०३१ रामेण लक्ष्मणप्रेषणम्

वाचनम्
ಭಾಗಸೂಚನಾ

ಸುಗ್ರೀವನ ಮೇಲೆ ಲಕ್ಷ್ಮಣನ ರೋಷ, ಶ್ರೀರಾಮನು ಅವನನ್ನು ಸಮಾಧಾನಪಡಿಸಿದುದು, ಲಕ್ಷ್ಮಣನು ಕಿಷ್ಕಿಂಧೆಯ ಮಹಾದ್ವಾರಕ್ಕೆ ಹೋಗಿ ಅಂಗದನನ್ನು ಸುಗ್ರೀವನ ಬಳಿಗೆ ಕಳಿಸಿದುದು, ವಾನರರ ಭಯ, ಪ್ಲಕ್ಷ ಮತ್ತು ಪ್ರಭಾವ ಎಂಬ ವಾನರರಿಂದ ಸುಗ್ರೀವನಿಗೆ ಕರ್ತವ್ಯದ ಉಪದೇಶ

ಮೂಲಮ್ - 1

ಸ ಕಾಮಿನಂ ದೀನಮದೀನಸತ್ತ್ವಂ
ಶೋಕಾಭಿಪನ್ನಂ ಸಮುದೀರ್ಣಕೋಪಮ್ ।
ನರೇಂದ್ರಸೂನುರ್ನರದೇವಪುತ್ರಂ
ರಾಮಾನುಜಃ ಪೂರ್ವಜಮಿತ್ಯುವಾಚ ॥

ಅನುವಾದ

ರಾಮಾನುಜ ನರೇಂದ್ರಕುಮಾರ ಲಕ್ಷ್ಮಣನು ಆಗ ಸೀತೆಯ ಕಾಮನೆಯಿಂದ ದುಃಖಿಯಾದ ಉದಾರಹೃದಯಿ, ಶೋಕಗ್ರಸ್ತ, ಹೆಚ್ಚಾದ ರೋಷಗೊಂಡ ಅಣ್ಣನಾದ, ಮಹಾರಾಜಪುತ್ರ ಶ್ರೀರಾಮನಲ್ಲಿ ಈ ಪ್ರಕಾರ ಹೇಳಿದನು.॥1॥

ಮೂಲಮ್ - 2

ನ ವಾನರಃ ಸ್ಥಾಸ್ಯತಿ ಸಾಧುವೃತ್ತೇ
ನ ಮನ್ಯತೇ ಕರ್ಮಲಾನುಷಂಗಾನ್ ।
ನ ಭೋಕ್ಷ್ಯತೇ ವಾನರರಾಜ್ಯಲಕ್ಷ್ಮೀಂ
ಯಥಾ ಹಿ ನಾಭಿಕ್ರಮತೇಽಸ್ಯ ಬುದ್ಧಿಃ ॥

ಅನುವಾದ

ಆರ್ಯನೇ! ಸುಗ್ರೀವನು ವಾನರನಾಗಿದ್ದಾನೆ, ಅವನು ಶ್ರೇಷ್ಠ ಪುರುಷರಿಗೆ ಉಚಿತವಾದ ಸದಾಚಾರದಲ್ಲಿ ಸ್ಥಿರನಾಗಿರಲಾರನು. ಅಗ್ನಿಸಾಕ್ಷಿಯಾಗಿ ರಘುನಾಥನೊಂದಿಗೆ ಮಿತ್ರತೆ ಮಾಡಿಕೊಂಡ ಸತ್-ಕರ್ಮದ ಫಲದಿಂದ ತನಗೆ ನಿಷ್ಕಂಟಕ ರಾಜ್ಯಭೋಗ ಪ್ರಾಪ್ತವಾಗಿದೆ, ಇದನ್ನು ಸುಗ್ರೀವನು ತಿಳಿಯುತ್ತಿಲ್ಲ. ಆದ್ದರಿಂದ ಅವನು ವಾನರರ ರಾಜ್ಯಲಕ್ಷ್ಮಿಯನ್ನು ಪಾಲಿಸಲಾರನು ಹಾಗೂ ಅನುಭವಿಸಲಾರನು; ಏಕೆಂದರೆ ಅವನ ಬುದ್ಧಿಯು ಮಿತ್ರಧರ್ಮಪಾಲನೆಗಾಗಿ ಹೆಚ್ಚು ಮುಂದುವರಿಯಲಿಲ್ಲ.॥2॥

ಮೂಲಮ್ - 3

ಮತಿಕ್ಷಯಾದ್ ಗ್ರಾಮ್ಯಸುಖೇಷು ಸಕ್ತ-
ಸ್ತವ ಪ್ರಸಾದಾತ್ ಪ್ರತಿಕಾರಬುದ್ಧಿಃ ।
ಹತೋಗ್ರಜಂ ಪಶ್ಯತು ವೀರ ವಾಲಿನಂ
ನರಾಜ್ಯಮೇವಂ ವಿಗುಣಸ್ಯ ದೇಯಮ್ ॥

ಅನುವಾದ

ಸುಗ್ರೀವನ ಬುದ್ಧಿ ಕೆಟ್ಟುಹೋಗಿದೆ, ಇದರಿಂದ ಅವನು ವಿಷಯಭೋಗದಲ್ಲಿ ಆಸಕ್ತನಾಗಿರುವನು. ನಿನ್ನ ಕೃಪೆಯಿಂದ ದೊರೆತ ರಾಜ್ಯಾದಿಗಳ ಕುರಿತಾದ ಉಪಕಾರವನ್ನು ತೀರಿಸುವ ನಿಯತ್ತು ಅವನಲ್ಲಿ ಇಲ್ಲ. ಆದ್ದರಿಂದ ಈಗ ಅವನೂ ವಧಿಸಲ್ಪಟ್ಟು ತನ್ನ ಅಣ್ಣ ವಾಲಿಯ ದರ್ಶನ ಮಾಡಲಿ. ಇಂತಹ ಗುಣಹೀನ ಪುರುಷನಿಗೆ ರಾಜ್ಯವನ್ನು ಕೊಡಬಾರದು.॥3॥

ಮೂಲಮ್ - 4

ನ ಧಾರಯೇ ಕೋಪಮುದೀರ್ಣವೇಗಂ
ನಿಹನ್ಮಿ ಸುಗ್ರೀವಮಸತ್ಯಮದ್ಯ ।
ಹರಿಪ್ರವೀರೈಃ ಸಹ ವಾಲಿಪುತ್ರೋ
ನರೇಂದ್ರಪತ್ನ್ಯಾವಿಚಯಂ ಕರೋತು ॥

ಅನುವಾದ

ಬೆಳೆದಿರುವ ನನ್ನ ಕ್ರೋಧವನ್ನು ತಡೆಯಲಾರೆ. ಅಸತ್ಯವಾದಿ ಸುಗ್ರೀವನನ್ನು ಇಂದೇ ಕೊಂದುಹಾಕುವೆನು. ಈ ವಾಲಿಕುಮಾರ ಅಂಗದನೇ ರಾಜನಾಗಿ ಮುಖ್ಯ ವಾನರ ವೀರರೊಂದಿಗೆ ರಾಜಕುಮಾರಿ ಸೀತೆಯನ್ನು ಹುಡುಕಲಿ.॥4॥

ಮೂಲಮ್ - 5

ತಮಾತ್ತಬಾಣಾಸನಮುತ್ಪತಂತಂ
ನಿವೇದಿತಾರ್ಥಂ ರಣಚಂಡಕೋಪಮ್ ।
ಉವಾಚ ರಾಮಃ ಪರವೀರಹಂತಾ
ಸ್ವವೀಕ್ಷಿತಂ ಸಾನುನಯಂ ಚ ವಾಕ್ಯಮ್ ॥

ಅನುವಾದ

ಹೀಗೆ ಹೇಳಿ ಲಕ್ಷ್ಮಣನು ಧನುರ್ಬಾಣಗಳನ್ನು ಕೈಯಲ್ಲೆತ್ತಿಕೊಂಡು ಬಹಳ ವೇಗವಾಗಿ ಹೊರಟನು. ತಾನು ಹೋಗುವ ಪ್ರಯೋಜನವನ್ನು ಅವನು ಸ್ಪಷ್ಟ ಶಬ್ದಗಳಲ್ಲಿ ನಿವೇದಿಸಿಕೊಂಡಿದ್ದನು. ಯುದ್ಧಕ್ಕಾಗಿ ಅವನ ಕೋಪ ಪ್ರಚಂಡವಾಗಿತ್ತು ಹಾಗೂ ಅವನು ಏನು ಮಾಡಲು ಹೋಗುತ್ತಿದ್ದಾನೆ ಇತರ ಕುರಿತು ಚೆನ್ನಾಗಿ ವಿಚಾರ ಮಾಡಿರಲಿಲ್ಲ. ಆಗ ವಿಪಕ್ಷೀ ವೀರರನ್ನು ಸಂಹರಿಸುವ ಶ್ರೀರಾಮಚಂದ್ರನು ಅವನನ್ನು ಶಾಂತಗೊಳಿಸಲು ಅನುನಯಯುಕ್ತ ಮಾತನ್ನು ಹೇಳಿದನು-॥5॥

ಮೂಲಮ್ - 6

ನಹಿ ವೈ ತ್ವದ್ವಿಧೋ ಲೋಕೇ ಪಾಪಮೇವಂ ಸಮಾಚರೇತ್ ।
ಪಾಪಮಾರ್ಯೇಣ ಯೋ ಹಂತಿ ಸ ವೀರಃ ಪುರುಷೋತ್ತಮಃ ॥

ಅನುವಾದ

ಸುಮಿತ್ರಾನಂದನ! ನಿನ್ನಂತಹ ಶ್ರೇಷ್ಠ ಪುರುಷನು ಜಗತ್ತಿನಲ್ಲಿ ಇಂತಹ (ಮಿತ್ರವಧರೂಪೀ) ನಿಷಿದ್ಧ ಆಚರಣೆ ಮಾಡಬಾರದು. ಉತ್ತಮ ವಿವೇಕದಿಂದ ತನ್ನ ಕ್ರೋಧವನ್ನು ಕೊಲ್ಲುವ ವೀರನೇ ಸಮಸ್ತ ಪುರುಷರಲ್ಲಿ ಶ್ರೇಷ್ಠನಾಗಿರುವನು.॥6॥

ಮೂಲಮ್ - 7

ನೇದಮತ್ರ ತ್ವಯಾ ಗ್ರಾಹ್ಯಂ ಸಾಧುವೃತ್ತೇನ ಲಕ್ಷ್ಮಣ ।
ತಾಂ ಪ್ರೀತಿಮನುವರ್ತಸ್ವ ಪೂರ್ವವೃತ್ತಂ ಚ ಸಂಗತಮ್ ॥

ಅನುವಾದ

ಲಕ್ಷ್ಮಣ! ನೀನು ಸದಾಚಾರಿಯಾಗಿರುವೆ. ನೀನು ಹೀಗೆ ಸುಗ್ರೀವನನ್ನು ಕೊಲ್ಲುವ ನಿಶ್ಚಯಮಾಡಬಾರದು. ಅವನನ್ನು ಕುರಿತು ನಿನಗೆ ಹಿಂದೆ ಇದ್ದ ಪ್ರೇಮವನ್ನೇ ಅನುಸರಿಸು. ಅವನೊಂದಿಗೆ ಮೊದಲು ಮಾಡಿದ ಮೈತ್ರಿಯನ್ನು ನಿಭಾಯಿಸು.॥7॥

ಮೂಲಮ್ - 8

ಸಮೋಪಹಿತಯಾ ವಾಚಾ ರೂಕ್ಷಾಣಿ ಪರಿವರ್ಜಯನ್ ।
ವಕ್ತುಮರ್ಹಸಿ ಸುಗ್ರೀವಂ ವ್ಯತೀತಂ ಕಾಲಪರ್ಯಯೇ ॥

ಅನುವಾದ

ನೀನು ಸಾಂತ್ವನಪೂರ್ಣ ವಾಣಿಯಿಂದ ಕಟುವಚನಗಳನ್ನು ತ್ಯಜಿಸುತ್ತಾ ಸುಗ್ರೀವನಲ್ಲಿ - ನೀನು ಸೀತೆಯನ್ನು ಹುಡುಕಲು ಸಮಯವನ್ನು ನಿಶ್ಚಿತಗೊಳಿಸಿದ್ದೆ, ಅದು ಕಳೆದುಹೋಯಿತು. (ಹೀಗಿದ್ದರೂ ಸುಮ್ಮನಿದ್ದಿಯಲ್ಲ ಏಕೆ?) ಎಂದು ಹೇಳು.॥8॥

ಮೂಲಮ್ - 9

ಸೋಽಗ್ರಜೇನಾನುಶಿಷ್ಟಾರ್ಥೋ ಯಥಾವತ್ಪುರುಷರ್ಷಭಃ ।
ಪ್ರವಿವೇಶ ಪುರೀಂ ವೀರೋ ಲಕ್ಷ್ಮಣಃ ಪರವೀರಹಾ ॥

ಅನುವಾದ

ತನ್ನ ಅಣ್ಣನು ಹೀಗೆ ಯಥೋಚಿತವಾಗಿ ಸಮಜಾಯಿಸಿದಾಗ ಶತ್ರುವೀರರ ಸಂಹಾರ ಮಾಡುವ ಪುರುಷ ಪ್ರವರ ವೀರ ಲಕ್ಷ್ಮಣನು ಕಿಷ್ಕಿಂಧಾಪುರಿಯನ್ನು ಪ್ರವೇಶಿಸಲು ಮನ ಮಾಡಿದನು.॥9॥

ಮೂಲಮ್ - 10

ತತಃ ಶುಭಮತಿಃ ಪ್ರಾಜ್ಞೋ ಭ್ರಾತುಃ ಪ್ರಿಯಹಿತೇ ರತಃ ।
ಲಕ್ಷ್ಮಣಃ ಪ್ರತಿಸಂರಬ್ಧೋ ಜಗಾಮ ಭವನಂ ಕಪೇಃ ॥

ಅನುವಾದ

ಅಣ್ಣನ ಪ್ರಿಯ ಮತ್ತು ಹಿತದಲ್ಲಿ ತತ್ಪರನಾಗಿದ್ದ ಶುಭಬುದ್ಧಿಯುಕ್ತ ಬುದ್ಧಿವಂತ ಲಕ್ಷ್ಮಣನು ರೋಷಗೊಂಡು ವಾನರರಾಜ ಸುಗ್ರೀವನ ಭವನದ ಕಡೆಗೆ ಹೊರಟನು.॥10॥

ಮೂಲಮ್ - 11

ಶಕ್ರಬಾಣಾಸನಪ್ರಖ್ಯಂ ಧನುಃ ಕಾಲಾಂತಕೋಪಮಮ್ ।
ಪ್ರಗೃಹ್ಯ ಗಿರಿಶೃಂಗಾಭಂ ಮಂದರಃ ಸಾನುಮಾನಿವ ॥

ಅನುವಾದ

ಆಗ ಅವನು ಇಂದ್ರಧನುಸ್ಸಿನಂತೆ ತೇಜಸ್ವೀ, ಕಾಲಾಂತಕನಂತೆ ಭಯಂಕರ ಹಾಗೂ ಪರ್ವತ ಶಿಖರಕ್ಕೆ ಸಮಾನವಾದ ವಿಶಾಲ ಧನುಸ್ಸನ್ನು ಕೈಗೆತ್ತಿಕೊಂಡು ಶೃಂಗಸಹಿತ ಮಂದರಾಚಲದಂತೆ ಕಾಣುತ್ತಿದ್ದನು.॥11॥

ಮೂಲಮ್ - 12

ಯಥೋಕ್ತಕಾರೀ ವಚನಮುತ್ತರಂ ಚೈವ ಸೋತ್ತರಮ್ ।
ಬೃಹಸ್ಪತಿಸಮೋ ಬುದ್ಧ್ಯಾಮತ್ವಾ ರಾಮಾನುಜಸ್ತದಾ ॥

ಅನುವಾದ

ಶ್ರೀರಾಮಾನುಜ ಲಕ್ಷ್ಮಣನು ಅಣ್ಣನ ಆಜ್ಞೆಯನ್ನು ಯಥಾವತ್ತಾಗಿ ಪಾಲಿಸುವ ಹಾಗೂ ಬೃಹಸ್ಪತಿಯಂತೆ ಬುದ್ಧಿ ವಂತನಾಗಿದ್ದನು. ಅವನು ಸುಗ್ರೀವನಲ್ಲಿ ಹೇಳುವ, ಅವನ ಉತ್ತರ ಮತ್ತು ಆ ಉತ್ತರಕ್ಕೆ ಇವನು ಹೇಳುವ ಎಲ್ಲವನ್ನು ಚೆನ್ನಾಗಿ ವಿಮರ್ಶಿಸಿಕೊಂಡು ಅಲ್ಲಿಂದ ಹೊರಟನು.॥12॥

ಮೂಲಮ್ - 13

ಕಾಮಕ್ರೋಧಸಮುತ್ಥೇನ ಭ್ರಾತುಃ ಕ್ರೋಧಾಗ್ನಿನಾ ವೃತಃ ।
ಪ್ರಭಂಜನ ಇವಾಪ್ರೀತಃ ಪ್ರಯಯೌ ಲಕ್ಷ್ಮಣಸ್ತತಃ ॥

ಅನುವಾದ

ಸೀತಾನ್ವೇಷಣೆಯ ಕುರಿತಾದ ಶ್ರೀರಾಮನ ಕಾಮನೆ ಮತ್ತು ಸುಗ್ರೀವನ ಪ್ರಮಾದದಿಂದಾಗಿ ಉಂಟಾದ ಕ್ರೋಧ ಇವೆರಡರ ಕಾರಣ ಲಕ್ಷ್ಮಣನೂ ಕ್ರೋಧಾಗ್ನಯಿಂದ ಉರಿದೆದ್ದನು. ಆ ಕ್ರೋಧಾಗ್ನಿಯಿಂದ ಕೂಡಿದ ಲಕ್ಷ್ಮಣನು ಸುಗ್ರೀವನ ಕುರಿತು ಪ್ರಸನ್ನನಾಗಿರಲಿಲ್ಲ. ಅವನು ಅದೇ ಸ್ಥಿತಿಯಲ್ಲಿ ವಾಯು ವೇಗದಿಂದ ನಡೆದನು.॥13॥

ಮೂಲಮ್ - 14

ಸಾಲತಾಲಾಶ್ವಕರ್ಣಾಂಶ್ಚ ತರಸಾ ಪಾತಯನ್ ಬಲಾತ್ ।
ಪರ್ಯಸ್ಯನ್ಗಿರಿಕೂಟಾನಿ ದ್ರುಮಾನನ್ಯಾಂಶ್ಚ ವೇಗಿತಃ ॥

ಅನುವಾದ

ಅತಿ ವೇಗವಾಗಿ ಸಾಗುತ್ತಿದ್ದ ಅವನು ದಾರಿಯಲ್ಲಿ ಸಿಗುವ ಸಾಲ, ತಾಲ, ಅಶ್ವಕರ್ಣ ಮೊದಲಾದ ವೃಕ್ಷಗಳನ್ನು ಜೋರಾಗಿ ಕೆಡವುತ್ತಾ, ಪರ್ವತ ಶಿಖರಗಳನ್ನು ಹಾಗೂ ಇತರ ವೃಕ್ಷಗಳನ್ನು ಎತ್ತಿ-ಎತ್ತಿ ದೂರ ಎಸೆಯುತ್ತಿದ್ದನು.॥14॥

ಮೂಲಮ್ - 15

ಶಿಲಾಶ್ಚ ಶಕಲೀಕುರ್ವನ್ಪದ್ಭ್ಯಾಂ ಗಜ ಇವಾಶುಗಃ ।
ದೂರಮೇಕಪದಂ ತ್ಯಕ್ತ್ವಾ ಯಯೌ ಕಾರ್ಯವಶಾದ್ದ್ರುತಮ್ ॥

ಅನುವಾದ

ಶೀಘ್ರಗಾಮಿ ಆನೆಯಂತೆ ತನ್ನ ಪಾದಾಘಾತದಿಂದ ಶಿಲೆಗಳನ್ನು ನುಚ್ಚುನೂರಾಗಿಸುತ್ತಾ, ದೂರ-ದೂರ ಹೆಜ್ಜೆಗಳನ್ನಿಡುತ್ತಾ ಅವನು ಕಾರ್ಯವಶ ಬಹಳ ವೇಗವಾಗಿ ನಡೆಯುತ್ತಿದ್ದನು.॥15॥

ಮೂಲಮ್ - 16

ತಾಮಪಶ್ಯದ್ಬಲಾಕೀರ್ಣಾಂ ಹರಿರಾಜ ಮಹಾಪುರೀಮ್ ।
ದುರ್ಗಾಮಿಕ್ಷ್ವಾಕುಶಾರ್ದೂಲಃ ಕಿಷ್ಕಿಂಧಾಂ ಗಿರಿಸಂಕಟೇ ॥

ಅನುವಾದ

ಇಕ್ಷ್ವಾಕುಕುಲಸಿಂಹ ಲಕ್ಷ್ಮಣನು ಹತ್ತಿರ ಹೋಗಿ ವಾನರರರಾಜ ಸುಗ್ರೀವನ ವಿಶಾಲಪುರಿ ಕಿಷ್ಕಿಂಧೆಯನ್ನು ನೋಡಿದನು. ಅದು ಪರ್ವತಗಳ ನಡುವೆ ನೆಲೆಸಿತ್ತು. ವಾನರ ಸೈನ್ಯದಿಂದ ವ್ಯಾಪ್ತವಾದದ್ದರಿಂದ ಬೇರೆಯವರಿಗೆ ಅದು ದುರ್ಗಮವಾಗಿತ್ತು.॥16॥

ಮೂಲಮ್ - 17

ರೋಷಾತ್ ಪ್ರಸ್ಫುರಮಾಣೋಷ್ಠಃ ಸುಗ್ರೀವಂ ಪ್ರತಿ ಲಕ್ಷ್ಮಣಃ ।
ದದರ್ಶ ವಾನರಾನ್ ಭೀಮಾನ್ ಕಿಷ್ಕಿಂಧಾಯಾಂ ಬಹಿಶ್ಚರಾನ್ ॥

ಅನುವಾದ

ಆಗ ಸುಗ್ರೀವನ ಕುರಿತು ಲಕ್ಷ್ಮಣನ ತುಟಿಗಳು ಅದರುತ್ತಿದ್ದವು. ಅವನು ಕಿಷ್ಕಿಂಧೆಯ ಬಳಿ ನಗರದಿಂದ ಹೊರಗೆ ಸಂಚರಿಸುತ್ತಿದ್ದ ಅನೇಕ ಭಯಂಕರ ವಾನರರನ್ನು ನೋಡಿದನು.॥17॥

ಮೂಲಮ್ - 18

ತಂ ದೃಷ್ಟ್ವಾ ವಾನರಾಃ ಸರ್ವೇ ಲಕ್ಷ್ಮಣಂ ಪುರುಷರ್ಷಭಮ್ ।
ಶೈಲಶೃಂಗಾಣಿ ಶತಶಃ ಪ್ರವೃದ್ಧಾಂಶ್ಚ ಮಹೀರುಹಾನ್ ।
ಜಗೃಹುಃ ಕುಂಜರಪ್ರಖ್ಯಾ ವಾನರಾಃ ಪರ್ವತಾಂತರೇ ॥

ಅನುವಾದ

ಆ ವಾನರರ ಶರೀರಗಳು ಆನೆಗಳಂತೆ ದೊಡ್ಡದಾಗಿದ್ದವು. ಆಗ ಸಮಸ್ತ ವಾನರರು ಪುರುಷಪ್ರವರ ಲಕ್ಷ್ಮಣನನ್ನು ನೋಡುತ್ತಲೇ ನೂರಾರು ಪರ್ವತ ಶಿಖರಗಳನ್ನು ಮತ್ತು ದೊಡ್ಡ-ದೊಡ್ಡ ವೃಕ್ಷಗಳನ್ನು ಎತ್ತಿಕೊಂಡರು.॥18॥

ಮೂಲಮ್ - 19

ತಾನ್ಗೃಹೀತಪ್ರಹರಣಾನ್ ಸರ್ವಾನ್ ದೃಷ್ಟ್ವಾತು ಲಕ್ಷ್ಮಣಃ ।
ಬಭೂವ ದ್ವಿಗುಣಂ ಕ್ರುದ್ಧೋ ಬಹ್ವಿಂಧನ ಇವಾನಲಃ ॥

ಅನುವಾದ

ಅವರೆಲ್ಲರೂ ಆಯುಧಗಳನ್ನು ಎತ್ತಿಕೊಂಡಿರುವುದನ್ನು ನೋಡಿ ಲಕ್ಷ್ಮಣನು ಒಣಗಿದ ಕಟ್ಟಿಗೆಗಳನ್ನು ಹಾಕಿದಾಗ ಉರಿದೇಳುವ ಬೆಂಕಿಯಂತೆ ಇಮ್ಮಡಿಯಾದ ಕ್ರೋಧದಿಂದ ಉರಿದೆದ್ದನು.॥19॥

ಮೂಲಮ್ - 20

ತಂ ತೇ ಭಯಪರೀತಾಂಗಾ ಕ್ಷುಬ್ಧಂ ದೃಷ್ಟ್ವಾ ಪ್ಲವಂಗಮಾಃ ।
ಕಾಲಮೃತ್ಯುಯುಗಾಂತಾಭಂ ಶತಶೋ ವಿದ್ರುತಾದಿಶಃ ॥

ಅನುವಾದ

ಕ್ಷುಬ್ಧನಾದ ಲಕ್ಷ್ಮಣನು ಕಾಲಮೃತ್ಯು ಹಾಗೂ ಪ್ರಳಯ ಕಾಲದ ಅಗ್ನಿಯಂತೆ ಭಯಂಕರವಾಗಿ ಕಾಣುತ್ತಿದ್ದನು. ಅವನನ್ನು ನೋಡಿದ ಆ ನೂರಾರು ವಾನರರ ಶರೀರಗಳು ಭಯದಿಂದ ನಡುಗಿಹೋಗಿ, ಕಂಡ-ಕಂಡಲ್ಲಿಗೆ ಓಡಿಹೋದರು.॥20॥

ಮೂಲಮ್ - 21

ತತಃ ಸುಗ್ರೀವಭವನಂ ಪ್ರವಿಶ್ಯ ಹರಿಪುಂಗವಾಃ ।
ಕ್ರೋಧಮಾಗಮನಂ ಚೈವ ಲಕ್ಷ್ಮಣಸ್ಯ ನ್ಯವೇದಯನ್ ॥

ಅನುವಾದ

ಅನಂತರ ಕೆಲವು ಶ್ರೇಷ್ಠವಾನರರು ಸುಗ್ರೀವನ ಅರಮನೆಗೆ ಹೋಗಿ ಲಕ್ಷ್ಮಣನ ಆಗಮನದ ಮತ್ತು ಕ್ರೋಧದ ಸಮಾಚಾರ ನಿವೇದಿಸಿಕೊಂಡರು.॥21॥

ಮೂಲಮ್ - 22

ತಾರಯಾ ಸಹಿತಃ ಕಾಮೀ ಸಕ್ತಃ ಕಪಿವೃಷಸ್ತದಾ ।
ನ ತೇಷಾಂ ಕಪಿಸಿಂಹಾನಾಂ ಶುಶ್ರಾವ ವಚನಂ ತದಾ ॥

ಅನುವಾದ

ಆಗ ಕಾಮಕ್ಕೆ ಅಧೀನನಾದ ಸುಗ್ರೀವನು ಭೋಗಾಸಕ್ತನಾಗಿ ತಾರೆಯ ಜೊತೆಗಿದ್ದನು. ಇದರಿಂದ ಅವನಿಗೆ ಆ ಶ್ರೇಷ್ಠ ವಾನರರ ಮಾತು ಕೇಳಿಸಲಿಲ್ಲ.॥22॥

ಮೂಲಮ್ - 23

ತತಃ ಸಚಿವಸಂದಿಷ್ಟಾ ಹರಯೋ ರೋಮಹರ್ಷಣಾಃ ।
ಗಿರಿಕುಂಜರಮೇಘಾಭಾ ನಗರಾನ್ನಿರ್ಯಯುಸ್ತದಾ ॥

ಅನುವಾದ

ಆಗ ಸಚಿವನ ಆಜ್ಞೆಯಂತೆ ಲಕ್ಷ್ಮಣನ ಸ್ವರೂಪವನ್ನು ನೋಡಿ ರೋಮಾಂಚಿತರಾದ, ಪರ್ವತ, ಆನೆ, ಮೇಘಗಳಂತಿರುವ ವಿಶಾಲಕಾಯ ವಾನರರು ನಗರದಿಂದ ಹೊರಗೆ ಬಂದರು.॥23॥

ಮೂಲಮ್ - 24

ನಖದಂಷ್ಟ್ರಾಯುಧಾಃ ಸರ್ವೇ ವೀರಾ ವಿಕೃತದರ್ಶನಾಃ ।
ಸರ್ವೇ ಶಾರ್ದೂಲದಂಷ್ಟ್ರಾಶ್ಚ ಸರ್ವೇ ಚ ವಿವೃತದರ್ಶನಾಃ ॥

ಅನುವಾದ

ಆ ವಾನರರು ವೀರರಾಗಿದ್ದು, ಉಗುರು, ಹಲ್ಲುಗಳೇ ಆಯುಧಗಳುಳ್ಳ ಅವರೆಲ್ಲರೂ ವಿಕರಾಳವಾಗಿ ಕಾಣುತ್ತಿದ್ದರು. ಅವರೆಲ್ಲರ ಕೋರೆದಾಡೆಗಳು ಹುಲಿಯ ಕೋರೆದಾಡೆಗಳಂತೆ ಇದ್ದು, ಎಲ್ಲರೂ ಕಣ್ಮುಂದೆಯೇ ನಿಂತಿದ್ದರು.॥24॥

ಮೂಲಮ್ - 25

ದಶನಾಗಬಲಾಃ ಕೇಚಿತ್ಕೆಚಿದ್ದಶಗುಣೋತ್ತರಾಃ ।
ಕೇಚಿನ್ನಾಗಸಹಸ್ರಸ್ಯ ಬಭೂವುಸ್ತುಲ್ಯವರ್ಚಸಃ ॥

ಅನುವಾದ

ಕೆಲವರಲ್ಲಿ ಹತ್ತು ಆನೆಗಳ ಬಲವಿದ್ದರೆ, ಕೆಲವರಲ್ಲಿ ನೂರು ಆನೆಗಳ ಬಲಕ್ಕೆ ಸಮಾನವಾಗಿ ಮಹಾಶಕ್ತಿಶಾಲಿಗಳಾಗಿ ಇದ್ದರು. ಕೆಲ-ಕೆಲವರ ಬಲ-ಪರಾಕ್ರಮವಂತು ಸಾವಿರ ಆನೆಗಳಂತೆ ಇತ್ತು.॥25॥

ಮೂಲಮ್ - 26

ತತಸ್ತೈಃ ಕಪಿಭಿರ್ವ್ಯಾಪ್ತಾಂ ದ್ರುಮಹಸ್ತೈರ್ಮಹಾಬಲೈಃ ।
ಅಪಶ್ಯಲ್ಲಕ್ಷ್ಮಣಃ ಕ್ರುದ್ಧಃ ಕಿಷ್ಕಿಂಧಾಂ ತಾಂ ದುರಾಸದಾಮ್ ॥

ಅನುವಾದ

ವೃಕ್ಷಗಳನ್ನೆತ್ತಿಕೊಂಡ ಆ ಮಹಾಬಲಿ ವಾನರರಿಂದ ವ್ಯಾಪ್ತವಾದ ಕಿಷ್ಕಿಂಧೆಯು ಅತ್ಯಂತ ದುರ್ಜಯವಾಗಿ ಕಾಣುತ್ತಿತ್ತು. ಲಕ್ಷ್ಮಣನು ಕುಪಿತನಾಗಿ ಆ ಪುರಿಯ ಕಡೆಗೆ ನೋಡಿದನು.॥26॥

ಮೂಲಮ್ - 27

ತತಸ್ತೇಹರಯಃ ಸರ್ವೇ ಪ್ರಾಕಾರಪರಿಖಾಂತರಾತ್ ।
ನಿಷ್ಕ್ರಮ್ಯೋದಗ್ರಸತ್ತ್ವಾಸ್ತು ತಸ್ಥುರಾವಿಷ್ಕೃತಂ ತದಾ ॥

ಅನುವಾದ

ಅನಂತರ ಆ ಎಲ್ಲ ಮಹಾಬಲಿ ವಾನರರು ಪುರಿಯ ಕೋಟೆಯಿಂದ, ಕಂದಕಗಳಿಂದ ಹೊರ ಬಂದು ಪ್ರಕಟರಾಗಿ ಎದುರಿಗೆ ಬಂದು ನಿಂತುಕೊಂಡರು.॥27॥

ಮೂಲಮ್ - 28

ಸುಗ್ರೀವಸ್ಯ ಪ್ರಮಾದಂ ಚ ಪೂರ್ವಜಸ್ಯಾರ್ಥಮಾತ್ಮವಾನ್ ।
ದೃಷ್ಟ್ವಾಕ್ರೋಧವಶಂ ವೀರಃ ಪುನರೇವ ಜಗಾಮ ಸಃ ॥

ಅನುವಾದ

ಆತ್ಮಸಂಯಮಿ ವೀರ ಲಕ್ಷ್ಮಣನು ಸುಗ್ರೀವನ ಪ್ರಮಾದ ಹಾಗೂ ಅಣ್ಣನ ಮಹತ್ವಪೂರ್ಣ ಕಾರ್ಯವನ್ನು ನೋಡುತ್ತಾ ಪುನಃ ವಾನರರಾಜನ ಕುರಿತು ಕ್ರೋಧಾವಿಷ್ಟನಾದನು.॥28॥

ಮೂಲಮ್ - 29

ಸ ದೀರ್ಘೋಷ್ಣಮಹೋಚ್ಛ್ವಾಸಃ ಕೋಪಸಂರಕ್ತಲೋಚನಃ ।
ಬಭೂವ ನರಶಾರ್ದೂಲಃ ಸಧೂಮ ಇವ ಪಾವಕಃ ॥

ಅನುವಾದ

ಅವನು ಬಿಸಿಯಾದ ದೀರ್ಘಶ್ವಾಸ ಬಿಡತೊಡಗಿದನು. ಅವನ ಕಣ್ಣುಗಳು ಕೋಪದಿಂದ ಕೆಂಪಾಗಿದ್ದವು. ಆಗ ಪುರುಷಸಿಂಹ ಲಕ್ಷ್ಮಣನು ಹೊಗೆಯಿಂದ ಕೂಡಿದ ಅಗ್ನಿಯಂತೆ ಕಂಡುಬರುತ್ತಿದ್ದನು.॥29॥

ಮೂಲಮ್ - 30

ಬಾಣಶಲ್ಯಸ್ಫುರಜ್ಜಿಹ್ವಃ ಸಾಯಕಾಸನ ಭೋಗವಾನ್ ।
ಸ್ವತೇಜೋವಿಷಸಂಭೂತಃ ಪಂಚಾಸ್ಯ ಇವ ಪನ್ನಗಃ ॥

ಅನುವಾದ

ಇಷ್ಟೇ ಅಲ್ಲ, ಅವನು ಐದು ಮುಖಗಳುಳ್ಳ ಸರ್ಪದಂತೆ ಕಾಣುತ್ತಿದ್ದನು. ಬಾಣದ ತುದಿಯೇ ಆ ಸರ್ಪದ ಚಾಚಿದ ನಾಲಿಗೆ, ಧನುಸ್ಸೇ ಅದರ ವಿಶಾಲ ಶರೀರವಾಗಿತ್ತು. ಆ ಸರ್ಪರೂಪೀ ಲಕ್ಷ್ಮಣನು ತನ್ನ ತೇಜೋಮಯ ವಿಷದಿಂದ ವ್ಯಾಪ್ತನಾಗಿದ್ದನು.॥30॥

ಮೂಲಮ್ - 31

ತಂ ದೀಪ್ತಮಿವ ಕಾಲಾಗ್ನಿಂ ನಾಗೇಂದ್ರಮಿವ ಕೋಪಿತಮ್ ।
ಸಮಾಸಾದ್ಯಾಂಗದಸ್ತ್ರಾಸಾದ್ ವಿಷಾದಮಗಮತ್ ಪರಮ್ ॥

ಅನುವಾದ

ಆ ಸಂದರ್ಭದಲ್ಲಿ ಪ್ರಜ್ವಲಿತ ಪ್ರಳಯಾಗ್ನಿ ಮತ್ತು ಕ್ರೋಧಗೊಂಡ ನಾಗರಾಜ ಶೇಷನಂತೆ ಕಾಣುತ್ತಿದ್ದ ಲಕ್ಷ್ಮಣನ ಬಳಿಗೆ ಅತ್ಯಂತ ವಿಷಾದಗೊಂಡು ಕುಮಾರ ಅಂಗದನು ಹೆದರುತ್ತಲೇ ಹೋದನು.॥31॥

ಮೂಲಮ್ - 32

ಸೋಂಽಗದಂ ರೋಷತಾಮ್ರಾಕ್ಷಃ ಸಂದಿದೇಶ ಮಹಾಯಶಾಃ ।
ಸುಗ್ರೀವಃ ಕಥ್ಯತಾಂ ವತ್ಸ ಮಮಾಗಮನಮಿತ್ಯುತ ॥

ಮೂಲಮ್ - 33

ಏಷ ರಾಮಾನುಜಃ ಪ್ರಾಪ್ತಸ್ತ್ವತ್ಸಕಾಶಮರಿಂದಮ ।
ಭ್ರಾತುರ್ವ್ಯಸನಸಂತಪ್ತೋ ದ್ವಾರಿ ತಿಷ್ಠತಿ ಲಕ್ಷ್ಮಣಃ ॥

ಮೂಲಮ್ - 34

ತಸ್ಯ ವಾಕ್ಯಂ ಯದಿ ರುಚಿಃ ಕ್ರಿಯತಾಂ ಸಾಧು ವಾನರಃ ।
ಇತ್ಯುಕ್ತ್ವಾಶೀಘ್ರಮಾಗಚ್ಛ ವತ್ಸ ವಾಕ್ಯಮರಿಂದಮ ॥

ಅನುವಾದ

ಮಹಾಯಶಸ್ವೀ ಲಕ್ಷ್ಮಣನು ಕಣ್ಣು ಕೆಂಪಗಾಗಿಸಿ ಅಂಗದನಿಗೆ ಆದೇಶಿಸಿದನು - ಮಗು! ನಾನು ಬಂದಿರುವ ಸೂಚನೆಯನ್ನು ಸುಗ್ರೀವನಿಗೆ ಕೊಡು. ಅವನ ಬಳಿ ಹೇಳು - ಶತ್ರುದಮನ ವೀರ! ಶ್ರೀರಾಮಚಂದ್ರನ ತಮ್ಮ ಲಕ್ಷ್ಮಣನು ತನ್ನ ಅಣ್ಣನ ದುಃಖದಿಂದ ದುಃಖಿತನಾಗಿ ನಿನ್ನ ಬಳಿಗೆ ಬಂದು ನಗರದ ದ್ವಾರದಲ್ಲಿ ನಿಂತಿರುವನು. ವಾನರರಾಜನೇ ನಿನಗೆ ಇಚ್ಛೆ ಇದ್ದರೆ ಅವನ ಆಜ್ಞೆಯನ್ನು ಚೆನ್ನಾಗಿ ಪಾಲಿಸು. ಶತ್ರುದಮನ ಅಂಗದನೇ! ಸಾಕು, ಇಷ್ಟೇ ಹೇಳಿ ನೀನು ಬೇಗನೇ ನನ್ನ ಬಳಿಗೆ ಬಂದು ಬಿಡು.॥32-34॥

ಮೂಲಮ್ - 35

ಲಕ್ಷ್ಮಣಸ್ಯ ವಚಃ ಶ್ರುತ್ವಾ ಶೋಕಾವಿಷ್ಟೋಂಽಗದೋಽಬ್ರವೀತ್ ।
ಪಿತುಃ ಸಮೀಪಮಾಗಮ್ಯ ಸೌಮಿತ್ರಿರಯಮಾಗತಃ ॥

ಅನುವಾದ

ಲಕ್ಷ್ಮಣನ ಮಾತನ್ನು ಕೇಳಿ ಶೋಕಾಕುಲ ಅಂಗದನು ಚಿಕ್ಕಪ್ಪ ಸುಗ್ರೀವನ ಬಳಿಗೆ ಬಂದು - ಅಪ್ಪಾ! ಈ ಸುಮಿತ್ರಾನಂದನ ಲಕ್ಷ್ಮಣನು ಇಲ್ಲಿಗೆ ಆಗಮಿಸಿರುವನು ಎಂದು ಹೇಳಿದನು.॥35॥

ಮೂಲಮ್ - 36

ಅಥಾಂಗದಸ್ತಸ್ಯ ಸುತೀವ್ರವಾಚಾ
ಸಂಭ್ರಾಂತಭಾವಃ ಪರಿದೀನವಕ್ತ್ರಾಃ ।
ನಿರ್ಗತ್ಯ ಪೂರ್ವಂ ನೃಪತೇಸ್ತರಸ್ವೀ
ತತೋ ರುಮಾಯಾಶ್ಚರಣೌ ವವಂದೇ ॥

ಅನುವಾದ

(ಈಗ ಇದೇ ಮಾತನ್ನು ವಿಸ್ತಾರವಾಗಿ ಹೇಳುತ್ತಾನೆ -) ಲಕ್ಷ್ಮಣನ ಕಠೋರವಾಣಿಯಿಂದ ಅಂಗದನ ಮನಸ್ಸಿನಲ್ಲಿ ಗಾಬರಿ ಉಂಟಾಯಿತು. ಅವನ ಮುಖದಲ್ಲಿ ಅತ್ಯಂತ ದೀನತೆ ಆವರಿಸಿತು. ಆ ವೇಗಶಾಲಿ ಕುಮಾರನು ಅಲ್ಲಿಂದ ಹೊರಟು ಮೊದಲಿಗೆ ಸುಗ್ರೀವನ, ಮತ್ತೆ ತಾರೆಯ ಹಾಗೂ ರುಮೆಯ ಚರಣಗಳಲ್ಲಿ ವಂದಿಸಿಕೊಂಡನು.॥36॥

ಮೂಲಮ್ - 37

ಸಂಗೃಹ್ಯ ಪಾದೌ ಪಿತುರುಗ್ರತೇಜಾ
ಜಗ್ರಾಹ ಮಾತುಃ ಪುನರೇವ ಪಾದೌ ।
ಪಾದೌ ರುಮಾಯಾಶ್ಚ ನಿಪೀಡಯಿತ್ವಾ
ನಿವೇದಯಾಮಾಸ ತತಸ್ತದರ್ಥಮ್ ॥

ಅನುವಾದ

ಉಗ್ರತೇಜಸ್ಸುಳ್ಳ ಅಂಗದನು ಮೊದಲಿಗೆ ಚಿಕ್ಕಪ್ಪನ ಕಾಲುಗಳನ್ನು ಹಿಡಿದು, ಮತ್ತೆ ತನ್ನ ತಾಯಿ ತಾರೆಯ ಚರಣಗಳನ್ನು ಸ್ಪರ್ಶಿಸಿದನು. ಬಳಿಕ ರುಮೆಯ ಕಾಲುಗಳನ್ನು ಮುಟ್ಟಿ, ಹಿಂದಿನ ಮಾತನ್ನು ಹೇಳಿದನು.॥37॥

ಮೂಲಮ್ - 38

ಸ ನಿದ್ರಾಕ್ಲಾಂತಸಂವೀತೋ ವಾನರೋ ನ ವಿಬುದ್ಧವಾನ್ ।
ಬಭೂವ ಮದಮತ್ತಶ್ಚ ಮದನೇನ ಚ ಮೋಹಿತಃ ॥

ಅನುವಾದ

ಆದರೆ ಸುಗ್ರೀವನು ಮದಮತ್ತನಂತೆ ಕಾಮಮೋಹಿತನಾಗಿ ಬಿದ್ದುಕೊಂಡಿದ್ದನು. ನಿದ್ದೆಯು ಅವನನ್ನು ಪೂರ್ಣವಾಗಿ ಆವರಿಸಿತ್ತು. ಅದರಿಂದ ಅವನು ಎಚ್ಚರಗೊಳ್ಳಲಿಲ್ಲ.॥38॥

ಮೂಲಮ್ - 39

ತತಃ ಕಿಲಕಿಲಾಂ ಚಕ್ರುರ್ಲಕ್ಷ್ಮಣಂ ಪ್ರೇಕ್ಷ್ಯವಾನರಾಃ ।
ಪ್ರಸಾದಯಂತಸ್ತಂ ಕ್ರುದ್ಧಂ ಭಯಮೋಹಿತಚೇತಸಃ ॥

ಅನುವಾದ

ಅಷ್ಟರಲ್ಲಿ ಹೊರಗೆ ಕ್ರೋಧತುಂಬಿದ ಲಕ್ಷ್ಮಣನನ್ನು ನೋಡಿ ಭಯದಿಂದ ಮೋಹಿತಚಿತ್ತರಾದ ವಾನರರು ಅವನನ್ನು ಪ್ರಸನ್ನಗೊಳಿಸಲು ದೀನತಾ ಸೂಚಕವಾಣಿಯಿಂದ ಕಿಲಕಿಲನೆ ಹಲ್ಲು ಕಿರಿಯತೊಡಗಿದರು.॥39॥

ಮೂಲಮ್ - 40

ತೇ ಮಹೌಘನಿಭಂ ದೃಷ್ಟ್ವಾ ವಜ್ರಾಶನಿಸಮಸ್ವನಮ್ ।
ಸಿಂಹನಾದಂ ಸಮಂ ಚಕ್ರುರ್ಲಕ್ಷ್ಮಣಸ್ಯ ಸಮೀಪತಃ ॥

ಅನುವಾದ

ಲಕ್ಷ್ಮಣನು ಕಣ್ಣಿಗೆ ಬೀಳುತ್ತಲೇ ಆ ವಾನರರು ಸುಗ್ರೀವನ ಬಳಿಯಲ್ಲಿ ಒಟ್ಟಿಗೆ ಜಲಪಾತದಂತೆ, ಸಿಡಿಲಿನ ಗರ್ಜನೆಯಂತೆ ಜೋರಾಗಿ ಸುಗ್ರೀವನನ್ನು ಎಚ್ಚರಗೊಳಿಸಲು ಸಿಂಹನಾದ ಮಾಡಿದರು.॥40॥

ಮೂಲಮ್ - 41

ತೇನ ಶಬ್ದೇನ ಮಹತಾ ಪ್ರತ್ಯಬುಧ್ಯತ ವಾನರಃ ।
ಮದವಿಹ್ವಲತಾಮ್ರಾಕ್ಷೋ ವ್ಯಾಕುಲಃ ಸ್ರಗ್ವಿಭೂಷಣಃ ॥

ಅನುವಾದ

ವಾನರರ ಆ ಭಯಂಕರ ಗರ್ಜನೆಯಿಂದ ಸುಗ್ರೀವನ ನಿದ್ದೆ ಹಾರಿಹೋಯಿತು. ಆಗ ಅವನ ಕಣ್ಣುಗಳು ಮದದಿಂದ ಚಂಚಲ ಮತ್ತು ಕೆಂಪಗಾಗಿದ್ದವು. ಮನಸ್ಸು ನೆಟ್ಟಗಿರಲಿಲ್ಲ. ಅವನ ಕತ್ತಿನಲ್ಲಿ ಸುಂದರ ಹೂವಿನ ಹಾರವು ಶೋಭಿಸುತ್ತಿತ್ತು.॥41॥

ಮೂಲಮ್ - 42

ಅಥಾಂಗದವಚಃ ಶ್ರುತ್ವಾ ತೇನೈವ ಚ ಸಮಾಗತೌ ।
ಮಂತ್ರಿಣೌ ವಾನರೇಂದ್ರಸ್ಯ ಸಂಮತೋದಾರದರ್ಶನೌ ॥

ಮೂಲಮ್ - 43

ಪ್ಲಕ್ಷಶ್ಚೈವ ಪ್ರಭಾವಶ್ಚ ಮಂತ್ರಿಣಾವರ್ಥಧರ್ಮಯೋಃ ।
ವಕ್ತುಮುಚ್ಚಾವಚಂ ಪ್ರಾಪ್ತಂ ಲಕ್ಷ್ಮಣಂ ತೌ ಶಶಂಸತುಃ ॥

ಅನುವಾದ

ಅಂಗದನ ಮಾತನ್ನು ಕೇಳಿ, ಅವನೊಂದಿಗೆ ಬಂದಿರುವ ಮಂತ್ರಿಗಳಾದ ಪ್ಲಕ್ಷ ಮತ್ತು ಪ್ರಭಾವ ಇಬ್ಬರೂ ವಾನರರಾಜನ ಸಮ್ಮಾನಪಾತ್ರರಾಗಿದ್ದು, ಉದಾರ ದೃಷ್ಟಿಯುಳ್ಳವರಾಗಿದ್ದರು. ರಾಜನಿಗೆ ಅರ್ಥ ಹಾಗೂ ಧರ್ಮದ ವಿಷಯದಲ್ಲಿ ಉಚ್ಚ-ನೀಚಗಳನ್ನು ತಿಳಿಸಲು ನಿಯುಕ್ತರಾಗಿದ್ದ ಅವರೂ ಲಕ್ಷ್ಮಣನ ಆಗಮನದ ಸೂಚನೆ ನೀಡಿದರು.॥42-43॥

ಮೂಲಮ್ - 44

ಪ್ರಸಾದಯಿತ್ವಾ ಸುಗ್ರೀವಂ ವಚನೈಃ ಸಾರ್ಥನಿಶ್ಚಿತೈಃ ।
ಆಸೀನಂ ಪರ್ಯುಪಾಸೀನೌ ಯಥಾ ಶಕ್ರಂ ಮರುತ್ಪತಿಮ್ ॥

ಮೂಲಮ್ - 45

ಸತ್ಯಸಂಧೌ ಮಹಾಭಾಗೌ ಭ್ರಾತರೌ ರಾಮಲಕ್ಷ್ಮಣೌ ।
ಮನುಷ್ಯಭಾವಂ ಸಂಪ್ರಾಪ್ತೌ ರಾಜ್ಯಾರ್ಹೌ ರಾಜ್ಯದಾಯಿನೌ ॥

ಅನುವಾದ

ರಾಜನ ಬಳಿಯಲ್ಲಿ ನಿಂತಿರುವ ಆ ಇಬ್ಬರೂ ಮಂತ್ರಿಗಳು ದೇವೇಂದ್ರನಂತೆ ಕುಳಿತಿರುವ ಸುಗ್ರೀವನಲ್ಲಿ ಬಹಳ ವಿಚಾರ ಮಾಡಿ ನಿಶ್ಚಿತಗೊಳಿಸಿದ ಸಾರ್ಥಕ ವಚನಗಳಿಂದ ಪ್ರಸನ್ನಗೊಳಿಸಿ, ಈ ಪ್ರಕಾರ ಹೇಳಿದರು-ರಾಜನೇ! ಮಹಾಭಾಗ ಶ್ರೀರಾಮ ಮತ್ತು ಲಕ್ಷ್ಮಣ ಇಬ್ಬರೂ ಸೋದರರೂ ಸತ್ಯಪ್ರತಿಜ್ಞರಾಗಿದ್ದಾರೆ. (ಅವರು ವಾಸ್ತವವಾಗಿ ಭಗವತ್ಸ್ವರೂಪರಾಗಿದ್ದಾರೆ.) ಅವರು ಸ್ವೇಚ್ಛೆಯಿಂದ ಮನುಷ್ಯ ಶರೀರವನ್ನು ಧರಿಸಿರುವರು. ಅವರಿಬ್ಬರೂ ಸಮಸ್ತ ಲೋಕಗಳ ರಾಜ್ಯವನ್ನು ಆಳಲು ಯೋಗ್ಯರಾಗಿದ್ದಾರೆ. ಅವರೇ ನಿಮಗೆ ರಾಜ್ಯವನ್ನು ಕೊಟ್ಟಿರುವರು.॥44-45॥

ಮೂಲಮ್ - 46

ತಯೋರೇಕೋಧನುಷ್ಪಾಣಿರ್ದ್ವಾರಿ ತಿಷ್ಠತಿ ಲಕ್ಷ್ಮಣಃ ।
ಯಸ್ಯ ಭೀತಾಃ ಪ್ರವೇಪಂತೋ ನಾದಾನ್ಮುಂಚಂತಿ ವಾನರಾಃ ॥

ಅನುವಾದ

ಅವರಲ್ಲಿ ಒಬ್ಬ ವೀರ ಲಕ್ಷ್ಮಣನು ಕೈಯಲ್ಲಿ ಧನುಸ್ಸನ್ನು ಧರಿಸಿ ಕಿಷ್ಕಿಂಧೆಯ ಬಾಗಿಲಲ್ಲಿ ನಿಂತಿರುವನು. ಅವನ ಭಯದಿಂದ ನಡುಗುತ್ತಿರುವ ವಾನರರು ಜೋರಾಗಿ ಕಿರಿಚುತ್ತಿದ್ದಾರೆ.॥46॥

ಮೂಲಮ್ - 47

ಸ ಏಷ ರಾಘವಭ್ರಾತಾ ಲಕ್ಷ್ಮಣೋ ವಾಕ್ಯಸಾರಥಿಃ ।
ವ್ಯವಸಾಯರಥಃ ಪ್ರಾಪ್ತಸ್ತಸ್ಯ ರಾಮಸ್ಯ ಶಾಸನಾತ್ ॥

ಅನುವಾದ

ಶ್ರೀರಾಮನ ಆದೇಶವೇ ಸಾರಥಿಯುಳ್ಳ, ಕರ್ತವ್ಯ ನಿಶ್ಚಯವೇ ರಥವುಳ್ಳ ಲಕ್ಷ್ಮಣನು ಶ್ರೀರಾಮನ ಆಜ್ಞೆಯಿಂದ ಇಲ್ಲಿಗೆ ಆಗಮಿಸಿರುವನು.॥47॥

ಮೂಲಮ್ - 48

ಅಯಂ ಚ ತನಯೋ ರಾಜಂಸ್ತಾರಾಯಾ ದಯಿತೋಂಽಗದಃ ।
ಲಕ್ಷ್ಮಣೇನ ಸಕಾಶಂ ತೇ ಪ್ರೇಷಿತಸ್ತ್ವರಯಾನಘ ॥

ಅನುವಾದ

ರಾಜನೇ! ನಿಷ್ಪಾಪ ವಾನರರಾಜನೇ! ಲಕ್ಷ್ಮಣನು ತಾರಾದೇವಿಯ ಈ ಪ್ರಿಯಪುತ್ರ ಅಂಗದನನ್ನು ನಿಮ್ಮ ಬಳಿಗೆ ಕಳಿಸಿರುವನು.॥48॥

ಮೂಲಮ್ - 49

ಸೋಽಯಂ ರೋಷಪರೀತಾಕ್ಷೋ ದ್ವಾರಿ ತಿಷ್ಠತಿ ವೀರ್ಯವಾನ್ ।
ವಾನರಾನ್ವಾನರಪತೇ ಚಕ್ಷುಷಾ ನಿರ್ದಹನ್ನಿವ ॥

ಅನುವಾದ

ವಾನರಪತಿಯೇ! ಪರಾಕ್ರಮಿ ಲಕ್ಷ್ಮಣನು ಕ್ರೋಧದಿಂದ ಕಣ್ಣು ಕೆಂಪಗಾಗಿಸಿ ನಗರ ದ್ವಾರದಲ್ಲಿ ನಿಂತಿರುವನು. ತನ್ನ ನೇತ್ರಾಗ್ನಿಯಿಂದ ಸುಟ್ಟುಬಿಡುವಂತೆ ವಾನರರ ಕಡೆಗೆ ನೋಡುತ್ತಿದ್ದಾನೆ.॥49॥

ಮೂಲಮ್ - 50

ತಸ್ಯ ಮೂರ್ಧ್ನಾ ಪ್ರಣಾಮಂ ತ್ವಂ ಸಪುತ್ರಃ ಸಹ ಬಂಧವಃ ।
ಗಚ್ಛ ಶೀಘ್ರಂ ಮಹಾರಾಜ ರೋಷೋ ಹ್ಯದ್ಯೋಪಶಾಮ್ಯತಾಮ್ ॥

ಅನುವಾದ

ಮಹಾರಾಜ! ನೀವು ಬೇಗನೇ ನಡೆಯಿರಿ, ಪುತ್ರ ಮತ್ತು ಬಂಧುಬಾಂಧವರೊಂದಿಗೆ ಅವನ ಚರಣಗಳಲ್ಲಿ ತಲೆಬಾಗಿ ಈಗ ಅವನ ರೋಷವನ್ನು ಶಾಂತಗೊಳಿಸಿರಿ.॥50॥

ಮೂಲಮ್ - 51

ಯಥಾಹಿ ರಾಮೋ ಧರ್ಮಾತ್ಮಾ ತತ್ಕುರುಷ್ವ ಸಮಾಹಿತಃ ।
ರಾಜಂಸ್ತಿಷ್ಠ ಸ್ವಸಮಯೇ ಭವ ಸತ್ಯಪ್ರತಿಶ್ರವಃ ॥

ಅನುವಾದ

ರಾಜನೇ! ಧರ್ಮಾತ್ಮಾ ಶ್ರೀರಾಮನು ಹೇಳಿದಂತೆ ಎಚ್ಚರಿಕೆಯಿಂದ ಅದನ್ನು ಪಾಲಿಸಿರಿ. ನೀವು ಕೊಟ್ಟ ಮಾತಿನಲ್ಲಿ ಸ್ಥಿರವಾಗಿದ್ದು, ಸತ್ಯಪ್ರತಿಜ್ಞರಾಗಿರಿ.॥51॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೂವತ್ತೊಂದನೆಯ ಸರ್ಗ ಸಂಪೂರ್ಣವಾಯಿತು.॥31॥