०५२ वानरैः स्वगमनहेतुकथनम्

वाचनम्
ಭಾಗಸೂಚನಾ

ತಪಸ್ವೀ ಸ್ವಯಂಪ್ರಭೆಯು ಕೇಳಿದಾಗ ವಾನರರು ಆಕೆಗೆ ತಮ್ಮ ವೃತ್ತಾಂತ ತಿಳಿಸಿದುದು, ಆಕೆಯ ಪ್ರಭಾವದಿಂದ ಗುಹೆಯಿಂದ ಹೊರಬಂದು ಸಮುದ್ರತೀರಕ್ಕೆ ತಲುಪಿದುದು

ಮೂಲಮ್ - 1

ಅಥ ತಾನಬ್ರವೀತ್ಸರ್ವಾನ್ವಿಶ್ರಾಂತಾನ್ ಹರಿಯೂಥಪಾನ್ ।
ಇದಂ ವಚನಮೇಕಾಗ್ರಾ ತಾಪಸೀ ಧರ್ಮಚಾರಿಣೀ ॥

ಅನುವಾದ

ಅನಂತರ ಎಲ್ಲ ವಾನರ ಯೂಥಪತಿಗಳು ತಿಂದು-ಕುಡಿದು ವಿಶ್ರಾಂತಿ ಪಡೆದಾಗ ಧರ್ಮಾಚರಣೆಯುಳ್ಳ ಆ ಏಕಾಗ್ರಹೃದಯೀ ತಪಸ್ವಿನಿಯು ಅವರಲ್ಲಿ ಈ ಪ್ರಕಾರ ಹೇಳಿದಳು.॥1॥

ಮೂಲಮ್ - 2

ವಾನರಾ ಯದಿ ವಃ ಖೇದಃ ಪ್ರಣಷ್ಟಃ ಫಲಭಕ್ಷಣಾತ್ ।
ಯದಿ ಚೈತನ್ಮಯಾ ಶ್ರಾವ್ಯಂ ಶ್ರೋತುಮಿಚ್ಛಾಮಿ ತಾಂ ಕಥಾಮ್ ॥

ಅನುವಾದ

ವಾನರರೇ! ಫಲಗಳನ್ನು ತಿಂದು ನಿಮ್ಮ ಬಳಲಿಕೆ ದೂರವಾಗಿದ್ದರೆ, ನಿಮ್ಮ ವೃತ್ತಾಂತವನ್ನು ನಾನು ಕೇಳಲು ಯೋಗ್ಯವಾಗಿದ್ದರೆ, ನಾನು ಅದನ್ನು ಕೇಳ ಬಯಸುವೆನು.॥2॥

ಮೂಲಮ್ - 3

ತಸ್ಯಾಸ್ತದ್ವಚನಂ ಶ್ರುತ್ವಾ ಹನುಮಾನ್ಮಾರುತಾತ್ಮಜಃ ।
ಆರ್ಜವೇನ ಯಥಾತತ್ತ್ವಮಾಖ್ಯಾತುಮುಪಚಕ್ರಮೇ ॥

ಅನುವಾದ

ಆಕೆಯ ಮಾತು ಕೇಳಿ ಪವನ ಕುಮಾರ ಹನುಮಂತನು ಸರಳವಾಗಿ ಯಥಾರ್ಥವಾದ ತನ್ನ ಮಾತನ್ನು ಹೇಳತೊಡಗಿದನು.॥3॥

ಮೂಲಮ್ - 4

ರಾಜಾ ಸರ್ವಸ್ಯ ಲೋಕಸ್ಯ ಮಹೇಂದ್ರವರುಣೋಪಮಃ ।
ರಾಮೋ ದಾಶರಥಿಃ ಶ್ರೀಮಾನ್ ಪ್ರವಿಷ್ಟೋ ದಂಡಕಾವನಮ್ ॥

ಅನುವಾದ

ದೇವಿ! ಸಂಪೂರ್ಣ ಜಗತ್ತಿನ ರಾಜನು, ದೇವೇಂದ್ರ-ವರುಣರಂತೆ ತೇಜಸ್ವೀ ದಶರಥನಂದನ ಶ್ರೀಮಾನ್ ಭಗವಾನ್ ರಾಮನು ದಂಡಕಾರಣ್ಯಕ್ಕೆ ಆಗಮಿಸಿದ್ದನು.॥4॥

ಮೂಲಮ್ - 5

ಲಕ್ಷ್ಮಣೇನ ಸಹ ಭ್ರಾತ್ರಾ ವೈದೇಹ್ಯಾ ಚಾಪಿ ಭಾರ್ಯಯಾ ।
ತಸ್ಯ ಭಾರ್ಯಾ ಜನಸ್ಥಾನಾದ್ ರಾವಣೇನ ಹೃತಾ ಬಲಾತ್ ॥

ಅನುವಾದ

ಅವನೊಡನೆ ಅವನ ತಮ್ಮ ಲಕ್ಷ್ಮಣ ಹಾಗೂ ಶ್ರೀರಾಮನ ಧರ್ಮಪತ್ನೀ ವಿದೇಹ ನಂದಿನೀ ಸೀತೆಯೂ ಇದ್ದಳು. ಜನಸ್ಥಾನಕ್ಕೆ ಬಂದು ರಾವಣನು ಅವನ ಪತ್ನಿಯನ್ನು ಬಲಾತ್ಕಾರವಾಗಿ ಅಪಹರಿಸಿರುವನು.॥5॥

ಮೂಲಮ್ - 6

ವೀರಸ್ತಸ್ಯ ಸಖಾ ರಾಜ್ಞಃ ಸುಗ್ರೀವೋ ನಾಮ ವಾನರಃ ।
ರಾಜಾ ವಾನರಮುಖ್ಯಾನಾಂ ಯೇನ ಪ್ರಸ್ಥಾಪಿತಾ ವಯಮ್ ॥

ಮೂಲಮ್ - 7

ಅಗಸ್ತ್ಯ ಚರಿತಾಮಾಶಾಂ ದಕ್ಷಿಣಾಂ ಯಮರಕ್ಷಿತಾಮ್ ।
ಸಹೈಭಿರ್ವಾನರೈರ್ಮುಖ್ಯೈರಂಗದಪ್ರಮುಖೈರ್ವಯಮ್ ॥

ಅನುವಾದ

ಶ್ರೇಷ್ಠವಾನರರ ರಾಜಾ ವಾನರ ಜಾತಿಯ ವೀರವರ ಸುಗ್ರೀವನು ಶ್ರೀರಾಮಚಂದ್ರನ ಮಿತ್ರನಾಗಿರುವನು. ಅವನು ಈ ಅಂಗದಾದಿ ಪ್ರಧಾನ ವೀರರೊಂದಿಗೆ ನಮ್ಮನ್ನು ಸೀತಾನ್ವೇಷಣೆಗಾಗಿ ಅಗಸ್ತ್ಯಸೇವಿತ, ಯಮನಿಂದ ಸುರಕ್ಷಿತವಾದ ದಕ್ಷಿಣ ದಿಕ್ಕಿಗೆ ಕಳಿಸಿರುವನು.॥6-7॥

ಮೂಲಮ್ - 8

ರಾವಣಂ ಸಹಿತಾಃ ಸರ್ವೇ ರಾಕ್ಷಸಂ ಕಾಮರೂಪಿಣಮ್ ।
ಸೀತಯಾ ಸಹ ವೈದೇಹ್ಯಾ ಮಾರ್ಗಧ್ವಮಿತಿ ಚೋದಿತಾಃ ॥

ಅನುವಾದ

‘ನೀವೆಲ್ಲರೂ ಒಟ್ಟಿಗೆ ಇದ್ದು ವಿದೇಹಕುಮಾರಿ ಸೀತಾಸಹಿತ ಆ ಕಾಮರೂಪೀ ರಾಕ್ಷಸರಾಜ ರಾವಣನನ್ನು ಹುಡುಕಿರಿ’ ಎಂದು ಅವನು ಆಜ್ಞಾಪಿಸಿದ್ದನು.॥8॥

ಮೂಲಮ್ - 9

ವಿಚಿತ್ಯತು ವನಂ ಸರ್ವಂ ಸಮುದ್ರಂ ದಕ್ಷಿಣಾಂ ದಿಶಮ್ ।
ವಯಂ ಬುಭುಕ್ಷಿತಾಃ ಸರ್ವೇ ವೃಕ್ಷಮೂಲಮುಪಾಶ್ರಿತಾಃ ॥

ಅನುವಾದ

ನಾವು ಇಲ್ಲಿಯ ಎಲ್ಲ ಅರಣ್ಯವನ್ನು ಹುಡುಕಿದೆವು, ಈಗ ದಕ್ಷಿಣ ದಿಕ್ಕಿನ ಸಮುದ್ರದೊಳಗೆ ಆಕೆಯ ಅನ್ವೇಷಣೆ ಮಾಡಬೇಕು. ಇಷ್ಟರವರೆಗೆ ಸೀತೆಯು ಸಿಗಲಿಲ್ಲ, ನಾವು ಹಸಿವು-ಬಾಯಾರಿಕೆಯಿಂದ ಪೀಡಿತರಾಗಿ, ಎಲ್ಲರೂ ಒಂದು ಮರದ ಕೆಳಗೆ ಬಳಲಿ ಕುಳಿತುಬಿಟ್ಟೆವು.॥9॥

ಮೂಲಮ್ - 10

ವಿವರ್ಣವದನಾಃ ಸರ್ವೇ ಸರ್ವೇ ಧ್ಯಾನಪರಾಯಣಾಃ ।
ನಾಧಿಗಚ್ಚಾಮಹೇ ಪಾರಂ ಮಗ್ನಾಶ್ಚಿಂತಾಮಹಾರ್ಣವೇ ॥

ಅನುವಾದ

ನಮ್ಮ ಮುಖ ಬಾಡಿಹೋಗಿತ್ತು, ನಾವೆಲ್ಲರೂ ಚಿಂತಾಮಗ್ನರಾದೆವು. ಚಿಂತೆಯ ಮಹಾಸಾಗರದಲ್ಲಿ ಮುಳುಗಿ ನಾವು ಅದನ್ನು ದಾಟಲಾರದವರಾಗಿದ್ದೇವೆ.॥10॥

ಮೂಲಮ್ - 11

ಚಾರಯಂತಸ್ತತಶ್ಚಕ್ಷುರ್ದೃಷ್ಟವಂತೋ ಮಹದ್ಬಿಲಮ್ ।
ಲತಾಪಾದಪಸಂಛನ್ನಂ ತಿಮರೇಣ ಸಮಾವೃತಮ್ ॥

ಅನುವಾದ

ಆಗಲೇ ಸುತ್ತಲೂ ದೃಷ್ಟಿ ಹರಿಸಿದಾಗ ನಮಗೆ ಲತಾ-ವೃಕ್ಷಗಳಿಂದ ಮುಚ್ಚಿರುವ ಹಾಗೂ ಕತ್ತಲೆ ತುಂಬಿದ ಈ ವಿಶಾಲ ಗುಹೆಯು ಕಂಡು ಬಂತು.॥11॥

ಮೂಲಮ್ - 12

ಅಸ್ಮಾದ್ಧಂಸಾ ಜಲಕ್ಲಿನ್ನಾಃ ಪಕ್ಷೈಃ ಸಲಿಲರೇಣುಭಿಃ ।
ಕುರರಾಃ ಸಾರಸಾಶ್ಚೈವ ನಿಷ್ಪತಂತಿ ಪತತ್ರಿಣಃ ॥

ಅನುವಾದ

ಸ್ವಲ್ಪ ಹೊತ್ತಿನಲ್ಲೇ ಕೆಸರು ಮೆತ್ತಿಕೊಂಡ, ನೀರಿನಿಂದ ಒದ್ದೆಯಾದ ರೆಕ್ಕೆಗಳುಳ್ಳ ಹಂಸ, ಕುರರ, ಸಾರಸ ಮೊದಲಾದ ಪಕ್ಷಿಗಳು ಈ ಗುಹೆಯಿಂದ ಹೊರಬಂದವು.॥12॥

ಮೂಲಮ್ - 13

ಸಾಧ್ವತ್ರ ಪ್ರವಿಶಾಮೇತಿ ಮಯಾ ತೂಕ್ತಾಃ ಪ್ಲವಂಗಮಾಃ ।
ತೇಷಾಮಪಿ ಹಿ ಸರ್ವೇಷಾಮನುಮಾನಮುಪಾಗತಮ್ ॥

ಅನುವಾದ

ಆಗ ನಾನು ವಾನರರಲ್ಲಿ - ‘ನಾವು ಇದರೊಳಗೆ ಪ್ರವೇಶಿಸಿದರೆ ಒಳ್ಳೆಯ ದಾಗಬಹುದು’ ಎಂದು ಹೇಳಿದೆ. ಈ ಎಲ್ಲ ವಾನರರಿಗೂ ಈ ಗುಹೆಯಲ್ಲಿ ನೀರು ಇದೆ ಎಂಬ ಅನುಮಾನ ಉಂಟಾಯಿತು.॥13॥

ಮೂಲಮ್ - 14

ಅಸ್ಮಿನ್ ನಿಪತಿತಾಃ ಸರ್ವೇಽಷ್ಯಥ ಕಾರ್ಯತ್ವರಾನ್ವಿತಾಃ ।
ತತೋ ಗಾಢಂ ನಿಪತಿತಾ ಗೃಹ್ಯ ಹಸ್ತೈಃ ಪರಸ್ಪರಮ್ ॥

ಅನುವಾದ

ನಾವೆಲ್ಲರೂ ನಮ್ಮ ಕಾರ್ಯಸಿದ್ಧಿಗಾಗಿ ಉತ್ಸುಕರಾಗಿದ್ದೆವು. ಆದ್ದರಿಂದ ಈ ಗುಹೆಯನ್ನು ಹೊಕ್ಕೆವು. ಕೈಗಳಿಂದ ಒಬ್ಬರ ನ್ನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ನಾವು ಗುಹೆಯಲ್ಲಿ ಮುಂದರಿದೆವು.॥14॥

ಮೂಲಮ್ - 15

ಇದಂ ಪ್ರವಿಷ್ಟಾಃ ಸಹಸಾ ಬಿಲಂ ತಿಮಿರಸಂವೃತಮ್ ।
ಏತನ್ನಃ ಕಾರ್ಯಮೇತೇನ ಕೃತ್ಯೇನ ವಯಮಾಗತಾಃ ॥

ಅನುವಾದ

ಈ ರೀತಿ ಒಮ್ಮೆಗೆ ನಾವು ಈ ಕತ್ತಲೆಯ ಗುಹೆಯನ್ನು ಪ್ರವೇಶಿಸಿದೆವು. ಇದೆ ನಮ್ಮ ಕಾರ್ಯವಾಗಿದೆ ಮತ್ತು ಇದೇ ಕಾರ್ಯದಿಂದ ನಾವು ಇತ್ತ ಬಂದಿರುವೆವು.॥15॥

ಮೂಲಮ್ - 16½

ತ್ವಾಂ ಚೈವೋಪಗತಾಃ ಸರ್ವೇ ಪರಿದ್ಯೂನಾ ಬುಭುಕ್ಷಿತಾಃ ।
ಆತಿಥ್ಯಧರ್ಮದತ್ತಾನಿ ಮೂಲಾನಿ ಚ ಫಲಾನಿ ಚ ॥
ಅಸ್ಮಾಭಿರುಪಯುಕ್ತಾನಿ ಬುಭುಕ್ಷಾಪರಿಪೀಡಿತೈಃ ।

ಅನುವಾದ

ಹಸಿವಿನಿಂದ ಕಂಗಾಲಾಗಿದ್ದರಿಂದ ನಾವೆಲ್ಲರೂ ನಿನಗೆ ಶರಣಾದೆವು. ನೀನು ಅತಿಥಿ ಧರ್ಮಕ್ಕನುಸಾರ ನಮಗೆ ಫಲ-ಮೂಲಗಳನ್ನು ಕೊಟ್ಟೆ ಹಾಗೂ ನಾವು ಅವನ್ನು ಹೊಟ್ಟೆತುಂಬಾ ತಿಂದೆವು.॥16½॥

ಮೂಲಮ್ - 17½

ಯತ್ತ್ವಯಾ ರಕ್ಷಿತಾಃ ಸರ್ವೇ ಮ್ರಿಯಮಾಣಾ ಬುಭುಕ್ಷಯಾ ॥
ಬ್ರೂಹಿ ಪ್ರತ್ಯುಪಕಾರಾರ್ಥಂ ಕಿಂ ತೇ ಕುರ್ವಂತು ವಾನರಾಃ ।

ಅನುವಾದ

ದೇವಿ! ನಾವು ಹಸಿವಿನಿಂದ ಸಾಯುತ್ತಿದ್ದೆವು. ನೀನು ನಮ್ಮೆಲ್ಲರ ಪ್ರಾಣ ಉಳಿಸಿದೆ. ಆದ್ದರಿಂದ ಈ ವಾನರರು ನಿನ್ನ ಉಪಕಾರಕ್ಕೆ ಪ್ರತ್ಯುಪಕಾರ ಮಾಡಲು ಏನು ಸೇವೆ ಮಾಡಬೇಕು? ತಿಳಿಸು.॥17½॥

ಮೂಲಮ್ - 18½

ಏವಮುಕ್ತಾ ತು ಸರ್ವಜ್ಞಾ ವಾನರೈಸ್ತೈಃ ಸ್ವಯಂಪ್ರಭಾ ॥
ಪ್ರತ್ಯುವಾಚ ತತಃ ಸರ್ವಾನಿದಂ ವಾನರಯೂಥಪಾನ್ ।

ಅನುವಾದ

ಆ ವಾನರರು ಹೀಗೆ ಹೇಳಿದಾಗ ಸರ್ವಜ್ಞಳಾಗಿದ್ದ ಸ್ವಯಂಪ್ರಭೆಯು ಆ ಎಲ್ಲ ಯೂಥಪತಿಗಳಲ್ಲಿ ಈ ಪ್ರಕಾರ ಉತ್ತರಿಸಿದಳು.॥18½॥

ಮೂಲಮ್ - 19½

ಸರ್ವೇಷಾಂ ಪರಿತುಷ್ಟಾಸ್ಮಿ ವಾನರಾಣಾಂ ತರಸ್ವಿನಾಮ್ ॥
ಚರಂತ್ಯಾ ಮಮ ಧರ್ಮೇಣ ನ ಕಾರ್ಯಮಿಹ ಕೇನಚಿತ್ ।

ಅನುವಾದ

ವೇಗಶಾಲಿ ಗಳಾದ ವಾನರರೆಲ್ಲರ ಮೇಲೆ ನಾನು ಸಂತುಷ್ಟಳಾಗಿದ್ದೇನೆ. ಧರ್ಮಾನುಷ್ಠಾನದಲ್ಲಿ ತೊಡಗಿದ್ದರಿಂದ ನನಗೆ ಯಾರಿಂದಲೂ ಯಾವುದೇ ಪ್ರಯೋಜನ ಉಳಿಯಲಿಲ್ಲ.॥19½॥

ಮೂಲಮ್ - 20½

ಏವಮುಕ್ತಃ ಶುಭಂ ವಾಕ್ಯಂ ತಾಪಸ್ಯಾ ಧರ್ಮಸಂಹಿತಮ್ ॥
ಉವಾಚ ಹನುಮಾನ್ವಾಕ್ಯಂ ತಾಮನಿಂದಿತಲೋಚನಾಮ್ ।

ಅನುವಾದ

ಆ ತಪಸ್ವಿನಿಯು ಈ ಪ್ರಕಾರ ಧರ್ಮಯುಕ್ತ ಉತ್ತಮ ಮಾತನ್ನು ಹೇಳಿದಾಗ ಹನುಮಂತನು ನಿರ್ದೋಷ ದೃಷ್ಟಿಯುಳ್ಳ ಆ ದೇವಿಯಲ್ಲಿ ಹೀಗೆ ಹೇಳಿದನು.॥20½॥

ಮೂಲಮ್ - 21

ಶರಣಂ ತ್ವಾಂ ಪ್ರಪನ್ನಾಃ ಸ್ಮಃ ಸರ್ವೇ ವೈ ಧರ್ಮಚಾರಿಣೀಮ್ ॥

ಮೂಲಮ್ - 22

ಯಃ ಕೃತಃ ಸಮಯೋಽಸ್ಮಾಸು ಸುಗ್ರೀವೇಣ ಮಹಾತ್ಮನಾ ।
ಸ ತು ಕಾಲೋ ವ್ಯತಿಕ್ರಾಂತೋ ಬಿಲೇ ಚ ಪರಿವರ್ತತಾಮ್ ॥

ಅನುವಾದ

ದೇವಿ! ನೀನು ಧರ್ಮಾಚರಣೆಯಲ್ಲಿ ತೊಡಗಿರುವೆ. ಆದ್ದರಿಂದ ನಾವೆಲ್ಲರೂ ನಿನ್ನಲ್ಲಿ ಶರಣಾಗಿದ್ದೇವೆ. ಮಹಾತ್ಮಾ ಸುಗ್ರೀವನು ನಮಗೆ ಮರಳಲು ನಿಶ್ಚಿತ ಪಡಿಸಿದ ಸಮಯವು ಈ ಗುಹೆಯಲ್ಲಿ ಅಲೆಯುವಾಗಲೇ ಮುಗಿದುಹೋಯಿತು.॥21-22॥

ಮೂಲಮ್ - 23½

ಸಾ ತ್ವಮಸ್ಮಾದ್ ಬಿಲಾದಸ್ಮಾನುತ್ತಾರಯಿತುಮರ್ಹಸಿ ।
ತಸ್ಮಾತ್ಸುಗ್ರೀವವಚನಾದತಿಕ್ರಾಂತಾನ್ ಗತಾಯುಷಃ ॥
ತ್ರಾತುಮರ್ಹಸಿ ನಃ ಸರ್ವಾನ್ಸುಗ್ರೀವಭಯಶಂಕಿತಾನ್ ।

ಅನುವಾದ

ಈಗ ನೀನು ದಯವಿಟ್ಟು ನಮ್ಮನ್ನು ಈ ಬಿಲದಿಂದ ಹೊರಗೆ ಕಳಿಸು. ಸುಗ್ರೀವನು ಹೇಳಿದ ಅವಧಿಯನ್ನು ನಾವು ಮೀರಿದ್ದೇವೆ, ಅದರಿಂದ ಈಗ ನಮ್ಮ ಆಯುಸ್ಸು ಮುಗಿದು ಹೋಗಿದೆ. ನಾವೆಲ್ಲರೂ ಭಯದಿಂದ ಹೆದರಿದ್ದೇವೆ. ಆದ್ದರಿಂದ ನಮ್ಮನ್ನು ಉದ್ಧರಿಸು.॥23½॥

ಮೂಲಮ್ - 24½

ಮಹಚ್ಚ ಕಾರ್ಯಮಸ್ಮಾಭಿಃ ಕರ್ತವ್ಯಂ ಧರ್ಮಚಾರಿಣಿ ॥
ತಚ್ಚಾಪಿ ನ ಕೃತಂ ಕಾರ್ಯಸ್ಮಾಭಿರಿಹ ವಾಸಿಭಿಃ ।

ಅನುವಾದ

ಧರ್ಮಚಾರಿಣಿಯೇ! ನಮಗೆ ಮಾಡ ಬೇಕಾದ ಮಹತ್ಕಾರ್ಯವನ್ನು ಈ ಗುಹೆಯಲ್ಲಿದ್ದ ಕಾರಣ ಮಾಡಲಾಗಲಿಲ್ಲ.॥24½॥

ಮೂಲಮ್ - 25

ಏವಮುಕ್ತಾ ಹನುಮತಾ ತಾಪಸೀ ವಾಕ್ಯಮಬ್ರವೀತ್ ॥

ಮೂಲಮ್ - 26½

ಜೀವತಾ ದುಷ್ಕರಂ ಮನ್ಯೇ ಪ್ರವಿಷ್ಟೇನ ನಿವರ್ತಿತುಮ್ ।
ತಪಸಃ ಸುಪ್ರಭಾವೇಣ ನಿಯಮೋಪಾರ್ಜಿತೇನ ಚ ॥
ಸರ್ವಾನೇವ ಬಿಲಾದಸ್ಮಾತ್ ತಾರಯಿಷ್ಯಾಮಿ ವಾನರಾನ್ ।

ಅನುವಾದ

ಹನುಮಂತನು ಹೀಗೆ ಹೇಳಿದಾಗ ತಪಸ್ವಿಯು ಹೇಳಿದಳು - ಯಾವನೇ ಒಮ್ಮೆ ಈ ಗುಹೆಯೊಳಗೆ ಬಂದರೆ ಅವನು ಜೀವಂತವಾಗಿ ಇಲ್ಲಿಂದ ಹೊರಹೋಗುವುದು ಬಹಳ ಕಷ್ಟವೆಂದು ನಾನು ತಿಳಿದಿದ್ದೇನೆ. ಹೀಗಿದ್ದರೂ ನಿಯಮಗಳ ಪಾಲನೆಯ ಮತ್ತು ತಪಸ್ಸಿನ ಉತ್ತಮ ಪ್ರಭಾವದಿಂದ ನಾನು ನಿಮ್ಮನ್ನು ಈ ಗುಹೆಯಿಂದ ಹೊರಗೆ ಕಳಿಸಿಕೊಡುತ್ತೇನೆ.॥25-26½॥

ಮೂಲಮ್ - 27½

ನಿಮೀಲಯತ ಚಕ್ಷೂಂಷಿ ಸರ್ವೇ ವಾನರಪುಂಗವಾಃ ॥
ನಹಿ ನಿಷ್ಕ್ರಮಿತುಂ ಶಕ್ಯಮನಿಮೀಲಿತಲೋಚನೈಃ ।

ಅನುವಾದ

ಶ್ರೇಷ್ಠವಾನರರೇ! ನೀವೆಲ್ಲರೂ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿರಿ. ಕಣ್ಣುಮುಚ್ಚದೆ ಇಲ್ಲಿಂದ ಹೊರಗೆ ಹೋಗವುದು ಅಸಂಭವವಾಗಿದೆ.॥27½॥

ಮೂಲಮ್ - 28½

ತತೋ ನಿಮೀಲಿತಾಃ ಸರ್ವೇ ಸುಕುಮಾರಾಂಗುಲೈಃ ಕರೈಃ ॥
ಸಹಸಾ ಪಿದಧುರ್ದೃಷ್ಟಿಂ ಹೃಷ್ಟಾ ಗಮನಕಾಂಕ್ಷಯಾ ।

ಅನುವಾದ

ಇದನ್ನು ಕೇಳಿ ಎಲ್ಲರೂ ಸುಕುಮಾರ ಬೆರಳುಗಳುಳ್ಳ ಕೈಗಳಿಂದ ಕಣ್ಣುಗಳನ್ನು ಮುಚ್ಚಿಕೊಂಡರು. ಗುಹೆಯಿಂದ ಹೊರಗೆ ಹೋಗುವ ಇಚ್ಛೆಯಿಂದ ಸಂತೋಷಗೊಂಡು ಅವರೆಲ್ಲರೂ ಕೂಡಲೇ ಕಣ್ಣು ಮುಚ್ಚಿಕೊಂಡರು.॥28½॥

ಮೂಲಮ್ - 29½

ವಾನರಾಸ್ತು ಮಹಾತ್ಮಾನೋ ಹಸ್ತರುದ್ಧಮುಖಾಸ್ತದಾ ॥
ನಿಮೇಷಾಂತರಮಾತ್ರೇಣ ಬಿಲಾದುತ್ತಾರಿತಾಸ್ತಯಾ ।

ಅನುವಾದ

ಈ ಪ್ರಕಾರ ಆಗ ಕೈಗಳಿಂದ ಮುಖವನ್ನು ಮುಚ್ಚಿಕೊಂಡ ಆ ಮಹಾತ್ಮಾ ವಾನರರನ್ನು ಸ್ವಯಂಪ್ರಭೆಯು ರೆಪ್ಪೆ ಮಿಟಿಕಿಸುವುದರೊಳಗೆ ಹೊರಗೆ ತಂದುಬಿಟ್ಟಳು.॥29½॥

ಮೂಲಮ್ - 30½

ಉವಾಚ ಸರ್ವಾಂಸ್ತಾಂಸ್ತತ್ರ ತಾಪಸೀ ಧರ್ಮಚಾರಿಣೀ ॥
ನಿಃಸೃತಾನ್ವಿಷಮಾತ್ತಸ್ಮಾತ್ ಸಮಾಶ್ವಾಸ್ಯೇದಮಬ್ರವೀತ್ ।

ಅನುವಾದ

ಬಳಿಕ ಆ ಧರ್ಮ ಪರಾಯಣ ತಾಪಸಿಯು ಆ ವಿಷಮ ಗುಹೆಯಿಂದ ಹೊರಗೆ ಬರುತ್ತಲೇ ಸಮಸ್ತ ವೀರರಿಗೆ ಆಶ್ವಾಸನೆ ಕೊಟ್ಟು ಈ ಪ್ರಕಾರ ಹೇಳಿದಳು.॥30½॥

ಮೂಲಮ್ - 31

ಏಷ ವಿಂಧ್ಯೋ ಗಿರಿಃ ಶ್ರೀಮನ್ನಾನಾದ್ರುಮಲತಾಯುತಃ ॥

ಮೂಲಮ್ - 32

ಏಷ ಪ್ರಸ್ರವಣಃ ಶೈಲಃ ಸಾಗರೋಽಯಂ ಮಹೋದಧಿಃ ।
ಸ್ವಸ್ತಿ ವೋಽಸ್ತು ಗಮಿಷ್ಯಾಮಿ ಭವನಂ ವಾನರರ್ಷಭಾಃ ।
ಇತ್ಯುಕ್ತಾತದ್ಬಿಲಂ ಶ್ರೀಮತ್ಪ್ರವಿವೇಶ ಸ್ವಯಂಪ್ರಭಾ ॥

ಅನುವಾದ

ಶ್ರೇಷ್ಠ ವಾನರರೇ! ಇದು ನಾನಾ ಪ್ರಕಾರದ ವೃಕ್ಷಗಳಿಂದ - ಲತೆಗಳಿಂದ ವ್ಯಾಪ್ತವಾದ ಶೋಭಾಶಾಲಿ ವಿಂಧ್ಯಗಿರಿ. ಇತ್ತ ಇದು ಪ್ರಸ್ರವಣಗಿರಿ ಇದೆ ಮತ್ತು ಎದುರಿಗೆ ಈ ಮಹಾ ಸಾಗರವಿದೆ. ನಿಮಗೆ ಮಂಗಳವಾಗಲಿ. ಈಗ ನಾನು ನನ್ನ ಸ್ಥಾನಕ್ಕೆ ಹೋಗುತ್ತೇನೆ, ಎಂದು ಹೇಳಿ ಸ್ವಯಂಪ್ರಭೆಯು ಆ ಸುಂದರ ಗುಹೆಯನ್ನು ಪ್ರವೇಶಿಸಿದಳು.॥31-32॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಐವತ್ತೆರಡನೆಯ ಸರ್ಗ ಸಂಪೂರ್ಣವಾಯಿತು.॥52॥