वाचनम्
ಭಾಗಸೂಚನಾ
ತಾರೆಯು ಯುಕ್ತಿಯುಕ್ತ ಮಾತುಗಳಿಂದ ಲಕ್ಷ್ಮಣನನ್ನು ಸಮಾಧಾನಗೊಳಿಸಿದುದು
ಮೂಲಮ್ - 1
ತಥಾ ಬ್ರುವಾಣಂ ಸೌಮಿತ್ರಿಂ ಪ್ರದೀಪ್ತಮಿವ ತೇಜಸಾ ।
ಅಬ್ರವೀಲ್ಲಕ್ಷ್ಮಣಂ ತಾರಾ ತಾರಾಧಿಪನಿಭಾನನಾ ॥
ಅನುವಾದ
ಸುಮಿತ್ರಾಕುಮಾರ ಲಕ್ಷ್ಮಣನು ತನ್ನ ತೇಜದಿಂದಾಗಿ ಉರಿಯುತ್ತಾ ಮೇಲಿನಂತೆ ಮಾತನ್ನು ಹೇಳಿದಾಗ, ಚಂದ್ರ ಮುಖೀ ತಾರೆಯು ಅವನಲ್ಲಿ ಹೀಗೆ ಹೇಳಿದಳು .॥1॥
ಮೂಲಮ್ - 2
ನೈವಂ ಲಕ್ಷ್ಮಣ ವಕ್ತವ್ಯೋ ನಾಯಂ ಪರುಷಮರ್ಹತಿ ।
ಹರೀಣಾಮೀಶ್ವರಃ ಶ್ರೋತುಂ ತವ ವಕ್ತ್ರಾದ್ ವಿಶೇಷತಃ ॥
ಅನುವಾದ
ಕುಮಾರ ಲಕ್ಷ್ಮಣನೇ! ನೀವು ಸುಗ್ರೀವನಲ್ಲಿ ಹೀಗೆ ಮಾತನಾಡಬಾರದು. ಇವನು ವಾನರರ ರಾಜನಾಗಿದ್ದಾನೆ; ಆದ್ದರಿಂದ ಇವನ ಕುರಿತು ಕಠೋರವಾಗಿ ನುಡಿಯುವುದು ಉಚಿತವಲ್ಲ. ವಿಶೇಷವಾಗಿ ನಿನ್ನಂತಹ ಸುಹೃದನ ಬಾಯಿಯಿಂದ ಕಟುವಚನಗಳನ್ನು ಕೇಳಲು ಇವನು ಎಂದಿಗೂ ಅಧಿಕಾರಿಯಲ್ಲ.॥2॥
ಮೂಲಮ್ - 3
ನೈವಾಕೃತಜ್ಞಃ ಸುಗ್ರೀವೋ ನ ಶಠೋ ನಾಪಿ ದಾರುಣಃ ।
ನೈವಾನೃತಕಥೋ ವೀರ ನ ಜೀ ಹ್ಮಶ್ಚ ಕಪೀಶ್ವರಃ ॥
ಅನುವಾದ
ವೀರನೇ! ಕಪಿರಾಜ ಸುಗ್ರೀವನು ಕೃತಘ್ನನೂ, ಶಠನೂ, ಕ್ರೂರನೂ, ಅಸತ್ಯವಾದಿಯೂ, ಕುಟಿಲನೂ ಅಲ್ಲ.॥3॥
ಮೂಲಮ್ - 4
ಉಪಕಾರಂ ಕೃತಂ ವೀರೋ ನಾಪ್ಯಯಂ ವಿಸ್ಮೃತಃ ಕಪಿಃ ।
ರಾಮೇಣ ವೀರ ಸುಗ್ರೀವೋ ಯದನ್ಯೈರ್ದುಷ್ಕರಂ ರಣೇ ॥
ಅನುವಾದ
ವೀರಲಕ್ಷ್ಮಣನೇ! ಶ್ರೀರಾಮಚಂದ್ರನು ಇವನಿಗೆ ಮಾಡಿದ ಉಪಕಾರವು ಯುದ್ಧದಲ್ಲಿ ಬೇರೆಯವರಿಗೆ ದುಷ್ಕರವಾಗಿದೆ. ಅದನ್ನು ವೀರಕಪಿರಾಜನು ಎಂದೂ ಮರೆಯಲಿಲ್ಲ.॥4॥
ಮೂಲಮ್ - 5
ರಾಮಪ್ರಸಾದಾತ್ ಕೀರ್ತಿಂ ಚ ಕಪಿರಾಜ್ಯಂ ಚ ಶಾಶ್ವತಮ್ ।
ಪ್ರಾಪ್ತವಾನಿಹ ಸುಗ್ರೀವೋ ರುಮಾಂ ಮಾಂ ಚ ಪರಂತಪ ॥
ಅನುವಾದ
ಪರಂತಪ ಲಕ್ಷ್ಮಣನೇ! ಶ್ರೀರಾಮಚಂದ್ರನ ಕೃಪಾಪ್ರಸಾದದಿಂದಲೇ ಸುಗ್ರೀವನು ವಾನರರ ಅಕ್ಷಯ ರಾಜ್ಯವನ್ನೂ, ಯಶಸ್ಸನ್ನೂ. ರುಮೆಯನ್ನೂ ಹಾಗೂ ನನ್ನನ್ನೂ ಪಡೆದುಕೊಂಡಿರುವನು.॥5॥
ಮೂಲಮ್ - 6
ಸುದುಃಖಶಯಿತಃ ಪೂರ್ವಂ ಪ್ರಾಪ್ಯೇದಂ ಸುಖಮುತ್ತಮಮ್ ।
ಪ್ರಾಪ್ತಕಾಲಂ ನ ಜಾನೀತೇ ವಿಶ್ವಾಮಿತ್ರೋ ಯಥಾ ಮುನಿಃ ॥
ಅನುವಾದ
ಮೊದಲಿಗೆ ಇವನು ಬಹಳ ದುಃಖ ಅನುಭವಿಸಿದ್ದನು. ಈಗ ಈ ಉತ್ತಮ ಸುಖವನ್ನು ಪಡೆದು ವಿಶ್ವಾಮಿತ್ರ ಮುನಿಯು ಮೇನಕೆಯಲ್ಲಿ ಆಸಕ್ತನಾದ್ದರಿಂದ ಕಾಲದ ಪರಿವೆ ಇರಲಿಲ್ಲ, ಹಾಗೆಯೇ ಇವನಿಗೂ ಸಮಯದ ಜ್ಞಾನ ಉಳಿಯದಷ್ಟು ಸುಖದಲ್ಲಿ ರಮಿಸಿಹೋದನು.॥6॥
ಮೂಲಮ್ - 7
ಘೃತಾಚ್ಯಾಂ ಕಿಲ ಸಂಸಕ್ತೋ ದಶ ವರ್ಷಾಣಿ ಲಕ್ಷ್ಮಣ ।
ಅಹೋಽಮನ್ಯತ ಧರ್ಮಾತ್ಮಾ ವಿಶ್ವಾಮಿತ್ರೋ ಮಹಾಮುನಿಃ ॥
ಅನುವಾದ
ಲಕ್ಷ್ಮಣಾ! ಧರ್ಮಾತ್ಮಾ ಮಹಾಮುನಿ ವಿಶ್ವಾಮಿತ್ರನು ಘೃತಾಚಿ (ಮೇನಕೆ) ಎಂಬ ಅಪ್ಸರೆಯಲ್ಲಿ ಆಸಕ್ತನಾದ್ದರಿಂದ ಹತ್ತುವರ್ಷಗಳ ಸಮಯವನ್ನು ಒಂದು ದಿನದಂತೆ ತಿಳಿದನೆಂದು ಹೇಳುತ್ತಾರೆ.॥7॥
ಮೂಲಮ್ - 8
ಸ ಹಿ ಪ್ರಾಪ್ತಂ ನ ಜಾನೀತೇ ಕಾಲಂ ಕಾಲವಿದಾಂ ವರಃ ।
ವಿಶ್ವಾಮಿತ್ರೋ ಮಹಾತೇಜಾಃ ಕಿಂ ಪುನರ್ಯಃ ಪೃಥಗ್ಜನಃ ॥
ಅನುವಾದ
ಕಾಲದ ಚೆನ್ನಾದ ಜ್ಞಾನವುಳ್ಳ ಶ್ರೇಷ್ಠ ಮಹಾತೇಜಸ್ವೀ ವಿಶ್ವಾಮಿತ್ರನೂ ಕೂಡ ಭೋಗಾಸಕ್ತನಾದಾಗ ಕಾಲದ ಜ್ಞಾನ ಉಳಿಯಲಿಲ್ಲ. ಅಂತಿರುವಾಗ ಬೇರೆ ಸಾಧಾರಣ ವ್ಯಕ್ತಿಗೆ ಹೇಗೆ ಉಳಿಯಬಲ್ಲದು.॥8॥
ಮೂಲಮ್ - 9
ದೇಹಧರ್ಮಗತಸ್ಯಾಸ್ಯ ಪರಿಶ್ರಾಂತಸ್ಯ ಲಕ್ಷ್ಮಣ ।
ಅವಿತೃಪ್ತಸ್ಯ ಕಾಮೇಷು ರಾಮಃ ಕ್ಷಂತುಮಿಹಾರ್ಹಸಿ ॥
ಅನುವಾದ
ಕುಮಾರ ಲಕ್ಷ್ಮಣ! ಮನುಷ್ಯರಿಗೂ ಪಶುಗಳಿಗೂ ಸಮಾನಧರ್ಮವಾಗಿರುವ ಆಹಾರ-ನಿದ್ರಾ-ಮೈಥುನಗಳೇ ಮೊದಲಾದ ದೇಹ ಧರ್ಮಗಳನ್ನು ಹೊಂದಿರುವ ಸುಗ್ರೀವನು ಈ ಹಿಂದೆ ಬಹಳ ಕಾಲದವರೆಗೆ ಅನೇಕವಾದ ಕಷ್ಟಗಳನ್ನು ಅನುಭವಿಸುತ್ತಾ ಬಹಳವಾಗಿ ಬಳಲಿದ್ದನು. ಈಗ ಶ್ರೀರಾಮನ ಕೃಪೆಯಿಂದ ಇವನಿಗೆ ಸುಖೋಪಭೋಗಗಳು ಲಭಿಸಿವೆ. ಆದರೆ ಅದರಲ್ಲಿ ಇವನಿಗಿನ್ನೂ ತೃಪ್ತಿಯುಂಟಾಗಲಿಲ್ಲ. ಇದರಿಂದ ಇವನು ತನ್ನ ಕರ್ತವ್ಯದಿಂದ ವಿಮುಖನಾಗಿದ್ದಾನೆ. ಈ ಅಪರಾಧವನ್ನು ಕ್ಷಮಿಸುವುದು ದಯಾಳುವಾದ ನಿಮಗೆ ಯೋಗ್ಯವಾಗಿದೆ.॥9॥
ಮೂಲಮ್ - 10
ನ ಚ ರೋಷವಶಂ ತಾತ ಗಂತುಮರ್ಹಸಿ ಲಕ್ಷ್ಮಣ ।
ನಿಶ್ಚಯಾರ್ಥಮವಿಜ್ಞಾಯ ಸಹಸಾ ಪ್ರಾಕೃತೋ ಯಥಾ ॥
ಅನುವಾದ
ಲಕ್ಷ್ಮಣ! ಯಥಾರ್ಥವಾದ ವಿಷಯವನ್ನು ತಿಳಿಯದೆ ಪಾಮರ ಮನುಷ್ಯನಂತೆ ಒಡನೆಯೇ ಕೋಪಕ್ಕೆ ವಶನಾಗು ವುದು ನಿನ್ನಂತಹವನಿಗೆ ಉಚಿತವಾಗಿ ಕಾಣುವುದಿಲ್ಲ.॥10॥
ಮೂಲಮ್ - 11
ಸಾವಯುಕ್ತಾಹಿ ಪುರುಷಾಸ್ತ್ವದ್ವಿಧಾಃ ಪುರುಷರ್ಷಭ ।
ಅವಿಮೃಶ್ಯ ನ ರೋಷಸ್ಯ ಸಹಸಾ ಯಾಂತಿ ವಶ್ಯತಾಮ್ ॥
ಅನುವಾದ
ಅಯ್ಯಾ ಲಕ್ಷ್ಮಣ! ಸತ್ತ್ವಗುಣಯುಕ್ತರಾದ ನಿನ್ನಂತಹ ಮಹಾ ಪುರುಷರು ಯಾವುದನ್ನು ಸರಿಯಾಗಿ ವಿಮರ್ಶಿಸದೇ ಹಠಾತ್ತಾಗಿ ಕೋಪಕ್ಕೆ ವಶರಾಗುವುದಿಲ್ಲ.॥11॥
ಮೂಲಮ್ - 12
ಪ್ರಸಾದಯೇ ತ್ವಾಂ ಧರ್ಮಜ್ಞ ಸುಗ್ರೀವಾರ್ಥಂ ಸಮಾಹಿತಾ ।
ಮಹಾನ್ರೋಷಸಮುತ್ಪನ್ನಃ ಸಂರಂಭಸ್ತ್ಯಜ್ಯತಾಮಯಮ್ ॥
ಅನುವಾದ
ಧರ್ಮಜ್ಞನೇ! ಸುಗ್ರೀವನಿಗಾಗಿ ನಾನು ಏಕಾಗ್ರತೆಯಿಂದ ನಿನ್ನಲ್ಲಿ ಕ್ಷಮೆಯನ್ನು ಯಾಚಿಸುತ್ತಿದ್ದೇನೆ. ರೋಷದಿಂದ ಉಂಟಾದ ಮನಸ್ಸಿನ ಕ್ಷೋಭೆಯನ್ನು ಈಗಲೇ ಪರಿತ್ಯಜಿಸು.॥12॥
ಮೂಲಮ್ - 13
ರುಮಾಂ ಮಾಂ ಚಾಂಗದಂರಾಜ್ಯಂ ಧನಧಾನ್ಯಪಶೂನಿ ಚ ।
ರಾಮಪ್ರಿಯಾರ್ಥಂ ಸುಗ್ರೀವಸ್ತ್ಯಜೇದಿತಿ ಮತಿರ್ಮಮ ॥
ಅನುವಾದ
ಶ್ರೀರಾಮನಿಗೆ ಪ್ರಿಯವನ್ನುಂಟುಮಾಡಲು ಸುಗ್ರೀವನು ರುಮೆಯನ್ನೂ, ನನ್ನನ್ನೂ, ಅಂಗದನನ್ನು, ಧನ-ಧಾನ್ಯ ಪಶುಗಳ ಸಹಿತ ರಾಜ್ಯವನ್ನು ಪರಿತ್ಯಜಿಸಬಲ್ಲನು ಎಂಬ ವಿಶ್ವಾಸ ನನಗಿದೆ.॥13॥
ಮೂಲಮ್ - 14
ಸಮಾನೇಷ್ಯತಿ ಸುಗ್ರೀವಃ ಸೀತಯಾ ಸಹ ರಾಘವಮ್ ।
ಶಶಾಂಕಮಿವ ರೋಹಿಣ್ಯಾ ಹತ್ವಾ ತಂ ರಾಕ್ಷಸಾಧಮಮ್ ॥
ಅನುವಾದ
ಸುಗ್ರೀವನು ರಾಕ್ಷಸಾಧಮನಾದ ರಾವಣನನ್ನು ಸಂಹರಿಸಿ ರೋಹಿಣಿಯು ಚಂದ್ರನೊಡನೆ ಸೇರುವಂತೆ ಸೀತೆಯು ಶ್ರೀರಾಮನೊಡನೆ ಸೇರುವಂತೆ ಮಾಡುತ್ತಾನೆ.॥14॥
ಮೂಲಮ್ - 15
ಶತಕೋಟಿ ಸಹಸ್ರಾಣಿ ಲಂಕಾಯಾಂ ಕಿಲ ರಾಕ್ಷಸಾಮ್ ।
ಅಯುತಾನಿ ಚ ಷಟ್ತ್ರಿಂಶತ್ಸಹಸ್ರಾಣಿ ಶತಾನಿ ಚ ॥
ಅನುವಾದ
ಲಂಕೆಯಲ್ಲಿ ನೂರು ಸಾವಿರ ಕೋಟಿ, ಮೂವತ್ತಾರು ಅಯುತ, ಮೂವತ್ತಾರುಸಾವಿರ ಮತ್ತು ಮೂವತ್ತಾರುನೂರು ರಾಕ್ಷಸರು ಇದ್ದಾರೆಂದು ಹೇಳುತ್ತಾರೆ..॥15॥
ಟಿಪ್ಪನೀ
- ಆಧುನಿಕ ಗಣನೆಗೆ ಅನುಗುಣವಾಗಿ ಈ ಸಂಖ್ಯೆಯು ಹತ್ತು ಖರ್ವ ಮೂರುಲಕ್ಷ ತೊಂಭತ್ತೊಂಭತ್ತುಸಾವಿರ ಆರುನೂರು ಆಗುತ್ತದೆ.
ಮೂಲಮ್ - 16
ಅಹತ್ವಾ ತಾಂಶ್ಚ ದುರ್ಧರ್ಷಾನ್ ರಾಕ್ಷಸಾನ್ ಕಾಮರೂಪಿಣಃ ।
ನ ಶಕ್ಯೋ ರಾವಣೋ ಹಂತುಂ ಯೇನ ಸಾ ಮೈಥಿಲೀ ಹೃತಾ ॥
ಅನುವಾದ
ಆ ಎಲ್ಲ ರಾಕ್ಷಸರು ಇಚ್ಛಾನುರೂಪ ಧರಿಸುವವರು ಹಾಗೂ ದುರ್ಜಯರಾಗಿದ್ದಾರೆ. ಅವರೆಲ್ಲರನ್ನು ಸಂಹರಿಸದೆ ಮಿಥಿಲೇಶಕುಮಾರಿ ಸೀತೆಯನ್ನು ಅಪಹರಿಸಿದ ರಾವಣನನ್ನು ವಧಿಸಲು ಸಾಧ್ಯವಿಲ್ಲ.॥16॥
ಮೂಲಮ್ - 17
ತೇ ನ ಶಕ್ಯಾ ರಣೇ ಹಂತುಮಸಹಾಯೇನ ಲಕ್ಷ್ಮಣ ।
ರಾವಣಃ ಕ್ರೂರಕರ್ಮಾ ಚ ಸುಗ್ರೀವೇಣ ವಿಶೇಷತಃ ॥
ಅನುವಾದ
ಲಕ್ಷ್ಮಣ! ಯಾರ ಸಹಾಯವಿಲ್ಲದೆ ಏಕಾಕಿಯಾಗಿ ಯಾವ ವೀರನಿಗೂ ಅಸಂಖ್ಯಾತರಾದ ಆ ರಾಕ್ಷಸರನ್ನು ಸಂಹರಿಸುವುದು ಸಾಧ್ಯವಿಲ್ಲ ಹಾಗೂ ಕ್ರೂರಕರ್ಮಿಯಾದ ರಾವಣನನ್ನು ವಧಿಸುವುದೂ ಸಾಧ್ಯವಿಲ್ಲ. ಆದ್ದರಿಂದ ವಿಶೇಷವಾಗಿ ಸುಗ್ರೀವನ ಸಹಾಯವನ್ನು ಪಡೆಯುವುದು ಅನಿವಾರ್ಯವಾಗಿದೆ.॥17॥
ಮೂಲಮ್ - 18
ಏವಮಾಖ್ಯಾತವಾನ್ ವಾಲೀ ಸ ಹ್ಯಭಿಜ್ಞೋ ಹರೀಶ್ವರಃ ।
ಆಗಮಸ್ತು ನ ಮೇ ವ್ಯಕ್ತಃ ಶ್ರವಾತ್ ತಸ್ಯ ಬ್ರವೀಮ್ಯಹಮ್ ॥
ಅನುವಾದ
ವಾನರರಾಜ ವಾಲಿಗೆ ಲಂಕೆಯ ರಾಕ್ಷಸರ ಗಣನೆಯ ಪರಿಚಯವಿತ್ತು, ಅವರೇ ನನಗೆ ತಿಳಿಸಿದ್ದರು. ರಾವಣನು ಈ ಅಪಾರ ಸೈನ್ಯವನ್ನು ಹೇಗೆ ಸಂಗ್ರಹಿಸಿದನು? ಇದು ನನಗೆ ತಿಳಿಯದು. ಆದರೆ ಈ ಸಂಖ್ಯೆ ನಾನು ಅವರಿಂದ ಕೇಳಿದ್ದರಿಂದ ಈಗ ನಾನು ನಿನಗೆ ತಿಳಿಸುತ್ತಿದ್ದೇನೆ.॥18॥
ಮೂಲಮ್ - 19
ತ್ವತ್ಸಹಾಯನಿಮಿತ್ತಂ ವೈ ಪ್ರೇಷಿತಾ ಹರಿಪುಂಗವಾಃ ।
ಆನೇತುಂ ವಾನರಾನ್ ಯುದ್ಧೇ ಸುಬಹೂನ್ ಹರಿಪುಂಗವಾನ್ ॥
ಅನುವಾದ
ನಿಮ್ಮ ಸಹಾಯಕ್ಕಾಗಿ ಸುಗ್ರೀವನು ಅನೇಕ ಶ್ರೇಷ್ಠ ವಾನರರನ್ನು ಯುದ್ಧದ ನಿಮಿತ್ತ ಅಸಂಖ್ಯ ಸಂಖ್ಯೆಯಲ್ಲಿ ವಾನರ ವೀರರ ಸೈನ್ಯವನ್ನು ಒಟ್ಟುಗೂಡಿಸಲು ಕಳಿಸಿರುವನು.॥19॥
ಮೂಲಮ್ - 20
ತಾಂಶ್ಚ ಪ್ರತೀಕ್ಷಮಾಣೋಽಯಂ ವಿಕ್ರಾಂತಾನ್ ಸುಮಹಾಬಲಾನ್ ।
ರಾಘವಸ್ಯಾರ್ಥಸಿದ್ಧ್ಯರ್ಥಂ ನ ನಿರ್ಯಾತಿ ಹರೀಶ್ವರಃ ॥
ಅನುವಾದ
ವಾನರರಾಜ ಸುಗ್ರೀವನು ಆ ಮಹಾ ಬಲಿ, ಪರಾಕ್ರಮಿ ವೀರರು ಬರುವುದನ್ನು ನಿರೀಕ್ಷಿಸುತ್ತಿದ್ದಾನೆ. ಆದುದರಿಂದ ಭಗವಾನ್ ಶ್ರೀರಾಮನ ಕಾರ್ಯವನ್ನು ಮಾಡಲು ಈಗ ನಗರದಿಂದ ಹೊರಗೆ ಹೊರಡದಾದನು.॥20॥
ಮೂಲಮ್ - 21
ಕೃತಾ ಸುಸಂಸ್ಥಾ ಸೌಮಿತ್ರೇ ಸುಗ್ರೀವೇಣ ಪುರಾ ಯಥಾ ।
ಅದ್ಯತೈರ್ವಾನರೈಃ ಸರ್ವೈರಾಗಂತವ್ಯಂ ಮಹಾಬಲೈಃ ॥
ಅನುವಾದ
ಸುಮಿತ್ರಾನಂದನ! ಅವರೆಲ್ಲರೂ ಒಟ್ಟಾಗಲು ಮೊದಲೇ ಸುಗ್ರೀವನು ನಿಶ್ಚಯಿಸಿದ ಅವಧಿಗನುಸಾರ ಆ ಸಮಸ್ತ ಮಹಾಬಲಿ ವಾನರರು ಇಂದೇ ಇಲ್ಲಿಗೆ ಬರಬೇಕಾಗಿದೆ.॥21॥
ಮೂಲಮ್ - 22
ಋಷಕೋಟಿಸಹಸ್ರಾಣಿ ಗೋಲಾಂಗೂಲಶತಾನಿ ಚ ।
ಅದ್ಯ ತ್ವಾಮುಪಯಾಸ್ಯಂತಿ ಜಹಿ ಕೋಪಮರಿಂದಮ ।
ಕೋಟ್ಯೋಽನೇಕಾಸ್ತು ಕಾಕುತ್ಸ್ಥ ಕಪೀನಾಂ ದೀಪ್ತತೇಜಸಾಮ್ ॥
ಅನುವಾದ
ಶತ್ರುದಮನ ಲಕ್ಷ್ಮಣ! ಇಂದು ನಿಮ್ಮ ಸೇವೆಯಲ್ಲಿ ಕೋಟಿ ಸಾವಿರ ಕರಡಿಗಳು, ನೂರುಕೋಟಿ ಗೋಲಾಂ ಗೂಲರು ಹಾಗೂ ಇನ್ನೂ ತೇಜಸ್ವೀ ಅನೇಕ ಕೋಟಿ ವಾನರರು ಬರುವರು. ಅದಕ್ಕಾಗಿ ನೀವು ಕ್ರೋಧವನ್ನು ತ್ಯಜಿಸಿರಿ.॥22॥
ಮೂಲಮ್ - 23
ತವ ಹಿ ಮುಖಮಿದಂ ನೀರೀಕ್ಷ್ಯ ಕೋಪಾತ್
ಕ್ಷತಜಸಮೇ ನಯನೇ ನಿರೀಕ್ಷಮಾಣಾಃ ।
ಹರಿವರವನಿತಾ ನ ಯಾಂತಿ ಶಾಂತಿಂ
ಪ್ರಥಮಭಯಸ್ಯ ಹಿಶಂಕಿತಾಃ ಸ್ಮ ಸರ್ವಾಃ ॥
ಅನುವಾದ
ನಿಮ್ಮ ಮುಖವು ಕ್ರೋಧದಿಂದ ಉರಿಯುತ್ತಿದೆ ಮತ್ತು ಕಣ್ಣುಗಳು ರೋಷದಿಂದ ಕೆಂಪಗಾಗಿವೆ. ಇದೆಲ್ಲವನ್ನು ನೋಡಿ ವಾನರರಾಜರ ಪತ್ನಿಯರಾದ ನಮಗೆ ಶಾಂತಿ ಇಲ್ಲವಾಗಿದೆ. ನಮಗೆಲ್ಲರಿಗೆ ಮೊದಲ ಭಯ (ವಾಲಿವಧೆ)ದಂತೆ ಯಾವುದೋ ಅನಿಷ್ಟದ ಆಶಂಕೆಯಾಗುತ್ತಿದೆ.॥23॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೂವತ್ತೈದನೆಯ ಸರ್ಗ ಸಂಪೂರ್ಣವಾಯಿತು.॥35॥