०३८ राम-सुग्रीवसंवादः

वाचनम्
ಭಾಗಸೂಚನಾ

ಲಕ್ಷ್ಮಣ ಸಹಿತ ಸುಗ್ರೀವನು ಶ್ರೀರಾಮನ ಬಳಿಗೆ ಬಂದು ಅವನ ಚರಣಗಳಲ್ಲಿ ವಂದಿಸಿದುದು, ಶ್ರೀರಾಮನು ಅವನ್ನು ಸಮಜಾಯಿಸಿದುದು, ತಾನು ಮಾಡಿದ ಸೈನ್ಯಸಂಗ್ರಹದ ಉದ್ಯೋಗವನ್ನು ಸುಗ್ರೀವನು ತಿಳಿಸಿದುದು, ಅದನ್ನು ಕೇಳಿ ಶ್ರೀರಾಮನಿಗೆ ಬಹಳ ಸಂತೋಷವಾದುದು

ಮೂಲಮ್ - 1

ಪ್ರತಿಗೃಹ್ಯ ಚ ತತ್ಸರ್ವಮುಪಾಯನಮುಪಾಹೃತಮ್ ।
ವಾನರಾನ್ ಸಾಂತ್ವಯಿತ್ವಾ ಚ ಸರ್ವಾನೇವ ವ್ಯಸರ್ಜಯತ್ ॥

ಅನುವಾದ

ಸುಗ್ರೀವನು ಕಪಿನಾಯಕರು ತಂದಿತ್ತ ಕಾಣಿಕೆಗಳನ್ನು ಸ್ವೀಕರಿಸಿ, ಅವರನ್ನು ಸವಿಮಾತುಗಳಿಂದ ಸಂತೈಸಿ ಬಿಳ್ಕೊಟ್ಟನು.॥1॥

ಮೂಲಮ್ - 2

ವಿಸರ್ಜಯಿತ್ವಾ ಸ ಹರೀನ್ ಸಹಸ್ರಾನ್ ಕೃತಕರ್ಮಣಃ ।
ಮೇನೇ ಕೃತಾರ್ಥಮಾತ್ಮಾನಂ ರಾಘವಂ ಚ ಮಹಾಬಲಮ್ ॥

ಅನುವಾದ

ಕಾರ್ಯ ಪೂರ್ಣಗೊಳಿಸಿ ಮರಳಿದ ಆ ಸಾವಿರಾರು ವಾನರರನ್ನು ಕಳಿಸಿಕೊಟ್ಟು ತನ್ನನ್ನು ಕೃತಾರ್ಥನೆಂದು ಅರಿತು, ಮಹಾಬಲಿ ಶ್ರೀರಘುನಾಥನ ಕಾರ್ಯ ಸಿದ್ಧವಾಯಿತೆಂದೇ ತಿಳಿದನು.॥2॥

ಮೂಲಮ್ - 3

ಸ ಲಕ್ಷ್ಮಣೋ ಭೀಮಬಲಂ ಸರ್ವವಾನರಸತ್ತಮಮ್ ।
ಅಬ್ರವೀತ್ ಶ್ರಿತಂ ವಾಕ್ಯಂ ಸುಗ್ರೀವಂ ಸಂಪ್ರಹರ್ಷಯನ್ ॥

ಅನುವಾದ

ಅನಂತರ ಲಕ್ಷ್ಮಣನು ಸಮಸ್ತ ವಾನರರಲ್ಲಿ ಶ್ರೇಷ್ಠನಾದ ಭಯಂಕರ ಶಕ್ತಿಶಾಲಿ ಸುಗ್ರೀವನ ಹರ್ಷವನ್ನು ಹೆಚ್ಚಿಸುತ್ತಾ ಅವನಲ್ಲಿ ಹೀಗೆ ವಿನೀತ ಮಾತನ್ನು ಹೇಳಿದನ.॥3॥

ಮೂಲಮ್ - 4½

ಕಿಷ್ಕಿಂಧಾಯಾ ವಿನಿಷ್ಕ್ರಾಮ ಯದಿ ತೇ ಸೌಮ್ಯ ರೋಚತೇ ।
ತಸ್ಯ ತದ್ವಚನಂ ಶ್ರುತ್ವಾ ಲಕ್ಷ್ಮಣಸ್ಯ ಸುಭಾಷಿತಮ್ ॥
ಸುಗ್ರೀವಃ ಪರಮಪ್ರೀತೋ ವಾಕ್ಯಮೇತದುವಾಚ ಹ ।

ಅನುವಾದ

ಸೌಮ್ಯನೇ! ನಿನಗೆ ರುಚಿಸಿದರೆ ಈಗ ಕಿಷ್ಕಿಂಧೆಯಿಂದ ಹೊರಡು. ಲಕ್ಷ್ಮಣನ ಈ ಸುಂದರ ಮಾತನ್ನು ಕೇಳಿ ಸುಗ್ರೀವನು ಅತ್ಯಂತ ಪ್ರಸನ್ನನಾಗಿ ಇಂತೆಂದನು .॥4॥

ಮೂಲಮ್ - 5

ಏವಂ ಭವತು ಗಚ್ಛಾಮ ಸ್ಥೇಯಂ ತ್ವಚ್ಛಾಸನೇ ಮಯಾ ॥

ಮೂಲಮ್ - 6

ತಮೇವಮುಕ್ತ್ವಾ ಸುಗ್ರೀವೋ ಲಕ್ಷ್ಮಣಂ ಶುಭಲಕ್ಷ್ಮಣಮ್ ।
ವಿಸರ್ಜಯಾಮಾಸ ತದಾ ತಾರಾದ್ಯಾಶ್ಚೈವ ಯೋಷಿತಃ ॥

ಅನುವಾದ

ಹಾಗೆಯೇ ಆಗಲಿ, ನಡೆಯಿರಿ. ನಾನಾದರೋ ನಿಮ್ಮ ಆಜ್ಞೆಯನ್ನು ಪಾಲಿಸುವವನೇ. ಶುಭಲಕ್ಷಣನಾದ ಲಕ್ಷ್ಮಣನಲ್ಲಿ ಹೀಗೆ ಹೇಳಿ ಸುಗ್ರೀವನು ತಾರೆಯೇ ಮೊದಲಾದ ಎಲ್ಲ ಸ್ತ್ರೀಯರನ್ನು ಬೀಳ್ಕೊಟ್ಟನು.॥5-6॥

ಮೂಲಮ್ - 7½

ಏಹೀತ್ಯುಚ್ಚೈರ್ಹರಿವರಾನ್ ಸುಗ್ರೀವಃ ಸಮುದಾಹರತ್ ।
ತಸ್ಯ ತದ್ವಚನಂ ಶ್ರುತ್ವಾ ಹರಯಃ ಶೀಘ್ರಮಾಯಯುಃ ॥
ಬದ್ಧಾಂಜಲಿಪುಟಾಃ ಸರ್ವೇ ಯೇ ಸ್ಯುಃ ಸ್ತ್ರೀದರ್ಶನಕ್ಷಮಾಃ ।

ಅನುವಾದ

ಬಳಿಕ ಸುಗ್ರೀವನು ಉಳಿದ ವಾನರರಿಗೆ ಬನ್ನಿ, ಬನ್ನಿ! ಎಂದು ಗಟ್ಟಿಯಾಗಿ ಕರೆದನು. ಅವನ ಆ ಕರೆಯನ್ನು ಕೇಳಿ ಅಂತಃಪುರದ ಸ್ತ್ರೀಯರನ್ನು ನೋಡುವ ಅಧಿಕಾರಿಗಳಾಗಿದ್ದ ಆ ಎಲ್ಲ ವಾನರರು ಕೈಮುಗಿದುಕೊಂಡು ಕೂಡಲೇ ಅವನ ಬಳಿಗೆ ಬಂದರು.॥7॥

ಮೂಲಮ್ - 8½

ತಾನುವಾಚ ತತಃ ಪ್ರಾಪ್ತಾನ್ರಾಜಾರ್ಕಸದೃಶಪ್ರಭಃ ॥
ಉಪಸ್ಥಾಪಯತ ಕ್ಷಿಪ್ರಂ ಶಿಬಿಕಾಂ ಮಮ ವಾನರಾಃ ।

ಅನುವಾದ

ಬಳಿಗೆ ಬಂದಿರುವ ಆ ವಾನರರಲ್ಲಿ ಸೂರ್ಯನಂತೆ ತೇಜಸ್ವೀ ಸುಗ್ರೀವನು ಹೇಳಿದನು - ವಾನರರೇ! ನೀವು ಬೇಗನೇ ನನ್ನ ಪಲ್ಲಕ್ಕಿಯನ್ನು ತೆಗೆದುಕೊಂಡು ಬನ್ನಿ.॥8॥

ಮೂಲಮ್ - 9½

ಶ್ರುತ್ವಾ ತು ವಚನಂ ತಸ್ಯ ಹರಯಃ ಶೀಘ್ರವಿಕ್ರಮಾಃ ॥
ಸಮುಪಸ್ಥಾಪಯಾಮಾಸುಃ ಶಿಬಿಕಾಂ ಪ್ರಿಯದರ್ಶನಾಮ್ ।

ಅನುವಾದ

ಅವನ ಮಾತನ್ನು ಕೇಳಿ ಶೀಘ್ರಗಾಮಿ ವಾನರರು ಒಂದು ಸುಂದರವಾದ ಪಲ್ಲಕ್ಕಿಯನ್ನು ಅಲ್ಲಿ ತಂದಿಟ್ಟರು.॥9½॥

ಮೂಲಮ್ - 10½

ತಾಮುಪಸ್ಥಾಪಿತಾಂ ದೃಷ್ಟ್ವಾ ಶಿಬಿಕಾಂ ವಾನರಾಧಿಪಃ ॥
ಲಕ್ಷ್ಮಣಾರುಹ್ಯತಾಂ ಶೀಘ್ರಮಿತಿ ಸೌಮಿತ್ರಿಮಬ್ರವೀತ್ ।

ಅನುವಾದ

ಪಲ್ಲಕ್ಕಿಯನ್ನು ನೋಡಿ ವಾನರಾಧಿಪ ಸುಗ್ರೀವನು ಸೌಮಿತ್ರಿಯಲ್ಲಿ ಕುಮಾರ ಲಕ್ಷ್ಮಣ! ನೀನು ಬೇಗನೇ ಇದರ ಮೇಲೆ ಆರೂಢನಾಗು ಎಂದು ಹೇಳಿದನು.॥10½॥

ಮೂಲಮ್ - 11½

ಇತ್ಯುಕ್ತ್ವಾ ಕಾಂಚನಂ ಯಾನಂ ಸುಗ್ರೀವಃ ಸೂರ್ಯಸಂನಿಭಮ್॥
ಬಹುಭಿರ್ಹರಿಭಿಯುಕ್ತಮಾರುರೋಹ ಸಲಕ್ಷ್ಮಣಃ ।

ಅನುವಾದ

ಹೀಗೆ ಹೇಳಿ ಲಕ್ಷ್ಮಣ ಸಹಿತ ಸುಗ್ರೀವನು ಆ ಸೂರ್ಯನಂತೆ ಪ್ರಭೆಯುಳ್ಳ ಸುವರ್ಣ ಪಲ್ಲಕ್ಕಿಯನ್ನು ಹತ್ತಿದರು. ಅದನ್ನು ಅನೇಕ ವಾನರರು ಹೊರುತ್ತಿದ್ದರು.॥11½॥

ಮೂಲಮ್ - 12

ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ ॥

ಮೂಲಮ್ - 13½

ಶುಕ್ಲೈಶ್ಚ ವಾಲವ್ಯಜನೈರ್ಧೂಯಮಾನೈಃ ಸಮಂತತಃ ।
ಶಂಖಭೇರೀನಿನಾದೈಶ್ಚ ವಂದಿಭಿಶ್ಚಾಭಿನಂದಿತಃ ॥
ನಿರ್ಯಯೌ ಪ್ರಾಪ್ಯ ಸುಗ್ರೀವೋ ರಾಜಶ್ರಿಯಮನುತ್ತಮಾಮ್ ।

ಅನುವಾದ

ಆಗ ಸುಗ್ರೀವನ ಮೇಲೆ ಶ್ವೇತಛತ್ರ ಹಿಡಿದಿದ್ದರು, ಸುತ್ತಲು ಬಿಳಿಯ ಚಾಮರ ಬೀಸುತ್ತಿದ್ದರು. ಶಂಖ, ಭೇರಿಗಳ ಧ್ವನಿಗಳೊಂದಿಗೆ ವಂದಿಜನರ ಅಭಿನಂದನೆಯನ್ನು ಕೇಳುತ್ತಾ ರಾಜಾ ಸುಗ್ರೀವನು ಪರಮೋತ್ತಮ ರಾಜ್ಯಲಕ್ಷ್ಮಿಯನ್ನು ಪಡೆದು ಕಿಷ್ಕಿಂಧೆಯಿಂದ ಹೊರಗೆ ಹೊರಟನು.॥12-13½॥

ಮೂಲಮ್ - 14½

ಸ ವಾನರಶತೈಸ್ತೀಕ್ಷ್ಣೈರ್ಬಹುಭಿಃ ಶಸ್ತ್ರಪಾಣಿಭಿಃ ॥
ಪರಿಕೀರ್ಣೋ ಯಯೌ ತತ್ರ ಯತ್ರ ರಾಮೋ ವ್ಯವಸ್ಥಿತಃ ।

ಅನುವಾದ

ಶಸ್ತ್ರಧಾರಿಗಳಾದ ತೀಕ್ಷ್ಣ ಸ್ವಭಾವವುಳ್ಳ ನೂರಾರು ವಾನರರಿಂದ ಸುತ್ತುವರೆದು ರಾಜಾ ಸುಗ್ರೀವನು ಭಗವಾನ್ ಶ್ರೀರಾಮನು ವಾಸಿಸುತ್ತಿದ್ದಲ್ಲಿಗೆ ಹೊರಟನು.॥14½॥

ಮೂಲಮ್ - 15

ಸ ತಂ ದೇಶಮನುಪ್ರಾಪ್ಯ ಶ್ರೇಷ್ಠಂ ರಾಮನಿಷೇವಿತಮ್ ॥

ಮೂಲಮ್ - 16

ಅವಾತರನ್ಮಹಾತೇಜಾಃ ಶಿಬಿಕಾಯಾಃ ಸಲಕ್ಷ್ಮಣಃ ।
ಆಸಾದ್ಯ ಚ ತತೋ ರಾಮಂ ಕೃತಾಂಜಲಿ ಪುಟೋಽಭವತ್ ॥

ಅನುವಾದ

ಶ್ರೀರಾಮನಿಂದ ಸೇವಿತವಾದ ಆ ಸ್ಥಾನಕ್ಕೆ ತಲುಪಿ ಲಕ್ಷ್ಮಣ ಸಹಿತ ಮಹಾ ತೇಜಸ್ವೀ ಸುಗ್ರೀವನು ಪಲ್ಲಕ್ಕಿಯಿಂದ ಇಳಿದು ಶ್ರೀರಾಮಚಂದ್ರನ ಬಳಿಗೆ ಹೋಗಿ ಕೈಮುಗಿದುಕೊಂಡು ನಿಂತುಕೊಂಡನು.॥15-16॥

ಮೂಲಮ್ - 17½

ಕೃತಾಂಜಲೌ ಸ್ಥಿತೇ ತಸ್ಮಿನ್ವಾನರಾಶ್ಚಾಭವಂ ಸ್ತಥಾ ।
ತಟಾಕಮಿವ ತಂ ದೃಷ್ಟ್ವಾ ರಾಮಃ ಕುಡ್ಮಲಪಂಕಜಮ್ ॥
ವಾನರಾಣಾಂ ಮಹತ್ಸೈನ್ಯಂ ಸುಗ್ರೀವೇ ಪ್ರೀತಿಮಾನಭೂತ್ ।

ಅನುವಾದ

ವಾನರರಾಜನು ಕೈಮುಗಿದು ನಿಂತುಕೊಂಡಾಗ ಅವನ ಅನುಯಾಯಿ ವಾನರರೂಗಳೂ ಅವನಂತೆ ಅಂಜಲಿಬದ್ಧರಾಗಿ ನಿಂತುಕೊಂಡರು. ಕಮಲಗಳ ಮೊಗ್ಗುಗಳು ತುಂಬಿದ ವಿಶಾಲ ಸರೋವರದಂತೆ ವಾನರರ ಆ ಭಾರೀ ದೊಡ್ಡ ಸೈನ್ಯವನ್ನು ನೋಡಿ ಶ್ರೀರಾಮಚಂದ್ರನು ಸುಗ್ರೀವನ ಮೇಲೆ ಬಹಳ ಪ್ರಸನ್ನನಾದನು.॥17½॥

ಮೂಲಮ್ - 18½

ಪಾದಯೋಃ ಪತಿತಂ ಮೂರ್ಧ್ನಾ ತಮುತ್ಥಾಪ್ಯ ಹರೀಶ್ವರಮ್ ॥
ಪ್ರೇಮ್ಣಾ ಚ ಬಹುಮಾನಾಚ್ಚ ರಾಘವಃ ಪರಿಷಸ್ವಜೇ ।

ಅನುವಾದ

ಚರಣಗಳಲ್ಲಿ ಮಸ್ತಕವನ್ನಿಟ್ಟು ವಂದಿಸುತ್ತಿದ್ದ ಸುಗ್ರೀವನನ್ನು ನೋಡಿ ಶ್ರೀರಾಮನು ಕೈಗಳಿಂದ ಎಬ್ಬಿಸಿ ಬಹಳ ಆದರದಿಂದ, ಪ್ರೇಮದೊಂದಿಗೆ ಅವನನ್ನು ಬಿಗಿದಪ್ಪಿಕೊಂಡನು.॥18½॥

ಮೂಲಮ್ - 19½

ಪರಿಷ್ವಜ್ಯ ಚ ಧರ್ಮಾತ್ಮಾ ನಿಷಿದೇತಿ ತತೋಽಬ್ರವೀತ್ ॥
ನಿಷಣ್ಣಂ ತಂ ತತೋ ದೃಷ್ಟ್ವಾ ಕ್ಷಿತೌ ರಾಮೋಽಬ್ರವೀತ್ ತತಃ ।

ಅನುವಾದ

ಅಪ್ಪಿಕೊಂಡು ಧರ್ಮಾತ್ಮಾ ಶ್ರೀರಾಮನು ಅವನಲ್ಲಿ ಹೇಳಿದನು ಕುಳಿತುಕೋ. ನೆಲದ ಮೇಲೆ ಕುಳಿತಿರುವ ಅವನನ್ನು ನೋಡಿ ಶ್ರೀರಾಮನು ನುಡಿದನು.॥19½॥

ಮೂಲಮ್ - 20

ಧರ್ಮಮರ್ಥಂ ಚ ಕಾಮಂ ಚ ಕಾಲೇ ಯಸ್ತು ನಿಷೇವತೇ ॥

ಮೂಲಮ್ - 21½

ವಿಭಜ್ಯ ಸತತಂ ವೀರ ಸ ರಾಜಾ ಹರಿಸತ್ತಮ ।
ಹಿತ್ವಾ ಧರ್ಮಂ ತಥಾರ್ಥಂ ಚ ಕಾಮಂ ಯಸ್ತು ನಿಷೇವತೇ ॥
ಸ ವೃಕ್ಷಾಗ್ರೇ ಯಥಾ ಸುಪ್ತಃ ಪತಿತಃ ಪ್ರತಿಬುಧ್ಯತೇ ।

ಅನುವಾದ

ವೀರನೇ! ವಾನರ ಶಿರೋಮಣಿಯೇ! ಧರ್ಮ, ಅರ್ಥ, ಕಾಮಕ್ಕಾಗಿ ಸಮಯವನ್ನು ವಿಭಾಗಿಸಿ, ಸದಾ ಉಚಿತ ಸಮಯದಲ್ಲಿ ಅವನ್ನು ನ್ಯಾಯಯುಕ್ತ ಸೇವಿಸುವವನೇ ಶ್ರೇಷ್ಠರಾಜನಾಗಿದ್ದಾನೆ. ಆದರೆ ಧರ್ಮ-ಅರ್ಥವನ್ನು ತ್ಯಜಿಸಿ ಕೇವಲ ಕಾಮವನ್ನೇ ಸೇವಿಸುವವನು ವೃಕ್ಷದ ಕೊಂಬೆಯ ಮೇಲೆ ಮಲಗಿದ ಮನುಷ್ಯನಂತೆ ಆಗಿದ್ದಾನೆ. ಬಿದ್ದ ಮೇಲೆಯೇ ಅವನಿಗೆ ಎಚ್ಚರವಾಗುತ್ತದೆ.॥20-21½॥

ಮೂಲಮ್ - 22½

ಅಮಿತ್ರಾಣಾಂ ವಧೇ ಯುಕ್ತೋ ಮಿತ್ರಾಣಾಂ ಸಂಗ್ರಹೇ ರತಃ ॥
ತ್ರಿವರ್ಗಫಲಭೋಕ್ತಾ ಚ ರಾಜಾ ಧರ್ಮೇಣ ಯುಜ್ಯತೇ ।

ಅನುವಾದ

ಶತ್ರುಗಳ ವಧೆ ಮತ್ತು ಮಿತ್ರರ ಸಂಗ್ರಹದಲ್ಲಿ ಮುಳುಗಿದ್ದು, ಯೋಗ್ಯ ಸಮಯದಲ್ಲಿ ಧರ್ಮ, ಅರ್ಥ, ಕಾಮಗಳನ್ನು ನ್ಯಾಯಯುಕ್ತವಾಗಿ ಸೇವಿಸುವ ರಾಜನೇ ಆ ಧರ್ಮದ ಫಲಕ್ಕೆ ಭಾಗಿಯಾಗುತ್ತಾನೆ.॥22½॥

ಮೂಲಮ್ - 23½

ಉದ್ಯೋಗಸಮಯಸ್ತ್ವೇಷ ಪ್ರಾಪ್ತಃ ಶತ್ರುನಿಷೂದನ ।
ಸಂಚಿಂತ್ಯತಾಂ ಹಿ ಪಿಂಗೇಶ ಹರಿಭಿಃ ಸಹ ಮಂತ್ರಿಭಿಃ ॥

ಅನುವಾದ

ಶತ್ರುಸೂದನ! ಈಗ ನಮಗೆ ಉದ್ಯೋಗದ ಸಮಯ ಬಂದಿದೆ. ವಾನರರಾಜನೇ! ನೀನು ಈ ವಿಷಯದಲ್ಲಿ ವಾನರರ ಮತ್ತು ಮಂತ್ರಿಗಳ ಜೊತೆಯಲ್ಲಿ ವಿಚಾರ ವಿನಿಮಯ ಮಾಡು.॥23½॥

ಮೂಲಮ್ - 24

ಏವಮುಕ್ತಸ್ತು ಸುಗ್ರೀವೋ ರಾಮಂ ವಜನಮಬ್ರವೀತ್ ॥

ಮೂಲಮ್ - 25

ಪ್ರಣಷ್ಟಾ ಶ್ರೀಶ್ಚಕೀರ್ತಿಶ್ಚ ಕಪಿರಾಜ್ಯಂ ಚ ಶಾಶ್ವತಮ್ ।
ತ್ವತ್ಪ್ರಸಾದಾನ್ಮಹಾಬಾಹೋ ಪುನಃ ಪ್ರಾಪ್ತಮಿದಂ ಮಯಾ ॥

ಅನುವಾದ

ಶ್ರೀರಾಮನು ಹೀಗೆ ಹೇಳಿದಾಗ ಸುಗ್ರೀವನು ಅವನಲ್ಲಿ ಹೇಳಿದು-ಮಹಾಬಾಹೋ! ನನ್ನ ಶ್ರೀ,ಕೀರ್ತಿ, ಹಿಂದಿನಿಂದಲೂ ಬಂದ ರಾಜ್ಯ - ಇವೆಲ್ಲವೂ ನಾಶವಾಗಿತ್ತು. ನಿನ್ನ ಕೃಪೆಯಿಂದಲೇ ನನಗೆ ಪುನಃ ಇವೆಲ್ಲದರ ಪ್ರಾಪ್ತಿಯಾಯಿತು.॥24-25॥

ಮೂಲಮ್ - 26

ತವ ದೇವ ಪ್ರಸಾದಾಚ್ಚ ಭ್ರಾತುಶ್ಚ ಜಯತಾಂ ವರ ।
ಕೃತಂ ನ ಪ್ರತಿಕುರ್ಯಾದ್ಯಃ ಪುರುಷಾಣಾಂ ಸ ದೂಷಕಃ ॥

ಅನುವಾದ

ವಿಜಯೀ ವೀರರಲ್ಲಿ ಶ್ರೇಷ್ಠದೇವನೇ! ನಿನ್ನ ಮತ್ತು ನಿನ್ನ ತಮ್ಮನ ಕೃಪೆಯಿಂದಲೇ ನಾನು ಪುನಃ ವಾನರರ ರಾಜ್ಯದಲ್ಲಿ ಪ್ರತಿಷ್ಠಿತನಾಗಿದ್ದೇನೆ. ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರ ಮಾಡದ ಪುರುಷನನ್ನು ಧರ್ಮವನ್ನು ಕಲಂಕಿತ ಮಾಡುವವನೆಂದು ತಿಳಿಯಲಾಗಿದೆ.॥26॥

ಮೂಲಮ್ - 27

ಏತೇ ವಾನರಮುಖ್ಯಾಶ್ಚ ಶತಶಃ ಶತ್ರುಸೂದನ ।
ಪ್ರಾಪ್ತಾಶ್ಚಾದಯ ಬಲಿನಃ ಪೃಥಿವ್ಯಾಂ ಸರ್ವವಾನರಾನ್ ॥

ಅನುವಾದ

ಶತ್ರುಸೂದನ! ಈ ಸಾವಿರಾರು ಬಲಿಷ್ಠ ಮತ್ತು ಮುಖ್ಯ ವಾನರರು ಭೂ ಮಂಡಲದಲ್ಲಿ ಎಲ್ಲ ಬಲಶಾಲಿ ವಾನರರನ್ನು ಜೊತೆಗೆ ಕರೆದುಕೊಂಡು ಬಲ್ಲಿಗೆ ಬಂದಿರುವರು.॥27॥

ಮೂಲಮ್ - 28

ಋಕ್ಷಾಶ್ಚ ವಾನರಾಃ ಶೂರಾ ಗೋಲಾಂಗೂಲಾಶ್ಚ ರಾಘವ ।
ಕಾನ್ತಾರವನದುರ್ಗಾಣಾಮಭಿಜ್ಞಾ ಘೋರದರ್ಶನಾಃ ॥

ಅನುವಾದ

ರಘುನಂದನ! ಇವರಲ್ಲಿ ಕರಡಿಗಳಿದ್ದಾರೆ, ವಾನರರು ಇದ್ದಾರೆ ಮತ್ತು ಶೌರ್ಯಸಂಪನ್ನ ಗೋಲಾಂಗೂಲರೂ (ಕಪ್ಪುಮುಖದ ವಾನರರು) ಇದ್ದಾರೆ. ಇವರೆಲ್ಲರೂ ನೋಡಲು ಭಯಂಕರವಾಗಿದ್ದು, ನಿಬಿಡವನ ಮತ್ತು ದುರ್ಗಮ ಸ್ಥಾನಗಳನ್ನು ಬಲ್ಲವರು.॥28॥

ಮೂಲಮ್ - 29

ದೇವಗಂಧರ್ವಪುತ್ರಾಶ್ಚ ವಾನರಾಃ ಕಾಮರೂಪಿಣಃ ।
ಸ್ವೈಃ ಸ್ವೈಃ ಪರಿವೃತಾಃ ಸೈನ್ಯೈರ್ವರ್ತಂತೇ ಪಥಿ ರಾಘವ ॥

ಅನುವಾದ

ರಘುನಾಥನೇ! ಇವರು ದೇವತೆಗಳ ಮತ್ತು ಗಂಧರ್ವರ ಪುತ್ರರಾಗಿದ್ದಾರೆ. ಇಚ್ಛಾನುಸಾರರೂಪ ಧರಿಸಲು ಸಮರ್ಥರಾದ ಈ ಶ್ರೇಷ್ಠವಾನರರು ತಮ್ಮ ಸೈನ್ಯಗಳೊಂದಿಗೆ ಹೊರಟಿರುವರು ಹಾಗೂ ಈಗ ಮಾರ್ಗದಲ್ಲಿ ಇರುವರು.॥29॥

ಮೂಲಮ್ - 30

ಶತೈಃ ಶತಸಹಸ್ರೈಶ್ಚ ವರ್ತಂತೇ ಕೋಟಿಭಿಸ್ತಥಾ ।
ಅಯುತೈಶ್ಚಾವೃತಾ ವೀರಾಃ ಶಂಕುಭಿಶ್ಚ ಪರಂತಪ ॥

ಅನುವಾದ

ಪರಂತಪ ವೀರನೇ! ಇವರಲ್ಲಿ ಕೆಲವರ ಜೊತೆಗೆ ನೂರು, ಕೆಲವರೊಂದಿಗೆ ಲಕ್ಷ, ಕೆಲವರೊಂದಿಗೆ ಕೋಟಿ, ಕೆಲವರ ಜೊತೆಗೆ ಅಯುತ (ಹತ್ತುಸಾವಿರ), ಕೆಲವರೊಂದಿಗೆ ಒಂದು ಶಂಕುವಾನರರು ಇದ್ದಾರೆ.॥30॥

ಮೂಲಮ್ - 31

ಅರ್ಬುದೈರರ್ಬುದಶತೈರ್ಮಧ್ಯೈಶ್ಚಾಂತ್ಯೈಶ್ಚ ವಾನರಾಃ ।
ಸಮುದ್ರಾಶ್ಚ ಪರಾರ್ಧೈಶ್ಚ ಹರಯೋ ಹರಿಯೂಥಪಾಃ ॥

ಅನುವಾದ

ಎಷ್ಟೋ ವಾನರರು ಅರ್ಬುದ (ಹತ್ತುಕೋಟಿ) ನೂರು ಅರ್ಬುದ (ಹತ್ತು ಅರಬ), ಮಧ್ಯ (ಹತ್ತು ಪದ್ಮ), ಅಂತ್ಯ (ಒಂದು ಪದ್ಮ) ವಾನರ ಸೈನಿಕ ರೊಂದಿಗೆ ಬರುತ್ತಿದ್ದಾರೆ. ಎಷ್ಟೋ ವಾನರರು ಹಾಗೂ ವಾನರ ಯೂಥಪತಿಗಳ ಸಂಖ್ಯೆ ಸಮುದ್ರ (ಹತ್ತು ನೀಲ) ಹಾಗೂ ಪರಾರ್ಧ (ಶಂಖ)ದವರೆಗೆ ತಲುಪಿದೆ.॥31॥*

ಟಿಪ್ಪನೀ
  • ಇಲ್ಲಿ ಅರ್ಬುದ, ಶಂಕು, ಅಂತ್ಯ, ಮಧ್ಯ ಮೊದಲಾದ ಸಂಖ್ಯಾವಾಚಕ ಶಬ್ದಗಳ ಆಧುನಿಕ ಗಣಿತದ ಅನುಸಾರ ತಿಳಿಯಲು ಪ್ರಾಚೀನ ಸಂಜ್ಞೆಗಳ ಪೂರ್ಣರೂಪದಿಂದ ಉಲ್ಲೇಖಿಸಲಾಗಿದೆ. ಕೊಷ್ಟಕದಲ್ಲಿ ಆಧುನಿಕ ಮಾನ ಕೊಡಲಾಗುತ್ತದೆ. ಏಕ, ದಶಕ, ಶತಕ, ಸಹಸ್ರ (ಸಾವಿರ), ಆಯುತ (ಹತ್ತುಸಾವಿರ), ಲಕ್ಷ, ಪ್ರಯುತ (ಹತ್ತುಲಕ್ಷ), ಕೋಟಿ, ಅರ್ಬುದ (ಹತ್ತುಕೋಟಿ), ಅಬ್ಜ (ಅರಬ) ಖರ್ವ (ಹತ್ತು ಅರಬ), ನಿಖರ್ವ (ಖರ್ವ), ಮಹಾಪದ್ಮ (ಹತ್ತು ಖರ್ವ), ಶಂಕು (ನೀಲ), ಜಲಧಿ (ಹತ್ತುನೀಲ), ಅಂತ್ಯ (ಪದ್ಮ), ಮಧ್ಯ (ಹತ್ತುಪದ್ಮ), ಪರಾರ್ಥ (ಶಂಖ) - ಈ ಸಂಖ್ಯಾ ಸಂಬೋಧಕ ಸಂಜ್ಞೆಗಳು ಉತ್ತರೋತ್ತರ ಹತ್ತುಪಟ್ಟು ಎಂದು ತಿಳಿಯಲಾಗಿದೆ. (ನಾರದಪುರಾಣದಿಂದ)
ಮೂಲಮ್ - 32

ಆಗಮಿಷ್ಯಂತಿ ತೇ ರಾಜನ್ಮಹೇಂದ್ರಸಮವಿಕ್ರಮಾಃ ।
ಮೇಘಪರ್ವತಸಂಕಾಶಾ ಮೇರುವಿಂಧ್ಯಕೃತಾಲಯಾಃ ॥

ಅನುವಾದ

ರಾಜನೇ! ದೇವೇಂದ್ರನಂತೆ ಪರಾಕ್ರಮಿಗಳು ಹಾಗೂ ಮೇಘ, ಪರ್ವತ ಗಳಂತೆ ವಿಶಾಲಕಾಯ ವಾನರರು ವಿಂಧ್ಯಾಚಲದಲ್ಲಿ ವಾಸಿಸುವ ಇವರು ಶೀಘ್ರವಾಗಿ ಇಲ್ಲಿ ಉಪಸ್ಥಿತರಾಗುವರು.॥32॥

ಮೂಲಮ್ - 33

ತೇ ತ್ವಾಮಭಿಗಮಿಷ್ಯಂತಿ ರಾಕ್ಷಸಂ ಯೋದ್ಧುಮಾಹವೇ ।
ನಿಹತ್ಯ ರಾವಣಂ ಯುದ್ಧೇ ಹ್ಯಾನಯಿಷ್ಯಂತಿ ಮೈಥಿಲೀಮ್ ॥

ಅನುವಾದ

ಇವರು ಯುದ್ಧದಲ್ಲಿ ರಾವಣನನ್ನು ವಧಿಸಿ ಮಿಥಿಲೇಶಕುಮಾರಿ ಸೀತೆಯನ್ನು ಲಂಕೆಯಿಂದ ತಂದುಕೊಡುವರು. ಆ ಮಹಾ ಶಕ್ತಿಶಾಲಿ ವಾನರರು ಸಂಗ್ರಾಮದಲ್ಲಿ ರಾಕ್ಷಸರೊಂದಿಗೆ ಯುದ್ಧ ಮಾಡಲು ಅವಶ್ಯವಾಗಿ ನಿನ್ನ ಬಳಿಗೆ ಬರುವರು.॥33॥

ಮೂಲಮ್ - 34

ತತಃ ಮುದ್ಯೋಗಮವೇಕ್ಷ್ಯ ವೀರ್ಯವಾನ್
ಹರಿಪ್ರವೀರಸ್ಯ ನಿದೇಶವರ್ತಿನಃ ।
ಬಭೂವ ಹರ್ಷಾದ್ವಸುಧಾಧಿಪಾತ್ಮಜಃ
ಪ್ರಬುದ್ಧನೀಲೋತ್ಪಲತುಲ್ಯದರ್ಶನಃ ॥

ಅನುವಾದ

ಇದನ್ನು ಕೇಳಿ ಪರಮಪರಾಕ್ರಮಿ ರಾಜಕುಮಾರ ಶ್ರೀರಾಮನು ತನ್ನ ಆಜ್ಞೆಗನುಸಾರ ನಡೆಯುವ ವಾನರರ ಪ್ರಮುಖ ವೀರ ಸುಗ್ರೀವನ ಈ ಸೈನ್ಯ ವಿಷಯಕ ಉದ್ಯೋಗವನ್ನು ನೋಡಿ ಪ್ರಸನ್ನನಾದನು. ಅವನ ಕಣ್ಣುಗಳು ಹರ್ಷದಿಂದ ಅರಳಿದವು ಹಾಗೂ ಅರಳಿದ ನೀಲಕಮಲದಂತೆ ಕಂಡು ಬರತೊಡಗಿದನು.॥34॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೂವತ್ತೆಂಟನೆಯ ಸರ್ಗ ಸಂಪೂರ್ಣವಾಯಿತು.॥38॥