वाचनम्
ಭಾಗಸೂಚನಾ
ಸುಗ್ರೀವನು ಉತ್ತರ ದಿಕ್ಕಿನ ಸ್ಥಾನಗಳನ್ನು ಪರಿಚಯಿಸಿ ಶತಬಲಿ ಮೊದಲಾದ ವಾನರರನ್ನು ಅಲ್ಲಿಗೆ ಕಳಿಸಿದುದು
ಮೂಲಮ್ - 1
ತತಃ ಸಂದಿಶ್ಯ ಸುಗ್ರೀವಃ ಶ್ವಶುರಂ ಪಶ್ಚಿಮಾಂ ದಿಶಮ್ ।
ವೀರಂ ಶತಬಲಿಂ ನಾಮ ವಾನರಂ ವಾನರೇಶ್ವರಃ ॥
ಮೂಲಮ್ - 2
ಉವಾಚ ರಾಜಾ ಸರ್ವಜ್ಞಃ ಸರ್ವವಾನರಸತ್ತಮಃ ।
ವಾಕ್ಯಮಾತ್ಮಹಿತಂ ಚೈವ ರಾಮಸ್ಯ ಚ ಹಿತಂ ತಥಾ ॥
ಅನುವಾದ
ಈ ಪ್ರಕಾರ ತನ್ನ ಮಾವನನ್ನು ಪಶ್ಚಿಮ ದಿಕ್ಕಿಗೆ ಹೋಗಲು ಆದೇಶಿಸಿ, ಸರ್ವಜ್ಞ, ಸರ್ವವಾನರ ಶಿರೋಮಣಿ ವಾನರೇಶ್ವರ ಸುಗ್ರೀವನು ತನ್ನ ಹಿತೈಷಿ ಶತಬಲಿ ಎಂಬ ವೀರ ವಾನರನಲ್ಲಿ ಶ್ರೀರಾಮಚಂದ್ರನ ಹಿತಕರವಾದ ಮಾತನ್ನು ಹೇಳಿದನು.॥1-2॥
ಮೂಲಮ್ - 3
ವೃತಃ ಶತಸಹಸ್ರೇಣ ತ್ವದ್ವಿಧಾನಾಂ ವನೌಕಸಾಮ್ ।
ವೈವಸ್ವತಸುತೈಃ ಸಾರ್ಧಂ ಪ್ರವಿಷ್ಟಃ ಸರ್ವಮಂತ್ರಿಭಿಃ ॥
ಮೂಲಮ್ - 4
ದಿಶಂ ಹ್ಯುದೀಚೀಂ ವಿಕ್ರಾಂತ ಹಿಮಶೈಲಾವತಂಸಕಾಮ್ ।
ಸರ್ವತಃ ಪರಿಮಾರ್ಗಧ್ವಂ ರಾಮಪತ್ನೀಂ ಯಶಸ್ವಿನೀಮ್ ॥
ಅನುವಾದ
ಪರಾಕ್ರಮಿವೀರನೇ! ನೀನು ನಿನಗೆ ಸಮಾನರಾದ ಯಮರಾಜನ ಮಕ್ಕಳಾದ ಒಂದು ಲಕ್ಷ ವನವಾಸಿ ವಾನರರನ್ನು ಜೊತೆಗೆ ಕರೆದುಕೊಂಡು ತನ್ನ ಸಮಸ್ತ ಮಂತ್ರಿಗಳೊಂದಿಗೆ ಹಿಮಾಲಯರೂಪೀ ಆಭೂಷಣಗಳಿಂದ ವಿಭೂಷಿತವಾದ ಉತ್ತರ ದಿಕ್ಕಿನ ಕಡೆಗೆ ಪ್ರವೇಶಿಸು. ಅಲ್ಲಿ ಎಲ್ಲೆಡೆ ಯಶಸ್ವಿನೀ ಶ್ರೀರಾಮಪತ್ನೀ ಸೀತೆಯನ್ನು ಹುಡುಕು.॥3-4॥
ಮೂಲಮ್ - 5
ಅಸ್ಮಿನ್ಕಾರ್ಯೇ ವಿನಿರ್ವೃತ್ತೇ ಕೃತೇ ದಾಶರಥೇಃ ಪ್ರಿಯೇ ।
ಋಣಾನ್ಮುಕ್ತಾ ಭವಿಷ್ಯಾಮಃ ಕೃತಾರ್ಥಾರ್ಥವಿದಾಂ ವರಾಃ ॥
ಅನುವಾದ
ತಮ್ಮ ಪ್ರಯೋಜನವನ್ನು ತಿಳಿದ ಶ್ರೇಷ್ಠ ವೀರ ವಾನರರೇ! ನಮ್ಮಿಂದ ದಶರಥನಂದನ ಭಗವಾನ್ ಶ್ರೀರಾಮನ ಈ ಪ್ರಿಯಕಾರ್ಯ ನೆರವೇರಿದರೆ ನಾವು ಅವನ ಉಪಕರಾದ ಋಣದಿಂದ ಮುಕ್ತರಾಗಿ ಕೃತಾರ್ಥರಾಗುವೆವು.॥5॥
ಮೂಲಮ್ - 6
ಕೃತಂ ಹಿ ಪ್ರಿಯಮಸ್ಮಾಕಂ ರಾಘವೇಣ ಮಹಾತ್ಮನಾ ।
ತಸ್ಯ ಚೇತ್ಪ್ರತಿಕಾರೋಽಸ್ತಿ ಸಫಲಂ ಜೀವಿತಂ ಭವೇತ್ ॥
ಅನುವಾದ
ಮಹಾತ್ಮಾ ಶ್ರೀರಘುನಾಥನು ನಮ್ಮ ಪ್ರಿಯಕಾರ್ಯ ಮಾಡಿರುವನು. ಅದಕ್ಕೆ ಏನಾದರೂ ಪ್ರತ್ಯುಪಕಾರ ಮಾಡಿದರೆ ನಮ್ಮ ಜೀವನ ಸಫಲವಾಗುವುದು.॥6॥
ಮೂಲಮ್ - 7
ಅರ್ಥಿನಃ ಕಾರ್ಯನಿರ್ವೃತ್ತಿಮಕರ್ತುರಪಿ ಯಶ್ಚರೇತ್ ।
ತಸ್ಯ ಸ್ಯಾತ್ ಸಫಲಂ ಜನ್ಮ ಕಿಂ ಪುನಃ ಪೂರ್ವಕಾರಿಣಃ ॥
ಅನುವಾದ
ಯಾವುದೇ ಉಪಕಾರ ಮಾಡದವನೂ ಕೂಡ ಯಾವುದಾದರೂ ಕಾರ್ಯಕ್ಕಾಗಿ ಪ್ರಾರ್ಥಿಸಿದರೆ, ಅವನ ಕಾರ್ಯವನ್ನು ಸಿದ್ಧಮಾಡಿಕೊಡುವವನ ಜನ್ಮವೂ ಸಫಲವಾಗುತ್ತದೆ. ಹಾಗಿರುವಾಗ ಮೊದಲು ಉಪಕಾರಗೈದವನ ಕಾರ್ಯವನ್ನು ಮಾಡಿದರೆ ಜೀವನದ ಸಫಲತೆಯ ಬಗ್ಗೆ ಹೇಳುವುದೇನಿದೆ.॥7॥
ಮೂಲಮ್ - 8
ಏತಾಂ ಬುದ್ಧಿಂ ಸಮಾಸ್ಥಾಯ ದೃಶ್ಯತೇ ಜಾನಕೀ ಯಥಾ ।
ತಥಾ ಭವದ್ಭಿಃ ಕರ್ತವ್ಯಮಸ್ಮತ್ಪ್ರಿಯಹಿತೈಷಿಭಿಃ ॥
ಅನುವಾದ
ಇದೇ ವಿಚಾರವನ್ನು ಆಶ್ರಯಿಸಿ ನಮಗೆ ಪ್ರಿಯ ಮತ್ತು ಹಿತವನ್ನು ಬಯಸುವ ನೀವೆಲ್ಲ ವಾನರರೂ ಜನಕನಂದಿನೀ ಸೀತೆಯನ್ನು ಹುಡುಕುವ ಪ್ರಯತ್ನಮಾಡಬೇಕು.॥8॥
ಮೂಲಮ್ - 9
ಆಯಂ ಹಿ ಸರ್ವಭೂತಾನಾಂ ಮಾನ್ಯಸ್ತು ನರಸತ್ತಮಃ ।
ಅಸ್ಮಾಸು ಚ ಗತಃ ಪ್ರೀತೀಂ ರಾಮಃ ಪರಪುರಂಜಯಃ ॥
ಅನುವಾದ
ಶತ್ರುಗಳ ನಗರದ ಮೇಲೆ ವಿಜಯ ಪಡೆಯುವ ಈ ನರಶ್ರೇಷ್ಠ ಶ್ರೀರಾಮನು ಸಮಸ್ತ ಪ್ರಾಣಿಗಳಿಗೆ ಮಾನ್ಯನಾಗಿದ್ದಾನೆ. ನಮ್ಮ ಮೇಲೆಯೂ ಕೂಡ ಇವನಿಗೆ ತುಂಬಾ ಪ್ರೇಮವಿದೆ.॥9॥
ಮೂಲಮ್ - 10
ಇಮಾನಿ ಬಹುದುರ್ಗಾಣಿ ನದ್ಯಃ ಶೈಲಾಂತರಾಣಿ ಚ ।
ಭವಂತಃ ಪರಿಮಾರ್ಗಂತು ಬುದ್ಧಿವಿಕ್ರಮಸಂಪದಾ ॥
ಅನುವಾದ
ನೀವೆಲ್ಲರೂ ಬುದ್ಧಿ, ಪರಾಕ್ರಮಗಳಿಂದ ಈ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ, ಪರ್ವತ, ನದಿಗಳ ತೀರಗಳಲ್ಲಿ ಹೋಗಿ ಸೀತೆಯನ್ನು ಹುಡುಕಿರಿ.॥10॥
ಮೂಲಮ್ - 11
ತತ್ರ ಮ್ಲೇಚ್ಛಾನ್ ಪುಲಿಂದಾಂಶ್ಚ ಶೂರಸೇನಾಂ ಸ್ತಥೈವ ಚ ।
ಪ್ರಸ್ಥಲಾನ್ ಭರತಾಂಶ್ಚೈವ ಕುರೂಂಶ್ಚ ಸಹ ಮದ್ರಕೈಃ ॥
ಮೂಲಮ್ - 12
ಕಾಂಭೋಜಯವನಾಂಶ್ಚೈವ ಶಕಾನಾಂ ಪತ್ತನಾನಿ ಚ ।
ಅನ್ವಿಕ್ಷ್ಯ ದರದಾಂಶ್ಚೈವ ಹಿಮವಂತಂ ವಿಚಿನ್ವಥ ॥
ಅನುವಾದ
ಉತ್ತರದಲ್ಲಿ ಮ್ಲೆಂಧ, ಪುಲಿಂದ, ಶೂರಸೇನ, ಪ್ರಸ್ಥಲ, ಭರತ (ಇಂದ್ರಪ್ರಸ್ಥ ಮತ್ತು ಹಸ್ತಿನಾಪುರದ ಸುತ್ತಮುತ್ತಲ ಪ್ರಾಂತ), ಕುರು (ದಕ್ಷಿಣಕುರು-ಕುರುಕ್ಷೇತ್ರದ ಹತ್ತಿರದ ಭೂಮಿ), ಮದ್ರ, ಕಾಂಬೋಜ, ಯವನ, ಶಕರೇ ಮೊದಲಾದ ದೇಶಗಳಲ್ಲಿ, ನಗರಗಳಲ್ಲಿ ಚೆನ್ನಾಗಿ ಹುಡುಕಿ, ದೂರದ ದೇಶದಲ್ಲಿ ಮತ್ತು ಹಿಮಾಲಯ ಪರ್ವತದಲ್ಲಿಯೂ ಹುಡುಕಿರಿ.॥11-12॥
ಮೂಲಮ್ - 13
ಲೋಧ್ರಪದ್ಮಕಷಂಡೇಷು ದೇವದಾರುವನೇಷು ಚ ।
ರಾವಣಃ ಸಹ ವೈದೇಹ್ಯಾ ಮಾರ್ಗಿತವ್ಯಸ್ತತಸ್ತತಃ ॥
ಅನುವಾದ
ಅಲ್ಲಿ ಲೋಧ್ರ ಮತ್ತು ಪದ್ಮಕ ಗಿಡಗಳಲ್ಲಿ, ದೇವದಾರು ಕಾಡುಗಳಲ್ಲಿ ವೈದೇಹಿ ಸಹಿತ ರಾವಣನನ್ನು ಹುಡುಕಬೇಕು.॥13॥
ಮೂಲಮ್ - 14
ತತಃ ಸೋಮಾಶ್ರಮಂ ಗತ್ವಾ ದೇವಗಂಧರ್ವಸೇವಿತಮ್ ।
ಕಾಲಂ ನಾಮ ಮಹಾಸಾನುಂ ಪರ್ವತಂ ತಂ ಗಮಿಷ್ಯಥ ॥
ಅನುವಾದ
ಮತ್ತೆ ದೇವತೆ ಗಳಿಂದ ಮತ್ತು ಗಂಧರ್ವರಿಂದ ಸೇವಿತ ಸೋಮಾಶ್ರಮದ ಮೂಲಕ ಎತ್ತರವಾದ ಕಾಲ ಎಂಬ ಪರ್ವತಕ್ಕೆ ಹೋಗಿರಿ.॥14॥
ಮೂಲಮ್ - 15
ಮಹತ್ಸು ತಸ್ಯ ಶೈಲೇಷು ಪರ್ವತೇಷು ಗುಹಾಸು ಚ ।
ವಿಚನ್ವತಂ ಮಹಾಭಾಗಾಂ ರಾಮಪತ್ನೀಮನಿಂದಿತಾಮ್ ॥
ಅನುವಾದ
ಆ ಪರ್ವತದ ಶಾಖೆಗಳಾದ ಇತರ ಸಣ್ಣ-ದೊಡ್ಡ ಪರ್ವತಗಳಲ್ಲಿ, ಅವುಗಳ ಗುಹೆಗಳಲ್ಲಿ ಸತೀ-ಸಾಧ್ವೀ ಶ್ರೀರಾಮಪತ್ನೀ ಮಹಾಭಾಗಾ ಸೀತೆಯ ಅನ್ವೇಷಣೆ ಮಾಡಿರಿ.॥15॥
ಮೂಲಮ್ - 16
ತಮತಿಕ್ರಮ್ಯ ಶೈಲೇಂದ್ರಂ ಹೇಮಗರ್ಭಂ ಮಹಾಗಿರಿಮ್ ।
ತತಃ ಸುದರ್ಶನಂ ನಾಮ ಪರ್ವತಂ ಗಂತುಮರ್ಹಥ ॥
ಅನುವಾದ
ಚಿನ್ನದ ಗಣಿಗಳುಳ್ಳ ಆ ಗಿರಿರಾಜ ಕಾಲಪರ್ವತವನ್ನು ದಾಟಿ ನೀವು ಸುದರ್ಶನ ಎಂಬ ಮಹಾ ಪರ್ವತಕ್ಕೆ ಹೋಗಬೇಕು.॥16॥
ಮೂಲಮ್ - 17
ತತೋ ದೇವಸಖೋ ನಾಮ ಪರ್ವತಃ ಪತಗಾಲಯಃ ।
ನಾನಾಪಕ್ಷಿಸಮಾಕೀರ್ಣೋ ವಿವಿಧದ್ರುಮಭೂಷಿತಃ ॥
ಅನುವಾದ
ಅಲ್ಲಿಂದ ಮುಂದೆ ಹೋದರೆ ಪಕ್ಷಿಗಳ ನಿವಾಸಸ್ಥಾನವಾದ ದೇವಸಖ ಎಂಬ ಬೆಟ್ಟ ಸಿಗುವುದು. ಅದು ಬಗೆ-ಬಗೆಯ ವಿಹಂಗಮಗಳಿಂದ ವ್ಯಾಪ್ತವಾಗಿದ್ದು, ನಾನಾ ಪ್ರಕಾರದ ವೃಕ್ಷ ಗಳಿಂದ ವಿಭೂಷಿತವಾಗಿದೆ.॥17॥
ಮೂಲಮ್ - 18
ತಸ್ಯ ಕಾನನಷಂಡೇಷು ನಿರ್ಝರೇಷು ಗುಹಾಸು ಚ ।
ರಾವಣಃ ಸಹ ವೈದೇಹ್ಯಾ ಮಾರ್ಗಿತವ್ಯಸ್ತತಸ್ತತಃ ॥
ಅನುವಾದ
ಅದರ ವನಸಮೂಹಗಳಲ್ಲಿ, ಝರಿಗಳಲ್ಲಿ, ಗುಹೆಗಳಲ್ಲಿ ನೀವು ವೈದೇಹಿ ಸಹಿತ ರಾವಣನನ್ನು ಹುಡುಕಬೇಕು.॥18॥
ಮೂಲಮ್ - 19
ತಮತಿಕ್ರಮ್ಯ ಚಾಕಾಶಂ ಸರ್ವತಃ ಶತಯೋಜನಮ್ ।
ಅಪರ್ವತನದೀವೃಕ್ಷಂ ಸರ್ವಸತ್ತ್ವವಿವರ್ಜಿತಮ್ ॥
ಅನುವಾದ
ಅಲ್ಲಿಂದ ಮುಂದೆ ಹೋದಾಗ ಒಂದು ನಿರ್ಜನ ಬಯಲು ಪ್ರದೇಶ ಸಿಗುವುದು, ಅದು ನೂರು ಯೋಜನ ವಿಸ್ತಾರವಾಗಿದೆ. ಅಲ್ಲಿ ನದೀ, ಪರ್ವತ, ವೃಕ್ಷ ಹಾಗೂ ಎಲ್ಲ ಪ್ರಕಾರದ ಜೀವ-ಜಂತುಗಳ ಅಭಾವವಾಗಿದೆ.॥19॥
ಮೂಲಮ್ - 20
ತಂ ತು ಶೀಘ್ರಮತಿಕ್ರಮ್ಯ ಕಾಂತಾರಂ ರೋಮಹರ್ಷಣಮ್ ।
ಕೈಲಾಸಂ ಪಾಂಡುರಂ ಪ್ರಾಪ್ಯಹೃಷ್ಟಾ ಯೂಯಂ ಭವಿಷ್ಯಥ ॥
ಅನುವಾದ
ರೋಮಾಂಚಕರ ಆ ದುರ್ಗಮ ಪ್ರಾಂತವನ್ನು ಶೀಘ್ರವಾಗಿ ದಾಟಿ ಮುಂದೆ ಹೋದಾಗ ನಿಮಗೆ ಶ್ವೇತವರ್ಣದ ಕೈಲಾಸ ಪರ್ವತ ಸಿಗುವುದು. ಅಲ್ಲಿಗೆ ತಲುಪಿ ನೀವೆಲ್ಲರೂ ಹರ್ಷಗೊಳ್ಳುವಿರಿ.॥20॥
ಮೂಲಮ್ - 21
ತತ್ರ ಪಾಂಡುರಮೇಘಾಭಂ ಜಾಂಬೂನದ ಪರಿಷ್ಕೃತಮ್ ।
ಕುಬೇರಭವನಂ ರಮ್ಯಂ ನಿರ್ಮಿತಂ ವಿಶ್ವಕರ್ಮಣಾ ॥
ಅನುವಾದ
ಅಲ್ಲೇ ವಿಶ್ವಕರ್ಮನು ರಚಿಸಿದ ಕುಬೇರನ ರಮಣೀಯ ಭವನವಿದೆ. ಅದು ಬಿಳಿಯ ಮೋಡದಂತೆ ಕಂಡು ಬರುತ್ತದೆ. ಆ ಭವನವನ್ನು ಜಾಂಬೂನದ ಎಂಬ ಸುವರ್ಣದಿಂದ ಅಲಂಕರಿಸಲಾಗಿದೆ.॥21॥
ಮೂಲಮ್ - 22
ವಿಶಾಲಾ ನಲಿನೀ ಯತ್ರ ಪ್ರಭೂತಕಮಲೋತ್ಪಲಾ ।
ಹಂಸಕಾರಂಡವಾಕೀರ್ಣಾ ಅಪ್ಸರೋಗಣಸೇವಿತಾ ॥
ಅನುವಾದ
ಅದರ ಹತ್ತಿರವೇ ಒಂದು ಬಹಳ ದೊಡ್ಡ ಸರೋವರವಿದೆ, ಅದರಲ್ಲಿ ಕಮಲ ಮತ್ತು ನೈದಿಲೆ ಹೇರಳವಾಗಿ ಇವೆ. ಅದರಲ್ಲಿ ಹಂಸ ಹಾಗೂ ಕಾರಂಡವ ನೀರು ಹಕ್ಕಿಗಳು ತುಂಬಿವೆ ಹಾಗೂ ಅಪ್ಸರೆಯರು ಅದರಲ್ಲಿ ಜಲಕ್ರೀಡೆಯಾಡುತ್ತಾರೆ.॥22॥
ಮೂಲಮ್ - 23
ತತ್ರ ವೈಶ್ರವಣೋ ರಾಜಾ ಸರ್ವಲೋಕನಮಸ್ಕೃತಃ ।
ಧನದೋ ರಮತೇ ಶ್ರೀಮಾನ್ಗುಹ್ಯಕೈಃ ಸಹ ಯಕ್ಷರಾಟ್ ॥
ಅನುವಾದ
ಅಲ್ಲಿ ಯಕ್ಷರ ಸ್ವಾಮಿ ಸಮಸ್ತ ವಿಶ್ವಕ್ಕೆ ವಂದನೀಯ ಹಾಗೂ ಧನವನ್ನು ಕೊಡುವ ವಿಶ್ರವಸ್ಸುವಿನ ಪುತ್ರ ಶ್ರೀಮಾನ್ ಕುಬೇರನು ಗುಹ್ಯಕರೊಂದಿಗೆ ವಿಹರಿಸುತ್ತಾನೆ.॥23॥
ಮೂಲಮ್ - 24
ತಸ್ಯ ಚಂದ್ರನಿಕಾಶೇಷು ಪರ್ವತೇಷು ಗುಹಾಸು ಚ ।
ರಾವಣಃ ಸಹ ವೈದೇಹ್ಯಾ ಮಾರ್ಗಿತವ್ಯಸ್ತತಸ್ತತಃ ॥
ಅನುವಾದ
ಆ ಕೈಲಾಸದ ಚಂದ್ರನಂತೆ ಉಜ್ವಲ ಶಾಖಾಪರ್ವತಗಳಲ್ಲಿ ಹಾಗೂ ಅವುಗಳ ಗುಹೆಗಳಲ್ಲಿ ಎಲ್ಲೆಡೆ ತಿರುಗಾಡಿ ನೀವು ಸೀತಾಸಹಿತ ರಾವಣನ ಅನುಸಂಧಾನ ಮಾಡಬೇಕು.॥24॥
ಮೂಲಮ್ - 25
ಕ್ರೌಂಚಂ ತು ಗಿರಿಮಾಸಾದ್ಯ ಬಿಲಂ ತಸ್ಯ ಸುದುರ್ಗಮಮ್ ।
ಅಪ್ರಮತ್ತೈಃ ಪ್ರವೇಷ್ಟವ್ಯಂ ದುಷ್ಪ್ರವೇಶಂ ಹಿ ತತ್ ಸ್ಮೃತಮ್ ॥
ಅನುವಾದ
ಬಳಿಕ ಕ್ರೌಂಚಗಿರಿಗೆ ಹೋಗಿ ಅಲ್ಲಿಯ ಅತ್ಯಂತ ದುರ್ಗಮ ಕಂದಕರೂಪೀ ಗುಹೆಗಳಲ್ಲಿ (ಅವು ಸ್ಕಂದನ ಶಕ್ತಿಯಿಂದ ಪರ್ವತವು ವಿದೀರ್ಣವಾದದ್ದರಿಂದ ಉಂಟಾದವು.) ನೀವು ಎಚ್ಚರಿಕೆಯಿಂದ ಪ್ರವೇಶಿಸಬೇಕು; ಏಕೆಂದರೆ ಅದರೊಳಗೆ ಪ್ರವೇಶಿಸುವುದು ಅತ್ಯಂತ ಕಠಿಣವೆಂದು ತಿಳಿಯಲಾಗಿದೆ.॥25॥
ಮೂಲಮ್ - 26
ವಸಂತಿ ಹಿ ಮಹಾತ್ಮಾನಸ್ತತ್ರ ಸೂರ್ಯಸಮಪ್ರಭಾಃ ।
ದೇವೈರಪ್ಯರ್ಥಿತಾಃ ಸಮ್ಯಗ್ದೇವರೂಪಾ ಮಹರ್ಷಯಃ ॥
ಅನುವಾದ
ಆ ಗುಹೆಗಳಲ್ಲಿ ಸೂರ್ಯನಂತೆ ತೇಜಸ್ವೀ ಮಹಾತ್ಮರು ವಾಸಿಸುತ್ತಾರೆ. ಆ ದೇವತಾಸ್ವರೂಪೀ ಮಹರ್ಷಿಗಳನ್ನು ದೇವತೆಗಳೂ ಕೂಡ ಪ್ರಾರ್ಥಿಸುತ್ತಾರೆ.॥26॥
ಮೂಲಮ್ - 27
ಕ್ರೌಂಚಸ್ಯ ತು ಗುಹಾಶ್ಚಾನ್ಯಾಃ ಸಾನೂನಿ ಶಿಖರಾಣಿ ಚ ।
ನಿರ್ದರಾಶ್ಚ ನಿತಂಬಾಶ್ಚ ವಿಚೇತವ್ಯಾಸ್ತತಸ್ತತಃ ॥
ಅನುವಾದ
ಕ್ರೌಂಚ ಪರ್ವತದಲ್ಲಿ ಇನ್ನೂ ಅನೇಕ ಗುಹೆಗಳಿವೆ, ಅನೇಕ ಶಿಖರಗಳು, ಕಂದರಗಳು, ತಪ್ಪಲು ಪ್ರದೇಶಗಳೂ ಇವೆ; ಅವೆಲ್ಲವುಗಳಲ್ಲಿ ತಿರುಗಾಡಿ ಸೀತೆ ಮತ್ತು ರಾವಣನನ್ನು ಹುಡುಕಬೇಕು.॥27॥
ಮೂಲಮ್ - 28
ಅವೃಕ್ಷಂ ಕಾಮಶೈಲಂ ಚ ಮಾನಸಂ ವಿಹಗಾಲಯಮ್ ।
ನ ಗತಿಸ್ತತ್ರ ಭೂತಾನಾಂ ದೇವಾನಾಂ ನ ಚ ರಕ್ಷಸಾಮ್ ॥
ಅನುವಾದ
ಅಲ್ಲಿಂದ ಮುಂದೆ ವೃಕ್ಷಗಳ ರಹಿತ ಮಾನಸ ಎಂಬ ಶಿಖರವಿದೆ, ಅಲ್ಲಿ ವೃಕ್ಷಶೂನ್ಯ ವಾದ್ದರಿಂದ ಪಕ್ಷಿಗಳೂ ಹೋಗುವುದಿಲ್ಲ. ಕಾಮದೇವನು ತಪಸ್ಸು ಮಾಡಿದ ಕಾರಣ ಆ ಕ್ರೌಂಚ ಶಿಖರವು ಕಾಮಶೈಲ ಎಂದೂ ವಿಖ್ಯಾತವಾಗಿದೆ. ಅಲ್ಲಿಗೆ ಭೂತಗಳು, ದೇವತೆಗಳು, ರಾಕ್ಷಸರೂ ಕೂಡ ಎಂದೂ ಹೋಗುವುದಿಲ್ಲ.॥28॥
ಮೂಲಮ್ - 29
ಸ ಚ ಸರ್ವೈರ್ವಿಚೇತವ್ಯಃ ಸಸಾನುಪ್ರಸ್ಥಭೂಧರಃ ।
ಕ್ರೌಂಚಂ ಗಿರಿಮತಿಕ್ರಮ್ಯ ಮೈನಾಕೋ ನಾಮ ಪರ್ವತಃ ॥
ಅನುವಾದ
ಶಿಖರಗಳು, ತಪ್ಪಲುಗಳು ಮತ್ತು ಶಾಖಾಪರ್ವತ ಸಹಿತ ಇಡೀ ಕ್ರೌಂಚಪರ್ವತವನ್ನು ನೀವು ಹುಡುಕಬೇಕು. ಕ್ರೌಂಚಗಿರಿಯನ್ನು ದಾಟಿ ಮುಂದಕ್ಕೆ ಹೋದಾಗ ಮೈನಾಕ ಪರ್ವತ ಸಿಗುವುದು.॥29॥
ಮೂಲಮ್ - 30
ಮಯಸ್ಯ ಭವನಂ ಯತ್ರ ದಾನವಸ್ಯ ಸ್ವಯಂ ಕೃತಮ್ ।
ಮೈನಾಕಸ್ತು ವಿಚೇತವ್ಯಃ ಸಸಾನುಪ್ರಸ್ಥಕಂದರಃ ॥
ಅನುವಾದ
ಅಲ್ಲಿ ಮಯ ದಾನವನ ಮನೆ ಇದೆ. ಅದನ್ನು ಅವನು ತನಗಾಗಿಯೇ ನಿರ್ಮಿಸಿರುವನು. ನೀವು ಶಿಖರಗಳಲ್ಲಿ, ಪ್ರಸ್ಥಭೂಮಿಯಲ್ಲಿ, ಕಂದರಗಳ ಸಹಿತ ಮೈನಾಕ ಪರ್ವತದ ಮೇಲೆ ಚೆನ್ನಾಗಿ ಸೀತೆಯನ್ನು ಹುಡುಕಬೇಕು.॥30॥
ಮೂಲಮ್ - 31
ಸ್ತ್ರೀಣಾಮಶ್ಚಮುಖೀನಾಂ ತು ನಿಕೇತಸ್ತತ್ರ ತತ್ರ ತು ।
ತಂ ದೇಶಂ ಸಮತಿಕ್ರಮ್ಯ ಆಶ್ರಮಂ ಸಿದ್ಧಸೇವಿತಮ್ ॥
ಅನುವಾದ
ಅಲ್ಲಿ ಎಲ್ಲೆಡೆ ಕುದುರೆಯಂತೆ ಮುಖವುಳ್ಳ ಕಿನ್ನರಿಯರ ನಿವಾಸ ಸ್ಥಾನವಿದೆ. ಆ ಪ್ರದೇಶವನ್ನು ದಾಟಿ ಹೋದಾಗ ಸಿದ್ಧಸೇವಿತ ಆಶ್ರಮ ಸಿಗುವುದು.॥31॥
ಮೂಲಮ್ - 32½
ಸಿದ್ಧಾ ವೈಖಾನಸಾ ಯತ್ರ ವಾಲಖಿಲ್ಯಾಶ್ಚ ತಾಪಸಾಃ ।
ವಂದಿತವ್ಯಾಸ್ತತಃ ಸಿದ್ಧಾಸ್ತಪಸಾ ವೀತಕಲ್ಮಷಾಃ ॥
ಪ್ರಷ್ಟವ್ಯಾ ಚಾಪಿ ಸೀತಾಯಾಃ ಪ್ರವೃತ್ತಿರ್ವಿನಯಾನ್ವಿತೈಃ ।
ಅನುವಾದ
ಅದರಲ್ಲಿ ಸಿದ್ಧರು, ವೈಖಾನಸರು, ವಾಲಖಿಲ್ಯ ಎಂಬ ತಪಸ್ವಿಗಳು ವಾಸಿಸುತ್ತಾರೆ. ತಪಸ್ಸಿನಿಂದ ಪಾಪಗಳನ್ನು ತೊಳೆದು ಕೊಂಡ ಆ ಸಿದ್ಧರಿಗೆ ನೀವು ಪ್ರಣಾಮ ಮಾಡಿ ವಿನೀತರಾಗಿ ಸೀತೆಯ ಸಮಾಚಾರ ಕೇಳಬೇಕು.॥32॥
ಮೂಲಮ್ - 33½
ಹೇಮಪುಷ್ಕರಸಂಛನ್ನಂ ತತ್ರ ವೈಖಾನಸಂ ಸರಃ ॥
ತರುಣಾದಿತ್ಯ ಸಂಕಾಶೈರ್ಹಂಸೈರ್ವಿಚರಿತಂ ಶುಭೈಃ ।
ಅನುವಾದ
ಆ ಆಶ್ರಮದ ಬಳಿಯಲ್ಲಿ ‘ವೈಖಾನಸ ಸರ’ ಎಂಬ ಪ್ರಸಿದ್ಧ ಒಂದು ಸರೋವರವಿದೆ. ಅದರ ನೀರು ಸುವರ್ಣಮಯ ಕಮಲ ಗಳಿಂದ ಮುಚ್ಚಿರುತ್ತದೆ. ಅದರಲ್ಲಿ ಪ್ರಾತಃಕಾಲದ ಸೂರ್ಯನಂತೆ ಬಂಗಾರ ಬಣ್ಣದ ಸುಂದರ ಹಂಸಗಳು ವಿಚರಿಸುತ್ತಾ ಇರುತ್ತವೆ.॥33॥
ಮೂಲಮ್ - 34½
ಔಪವಾಹ್ಯಃ ಕುಬೇರಸ್ಯ ಸಾರ್ವಭೌಮ ಇತಿ ಸ್ಮೃತಃ ॥
ಗಜಃ ಪರ್ಯೇತಿ ತಂ ದೇಶಂ ಸದಾ ಸಹ ಕರೇಣುಭಿಃ ।
ಅನುವಾದ
ಕುಬೇರನ ವಾಹನವಾದ ಸಾರ್ವಭೌಮ ಎಂಬ ಗಜರಾಜನು ತನ್ನ ಹೆಣ್ಣಾನೆಗಳೊಂದಿಗೆ ಆ ಪ್ರದೇಶತಲ್ಲಿ ತಿರುಗಾಡುತ್ತಾ ಇರುತ್ತದೆ.॥34॥
ಮೂಲಮ್ - 35
ತತ್ಸರಃ ಸಮತಿಕ್ರಮ್ಯ ನಷ್ಟಚಂದ್ರ ದಿವಾಕರಮ್ ।
ಅನಕ್ಷತ್ರಗಣಂ ವ್ಯೋಮ ನಿಷ್ಪಯೋದಮನಾದಿತಮ್ ॥
ಅನುವಾದ
ಆ ಸರೋವರವನ್ನು ದಾಟಿ ಮುಂದೆ ಹೋದಾಗ ಬರಿದಾದ ಆಕಾಶ ಕಂಡು ಬಂದೀತು. ಅದರಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳ ದರ್ಶನವಾಗುವುದಿಲ್ಲ. ಅಲ್ಲಿ ಮೇಘಗಳಾಗಲಿ, ಮೇಘಗರ್ಜನೆ ಯಾಗಲೀ ಇರುವುದಿಲ್ಲ.॥35॥
ಮೂಲಮ್ - 36
ಗಭಸ್ತಿಭಿರಿವಾರ್ಕಸ್ಯ ಸ ತು ದೇಶಃ ಪ್ರಕಾಶತೇ ।
ವಿಶ್ರಾಮ್ಯದ್ಭಿಸ್ತಪಃ ಸಿದ್ಧೈರ್ದೇವಕಲ್ಪೈಃ ಸ್ವಯಂಪ್ರಭೈಃ ॥
ಅನುವಾದ
ಹೀಗಿದ್ದರೂ ಅಲ್ಲಿ ತಮ್ಮದೇ ಪ್ರಭೆಯಿಂದ ಪ್ರಕಾಶಿತ ತಪಃಸಿದ್ಧ ದೇವೋಪಮ ಮಹರ್ಷಿಗಳು ವಿಶ್ರಾಮ ಮಾಡುತ್ತಾರೆ. ಅವರ ಅಂಗಪ್ರಭೆಯಿಂದಲೇ ಆ ಪ್ರದೇಶದಲ್ಲಿ ಸೂರ್ಯನಂತೆ ಬೆಳಕು ಹರಡಿ ಕೊಂಡಿರುತ್ತದೆ.॥36॥
ಮೂಲಮ್ - 37
ತಂ ತು ದೇಶಮತಿಕ್ರಮ್ಯ ಶೈಲೋದಾ ನಾಮ ನಿಮ್ನಗಾ ।
ಉಭಯೋಸ್ತೀರಯೋಸ್ತಸ್ಯಾಃ ಕೀಚಕಾ ನಾಮ ವೇಣವಃ ॥
ಅನುವಾದ
ಆ ಪ್ರದೇಶವನ್ನು ದಾಟಿ ಮುಂದೆ ಹೋದಾಗ ‘ಶೈಲೋದಾ’ ಎಂಬ ನದಿಯ ದರ್ಶನವಾದೀತು. ಅದರ ಎರಡೂ ದಡಗಳಲ್ಲಿ ಸದಾ ಕೊಳಲಿನಂತೆ ಶಬ್ದ ಮಾಡು ತ್ತಿರುವ ಬಿದಿರುಗಳಿವೆ, ಈ ಮಾತು ಪ್ರಸಿದ್ಧವಾಗಿದೆ.॥37॥
ಮೂಲಮ್ - 38
ತೇ ನಯಂತಿ ಪರಂ ತೀರಂ ಸಿದ್ಧಾನ್ ಪ್ರತ್ಯಾನಯಂತಿ ಚ ।
ಉತ್ತರಾಃ ಕುರವಸ್ತತ್ರ ಕೃತಪುಣ್ಯ ಪ್ರತಿಶ್ರಯಾಃ ॥
ಅನುವಾದ
ಆ ಬಿದಿರುಗಳು ನದಿಯ ಕಡೆಗೆ ಬಾಗಿ ಸೇತುವೆಯಂತಿದ್ದು ಸಿದ್ಧರು ನದಿ ದಾಟಲು ಹೋಗಲು ಅದನ್ನು ಸಾಧನವಾಗಿಸಿವೆ. ಅಲ್ಲಿ ಕೇವಲ ಪುಣ್ಯಾತ್ಮಾ ಪುರುಷರದ್ದೇ ವಾಸವಾಗಿದೆ. ಆ ಉತ್ತರ ಕುರುದೇಶವು ಶೈಲೋದೆಯ ತಟದಲ್ಲೆ ಇದೆ.॥38॥
ಮೂಲಮ್ - 39
ತತಃ ಕಾಂಚನಪದ್ಮಾಭಿಃ ಪದ್ಮಿನೀಭಿಃ ಕೃತೋದಕಾಃ ।
ನೀಲವೈಡೂರ್ಯಪತ್ರಾಢ್ಯಾ ನದ್ಯಸ್ತತ್ರ ಸಹಸ್ರಶಃ ॥
ಅನುವಾದ
ಉತ್ತರ ಕುರುದೇಶದಲ್ಲಿ ನೀಲ ವೈಡೂರ್ಯಮಣಿಯಂತೆ ಹಸುರಾದ ಕಮಲಗಳ ಎಲೆಗಳಿಂದ ಸುಶೋಭಿತ ಸಾವಿರಾರು ನದಿಗಳು ಹರಿಯುತ್ತವೆ. ಅದಕ್ಕೆ ಸುವರ್ಣಮಯ ಪದ್ಮಗಳಿಂದ ಅಲಂಕೃತ ಅನೇಕಾನೇಕ ಪುಷ್ಕರಿಣಿಗಳಿಂದ ನೀರು ಬಂದು ಸೇರಿರುತ್ತದೆ.॥39॥
ಮೂಲಮ್ - 40
ರಕ್ತೋತ್ಪಲವನೈಶ್ಚಾತ್ರ ಮಂಡಿತಾಶ್ಚ ಹಿರಣ್ಮಯೈಃ ।
ತರುಣಾದಿತ್ಯಸಂಕಾಶಾ ಭಾಂತಿ ತತ್ರ ಜಲಾಶಯಾಃ ॥
ಅನುವಾದ
ಅಲ್ಲಿಯ ಜಲಾಶಯಗಳು ಕೆಂಪು ಮತ್ತು ಬಂಗಾರದ ಬಣ್ಣದ ಕಮಲಗಳಿಂದ ಕೂಡಿದ್ದು, ಪ್ರಾತಃ ಕಾಲದಲ್ಲಿ ಉದಯಿಸುವ ಸೂರ್ಯನಂತೆ ಕಂಗೊಳಿಸುತ್ತಿದೆ.॥40॥
ಮೂಲಮ್ - 41
ಮಹಾರ್ಹಮಣಿಪತ್ರೈಶ್ಚ ಕಾಂಚನಪ್ರಭಕೇಸರೈಃ ।
ನೀಲೋತ್ಪಲವನೈಶ್ಚಿತ್ರೈಃ ಸ ದೇಶಃ ಸರ್ವತೋ ವೃತಃ ॥
ಅನುವಾದ
ಅಮೂಲ್ಯ ಮಣಿಗಳಂತಹ ಎಲೆಗಳಿಂದ, ಸುವರ್ಣದಂತೆ ಕಾಂತಿಯ ಕೇಸರವುಳ್ಳ ಚಿತ್ರ-ವಿಚಿತ್ರ ನೀಲ ಕಮಲಗಳಿಂದ ಅಲ್ಲಿಯ ಪ್ರದೇಶ ಎಲ್ಲೆಡೆ ಶೋಭಿತವಾಗಿದೆ.॥41॥
ಮೂಲಮ್ - 42
ನಿಸ್ತುಲಾಭಿಶ್ಚ ಮುಕ್ತಾಭಿರ್ಮಣಿಭಿಶ್ಚ ಮಹಾಧನೈಃ ।
ಉದ್ಧೂತಪುಲಿನಾಸ್ತತ್ರ ಜಾತರೂಪೈಶ್ಚ ನಿಮ್ನಗಾಃ ॥
ಮೂಲಮ್ - 43
ಸರ್ವರತ್ನಮಯೈಶ್ಚಿತ್ರೈರವಗಾಢಾ ನಗೋತ್ತಮೈಃ ।
ಜಾತರೂಪಮಯೈಶ್ಚಾಪಿ ಹುತಾಶನಸಮಪ್ರಭೈಃ ॥
ಅನುವಾದ
ಅಲ್ಲಿಯ ನದೀತೀರಗಳು ಗುಂಡಾದ ಮುತ್ತುಗಳಿಂದ, ಅಮೂಲ್ಯ ಮಣಿಗಳಿಂದ ಮತ್ತು ಸುವರ್ಣದಿಂದ ಸಂಪನ್ನವಾಗಿವೆ. ಅಷ್ಟೇ ಅಲ್ಲ, ಆ ನದಿಗಳ ದಡಗಳಲ್ಲಿ ಸಮಸ್ತರತ್ನಗಳಿಂದ ಕೂಡಿದ ಚಿತ್ರ-ವಿಚಿತ್ರ ಪರ್ವತಗಳೂ ಇವೆ. ಅವು ಅವುಗಳ ನೀರಿನೊಳಗೆ ಮುಳುಗಿವೆ. ಆ ಪರ್ವತಗಳಲ್ಲಿ ಎಷ್ಟೋ ಸುವರ್ಣಮಯವಾಗಿದ್ದು, ಅಗ್ನಿಯಂತೆ ಪ್ರಕಾಶ ಚೆಲ್ಲುತ್ತವೆ.॥42-43॥
ಮೂಲಮ್ - 44
ನಿತ್ಯಪುಷ್ಪಲಾಸ್ತತ್ರ ನಗಾಃ ಪತ್ರರಥಾಕುಲಾಃ ।
ದಿವ್ಯಗಂಧರಸಸ್ಪರ್ಶಾಃ ಸರ್ವಕಾಮಾನ್ ಸ್ರವಂತಿ ಚ ॥
ಅನುವಾದ
ಅಲ್ಲಿಯ ವೃಕ್ಷಗಳಲ್ಲಿ ಸದಾಕಾಲ ಹೂವು-ಹಣ್ಣುಗಳು ಬಿಡುತ್ತವೆ ಹಾಗೂ ಅವುಗಳಲ್ಲಿ ಪಕ್ಷಿಗಳು ಚಿಲಿಪಿಲಿಗುಟ್ಟುತ್ತವೆ. ಆ ವೃಕ್ಷಗಳು ದಿವ್ಯಗಂಧ, ರಸ, ಸ್ಪರ್ಶ ನೀಡುತ್ತವೆ ಮತ್ತು ಪ್ರಾಣಿಗಳು ಬಯಸುವ ಎಲ್ಲ ವಸ್ತುಗಳನ್ನು ಮಳೆಗರೆಯುತ್ತವೆ.॥44॥
ಮೂಲಮ್ - 45
ನಾನಾ ಕಾರಾಣಿ ವಾಸಾಂಸಿ ಫಲಂತ್ಯನ್ಯೇ ನಗೋತ್ತಮಾಃ ।
ಮುಕ್ತಾವೈಡೂರ್ಯಚಿತ್ರಾಣಿಭೂಷಣಾನಿ ತಥೈವ ಚ ।
ಸ್ತ್ರೀಣಾಂ ಚಾನ್ಯನುರೂಪಾಣಿ ಪುರುಷಾಣಾಂ ತಥೈವ ಚ ॥
ಅನುವಾದ
ಇದಲ್ಲದೆ ಬೇರೆ-ಬೇರೆ ಶ್ರೇಷ್ಠ ವೃಕ್ಷಗಳು ಫಲರೂಪದಲ್ಲಿ ನಾನಾ ಪ್ರಕಾರದ ವಸ್ತ್ರಗಳನ್ನು, ಮುತ್ತು, ವೈಡೂರ್ಯರತ್ನಖಚಿತ ಒಡವೆಗಳನ್ನು ಕೊಡುವವು. ಪುರುಷರಿಗೆ ಉಪಯೋಗೀಯಾದ ಸ್ತ್ರೀಯರನ್ನು ಕೊಡುತ್ತವೆ.॥45॥
ಮೂಲಮ್ - 46
ಸರ್ವರ್ತುಸುಖಸೇವ್ಯಾನಿ ಫಲಂತ್ಯನ್ಯೇ ನಗೋತ್ತಮಾಃ ।
ಮಹಾರ್ಹಾಣಿ ಚ ಚಿತ್ರಾಣಿ ಫಲಂತ್ಯನ್ಯೇ ನಗೋತ್ತಮಾಃ ॥
ಅನುವಾದ
ಬೇರೆ ಉತ್ತಮ ವೃಕ್ಷಗಳು ಎಲ್ಲ ಋತುಗಳಲ್ಲಿ ಸುಖವಾಗಿ ಸೇವಿಸಲು ಯೋಗ್ಯವಾದ ಒಳ್ಳೊಳ್ಳೆಯ ಫಲಗಳನ್ನು ಕೊಡುತ್ತವೆ. ಇತರ ಸುಂದರ ವೃಕ್ಷಗಳು ಅಮೂಲ್ಯ ಮಣಿಗಳಂತಹ ವಿಚಿತ್ರ ಫಲಗಳನ್ನು ನೀಡುತ್ತಿವೆ.॥46॥
ಮೂಲಮ್ - 47
ಶಯನಾನಿ ಪ್ರಸೂಯಂತೇ ಚಿತ್ರಾಸ್ತರಣವಂತಿ ಚ ।
ಮನಃಕಾಂತಾನಿ ಮಾಲ್ಯಾನಿ ಫಲಂತ್ಯತ್ರಾಪರೇ ದ್ರುಮಾಃ ॥
ಮೂಲಮ್ - 48
ಪಾನಾನಿ ಚ ಮಹಾರ್ಹಾಣಿ ಭಕ್ಷ್ಯಾಣಿ ವಿವಿಧಾನಿ ಚ ।
ಸ್ತ್ರೀ ಯಶ್ಚ ಗುಣಪಂನ್ನಾ ರೂಪಯೌವನಲಕ್ಷಿತಾಃ ॥
ಅನುವಾದ
ಬೇರೆ ಎಷ್ಟೋ ವೃಕ್ಷಗಳು ವಿಚಿತ್ರ ಹಾಸಿಗೆಗಳಿಂದ ಕೂಡಿದ ಶಯ್ಯೆಗಳನ್ನು ಲರೂಪ ವಾಗಿ ಪ್ರಟಿಸುತ್ತವೆ. ಮನಸ್ಸಿಗೆ ಪ್ರಿಯವಾದ ಸುಂದರಮಾಲೆಗಳನ್ನು, ಅಮೂಲ್ಯ ಪೇಯ ಪದಾರ್ಥಗಳನ್ನು, ಬಗೆ-ಬಗೆಯ ಭೋಜನಗಳನ್ನು ಮತ್ತು ರೂಪ-ಯೌವನೆಯರಾದ ಸದ್ಗುಣವತಿಯರಾದ ಯುವತಿಯರನ್ನು ಉತ್ಪನ್ನಮಾಡುತ್ತವೆ.॥47-48॥
ಮೂಲಮ್ - 49
ಗಂಧರ್ವಾಃ ಕಿನ್ನರಾಃ ಸಿದ್ಧಾ ನಾಗಾ ವಿದ್ಯಾಧರಾಸ್ತಥಾ ।
ರಮಂತೇ ಸತತಂ ತತ್ರ ನಾರೀಭಿರ್ಭಾಸ್ವರಪ್ರಭಾಃ ॥
ಅನುವಾದ
ಅಲ್ಲಿ ಸೂರ್ಯನಂತೆ ಕಾಂತಿಯುಳ್ಳ ಗಂಧರ್ವರು, ಕಿನ್ನರರು, ಸಿದ್ಧರು, ನಾಗರು, ವಿದ್ಯಾಧರರು, ಸದಾ ತಮ್ಮ ನಾರಿಯರೊಂದಿಗೆ ಕ್ರೀಡಿಸುತ್ತಾ ಇರುತ್ತಾರೆ.॥49॥
ಮೂಲಮ್ - 50
ಸರ್ವೇ ಸುಕೃತಕರ್ಮಾಣಃ ಸರ್ವೇ ರತಿಪರಾಯಣಾಃ ।
ಸರ್ವೇ ಕಾಮಾರ್ಥಸಹಿತಾ ವಸಂತಿ ಸಹಯೋಷಿತಃ ॥
ಅನುವಾದ
ಅಲ್ಲಿಯ ಎಲ್ಲ ಜನರು ಪುಣ್ಯಕರ್ಮರೂ, ಅರ್ಥ-ಕಾಮಗಳಿಂದ ಸಂಪನ್ನರೂ ಆಗಿದ್ದಾರೆ. ಎಲ್ಲರೂ ಕಾಮಕ್ರೀಡಾ ಪರಾಯಣರಾಗಿ ಯುವತೀ ಸ್ತ್ರೀಯರೊಂದಿಗೆ ವಾಸಿಸುತ್ತಾರೆ.॥50॥
ಮೂಲಮ್ - 51
ಗೀತವಾದಿತ್ರನಿರ್ಘೋಷಃ ಸೋತ್ಕೃಷ್ಟಹಸಿತಸ್ವನಃ ।
ಶ್ರೂಯತೇ ಸತತಂ ತತ್ರ ಸರ್ವಭೂತಮನೋರಮಃ ॥
ಅನುವಾದ
ಅಲ್ಲಿ ನಿರಂತರ ಹಾಸ್ಯ-ವಿನೋದದ ಧ್ವನಿಗಳಿಂದ ಕೂಡಿದ, ಗೀತ-ವಾದ್ಯಗಳ ಮಧುರನಾದ ಕೇಳಿ ಬರುತ್ತದೆ. ಅದು ಸಮಸ್ತ ಪ್ರಾಣಿಗಳ ಮನಸ್ಸಿಗೆ ಆನಂದಪ್ರದವಾಗಿದೆ.॥51॥
ಮೂಲಮ್ - 52
ತತ್ರ ನಾಮುದಿತಃ ಕಶ್ಚಿನ್ನಾತ್ರ ಕಶ್ಚಿದಸತ್ಪ್ರಿಯಃ ।
ಅಹನ್ಯಹನಿ ವರ್ಧಂತೇ ಗುಮಾಸ್ತತ್ರ ಮನೋರಮಾಃ ॥
ಅನುವಾದ
ಅಲ್ಲಿ ಯಾರೂ ಅಪ್ರಸನ್ನರಾಗಿರುವುದಿಲ್ಲ. ಯಾರಿಗೂ ಕೆಟ್ಟ ಕಾರ್ಯಗಳಲ್ಲಿ ಪ್ರೀತಿ ಇರುವುದಿಲ್ಲ. ಅಲ್ಲಿ ವಾಸಿಸುವುದರಿಂದ ಪ್ರತಿದಿನ ಮನೋರಮ ಗುಣಗಳ ವೃದ್ಧಿಯಾಗುತ್ತದೆ.॥52॥
ಮೂಲಮ್ - 53
ಸಮತಿಕ್ರಮ್ಯ ತಂ ದೇಶಮುತ್ತರಃ ಪಯಸಾಂ ನಿಧಿಃ ।
ತತ್ರ ಸೋಮಗಿರಿರ್ನಾಮ ಮಧ್ಯೇ ಹೇಮಮಯೋ ಮಹಾನ್ ॥
ಅನುವಾದ
ಆ ದೇಶವನ್ನು ದಾಟಿ ಮುಂದಕ್ಕೆ ಹೋದಾಗ ಉತ್ತರ ದಿಕ್ಕಿನ ಸಮುದ್ರ ಸಿಗುವುದು. ಆ ಸಮುದ್ರದ ನಡುವೆ ಸೋಮಗಿರಿ ಎಂಬ ಬಹಳ ಎತ್ತರವಾದ ಒಂದು ಸುವರ್ಣಮಯ ಪರ್ವತವಿದೆ.॥53॥
ಮೂಲಮ್ - 54
ಇಂದ್ರಲೋಕಗತಾ ಯೇ ಚ ಬ್ರಹ್ಮಲೋಕಗತಾಶ್ಚಯೇ ।
ದೇವಾಸ್ತಂ ಸಮವೇಕ್ಷಂತೇ ಗಿರಿರಾಜಂ ದಿವಂ ಗತಾಃ ॥
ಅನುವಾದ
ಸ್ವರ್ಗಲೋಕಕ್ಕೆ ಹೋಗುವ ಜನರು ಹಾಗೂ ಇಂದ್ರಲೋಕ ಬ್ರಹ್ಮಲೋಕಗಳಲ್ಲಿ ವಾಸಿಸುವ ದೇವತೆಗಳು ಆ ಗಿರಿರಾಜ ಸೋಮಗಿರಿಯ ದರ್ಶನ ಮಾಡುತ್ತಾರೆ.॥54॥
ಮೂಲಮ್ - 55
ಸ ತು ದೇಶೋ ವಿಸೂರ್ಯೇಽಪಿ ತಸ್ಯ ಭಾಸಾ ಪ್ರಕಾಶತೇ ।
ಸೂರ್ಯಲಕ್ಷ್ಮ್ಯಾಭಿವಿಜ್ಞೇಯಸ್ತಪತೇವ ವಿವಸ್ವತಾ ॥
ಅನುವಾದ
ಆ ಪ್ರದೇಶವು ಸೂರ್ಯರಹಿತವಾಗಿದ್ದರೂ ಸೋಮಗಿರಿಯ ಪ್ರಭೆಯಿಂದ ಸದಾ ಪ್ರಕಾಶಿತವಾಗುತ್ತಾ ಇರುತ್ತದೆ. ಸೂರ್ಯ ಪ್ರಭೆಯಂತೆಯೇ ಅದು ಬೆಳಗುತ್ತಾ ಇರುತ್ತದೆ.॥55॥
ಮೂಲಮ್ - 56
ಭಗವಾಂಸ್ತತ್ರ ವಿಶ್ವಾತ್ಮಾ ಶಂಭುರೇಕಾದಶಾತ್ಮಕಃ ।
ಬ್ರಹ್ಮಾ ವಸತಿ ದೇವೇಶೋ ಬ್ರಹ್ಮರ್ಷಿಪರಿವಾರಿತಃ ॥
ಅನುವಾದ
ಅಲ್ಲಿ ವಿಶ್ವಾತ್ಮಾ ಭಗವಾನ್ ವಿಷ್ಣು, ಏಕಾದಶರುದ್ರರ ರೂಪದಿಂದ ಪ್ರಕಟವಾಗುವ ಭಗವಾನ್ ಶಂಕರ ಹಾಗೂ ಬ್ರಹ್ಮರ್ಷಿಗಳಿಂದ ಸುತ್ತುವರೆದ ದೇವೇಶ್ವರ ಬ್ರಹ್ಮದೇವರು ವಾಸವಾಗಿರುತ್ತಾರೆ.॥56॥
ಮೂಲಮ್ - 57
ನ ಕಥಂಚನ ಗಂತವ್ಯಂ ಕುರೂಣಾಮುತ್ತರೇಣ ವಃ ।
ಅನ್ಯೇಷಾಮಪಿ ಭೂತಾನಾಂ ನಾನುಕ್ರಾಮತಿ ವೈ ಗತಿಃ ॥
ಅನುವಾದ
ನೀವು ಉತ್ತರ ಕುರು ಮಾರ್ಗದಿಂದ ಸೋಮಗಿರಿಯ ತನಕ ಹೋಗಿ ಅದರ ಸೀಮೆಯ ಮುಂದೆ ಯಾವ ರೀತಿ ಯಿಂದಲೂ ಹೋಗಬಾರದು. ನಿಮ್ಮಂತೆ ಬೇರೆ ಪ್ರಾಣಿಗಳೂ ಕೂಡ ಅಲ್ಲಿ ಹೋಗಲಾರರು.॥57॥
ಮೂಲಮ್ - 58
ಸ ಹಿ ಸೋಮಗಿರಿರ್ನಾಮ ದೇವಾನಾಮಪಿ ದುರ್ಗಮಃ ।
ತಮಾಲೋಕ್ಯ ತತಃ ಕ್ಷಿಪ್ರಮುಪಾವರ್ತಿತುಮರ್ಹಥ ॥
ಅನುವಾದ
ಆ ಸೋಮಗಿರಿ ದೇವತೆಗಳಿಗೂ ದುರ್ಗಮವಾಗಿದೆ. ಆದ್ದರಿಂದ ಅದನ್ನು ದರ್ಶನ ಮಾಡಿ ನೀವು ಬೇಗನೇ ಮರಳಿ ಬರುವುದು.॥58॥
ಮೂಲಮ್ - 59
ಏತಾವದ್ವಾನರೈಃ ಶಕ್ಯಂ ಗಂತುಂ ವಾನರಪುಂಗವಾಃ ।
ಅಭಾಸ್ಕರಮಮರ್ಯಾದಂ ನ ಜಾನೀಮಸ್ತತಃ ಪರಮ್ ॥
ಅನುವಾದ
ಶ್ರೇಷ್ಠವಾನರರೇ! ಸಾಕು, ಉತ್ತರ ದಿಕ್ಕಿನ ಕಡೆಗೆ ಇಷ್ಟೇದೂರ ನೀವೆಲ್ಲ ವಾನರರು ಹೋಗಬಲ್ಲಿರಿ. ಅದಕ್ಕಿಂತ ಮುಂದೆ ಸೂರ್ಯನ ಪ್ರಕಾಶವಿಲ್ಲ, ಯಾವುದೇ ದೇಶದ ಸೀಮೆಯೂ ಇಲ್ಲ. ಆದ್ದರಿಂದ ಮುಂದಿನ ಭೂಭಾಗದ ಸಂಬಂಧವಾಗಿ ನಾನು ಏನನ್ನೂ ತಿಳಿಯಲಾರೆನು.॥59॥
ಮೂಲಮ್ - 60
ಸರ್ವಮೇತದ್ವಿಚೇತವ್ಯಂ ಯನ್ಮಯಾ ಪರಿಕೀರ್ತಿತಮ್ ।
ಯದನ್ಯದಪಿ ನೋಕ್ತಂ ಚ ತತ್ರಾಪಿ ಕ್ರಿಯತಾಂ ಮತಿಃ ॥
ಅನುವಾದ
ನಾನು ತಿಳಿಸಿದ ಎಲ್ಲ ಸ್ಥಾನಗಳಲ್ಲಿ ಸೀತೆಯನ್ನು ಹುಡುಕಿರಿ. ಉಲ್ಲೇಖಿಸದಿರುವ ಸ್ಥಾನಗಳಲ್ಲಿಯೂ ಹುಡುಕುವ ವಿಚಾರವೂ ದೃಢವಾಗಲಿ.॥60॥
ಮೂಲಮ್ - 61
ತತಃ ಕೃತಂ ದಾಶರಥೇರ್ಮಹತ್ಪ್ರಿಯಂ
ಮಹತ್ಪ್ರಿಯಂ ಚಾಪಿ ತತೋ ಮಮ ಪ್ರಿಯಮ್ ।
ಕೃತಂ ಭವಿಷ್ಯತ್ಯನಿಲಾನಲೋಪಮಾ
ವಿದೇಹಜಾದರ್ಶನಜೇನ ಕರ್ಮಣಾ ॥
ಅನುವಾದ
ಬೆಂಕಿ-ಗಾಳಿಗೆ ಸಮಾನರಾದ ತೇಜಸ್ವೀ, ಬಲಶಾಲೀ ವಾನರರೇ! ವಿದೇಹನಂದಿನೀ ಸೀತೆಯ ದರ್ಶನಕ್ಕಾಗಿ ನೀವು ಮಾಡುವ ಪರಿಶ್ರಮದಿಂದ ದಶರಥನಂದನ ಭಗವಾನ್ ಶ್ರೀರಾಮನ ಮಹಾನ್ ಪ್ರಿಯ ಕಾರ್ಯ ನೆರವೇರಿಸಿದಂತಾದೀತು ಹಾಗೂ ಅದರಿಂದಲೇ ನನ್ನ ಪ್ರಿಯ ಕಾರ್ಯವೂ ಪೂರ್ಣವಾದೀತು.॥61॥
ಮೂಲಮ್ - 62
ತತಃ ಕೃತಾರ್ಥಾಃ ಸಹಿತಾಃ ಸಬಾಂಧವಾ
ಮಯಾರ್ಚಿತಾಃ ಸರ್ವಗುಣೈರ್ಮನೋರಮೈಃ ।
ಚರಿಷ್ಯಥೋರ್ವೀಂ ಪ್ರತಿಶಾಂತಶತ್ರವಃ
ಸಹಪ್ರಿಯಾ ಭೂತಧರಾಃ ಪ್ಲವಂಗಮಾಃ ॥
ಅನುವಾದ
ವಾನರರೇ! ಶ್ರೀರಾಮಚಂದ್ರನ ಪ್ರಿಯ ಕಾರ್ಯ ಮಾಡಿ ಮರಳಿದಾಗ ನಾನು ಸರ್ವಗುಣಸಂಪನ್ನ ಮನಮೆಚ್ಚುವ ವಸ್ತುಗಳಿಂದ ನಿಮ್ಮೆಲ್ಲರನ್ನು ಸತ್ಕರಿಸುವೆನು. ಬಳಿಕ ನೀವು ಶತ್ರುಹೀನರಾಗಿ ತಮ್ಮ ಹಿತೈಷಿಗಳ, ಬಂಧು ಬಾಂಧವರ ಸಹಿತ ಕೃತಾರ್ಥರಾಗಿ ಪ್ರಾಣಿಗಳಿಗೆ ಆಶ್ರಯದಾತರಾಗಿ ತಮ್ಮ ಪ್ರಿಯತಮೆಯರೊಂದಿಗೆ ಇಡೀ ಪೃಥಿವಿಯಲ್ಲಿ ಆನಂದವಾಗಿ ಸಂಚರಿಸಿರಿ.॥62॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ನಲವತ್ತಮೂರನೆಯ ಸರ್ಗ ಸಂಪೂರ್ಣವಾಯಿತು.॥43॥