०३४ लक्ष्मणकृतं सुग्रीवतर्जनम्

वाचनम्
ಭಾಗಸೂಚನಾ

ಸುಗ್ರೀವನು ಲಕ್ಷ್ಮಣನ ಬಳಿಗೆ ಹೋದುದು, ಲಕ್ಷ್ಮಣನು ಅವನನ್ನು ಗದರಿಸಿದುದು

ಮೂಲಮ್ - 1

ತಮಪ್ರತಿಹತಂ ಕ್ರುದ್ಧಂ ಪ್ರವಿಷ್ಟಂ ಪುರುಷರ್ಷಭಮ್ ।
ಸುಗ್ರೀವೋ ಲಕ್ಷ್ಮಣಂ ದೃಷ್ಟ್ವಾ ಬಭೂವ ವ್ಯಥಿತೇಂದ್ರಿಯಃ ॥

ಅನುವಾದ

ಲಕ್ಷ್ಮಣ ಅಡೆ-ತಡೆಯಿಲ್ಲದೆ ಒಳಗೆ ನುಗ್ಗಿ ಬಂದಿದ್ದನು. ಕ್ರೋಧ ತುಂಬಿದ ಆ ಪುರುಷಶ್ರೇಷ್ಠನನ್ನು ನೋಡಿ ಸುಗ್ರೀವನ ಎಲ್ಲ ಇಂದ್ರಿಯಗಳು ವ್ಯಥಿತವಾದುವು.॥1॥

ಮೂಲಮ್ - 2

ಕ್ರುದ್ಧಂ ನಿಃಶ್ವಸಮಾನಂ ತಂ ಪ್ರದೀಪ್ತಮಿವ ತೇಜಸಾ ।
ಭ್ರಾತುರ್ವ್ಯಸನಸಂತಪ್ತಂ ದೃಷ್ಟ್ವಾ ದಶರಥಾತ್ಮಜಮ್ ॥

ಮೂಲಮ್ - 3

ಉತ್ಪಪಾತ ಹರಿಶ್ರೇಷ್ಠೋ ಹಿತ್ವಾ ಸೌವರ್ಣಮಾಸನಮ್ ।
ಮಹಾನ್ಮಹೇಂದ್ರಸ್ಯ ಯ1ಥಾ ಸ್ವಲಂಕೃತ ಇವ ಧ್ವಜಃ ॥

ಅನುವಾದ

ದಶರಥಪುತ್ರ ಲಕ್ಷ್ಮಣನು ದೀರ್ಘವಾದ ನಿಟ್ಟುಸಿರುಬಿಡುತ್ತಿದ್ದನು, ತೇಜದಿಂದ ಉರಿಯಂತೆ ಕಾಣುತ್ತಿದ್ದನು. ತನ್ನ ಅಣ್ಣನ ಕಷ್ಟದಿಂದ ಅವನ ಮನಸ್ಸಿನಲ್ಲಿ ಭಾರೀ ಸಂತಾಪವಿತ್ತು. ಅವನು ಎದುರಿಗೆ ಬಂದಾಗ ವಾನರಶ್ರೇಷ್ಠ ಸುಗ್ರೀವನು ಚೆನ್ನಾಗಿ ಅಲಂಕರಿಸಿದ ದೇವರಾಜ ಇಂದ್ರನ ಮಹಾನ್ ಧ್ವಜವು ಆಕಾಶದಿಂದ ನೆಲಕ್ಕೆ ಬೀಳುವಂತೆ ಸ್ವರ್ಣ ಸಿಂಹಾಸನವನ್ನು ತೊರೆದು ನೆಲಕ್ಕೆ ನೆಗೆದನು.॥2-3॥

ಮೂಲಮ್ - 4

ಉತ್ಪತಂತಮನೂತ್ಪೇತೂ ರುಮಾಪ್ರಭೃತಯಃ ಸ್ತ್ರಿಯಃ ।
ಸುಗ್ರೀವಂ ಗಗನೇ ಪೂರ್ಣಂ ಚಂದ್ರಂ ತಾರಾಗಣಾ ಇವ ॥

ಅನುವಾದ

ಆಕಾಶದಲ್ಲಿ ಪೂರ್ಣ ಚಂದ್ರನು ಉದಯಿಸಿದಾಗ ನಕ್ಷತ್ರ ಸಮುದಾಯವೂ ಉದಿತ ವಾಗುವಂತೆ ಸುಗ್ರೀವನು ಇಳಿಯುತ್ತಲೇ ರುಮೆ ಮೊದಲಾದ ಸ್ತ್ರೀಯರೂ ಅವನ ಹಿಂದೆಯೇ ಸಿಂಹಾಸನದಿಂದ ಇಳಿದು ನಿಂತುಕೊಂಡರು.॥4॥

ಮೂಲಮ್ - 5

ಸಂರಕ್ತನಯನಃ ಶ್ರೀಮಾನ್ ಸಂಚಚಾರಾ ಕೃತಾಂಜಲಿಃ ।
ಬಭೂವಾವಸ್ಥಿತಸ್ತತ್ರ ಕಲ್ಪವೃಕ್ಷೋ ಮಹಾನಿವ ॥

ಅನುವಾದ

ಶ್ರೀಮಾನ್ ಸುಗ್ರೀವನ ಕಣ್ಣುಗಳು ಮದದಿಂದ ಕೆಂಪಗಾಗಿದ್ದವು. ಅವನು ತಡವರಿಸಿ ಹೆಜ್ಜೆಗಳನ್ನಿಡುತ್ತಾ ಮಹಾಕಲ್ಪವೃಕ್ಷದಂತೆ ಸ್ಥಿತನಾಗಿದ್ದ ಲಕ್ಷ್ಮಣನ ಬಳಿಗೆ ಬಂದು ಕೈಮುಗಿದುಕೊಂಡು ನಿಂತುಕೊಂಡನು.॥5॥

ಮೂಲಮ್ - 6

ರುಮಾದ್ವಿತೀಯಂ ಸುಗ್ರೀವಂ ನಾರೀಮಧ್ಯಗತಂ ಸ್ಥಿತಮ್ ।
ಅಬ್ರವೀಲ್ಲವಕ್ಷ್ಮಣಃ ಕ್ರುದ್ಧಃ ಸತಾರಂ ಶಶಿನಂ ಯಥಾ ॥

ಅನುವಾದ

ಸುಗ್ರೀವನೊಂದಿಗೆ ಅವನ ಪತ್ನೀ ರುಮೆಯೂ ಇದ್ದಳು. ನಕ್ಷತ್ರಗಳಿಂದ ಸುತ್ತುವರಿದ ಚಂದ್ರನಂತೆ, ಅವನು ಸ್ತ್ರೀಯರ ನಡುವೆ ನಿಂತು ಶೋಭಿಸುತ್ತಿದ್ದನು. ಅವನನ್ನು ನೋಡಿ ಲಕ್ಷ್ಮಣನು ಕ್ರೋಧದಿಂದ ಹೇಳಿದನು.॥6॥

ಮೂಲಮ್ - 7

ಸತ್ತ್ವಾಭಿಜನಸಂಪನ್ನಃ ಸಾನುಕ್ರೋಶೋ ಜಿತೇಂದ್ರಿಯಃ ।
ಕೃತಜ್ಞಃ ಸತ್ಯವಾದೀ ಚ ರಾಜಾ ಲೋಕೇ ಮಹೀಯತೇ ॥

ಅನುವಾದ

ವಾನರರಾಜನೇ! ಧೈರ್ಯವಂತ, ಕುಲೀನ, ದಯಾಳು. ಜಿತೇಂದ್ರಿಯ ಮತ್ತು ಸತ್ಯವಾದೀ ರಾಜನೇ ಜಗತ್ತಿನಲ್ಲಿ ಆದರಕ್ಕೆ ಪಾತ್ರನಾಗುತ್ತಾನೆ.॥7॥

ಮೂಲಮ್ - 8

ಯಸ್ತು ರಾಜಾ ಸ್ಥಿತೋಽಧರ್ಮೇ ಮಿತ್ರಾಣಾಮುಪಕಾರಿಣಾಮ್ ।
ಮಿಥ್ಯಾ ಪ್ರತಿಜ್ಞಾಂ ಕುರುತೇ ಕೋ ನೃಶಂಸತರಸ್ತತಃ ॥

ಅನುವಾದ

ಅಧರ್ಮದಲ್ಲಿ ಸ್ಥಿತನಾಗಿ ಉಪಕಾರೀ ಮಿತ್ರನ ಮುಂದೆ ಮಾಡಿದ ತನ್ನ ಪ್ರತಿಜ್ಞೆಯನ್ನು ಸುಳ್ಳಾಗಿಸುವವನಿಗಿಂತ ಮಿಗಿಲಾಗಿ ಅತ್ಯಂತ ಕ್ರೂರಿಯೂ ಯಾರಾಗಿರಬಲ್ಲನು.॥8॥

ಮೂಲಮ್ - 9

ಶತಮಶ್ವಾನೃತೇ ಹಂತಿ ಸಹಸ್ರಂ ತು ಗವಾನೃತೇ ।
ಆತ್ಮಾನಂ ಸ್ವಜನಂ ಹಂತಿ ಪುರುಷಃ ಪುರುಷಾನೃತೇ ॥

ಅನುವಾದ

ಕುದುರೆಯನ್ನು ದಾನ ಮಾಡುವೆನೆಂದು ಪ್ರತಿಜ್ಞೆ ಮಾಡಿ ಅದನ್ನು ನೆರವೇರಿಸದಿದ್ದರೆ ಅಶ್ವಾನೃತ (ಕುದುರೆಯ ಸಂಬಂಧವಾದ ಸುಳ್ಳು) ಎಂಬ ಪಾಪಕ್ಕೆ ಗುರಿಯಾಗುತ್ತಾನೆ. ನೂರು ಕುದುರೆಗಳನ್ನು ಕೊಂದ ಪಾಪವು ಅವನಿಗೆ ಉಂಟಾಗುತ್ತದೆ. ಹಸುವಿನ ವಿಷಯವಾಗಿ ಸುಳ್ಳು ಹೇಳಿದವನು (ಗೋದಾನ ಮಾಡುವುದಾಗಿ ಹೇಳಿ ಗೋದಾನ ಮಾಡದಿದ್ದರೆ) ಸಾವಿರ ಹಸುಗಳನ್ನು ಕೊಂದ ಪಾಪಕ್ಕೆ ಗುರಿಯಾಗುತ್ತಾನೆ. ಪುರುಷನೊಬ್ಬನಿಗೆ ಉಪಕಾರ ಮಾಡುವುದಾಗಿ ಪ್ರತಿಜ್ಞೆ ಮಾಡಿ ಆ ಪ್ರತಿಜ್ಞೆಯಂತೆ ನಡೆದುಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಂಡ ಮತ್ತು ಸ್ವಜನರನ್ನು ಕೊಂದ ಮಹಾಪಾಪಕ್ಕೆ ಗುರಿಯಾಗುತ್ತಾನೆ.॥9॥

ಮೂಲಮ್ - 10

ಪೂರ್ವಂ ಕೃತಾರ್ಥೋ ಮಿತ್ರಾಣಾಂ ನ ತತ್ಪ್ರತಿಕರೋತಿ ಯಃ ।
ಕೃತಘ್ನಃ ಸರ್ವಭೂತಾನಾಂ ಸ ವಧ್ಯಃ ಪ್ಲವಗೇಶ್ವರ ॥

ಅನುವಾದ

ಕಪೀಶ್ವರನೇ! ಹಿಂದೆ ಮಿತ್ರರಿಂದ ಉಪಕಾರವನ್ನು ಹೊಂದಿ ಕೃತಾರ್ಥನಾಗಿ ತಾನು ಪಡೆದ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡದಿರುವ ಕೃತಘ್ನನು ಸರ್ವಪ್ರಾಣಿಗಳಿಂದಲೂ ವಧೆಗೆ ಅರ್ಹನಾಗುತ್ತಾನೆ. ಅಂತಹವನು ನಿಶ್ಚಯವಾಗಿಯೂ ವಧಾರ್ಹನೇ ಸರಿ.॥10॥

ಮೂಲಮ್ - 11

ಗೀತೋಽಯಂ ಬ್ರಹ್ಮಣಾ ಶ್ಲೋಕಃ ಸರ್ವಲೋಕನಮಸ್ಕೃತಃ ।
ದೃಷ್ಟ್ವಾಕೃತಘ್ನಂ ಕ್ರುದ್ಧೇನ ತನ್ನಿಭೋದ ಪ್ಲವಂಗಮ ॥

ಅನುವಾದ

ಕಪಿರಾಜಾ! ಯಾರೋ ಕೃತಘ್ನನನ್ನು ನೋಡಿ ಕುಪಿತನಾಗಿ ಬ್ರಹ್ಮದೇವರು ಎಲ್ಲ ಜನರಿಗಾಗಿ ಆದರಣೀಯ ಈ ಒಂದು ಶ್ಲೋಕವನ್ನು ಹೇಳಿರುವರು; ಅದನ್ನು ಕೇಳು.॥11॥

ಮೂಲಮ್ - 12

ಗೋಘ್ನೇ ಚೈವ ಸುರಾಪೇ ಚ ಚೌರೇ ಭಗ್ನವ್ರತೇ ತಥಾ ।
ನಿಷ್ಕೃತಿರ್ವಿಹಿತಾ ಸದ್ಭಿಃ ಕೃತಘ್ನೇ ನಾಸ್ತಿ ನಿಷ್ಕೃತಿಃ ॥

ಅನುವಾದ

ಗೋಹತ್ಯೆ ಮಾಡಿದವ, ಹೆಂಡ ಕುಡುಕ, ಕಳ್ಳ, ವ್ರತಭಂಗ ಮಾಡುವ ಮನುಷ್ಯ ಇವರಿಗೆ ಸತ್ಪುರುಷರು ಪ್ರಾಯಶ್ಚಿತ್ತದ ವಿಧಾನ ಮಾಡಿರುವರು. ಆದರೆ ಕೃತಘ್ನನ ಉದ್ಧಾರಕ್ಕೆ ಯಾವುದೇ ಉಪಾಯವಿಲ್ಲ.॥12॥

ಮೂಲಮ್ - 13

ಅನಾರ್ಯಸ್ತ್ವಂ ಕೃತಘ್ನಶ್ಚ ಮಿಥ್ಯಾವಾದೀ ಚ ವಾನರ ।
ಪೂರ್ವಂ ಕೃತಾರ್ಥೋ ರಾಮಸ್ಯ ನ ತತ್ಪ್ರತಿಕರೋಷಿ ಯತ್ ॥

ಅನುವಾದ

ವಾನರನೇ! ನೀನು ಅನಾರ್ಯ, ಕೃತಘ್ನ, ಮಿಥ್ಯಾವಾದಿ ಯಾಗಿರುವೆ; ಏಕೆಂದರೆ ಶ್ರೀರಾಮಚಂದ್ರನ ಸಹಾಯದಿಂದ ನೀನು ಮೊದಲು ತನ್ನ ಕೆಲಸವನ್ನು ಮಾಡಿಕೊಂಡೆ, ಆದರೆ ಅವನಿಗೆ ಸಹಾಯ ಮಾಡುವ ಸಂದರ್ಭ ಬಂದಾಗ ಏನೂ ಮಾಡುವುದಿಲ್ಲ.॥13॥

ಮೂಲಮ್ - 14

ನನು ನಾಮ ಕೃತಾರ್ಥೇನ ತ್ವಯಾ ರಾಮಸ್ಯ ವಾನರ ।
ಸೀತಾಯಾ ಮಾರ್ಗಣೇ ಯತ್ನಃ ಕರ್ತವ್ಯಃ ಕೃತಮಿಚ್ಛತಾ ॥

ಅನುವಾದ

ವಾನರ! ನಿನ್ನ ಮನೋರಥವು ಸಿದ್ಧವಾಗಿದೆ; ಆದ್ದರಿಂದ ಈಗ ನೀನು ಪ್ರತ್ಯುಪಕಾರದ ಇಚ್ಛೆಯಿಂದ ಶ್ರೀರಾಮನ ಪತ್ನಿ ಸೀತೆಯನ್ನು ಹುಡುಕಲಿಕ್ಕಾಗಿ ಪ್ರಯತ್ನಿಸಬೇಕಾಗಿದೆ.॥14॥

ಮೂಲಮ್ - 15

ಸ ತ್ವಂ ಗ್ರಾಮ್ಯೇಷು ಭೋಗೇಷು ಸಕ್ತೋ ಮಿಥ್ಯಾಪ್ರತಿಶ್ರವಃ ।
ನ ತ್ವಾಂ ರಾಮೋ ವಿಜಾನಾತಿ ಸರ್ಪಂ ಮಂಡೂಕರಾವಿಣಮ್ ॥

ಅನುವಾದ

ನೀನು ತನ್ನ ಪ್ರತಿಜ್ಞೆಯನ್ನು ಸುಳ್ಳಾಗಿಸಿ ಗ್ರಾಮ್ಯಭೋಗಗಳಲ್ಲಿ ಆಸಕ್ತನಾಗಿರುವೆ. ನೀನು ಕಪ್ಪೆಯಂತೆ ಕೂಗುವ ಸರ್ಪನಾಗಿರುವೆ ಎಂಬುದು ಶ್ರೀರಾಮಚಂದ್ರನು ತಿಳಿಯನು. (ಹಾವು ಕಪ್ಪೆಯನ್ನು ಹಿಡಿದಾಗ ಕೇವಲ ಕಪ್ಪೆಯೇ ಕೂಗುತ್ತದೆ. ಬೇರೆ ಜನರು ಹಾವನ್ನು ಕಪ್ಪೆ ಎಂದೇ ತಿಳಿಯುತ್ತಾರೆ; ಆದರೆ ಅದು ವಾಸ್ತವದಲ್ಲಿ ಸರ್ಪವಾಗಿರುತ್ತದೆ. ಅದೇ ಸ್ಥಿತಿಯು ನಿನ್ನದಾಗಿದೆ. ನೀನು ಮಾತನಾಡುವುದೇ ಬೇರೆ ಮತ್ತು ಅದರ ಸ್ವರೂಪವೇ ಬೇರೆ.॥15॥

ಮೂಲಮ್ - 16

ಮಹಾಭಾಗೇನ ರಾಮೇಣ ಪಾಪಃ ಕರುಣವೇದಿನಾ ।
ಹರೀಣಾಂ ಪ್ರಾಪಿತೋ ರಾಜ್ಯಂ ತ್ವಂ ದುರಾತ್ಮಾ ಮಹಾತ್ಮನಾ ॥

ಅನುವಾದ

ಮಹಾಭಾಗ ಶ್ರೀರಾಮಚಂದ್ರನು ಪರಮಮಹಾತ್ಮ ಹಾಗೂ ದಯೆಯಿಂದ ದ್ರವಿತನಾಗುವವನು. ಆದ್ದರಿಂದ ಅವನು ನಿನ್ನಂತಹ ಪಾಪಿಯನ್ನು, ದುರಾತ್ಮನನ್ನು ವಾನರರ ರಾಜ್ಯಕ್ಕೆ ಒಡೆಯನನ್ನಾಗಿಸಿದನು.॥16॥

ಮೂಲಮ್ - 17

ಕೃತಂ ಚೇನ್ನಾಭಿಜಾನೀಷೇ ರಾಘವಸ್ಯ ಮಹಾತ್ಮನಃ ।
ಸದ್ಯಸ್ತ್ವಂ ನಿಶಿತೈರ್ಬಾಣೈರ್ಹತೋ ದ್ರಕ್ಷ್ಯಸಿ ವಾಲಿನಮ್ ॥

ಅನುವಾದ

ನೀನು ಮಹಾತ್ಮಾ ರಘುನಾಥನು ಮಾಡಿದ ಉಪಕಾರವನ್ನು ತಿಳಿಯದಿದ್ದರೆ ಶೀಘ್ರವಾಗಿ ಅವನ ಹರಿತವಾದ ಬಾಣಗಳಿಂದ ಸತ್ತು ವಾಲಿಯ ದರ್ಶನ ಮಾಡುವೆ.॥17॥

ಮೂಲಮ್ - 18

ನ ಸ ಸಂಕುಚಿತಃ ಪಂಥಾಯೇನ ವಾಲೀ ಹತೋ ಗತಃ ।
ಸಮಯೇತಿಷ್ಠ ಸುಗ್ರೀವ ಮಾ ವಾಲಿಪಥಮನ್ವಗಾಃ ॥

ಅನುವಾದ

ಸುಗ್ರೀವನೇ! ವಾಲಿಯು ಸತ್ತು ಯಾವ ದಾರಿಯಿಂದ ಹೋಗಿರುವನೋ, ಆ ದಾರಿಯು ಮುಚ್ಚಿಹೋಗಿಲ್ಲ. ಅದಕ್ಕಾಗಿ ನೀನು ನಿನ್ನ ಪ್ರತಿಜ್ಞೆಯಲ್ಲಿ ಸ್ಥಿರವಾಗಿರು. ವಾಲಿಯ ಮಾರ್ಗವನ್ನು ಅನುಸರಿಸಬೇಡ.॥18॥

ಮೂಲಮ್ - 19

ನ ನೂನಮಿಕ್ಷ್ವಾಕುವರಸ್ಯ ಕಾರ್ಮುಕಾ-
ಚ್ಛರಾಂಶ್ಚ ತಾನ್ ಪಶ್ಯಸಿ ವಜ್ರಸಂನಿಭಾನ್
ತತಃ ಸುಖಂ ನಾಮ ವಿಷೇವಸೇ ಸುಖೀ
ನ ರಾಮಕಾರ್ಯಂ ಮನಸಾಪ್ಯವೇಕ್ಷಸೇ ॥

ಅನುವಾದ

ಇಕ್ಷ್ವಾಕುವಂಶ ಶಿರೋಮಣಿ ಶ್ರೀರಾಮಚಂದ್ರನ ಧನುಸ್ಸಿನಿಂದ ಬಿಟ್ಟ ವಜ್ರತುಲ್ಯ ಬಾಣಗಳ ಕಡೆಗೆ ನಿನಗೆ ಗಮನ ಹೋಗುವುದಿಲ್ಲ. ಅದರಿಂದ ನೀನು ಗ್ರಾಮ್ಯಸುಖವನ್ನು ಸೇವಿಸುತ್ತಿರುವೆ ಹಾಗೂ ಅದರಲ್ಲೇ ಸುಖವೆಂದು ತಿಳಿದು ಶ್ರೀರಾಮನ ಕಾರ್ಯದ ಕುರಿತು ಮನಸ್ಸಿನಲ್ಲಿ ವಿಚಾರ ಮಾಡುವುದಿಲ್ಲ.॥19॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೂವತ್ತನಾಲ್ಕನೆಯ ಸರ್ಗ ಸಂಪೂರ್ಣವಾಯಿತು.॥34॥