वाचनम्
ಭಾಗಸೂಚನಾ
ಶ್ರೀರಾಮನು ಸುಗ್ರೀವನಿಗೆ ಕೃತಜ್ಞತೆಯನ್ನು ಸೂಚಿಸಿದುದು, ನಾನಾ ಕಡೆಗಳಿಂದ ಸೈನ್ಯಸಮೇತರಾದ ಸೇನಾನಾಯಕರ ಆಗಮನ
ಮೂಲಮ್ - 1
ಇತಿ ಬ್ರುವಾಣಂ ಸುಗ್ರೀವಂ ರಾಮೋ ಧರ್ಮಭೃತಾಂ ವರಃ ।
ಬಾಹುಭ್ಯಾಂ ಸಂಪರಿಷ್ವಜ್ಯ ಪ್ರತ್ಯುವಾಚ ಕೃತಾಂಜಲಿಮ್ ॥
ಅನುವಾದ
ಸುಗ್ರೀವನು ಹೀಗೆ ಹೇಳಿದಾಗ ಧರ್ಮಾತ್ಮರಲ್ಲಿ ಶ್ರೇಷ್ಠ ಶ್ರೀರಾಮನು ತನ್ನೆರಡು ಭುಜಗಳಿಂದ ಅವನನ್ನು ಆಲಿಂಗಿಸಿ ಕೊಂಡನು ಹಾಗೂ ಕೈಮುಗಿದು ನಿಂತಿರುವ ಅವನಲ್ಲಿ ಈ ಪ್ರಕಾರ ಹೇಳಿದನು .॥1॥
ಮೂಲಮ್ - 2
ಯದಿಂದ್ರೋ ವರ್ಷತೇ ವರ್ಷಂ ನ ತಚ್ಚಿತ್ರಂ ಭವಿಷ್ಯತಿ ।
ಆದಿತ್ಯೋಽಸೌ ಸಹಸ್ರಾಂಶುಃ ಕುರ್ಯಾದ್ವಿತಿಮಿರಂ ನಭಃ ॥
ಮೂಲಮ್ - 3
ಚಂದ್ರಮಾ ರಜನೀಂ ಕುರ್ಯಾತ್ ಪ್ರಭಾಯಾ ಸೌಮ್ಯ ನಿರ್ಮಲಾಮ್ ।
ತ್ವದ್ವಿಧೋ ವಾಪಿ ಮಿತ್ರಾಣಾಂ ಪ್ರತಿಕುರ್ಯಾತ್ಪರಂತಪ ॥
ಅನುವಾದ
ಸಖನೇ! ಇಂದ್ರನು ನೀರನ್ನು ಸುರಿಸುತ್ತಾನೆ, ಸಾವಿರಾರು ಕಿರಣಗಳಿಂದ ಶೋಭಿಸುವ ಸೂರ್ಯನು ಆಕಾಶದ ಅಂಧಕಾರವನ್ನು ದೂರ ಮಾಡುತ್ತಾನೆ, ಚಂದ್ರನು ತನ್ನ ಪ್ರಭೆಯಿಂದ ಕತ್ತಲ ರಾತ್ರಿಯನ್ನು ಬೆಳಗುತ್ತಾನೆ, ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಪರಂತಪ ಸುಗ್ರೀವನೇ! ಹೀಗೆಯೇ ನಿನ್ನಂತಹ ಪುರುಷರೂ ಕೂಡ ತನ್ನ ಮಿತ್ರರಿಗೆ ಉಪಕಾರ ಮಾಡಿ ಅವರನ್ನು ಪ್ರಸನ್ನಗೊಳಿಸಿದರೆ ಇದರಲ್ಲಿ ಯಾವುದೇ ಆಶ್ಚರ್ಯವನ್ನು ತಿಳಿಯಬಾರದು.॥2-3॥
ಮೂಲಮ್ - 4
ಏವಂ ತ್ವಯಿ ನ ತಚ್ಚಿತ್ರಂ ಭವೇದ್ಯತ್ ಸೌಮ್ಯ ಶೋಭನಮ್ ।
ಜಾನಾಮ್ಯಹಂ ತ್ವಾಂ ಸುಗ್ರೀವ ಸತತಂ ಪ್ರಿಯವಾದಿನಮ್ ॥
ಅನುವಾದ
ಸೌಮ್ಯ ಸುಗ್ರೀವನೇ! ಈ ಪ್ರಕಾರ ನಿನ್ನಲ್ಲಿರುವ ಮಿತ್ರರ ಹಿತಸಾಧನೆಯಾದ ಕಲ್ಯಾಣಕಾರೀ ಗುಣವು ಆಶ್ಚರ್ಯದ ವಿಷಯವಲ್ಲ; ಏಕೆಂದರೆ ನೀನು ಸದಾ ಪ್ರಿಯವಾಗಿ ಮಾತನಾಡುವವನಾಗಿರುವೆ, ಇದು ನಿನ್ನ ಸ್ವಾಭಾವಿಕ ಗುಣವೆಂದು ನಾನು ತಿಳಿದಿರುವೆನು.॥4॥
ಮೂಲಮ್ - 5
ತ್ವತ್ಸನಾಥಃ ಸಖೇ ಸಂಖ್ಯೇ ಜೇತಾಸ್ಮಿ ಸಕಲಾನರೀನ್ ।
ತ್ವಮೇವ ಮೇ ಸುಹೃನ್ಮಿತ್ರಂ ಸಾಹಾಯ್ಯಂ ಕರ್ತುಮರ್ಹಸಿ ॥
ಅನುವಾದ
ಸಖನೇ! ನಿನ್ನ ಸಹಾಯದಿಂದ ಸನಾಥನಾಗಿ ನಾನು ಯುದ್ಧದಲ್ಲಿ ಸಮಸ್ತ ಶತ್ರುಗಳನ್ನು ಗೆದ್ದುಕೊಳ್ಳುವೆನು. ನೀನೇ ನನ್ನ ಹಿತೈಷಿ ಮಿತ್ರನಾಗಿರುವೆ ಮತ್ತು ನನಗೆ ಸಹಾಯಮಾಡಬಲ್ಲೆ.॥5॥
ಮೂಲಮ್ - 6
ಜಹಾರಾತ್ಮವಿನಾಶಾಯ ಮೈಥಿಲೀಂ ರಾಕ್ಷಸಾಧಮಃ ।
ವಂಚಯಿತ್ವಾ ತು ಪೌಲೋಮೀಮನಹ್ಲಾದೋ ಯಥಾ ಶಚೀಮ್ ॥
ಅನುವಾದ
ಅನುಹ್ಲಾದನು ತನ್ನ ವಿನಾಶಕ್ಕಾಗಿಯೇ ಪುಲೋಮಪುತ್ರಿ ಶಚಿಯನ್ನು ಕಪಟದಿಂದ ಕದ್ದುಕೊಂಡು ಹೋಗಿದ್ದನು.* ಹಾಗೆಯೇ ರಾಕ್ಷಸಾಧಮ ರಾವಣನು ತನ್ನ ನಾಶಮಾಡಿಕೊಳ್ಳಲೆಂದೇ ಮಿಥಿಲೇಶಕುಮಾರಿಗೆ ಮೋಸ ಮಾಡಿ ಆಕೆಯನ್ನು ಅಪಹರಿಸಿರುವನು.॥6॥
ಟಿಪ್ಪನೀ
- ಪುಲೋಮ ದಾನವನ ಕನ್ಯೆ ಶಚಿಯು ಇಂದ್ರನ ಕುರಿತು ಅನುರಕ್ತಳಾಗಿದ್ದಳು, ಆದರೆ ಅನುಹ್ಲಾದನು ಆಕೆಯ ತಂದೆಯನ್ನು ಪುಸಲಾಯಿಸಿ ತನ್ನಂತೆ ಮಾಡಿಕೊಂಡು, ಅವನ ಅನುಮತಿಯಿಂದ ಶಚಿಯನ್ನು ಕದ್ದುಕೊಂಡನು. ಇಂದ್ರನಿಗೆ ಇದು ತಿಳಿದಾಗ, ಆ ಅನುಮತಿ ಕೊಡುವ ಪುಲೋಮನನ್ನು ಮತ್ತು ಅಪಹರಣ ಮಾಡಿದ ಅನುಹ್ಲಾದವನ್ನು ಕೊಂದು ಶಚಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದನು. ಇದು ಪುರಾಣಪ್ರಸಿದ್ಧ ಕಥೆಯಾಗಿದೆ. (ರಾಮಾಯಣ ತಿಲಕದಿಂದ)
ಮೂಲಮ್ - 7
ನ ಚಿರಾತ್ತಂ ವಧಿಷ್ಯಾಮಿ ರಾವಣಂ ನಿಶಿತೈಃ ಶರೈಃ ।
ಪೌಲೋಮ್ಯಾಃ ಪಿತರಂ ದೃಪ್ತಂ ಶತಕ್ರತುರಿವಾರಿಹಾ ॥
ಅನುವಾದ
ಶತ್ರುಹಂತಾ ಇಂದ್ರನು ಶಚಿಯ ಉದ್ಧಟ ತಂದೆಯನ್ನು ಕೊಂದುಹಾಕಿದ್ದನೋ ಹಾಗೆಯೇ ನಾನೂ ಶೀಘ್ರವಾಗಿ ನನ್ನ ತೀಕ್ಷ್ಣಬಾಣಗಳಿಂದ ರಾವಣನನ್ನು ವಧಿಸುವೆನು.॥7॥
ಮೂಲಮ್ - 8
ಏತಸ್ಮಿನ್ನನ್ತರೇ ಚೈವ ರಜಃ ಸಮಭಿವರ್ತತ ।
ಉಷ್ಣಂತೀವ್ರಾಂ ಸಹಸ್ರಾಂಶೋಶ್ಛಾದಯದ್ ಗಗನೇ ಪ್ರಭಾಮ್ ॥
ಅನುವಾದ
ಶ್ರೀರಾಮ ಮತ್ತು ಸುಗ್ರೀವರಲ್ಲಿ ಹೀಗೆ ಸಂವಾದ ನಡೆಯುತ್ತಿರುವಾಗಲೇ ಬಹಳ ಜೋರಾಗಿ ಧೂಳು ಎದ್ದಿತು, ಅದು ಆಕಾಶದಲ್ಲಿ ಹರಡಿ ಸೂರ್ಯನ ಪ್ರಚಂಡ ಪ್ರಭಾವವನ್ನು ಮುಚ್ಚಿಬಿಟ್ಟಿತು.॥8॥
ಮೂಲಮ್ - 9
ದಿಶಃ ಪರ್ಯಾಕುಲಾಶ್ಚಾಸಂಸ್ತಮಸಾ ತೇನ ದೂಷಿತಾಃ ।
ಚಚಾಲ ಚ ಮಹೀ ಸರ್ವಾ ಸಶೈಲವನಕಾನನಾ ॥
ಅನುವಾದ
ಮತ್ತೆ ಆ ಧೂಳಿನಿಂದ ಉಂಟಾದ ಅಂಧಕಾರದಿಂದ ಎಲ್ಲ ದಿಕ್ಕುಗಳು ದೂಷಿತವಾಗಿ ಎಲ್ಲೆಡೆ ವ್ಯಾಪಿಸಿತು. ಪರ್ವತ, ವನ, ಕಾನನಗಳೊಂದಿಗೆ ಇಡೀ ಪೃಥಿವಿಯು ನಡುಗತೊಡಗಿತು.॥9॥
ಮೂಲಮ್ - 10
ತತೋ ನಗೇಂದ್ರಸಂಕಾಶೈಸ್ತೀಕ್ಷ್ಣದಂಷ್ಟ್ರೈರ್ಮಹಾಬಲೈಃ ।
ಕೃತ್ಸ್ನಾಸಂಛಾದಿತಾ ಭೂಮಿರಸಂಖ್ಯೇಯೈಃ ಪ್ಲವಂಗಮೈಃ ॥
ಅನುವಾದ
ಅನಂತರ ಪರ್ವತದಂತೆ ಶರೀರವುಳ್ಳ, ತೀಕ್ಷ್ಣ ಕೋರೆದಾಡೆಗಳುಳ್ಳ ಅಸಂಖ್ಯ ಮಹಾಬಲಿ ವಾನರರಿಂದ ಅಲ್ಲಿಯ ಎಲ್ಲ ಭೂಮಿಯು ತುಂಬಿಹೋಯಿತು.॥10॥
ಮೂಲಮ್ - 11
ನಿಮೇಷಾಂತರಮಾತ್ರೇಣ ತತಸ್ತೈರ್ಹರಿಯೂಥಪೈಃ ।
ಕೋಟೀಶತಪರೀವಾರೈರ್ವಾನರೈರ್ಹರಿಯೂಥಪೈಃ ॥
ಅನುವಾದ
ರೆಪ್ಪೆ ಮಿಟುಕುವಷ್ಟರಲ್ಲಿ ಅರ್ಬುದ ವಾನರರಿಂದ ಸುತ್ತುವರಿದ ಅನೇಕಾನೇಕ ಯೂಧಪತಿಗಳು ಅಲ್ಲಿಗೆ ಬಂದು ಸೇರಿ ಆ ಭೂಭಾಗವೆಲ್ಲವನ್ನೂ ತುಂಬಿ ಹೋಯಿತು.॥11॥
ಮೂಲಮ್ - 12
ನಾದೇಯೈಃ ಪಾರ್ವತೇಯೈಶ್ಚಸಾಮುದ್ರೈಶ್ಚ ಮಹಾಬಲೈಃ ।
ಹರಿಭಿರ್ಮೇಘನಿರ್ಹ್ರಾದೈರನ್ಯೈಶ್ಚ ವನವಾಸಿಭಿಃ ॥
ಅನುವಾದ
ನದೀ, ಪರ್ವತ, ವನ, ಸಮುದ್ರ ಹೀಗೆ ಎಲ್ಲ ಸ್ಥಾನಗಳ ನಿವಾಸಿ ವಾನರರು ಅಲ್ಲಿ ನೆರೆದರು. ಅವರು ಮೇಘ ಗರ್ಜನೆಯಂತೆ ಗಟ್ಟಿಯಾಗಿ ಸಿಂಹನಾದ ಮಾಡುತ್ತಿದ್ದರು.॥12॥
ಮೂಲಮ್ - 13
ತರುಣಾದಿತ್ಯವರ್ಣೈಶ್ಚ ಶಶಿಗೌರೈಶ್ಚ ವಾನರೈಃ ।
ಪದ್ಮಕೇಸರವರ್ಣೈಶ್ಚ ಶ್ವೇತೈರ್ಹೇಮಕೃತಾಲಯೈಃ ॥
ಅನುವಾದ
ಕೆಲವರು ಬಾಲಸೂರ್ಯನಂತೆ ಕೆಂಪಗಿದ್ದರೆ, ಕೆಲವರು ಚಂದ್ರನಂತೆ ಬೆಳ್ಳಗಿದ್ದರು. ಕೆಲವು ವಾನರರು ಕಮಲ ಕೇಸರದಂತೆ ಹಳದಿ ಬಣ್ಣದವರಿದ್ದರು ಮತ್ತು ಎಷ್ಟೋ ಹಿಮಾಚಲವಾಸೀ ಬೆಳ್ಳಗೆ ಕಾಣುತ್ತಿದ್ದರು.॥13॥
ಮೂಲಮ್ - 14
ಕೋಟೀಸಹಸ್ರೈರ್ದಶಭಿಃ ಶ್ರೀಮಾನ್ ಪರಿವೃತಸ್ತದಾ ।
ವೀರಃ ಶತಬಲಿರ್ನಾಮ ವಾನರಃ ಪ್ರತ್ಯದೃಶ್ಯತ ॥
ಅನುವಾದ
ಆಗ ಪರಮಕಾಂತಿಯುಳ್ಳ ಶತಬಲಿ ಎಂಬ ವಾನರನು ಹತ್ತು ಅರಬ ವಾನರರೊಂದಿಗೆ ಕಂಡು ಬಂದನು.॥14॥
ಮೂಲಮ್ - 15
ತತಃ ಕಾಂಚನಶೈಲಾಭಸ್ತಾರಾಯಾ ವೀರ್ಯವಾನ್ ಪಿತಾ ।
ಅನೇಕೈರ್ಬಹುಸಾಹಸ್ರೈಃ ಕೋಟಿಭಿಃ ಪ್ರತ್ಯದೃಶ್ಯತ ॥
ಅನುವಾದ
ಅನಂತರ ಸುವರ್ಣಶೈಲದಂತೆ ಸುಂದರ ಹಾಗೂ ವಿಶಾಲ ಶರೀರವುಳ್ಳ ಮಹಾಬಲಿ ತಾರೆಯ ತಂದೆ ಸುಷೇಣನು ಅನೇಕ ಸಾವಿರ ಕೋಟಿ ವಾನರರೊಂದಿಗೆ ಅಲ್ಲಿ ಉಪಸ್ಥಿತನಾದನು.॥15॥
ಮೂಲಮ್ - 16
ತಥಾಪರೇಣ ಕೋಟೀನಾಂ ಸಹಸ್ರೇಣ ಸಮನ್ವಿತಃ ।
ಪಿತಾ ರುಮಾಯಾಃ ಸಂಪ್ರಾಪ್ತಃ ಸುಗ್ರೀವಶ್ವಶುರೋ ವಿಭುಃ ॥
ಅನುವಾದ
ಹೀಗೆಯೇ ಮಹಾವೈಭವಶಾಲೀ ರುಮೆಯ ತಂದೆ, ಸುಗ್ರೀವನ ಮಾವನೂ ಹತ್ತು ಅರಬ ವಾನರರೊಂದಿಗೆ ಅಲ್ಲಿಗೆ ಬಂದನು.॥16॥
ಮೂಲಮ್ - 17
ಪದ್ಮಕೇಸರಸಂಕಾಶಸ್ತರುಣಾರ್ಕನಿಭಾನನಃ ।
ಬುದ್ಧಿಮಾನ್ ವಾನರಶ್ರೇಷ್ಠಃ ಸರ್ವವಾನರಸತ್ತಮಃ ॥
ಮೂಲಮ್ - 18
ಅನೇಕೈರ್ಬಹುಸಾಹಸ್ರೈರ್ವಾನರಾಣಾಂ ಸಮನ್ವಿತಃ ।
ಪಿತಾ ಹನುಮತಃ ಶ್ರೀಮಾನ್ ಕೇಸರೀ ಪ್ರತ್ಯದೃಶ್ಯತ ॥
ಅನುವಾದ
ಅನಂತರ ಬುದ್ಧಿವಂತ ಮತ್ತು ವಾನರರಲ್ಲಿ ಶ್ರೇಷ್ಠನಾದ ಹನುಮಂತನ ತಂದೆ ಶ್ರೀಮಾನ್ ಕೇಸರಿಯು ಅಲ್ಲಿ ಕಂಡು ಬಂದನು. ಅವನ ಶರೀರದ ಬಣ್ಣ ಕಮಲದ ಕೇಸರದಂತೆ ಹಳದಿಯಾಗಿದ್ದು, ಪ್ರಾತಃಕಾಲದ ಸೂರ್ಯನಂತೆ ಕೆಂಪಗಾಗಿದ್ದನು. ಅವನು ಅನೇಕ ಸಾವಿರ ವಾನರರಿಂದ ಸುತ್ತುವರೆದಿದ್ದನು.॥17-18॥
ಮೂಲಮ್ - 19
ಗೋಲಾಂಗೂಲ ಮಹಾರಾಜೋ ಗವಾಕ್ಷೋ ಭೀಮವಿಕ್ರಮಃ ।
ವೃತಃ ಕೋಟಿಸಹಸ್ರೇಣ ವಾನರಾಣಾಮದೃಶ್ಯತ ॥
ಅನುವಾದ
ಮತ್ತೆ ಗೊಲಾಂಗೂಲ ಜಾತಿಯ ವಾನರರ ಮಹಾರಾಜಾ ಭಯಂಕರ ಪರಾಕ್ರಮಿ ಗವಾಕ್ಷನ ದರ್ಶನವಾಯಿತು. ಅವನೊಂದಿಗೂ ಸಾವಿರ ಕೋಟಿ ವಾನರರ ಸೈನ್ಯವಿತ್ತು.॥19॥
ಮೂಲಮ್ - 20
ಋಕ್ಷಾಣಾಂ ಭೀಮವೇಗಾನಾಂ ಧೂಮ್ರಃ ಶತ್ರುನಿಬರ್ಹಣಃ ।
ವೃತಃ ಕೋಟಿಸಹಸ್ರಾಭ್ಯಾಂ ದ್ವಾಭ್ಯಾಂ ಸಮಭಿವರ್ತತ ॥
ಅನುವಾದ
ಶತ್ರುಗಳನ್ನು ಸಂಹರಿಸುವ ಧೂಮ್ರ ಎಂಬ ಭಯಂಕರ ವೇಗಶಾಲಿ ಎರಡು ಸಾವಿರ ಕೋಟಿ ಕರಡಿಗಳ ಸೈನ್ಯದೊಂದಿಗೆ ಅಲ್ಲಿಗೆ ಬಂದನು.॥20॥
ಮೂಲಮ್ - 21
ಮಹಾಚಲನಿಭೈರ್ಘೋರೈಃ ಪನಸೋ ನಾಮ ಯೂಥಪಃ ।
ಆಜಗಾಮಮಹಾವೀರ್ಯಸ್ತಿಸೃಭಿಃ ಕೋಟಿಭಿರ್ವೃತಃ ॥
ಅನುವಾದ
ಮಹಾ ಪರಾಕ್ರಮಿ ಯೂಧಪತಿ ಪನಸನು ಮೂರುಕೋಟಿ ವಾನರರೊಂದಿಗೆ ಉಪಸ್ಥಿತವಾಗಿದ್ದನು. ಅವರೆಲ್ಲರೂ ಭಾರೀ ಭಯಂಕರ ಹಾಗೂ ಮಹಾನ್ ಪರ್ವತಾಕಾರವಾಗಿ ಕಂಡು ಬರುತ್ತಿದ್ದರು.॥21॥
ಮೂಲಮ್ - 22
ನೀಲಾಂಜನಚಯಾಕಾರೋ ನೀಲೋ ನಾಮೈಷ ಯೂಥಪಃ ।
ಅದೃಶ್ಯತ ಮಹಾಕಾಯಃ ಕೋಟಿಭರ್ದಶಭಿರ್ವೃತಃ ॥
ಅನುವಾದ
ಯೂಥಪತಿ ನೀಲನ ಶರೀರವೂ ಭಾರೀ ವಿಶಾಲ ವಾಗಿತ್ತು. ಆ ನೀಲನು ಕಾಡಿಗೆಯ ಬೆಟ್ಟದಂತೆ ನೀಲವರ್ಣದವನಾಗಿದ್ದನು ಮತ್ತು ಹತ್ತುಕೋಟಿ ಕಪಿಗಳಿಂದ ಸಮಾವೃತ ನಾಗಿದ್ದನು.॥22॥
ಮೂಲಮ್ - 23
ತತಃ ಕಾಂಚನಶೈಲಾಭೋ ಗವಯೋ ನಾಮ ಯೂಥಪಃ ।
ಆಜಗಾಮ ಮಹಾವೀರ್ಯಃ ಕೋಟಿಭಿಃ ಪಂಚಭಿರ್ವೃತಃ ॥
ಅನುವಾದ
ಅನಂತರ ಯೂಥಪತಿ ಗವಯನು ಸುವರ್ಣಮಯ ಮೇರುಪರ್ವತದಂತೆ ಕಾಂತಿಯುಕ್ತ, ಮಹಾ ಪರಾಕ್ರಮಿಯಾಗಿದ್ದನು; ಐದುಕೋಟಿ ವಾನರರೊಂದಿಗೆ ಬಂದಿದ್ದನು.॥23॥
ಮೂಲಮ್ - 24
ದಧೀಮುಖಶ್ಚ ಬಲವಾನ್ ಯೂಥಪೋಽಭ್ಯಾಯಯೌ ತದಾ ।
ವೃತಃ ಕೋಟಿಸಹಸ್ರೇಣ ಸುಗ್ರೀವಂ ಸಮುಪಸ್ಥಿತಃ ॥
ಅನುವಾದ
ಅದೇ ಸಮಯ ವಾನರರ ಬಲವಂತ ಯೂಥಪತಿ ದಧಿಮುಖನೂ, ಹತ್ತುಸಾವಿರ ಕೋಟಿ ವಾನರರೊಂದಿಗೆ ಸುಗ್ರೀವನ ಸೇವೆಯಲ್ಲಿ ಉಪಸ್ಥಿತನಾದನು.॥24॥
ಮೂಲಮ್ - 25
ಮೈಂದಶ್ಚ ದ್ವಿವಿದಶ್ಚೋಭಾವಶ್ವಿಪುತ್ರೌ ಮಹಾಬಲೌ ।
ಕೋಟಿಕೋಟಿಸಹಸ್ರೇಣ ವಾನರಾಣಾಮದೃಶ್ಯತಾಮ್ ॥
ಅನುವಾದ
ಅಶ್ವಿನೀ ಕುಮಾರರ ಪುತ್ರರಾದ ಮಹಾಬಲಿ ಮೈಂದ-ದ್ವಿವಿದರೆಂಬ ಸಹೋದರರಲ್ಲಿ ಪ್ರತಿಯೊಬ್ಬನು ಹತ್ತು ಸಾವಿರ ಕೋಟಿ ವಾನರರೊಂದಿಗೆ ಅಲ್ಲಿ ಕಾಣಿಸಿಕೊಂಡರು.॥25॥
ಮೂಲಮ್ - 26
ಗಜಶ್ಚ ಬಲವಾನ್ವೀರಸ್ತಿಸೃಭಿಃ ಕೋಟಿಭಿರ್ವೃತಃ ।
ಆಜಗಾಮ ಮಹಾತೇಜಾಃ ಸುಗ್ರೀವಸ್ಯ ಸಮೀಪತಃ ॥
ಅನುವಾದ
ಬಳಿಕ ಮಹಾ ತೇಜಸ್ವೀ, ಬಲಿಷ್ಠ ವೀರ ಗಜನು ಮೂರುಕೋಟಿ ವಾನರರೊಂದಿಗೆ ಸುಗ್ರೀವನ ಬಳಿಗೆ ಬಂದನು.॥26॥
ಮೂಲಮ್ - 27
ಋಕ್ಷರಾಜೋ ಮಹಾತೇಜಾ ಜಾಂಬವಾನ್ನಾಮ ನಾಮತಃ ।
ಕೋಟಿಭಿರ್ದಶಭಿರ್ವ್ಯಾಪ್ತಃ ಸುಗ್ರೀವಸ್ಯ ವಶೇ ಸ್ಥಿತಃ ॥
ಅನುವಾದ
ಕರಡಿಗಳ ರಾಜನಾದ ಜಾಂಬವಂತನು ಬಹಳ ತೇಜಸ್ವಿಯಾಗಿದ್ದನು. ಅವನು ಹತ್ತು ಕೋಟಿ ಕರಡಿಗಳಿಂದ ಸುತ್ತುವರೆದು ಬಂದು, ಸುಗ್ರೀವನಿಗೆ ಅಧೀನನಾಗಿ ನಿಂತುಕೊಂಡನು.॥27॥
ಮೂಲಮ್ - 28
ರುಮಣೋನಾಮತೇಜಸ್ವೀ ವಿಕ್ರಾಂತೈರ್ವಾನರೈರ್ವೃತಃ ।
ಆಗತೋ ಬಲವಾಂಸ್ತೂರ್ಣಂ ಕೋಟೀಶತಸಮಾವೃತಃ ॥
ಅನುವಾದ
ರುಮಣ್ವಂತ ಎಂಬ ತೇಜಸ್ವೀ ಮತ್ತು ಬಲಿಷ್ಠ ವಾನರನು ಒಂದು ಸಾವಿರ ಕೋಟಿ ಪರಾಕ್ರಮಿ ವಾನರರನ್ನು ಕರೆದುಕೊಂಡು ಬಹಳ ತೀವ್ರಗತಿಯಿಂದ ಅಲ್ಲಿಗೆ ಬಂದನು.॥28॥
ಮೂಲಮ್ - 29
ತತಃ ಕೋಟೀ ಸಹಸ್ರಾಣಾಂ ಸಹಸ್ರೇಣ ಶತೇನ ಚ ।
ಪೃಷ್ಠಿತೋಽನುಗತಃ ಪ್ರಾಪ್ತೋ ಹರಿಭಿರ್ಗಂಧಮಾದನಃ ॥
ಅನುವಾದ
ಬಳಿಕ ಯೂಥಪತಿ ಗಂಧಮಾದನನು ಒಂದುಪದ್ಮ ವಾನರ ಸೈನ್ಯದೊಂದಿಗೆ ಅಲ್ಲಿ ಉಪಸ್ಥಿತನಾದನು.॥29॥
ಮೂಲಮ್ - 30
ತತಃ ಪದ್ಮಸಹಸ್ರೇಣ ವೃತಃ ಶಂಕುಶತೇನ ಚ ।
ಯುವರಾಜೋಂಽಗದಃ ಪ್ರಾಪ್ತಃ ಪಿತೃತುಲ್ಯಪರಾಕ್ರಮಃ ॥
ಅನುವಾದ
ಅನಂತರ ಯುವರಾಜ ಅಂಗದನು ಬಂದನು. ಅವನು ತಂದೆಯಂತೆಯೇ ಪರಾಕ್ರಮಿಯಾಗಿದ್ದನು. ಇವನೊಂದಿಗೆ ಒಂದು ಸಾವಿರ ಪದ್ಮ ಮತ್ತು ನೂರು ಶಂಕು ವಾನರರ ಸೈನ್ಯವಿತ್ತು. (ಈ ಸೈನ್ಯ ಒಟ್ಟಿಗೆ ಹತ್ತು ಶಂಖ ಒಂದು ಪದ್ಮವಾಗಿತ್ತು.॥30॥
ಮೂಲಮ್ - 31
ತತಸ್ತಾರಾದ್ಯುತಿಸ್ತಾರೋ ಹರಿರ್ಭೀಮವಿಕ್ರಮೈಃ ।
ಪಂಚಭಿರ್ಹರಿಕೋಟೀಭಿರ್ದೂರತಃ ಪ್ರತ್ಯದೃಶ್ಯತ ॥
ಅನುವಾದ
ಬಳಿಕ ನಕ್ಷತ್ರದಂತೆ ಕಾಂತಿಯುಳ್ಳ ತಾರ ಎಂಬ ವಾನರನು ಐದುಕೋಟಿ ಭಯಂಕರ ಪರಾಕ್ರಮಿ ವಾನರ ವೀರರೊಂದಿಗೆ ದೂರದಿಂದ ಬರುತ್ತಿರುವುದು ಕಾಣಿಸಿತು.॥31॥
ಮೂಲಮ್ - 32
ಇಂದ್ರಜಾನುಃ ಕಪಿರ್ವೀರೋ ಯೂಥಪಃ ಪ್ರತ್ಯದೃಶ್ಯತ ।
ಏಕಾದಶಾನಾಂ ಕೋಟೀನಾಮೀಶ್ವರಸ್ತೈಶ್ಚ ಸಂವೃತಃ ॥
ಅನುವಾದ
ಇಂದ್ರ ಭಾನು ಎಂಬ ವೀರ ಯೂಥಪತಿಯು ಮಹಾ ವಿದ್ವಾಂಸ ಹಾಗೂ ಬುದ್ಧಿವಂತನಾಗಿದ್ದನು. ಅವನು ಹನ್ನೊಂದು ಕೋಟಿ ವಾನರರೊಂದಿಗೆ ಕುಳಿತಿರುವುದು ಕಾಣಿಸಿತು. ಅವನು ಅವರೆಲ್ಲರ ಒಡೆಯನಾಗಿದ್ದನು.॥32॥
ಮೂಲಮ್ - 33
ತತೋ ರಂಭಸ್ತ್ವನುಪ್ರಾಪ್ತಸ್ತರುಣಾದಿತ್ಯಸಂನಿಭಃ ।
ಅಯುತೇನ ವೃತಶ್ಚೈವ ಸಹಸ್ರೇಣ ಶತೇನ ಚ ॥
ಅನುವಾದ
ಇದಾದ ಬಳಿಕ ಪ್ರಾತಃಕಾಲದ ಸೂರ್ಯನಂತೆ ಕೆಂಪಗಾಗಿದ್ದ ರಂಭ ಎಂಬ ವಾನರನು ಹನ್ನೊಂದು ಸಾವಿರ ಒಂದು ನೂರು ವಾನರ ಸೈನ್ಯದೊಂದಿಗೆ ಆಗಮಿಸಿದ್ದನು.॥33॥
ಮೂಲಮ್ - 34
ತತೋ ಯೂಥಪತಿರ್ವೀರೋ ದುರ್ಮುಖೋ ನಾಮ ವಾನರಃ ।
ಪ್ರತ್ಯದೃಶ್ಯತ ಕೋಟಿಭ್ಯಾಂ ದ್ವಾಭ್ಯಾಂ ಪರಿವೃತೋ ಬಲೀ ॥
ಅನುವಾದ
ಅನಂತರ ವೀರ ಯೂಥಪತಿ ದುರ್ಮುಖನೆಂಬ ಬಲವಂತ ವಾನರನು ಎರಡು ಕೋಟಿ ವಾನರ ಸೈನ್ಯವನ್ನು ಕೂಡಿಕೊಂಡು ಉಪಸ್ಥಿತವಾಗಿ ರುವುದನ್ನು ಕಾಣಿಸಿದನು.॥34॥
ಮೂಲಮ್ - 35
ಕೈಲಾಸಶಿಖರಾಕಾರೈರ್ವಾನರೈರ್ಭೀಮವಿಕ್ರಮೈಃ ।
ವೃತಃ ಕೋಟಿಸಹಸ್ರೇಣ ಹನುಮಾನ್ ಪ್ರತ್ಯದೃಶ್ಯತ ॥
ಅನುವಾದ
ಬಳಿಕ ಹನುಮಂತನ ದರ್ಶನವಾಯಿತು. ಅವನ ಜೊತೆಗೆ ಕೈಲಾಸ ಶಿಖರಕ್ಕೆ ಸಮರಾದ ಶ್ವೇತಾಂಗರಾದ ಭಯಂಕರ ಪರಾಕ್ರಮಿ ಹತ್ತು ಅರಬುದ ಸಂಖ್ಯೆಯಲ್ಲಿ ವಾನರರು ಇದ್ದರು.॥35॥
ಮೂಲಮ್ - 36
ನಲಶ್ಚಾಪಿ ಮಹಾವೀರ್ಯಃ ಸಂವೃತೋ ದ್ರುಮವಾಸಿಭಿಃ ।
ಕೋಟೀಶತೇನ ಸಂಪ್ರಾಪ್ತಃ ಸಹಸ್ರೇಣ ಶತೇನ ಚ ॥
ಅನುವಾದ
ಮತ್ತೆ ಮಹಾಪರಾಕ್ರಮಿ ನಳನು ಒಂದು ಅರಬುದ ಒಂದು ಸಾವಿರ ಒಂದು ನೂರು ಮರಗಳಲ್ಲಿ ವಾಸಿಸುವ ವಾನರರೊಂದಿಗೆ ಪರಿವೃತನಾಗಿ ಬಂದನು.॥36॥
ಮೂಲಮ್ - 37
ತತೋ ದಧಿಮುಖಃ ಶ್ರೀಮನ್ ಕೋಟಿಭಿರ್ದಶಭಿರ್ವೃತಃ ।
ಸಂಪ್ರಾಪ್ತೋಽಭಿನದಂಸ್ತಸ್ಯ ಸುಗ್ರೀವಸ್ಯ ಮಹಾತ್ಮನಃ ॥
ಅನುವಾದ
ಅನಂತರ ಶ್ರೀಮಾನ್ ದಧಿಮುಖನು ಹತ್ತುಕೋಟಿ ವಾನರರೊಂದಿಗೆ ಗರ್ಜಿಸುತ್ತಾ ಕಿಷ್ಕಿಂಧೆಯಲ್ಲಿ ಮಹಾತ್ಮನಾದ ಸುಗ್ರೀವನ ಬಳಿಗೆ ಬಂದನು.॥37॥
ಮೂಲಮ್ - 38
ಶರಭಃ ಕುಮುದೋ ವಹ್ನಿರ್ವಾನರೋ ರಂಹ ಏವ ಚ ।
ಏತೇ ಚಾನ್ಯೇ ಚ ಬಹವೋ ವಾನರಾಃ ಕಾಮರೂಪಿಣಃ ॥
ಮೂಲಮ್ - 39
ಆವೃತ್ಯ ಪೃಥಿವೀಂ ಸರ್ವಾಂ ಪರ್ವತಾಂಶ್ಚ ವನಾನಿ ಚ ।
ಯೂಥಪಾಃ ಸಮನುಪ್ರಾಪ್ತಾಯೇಷಾಂ ಸಂಖ್ಯಾ ನ ವಿದ್ಯತೇ ॥
ಅನುವಾದ
ಇವರಲ್ಲದೆ ಶರಭ, ಕುಮುದ, ವಹ್ನಿ, ರಂಹ ಇವರು ಹಾಗೂ ಇತರ ಅನೇಕ ಇಚ್ಛಾನುಸಾರ ರೂಪವನ್ನು ಧರಿಸುವ ವಾನರ ಯೂಧಪತಿಗಳು ಇಡೀ ಪೃಥಿವೀ, ಪರ್ವತ, ವನಗಳನ್ನು ಆವರಿಸಿ ಅಲ್ಲಿ ಉಪಸ್ಥಿತರಾದರು. ಅವರ ಗಣನೆ ಯಾರೂ ಮಾಡಲಾರರು.॥38-39॥
ಮೂಲಮ್ - 40
ಆಗತಾಶ್ಚ ವಿಶಿಷ್ಟಾಶ್ಚ ಪೃಥಿವ್ಯಾಂ ಸರ್ವವಾನರಾಃ ।
ಆಪ್ಲವಂತಃ ಪ್ಲವಂತಶ್ಚ ಗರ್ಜಂತಶ್ಚ ಪ್ಲವಂಗಮಾಃ ।
ಅಭ್ಯವರ್ತಂತ ಸುಗ್ರೀವಂ ಸೂರ್ಯಮಭ್ರಗಣಾ ಇವ ॥
ಅನುವಾದ
ಅಲ್ಲಿಗೆ ಬಂದಿರುವ ವಾನರರೆಲ್ಲರೂ ನೆಲದಲ್ಲಿ ಕುಳಿತರು. ಅವರೆಲ್ಲರೂ ಕುಣಿಯುತ್ತಾ, ನೆಗೆಯುತ್ತಾ, ಗರ್ಜಿಸುತ್ತಾ ಸುಗ್ರೀವನ ಸುತ್ತಲೂ ಸೂರ್ಯನನ್ನು ಎಲ್ಲೆಡೆಗಳಿಂದ ಮರೆಮಾಡಿದ ಮೇಘಗಳಂತೆ ಜಮಾಯಿಸಿದರು.॥40॥
ಮೂಲಮ್ - 41
ಕುರ್ವಾಣಾ ಬಹುಶಬ್ದಾಂಶ್ಚ ಪ್ರಕೃಷ್ಟಾ ಬಾಹುಶಾಲಿನಃ ।
ಶಿರೋಭಿರ್ವಾನರೇಂದ್ರಾಯ ಸುಗ್ರೀವಾಯ ನ್ಯವೇದಯನ್ ॥
ಅನುವಾದ
ಶೋಭಾಯಮಾನ ತೋಳುಗಳನ್ನು ಹೊಂದಿದ್ದ, ಪರಮ ಸಂತುಷ್ಟರಾಗಿದ್ದ ವಾನರರು ಬಹಳ ಕೋಲಾಹಲ ಮಾಡುತ್ತಾ ವಾನರೇಂದ್ರ ಸುಗ್ರೀವನಿಗೆ ದೂರದಿಂದಲೇ ತಲೆಬಾಗಿ ನಮಸ್ಕಾರ ಮಾಡುವುದರ ಮೂಲಕ ತಮ್ಮ ಆಗಮನವನ್ನು ತಿಳಿಯಪಡಿಸಿದರು.॥41॥
ಮೂಲಮ್ - 42
ಅಪರೇ ವಾನರಶ್ರೇಷ್ಠಾಃ ಸಂಗಮ್ಯ ಚ ಯಥೋಚಿತಮ್ ।
ಸುಗ್ರೀವೇಣ ಸಮಾಗಮ್ಯ ಸ್ಥಿತಾಃ ಪ್ರಾಂಜಲಯಸ್ತದಾ ॥
ಅನುವಾದ
ಅನೇಕ ಶ್ರೇಷ್ಠ ವಾನರರು ಅವನ ಬಳಿಗೆ ಹೋಗಿ ಯಥೋಚಿತವಾಗಿ ಭೆಟ್ಟಿಯಾಗಿ ಮರಳಿದರು ಹಾಗೂ ಎಷ್ಟೋ ವಾನರರು ಸುಗ್ರೀವನಿಗೆ ಭೆಟ್ಟಿಯಾಗಿ ಅವನ ಬಳಿಯಲ್ಲೇ ಕೈಮುಗಿದು ಕೊಂಡು ನಿಂತುಕೊಂಡರು.॥42॥
ಮೂಲಮ್ - 43
ಸುಗ್ರೀವಸ್ತ್ವರಿತೋ ರಾಮೇ ಸರ್ವಾಂಸ್ತಾನ್ ವಾನರರ್ಷಭಾನ್ ।
ನಿವೇದಯಿತ್ವಾ ಧರ್ಮಜ್ಞಃ ಸ್ಥಿತಃ ಪ್ರಾಂಜಲಿರಬ್ರವೀತ್ ॥
ಅನುವಾದ
ಧರ್ಮದ ಜ್ಞಾತಾ ವಾನರ ರಾಜಾ ಸುಗ್ರೀವನು ಅಲ್ಲಿಗೆ ಬಂದಿರುವ ಎಲ್ಲ ವಾನರ ಶ್ರೇಷ್ಠರ ಸಮಾಚಾರ ಕೇಳಿ ಶ್ರೀರಾಮಚಂದ್ರನಿಗೆ ಅವಸರವಾಗಿ ಅವರ ಪರಿಚಯ ಮಾಡಿಸಿ, ಮತ್ತೆ ಕೈಮುಗಿದುಕೊಂಡು ಅವನ ಎದುರಿಗೆ ನಿಂತುಕೊಂಡನು.॥43॥
ಮೂಲಮ್ - 44
ಯಥಾಸುಖಂ ಪರ್ವತನಿರ್ಝರೇಷು
ವನೇಷು ಸರ್ವೇಷು ಚ ವಾನರೇಂದ್ರಾಃ ।
ನಿವೇಶಯಿತ್ವಾ ವಿಧಿವದ್ ಬಲಾನಿ
ಬಲಂ ಬಲಜ್ಞಃ ಪ್ರತಿಪತ್ತುಮೀಷ್ಟೇ ॥
ಅನುವಾದ
ಆ ವಾನರ ಯೂಥಪತಿಗಳು ಅಲ್ಲಿಯ ಪರ್ವತೀಯ ಝರಿಗಳ ಅಕ್ಕ-ಪಕ್ಕ ಹಾಗೂ ಸಮಸ್ತ ವನಗಳಲ್ಲಿ ತಮ್ಮ ಸೈನ್ಯದೊಂದಿಗೆ ಸುಖವಾಗಿ ಬಿಡಾರಬಿಟ್ಟರು. ಅನಂತರ ಎಲ್ಲ ಸೈನ್ಯಗಳನ್ನು ಬಲ್ಲ ಸುಗ್ರೀವನು ಅವರ ಪೂರ್ಣಜ್ಞಾನ ಪಡೆಯಲು ಸಮರ್ಥನಾದನು.॥44॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೂವತ್ತೊಂಭತ್ತನೆಯ ಸರ್ಗ ಸಂಪೂರ್ಣವಾಯಿತು.॥39॥