वाचनम्
ಭಾಗಸೂಚನಾ
ಹನುಮಂತನು ಕೇಳಿದಾಗ ವೃದ್ಧ ತಪಸ್ವಿನಿಯು ತನ್ನ ಹಾಗೂ ಆ ದಿವ್ಯ ಸ್ಥಾನದ ಪರಿಚಯ ಕೊಟ್ಟು ಎಲ್ಲ ವಾನರರನ್ನು ಭೋಜನಕ್ಕಾಗಿ ಆಹ್ವಾನಿಸಿದುದು
ಮೂಲಮ್ - 1
ಇತ್ಯುಕ್ತ್ವಾ ಹನುಮಾಂಸ್ತತ್ರ ಪುನಃ ಕೃಷ್ಣಾಜಿನಾಂಬರಾಮ್ ।
ಅಬ್ರವೀತ್ತಾಂ ಮಹಾಭಾಗಾಂ ತಾಪಸೀಂ ಧರ್ಮಚಾರಿಣೀಮ್ ॥
ಅನುವಾದ
ಈ ರೀತಿ ಕೇಳಿದ ಬಳಿಕ ಪುನಃ ಹನುಮಂತನು ಚೀರ ಕೃಷ್ಣಾಜಿನಧಾರಿಯಾದ ಆ ಧರ್ಮಪರಾಯಣ ಮಹಾಭಾಗಾ ತಪಸ್ವಿನೀಯಲ್ಲಿ ಹೇಳಿದನು.॥1॥
ಮೂಲಮ್ - 2
ಇದಂ ಪ್ರವಿಷ್ಟಾಃ ಸಹಸಾ ಬಿಲಂ ತಿಮಿರಸಂವೃತಮ್ ।
ಕ್ಷುತ್ಪಿಪಾಸಾ ಪರಿಶ್ರಾಂತಾಃ ಪರಿಖಿನ್ನಾಶ್ಚ ಸರ್ವಶಃ ॥
ಮೂಲಮ್ - 3
ಮಹದ್ಧರಣ್ಯಾ ವಿವರಂ ಪ್ರವಿಷ್ಟಾಃ ಸ್ಮ ಪಿಪಾಸಿತಾಃ ।
ಇಮಾಂಸ್ತ್ವೇವಂ ವಿಧಾನ್ಭಾವಾನ್ವಿವಿಧಾನದ್ಭುತೋಪಮಾನ್ ॥
ಮೂಲಮ್ - 4
ದೃಷ್ಟ್ವಾ ವಯಂ ಪ್ರವ್ಯಥಿತಾಃ ಸಂಭ್ರಾಂತಾ ನಷ್ಟಚೇತಸಃ ।
ಕಸ್ಯೈತೇ ಕಾಂಚನಾ ವೃಕ್ಷಾಸ್ತರುಣಾದಿತ್ಯ ಸಂನಿಭಾಃ ॥
ಅನುವಾದ
ದೇವಿ! ನಾವೆಲ್ಲರೂ ಹಸಿವು-ಬಾಯಾರಿಕೆಯಿಂದ, ಕಷ್ಟ ಅನುಭವಿಸುತ್ತಿದ್ದೇವೆ. ಅದಕ್ಕಾಗಿ ಒಮ್ಮೆಗೆ ಈ ಅಂಧಕಾರಮಯ ಗುಹೆಯಲ್ಲಿ ನುಗ್ಗಿರುವೆವು. ಭೂಮಿಯೊಳಗಿನ ಈ ವಿವರ ಬಹಳ ದೊಡ್ಡದಾಗಿದೆ. ನಾವು ತೃಷಿತರಾದ್ದರಿಂದ ಇಲ್ಲಿಗೆ ಬಂದಿರುವೆವು, ಆದರೆ ಇಲ್ಲಿಯ ಇಂತಹ ಅತ್ಯದ್ಭುತ ವಿವಿಧ ಪದಾರ್ಥಗಳನ್ನು ನೋಡಿ ನಮ್ಮ ಮನಸ್ಸಿನಲ್ಲಿ ವ್ಯಥೆ ಉಂಟಾಗಿದೆ. ಇದು ಅಸುರರ ಮಾಯೆ ಅಲ್ಲವಲ್ಲ ಎಂದು ಯೋಚಿಸಿ ಚಿಂತಿತರಾಗಿ ಗಾಬರಿಗೊಂಡಿರುವೆವು. ನಮ್ಮ ವಿವೇಕಶಕ್ತಿಯು ಲುಪ್ತವಾಗಿದೆ. ಈ ಬಾಲ ಸೂರ್ಯನಂತೆ ಕಾಂತಿಯುಳ್ಳ ಸುವರ್ಣ ವೃಕ್ಷಗಳು ಯಾರದ್ದಾಗಿವೆ ಎಂದು ತಿಳಿಯಲು ನಾವು ಬಯಸುತ್ತಿದ್ದೇವೆ.॥2-4॥
ಮೂಲಮ್ - 5
ಶುಚೀನ್ಯಭ್ಯವಹಾರಾಣಿ ಮೂಲಾನಿ ಚ ಫಲಾನಿ ಚ ।
ಕಾಂಚನಾನಿ ವಿಮಾನಾನಿ ರಾಜತಾನಿ ಗೃಹಾಣಿ ಚ ॥
ಮೂಲಮ್ - 6½
ತಪನೀಯ ಗವಾಕ್ಷಾಣಿ ಮಣಿಜಾಲಾವೃತಾನಿ ಚ ।
ಪುಷ್ಪಿತಾಃ ಫಲವಂತಶ್ಚ ಪುಣ್ಯಾಃ ಸುರಭಿಗಂಧಯಃ ॥
ಇಮೇ ಜಾಂಬೂನದಮಯಾಃ ಪಾದಪಾಃ ಕಸ್ಯ ತೇಜಸಾ ।
ಅನುವಾದ
ಈ ಭೋಜನದ ಪವಿತ್ರವಸ್ತುಗಳು, ಫಲ-ಮೂಲಗಳು, ಚಿನ್ನದ ವಿಮಾನ, ಬೆಳ್ಳಿಯ ಮನೆಗಳು, ಮಣಿಗಳ ಜಾಲರಿಗಳಿಂದ ಮುಚ್ಚಿದ ಬಂಗಾರದ ಕಿಡಕಿಗಳು ಹಾಗೂ ಪವಿತ್ರ ಪರಿಮಳದಿಂದ ಕೂಡಿದ, ಹೂವು-ಹಣ್ಣುಗಳಿಂದ ತುಂಬಿದ ಸುವರ್ಣಮಯ ಪಾವನ ವೃಕ್ಷಗಳು ಯಾರ ತೇಜದಿಂದ ಪ್ರಕಟವಾಗಿವೆ.॥5-6½॥
ಮೂಲಮ್ - 7
ಕಾಂಚನಾನಿ ಚ ಪದ್ಮಾನಿ ಜಾತಾನಿ ವಿಮಲೇ ಜಲೇ ॥
ಮೂಲಮ್ - 8½
ಕಥಂ ಮತ್ಸ್ಯಾಶ್ಚ ಸೌವರ್ಣಾದೃಶ್ಯಂತೇ ಸಹ ಕಚ್ಛಪೈಃ ।
ಆತ್ಮನಸ್ತ್ವನುಭಾವಾದ್ ವಾ ಕಸ್ಯ ವೈತತ್ತಪೋಬಲಮ್ ॥
ಅಜಾನತಾಂ ನಃ ಸರ್ವೇಷಾಂ ಸರ್ವಮಾಖ್ಯಾತುಮರ್ಹಸಿ ।
ಅನುವಾದ
ಇಲ್ಲಿಯ ನಿರ್ಮಲ ಜಲದಲ್ಲಿ ಚಿನ್ನದ ಕಮಲಗಳು ಹೇಗೆ ಉತ್ಪನ್ನವಾದವು? ಈ ಸರೋವರಗಳ ಮೀನು, ಮೊಸಳೆಗಳು ಸುವರ್ಣಮಯವಾಗಿ ಹೇಗೆ ಕಾಣುತ್ತಿವೆ? ಇದೆಲ್ಲ ನಿನ್ನ ಪ್ರಭಾವದಿಂದಲೇ ಆಗಿದೆಯೋ ಅಥವಾ ಬೇರೆ ಯಾರಿಂದಲಾದರೂ ಆಗಿದೆಯೇ? ಇದು ಯಾರ ತಪೋಬಲದ ಪ್ರಭಾವವಾಗಿದೆ? ನಾವೆಲ್ಲರೂ ಇದನ್ನು ತಿಳಿಯದಿರುವುದರಿಂದ ಕೇಳುತ್ತಿದ್ದೇವೆ. ನೀನು ಎಲ್ಲವನ್ನು ತಿಳಿಸುವ ಕೃಪೆ ಮಾಡಬೇಕು.॥7-8½॥
ಮೂಲಮ್ - 9½
ಏವಮುಕ್ತಾ ಹನುಮತಾ ತಾಪಸೀ ಧರ್ಮಚಾರಿಣೀ ॥
ಪ್ರತ್ಯುವಾಚ ಹನೂಮಂತಂ ಸರ್ವಭೂತಹಿತೇ ರತಾ ।
ಅನುವಾದ
ಹನುಮಂತನು ಹೀಗೆ ಕೇಳಿದಾಗ ಸಮಸ್ತ ಪ್ರಾಣಿಗಳ ಹಿತದಲ್ಲಿ ತತ್ಪರಳಾಗಿದ್ದ ಆ ಧರ್ಮಪರಾಯಣಾ ತಪಸ್ವಿನಿಯು ಉತ್ತರಿಸಿದಳು.॥9½॥
ಮೂಲಮ್ - 10½
ಮಯೋ ನಾಮ ಮಹಾತೇಜಾ ಮಾಯಾವೀ ದಾನವರ್ಷಭಃ ॥
ತೇನೇದಂ ನಿರ್ಮಿತಂ ಸರ್ವಂ ಮಾಯಯಾ ಕಾಂಚನಂ ವನಮ್ ।
ಅನುವಾದ
ವಾನರ ಶ್ರೇಷ್ಠನೇ! ಮಾಯಾವಿಶಾರದ ಮಹಾತೇಜಸ್ವೀ ಮಯನ ಹೆಸರು ನೀನು ಕೇಳಿರಬಹುದು. ಅವನೇ ತನ್ನ ಮಾಯೆಯಿಂದ ಈ ಇಡೀ ಸ್ವರ್ಣಮಯ ವನವನ್ನು ನಿರ್ಮಿಸಿದ್ದನು.॥10½॥
ಮೂಲಮ್ - 11½
ಪುರಾ ದಾನವಮುಖ್ಯಾನಾಂ ವಿಶ್ವಕರ್ಮಾ ಬಭೂವ ಹ ॥
ಯೇನೇದಂ ಕಾಂಚನಂ ದಿವ್ಯಂ ನಿರ್ಮಿತಂ ಭವನೋತ್ತಮಮ್ ।
ಅನುವಾದ
ಮಯಾಸುರನು ಮೊದಲು ಶ್ರೇಷ್ಠ ದಾನವರ ವಿಶ್ವಕರ್ಮನಾಗಿದ್ದನು. ಅವನು ಈ ದಿವ್ಯ ಸುವರ್ಣಮಯ ಉತ್ತಮ ಭವನವನ್ನು ನಿರ್ಮಿಸಿದನು.॥11½॥
ಮೂಲಮ್ - 12½
ಸ ತು ವರ್ಷಸಹಸ್ರಾಣಿ ತಪಸ್ತಪ್ತ್ವಾ ಮಹತ್ವವನೇ ॥
ಪಿತಾಮಹಾದ್ವರಂ ಲೇಭೇ ಸರ್ವಮೌಶನಸಂ ಧನಮ್ ।
ಅನುವಾದ
ಅವನು ಒಂದು ಸಾವಿರ ವರ್ಷ ಕಾಡಿನಲ್ಲಿ ಘೋರ ತಪಸ್ಸು ಮಾಡಿ ಬ್ರಹ್ಮದೇವರಿಂದ ವರವಾಗಿ ಶುಕ್ರಾಚಾರ್ಯರ ಎಲ್ಲ ಶಿಲ್ಪವೈಭವವನ್ನು ಪಡೆದುಕೊಂಡಿದ್ದನು.॥12½॥
ಮೂಲಮ್ - 13½
ವಿಧಾಯ ಸರ್ವಂ ಬಲವಾನ್ಸರ್ವಕಾಮೇಶ್ವರಸ್ತದಾ ॥
ಉವಾಸ ಸುಖಿತಃ ಕಾಲಂ ಕಂಚಿದಸ್ಮಿನ್ಮಹಾವನೇ ।
ಅನುವಾದ
ಸಮಸ್ತ ಕಾಮನೆಗಳ ಸ್ವಾಮೀ ಬಲವಂತ ಮಯಾಸುರನು ಇಲ್ಲಿಯ ಎಲ್ಲ ವಸ್ತುಗಳನ್ನು ನಿರ್ಮಿಸಿ, ಈ ಮಹಾನ್ ವನದಲ್ಲಿ ಕೆಲಕಾಲ ಸುಖವಾಗಿ ವಾಸಿಸಿದ್ದನು.॥13½॥
ಮೂಲಮ್ - 14½
ತಮಪ್ಸರಸಿ ಹೇಮಾಯಾಂ ಸಕ್ತಂ ದಾನವಪುಂಗವಮ್ ॥
ವಿಕ್ರಮ್ಯೈವಾಶನಿಂ ಗೃಹ್ಯ ಜಘಾನೇಶಃ ಪುರಂದರಃ ।
ಅನುವಾದ
ಮುಂದೆ ಆ ದಾನವ ರಾಜನಿಗೆ ಹೇಮಾ ಎಂಬ ಅಪ್ಸರೆಯೊಂದಿಗೆ ಸಂಪರ್ಕ ಉಂಟಾಯಿತು. ಇದನ್ನು ತಿಳಿದ ದೇವೇಶ್ವರ ಇಂದ್ರನು ಕೈಯಲ್ಲಿ ವಜ್ರವನ್ನು ಧರಿಸಿ ಅವನೊಂದಿಗೆ ಯುದ್ಧ ಮಾಡಿ ಹೊಡೆದು ಓಡಿಸಿದನು.॥14½॥
ಮೂಲಮ್ - 15½
ಇದಂ ಚ ಬ್ರಹ್ಮಣಾ ದತ್ತಂ ಹೇಮಾಯೈ ವನಮುತ್ತಮಮ್ ॥
ಶಾಶ್ವತಾಃ ಕಾಮಭೋಗಾಶ್ಚ ಗೃಹಂ ಚೇದಂ ಹಿರಣ್ಮಯಮ್ ।
ಅನುವಾದ
ಅನಂತರ ಬ್ರಹ್ಮದೇವರು ಈ ಉತ್ತಮ ವನವನ್ನು ಇಲ್ಲಿಯ ಅಕ್ಷಯ ಕಾಮ-ಭೋಗಗಳನ್ನು, ಈ ಬಂಗಾರದ ಭವನವನ್ನು ಹೇಮಾಗೆ ಕೊಟ್ಟು ಬಿಟ್ಟನು.॥15½॥
ಮೂಲಮ್ - 16½
ದುಹಿತಾ ಮೇರುಸಾವರ್ಣೇರಹಂ ತಸ್ಯಾಃ ಸ್ವಯಂಪ್ರಭಾ ॥
ಇದಂ ರಕ್ಷಾಮಿ ಭವನಂ ಹೇಮಾಯಾ ವಾನರೋತ್ತಮ ।
ಅನುವಾದ
ನಾನು ಮೇರು ಸಾವರ್ಣಿಯ ಮಗಳು, ನನ್ನ ಹೆಸರು ಸ್ವಯಂಪ್ರಭೆ. ವಾನರಶ್ರೇಷ್ಠನೇ! ನಾನು ಆ ಹೇಮಾಳ ಈ ಭವನವನ್ನು ರಕ್ಷಿಸುತ್ತಿದ್ದೇನೆ.॥16½॥
ಮೂಲಮ್ - 17½
ಮಮ ಪ್ರಿಯಸಖೀ ಹೇಮಾ ನೃತ್ತಗೀತವಿಶಾರದಾ ॥
ತಯಾ ದತ್ತವರಾ ಚಾಸ್ಮಿ ರಕ್ಷಾಮಿ ಭವಂ ಮಹತ್ ।
ಅನುವಾದ
ಸಂಗೀತ - ನೃತ್ಯ ಕಲೆಗಳಲ್ಲಿ ಚತುರಳಾದ ಹೇಮಾ ನನ್ನ ಪ್ರಿಯ ಸಖಿಯಾಗಿದ್ದಾಳೆ. ಅವಳು ತನ್ನ ಭವನದ ರಕ್ಷಣೆಗಾಗಿ ನನ್ನಲ್ಲಿ ಪ್ರಾರ್ಥಿಸಿದ್ದಳು. ಅದಕ್ಕಾಗಿ ನಾನು ಈ ವಿಶಾಲ ಭವನದ ಸಂರಕ್ಷಣೆ ಮಾಡುತ್ತಿದ್ದೇನೆ.॥17½॥
ಮೂಲಮ್ - 18½
ಕಿಂ ಕಾರ್ಯಂ ಕಸ್ಯ ವಾ ಹೇತೋಃ ಕಾಂತಾರಾಣಿ ಪ್ರಪದ್ಯಥ ॥
ಕಥಂ ಚೇದಂ ವನಂ ದುರ್ಗಂ ಯುಷ್ಮಾಭಿರುಪಲಕ್ಷಿತಮ್ ।
ಅನುವಾದ
ನಿಮಗೆ ಇಲ್ಲಿ ಏನು ಕೆಲಸವಿದೆ? ಯಾವ ಉದ್ದೇಶದಿಂದ ನೀವು ಈ ದುರ್ಗಮ ಸ್ಥಾನದಲ್ಲಿ ಸಂಚರಿಸುತ್ತಿರುವಿರಿ? ಈ ವನಕ್ಕೆ ಬರುವುದೇ ಬಹಳ ಕಠಿಣವಾಗಿದೆ. ನೀವು ಇದನ್ನು ಹೇಗೆ ನೋಡಿದಿರಿ.॥18½॥
ಮೂಲಮ್ - 19
ಶುಚೀನ್ಯಭ್ಯವಹಾರಾಣಿ ಮೂಲಾನಿ ಚ ಫಲಾನಿ ಚ ।
ಭುಕ್ತ್ವಾ ಪೀತ್ವಾ ಚ ಪಾನೀಯಂ ಸರ್ವಂ ಮೇವಕ್ತುಮರ್ಹಸಿ ॥
ಅನುವಾದ
ಸರಿ, ಈ ಶುದ್ಧ ಭೋಜನ ಮತ್ತು ಫಲ-ಮೂಲಗಳು ಸಿದ್ಧವಿದೆ. ಇದನ್ನು ತಿಂದು ನೀರು ಕುಡಿಯಿರಿ. ಮತ್ತೆ ನನ್ನಲ್ಲಿ ನಿಮ್ಮ ಎಲ್ಲ ವೃತ್ತಾಂತವನ್ನು ಹೇಳಿರಿ.॥19॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಐವತ್ತೊಂದನೆಯ ಸರ್ಗ ಸಂಪೂರ್ಣವಾಯಿತು.॥51॥