०३७ किष्किन्धे वानरसेनामेलनम्

वाचनम्
ಭಾಗಸೂಚನಾ

ಸುಗ್ರೀವನು ಹನುಮಂತನಿಗೆ ವಾನರಸೈನ್ಯ ಸಂಗ್ರಹಕ್ಕಾಗಿ ಆಜ್ಞಾಪಿಸಿದುದು, ರಾಜನ ಆಜ್ಞೆಯಂತೆ ಎಲ್ಲ ವಾನರ ನಾಯಕರು ಕಿಷ್ಕಿಂಧೆಯ ಕಡೆಗೆ ಹೊರಟುದು, ವಾನರದೂತರು ಸುಗ್ರೀವನ ಬಳಿಗೆ ಬಂದು ವಾನರಸೈನ್ಯವು ಆಗಮಿಸಿದ ಸಮಾಚಾರ ತಿಳಿಸಿದುದು

ಮೂಲಮ್ - 1

ಏವಮುಕ್ತಸ್ತು ಸುಗ್ರೀವೋ ಲಕ್ಷ್ಮಣೇನ ಮಹಾತ್ಮನಾ ।
ಹನೂಮಂತಂ ಸ್ಥಿತಂ ಪಾರ್ಶ್ವೇ ವಚನಂ ಚೇದಮಬ್ರವೀತ್ ॥

ಅನುವಾದ

ಮಹಾತ್ಮನಾದ ಲಕ್ಷ್ಮಣನು ಹೀಗೆ ಹೇಳಿದಾಗ ಸುಗ್ರೀವನು ತನ್ನ ಬಳಿಯಲ್ಲಿ ನಿಂತಿದ್ದ ಹನುಮಂತನಲ್ಲಿ ಹೇಳಿದನ.॥1॥

ಮೂಲಮ್ - 2

ಮಹೇಂದ್ರಹಿಮವದ್ವಿಂಧ್ಯ ಕೈಲಾಸ ಶಿಖರೇಷು ಚ ।
ಮಂದರೇ ಪಾಂಡುಶಿಖರೇ ಪಂಚಶೈಲೇಷು ಯೇ ಸ್ಥಿತಾಃ ॥

ಮೂಲಮ್ - 3

ತರುಣಾದಿತ್ಯವರ್ಣೇಷು ಭ್ರಾಜಮಾನೇಷು ನಿತ್ಯಶಃ ।
ಪರ್ವತೇಷು ಸಮುದ್ರಾಂತೇ ಪಶ್ಚಿಮಾಯಾಂ ತು ಯೇ ದಿಶಿ ॥

ಮೂಲಮ್ - 4

ಆದಿತ್ಯಭವನೇ ಚೈವ ಗಿರೌ ಸಂಧ್ಯಾಭ್ರಸಂನಿಭೇ ।
ಪದ್ಮಾಚಲವನಂ ಭೀಮಾಃ ಸಂಶ್ರಿತಾ ಹರಿಪುಂಗವಾಃ ॥

ಮೂಲಮ್ - 5

ಅಂಜನಾಂಬುದಸಂಕಾಶಾಃ ಕುಂಜರೇಂದ್ರ ಮಹೌಜಸಃ ।
ಅಂಜನೇ ಪರ್ವತೇ ಚೈವ ಯೇ ವಸಂತಿ ಪ್ಲವಂಗಮಾಃ ॥

ಮೂಲಮ್ - 6

ಮಹಾಶೈಲಗುಹಾವಾಸಾ ವಾನರಾಃ ಕನಕಪ್ರಭಾಃ ।
ಮೇರುಪಾರ್ಶ್ವಗತಾಶ್ಚೈವ ಯೇ ಚ ಧೂಮ್ರಗಿರೌ ಸ್ಥಿತಾಃ ॥

ಮೂಲಮ್ - 7

ತರುಣಾದಿತ್ಯವರ್ಣಾಶ್ಚ ಪರ್ವತೇ ಯೇ ಮಹಾರುಣೇ ।
ಪಿಬಂತೋ ಮಧು ಮೈರೇಯಂ ಭೀಮವೇಗಾಃ ಪ್ಲವಂಗಮಾಃ ॥

ಮೂಲಮ್ - 8

ವನೇಷು ಚ ಸುರಮ್ಯೇಷು ಸುಗಂಧಿಷು ಮಹತ್ಸು ಚ ।
ತಾಪಸಾಶ್ರಮರಮ್ಯೇಷು ವನಾಂತೇಷು ಸಮಂತತಃ ॥

ಮೂಲಮ್ - 9

ತಾಂಸ್ತಾಂಸ್ತ್ವಮಾನಯ ಕ್ಷಿಪ್ರಂ ಪೃಥಿವ್ಯಾಂ ಸರ್ವವಾನರಾನ್ |
ಸಾಮದಾನಾದಿಭಿಃ ಕಲ್ಪೈರ್ವಾನರೈರ್ವೇಗವತ್ತರೈಃ ॥

ಅನುವಾದ

ಮಹೇಂದ್ರ, ಹಿಮಮಂತ, ವಿಂಧ್ಯ, ಕೈಲಾಸ, ಶ್ವೇತ ಶಿಖರವುಳ್ಳ ಮಂದರಾಚಲ - ಈ ಐದು ಪರ್ವತಗಳಲ್ಲಿ ಇರುವ ಶ್ರೇಷ್ಠವಾನರರನ್ನು; ಪಶ್ಚಿಮ ಸಮುದ್ರತೀರದ ಪ್ರಾತಃಕಾಲದ ಸೂರ್ಯನಂತೆ ಕಾಂತಿಯುಳ್ಳ ಮತ್ತು ನಿತ್ಯ ಪ್ರಕಾಶನ ಪರ್ವತಗಳ ಮೇಲೆ ವಾಸಿಸುವ ವಾನರರನ್ನು; ಸೂರ್ಯನ ನಿವಾಸ ಸ್ಥಾನ ಹಾಗೂ ಸಂಧ್ಯಾಕಾಲದ ಮೇಘ ಸಮೂಹದಂತೆ ಅರುಣ ವರ್ಣವುಳ್ಳ ಉದಯಾಚಲ, ಅಸ್ತಾಚಲಗಳಲ್ಲಿ ಇರುವ ವಾನರರನ್ನು ಪದ್ಮಾಚಲದ ವನದಲ್ಲಿ ಇರುವ ಭಯಾನಕ ಪರಾಕ್ರಮಿ ವಾನರ ಶ್ರೇಷ್ಠರನ್ನು; ಕಾಡಿಗೆ ಮತ್ತು ಮೇಘಗಳಂತೆ ಕಪ್ಪಾಗಿರುವ, ಗಜರಾಜನಂತೆ ಮಹಾಬಲಿ ವಾನರರನ್ನು; ದೊಡ್ಡ-ದೊಡ್ಡ ಪರ್ವತಗಳ ಗುಹೆಗಳಲ್ಲಿರುವ ವಾನರರನ್ನು; ಮೇರುಪರ್ವತದ ಅಕ್ಕ-ಪಕ್ಕದಲ್ಲಿರುವ, ಸುವರ್ಣದಂತೆ ಕಾಂತಿಯುಳ್ಳ ವಾನರರನ್ನು; ಧೂಮ್ರಗಿರಿಯನ್ನು ಆಶ್ರಯಿಸಿ ಮೈರೇಯ ಮಧುಪಾನ ಮಾಡುತ್ತಾ ಮಹಾರುಣ ಪರ್ವತದಲ್ಲಿ ಪ್ರಾತಃಕಾಲದ ಸೂರ್ಯನಂತೆ ಕೆಂಪಾಗಿರುವ ವೇಗಶಾಲೀ ವಾನರರನ್ನು; ಸುಗಂಧಪೂರ್ಣ ಹಾಗೂ ತಪಸ್ವಿಗಳ ಆಶ್ರಮಗಳಿಂದ ಸುಶೋಭಿತ ದೊಡ್ಡ-ದೊಡ್ಡ ರಮಣೀಯ ವನ-ವನಾಂತರಗಳಲ್ಲಿ ಎಲ್ಲೆಡೆ ಇರುವ ವಾನರರನ್ನು; ಹೀಗೆ ಭೂಮಂಡಲದ ಎಲ್ಲ ವಾನರರನ್ನು ಶೀಘ್ರವಾಗಿ ಇಲ್ಲಿಗೆ ಬರುವಂತೆ ವ್ಯವಸ್ಥೆ ಮಾಡು. ಶಕ್ತಿಶಾಲಿ ಅತ್ಯಂತ ವೇಗವುಳ್ಳ ವಾನರರನ್ನು ಕಳಿಸು. ಅವರು ಸಾಮ, ದಾನಾದಿ ಉಪಾಯಗಳನ್ನು ಪ್ರಯೋಗಿಸಿ ಎಲ್ಲರನ್ನು ಇಲ್ಲಿಗೆ ಕರೆತರಲಿ.॥2-9॥

ಮೂಲಮ್ - 10

ಪ್ರೇಷಿತಾಃ ಪ್ರಥಮಂ ಯೇ ಚ ಮಯಾಽಽಜ್ಞಾತಾ ಮಹಾಜವಾಃ ।
ತ್ವರಣಾರ್ಥಂ ತು ಭೂಯಸ್ತ್ವಂ ಸಂಪ್ರೇಷಯ ಹರೀಶ್ವರಾನ್ ॥

ಅನುವಾದ

ಮೊದಲು ನನ್ನ ಆಜ್ಞೆಯಂತೆ ಕಳಿಸಿದ ಮಹಾವೇಗಶಾಲಿ ವಾನರರನ್ನು ಅವಸರಪಡಿಸಲು ನೀನು ಪುನಃ ಬೇರೆ ಶ್ರೇಷ್ಠವಾನರರನ್ನು ಕಳಿಸು.॥10॥

ಮೂಲಮ್ - 11

ಯೇ ಪ್ರಸಕ್ತಾಶ್ಚ ಕಾಮೇಷು ದೀರ್ಘಸೂತ್ರಾಶ್ಚ ವಾನರಾಃ ।
ಇಹೀನಯಸ್ವ ತಾನ್ ಶೀಘ್ರಂ ಸರ್ವಾನೇಹ ಕಪೀಶ್ವರಾನ್ ॥

ಅನುವಾದ

ಕಾಮ ಭೋಗದಲ್ಲಿ ಸಿಲುಕಿರುವ ಹಾಗೂ ದೀರ್ಘಸೂತ್ರೀ (ಪ್ರತಿಯೊಂದು ಕಾರ್ಯದಲ್ಲಿ ವಿಳಂಬ ಮಾಡುವ)ಗಳಾದ ಎಲ್ಲ ಕಪೀಶ್ವರರನ್ನು ಬೇಗನೇ ಇಲ್ಲಿಗೆ ಕರೆದು ತಾ.॥11॥

ಮೂಲಮ್ - 12

ಅಹೋಭಿರ್ದಶಭಿರ್ಯೇ ಚ ನಾಗಚ್ಛಂತಿ ಮಮಾಜ್ಞಯಾ ।
ಹಂತವ್ಯಾಸ್ತೇ ದುರಾತ್ಮಾನೋ ರಾಜಶಾಸನದೂಷಕಾಃ ॥

ಅನುವಾದ

ನನ್ನ ಆಜ್ಞೆಯಂತೆ ಹತ್ತು ದಿನಗಳಲ್ಲಿ ಇಲ್ಲಿಗೆ ಬಾರದಿರುವವರನ್ನು, ರಾಜಾಜ್ಞೆಯನ್ನು ಕಳಂಕಿತಗೊಳಿಸುವ ಆ ದುರಾತ್ಮಾ ವಾನರರನ್ನು ಕೊಂದುಹಾಕಬೇಕು.॥12॥

ಮೂಲಮ್ - 13

ಶತಾನ್ಯಥ ಸಹಸ್ರಾಣಿ ಕೋಟ್ಯಶ್ಚ ಮಮ ಶಾಸನಾತ್ ।
ಪ್ರಯಾಂತು ಕಪಿಸಿಂಹಾನಾಂ ನಿದೆಶೇ ಮಮ ಯೇ ಸ್ಥಿತಾಃ ॥

ಅನುವಾದ

ನನ್ನ ಆಜ್ಞೆಗಧೀನರಾಗಿರುವ ನೂರಾರು, ಸಾವಿರಾರು, ಕೋಟ್ಯಾವಧಿ ವಾನರಸಿಂಹರು ನನ್ನ ಆದೇಶದಂತೆ ಬರಲಿ.॥13॥

ಮೂಲಮ್ - 14

ಮೇಘಪರ್ವತ ಸಂಕಾಶಾಶ್ಛಾದಯಂತ ಇವಾಂಬರಮ್ ।
ಘೋರರೂಪಾಃ ಕಪಿಶ್ರೇಷ್ಠಾ ಯಾಂತು ಮಚ್ಛಾಸನಾದಿತಃ ॥

ಅನುವಾದ

ಮೇಘಪರ್ವತದಂತೆ ವಿಶಾಲ ಶರೀರದಿಂದ ಆಕಾಶವನ್ನೇ ಮುಚ್ಚುವಂತೆ ಇರುವ ಘೋರರೂಪಧಾರೀ ಶ್ರೇಷ್ಠ ವಾನರರು ನನ್ನ ಆದೇಶವನ್ನು ಮನ್ನಿಸಿ ಇಲ್ಲಿಗೆ ಬರಲಿ.॥14॥

ಮೂಲಮ್ - 15

ತೇ ಗತಿಜ್ಞಾ ಗತಿಂ ಗತ್ವಾ ಪೃಥಿವ್ಯಾಂ ಸರ್ವವಾನರಾಃ ।
ಆನಯಂತು ಹರೀನ್ ಸರ್ವಾಂಸ್ತ್ವರಿತಾಃ ಶಾಸನಾನ್ಮಮ ॥

ಅನುವಾದ

ವಾನರರ ನಿವಾಸ ಸ್ಥಾನಗಳನ್ನು ಬಲ್ಲ ಎಲ್ಲ ವಾನರರು ತೀವ್ರಗತಿಯಿಂದ ಭೂಮಂಡಲದ ಎಲ್ಲೆಡೆ ಹೋಗಿ ನನ್ನ ಆದೇಶದಂತೆ ಆಯಾಯಾ ಸ್ಥಾನಗಳ ಸಮಸ್ತ ವಾನರರನ್ನು ಇಲ್ಲಿಗೆ ಕರೆತರಲಿ.॥15॥

ಮೂಲಮ್ - 16

ತಸ್ಯ ವಾನರರಾಜಸ್ಯ ಶ್ರುತ್ವಾ ವಾಯುಸುತೋ ವಚಃ ।
ದಿಕ್ಷು ಸರ್ವಾಸು ಏಕ್ರಾಂತಾನ್ಪ್ರೇಷಯಾಮಾಸ ವಾನರಾನ್ ॥

ಅನುವಾದ

ವಾನರರಾಜನ ಮಾತನ್ನು ಕೇಳಿ ವಾಯುಪುತ್ರ ಹನುಮಂತನು ಎಲ್ಲ ದಿಕ್ಕುಗಳಿಗೆ ಅನೇಕ ಪರಾಕ್ರಮಿ ವಾನರರನ್ನು ಕಳಿಸಿದನು.॥16॥

ಮೂಲಮ್ - 17

ತೇ ಪದಂ ವಿಷ್ಣುವಿಕ್ರಾಂತಂ ಪತತ್ರಿಜ್ಯೋತಿರಧ್ವಗಾಃ ।
ಪ್ರಯಾತಾಃ ಪ್ರಹಿತಾ ರಾಜ್ಞಾ ಹರಯಸ್ತು ಕ್ಷಣೇನ ವೈ ॥

ಅನುವಾದ

ರಾಜನ ಆಜ್ಞೆಯನ್ನು ಪಡೆದು ಆ ಎಲ್ಲ ವಾನರರು ಕೂಡಲೇ ಆಕಾಶದಲ್ಲಿ ಪಕ್ಷಿಗಳ ಮತ್ತು ನಕ್ಷತ್ರಗಳ ಮಾರ್ಗದಿಂದ ಹೊರಟರು.॥17॥

ಮೂಲಮ್ - 18

ತೇ ಸಮುದ್ರೇಷು ಗಿರಿಷು ವನೇಷು ಚ ಸರಃಸ್ಸು ಚ ।
ವಾನರಾ ವಾನರಾನ್ ಸರ್ವಾನ್ ರಾಮಹೇತೋರಚೋದಯನ್ ॥

ಅನುವಾದ

ಆ ವಾನರರು ಸಮುದ್ರತೀರಗಳಲ್ಲಿ, ಪರ್ವತಗಳಲ್ಲಿ, ಅರಣ್ಯಗಳಲ್ಲಿ, ನದಿ-ಸರೋವರಗಳ ತಟದಲ್ಲಿ ಇರುವ ಸಮಸ್ತ ವಾನರವೀರರಿಗೆ ಶ್ರೀರಾಮಚಂದ್ರನ ಕಾರ್ಯ ಮಾಡಲು ಹೊರಡುವಂತೆ ತಿಳಿಸಿದರು.॥18॥

ಮೂಲಮ್ - 19

ಮೃತ್ಯುಕಾಲೋಪಮಸ್ಯಾಜ್ಞಾಂ ರಾಜರಾಜಸ್ಯ ವಾನರಾಃ ।
ಸುಗ್ರೀವಸ್ಯಾಯಯುಃ ಶ್ರುತ್ವಾ ಸುಗ್ರೀವಭಯಶಂಕಿತಾಃ ॥

ಅನುವಾದ

ಮೃತ್ಯು ಮತ್ತು ಕಾಲದಂತೆ ಭಯಾನಕ ದಂಡ ವಿಧಿಸುವ ತಮ್ಮ ಸಾಮ್ರಾಟ ಸುಗ್ರೀವನ ಆದೇಶವನ್ನು ಕೇಳಿ ಆ ಎಲ್ಲ ವಾನರರು ಅವನ ಭಯದಿಂದ ನಡುಗಿಹೋದರು ಹಾಗೂ ಕೂಡಲೇ ಕಿಷ್ಕಿಂಧೆಯ ಕಡೆಗೆ ಹೊರಟರು.॥19॥

ಮೂಲಮ್ - 20

ತತಸ್ತೇಂಽಜನಸಂಕಾಶಾ ಗಿರೇಸ್ತಸ್ಮಾನ್ಮಹಾಬಲಾಃ ।
ತಿಸ್ರಃ ಕೋಟ್ಯಃ ಪ್ಲವಂಗಾನಾಂ ನಿರ್ಯಯುರ್ಯತ್ರ ರಾಘವಃ ॥

ಅನುವಾದ

ಅನಂತರ ಕಾಡಿಗೆಯ ಬೆಟ್ಟದಂತೆ ಕಪ್ಪಾಗಿರುವ, ಮಹಾಬಲಿಷ್ಠರಾದ ಮೂರು ಕೋಟಿ ವಾನರರು ಶ್ರೀರಘುನಾಥನು ವಿರಾಜಿಸುತ್ತಿದ್ದಲ್ಲಿಗೆ ಹೋಗಲು ಹೊರಟರು.॥20॥

ಮೂಲಮ್ - 21

ಅಸ್ತಂ ಗಚ್ಛತಿ ಯತ್ರಾರ್ಕಸ್ತಸ್ಮಿನ್ ಗಿರಿವರೇ ರತಾಃ ।
ಸಂತಪ್ತಹೇಮವರ್ಣಾಭಾಸ್ತಸ್ಮಾತ್ಕೋಟ್ಯೋ ದಶ ಚ್ಯುತಾಃ ॥

ಅನುವಾದ

ಕಾದ ಚಿನ್ನದಂತೆ ಕಾಂತಿಯುಳ್ಳ ಸೂರ್ಯನ ಆಸ್ತಾಚಲದಲ್ಲಿ ಇರುವ ಹತ್ತುಕೋಟಿ ವಾನರರು ಕಿಷ್ಕಿಂಧೆಗೆ ಹೊರಟರು.॥21॥

ಮೂಲಮ್ - 22

ಕೈಲಾಸಶಿಖರೇಭ್ಯಶ್ಚ ಸಿಂಹಕೇಸರ ವರ್ಚಸಾಮ್ ।
ತತಃ ಕೋಟಿಸಹಸ್ರಾಣಿ ವಾನರಾಣಾಂ ಸಮಾಗಮನ್ ॥

ಅನುವಾದ

ಸಿಂಹದಂತೆ ಕೇಸರವುಳ್ಳ ಶ್ವೇತಕಾಂತಿಯ ಒಂದು ಸಾವಿರ ಕೋಟಿ ವಾನರರು ಕೈಲಾಸ ಶಿಖರಗಳಿಂದ ಆಗಮಿಸಿದರು.॥22॥

ಮೂಲಮ್ - 23

ಫಲಮೂಲೇನ ಜೀವಂತೋ ಹಿಮವಂತಮುಪಾಶ್ರಿತತಾಃ ।
ತೇಷಾಂ ಕೋಟಿ ಸಹಸ್ರಾಣಾಂ ಸಹಸ್ರಂ ಸಮವರ್ತತ ॥

ಅನುವಾದ

ಫಲ-ಮೂಲಾದಿಗಳಿಂದಲೇ ಜೀವಿಸುತ್ತಿದ್ದ ಸಾವಿರ-ಸಾವಿರ ಕೋಟಿ ವಾನರರು ಹಿಮವತ್ಪರ್ವತದಿಂದ ಆಗಮಿಸಿದರು.॥23॥

ಮೂಲಮ್ - 24

ಅಂಗಾರಕಸಮಾನಾನಾಂ ಭೀಮಾನಾಂ ಭೀಮಕರ್ಮಣಾಮ್ ।
ವಿಂಧ್ಯಾದ್ ವಾನರಕೋಟೀನಾಂ ಸಹಸ್ರಾಣ್ಯಪತಂದ್ರುತಮ್ ॥

ಅನುವಾದ

ಅಂಗಾರಕನಿಗೆ ಸಮಾನರಾಗಿದ್ದ ಭಯಂಕರರಾದ, ಭಯಂಕರ ಕರ್ಮರಾದ ಒಂದು ಸಾವಿರ ಕೋಟಿ ವಾನರರು ವಿಂಧ್ಯಪರ್ವತದಿಂದ ವೇಗವಾಗಿ ಕಿಷ್ಕಿಂಧೆಗೆ ಆಗಮಿಸಿದರು.॥24॥

ಮೂಲಮ್ - 25

ಕ್ಷೀರೋದವೇಲಾನಿಲಯಾಸ್ತಮಾಲವನವಾಸಿನಃ ।
ನಾರಿಕೇಲಾಶನಾಶ್ಚೈವ ತೇಷಾಂ ಸಂಖ್ಯಾ ನ ವಿದ್ಯತೇ ॥

ಅನುವಾದ

ಕ್ಷೀರಸಾಗರ ತೀರದಲ್ಲಿ ಮತ್ತು ತಮಾಲವನದಲ್ಲಿ ತೆಂಗಿನಕಾಯಿ ತಿಂದು ಇರುವ ಗಣನೆಯಿಲ್ಲದ ಅಸಂಖ್ಯ ವಾನರರು ಬಂದರು.॥25॥

ಮೂಲಮ್ - 26

ವನೇಭ್ಯೋ ಗಹ್ವರೇಭ್ಯಶ್ಚ ಸರಿದ್ಭ್ಯಶ್ಚ ಮಹಾಬಲಾಃ ।
ಆಗಚ್ಛದ್ವಾನರೀ ಸೇನಾ ಪಿಬಂತೀವ ದಿವಾಕರಮ್ ॥

ಅನುವಾದ

ವನಗಳಿಂದ, ಗುಹೆಗಳಿಂದ, ನದಿ ತೀರಗಳಿಂದ ಅಸಂಖ್ಯ ಮಹಾಬಲೀ ವಾನರರು ಒಂದೆಡೆ ಸೇರಿದರು. ವಾನರರ ಆ ಸೈನ್ಯವು ಸೂರ್ಯನನ್ನೇ ಮುಚ್ಚಿ ಬಿಡುವಂತೆ ಅನಿಸುತ್ತಿತ್ತು.॥26॥

ಮೂಲಮ್ - 27

ಯೇ ತು ತ್ವಾರಯಿತುಂ ಯಾತಾ ವಾನರಾಃ ಸರ್ವವಾನರಾನ್ ।
ತೇ ವೀರಾ ಹಿಮವಚ್ಛೈಲೇ ದದೃಶುಸ್ತಂಮಹಾದ್ರುಮಮ್ ॥

ಅನುವಾದ

ಸಮಸ್ತ ವಾನರರು ಶೀಘ್ರವಾಗಿ ಬರುವಂತೆ ಪ್ರೇರೇಪಿಸಲು ಕಿಷ್ಕಿಂಧೆಯಿಂದ ಎರಡನೆ ಬಾರಿ ಕಳಿಸಿದ ಆ ವಾನರ ವೀರರು ಹಿಮಾಲಯ ಪರ್ವತದಲ್ಲಿ ಭಗವಾನ್ ಶಂಕರನ ಯಜ್ಞಸ್ಥಾನ ದಲ್ಲಿದ್ದ ಪ್ರಸಿದ್ಧ ವಿಶಾಲ ವೃಕ್ಷವನ್ನು ನೋಡಿದರು.॥27॥

ಮೂಲಮ್ - 28

ತಸ್ಮಿನ್ ಗಿರಿವರೇ ಪುಣ್ಯೇ ಯಜ್ಞೋ ಮಾಹೇಶ್ವರಃ ಪುರಾ ।
ಸರ್ವದೇವಮನಸ್ತೋಷೋ ಬಭೂವ ಸುಮನೋರಮಃ ॥

ಅನುವಾದ

ಆ ಪವಿತ್ರ, ಶ್ರೇಷ್ಠ ಪರ್ವತದಲ್ಲಿ ಹಿಂದೊಮ್ಮೆ ಸಂಪೂರ್ಣ ದೇವತೆಗಳಿಗೆ ಮನಸ್ಸಂತೋಷಪಡಿಸುವ ಅತ್ಯಂತ ಮನೋರಮವಾದ ಭಗವಾನ್ ಶಂಕರನ ಯಜ್ಞವು ನಡೆದಿತ್ತು.॥28॥

ಮೂಲಮ್ - 29

ಅನ್ನನಿಷ್ಯಂದ ಜಾತಾನಿ ಮೂಲಾನಿ ಚ ಫಲಾನಿ ಚ ।
ಅಮೃತಾಸ್ವಾದಕಲ್ಪಾನಿ ದದೃಶುಸ್ತತ್ರ ವಾನರಾಃ ॥

ಅನುವಾದ

ಆ ಪರ್ವತದಲ್ಲಿ ಪಾಯಸಾನ್ನ, ತುಪ್ಪ ಮೊದಲಾದ ಹೋಮ ದ್ರವ್ಯದ ಸ್ರಾವವಾಗಿತ್ತು, ಅದರಿಂದ ಅಲ್ಲಿ ಅಮೃತದಂತಹ ರುಚಿಕರ ಫಲ-ಮೂಲಗಳು ಉತ್ಪನ್ನವಾಗಿದ್ದವು. ಆ ಫಲಗಳನ್ನು ವಾನರರು ನೋಡಿದರು.॥29॥

ಮೂಲಮ್ - 30

ತದನ್ನಸಂಭವಂ ದಿವ್ಯಂ ಫಲಂ ಮೂಲಂ ಮನೋಹರಮ್ ।
ಯಃ ಕಶ್ಚಿತ್ ಸಕೃದಶ್ನಾತಿ ಮಾಸಂ ಭವತಿ ತರ್ಪಿತಃ ॥

ಅನುವಾದ

ಮೇಲೆ ಹೇಳಿದ ಅನ್ನದಿಂದ ಉತ್ಪನ್ನವಾದ ಆ ದಿವ್ಯ, ಮನೋಹರ ಫಲ-ಮೂಲಗಳನ್ನು ಒಮ್ಮೆ ತಿಂದವನು ಒಂದು ತಿಂಗಳಿನವರೆಗೆ ತೃಪ್ತನಾಗಿ ಇರುತ್ತಾನೆ.॥30॥

ಮೂಲಮ್ - 31

ತಾನಿ ಮೂಲಾನಿ ದಿವ್ಯಾನಿ ಫಲಾನಿ ಚ ಫಲಾಶನಾಃ ।
ಔಷಧಾನಿ ಚ ದಿವ್ಯಾನಿ ಜಗೃಹುರ್ಹರಿಪುಂಗವಾಃ ॥

ಅನುವಾದ

ಫಲಗಳನ್ನೇ ತಿನ್ನುವ ಆ ವಾನರಶ್ರೇಷ್ಠರು ಆ ದಿವ್ಯ ಫಲ-ಮೂಲಗಳನ್ನು ಮತ್ತು ದಿವ್ಯ ಔಷಧಿಗಳನ್ನು ತಮ್ಮೊಂದಿಗೆ ಒಯ್ದರು.॥31॥

ಮೂಲಮ್ - 32

ತಸ್ಮಾಚ್ಚ ಜ್ಞಾಯತನಾತ್ಪುಷ್ಪಾಣಿ ಸುರಭೀಣಿ ಚ ।
ಆನಿನ್ಯುರ್ವಾನರಾ ಗತ್ವಾ ಸುಗ್ರೀವ ಪ್ರಿಯಕಾರಣಾತ್ ॥

ಅನುವಾದ

ಅಲ್ಲಿಗೆ ಹೋಗಿ ಎಲ್ಲ ವಾನರರು ಆ ಯಜ್ಞಮಂಟಪದಿಂದ ಸುಗ್ರೀವನ ಪ್ರೀತಿಗಾಗಿ ಸುಗಂಧಿತ ಪುಷ್ಪಗಳನ್ನು ತಂದರು.॥32॥

ಮೂಲಮ್ - 33

ತೇ ತು ಸರ್ವೇ ಹರಿವರಾಃ ಪೃಥಿವ್ಯಾಂ ಸರ್ವವಾನರಾನ್ ।
ಸಂಚೋದಯಿತ್ವಾ ತ್ವರಿತಂ ಯೂಥಾನಾಂ ಜಗ್ಮುರಗ್ರತಃ ॥

ಅನುವಾದ

ಆ ಸಮಸ್ತ ಶ್ರೇಷ್ಠ ವಾನರರು ಭೂಮಂಡಲ ಸಂಪೂರ್ಣ ವಾನರರಿಗೆ ಕೂಡಲೇ ಹೊರಡುವಂತೆ ಆದೇಶಿಸಿ, ಅವರ ತುಕುಡಿಗಳು ತಲುಪುವ ಮೊದಲೇ ಸುಗ್ರೀವನ ಬಳಿಗೆ ಬಂದರು.॥33॥

ಮೂಲಮ್ - 34

ತೇ ತು ತೇನ ಮುಹೂರ್ತೇನ ಕಪಯಃ ಶೀಘ್ರಚಾರಿಣಃ ।
ಕಿಷ್ಕಿಂಧಾಂ ತ್ವರಯಾ ಪ್ರಾಪ್ತಾಃ ಸುಗ್ರೀವೋ ಯತ್ರ ವಾನರಃ ॥

ಅನುವಾದ

ಆ ಶೀಘ್ರಗಾಮಿ ವಾನರರು ಅದೇ ಮುಹೂರ್ತದಲ್ಲಿ ಹೊರಟು ಬಹಳ ಅವಸರದಿಂದ ಕಿಷ್ಕಿಂಧೆಗೆ ಹೋಗಿ ವಾನರರಾಜ ಸುಗ್ರೀವನಿದ್ದಲ್ಲಿಗೆ ತಲುಪಿದರು.॥34॥

ಮೂಲಮ್ - 35

ತೇ ಗೃಹೀತ್ವೌಷಧೀಃ ಸರ್ವಾಃ ಫಲಂ ಮೂಲಂ ಚ ವಾನರಾಃ ।
ತಂ ಪ್ರತಿಗ್ರಾಹಯಾಮಾಸುರ್ವಚನಂ ಚೇದಮಬ್ರುವನ್ ॥

ಅನುವಾದ

ಆ ಸಂಪೂರ್ಣ ಔಷಧಿಗಳನ್ನು, ಫಲ-ಮೂಲಗಳನ್ನು ಎತ್ತಿಕೊಂಡ ವಾನರರು ಸುಗ್ರೀವನ ಸೇವೆಯಲ್ಲಿ ಅರ್ಪಿಸಿ, ಇಂತೆಂದರು.॥35॥

ಮೂಲಮ್ - 36

ಸರ್ವೇ ಪರಿಸೃತಾಃ ಶೈಲಾಃ ಸರಿತಶ್ಚ ವನಾನಿ ಚ ।
ಪೃಥಿವ್ಯಾಂ ವಾನರಾಃ ಸರ್ವೇ ಶಾಸನಾದುಪಯಾಂತಿ ತೇ ॥

ಅನುವಾದ

ಮಹಾರಾಜಾ! ನಾವು ಎಲ್ಲ ಪರ್ವತ, ನದೀ, ವನಗಳನ್ನು ಸುತ್ತಾಡಿ ಬಂದೆವು. ಭೂಮಂಡಲದ ಸಮಸ್ತ ವಾನರರು ನಿಮ್ಮ ಆಜ್ಞೆಯಂತೆ ಇಲ್ಲಿಗೆ ಬರುತ್ತಿದ್ದಾರೆ.॥36॥

ಮೂಲಮ್ - 37

ಏವಂ ಶ್ರುತ್ವಾ ತತೋ ಹೃಷ್ಟಃ ಸುಗ್ರೀವಃ ಪ್ಲವಗಾಧಿಪಃ ।
ಪ್ರತಿಜಗ್ರಾಹ ಚ ಪ್ರೀತಸ್ತೇಷಾಂ ಸರ್ವಮುಪಾಯನಮ್ ॥

ಅನುವಾದ

ಇದನ್ನು ಕೇಳಿ ಸುಗ್ರೀವನಿಗೆ ಬಹಳ ಸಂತೋಷವಾಯಿತು. ಅವರಿತ್ತ ಎಲ್ಲ ಕಾಣಿಕೆಯನ್ನು ಸ್ವೀಕರಿಸಿದನು.॥37॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೂವತ್ತೇಳನೆಯ ಸರ್ಗ ಸಂಪೂರ್ಣವಾಯಿತು.॥37॥