वाचनम्
ಭಾಗಸೂಚನಾ
ಚಿಂತಿತನಾದ ಸುಗ್ರೀವನನ್ನು ಹನುಮಂತನು ಸಮಜಾಯಿಸಿದುದು
ಮೂಲಮ್ - 1
ಅಂಗದಸ್ಯ ವಚಃ ಶ್ರುತ್ವಾ ಸುಗ್ರೀವಃ ಸಚಿವೈಃ ಸಹ ।
ಲಕ್ಷ್ಮಣಂ ಕುಪಿತಂ ಶ್ರುತ್ವಾ ಮುಮೋಚಾಸನಮಾತ್ಮವಾನ್ ॥
ಅನುವಾದ
ಮಂತ್ರಿಗಳ ಸಹಿತ ಅಂಗದನ ಮಾತನ್ನು ಕೇಳಿ, ಲಕ್ಷ್ಮಣನು ಕುಪಿತನಾಗಿರುವುದನ್ನು ತಿಳಿದು ಮನಸ್ಸನ್ನು ವಶದಲ್ಲಿರಿಸಿಕೊಂಡ ಸುಗ್ರೀವನು ಆಸನದಿಂದ ಎದ್ದು ನಿಂತುಕೊಂಡನು.॥1॥
ಮೂಲಮ್ - 2
ಸ ಚ ತಾನಬ್ರವೀದ್ವಾಕ್ಯಂ ನಿಶ್ಚಿತ್ಯ ಗುರುಲಾಘವಮ್ ।
ಮಂತ್ರಜ್ಞಾನ್ಮಂತ್ರಕುಶಲೋ ಮಂತ್ರೇಷು ಪರಿನಿಷ್ಠಿತಃ ॥
ಅನುವಾದ
ಮಂತ್ರಾಲೋಚನೆಯಲ್ಲಿ ನಿಪುಣನಾದ ಸುಗ್ರೀವನು ಶ್ರೀರಾಮನ ಗುರುತ್ವವನ್ನು ಮತ್ತು ತನ್ನ ಲಘುತ್ವವನ್ನು ನಿಶ್ಚಯಿಸಿ ಮಂತ್ರಾಲೋಚನೆಗಳಲ್ಲಿ ನಿಪುಣರಾದ ಮಂತ್ರಿಗಳಿಗೆ ಹೇಳಿದನು.॥2॥
ಮೂಲಮ್ - 3
ನ ಮೇ ದುರ್ವ್ಯಾಹೃತಂ ಕಿಂಚಿನ್ನಾಪಿ ಮೇ ದುರನುಷ್ಠಿತಮ್ ।
ಲಕ್ಷ್ಮಣೋ ರಾಘವಭ್ರಾತಾ ಕ್ರುದ್ಧಃ ಕಿಮಿತಿ ಚಿಂತಯೇ ॥
ಅನುವಾದ
ಸುಹೃದರೇ! ನಾನು ಎಂದೂ ಯಾವುದೇ ಕೆಟ್ಟ ಮಾತನ್ನು ಆಡಿದವನಲ್ಲ. ಕೆಟ್ಟಕಾರ್ಯವನ್ನು ಮಾಡಿದವನಲ್ಲ. ಹೀಗಿರುವಾಗ ಶ್ರೀರಾಮನ ತಮ್ಮನಾದ ಲಕ್ಷ್ಮಣನು ಏಕೆ ಕುಪಿತನಾಗಿದ್ದಾನೆ? ಎಂಬ ವಿಷಯವಾಗಿ ಚಿಂತಿಸುತ್ತಿದ್ದೇನೆ.॥3॥
ಮೂಲಮ್ - 4
ಅಸುಹೃದ್ಭಿರ್ಮಮಾಮಿತ್ರೈರ್ನಿತ್ಯಮಂತರದರ್ಶಿಭಿಃ ।
ಮಮ ದೋಷಾನಸಂಭೂತಾನ್ ಶ್ರಾವಿತೋ ರಾಘವಾನುಜಃ ॥
ಅನುವಾದ
ನಿತ್ಯವೂ ನನ್ನಲ್ಲಿ ದೋಷಗಳನ್ನೇ ಎಣಿಸುವ, ಸುಹೃದರಲ್ಲದ, ಯಾವಾಗಲೂ ಛಿದ್ರಾನ್ವೇಷಿಗಳಾದ ನನ್ನ ಶತ್ರುಗಳು ಲಕ್ಷ್ಮಣನಲ್ಲಿ ನನ್ನಲ್ಲಿ ಇಲ್ಲದಿರುವ ದೋಷಗಳನ್ನು ಕಲ್ಪಿಸಿ ಹೇಳಿರಬಹುದು.॥4॥
ಮೂಲಮ್ - 5
ಅತ್ರ ತಾವದ್ಯಥಾಬುದ್ಧಿಃ ಸರ್ವೈರೇವ ಯಥಾವಿಧಿ ।
ಭಾವಸ್ಯ ನಿಶ್ಚಯಸ್ತಾವದ್ವಿಜ್ಞೇಯೋ ನಿಪುಣಂ ಶನೈಃ ॥
ಅನುವಾದ
ಲಕ್ಷ್ಮಣನ ಕೋಪದ ವಿಷಯದಲ್ಲಿ ನೀವೆಲ್ಲರೂ ನಿಧಾನವಾಗಿ ಕುಶಲತೆಯಿಂದ ಅವನ ಮನೋಭಾವವನ್ನು ವಿಧಿವತ್ತಾಗಿ ನಿಶ್ಚಯಿಸಿ ಹಾಗೂ ಕೋಪದ ಯಥಾರ್ಥ ಕಾರಣವನ್ನು ತಿಳಿದುಕೊಳ್ಳಿರಿ.॥5॥
ಮೂಲಮ್ - 6
ನ ಖಲ್ವಸ್ತಿ ಮಮ ತ್ರಾಸೋ ಲಕ್ಷ್ಮಣಾನ್ನಾಪಿ ರಾಘವಾತ್ ।
ಮಿತ್ರಂಸ್ವಸ್ಥಾನಕುಪಿತಂ ಜನಯತ್ಯೇವ ಸಂಭ್ರಮಮ್ ॥
ಅನುವಾದ
ಖಂಡಿತವಾಗಿ ನನಗೆ ಲಕ್ಷ್ಮಣನಿಂದ ಮತ್ತು ಶ್ರೀರಾಮನಿಂದ ಯಾವುದೇ ಭಯವಿಲ್ಲದಿದ್ದರೂ ಅಪರಾಧವಿಲ್ಲದೆ ಕುಪಿತನಾದ ಮಿತ್ರನಿಂದಾಗಿ ಮನಸ್ಸಿನಲ್ಲಿ ಗಾಬರಿ ಹುಟ್ಟಿಸುತ್ತದೆ.॥6॥
ಮೂಲಮ್ - 7
ಸರ್ವಥಾ ಸುಕರಂ ಮಿತ್ರಂ ದುಷ್ಕರಂ ಪ್ರತಿಪಾಲನಮ್ ।
ಅನಿತ್ಯತ್ವಾತ್ ತು ಚಿತ್ತಾನಾಂ ಪ್ರೀತಿರಲ್ಪೇಽತಿಭಿದ್ಯತೇ॥
ಅನುವಾದ
ಯಾರನ್ನಾದರೂ ಮಿತ್ರನನ್ನಾಗಿಸಿಕೊಳ್ಳುವುದು ಸುಲಭವಾಗಿದೆ, ಆದರೆ ಆ ಮೈತ್ರಿಯನ್ನು ನಿಭಾಯಿಸುವುದು ಬಹಳ ಕಷ್ಟವಾಗಿದೆ; ಏಕೆಂದರೆ ಮನಸ್ಸಿನ ಭಾವ ಸದಾ ಒಂದೇ ರೀತಿಯಾಗಿರುವುದಿಲ್ಲ. ಯಾರಿಂದಲಾದರೂ ಸ್ವಲ್ಪ ಚಾಡಿಮಾತು ಕೇಳಿದಾಗ ಪ್ರೇಮದಲ್ಲಿ ಅಂತರ ಉಂಟಾಗುತ್ತದೆ.॥7॥
ಮೂಲಮ್ - 8
ಅತೋ ನಿಮಿತ್ತಂ ತ್ರಸ್ತೋಽಹಂ ರಾಮೇಣ ತು ಮಹಾತ್ಮನಾ ।
ಯನ್ಮಮೋಪಕೃತಂಶಕ್ಯಂ ಪ್ರತಿಕರ್ತುಂ ನ ತನ್ಮಯಾ ॥
ಅನುವಾದ
ಈ ಕಾರಣದಿಂದಲೇ ನಾನು ಇನ್ನೂ ಹೆದರಿರುವೆನು ; ಏಕೆಂದರೆ ಮಹಾತ್ಮಾ ಶ್ರೀರಾಮನು ಮಾಡಿದ ಉಪಕಾರವನ್ನು ತೀರಿಸಲು ನನ್ನಲ್ಲಿ ಶಕ್ತಿ ಇಲ್ಲ.॥8॥
ಮೂಲಮ್ - 9
ಸುಗ್ರೀವೇಣೈವಮುಕ್ತೇ ತು ಹನುಮಾನ್ ಹರಿಪುಂಗವಃ ।
ಉವಾಚ ಸ್ವೇನ ತರ್ಕೇಣ ಮಧ್ಯೇ ವಾನರಮಂತ್ರಿಣಾಮ್ ॥
ಅನುವಾದ
ಸುಗ್ರೀವನು ಹೀಗೆ ಹೇಳಿದಾಗ ವಾನರಶ್ರೇಷ್ಠ ಹನುಮಂತನು ತನ್ನ ಯುಕ್ತಿಯನ್ನು ಆಶ್ರಯಿಸಿ ವಾನರ ಮಂತ್ರಿಗಳ ನಡುವೆ ನುಡಿದನು-॥9॥
ಮೂಲಮ್ - 10
ಸರ್ವಥಾ ನೈತದಾಶ್ಚರ್ಯಂ ಯತ್ ತ್ವಂ ಹರಿಗಣೇಶ್ವರ ।
ನ ವಿಸ್ಮರಸಿ ಸುಸ್ನಿಗ್ಧಮುಪಕಾರ ಕೃತಂ ಶುಭಮ್ ॥
ಅನುವಾದ
ಕಪಿರಾಜನೇ! ಮಿತ್ರನು ಅತ್ಯಂತ ಸ್ನೇಹದಿಂದ ಮಾಡಿದ ಉತ್ತಮ ಉಪಕಾರವನ್ನು ನೀನು ಮರೆತಿಲ್ಲ, ಇದರಲ್ಲಿ ಯಾವುದೇ ಆಶ್ಚರ್ಯದ ಮಾತು ಇಲ್ಲ. (ಏಕೆಂದರೆ ಒಳ್ಳೆಯ ಜನರ ಸ್ವಭಾವ ಹೀಗೆಯೇ ಇರುತ್ತದೆ..॥10॥
ಮೂಲಮ್ - 11
ರಾಘವೇಣ ತು ವೀರೇಣ ಭಯಮುತ್ಸ್ಯಜ್ಯ ದೂರತಃ ।
ತ್ವತ್ಪ್ರಿಯಾರ್ಥಂ ಹತೋ ವಾಲೀ ಶಕ್ರತುಲ್ಯಪರಾಕ್ರಮಃ ॥
ಮೂಲಮ್ - 12
ಸರ್ವಥಾ ಪ್ರಣಯಾತ್ ಕುದ್ಧೋ ರಾಘವೋ ನಾತ್ರ ಸಂಶಯಃ ।
ಭ್ರಾತರಂ ಸಂಪ್ರಹಿತವಾನ್ ಲ್ಲಕ್ಷ್ಮಣಂ ಲಕ್ಷ್ಮಿವರ್ಧನಮ್ ॥
ಅನುವಾದ
ವೀರವರ ಶ್ರೀರಾಮನಾದರೋ ಲೋಕಾಪವಾದದ ಭಯವನ್ನು ದೂರ ತಳ್ಳಿ ನಿನ್ನ ಪ್ರಿಯವನ್ನು ಮಾಡುವುದಕ್ಕಾಗಿ ಇಂದ್ರತುಲ್ಯ ಪರಾಕ್ರಮಿ ವಾಲಿಯನ್ನು ವಧಿಸಿರುವನು; ಆದ್ದರಿಂದ ಅವನು ನಿಃಸಂದೇಹವಾಗಿ ನಿನ್ನ ಮೇಲೆ ಕುಪಿತನಾಗಿಲ್ಲ. ಶ್ರೀರಾಮ ಚಂದ್ರನು ಶೋಭಾಸಂಪತ್ತನ್ನು ವೃದ್ಧಿಗೊಳಿಸುವ ತನ್ನ ತಮ್ಮ ಲಕ್ಷ್ಮಣನನ್ನು ನಿನ್ನ ಬಳಿಗೆ ಕಳಿಸಿದುದರಲ್ಲಿ ಸರ್ವಥಾ ನಿನ್ನ ಕುರಿತು ಇರುವ ಪ್ರೇಮವೇ ಕಾರಣವಾಗಿದೆ.॥11-12॥
ಮೂಲಮ್ - 13
ತ್ವಂ ಪ್ರಮತ್ತೋ ನ ಜಾನೀಷೇ ಕಾಲಂ ಕಾಲವಿದಾಂ ವರ ।
ಫುಲ್ಲಸಪ್ತಚ್ಛದಶ್ಯಾಮಾ ಪ್ರವೃತ್ತಾ ತು ಶರಚ್ಛುಭಾ ॥
ಅನುವಾದ
ಸಮಯದ ಜ್ಞಾನವುಳ್ಳ ಶ್ರೇಷ್ಠ ಕಪಿರಾಜಾ! ಸೀತೆಯನ್ನು ಹುಡುಕಲು ನೀನು ನಿಶ್ಚಯಿಸಿದ ಸಮಯವನ್ನು ನೀನು ಈ ದಿನಗಳಲ್ಲಿ ಪ್ರಮಾದದಲ್ಲಿ ಬಿದ್ದಿದ್ದರಿಂದ ಮರೆತುಹೋಗಿರುವೆ. ನೋಡಲ್ಲ, ಈ ಸುಂದರ ಶರದ್ಋತು ಪ್ರಾರಂಭವಾಗಿದೆ. ಅದು ಅರಳಿದ ಏಳೆಲೆ ಬಾಳೆಯ ಹೂವುಗಳಿಂದ ಶ್ಯಾಮಲವಾಗಿ ಕಂಡುಬರುತ್ತಿದೆ.॥13॥
ಮೂಲಮ್ - 14
ನಿರ್ಮಲಗ್ರಹನಕ್ಷತ್ರಾ ದ್ಯೌಃ ಪ್ರಣಷ್ಟಬಲಾಹಕಾ ।
ಪ್ರಸನ್ನಾಶ್ಚ ದಿಶಃ ಸರ್ವಾಃ ಸರಿತಶ್ಚ ಸರಾಂಸಿ ಚ ॥
ಅನುವಾದ
ಆಕಾಶದಲ್ಲಿ ಈಗ ಮೋಡಗಳಿಲ್ಲ. ಗ್ರಹ, ನಕ್ಷತ್ರಗಳು ನಿರ್ಮಲವಾಗಿ ಕಾಣುತ್ತಿವೆ. ಎಲ್ಲ ದಿಕ್ಕುಗಳಲ್ಲಿ ಪ್ರಕಾಶ ಹಬ್ಬಿದೆ, ನದಿಗಳ, ಸರೋವರಗಳ ನೀರು ಪೂರ್ಣವಾಗಿ ಸ್ವಚ್ಛವಾಗಿದೆ.॥14॥
ಮೂಲಮ್ - 15
ಪ್ರಾಪ್ತಮುದ್ಯೋಗಕಾಲಂ ತು ನಾವೈಷಿ ಹರಿಪುಂಗವ ।
ತ್ವಂ ಪ್ರಮತ್ತ ಇತಿವ್ಯಕ್ತಂ ಲಕ್ಷ್ಮಣೋಽಯಮಿಹಾಗತಃ ॥
ಅನುವಾದ
ವಾನರರಾಜನೇ! ರಾಜರು ವಿಜಯ-ಯಾತ್ರೆಯ ಸಿದ್ಧತೆ ಮಾಡುವ ಸಮಯ ಬಂದಿದೆ ; ಆದರೆ ನಿನಗೆ ಇದರ ಯಾವ ಅರಿವೂ ಇಲ್ಲ. ನೀನು ಪ್ರಮಾದದಲ್ಲಿ ಬಿದ್ದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಅದಕ್ಕಾಗಿ ಲಕ್ಷ್ಮಣನು ಇಲ್ಲಿಗೆ ಬಂದಿರುವನು.॥15॥
ಮೂಲಮ್ - 16
ಆರ್ತಸ್ಯ ಹೃತದಾರಸ್ಯ ಪರುಷಂ ಪುರುಷಾಂತರಾತ್ ।
ವಚನಂ ಮರ್ಷಣೀಯಂ ತೇ ರಾಘವಸ್ಯ ಮಹಾತ್ಮನಃ ॥
ಅನುವಾದ
ಮಹಾತ್ಮಾ ಶ್ರೀರಾಮಚಂದ್ರನ ಪತ್ನಿಯ ಅಪಹರಣವಾಗಿದೆ, ಇದರಿಂದ ಅವನು ಬಹಳ ದುಃಖಿತನಾಗಿದ್ದಾನೆ. ಆದ್ದರಿಂದ ಲಕ್ಷ್ಮಣನ ಬಾಯಿಯಿಂದ ಅವನ ಕಠೋರ ಮಾತನ್ನು ಕೇಳಬೇಕಾಗಿ ಬಂದರೂ ನೀನು ಸುಮ್ಮನೆ ಸಹಿಸಬೇಕು.॥16॥
ಮೂಲಮ್ - 17
ಕೃತಾಪರಾಧಸ್ಯ ಹಿ ತೇ ನಾನ್ಯತ್ಪಶ್ಯಾಮ್ಯಹಂ ಕ್ಷಮಮ್ ।
ಅಂತರೇಣಾಂಜಲಿಂ ಬದ್ಧ್ವಾ ಲಕ್ಷ್ಮಣಸ್ಯ ಪ್ರಸಾದನಾತ್ ॥
ಅನುವಾದ
ನಿನ್ನಿಂದ ಅಪರಾಧವಾಗಿದೆ. ಆದ್ದರಿಂದ ಕೈಮುಗಿದು ಲಕ್ಷ್ಮಣನನ್ನು ಪ್ರಸನ್ನಗೊಳಿಸದೆ ಬೇರೆ ಯಾವುದೇ ಉಚಿತ ಕರ್ತವ್ಯವು ನನಗೆ ಕಾಣುತ್ತಿಲ್ಲ.॥17॥
ಮೂಲಮ್ - 18
ನಿಯುಕ್ತೈರ್ಮಂತ್ರಿಭಿರ್ವಾಚ್ಯೋ ಹ್ಯವಶಂ ಪಾರ್ಥಿವೋ ಹಿತಮ್ ।
ಅಥ ಏವ ಭಯಂ ತ್ಯಕ್ತ್ವಾ ಬ್ರವೀಮ್ಯವಧೃತಂ ವಚಃ ॥
ಅನುವಾದ
ರಾಜ್ಯದ ಒಳಿತಿಗಾಗಿ ನಿಯುಕ್ತರಾದ ಮಂತ್ರಿಗಳ ಕರ್ತವ್ಯವೂ ರಾಜನ ಹಿತದ ಮಾತನ್ನು ಅವಶ್ಯವಾಗಿ ತಿಳಿಸುವುದೇ ಆಗಿದೆ. ಆದ್ದರಿಂದ ನಾನು ಭಯಬಿಟ್ಟು ನನ್ನ ನಿಶ್ಚಿತ ವಿಚಾರವನ್ನು ತಿಳಿಸುತ್ತಿದ್ದೇನೆ.॥18॥
ಮೂಲಮ್ - 19
ಅಭಿಕ್ರುದ್ಧಃ ಸಮರ್ಥೋ ಹಿ ಚಾಪಮುದ್ಯಮ್ಯ ರಾಘವಃ ।
ಸದೇವಾಸುರಗಂಧರ್ವಂ ವಶೇ ಸ್ಥಾಪಯಿತುಂ ಜಗತ್ ॥
ಅನುವಾದ
ಭಗವಾನ್ ಶ್ರೀರಾಮನು ಕ್ರೋಧಗೊಂಡು ಧನುಸ್ಸನ್ನು ಕೈಗೆತ್ತಿಕೊಂಡರೆ ದೇವತೆ, ಅಸುರ, ಗಂಧರ್ವರ ಸಹಿತ ಸಂಪೂರ್ಣ ಜಗತ್ತನ್ನು ತನ್ನ ವಶಪಡಿಸಿಕೊಳ್ಳ ಬಲ್ಲನು.॥19॥
ಮೂಲಮ್ - 20
ನ ಸ ಕ್ಷಮಃ ಕೋಪಯಿತುಂ ಯಃ ಪ್ರಸಾದ್ಯಃ ಪುನರ್ಭವೇತ್ ।
ಪೂರ್ವೋಪಕಾರಂ ಸ್ಮರತಾ ಕೃತಜ್ಞೇನ ವಿಶೇಷತಃ ॥
ಅನುವಾದ
ಯಾರನ್ನು ಪ್ರಸನ್ನಗೊಳಿಸಲು ಸಾಧ್ಯವೋ ಅಂತಹವನನ್ನು ಕೋಪಗೊಳ್ಳುವಂತೆ ಮಾಡುವುದು ಎಂದಿಗೂ ಸರಿಯಲ್ಲ. ವಿಶೇಷವಾಗಿ ಹಿಂದೆ ಪಡೆದುಕೊಂಡಿರುವ ಉಪಕಾರವನ್ನು ಸ್ಮರಿಸುವ ಕೃತಜ್ಞನಾದ ನೀನು ಈ ಮಾತನ್ನು ಹೆಚ್ಚು ಗಮನ ಕೊಡಬೇಕು.॥20॥
ಮೂಲಮ್ - 21
ತಸ್ಯ ಮೂರ್ಧ್ನಾ ಪ್ರಣಮ್ಯ ತ್ವಂ ಸುಪುತ್ರಃ ಸಸುಹೃಜ್ಜನಃ ।
ರಾಜಂಸ್ತಿಷ್ಠ ಸ್ವಸಮಯೇ ಭರ್ತುಭಾರ್ಯೇವ ತದ್ವಶೇ ॥
ಅನುವಾದ
ರಾಜನೇ! ಪುತ್ರ ಮತ್ತು ಮಿತ್ರರೊಂದಿಗೆ ನೀನು ತಲೆಬಾಗಿ ಅವನಿಗೆ ನಮಸ್ಕರಿಸಿ, ಪತ್ನಿಯು ಪತಿಯ ವಶಳಾಗಿರುವಂತೆ ನೀನು ಶ್ರೀರಾಮನಿಗೆ ವಶನಾಗಿ ತನ್ನ ಪ್ರತಿಜ್ಞೆಯಲ್ಲಿ ಸ್ಥಿರನಾಗಿರು.॥21॥
ಮೂಲಮ್ - 22
ನ ರಾಮರಾಮಾನುಜಶಾಸನಂ ತ್ವಯಾ
ಕಪೀಂದ್ರ ಯುಕ್ತಂ ಮನಸಾಪ್ಯಪೋಹಿತುಮ್ ।
ಮನೋ ಹಿ ತೇ ಜ್ಞಾಸ್ಯತಿ ಮಾನುಷಂ ಬಲಂ
ಸರಾಘವಸ್ಯಾಸ್ಯ ಸುರೇಂದ್ರವರ್ಚಸಃ ॥
ಅನುವಾದ
ಕಪೀಂದ್ರನೇ! ಶ್ರೀರಾಮನ ಮತ್ತು ರಾಮಾನುಜನ ಆಜ್ಞೆಯನ್ನು ಮನಸ್ಸಿನಿಂದಲೂ ಕೂಡ ಉಪೇಕ್ಷಿಸಬಾರದು. ದೇವೇಂದ್ರನಂತೆ ತೇಜಸ್ವೀ ಲಕ್ಷ್ಮಣ ಸಹಿತ ಶ್ರೀರಾಮನ ಅಲೌಕಿಕ ಬಲದ ಅರಿವು ನಿನ್ನ ಮನಸ್ಸಿಗೆ ಚೆನ್ನಾಗಿ ತಿಳಿದಿದೆ.॥22॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೂವತ್ತೆರಡನೆಯ ಸರ್ಗ ಸಂಪೂರ್ಣವಾಯಿತು.॥32॥