಸರ್ವಾನ್ಪ್ರತಿಗತಾನಿತಃ ॥
ವಧೇನಾಪ್ರತಿರೂಪೇಣ ಶ್ರೇಯಾನ್ ಮೃತ್ಯುರಿಹೈವ ನಃ ।

ಅನುವಾದ

ಇಲ್ಲಿಂದ ಮರಳಿ ಹೋದಾಗ ಸುಗ್ರೀವನು ಖಂಡಿತವಾಗಿ ನಮ್ಮೆಲ್ಲರನ್ನು ವಧಿಸಿಬಿಡುವನು. ಅನುಚಿತ ವಧೆಗಿಂತ ಇಲ್ಲೇ ಸತ್ತು ಹೋಗುವುದು ನಮಗೆ ಶ್ರೇಯಸ್ಕರವಾಗಿದೆ.॥16½॥

ಮೂಲಮ್ - 17½

ನ ಚಾಹಂ ಯೌವರಾಜ್ಯೇನ ಸುಗ್ರೀವೇಣಾಭಿಷೇಚಿತಃ ॥
ನರೇಂದ್ರೇಣಾಭಿಷಿಕ್ತೋಽಸ್ಮಿ ರಾಮೇಣಾಕ್ಲಿಷ್ಟಕರ್ಮಣಾ ।

ಅನುವಾದ

ಸುಗ್ರೀವನು ನನ್ನನ್ನು ಯುವರಾಜನಾಗಿ ಪಟ್ಟ ಕಟ್ಟಲಿಲ್ಲ. ಸುಲಭವಾಗಿ ಮಹತ್ಕರ್ಮ ಮಾಡುವ ಮಹಾರಾಜಾ ಶ್ರೀರಾಮನೇ ಯುವರಾಜನಾಗಿ ನನ್ನ ಪಟ್ಟಾಭಿಷೇಕ ಮಾಡಿರುವನು.॥17½॥

ಮೂಲಮ್ - 18½

ಸ ಪೂರ್ವಂ ಬದ್ಧವೈರೋ ಮಾಂ ರಾಜಾ ದೃಷ್ಟ್ವಾ ವ್ಯತಿಕ್ರಮಮ್ ॥
ಘಾತಯಿಷ್ಯತಿ ದಂಡೇನ ತೀಕ್ಷ್ಣೇನ ಕೃತನಿಶ್ಚಯಃ ।

ಅನುವಾದ

ರಾಜಾ ಸುಗ್ರೀವನಿಗೆ ಮೊದಲಿಂದಲೇ ನನ್ನ ಕುರಿತು ವೈರವಿದೆ. ಈಗ ಆಜ್ಞೆಯನ್ನು ಉಲ್ಲಂಘಿಸಿದ ಅಪರಾಧವನ್ನು ನೋಡಿ ಹಿಂದೆ ನಿಶ್ಚಯಿಸಿದಂತೆ ತೀಕ್ಷ್ಣ ದಂಡನೆಯ ಮೂಲಕ ನನ್ನನ್ನು ಕೊಲ್ಲಿಸಿ ಬಿಡುವನು.॥18½॥

ಮೂಲಮ್ - 19

ಕಿಂ ಮೇ ಸುಹೃದ್ಭಿರ್ವ್ಯಸನಂ ಪಶ್ಯದ್ಭಿರ್ಜೀವಿತಾಂತರೇ ।
ಇಹೈವ ಪ್ರಾಯಮಾಸಿಷ್ಯೇ ಪುಣ್ಯೇ ಸಾಗರರೋಧಸಿ ॥

ಅನುವಾದ

ಜೀವಿಸಿರುವಾಗ ರಾಜನ ಕೈಯಿಂದ ನನ್ನ ಮರಣವನ್ನು ನೋಡುವ ಸುಹೃದರಿಂದ ನನಗೇನು ಕೆಲಸವಿದೆ? ಇಲ್ಲೇ ಸಮುದ್ರದ ಪಾವನ ದಡದಲ್ಲಿ ನಾನು ಮರಣಾಂತ ಉಪವಾಸ ಮಾಡುವೆನು.॥19॥

ಮೂಲಮ್ - 20

ಏತಚ್ಛ್ರುತ್ವಾ ಕುಮಾರೇಣ ಯುವರಾಜೇನ ಭಾಷಿತಮ್ ।
ಸರ್ವೇ ತೇ ವಾನರಶ್ರೇಷ್ಠಾಃ ಕರುಣಂ ವಾಕ್ಯಮಬ್ರುವನ್ ॥

ಅನುವಾದ

ಯುವರಾಜ ವಾಲಿಕುಮಾರ ಅಂಗದನ ಈ ಮಾತನ್ನು ಕೇಳಿ ಆ ಎಲ್ಲ ಶ್ರೇಷ್ಠ ವಾನರರು ಕರುಣಾಸ್ವರದಲ್ಲಿ ನುಡಿದರು.॥20॥

ಮೂಲಮ್ - 21

ತೀಕ್ಷ್ಣಃ ಪ್ರಕೃತ್ಯಾ ಸುಗ್ರೀವಃ ಪ್ರಿಯಾರಕ್ತಶ್ಚ ರಾಘವಃ ।
ಸಮೀಕ್ಷ್ಯಾ ಕೃತಕಾರ್ಯಾಂಸ್ತು ತಸ್ಮಿಂಶ್ಚ ಸಮಯೇ ಗತೇ ॥

ಮೂಲಮ್ - 22

ಅದೃಷ್ಟಾಯಾಂ ತು ವೈದೇಹ್ಯಾಂ ದೃಷ್ಟ್ವಾ ಚೈವ ಸಮಾಗತಾನ್ ।
ರಾಘವಪ್ರಿಯಕಾಮಾಯ ಘಾತಯಿಷ್ಯತ್ಯಸಂಶಯಮ್ ॥

ಅನುವಾದ

ನಿಜವಾಗಿ ಸುಗ್ರೀವನ ಸ್ವಭಾವ ಬಹಳ ಕಠೋರವಾಗಿದೆ. ಅತ್ತ ಶ್ರೀರಾಮಚಂದ್ರನು ತನ್ನ ಪ್ರಿಯಪತ್ನೀ ಸೀತೆಯ ಕುರಿತು ಅನುರಕ್ತನಾಗಿದ್ದಾನೆ. ಸೀತೆಯನ್ನು ಹುಡುಕಿ ಮರಳಲು ನಿಶ್ಚಿತಪಡಿಸಿದ ಅವಧಿಯ ಸಮಯ ಕಳೆದುಹೋದ ಬಳಿಕವೂ ಕಾರ್ಯಮಾಡದೆ ಅಲ್ಲಿಗೆ ಹೋದರೆ, ಆ ಸ್ಥಿತಿಯಲ್ಲಿ ನಮ್ಮನ್ನು ನೋಡಿ ಸೀತೆಯ ದರ್ಶನ ಮಾಡದೆ ಬಂದಿರುವರು ಎಂದು ತಿಳಿದು ಶ್ರೀರಾಮನ ಪ್ರಿಯವನ್ನು ಮಾಡುವ ಇಚ್ಛೆಯಿಂದ ಸುಗ್ರೀವನು ನಮ್ಮನ್ನು ಕೊಲ್ಲಿಸುವುದರಲ್ಲಿ ಸಂಶಯವೇ ಇಲ್ಲ.॥21-22॥

ಮೂಲಮ್ - 23

ನ ಕ್ಷಮಂ ಚಾಪರಾದ್ಧಾನಾಂ ಗಮನಂ ಸ್ವಾಮಿಪಾರ್ಶ್ವತಃ ।
ಪ್ರಧಾನಭೂತಾಶ್ಚ ವಯಂ ಸುಗ್ರೀವಸ್ಯ ಸಮಾಗತಾಃ ॥

ಅನುವಾದ

ಆದ್ದರಿಂದ ಅಪರಾಧೀ ಮನುಷ್ಯನು ಒಡೆಯನ ಬಳಿಗೆ ಮರಳಿ ಹೋಗುವುದು ಎಂದಿಗೂ ಉಚಿತವಲ್ಲ. ನಾವು ಸುಗ್ರೀವನ ಮುಖ್ಯ ಸಹಯೋಗಿ ಅಥವಾ ಸೇವಕರಾದ್ದರಿಂದ ಅವನು ಕಳಿಸಿದ್ದರಿಂದ ಬಂದಿದ್ದೆವು.॥23॥

ಮೂಲಮ್ - 24

ಇಹೈವ ಸೀತಾಮನ್ವೀಕ್ಷ ಪ್ರವೃತ್ತಿಮುಪಲಭ್ಯ ವಾ ।
ನೋ ಚೇದ್ಗ ಚ್ಛಾಮ ತಂ ವೀರಂ ಗಮಿಷ್ಯಾಮೋ ಯಮಕ್ಷಯಮ್ ॥

ಅನುವಾದ

ಸೀತೆಯ ದರ್ಶನ ಮಾಡದೆ, ಅಥವಾ ಸಮಾಚಾರ ತಿಳಿಯದೆ ವೀರ ಸುಗ್ರೀವನ ಬಳಿಗೆ ಹೋದರೆ ಅವಶ್ಯವಾಗಿಯೇ ನಾವು ಯಮಲೋಕಕ್ಕೆ ಹೋಗಬೇಕಾದೀತು.॥24॥

ಮೂಲಮ್ - 25

ಪ್ಲವಂಗಮಾನಾಂ ತು ಭಯಾರ್ದಿತಾನಾಂ
ಶ್ರುತ್ವಾ ವಚಸ್ತಾರ ಇದಂ ಬಭಾಷೇ ।
ಅಲಂ ವಿಷಾದೇನ ಬಿಲಂ ಪ್ರವಿಶ್ಯ
ವಸಾಮ ಸರ್ವೇ ಯದಿ ರೋಚತೇ ವಃ ॥

ಅನುವಾದ

ಭಯದಿಂದ ದುಃಖಿತರಾದ ಆ ವಾನರವೀರರ ಈ ಮಾತನ್ನು ಕೇಳಿ ತಾರನು ಹೇಳಿದನು- ಇಲ್ಲಿ ಕುಳಿತುಕೊಂಡು ವಿಷಾದ ಮಾಡುವುದರಲ್ಲಿ ಯಾವುದೇ ಲಾಭವಿಲ್ಲ. ನಿಮಗೆ ಸರಿಕಂಡರೆ ನಾವೆಲ್ಲರೂ ಸ್ವಯಂಪ್ರಭೆಯ ಆ ಗುಹೆಯನ್ನೇ ಪ್ರವೇಶಿಸಿ ವಾಸಿಸುವಾ.॥25॥

ಮೂಲಮ್ - 26

ಇದಂ ಹಿ ಮಾಯಾವಿಹಿತಂ ಸುದುರ್ಗಮಂ
ಪ್ರಭೂತಪುಷ್ಪೋದಕಭೋಜ್ಯಪೇಯಮ್ ।
ಇಹಾಸ್ತಿ ನೋ ನೈವ ಭಯಂ ಪುರಂದರಾ-
ನ್ನರಾಘವಾದ್ವಾನರರಾಜತೋಽಪಿ ವಾ ॥

ಅನುವಾದ

ಈ ಗುಹೆಯು ಮಾಯೆಯಿಂದ ನಿರ್ಮಿತವಾದ್ದರಿಂದ ಅತ್ಯಂತ ದುರ್ಗಮವಾಗಿದೆ. ಅಲ್ಲಿ ಫಲ-ಮೂಲ-ಜಲ ಮತ್ತು ತಿಂದುಣ್ಣುವ ಇತರ ವಸ್ತುಗಳು ಹೇರಳವಾಗಿವೆ. ಆದ್ದರಿಂದ ಅಲ್ಲಿ ನಮಗೆ ದೇವೇಂದ್ರನಿಂದಾಗಲೀ, ಶ್ರೀರಾಮ ನಿಂದಾಗಲೀ, ವಾನರರಾಜ ಸುಗ್ರೀವನಿಂದಾಗಲೀ ಯಾವುದೇ ಭಯವಿಲ್ಲ.॥26॥

ಮೂಲಮ್ - 27

ಶ್ರುತ್ವಾಂಗದಸ್ಯಾಪಿ ವಚೋಽನುಕೂಲ-
ಮೂಚುಶ್ಚ ಸರ್ವೇ ಹರಯಃ ಪ್ರತೀತಾಃ ।
ಯಥಾ ನ ಹಿನ್ಯೇಮ ತಥಾವಿಧಾನ-
ಮಸಕ್ತಮದ್ಯೈವ ವಿಧೀಯತಾಂ ನಃ ॥

ಅನುವಾದ

ತಾರನು ಹೇಳಿದ ಮಾತು ಅಂಗದನಿಗೂ ಅನುಕೂಲವಾಗಿತ್ತು. ಇದನ್ನು ಕೇಳಿ ಎಲ್ಲ ವಾನರರಿಗೆ ಅದರ ಮೇಲೆ ವಿಶ್ವಾಸ ಉಂಟಾಯಿತು. ಅವರೆಲ್ಲರೂ ಒಟ್ಟಿಗೆ ಹೇಳಿದರು - ಬಂಧುಗಳೇ! ನಾವು ಆ ಕಾರ್ಯವನ್ನು ವಿಳಂಬವಿಲ್ಲದೆ ಇಂದೇ ಮಾಡಬೇಕು, ಇದರಿಂದ ನಾವು ಸಾಯಲಾರೆವು.॥27॥

ಅನುವಾದ (ಸಮಾಪ್ತಿಃ)

ಶ್ರೀವಾಲ್ಮೀಕಿ ವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಐವತ್ತಮೂರನೆಯ ಸರ್ಗ ಪೂರ್ಣವಾಯಿತು.॥53॥