वाचनम्
ಭಾಗಸೂಚನಾ
ಸುಗ್ರೀವನು ಪಶ್ಚಿಮ ದಿಕ್ಕಿನ ಪ್ರದೇಶಗಳ ಪರಿಚಯ ಮಾಡಿಕೊಡುತ್ತಾ ಸುಷೇಣಾದಿ ವಾನರರನ್ನು ಅಲ್ಲಿಗೆ ಕಳಿಸಿದುದು
ಮೂಲಮ್ - 1
ಅಥ ಪ್ರಸ್ಥಾಪ್ಯ ಸ ಹರೀನ್ ಸುಗ್ರೀವೋ ದಕ್ಷಿಣಾಂ ದಿಶಮ್ ।
ಅಬ್ರವೀನ್ಮೇಘಸಂಕಾಶಂ ಸುಷೇಣಂ ನಾಮ ವಾನರಮ್ ॥
ಮೂಲಮ್ - 2
ತಾರಾಯಾಃ ಪಿತರಂ ರಾಜಾ ಶ್ವಶುರಂ ಭೀಮವಿಕ್ರಮಮ್ ।
ಅಬ್ರವೀತ್ ಪ್ರಾಂಜಲಿರ್ವಾಕ್ಯಮಭಿಗಮ್ಯ ಪ್ರಣಮ್ಯ ಚ ॥
ಮೂಲಮ್ - 3
ಮಹರ್ಷಿಪುತ್ರಂ ಮಾರೀಚಮರ್ಚಿಷ್ಮಂತಂ ಮಹಾಕಪಿಮ್ ।
ವೃತಂ ಕಪಿವರೈಃ ಶೂರೈರ್ಮಹೇಂದ್ರ ಸದೃಶದ್ಯುತಿಮ್ ॥
ಮೂಲಮ್ - 4
ಬುದ್ಧಿವಿಕ್ರಮಸಂಪನ್ನಂ ವೈನತೇಯಸಮದ್ಯುತಿಮ್ ।
ಮರೀಚಿಪುತ್ರಾನ್ ಮಾರೀಚಾನರ್ಚಿರ್ಮಾಲ್ಯಾನ್ ಮಹಾಬಲಾನ್ ॥
ಮೂಲಮ್ - 5½
ಋಷಿಪುತ್ರಾಂಶ್ಚ ತಾನ್ಸರ್ವಾನ್ ಪ್ರತೀಚೀಮಾದಿಶದ್ದಿಶಮ್ ।
ದ್ವಾಭ್ಯಾಂ ಶತಸಹಸ್ರಾಭ್ಯಾಂ ಕಪೀನಾಂ ಕಪಿಸತ್ತಮಾಃ ॥
ಸುಷೇಣಪ್ರಮುಖಾ ಯೂಯಂ ವೈದೇಹೀಂ ಪರಿಮಾರ್ಗತ ।
ಅನುವಾದ
ದಕ್ಷಿಣ ದಿಕ್ಕಿನ ಕಡೆಗೆ ವಾನರರನ್ನು ಕೊಟ್ಟು ಕಳುಹಿದ ಬಳಿಕ, ರಾಜಾ ಸುಗ್ರೀವನು ತಾರೆಯ ತಂದೆ, ತನ್ನ ಮಾವ ಸುಷೇಣನೆಂಬ ವಾನರನ ಬಳಿಗೆ ಹೋಗಿ ಅವನಿಗೆ ಕೈಮುಗಿದು ನಮಸ್ಕರಿಸಿ, ಅವನಲ್ಲಿ ಹೇಳತೊಡಗಿದನು - ಸುಷೇಣನು ಮೇಘದಂತೆ ಕಪ್ಪಾಗಿದ್ದು, ಭಯಂಕರ ಪರಾಕ್ರಮಿಯಾಗಿದ್ದನು. ಅವನಲ್ಲದೆ ಮಹರ್ಷಿ ಮರೀಚಿಯ ಪುತ್ರ ಮಹಾಕಪಿ ಅರ್ಚಿಷ್ಮಂತನು ಅಲ್ಲಿ ಉಪಸ್ಥಿತನಾಗಿದ್ದನು, ಅವನು ದೇವೇಂದ್ರನಂತೆ ತೇಜಸ್ವಿಯಾಗಿದ್ದು, ಶೂರವೀರ ಶ್ರೇಷ್ಠ ವಾನನರಿಂದ ಆವೃತನಾಗಿದ್ದನು. ಅವನ ಕಾಂತಿಯು ವಿನತಾನಂದನ ಗರುಡನಂತಿತ್ತು. ಅವನು ಬುದ್ಧಿ, ಪರಾಕ್ರಮಗಳಿಂದ ಸಂಪನ್ನನಾಗಿದ್ದನು. ಅವನಲ್ಲದೆ ಮರೀಚಿಯ ಪುತ್ರರಾದ ಮಾರೀಚರೆಂಬ ವಾನರರೂ ಇದ್ದರು. ಅವರು ಮಹಾಬಲಿ ಮತ್ತು ಅರ್ಚಿಮಾಲ್ಯ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಇವರಲ್ಲದೆ ಇನ್ನು ಅನೇಕ ಋಷಿಕುಮಾರರಿದ್ದರು, ಅವರು ವಾನರ ರೂಪದಿಂದ ಇಲ್ಲಿ ವಿರಾಜಿಸುತ್ತಿದ್ದರು. ಸುಷೇಣನೊಂದಿಗೆ ಅವರೆಲ್ಲರನ್ನು ಪಶ್ಚಿಮದಿಕ್ಕಿಗೆ ಹೋಗಲು ಸುಗ್ರೀವನು ಆಜ್ಞಾಪಿಸಿದನು - ನೀವೆಲ್ಲರೂ ಎರಡು ಲಕ್ಷ ವಾನರರೊಂದಿಗೆ ಸುಷೇಣನ ಮುಖಂಡತ್ವದಲ್ಲಿ ಪಶ್ಚಿಮಕ್ಕೆ ಹೋಗಿರಿ ಹಾಗೂ ವಿದೇಹನಂದಿನೀ ಸೀತೆಯನ್ನು ಹುಡುಕಿರಿ.॥1-5½॥
ಮೂಲಮ್ - 6
ಸೌರಾಷ್ಟ್ರಾನ್ಸಹಬಾಹ್ಲೀಕಾಂಶ್ಚಂದ್ರ ಚಿತ್ರಾಂಸ್ತಥೈವ ಚ ॥
ಮೂಲಮ್ - 7½
ಸ್ಫೀತಾಂಜನಪದಾನ್ ರಮ್ಯಾನ್ವಿಪುಲಾನಿ ಪುರಾಣಿ ಚ ।
ಪುಂನಾಗಗಹನಂ ಕುಕ್ಷಿಂ ವಕುಲೋದ್ದಾಲಕಾಕುಲಮ್ ॥
ತಥಾಕೇತಕಷಂಡಾಂಶ್ಚ ಮಾರ್ಗಧ್ವಂ ಹರಿಪುಂಗವಾಃ ।
ಅನುವಾದ
ಶ್ರೇಷ್ಠವಾನರರೇ! ಸೌರಾಷ್ಟ್ರ, ಚಾಹ್ಲಿಕ, ಚಂದ್ರಚಿತ್ರ ಮೊದಲಾದ ದೇಶಗಳಲ್ಲಿ, ಬೇರೆ-ಬೇರೆ ಸಮೃದ್ಧಿಶಾಲಿ, ರಮಣೀಯ ರಾಜ್ಯಗಳಲ್ಲಿ, ದೊಡ್ಡ-ದೊಡ್ಡ ನಗರಗಳಲ್ಲಿ, ಪುನ್ನಾಗ-ಬಕುಲ ಮತ್ತು ಉದ್ದಾಲಕ ಮೊದಲಾದ ವೃಕ್ಷಗಳಿಂದ ತುಂಬಿದ ಕುಕ್ಷಿ ದೇಶದಲ್ಲಿ ಹಾಗೂ ಕೇದಗೆಯ ವನಗಳಲ್ಲಿ ಸೀತೆಯನ್ನು ಹುಡುಕಿರಿ.॥6-7½॥
ಮೂಲಮ್ - 8½
ಪ್ರತ್ಯಕ್ ಸ್ರೋತೋವಹಾಶ್ಚೈವ ನದ್ಯಃ ಶಿತಜಲಾಃ ಶಿವಾಃ ॥
ತಾಪಸಾನಾಮರಣ್ಯಾನಿ ಕಾಂತಾರಗಿರಯಶ್ಚ ಯೇ ।
ಅನುವಾದ
ಪಶ್ಚಿಮ ಕಡೆಗೆ ಹರಿಯುವ ಶೀತಲ ಜಲದಿಂದ ಸುಶೋಭಿತ ಕಲ್ಯಾಣಮಯ ನದಿಗಳಲ್ಲಿ, ತಪಸ್ವೀ ಜನರ ವನಗಳಲ್ಲಿ, ದುರ್ಗಮ ಪರ್ವತಗಳಲ್ಲಿಯೂ ವಿದೇಹ ಕುಮಾರಿಯನ್ನು ಹುಡುಕಿರಿ.॥8½॥
ಮೂಲಮ್ - 9
ತತ್ರ ಸ್ಥಲೀರ್ಮರುಪ್ರಾಯಾ ಅತ್ಯುಚ್ಚಶಿಶಿರಾಃ ಶಿಲಾಃ ॥
ಮೂಲಮ್ - 10½
ಗಿರಿಜಾಲಾವೃತಾಂ ದುರ್ಗಾಂ ಮಾರ್ಗಿತ್ವಾ ಪಶ್ಚಿಮಾಂ ದಿಶಮ್ ।
ತತಃ ಪಶ್ಚಿಮಮಾಗಮ್ಯ ಸಮುದ್ರಂ ದ್ರಷ್ಟುಮರ್ಹಥ ॥
ತಿಮಿನಕ್ರಾಕುಲಜಲಂ ಗತ್ವಾ ದ್ರಕ್ಷ್ಯಥ ವಾನರಾಃ ।
ಅನುವಾದ
ಪಶ್ಚಿಮದಿಕ್ಕಿನಲ್ಲಿ ಪ್ರಾಯಶಃ ಮರುಭೂಮಿ ಇದೆ. ಅತ್ಯಂತ ಎತ್ತರವಾದ ತಂಪಾದ ಶಿಲೆಗಳಿವೆ ಹಾಗೂ ಪರ್ವತ ಮಾಲೆಗಳಿಂದ ಆವೃತವಾದ ಅನೇಕ ದುರ್ಗಮ ಪ್ರದೇಶಗಳಿವೆ. ಆ ಎಲ್ಲ ಸ್ಥಾನಗಳಲ್ಲಿ ಸೀತೆಯನ್ನು ಹುಡುಕುತ್ತಾ ಕ್ರಮವಾಗಿ ಮುಂದುವರಿದು ಪಶ್ಚಿಮ ಸಮುದ್ರದವರೆಗೆ ಹೋಗುವುದು ಮತ್ತು ಅಲ್ಲಿಯ ಪ್ರತಿಯೊಂದು ಸ್ಥಾನಗಳ ನಿರೀಕ್ಷಣೆ ಮಾಡುವುದು. ವಾನರರೇ! ಸಮುದ್ರದ ನೀರು ತಿಮಿ ಎಂಬ ಮತ್ಸ್ಯಗಳಿಂದ, ದೊಡ್ಡ-ದೊಡ್ಡ ಮೊಸಳೆಗಳಿಂದ ತುಂಬಿದೆ. ಅಲ್ಲೆಲ್ಲ ಕಡೆ ನೋಡುವುದು.॥9-10½॥
ಮೂಲಮ್ - 11
ತತಃ ಕೇತಕಷಂಡೇಷು ತಮಾಲಗಹನೇಷು ಚ ॥
ಮೂಲಮ್ - 12
ಕಪಯೋ ವಿಹರಿಷ್ಯಂತಿ ನಾರಿಕೇಲವನೇಷು ಚ ।
ತತ್ರ ಸೀತಾಂ ಚ ಮಾರ್ಗಧ್ವಂ ನಿಲಯಂ ರಾವಣಸ್ಯ ಚ ॥
ಅನುವಾದ
ಸಮುದ್ರತೀರದ ಕೇದಗೆಯ ವನಗಳಲ್ಲಿ, ತಮಾಲದ ಕಾನನಗಳಲ್ಲಿ, ತೆಂಗಿನಕಾಯಿಯ ತೋಟಗಳಲ್ಲಿ, ನಿಮ್ಮ ವಾನರ ಸೈನಿಕರು ಚೆನ್ನಾಗಿ ಸಂಚರಿಸಿ ಸೀತೆಯನ್ನು ಮತ್ತು ರಾವಣನ ನಿವಾಸ ಸ್ಥಾನವನ್ನು ಹುಡುಕಿರಿ.॥11-12॥
ಮೂಲಮ್ - 13
ವೇಲಾತಲನಿವಿಷ್ಟೇಷು ಪರ್ವತೇಷು ವನೇಷು ಚ ।
ಮುರವೀಪತ್ತನಂ ಚೈವ ರಮ್ಯಂ ಚೈವ ಜಟಾಪುರಮ್ ॥
ಮೂಲಮ್ - 14
ಅವಂತೀ ಮಂಗಲೇಪಾಂ ಚ ತಥಾಚಾಲಕ್ಷಿತಂ ವನಮ್ ।
ರಾಷ್ಟ್ರಾಣಿ ಚ ವಿಶಾಲಾನಿ ಪತ್ತನಾನಿ ತತಸ್ತತಃ ॥
ಅನುವಾದ
ಸಮುದ್ರ ತಟದ ಪರ್ವತಗಳಲ್ಲಿ, ವನಗಳಲ್ಲಿ ಆಕೆಯನ್ನು ಹುಡುಕಬೇಕು. ಮುರವೀಪತ್ತನ (ಮೋರವೀ) ಹಾಗೂ ರಮಣೀಯ ಜಟಾಪುರದಲ್ಲಿ, ಆವಂತೀ ಹಾಗೂ ಅಂಗ ಲೇಪಾಪುರಿಯಲ್ಲಿ, ಅಲಕ್ಷಿತ ವನಗಳಲ್ಲಿ ದೊಡ್ಡ-ದೊಡ್ಡ ರಾಷ್ಟ್ರ ಗಳಲ್ಲಿ ಮತ್ತು ನಗರಗಳಲ್ಲಿ ಎಲ್ಲೆಡೆ ತಿರುಗಾಡಿ ಹುಡುಕಿರಿ.॥13-14॥
ಮೂಲಮ್ - 15
ಸಿಂಧುಸಾಗರಯೋಶ್ಚೈವ ಸಂಗಮೇ ತತ್ರ ಪರ್ವತಃ ।
ಮಹಾನ್ ಸೋಮಗಿರಿರ್ನಾಮ ಶತಶೃಂಗೋ ಮಹಾದ್ರುಮಃ ॥
ಮೂಲಮ್ - 16
ತತ್ರ ಪ್ರಸ್ಥೇಷು ರಮ್ಯೇಷು ಸಿಂಹಾಃ ಪಕ್ಷಗಮಾಃ ಸ್ಥಿತಾಃ ।
ತಿಮಿಮತ್ಸ್ಯಗಜಾಂಶ್ಚೈವ ನೀಡಾನ್ಯಾರೋಪಯಂತಿ ತೇ ॥
ಅನುವಾದ
ಸಿಂಧುನದಿ ಮತ್ತು ಸಮುದ್ರ ಸಂಗಮದಲ್ಲಿ ಸೋಮಗಿರಿ ಎಂಬ ನೂರು ಶಿಖರಗಳುಳ್ಳ ಒಂದು ಮಹಾಪರ್ವತವಿದೆ. ಆ ಪರ್ವತವು ಎತ್ತರವಾದ ವೃಕ್ಷಗಳಿಂದ ತುಂಬಿದೆ. ಅದರ ರಮಣೀಯ ತುದಿಗಳಲ್ಲಿ ಸಿಂಹ ಎಂಬ ಪಕ್ಷಿಗಳು ಇರುತ್ತವೆ. ಅವು ತಿಮಿ ಎಂಬ ವಿಶಾಲಕಾಯ ಮತ್ಸ್ಯಗಳನ್ನು, ಆನೆಗಳನ್ನು ತಮ್ಮ ಗೂಡುಗಳಲ್ಲಿ ಎತ್ತಿ ತರುತ್ತವೆ.॥15-16॥
ಮೂಲಮ್ - 17½
ತಾನಿ ನೀಡಾನಿ ಸಿಂಹಾನಾಂ ಗಿರಿಶೃಂಗಗತಾಶ್ಚ ಯೇ ।
ದೃಪ್ತಾಸ್ತೃಪ್ತಾಶ್ಚ ಮಾತಂಗಾಸ್ತೋಯದಸ್ವನನಿಃಸ್ವನಾಃ॥
ವಿಚರಂತಿ ವಿಶಾಲೇಽಸ್ಮಿಂಸ್ತೋಯಪೂರ್ಣೇ ಸಮಂತತಃ ।
ಅನುವಾದ
ಸಿಂಹ ಎಂಬ ಪಕ್ಷಿಗಳ ಆ ಗೂಡಿಗೆ ತಲುಪಿ, ಆ ಪರ್ವತ ಶಿಖರದ ಮೇಲೆ ಇರುವ, ಆ ಆನೆಗಳು ಪಂಖಧಾರೀ ಸಿಂಹರಿಂದ ಸಮ್ಮಾನಿತವಾದ್ದರಿಂದ ಗರ್ವಪಟ್ಟು ಮನಸ್ಸಿನಲ್ಲೆ ಸಂತುಷ್ಟರಾಗಿ, ಮೇಘಗರ್ಜನೆಯಂತೆ ಘೀಳಿಡುತ್ತಾ ಆ ಪರ್ವತದ ಜಲಪೂರ್ಣ ವಿಶಾಲ ಶಿಖರದಲ್ಲಿ ಎಲ್ಲೆಡೆ ಸಂಚರಿಸುತ್ತಾ ಇರುತ್ತವೆ.॥17½॥
ಮೂಲಮ್ - 18½
ತಸ್ಯ ಶೃಙ್ಗಂ ದಿವಸ್ಪರ್ಶಂ ಕಾಂಚನಂ ಚಿತ್ರಪಾದಪಮ್॥
ಸರ್ವಮಾಶು ವಿಚೇತವ್ಯಂ ಕಪಿಭಿಃ ಕಾಮರೂಪಿಭಿಃ ।
ಅನುವಾದ
ಸೋಮಗಿರಿಯ ಗಗನ ಚುಂಬೀ ಶಿಖರವು ಸುವರ್ಣಮಯವಾಗಿದೆ. ಅದರ ಮೇಲೆ ವಿಚಿತ್ರವೃಕ್ಷಗಳು ಶೋಭಿಸುತ್ತಿವೆ. ಶಾಮರೂಪಿಗಳಾದ ವಾನರರಾದ ನೀವು ಅಲ್ಲಿಯ ಎಲ್ಲ ಸ್ಥಾನಗಳಲ್ಲಿ ಶೀಘ್ರವಾಗಿ ಚೆನ್ನಾಗಿ ಹುಡುಕಬೇಕು.॥18½॥
ಮೂಲಮ್ - 19½
ಕೋಟಿಂ ತತ್ರ ಸಮುದ್ರಸ್ಯ ಕಾಂಚನೀಂ ಶತಯೋಜನಾಮ್ ॥
ದುರ್ದರ್ಶಾಂ ಪಾರಿಯಾತ್ರಸ್ಯ ಗತ್ವಾ ದ್ರಕ್ಷ್ಯಥ ವಾನರಾಃ ।
ಅನುವಾದ
ಅಲ್ಲಿಂದ ಮುಂದೆ ಸಮುದ್ರದ ನಡುವೆ ಪಾರಿಯಾತ್ರ ಪರ್ವತದ ಸುವರ್ಣಮಯ ಶಿಖರ ಕಂಡು ಬಂದೀತು. ಅದು ನೂರುಯೋಜನ ವಿಸ್ತೃತವಾಗಿದೆ. ವಾನರರೇ! ಅದರ ದರ್ಶನ ಇತರರಿಗೆ ಅತ್ಯಂತ ಕಠಿಣವಾಗಿದೆ. ಅಲ್ಲಿಗೆ ಹೋಗಿ ನೀವು ಸೀತೆಯನ್ನು ಹುಡುಕಬೇಕು.॥19½॥
ಮೂಲಮ್ - 20
ಕೋಟ್ಯಸ್ತತ್ರ ಚತುರ್ವಿಂಶದ್ಗಂಧರ್ವಾಣಾಂ ತಪಸ್ವಿನಾಮ್ ॥
ಮೂಲಮ್ - 21
ವಸಂತ್ಯಗ್ನಿನಿಕಾಶಾನಾಂ ಘೋರಾಣಾಂ ಕಾಮರೂಪಿಣಾಮ್ ।
ಪಾವಕಾರ್ಚಿಃ ಪ್ರತೀಕಾಶಾಃ ಸಮವೇತಾಃ ಸಮಂತತಃ ॥
ಅನುವಾದ
ಪಾರಿಯಾತ್ರ ಪರ್ವತ ಶಿಖರದಲ್ಲಿ ಇಚ್ಛಾನುಸಾರ ರೂಪ ಧರಿಸುವ ಭಯಂಕರ, ಅಗ್ನಿತುಲ್ಯ ತೇಜಸ್ವಿ ಹಾಗೂ ವೇಗಶಾಲೀ ಇಪ್ಪತ್ತನಾಲ್ಕುಕೋಟಿ ಗಂಧರ್ವರು ವಾಸಮಾಡುತ್ತಾರೆ. ಅವರೆಲ್ಲರೂ ಅಗ್ನಿಜ್ವಾಲೆ ಯಂತೆ ಪ್ರಕಾಶಮಾನರಾಗಿದ್ದು ಎಲ್ಲ ಕಡೆಗಳಿಂದ ಬಂದು ಆ ಪರ್ವತದಲ್ಲಿ ಒಂದಾಗಿ ನೆಲೆಸಿದ್ದಾರೆ.॥20-21॥
ಮೂಲಮ್ - 22
ನಾತ್ಯಾಸಾದಯಿತವ್ಯಾಸ್ತೇ ವಾನರೈರ್ಭೀಮವಿಕ್ರಮೈಃ ।
ನಾದೇಯಂ ಚ ಫಲಂ ತಸ್ಮಾದ್ದೇಶಾತ್ಕಿಂಚಿತ್ ಪ್ಲವಂಗಮೈಃ ॥
ಅನುವಾದ
ಭಯಂಕರ ಪರಾಕ್ರಮಿ ವಾನರರು ಆ ಗಂಧರ್ವರ ಹೆಚ್ಚು ಸಮೀಪಕ್ಕೆ ಹೋಗಬಾರದು, ಅವರಿಗೆ ಯಾವುದೇ ಅಪರಾಧ ಮಾಡಬಾರದು ಮತ್ತು ಆ ಪರ್ವತ ಶಿಖರದಿಂದ ಯಾವುದೇ ಫಲವನ್ನು ತಿನ್ನಬಾರದು.॥22॥
ಮೂಲಮ್ - 23
ದುರಾಸದಾ ಹಿ ತೇ ವೀರಾಃ ಸತ್ತ್ವವಂತೋ ಮಹಾಬಲಾಃ ।
ಫಲಮೂಲಾನಿತೇ ತತ್ರ ರಕ್ಷಂತೇ ಭೀಮವಿಕ್ರಮಾಃ ॥
ಅನುವಾದ
ಏಕೆಂದರೆ, ಆ ಭಯಂಕರ ಬಲ-ವಿಕ್ರಮಗಳಿಂದ ಸಂಪನ್ನ ಧೈರ್ಯವಂತ ಮಹಾಬಲೀ ವೀರ ಗಂಧರ್ವರು ಅಲ್ಲಿಯ ಲ-ಮೂಲಗಳನ್ನು ರಕ್ಷಿಸುತ್ತಾರೆ. ಅವರನ್ನು ಗೆಲ್ಲುವುದು ಬಹಳ ಕಠಿಣವಾಗಿದೆ.॥23॥
ಮೂಲಮ್ - 24
ತತ್ರ ಯತ್ನಶ್ಚ ಕರ್ತವ್ಯೋಮಾರ್ಗಿತವ್ಯಾ ಚ ಜಾನಕೀ ।
ನ ಹಿ ತೇಭ್ಯೋ ಭಯಂ ಕಿಂಚಿತ್ ಕಪಿತ್ವಮನುವರ್ತತಾಮ್ ॥
ಅನುವಾದ
ಅಲ್ಲಿಯೂ ಜಾನಕಿಯನ್ನು ಹುಡುಕಲು ಪ್ರಯತ್ನಿಸಬೇಕು. ಪ್ರಾಕೃತ ಸ್ವಭಾವಕ್ಕನುಸಾರ ಇರುವ ನಿಮ್ಮ ಸೈನ್ಯದ ವಾನರರಿಗೆ ಆ ಗಂಧರ್ವರಿಂದ ಯಾವುದೇ ಭಯವಿಲ್ಲ.॥24॥
ಮೂಲಮ್ - 25
ತತ್ರ ವೈಡೂರ್ಯವರ್ಣಾಭೋ ವಜ್ರಸಂಸ್ಥಾನಸಂಸ್ಥಿತಃ ।
ನಾನಾದ್ರುಮಲತಾಕೀರ್ಣೋ ವಜ್ರೋ ನಾಮ ಮಹಾಗಿರಿಃ ॥
ಅನುವಾದ
ಪಾರಿಯಾತ್ರಾ ಪರ್ವತದ ಬಳಿಯಲ್ಲೇ ಸಮುದ್ರದಲ್ಲಿ ನಾನಾ ಪ್ರಕಾರದ ವೃಕ್ಷ-ಲತೆಗಳಿಂದ ವ್ಯಾಪ್ತವಾದ ಒಂದು ವಜ್ರ ಎಂಬ ಪ್ರಸಿದ್ಧ ಎತ್ತರವಾದ ಪರ್ವತ ಕಂಡುಬಂದೀತು. ಆ ವಜ್ರಗಿರಿಯು ವೈಢೂರ್ಯಮಣಿಯಂತೆ ನೀಲ ಬಣ್ಣದ್ದಾಗಿದೆ. ಅದು ವಜ್ರಮಣಿಯಂತೆ ಕಠೋರವಾಗಿದೆ.॥25॥
ಮೂಲಮ್ - 26
ಶ್ರೀಮಾನ್ ಸಮುದಿತಸ್ತತ್ರ ಯೋಜನಾನಾಂ ಶತಂ ಸಮಮ್ ।
ಗುಹಾಸ್ತತ್ರ ವಿಚೇತವ್ಯಾಃ ಪ್ರಯತ್ನೇನ ಪ್ಲವಂಗಮಾಃ ॥
ಅನುವಾದ
ಆ ಸುಂದರ ಪರ್ವತವು ನೂರು ಯೋಜನ ವಿಸ್ತಾರವಾಗಿದೆ. ಅದರ ಉದ್ದ-ಅಗಲ ಒಂದೇ ರೀತಿಯಾಗಿದೆ. ವಾನರರೇ! ಆ ಪರ್ವತದಲ್ಲಿ ಅನೇಕ ಗುಹೆಗಳು ಇವೆ. ಅವೆಲ್ಲವುಗಳಲ್ಲಿಯೂ ಸೀತೆಯ ಅನುಸಂಧಾನ ಮಾಡಬೇಕು.॥26॥
ಮೂಲಮ್ - 27
ಚರ್ತುರ್ಭಾಗೇ ಸಮುದ್ರಸ್ಯ ಚಕ್ರವಾನ್ನಾಮ ಪರ್ವತಃ ।
ತತ್ರ ಚಕ್ರಂ ಸಹಸ್ರಾರಂ ನಿರ್ಮಿತಂ ವಿಶ್ವಕರ್ಮಣಾ ॥
ಅನುವಾದ
ಸಮುದ್ರದ ಕಾಲುಭಾಗದಲ್ಲಿ ಚಕ್ರವಂತ ಎಂಬ ಪರ್ವತವಿದೆ. ಅಲ್ಲೇ ವಿಶ್ವಕರ್ಮನು ಸಹಸ್ರಾರ ಎಂಬ ಚಕ್ರವನ್ನು ನಿರ್ಮಿಸಿದ್ದನು.॥27॥
ಮೂಲಮ್ - 28
ತತ್ರ ಪಂಚಜನಂ ಹತ್ವಾ ಹಯಗ್ರೀವಂ ಚ ದಾನವಮ್ ।
ಅಜಹಾರ ಶತಚ್ಚಕ್ರಂ ಶಂಖಂ ಚ ಪುರುಷೋತ್ತಮಃ ॥
ಅನುವಾದ
ಅದರಿಂದಲೇ ಪುರುಷೋತ್ತಮ ಭಗವಾನ್ ವಿಷ್ಣು ಪಂಚಜನ ಮತ್ತು ಹಯಗ್ರೀವ ಎಂಬ ದಾನವರನ್ನು ವಧಿಸಿ, ಪಾಂಚಜನ್ಯ ಶಂಖ ಮತ್ತು ಆ ಸಹಸ್ರಾರ ಸುದರ್ಶನ ಚಕ್ರವನ್ನು ತಂದಿದ್ದನು.॥28॥
ಮೂಲಮ್ - 29
ತಸ್ಯ ಸಾನುಷು ರಮ್ಯೇಷು ವಿಶಾಲಾಸು ಗುಹಾಸು ಚ ।
ರಾವಣಃ ಸಹ ವೈದೇಹ್ಯಾ ಮಾರ್ಗಿತವ್ಯಸ್ತತಸ್ತತಃ ॥
ಅನುವಾದ
ಚಕ್ರವಂತ ಪರ್ವತದ ರಮಣೀಯ ಶಿಖರಗಳಲ್ಲಿ, ವಿಶಾಲ ಗುಹೆಗಳಲ್ಲಿಯೂ ಎಲ್ಲೆಡೆ ವೈದೇಹಿ ಸಹಿತ ರಾವಣನನ್ನು ಹುಡುಕಬೇಕು.॥29॥
ಮೂಲಮ್ - 30
ಯೋಜನಾನಿಂ ಚತುಃ ಷಷ್ಟಿರ್ವರಾಹೋ ನಾಮ ಪರ್ವತಃ ।
ಸುವರ್ಣಶೃಂಗಃ ಸುಮಹಾನಗಾಧೇ ವರುಣಾಲಯೇ ॥
ಅನುವಾದ
ಅದರ ಮುಂದೆ ಸಮುದ್ರದ ಅಗಾಧ ಜಲರಾಶಿಯಲ್ಲಿ ಸುವರ್ಣಮಯ ಶಿಖರಗಳುಳ್ಳ ವರಾಹ ಎಂಬ ಪರ್ವತವಿದೆ. ಅದರ ವಿಸ್ತಾರ ಅರವತ್ತನಾಲ್ಕು ಯೋಜನವಾಗಿದೆ.॥30॥
ಮೂಲಮ್ - 31
ತ್ರತ್ರ ಪ್ರಾಗ್ಜ್ಯೋತಿಷಂ ನಾಮ ಜಾತರೂಪಮಯಂ ಪುರಮ್ ।
ಯಸ್ಮಿನ್ವಸತಿ ದುಷ್ಟಾತ್ಮಾ ನರಕೋ ನಾಮ ದಾನವಃ ॥
ಅನುವಾದ
ಅಲ್ಲೇ ಪ್ರಾಗ್ಜ್ಯೋತಿಷ ಎಂಬ ಸುವರ್ಣಮಯ ನಗರವಿದೆ, ಅದರಲ್ಲಿ ದುಷ್ಟಾತ್ಮಾ ನರಕನೆಂಬ ದಾನವನು ವಾಸಿಸುತ್ತಾನೆ.॥31॥
ಮೂಲಮ್ - 32
ತತ್ರ ಸಾನುಷು ರಮ್ಯೇಷು ವಿಶಾಲಾಸು ಗುಹಾಸು ಚ ।
ರಾವಣಃ ಸಹ ವೈದೇಹ್ಯಾ ಮಾರ್ಗಿತವ್ಯಸ್ತತಸ್ತತಃ ॥
ಅನುವಾದ
ಆ ಪರ್ವತದ ರಮಣೀಯ ಶಿಖರ ಗಳಲ್ಲಿ ಹಾಗೂ ಅಲ್ಲಿಯ ವಿಶಾಲ ಗುಹೆಗಳಲ್ಲಿ ಸೀತೆ ಸಹಿತ ರಾವಣನನ್ನು ಹುಡುಕಬೇಕು.॥32॥
ಮೂಲಮ್ - 33
ತಮತಿಕ್ರಮ್ಯ ಶೈಲೇಂದ್ರಂ ಕಾಂಚನಾಂತರ ನಿದರ್ಶನಮ್ ।
ಪರ್ವತಃ ಸರ್ವಸೌವರ್ಣೋ ಧಾರಾಪ್ರಸ್ರವಣಾಯುತಃ ॥
ಅನುವಾದ
ಸುವರ್ಣದಂತೆ ಕಾಣುವ ಒಳಭಾಗವುಳ್ಳ ಆ ಪರ್ವತರಾಜ ವರಾಹವನ್ನು ದಾಟಿ ಮುಂದೆ ಹೋದಾಗ ಪೂರ್ಣ ಸುವರ್ಣಮಯವಾದ ಹತ್ತು ಸಾವಿರ ಝರಿಗಳಿರುವ ಒಂದು ಪರ್ವತ ಸಿಗುವುದು.॥33॥
ಮೂಲಮ್ - 34
ತಂ ಗಜಾಶ್ಚ ವರಾಹಾಶ್ಚ ಸಿಂಹಾವ್ಯಾಘ್ರಾಶ್ಚ ಸರ್ವತಃ ।
ಅಭಿಗರ್ಜಂತಿ ಸತತಂ ತೇನ ಶಬ್ದೇನ ದರ್ಪಿತಾಃ ॥
ಅನುವಾದ
ಅದರ ಸುತ್ತಲೂ ಆನೆ, ಹಂದಿ, ಸಿಂಹ, ಹುಲಿ ಮೊದಲಾದ ಪ್ರಾಣಿಗಳು ಸದಾ ಗರ್ಜಿಸುತ್ತವೆ ಹಾಗೂ ತನ್ನ ಗರ್ಜನೆಯ ಪ್ರತಿಧ್ವನಿಯನ್ನು ಕೇಳಿ ಪುನಃ ದರ್ಪದಿಂದ ಗರ್ಜಿಸುತ್ತದೆ.॥34॥
ಮೂಲಮ್ - 35
ಯಸ್ಮಿನ್ಹರಿಹಯಃ ಶ್ರೀಮಾನ್ಮಹೇಂದ್ರಃ ಪಾಕಶಾಸನಃ ।
ಅಭಿಷಿಕ್ತಃ ಸುರೈ ರಾಜಾ ಮೇಘೋನಾಮ ಸ ಪರ್ವತಃ ॥
ಅನುವಾದ
ಆ ಪರ್ವತದ ಹೆಸರು ಮೇಘಗಿರಿಯಾಗಿದೆ. ಅದರ ಮೇಲೆ ದೇವತೆಗಳು ಹರಿತ ಬಣ್ಣದ ಅಶ್ವಗಳುಳ್ಳ ಶ್ರೀಮಾನ್ ಪಾಕಶಾಸನ ಇಂದ್ರನನ್ನು ರಾಜನಾಗಿ ಪಟ್ಟಾಭಿಷೇಕ ಮಾಡಿದ್ದರು.॥35॥
ಮೂಲಮ್ - 36
ತಮತಿಕ್ರಮ್ಯ ಶೈಲೇಂದ್ರಂ ಮಹೇಂದ್ರಪರಿಪಾಲಿತಮ್ ।
ಷಷ್ಟಿಂ ಗಿರಿ ಸಹಸ್ರಾಣಿ ಕಾಂಚನಾನಿ ಗಮಿಷ್ಯಥ ॥
ಮೂಲಮ್ - 37
ತರುಣಾದಿತ್ಯವರ್ಣಾನಿ ಭ್ರಾಜಮಾನಾನಿ ಸರ್ವತಃ ।
ಜಾತರೂಪಮಯೈರ್ವೃಕ್ಷೈಃ ಶೋಭಿತಾನಿ ಸುಪುಷ್ಪಿತೈಃ ॥
ಅನುವಾದ
ದೇವೇಂದ್ರನಿಂದ ಸುರಕ್ಷಿತ ಗಿರಿರಾಜವನ್ನು ದಾಟಿ ನೀವು ಮುಂದಕ್ಕೆ ಹೋದಾಗ ನಿಮಗೆ ಬಂಗಾರದ ಅರವತ್ತು ಸಾವಿರ ಪರ್ವತಗಳು ಸಿಗುವವು. ಅವು ಎಲ್ಲ ಕಡೆಗಳಿಂದ ಸೂರ್ಯನಂತೆ ಕಾಂತಿಯಿಂದ ದೇದೀಪ್ಯಮಾನವಾಗಿವೆ ಮತ್ತು ಸುಂದರ ಹೂವುಗಳಿಂದ ತುಂಬಿದ ಸುವರ್ಣಮಯ ವೃಕ್ಷಗಳಿಂದ ಸುಶೋಭಿತವಾಗಿದೆ.॥36-37॥
ಮೂಲಮ್ - 38
ತೇಷಾಂ ಮಧ್ಯೇ ಸ್ಥಿತೋ ರಾಜಾ ಮೇರುರುತ್ತಮಪರ್ವತಃ ।
ಆದಿತ್ಯೇನ ಪ್ರಸನ್ನೇನ ಶೈಲೋ ದತ್ತವರಃ ಪುರಾ ॥
ಮೂಲಮ್ - 39
ತೇನೈವಮುಕ್ತಃ ಶೈಲೇಂದ್ರಃ ಸರ್ವ ಏವ ತ್ವದಾಶ್ರಯಾಃ ।
ಮತ್ಪ್ರಸಾದಾದ್ ಭವಿಷ್ಯಂತಿ ದಿವಾ ರಾತ್ರೌ ಚ ಕಾಂಚನಾಃ ॥
ಮೂಲಮ್ - 40
ತ್ವಯಿ ಯೇ ಚಾಪಿ ವತ್ಸ್ಯಂತಿ ದೇವಗಂಧರ್ವ ದಾನವಾಃ ।
ತೇ ಭವಿಷ್ಯಂತಿ ಭಕ್ತಾಶ್ಚ ಪ್ರಭಯಾ ಕಾಂಚನಪ್ರಭಾಃ ॥
ಅನುವಾದ
ಅವುಗಳ ಮಧ್ಯದಲ್ಲಿ ಪರ್ವತಗಳ ರಾಜಾ ಗಿರಿಶ್ರೇಷ್ಠ ಮೇರು ವಿರಾಜಿಸುತ್ತಿದೆ. ಅದಕ್ಕೆ ಹಿಂದೆ ಸೂರ್ಯನು ಪ್ರಸನ್ನನಾಗಿ ಶೈಲರಾಜನಲ್ಲಿ - ‘ಹಗಲು-ರಾತ್ರೆ ನಿನ್ನ ಆಶ್ರಯದಲ್ಲಿ ಇರುವವರು ನನ್ನ ಕೃಪೆಯಿಂದ ಸುವರ್ಣಮಯವಾಗುವರು ಹಾಗೂ ದೇವತೆಗಳು, ದಾನವರು, ಗಂಧರ್ವರು ನಿನ್ನ ಮೇಲೆ ವಾಸಿಸುವರು. ಅವರು ಸುವರ್ಣದಂತೆ ಕಾಂತಿಯುಕ್ತರಾಗಿ, ನನ್ನ ಭಕ್ತರಾಗುವರು’ ಎಂಬ ವರವನ್ನು ಕೊಟ್ಟಿದ್ದನು.॥38-40॥
ಮೂಲಮ್ - 41
ವಿಶ್ವೇದೇವಾಶ್ಚ ವಸವೋ ಮರುತಶ್ಚ ದಿವೌಕಸಃ ।
ಆಗಮ್ಯ ಪಶ್ಚಿಮಾಂ ಸಂಧ್ಯಾಂ ಮೇರುಮುತ್ತಮಪರ್ವತಮ್ ॥
ಮೂಲಮ್ - 42
ಆದಿತ್ಯಮುಪತಿಷ್ಠಂತಿ ತೈಶ್ಚ ಸೂರ್ಯೋಽಭಿಪೂಜಿತಃ ।
ಅದೃಶ್ಯಃ ಸರ್ವಭೂತಾನಾಮಸ್ತಂ ಗಚ್ಛತಿ ಪರ್ವತಮ್ ॥
ಅನುವಾದ
ವಿಶ್ವೇದೇವ, ವಸು, ಮರುದ್ಗಣ ಹಾಗೂ ಇತರ ದೇವತೆಗಳು ಸಾಯಂಕಾಲದಲ್ಲಿ ಉತ್ತಮ ಪರ್ವತ ಮೇರುವಿನ ಮೇಲೆ ಬಂದು ಸೂರ್ಯನ ಉಪಸ್ಥಾನ ಮಾಡುವರು. ಅವರಿಂದ ಚೆನ್ನಾಗಿ ಪೂಜಿತನಾಗಿ ಭಗವಾನ್ ಸೂರ್ಯನು ಎಲ್ಲ ಪ್ರಾಣಿಗಳಿಗೆ ಕಣ್ಮರೆಯಾಗಿ ಅಸ್ತಾಚಲಕ್ಕೆ ಹೋಗುತ್ತಾನೆ.॥41-42॥
ಮೂಲಮ್ - 43
ಯೋಜನಾನಾಂ ಸಹಸ್ರಾಣಿ ದಶ ತಾನಿ ದಿವಾಕರಃ ।
ಮುಹೂರ್ತಾರ್ಧೇನ ತಂ ಶೀಘ್ರಮಭಿಯಾತಿ ಶಿಲೋಚ್ಚಯಮ್ ॥
ಅನುವಾದ
ಮೇರುವಿನಿಂದ ಅಸ್ತಾಚಲವು ಹತ್ತುಸಾವಿರ ಯೋಜನ ದೂರದಲ್ಲಿದೆ; ಆದರೆ ಸೂರ್ಯನು ಅರ್ಧ ಮುಹೂರ್ತದಲ್ಲೇ ಅಲ್ಲಿಗೆ ತಲುಪುವನು.॥43॥
ಮೂಲಮ್ - 44
ಶೃಂಗೇ ತಸ್ಯ ಮಹದ್ದಿವ್ಯಂ ಭವನಂ ಸೂರ್ಯಸನ್ನಿಭಮ್ ।
ಪ್ರಾಸಾದಗಣಸಂಬಾಧಂ ವಿಹಿತಂ ವಿಶ್ವಕರ್ಮಣಾ ॥
ಅನುವಾದ
ಅದರ ಶಿಖರದ ಮೇಲೆ ವಿಶ್ವಕರ್ಮನು ರಚಿಸಿದ ಒಂದು ಬಹಳ ದೊಡ್ಡ ಭವ್ಯಭವನವಿದೆ. ಅದು ಅನೇಕ ಪ್ರಸಾದ ಗಳಿಂದ ತುಂಬಿದ್ದು, ಸೂರ್ಯನಂತೆ ದೀಪ್ತಿವಂತನಾಗಿ ಕಾಣುತ್ತದೆ.॥44॥
ಮೂಲಮ್ - 45
ಶೋಭಿತಂ ತರುಭಿಶ್ಚಿತ್ರೈರ್ನಾನಾಪಕ್ಷಿಸಮಾಕುಲೈಃ ।
ನಿಕೇತಂ ಪಾಶಹಸ್ತಸ್ಯ ವರುಣಸ್ಯ ಮಹಾತ್ಮನಃ ॥
ಅನುವಾದ
ನಾನಾ ಪ್ರಕಾರದ ಪಕ್ಷಿಗಳಿಂದ ವ್ಯಾಪ್ತ ಚಿತ್ರ-ವಿಚಿತ್ರ ವೃಕ್ಷಗಳು ಅದರ ಶೋಭೆ ಹೆಚ್ಚಿಸುತ್ತಿವೆ. ಅದು ಪಾಶಧಾರಿ ಮಹಾತ್ಮಾ ವರುಣನ ನಿವಾಸ ಸ್ಥಾನವಾಗಿದೆ.॥45॥
ಮೂಲಮ್ - 46
ಅಂತರಾ ಮೇರುಮಸ್ತಂ ಚ ತಾಲೋ ದಶಶಿರಾ ಮಹಾನ್ ।
ಜಾತರೂಪಮಯಃ ಶ್ರೀಮಾನ್ ಭ್ರಾಜತೇ ಚಿತ್ರವೇದಿಕಃ ॥
ಅನುವಾದ
ಮೇರು ಮತ್ತು ಆಸ್ತಾಚಲದ ನಡುವೆ ಬಹಳ ಎತ್ತರವಾದ, ಸುಂದರವಾದ ಒಂದು ಸ್ವರ್ಣಮಯ ತಾಲ ವೃಕ್ಷವಿದೆ. ಅದಕ್ಕೆ ಹತ್ತು ದೊಡ್ಡ ರೆಂಬೆಗಳಿವೆ. ಅದರ ಬುಡದ ವೇದಿಯು ಬಹಳ ವಿಚಿತ್ರವಾಗಿದ್ದು, ಈರೀತಿ ಆ ವೃಕ್ಷವು ಶೋಭಿಸುತ್ತಿದೆ.॥46॥
ಮೂಲಮ್ - 47
ತೇಷು ಸರ್ವೇಷು ದುರ್ಗೇಷು ಸರಸ್ಸು ಚ ಸರಿತ್ಸು ಚ ।
ರಾವಣಃ ಸಹ ವೈದೇಹ್ಯಾ ಮಾರ್ಗಿತವ್ಯಸ್ತತಸ್ತತಃ ॥
ಅನುವಾದ
ಅಲ್ಲಿಯ ಎಲ್ಲ ದುರ್ಗಮ ಸ್ಥಾನಗಳಲ್ಲಿ, ಸರೋವರಗಳಲ್ಲಿ, ನದಿಗಳಲ್ಲಿ, ಎಲ್ಲೆಡೆ ಸೀತಾಸಹಿತ ರಾವಣನನ್ನು ಹುಡುಕಬೇಕು.॥47॥
ಮೂಲಮ್ - 48
ಯತ್ರ ತಿಷ್ಠತಿ ಧರ್ಮಜ್ಞ ಸ್ತಪಸಾ ಸ್ವೇನ ಭಾವಿತಃ ।
ಮೇರುಸಾವರ್ಣಿರಿತ್ಯೇಷ ಖ್ಯಾತೋವೈ ಬ್ರಹ್ಮಣಾ ಸಮಃ ॥
ಅನುವಾದ
ಮೇರುಗಿರಿಯ ಮೇಲೆ ಧರ್ಮಜ್ಞ ಮಹರ್ಷಿ ಮೇರು ಸಾವರ್ಣಿ ಇರುತ್ತಾರೆ. ಅವರು ತಮ್ಮ ತಪಸ್ಸಿನಿಂದ ಎತ್ತರವಾದ ಸ್ಥಿತಿಯನ್ನು ಪಡೆದುಕೊಂಡಿರುವರು. ಅವರು ಪ್ರಜಾಪತಿಯಂತೆ ಶಕ್ತಿಶಾಲಿ ಹಾಗೂ ವಿಖ್ಯಾತ ಋಷಿಗಳಾಗಿದ್ದಾರೆ.॥48॥
ಮೂಲಮ್ - 49
ಪ್ರಷ್ಟವ್ಯೋ ಮೇರುಸಾವರ್ಣಿರ್ಮಹರ್ಷಿಃ ಸೂರ್ಯಸಂನಿಭಃ ।
ಪ್ರಣಮ್ಯ ಶಿರಸಾ ಭೂಮೌ ಪ್ರವೃತ್ತಿಂ ಮೈಥಿಲೀಂ ಪ್ರತಿ ॥
ಅನುವಾದ
ಸೂರ್ಯತುಲ್ಯ ತೇಜಸ್ವೀ ಮಹರ್ಷಿ ಮೇರುಸಾವರ್ಣಿಯ ಚರಣಗಳಲ್ಲಿ ನೆಲಕ್ಕೆ ಮಸ್ತಕ-ಚಾಚಿ ಪ್ರಣಾಮ ಮಾಡಿದ ಬಳಿಕ ನೀವು ಅವರಲ್ಲಿ ಮಿಥಿಲೇಶಕುಮಾರಿಯ ಸಮಾಚಾರ ಕೇಳಿರಿ.॥49॥
ಮೂಲಮ್ - 50
ಏತಾವಜ್ಜೀವಲೋಕಸ್ಯ ಭಾಸ್ಕರೋ ರಜನೀಕ್ಷಯೇ ।
ಕೃತ್ವಾ ವಿತಮಿರಂ ಸರ್ವಮಸ್ತಂ ಗಚ್ಛತಿ ಪರ್ವತಮ್ ॥
ಅನುವಾದ
ರಾತ್ರಿಯ ಕೊನೆಯಲ್ಲಿ (ಪ್ರಾತಃಕಾಲ) ಉದಯಿಸಿದ ಭಗವಾನ್ ಸೂರ್ಯನು ಜೀವ-ಜಗತ್ತಿನ ಎಲ್ಲ ಅಂಧಕಾರರಹಿತ ಬೆಳಗಿ ಅಂತ್ಯದಲ್ಲಿ ಅಸ್ತಾಚಲಕ್ಕೆ ಹೋಗುತ್ತಾನೆ.॥50॥
ಮೂಲಮ್ - 51
ಏತಾವದ್ವಾನರೈಃ ಶಕ್ಯಂ ಗಂತುಂ ವಾನರಪುಂಗವಾಃ ।
ಅಭಾಸ್ಕರಮಮರ್ಯಾದಂ ನ ಜಾನೀಮಸ್ತತಃ ಪರಮ್ ॥
ಅನುವಾದ
ವಾನರ ಶಿರೋಮಣಿಗಳೇ! ಪಶ್ಚಿಮ ದಿಕ್ಕಿಗೆ ಇಷ್ಟೇ ದೂರದವರೆಗೆ ವಾನರರು ಹೋಗಬಲ್ಲರು. ಅದರ ಮುಂದೆ ಸೂರ್ಯನ ಪ್ರಕಾಶವಿಲ್ಲ ಹಾಗೂ ಯಾವ ದೇಶದ ಸೀಮೆಯೂ ಇಲ್ಲ. ಆದ್ದರಿಂದ ಅಲ್ಲಿಂದ ಮುಂದಿನ ಭೂಮಿಯ ವಿಷಯ ದಲ್ಲಿ ನನಗೆ ಏನೂ ತಿಳಿಯದು.॥51॥
ಮೂಲಮ್ - 52
ಅಧಿಗಮ್ಯ ತು ವೈದೇಹೀಂ ನಿಲಯಂ ರಾವಣಸ್ಯ ಚ ।
ಅಸ್ತಂ ಪರ್ವತಮಾಸಾದ್ಯ ಪೂರ್ಣೇ ಮಾಸೇ ನಿವರ್ತತ ॥
ಅನುವಾದ
ಅಸ್ತಾಚಲದವರೆಗೆ ಹೋಗಿ ರಾವಣನ ಸ್ಥಾನ ಮತ್ತು ಸೀತೆಯನ್ನು ಹುಡುಕಿರಿ ಹಾಗೂ ಒಂದು ತಿಂಗಳೊಳಗೆ ಇಲ್ಲಿಗೆ ಮರಳಿ ಬರಬೇಕು.॥52॥
ಮೂಲಮ್ - 53
ಊರ್ಧ್ವಂ ಮಾಸಾನ್ನ ವಸ್ತವ್ಯಂ ವಸನ್ ವಧ್ಯೋ ಭವೇನ್ಮಮ ।
ಸಹೈವ ಶೂರೋ ಯುಷ್ಮಾಭಿಃ ಶ್ವಶುರೋ ಮೇ ಗಮಿಷ್ಯತಿ ॥
ಅನುವಾದ
ಒಂದು ತಿಂಗಳಿಗಿಂತ ಹೆಚ್ಚು ಉಳಿಯಬಾರದು. ಉಳಿದರೆ ಅವನು ನನ್ನ ಕೈಯಿಂದ ಶಿಕ್ಷೆಗೆ ಗುರಿಯಾಗುವನು. ನಿಮ್ಮೊಂದಿಗೆ ನನ್ನ ಪೂಜ್ಯ ಮಾವನವರೂ ಹೋಗುವರು.॥53॥
ಮೂಲಮ್ - 54
ಶ್ರೋತವ್ಯಂ ಸರ್ವಮೇತಸ್ಯ ಭವದ್ಭಿರ್ದಿಷ್ಟಕಾರಿಭಿಃ ।
ಗುರುರೇಷ ಮಹಾಬಾಹುಃ ಶ್ವಶುರೋ ಮೇ ಮಹಾಬಲಃ ॥
ಅನುವಾದ
ನೀವೆಲ್ಲರೂ ಇವರ ಆಜ್ಞೆಗಧೀನರಾಗಿ ಇದ್ದು, ಇವರ ಎಲ್ಲ ಮಾತುಗಳನ್ನು ಗಮನವಿಟ್ಟು ಕೇಳಬೇಕು; ಏಕೆಂದರೆ ಮಹಾಬಾಹು ಮಹಾಬಲಿ ಈ ಸುಷೇಣರು ನನ್ನ ಮಾವನವರಾಗಿದ್ದು ಹಿರಿಯರಾಗಿದ್ದಾರೆ. ಆದ್ದರಿಂದ ನಿಮಗೂ ಗುರುಗಳಂತೆ ಆದರಣೀಯರಾಗಿದ್ದಾರೆ.॥54॥
ಮೂಲಮ್ - 55
ಭವಂತಶ್ಚಾಪಿ ವಿಕ್ರಾಂತಾಃ ಪ್ರಮಾಣಂ ಸರ್ವಏವ ಹಿ ।
ಪ್ರಮಾಣಮೇನಂ ಸಂಸ್ಥಾಪ್ಯ ಪಶ್ಯಧ್ವಂ ಪಶ್ಚಿಮಾಂ ದಿಶಮ್ ॥
ಅನುವಾದ
ನೀವೆಲ್ಲರೂ ಕೂಡ ಬಹಳ ಪರಾಕ್ರಮಿಗಳೂ, ಕರ್ತವ್ಯಾಕರ್ತವ್ಯದ ನಿರ್ಣಯದಲ್ಲಿ ವಿಶ್ವಸನೀಯರಾಗಿದ್ದರೂ ಇವರನ್ನು ನಿಮ್ಮ ಮುಖಂಡರಾಗಿಸಿಕೊಂಡು ನೀವು ಪಶ್ಚಿಮ ದಿಕ್ಕಿನ ವ್ಯವಸ್ಥೆಯನ್ನು ಪ್ರಾರಂಭಿಸಿರಿ.॥55॥
ಮೂಲಮ್ - 56
ದೃಷ್ವಾಯಾಂ ತು ನರೇಂದ್ರಸ್ಯ ಪತ್ನ್ಯಾಮಮಿತತೇಜಸಃ ।
ಕೃತಕೃತ್ಯಾ ಭವಿಷ್ಯಾಮಃ ಕೃತಸ್ಯ ಪ್ರತಿಕರ್ಮಣಾ ॥
ಅನುವಾದ
ಅಮಿತ ತೇಜಸ್ವೀ ಮಹಾರಾಜ ಶ್ರೀರಾಮನ ಪತ್ನಿಯನ್ನು ಹುಡುಕಿದರೆ ನಾವು ಕೃತಕೃತ್ಯರಾಗುವರು; ಏಕೆಂದರೆ ಅವನು ನಮ್ಮ ಮೇಲೆ ಮಾಡಿದ ಉಪಕಾರವನ್ನು ಹೀಗೆ ತೀರಿಸಿದಂತಾಗುವುದು.॥56॥
ಮೂಲಮ್ - 57
ಅತೋಽನ್ಯದಪಿ ಯತ್ಕಾರ್ಯಂ ಕಾರ್ಯಸ್ಯಾಸ್ಯ ಪ್ರಿಯಂ ಭವೇತ್ ।
ಸಂಪ್ರಧಾರ್ಯ ಭವದ್ಭಿಶ್ಚ ದೇಶಕಾಲಾರ್ಥಸಂಹಿತಮ್ ॥
ಅನುವಾದ
ಆದ್ದರಿಂದ ಈ ಕಾರ್ಯಕ್ಕನುಕೂಲ ಇನ್ನೂ ಏನಾದರೂ ಕರ್ತವ್ಯ, ದೇಶ, ಕಾಲ, ಪ್ರಯೋಜನದ ಸಂಬಂಧವಿದ್ದರೆ ವಿಚಾರಮಾಡಿ ಅದನ್ನು ನೀವು ಮಾಡಿರಿ.॥57॥
ಮೂಲಮ್ - 58
ತತಃ ಸುಷೇಣಪ್ರಮುಖಾಃ ಪ್ಲವಂಗಮಾಃ
ಸುಗ್ರೀವವಾಕ್ಯಂ ನಿಪುಣಂ ನಿಶಮ್ಯ ।
ಆಮಂತ್ರ್ಯ ಸರ್ವೇಪ್ಲವಗಾಧಿಪಂ ತೇ
ಜಗ್ಮುರ್ದಿಶಂತಾಂ ವರುಣಾಭಿಗುಪ್ತಾಮ್ ॥
ಅನುವಾದ
ಸುಗ್ರೀವನ ಮಾತನ್ನು ಚೆನ್ನಾಗಿ ಕೇಳಿ ಸುಷೇಣನೇ ಮೊದಲಾದ ವಾನರರು ಆ ವಾನರರಾಜನ ಅನುಮತಿ ಪಡೆದು ವರುಣನಿಂದ ಸುರಕ್ಷಿತವಾದ ಪಶ್ಚಿಮ ದಿಕ್ಕಿನ ಕಡೆಗೆ ಹೊರಟರು.॥58॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ನಲವತ್ತೆರಡನೆಯ ಸರ್ಗ ಸಂಪೂರ್ಣವಾಯಿತು.॥42॥