वाचनम्
ಭಾಗಸೂಚನಾ
ಲಕ್ಷ್ಮಣನು ಕಿಷ್ಕಿಂಧಾಪಟ್ಟಣದ ಸೌಂದರ್ಯವನು ನೋಡುತ್ತಾ ಸುಗ್ರೀವನ ಅರಮನೆಗೆ ಹೋಗಿ ಕ್ರೋಧಪೂರ್ವಕ ಧನುಸ್ಸನ್ನು ಠೇಂಕರಿಸಿದುದು, ಭಯಗೊಂಡ ಸುಗ್ರೀವನು ಲಕ್ಷ್ಮಣನನ್ನು ಸಮಾಧಾನಗೊಳಿಸಲು ತಾರೆಯನ್ನು ಕಳುಹಿಸಿಕೊಟ್ಟುದು, ತಾರೆಯು ಲಕ್ಷ್ಮಣನನ್ನು ಸಮಾಧಾನಪಡಿಸಿ ಅಂತಃಪುರಕ್ಕೆ ಕರೆದೊಯ್ದುದು
ಮೂಲಮ್ - 1
ಅಥ ಪ್ರತಿಸಮಾದಿಷ್ಟೋ ಲಕ್ಷ್ಮಣಃ ಪರಿವೀರಹಾ ।
ಪ್ರವಿವೇಶ ಗುಹಾಂ ರಮ್ಯಾಂ ಕಿಷ್ಕಿಂಧಾಂ ರಾಮಶಾಸನಾತ್ ॥
ಅನುವಾದ
ಶತ್ರುವೀರಹಂತಕನಾದ ಲಕ್ಷ್ಮಣನು ಅಂಗದಾದಿಗಳ ಮೂಲಕ ಸುಗ್ರೀವನಿಂದ ಆಹ್ವಾನಿತನಾಗಿ, ಶ್ರೀರಾಮನ ಆಜ್ಞೆ ಯಂತೆ ರಮ್ಯವಾಗಿದ್ದ ಕಿಷ್ಕಿಂಧಾ ಗುಹೆಯನ್ನು ಪ್ರವೇಶಿಸಿದುದು.॥1॥
ಮೂಲಮ್ - 2
ದ್ವಾರಸ್ಥಾ ಹರಯಸ್ತತ್ರ ಮಹಾಕಾಯಾ ಮಹಾಬಲಾಃ ।
ಬಭೂವುರ್ಲಕ್ಷ್ಮಣಂ ದೃಷ್ಟ್ವಾ ಸರ್ವೇ ಪ್ರಾಂಜಲಯಃ ಸ್ಥಿತಾಃ ॥
ಅನುವಾದ
ಕಿಷ್ಕಿಂಧೆಯ ದ್ವಾರದಲ್ಲಿದ್ದ ವಿಶಾಲಕಾಯರಾದ ಮಹಾಬಲಿ ವಾನರರು ಲಕ್ಷ್ಮಣನನ್ನು ನೋಡಿ ಕೈಮುಗಿದುಕೊಂಡು ನಿಂತುಕೊಂಡರು.॥2॥
ಮೂಲಮ್ - 3
ನಿಶ್ವಸಂತಂ ತು ತಂ ದೃಷ್ಟ್ವಾ ಕ್ರುದ್ಧಂ ದಶರಥಾತ್ಮಜಮ್ ।
ಬಭೂವುರ್ಹರಯಸ್ತ್ರಸ್ತಾ ನ ಚೈನಂ ಪರ್ಯವಾರಯನ್ ॥
ಅನುವಾದ
ದೀರ್ಘವಾಗಿ ನಿಟ್ಟುಸಿರು ಬಿಡುತ್ತಿರುವ ದಶರಥನಂದನ ಲಕ್ಷ್ಮಣನನ್ನು ನೋಡಿ ಆ ಎಲ್ಲ ವಾನರರು ಅತ್ಯಂತ ಭಯಗೊಂಡರು. ಅದರಿಂದ ಅವರು ಅವನನ್ನು ಸುತ್ತುವರೆದು ಜೊತೆ-ಜೊತೆಗೆ ನಡೆಯದಾದರು.॥3॥
ಮೂಲಮ್ - 4
ಸ ತಾಂ ರತ್ನಮಯೀಂ ದಿವ್ಯಾಂ ಶ್ರೀಮಾನ್ ಪುಷ್ಪಿತಕಾನನಾಮ್ ।
ರಮ್ಯಾಂ ರತ್ನಸಮಾಕೀರ್ಣಾಂ ದದರ್ಶ ಮಹತೀಂ ಗುಹಾಮ್ ॥
ಅನುವಾದ
ಶ್ರೀಮಾನ್ ಲಕ್ಷ್ಮಣನು ದ್ವಾರದೊಳಗೆ ಪ್ರವೇಶಿಸಿ ನೋಡುತ್ತಾನೆ ಕಿಷ್ಕಿಂಧಾಪುರಿಯು ಒಂದು ದೊಡ್ಡ ರಮಣೀಯ ಗುಹೆಯ ರೂಪದಲ್ಲಿ ನೆಲೆಸಿತ್ತು. ಆ ರತ್ನಮಯಪುರಿಯು ನಾನಾ ಪ್ರಕಾರದ ರತ್ನಗಳಿಂದ ತುಂಬಿದ್ದರಿಂದ ದಿವ್ಯವಾದ ಶೋಭೆಯಿಂದ ಸಂಪನ್ನವಾಗಿತ್ತು. ಅಲ್ಲಿಯ ವನ-ಉಪವನಗಳು ಪುಷ್ಪಶೋಭಿತವಾಗಿ ಕಾಣುತ್ತಿದ್ದವು.॥4॥
ಮೂಲಮ್ - 5
ಹರ್ಮ್ಯಪ್ರಾಸಾದಸಂಬಾಧಾಂ ನಾನಾ ರತ್ನೋಪಶೋಭಿತಾಮ್ ।
ಸರ್ವಕಾಮಲೈರ್ವಕ್ಷೈಃ ಪುಷ್ಪಿತೈರುಪಶೋಭಿತಾಮ್ ॥
ಅನುವಾದ
ಶ್ರೀಮಂತರ ಭವನಗಳಿಂದ, ದೇವಮಂದಿರಗಳಿಂದ, ಅರಮನೆಗಳಿಂದ ಆ ಪುರಿಯು ಅತ್ಯಂತ ಶ್ರೀಮಂತವಾಗಿ ತೋರುತ್ತಿತ್ತು. ನಾನಾ ಪ್ರಕರಾದ ರತ್ನಗಳು ಅದರ ಶೋಭೆಯನ್ನು ಹೆಚ್ಚಿಸಿದ್ದವು. ಸಮಸ್ತ ಕಾಮನೆಗಳನ್ನು ಪೂರ್ಣಗೊಳಿಸುವ ಫಲಗಳಿಂದ ಕೂಡಿದ ವೃಕ್ಷಗಳಿಂದ ಆ ಪುರಿಯು ಸುಶೋಭಿತವಾಗಿತ್ತು.॥5॥
ಮೂಲಮ್ - 6
ದೇವಗಂಧರ್ವಪುತ್ರೈಶ್ಚ ವಾನರೈಃ ಕಾಮರೂಪಿಭಿಃ ।
ದಿವ್ಯಮಾಲ್ಯಾಂಬರಧರೈಃ ಶೋಭಿತಾಂ ಪ್ರಿಯದರ್ಶನೈಃ ॥
ಅನುವಾದ
ಅಲ್ಲಿ ದಿವ್ಯಮಾಲೆ, ದಿವ್ಯ ವಸ್ತ್ರಗಳನ್ನು ಧರಿಸಿದ ಪರಮಸುಂದರ ವಾನರರು ವಾಸವಾಗಿದ್ದರು. ಅವರು ದೇವತೆಗಳ ಮತ್ತು ಗಂಧರ್ವರ ಪುತ್ರರೂ, ಇಚ್ಛಾನುಸಾರ ರೂಪ ಧರಿಸುವವರಾಗಿದ್ದರು.॥6॥
ಮೂಲಮ್ - 7
ಚಂದನಾಗರುಪದ್ಮಾನಾಂ ಗಧೈಃ ಸುರಭಿಗಂಧಿತಾಮ್ ।
ಮೈರೇಯಾಣಾಂ ಮಧೂನಾಂ ಚ ಸಂಮೋದಿತ ಮಹಾಪಥಾಮ್ ॥
ಅನುವಾದ
ಅಲ್ಲಿ ಚಂದನ, ಅಗರು, ಕಮಲಗಳ ಮನೋಹರ ಸುಗಂಧ ಹರಡಿತ್ತು. ಆ ಪುರಿಯ ಉದ್ದ-ಅಗಲವಾದ ಬೀದಿಗಳು ಮೈರೇಯ ಹಾಗೂ ಮಧುವಿನ ಆಮೋದದಿಂದ ತುಂಬಿ ಹೋಗಿದ್ದವು.॥7॥
ಮೂಲಮ್ - 8
ವಿಂಧ್ಯಮೇರುಗಿರಿಪ್ರಖ್ಯೈಃ ಪ್ರಾಸಾದೈನೈಕಭೂಮಿಭಿಃ ।
ದದರ್ಶ ಗಿರಿನದ್ಯಶ್ಚ ವಿಮಲಾಸ್ತತ್ರ ರಾಘವಃ ॥
ಅನುವಾದ
ಆ ಪುರಿಯಲ್ಲಿ ವಿಂಧ್ಯಾಚಲ ಮತ್ತು ಮೇರುವಿನಂತೆ ಎತ್ತರವಾದ ಅನೇಕ ಮಹಡಿಗಳುಳ್ಳ ಸೌಧಗಳಿದ್ದವು. ಲಕ್ಷ್ಮಣನು ಆ ಗುಹೆಯ ಹತ್ತಿರದಲ್ಲೇ ನೀರಿನಿಂದ ತುಂಬಿದ ಬೆಟ್ಟದ ನದಿಗಳನ್ನು ನೋಡಿದನು.॥8॥
ಮೂಲಮ್ - 9
ಅಂಗದಸ್ಯ ಗೃಹಂ ರಮ್ಯಂ ಮೈಂದಸ್ಯ ದ್ವಿವಿದಸ್ಯ ಚ ।
ಗವಯಸ್ಯ ಗವಾಕ್ಷಸ್ಯ ಗಜಸ್ಯ ಶರಭಸ್ಯ ಚ ॥
ಮೂಲಮ್ - 10
ವಿದ್ಯುನ್ಮಾಲೇಶ್ಚ ಸಂಪಾತೇಃ ಸೂರ್ಯಾಕ್ಷಸ್ಯ ಹನೂಮತಃ ।
ವೀರಬಾಹೋಃ ಸುಬಾಹೋಶ್ಚ ನಲಸ್ಯ ಚ ಮಹಾತ್ಮನಃ ॥
ಮೂಲಮ್ - 11
ಕುಮುದಸ್ಯ ಸುಷೇಣಸ್ಯ ತಾರಜಾಂಬವತೋಸ್ತಥಾ ।
ದಧಿವಕ್ತ್ರಸ್ಯ ನೀಲಸ್ಯ ಸುಪಾಟಲಸುನೇತ್ರಯೋಃ ॥
ಮೂಲಮ್ - 12
ಏತೇಷಾಂ ಕಪಿಮುಖ್ಯಾನಾಂರಾಜಮಾರ್ಗೇ ಮಹಾತ್ಮನಾಮ್ ।
ದದರ್ಶ ಗೃಹಮುಖ್ಯಾನಿ ಮಹಾಸಾರಾಣಿ ಲಕ್ಷ್ಮಣಃ ॥
ಅನುವಾದ
ಅವನು ರಾಜಬೀದಿಯಲ್ಲಿ ಅಂಗದನ ರಮಣೀಯ ಭವನವನ್ನು ನೋಡಿದನು. ಜೊತೆಗೆ ಅಲ್ಲಿ ಮೈಂದ, ದ್ವಿವಿದ, ಗವಯ, ಗವಾಕ್ಷ, ಗಜ, ಶರಭ, ವಿದ್ಯುನ್ಮಾಲೀ, ಸಂಪಾತಿ, ಸೂರ್ಯಾಕ್ಷ, ಹನುಮಂತ, ವೀರಬಾಹು, ಸುಬಾಹು, ಮಹಾತ್ಮಾ ನಳ, ಕುಮುದ, ಸುಷೇಣ, ತಾರ, ಜಾಂಬವಂತ, ದಧಿಮುಖ, ನೀಲ, ಸುಪಾಟಲ ಮತ್ತು ಸುನೇತ್ರ - ಈ ಮಹಾಮನಸ್ವೀ ವಾನರಶ್ರೇಷ್ಠರ ಅತ್ಯಂತ ಸುದೃಢ ಶ್ರೇಷ್ಠ ಭವನಗಳೂ ಲಕ್ಷ್ಮಣನಿಗೆ ಕಂಡು ಬಂದವು. ಅವೆಲ್ಲವೂ ರಾಜಬೀದಿಯಲ್ಲೇ ನಿರ್ಮಾಣಗೊಂಡಿದ್ದವು.॥9-12॥
ಮೂಲಮ್ - 13
ಪಾಂಡುರಾಭ್ರಪ್ರಕಾಶಾನಿ ದಿವ್ಯಮಾಲ್ಯಯುತಾನಿ ಚ ।
ಪ್ರಭೂತಧನಧಾನ್ಯಾನಿ ಸ್ತ್ರೀರತ್ನೈಃ ಶೋಭಿತಾನಿ ಚ ॥
ಅನುವಾದ
ಆ ಎಲ್ಲ ಭವನಗಳು ಬಿಳಿಯ ಮೋಡಗಳಂತೆ ಪ್ರಕಾಶಿಸುತ್ತಿದ್ದವು. ಅವನ್ನು ಪುಷ್ಪಮಾಲೆಗಳಿಂದ ಅಲಂಕರಿಸಿದ್ದರು. ಅವು ಹೇರಳ ಧನ-ಧಾನ್ಯಗಳಿಂದ ಸಂಪನ್ನವಾಗಿದ್ದು, ರತ್ನಪ್ರಿಯ ರಮಣಿಯತೆಯಿಂದ ಸುಶೋಭಿತವಾಗಿದ್ದವು.॥13॥
ಮೂಲಮ್ - 14
ಪಾಂಡುರೇಣ ಚ ಶೈಲೇನ ಪರಿಕ್ಷಿಪ್ತಂ ದುರಾಸದಮ್ ।
ವಾನರೇಂದ್ರಗೃಹಂ ರಮ್ಯಂ ಮಹೇಂದ್ರಸದನೋಪಮಮ್ ॥
ಅನುವಾದ
ವಾನರರಾಜಾ ಸುಗ್ರೀವನ ಸುಂದರ ಅರಮನೆಯು ಇಂದ್ರಸದನದಂತೆ ರಮಣೀಯವಾಗಿ ಕಾಣುತ್ತಿತ್ತು. ಅದರಲ್ಲಿ ಪ್ರವೇಶಿಸುವುದು ಯಾರಿಗಾದರೂ ಅತ್ಯಂತ ಕಠಿಣವಾಗಿತ್ತು. ಅದು ಶ್ವೇತಪರ್ವತಗಳಿಂದ ಸುತ್ತುವರಿದಿತ್ತು.॥14॥
ಮೂಲಮ್ - 15
ಶುಕ್ಲೈಃ ಪ್ರಾಸಾದಶಿಖರೈಃ ಕೈಲಾಸಶಿಖರೋಪಮೈಃ ।
ಸರ್ವಕಾಮಲೈರ್ವೃಕ್ಷೈಃ ಪುಷ್ಪಿತೈರುಪಶೋಭಿತಮ್ ॥
ಅನುವಾದ
ಕೈಲಾಸ ಶಿಖರದಂತೆ ಶ್ವೇತ ಗೋಪುರಗಳಿಂದ, ಎಲ್ಲ ಕಾಮನೆಗಳನ್ನು ಪೂರ್ಣಗೊಳಿಸುವ ಫಲಗಳಿಂದ ಕೂಡಿದ, ಪುಷ್ಪಿತ ದಿವ್ಯ ವೃಕ್ಷಗಳು ಆ ರಾಜಭವನದ ಶೋಭೆಯನ್ನು ಹೆಚ್ಚಿಸಿದ್ದವು.॥15॥
ಮೂಲಮ್ - 16
ಮಹೇಂದ್ರದತ್ತೈಃ ಶ್ರೀಮದ್ಭಿರ್ನೀಲಜೀಮೂತಸಂನಿಭೈಃ ।
ದಿವ್ಯಪುಷ್ಪಲೈರ್ವೃಕ್ಷೈಃ ಶೀತಚ್ಛಾಯೈರ್ಮನೋರಮೈಃ ॥
ಅನುವಾದ
ಇಂದ್ರನು ಕೊಟ್ಟಿರುವ ಪರಮಸುಂದರ, ನೀಲಮೇಘದಂತೆ ಶ್ಯಾಮಲ ಹಾಗೂ ಶೀತಲ ಛಾಯೆಯಿಂದ ಕೂಡಿದ, ದಿವ್ಯಫಲ-ಪುಷ್ಪಗಳಿಂದ ಸಂಪನ್ನವಾದ ಅನೇಕ ಮನೋರಮ ವೃಕ್ಷಗಳನ್ನು ಅಲ್ಲಿ ನೆಟ್ಟಿದ್ದರು.॥16॥
ಮೂಲಮ್ - 17
ಹರಿಭಿಃ ಸಂವೃತದ್ವಾರಂ ಬಲಿಭಿಃ ಶಸ್ತ್ರಪಾಣಿಭಿಃ ।
ದಿವ್ಯಮಾಲ್ಯಾವೃತಂ ಶುಭ್ರಂ ತಪ್ತಕಾಂಚನತೋರಣಮ್ ॥
ಅನುವಾದ
ಅನೇಕ ಬಲವಂತ ವಾನರರು ಕೈಗಳಲ್ಲಿ ಆಯುಧಗಳನ್ನು ಪಿಡಿದು ದ್ವಾರದಲ್ಲಿ ಕಾವಲು ಕಾಯುತ್ತಿದ್ದರು. ಆ ಸುಂದರ ಅರಮನೆ ದಿವ್ಯಮಾಲೆಗಳಿಂದ ಅಲಂಕೃತವಾಗಿತ್ತು. ಅದರ ಹೊರ ಬಾಗಿಲು ಚೊಕ್ಕ ಚಿನ್ನದಿಂದ ಮಾಡಿದ್ದರು.॥17॥
ಮೂಲಮ್ - 18
ಸುಗ್ರೀವಸ್ಯ ಗೃಹಂ ರಮ್ಯಂ ಪ್ರವಿವೇಶ ಮಹಾಬಲಃ ।
ಅವಾರ್ಯಮಾಣಃ ಸೌಮಿತ್ರಿರ್ಮಹಾಭ್ರಮಿವ ಭಾಸ್ಕರಃ ॥
ಅನುವಾದ
ಮಹಾಬಲಿ ಸುಮಿತ್ರಾ ಕುಮಾರ ಲಕ್ಷ್ಮಣನು ಸುಗ್ರೀವನ ಆ ರಮಣೀಯ ಭವನವನ್ನು ಸೂರ್ಯನು ಮಹಾಮೇಘದೊಳಗೆ ಪ್ರವಿಷ್ಟನಾದಂತೆ ಪ್ರವೇಶಿಸಿದನು. ಆಗ ಅವನನ್ನು ಯಾರೂ ತಡೆಯಲಿಲ್ಲ.॥18॥
ಮೂಲಮ್ - 19
ಸ ಸಪ್ತ ಕಕ್ಷ್ಯಾ ಧರ್ಮಾತ್ಮಾ ಯಾನಾಸನ ಸಮಾವೃತಾಃ ।
ದದರ್ಶ ಸುಮಹದ್ಗುಪ್ತಂ ದದರ್ಶಾಂತಃಪುರಂ ಮಹತ್ ॥
ಅನುವಾದ
ಧರ್ಮಾತ್ಮಾ ಲಕ್ಷ್ಮಣನು ವಾಹನಗಳಿಂದ, ವಿವಿಧ ಆಸನಗಳಿಂದ ಸುಶೋಭಿತ ಆ ಭವನದ ಆ ಏಳು ಹಜಾರಗಳನ್ನು ದಾಟಿ ಬಹಳ ಗುಪ್ತವಾದ ವಿಶಾಲವಾದ ಅಂತಃಪುರವನ್ನು ನೋಡಿದನು.॥19॥
ಮೂಲಮ್ - 20
ಹೈಮರಾಜತಪರ್ಯಂಕೈರ್ಬಹುಭಿಶ್ಚ ವರಾಸನೈಃ ।
ಮಹಾರ್ಹಾಸ್ತರಣೋಪೇತೈಸ್ತತ್ರ ತತ್ರ ಸಮಾವೃತಮ್ ॥
ಅನುವಾದ
ಅದರಲ್ಲಿ ಎಲ್ಲೆಡೆ ಬೆಳ್ಳಿ-ಬಂಗಾರದ ಅನೆಕ ಮಂಚಗಳನ್ನು, ಶ್ರೇಷ್ಠ ಆಸನಗಳನ್ನು ಇರಿಸಿದ್ದರು. ಅವೆಲ್ಲವುಗಳ ಮೇಲೆ ಅಮೂಲ್ಯ ಹಾಸಿಗೆಗಳನ್ನು ಹಾಸಿದ್ದರು. ಅವೆಲ್ಲವುಗಳಿಂದ ಆ ಅಂತಃಪುರವು ಸುಸಜ್ಜಿತವಾಗಿ ಕಾಣುತ್ತಿತ್ತು.॥20॥
ಮೂಲಮ್ - 21
ಪ್ರವಿಶನ್ನೇವ ಸತತಂ ಶುಶ್ರಾವ ಮಧುರಸ್ವನಮ್ ।
ತಂತ್ರೀಗೀತ ಸಮಾಕೀರ್ಣಂ ಸಮತಾಲಪದಾಕ್ಷರಮ್ ॥
ಅನುವಾದ
ಅದನ್ನು ಪ್ರವೇಶಿಸುತ್ತಲೇ ಲಕ್ಷ್ಮಣನ ಕಿವಿಗೆ ನಿರಂತರ ನಿನಾದಿಸುತ್ತಿದ್ದ ಇಂಪಾದ ಸಂಗೀತ ಕೇಳಿ ಬಂತು. ವೀಣೆಯೊಂದಿಗೆ ಯಾರೋ ಕೋಮಲ ಕಂಠದಿಂದ ಹಾಡುತ್ತಿದ್ದರು. ಪ್ರತಿ ಅಕ್ಷರದ ಉಚ್ಚಾರ ತಾಳಬದ್ಧವಾಗಿತ್ತು.॥21॥
ಮೂಲಮ್ - 22
ಬಹ್ವೀಶ್ಚ ವಿವಿಧಾಕಾರಾ ರೂಪಯೌವನಗರ್ವಿತಾಃ ।
ಸ್ತ್ರಿಯಃ ಸುಗ್ರೀವಭವನೇ ದದರ್ಶ ಸ ಮಹಾಬಲಃ ॥
ಅನುವಾದ
ಮಹಾಬಲಿ ಲಕ್ಷ್ಮಣನು ಸುಗ್ರೀವನ ಆ ಅಂತಃಪುರದಲ್ಲಿ ರೂಪ-ಯೌವನ ಗರ್ವಿತರಾದ ಅನೇಕ ಬಣ್ಣಗಳ ಸುಂದರ ಸ್ತ್ರೀಯರಿರುವುದನ್ನು ನೋಡಿದನು.॥22॥
ಮೂಲಮ್ - 23
ದೃಷ್ಟ್ವಾಭಿಜನಸಂಪನ್ನಾಶ್ಚಿತ್ರಮಾಲ್ಯಕೃತಸ್ರಜಃ ।
ಫಲಮಾಲ್ಯಕೃತವ್ಯಗ್ರಾ ಭೂಷಣೋತ್ತಮಭೂಷಿತಾಃ ॥
ಮೂಲಮ್ - 24
ನಾತೃಪ್ತಾನ್ ನಾತಿ ಚಾವ್ಯಗ್ರಾನ್ನಾನುದಾತ್ತ ಪರಿಚ್ಛದಾನ್ ।
ಸುಗ್ರೀವಾನುಚರಾಂಶ್ಚಾಪಿ ಲಕ್ಷಯಾಮಾಸ ಲಕ್ಷ್ಮಣಃ ॥
ಅನುವಾದ
ಅವರೆಲ್ಲರೂ ಉತ್ತಮ ಕುಲದಲ್ಲಿ ಹುಟ್ಟಿದ್ದು, ಪುಷ್ಪಗುಚ್ಛಗಳಿಂದ ಅಲಂಕೃತರಾಗಿದ್ದರು. ಉತ್ತಮ ಪುಷ್ಪಹಾರಗಳ ನಿರ್ಮಾಣದಲ್ಲಿ ತೊಡಗಿದ್ದ ಅವರು ಸುಂದರ ಒಡವೆಗಳಿಂದ ಅಲಂಕೃತರಾಗಿದ್ದರು. ಅವೆರಲ್ಲರನ್ನು ನೋಡಿ ಲಕ್ಷ್ಮಣನು ಸುಗ್ರೀವನ ಸೇವಕರ ಕಡೆಗೆ ಕಣ್ಣು ಹಾಯಿಸಿದನು, ಅವರೆಲ್ಲರೂ ತೃಪ್ತರಾಗಿದ್ದು, ಸಂತುಷ್ಟರಾಗಿದ್ದರು. ಸ್ವಾಮಿ ಕಾರ್ಯವನ್ನು ಮಾಡಲು ಅತ್ಯಂತ ಸ್ಫೂರ್ತಿ ಅವರಲ್ಲಿತ್ತು. ಅವರು ಉತ್ತಮ ವಸ್ತ್ರಾಭೂಷಣಗಳನ್ನು ತೊಟ್ಟಿದ್ದರು.॥23-24॥
ಮೂಲಮ್ - 25
ಕೂಜಿತಂ ನೂಪುರಾಣಾಂ ಚ ಕಾಂಚೀನಾಂ ನಿಃಸ್ವನಂ ತಥಾ ।
ಸ ನಿಶಮ್ಯ ತತಃ ಶ್ರೀಮನ್ ಸೌಮಿತ್ರಿರ್ಲಜ್ಜಿತೋಽಭವತ್ ॥
ಅನುವಾದ
ನೂಪುರಗಳ ನಿನಾದ ಮತ್ತು ಓಡ್ಯಾಣದ ಝಣತ್ಕಾರಗಳನ್ನು ಕೇಳಿ ಶ್ರೀಮಾನ್ ಸುಮಿತ್ರಾಕುಮಾರ ಲಕ್ಷ್ಮಣನು ನಾಚಿಕೊಂಡನು. (ಪರಸ್ತ್ರೀಯರ ಕಡೆಗೆ ದೃಷ್ಟಿ ಹರಿದಿದ್ದರಿಂದ ಅವನಿಗೆ ಸಂಕೋಚವಾಯಿತು..॥25॥
ಮೂಲಮ್ - 26
ರೋಷವೇಗಪ್ರಕುಪಿತಃ ಶ್ರುತ್ವಾ ಚಾಭರಣಸ್ವನಮ್ ।
ಚಕಾರ ಜ್ಞಾಸ್ವನಂ ವೀರೋ ದಿಶಃ ಶಬ್ದೇನ ಪೂರಯನ್ ॥
ಅನುವಾದ
ಅನಂತರ ಪುನಃ ಒಡವೆಗಳ ಸದ್ದನ್ನು ಕೇಳಿ ವೀರ ಲಕ್ಷ್ಮಣನು ರೋಷಾವೇಶಿತನಾಗಿ ಕುಪಿತಗೊಂಡನು. ಅವನು ಧನುಷ್ಟಂಕಾರ ಮಾಡಿದನು, ಅದರ ಧ್ವನಿಯಿಂದ ಎಲ್ಲ ದಿಕ್ಕುಗಳು ಪ್ರತಿಧ್ವನಿಸಿದವು.॥26॥
ಮೂಲಮ್ - 27
ಚಾರಿತ್ರೇಣ ಮಹಾಬಾಹುರಪಕೃಷ್ಟಃ ಸ ಲಕ್ಷ್ಮಣಃ ।
ತಸ್ಥಾವೇಕಾಂತಮಾಶ್ರಿತ್ಯ ರಾಮಕೋಪಸಮನ್ವಿತಃ ॥
ಅನುವಾದ
ರಘುಕುಲೋಚಿತ ಸದಾಚಾರವನ್ನು ಗಮನದಲ್ಲಿಟ್ಟು ಮಹಾಬಾಹು ಲಕ್ಷ್ಮಣನು ಸ್ವಲ್ಪ ಹಿಂದೆ ಸರಿದು ಏಕಾಂತದಲ್ಲಿ ಹೋಗಿ ನಿಂತುಕೊಂಡನು. ಶ್ರೀರಾಮನ ಕಾರ್ಯಸಿದ್ಧಿಗಾಗಿ ಯಾವುದೇ ಪ್ರಯತ್ನವು ಅಲ್ಲಿ ಕಾಣದಿದ್ದಾಗ ಮನಸ್ಸಿನಲ್ಲೇ ಕುಪಿತನಾದನು.॥27॥
ಮೂಲಮ್ - 28
ತೇನ ಚಾಪಸ್ವನೇನಾಥ ಸುಗ್ರೀವಃ ಪ್ಲವಗಾಧಿಪಃ ।
ವಿಜ್ಞಾಯಾಗಮನಂ ತ್ರಸ್ತಃ ಸ ಚಚಾಲ ವರಾಸನಾತ್ ॥
ಅನುವಾದ
ಧನುಸ್ಸಿನ ಠೇಂಕಾರವನ್ನು ಕೇಳಿ ಲಕ್ಷ್ಮಣನು ಇಲ್ಲಿಯವರೆಗೆ ಬಂದಿರುವನೆಂದು ಸುಗ್ರೀವನು ತಿಳಿದುಕೊಂಡನು. ಮತ್ತೆ ಅವನು ಭಯದಿಂದ ಕಂಗಾಲಾಗಿ ತನ್ನ ಸಿಂಹಾಸನವನ್ನು ಬಿಟ್ಟು ನಿಂತುಕೊಂಡನು.॥28॥
ಮೂಲಮ್ - 29
ಅಂಗದೇನ ಯಥಾ ಮಹ್ಯಂ ಪುರಸ್ತಾತ್ಪ್ರತಿವೇದಿತಮ್ ।
ಸುವ್ಯಕ್ತಮೇಷ ಸಂಪ್ರಾಪ್ತಃ ಸೌಮಿತ್ರಿರ್ಭ್ರಾತೃವತ್ಸಲಃ ॥
ಅನುವಾದ
ಅಂಗದನು ಮೊದಲು ನನಗೆ ತಿಳಿಸಿದಂತೆಯೇ ಭ್ರಾತೃವತ್ಸಲ ಸುಮಿತ್ರಾನಂದನ ಲಕ್ಷ್ಮಣನು ಖಂಡಿತವಾಗಿ ಇಲ್ಲಿಗೆ ಬಂದಿರುವನೆಂದು ಮನಸ್ಸಿನಲ್ಲೇ ಯೋಚಿಸತೊಡಗಿದನು.॥29॥
ಮೂಲಮ್ - 30
ಅಂಗದೇನ ಸಮಾಖ್ಯಾತೋ ಜ್ಞಾಸ್ವನೇನ ಚ ವಾನರಃ ।
ಬುಬುಧೇ ಲಕ್ಷ್ಮಣಂ ಪ್ರಾಪ್ತಂ ಮುಖಂ ಚಾಸ್ಯ ವ್ಯಶುಷ್ಯತ ॥
ಅನುವಾದ
ಲಕ್ಷ್ಮಣನ ಆಗಮನದ ಸಮಾಚಾರ ಅಂಗದನಿಂದ ಮೊದಲೇ ತಿಳಿದಿತ್ತು. ಈ ಧನುಷ್ಟಂಕಾರದಿಂದ ಸುಗ್ರೀವನಿಗೆ ಅವನು ಇಲ್ಲಿಗೆ ಬಂದಿರುವ ಪ್ರತ್ಯಕ್ಷ ಅನುಭವವಾಯಿತು. ಇದರಿಂದ ಅವನ ಮುಖ ಬಿಳಿಚಿಕೊಂಡಿತ.॥30॥
ಮೂಲಮ್ - 31
ತತಸ್ತಾರಾಂ ಹರಿಶ್ರೇಷ್ಠಃ ಸುಗ್ರೀವಃ ಪ್ರಿಯದರ್ಶನಾಮ್ ।
ಉವಾಚ ಹಿತಮವ್ಯಗ್ರಸ್ತ್ರಾಸಸಂಭ್ರಾಂತಮಾನಸಃ ॥
ಅನುವಾದ
ಭಯದಿಂದಾಗಿ ಅವನು ಮನಸ್ಸಿನಲ್ಲೇ ಗಾಬರಿಗೊಂಡನು. (ಲಕ್ಷ್ಮಣನ ಮುಂದೆ ಕೂಡಲೆ ಹೋಗುವ ಸಾಹಸ ಅವನಿಗೆ ಆಗಲಿಲ್ಲ.) ಆದರೂ ಹೇಗೋ ಧೈರ್ಯತಂದುಕೊಂಡು ಸುಗ್ರೀವನು ಪರಮ ಸುಂದರಿಯಾದ ತಾರೆಯಲ್ಲಿ ಇಂತೆಂದನು.॥31॥
ಮೂಲಮ್ - 32
ಕಿಂ ನು ರುಟ್ಕಾರಣಂ ಸುಭ್ರು ಪ್ರಕೃತ್ಯಾ ಮೃದುಮಾನಸಃ ।
ಸರೋಷ ಇವ ಸಂಪ್ರಾಪ್ತೋ ಯೇನಾಯಂ ರಾಘವಾನುಜಃ ॥
ಅನುವಾದ
ಸುಂದರೀ! ಈ ಲಕ್ಷ್ಮಣನ ರೋಷದ ಕಾರಣ ಏನಿರಬಹುದು? ಸ್ವಭಾವತಃ ಕೋಮಲ ಚಿತ್ತನಾಗಿದ್ದರೂ ಈ ಶ್ರೀರಘುನಾಥನ ತಮ್ಮನು ರುಷ್ಟನಾಗಿ ಇಲ್ಲಿಗೆ ಆಗಮಿಸಿರುವನು.॥32॥
ಮೂಲಮ್ - 33
ಕಿಂ ಪಶ್ಯಸಿ ಕುಮಾರಸ್ಯ ರೋಷಸ್ಥಾನಮನಿಂದಿತೇ ।
ನ ಖಲ್ವಕಾರಣೇ ಕೋಪಮಾಹರೇನ್ನರಪುಂಗವಃ ॥
ಅನುವಾದ
ಅನಿಂದಿತೇ! ನೀನು ನೋಡಿದಂತೆ ಕುಮಾರ ಲಕ್ಷ್ಮಣನ ರೋಷಕ್ಕೆ ಆಧಾರವೇನು? ಇವನು ಮನುಷ್ಯರಲ್ಲಿ ಶ್ರೇಷ್ಠನಾಗಿದ್ದಾನೆ. ಆದ್ದರಿಂದ ಕಾರಣವಿಲ್ಲದೆ ಖಂಡಿತವಾಗಿ ಕ್ರೋಧಗೊಳ್ಳಲಾರನು.॥33॥
ಮೂಲಮ್ - 34
ಯದ್ಯ ಕೃತಮಸ್ಮಾಭಿರ್ಬುಧ್ಯಸೇ ಕಿಂಚಿದಪ್ರಿಯಮ್ ।
ತದ್ಬುದ್ಧ್ಯಾ ಸಂಪ್ರಧಾರ್ಯಾಶು ಕ್ಷಿಪ್ರಮೇವಾಭಿಧೀಯತಾಮ್ ॥
ಅನುವಾದ
ನಾವು ಇವನಿಗೆ ಯಾವುದಾದರೂ ಅಪರಾಧ ಮಾಡಿದ್ದರೆ, ನಿನಗೆ ಅದು ತಿಳಿದಿದ್ದರೆ, ನೀನು ಬುದ್ಧಿಯಿಂದ ವಿಚಾರಮಾಡಿ ಬೇಗನೇ ಹೇಳು.॥34॥
ಮೂಲಮ್ - 35
ಅಥವಾ ಸ್ವಯಮೇವೈನಂ ದ್ರಷ್ಟುಮರ್ಹಸಿ ಭಾಮಿನಿ ।
ವಚನೈಃ ಸಾಂತ್ವಯುಕ್ತೈಶ್ಚ ಪ್ರಸಾದಯಿತುಮರ್ಹಸಿ ॥
ಅನುವಾದ
ಅಥವಾ ಭಾಮಿನೀ! ನೀನು ಸ್ವತಃ ಹೋಗಿ ಲಕ್ಷ್ಮಣನನ್ನು ನೋಡು ಮತ್ತು ಸಾಂತ್ವನಯುಕ್ತ ಮಾತನ್ನು ಹೇಳಿ ಅವನನ್ನು ಪ್ರಸನ್ನಗೊಳಿಸುವ ಪ್ರಯತ್ನ ಮಾಡು.॥35॥
ಮೂಲಮ್ - 36
ತ್ವದ್ದರ್ಶನೇವಿಶುದ್ಧಾತ್ಮಾ ನ ಸ್ಮ ಕೋಪಂ ಕರಿಷ್ಯತಿ ।
ನಹಿ ಸ್ತ್ರೀಷು ಮಹಾತ್ಮಾನಃ ಕ್ವಚಿತ್ಕುರ್ವಂತಿ ದಾರುಣಮ್ ॥
ಅನುವಾದ
ಅವನ ಹೃದಯ ಶುದ್ಧವಾಗಿದೆ. ನಿನ್ನ ಎದುರಿಗೆ ಅವನು ಕ್ರೋಧಗೊಳ್ಳಲಾರನು; ಏಕೆಂದರೆ ಮಹಾತ್ಮರು ಸ್ತ್ರೀಯರ ಕುರಿತು ಎಂದು ಕಠೋರವಾಗಿ ವರ್ತಿಸುವುದಿಲ್ಲ.॥36॥
ಮೂಲಮ್ - 37
ತ್ವಯಾ ಸಾಂತ್ವೈರುಪಕ್ರಾಂತಂ ಪ್ರಸನ್ನೇಂದ್ರಿಯಮಾನಸಮ್ ।
ತತಃ ಕಮಲಪತ್ರಾಕ್ಷಂ ದ್ರಕ್ಷ್ಯಾಮ್ಯಹಮರಿಂದಮಮ್ ॥
ಅನುವಾದ
ನೀನು ಅವನ ಬಳಿಗೆ ಹೋಗಿ ಮಧುರ ಮಾತುಗಳಿಂದ ಅವನನ್ನು ಶಾಂತಗೊಳಿಸಿದಾಗ, ಅವನ ಮನಸ್ಸು ಸ್ವಸ್ಥ ಹಾಗೂ ಇಂದ್ರಿಯಗಳು ಪ್ರಸನ್ನವಾದಾಗ ನಾನು ಆ ಶತ್ರುದಮನ ಕಮಲನಯನ ಲಕ್ಷ್ಮಣನನ್ನು ದರ್ಶಿಸುವೆನು.॥37॥
ಮೂಲಮ್ - 38
ಸಾ ಪ್ರಸ್ಖಲಂತೀ ಮದವಿಹ್ವಲಾಕ್ಷೀ
ಪ್ರಲಂಬಕಾಂಚೀಗುಣಹೇಮಸೂತ್ರಾ।
ಸಲಕ್ಷಣಾ ಲಕ್ಷ್ಮಣ ಸಂನಿಧಾನಂ
ಜಗಾಮ ತಾರಾ ನಮಿತಾಂಗಯಷ್ಟಿಃ ॥
ಅನುವಾದ
ಸುಗ್ರೀವನು ಹೀಗೆ ಹೇಳಿದಾಗ ಶುಭಲಕ್ಷಣೆ ತಾರೆಯು ಲಕ್ಷ್ಮಣನ ಬಳಿಗೆ ಹೋದಳು. ಆಕೆಯ ತೆಳ್ಳಗಿನ ಶರೀರ ಸ್ವಾಭಾವಿಕ ಸಂಕೋಚದಿಂದ, ವಿನಯದಿಂದ ಬಾಗಿತ್ತು ಅವಳ ಕಣ್ಣುಗಳು ಮದದಿಂದ ಚಂಚಲವಾಗಿದ್ದವು, ಕಾಲುಗಳು ತೊಡರುಕೊಳ್ಳುತ್ತಿದ್ದವು. ಆಕೆಯ ಸುವರ್ಣಮಯ ಓಡ್ಯಾಣವು ಜೋತಾಡುತ್ತಿತ್ತು.॥38॥
ಮೂಲಮ್ - 39
ಸ ತಾಂ ಸಮೀಕ್ಷ್ಯೈವ ಹರೀಶಪತ್ನೀಂ
ತಸ್ಥಾವುದಾಸೀನತಯಾ ಮಹಾತ್ಮಾ ।
ಅವಾಙ್ಮುಖೋಽಭೂನ್ಮನುಜೇಂದ್ರಪುತ್ರಃ
ಸ್ತ್ರೀಸಂನಿಕರ್ಷಾದ್ ವಿನಿವೃತ್ತಕೋಪಃ ॥
ಅನುವಾದ
ವಾನರರಾಜನ ಪತ್ನೀ ತಾರೆಯನ್ನು ನೋಡುತ್ತಲೇ ರಾಜಕುಮಾರ ಮಹಾತ್ಮಾ ಲಕ್ಷ್ಮಣನು ಮುಖ ತಗ್ಗಿಸಿ ಉದಾಸೀನಭಾವದಿಂದ ನಿಂತುಕೊಂಡನು. ಸ್ತ್ರೀಯು ಸಮೀಪ ಬಂದಿದ್ದರಿಂದ ಅವನ ಕ್ರೋಧ ದೂರವಾಯಿತು.॥39॥
ಮೂಲಮ್ - 40
ಸಾ ಪಾನಯೋಗಾಚ್ಚ ನಿವೃತ್ತಲಜ್ಜಾ
ದೃಷ್ಟಿ ಪ್ರಸಾದಾಚ್ಚ ನರೇಂದ್ರಸೂನೋಃ ।
ಉವಾಚ ತಾರಾ ಪ್ರಣಯಪ್ರಗಲ್ಭಂ
ವಾಕ್ಯಂ ಮಹಾರ್ಥಂ ಪರಿಸಾಂತ್ವರೂಪಮ್ ॥
ಅನುವಾದ
ಮಧುಪಾನದಿಂದಾಗಿ ತಾರೆಯ ನಾರಿ ಸಹಜವಾದ ನಾಚಿಕೆಯು ಬಿಟ್ಟು ಹೋಗಿತ್ತು. ಅವಳಿಗೆ ರಾಜಕುಮಾರ ಲಕ್ಷ್ಮಣನ ಕಣ್ಣುಗಳಲ್ಲಿ ಸ್ವಲ್ಪ ಪ್ರಸನ್ನತೆಯು ಕಂಡಿತು. ಅದಕ್ಕಾಗಿ ಆಕೆಯು ಸ್ನೇಹಜನಿತ ಧೈರ್ಯದಿಂದ ಮಹಾನ್ ಅರ್ಥಯುಕ್ತ ಹೀಗೇ ಸಾಂತ್ವನಪೂರ್ಣ ಮಾತನ್ನು ಹೇಳಿದಳು.॥40॥
ಮೂಲಮ್ - 41
ಕಿಂ ಕೋಪಮೂಲಂ ಮನುಜೇಂದ್ರಪುತ್ರ
ಕಸ್ತೇ ನ ಸಂತಿಷ್ಠತಿ ವಾಙ್ನಿನಿದೇಶೇ ।
ಕಃ ಶುಷ್ಕವೃಕ್ಷಂ ವನಮಾಪತಂತಂ
ದವಾಗ್ನಿಮಾಸೀದತಿ ನಿರ್ವಿಶಂಕಃ ॥
ಅನುವಾದ
ರಾಜಕುಮಾರನೇ! ನಿನ್ನ ಕ್ರೋಧಕ್ಕೆ ಕಾರಣವೇನು? ಯಾರು ತಾನೇ ನಿನ್ನ ಆಜ್ಞೆಗೆ ಅಧೀನರಾಗಿಲ್ಲ? ಧೈರ್ಯದಿಂದ ಒಣಗಿದ ಮರಗಳಿಂದ ತುಂಬಿದ ಅರಣ್ಯದಲ್ಲಿ ಹರಡಿಕೊಂಡ ಕಾಡ್ಗಿಚ್ಚಿನಲ್ಲಿ ಯಾರು ತಾನೇ ಪ್ರವೇಶಿಸಬಲ್ಲನು.॥41॥
ಮೂಲಮ್ - 42
ಸ ತಸ್ಯಾ ವಚನಂ ಶ್ರುತ್ವಾ ಸಾಂತ್ವಪೂರ್ವಮಶಂಕಿತಃ ।
ಭೂಯಃ ಪ್ರಣಯದೃಷ್ಟಾರ್ಥಂ ಲಕ್ಷ್ಮಣೋ ವಾಕ್ಯಮಬ್ರವೀತ್ ॥
ಅನುವಾದ
ತಾರೆಯ ಈ ಮಾತುಗಳಲ್ಲಿ ಸಾಂತ್ವನೆ ತುಂಬಿತ್ತು. ಅದರಲ್ಲಿ ಹೆಚ್ಚು ಪ್ರೇಮಪೂರ್ವಕ ಹೃದಯದ ಭಾವವನ್ನು ಪ್ರಕಟಪಡಿಸಿದ್ದಳು. ಅದನ್ನು ಕೇಳಿ ಲಕ್ಷ್ಮಣನ ಹೃದಯದ ಆಶಂಕೆ ಹೊರಟು ಹೋಯಿತು. ಅವನು ಹೇಳತೊಡಗಿದನು.॥42॥
ಮೂಲಮ್ - 43
ಕಿಮಯಂ ಕಾಮವೃತ್ತಸ್ತೇ ಲುಪ್ತಧರ್ಮಾರ್ಥಸಂಗ್ರಹಃ ।
ಭರ್ತಾ ಭರ್ತೃಹಿತೇಯುಕ್ತೇ ನ ಚೈನಮವಬುಧ್ಯಸೇ ॥
ಅನುವಾದ
ತನ್ನ ಸ್ವಾಮಿಯ ಹಿತದಲ್ಲಿ ಮುಳುಗಿದ ತಾರೆಯೇ! ನಿನ್ನ ಈ ಪತಿಯು ವಿಷಯ-ಭೋಗದಲ್ಲಿ ಆಸಕ್ತನಾಗಿ ಧರ್ಮ ಮತ್ತು ಅರ್ಥದ ಸಂಗ್ರಹದಲ್ಲಿ ಲೋಪವೆಸಗುತ್ತಿದ್ದಾನೆ. ನಿನಗೆ ಇವನ ಈ ಸ್ಥಿತಿಯು ತಿಳಿದಿಲ್ಲವೇನು? ನೀನು ಇವನಿಗೆ ಏಕೆ ಸಮಜಾಯಿಸುತ್ತಿಲ್ಲ.॥43॥
ಮೂಲಮ್ - 44
ನ ಚಿಂತಯತಿ ರಾಜ್ಯಾರ್ಥಂ ಸೋಽಸ್ಮಾನ್ ಶೋಕಪರಾಯಣಾನ್ ।
ಸಾಮಾತ್ಯಪರಿಷತ್ ತಾರೆ ಕಾಮಮೇವೋಪಸೇವತೇ ॥
ಅನುವಾದ
ತಾರೆಯೇ! ಸುಗ್ರೀವನು ತನ್ನ ರಾಜ್ಯದ ಸ್ಥಿರತೆಗಾಗಿಯೇ ಪ್ರಯತ್ನಿಸುತ್ತಿದ್ದಾನೆ. ನಾವು ಶೋಕದಲ್ಲಿ ಮುಳುಗಿದ್ದೇವೆ, ಆದರೆ ಇವನಿಗೆ ನಮ್ಮ ಕುರಿತು ಕೊಂಚವೂ ಚಿಂತೆ ಇಲ್ಲ. ಇವನು ತನ್ನ ಮಂತ್ರಿಗಳೊಂದಿಗೆ ಹಾಗೂ ರಾಜಸಭಾ ಸದಸ್ಯರ ಸಹಿತ ಕೇವಲ ವಿಷಯಭೋಗಗಳನ್ನೇ ಸೇವಿಸುತ್ತಿರುವನು.॥44॥
ಮೂಲಮ್ - 45
ಸ ಮಾಸಾಂಶ್ಚತುರಃ ಕೃತ್ವಾ ಪ್ರಮಾಣಂ ಪ್ಲವಗೇಶ್ವರಃ ।
ವ್ಯತೀತಾಂಸ್ತಾನ್ಮದೋದಗ್ರೋ ವಿಹರನ್ನಾವಬುಧ್ಯತೇ ॥
ಅನುವಾದ
ಸುಗ್ರೀವನು ನಾಲ್ಕು ತಿಂಗಳ ಅವಧಿಯನ್ನು ನಿಶ್ಚಯಿಸಿದ್ದನು. ಅವು ಎಂದೋ ಕಳೆದುಹೋಗಿವೆ, ಆದರೆ ಅವನು ಮಧುಪಾನದ ಮದದಿಂದ ಅತ್ಯಂತ ಉನ್ಮತ್ತನಾಗಿ ಸ್ತ್ರೀಯರೊಂದಿಗೆ ಕ್ರೀಡಾ-ವಿಹಾರ ಮಾಡುತ್ತಾ ಇದ್ದಾನೆ. ಅವನಿಗೆ ಕಳೆದುಹೋದ ಸಮಯದ ಅರಿವೇ ಇಲ್ಲ.॥45॥
ಮೂಲಮ್ - 46
ನಹಿ ಧರ್ಮಾರ್ಥಸಿದ್ಧ್ಯರ್ಥಂ ಪಾನಮೇವಂ ಪ್ರಶಸ್ಯತೇ ।
ಪಾನಾದರ್ಥಶ್ಚ ಕಾಮಶ್ಚ ಧರ್ಮಶ್ಚ ಪರಿಹೀಯತೇ ॥
ಅನುವಾದ
ಧರ್ಮ ಮತ್ತು ಅರ್ಥದ ಸಿದ್ಧಿಗಾಗಿ ಪ್ರಯತ್ನ ಮಾಡುವ ಮನುಷ್ಯನಿಗೆ ಹೀಗೆ ಮದ್ಯಪಾನ ಒಳ್ಳೆಯದಲ್ಲ; ಏಕೆಂದರೆ ಮದ್ಯಪಾನದಿಂದ ಅರ್ಥ, ಧರ್ಮ ಮತ್ತು ಕಾಮ ಮೂರರ ನಾಶವೂ ಆಗುತ್ತದೆ.॥46॥
ಮೂಲಮ್ - 47
ಧರ್ಮಲೋಪೋ ಮಹಾಂಸ್ತಾವತ್ ಕೃತೇ ಹ್ಯಪ್ರತಿಕುರ್ವತಃ ।
ಅರ್ಥಲೋಪಶ್ಚ ಮಿತ್ರಸ್ಯ ನಾಶೇ ಗುಣವತೋ ಮಹಾನ್ ॥
ಅನುವಾದ
ಮಿತ್ರನು ಮಾಡಿದ ಉಪಕಾರವನ್ನು ಸಮಯ ಬಂದಾಗಲೂ ತೀರಿಸದಿದ್ದರೆ ಧರ್ಮದ ಹಾನಿಯಾಗುತ್ತದೆ. ಗುಣೀಯಾದ ಮಿತ್ರನೊಂದಿಗೆ ಮಿತ್ರತ್ವದ ನಂಟು ಕಡಿದುಹೋದಾಗ ತನ್ನ ಅರ್ಥದ ಭಾರೀ ಹಾನಿಯನ್ನು ಅನುಭವಿಸಬೇಕಾಗುತ್ತದೆ.॥47॥
ಮೂಲಮ್ - 48
ಮಿತ್ರಂ ಹ್ಯರ್ಥಗುಣಶ್ರೇಷ್ಠಂ ಸತ್ಯಧರ್ಮಪರಾಯಣಮ್ ।
ತದ್ದ್ವಯಂ ತು ಪರಿತ್ಯಕ್ತಂ ನ ತು ಧರ್ಮೇ ವ್ಯವಸ್ಥಿತಮ್ ॥
ಅನುವಾದ
ಮಿತ್ರರು ಎರಡು ಪ್ರಕಾರದಿಂದ ಇರುತ್ತಾರೆ - ಒಬ್ಬನು ತನ್ನ ಮಿತ್ರನ ಅರ್ಥಸಾಧನೆಯಲ್ಲಿ ತತ್ಪರನಾಗಿರುತ್ತಾನೆ. ಇನ್ನೊಬ್ಬನು ಸತ್ಯ ಹಾಗೂ ಧರ್ಮದ ಆಶ್ರಿತನಾಗಿರುತ್ತಾನೆ. ನಿನ್ನ ಸ್ವಾಮಿಯು ಮಿತ್ರನ ಎರಡೂ ಗುಣಗಳನ್ನು ಪರಿತ್ಯಾಗ ಮಾಡಿದ್ದಾನೆ. ಅವನು ಮಿತ್ರನ ಕಾರ್ಯವನ್ನು ಸಿದ್ಧಗೊಳಿಸುವುದಿಲ್ಲ, ಸ್ವತಃ ಧರ್ಮದಲ್ಲೂ ಸ್ಥಿತನಾಗಿಲ್ಲ.॥48॥
ಮೂಲಮ್ - 49
ತದೇವಂ ಪ್ರಸ್ತುತೇ ಕಾರ್ಯೇ ಕಾರ್ಯಮಸ್ಮಾಭಿರುತ್ತಮಮ್ ।
ಯತ್ಕಾರ್ಯಂ ಕಾರ್ಯತತ್ತ್ವಜ್ಞೇ ತ್ವಮುದಾಹರ್ತುಮರ್ಹಸಿ ॥
ಅನುವಾದ
ಇಂತಹ ಸ್ಥಿತಿಯಲ್ಲಿ ಪ್ರಸ್ತುತ ಕಾರ್ಯದ ಸಿದ್ಧಿಗಾಗಿ ನಾವು ಭವಿಷ್ಯದಲ್ಲಿ ಏನು ಮಾಡಬೇಕು? ನಮಗೆ ಸಮುಚಿತವಾದ ಕರ್ತವ್ಯ ವಿದ್ದರೆ ನೀನೇ ಹೇಳು; ಏಕೆಂದರೆ ನೀನು ಕಾರ್ಯದ ತತ್ತ್ವವನ್ನು ತಿಳಿದಿರುವೆ.॥49॥
ಮೂಲಮ್ - 50
ಸಾ ತಸ್ಯ ಧರ್ಮಾರ್ಥಸಮಾಧಿಯುಕ್ತಂ
ನಿಶಮ್ಯವಾಕ್ಯಂ ಮಧುರಸ್ವಭಾವಮ್ ।
ತಾರಾ ಗತಾರ್ಥೇ ಮನುಜೇಂದ್ರಕಾರ್ಯೇ
ವಿಶ್ವಾಸಯುಕ್ತಂ ತಮುವಾಚ ಭೂಯಃ ॥
ಅನುವಾದ
ಲಕ್ಷ್ಮಣನ ಮಾತು ಧರ್ಮ ಮತ್ತು ಅರ್ಥದ ನಿಶ್ಚಯದಿಂದ ಕೂಡಿತ್ತು. ಅದರಿಂದ ಅವನ ಮಧುರ ಸ್ವಭಾವದ ಪರಿಚಯ ಆಗುತ್ತಿತ್ತು. ಅದನ್ನು ಕೇಳಿ ತಾರೆಯು ಭಗವಾನ್ ಶ್ರೀರಾಮನ ಕಾರ್ಯದ ವಿಷಯದಲ್ಲಿ, ಅವಳಿಗೆ ತಿಳಿದಿದ್ದುದನ್ನು ಪುನಃ ಲಕ್ಷ್ಮಣನಲ್ಲಿ ವಿಶ್ವಾಸಕ್ಕೆ ಯೋಗ್ಯವಾದ ಮಾತನ್ನು ಹೇಳಿದಳು.॥50॥
ಮೂಲಮ್ - 51
ನ ಕೋಪಕಾಲಃ ಕ್ಷಿತಿಪಾಲಪುತ್ರ
ನ ಚಾತಿಕೋಪಃ ಸ್ವಜನೇ ವಿಧೇಯಃ ।
ತ್ವದರ್ಥಕಾಮಸ್ಯ ಜನಸ್ಯ ತಸ್ಯ
ಪ್ರಮಾದಮಪ್ಯರ್ಹಸಿ ವೀರ ಸೋಢುಮ್ ॥
ಅನುವಾದ
ವೀರ ರಾಜಕುಮಾರ! ಇದು ಕ್ರೋಧ ಮಾಡುವ ಸಮಯವನಲ್ಲ. ಆತ್ಮೀಯ ಜನರ ಮೇಲೆ ಕ್ರೋಧ ಮಾಡಬಾರದು. ಸುಗ್ರೀವನ ಮನಸ್ಸಿನಲ್ಲಿ ಸದಾ ನಿಮ್ಮ ಕಾರ್ಯ ಸಾಧಿಸುವ ಇಚ್ಛೆ ಇದ್ದೇ ಇದೆ. ಆದ್ದರಿಂದ ಅವನಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ನೀವು ಕ್ಷಮಿಸಬೇಕು.॥51॥
ಮೂಲಮ್ - 52
ಕೋಪಂ ಕಥಂ ನಾಮ ಗುಣಪ್ರಕೃಷ್ಟಃ
ಕುಮಾರ ಕುರ್ಯಾದಪಕೃಷ್ಟಸತ್ತ್ವೇ।
ಕಸ್ತ್ವದ್ವಿಧಃ ಕೋಪವಶಂ ಹಿ ಗಚ್ಛೇತ್
ಸತ್ತ್ವಾವರುದ್ಧಸ್ತಪಸಃ ಪ್ರಸೂತಿಃ ॥
ಅನುವಾದ
ಕುಮಾರನೇ! ಗುಣಗಳಲ್ಲಿ ಶ್ರೇಷ್ಠನಾದ ವ್ಯಕ್ತಿ ಯಾವುದೇ ಹೀನಗುಣಗಳುಳ್ಳ ಪ್ರಾಣಿಯ ಮೇಲೆ ಕ್ರೋಧ ಹೇಗೆ ಮಾಡಬಲ್ಲನು? ಅವನು ಸತ್ತ್ವಗುಣದಿಂದ ತುಂಬಿದ್ದರಿಂದ ಶಾಸ್ತ್ರಕ್ಕೆ ವಿಪರೀತವಾದ ವ್ಯಾಪಾರದಲ್ಲಿ ತೊಡಗಲಾರನು. ಆದ್ದರಿಂದ ಸದ್ವಿಚಾರಗಳಿಗೆ ಜನ್ಮಕೊಡುವ ನಿಮ್ಮಂತಹ ಪುರುಷನು ಕ್ರೋಧಕ್ಕೆ ಹೇಗೆ ವಶನಾಗಬಲ್ಲನು.॥52॥
ಮೂಲಮ್ - 53
ಜಾನಾಮಿ ಕೋಪಂ ಹರಿವೀರಬಂಧೋ-
ರ್ಜಾನಾಮಿ ಕಾರ್ಯಸ್ಯ ಚ ಕಾಲಸಂಗಮ್ ।
ಜಾನಾಮಿ ಕಾರ್ಯಂ ತ್ವಯಿ ಯತ್ಕೃತಂ ನ-
ಸ್ತಚ್ಚಾಪಿ ಜಾನಾಮಿ ಯದತ್ರ ಕಾರ್ಯಮ್ ॥
ಅನುವಾದ
ವಾನರವೀರ ಸುಗ್ರೀವನ ಮಿತ್ರ ಭಗವಾನ್ ಶ್ರೀರಾಮನ ಕ್ರೋಧದ ಕಾರಣ ನಾನು ಬಲ್ಲೆನು. ಅವನ ಕಾರ್ಯದಲ್ಲಿ ಆದ ವಿಳಂಬವನ್ನು ನಾನು ತಿಳಿದಿರುವೆನು. ನಿಮ್ಮ ಅಧೀನದಲ್ಲಿದ್ದ ಸುಗ್ರೀವನ ಕಾರ್ಯವನ್ನು ನೀವು ಪೂರ್ಣಗೊಳಿಸಿರುವಿರಿ, ಅದೂ ನನಗೆ ಗೊತ್ತು. ಈಗ ಪ್ರಸ್ತುತವಾದ ನಿಮ್ಮ ಕಾರ್ಯದ ವಿಷಯದಲ್ಲಿ ನಮ್ಮ ಕರ್ತವ್ಯವೇನು? ಇದರ ಜ್ಞಾನವೂ ನನಗೆ ಚೆನ್ನಾಗಿದೆ.॥53॥
ಮೂಲಮ್ - 54
ತಚ್ಚಾಪಿ ಜಾನಾಮಿ ತಥಾವಿಷಹ್ಯಂ
ಬಲಂ ನರಶ್ರೇಷ್ಠ ಶರೀರಜಸ್ಯ ।
ಜಾನಾಮಿ ಯಸ್ಮಿಂಶ್ಚ ಜನೇಽವಬದ್ಧಂ
ಕಾಮೇನ ಸುಗ್ರೀವಮಸಕ್ತಮದ್ಯ ॥
ಅನುವಾದ
ನರಶ್ರೇಷ್ಠನೇ! ಶರೀರದಲ್ಲಿ ಉತ್ಪನ್ನವಾಗುವ ಅಸಹ್ಯಬಲವುಳ್ಳ ಕಾಮವನ್ನು ನಾನು ಬಲ್ಲೆನು ಹಾಗೂ ಕಾಮದಿಂದ ಆಬದ್ಧನಾದ ಸುಗ್ರೀವನು ಎಲ್ಲಿ ಆಸಕ್ತನಾಗಿದ್ದಾನೆ ಅದೂ ನನಗೆ ತಿಳಿದಿದೆ. ಜೊತೆಗೆ ಕಾಮಾಸಕ್ತಿಯಿಂದಾಗಿಯೇ ಈ ದಿನಗಳಲ್ಲಿ ಸುಗ್ರೀವನ ಮನಸ್ಸು ಬೇರೆ ಯಾವುದೇ ಕಾರ್ಯದಲ್ಲಿ ತೊಡಗದಿರುವುದೂ ನಾನು ಪರಿಚಿತಳಾಗಿದ್ದೇನೆ.॥54॥
ಮೂಲಮ್ - 55
ನ ಕಾಮತಂತ್ರೇ ತವ ಬುದ್ಧಿರಸ್ತಿ
ತಂ ವೈ ಯಥಾ ಮನ್ಯುವಶಂ ಪ್ರಪನ್ನಃ ।
ನ ದೇಶಕಾಲೌ ಹಿ ಯಥಾರ್ಥಧರ್ಮಾ-
ವವೇಕ್ಷತೇ ಕಾಮರತಿರ್ಮನುಷ್ಯಃ ॥
ಅನುವಾದ
ನೀವು ಕ್ರೋಧಕ್ಕೆ ವಶೀಭೂತನಾಗಿರುವುದರಿಂದ ಕಾಮಕ್ಕೆ ಅಧೀನನಾದ ಪುರುಷನ ಸ್ಥಿತಿಯು ನಿನಗೆ ಏನೂ ತಿಳಿದಿಲ್ಲ ಎಂದು ಅರಿವಾಗುತ್ತದೆ. ವಾನರರ ಮಾತೇನು? ಕಾಮಾಸಕ್ತ ಮನುಷ್ಯನಿಗೂ ದೇಶ, ಕಾಲ, ಅರ್ಥ, ಧರ್ಮ ಇವುಗಳ ಜ್ಞಾನ ಇರುವುದಿಲ್ಲ - ಅದರ ಕಡೆಗೆ ಅವನ ದೃಷ್ಟಿಯೇ ಹೋಗುವುದಿಲ್ಲ.॥55॥
ಮೂಲಮ್ - 56
ತಂ ಕಾಮವೃತ್ತಂ ಮಮ ಸಂನಿಕೃಷ್ಟಂ
ಕಾಮಾಭಿಯೋಗಾಚ್ಚ ವಿಮುಕ್ತಲಜ್ಜಮ್ ।
ಕ್ಷಮಸ್ವ ತಾವತ್ಪರವೀರಹಂತ-
ಸ್ತ್ವದ್ಭ್ರಾತರಂ ವಾನರವಂಶನಾಥಮ್ ॥
ಅನುವಾದ
ವಿಪಕ್ಷೀ ವೀರರನ್ನು ವಿನಾಶ ಮಾಡುವ ರಾಜಕುಮಾರನೇ! ವಾನರರಾಜ ಸುಗ್ರೀವನು ವಿಷಯ-ಭೋಗಗಳಲ್ಲಿ ಆಸಕ್ತನಾಗಿ ಈಗ ನನ್ನ ಬಳಿಯೇ ಇದ್ದನು. ಕಾಮದ ಆವೇಶದಲ್ಲಿ ಅವನು ತನ್ನ ಲಜ್ಜೆಯನ್ನೇ ತ್ಯಜಿಸಿರುವನು, ಹೀಗಿದ್ದರೂ ನಿಮ್ಮ ತಮ್ಮನೆಂದು ತಿಳಿದು ನೀವು ಕ್ಷಮಿಸಬೇಕು.॥56॥
ಮೂಲಮ್ - 57
ಮಹರ್ಷಯೋ ಧರ್ಮತಪೋಭಿರಾಮಾಃ
ಕಾಮಾನುಕಾಮಾಃ ಪ್ರತಿಬದ್ಧಮೋಹಾಃ ।
ಅಯಂ ಪ್ರಕೃತ್ಯಾ ಚಪಲಃ ಕಪಿಸ್ತು
ಕಥಂ ನ ಸಜ್ಜೇತ ಸುಖೇಷು ರಾಜಾ ॥
ಅನುವಾದ
ಯಾರು ನಿರಂತರ ಧರ್ಮ ಮತ್ತು ತಪಸ್ಸಿನಲ್ಲಿ ಸಂಲಗ್ನನಾಗಿರುತ್ತಾನೋ, ಯಾರು ಮೋಹವನ್ನು ತಡೆದಿರುವರೋ, ಅವಿವೇಕವನ್ನು ದೂರಗೊಳಿಸಿರುವರೋ, ಅಂತಹ ಮಹರ್ಷಿಗಳು ಕೆಲವೊಮ್ಮೆ ವಿಷಯಾಭಿಲಾಷಿಗಳಾಗುತ್ತಾರೆ; ಹೀಗಿರುವಾಗ ಸ್ವಭಾವದಿಂದಲೇ ಚಂಚಲನಾದ ಆ ರಾಜಾ ಸುಗ್ರೀವನು ಸುಖ-ಭೋಗದಲ್ಲಿ ಆಸಕ್ತನಾಗುವುದರಲ್ಲಿ ಆಶ್ಚರ್ಯವೇನಿದೆ.॥57॥
ಮೂಲಮ್ - 58
ಇತ್ಯೇವಮುಕ್ತ್ವಾ ವಚನಂ ಮಹಾರ್ಥಂ
ಸಾ ವಾನರೀ ಲಕ್ಷ್ಮಣಮಪ್ರಮೇಯಮ್ ।
ಪುನಃ ಸಖೇದಂ ಮದವಿಹ್ವಲಾಕ್ಷೀ
ಭರ್ತುರ್ಹಿತಂ ವಾಕ್ಯಮಿದಂ ಬಭಾಷೇ ॥
ಅನುವಾದ
ಅಪ್ರಮೇಯ ಶಕ್ತಿಶಾಲೀ ಲಕ್ಷ್ಮಣನಲ್ಲಿ ಹೀಗೇ ಮಹಾನ್ ಅರ್ಥಯುಕ್ತ ಮಾತನ್ನು ಹೇಳಿ ಮದದಿಂದ ಚಂಚಲ ನೇತ್ರೆಯಾದ ವಾನರಪತ್ನೀ ತಾರೆಯು ಪುನಃ ಖೇದದಿಂದ ಸ್ವಾಮಿಗಾಗಿ ಈ ಪ್ರಕಾರ ಹಿತಕರ ಮಾತನ್ನು ಹೇಳಿದಳು.॥58॥
ಮೂಲಮ್ - 59
ಉದ್ಯೋಗಸ್ತು ಚಿರಾಜ್ಞಪ್ತಃ ಸುಗ್ರೀವೇಣ ನರೋತ್ತಮ ।
ಕಾಮಸ್ಯಾಪಿ ವಿಧೇಯೇನ ತವಾರ್ಥಪ್ರತಿಸಾಧನೇ ॥
ಅನುವಾದ
ನರಶ್ರೇಷ್ಠನೇ! ಸುಗ್ರೀವನು ಈಗ ಕಾಮಕ್ಕೆ ಗುಲಾಮನಾಗಿದ್ದರೂ ಅವನು ನಿಮ್ಮ ಕಾರ್ಯಸಿದ್ಧಿಗಾಗಿ ಬಹಳ ಹಿಂದೆಯೇ ಉದ್ಯೋಗ ಪ್ರಾರಂಭಿಸುವ ಆಜ್ಞೆ ಕೊಟ್ಟಿರುವನು.॥59॥
ಮೂಲಮ್ - 60
ಆಗತಾ ಹಿ ಮಹಾವೀರ್ಯಾ ಹರಯಃ ಕಾಮರೂಪಿಣಃ ।
ಕೋಟೀಃ ಶತಸಹಸ್ರಾಣಿ ನಾನಾನಗನಿವಾಸಿನಃ ॥
ಅನುವಾದ
ಅದರ ಫಲವಾಗಿ ವಿಭಿನ್ನ ಪರ್ವತಗಳಲ್ಲಿ ವಾಸಿಸುವ ಕಾಮರೂಪಿಗಳಾದ, ಮಹಾನ್ ಪರಾಕ್ರಮಿಗಳಾದ ಲಕ್ಷ, ಕೋಟಿ ವಾನರರು ಈಗ ಇಲ್ಲಿ ಉಪಸ್ಥಿತರಾಗಿದ್ದಾರೆ.॥60॥
ಮೂಲಮ್ - 61
ತದಾಗಚ್ಛ ಮಹಾಬಾಹೋಚಾರಿತ್ರಂ ರಕ್ಷಿತಂ ತ್ವಯಾ ।
ಅಚ್ಛಲಂ ಮಿತ್ರಭಾವೇನ ಸತಾಂ ದಾರಾವಲೋಕನಮ್ ॥
ಅನುವಾದ
ಮಹಾಬಾಹೋ! (ಬೇರೆಯವರ ಸ್ತ್ರೀಯರನ್ನು ನೋಡುವುದು ಅನುಚಿತವೆಂದು ತಿಳಿದು ನೀವು ಒಳಗೆ ಬರದೆ ಹೊರಗೇ ನಿಂತಿರುವಿರಿ. ಇದರಿಂದ) ನೀವು ಸದಾಚಾರವನ್ನು ರಕ್ಷಿಸಿರುವಿರಿ, ಆದ್ದರಿಂದ ಈಗ ಒಳಗೆ ನಡೆಯಿರಿ. ಮಿತ್ರ ಭಾವದಿಂದ ಸ್ತ್ರೀಯರ ಕಡೆಗೆ ನೋಡುವುದು (ಅವರ ಕುರಿತು ತಾಯಿ - ತಂಗೀ ಮೊದಲಾದ ಭಾವವಿರಿಸಿ ನೋಡಿದರೆ) ಸತ್ಪುರುಷರಿಗೆ ಅಧರ್ಮವಾಗಲಾರದು.॥61॥
ಮೂಲಮ್ - 62
ತಾರಯಾ ಚಾಭ್ಯನುಜ್ಞಾತಸ್ತ್ವರಯಾ ಚಾಪಿ ಚೋದಿತಃ ।
ಪ್ರವಿವೇಶ ಮಹಾಬಾಹುರಭ್ಯಂತರಮರಿಂದಮಃ ॥
ಅನುವಾದ
ತಾರೆಯ ಆಗ್ರಹ ಮತ್ತು ಕಾರ್ಯದ ಅವಸರದಿಂದ ಪ್ರೇರಿತನಾಗಿ ಶತ್ರುದಮನ ಮಹಾಬಾಹು ಲಕ್ಷ್ಮಣನು ಸುಗ್ರೀವನ ಭವನದೊಳಗೆ ಹೋದನು.॥62॥
ಮೂಲಮ್ - 63
ತತಃ ಸುಗ್ರೀವಮಾಸೀನಂ ಕಾಂಚನೇ ಪರಮಾಸನೇ ।
ಮಹಾರ್ಹಾಸ್ತರಣೋಪೇತೇ ದದರ್ಶಾದಿತ್ಯಸಂನಿಭಮ್ ॥
ಅನುವಾದ
ಅಲ್ಲಿಗೆ ಹೋಗಿ ನೋಡುತ್ತಾನೆ - ಒಂದು ಸ್ವರ್ಣಸಿಂಹಾಸನದಲ್ಲಿ ಹಾಸಿದ ಅಮೂಲ್ಯ ಹಾಸಿಗೆಯ ಮೇಲೆ ವಾನರರಾಜ ಸುಗ್ರೀವನು ಸೂರ್ಯನಂತೆ ತೇಜಸ್ವೀ ರೂಪಧರಿಸಿ ವಿರಾಜಮಾನನಾಗಿದ್ದಾನೆ.॥63॥
ಮೂಲಮ್ - 64
ದಿವ್ಯಾಭರಣಚಿತ್ರಾಂಗಂ ದಿವ್ಯರೂಪಂ ಯಶಸ್ವಿನಮ್ ।
ದಿವ್ಯಮಾಲ್ಯಾಂಬರಧರಂ ಮಹೇಂದ್ರಮಿವ ದುರ್ಜಯಮ್ ॥
ಅನುವಾದ
ಆಗ ದಿವ್ಯ ಆಭೂಷಣಗಳಿಂದಾಗಿ ಅವನ ಶರೀರವು ವಿಚಿತ್ರವಾಗಿ ಶೋಭಿಸುತ್ತಿತ್ತು. ದಿವ್ಯರೂಪಧಾರೀ ಯಶಸ್ವೀ ಸುಗ್ರೀವನು ದಿವ್ಯ ವಸ್ತ್ರಧರಿಸಿ ದುರ್ಜಯವೀರ ದೇವೇಂದ್ರನಂತೆ ಕಾಣುತ್ತಿದ್ದನು.॥64॥
ಮೂಲಮ್ - 65
ದಿವ್ಯಾಭರಣಮಾಲ್ಯಾಭಿಃ ಪ್ರಮದಾಭಿಃಸಮಾವೃತಮ್ ।
ಸಂರಬ್ಧತರರಕ್ತಾಕ್ಷೋ ಬಭೂವಾಂತಕಸಂನಿಭಃ ॥
ಅನುವಾದ
ದಿವ್ಯಾಭರಣಗಳಿಂದ, ಮಾಲೆಗಳಿಂದ ಅಲಂಕೃತ ಯುವತಿ ಸ್ತ್ರೀಯರು ಅವನನ್ನು ಸುತ್ತುವರೆದು ನಿಂತಿದ್ದರು. ಅವನನ್ನು ಈ ಅವಸ್ಥೆಯಲ್ಲಿ ನೋಡಿ ಲಕ್ಷ್ಮಣನ ಕಣ್ಣುಗಳು ರೋಷಾವೇಶದಿಂದ ಕೆಂಪಗಾಗಿತ್ತು. ಅವನು ಆಗ ಯಮನಂತೆ ಭಯಂಕರವಾಗಿ ತೋರುತ್ತಿದ್ದನು.॥65॥
ಮೂಲಮ್ - 66
ರುಮಾಂ ತು ವೀರಃ ಪರಿರಭ್ಯ ಗಾಢಂ
ವರಾಸನಸ್ಥೋ ವರಹೇಮವರ್ಣಃ ।
ದದರ್ಶ ಸೌಮಿತ್ರಿಮದೀನಸತ್ತ್ವಂ
ವಿಶಾಲನೇತ್ರಃ ಸುವಿಶಾಲನೇತ್ರಮ್ ॥
ಅನುವಾದ
ಸುಂದರ ಸುವರ್ಣಕಾಂತಿಯ, ವಿಶಾಲನೇತ್ರೆ, ಪತ್ನೀಯಾದ ರುಮೆಯನ್ನು ವೀರ ಸುಗ್ರೀವನು ಗಾಢವಾಗಿ ಆಲಿಂಗಿಸಿ ಒಂದು ಶ್ರೇಷ್ಠ ಆಸನದಲ್ಲಿ ವಿರಾಜಮಾನನಾಗಿದ್ದನು. ಅದೇ ಸ್ಥಿತಿಯಲ್ಲಿ ಅವನು ಉದಾರ ಹೃದಯಿಯೂ, ವಿಶಾಲನೇತ್ರನಾದ, ಸುಮಿತ್ರಾಕುಮಾರ ಲಕ್ಷ್ಮಣನನ್ನು ನೋಡಿದನು.॥66॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೂವತ್ತಮೂರನೆಯ ಸರ್ಗ ಸಂಪೂರ್ಣವಾಯಿತು.॥33॥