०४४ रामेण मुद्रिकाप्रदानम्

वाचनम्
ಭಾಗಸೂಚನಾ

ಶ್ರೀರಾಮನು ಹನುಮಂತನಿಗೆ ಅಂಗುಲೀಯಕವನ್ನು ಕೊಟ್ಟು ಕಳುಹಿಸಿದುದು

ಮೂಲಮ್ - 1

ವಿಶೇಷೇಣ ತು ಸುಗ್ರೀವೋ ಹನೂಮತ್ಯರ್ಥಮುಕ್ತವಾನ್ ।
ಸ ಹಿ ತಸ್ಮಿನ್ ಹರಿಶ್ರೇಷ್ಠೇ ನಿಶ್ಚಿತಾರ್ಥೋಽರ್ಥಸಾಧನೇ ॥

ಅನುವಾದ

ಸುಗ್ರೀವನು ಮುಖ್ಯವಾಗಿ ಹನುಮಂತನಲ್ಲಿ ಸೀತಾನ್ವೇಷಣೆಯ ಕುರಿತು ವಿಶೇಷವಾಗಿ ಹೇಳಿದನು; ಏಕೆಂದರೆ ವಾನರಶ್ರೇಷ್ಠ ಹನುಮಂತನೇ ಈ ಕಾರ್ಯವನ್ನು ಸಿದ್ಧಗೊಳಿಸುವವನು ಎಂಬ ದೃಢವಿಶ್ವಾಸ ಅವನಿಗಿತ್ತು.॥1॥

ಮೂಲಮ್ - 2

ಅಬ್ರವೀಚ್ಚ ಹನೂಮಂತಂ ವಿಕ್ರಾಂತಮನಿಲಾತ್ಮಜಮ್ ।
ಸುಗ್ರೀವಃ ಪರಮಪ್ರೀತಃ ಪ್ರಭುಃ ಸರ್ವವನೌಕಸಾಮ್ ॥

ಅನುವಾದ

ಸಮಸ್ತ ವಾನರರ ಸ್ವಾಮಿ ಸುಗ್ರೀವನು ಅತ್ಯಂತ ಪ್ರಸನ್ನನಾಗಿ ಪರಮಪರಾಕ್ರಮಿ ವಾಯುಪುತ್ರ ಹನುಮಂತನಲ್ಲಿ ಈ ಪ್ರಕಾರ ಹೇಳಿದನು .॥2॥

ಮೂಲಮ್ - 3

ನ ಭೂಮೌ ನಾಂತರಿಕ್ಷೇ ವಾ ನಾಂಬರೇ ನಾಮರಾಲಯೇ ।
ನಾಪ್ಸುವಾ ಗತಿಸಂಗಂ ತೇ ಪಶ್ಯಾಮಿ ಹರಿಪುಂಗವ ॥

ಅನುವಾದ

ಕಪಿಶ್ರೇಷ್ಠನೇ! ಪೃಥಿವೀ, ಅಂತರಿಕ್ಷ, ಆಕಾಶ, ದೇವಲೋಕ ಅಥವಾ ನೀರಿನಲ್ಲಿಯೂ ನಿನ್ನ ಗತಿಯಲ್ಲಿ ಯಾವುದೇ ಅಡೆ-ತಡೆಯೇ ನಾನು ಕಾಣುವುದಿಲ್ಲ.॥3॥

ಮೂಲಮ್ - 4

ಸಾಸುರಾಃ ಸಹಗಂಧರ್ವಾ ಸನಾಗ ನರದೇವತಾಃ ।
ವಿದಿತಾಃ ಸರ್ವಲೋಕಾಸ್ತೇ ಸಸಾಗರಧರಾಧರಾಃ ॥

ಅನುವಾದ

ಅಸುರ, ಗಂಧರ್ವ, ನಾಗ, ಮನುಷ್ಯ, ದೇವತೆ, ಸಮುದ್ರ ಹಾಗೂ ಪರ್ವತಗಳ ಸಹಿತ ಸಂಪೂರ್ಣ ಲೋಕಗಳ ಜ್ಞಾನ ನಿನಗಿದೆ.॥4॥

ಮೂಲಮ್ - 5

ಗತಿರ್ವೇಗಶ್ಚ ತೇಜಸ್ವ ಲಾಘವಂ ಚ ಮಹಾಕಪೇ ।
ಪಿತುಸ್ತೇ ಸದೃಶಂ ವೀರಮಾರುತಸ್ಯ ಮಹೌಜಸಃ ॥

ಅನುವಾದ

ವೀರನೇ! ಮಹಾಕಪಿಯೇ! ಎಲ್ಲೆಡೆ ಅಬಾಧಿತ ಗತಿ, ವೇಗ, ತೇಜ ಮತ್ತು ಸ್ಪೂರ್ತಿ - ಇವೆಲ್ಲ ಸದ್ಗುಣಗಳು ಮಹಾಪರಾಕ್ರಮಿ ನಿನ್ನ ಅಪ್ಪನಾದ ವಾಯುವಿನಂತೆ ನಿನ್ನಲ್ಲಿಯೂ ಇವೆ.॥5॥

ಮೂಲಮ್ - 6

ತೇಜಸಾ ವಾಪಿ ತೇ ಭೂತಂ ನ ಸಮಂ ಭುವಿ ವಿದ್ಯತೇ ।
ತದ್ಯಥಾ ಲಭ್ಯತೇ ಸೀತಾ ತತ್ತ್ವಮೇವಾನುಚಿಂತಯ ॥

ಅನುವಾದ

ಈ ಭೂಮಂಡಲದಲ್ಲಿ ನಿನ್ನ ತೇಜಕ್ಕೆ ಸಮಾನವಾಗಿ ಯಾವುದೇ ಪ್ರಾಣಿಯೂ ಇಲ್ಲ. ಆದ್ದರಿಂದ ಸೀತೆಯು ದೊರೆಯುವಂತಹ ಉಪಾಯವನ್ನು ನೀನೇ ಯೋಚಿಸು.॥6॥

ಮೂಲಮ್ - 7

ತ್ವಯ್ಯೇವ ಹನುಮನ್ನಸ್ತಿ ಬಲಂ ಬುದ್ಧಿಃ ಪರಾಕ್ರಮಃ ।
ದೇಶಕಾಲಾನುವೃತ್ತಿಶ್ಚ ನಯಶ್ಚ ನಯಪಂಡಿತ ॥

ಅನುವಾದ

ಹನುಮಂತನೇ! ನೀನು ನೀತಿಶಾಸ್ತ್ರದ ಪಂಡಿತನಾಗಿರುವೆ. ಬಲ, ಬುದ್ಧಿ, ಪರಾಕ್ರಮ, ದೇಶ-ಕಾಲದ ಅನುಸರಣ, ನೀತಿಪೂರ್ಣವರ್ತನೆ ಇವೆಲ್ಲ ಒಟ್ಟಿಗೆ ನಿನ್ನಲ್ಲಿ ಮಾತ್ರ ಕಂಡುಬರುತ್ತವೆ.॥7॥

ಮೂಲಮ್ - 8

ತತಃ ಕಾರ್ಯಸಮಾಸಂಗಮವಗಮ್ಯ ಹನೂಮತಿ ।
ವಿದಿತ್ವಾ ಹನುಮಂತಂ ಚ ಚಿಂತಯಾಮಾಸ ರಾಘವಃ ॥

ಅನುವಾದ

ಸುಗ್ರೀವನ ಮಾತನ್ನು ಕೇಳಿ ಈ ಕಾರ್ಯದ ಸಿದ್ಧಿಯ ಎಲ್ಲ ಭಾರವು ಹನುಮಂತನ ಮೇಲೆಯೇ ಇದೆ ಎಂದು ತಿಳಿದು ಶ್ರೀರಾಮಚಂದ್ರನು ಮನಸ್ಸಿನಲ್ಲೇ ಹೀಗೆ ಯೋಚಿಸಿದನು .॥8॥

ಮೂಲಮ್ - 9

ಸರ್ವಥಾ ನಿಶ್ಚಿತಾರ್ಥೋಽಯಂ ಹನೂಮತಿ ಹರೀಶ್ವರಃ ।
ನಿಶ್ಚಿತಾರ್ಥತರಶ್ಚಾಪಿ ಹನೂಮಾನ್ಕಾರ್ಯಸಾಧನೇ ॥

ಅನುವಾದ

ವಾನರರಾಜ ಸುಗ್ರೀವನು ಹನುಮಂತನ ಮೇಲೆ ಇವನು ನಿಶ್ಚಿತವಾಗಿ ನಮ್ಮ ಈ ಕಾರ್ಯವನ್ನು ಮಾಡಬಲ್ಲನು ಎಂಬ ಪೂರ್ಣ ಭರವಸೆಯನ್ನು ಇಟ್ಟಿರುವನು. ಸ್ವಯಂ ಹನುಮಂತನು ತಾನು ಖಂಡಿತವಾಗಿ ಈ ಕಾರ್ಯವನ್ನು ನೆರವೇರಿಸುವುದಾಗಿ ನಂಬಿರುವನು.॥9॥

ಮೂಲಮ್ - 10

ತದೇವಂ ಪ್ರಸ್ಥಿತಸ್ಯಾಸ್ಯ ಪರಿಜ್ಞಾತಸ್ಯ ಕರ್ಮಭಿಃ ।
ಭರ್ತ್ರಾ ಪರಿಗೃಹೀತಸ್ಯ ಧ್ರುವಃ ಕಾರ್ಯಫಲೋದಯಃ ॥

ಅನುವಾದ

ಈ ಪ್ರಕಾರ ಕಾರ್ಯಗಳಿಂದ ಯಾರನ್ನು ಪರೀಕ್ಷಿಸಲಾಗಿದೆಯೋ, ಎಲ್ಲರಿಗಿಂತ ಶ್ರೇಷ್ಠನೆಂದು ತಿಳಿಯಲಾಗಿದೆಯೋ ಆ ಹನುಮಂತನು ಸುಗ್ರೀವನ ಆಜ್ಞೆಯಂತೆ ಸೀತಾನ್ವೇಷಣೆಗಾಗಿ ಹೋಗುತ್ತಿದ್ದಾನೆ. ಇವನಿಂದ ಈ ಕಾರ್ಯವು ಸಫಲವಾಗುವುದು ನಿಶ್ಚಿತವಾಗಿದೆ.॥10॥

ಮೂಲಮ್ - 11

ತಂ ಸಮೀಕ್ಷ್ಯ ಮಹಾತೇಜಾ ವ್ಯವಸಾಯೋತ್ತರಂ ಹರಿಮ್ ।
ಕೃತಾರ್ಥ ಇವ ಸಂಹೃಷ್ಟಃ ಪ್ರಹೃಷ್ಟೇಂದ್ರಿಯಮಾನಸಃ ॥

ಅನುವಾದ

ಹೀಗೆ ವಿಚಾರಮಾಡಿ ಮಹಾತೇಜಸ್ವೀ ಶ್ರೀರಾಮಚಂದ್ರನು ಕಾರ್ಯಸಾಧಕರಲ್ಲಿ ಸರ್ವಶ್ರೇಷ್ಠ ಹನುಮಂತನ ಕಡೆಗೆ ನೋಡಿ, ತನ್ನನ್ನು ಕೃತಾರ್ಥ ನಂತೆ ತಿಳಿದು ಸಂತೋಷಗೊಂಡನು. ಅವನ ಎಲ್ಲ ಇಂದ್ರಿಯಗಳು ಮತ್ತು ಮನಸ್ಸು ಹರ್ಷಗೊಂಡವು.॥11॥

ಮೂಲಮ್ - 12

ದದೌ ತಸ್ಯ ತತಃ ಪ್ರೀತಃ ಸ್ವನಾಮಾಂಕೋಪಶೋಭಿತಮ್ ।
ಅಂಗುಲೀಯಮಭಿಜ್ಞಾನಂ ರಾಜಪುತ್ರ್ಯಾಃ ಪರಂತಪಃ ॥

ಅನುವಾದ

ಅನಂತರ ಪರಂತಪ ಶ್ರೀರಾಮನು ಪ್ರಸನ್ನತೆಯಿಂದ ತನ್ನ ಹೆಸರಿನಿಂದ ಸುಶೋಭಿತ ಒಂದು ಉಂಗುರವನ್ನು ಹನುಮಂತನ ಕೈಗೆ ಇತ್ತು, ರಾಜಕುಮಾರೀ ಸೀತೆಗೆ ಪರಿಚಯ ರೂಪವಾಗಿ ಅರ್ಪಿಸಲಿಕ್ಕಾಗಿ ಸೂಚಿಸಿದನು.॥12॥

ಮೂಲಮ್ - 13

ಅನೇನ ತ್ವಾಂ ಹರಿಶ್ರೇಷ್ಠ ಚಿಹ್ನೇನ ಜನಕಾತ್ಮಜಾ ।
ಮತ್ಸಕಾಶಾದನುಪ್ರಾಪ್ತಮನುದ್ವಿಗ್ನಾನುಪಶ್ಯತಿ ॥

ಅನುವಾದ

ಉಂಗುರವನ್ನಿತ್ತು ಹೇಳಿದನು - ಕಪಿಶ್ರೇಷ್ಠ! ಈ ಚಿಹ್ನೆಯಿಂದ ಜಾನಕಿಗೆ ನೀನು ನನ್ನ ಕಡೆಯಿಂದ ಬಂದಿರುವನು ಎಂಬ ವಿಶ್ವಾಸ ಉಂಟಾದೀತು. ಇದರಿಂದ ಅವಳು ಭಯ ಬಿಟ್ಟು ನಿನ್ನನ್ನು ನೋಡುವಳು.॥13॥

ಮೂಲಮ್ - 14

ವ್ಯವಸಾಯಶ್ಚ ತೇ ವೀರ ಸತ್ತ್ವಯುಕ್ತಶ್ಚ ವಿಕ್ರಮಃ ।
ಸುಗ್ರೀವಸ್ಯ ಚ ಸಂದೇಶಃ ಸಿದ್ಧಿಂ ಕಥಯತೀವ ಮೇ ॥

ಅನುವಾದ

ವೀರವರನೇ! ನಿನ್ನ ಉದ್ಯೋಗ, ಧೈರ್ಯ, ಪರಾಕ್ರಮ ಮತ್ತು ಸುಗ್ರೀವನ ಸಂದೇಶ - ಇವೆಲ್ಲವುಗಳಿಂದ ನಿನ್ನಿಂದ ಈ ಕಾರ್ಯವು ಅವಶ್ಯವಾಗಿ ಸಿದ್ಧಿಸುವುದು ಎಂಬ ಸೂಚನೆ ಸಿಗುತ್ತಿದೆ.॥14॥

ಮೂಲಮ್ - 15

ಸ ತದ್ ಗೃಹ್ಯ ಹರಿಶ್ರೇಷ್ಠಃ ಸ್ಥಾಪ್ಯ ಮೂರ್ಧ್ನಿ ಕೃತಾಂಜಲಿಃ ।
ವಂದಿತ್ವಾ ಚರಣೌ ಚೈವ ಪ್ರಸ್ಥಿತಃ ಪ್ಲವಗರ್ಷಭಃ ॥

ಅನುವಾದ

ವಾನರಶ್ರೇಷ್ಠ ಹನುಮಂತನು ಆ ಉಂಗುರವನ್ನು ಪಡೆದು ತಲೆಯಲ್ಲಿಟ್ಟುಕೊಂಡು, ಕೈಮುಗಿದು ಶ್ರೀರಾಮನ ಚರಣಗಳಲ್ಲಿ ಪ್ರಣಾಮ ಮಾಡಿ ಆ ವಾನರ ಶಿರೋಮಣಿಯು ಅಲ್ಲಿಂದ ಹೊರಟನು.॥15॥

ಮೂಲಮ್ - 16

ಸ ತತ್ ಪ್ರಕರ್ಷನ್ ಹರಿಣಾಂ ಮಹದ್ಬಲಂ
ಬಭೂವ ವೀರಃ ಪವನಾತ್ಮಜಃ ಕಪಿಃ।
ಗತಾಂಬುದೇ ವ್ಯೋಮ್ನಿ ವಿಶುದ್ಧ ಮಂಡಲಃ
ಶಶೀವ ನಕ್ಷತ್ರಗಣೋಪಶೋಭಿತಃ ॥

ಅನುವಾದ

ಆಗ ವೀರವಾನರ ಪವನಕುಮಾರ ಹನುಮಂತನು ತನ್ನೊಂದಿಗೆ ವಾನರರ ವಿಶಾಲ ಸೈನ್ಯವನ್ನು ಕರೆದುಕೊಂಡು ಹೋಗುವಾಗ ಮೇಘರಹಿತ ಆಕಾಶದಲ್ಲಿ ನಕ್ಷತ್ರ ಸಮೂಹದಿಂದ ಸುಶೋಭಿತ ನಿರ್ಮಲ ಚಂದ್ರನಂತೆ ಶೋಭಿತನಾಗುತ್ತಿದ್ದನು.॥16॥

ಮೂಲಮ್ - 17

ಅತಿಬಲ ಬಲಮಾಶ್ರಿತಸ್ತವಾಹಂ
ಹರಿವರವಿಕ್ರಮ ವಿಕ್ರಮೈರನಲ್ಪೈಃ ।
ಪವನಸುತ ಯಥಾಧಿಗಮ್ಯತೇ ಸಾ
ಜನಕಸುತಾ ಹನುಮಂಸ್ತಥಾ ಕುರುಷ್ವ ॥

ಅನುವಾದ

ಹೊರಟ ಹನುಮಂತನನ್ನು ಸಂಬೋಧಿಸಿ ಶ್ರೀರಾಮನು ಪುನಃ ಹೇಳಿದನು- ಅತ್ಯಂತ ಬಲಶಾಲೀ ಕಪಿಶ್ರೇಷ್ಠನೇ! ನಾನು ನಿನ್ನ ಬಲವನ್ನೇ ಆಶ್ರಯಿಸಿರುವೆನು. ಪವನಕುಮಾರ ಹನುಮಂತನೇ! ಯಾವುದೇ ರೀತಿಯಿಂದಲಾದರೂ ಸೀತೆಯು ದೊರೆಯುವಂತೆ ನೀನು ನಿನ್ನ ಬಲ-ಪರಾಕ್ರಮದಿಂದ ಪ್ರಯತ್ನ ಮಾಡು, ಸರಿ ಈಗ ಹೊರಡು.॥17॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ನಲವತ್ತನಾಲ್ಕನೆಯ ಸರ್ಗ ಸಂಪೂರ್ಣವಾಯಿತು.॥44॥