०४१ दक्षिणां प्रति हनुमदादिप्रेषणम्

वाचनम्
ಭಾಗಸೂಚನಾ

ಸುಗ್ರೀವನು ದಕ್ಷಿಣದಿಶೆಯ ಸ್ಥಾನಗಳ ಪರಿಚಯ ಮಾಡಿಸುತ್ತಾ ಅಲ್ಲಿಗೆ ಪ್ರಮುಖ ವಾನರ ವೀರರನ್ನು ಕಳಿಸಿದುದು

ಮೂಲಮ್ - 1

ತತಃ ಪ್ರಸ್ಥಾಪ್ಯ ಸುಗ್ರೀವಸ್ತನ್ಮಹದ್ವಾನರಂ ಬಲಮ್ ।
ದಕ್ಷಿಣಾಂ ಪ್ರೇಷಯಾಮಾಸ ವಾನರಾನಭಿಲಕ್ಷಿತಾನ್ ॥

ಅನುವಾದ

ಈ ಪ್ರಕಾರ ವಾನರರ ಬಹಳ ದೊಡ್ಡ ಸೈನ್ಯವನ್ನು ಪೂರ್ವದಿಕ್ಕಿಗೆ ನೇಮಿಸಿ, ಸುಗ್ರೀವನು ದಕ್ಷಿಣದ ದಿಕ್ಕಿನ ಕಡೆಗೆ ಚೆನ್ನಾಗಿ ಪರೀಕ್ಷಿಸಿ, ಆಯ್ದ ವಾನರರನ್ನು ಕಳಿಸಿದನು.॥1॥

ಮೂಲಮ್ - 2

ನೀಲಮಗ್ನಿ ಸುತಂ ಚೈವ ಹನುಮಂತಂ ಚ ವಾನರಮ್ ।
ಪಿತಾಮಹಸುತಂ ಚೈವ ಜಾಂಬವಂತಂ ಮಹೌಜಸಮ್ ॥

ಮೂಲಮ್ - 3

ಸುಹೋತ್ರಂ ಚ ಶರಾರಿಂ ಚ ಶರಗುಲ್ಮಂ ತಥೈವ ಚ ।
ಗಜಂ ಗವಾಕ್ಷಂ ಗವಯಂ ಸುಷೇಣಮೃಷಭಂ ತಥಾ ॥

ಮೂಲಮ್ - 4

ಮೈಂದ ಚ ದ್ವಿವಿದಂ ಚೈವ ವಿಜಯಂ ಗಂಧಮಾದನಮ್ ।
ಉಲ್ಕಾಮುಖಮನಂಗಂ ಚ ಹುತಾಶನಸುತಾವುಭೌ ॥

ಮೂಲಮ್ - 5

ಅಂಗದಪ್ರಮುಖಾನ್ವೀರಾನ್ವೀರಃ ಕಪಿಗಣೇಶ್ವರಃ ।
ವೇಗವಿಕ್ರಮಸಂಪನ್ನಾನ್ ಸಂದಿದೇಶ ವಿಶೇಷವಿತ್ ॥

ಅನುವಾದ

ಅಗ್ನಿಪುತ್ರ ನೀಲ, ಕಪಿವರ ಹನುಮಂತ, ಬ್ರಹ್ಮದೇವರಪುತ್ರ ಮಹಾಬಲಿ ಜಾಂಬವಂತ, ಸುಹೋತ್ರ, ಶರಾರಿ, ಶರಗುಲ್ಮ, ಗಜ, ಗವಾಕ್ಷ, ಗವಯ ಸುಷೇಣ (ಪ್ರಥಮ), ವೃಷಭ, ಮೈಂದ, ದ್ವಿವಿದ, ಸುಷೇಣ (ದ್ವಿತೀಯ), ಗಂಧಮಾದನ, ಹುತಾಶನನ ಇಬ್ಬರು ಪುತ್ರರಾದ ಉಲ್ಕಾಮುಖ ಮತ್ತು ಅನಂಗ ಹಾಗೂ ಅಂಗದ ಮೊದಲಾದ ಮಹಾಪರಾಕ್ರಮಿ, ವೇಗಸಂಪನ್ನ ಮುಖ್ಯ-ಮುಖ್ಯ ವೀರರನ್ನು ವಿಶೇಷಜ್ಞ ವಾನರರಾಜ ಸುಗ್ರೀವನು ದಕ್ಷಿಣ ದಿಕ್ಕಿನ ಕಡೆಗೆ ಹೋಗಲು ಆಜ್ಞಾಪಿಸಿದನು.॥2-5॥

ಮೂಲಮ್ - 6

ತೇಷಾಮಗ್ರೇಸರಂ ಚೈವ ಬೃಹದ್ಬಲಮಥಾಂಗದಮ್ ।
ವಿಧಾಯ ಹರಿವೀರಾಣಾಮಾದಿಶದ್ದಕ್ಷಿಣಾಂ ದಿಶಮ್ ॥

ಅನುವಾದ

ಮಹಾನ್ ಬಲಶಾಲೀ ಅಂಗದನನ್ನು ಆ ಎಲ್ಲ ವಾನರ ವೀರರಿಗೆ ಮುಖಂಡನಾಗಿಸಿ ಅವರಿಗೆ ದಕ್ಷಿಣ ದಿಕ್ಕಿನಲ್ಲಿ ಸೀತಾನ್ವೇಷಣದ ಭಾರವನ್ನು ಒಪ್ಪಿಸಿದನು.॥6॥

ಮೂಲಮ್ - 7

ಯೇ ಕೇಚನ ಸಮುದ್ದೇಶಾಸ್ತಸ್ಯಾಂ ದಿಶಿ ಸುದುರ್ಗಮಾಃ ।
ಕಪೀಶಃ ಕಪಿಮುಖ್ಯಾನಾಂ ಸ ತೇಷಾಂ ಸಮುದಾಹರತ್ ॥

ಅನುವಾದ

ಆ ದಿಕ್ಕಿನಲ್ಲಿರುವ ಅತ್ಯಂತ ದುರ್ಗಮ ಸ್ಥಾನಗಳ ಪರಿಚಯವನ್ನು ಕಪಿರಾಜ ಸುಗ್ರೀವನು ಆ ಶ್ರೇಷ್ಠ ವಾನರರಿಗೆ ಮಾಡಿಸಿದನು.॥7॥*

ಟಿಪ್ಪನೀ

*ಇಲ್ಲಿ ದಕ್ಷಿಣದಿಕ್ಕಿನ ವಿಭಾಗ ಕಿಷ್ಕಿಂಧೆಯಿಂದ ಮಾಡದೆ ಆರ್ಯಾವರ್ತದಿಂದ ಮಾಡಲಾಗಿದೆ. ಪೂರ್ವಸಮುದ್ರದಿಂದ ಪಶ್ಚಿಮಸಮುದ್ರ ಮತ್ತು ಹಿಮಾಲಯದಿಂದ ವಿಂಧ್ಯದವರೆಗಿನ ಭಾಗವನ್ನು ಆರ್ಯಾವರ್ತ ಎಂದು ಹೇಳುತ್ತಾರೆ. ಸುಗ್ರೀವನು ಪರಿಚಯಿಸಿದ ದಕ್ಷಿಣದಿಕ್ಕಿನ ಸ್ಥಾನಗಳ ಸಂಗತಿ ಆರ್ಯಾವರ್ತದಿಂದ ದಿಕ್ಕಿನ ವಿಭಾಜನ ಮಾಡಿದರೆ ಸರಿ ಹೊಂದುತ್ತದೆ.

ಮೂಲಮ್ - 8

ಸಹಸ್ರಶಿರಸಂ ವಿಂಧ್ಯಂ ನಾನಾದ್ರುಮಲತಾಯುತಮ್ ।
ನರ್ಮದಾಂ ಚ ನದೀಂ ರಮ್ಯಾಂ ಮಹೋರಗನಿಷೇವಿತಾಮ್ ॥

ಮೂಲಮ್ - 9½

ತತೋ ಗೋದಾವರೀಂ ರಮ್ಯಾಂ ಕೃಷ್ಣವೇಣೀಂ ಮಹಾನದೀಮ್ ।
ವರದಾಂ ಚ ಮಹಾಭಾಗಾಂ ಮಹೋರಗನಿಷೇವಿತಾಮ್ ।
ಮೇಖಲಾನುತ್ಕಲಾಂಚೈವ ದಶಾರ್ಣನಗರಾಣ್ಯಪಿ ॥

ಅನುವಾದ

ಅವನು ಹೇಳಿದನು - ವಾನರರೇ! ನೀವು ಬಗೆ-ಬಗೆಯ ವೃಕ್ಷಗಳಿಂದ ಹಾಗೂ ಲತೆಗಳಿಂದ ಸುಶೋಭಿತ ಸಾವಿರ ಶಿಖರಗಳುಳ್ಳ ವಿಂಧ್ಯಪರ್ವತ, ದೊಡ್ಡ-ದೊಡ್ಡ ನಾಗಗಳಿಂದ ಸೇವಿತ ರಮಣೀಯ ನರ್ಮದಾ ನದೀ, ಸುರಮ್ಯ ಗೋದಾವರಿ, ಮಹಾನದೀ, ಕೃಷ್ಣವೇಣೀ, ದೊಡ್ಡ-ದೊಡ್ಡ ನಾಗಗಳಿಂದ ಸೇವಿತ ಮಹಾಭಾಗಾ ವರದಾ ಮೊದಲಾದ ನದಿಗಳ ತೀರಗಳಲ್ಲಿ ಮತ್ತು ಮೇಖಲ (ಮೇಕಲ), ಉತ್ಕಲ, ದಶಾರ್ಣ ದೇಶದ ನಗರಗಳಲ್ಲಿ ಹಾಗೂ ಆಬ್ರವಂತೀ, ಅವಂತೀಪುರಿಯಲ್ಲಿಯೂ ಎಲ್ಲ ಕಡೆ ಸೀತೆಯನ್ನು ಹುಡುಕಿರಿ.॥8-9॥

ಮೂಲಮ್ - 10

ಅಬ್ರವಂತೀಮವಂತೀಂ ಚ ಸರ್ವಮೇವಾನುಪಶ್ಯತ ।
ವಿದರ್ಭಾನೃಷ್ಟಿಕಾಂಶ್ಚೈವ ರಮ್ಯಾನ್ಮಾಹಿಷಕಾನಪಿ ॥

ಮೂಲಮ್ - 11

ತಥಾ ವಂಗಾನ್ಕಲಿಂಗಾಂಶ್ಚ ಕೌಶಿಕಾಂಶ್ಚ ಸಮಂತತಃ ।
ಅನ್ವೀಕ್ಷ್ಯ ದಂಡಕಾರಣ್ಯಂ ಸಪರ್ವತನದೀಗುಹಮ್ ॥

ಮೂಲಮ್ - 12

ನದೀಂ ಗೋದಾವರೀಂ ಚೈವ ಸರ್ವಮೇವಾನುಪಶ್ಯತ ।
ತಥೈವಾನಾಂಧ್ರಾಂಶ್ಚ ಪುಡ್ರಾಂದ್ರಶ್ಚ ಚೋಲಾನ್ ಪಾಂಡ್ಯಂಶ್ಚ ಕೇರಲಾನ್ ॥

ಅನುವಾದ

ಹೀಗೆಯೇ ವಿದರ್ಭ, ಋಷ್ಟಿಕ, ರಮ್ಯ ಮಾಹಿಷಕ ದೇಶ, ವಂಗ,1 ಕಲಿಂಗ, ಕೌಶಿಕ ಮೊದಲಾದ ದೇಶಗಳಲ್ಲಿ ಎಲ್ಲೆಡೆ ನೀರೀಕ್ಷಿಸಿ, ಪರ್ವತ, ನದೀ, ಗುಹೆಗಳಿಂದ ಕೂಡಿದ ದಂಡಕಾರಣ್ಯದಲ್ಲಿ ಹುಡುಕಿರಿ. ಅಲ್ಲಿರುವ ಗೋದಾವರೀ ನದಿಯಲ್ಲಿ ಪದೇ-ಪದೇ ನೋಡಬೇಕು. ಹೀಗೆಯೇ ಆಂಧ್ರ, ಪುಂಢ್ರ, ಚೋಳ, ಪಾಂಡ್ಯ, ಕೇರಳ ಮೊದಲಾದ ದೇಶಗಳಲ್ಲಿಯೂ ಹುಡುಕಬೇಕು.॥10-12॥

ಟಿಪ್ಪನೀ

(1) ಬೇರೆ ಪಾಠಕ್ಕನುಸಾರ ಇಲ್ಲಿ ಮತ್ಸ್ಯದೇಶವೆಂದು ತಿಳಿಯಬೇಕು.

ಮೂಲಮ್ - 13½

ಆಯೋಮುಖಶ್ಚ ಗಂತವ್ಯಃ ಪರ್ವತೋಧಾತುಮಂಡಿತಃ ।
ವಿಚಿತ್ರ ಶಿಖರಃ ಶ್ರೀಮಾಂಶ್ಚಿತ್ರಪುಷ್ಪಿತಕಾನನಃ ॥
ಸುಚಂದನವನೋದ್ದೇಶೋ ಮಾರ್ಗಿತವ್ಯೋ ಮಹಾಗಿರಿಃ ।

ಅನುವಾದ

ಅನಂತರ ಅನೇಕ ಧಾತುಗಳಿಂದ ಅಲಂಕೃತ ಅಯೋಮುಖ2 (ಮಲಯ) ಪರ್ವತಕ್ಕೂ ಹೋಗಬೇಕು, ಅದರ ಶಿಖರಗಳು ಬಹಳ ವಿಚಿತ್ರವಾಗಿವೆ. ಆ ಶೋಭಾಸಂಪನ್ನ ಪರ್ವತವು ಅರಳಿದ ವಿಚಿತ್ರ ಕಾನನಗಳಿಂಗ ಕೂಡಿದೆ. ಅದರ ಎಲ್ಲ ಸ್ಥಾನಗಳಲ್ಲಿ ಸುಂದರ ಚಂದನದ ವನಗಳಿವೆ. ಆ ಮಲಯಪರ್ವತದಲ್ಲಿಯೂ ಸೀತೆಯನ್ನು ಚೆನ್ನಾಗಿ ಹುಡುಕಬೇಕು.॥13½॥

ಟಿಪ್ಪನೀ

(2) ರಾಮಾಯಣ ತಿಲಕದ ಲೇಖಕನು ಅಯೋಮುಖವನ್ನು ಮಲಯ ಪರ್ವತದ ನಾಮಾಂತರವೆಂದು ತಿಳಿಯುತ್ತಾನೆ. ಗೋವಿಂದರಾಜನು ಇದನ್ನು ಸಹ್ಯಪರ್ವತದ ಪರ್ಯಾಯವೆಂದು ತಿಳಿಯುತ್ತಾನೆ. ರಾಮಾಯಣ ಶಿರೋಮಣಿಕಾರನು ಅಯೋಮುಖವನ್ನು ಇವೆರಡರಿಂದ ಭಿನ್ನವಾದ ಸ್ವತಂತ್ರ ಪರ್ವತವೆಂದು ತಿಳಿಯುತ್ತಾನೆ. ಇಲ್ಲಿ ತಿಲಕಕಾರನ ಮತವನ್ನು ಅನುಸರಿಸಲಾಗಿದೆ.

ಮೂಲಮ್ - 14½

ತತಸ್ತಾಮಾಪಗಾಂ ದಿವ್ಯಾಂ ಪ್ರಸನ್ನ ಸಲಿಲಾ ಶಯಾಮ್ ॥
ತತ್ರ ದ್ರಕ್ಷ್ಯಥ ಕಾವೇರೀಂ ವಿಹೃತಾಮಪ್ಸರೋಗಣೈಃ ।

ಅನುವಾದ

ಬಳಿಕ ಸ್ವಚ್ಛ ನೀರುಳ್ಳ ದಿವ್ಯನದಿ ಕಾವೇರಿಯನ್ನು ನೋಡಬೇಕು. ಅಲ್ಲಿ ಅಪ್ಸರೆಯರು ವಿಹರಿಸುತ್ತಿರುವರು.॥14½॥

ಮೂಲಮ್ - 15½

ತಸ್ಯಾಸೀನಂ ನಗಸ್ಯಾಗ್ರೇ ಮಲಯಸ್ಯ ಮಹೌಜಸಮ್ ॥
ದ್ರಕ್ಷ್ಯಥಾದಿತ್ಯಸಂಕಾಶಮಗಸ್ತ್ಯಮೃಷಿಸತ್ತಮಮ್ ।

ಅನುವಾದ

ಆ ಪ್ರಸಿದ್ಧ ಮಲಯಪರ್ವತದ ಶಿಖರದ ಮೇಲೆ ಕುಳಿತಿರುವ ಸೂರ್ಯಸದೃಶ ಮಹಾನ್ ತೇಜಸ್ವೀ ಮುನಿಶ್ರೇಷ್ಠ ಅಗಸ್ತ್ಯರನ್ನು3 ದರ್ಶಿಸುವುದು.॥15½॥

ಟಿಪ್ಪನೀ

(3) ಮೊದಲಿಗೆ ಪಂಚವಟಿಯಿಂದ ಉತ್ತರದಲ್ಲಿ ಅಗಸ್ತ್ಯರ ಆಶ್ರಮದ ವರ್ಣನೆ ಬರುತ್ತದೆ, ಆದರೂ ಇಲ್ಲಿ ಮಲಯಪರ್ವತದಲ್ಲಿಯೂ ಅವರ ಆಶ್ರಮವಿತ್ತು ಎಂದು ತಿಳಿಯಬೇಕು. ವಾಲ್ಮೀಕಿ ಮುನಿಯ ಆಶ್ರಮಗಳು ಅನೇಕ ಕಡೆಗಳಲ್ಲಿ ಇರುವಂತೆಯೇ ಇವರದ್ದೂ ಇದ್ದವು, ಅಥವಾ ಇವರು ಅದೇ ಹೆಸರಿನ ಬೇರೊಬ್ಬ ಋಷಿಗಳಿದ್ದರು.

ಮೂಲಮ್ - 16½

ತತಸ್ತೇನಾಭ್ಯನುಜ್ಞಾತಾಃ ಪ್ರಸನ್ನೇನ ಮಹಾತ್ಮನಾ ॥
ತಾಮ್ರಪರ್ಣೀಂ ಗ್ರಾಹಜುಷ್ಟಾಂ ತರಿಷ್ಯಥ ಮಹಾನದೀಮ್ ।

ಅನುವಾದ

ಮತ್ತೆ ಆ ಪ್ರಸನ್ನಚಿತ್ತರಾದ ಮಹಾತ್ಮರಿಂದ ಅಪ್ಪಣೆ ಪಡೆದು, ಮೊಸಳೆಗಳಿಂದ ಕೂಡಿದ ಮಹಾನದಿ ತಾಮ್ರ ಪರ್ಣಿಯನ್ನು ದಾಟಬೇಕು.॥16½॥

ಮೂಲಮ್ - 17½

ಸಾ ಚಂದನವನೈಶ್ಚಿತ್ರೈಃ ಪ್ರಚ್ಛನ್ನದ್ವಿಪವಾರಿಣೀ ॥
ಕಾಂತೇವ ಯುವತಿಃ ಕಾಂತಂ ಸಮುದ್ರಮವಗಾಹತೇ ।

ಅನುವಾದ

ಅದರ ದ್ವೀಪ ಮತ್ತು ಜಲವು ವಿಚಿತ್ರ ಚಂದನವನಗಳಿಂದ ಆಚ್ಛಾದಿತವಾಗಿದೆ, ಆದ್ದರಿಂದ ಅದು ಸುಂದರ ಸೀರೆಯನ್ನುಟ್ಟ ಯುವತಿ ಪ್ರೇಯಸಿಯಂತೆ ತನ್ನ ಪ್ರಿಯತಮ ಸಮುದ್ರವನ್ನು ಸೇರುವಳು.॥17½॥

ಮೂಲಮ್ - 18½

ತತೋ ಹೇಮಮಯಂ ದಿವ್ಯಂ ಮುಕ್ತಾಮಣಿವಿಭೂಷಿತಮ್ ॥
ಯುಕ್ತಂ ಕವಾಟಂ ಪಾಂಡ್ಯಾನಾಂ ಗತಾ ದ್ರಕ್ಷ್ಯಥ ವಾನರಾಃ ।

ಅನುವಾದ

ವಾನರರೇ! ಅಲ್ಲಿಂದ ಮುಂದರಿದಾಗ ನೀವು ಪಾಂಡ್ಯವಂಶೀ ರಾಜರ ನಗರದ್ವಾರದಲ್ಲಿ4 ಇರುವ ಮುಕ್ತಾಮಣಿಗಳಿಂದ ವಿಭೂಷಿತ, ದಿವ್ಯವಾದ ಸುವರ್ಣಮಯ ಬಾಗಿಲಿನ ದರ್ಶನ ಮಾಡುವಿರಿ.॥18½॥

ಟಿಪ್ಪನೀ

(4) ಆಧುನಿಕ ತಂಜಾವೂರೇ ಪ್ರಾಚೀನ ಪಾಂಡ್ಯವಂಶೀ ರಾಜರ ನಗರವಾಗಿದೆ. ಈ ನಗರದಲ್ಲಿಯೂ ಹುಡುಕುವಂತೆ ಸುಗ್ರೀವನು ವಾನರರಿಗೆ ಆದೇಶಿಸುತ್ತಿದ್ದಾನೆ.

ಮೂಲಮ್ - 19

ತತಃ ಸಮುದ್ರಮಾಸಾದ್ಯ ಸಂಪ್ರಧಾರ್ಯಾರ್ಥನಿಶ್ಚಯಮ್ ॥

ಮೂಲಮ್ - 20½

ಅಗಸ್ತ್ಯೇನಾಂತರೇ ತತ್ರ ಸಾಗರೇ ವಿನಿವೇಶಿತಃ ।
ಚಿತ್ರಸಾನುನಗಃ ಶ್ರೀಮಾನ್ಮಹೇಂದ್ರಃ ಪರ್ವತೋತ್ತಮಃ ॥
ಜಾತರೂಪಮಯಃ ಶ್ರೀಮಾನವಗಾಢೋ ಮಹಾರ್ಣವಮ್ ।

ಅನುವಾದ

ಅನಂತರ ಸಮುದ್ರ ತೀರಕ್ಕೆ ಹೋಗಿ ಅದನ್ನು ದಾಟುವ ಸಂಬಂಧದಲ್ಲಿ ತನ್ನ ಕರ್ತವ್ಯವನ್ನು ಚೆನ್ನಾಗಿ ನಿಶ್ಚಯಿಸಿ ಅದನ್ನು ಪಾಲಿಸಬೇಕು. ಮಹರ್ಷಿ ಅಗಸ್ತ್ಯರು ಸಮುದ್ರದೊಳಗೆ ಒಂದು ಸುಂದರ ಸುವರ್ಣಮಯ ಪರ್ವತವನ್ನು ಸ್ಥಾಪಿಸಿರುವರು. ಅದು ಮಹೇಂದ್ರಗಿರಿ ಎಂದು ವಿಖ್ಯಾತವಾಗಿದೆ. ಅದರ ಶಿಖರ ಹಾಗೂ ಅಲ್ಲಿಯ ವೃಕ್ಷಗಳು ವಿಚಿತ್ರ ಶೋಭಾಸಂಪನ್ನರಾಗಿರುವವು. ಆ ಶೋಭಾಶಾಲಿ ಶ್ರೇಷ್ಠಪರ್ವತವು ಸಮುದ್ರದ ತುಂಬಾ ಆಳದವರೆಗೆ ನೆಲೆಸಿದೆ.॥19-20½॥

ಮೂಲಮ್ - 21

ನಾನಾವಿಧೈರ್ನಗೈಃ ಫುಲ್ಲೈರ್ಲತಾಭಿಶ್ಚೋಪಶೋಭಿತಮ್ ॥

ಮೂಲಮ್ - 22½

ದೇವರ್ಷಿಯಕ್ಷಪ್ರವರೈರಪ್ಸರೋಭಿಶ್ಚ ಶೋಭಿತಮ್ ।
ಸಿದ್ಧ ಚಾರಣಸಂಘೈಶ್ಚ ಪ್ರಕೀರ್ಣಂ ಸುಮನೋರಮಮ್ ॥
ತಮುಪೈತಿ ಸಹಸ್ರಾಕ್ಷಃ ಸದಾ ಪರ್ವಸು ಪರ್ವಸು ।

ಅನುವಾದ

ನಾನಾ ಪ್ರಕಾರದ ಚಿಗುರಿದ ವೃಕ್ಷ-ಲತೆಗಳಿಂದ ಆ ಪರ್ವತವು ಶೋಭಿಸುತ್ತಿದೆ. ದೇವತೆಗಳು, ಋಷಿಗಳು, ಶ್ರೇಷ್ಠಯಕ್ಷರು ಮತ್ತು ಅಪ್ಸರೆಯರ ಉಪಸ್ಥಿತಿಯಿಂದ ಅದರ ಶೋಭೆ ಇನ್ನೂ ಹೆಚ್ಚಾಗುತ್ತದೆ. ಸಿದ್ಧರು ಮತ್ತು ಚಾರಣರ ಸಮುದಾಯಗಳು ಅಲ್ಲಿ ಎಲ್ಲೆಡೆ ಹರಡಿತೊಂಡಿವೆ. ಇವೆಲ್ಲವುಗಳಿಂದ ಮಹೇಂದ್ರಪರ್ವತವು ಅತ್ಯಂತ ಮನೋಹರವಾಗಿದೆ. ಸಹಸ್ರನೇತ್ರಧಾರೀ ಇಂದ್ರನು ಪ್ರತಿಯೊಂದು ಪರ್ವದ ದಿನ ಆ ಪರ್ವತಕ್ಕೆ ಪದಾರ್ಪಣಮಾಡುತ್ತಾನೆ.॥21-22½॥

ಮೂಲಮ್ - 23

ದ್ವೀಪಸ್ತಸ್ಯಾಪರೇ ಪಾರೇ ಶತಯೋಜನವಿಸ್ತೃತಃ ॥

ಮೂಲಮ್ - 24

ಅಗಮ್ಯೋ ಮಾನುಷೈರ್ದೀಪ್ತಸ್ತಂ ಮಾರ್ಗಧ್ವಂ ಸಮಂತತಃ ।
ತತ್ರ ಸರ್ವಾತ್ಮನಾ ಸೀತಾ ಮಾರ್ಗಿತವ್ಯಾ ವಿಶೇಷತಃ ॥

ಅನುವಾದ

ಆ ಸಮುದ್ರದ ಆಚೆಗೆ ಒಂದು ದ್ವೀಪವಿದೆ. ಅದರ ವಿಸ್ತಾರ ನೂರು ಯೋಜನವಾಗಿದೆ. ಅಲ್ಲಿ ಮನುಷ್ಯರು ತಲುಪಲಾರರು. ಆ ದೀಪ್ತಿಶಾಲೀ ದ್ವೀಪದಲ್ಲಿ ಎಲ್ಲೆಡೆ ನೀವು ಪೂರ್ಣ ಪ್ರಯತ್ನ ಮಾಡಿ ಎಲ್ಲೆಡೆ ವಿಶೇಷವಾಗಿ ಸೀತೆಯನ್ನು ಹುಡುಕಬೇಕು.॥23-24॥

ಮೂಲಮ್ - 25

ಸ ಹಿ ದೇಶಸ್ತು ವಧ್ಯಸ್ಯ ರಾವಣಸ್ಯ ದುರಾತ್ಮನಃ ।
ರಾಕ್ಷಸಾಧಿಪತೇರ್ವಾಸಃ ಸಹಸ್ರಾಕ್ಷಸಮದ್ಯುತೇಃ ॥

ಅನುವಾದ

ಆ ದೇಶವೇ ಇಂದ್ರನಂತೆ ತೇಜಸ್ವಿ, ನಮ್ಮ ವಧ್ಯನಾದ, ದುರಾತ್ಮಾ ರಾಕ್ಷಸರಾಜ ರಾವಣನ ನಿವಾಸಸ್ಥಾನವಾಗಿದೆ.॥25॥

ಮೂಲಮ್ - 26

ದಕ್ಷಿಣಸ್ಯ ಸಮುದ್ರಸ್ಯ ಮಧ್ಯೇ ತಸ್ಯ ತು ರಾಕ್ಷಸೀ ।
ಅಂಗಾರಕೇತಿ ವಿಖ್ಯಾತಾ ಚ್ಛಾಯಾಮಾಕ್ಷಿಪ್ಯ ಭೋಜನೀ ॥

ಅನುವಾದ

ಆ ದಕ್ಷಿಣದ ಸಮುದ್ರದ ನಡುವೆ ಅಂಗಾರಕಾ ಎಂಬ ಪ್ರಸಿದ್ಧ ಓರ್ವ ರಾಕ್ಷಸಿ ಇರುತ್ತಾಳೆ. ಅವಳು ನೆರಳನ್ನು ಹಿಡಿದೆಳೆದು ಪ್ರಾಣಿಗಳನ್ನು ತಿಂದುಹಾಕುವಳು.॥26॥

ಮೂಲಮ್ - 27

ಏವಂ ನಿಃಸಂಶಯಾನ್ ಕೃತ್ವಾ ಸಂಶಯಾನ್ನಷ್ಟ ಸಂಶಯಾಃ ।
ಮೃಗಯಧ್ವಂ ನರೇಂದ್ರಸ್ಯ ಪತ್ನೀಮವಿತತೇಜಸಃ ॥

ಅನುವಾದ

ಆ ಲಂಕಾದ್ವೀಪದಲ್ಲಿ ಇರುವ ಎಲ್ಲ ಸಂದಿಗ್ಧ ಸ್ಥಾನಗಳಲ್ಲಿಯೂ ಹುಡುಕಿ ಸಂದೇಹ ರಹಿತರಾಗಿ ನಿಮ್ಮ ಮನಸ್ಸಿನ ಸಂಶಯ ದೂರವಾದಾಗ ನೀವು ಲಂಕಾದ್ವೀಪವನ್ನು ದಾಟಿ ಮುಂದೆ ಹೋಗುವುದು ಮತ್ತು ಅಮಿತ ತೇಜಸ್ವೀ ಮಹಾರಾಜ ಶ್ರೀರಾಮನ ಪತ್ನಿಯನ್ನು ಅನ್ವೇಷಣೆ ಮಾಡಬೇಕು.॥27॥

ಮೂಲಮ್ - 28

ತಮತಿಕ್ರಮ್ಯ ಲಕ್ಷ್ಮೀವಾನ್ ಸಮುದ್ರೇ ಶತಯೋಜನೇ ।
ಗಿರಿಃ ಪುಷ್ಪಿತಕೋ ನಾಮ ಸಿದ್ಧಚಾರಣ ಸೇವಿತಃ ॥

ಅನುವಾದ

ಲಂಕೆಯನ್ನು ದಾಟಿ ಮುಂದೆ ಹೋದಾಗ ನೂರು ಯೋಜನ ವಿಸ್ತೃತ ಸಮುದ್ರದಲ್ಲಿ ಒಂದು ಪುಷ್ಪಿತಕ ಎಂಬ ಪರ್ವತವಿದೆ. ಅದು ಪರಮ ಶೋಭಾಸಂಪನ್ನ ಹಾಗೂ ಸಿದ್ಧ-ಚಾರಣರಿಂದ ಸೇವಿತವಾಗಿದೆ.॥28॥

ಮೂಲಮ್ - 29

ಚಂದ್ರ ಸೂರ್ಯಾಂಶು ಸಂಕಾಶಃ ಸಾಗರಾಂಬುಸಮಾಶ್ರಯತಃ ।
ಭ್ರಾಜತೇ ವಿಪುಲೈಃ ಶೃಂಗೈರಂಬರಂ ವಿಲಿಖನ್ನಿವ ॥

ಅನುವಾದ

ಅದು ಸೂರ್ಯ-ಚಂದ್ರರಂತೆ ಪ್ರಕಾಶಮಾನವಾಗಿದೆ ಹಾಗೂ ಸಮುದ್ರದ ಆಳದವರೆಗೆ ಅದು ಮುಳುಗಿದೆ. ಅದು ತನ್ನ ವಿಸ್ತೃತ ಶಿಖರಗಳಿಂದ ಆಕಾಶದಲ್ಲಿ ಗೆರೆ ಎಳೆದಂತೆ ಸುಶೋಭಿತವಾಗಿದೆ.॥29॥

ಮೂಲಮ್ - 30

ತಸ್ಯೈಕಂ ಕಾಂಚನಂ ಶೃಂಗಂ ಸೇವತೇ ಯಂ ದಿವಾಕರಃ ।
ಶ್ವೇತಂ ರಾಜತಮೇಕಂ ಚ ಸೇವತೇ ಯನ್ನಿಶಾಕರಃ ।
ನ ತಂ ಕೃತಘ್ನಾಃ ಪಶ್ಯಂತಿ ನ ನೃಶಂಸಾ ನ ನಾಸ್ತಿಕಾಃ ॥

ಅನುವಾದ

ಆ ಪರ್ವತದ ಒಂದು ಸುವರ್ಣ ಮಯ ಶಿಖರವನ್ನು ಪ್ರತಿದಿನ ಸೂರ್ಯನು ಸೇವಿಸುತ್ತಾನೆ. ಹಾಗೆಯೇ ಇದರ ಒಂದು ರಜತಮಯ ಶ್ವೇತ ಶಿಖರವೂ ಇದೆ, ಅದನ್ನು ಚಂದ್ರನು ಸೇವಿಸುತ್ತಾನೆ. ಕೃತಘ್ನ, ನೃಶಂಸ, ನಾಸ್ತಿಕ ಪುರುಷರು ಆ ಪರ್ವತವನ್ನು ನೋಡಲಾರರು.॥30॥

ಮೂಲಮ್ - 31

ಪ್ರಮಣ್ಯ ಶಿರಸಾ ಶೈಲಂ ತಂ ವಿಮಾರ್ಗಥ ವಾನರಾಃ ।
ತಮತಿಕ್ರಮ್ಯ ದುರ್ಧರ್ಷಾಂ ಸೂರ್ಯವಾನ್ನಾಮ ಪರ್ವತಃ ॥

ಅನುವಾದ

ವಾನರರೇ! ನೀವು ತಲೆ ಬಾಗಿ ಆ ಪರ್ವತವನ್ನು ನಮಸ್ಕರಿಸಬೇಕು. ಅಲ್ಲಿ ಎಲ್ಲೆಡೆ ಸೀತೆಯನ್ನು ಹುಡುಕಿರಿ. ಆ ದುರ್ಧರ್ಷ ಪರ್ವತವನ್ನು ದಾಟಿ ಮುಂದಕ್ಕೆ ಹೋದಾಗ ಸೂರ್ಯವಾನ್ ಎಂಬ ಪರ್ವತ ಸಿಗುವುದು.॥31॥

ಮೂಲಮ್ - 32

ಅಧ್ವನಾದುರ್ವಿಗಾಹೇನ ಯೋಜನಾನಿ ಚತುರ್ದಶ ।
ತತಸ್ತಮಪ್ಯತಿಕ್ರಮ್ಯ ವೈದ್ಯುತೋ ನಾಮ ಪರ್ವತಃ ॥

ಅನುವಾದ

ಅಲ್ಲಿಗೆ ಹೋಗುವ ಮಾರ್ಗವು ಬಹಳ ದುರ್ಗಮವಾಗಿದೆ ಮತ್ತು ಪುಷ್ಪಿತಕದಿಂದ ಹದಿನಾಲ್ಕು ಯೋಜನ ದೂರದಲ್ಲಿದೆ. ಸೂರ್ಯವಂತವನ್ನು ದಾಟಿ ನೀವು ಮುಂದೆ ಹೋದಾಗ ನಿಮಗೆ ‘ವೈದ್ಯುತ’ ಎಂಬ ಪರ್ವತ ಸಿಗುವುದು.॥32॥

ಮೂಲಮ್ - 33½

ಸರ್ವಕಾಮಲೈರ್ವೃಕ್ಷೈಃ ಸರ್ವಕಾಲಮನೋಹರೈಃ ।
ತತ್ರ ಭುಕ್ತ್ವಾ ವರಾರ್ಹಾಣಿ ಮೂಲಾನಿ ಚ ಫಲಾನಿ ಚ ॥
ಮಧೂನಿ ಪೀತ್ವಾ ಜುಷ್ಟಾನಿ ಪರಂ ಗಚ್ಛತ ವಾನರಾಃ ।

ಅನುವಾದ

ಅಲ್ಲಿಯ ವೃಕ್ಷಗಳು ಸಂಪೂರ್ಣ ಮನೋವಾಂಛಿತ ಫಲಗಳಿಂದ ಕೂಡಿದ್ದು, ಎಲ್ಲ ಋತುಗಳಲ್ಲಿ ಮನೋಹರ ಶೋಭೆಯಿಂದ ಸಂಪನ್ನವಾಗಿವೆ. ವಾನರರೇ! ಅವುಗಳಿಂದ ಸುಶೋಭಿತ ವೈದ್ಯುತ ಪರ್ವತದಲ್ಲಿ ಫಲ-ಮೂಲಗಳನ್ನು ತಿಂದು, ಮಧುವನ್ನು ಕುಡಿದು ನೀವು ಮುಂದೆ ಹೋಗುವುದು.॥33½॥

ಮೂಲಮ್ - 34½

ತತ್ರ ನೇತ್ರಮನಃಕಾಂತಃ ಕುಂಜರೋ ನಾಮ ಪರ್ವತಃ ॥
ಅಗಸ್ತ್ಯ ಭವನಂ ಯತ್ರ ನಿರ್ಮಿತಂ ವಿಶ್ವಕರ್ಮಣಾ ।

ಅನುವಾದ

ಮತ್ತೆ ಕುಂಜರ ಎಂಬ ಪರ್ವತವು ಕಂಡು ಬಂದೀತು. ಅದು ಕಣ್ಮನಗಳಿಗೆ ಅತ್ಯಂತ ಪ್ರಿಯವಾಗಿದೆ. ಅದರ ಮೇಲೆ ವಿಶ್ವ ಕರ್ಮನು ರಚಿಸಿದ ಮಹರ್ಷಿ ಅಗಸ್ತ್ಯರ* ಒಂದು ಸುಂದರ ಭವನವಿದೆ.॥34½॥

ಟಿಪ್ಪನೀ
  • ಇದು ಮಹರ್ಷಿ ಅಗಸ್ತ್ಯರ ಮೂರನೆಯ ಸ್ಥಾನವಾಗಿದೆ.
ಮೂಲಮ್ - 35½

ತತ್ರ ಯೋಜನವಿಸ್ತಾರಮುಚ್ಛ್ರಿತಂ ದಶಯೋಜನಮ್ ॥
ಶರಣಂ ಕಾಂಚನಂ ದಿವ್ಯಂ ನಾನಾರತ್ನವಿಭೂಷಿತಮ್ ।

ಅನುವಾದ

ಕುಂಜರ ಪರ್ವತದಲ್ಲಿ ನಿರ್ಮಿತ ಅಗಸ್ತ್ಯರ ಆ ದಿವ್ಯಭವನವು ಸುವರ್ಣಮಯವಾಗಿದ್ದು, ನಾನಾ ಪ್ರಕಾರದ ರತ್ನಗಳಿಂದ ವಿಭೂಷಿತವಾಗಿದೆ. ಅದರ ವಿಸ್ತಾರ ಒಂದು ಯೋಜನ ಮತ್ತು ಎತ್ತರ ಹತ್ತು ಯೋಜನವಿದೆ.॥35½॥

ಮೂಲಮ್ - 36

ತತ್ರ ಭೋಗವತೀ ನಾಮ ಸರ್ಪಾಣಾಮಾಲಯಃ ಪುರೀ ॥

ಮೂಲಮ್ - 37

ವಿಶಾಲರಥ್ಯಾ ದುರ್ಧರ್ಷಾ ಸರ್ವತಃ ಪರಿರಕ್ಷಿತಾ ।
ರಕ್ಷಿತಾ ಪನ್ನಗೈರ್ಘೋರೈಸ್ತೀಕ್ಷ್ಣದಂಷ್ಟ್ರೈರ್ಮಹಾವಿಷೈಃ ॥

ಅನುವಾದ

ಅದೇ ಪರ್ವತದಲ್ಲಿ ಸರ್ಪಗಳು ವಾಸಿಸುವ ಭೋಗವತಿ ಎಂಬ ಒಂದು ನಗರಿಯಿದೆ. (ಇದು ಪಾತಾಳದ ಭೋಗವತಿಯಿಂದ ಭಿನ್ನವಾದುದು) ಈ ಪುರಿಯು ದುರ್ಜಯವಾಗಿದ್ದು, ಅದರ ಬೀದಿಗಳು ದೊಡ್ಡದಾಗಿ, ವಿಶಾಲವಾಗಿವೆ. ಅದು ಎಲ್ಲ ಕಡೆಯಿಂದ ಸುರಕ್ಷಿತವಾಗಿದೆ. ತೀಕ್ಷ್ಣದಾಡೆಗಳುಳ್ಳ ಮಹಾವಿಷದ ಭಯಂಕರ ಸರ್ಪಗಳು ಅದನ್ನು ರಕ್ಷಿಸುತ್ತಿರುವರು.॥36-37॥

ಮೂಲಮ್ - 38

ಸರ್ಪರಾಜೋ ಮಹಾಪ್ರಾಜ್ಞೋ ಯಸ್ಯಾಂ ವಸತಿ ವಾಸುಕಿಃ ।
ನಿರ್ಯಾಯ ಮಾರ್ಗಿತವ್ಯಾ ಚ ಸಾ ಚ ಭೋಗವತೀ ಪುರೀ ॥

ಅನುವಾದ

ಆ ಭೋಗವತೀಪುರಿಯಲ್ಲಿ ಮಹಾ ಭಯಂಕರ ಸರ್ಪರಾಜ ವಾಸುಕಿಯು ವಾಸಿಸುತ್ತಿರುವನು. (ಇವನು ಯೋಗಶಕ್ತಿಯಿಂದ ಅನೇಕ ರೂಪಗಳನ್ನು ಧರಿಸಿ ಎರಡೂ ಭೋಗವತಿ ಪುರಿಗಳಲ್ಲಿ ಒಂದೇಸಲ ಇರಬಲ್ಲನು.) ನೀವು ವಿಶೇಷವಾಗಿ ಆ ಭೋಗವತಿ ಪುರಿಯನ್ನು ಪ್ರವೇಶಿಸಿ ಅಲ್ಲಿ ಸೀತೆಯನ್ನು ಹುಡುಕಬೇಕು.॥38॥

ಮೂಲಮ್ - 39

ತತ್ರ ಚಾನಂತರೋದ್ದೇಶಾ ಯೇ ಕೇಚನ ಸಮಾವೃತಾಃ ।
ತಂ ಚ ದೇಶಮತಿಕ್ರಮ್ಯ ಮಹಾನೃಷಭಸಂಸ್ಥಿತಿಃ ॥

ಅನುವಾದ

ಆ ಪುರಿಯಲ್ಲಿರುವ ಗುಪ್ತ ಮತ್ತು ನಿರ್ಜನ ಎಲ್ಲ ಸ್ಥಾನಗಳಲ್ಲಿ ಸೀತೆಯನ್ನು ಅನ್ವೇಷಿಸಬೇಕು. ಆ ಪ್ರದೇಶವನ್ನು ದಾಟಿ ಮುಂದೆ ಹೋದಾಗ ನಿಮಗೆ ಋಷಭ ಎಂಬ ಮಹಾ ಪರ್ವತವು ಸಿಗುವುದು.॥39॥

ಮೂಲಮ್ - 40

ಸರ್ವರತ್ನಮಯಃ ಶ್ರೀಮಾನೃಷಭೋ ನಾಮ ಪರ್ವತಃ ।
ಗೋಶೀರ್ಷಕಂ ಪದ್ಮಕಂ ಚ ಹರಿಶ್ಯಾಮಂ ಚ ಚಂದನಮ್ ॥

ಮೂಲಮ್ - 41

ದಿವ್ಯಮುತ್ಪದ್ಯತೇ ಯತ್ರ ತಚ್ಚೈವಾಗ್ನಿಸಮಪ್ರಭಮ್ ।
ನ ತು ತಚ್ಚಂದನಂ ದೃಷ್ಟ್ವಾ ಸ್ಪ್ರಷ್ಟವ್ಯಂ ಚ ಕದಾಚನ ॥

ಅನುವಾದ

ಆ ಶೋಭಾಸಂಪನ್ನ ಋಷಭ ಪರ್ವತವು ಸಂಪೂರ್ಣ ರತ್ನಗಳಿಂದ ತುಂಬಿರುವುದು. ಅಲ್ಲಿ ಗೋಶೀರ್ಷಕ, ಪದ್ಮಕ, ಹರಿಶ್ಯಾಮ ಮೊದಲಾದ ಹೆಸರಿನ ದಿವ್ಯ ಚಂದನ ಉತ್ಪನ್ನವಾಗುತ್ತದೆ. ಆ ಚಂದನವೃಕ್ಷಗಳು ಅಗ್ನಿಯಂತೆ ಪ್ರಜ್ವಲಿತವಾಗುತ್ತಾ ಇರುತ್ತದೆ. ಆ ಚಂದನವನ್ನು ನೋಡಿ ನೀವು ಎಂದಿಗೂ ಸ್ಪರ್ಶಿಸಬೇಡಿ.॥40-41॥

ಮೂಲಮ್ - 42

ರೋಹಿತಾ ನಾಮ ಗಂಧರ್ವಾ ಘೋರಂ ರಕ್ಷಂತಿ ತದ್ವನಮ್ ।
ತತ್ರ ಗಂಧರ್ವಪತಯಃ ಪಂಚ ಸೂರ್ಯಸಮಪ್ರಭಾಃ ॥

ಅನುವಾದ

ಏಕೆಂದರೆ ‘ರೋಹಿತ’ ಎಂಬ ಹೆಸರುಳ್ಳ ಗಂಧರ್ವರು ಆ ಘೋರ ವನವನ್ನು ರಕ್ಷಿಸುತ್ತಾರೆ. ಅಲ್ಲಿ ಸೂರ್ಯಸದೃಶ ಕಾಂತಿಯುಳ್ಳ ಐದು ಗಂಧರ್ವರಾಜರು ಇರುತ್ತಾರೆ.॥42॥

ಮೂಲಮ್ - 43½

ಶೈಲೂಷೋ ಗ್ರಾಮಣೀಃ ಶಿಕ್ಷು ಶುಕೋ ಬಭ್ರುಸ್ತಥೈವ ಚ ।
ರವಿಸೋಮಾಗ್ನಿವಪುಷಾಂ ನಿವಾಸಃ ಪುಣ್ಯಕರ್ಮಣಾಮ್ ॥
ಅಂತೇ ಪೃಥಿವ್ಯಾ ದುರ್ಧರ್ಷಾಸ್ತತ್ರ ಸ್ವರ್ಗಜಿತಃ ಸ್ಥಿತಾಃ ।

ಅನುವಾದ

ಅವರ ಹೆಸರು ಇಂತಿದೆ - ಶೈಲೂಷ, ಗ್ರಾಮಣೀ, ಶಿಕ್ಷ(ಶಿಗ್ರು) ಶುಕ ಮತ್ತು ಬಭ್ರು. ಆ ಋಷಭದಿಂದ ಮುಂದೆ ಪೃಥಿವಿಯ ಅಂತಿಮ ಸೀಮೆಯಲ್ಲಿ ಸೂರ್ಯ, ಚಂದ್ರ ಹಾಗೂ ಅಗ್ನಿತುಲ್ಯ ತೇಜಸ್ವೀ ಪುಣ್ಯಕರ್ಮ ಪುರುಷರ ನಿವಾಸಸ್ಥಾನವಿದೆ. ಆದ್ದರಿಂದ ಅಲ್ಲಿ ದುರ್ಧರ್ಷ ಸ್ವರ್ಗದ ಅಧಿಕಾರೀ ಪುರುಷರೇ ವಾಸವಾಗಿ ಇರುತ್ತಾರೆ.॥43½॥

ಮೂಲಮ್ - 44½

ತತಃ ಪರಂ ನ ವಃ ಸೇವ್ಯಃ ಪಿತೃಲೋಕಃ ಸುದಾರುಣಃ ॥
ರಾಜಧಾನೀ ಯಮಸ್ಯೈಷಾ ಕಷ್ಟೇನ ತಮಸಾಽಽವೃತಾ ।

ಅನುವಾದ

ಅದರ ಮುಂದೆ ಅತ್ಯಂತ ಭಯಾನಕ ಪಿತೃಲೋಕವಿದೆ. ಅಲ್ಲಿಗೆ ನೀವು ಹೋಗಬಾರದು. ಈ ಭೂಮಿಯು ಯಮರಾಜನ ರಾಜಧಾನಿಯಾಗಿದ್ದು, ಕಷ್ಟಕರ ಕತ್ತಲೆಯಿಂದ ಸಮಾವೃತವಾಗಿದೆ.॥44½॥

ಮೂಲಮ್ - 45

ಏತಾವದೇವ ಯುಷ್ಮಾಭಿರ್ವೀರಾ ವಾನರಪುಂಗವಾಃ ।
ಶಕ್ಯಂ ವಿಚೇತುಂ ಗಂತುಂ ವಾ ನಾತೋ ಗತಿಮತಾಂ ಗತಿಃ ॥

ಅನುವಾದ

ವೀರ ವಾನರಪುಂಗವರೇ! ಸರಿ, ದಕ್ಷಿಣ ದಿಕ್ಕಿನಲ್ಲಿ ಇಷ್ಟೇ ದೂರದವರೆಗೆ ಹೋಗಿ ಹುಡುಕುವುದು. ಅದಕ್ಕಿಂತ ಮುಂದೆ ಹೋಗುವುದು ಅಸಂಭವವಾಗಿದೆ; ಏಕೆಂದರೆ ಅತ್ತ ಜಂಗಮ ಪ್ರಾಣಿಗಳ ಗತಿ ಇಲ್ಲ.॥45॥

ಮೂಲಮ್ - 46

ಸರ್ವಮೇತತ್ಸಮಾಲೋಕ್ಯ ಯಚ್ಚಾನ್ಯದಪಿ ದೃಶ್ಯತೇ ।
ಗತಿಂ ವಿದಿತ್ವಾ ವೈದೇಹ್ಯಾಃ ಸಂನಿವರ್ತಿತುಮರ್ಹಥ ॥

ಅನುವಾದ

ಇವೆಲ್ಲ ಸ್ಥಾನಗಳಲ್ಲಿ ಚೆನ್ನಾಗಿ ಹುಡುಕಿ, ಇನ್ನೂ ಹುಡುಕಲು ಯೋಗ್ಯವಾಗಿ ಕಾಣುವ ಸ್ಥಾನಗಳಲ್ಲಿಯೂ ವೈದೇಹಿಯನ್ನು ಹುಡುಕಿ, ನೀವೆಲ್ಲರೂ ಮರಳಿ ಬನ್ನಿ.॥46॥

ಮೂಲಮ್ - 47

ಯಶ್ಚ ಮಾಸಾನ್ನಿವೃತ್ತೋಽಗ್ರೇ ದೃಷ್ಟಾ ಸೀತೇತಿ ವಕ್ಷ್ಯತಿ ।
ಮತ್ತುಲ್ಯವಿಭವೋ ಭೋಗೈಃ ಸುಖಂ ಸ ವಿಹರಿಷ್ಯತಿ ॥

ಅನುವಾದ

ಒಂದು ತಿಂಗಳಾಗುವ ಮೊದಲೇ ಇಲ್ಲಿಗೆ ಬಂದು - ‘ನಾನು ಸೀತೆಯ ದರ್ಶನ ಮಾಡಿದೆ’ ಎಂದು ಹೇಳುವವನು ನನ್ನಂತೆಯೇ ವೈಭವಸಂಪನ್ನನಾಗಿ ಭೋಗ್ಯಪದಾರ್ಥಗಳನ್ನು ಅನುಭವಿಸುತ್ತಾ ಸುಖವಾಗಿ ವಿಹರಿಸುವನು.॥47॥

ಮೂಲಮ್ - 48

ತತಃ ಪ್ರಿಯತರೋ ನಾಸ್ತಿ ಮಮ ಪ್ರಾಣಾದ್ವಿಶೇಷತಃ ।
ಕೃತಾಪರಾಧೋ ಬಹುಶೋ ಮಮ ಬಂಧುರ್ಭವಿಷ್ಯತಿ ॥

ಅನುವಾದ

ಅವನಿಗಿಂತ ಮಿಗಿಲಾಗಿ ಪ್ರಿಯನಾದವನು ನನಗೆ ಬೇರೆ ಯಾರೂ ಇರಲಾರನು. ಅವನು ನನಗೆ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯನಾಗುವನು ಹಾಗೂ ಅನೇಕ ಸಲ ಅಪರಾಧ ಮಾಡಿದರೂ ಅವನು ನನ್ನ ಬಂಧುವಾಗಿ ಇರುವನು.॥48॥

ಮೂಲಮ್ - 49

ಅಮಿತಬಲಪರಾಕ್ರಮಾ ಭವಂತೋ
ವಿಪುಲಗುಣೇಷುಕುಲೇಷು ಚ ಪ್ರಸೂತಾಃ ।
ಮನುಜಪತಿಸುತಾಂ ಯಥಾ ಲಭಧ್ವಂ
ತದಧಿಗುಣಂ ಪುರುಷಾರ್ಥಮಾರಭಧ್ವಮ್ ॥

ಅನುವಾದ

ನಿಮ್ಮೆಲ್ಲರ ಬಲ-ಪರಾಕ್ರಮಗಳು ಅಸೀಮವಾಗಿವೆ. ನೀವು ವಿಶೇಷ ಗುಣಶಾಲಿ ಉತ್ತಮಕುಲದಲ್ಲಿ ಹುಟ್ಟಿರುವಿರಿ. ರಾಜಕುಮಾರಿ ಸೀತೆಯನ್ನು ಹೇಗಾದರೂ ಹುಡುಕುವಂತಹ ಉತ್ತಮ ಪುರುಷಾರ್ಥವನ್ನು ಪ್ರಾರಂಭಿಸಿರಿ.॥49॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ನಲವತ್ತನೆಯ ಸರ್ಗ ಸಂಪೂರ್ಣವಾಯಿತು.॥40॥