वाचनम्
ಭಾಗಸೂಚನಾ
ಹಸಿವು-ಬಾಯಾರಿಕೆಯಿಂದ ಬಳಲಿದ ವಾನರರು ಒಂದು ಗುಹೆಯನ್ನು ಹೊಕ್ಕು ಅಲ್ಲಿ ದಿವ್ಯವೃಕ್ಷ, ದಿವ್ಯಸರೋವರ, ದಿವ್ಯಭವನ ಹಾಗೂ ಓರ್ವ ವೃದ್ಧ ತಪಸ್ವಿಯನ್ನು ನೋಡಿದುದು, ಹನುಮಂತನು ಆಕೆಯಲ್ಲಿ ಅವಳ ಪರಿಚಯ ಕೇಳಿದುದು
ಮೂಲಮ್ - 1
ಸಹ ತಾರಾಂಗದಾಭ್ಯಾಂ ತು ಸಂಗಮ್ಯ ಹನುಮಾನ್ಕಪಿಃ ।
ವಿಚಿನೋತಿ ಚ ವಿನಂಧ್ಯಸ್ಯ ಗುಹಾಶ್ಚ ಗಹನಾನಿ ಚ ॥
ಅನುವಾದ
ಹನುಮಂತನು ತಾರ ಮತ್ತು ಅಂಗದರೊಂದಿಗೆ ಸೇರಿ ವಿಂಧ್ಯಗಿರಿಯ ಗುಹೆಗಳನ್ನು ಮತ್ತು ದಟ್ಟವಾದ ಕಾಡಿನಲ್ಲಿ ಸೀತೆಯನ್ನು ಹುಡುಕಲು ತೊಡಗಿದರು.॥1॥
ಮೂಲಮ್ - 2
ಸಿಂಹಶಾರ್ದೂಲಜುಷ್ಟಾಶ್ಚ ಗುಹಾಶ್ಚ ಪರಿತಸ್ತದಾ ।
ವಿಷಮೇಷು ನಗೇಂದ್ರಸ್ಯ ಮಹಾಪ್ರಸ್ರವಣೇಷು ಚ ॥
ಅನುವಾದ
ಅವರು ಸಿಂಹಗಳು ಮತ್ತು ಹುಲಿಗಳಿಂದ ತುಂಬಿದ ಕಂದರಗಳಲ್ಲಿ ಹಾಗೂ ಅದರ ಸುತ್ತ-ಮುತ್ತಲ ಪ್ರದೇಶಗಳಲ್ಲಿಯೂ ಹುಡುಕಿದರು. ಗಿರಿರಾಜ ವಿಂಧ್ಯದ ಮೇಲೆ ಇರುವ ಸಣ್ಣ-ಪುಟ್ಟ ಜಲಪಾತಗಳಲ್ಲಿ, ದುರ್ಗಮ ಸ್ಥಾನಗಳಲ್ಲಿಯೂ ಅನ್ವೇಷಣೆ ಮಾಡಿದರು.॥2॥
ಮೂಲಮ್ - 3
ಆಸೇದುಸ್ತಸ್ಯ ಶೈಲಸ್ಯ ಕೋಟಿಂ ದಕ್ಷಿಣಪಶ್ಚಿಮಾಮ್ ।
ತೇಷಾಂ ತತ್ರೈವ ವಸತಾಂ ಸ ಕಾಲೋ ವ್ಯತ್ಯವರ್ತತ ॥
ಅನುವಾದ
ತಿರುಗಾಡುತ್ತಾ ಆ ಮೂವರೂ ವಾನರರು ಆ ಪರ್ವತದ ನೈಋತ್ಯದ ಶಿಖರಕ್ಕೆ ತಲುಪಿದರು. ಅಲ್ಲಿ ಇರುತ್ತಾ ಸುಗ್ರೀವನು ನಿಶ್ಚಿತಗೊಳಿಸಿದ್ದ ಸಮಯ ಕಳೆದುಹೋಯಿತು.॥3॥
ಮೂಲಮ್ - 4
ಸ ಹಿ ದೇಶೋ ದುರನ್ವೇಷೋ ಗುಹಾಗಹನವಾನ್ಮಹಾನ್ ।
ತತ್ರ ವಾಯುಸುತಃ ಸರ್ವಂ ವಿಚಿನೋತಿ ಸ್ಮ ಪರ್ವತಮ್ ॥
ಅನುವಾದ
ಗುಹೆಗಳಿಂದ, ಅರಣ್ಯದಿಂದ ತುಂಬಿದ ಆ ಪ್ರದೇಶದಲ್ಲಿ ಸೀತೆಯನ್ನು ಹುಡುಕುವುದು ಬಹಳ ಕಠಿಣವಾಗಿದ್ದರೂ, ಅಲ್ಲಿ ವಾಯುಪುತ್ರ ಹನುಮಂತನು ಇಡೀ ಪರ್ವತವನ್ನು ಹುಡುಕತೊಡಗಿದನು.॥4॥
ಮೂಲಮ್ - 5
ಪರಸ್ಪರೇಣ ರಹಿತಾ ಅನ್ಯೋನ್ಯಸ್ಯಾವಿದೂರತಃ ।
ಗಜೋ ಗವಾಕ್ಷೋ ಗವಯಃ ಶರಭೋ ಗಂಧಮಾದನಃ ॥
ಮೂಲಮ್ - 6
ಮೈಂದಶ್ಚ ದ್ವಿವಿದಶ್ಚೈವ ಹನೂಮಾನ್ ಜಾಂಬವಾನಪಿ ।
ಅಂಗದೋ ಯುವರಾಜಶ್ಚ ತಾರಶ್ಚ ವನಗೋಚರಃ ॥
ಮೂಲಮ್ - 7
ಗಿರಿಜಾಲಾವೃತಾನ್ ದೇಶಾನ್ ಮಾರ್ಗಿತ್ವಾ ದಕ್ಷಿಣಾಂ ದಿಶಮ್ ।
ವಿಚಿನ್ವಂತಸ್ತತಸ್ತತ್ರ ದದೃಶುರ್ವಿವೃತಂ ಬಿಲಮ್ ॥
ಅನುವಾದ
ಮತ್ತೆ ಒಬ್ಬರು ಮತ್ತೊಬ್ಬರು ಸ್ವಲ್ಪ ದೂರದಲ್ಲಿ ಬೇರೆ-ಬೇರೆಯಾಗಿ ಗಜ, ಗವಾಕ್ಷ, ಗವಯ, ಶರಭ, ಗಂಧಮಾದನ, ಮೈಂದ, ದ್ವಿವಿದ, ಹನುಮಂತ, ಜಾಂಬವಂತ, ಯುವರಾಜ ಅಂಗದ ಹಾಗೂ ವನವಾಸೀ ವಾನರ ತಾರ - ಇವರು ದಕ್ಷಿಣ ದಿಕ್ಕಿನಲ್ಲಿ ಇರುವ ಪರ್ವತ ಸಾಲುಗಳಿಂದ ಆವೃತವಾದ ಪ್ರದೇಶದಲ್ಲಿ ಸೀತೆಯನ್ನು ಹುಡುಕತೊಡಗಿದರು. ಅರಸುತ್ತಾ-ಅರಸುತ್ತಾ ಅವರಿಗೆ ಬಾಗಿಲು ತೆರೆ ಒಂದು ಗುಹೆಯು ಕಂಡುಬಂತು.॥5-7॥
ಮೂಲಮ್ - 8
ದುರ್ಗಮೃಕ್ಷಬಿಲಂ ನಾಮ ದಾನವೇನಾಭಿರಕ್ಷಿತಮ್ ।
ಕ್ಷುತ್ಪಿಪಾಸಾಪರೀತಾಸ್ತು ಶ್ರಾಂತಾಸ್ತು ಸಲಿಲಾರ್ಥಿನಃ ॥
ಅನುವಾದ
ಅದರಲ್ಲಿ ಪ್ರವೇಶಿಸುವುದು ಬಹಳ ಕಠಿಣವಾಗಿತ್ತು. ಆ ಗುಹೆಯು ಋಕ್ಷಬಿಲ ಎಂದು ವಿಖ್ಯಾತವಾಗಿತ್ತು. ಒಬ್ಬ ರಾಕ್ಷಸನು ಅದನ್ನು ರಕ್ಷಿಸುತ್ತಿದ್ದನು. ವಾನರರಿಗೆ ಹಸಿವು- ಬಾಯಾರಿಕೆ ಸತಾಯಿಸುತ್ತಿತ್ತು. ಅವರು ಬಳಲಿಹೋಗಿ, ನೀರು ಕುಡಿಯಲು ಬಯಸುತ್ತಿದ್ದರು.॥8॥
ಮೂಲಮ್ - 9½
ಅವಕೀರ್ಣಂ ಲತಾವೃಕ್ಷೈರ್ದದೃಶುಸ್ತೇ ಮಹಾಬಿಲಮ್ ।
ತತಃ ಕ್ರೌಂಚಾಶ್ಚ ಹಂಸಾಶ್ಚ ಸಾರಸಾಶ್ಚಾಪಿ ನಿಷ್ಕ್ರಮನ್ ॥
ಜಲಾರ್ದ್ರಾಶ್ಚಕ್ರವಾಕಾಶ್ಚ ರಕ್ತಾಂಗಾಃ ಪದ್ಮರೇಣುಭಿಃ ।
ಅನುವಾದ
ಆದ್ದರಿಂದ ಮರ-ಬಳ್ಳಿಗಳಿಂದ ಮುಚ್ಚಿಹೋದ ವಿಶಾಲ ಗುಹೆಯ ಕಡೆಗೆ ನೋಡತೊಡಗಿದರು. ಅಷ್ಟರಲ್ಲಿ ಅದರ ಒಳಗಿನಿಂದ ಕ್ರೌಂಚ, ಹಂಸ, ಸಾರಸ ಹಾಗೂ ಒದ್ದೆಯಾದ ರೆಕ್ಕೆಗಳುಳ್ಳ, ಅವುಗಳ ಅಂಗಗಳು ಕಮಲಪುಷ್ಪದ ಪರಾಗದಿಂದ ರಕ್ತವರ್ಣವಾಗಿದ್ದ ಚಕ್ರವಾಕ ಪಕ್ಷಿಗಳು ಹೊರಗೆ ಹೊರಟವು.॥9½॥
ಮೂಲಮ್ - 10
ತತಸ್ತದ್ಬಿಲಮಾಸಾದ್ಯ ಸುಗಂಧಿ ದುರತಿಕ್ರಮಮ್ ॥
ಮೂಲಮ್ - 11
ವಿಸ್ಮಯವ್ಯಗ್ರಮನಸೋ ಬಭೂವುರ್ವಾನರರ್ಷಭಾಃ ।
ಸಂಜಾತಪರಿಶಂಕಾಸ್ತೇ ತದ್ಬಿಲಂ ಪ್ಲವಗೋತ್ತಮಾಃ ॥
ಅನುವಾದ
ಆಗ ಆ ಸುಗಂಧಿತ ಹಾಗೂ ದುರ್ಲಂಘ್ಯ ಗುಹೆಯ ಬಳಿಗೆ ಹೋಗಿ ಆ ಎಲ್ಲ ಶ್ರೇಷ್ಠವಾನರರ ಮನಸ್ಸು ಆಶ್ಚರ್ಯಚಕಿತವಾಯಿತು. ಆ ಬಿಲದೊಳಗೆ ನೀರು ಇರುವುದು ಅವರಿಗೆ ಸಂದೇಹ ಉಂಟಾಯಿತು.॥10-11॥
ಮೂಲಮ್ - 12½
ಅಭ್ಯಪದ್ಯಂತ ಸಂಹೃಷ್ಟಾಸ್ತೇಜೋವಂತೋ ಮಹಾಬಲಾಃ ।
ನಾನಾಸತ್ತ್ವಸಮಾಕೀರ್ಣಂ ದೈತ್ಯೇಂದ್ರನಿಲಯೋಪಮಮ್ ॥
ದುರ್ದರ್ಶಮಿವಘೋರಂ ಚ ದುರ್ವಿಗಾಹಂ ಚ ಸರ್ವಶಃ ।
ಅನುವಾದ
ಆ ತೇಜಸ್ವೀ, ಮಹಾಬಲೀ ವಾನರರು ಬಹಳ ಹರ್ಷಗೊಂಡು ಗುಹೆಯ ಬಳಿಗೆ ಹೋದರು. ಅದು ನಾನಾ ಪ್ರಕಾರದ ಪ್ರಾಣಿಗಳಿಂದ ತುಂಬಿದ್ದು, ದೈತ್ಯರಾಜರ ನಿವಾಸಸ್ಥಾನ ಪಾತಾಳದಂತೆ ಭಯಂಕರವಾಗಿ ಕಾಣುತ್ತಿತ್ತು. ಅದರ ಕಡೆಗೆ ನೋಡುವುದು ಕಠಿಣವಾಗುವಷ್ಟು ಭಯಾನಕವಾಗಿತ್ತು. ಅದರೊಳಗೆ ಹೋಗುವುದು ಕಷ್ಟಸಾಧ್ಯವಾಗಿತ್ತು.॥12½॥
ಮೂಲಮ್ - 13½
ತತಃ ಪರ್ವತಕೂಟಾಭೋ ಹನುಮಾನ್ಮಾರುತಾತ್ಮಜಃ ॥
ಅಬ್ರವೀದ್ವಾನರಾನ್ ಘೋರಾನ್ ಕಾಂತಾರವನಕೋವಿದಃ ।
ಅನುವಾದ
ಆಗ ದುರ್ಗಮ ವನದ ಅರಿವು ಇದ್ದ, ಪರ್ವತ ಶಿಖರದಂತಿದ್ದ ಪವನಪುತ್ರ ಹನುಮಂತನು ಆ ಘೋರ ವಾನರರಲ್ಲಿ ಹೇಳಿದನು.॥13½॥
ಮೂಲಮ್ - 14½
ಗಿರಿಜಾಲಾವೃತಾನ್ದೇಶಾನ್ಮಾರ್ಗಿತ್ವಾ ದಕ್ಷಿಣಾಂ ದಿಶಮ್ ॥
ವಯಂ ಸರ್ವೇ ಪರಿಶ್ರಾಂತಾ ನ ಚ ಪಶ್ಯಾಮ ಮೈಥಿಲೀಮ್ ।
ಅನುವಾದ
ಬಂಧುಗಳೇ! ದಕ್ಷಿಣ ದೇಶದ ಪ್ರದೇಶಗಳು ಸಾಧಾರಣ ಪರ್ವತ ಪಂಕ್ತಿಗಳಿಂದ ಸುತ್ತುವರಿದಿರುತ್ತವೆ. ಇವುಗಳಲ್ಲಿ ಮಿಥಿಲೇಶ ಕುಮಾರೀ ಸೀತೆಯನ್ನು ಹುಡುಕುತ್ತಾ-ಹುಡುಕುತ್ತಾ ನಾವೆಲ್ಲರೂ ಬಳಲಿ ಹೋಗಿದ್ದೇವೆ; ಆದರೆ ನಮಗೆ ಆಕೆಯ ದರ್ಶನವಾಗಲೇ ಇಲ್ಲ.॥14½॥
ಮೂಲಮ್ - 15
ಅಸ್ಮಾಚ್ಚಾಪಿ ಬಿಲಾದ್ಧಂಸಾಃ ಕ್ರೌಂಚಾಶ್ಚ ಸಹ ಸಾರಸೈಃ ॥
ಮೂಲಮ್ - 16½
ಜಲಾರ್ದ್ರಾಶ್ಚಕ್ರವಾಕಾಶ್ಚ ನಿಷ್ಪತಂತಿ ಸ್ಮ ಸರ್ವತಃ ।
ನೂನಂ ಸಲಿಲವಾನತ್ರ ಕೂಪೋ ವಾ ಯದಿ ವಾ ಹ್ರದಃ ॥
ತಥಾ ಚೇಮೇ ಬಿಲದ್ವಾರೇ ಸ್ನಿಗ್ಧಾಸ್ತಿಷ್ಠಂತಿ ಪಾದಪಾಃ ।
ಅನುವಾದ
ಎದುರಿನ ಈ ಗುಹೆಯಿಂದ ಹಂಸ, ಕ್ರೌಂಚ, ಸಾರಸ ಮತ್ತು ನೀರಿನಿಂದ ನೆನೆದ ಚಕ್ರವಾಕಗಳು ಹೊರಗೆ ಬರುತ್ತಿವೆ. ಆದ್ದರಿಂದ ನಿಶ್ಚಯವಾಗಿಯೂ ಇದರಲ್ಲಿ ನೀರಿನ ಕೆರೆ ಅಥವಾ ಯಾವುದಾದರೂ ಜಲಾಶಯ ಇರಬೇಕು. ಆದ್ದರಿಂದಲೇ ಈ ಗುಹೆಯ ದ್ವಾರದ ವೃಕ್ಷಗಳು ಹಸುರಾಗಿವೆ.॥15-16½॥
ಮೂಲಮ್ - 17½
ಇತ್ಯುಕ್ತಾಸ್ತದ್ಬಿಲಂ ಸರ್ವೇ ವಿವಿಶುಸ್ತಿಮಿರಾವೃತಮ್ ॥
ಅಚಂದ್ರಸೂರ್ಯಂ ಹರಯೋ ದದೃಶೂ ರೋಮಹರ್ಷಣಮ್ ।
ಅನುವಾದ
ಹನುಮಂತನು ಹೀಗೆ ಹೇಳಿದಾಗ ಆ ಎಲ್ಲ ವಾನರರು ಸೂರ್ಯ-ಚಂದ್ರರ ಕಿರಣಗಳು ತಲುಪದಿರುವ ಅಂಧಕಾರ ತುಂಬಿದ ಆ ಗುಹೆಯನ್ನು ಹೊಕ್ಕರು. ಒಳಗೆ ಹೋಗಿ ನೋಡು ತ್ತಾರೆ, ಆ ಗುಹೆಯು ರೋಮಾಂಚಕರವಾಗಿತ್ತು.॥17½॥
ಮೂಲಮ್ - 18½
ನಿಶಾಮ್ಯ ತಸ್ಮಾತ್ ಸಿಂಹಾಂಶ್ಚ ತಾಂಸ್ತಾಂಶ್ಚ ಮೃಗಪಕ್ಷಿಣಃ ॥
ಪ್ರವಿಷ್ಟಾ ಹರಿಶಾರ್ದೂಲಾ ಬಿಲಂ ತಿಮಿರಸಂವೃತಮ್ ।
ಅನುವಾದ
ಆ ಬಿಲದಿಂದ ಹೊರ ಬರುತ್ತಿದ್ದ ಸಿಂಹಗಳನ್ನು, ಮೃಗಗಳನ್ನು, ಪಕ್ಷಿಗಳನ್ನು ನೋಡಿ ಆ ವಾನರಶ್ರೇಷ್ಠರು ಅಂಧಕಾರ ತುಂಬಿದ ಆ ಗುಹೆಯನ್ನು ಪ್ರವೇಶಿಸತೊಡಗಿದರು.॥18½॥
ಮೂಲಮ್ - 19½
ನ ತೇಷಾಂ ಸಜ್ಜತೇ ದೃಷ್ಟಿ ತೇಜೋ ನ ಪರಾಕ್ರಮಃ ॥
ವಾಯೋರಿವ ಗತಿಸ್ತೇಷಾಂ ದೃಷ್ಟಿಸ್ತಮಸಿ ವರ್ತತೇ ।
ಅನುವಾದ
ವಾನರರ ದೃಷ್ಟಿಯಾಗಲೀ, ತೇಜಸ್ಸಾಗಲೀ, ಪರಾಕ್ರಮವೇ ಆಗಲೀ, ಕತ್ತಲೆಯಿಂದ ಸಮಾವೃತವಾಗಿದ್ದ ಆ ಬಿಲದಲ್ಲಿ ಕುಂಠಿತವಾಗಲಿಲ್ಲ. ಅವರ ಗತಿ ವಾಯುವಿನಂತಿದ್ದು, ಕತ್ತಲೆಯಲ್ಲೂ ನೋಡುವ ಸಾಮರ್ಥ್ಯ ಅವರಿಗಿತ್ತು.॥19½॥
ಮೂಲಮ್ - 20½
ತೇ ಪ್ರವಿಷ್ಟಾಸ್ತು ವೇಗೇನ ತದ್ಭಿಲಂ ಕಪಿಕುಂಜರಾಃ ॥
ಪ್ರಕಾಶಂ ಚಾಭಿರಾಮಂ ಚ ದದೃಶುರ್ದೇಶಮುತ್ತಮಮ್ ।
ಅನುವಾದ
ಆ ಶ್ರೇಷ್ಠ ವಾನರರು ಆ ಬಿಲದಲ್ಲಿ ವೇಗವಾಗಿ ನುಗ್ಗಿದರು. ಒಳಗೆ ಹೋಗಿ ನೋಡುತ್ತಾರೆ - ಆ ಸ್ಥಾನವು ಬಹಳ ಉತ್ತಮ, ಪ್ರಕಾಶಮಾನ ಮತ್ತು ಮನೋಹರವಾಗಿತ್ತು.॥20½॥
ಮೂಲಮ್ - 21½
ತತಸ್ತಸ್ಮಿನ್ಬಿಲೇ ಭೀಮೇ ನಾನಾಪಾದಪಸಂಕುಲೇ ॥
ಅನ್ಯೋನ್ಯಂ ಸಂಪರಿಷ್ವಜ್ಯ ಜಗ್ಮುರ್ಯೋಜನಮಂತರಮ್ ।
ಅನುವಾದ
ನಾನಾ ಪ್ರಕಾರದ ವೃಕ್ಷಗಳಿಂದ ತುಂಬಿದ ಆ ಭಯಂಕರ ಗುಹೆಯಲ್ಲಿ ಅವರು ಒಂದು ಯೋಜನದವರೆಗೆ ಒಬ್ಬರಿಗೊಬ್ಬರು ಹಿಡಿದುಕೊಂಡು ಸಾಗಿದರು.॥21½॥
ಮೂಲಮ್ - 22½
ತೇ ನಷ್ಟ ಸಂಜ್ಞಾಸ್ತೃಷಿತಾಃ ಸಂಭ್ರಾಂತಾಃ ಸಲಿಲಾರ್ಥಿನಃ ॥
ಪರಿಪೇತುರ್ಬಿಲೇ ತಸ್ಮಿನ್ಕಂಚಿತ್ಕಾಲಮತಂದ್ರಿತಾಃ ।
ಅನುವಾದ
ಬಾಯಾರಿಕೆಯಿಂದ ಅವರು ನಿಶ್ಚೇಷ್ಟಿತರಂತಾಗಿದ್ದರು. ಅವರು ನೀರು ಕುಡಿಯಲು ಉತ್ಸುಕರಾಗಿ ಗಾಬರಿಗೊಂಡಿದ್ದರು. ಸ್ವಲ್ಪ ಸಮಯದವರೆಗೆ ಆಲಸ್ಯರಹಿತರಾಗಿ ಆ ಬಿಲದಲ್ಲಿ ಒಂದೇ ಸಮನೆ ಮುಂದಕ್ಕೆ ಹೋಗುತ್ತಿದ್ದರು.॥22½॥
ಮೂಲಮ್ - 23½
ತೇ ಕೃಶಾ ದೀನವದನಾಃ ಪರಿಶ್ರಾಂತಾಃ ಪ್ಲವಂಗಮಾಃ ॥
ಆಲೋಕಂ ದದೃಶುರ್ವೀರಾ ನಿರಾಶಾ ಜೀವಿತೇ ಯದಾ ।
ಅನುವಾದ
ಆ ವಾನರರು ದುರ್ಬಲರೂ, ಖಿನ್ನವದನರೂ, ಬಳಲಿದವರೂ ಆಗಿ ಬದುಕಿನಲ್ಲಿ ನಿರಾಶರಾದಾಗ ಅವರಿಗೆ ಅಲ್ಲಿ ಪ್ರಕಾಶ ಕಂಡು ಬಂತು.॥23½॥
ಮೂಲಮ್ - 24½
ತತಸ್ತಂ ದೇಶಮಾಗಮ್ಯ ಸೌಮ್ಯಂ ವಿತಿಮಿರಂ ವನಮ್ ॥
ದದೃಶುಃ ಕಾಂಚನಾನ್ ವೃಕ್ಷಾನ್ ದೀಪ್ತವೈಶ್ವಾನರಪ್ರಭಾನ್ ।
ಅನುವಾದ
ಅನಂತರ ಅಂಧಕಾರದಿಂದ ಪ್ರಕಾಶಪೂರ್ಣ ಪ್ರದೇಶಕ್ಕೆ ಬಂದು ಆ ಸೌಮ್ಯವಾನರರು ಅಲ್ಲಿ ಅಂಧಕಾರರಹಿತ ವನವನ್ನು ನೋಡಿದರು - ಅಲ್ಲಿ ಎಲ್ಲ ವೃಕ್ಷಗಳು ಸುವರ್ಣಮಯವಾಗಿದ್ದು, ಅಗ್ನಿಯಂತೆ ಪ್ರಕಾಶಿಸುತ್ತಿದ್ದವು.॥24½॥
ಮೂಲಮ್ - 25½
ಸಾಲಾಂಸ್ತಾಲಾಂಸ್ತಮಾಲಾಂಶ್ಚ ಪುನ್ನಾಗಾನ್ವಂಜುಲಾಂಧವಾನ್ ॥
ಚಂಪಕಾನ್ನಾಗವೃಕ್ಷಾಂಶ್ಚ ಕರ್ಣಿಕಾರಾಂಶ್ಚ ಪುಷ್ಪಿತಾನ್ ।
ಅನುವಾದ
ಸಾಲ, ತಾಲ, ತಮಾಲ, ನಾಗಕೇಸರ, ಅಶೋಕ, ಧವ, ಸಂಪಿಗೆ, ನಾಗವೃಕ್ಷ ಮತ್ತು ಕಣಗಿಲೆ - ಮುಂತಾದ ಎಲ್ಲ ವೃಕ್ಷಗಳು ಹೂವುಗಳಿಂದ ತುಂಬಿದ್ದವು.॥25½॥
ಮೂಲಮ್ - 26½
ಸ್ತಬಕೈಃ ಕಾಂಚನೈಶ್ಚಿತ್ತೈ ರಕ್ತೈಃ ಕಿಸಲಯೈಸ್ತಥಾ ॥
ಆಪೀಡೈಶ್ಚ ಲತಾಭಿಶ್ಚ ಹೇಮಾಭರಣಭೂಷಿತಾನ್ ।
ಅನುವಾದ
ವಿಚಿತ್ರ ಸುವರ್ಣಮಯ ಗೊಂಚಲು ಮತ್ತು ಕೆಂಪು-ಕೆಂಪಾದ ಚಿಗುರುಗಳು ಆ ವೃಕ್ಷಗಳ ಮುಕುಟದಂತೆ ಇದ್ದವು. ಅವುಗಳಲ್ಲಿ ಬಳ್ಳಿಗಳು ಹಬ್ಬಿದ್ದು, ಅವು ತಮ್ಮ ಲರೂಪವಾಗಿ ಸುವರ್ಣ ಆಭೂಷಣಗಳಿಂದ ವಿಭೂಷಿತವಾಗಿದ್ದವು.॥26½॥
ಮೂಲಮ್ - 27½
ತರುಣಾದಿತ್ಯ ಸಂಕಾಶಾನ್ ವೈಡೂರ್ಯಮಯವೇದಿಕಾನ್ ॥
ವಿಭ್ರಾಜಮಾನಾನ್ವಪುಷಾ ಪಾದಪಾಂಶ್ಚ ಹಿರಣ್ಮಯಾನ್ ।
ಅನುವಾದ
ಅವು ಪ್ರಾತಃಕಾಲದ ಸೂರ್ಯನಂತೆ ಅನಿಸುತ್ತಿದ್ದವು. ಅವುಗಳ ಕೆಳಗೆ ವೈಡೂರ್ಯದಿಂದ ವೇದಿ ಮಾಡಲಾಗಿತ್ತು. ಆ ಸುವರ್ಣಮಯ ವೃಕ್ಷಗಳು ತಮ್ಮ ದೀಪ್ತಿಯಿಂದ ಪ್ರಕಾಶಿತವಾಗುತ್ತಿದ್ದವು.॥27½॥
ಮೂಲಮ್ - 28
ನೀಲವೈಡೂರ್ಯವರ್ಣಾಶ್ಚ ಪದ್ಮಿನೀಃ ಪತಗೈರ್ವೃತಾಃ ॥
ಮೂಲಮ್ - 29½
ಮಹದ್ಭಿಃ ಕಾಂಚನೈವೃಕ್ಷೈರ್ವೃತಾ ಬಾಲಾರ್ಕಸಂನಿಭೈಃ ।
ಜಾತರೂಪಮಯೈರ್ಮತ್ಸ್ಯೈರ್ಮಹದ್ಭಿಶ್ಚಾಥ ಪಂಕಜೈಃ ॥
ನಲಿನೀಸ್ತತ್ರ ದದೃಶುಃ ಪ್ರಸನ್ನಸಲಿಲಾಯುತಾಃ ।
ಅನುವಾದ
ಅಲ್ಲಿ ನೀಲ ವೈಡೂರ್ಯಮಣಿಯಂತೆ ಕಾಂತಿಯುಳ್ಳ ಪದ್ಮಲತೆಗಳು ಪಕ್ಷಿಗಳಿಂದ ಆವೃತವಾಗಿ ಕಂಡು ಬರುತ್ತಿದ್ದವು. ಬಾಲ ಸೂರ್ಯನಂತೆ ಪ್ರಭೆಯುಳ್ಳ ವಿಶಾಲ ಕಾಂಚನ ವೃಕ್ಷಗಳಿಂದ ಸುತ್ತುವರೆದ ಅನೇಕ ಸರೋವರಗಳೂ ಕಂಡು ಬಂದವು. ಅವುಗಳಲ್ಲಿ ಬಂಗಾರ ಬಣ್ಣದ ದೊಡ್ಡ-ದೊಡ್ಡ ಮೀನುಗಳು ಶೋಭಿಸುತ್ತಿದ್ದವು. ಆ ಸರೋವರಗಳು ಕಮಲಗಳಿಂದ ಮತ್ತು ಸ್ವಚ್ಛ ನೀರಿನಿಂದ ತುಂಬಿದ್ದವು.॥28-29½॥
ಮೂಲಮ್ - 30
ಕಾಂಚನಾನಿ ವಿಮಾನಾನಿ ರಾಜತಾನಿ ತಥೈವ ಚ ॥
ಮೂಲಮ್ - 31½
ತಪನೀಯ ಗವಾಕ್ಷಾಣಿ ಮುಕ್ತಾಜಾಲಾವೃತಾನಿ ಚ ।
ಹೈಮರಾಜತ ಭೌಮಾನಿ ವೈಡೂರ್ಯಮಣಿಮಂತಿ ಚ ॥
ದದೃಶುಸ್ತತ್ರ ಹರಯೋ ಗೃಹಮುಖ್ಯಾನಿ ಸರ್ವಶಃ ।
ಅನುವಾದ
ಅಲ್ಲಿ ಎಲ್ಲೆಡೆ ಚಿನ್ನ-ಬೆಳ್ಳಿಯ ನಿರ್ಮಿತ ಅನೇಕ ಶ್ರೇಷ್ಠ ಭವನಗಳನ್ನು ವಾನರರು ನೋಡಿದರು. ಅವುಗಳ ಗವಾಕ್ಷಗಳನ್ನು ಮುತ್ತಿನ ಜಾಲರಿಗಳಿಂದ ಮುಚ್ಚಿದ್ದರು. ಆ ಭವನದಲ್ಲಿ ಚಿನ್ನದಿಂದ ಕಿಡಕಿಗಳು ಇದ್ದು, ಚಿನ್ನ-ಬೆಳ್ಳಿಯ ವಿಮಾನಗಳಿದ್ದವು. ಕೆಲವು ಮನೆಗಳನ್ನು ಚಿನ್ನದಿಂದ ಕಟ್ಟಿದ್ದರೆ, ಕೆಲವು ಬೆಳ್ಳಿಯವು. ಎಷ್ಟೋ ಮನೆಗಳು ಪಾರ್ಥಿವ (ಇಟ್ಟಿಗೆ, ಕಲ್ಲು, ಮರಗಳಿಂದ) ವಸ್ತುಗಳಿಂದ ನಿರ್ಮಿಸಿದ್ದವು. ಅವುಗಳಲ್ಲಿ ವೈಡೂರ್ಯ ಮಣಿಗಳಿಂದ ಅಲಂಕರಿಸಿದ್ದರು.॥30-31½॥
ಮೂಲಮ್ - 32
ಪುಷ್ಪಿತಾನ್ ಫಲಿನೋ ವೃಕ್ಷಾನ್ ಪ್ರವಾಲಮಣಿಸಂನಿಭಾನ್ ॥
ಮೂಲಮ್ - 33
ಕಾಂಚನಭ್ರಮರಾಂಶ್ಚೈವ ಮಧೂನಿ ಚ ಸಮಂತತಃ ।
ಮಣಿಕಾಂಚನಚಿತ್ರಾಣಿ ಶಯನಾನ್ಯಾಸನಾನಿ ಚ ॥
ಮೂಲಮ್ - 34
ವಿವಿಧಾನಿ ವಿಶಾಲಾನಿ ದದೃಶುಸ್ತೇ ಸಮಂತತಃ ।
ಹೈಮರಾಜತಕಾಂಸ್ಯಾನಾಂ ಭಾಜನಾನಾಂಚ ರಾಶಯಃ ॥
ಮೂಲಮ್ - 35
ಅಗರೂಣಾಂ ಚ ದಿವ್ಯಾನಾಂ ಚಂದನಾನಾಂ ಚ ಸಂಚಯಾನ್ ।
ಶುಚೀನ್ಯಭ್ಯವಹಾರಾಣಿ ಮೂಲಾನಿ ಚ ಫಲಾನಿ ಚ ॥
ಮೂಲಮ್ - 36
ಮಹಾರ್ಹಾಣಿ ಚ ಯಾನಾನಿ ಮಧೂನಿ ರಸವಂತಿ ಚ ।
ದಿವ್ಯಾನಾಮಂಬರಾಣಾಂ ಚ ಮಹಾರ್ಹಾಣಾಂ ಚ ಸಂಚಯಾನ್ ॥
ಮೂಲಮ್ - 37½
ಕಂಬಲಾನಾಂ ಚ ಚಿತ್ರಾಣಾಮಜಿನಾನಾಂ ಚ ಸಂಚಯಾನ್ ।
ತತ್ರ ತತ್ರ ಚ ವಿನ್ಯಸ್ತಾನ್ ದೀಪ್ತಾನ್ವೈಶ್ವಾನರಪ್ರಭಾನ್ ॥
ದದೃಶುರ್ವಾನರಾಃ ಶುಭ್ರಾಂಜಾತರೂಪಸ್ಯ ಸಂಚಯಾನ್ ।
ಅನುವಾದ
ಅಲ್ಲಿಯ ವೃಕ್ಷಗಳು ಹೂವು-ಹಣ್ಣುಗಳನ್ನು ಬಿಟ್ಟಿದ್ದವು. ಆ ವೃಕ್ಷಗಳು ಹವಳ ಮಣಿಗಳಂತೆ ಹೊಳೆಯುತ್ತಿದ್ದವು. ಅವುಗಳ ಮೇಲೆ ಬಂಗಾರ ಬಣ್ಣದ ದುಂಬಿಗಳು ಹಾರಾಡುತ್ತಿದ್ದವು. ಅಲ್ಲಿಯ ಮನೆಗಳಲ್ಲಿ ಎಲ್ಲೆಡೆ ಜೇನು ಸಂಚಿತವಾಗಿತ್ತು. ಮಣಿ ಮತ್ತು ಸುವರ್ಣ ಜಟಿತ ವಿಚಿತ್ರ ಮಂಚಗಳು, ಆಸನಗಳು ಎಲ್ಲೆಡೆ ಅಲಂಕರಿಸಿ ಇಟ್ಟಿದ್ದರು ಅವು ಅನೇಕ ಪ್ರಕಾರದಿಂದ ಇದ್ದು ವಿಶಾಲವಾಗಿದ್ದವು. ಅಲ್ಲಿ ರಾಶಿ-ರಾಶಿಯಾಗಿ ಚಿನ್ನ-ಬೆಳ್ಳಿ-ಕಂಚುಗಳ ಹೂವುಗಳ ಪಾತ್ರೆಗಳನ್ನಿಟ್ಟಿದ್ದರು. ಅಗರು ಹಾಗೂ ದಿವ್ಯಚಂದನದ ರಾಶಿಗಳು ಸುರಕ್ಷಿತವಾಗಿದ್ದವು. ಪವಿತ್ರ ಭೋಜನ ಸಾಮಗ್ರೀ ಹಾಗೂ ಫಲ-ಮೂಲಗಳು ಸಿದ್ಧವಾಗಿದ್ದವು. ಅಮೂಲ್ಯ ವಾಹನಗಳು, ಸರಸ ಜೇನು, ಬೆಲೆ ಬಾಳುವ ದಿವ್ಯವಸ್ತ್ರಗಳ ರಾಶಿಗಳು, ಚಿತ್ರಿತ ರತ್ನಗಂಬಳಿಗಳ ರಾಶಿಗಳು, ಕೃಷ್ಣಾಜಿನಗಳು, ಅಲ್ಲಲ್ಲಿ ಇಟ್ಟಿದ್ದರು. ಅವೆಲ್ಲವೂ ಅಗ್ನಿಯಂತೆ ಬೆಳಗುತ್ತಿದ್ದವು. ವಾನರರು ಅಲ್ಲಿ ಹೊಳೆಯುವ ಸುವರ್ಣ ರಾಶಿಗಳನ್ನು ನೋಡಿದರು.॥32-37॥
ಮೂಲಮ್ - 38
ತತ್ರ ತತ್ರ ವಿಚಿನ್ವಂತೋ ಬಿಲೇ ತತ್ರ ಮಹಾಪ್ರಭಾಃ ॥
ಮೂಲಮ್ - 39
ದದೃಶುರ್ವಾನರಾಃ ಶೂರಾಃ ಸ್ತ್ರಿಯಂ ಕಾಂಚಿದದೂರತಃ ।
ತಾಂ ತೇ ದದೃಶುಸ್ತತ್ರ ಚೀರಕೃಷ್ಣಾಜಿನಾಂಬರಾಮ್ ॥
ಮೂಲಮ್ - 40
ತಾಪಸೀಂನಿಯತಾಹಾರಾಂ ಜ್ವಲಂತೀಮಿವ ತೇಜಸಾ ।
ವಿಸ್ಮಿತಾ ಹರಯಸ್ತತ್ರ ವ್ಯವತಿಷ್ಠಂತ ಸರ್ವಶಃ ।
ಪಪ್ರಚ್ಛ ಹನುಮಾಂಸ್ತತ್ರ ಕಾಸಿತ್ವಂ ಕಸ್ಯ ವಾ ಬಿಲಮ್ ॥
ಅನುವಾದ
ಆ ಗುಹೆಯಲ್ಲಿ ಅಲ್ಲಿ-ಇಲ್ಲಿ ಹುಡುಕುತ್ತಾ ಆ ಮಹಾತೇಜಸ್ವೀ ಶೂರವೀರ ವಾನರರು ಸ್ವಲ್ಪ ದೂರದಲ್ಲಿ ಯಾವುದೋ ಸ್ತ್ರೀಯನ್ನು ನೋಡಿದರು. ಅವಳು ವಲ್ಕಲ ಮತ್ತು ಕೃಷ್ಣಾಜಿನ ತೊಟ್ಟು ನಿಯಮಿತ ಆಹಾರ ಸೇವಿಸುತ್ತಾ ತಪಸ್ಸಿನಲ್ಲಿ ಸಂಲಗ್ನವಾಗಿದ್ದು, ತನ್ನ ತೇಜದಿಂದ ದೇದಿಪ್ಯಮಾನವಾಗಿದ್ದಳು. ವಾನರರು ಅಲ್ಲಿ ಆಕೆಯನ್ನು ಗಮನವಿಟ್ಟು ನೋಡಿ, ಆಶ್ಚರ್ಯಚಕಿತರಾಗಿ ನಿಂತು ಬಿಟ್ಟರು. ಆಗ ಹನುಮಂತನು ಆಕೆಯಲ್ಲಿ - ದೇವಿ! ನೀನು ಯಾರು? ಈ ಗುಹೆ ಯಾರದ್ದಾಗಿದೆ? ಎಂದು ಕೇಳಿದನು.॥38-40॥
ಮೂಲಮ್ - 41
ತತೋ ಹನೂಮಾನ್ ಗಿರಿಸಂನಿಕಾಶಃ
ಕೃತಾಂಜಲಿಸ್ತಾಮಭಿವಾದ್ಯ ವೃದ್ಧಾಮ್ ।
ಪಪ್ರಚ್ಛ ಕಾ ತ್ವಂ ಭವನಂ ಬಿಲಂ ಚ
ರತ್ನಾನಿ ಚೇಮಾನಿ ವದಸ್ವ ಕಸ್ಯ ॥
ಅನುವಾದ
ಪರ್ವತದಂತೆ ವಿಶಾಲಕಾಯ ಹನುಮಂತನು ಕೈಮುಗಿದು ಆ ವೃದ್ಧ ತಪಸ್ವಿನಿಗೆ ವಂದಿಸಿ ಕೇಳಿದನು - ದೇವಿ! ನೀನು ಯಾರಾಗಿರುವೆ? ಈ ಗುಹೆ, ಭವನ ಹಾಗೂ ರತ್ನಗಳು ಯಾರದ್ದಾಗಿದೆ? ಇದನ್ನು ನಮಗೆ ತಿಳಿಸು.॥41॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಐವತ್ತನೆಯ ಸರ್ಗ ಸಂಪೂರ್ಣವಾಯಿತು.॥50॥