०४० प्राचीं प्रति वानरप्रेषणम्

वाचनम्
ಭಾಗಸೂಚನಾ

ಶ್ರೀರಾಮನ ಆಣತಿಯಂತೆ ಸುಗ್ರೀವನು ಸೀತೆಯನ್ನು ಹುಡುಕುವ ಸಲುವಾಗಿ ಪೂರ್ವದಿಕ್ಕಿಗೆ ವಾನರರನ್ನು ಕಳಿಸಿಕೊಟ್ಟುದು, ಅಲ್ಲಿಯ ಸ್ಥಾನಗಳ ವರ್ಣನೆ

ಮೂಲಮ್ - 1

ಅಥ ರಾಜಾ ಸಮೃದ್ಧಾರ್ಥಃ ಸುಗ್ರೀವಃ ಪ್ಲವಗೇಶ್ವರಃ ।
ಉವಾಚ ನರಶಾರ್ದೂಲಂ ರಾಮಂ ಪರಬಲಾರ್ದನಮ್ ॥

ಅನುವಾದ

ಅನಂತರ ಬಲ ವೈಭವ ಸಂಪನ್ನ ವಾನರರಾಜ ಸುಗ್ರೀವನು ಶತ್ರುಸೈನ್ಯವನ್ನು ಸಂಹರಿಸುವ ಪುರುಷಸಿಂಹ ಶ್ರೀರಾಮನಲ್ಲಿ ಹೇಳಿದನು .॥1॥

ಮೂಲಮ್ - 2

ಆಗತಾ ವಿನಿವಿಷ್ಟಾಶ್ಚ ಬಲಿನಃ ಕಾಮರೂಪಿಣಃ ।
ವಾನರೇಂದ್ರ ಮಹೇಂದ್ರಾಭಾ ಯೇ ಮದ್ವಿಷಯವಾಸಿನಃ ॥

ಅನುವಾದ

ಭಗವಂತನೇ! ನನ್ನ ರಾಜ್ಯದಲ್ಲಿ ವಾಸಿಸುವ ಮಹೇಂದ್ರನಂತೆ ತೇಜಸ್ವಿಗಳೂ, ಕಾಮರೂಪಿಗಳೂ, ಬಲವಂತರೂ ಆದ ವಾನರ ಯೂಥಪತಿಗಳು ಇಲ್ಲಿಗೆ ಬಂದು ಬಿಡಾರಬಿಟ್ಟಿರುವರು.॥2॥

ಮೂಲಮ್ - 3

ತ ಇಮೇ ಬಹುವಿಕ್ರಾಂತೈರ್ಬಲಿಭಿರ್ಭೀಮವಿಕ್ರಮೈಃ ।
ಆಗತಾ ವಾನರಾ ಘೋರಾ ದೈತ್ಯದಾನವಸಂನಿಭಾಃ ॥

ಅನುವಾದ

ಇವರು ಅನೇಕ ಯುದ್ಧರಂಗದಲ್ಲಿ ತಮ್ಮ ಪರಾಕ್ರಮವನ್ನು ಪ್ರಕಟಿಸಿರುವ, ಭಯಂಕರ ಪುರುಷಾರ್ಥ ತೋರುವ, ಭಲವಂತ ವಾನರ ಯೋಧರನ್ನು ಇಲ್ಲಿಗೆ ಕರೆತಂದಿರುವರು. ದೈತ್ಯ-ದಾನವರಂತೆ ಭಯಾನಕರಾದ ವಾನರರು ಇಲ್ಲಿ ಉಪಸ್ಥಿತರಾಗಿರುವರು.॥3॥

ಮೂಲಮ್ - 4

ಖ್ಯಾತಕರ್ಮಾಪದಾನಾಶ್ಚ ಬಲವಂತೋ ಜಿತಕ್ಲಮಾಃ ।
ಪರಾಕ್ರಮೇಷು ವಿಖ್ಯಾತಾ ವ್ಯವಸಾಯೇಷು ಚೋತ್ತಮಾಃ ॥

ಅನುವಾದ

ಅನೇಕ ಯುದ್ಧಗಳಲ್ಲಿ ಇಂತಹ ಬಲಿಷ್ಠ ವಾನರರ ಶೌರ್ಯ-ಪರಾಕ್ರಮದ ಪರಿಚಯವಾಗಿದೆ. ಇವರು ಬಲದ ಬಂಡಾರವಾಗಿದ್ದು, ಯುದ್ಧದಲ್ಲಿ ಬಳಲುವುದಿಲ್ಲ. ಇವರು ಬಳಲಿಕೆಯನ್ನು ಗೆದ್ದುಕೊಂಡಿರುವರು. ಇವರು ತಮ್ಮ ಪರಾಕ್ರಮಕ್ಕಾಗಿ ಪ್ರಸಿದ್ಧರೂ, ಉದ್ಯೋಗ ಮಾಡುವುದರಲ್ಲಿ ಶ್ರೇಷ್ಠರಾಗಿದ್ದಾರೆ.॥4॥

ಮೂಲಮ್ - 5

ಪೃಥಿವಿವ್ಯಂಬುಚರಾ ರಾಮ ನಾನಾನಗನಿವಾಸಿನಃ ।
ಕೋಟ್ಯೋಘಾಶ್ಚ ಇಮೇ ಪ್ರಾಪ್ತಾ ವಾನರಾಸ್ತವ ಕಿಂಕರಾಃ ॥

ಅನುವಾದ

ಶ್ರೀರಾಮಾ! ಇಲ್ಲಿ ಬಂದಿರುವ ಈ ವಾನರರ ಕೋಟಿ-ಕೋಟಿ ಯೂಥಗಳು ಬೇರೆ-ಬೇರೆ ಪರ್ವತಗಳಲ್ಲಿ ವಾಸಿಸುವವರಾಗಿದ್ದಾರೆ. ಇವರು ನೆಲ-ಜಲ ಎರಡರಲ್ಲಿಯೂ ಸಮಾನವಾಗಿ ನಡೆಯುವ ಶಕ್ತಿ ಹೊಂದಿರುವರು. ಇವರೆಲ್ಲರೂ ನಿಮ್ಮ ಕಿಂಕರರೂ, ಆಜ್ಞಾಪಾಲಕರಾಗಿದ್ದಾರೆ.॥5॥

ಮೂಲಮ್ - 6

ನಿದೇಶವರ್ತಿನಃ ಸರ್ವೇ ಸರ್ವೇ ಗುರುಹಿತೇ ಸ್ಥಿತಾಃ ।
ಅಭಿಪ್ರೇತಮನುಷ್ಠಾತುಂ ತವ ಶಕ್ಷ್ಯಂತರಿಂದಮ ॥

ಅನುವಾದ

ಶತ್ರುದಮನ! ಇವರೆಲ್ಲರೂ ನಿನ್ನ ಅಪ್ಪಣೆಯಂತೆ ನಡೆಯುವವರಾಗಿದ್ದಾರೆ. ನೀನು ಇವರಿಗೆ ಗುರು, ಸ್ವಾಮಿಯಾಗಿರುವೆ. ಇವರು ನಿನ್ನ ಹಿತಸಾಧನೆಯಲ್ಲಿ ತತ್ಪರರಾಗಿದ್ದು, ನಿನ್ನ ಅಭೀಷ್ಟ ಮನೋರಥವನ್ನು ಸಿದ್ಧಗೊಳಿಸುವರು.॥6॥

ಮೂಲಮ್ - 7

ತ ಇಮೇ ಬಹುಸಾಹಸ್ರೈರನೀಕೈರ್ಭೀಮವಿಕ್ರಮೈಃ ।
ಆಗತಾ ವಾನರಾ ಘೋರಾ ದೈತ್ಯದಾನವ ಸಂನಿಭಾಃ ॥

ಅನುವಾದ

ದೈತ್ಯ-ದಾನವರಂತೆ ಘೋರ ರೂಪ ಧಾರೀ ಈ ಎಲ್ಲ ವಾನರ ಯೂಥಪತಿಗಳು ತಮ್ಮೊಂದಿಗೆ ಭಯಂಕರ ಪರಾಕ್ರಮಿ ಅನೇಕ ಸಾವಿರ ಸೈನ್ಯವನ್ನು ಕರೆತಂದಿರುವರು.॥7॥

ಮೂಲಮ್ - 8

ಯನ್ಮನ್ಯಸೇ ನರವ್ಯಾಘ್ರ ಪ್ರಾಪ್ತಕಾಲಂ ತದುಚ್ಯತಾಮ್ ।
ತ್ವತಸೈನ್ಯಂ ತ್ವದ್ವಶೇ ಯುಕ್ತಮಾಜ್ಞಾಪಯಿತುಮರ್ಹಸಿ ॥

ಅನುವಾದ

ಪುರುಷಸಿಂಹನೇ! ಈಗ ನೀನು ಉಚಿತವೆಂದು ತೋರುವ ಕರ್ತವ್ಯವನ್ನು ಇವರಿಗೆ ತಿಳಿಸು. ನಿನ್ನ ಈ ಸೈನ್ಯವು ನಿನ್ನ ವಶದಲ್ಲೇ ಇದೆ. ನೀನು ಇದಕ್ಕೆ ಯಥೋಚಿತ ಕಾರ್ಯಕ್ಕಾಗಿ ಅಪ್ಪಣೆ ಮಾಡು.॥8॥

ಮೂಲಮ್ - 9

ಕಾಮಮೇಷಾಮಿದಂ ಕಾರ್ಯಂ ವಿದಿತಂ ಮಮ ತತ್ತ್ವತಃ ।
ತಥಾಪಿ ತು ಯಥಾಯುಕ್ತಮಾಜ್ಞಾಪಯಿತುಮರ್ಹಸಿ ॥

ಅನುವಾದ

ಸೀತಾನ್ವೇಷಣೆಯ ಕಾರ್ಯ ಇವರೆಲ್ಲರಿಗೆ ಹಾಗೂ ನನಗೂ ಚೆನ್ನಾಗಿ ತಿಳಿದಿದ್ದರೂ ನಿನಗೆ ಉಚಿತವಾದ ಕಾರ್ಯಕ್ಕಾಗಿ ನಮಗೆ ಆಜ್ಞೆ ಕೊಡು.॥9॥

ಮೂಲಮ್ - 10

ತಥಾ ಬ್ರುವಾಣಾಂ ಸುಗ್ರೀವಂ ರಾಮೋ ದಶರಥಾತ್ಮಜಃ ।
ಬಾಹುಭ್ಯಾಂ ಸಂಪರಿಷ್ವಜ್ಯ ಇದಂ ವಚನಮಬ್ರವೀತ್ ॥

ಅನುವಾದ

ಸುಗ್ರೀವನು ಹೀಗೆ ಹೇಳಿದಾಗ ದಶರಥನಂದನ ಶ್ರೀರಾಮನು ಅವನನ್ನು ಎರಡೂ ತೋಳುಗಳಿಂದ ತಬ್ಬಿಕೊಂಡು ಈ ಪ್ರಕಾರ ಹೇಳಿದನು.॥10॥

ಮೂಲಮ್ - 11

ಜ್ಞಾಯತಾಂ ಸೌಮ್ಯ ವೈದೇಹೀ ಯದಿ ಜೀವತಿ ವಾ ನ ವಾ ।
ಸ ಚ ದೇಶೋ ಮಹಾಪ್ರಾಜ್ಞ ಯಸ್ಮಿನ್ವಸತಿ ರಾವಣಃ ॥

ಅನುವಾದ

ಸೌಮ್ಯ! ಮಹಾಪ್ರಾಜ್ಞನೇ! ಮೊದಲಿಗೆ ವಿದೇಹಕುಮಾರಿ ಸೀತೆಯು ಜೀವಿಸಿ ಇರುವಳೇ, ಇಲ್ಲವೇ ಎಂಬುದನ್ನು ತಿಳಿಯಬೇಕು. ರಾವಣನು ವಾಸವಾಗಿರುವ ದೇಶ ಎಲ್ಲಿದೆ ಅದನ್ನು ತಿಳಿಯಬೇಕು.॥11॥

ಮೂಲಮ್ - 12

ಅಧಿಗಮ್ಯ ತು ವೈದೇಹೀಂ ನಿಲಯಂ ರಾವಣಸ್ಯ ಚ ।
ಪ್ರಾಪ್ತಕಾಲಂ ವಿಧಾಸ್ಯಾಮಿ ತಸ್ಮಿನ್ಕಾಲೇ ಸಹ ತ್ವಯಾ ॥

ಅನುವಾದ

ಸೀತೆಯು ಜೀವಂತವಾಗಿರುವಳು ಎಂಬುದೂ ಮತ್ತು ರಾವಣನ ನಿವಾಸಸ್ಥಾನದ ಸುಳಿವು ಸಿಕ್ಕಿದ ಬಳಿಕ ಸಮಯೋಚಿತ ಕರ್ತವ್ಯ ವನ್ನು ನಾನು ನಿನ್ನೊಂದಿಗೆ ಸೇರಿ ನಿಶ್ಚಯಮಾಡುವೆನು.॥12॥

ಮೂಲಮ್ - 13

ನಾಹಮಸ್ಮಿನ್ಪ್ರಭುಃ ಕಾರ್ಯೇ ವಾನರೇಂದ್ರ ನ ಲಕ್ಷ್ಮಣಃ ।
ತ್ವಮಸ್ಯ ಹೇತುಃ ಕಾರ್ಯಸ್ಯ ಪ್ರಭುಶ್ಚ ಪ್ಲವಗೇಶ್ವರ ॥

ಅನುವಾದ

ವಾನರರಾಜನೇ! ಈ ಕಾರ್ಯವನ್ನು ಸಾಧಿಸಲು ನಾನಾಗಲೀ, ಲಕ್ಷ್ಮಣನಾಗಲೀ, ಸಮರ್ಥರಲ್ಲ. ಕಪೀಶ್ವರ! ಈ ಕಾರ್ಯದ ಸಿದ್ಧಿ ನಿನ್ನ ಕೈಯಲ್ಲೇ ಇದೆ. ನೀನೇ ಇದನ್ನು ಪೂರ್ಣಗೊಳಿಸುವುದರಲ್ಲಿ ಸಮರ್ಥನಾಗಿರುವೆ.॥13॥

ಮೂಲಮ್ - 14

ತ್ವಮೇವಾಜ್ಞಾಪಯ ವಿಭೋ ಮಮ ಕಾರ್ಯವಿನಿಶ್ಚಯಮ್ ।
ತ್ವಂ ಹಿ ಜಾನಾಸಿ ಮೇ ಕಾರ್ಯಂ ಮಮ ವೀರ ನ ಸಂಶಯಃ ॥

ಅನುವಾದ

ಪ್ರಭೋ! ನನ್ನ ಕಾರ್ಯವನ್ನು ಚೆನ್ನಾಗಿ ನಿಶ್ಚಯಿಸಿ ನೀನೇ ವಾನರರಿಗೆ ಉಚಿತವಾದ ಆಜ್ಞೆ ಕೊಡು. ವೀರನೇ! ನನ್ನ ಕಾರ್ಯ ಯಾವುದು? ಅದನ್ನು ನೀನು ಚೆನ್ನಾಗಿ ತಿಳಿದಿರುವೆ, ಇದರಲ್ಲಿ ಸಂಶಯವೇ ಇಲ್ಲ.॥14॥

ಮೂಲಮ್ - 15

ಸುಹೃದ್ವತೀಯೋ ವಿಕ್ರಾಂತಃ ಪ್ರಾಜ್ಞಃ ಕಾಲವಿಶೇಷವಿತ್ ।
ಭವಾನಸ್ಮದ್ಧಿತೇ ಯುಕ್ತಃ ಸುಹೃದಾಪ್ತೋಽರ್ಥವಿತ್ತಮಃ ॥

ಅನುವಾದ

ಲಕ್ಷ್ಮಣನನ್ನು ಬಿಟ್ಟರೆ ನೀನೇ ನನ್ನ ಇನ್ನೊಬ್ಬ ಸುಹೃದನಾಗಿರುವೆ. ನೀನು ಪರಾಕ್ರಮಿಯೂ, ಬುದ್ಧಿವಂತನೂ, ಸಮಯೋಚಿತ ಕರ್ತವ್ಯ ವನ್ನು ಬಲ್ಲವನೂ, ಹಿತದಲ್ಲಿ ಸಂಲಗ್ನನಾಗಿರುವವನೂ, ಹಿತೈಷಿಬಂಧುವೂ, ವಿಶ್ವಾಸಪಾತ್ರನೂ, ನನ್ನ ಪ್ರಯೋಜನವನ್ನು ಚೆನ್ನಾಗಿ ತಿಳಿದಿರುವವನೂ ಆಗಿರುವೆ.॥15॥

ಮೂಲಮ್ - 16

ಏವಮುಕ್ತಸ್ತು ಸುಗ್ರೀವೋ ವಿನತಂ ನಾಮ ಯೂಥಪಮ್ ।
ಅಬ್ರವೀದ್ರಾಮಸಾಂನಿಧ್ಯೇ ಲಕ್ಷ್ಮಣಸ್ಯ ಚ ಧೀಮತಃ ॥

ಮೂಲಮ್ - 17

ಶೈಲಾಭಂ ಮೇಘನಿರ್ಘೋೀಷಮೂರ್ಜಿತಂ ಪ್ಲವಗೇಶ್ವರಮ್ ।
ಸೋಮಸೂರ್ಯನಿಭೈಃ ಸಾರ್ಧಂ ವಾನರೈರ್ವಾನರೋತ್ತಮ ॥

ಮೂಲಮ್ - 18

ದೇಶಕಾಲನಯೈರ್ಯುಕ್ತೋ ವಿಜ್ಞಃ ಕಾರ್ಯವಿನಿಶ್ಚಯೇ ।
ವೃತಃ ಶತಸಹಸ್ರೇಣ ವಾನರಾಣಾಂ ತರಸ್ವಿನಾಮ್ ॥

ಮೂಲಮ್ - 19½

ಅಧಿಗಚ್ಛ ದಿಶಂ ಪೂರ್ವಾಂ ಸಶೈಲವನಕಾನನಾಮ್ ।
ತತ್ರ ಸೀತಾಂ ಚ ವೈದೇಹಿಂ ನಿಲಯಂ ರಾವಣಸ್ಯ ಚ ॥
ಮಾರ್ಗಧ್ವಂ ಗಿರಿದುರ್ಗೇಷು ವನೇಷು ಚ ನದೀಷು ಚ ।

ಅನುವಾದ

ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಸುಗ್ರೀವನು ಅವನ ಮತ್ತು ಬುದ್ಧಿವಂತ ಲಕ್ಷ್ಮಣನ ಸಮೀಪದಲ್ಲೇ ಪರ್ವತ ದಂತೆ ವಿಶಾಲಕಾಯನೂ, ಮೇಘದಂತೆ ಗರ್ಜಿಸುವವನೂ, ಬಲವಂತನೂ, ವಾನರರ ಶಾಸಕನೂ, ಸೂರ್ಯಚಂದ್ರರಂತೆ ಕಾಂತಿಯುಳ್ಳ ವಾನರರೊಂದಿಗೆ ಉಪಸ್ಥಿತನೂ ಆದ ವಿನತ ಎಂಬ ಯೂಧಪತಿಯಲ್ಲಿ ಹೇಳಿದನು-ವಾನರ ಶಿರೋಮಣಿಯೇ! ನೀನು ದೇಶ ಕಾಲಕ್ಕನುಸಾರ ನೀತಿಯನ್ನು ಪ್ರಯೋಗಿಸುವವನೂ, ಕಾರ್ಯವನ್ನು ನಿಶ್ಚಯಿಸುವುದರಲ್ಲಿ ಚತುರನೂ ಆಗಿರುವೆ. ನೀನು ಒಂದು ಲಕ್ಷ ವೇಗಶಾಲೀ ವಾನರರೊಂದಿಗೆ ಪರ್ವತ, ವನ, ಕಾನನಗಳ ಸಹಿತ ಪೂರ್ವ ದಿಕ್ಕಿಗೆ ಹೋಗು. ಅಲ್ಲಿ ಪರ್ವತಗಳ ದುರ್ಗಮ ಪ್ರದೇಶಗಳಲ್ಲಿ, ವನ-ನದಿಗಳಲ್ಲಿ ವಿದೇಹಕುಮಾರಿ ಸೀತಾದೇವಿಯನ್ನು ಹಾಗೂ ರಾವಣನ ನಿವಾಸಸ್ಥಾನವನ್ನು ಹುಡುಕು.॥16-19½॥

ಮೂಲಮ್ - 20

ನದೀಂ ಭಾಗೀರಥೀಂ ರಮ್ಯಾಂ ಸರಯೂಂ ಕೌಶಿಕೀಂ ತಥಾ ॥

ಮೂಲಮ್ - 21½

ಕಾಲಿಂದೀಂ ಯಮುನಾಂ ರಮ್ಯಾಂ ಯಾಮುನಂ ಚ ಮಹಾಗಿರಿಮ್ ।
ಸರಸ್ವತೀಂ ಚ ಸಿಂಧುಂ ಚ ಶೋಣಂ ಮಣಿನಿಭೋದಕಮ್ ॥
ಮಹೀಂ ಕಾಲಮಹೀಂ ಚಾಪಿ ಶೈಲಕಾನನ ಶೋಭಿತಾಮ್ ।

ಅನುವಾದ

ಭಾಗೀರಥೀ ಗಂಗೆ, ರಮಣೀಯ ಸರಯೂ, ಕೌಶಿಕೀ, ಸುರಮ್ಯ ಕಲಿಂದ ಕನ್ಯೆ ಯಮುನೆ, ಮಹಾಪರ್ವತ ಯಮುನ, ಸರಸ್ವತೀನದೀ, ಸಿಂಧು, ಮಣಿಯಂತೆ ನಿರ್ಮಲ ಜಲವುಳ್ಳ ಶೋಣಭದ್ರೆ, ಮಹಿ ಮತ್ತು ಪರ್ವತಗಳಲ್ಲಿ, ವನಗಳಿಂದ ಸುಶೋಭಿತ ಕಾಲಮಹೀ ಮೊದಲಾದ ನದೀ ತೀರಗಳಲ್ಲಿ ಹುಡುಕು.॥20-21½॥

ಮೂಲಮ್ - 22½

ಬ್ರಹ್ಮಮಾಲಾನ್ ವಿದೇಹಾಂಶ್ಚ ಮಾಲವಾನ್ ಕಾಶಿಕೋಸಲಾನ್ ॥
ಮಾಗಧಾಂಶ್ಚ ಮಹಾಗ್ರಾಮಾನ್ ಪುಂಡ್ರಾಂತ್ಸ್ವಂಗಾಂಸ್ತಥೈವ ಚ ।

ಅನುವಾದ

ಬ್ರಹ್ಮಮಾಲ, ವಿದೇಹ, ಮಾಲವ, ಕಾಶಿ, ಕೋಸಲ, ಮಗಧ, ಈ ದೇಶಗಳ ದೊಡ್ಡ-ದೊಡ್ಡ ಗ್ರಾಮಗಳಲ್ಲಿ, ಪೌಂಡ್ರದೇಶ, ಅಂಗದೇಶ ಮೊದಲಾದ ರಾಜ್ಯಗಳಲ್ಲಿ ಹುಡುಕು.॥22½॥

ಮೂಲಮ್ - 23

ಭೂಮಿಂ ಚ ಕೋಶಕಾರಾಣಾಂ ಭೂಮಿಂ ಚ ರಜತಾಕರಾಮ್ ॥

ಮೂಲಮ್ - 24

ಸರ್ವಂ ಚ ತದ್ ವಿಚೇತವ್ಯಂ ಮಾರ್ಗಯದ್ಭಿಸ್ತತಸ್ತತಃ ।
ರಾಮಸ್ಯ ದಯಿತಾಂ ಭಾರ್ಯಾಂ ಸೀತಾಂ ದಶರಥಸ್ನುಷಾಮ್ ॥

ಅನುವಾದ

ರೇಶ್ಮೆ ಕೀಟಗಳ ಉತ್ಪತ್ತಿಯ ಸ್ಥಾನಗಳನ್ನು, ಬೆಳ್ಳಿಯ ಗಣಿಗಳಲ್ಲಿಯೂ ಹುಡುಕು. ಅಲ್ಲಲ್ಲಿ ಹುಡುಕುತ್ತಾ ದಶರಥನ ಸೊಸೆಯೂ, ಶ್ರೀರಾಮಚಂದ್ರನ ಪ್ರಿಯ ಪತ್ನೀ ಸೀತೆಯ ಅನ್ವೇಷಣೆ ಮಾಡಬೇಕು.॥23-24॥

ಮೂಲಮ್ - 25

ಸಮುದ್ರಮವಗಾಢಾಂಶ್ಚ ಪರ್ವತಾನ್ಪತ್ತನಾನಿ ಚ ।
ಮಂದರಸ್ಯ ಚ ಯೇ ಕೋಟಿಂ ಸಂಶ್ರಿತಾಃ ಕೇಚಿದಾಲಯಾಃ ॥

ಅನುವಾದ

ಸಮುದ್ರದೊಳಗೆ ಸೇರಿಹೋದ ಪರ್ವತಗಳಲ್ಲಿ, ಅದರ ನಡುವೆ ಇರುವ ದ್ವೀಪಗಳ ಬೇರೆ-ಬೇರೆ ನಗರಗಳಲ್ಲಿ, ಮಂದರಾಚಲದ ತುದಿಯಲ್ಲಿ ನೆಲೆಸಿದ ಊರುಗಳಲ್ಲಿ ಹೀಗೆ ಎಲ್ಲ ಕಡೆ ಸೀತೆಯ ಅನುಸಂಧಾನ ಮಾಡು.॥25॥

ಮೂಲಮ್ - 26

ಕರ್ಣಪ್ರಾವರಣಾಶ್ಚೈವ ತಥಾ ಚಾಪ್ಯೋಷ್ಠಕರ್ಣಕಾಃ ।
ಘೋರಲೋಹಮುಖಾಶ್ಚೈವ ಜವನಾಶ್ಚೈಕಪಾದಕಾಃ ॥

ಮೂಲಮ್ - 27

ಅಕ್ಷಯಾ ಬಲವಂತಶ್ಚ ತಥೈವ ಪುರುಷಾದಕಾಃ ।
ಕಿರಾತಾಸ್ತೀಕ್ಷ್ಣ ಚೂಡಾಶ್ಚ ಹೇಮಾಂಭಾಃ ಪ್ರಿಯದರ್ಶನಾಃ ॥

ಮೂಲಮ್ - 28½

ಆಮಮೀನಾಶನಾಶ್ಚಾಪಿ ಕಿರಾತಾ ದ್ವೀಪವಾಸಿನಃ ।
ಅಂತರ್ಜಲಚರಾ ಘೋರಾ ನರವ್ಯಾಘ್ರಾ ಇತಿ ಸ್ಮೃತಾಃ ॥
ಏತೇಷಾಮಾಶ್ರಯಾಃ ಸರ್ವೇ ವಿಚೇಯಾಃ ಕಾನನೌಕಸಃ ।

ಅನುವಾದ

ವಸ್ತ್ರದಂತೆ ವಿಶಾಲವಾದ ಕಿವಿಗಳುಳ್ಳವರನ್ನು, ತುಟಿಯವರೆಗೂ ಕಿವಿಗಳುಳ್ಳವರನ್ನು, ಘೋರವಾದ ಲೋಹಸದೃಶವಾದ ಮುಖವುಳ್ಳವರನ್ನು, ಒಂದೇ ಕಾಲಿದ್ದರೂ ವೇಗವಾಗಿ ಗತಿಯುಳ್ಳವರನ್ನು, ಮನೆ-ಮಠಗಳಿಲ್ಲದೆ ಸ್ವೆಚ್ಛೆಯಿಂದ ವಿಹರಿಸುವ ಮಹಾಬಲಿಷ್ಠರಾದ ರಾಕ್ಷಸರನ್ನು, ನರಭಕ್ಷಕರನ್ನು, ಸೂಜಿಯಂತೆ ತೀಕ್ಷ್ಣವಾದ ಜುಟ್ಟುಗಳುಳ್ಳವರನ್ನು, ಸುವರ್ಣದಂತೆ ಕಾಂತಿಯುಳ್ಳ ಸುಂದರರನ್ನು, ಹಸೀ ಮೀನುಗಳನ್ನು ತಿನ್ನುವವರನ್ನು, ದ್ವೀಪವಾಸಿ ಮತ್ತು ನೀರಿನಲ್ಲಿ ಸಂಚರಿಸುವ ಕಿರಾತರನ್ನು, ಕೆಳಗಿನ ಭಾಗ ಮನುಷ್ಯನಂತಿದ್ದು, ಮೇಲೆ ಹುಲಿಯಂತೆ ಆಕೃತಿಯುಳ್ಳವರನ್ನು, ಹೀಗೆ ಭಯಂಕರ ಪ್ರಾಣಿಗಳನ್ನು ತಿಳಿಸಲಾಗಿದೆ. ವಾನರರೇ! ಇವರೆಲ್ಲರ ನಿವಾಸಸ್ಥಾನಗಳಿಗೆ ಹೋಗಿ ನೀವು ಸೀತೆ ಮತ್ತು ರಾವಣನನ್ನು ಹುಡುಕಬೇಕು.॥26-28½॥

ಮೂಲಮ್ - 29

ಗಿರಭಿರ್ಯೇ ಚ ಗಮ್ಯಂತೇ ಪ್ಲವನೇನ ಪ್ಲವೇನ ಚ ॥

ಅನುವಾದ

ಪರ್ವತಗಳನ್ನು ಹಾದು ಹೋಗಬೇಕಾದ ದ್ವೀಪಗಳಲ್ಲಿ, ಸಮುದ್ರದಲ್ಲಿ ಈಜಿ ಅಥವಾ ದೋಣಿಯಿಂದ ತಲುಪಲಾಗುವ ಎಲ್ಲ ಸ್ಥಾನಗಳಲ್ಲಿ ಸೀತಾದೇವಿಯನ್ನು ಹುಡುಕಬೇಕು.॥29॥

ಮೂಲಮ್ - 30

ರತ್ನವಂತೋ ಯವದ್ವೀಪಂ ಸಪ್ತರಾಜೋಪಶೋಭಿತಮ್ ।
ಸುವರ್ಣರೂಪ್ಯಕದ್ವೀಪಂ ಸುವರ್ಣಾಕರಮಂಡಿತಮ್ ॥

ಅನುವಾದ

ಇದಲ್ಲದೆ ನೀವು ಪ್ರಯತ್ನಶೀಲರಾಗಿ ಏಳು ರಾಜ್ಯಗಳಿಂದ ಸುಶೋಭಿತ ಯವದ್ವೀಪ (ಜಾವಾ), ಸವರ್ಣ ದ್ವೀಪ (ಸಮಾತ್ರಾ) ಹಾಗೂ ರುಷ್ಯಕ ದ್ವೀಪದಲ್ಲಿಯೂ, ಬಂಗಾರದ ಗಣಿಗಳಲ್ಲಿಯೂ ಹುಡುಕುವ ಪ್ರಯತ್ನ ಮಾಡಿರಿ.॥30॥

ಮೂಲಮ್ - 31

ಯಮದ್ವೀಪಮತಿಕ್ರಮ್ಯ ಶಿಶಿರೋ ನಾಮಪರ್ವತಃ ।
ದಿವಂ ಸ್ಪೃಶತಿ ಶೃಂಗೇಣ ದೇವದಾನವಸೇವಿತಃ ॥

ಅನುವಾದ

ಯವದ್ವೀಪವನ್ನು ದಾಟಿ ಮುಂದೆ ಹೋದಾಗ ಶಿಶಿರ ಎಂಬ ಒಂದು ಪರ್ವತ ಸಿಗುತ್ತದೆ, ಅದರ ಮೇಲೆ ದೇವತೆಗಳು ಮತ್ತು ದಾನವರು ವಾಸಿಸುತ್ತಾರೆ. ಆ ಪರ್ವತವು ತನ್ನ ಎತ್ತರವಾದ ಶಿಖರಗಳಿಂದ ಸ್ವರ್ಗಲೋಕವನ್ನು ಸ್ಪರ್ಶಿಸುತ್ತಿದೆಯೋ ಎಂಬಂತಿದೆ.॥31॥

ಮೂಲಮ್ - 32

ಏತೇಷಾಂ ಗಿರಿದುರ್ಗೇಷು ಪ್ರಪಾತೇಷು ವನೇಷು ಚ ।
ಮಾರ್ಗಧ್ವಂ ಸಹಿತಾಃ ಸರ್ವೇ ರಾಮಪತ್ನೀಂ ಯಶಸ್ವಿನೀಮ್ ॥

ಅನುವಾದ

ಇವೆಲ್ಲ ದ್ವೀಪಗಳ ಪರ್ವತಗಳಲ್ಲಿ, ಶಿಶಿರ ಪರ್ವತದ ದುರ್ಗಮ ಪ್ರದೇಶಗಳಲ್ಲಿ, ಜಲಪಾತದ ಸನಿಹಗಳಲ್ಲಿ, ಅರಣ್ಯಗಳಲ್ಲಿ ನೀವೆಲ್ಲ ಒಂದಾಗಿ ಶ್ರೀರಾಮನ ಯಶಸ್ವಿನೀ ಪತ್ನೀ ಸೀತೆಯನ್ನು ಹುಡುಕಿರಿ.॥32॥

ಮೂಲಮ್ - 33

ತತೋ ರಕ್ತಜಲಂ ಪ್ರಾಪ್ಯ ಶೋಣಾಖ್ಯಂ ಶೀಘ್ರವಾಹಿನಮ್ ।
ಗತ್ವಾ ಪಾರಂ ಸಮುದ್ರಸ್ಯ ಸಿದ್ಧಚಾರಣ ಸೇವಿತಮ್ ॥

ಮೂಲಮ್ - 34

ತಸ್ಯ ತೀರ್ಥೇಷು ರಮ್ಯೇಷು ವಿಚಿತ್ರೇಷು ವನೇಷು ಚ ।
ರಾವಣಃ ಸಹ ವೈದೇಹ್ಯಾ ಮಾರ್ಗಿತವ್ಯಸ್ತತಸ್ತತಃ ॥

ಅನುವಾದ

ಅನಂತರ ಸಮುದ್ರದ ಆಚೆ ದಡದಲ್ಲಿ ಸಿದ್ಧ-ಚಾರಣರು ವಾಸಿಸುತ್ತಾರೆ. ಅಲ್ಲಿ ನಿಮಗೆ ಕೆಂಪು ನೀರಿನಿಂದ ತುಂಬಿ ವೇಗವಾಗಿ ಹರಿಯುವ ಶೋಣ ಎಂಬ ನದಿ ಸಿಗುವುದು. ಅದರ ತೀರದ ರಮಣೀಯ ತೀರ್ಥಗಳಲ್ಲಿ ಮತ್ತು ವನಗಳಲ್ಲಿ ಎಲ್ಲೆಡೆ ಸೀತಾನ್ವೇಷಣ ಮಾಡಿರಿ.॥33-34॥

ಮೂಲಮ್ - 35

ಪರ್ವತಪ್ರಭವಾ ನದ್ಯಃ ಸುಭೀಮ ಬಹುನಿಷ್ಕುಟಾಃ ।
ಮಾರ್ಗಿತವ್ಯಾ ದರೀಮಂತಃ ಪರ್ವತಾಶ್ಚ ವನಾನಿ ಚ ॥

ಅನುವಾದ

ಮುಂದೆ ನಿಮಗೆ ಪರ್ವತಗಳಿಂದ ಹೊರಟ ಅನೇಕ ನದಿಗಳು ಸಿಗುವುವು. ಅವುಗಳ ತೀರದಲ್ಲಿ ಭಾರೀ ಭಯಂಕರ ಅನೇಕಾನೇಕ ಉಪವನಗಳು ದೊರೆಯುವುವು. ಜೊತೆಗೆ ಅನೇಕ ಗುಹೆಗಳುಳ್ಳ ಪರ್ವತಗಳು ಕಾಣುವುವು. ಎಲ್ಲ ಕಡೆ ಸೀತೆಯನ್ನು ಹುಡುಕಿರಿ.॥35॥

ಮೂಲಮ್ - 36

ತತಃ ಸಮುದ್ರದ್ವೀಪಾಂಶ್ಚ ಸುಭೀಮಾನ್ ದ್ರಷ್ಟುಮರ್ಹಥ ।
ಊರ್ಮಿಮಂತಂ ಮಹಾರೌದ್ರಂ ಕ್ರೋಶಂತಮನಿಲೋದ್ಧತಮ್ ॥

ಅನುವಾದ

ಅನಂತರ ಹಿಂದಿನ ದೇಶಗಳನ್ನು ದಾಟಿ ಹೋದಾಗ ಇಕ್ಷುರಸದಿಂದ ತುಂಬಿದ ಸಮುದ್ರ ಮತ್ತು ಭಾರೀ ಭಯಂಕರವಾದ ದ್ವೀಪಗಳನ್ನು ನೋಡುವಿರಿ. ಇಕ್ಷುರಸದ ಆ ಸಮುದ್ರ ಭಯಂಕರವಾಗಿದೆ. ಅದರಲ್ಲಿ ಎತ್ತರವಾದ ಅಲೆಗಳು ಏಳುತ್ತಾ ಅದು ಗರ್ಜಿಸಿದಂತೆ ಅನಿಸುತ್ತದೆ.॥36॥

ಮೂಲಮ್ - 37

ತತ್ರಾಸುರಾ ಮಹಾಕಾಯಾಶ್ಛಾಯಾಂ ಗೃಹ್ಣಂತಿ ನಿತ್ಯಶಃ ।
ಬ್ರಹ್ಮಣಾ ಸಮನುಜ್ಞಾತಾ ದೀರ್ಘಕಾಲಂ ಬುಭುಕ್ಷಿತಾಃ ॥

ಅನುವಾದ

ಆ ಸಮುದ್ರದಲ್ಲಿ ಅನೇಕ ವಿಶಾಲಕಾಯ ಅಸುರರು ವಾಸಿಸುತ್ತಾರೆ. ಅವರು ಬಹಳ ದಿನಗಳಿಂದ ಹಸಿದಿದ್ದು, ನೆರಳನ್ನು ಹಿಡಿದು ಪ್ರಾಣಿಗಳನ್ನು ತನ್ನತ್ತ ಸೆಳೆದುಕೊಳ್ಳುವರು. ಇದೇ ಅವರ ನಿತ್ಯ ಆಹಾರವಾಗಿದೆ. ಇದಕ್ಕಾಗಿ ಬ್ರಹ್ಮದೇವರಿಂದ ಇವರಿಗೆ ಅನುಮತಿ ದೊರೆತಿದೆ.॥37॥

ಮೂಲಮ್ - 38

ತಂ ಕಾಲಮೇಘಪ್ರತಿಮಂ ಮಹೋರಗನಿಷೇವಿತಮ್ ।
ಅಭಿಗಮ್ಯ ಮಹಾನಾದಂ ತೀರ್ಥೇನೈವ ಮಹೋದಧಿಮ್ ॥

ಮೂಲಮ್ - 39

ತತೋ ರಕ್ತಜಲಂ ಭೀಮಂ ಲೋಹಿತಂ ನಾಮ ಸಾಗರಮ್ ।
ಗತಾ ದ್ರಕ್ಷ್ಯಥ ತಾಂ ಚೈವ ಬೃಹತೀಂ ಕೂಟಶಾಲ್ಮಲೀಮ್ ॥

ಅನುವಾದ

ಇಕ್ಷುರಸದ ಆ ಸಮುದ್ರವು ಕಪ್ಪಾದ ಮೋಡದಂತೆ ಶ್ಯಾಮಲವಾಗಿ ಕಾಣುತ್ತದೆ. ದೊಡ್ಡ-ದೊಡ್ಡ ನಾಗಗಳು ಅದರಲ್ಲಿ ವಾಸಿಸುತ್ತಿವೆ. ಅದರಿಂದ ಭಾರೀ ಗರ್ಜನೆಯಾಗುತ್ತದೆ. ವಿಶೇಷ ಉಪಾಯಗಳಿಂದ ಅದನ್ನು ದಾಟಿ ಹೋದಾಗ ನೀವು ಕೆಂಪು ನೀರಿನಿಂದ ತುಂಬಿದ ಲೋಹಿತ ಎಂಬ ಭಯಂಕರ ಸಮುದ್ರತೀರಕ್ಕೆ ತಲುಪುವಿರಿ. ಅಲ್ಲಿ ಶಾಲ್ಮಲೀದ್ವೀಪದ ಚಿಹ್ನೆಯಾದ ಕೂಟಶಾಲ್ಮಲೀ ಎಂಬ ವಿಶಾಲ ವೃಕ್ಷದ ದರ್ಶನ ಪಡೆಯುವಿರಿ.॥38-39॥

ಮೂಲಮ್ - 40

ಗೃಹಂ ಚ ವೈನತೇಯಸ್ಯ ನಾನಾರತ್ನ ವಿಭೂಷಿತಮ್ ।
ತತ್ರ ಕೈಲಾಸಸಂಕಾಶಂ ವಿಹಿತಂ ವಿಶ್ವಕರ್ಮಣಾ ॥

ಅನುವಾದ

ಅದರ ಬಳಿಯಲ್ಲೇ ವಿಶ್ವಕರ್ಮನು ರಚಿಸಿದ ವಿನತಾನಂದ ಗರುಡನ ಒಂದು ಸುಂದರ ಭವನವಿದೆ. ಅದು ನಾನಾ ರತ್ನಗಳಿಂದ ವಿಭೂಷಿತವಾಗಿ, ಕೈಲಾಸ ಪರ್ವತದಂತೆ ಉಜ್ವಲ ಹಾಗೂ ವಿಶಾಲವಾಗಿದೆ.॥40॥

ಮೂಲಮ್ - 41

ತತ್ರ ಶೈಲನಿಭಾ ಭೀಮಾ ಮಂದೇಹಾ ನಾಮ ರಾಕ್ಷಸಾಃ ।
ಶೈಲಶೃಂಗೇಷು ಲಂಬಂತೇ ನಾನಾರೂಪಾ ಭಯಾವಹಾಃ ॥

ಅನುವಾದ

ಆ ದ್ವೀಪದಲ್ಲಿ ಪರ್ವತದಂತಹ ಶರೀರವುಳ್ಳ ಭಯಂಕರ ಮಂದೇಹ ಎಂಬ ರಾಕ್ಷಸರು ವಾಸಿಸುತ್ತಾರೆ. ಅವರು ಸುರಾ ಸಮುದ್ರಮಧ್ಯದ ಶೈಲ ಶಿಖರಗಳಲ್ಲಿ ತಲೆಕೆಳಗಾಗಿ ನೋಡುತ್ತಾ ಇರುತ್ತಾರೆ ಅವರು ಅನೇಕ ರೂಪಗಳಿಂದ ಇದ್ದು ಭಯದಾಯಕರಾಗಿರುತ್ತಾರೆ.॥41॥

ಮೂಲಮ್ - 42½

ತೇ ಪತಂತಿ ಜಲೇ ನಿತ್ಯಂ ಸೂರ್ಯಸ್ಯೋದಯನಂ ಪ್ರತಿ ।
ಅಭಿತಪ್ತಾಃ ಸ್ಮ ಸೂರ್ಯೇಣ ಲಂಬಂತೇ ಸ್ಮ ಪುನಃ ಪುನಃ ॥
ನಿಹತಾ ಬ್ರಹ್ಮತೇಜೋಭಿರಹನ್ಯಹನಿ ರಾಕ್ಷಸಾಃ ।

ಅನುವಾದ

ಪ್ರತಿದಿನ ಸೂರ್ಯೋದಯದ ಸಮಯ ಆ ರಾಕ್ಷಸರು ಊರ್ಧ್ವಗಳಾಗಿ ಸೂರ್ಯನೊಂದಿಗೆ ಕಾದಾಡುತ್ತಾರೆ, ಆದರೆ ಸೂರ್ಯನ ತಾಪದಿಂದ ಬೆಂದು, ಬ್ರಹ್ಮತೇಜದಿಂದ ನಿಸ್ತೇಜರಾಗಿ ಸುರಾ ಸಮುದ್ರದ ನೀರಿನಲ್ಲಿ ಬಿದ್ದು ಬಿಡುತ್ತಾರೆ. ಅಲ್ಲಿಂದ ಮತ್ತೆ ಜೀವಂತವಾಗಿ ಅದೇ ಶೈಲ-ಶಿಖರಗಳಲ್ಲಿ ನೇತಾಡುತ್ತಾರೆ. ಅವರ ಈ ಕ್ರಮ ಪದೇ-ಪದೇ ನಡೆಯುತ್ತಾ ಇರುತ್ತದೆ.॥42॥

ಮೂಲಮ್ - 43

ತತಃ ಪಾಂಡುರಮೇಘಾಭಂ ಕ್ಷೀರೋದಂ ನಾಮ ಸಾಗರಮ್ ॥

ಅನುವಾದ

ಶಾಲ್ಮಲೀದ್ವೀಪ ಹಾಗೂ ಸುರಾ ಸಮುದ್ರದಿಂದ ಮುಂದೆ ಸಾಗಿದಾಗ ಕ್ರಮಶಃ ಘೃತ ಮತ್ತು ದಧಿಯ ಸಮುದ್ರಗಳು ಸಿಗುವವು. ಅಲ್ಲಿಯೂ ಸೀತೆಯನ್ನು ಹುಡಿಕಿದ ಬಳಿಕ ಮುಂದೆ ಹೋದಾಗ ಬೆಳ್ಳಗಿನ ಮೋಡಗಳಂತೆ ಪ್ರಕಾಶಿಸುವ ಕ್ಷೀರ ಸಾಗರದ ದರ್ಶನವಾಗುವುದು.॥43॥

ಮೂಲಮ್ - 44

ಗತ್ವಾ ದ್ರಕ್ಷ್ಯಥ ದುರ್ಧರ್ಷಾ ಮುಕ್ತಾಹಾರಮಿವೋರ್ಮಿಭಿಃ ।
ತಸ್ಯ ಮಧ್ಯೇ ಮಹಾನ್ ಶ್ವೇತೋ ಋಷಭೋ ನಾಮ ಪರ್ವತಃ ॥

ಅನುವಾದ

ದುರ್ಧರ್ಷ ವಾನರರೇ! ಅಲ್ಲಿಗೆ ತಲುಪಿ ಏಳುತ್ತಿರುವ ತರಂಗಗಳಿಂದ ಕೂಡಿದ ಕ್ಷೀರಸಾಗರವನ್ನು ಮುತ್ತಿನ ಹಾರವನ್ನೆ ಧರಿಸಿದಂತೆ ಕಾಣುವಿರಿ. ಆ ಸಾಗರದ ಮಧ್ಯದಲ್ಲಿ ಶ್ವೇತವರ್ಣದ ಋಷಭ ಎಂಬ ಪ್ರಸಿದ್ಧ ಒಂದು ಎತ್ತರವಾದ ಪರ್ವತವಿದೆ.॥44॥

ಮೂಲಮ್ - 45½

ದಿವ್ಯಗಂಧೈಃ ಕುಸುಮಿತೈರಾಚಿತೈಶ್ಚ ನಗೈರ್ವೃತಃ ।
ಸರಶ್ಚ ರಾಜತೈಃ ಪದ್ಮೈರ್ಜ್ವಲಿತೈರ್ಹೇಮಕೇಸರೈಃ ॥
ನಾಮ್ನಾ ಸುದರ್ಶನಂ ನಾಮ ರಾಜಹಂಸೈಃ ಸಮಾಕುಲಮ್ ।

ಅನುವಾದ

ಆ ಪರ್ವತದಲ್ಲಿ ಎಲ್ಲೆಡೆ ದಿವ್ಯಗಂಧದಿಂದ ಸುವಾಸಿತವಾದ ಪುಷ್ಪಗಳಿಂದ ಶೋಭಿಸುವ ವೃಕ್ಷಗಳು ತುಂಬಿವೆ. ಅದರ ಮೇಲೆ ಸುದರ್ಶನ ಎಂಬ ಸರೋವರವಿದೆ, ಅದರಲ್ಲಿ ಬೆಳ್ಳಿಯಂತೆ ಶ್ವೇತಕಮಲಗಳು ಅರಳಿವೆ. ಆ ಕಮಲಗಳ ಕೇಸರಗಳು ಸುವರ್ಣಮಯವಾಗಿದ್ದು, ಸದಾ ದಿವ್ಯ ಪ್ರಭೆಯಿಂದ ಹೊಳೆಯುತ್ತಿವೆ. ಆ ಸರೋವರವು ರಾಜಹಂಸಗಳಿಂದ ತುಂಬಿಕೊಂಡಿರುತ್ತದೆ.॥45॥

ಮೂಲಮ್ - 46½

ವಿಬುಧಾಶ್ಚಾರಣಾ ಯಕ್ಷಾಃ ಕಿನ್ನರಾಶ್ಚಾಪ್ಸರೋಗಣಾಃ ॥
ಹೃಷ್ಟಾಃ ಸಮಧಿಗಚ್ಛಂತಿ ನಲಿನೀಂ ತಾಂ ರಿರಂಸವಃ ।

ಅನುವಾದ

ದೇವತೆಗಳು, ಚಾರಣರು, ಯಕ್ಷರು, ಕಿನ್ನರರು, ಅಪ್ಸರೆಯರು ಬಹಳ ಸಂತೋಷದಿಂದ ಜಲವಿಹಾರಕ್ಕಾಗಿ ಅಲ್ಲಿಗೆ ಬರುತ್ತಾ ಇರುತ್ತಾರೆ.॥46॥

ಮೂಲಮ್ - 47

ಕ್ಷೀರೋದಂ ಸಮತಿಕ್ರಮ್ಯ ತತೋ ದ್ರಕ್ಷ್ಯಥ ವಾನರಾಃ ॥

ಮೂಲಮ್ - 48

ಜಲೋದಂ ಸಾಗರಂ ಶೀಘ್ರಂ ಸರ್ವಭೂತ ಭಯಾವಹಮ್ ।
ತತ್ರ ತತ್ಕೋಪಜಂ ತೇಜಃ ಕೃತಂ ಹಯಮುಖಂ ಮಹತ್ ॥

ಅನುವಾದ

ವಾನರರೇ! ಕ್ಷೀರಸಾಗರವನ್ನು ದಾಟಿ ಮುಂದೆ ಹೋದಾಗ ರುಚಿಕರ ನೀರಿನಿಂದ ತುಂಬಿದ ಸಮುದ್ರವನ್ನು ಬೇಗನೇ ನೋಡುವಿರಿ. ಆ ಮಹಾಸಾಗರವು ಸಮಸ್ತ ಪ್ರಾಣಿಗಳಿಗೆ ಭಯಾನಕವಾಗಿದೆ. ಅದರಲ್ಲಿ ಬ್ರಹ್ಮರ್ಷಿ ಔರ್ವನ ಕೋಪ ದಿಂದ ಪ್ರಕಟವಾದ ವಡವಾಮುಖ ಎಂಬ ಮಹಾನ್ ತೇಜಸ್ಸು ಇದೆ.॥47-48॥

ಮೂಲಮ್ - 49

ಅಸ್ಯಾಹುಸ್ತನ್ಮಹಾವೇಗಮೋದನಂ ಸಚರಾಚರಮ್ ।
ತತ್ರ ವಿಕ್ರೋಶತಾಂ ನಾದೋ ಭೂತಾನಾಂ ಸಾಗರೌಕಸಾಮ್॥
ಶ್ರೂಯತೇ ಚಾಸಮರ್ಥಾನಾಂ ದೃಷ್ಟ್ವಾ ಭೂದ್ ವಡವಾಮುಖಮ್ ॥

ಅನುವಾದ

ಚರಾಚರ ಪ್ರಾಣಿಗಳ ಸಹಿತ ಮಹಾವೇಗಶಾಲೀ ಸಮುದ್ರದ ಜಲವೇ ಆ ವಡವಾಮುಖ ಎಂಬ ಅಗ್ನಿಯ ಆಹಾರವೆಂದು ತಿಳಿಯಲಾಗಿದೆ. ಅಲ್ಲಿ ಪ್ರಕಟವಾದ ಆ ವಡವಾನಲವನ್ನು ನೋಡಿ ಅದರಲ್ಲಿ ಬೀಳುವ ಭಯದಿಂದ ಚೀರುತ್ತಿರುವ ಅಸಮರ್ಥ ಸಮುದ್ರನಿವಾಸಿಗಳ ಆರ್ತನಾದ ನಿರಂತರ ಕೇಳಿ ಬರುತ್ತದೆ.॥49॥

ಮೂಲಮ್ - 50

ಸ್ವಾದೂದಸ್ಯೋತ್ತರೇ ತೀರೇ ಯೋಜನಾನಿ ತ್ರಯೋದಶ ।
ಜಾತರೂಪಶಿಲೋ ನಾಮ ಸುಮಹಾನ್ ಕನಕಪ್ರಭಃ ॥

ಅನುವಾದ

ರುಚಿಕರ ನೀರಿನಿಂದ ತುಂಬಿದ ಆ ಸಮುದ್ರದ ಉತ್ತರಕ್ಕೆ ಹದಿಮೂರು ಯೋಜನ ದೂರದಲ್ಲಿ ಸುವರ್ಣಶಿಲೆಗಳಿಂದ ಸುಶೋಭಿತ ಕಮನೀಯ ಕನಕ ಕಾಂತಿಯನ್ನು ಹೊಂದಿದ ಒಂದು ಬಹಳ ಎತ್ತರವಾದ ಪರ್ವತವಿದೆ.॥50॥

ಮೂಲಮ್ - 51

ತತ್ರ ಚಂದ್ರಪ್ರತೀಕಾಶಂ ಪನ್ನಗಂ ಧರಣೀಧರಮ್ ।
ಪದ್ಮಪತ್ರವಿಶಾಲಾಕ್ಷಂ ತತೋ ದ್ರಕ್ಷ್ಯಥ ವಾನರಾಃ ॥

ಮೂಲಮ್ - 52

ಆಸೀನಂ ಪರ್ವತಸ್ಯಾಗ್ರೇ ಸರ್ವದೇವನಮಸ್ಕೃತಮ್ ।
ಸಹಸ್ರಶಿರಸಂ ದೇವಮನಂತಂ ನೀಲವಾಸಸಮ್ ॥

ಅನುವಾದ

ವಾನರರೇ! ಅದರ ಶಿಖರದಲ್ಲಿ ಈ ಪೃಥಿವಿಯನ್ನು ಧರಿಸಿದ ಭಗವಾನ್ ಅನಂತನು ಕುಳಿತಿರುವುದು ಕಂಡು ಬಂದೀತು. ಅವನ ಶ್ರೀವಿಗ್ರಹವು ಚಂದ್ರನಂತೆ ಗೌರವರ್ಣವಾಗಿದೆ. ಅವನು ಸರ್ಪಜಾತಿಯವನಾಗಿದ್ದರೂ ಅವನ ಸ್ವರೂಪ ದೇವತೆಗಳಂತೆ ಇದೆ. ಅವನ ನೇತ್ರಗಳು ಅರಳಿದ ಕಮಲದಂತೆ ಇದ್ದು, ನೀಲವಸ್ತ್ರವನ್ನುಟ್ಟ ಆ ಅನಂತದೇವನಿಗೆ ಸಾವಿರ ಮಸ್ತಕಗಳಿವೆ.॥51-52॥

ಮೂಲಮ್ - 53

ತ್ರಿಶಿರಾಃ ಕಾಂಚನಃ ಕೇತುಸ್ತಾಲಸ್ತಸ್ಯ ಮಹಾತ್ಮನಃ ।
ಸ್ಥಾಪಿತಃ ಪರ್ವತಸ್ಯಾಗ್ರೇ ವಿರಾಜತಿ ಸವೇದಿಕಃ ॥

ಅನುವಾದ

ಪರ್ವತದ ಮೇಲೆ ಆ ಮಹಾತ್ಮನ ತಾಳವೃಕ್ಷದ ಚಿಹ್ನೆಯುಳ್ಳ ಧ್ವಜವು ಹಾರಾಡುತ್ತಿದೆ. ಆ ಧ್ವಜಕ್ಕೆ ಮೂರು ಶಿಖೆಗಳಿದ್ದು, ಅದರ ಕೆಳಗಿನ ಭೂಮಿಯಲ್ಲಿ ವೇದಿಯ ನಿರ್ಮಾಣ ಗೊಂಡಿದೆ. ಈ ರೀತಿ ಆ ಧ್ವಜವು ಶೋಭಿಸುತ್ತಿದೆ.॥53॥

ಮೂಲಮ್ - 54

ಪೂರ್ವಸ್ಯಾಂ ದಿಶಿ ನಿರ್ಮಾಣಂ ಕೃತಂ ತತ್ ತ್ರಿದಶೇಶ್ವರೈಃ ।
ತತಃ ಪರಂ ಹೇಮಮಯಃ ಶ್ರೀಮಾನುದಯಪರ್ವತಃ ॥

ಅನುವಾದ

ಇದೇ ತಾಲಧ್ವಜವು ಪೂರ್ವದಿಕ್ಕಿನ ಸೀಮೆಯನ್ನು ಸೂಚಿಸುವ ಚಿಹ್ನೆಯಾಗಿ ದೇವತೆಗಳಿಂದ ಸ್ಥಾಪಿತವಾಗಿದೆ. ಅದರ ಮುಂದೆ ದಿವ್ಯ ಶೋಭಾಸಂಪನ್ನ ಸುವರ್ಣಮಯ ಉದಯಪರ್ವತವಿದೆ.॥54॥

ಮೂಲಮ್ - 55

ತಸ್ಯ ಕೋಟಿರ್ದಿವಂ ಸ್ಪೃಷ್ಟ್ವಾ ಶತಯೋಜನಮಾಯತಾ ।
ಜಾತರೂಪಮಯೀ ದಿವ್ಯಾ ವಿರಾಜತ ಸವೇದಿಕಾ ॥

ಅನುವಾದ

ಗಗನಚುಂಬೀ ಅದರ ಶಿಖರವು ನೂರು ಯೋಜನ ಎತ್ತರವಾಗಿದೆ. ಅದರ ಆಧಾರಭೂತ ಪರ್ವತವೂ ಹಾಗೆಯೇ ಇದೆ. ಅದರೊಂದಿಗೆ ಆ ದಿವ್ಯ ಸುವರ್ಣ ಶಿಖರವು ಅದ್ಭುತವಾಗಿ ಶೋಭಿಸುತ್ತಿದೆ.॥55॥

ಮೂಲಮ್ - 56

ಸಾಲೈಸ್ತಾಲೈಸ್ತಮಾಲೈಶ್ಚ ಕರ್ಣಿಕಾರೈಶ್ಚ ಪುಷ್ಪಿತೈಃ ।
ಜಾತರೂಪಮಯೈರ್ದಿವ್ಯೈಃ ಶೋಭತೇ ಸೂರ್ಯಸನ್ನಿಭೈಃ ॥

ಅನುವಾದ

ಅಲ್ಲಿಯ ಸಾಲ, ತಾಲ, ತಮಾಲ ಮತ್ತು ಹೂವುಗಳಿಂದ ತುಂಬಿದ ಕಣಗಿಲೆ ಮೊದಲಾದ ವೃಕ್ಷಗಳೂ ಸುವರ್ಣಮಯವಾಗಿವೆ. ಆ ಸೂರ್ಯನಂತಹ ತೇಜಸ್ವೀ ದಿವ್ಯ ವೃಕ್ಷಗಳಿಂದ ಉದಯಗಿರಿಯು ಬಹಳವಾಗಿ ಶೋಭಿಸುತ್ತಿದೆ.॥56॥

ಮೂಲಮ್ - 57

ತತ್ರ ಯೋಜನವಿಸ್ತಾರಮುಚ್ಛ್ರಿತಂ ದಶಯೋಜನಮ್ ।
ಶೃಂಗ ಸೌಮನಸಂ ನಾಮ ಜಾತರೂಪಮಯಂ ಧ್ರುವಮ್ ॥

ಅನುವಾದ

ಆ ನೂರು ಯೋಜನ ಎತ್ತರ ಉದಯಗಿರಿಯ ಶಿಖರದಲ್ಲಿ ಸೌಮನಸ ಎಂಬ ಸುವರ್ಣಮಯ ಶಿಖರವಿದೆ. ಅದು ಒಂದು ಯೋಜನ ಅಗಲ ಮತ್ತು ಹತ್ತು ಯೋಜನ ಎತ್ತರವಾಗಿದೆ.॥57॥

ಮೂಲಮ್ - 58

ತತ್ರ ಪೂರ್ವಂಪದಂ ಕೃತ್ವಾ ಪುರಾ ವಿಷ್ಣುಸ್ತ್ರಿವಿಕ್ರಮೇ ।
ದ್ವಿತೀಯಂ ಶಿಖರೇ ಮೇರೋಶ್ಚಕಾರ ಪುರುಷೋತ್ತಮಃ ॥

ಅನುವಾದ

ಹಿಂದೆ ವಾಮನ ಅವತಾರದ ಸಮಯ ಪುರುಷೋತ್ತಮ ಭಗವಾನ್ ವಿಷ್ಣುವು ತನ್ನ ಮೊದಲ ಹೆಜ್ಜೆಯನ್ನು ಆ ಸೌಮನಸ ಶಿಖರದಲ್ಲಿರಿಸಿ, ಇನ್ನೊಂದು ಹೆಜ್ಜೆಯನ್ನು ಮೇರುಪರ್ವತದ ಶಿಖರದಲ್ಲಿ ಇರಿಸಿದ್ದನು.॥58॥

ಮೂಲಮ್ - 59

ಉತ್ತರೇಣ ಪರಿಕ್ರಮ್ಯ ಜಂಬೂದ್ವೀಪಂ ದಿವಾಕರಃ ।
ದೃಶ್ಯೋ ಭವತಿ ಭೂಯಿಷ್ಠಂ ಶಿಖರಂ ತನ್ಮಹೋಚ್ಛ್ರಯಮ್ ॥

ಅನುವಾದ

ಸೂರ್ಯನು ಉತ್ತರದಿಂದ ಚಲಿಸಿ ಜಂಬೂದ್ವೀಪದ ಪ್ರದಕ್ಷಿಣೆ ಮಾಡುವಾಗ ಅತ್ಯಂತ ಎತ್ತರ ಸೌಮನಸ ಎಂಬ ಶಿಖರಕ್ಕೆ ಬಂದು ಸ್ಥಿತವಾದಾಗ ಜಂಬೂದ್ವೀಪ ನಿವಾಸಿಗಳಿಗೆ ಅವನ ದರ್ಶನ ಸ್ಪಷ್ಟವಾಗಿ ಆಗುತ್ತದೆ.॥59॥

ಮೂಲಮ್ - 60

ತತ್ರ ವೈಖಾನಸಾ ನಾಮ ವಾಲಖಿಲ್ಯಾ ಮಹರ್ಷಯಃ ।
ಪ್ರಕಾಶಮಾನಾ ದೃಶ್ಯಂತೇ ಸೂರ್ಯವರ್ಣಾಸ್ತಪಸ್ವಿನಃ ॥

ಅನುವಾದ

ಆ ಸೌಮನಸ ಎಂಬ ಶಿಖರದ ಮೇಲೆ ವೈಖಾನಸ ಮಹಾತ್ಮಾ ವಾಲಖಿಲ್ಯ ಮಹರ್ಷಿಗಡಣ ಪ್ರಕಾಶಿತರಾಗುವುದನ್ನು ನೋಡಲಾಗುತ್ತದೆ. ಅವರು ಸೂರ್ಯನಂತೆ ಕಾಂತಿವಂತ ಮತ್ತು ತಪಸ್ವಿಗಳಾಗಿದ್ದಾರೆ.॥60॥

ಮೂಲಮ್ - 61

ಆಯಂ ಸುದರ್ಶನೋ ದ್ವೀಪಃ ಪುರೋ ಯಸ್ಯ ಪ್ರಕಾಶತೇ ।
ಯಸ್ಮಿಂಸ್ತೇಜಶ್ಚ ಚಕ್ಷುಶ್ಚ ಸರ್ವಪ್ರಾಣಭೃತಾಮಪಿ ॥

ಅನುವಾದ

ಈ ಉದಯಗಿರಿಯ ಸೌಮನಸ ಶಿಖರದ ಎದುರಿನ ದ್ವೀಪವು ಸುದರ್ಶನ ಎಂದು ಪ್ರಸಿದ್ಧವಾಗಿದೆ; ಏಕೆಂದರೆ ಆ ಶಿಖರದಲ್ಲಿ ಸೂರ್ಯನು ಉದಯಿಸಿದಾಗ ಈ ದ್ವೀಪದ ಸಮಸ್ತ ಪ್ರಾಣಿಗಳಿಗೆ ಬೆಳಕಾಗಿ, ಎಲ್ಲರ ಕಣ್ಣುಗಳಿಗೆ ಪ್ರಕಾಶ ಸಿಗುತ್ತವೆ. (ಇದೇ ಈ ದ್ವೀಪಕ್ಕೆ ‘ಸುದರ್ಶನ’ ಎಂಬ ಹೆಸರಾಗಲು ಕಾರಣವಾಗಿದೆ).॥61॥

ಮೂಲಮ್ - 62

ಶೈಲಸ್ಯ ತಸ್ಯ ಪೃಷ್ಠೇಷು ಕಂದರೇಷು ವನೇಷು ಚ ।
ರಾವಣಃ ಸಹ ವೈದೇಹ್ಯಾ ಮಾರ್ಗಿತವ್ಯಸ್ತತಸ್ತತಃ ॥

ಅನುವಾದ

ಉದಯಾಚಲದ ಹಿಂದಿನ ಕಂದರಗಳಲ್ಲಿಯೂ, ವನಗಳಲ್ಲಿಯೂ ನೀವು ಎಲ್ಲೆಡೆ ವಿದೇಹಕುಮಾರಿ ಸೀತೆ ಸಹಿತ ರಾವಣನನ್ನು ಹುಡುಕಬೇಕು.॥62॥

ಮೂಲಮ್ - 63

ಕಾಂಚನಸ್ಯ ಚ ಶೈಲಸ್ಯ ಸೂರ್ಯಸ್ಯ ಚ ಮಹಾತ್ಮನಃ ।
ಆವಿಷ್ಟಾ ತೇಜಸಾ ಸಂಧ್ಯಾ ಪೂರ್ವಾ ರಕ್ತಾ ಪ್ರಕಾಶತೇ ॥

ಅನುವಾದ

ಆ ಸುವರ್ಣಮಯ ಉದಯಾಚಲ ಮತ್ತು ಮಹಾತ್ಮಾ ಸೂರ್ಯನ ತೇಜದಿಂದ ವ್ಯಾಪ್ತವಾದ ಉದಯಕಾಲದ ಪೂರ್ವ ಸಂಧ್ಯೆಯು ರಕ್ತವರ್ಣದ ಪ್ರಭೆಯಂದ ಪ್ರಕಾಶಿತವಾಗುತ್ತದೆ.॥63॥

ಮೂಲಮ್ - 64

ಪೂರ್ವಮೇತತ್ಕೃತಂ ದ್ವಾರಂ ಪೃಥಿವ್ಯಾ ಭವನಸ್ಯ ಚ ।
ಸೂರ್ಯಸ್ಯೋದಯನಂ ಚೈವ ಪೂರ್ವಾ ಹ್ಯೇಷಾ ದಿಗುಚ್ಯತೇ ॥

ಅನುವಾದ

ಸೂರ್ಯನ ಉದಯದ ಈ ಸ್ಥಾನವನ್ನು ಮೊಟ್ಟ ಮೊದಲಿಗೆ ಬ್ರಹ್ಮದೇವರು ನಿರ್ಮಿಸಿದ್ದರು ; ಆದ್ದರಿಂದ ಈ ಇದೇ ಪೃಥಿವಿ ಹಾಗೂ ಬ್ರಹ್ಮಲೋಕದ ದ್ವಾರವಾಗಿದೆ. (ಮೇಲಿನ ಲೋಕದಲ್ಲಿರುವ ಪ್ರಾಣಿಗಳು ಇದೇ ದ್ವಾರದಿಂದ ಭೂಲೋಕಕ್ಕೆ ಬಂದು, ಇದೇ ದ್ವಾರದಿಂದ ಬ್ರಹ್ಮಲೋಕಕ್ಕೆ ಹೋಗುತ್ತಾರೆ.) ಮೊದಲಿಗೆ ಇದೇ ದಿಕ್ಕಿನಲ್ಲಿ ಈ ದ್ವಾರದ ನಿರ್ಮಾಣವಾದ್ದರಿಂದ ಇದನ್ನು ಪೂರ್ವದಿಶೆ ಎಂದು ಹೇಳುತ್ತಾರೆ.॥64॥

ಮೂಲಮ್ - 65

ತಸ್ಯ ಶೈಲಸ್ಯ ಪೃಷ್ಠೇಷು ನಿರ್ಝರೇಷು ಗುಹಾಸು ಚ ।
ರಾವಣಃ ಸಹ ವೈದೇಹ್ಯಾ ಮಾರ್ಗಿತವ್ಯಸ್ತತಸ್ತತಃ ॥

ಅನುವಾದ

ಉದಯಾಚಲದ ತಪ್ಪಲು, ಜಲಪಾತ ಮತ್ತು ಗುಹೆಗಳಲ್ಲಿ ಎಲ್ಲೆಡೆ ತಿರುಗಾಡಿ ನೀವು ಸೀತಾಸಹಿತ ರಾವಣನನ್ನು ಅನ್ವೇಷಣೆ ಮಾಡಬೇಕು.॥65॥

ಮೂಲಮ್ - 66

ತತಃ ಪರಮಗಮ್ಯಾ ಸ್ಯಾದ್ ದಿಕ್ಪೂರ್ವಾ ತ್ರಿದಿಶಾವೃತಾ ।
ರಹಿತಾ ಚಂದ್ರಸೂರ್ಯಾಭ್ಯಾಮದೃಶ್ಯಾ ತಮಸಾವೃತಾ ॥

ಅನುವಾದ

ಇದಕ್ಕೆ ಮುಂದೆ ಪೂರ್ವದಿಕ್ಕು ಅಗಮ್ಯವಾಗಿದೆ. ಅಲ್ಲಿ ದೇವತೆಗಳು ಇರುತ್ತಾರೆ. ಆ ಕಡೆಗೆ ಸೂರ್ಯ-ಚಂದ್ರರ ಪ್ರಕಾಶ ಇಲ್ಲದ್ದರಿಂದ ಅಲ್ಲಿಯ ಭೂಮಿ ಅಂಧಕಾರದಿಂದ ಆಚ್ಛಾದಿತ ಹಾಗೂ ಅದೃಶ್ಯವಾಗಿದೆ.॥66॥

ಮೂಲಮ್ - 67

ಶೈಲೇಷು ತೇಷು ಸರ್ವೇಷು ಕಂದರೇಷು ವನೇಷು ಚ ।
ಯೇ ಚ ನೋಕ್ತಾ ಮಯೋದ್ದೇಶಾ ವಿಚೇಯಾ ತೇಷು ಜಾನಕೀ ॥

ಅನುವಾದ

ಉದಯಾಚಲದ ಸುತ್ತಮುತ್ತಲು ಇರುವ ಸಮಸ್ತ ಪರ್ವತಗಳಲ್ಲಿ, ಕಂದಕಗಳಲ್ಲಿ, ನದಿಗಳಲ್ಲಿ ಹಾಗೂ ನಾನು ನಿರ್ದೇಶನ ಮಾಡದಿರುವ ಸ್ಥಾನಗಳಲ್ಲಿಯೂ ನೀವು ಜಾನಕಿಯನ್ನು ಹುಡುಕಬೇಕು.॥67॥

ಮೂಲಮ್ - 68

ಏತಾವದ್ವಾನರೈಃ ಶಕ್ಯಂ ಗಂತು ವಾನರಪುಂಗವಾಃ ।
ಅಭಾಸ್ಕರಮಮರ್ಯಾದಂ ನ ಜಾನೀಮಸ್ತತಃ ಪರಮ್ ॥

ಅನುವಾದ

ವಾನರ ಶಿರೋಮಣಿಗಳೇ! ಕೇವಲ ಉದಯಗಿರಿಯವರೆಗೆ ವಾನರರು ಹೋಗಬಲ್ಲರು. ಇದಕ್ಕೆ ಮುಂದೆ ಸೂರ್ಯ ಪ್ರಕಾಶವಿರದೆ, ಯಾವುದೇ ದೇಶಾದಿಗಳ ಸೀಮೆ ಇಲ್ಲವೇ ಇಲ್ಲ. ಆದ್ದರಿಂದ ಮುಂದಿನ ಭೂಮಿಯ ಕುರಿತು ನನಗೆ ಏನೂ ತಿಳಿದಿಲ್ಲ.॥68॥

ಮೂಲಮ್ - 69

ಅಧಿಗಮ್ಯ ತು ವೈದೇಹೀಂ ನಿಲಯಂ ರಾವಣಸ್ಯ ಚ ।
ಮಾಸೇ ಪೂರ್ಣೇ ನಿವರ್ತಧ್ವಮುದಯಂ ಪ್ರಾಪ್ಯ ಪರ್ವತಮ್ ॥

ಅನುವಾದ

ನೀವು ಉದಯಾಚಲದವರೆಗೆ ಹೋಗಿ ಸೀತೆ ಮತ್ತು ರಾವಣನ ಸ್ಥಾನವನ್ನು ಹುಡುಕಿ ಒಂದು ತಿಂಗಳೊಳಗೆ ಮರಳಿಬರಬೇಕು.॥69॥

ಮೂಲಮ್ - 70

ಊರ್ಧ್ವಂ ಮಾಸಾನ್ನ ವಸ್ತವ್ಯಂ ವಸನ್ವಧ್ಯೋ ಭವೇನ್ಮಮ ।
ಸಿದ್ಧಾರ್ಥಾಂ ಸನ್ನಿವರ್ತಧ್ವಮಧಿಗಮ್ಯ ಚ ಮೈಥಿಲೀಮ್ ॥

ಅನುವಾದ

ಒಂದು ತಿಂಗಳಿಗಿಂತ ಹೆಚ್ಚು ನಿಲ್ಲಬಾರದು. ಹೆಚ್ಚುಕಾಲ ಅಲ್ಲಿ ಇರುವವನು ನನ್ನಿಂದ ಕೊಲ್ಲಲ್ಪಡುವನು. ಮಿಥಿಲೇಶಕುಮಾರಿಯನ್ನು ಅನ್ವೇಷಣೆ ಮಾಡಿ, ಪ್ರಯೋಜನ ಸಿದ್ಧವಾದಾಗ ಅವಶ್ಯವಾಗಿ ಮರಳಿ ಬರಬೇಕು.॥70॥

ಮೂಲಮ್ - 71

ಮಹೇಂದ್ರಕಾಂತಾಂ ವನಷಂಡಮಂಡಿತಾಂ
ದಿಶಂ ಚರಿತ್ವಾ ನಿಪುಣೇನ ವಾನರಾಃ ।
ಆವಾಪ್ಯ ಸೀತಾಂ ರಘುವಂಶಜಪ್ರಿಯಾಂ
ತತೋ ನಿವೃತ್ತಾಃ ಸುಖಿನೋ ಭವಿಷ್ಯಥ ॥

ಅನುವಾದ

ವಾನರರೇ! ವನಸಮೂಹಗಳಿಂದ ಅಲಂಕೃತ ಪೂರ್ವದಿಕ್ಕಿನಲ್ಲಿ ಚೆನ್ನಾಗಿ ಭ್ರಮಣ ಮಾಡಿ ಶ್ರೀರಾಮನ ಪ್ರಿಯಪತ್ನೀ ಸೀತೆಯ ಸಮಾಚಾರ ತಿಳಿದು ನೀವು ಅಲ್ಲಿಂದ ಮರಳಿ ಬನ್ನಿರಿ. ಇದರಿಂದ ನೀವು ಸುಖಿಗಳಾಗುವಿರಿ.॥71॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ನಲವತ್ತನೆಯ ಸರ್ಗ ಸಂಪೂರ್ಣವಾಯಿತು. ॥40॥