वाचनम्
ಭಾಗಸೂಚನಾ
ಶರದ್ಋತುವಿನ ವರ್ಣನೆ, ಶ್ರೀರಾಮನು ಲಕ್ಷ್ಮಣನನ್ನು ಸುಗ್ರೀವನ ಬಳಿಗೆ ಕಳಿಸಿದುದು
ಮೂಲಮ್ - 1
ಗೃಹಂ ಪ್ರವಿಷ್ಟೇ ಸುಗ್ರೀವೇ ವಿಮುಕ್ತೇ ಗಗನೇ ಘನೈಃ ।
ವರ್ಷರಾತ್ರೇಸ್ಥಿತೋ ರಾಮಃ ಕಾಮಶೋಕಾಭಿಪೀಡಿತಃ ॥
ಅನುವಾದ
ಹಿಂದಿನಂತೆ ಆದೇಶಿಸಿ ಸುಗ್ರೀವನು ತನ್ನ ಅಂತಃಪುರಕ್ಕೆ ಹೊರಟುಹೋದನು. ಇತ್ತ ಶ್ರೀರಾಮಚಂದ್ರನು ವರ್ಷಾ ಕಾಲದ ರಾತ್ರಿಗಳಲ್ಲಿ ಪ್ರಸ್ರವಣಗಿರಿಯಲ್ಲಿ ವಾಸಿಸುತ್ತಿದ್ದನು. ಆಕಾಶವು ಮೇಘಮುಕ್ತವಾಗಿ ನಿರ್ಮಲವಾದಾಗ ಸೀತೆಯನ್ನು ಸೇರುವ ಉತ್ಕಂಠತೆಯಿಂದ ವಿರಹಶೋಕದಿಂದ ಅತ್ಯಂತ ಪೀಡಿತನಾದನು.॥1॥
ಮೂಲಮ್ - 2
ಪಾಂಡುರಂ ಗಗನಂ ದೃಷ್ಟ್ವಾ ವಿಮಲಂ ಚಂದ್ರಮಂಡಲಮ್ ।
ಶಾರದೀಂ ರಜನೀಂ ಚೈವ ದೃಷ್ಟ್ವಾ ಜ್ಯೋತ್ಸ್ನಾನುಲೇಪನಾಮ್ ॥
ಅನುವಾದ
ಆಕಾಶವು ಬೆಳ್ಳಗಾಗಿ, ಚಂದ್ರನು ಸ್ವಚ್ಛವಾಗಿ ತೋರುತ್ತಿದ್ದಾನೆ ಹಾಗೂ ಶರದೃತುವಿನ ಇರುಳಿನ ಮೈಮೇಲೆ ಬೆಳದಿಂಗಳ ಅಂಗರಾಗ ಹಚ್ಚಿದಂತಿದೆ. ಇದೆಲ್ಲ ನೋಡಿ ಶ್ರೀರಾಮನು ಸೀತೆಯ ಮಿಲನಕ್ಕಾಗಿ ವ್ಯಾಕುಲನಾದನು.॥2॥
ಮೂಲಮ್ - 3
ಕಾಮವೃತ್ತಂ ಚ ಸುಗ್ರೀವಂ ನಷ್ಟಾಂ ಚ ಜನಕಾತ್ಮಜಾಮ್ ।
ದೃಷ್ಟ್ವಾ ಕಾಲಮತೀತಂ ಚ ಮುಮೋಹ ಪರಮಾತುರಃ ॥
ಅನುವಾದ
ಸುಗ್ರೀವನು ಕಾಮಾಸಕ್ತನಾಗಿದ್ದಾನೆ, ಜನಕಕುಮಾರೀ ಸೀತೆಯ ಸುಳಿವು ಇಷ್ಟರವರೆಗೆ ಹತ್ತಲಿಲ್ಲ, ರಾವಣನ ಮೇಲೆ ಆಕ್ರಮಣ ಮಾಡುವ ಸಮಯವೂ ಕಳೆಯುತ್ತಾ ಇದೆ, ಎಂದು ಯೋಚಿಸುತ್ತಾ ಅತ್ಯಂತ ಆತುರನಾದ ಶ್ರೀರಾಮನ ಹೃದಯ ವ್ಯಾಕುಲವಾಯಿತು.॥3॥
ಮೂಲಮ್ - 4
ಸ ತು ಸಂಜ್ಞಾಮುಪಾಗಮ್ಯ ಮುಹೂರ್ತಾನ್ಮತಿಮಾನ್ ನೃಪಃ ।
ಮನಃಸ್ಥಾಮಪಿ ವೈದೇಹೀಂ ಚಿನ್ತಯಾಮಾಸ ರಾಘವಃ ॥
ಅನುವಾದ
ಎರಡು ಗಳಿಗೆ ಕಳೆದಾಗ ಅವನ ಮನಸ್ಸು ಸ್ವಲ್ಪ ತಿಳಿಯಾದಾಗ ಆ ಬುದ್ಧಿವಂತ ನರೇಶ ಶ್ರೀರಘುನಾಥನು ತನ್ನ ಮನಸ್ಸಿನಲ್ಲಿ ನೆಲೆಸಿದ ವೈದೇಹಿಯನ್ನು ಚಿಂತಿಸತೊಡಗಿದನು.॥4॥
ಮೂಲಮ್ - 5
ದೃಷ್ಟ್ವಾ ಚ ವಿಮಲಂ ವ್ಯೋಮ ಗತವಿದ್ಯುದ್ಬಲಾಹಕಮ್ ।
ಸಾರಸಾರಾವಸಂಘುಷ್ಟಂ ವಿಲಲಾಪಾರ್ತಯಾ ಗಿರಾ ॥
ಅನುವಾದ
ಆಕಾಶ ನಿರ್ಮಲವಾಯಿತು. ಎಲ್ಲಿಯೂ ಮೋಡಗಳ ಗರ್ಜನೆ, ವಿದ್ಯುತ್ತಿನ ಸುಳಿವು ಇಲ್ಲ. ಅಲ್ಲಿ ಎಲ್ಲೆಡೆ ಸಾರಸಗಳ ಕೂಗು ಕೇಳಿಬರುತ್ತಿದ್ದವು. ಇದನ್ನು ನೋಡಿ ರಾಮನು ಆರ್ತವಾಣಿಯಿಂದ ವಿಲಾಪಿಸತೊಡಗಿದನು.॥5॥
ಮೂಲಮ್ - 6
ಆಸೀನಃ ಪರ್ವತಸ್ಯಾಗ್ರೇ ಹೇಮಧಾತುವಿಭೂಷಿತೇ ।
ಶಾರದಂ ಗಗನಂ ದೃಷ್ಟ್ವಾ ಜಗಾಮ ಮನಸಾ ಪ್ರಿಯಾಮ್ ॥
ಅನುವಾದ
ಸ್ವರ್ಣ ಮೊದಲಾದ ಧಾತುಗಳಿಂದ ವಿಭೂಷಿತ ಪರ್ವತ ಶಿಖರದಲ್ಲಿ ಕುಳಿತಿರುವ ಶ್ರೀರಾಮಚಂದ್ರನು ಶರತ್ಕಾಲದ ಸ್ವಚ್ಛ ಆಕಾಶದ ಕಡೆಗೆ ನೋಡುತ್ತಾ ಮನಸ್ಸಿನಲ್ಲೇ ಪ್ರಿಯಪತ್ನಿ ಸೀತೆಯನ್ನು ಧ್ಯಾನಿಸತೊಡಗಿದನು.॥6॥
ಮೂಲಮ್ - 7
ಸಾರಸಾರಾವಸಂನಾದೈಃ ಸಾರಸಾರಾವನಾದಿನೀ ।
ಯಾಽಽಶ್ರಮೇ ರಮತೇ ಬಾಲಾ ಸಾದ್ಯ ಮೇ ರಮತೇ ಕಥಮ್ ॥
ಅನುವಾದ
ಅವನು ಹೇಳುತ್ತಾನೆ- ಸಾರಸಪಕ್ಷಿಗಳ ಮಧುರ ಧ್ವನಿಯಂತೆ ಸುಮಧುರವಾಗಿ ಮಾತನಾಡುತ್ತಿದ್ದ ಬಾಲೆಯಾದ ಸೀತೆಯು ಹಿಂದೆ ಆಶ್ರಮದಲ್ಲಿ ಸಾರಸಪಕ್ಷಿಗಳ ಧ್ವನಿಯನ್ನು ಕೇಳಿ ಸಂತೋಷಿಸುತ್ತಿದ್ದಳು. ಈಗ ನಾನಿಲ್ಲದಿರುವಾಗ ಅವಳು ಹೇಗೆಮನೋರಂಜನೆ ಮಾಡುವಳೋ.॥7॥
ಮೂಲಮ್ - 8
ಪುಷ್ಟಿತಾಂಶ್ಚಾಸನಾನ್ ದೃಷ್ಟ್ವಾ ಕಾಂಚನಾನಿವ ನಿರ್ಮಲಾನ್ ।
ಕಥಂ ಸಾ ರಮತೇ ಬಾಲಾಪಶ್ಯಂತೀ ಮಾಮಪಶ್ಯತೀ ॥
ಅನುವಾದ
ಸುವರ್ಣಮಯ ವೃಕ್ಷಗಳಂತೆ ನಿರ್ಮಲ, ಅರಳಿದ ಹೊನ್ನೆಮರಗಳನ್ನು ನೋಡಿ ಪದೇ-ಪದೇ ನೋಡುತ್ತಿದ್ದ ಮುಗ್ಧಳಾದ ಸೀತೆಯು ನನ್ನನ್ನು ಬಳಿಯಲ್ಲಿ ನೋಡದಿರುವಾಗ ಅವಳ ಮನಸ್ಸು ಹೇಗೆ ರಮಿಸ ಬಹುದು.॥8॥
ಮೂಲಮ್ - 9
ಯಾ ಪುರಾ ಕಲಹಂಸಾನಾಂ ಕಲೇನ ಕಲಭಾಷಿಣೀ ।
ಬುಧ್ಯತೇ ಚಾರುಸರ್ವಾಂಗೀ ಸಾದ್ಯ ಮೇ ರಮತೇ ಕಥಮ್ ॥
ಅನುವಾದ
ಮನೋಹರ ಅಂಗಗಳುಳ್ಳ, ಸ್ವಭಾವತಃ ಮಧುರವಾಗಿ ಮಾತನಾಡುತ್ತಿದ್ದ ಸೀತೆಯು ಮೊದಲು ಕಲಹಂಸಗಳ ಮಧುರ ಶಬ್ದದಿಂದ ಎಚ್ಚರಗೊಳ್ಳುತ್ತಿದ್ದಳು; ಆದರೆ ಇಂದು ನನ್ನ ಪ್ರಿಯೆಯು ಇರುವಲ್ಲಿ ಹೇಗೆ ಪ್ರಸನ್ನಳಾಗಿರುವಳು.॥9॥
ಮೂಲಮ್ - 10
ನಿಃಸ್ವನಂ ಚಕ್ರವಾಕಾನಾಂ ನಿಶಮ್ಯ ಸಹಚಾರಿಣಾಮ್ ।
ಪುಂಡರೀಕವೀಶಾಲಾಕ್ಷೀ ಕಥಮೇಷಾ ಭವಿಷ್ಯತಿ ॥
ಅನುವಾದ
ಅರಳಿದ ಕಮಲದಳಗಳಂತೆ ವಿಶಾಲನೇತ್ರೆಯಾದ ನನ್ನ ಪ್ರಿಯೆಯು ಜೊತೆಯಲ್ಲಿ ಸಂಚರಿಸುವ ಚಾತಕಗಳ ಧ್ವನಿ ಕೇಳಿದಾಗ ಅವಳ ಸ್ಥಿತಿ ಹೇಗಾಗಬಲ್ಲದು.॥10॥
ಮೂಲಮ್ - 11
ಸರಾಂಸಿ ಸರಿತೋ ವಾಪೀಃ ಕಾನನಾನಿ ವನಾನಿ ಚ ।
ತಾಂ ವಿನಾ ಮೃಗಶಾಬಾಕ್ಷೀಂ ಚರನ್ನಾದ್ಯ ಸುಖಂ ಲಭೇ ॥
ಅನುವಾದ
ಅಯ್ಯೋ! ನದೀ, ಕಲ್ಯಾಣೀ, ಬಾವೀ, ಕಾಡು-ಮೇಡು ಎಲ್ಲ ಕಡೆ ನಾನು ಅಲೆಯುತ್ತಾ ಇರುತ್ತೇನೆ; ಆದರೆ ಎಲ್ಲಿಯೂ ಆ ಮೃಗಶಾವಾಕ್ಷಿ ಸೀತೆಯಿಲ್ಲದೆ ಈಗ ನನಗೆ ಸುಖವು ಸಿಗುವುದಿಲ್ಲ.॥11॥
ಮೂಲಮ್ - 12
ಅಪಿ ತಾಂ ಮದ್ವಿಯೋಗಾಚ್ಚ ಸೌಕುಮಾರ್ಯಾಚ್ಚ ಭಾಮಿನೀಮ್ ॥
ಸುದೂರಂ ಪೀಡಯೇತ್ಕಾಮಃ ಶರದ್ಗುಣ ನಿರಂತರಃ ॥
ಅನುವಾದ
ಶರದೃತುವಿನ ಗುಣಗಳಿಂದ ನಿರಂತರ ವೃದ್ಧಿಹೊದುವ ಕಾಮವು ಭಾಮಿನೀ ಸೀತೆಯನ್ನು ಅತ್ಯಂತ ಪೀಡಿಸಿರಲಿಕ್ಕಿಲ್ಲವಲ್ಲ? ಏಕೆಂದರೆ ಇಂತಹ ಸಂಭಾವನೆಗೆ ಎರಡು ಕಾರಣಗಳಿವೆ ಒಂದು ಅವಳಿಗೆ ನನ್ನ ವಿಯೋಗದ ಕಷ್ಟವಿದೆ, ಇನ್ನೊಂದು ಅವಳು ಅತ್ಯಂತ ಸುಕುಮಾರಿಯಾದ್ದರಿಂದ ಈ ಕಷ್ಟವನ್ನು ಸಹಿಸಲಾರಳು.॥12॥
ಮೂಲಮ್ - 13
ಏವಮಾದಿ ನರಶ್ರೇಷ್ಠೋ ವಿಲಲಾಪ ನೃಪಾತ್ಮಜಃ ।
ವಿಹಂಗ ಇವ ಸಾರಂಗಃ ಸಲಿಲಂ ತ್ರಿದಶೇಶ್ವರಾತ್ ॥
ಅನುವಾದ
ಇಂದ್ರನಿಂದ ನೀರನ್ನು ಬಯಸುವ ಬಾಯಾರಿದ ಚಾತಕಪಕ್ಷಿಯಂತೆ ನರಶ್ರೇಷ್ಠ ನರೇಂದ್ರಕುಮಾರ ಶ್ರೀರಾಮನು ಹೀಗೆ ಅನೇಕ ಮಾತುಗಳನ್ನು ಹೇಳುತ್ತಾ ವಿಲಾಪ ಮಾಡಿದನು.॥13॥
ಮೂಲಮ್ - 14
ತತಶ್ಚಂಚೂರ್ಯ ರಮ್ಯೇಷು ಫಲಾರ್ಥೀ ಗಿರಿಸಾನುಷು ।
ದದರ್ಶ ಪರ್ಯುಪಾವೃತ್ತೋ ಲಕ್ಷ್ಮೀವಾನ್ ಲ್ಲಕ್ಷ್ಮಣೋಽಗ್ರಜಮ್ ॥
ಅನುವಾದ
ಆಗ ಶೋಭಾಶಾಲೀ ಲಕ್ಷ್ಮಣನು ಫಲಗಳನ್ನು ತರಲು ಹೋಗಿದ್ದನು. ಅವನು ಪರ್ವತದ ರಮಣೀಯ ಶಿಖರಗಳಲ್ಲಿ ಸುತ್ತಾಡಿ ಮರಳಿದಾಗ ಅಣ್ಣನ ಅವಸ್ಥೆಯನ್ನು ನೋಡಿದನು.॥14॥
ಮೂಲಮ್ - 15
ಸ ಚಿಂತಯಾ ದುಃಸಹಯಾ ಪರೀತಂ
ವಿಸಂಜ್ಞಮೇಕಂ ವಿಜನೇ ಮನಸ್ವೀ ।
ಭ್ರಾತುರ್ವಿಷಾದಾತ್ ತ್ವರಿತೋಽತಿದೀನಃ
ಸಮೀಕ್ಷ್ಯ ಸೌಮಿತ್ರಿರುವಾಚ ದೀನಮ್ ॥
ಅನುವಾದ
ಅವನು ದುಸ್ಸಹ ಚಿಂತೆಯಲ್ಲಿ ಮಗ್ನನಾಗಿ ಎಚ್ಚರವಿಲ್ಲದವನಂತೆ, ಏಕಾಂತದಲ್ಲಿ ಒಬ್ಬಂಟಿಗನಾಗಿ ದುಃಖಿಯಾಗಿ ಕುಳಿತಿದ್ದನು. ಆಗ ಮನಸ್ವೀ ಲಕ್ಷ್ಮಣನು ಅವನನ್ನು ನೋಡಿದಾಗ ಕೂಡಲೇ ಅಣ್ಣನ ವಿಷಾದದಿಂದ ಅತ್ಯಂತ ದುಃಖಿಯಾಗಿ ಅವನಲ್ಲಿ ಹೀಗೆ ಹೇಳಿದನು.॥15॥
ಮೂಲಮ್ - 16
ಕಿಮಾರ್ಯ ಕಾಮಸ್ಯ ವಶಂಗತೇನ
ಕಿಮಾತ್ಮಪೌರುಷ್ಯ ಪರಾಭವೇನ ।
ಅಯಂ ಹ್ರಿಯಾ ಸಂಹ್ರಿಯತೇ ಸಮಾಧಿಃ
ಕಿಮತ್ರ ಯೋಗೇನ ನಿವರ್ತಿತೇ ನ ॥
ಅನುವಾದ
ಆರ್ಯನೇ! ಹೀಗೆ ಕಾಮಕ್ಕೆ ಅಧೀನನಾಗಿ ತನ್ನ ಪರಾಕ್ರಮವನ್ನು ಮರೆತರೆ ಏನು ಲಾಭ? ಈ ನಾಚಿಕೆಗೇಡಿನ ಶೋಕದಿಂದ ನಿನ್ನ ಚಿತ್ತದ ಏಕಾಗ್ರತೆ ನಾಶವಾಗುತ್ತಾ ಇದೆ. ಈಗ ಯೋಗದ ಆಸರೆ ಪಡೆದು ಮನಸ್ಸನ್ನು ಏಕಾಗ್ರಗೊಳಿಸುವುದರಿಂದ ಈ ಎಲ್ಲ ಚಿಂತೆ ದೂರವಾಗಲಾರದೇ.॥16॥
ಮೂಲಮ್ - 17
ಕ್ರಿಯಾಭಿಯೋಗಂ ಮನಸಃ ಪ್ರಸಾದಂ
ಸಮಾಧಿಯೋಗಾನುಗತಂ ಚ ಕಾಲಮ್ ।
ಸಹಾಯ ಸಾಮರ್ಥ್ಯಮದೀನಸತ್ತ್ವಃ
ಸ್ವಕರ್ಮಹೇತುಂ ಚ ಕುರುಷ್ಯ ತಾತ॥
ಅನುವಾದ
ಅಯ್ಯಾ! ನೀನು ಅವಶ್ಯವಾಗಿ ಕರ್ಮಾನುಷ್ಠಾನದಲ್ಲಿ ಪೂರ್ಣವಾಗಿ ತೊಡಗು, ಮನಸ್ಸನ್ನು ಪ್ರಸನ್ನಗೊಳಿಸು ಮತ್ತು ಸದಾಕಾಲ ಚಿತ್ತದ ಏಕಾಗ್ರತೆಯನ್ನು ಇರಿಸಿಕೊ. ಪರಾಕ್ರಮದ ವೃದ್ಧಿಗಾಗಿ ಸಹಾಯವಾಗುವ ಹಾಗೂ ಶಕ್ತಿಯನ್ನು ಸಂಚಯಿಸಲು ಪ್ರಯತ್ನಮಾಡು.॥17॥
ಮೂಲಮ್ - 18
ನ ಜಾನಕೀ ಮಾನವವಂಶನಾಥ
ತ್ವಯಾ ಸನಾಥಾ ಸುಲಭಾ ಪರೇಣ ।
ನ ಚಾಗ್ನಿಚೂಡಾಂ ಜ್ವಲಿತಾಮುಪೇತ್ಯ
ನ ದಹ್ಯತೇ ವೀರ ವರಾರ್ಹ ಕಶ್ಚಿತ್ ॥
ಅನುವಾದ
ಮಾನವವಂಶದ ನಾಥನೇ! ಶ್ರೇಷ್ಠ ಪುರುಷರಿಗೂ ಪೂಜನೀಯ ವೀರ ರಘುನಂದನನೇ! ನಿನ್ನ ಪತ್ನಿಯಾದ ಜನಕನಂದಿನೀ ಸೀತೆಯು ಯಾವನೇ ಬೇರೆ ಪುರುಷನಿಗೆ ಸುಲಭಳಲ್ಲ. ಏಕೆಂದರೆ ಉರಿಯುವ ಬೆಂಕಿಯ ಜ್ವಾಲೆಯ ಬಳಿಗೆ ಹೋಗಿ ಕೈಹಾಕಿದವನು ಸುಡದೆ ಇರಲಾರನು.॥18॥
ಮೂಲಮ್ - 19
ಸಲಕ್ಷಣಂ ಲಕ್ಷ್ಮಣಮಪ್ರಧೃಷ್ಯಂ
ಸ್ವಭಾವಜಂ ವಾಕ್ಯಮುವಾಚ ರಾಮಃ ।
ಹಿತಂ ಚ ಪಥ್ಯಂ ಚ ನಯಪ್ರಸಕ್ತಂ
ಸಸಾಮಧರ್ಮಾರ್ಥ ಸಮಾಹಿತಂ ಚ ॥
ಮೂಲಮ್ - 20
ನಿಃಸಂಶಯಂ ಕಾರ್ಯಮವೇಕ್ಷಿತವ್ಯಂ
ಕ್ರಿಯಾವಿಶೇಷೋಽಪ್ಯನುವರ್ತಿತವ್ಯಃ ।
ನ ತು ಪ್ರವೃದ್ಧಸ್ಯ ದುರಾಸದಸ್ಯ
ಕುಮಾರ ವೀರ್ಯಸ್ಯ ಫಲಂ ನ ಚಿಂತ್ಯಮ್ ॥
ಅನುವಾದ
ಲಕ್ಷ್ಮಣನು ಉತ್ತಮ ಲಕ್ಷಣಗಳಿಂದ ಸಂಪನ್ನನಾಗಿದ್ದು, ಅವನನ್ನು ಯಾರೂ ಸೋಲಿಸಲಾರರು. ಭಗವಾನ್ ಶ್ರೀರಾಮನು ಅವನಲ್ಲಿ ಸ್ವಾಭಾವಿಕವಾಗಿ ಹೀಗೆ ಹೇಳಿದನು - ಕುಮಾರ! ನೀನು ಹೇಳಿದ ಮಾತು ವರ್ತಮಾನದಲ್ಲಿ ಹಿತಕರ, ಭವಿಷ್ಯದಲ್ಲಿಯೂ ಸುಖಕರವಾಗಿದೆ. ರಾಜನೀತಿಗೆ ಸರ್ವಥಾ ಅನುಕೂಲವಾಗಿದ್ದು, ಸಾಮದ ಜೊತೆಗೆ ಧರ್ಮ ಮತ್ತು ಅರ್ಥದಿಂದ ಸಂಯುಕ್ತವಾಗಿದೆ. ನಿಶ್ಚಯವಾಗಿ ಸೀತೆಯ ಅನುಸಂಧಾನದ ಕಾರ್ಯದ ಕುರಿತು ಗಮನ ಕೊಡಬೇಕು, ಆದರೆ ಪ್ರಯತ್ನಬಿಟ್ಟು ಪೂರ್ಣವಾಗಿ ಬೆಳೆದಿರುವ ದುರ್ಲಭ ಹಾಗೂ ಬಲವಂತ ಕರ್ಮದ ಫಲದಲ್ಲೇ ದೃಷ್ಟಿ ಇರಿಸುವುದು ಉಚಿತವಲ್ಲ.॥19-20॥
ಮೂಲಮ್ - 21
ಅಥ ಪದ್ಮಪಲಾಶಾಕ್ಷೀಂ ಮೈಥಿಲೀಮನುಚಿಂತಯನ್ ।
ಉವಾಚ ಲಕ್ಷ್ಮಣಂ ರಾಮೋ ಮುಖೇನ ಪರಿಶುಷ್ಯತಾ ॥
ಅನುವಾದ
ಅನಂತರ ಪ್ರಫುಲ್ಲ ಕಮಲಗಳಂತೆ ನೇತ್ರವುಳ್ಳ ಮಿಥಿಲೇಶ ಕುಮಾರಿ ಸೀತೆಯನ್ನು ಪದೇ-ಪದೇ ಚಿಂತಿಸುತ್ತಾ ಶ್ರೀರಾಮಚಂದ್ರನು ಲಕ್ಷ್ಮಣನನ್ನು ಸಂಬೋಧಿಸಿ ಬಾಡಿದ ಮುಖದಿಂದ ನುಡಿದನು .॥21॥
ಮೂಲಮ್ - 22
ತರ್ಪಯಿತ್ವಾ ಸಹಸ್ರಾಕ್ಷಃ ಸಲಿಲೇನ ವಸುಂಧರಾಮ್ ।
ನಿರ್ವರ್ತಯಿತ್ವಾ ಸಸ್ಯಾನಿ ಕೃತಕರ್ಮಾ ವ್ಯವಸ್ಥಿತಃ ॥
ಅನುವಾದ
ಸುಮಿತ್ರಾನಂದನ! ಸಹಸ್ರನೇತ್ರಧಾರೀ ಇಂದ್ರನು ಈ ಪೃಥಿವಿಯನ್ನು ತಣಿಸಿ, ಇಲ್ಲಿನ ಧಾನ್ಯವನ್ನು ಬೆಳೆಸಿ ಈಗ ಕೃತಕೃತ್ಯನಾಗಿರುವನು.॥22॥
ಮೂಲಮ್ - 23
ದೀರ್ಘಗಂಭೀರನಿರ್ಘೋಷಾಃ ಶೈಲದ್ರುಮಪುರೋಗಮಾಃ ।
ವಿಸೃಜ್ಯ ಸಲಿಲಂ ಮೇಘಾಃ ಪರಿಶಾಂತಾ ನೃಪಾತ್ಮಜ ॥
ಅನುವಾದ
ರಾಜಕುಮಾರ! ಅತ್ಯಂತ ಗಂಭೀರವಾಗಿ ಗರ್ಜಿಸುತ್ತಾ ಪರ್ವತ, ನಗರಗಳ, ವೃಕ್ಷಗಳ ಮೇಲಿನಿಂದ ಸಾಗುತ್ತಿದ್ದ ಮೇಘಗಳು ತಮ್ಮ ಎಲ್ಲ ನೀರನ್ನು ಸುರಿಸಿ ಶಾಂತವಾಗಿವೆ.॥23॥
ಮೂಲಮ್ - 24
ನೀಲೋತ್ಪಲದಲ ಶ್ಯಾಮಾಃ ಶ್ಯಾಮೀಕೃತ್ವಾ ದಿಶೋ ದಶ ।
ವಿಮದಾ ಇವ ಮಾತಂಗಾಃ ಶಾಂತವೇಗಾಃ ಪಯೋಧರಾಃ ॥
ಅನುವಾದ
ನೀಲ ಕಮಲದಂತೆ ಶಾಮ ವರ್ಣದ ಮೇಘಗಳು ದಶದಿಕ್ಕುಗಳನ್ನು ಶ್ಯಾಮಲವಾಗಿಸಿ ಮದರಹಿತ ಗಜರಾಜನಂತೆ ಅವುಗಳು ವೇಗಶೂನ್ಯವಾದುವು.॥24॥
ಮೂಲಮ್ - 25
ಜಲಗರ್ಭಾ ಮಹಾವೇಗಾಃ ಕುಟಜಾರ್ಜುನಗಂಧಿನಃ ।
ಚರಿತ್ವಾ ವಿರತಾಃ ಸೌಮ್ಯ ವೃಷ್ಟಿವಾತಾಃ ಸಮುದ್ಯತಾಃ ॥
ಅನುವಾದ
ಸೌಮ್ಯ! ನೀರನ್ನು ತುಂಬಿಕೊಂಡ, ಕುಟಜ ಮತ್ತು ಅರ್ಜುನ ವೃಕ್ಷಗಳ ಹೂವುಗಳ ಸುಗಂಧ ತುಂಬಿದ, ಅತ್ಯಂತ ವೇಗಶಾಲಿ ಝಂಜಾವಾತವು ಎಲ್ಲ ದಿಕ್ಕುಗಳಲ್ಲಿ ಸಂಚರಿಸಿ ಈಗ ಶಾಂತವಾಗಿದೆ.॥25॥
ಮೂಲಮ್ - 26
ಘನಾನಾಂ ವಾರಣಾನಾಂ ಚ ಮಯೂರಾಣಾಂ ಚ ಲಕ್ಷ್ಮಣ ।
ನಾದಃ ಪ್ರಸ್ರವಣಾನಾಂ ಚ ಪ್ರಶಾಂತಃ ಸಹಸಾನಘ ॥
ಅನುವಾದ
ನಿಷ್ಪಾಪ ಲಕ್ಷ್ಮಣ! ಮೋಡಗಳ, ಆನೆಗಳ, ನವಿಲುಗಳ, ಜಲಪಾತದ ಶಬ್ದಗಳು ಈಗ ಶಾಂತವಾಗಿ ಹೋಗಿವೆ.॥26॥
ಮೂಲಮ್ - 27
ಅಭಿವೃಷ್ಟಾ ಮಹಾಮೇಘೈರ್ನಿರ್ಮಲಾಶ್ಚಿತ್ರಸಾನವಃ ।
ಅನುಲಿಪ್ತಾ ಇವಾಭಾಂತಿಗಿರಯಶ್ಚಿಂದ್ರರಶ್ಮಿಭಿಃ ॥
ಅನುವಾದ
ಮಹಾಮೇಘಗಳು ಸುರಿಸಿದ ನೀರಿನಿಂದ ತೊಳೆದಿದ್ದರಿಂದ ಈ ವಿಚಿತ್ರ ಶಿಖರವುಳ್ಳ ಪರ್ವತಗಳು ಅತ್ಯಂತ ನಿರ್ಮಲವಾಗಿವೆ. ಇವನ್ನು ನೋಡುವಾಗ ಚಂದ್ರನ ಕಿರಣಗಳಿಂದ ಅವುಗಳನ್ನು ಬೆಳ್ಳಗಾಗಿಸಿದಂತೆ ಅನಿಸುತ್ತದೆ.॥27॥
ಮೂಲಮ್ - 28
ಶಾಖಾಸು ಸಪ್ತಚ್ಛದಪಾದಪಾನಾಂ
ಪ್ರಭಾಸು ತಾರಾರ್ಕನಿಶಾಕರಾಣಾಮ್ ।
ಲೀಲಾಸು ಚೈವೋತ್ತಮವಾರಣಾನಾಂ
ಶ್ರಿಯಂ ವಿಭಜ್ಯಾದ್ಯ ಶರತ್ಪ್ರವೃತ್ತಾ ॥
ಅನುವಾದ
ಶರದೃತುವು ಏಳೆಲೆ ಬಾಳೇಗಿಡಗಳ ಕೊಂಬೆಗಳಲ್ಲಿಯೂ, ನಕ್ಷತ್ರ-ಸೂರ್ಯ-ಚಂದ್ರರ ಕಾಂತಿಗಳಲ್ಲಿಯೂ ಉತ್ಕೃಷ್ಟವಾದ ಆನೆಗಳ ಕ್ರೀಡಾ ವಿಹಾರಗಳಲ್ಲಿಯೂ ಶಾಂತಿಯನ್ನು ಹಂಚಿಕೊಂಡು ಆವಿರ್ಭವಿಸಿದೆ.॥28॥
ಮೂಲಮ್ - 29
ಸಂಪ್ರತ್ಯನೇಕಾಶ್ರಯಚಿತ್ರಶೋಭಾ
ಲಕ್ಷ್ಮೀಃ ಶರತ್ಕಾಲಗುಣೋಪಪನ್ನಾ ।
ಸೂರ್ಯಾಗ್ರಹಸ್ತಪ್ರತಿಬೋಧಿತೇಷು
ಪದ್ಮಾಕರೇಷ್ವಭ್ಯಧಿಕಂ ವಿಭಾತಿ ॥
ಅನುವಾದ
ಈ ಸಮಯದಲ್ಲಿ ಶರತ್ಕಾಲದ ಗುಣ ಗಳಿಂದ ಸಂಪನ್ನವಾದ ಲಕ್ಷ್ಮಿಯು ಅನೇಕ ಆಶ್ರಯಗಳಲ್ಲಿ ವಿಭಕ್ತವಾಗಿ ವಿಚಿತ್ರ ಶೋಭೆಯನ್ನು ಧರಿಸಿದ್ದರೂ ಸೂರ್ಯನ ಪ್ರಥಮ ಕಿರಣಗಳಿಂದ ವಿಕಸಿತವಾದ ಕಮಲವನಗಳಲ್ಲಿ ಆಕೆಯು ಎಲ್ಲಕ್ಕಿಂತ ಹೆಚ್ಚು ಶೋಭಿಸುತ್ತಿರುವಳು.॥29॥
ಮೂಲಮ್ - 30
ಸಪ್ತಚ್ಛದಾನಾಂ ಕುಸುಮೋಪಗಂಧೀ
ಷಟ್ಪಾದವೃಂದೈರನುಗೀಯಮಾನಃ ।
ಮತ್ತದ್ವಿಪಾನಾಂ ಪವನಾನುಸಾರೀ
ದರ್ಪಂ ವಿನೇಶ್ಯನ್ನಧಿಕಂ ವಿಭಾತಿ ॥
ಅನುವಾದ
ಏಳೆಲೆ ಬಾಳೆಯ ಹೂವುಗಳ ಪರಿಮಳ ಧರಿಸಿದ ಶರತ್ಕಾಲವು ಸ್ವಭಾವತಃ ವಾಯುವನ್ನು ಅನುಸರಿಸುತ್ತದೆ. ಭ್ರಮರಗಳ ಸಮೂಹಗಳು ಅವನ ಗುಣಗಾನ ಮಾಡುತ್ತಿವೆ. ಅದು ಮಾರ್ಗದ ನೀರನ್ನು ಒಣಗಿಸುತ್ತಾ, ಮತ್ತಗಜಗಳ ದರ್ಪವನ್ನು ಹೆಚ್ಚಿಸುತ್ತಾ ಅತೀವವಾಗಿ ಶೋಭಿಸುತ್ತಿದೆ.॥30॥
ಮೂಲಮ್ - 31
ಅಭ್ಯಾಗತೈಶ್ಚಾರುವಿಶಾಲಪಕ್ಷೈಃ
ಸರಪ್ರಿಯೈಃ ಪದ್ಮರಜೋವೀಕೀರ್ಣೈಃ ।
ಮಹಾನದೀನಾಂ ಪುಲಿನೋಪಯಾತೈಃ
ಕ್ರೀಡಂತಿ ಹಂಸಾಃ ಸಹ ಚಕ್ರವಾಕೈಃ ॥
ಅನುವಾದ
ಕಮಲ ಪರಾಗಗಳು ಚೆಲ್ಲಿಹೋದ ದೊಡ್ಡ-ದೊಡ್ಡ ನದೀತೀರದಲ್ಲಿ ಬಂದಿಳಿದು, ಮಾನಸ ಸರೋವರದಿಂದ ಬಂದ ಹಂಸಗಳೊಂದಿಗೆ ಸುಂದರ ಮತ್ತು ವಿಶಾಲ ರೆಕ್ಕೆಗಳುಳ್ಳ, ಕಾಮಕ್ರೀಡೆಯು ಹೆಚ್ಚು ಪ್ರಿಯವಾದ ಚಕ್ರವಾಕ ಪಕ್ಷಿಗಳು ಕ್ರೀಡಿಸುತ್ತಿವೆ.॥31॥
ಮೂಲಮ್ - 32
ಮದಪ್ರಗಲ್ಭೇಷು ಚ ವಾರಣೇಷು
ಗವಾಂ ಸಮೂಹೇಷು ಚು ದರ್ಪಿತೇಷು ।
ಪ್ರಸನ್ನತೋಯಾಸು ಚ ನಿಮ್ನಗಾಸು
ವಿಭಾತಿ ಲಕ್ಷ್ಮೀರ್ಬಹುಧಾ ವಿಭಕ್ತಾ ॥
ಅನುವಾದ
ನಾನಾ ರೂಪಗಳಲ್ಲಿ ವಿಭಕ್ತವಾದ ಲಕ್ಷ್ಮಿಯು, ಮದಮತ್ತ ಗಜರಾಜರಲ್ಲಿ, ದರ್ಪ ತುಂಬಿದ ವೃಷಭ ಸಮೂಹದಲ್ಲಿ, ತಿಳಿಯಾದ ನೀರುಳ್ಳ ನದಿಗಳಲ್ಲಿ ವಿಶೇಷವಾಗಿ ಶೋಭಿಸುತ್ತಿರುವಳು.॥32॥
ಮೂಲಮ್ - 33
ನಭಃ ಸಮೀಕ್ಷ್ಯಾಂಬುಧರೈರ್ವಿಮುಕ್ತಂ
ವಿಮುಕ್ತಬರ್ಹಾಭರಣಾ ವನೇಷು ।
ಪ್ರಿಯಾಸ್ವಸಕ್ತಾ ವಿನಿವೃತ್ತಶೋಭಾ
ಗತೋತ್ಸವಾ ಧ್ಯಾನಪರಾ ಮಯೂರಾಃ ॥
ಅನುವಾದ
ಮೋಡಗಳಿಲ್ಲದ ಆಕಾಶವನ್ನು ನೋಡಿ ವನಗಳಲ್ಲಿ ಪಂಖರೂಪೀ ಆಭೂಷಣಗಳನ್ನು ಪರಿತ್ಯಾಗ ಮಾಡಿದ ನವಿಲುಗಳು ತನ್ನ ಪ್ರಿಯತಮೆಯರಿಂದ ವಿರಕ್ತವಾದುವು. ಅವುಗಳ ಶೋಭೆಯು ನಾಶವಾಗಿ, ಅವು ಆನಂದಶೂನ್ಯವಾಗಿ ಧ್ಯಾನಮಗ್ನವಾಗಿ ಕುಳಿತಿರುವವು.॥33॥
ಮೂಲಮ್ - 34
ಮನೋಜ್ಞಗಂದೈಃ ಪ್ರಿಯಕೈರನಲ್ಪೈಃ
ಪುಷ್ಪಾತಿಭಾರಾವನತಾಗ್ರಶಾಖೈಃ ।
ಸುವರ್ಣಗೌರೈರ್ನಯನಾಭಿರಾಮೈ
ರುದ್ಯೋತಿತಾನೀವ ವನಾಂತರಾಣಿ ॥
ಅನುವಾದ
ಕಾಡಿನಲ್ಲಿರುವ ಅಸಂಖ್ಯ ಅಸನ ಎಂಬ ವೃಕ್ಷಗಳ ಕೊಂಬೆಗಳು ಪುಷ್ಪಭಾರ ದಿಂದ ಬಾಗಿಕೊಂಡಿವೆ. ಅವುಗಳಲ್ಲಿ ಮನೋಹರ ಸುಗಂಧ ಹರಡಿಕೊಂಡಿದೆ. ಅದೆಲ್ಲವೂ ಸುವರ್ಣದಂತೆ, ನೇತ್ರಗಳಿಗೆ ಆನಂದವನ್ನು ಕೊಡುವವು. ಅವುಗಳಿಂದ ವನವು ಪ್ರಕಾಶಿತವಾಗಿದೆ.॥34॥
ಮೂಲಮ್ - 35
ಪ್ರಿಯಾನ್ವಿತಾನಾಂ ನಲಿನೀಪ್ರಿಯಾಣಾಂ
ವನೇ ಪ್ರಿಯಾಣಾಂ ಕುಸುಮೋದ್ಗತಾನಾಮ್ ।
ಮದೋತ್ಕಟಾನಾಂ ಮದಲಾಲಸಾನಾಂ
ಗಜೋತ್ತಮಾನಾಂ ಗತಯೋಽದ್ಯಮಂದಾಃ ॥
ಅನುವಾದ
ತಮ್ಮ ಪ್ರಿಯತಮೆಗಳೊಂದಿಗೆ ವಿಹರಿಸುವ, ಕಮಲ ವನ ಮತ್ತು ಪುಷ್ಪಗಳು ಹೆಚ್ಚು ಪ್ರಿಯವಾದ, ಏಳೆಲೆ ಬಾಳೆಯ ಹೂವುಗಳನ್ನು ಮೂಸಿ, ಉನ್ಮತ್ತರಾಗಿ, ಹೆಚ್ಚಾದ ಮದ ಮತ್ತು ಮದಜನಿತ ಕಾಮಭೋಗದ ಲಾಲಸೆ ಉಂಟಾದ ಆ ಗಜರಾಜಗಳ ಗತಿ ಇಂದು ಮಂದವಾಗಿ ಹೋಗಿದೆ.॥35॥
ಮೂಲಮ್ - 36
ವ್ಯಕ್ತಂ ನಭಃ ಶಸ್ತ್ರವಿಧೌತವರ್ಣಂ
ಕೃಶಪ್ರವಾಹಾನಿ ನದೀ ಜಲಾನಿ ।
ಕಹ್ಲಾರಶೀತಾಃ ಪವನಾಃ ಪ್ರವಾಂತಿ
ತಮೋ ವಿಮುಕ್ತಾಶ್ಚ ದಿಶಃ ಪ್ರಕಾಶಾಃ ॥
ಅನುವಾದ
ಈಗ ಮೇಘಗಳಿಲ್ಲದ ಆಕಾಶವು ಸಾಣೆ ಹಿಡಿದ ಖಡ್ಗದಂತೆ ಬೆಳ್ಳಗಾಗಿದೆ, ನದಿಗಳಲ್ಲಿ ನೀರು ನಿಧಾನವಾಗಿ ಹರಿಯುತ್ತಿದೆ, ಬಿಳಿ ತಾವರೆಯ ಸುಗಂಧಯುಕ್ತ ಶೀತಲಗಾಳಿಯು ಬೀಸುತ್ತಿದೆ. ದಿಕ್ಕುಗಳ ಅಂಧಕಾರ ಇಲ್ಲವಾಗಿ ಈಗ ಅವುಗಳಲ್ಲಿ ಪೂರ್ಣ ಪ್ರಕಾಶ ಉಂಟಾಗಿದೆ.॥36॥
ಮೂಲಮ್ - 37
ಸೂರ್ಯಾತಪಕ್ರಾಮಣನಷ್ಟಪಂಕಾ
ಭೂವಿಶ್ಚಿರೋದ್ಧಾಟಿತಸಾಂದ್ರರೇಣುಃ ।
ಅನ್ಯೋನ್ಯವೈರೇಣ ಸಮಾಯುತಾನಾ-
ಮುದ್ಯೋಗಕಾಲೋದ್ಯ ನರಾಧಿಪಾನಾಮ್ ॥
ಅನುವಾದ
ಸೂರ್ಯನ ಬಿಸಿಲಿನಿಂದಾಗಿ ನೆಲದ ಕೆಸರು ಒಣಗಿ ಹೋಗಿದೆ. ಈಗ ಅದರಲ್ಲಿ ಅನೇಕ ದಿನಗಳ ಬಳಿಕ ಧೂಳು ಕಾಣಿಸಿಕೊಂಡಿದೆ. ಪರಸ್ಪರ ವೈರವುಳ್ಳ ರಾಜರಿಗಾಗಿ ಯುದ್ಧೋದ್ಯೋಗ ಮಾಡುವ ಸಮಯ ಈಗ ಬಂದಿದೆ.॥37॥
ಮೂಲಮ್ - 38
ಶರದ್ಗುಣಾಪ್ಯಾಯಿತರೂಪಶೋಭಾಃ
ಪ್ರಹರ್ಷಿತಾಃ ಪಾಂಸುಸಮುತ್ಥಿತಾಂಗಾಃ ।
ಮದೋತ್ಕಟಾಃ ಸಂಪ್ರತಿ ಯುದ್ಧಲುಬ್ಧಾ
ವೃಷಾ ಗವಾಂ ಮಧ್ಯಗತಾ ನದಂತಿ ॥
ಅನುವಾದ
ಶರತ್ಕಾಲದ ವಾತಾವರಣದಿಂದ ಅತಿಶಯವಾದ ರೂಪದಿಂದಲೂ, ಕಾಂತಿಯಿಂದಲೂ ಕೂಡಿರುವ, ಬಹಳವಾಗಿ ಸಂತೋಷಗೊಂಡಿರುವ, ಧೂಳಿನಿಂದ ಮುಚ್ಚಿಹೋದ ಶರೀರದಿಂದ ಕೂಡಿದ, ಮದದಿಂದ ಕೊಬ್ಬಿರುವ, ಕಾಳಗದಲ್ಲೇ ಆಸಕ್ತವಾಗಿರುವ ಗೂಳಿಗಳು ಈಗ ಹಸುಗಳ ನಡುವೆ ನಿಂತು ಗುಟುರುಹಾಕುತ್ತಿವೆ.॥38॥
ಮೂಲಮ್ - 39
ಸಮನ್ಮಥಾ ತೀವ್ರತರಾನುರಾಗಾ
ಕುಲಾನ್ವಿತಾ ಮಂದಗತಿಃ ಕರೇಣುಃ ।
ಮದಾನ್ವಿತಂ ಸಂಪರಿವಾರ್ಯ ಯಾಂತಂ
ವನೇಷು ಭರ್ತಾರಮನುಪ್ರಯಾಂತಿ ॥
ಅನುವಾದ
ಕಾಮೋದ್ರಿಕ್ತವಾದ ಕಾರಣದಿಂದಲೇ ತೀವ್ರವಾದ ಅನುರಾಗ ಹೊಂದಿದ ಮಂದಗಮನವುಳ್ಳ, ಒಳ್ಳೆಯ ಜಾತಿ ಯಲ್ಲಿ ಹುಟ್ಟಿರುವ ಹೆಣ್ಣಾನೆಗಳು ಕಾಡಿನಲ್ಲಿ ಹೋಗುತ್ತಿರುವ ಮದದಿಂದ ಕೊಬ್ಬಿರುವ ಗಂಡಾನೆಯನ್ನು ಎಡೆಬಿಡದೆ ಹಿಂಬಾಲಿಸಿ ಹೋಗುತ್ತಿವೆ.॥39॥
ಮೂಲಮ್ - 40
ತ್ಯಕ್ತ್ವಾ ವರಾಣ್ಯಾತ್ಮವಿಭೂಷಣಾನಿ
ಬರ್ಹಾಣಿ ತೀರೋಪಗತಾ ನದೀನಾಮ್ ।
ನಿರ್ಭರ್ತ್ಸ್ಯಮಾನಾ ಇವ ಸಾರಸೌಘೈಃ
ಪ್ರಯಾಂತಿ ದೀನಾ ವಿಮುನಾ ಮಯೂರಾಃ ॥
ಅನುವಾದ
ಶರೀರಕ್ಕೆ ಭೂಷಣಪ್ರಾಯವಾದ ಶ್ರೇಷ್ಠರೆಕ್ಕೆಗಳನ್ನು ಕಳಚಿಹಾಕಿ ನದೀ ತೀರಕ್ಕೆ ಬಂದ ನವಿಲುಗಳು, ಸಾರಸಪಕ್ಷಿಗಳ ಸಮೂಹಗಳಿಂದ ಭಯಗೊಳಿಸಲ್ಪಟ್ಟು ದೀನವಾಗಿ, ಕುಂದಿದ ಮನಸ್ಸಿನಿಂದ ಮರಳಿ ಹೋಗುತ್ತಿವೆ.॥40॥
ಮೂಲಮ್ - 41
ವಿತ್ರಾಸ್ಯ ಕಾರಂಡವಚಕ್ರವಾಕಾನ್
ಮಹಾರವೈರ್ಭಿನ್ನಕಟಾ ಗಜೇಂದ್ರಾಃ ।
ಸರಃಸುಬದ್ಧಾಂಬುಜಭೂಷಣೇಷು
ವಿಕ್ಷೋಭ್ಯ ವಿಕ್ಷೋಭ್ಯ ಜಲಂ ಪಿಬಂತಿ ॥
ಅನುವಾದ
ಗಂಡಸ್ಥಳಗಳಲ್ಲಿ ಮದೋದಕವನ್ನು ಸುರಿಸುತ್ತಿರುವ ಗಜರಾಜರುಗಳು ಗಟ್ಟಿಯಾದ ಘೀಂಕಾರದಿಂದ ನೀರುಕೋಳಿಗಳನ್ನು, ಚಕ್ರವಾಕ ಪಕ್ಷಿಗಳನ್ನು ಹೆದರಿಸುತ್ತಾ, ಅರಳಿದ ಕಮಲಗಳಿಂದ ವಿಭೂಷಿತ ಸರೋವರದ ನೀರನ್ನು ಅಲ್ಲೋಲ- ಕಲ್ಲೋಲಗೊಳಿಸುತ್ತಾ ನೀರನ್ನು ಕುಡಿಯುತ್ತಿವೆ.॥41॥
ಮೂಲಮ್ - 42
ವ್ಯಪೇತಪಂಕಾಸು ಸುವಾಲುಕಾಸು
ಪ್ರಸನ್ನತೋಯಾಸು ಸಗೋಕುಲಾಸು ।
ಸಸಾರಸಾರಾವವಿನಾದಿತಾಸು
ನದೀಷು ಹಂಸಾ ನಿಪತಂತಿ ಹೃಷ್ಟಾಃ ॥
ಅನುವಾದ
ಶರತ್ಕಾಲದಲ್ಲಿ ನದಿಗಳಲ್ಲಿ ಕೆಸರಿಲ್ಲದೆ, ಪ್ರವಾಹವು ಬತ್ತಿ ಹೋಗಿರುವುದರಿಂದ ಮರಳ ದಿಣ್ಣೆಗಳು ಎದ್ದುಕಾಣುತ್ತಿವೆ. ಸ್ವಚ್ಛವಾದ ಆ ನದಿಯ ನೀರನ್ನು ಕುಡಿಯಲು ಹಸುಗಳು ಹಿಂಡು-ಹಿಂಡಾಗಿ ಬರುತ್ತಿವೆ. ಸಾರಸ ಪಕ್ಷಿಗಳ ಕಲರವದಿಂದ ನಿನಾದಿತವಾದ ಆ ನದಿಗಳಲ್ಲಿ ಹಂಸಗಳು ಬಹಳ ಹರ್ಷದಿಂದ ಧುಮುಕುತ್ತಿವೆ.॥42॥
ಮೂಲಮ್ - 43
ನದೀಘನಪ್ರಸ್ರವಣೋದಕಾನಾ-
ಮತಿಪ್ರವೃದ್ಧಾನಿಲಬರ್ಹಿಣಾನಾಮ್ ।
ಪ್ಲವಂಗಮಾನಾಂ ಚ ಗತೋತ್ಸವಾನಾಂ
ಧ್ರುವಂ ರವಾಃ ಸಂಪ್ರತಿ ಸಂಪ್ರಣಷ್ಟಾಃ ॥
ಅನುವಾದ
ನದಿಯ, ಮೇಘಗಳ, ಜಲಪಾತದ, ಪ್ರಚಂಡವಾಯುವಿನ, ನವಿಲುಗಳ, ಕಪ್ಪೆಗಳ ವಟ-ವಟ ಹೀಗೆ ಎಲ್ಲ ಶಬ್ದಗಳು ಈಗ ಸಂಪೂರ್ಣವಾಗಿ ನಿಂತು ಹೋಗಿವೆ.॥43॥
ಮೂಲಮ್ - 44
ಅನೇಕವರ್ಣಾಃ ಸುವಿನಷ್ಟಕಾಯಾ
ನವೋದಿತೇಷ್ವಂಬುಧರೇಷುನಷ್ಟಾಃ ।
ಕ್ಷುಧಾರ್ದಿತಾ ಘೋರವಿಷಾ ಬಿಲೇಭ್ಯ-
ಶ್ಚಿರೋಷಿತಾ ವಿಪ್ರಸರಂತಿ ಸರ್ಪಾಃ ॥
ಅನುವಾದ
ಹೊಸದಾಗಿ ಮೂಡಿಬಂದ ಮೇಘಗಳು ಮಳೆಗರೆ ಯುವಾಗ ಸರ್ಪಗಳು ಬಿಲದಲ್ಲೇ ಉಡುಗಿಕೊಂಡಿರುತ್ತವೆ. ಆಹಾರವಿಲ್ಲದೆ ಅತ್ಯಂತ ಕೃಶವಾಗಿ ಅವು ಸಾಯುವ ಸ್ಥಿತಿಯಲ್ಲಿರುವ ಭಯಂಕರ ವಿಷವುಳ್ಳ ಆ ಅನೇಕ ಬಣ್ಣದ ಸರ್ಪಗಳು ಹಸಿವಿನಿಂದ ಬಳಲಿ ಬಿಲಗಳಿಂದ ಹೊರಕ್ಕೆ ಬರುತ್ತಿವೆ.॥44॥
ಮೂಲಮ್ - 45
ಚಂಚಚ್ಚಂದ್ರಕರಸ್ಪರ್ಶಹರ್ಷೋನ್ಮೀಲಿತತಾರಕಾ ।
ಅಹೋ ರಾಗವತೀ ಸಂಧ್ಯಾ ಜಹಾತಿ ಸ್ವಯಮಂಬರಮ್ ॥
ಅನುವಾದ
ಶೋಭಾಯಮಾನವಾದ ಚಂದ್ರಕಿರಣಗಳ ಸ್ಪರ್ಶದಿಂದ ಹರ್ಷಗೊಂಡು ವಿಕಸಿತ ನಕ್ಷತ್ರಗಳಿಂದ ಕೂಡಿರುವ ಸಂಧ್ಯಾ ದೇವಿಯು (ಅಥವಾ ಅನುರಾಗ ತುಂಬಿದ ನಾಯಿಕೆ) ಅಂಬರ (ವಸ್ತ್ರ-ಆಕಾಶ)ವನ್ನು ತೊರೆದು ಬಿಟ್ಟಿದ್ದಾಳೆ. ಇದು ನಿಶ್ಚಯವಾಗಿಯೂ ಆಶ್ಚರ್ಯಕರವಾಗಿದೆ.॥45॥
ಮೂಲಮ್ - 46
ರಾತ್ರಿಃ ಶಶಾಂಕೋದಿತಸೌಮ್ಯವಕ್ತ್ರಾ
ತಾರಾಗಣೋನ್ಮೀಲಿತಚಾರುನೇತ್ರಾ।
ಜ್ಯೋತ್ಸ್ನಾಂಶುಕಪ್ರಾವರಣಾ ವಿಭಾತಿ
ನಾರೀವ ಶುಕ್ಲಾಂಶುಕಸಂವೃತಾಂಗೀ ॥
ಅನುವಾದ
ಬೆಳದಿಂಗಳೇ ಮೇಲ್ಹೋದಿಕೆಯುಳ್ಳ ಶರತ್ಕಾಲದ ರಾತ್ರಿಯು ಬೆಳ್ಳಗಿನ ಸೀರೆಯಿಂದ ಮೈಮುಚ್ಚಿಕೊಂಡಿರುವ ಓರ್ವ ಸುಂದರ ನಾರಿಯಂತೆ ಶೋಭಿಸುತ್ತಿರುವಳು. ಉದಯಿಸಿದ ಚಂದ್ರನೇ ಆಕೆಯ ಸೌಮ್ಯಮುಖವಾದರೆ, ನಕ್ಷತ್ರಗಳೇ ಆಕೆಯ ಅರಳಿದ ಮನೋಹರ ಕಣ್ಣುಗಳು.॥46॥
ಮೂಲಮ್ - 47
ವಿಪಕ್ವಶಾಲಿಪ್ರಸವಾನಿ ಭುಕ್ತ್ವಾ
ಪ್ರಹರ್ಷಿತಾ ಸಾರಸಚಾರುಪಂಕ್ತಿಃ ।
ನಭಃ ಸಮಾಕ್ರಾಮತಿ ಶೀಘ್ರವೇಗಾ
ವಾತಾವಧೂತಾ ಗ್ರಥಿತೇವ ಮಾಲಾ ॥
ಅನುವಾದ
ಪಕ್ವವಾದ ಭತ್ತದ ತೆನೆಗಳನ್ನು ತಿಂದು ಪರಮಹೃಷ್ಟವಾದ ಸಾರಸಪಕ್ಷಿಗಳ ಸುಂದರ ಸಾಲು, ಗಾಳಿಯಿಂದ ಹಾರಿಸಲ್ಪಟ್ಟ ಹೂವಿನಮಾಲೆಯಂತೆ ಆಕಾಶದಲ್ಲಿ ವೇಗವಾಗಿ ಹಾರಾಡುತ್ತಿದೆ.॥47॥
ಮೂಲಮ್ - 48
ಸುಪ್ತೈಕಹಂಸಂ ಕುಮುದೈರುಪೇತಂ
ಮಹಾಹ್ರದಸ್ಥಂ ಸಲಿಲಂ ವಿಭಾತಿ ।
ಘನೈರ್ವಿಮುಕ್ತಂ ನಿಶಿ ಪೂರ್ಣಚಂದ್ರಂ
ತಾರಾಗಣಾಕೀರ್ಣಮಿವಾಂತರಿಕ್ಷಮ್ ॥
ಅನುವಾದ
ಮಲಗಿರುವ ಒಂದೇ ಹಂಸದಿಂದ ಕೂಡಿರುವ, ಕನ್ನೈದಿಲೆಗಳಿಂದ ವ್ಯಾಪ್ತವಾದ ದೊಡ್ಡದಾದ ಸರೋವರದ ನೀರು ರಾತ್ರಿಯಲ್ಲಿ ನಕ್ಷತ್ರಗಳಿಂದ ಸುತ್ತುವರಿಯಲ್ಪಟ್ಟು ಚಂದ್ರನಿರುವ, ಮೋಡಗಳಿಲ್ಲದ ಅಂತರಿಕ್ಷದಂತೆ ಶೋಭಿಸುತ್ತಿದೆ.॥48॥
ಮೂಲಮ್ - 49
ಪ್ರಕೀರ್ಣಹಂಸಾಕುಲಮೇಖಲಾನಾಂ
ಪ್ರಬುದ್ಧ ಪದ್ಮೋತ್ಪಲಮಾಲಿನೀನಾಮ್ ।
ವಾಪ್ಯುತ್ತಮಾನಾಮಧಿಕಾದ್ಯ ಲಕ್ಷ್ಮೀ-
ರ್ವರಾಂಗನಾನಾಮಿವ ಭೂಷಿತಾನಾಮ್ ॥
ಅನುವಾದ
ಸುತ್ತಲೂ ಹರಡಿಕೊಂಡಿರುವ ಹಂಸಗಳನ್ನೇ ನಡು ಪಟ್ಟಿಯನ್ನಾಗಿಯೂ, ಕಮಲಗಳನ್ನು ಕನ್ನೈದಿಲೆಗಳನ್ನು ಮಾಲೆಗಳನ್ನಾಗಿಯೂ ಹೊಂದಿರುವ ಶ್ರೇಷ್ಠವಾದ ಬಾವಿಗಳ ಶೋಭೆಯು ಇಂದು ವಸ್ತ್ರಾಭೂಷಣಗಳಿಂದ ವಿಭೂಷಿತವಾದ ಸುಂದರ ವನಿತೆಯಂತೆ ಇದೆ.॥49॥
ಮೂಲಮ್ - 50
ವೇಣುಸ್ವರವ್ಯಜಿತತೂರ್ಯಮಿಶ್ರಃ
ಪ್ರತ್ಯೂಷಕಾಲೇಽನಿಲಸಂಪ್ರವೃತ್ತಃ ।
ಸಂಮೂರ್ಛಿತೋ ಗರ್ಗರಗೋವೃಷಾಣಾ-
ಮನ್ಯೋನ್ಯಮಾಪೂರಯತೀವ ಶಬ್ದಃ ॥
ಅನುವಾದ
ವೇಣು ಸ್ವರವಾಗಿ ವ್ಯಕ್ತವಾದ ವಾದ್ಯಘೋಷ ಮಿಶ್ರಿತ ಶಬ್ದ ಮತ್ತು ಪ್ರಾತಃಕಾಲದ ವಾಯುವಿನಿಂದ ವೃದ್ಧಿಗೊಂಡು ಎಲ್ಲೆಡೆ ಹರಡಿದ ಮೊಸರು ಕಡೆಯುವ ದೊಡ್ಡ-ದೊಡ್ಡ ಪಾತ್ರೆಗಳ ಹಾಗೂ ಗೂಳಿಗಳ ಶಬ್ದ ಒಂದು ಮತ್ತೊಂದಕ್ಕೆ ಪೂರಕವಾದಂತೆ ಇದೆ.॥50॥
ಮೂಲಮ್ - 51
ನವೈರ್ನದೀನಾಂ ಕುಸುಮಪ್ರಭಾಸೈ
ರ್ವ್ಯಾಧೂಯಮಾನೈರ್ಮೃದುಮಾರುತೇನ ।
ಧೌತಾಮಲಕ್ಷೌಮಪಟಪ್ರಕಾಶೈಃ
ಕೂಲಾನಿ ಕಾಶೈರುಪಶೋಭಿತಾನಿ ॥
ಅನುವಾದ
ನದಿಗಳ ತಟಗಳು ಮಂದ-ಮಂದವಾಯುವಿನಿಂದ ಅಲ್ಲಾಡುತ್ತಾ, ಪುಷ್ಪರೂಪಿ ನಗುವಿನಿಂದ ಶೋಭಿತ ಹಾಗೂ ಒಗೆದು ಮಡಿ ಮಾಡಿದ ರೇಶ್ಮೆವಸ್ತ್ರಗಳಂತೆ ಪ್ರಕಾಶಿತವಾದ ಹೊಸದಾದ ಜಂಬುಹುಲ್ಲುಗಳಿಂದ ಶೋಭಿತ ವಾಗಿವೆ.॥51॥
ಮೂಲಮ್ - 52
ವನಪ್ರಚಂಡಾ ಮಧುಪಾನಶೌಂಡಾಃ
ಪ್ರಿಯಾನ್ವಿತಾಃ ಷಟ್ಚರಣಾಃ ಪ್ರಹಷ್ಟಾಃ ।
ವನೇಷು ಮತ್ತಾಃ ಪವನಾನುಯಾತ್ರಾಂ
ಕುರ್ವಂತಿ ಪದ್ಮಾಸನರೇಣುಗೌರಾಃ ॥
ಅನುವಾದ
ವನದಲ್ಲಿ ಸ್ವಚ್ಛಂದಚಾರಿಗಳಾದ ಕುಸುಮ ಮಧುವನ್ನು ಪಾನ ಮಾಡುವುದರಲ್ಲಿ ಚತುರರಾದ, ಕಮಲಗಳ ಮತ್ತು ಹೊನ್ನೆಮರದ ಪುಷ್ಪಗಳ ಪರಾಗದಿಂದ ಬಿಳುಪಾಗಿರುವ ಮತ್ತಭೃಂಗಗಳು ತಮ್ಮ ಪ್ರೇಯಸಿಯರೊಂದಿಗೆ ಹರ್ಷಗೊಂಡು ಅರಣ್ಯದಲ್ಲಿ ಗಾಳಿಯ ಹಿಂದೆ-ಹಿಂದೆಯೇ ಹೋಗುತ್ತಿವೆ.॥52॥
ಮೂಲಮ್ - 53
ಜಲಂ ಪ್ರಸನ್ನಂ ಕುಸುಮ ಪ್ರಹಾಸಂ
ಕ್ರೌಂಚಸ್ವನಂ ಶಾಲಿವನಂ ವಿಪಕ್ವಮ್ ।
ಮೃದುಶ್ಚ ವಾಯುರ್ವಿಮಲಶ್ಚ ಚಂದ್ರಃ
ಶಂಸಂತಿ ವರ್ಷವ್ಯಪನೀತಕಾಲಮ್ ॥
ಅನುವಾದ
ನೀರು ತಿಳಿಯಾಗಿದೆ, ಬತ್ತದ ಪೈರು ಬೆಳೆದು ನಿಂತಿದೆ, ವಾಯು ಮಂದಗತಿಯಿಂದ ಬೀಸುತ್ತಿದೆ, ಚಂದ್ರನು ನಿರ್ಮಲವಾಗಿ ಗೋಚರಿಸುತ್ತಿರುವನು ಇವೆಲ್ಲ ಲಕ್ಷಣಗಳು ಶರತ್ಕಾಲದ ಆಗಮನವನ್ನು ಸೂಚಿಸುತ್ತಿವೆ. ಇದರಲ್ಲಿ ಮಳೆ ಸಮಾಪ್ತವಾಗಿರುತ್ತದೆ, ಕ್ರೌಂಚಪಕ್ಷಿಗಳು ಕೂಗಲು ತೊಡಗುವವು. ಈ ಋತುವಿನಲ್ಲಿ ಹೂವುಗಳು ನಗುವಿನಂತೆ ಅರಳಿ ನಿಂತಿವೆ.॥53॥
ಮೂಲಮ್ - 54
ಮೀನೋಪಸಂದರ್ಶಿತಮೇಖಲಾನಾಂ
ನದೀವಧೂನಾಂ ಗತಯೋಽದ್ಯಮಂದಾಃ ।
ಕಾಂತೋಪಭುಕ್ತಾಲಸಗಾಮಿನೀನಾಂ
ಪ್ರಭಾತಕಾಲೇಷ್ವಿವ ಕಾಮಿನೀನಾಮ್ ॥
ಅನುವಾದ
ಪ್ರಿಯತಮನಿಂದ ಉಪಭೋಗಿಸಲ್ಪಟ್ಟು, ಬಳಲಿ-ಬೆಂಡಾಗಿ ಪ್ರಾತಃಕಾಲದಲ್ಲಿ ಮಂದವಾದ ನಡಿಗೆಯುಳ್ಳ ಕಾಮಿನಿಯರಂತೆ ಮೀನುಗಳನ್ನೇ ನಡುಪಟ್ಟಿಯಾಗಿ ಹೊಂದಿರುವ ನದಿಗಳೆಂಬ ವಧುಗಳ ಗಮನವು ಇಂದು ಮಂದವಾಗಿದೆ.॥54॥
ಮೂಲಮ್ - 55
ಸಚಕ್ರವಾಕಾನಿ ಸಶೈವಲಾನಿ
ಕಾಶೈರ್ದುಕೂಲೈರಿವ ಸಂವೃತಾನಿ ।
ಸಪತ್ರಲೇಖಾಣಿ ಸರೋಚನಾನಿ
ವಧೂಮುಖಾನೀವ ನದೀಮುಖಾನಿ॥
ಅನುವಾದ
ನದಿಗಳ ಮುಖಗಳು ನವವಧುಗಳ ಮುಖದಂತೆ ಶೋಭಿಸುತ್ತಿವೆ. ಅವುಗಳಲ್ಲಿರುವ ಚಕ್ರವಾಕಗಳೇ ಗೋರೋಚನ ದಿಂದ ಮಾಡಿದ ತಿಲಕದಂತೆ ಕಾಣುತ್ತಿದೆ. ಪಾಚಿಯು ವಧುವಿನ ಮುಖವರ್ಣಿಕೆಯಂತೆ ಅನಿಸುತ್ತಿದೆ. ಜೊಂಡು ಹುಲ್ಲುಗಳೇ ಬಿಳಿಯ ವಸ್ತ್ರಗಳಾಗಿ ನದೀರೂಪಿಣೀ ವಧುವಿನ ಅವಕುಂಠನದಂತೆ ಇವೆ.॥55॥
ಮೂಲಮ್ - 56
ಪ್ರುಲ್ಲಬಾಣಾಸನಚಿತ್ರಿತೇಷು
ಪ್ರಹೃಷ್ಟಷಟ್ಪಾದನಿ ಕೂಜಿತೇಷು ।
ಗೃಹೀತಚಾಪೋದ್ಯತ ಚಂಡದಂಡಃ
ಪ್ರಚಂಡಚಾಪೋಽದ್ಯ ವನೇಷು ಕಾಮಃ ॥
ಅನುವಾದ
ವಿಕಸಿತವಾದ ಪುಷ್ಪಗಳುಳ್ಳ ಬಾಣವೃಕ್ಷಗಳಿಂದಲೂ, ಸರ್ಜವೃಕ್ಷಗಳಿಂದಲೂ ವಿಚಿತ್ರವಾಗಿ ಕಾಣುವ, ಪ್ರಹೃಷ್ಟವಾದ ದುಂಬಿಗಳಿಂದ ನಿನಾದಿಸುತ್ತಿರುವ ಅರಣ್ಯಗಳಲ್ಲಿ ಕಾಮದೇವನು ಧನುಸ್ಸನ್ನು ಹಿಡಿದು ಪ್ರಚಂಡವಾದ ಬಾಣಗಳನ್ನು ಮೇಲೆತ್ತಿಕೊಂಡು ಸಂಚರಿಸುತ್ತಿದ್ದಾನೆ.॥56॥
ಮೂಲಮ್ - 57
ಲೋಕಂ ಸುವೃಷ್ಟ್ಯಾ ಪರಿತೋಷಯಿತ್ವಾ
ನದೀಸ್ತಟಾಕಾನಿ ಚ ಪೂರಯಿತ್ವಾ ।
ನಿಷ್ಪನ್ನಸಸ್ಯಾಂ ವಸುಧಾಂ ಚ ಕೃತ್ವಾ
ತ್ಯಕ್ತ್ವಾ ನಭಸ್ತೋಯಧರಾಃ ಪ್ರಣಷ್ಟಾಃ ॥
ಅನುವಾದ
ಜನರನ್ನು ಸುವೃಷ್ಟಿಯಿಂದ ಸಂತುಷ್ಟಗೊಳಿಸಿ, ನದಿಗಳನ್ನು, ಕೆರೆ-ಕುಂಟೆಗಳನ್ನು ತುಂಬಿಸಿ, ಭೂಮಿಯನ್ನು ಸಸ್ಯಸಮೃದ್ಧವನ್ನಾಗಿಸಿ ಮೋಡಗಳು ಆಕಾಶವನ್ನು ತ್ಯಜಿಸಿ ಅದೃಶ್ಯವಾಗಿವೆ.॥57॥
ಮೂಲಮ್ - 58
ದರ್ಶಯಂತಿ ಶರನ್ನದ್ಯಃ ಪುಲಿನಾನಿ ಶನೈಃ ಶನೈಃ ।
ನವಸಂಗಮಸವ್ರೀಡಾ ಜಘನಾನೀವ ಯೋಷಿತಃ ॥
ಅನುವಾದ
ಪ್ರಥಮ ಸಮಾಗಮ ಕಾಲದಲ್ಲಿ ಸ್ತ್ರೀಯರು ನಾಚಿಕೆಗೊಂಡು ಪ್ರಿಯತಮನಿಗೆ ಜಘನಪ್ರದೇಶವನ್ನು ಮೆಲ್ಲ-ಮೆಲ್ಲನೆ ತೋರಿಸುವಂತೆ ಶರತ್ಕಾಲದ ನದಿಗಳು ನೀರನ್ನು ಕಡಿಮೆ ಮಾಡಿಕೊಂಡು ತಮ್ಮ ಮರಳು ದಿಣ್ಣೆಗಳನ್ನು ಮೆಲ್ಲ-ಮೆಲ್ಲನೆ ತೋರಿಸುತ್ತಿವೆ.॥58॥
ಮೂಲಮ್ - 59
ಪ್ರಸನ್ನಸಲಿಲಾಃ ಸೌಮ್ಯ ಕುರರಾಭಿವಿನಾದಿತಾಃ ।
ಚಕ್ರವಾಕಗಣಾಕೀರ್ಣಾ ವಿಭಾಂತಿ ಸಲಿಲಾಶಯಾಃ ॥
ಅನುವಾದ
ಸೌಮ್ಯ! ಎಲ್ಲ ಜಲಾಶಯಗಳ ನೀರು ಸ್ವಚ್ಛವಾಗಿದೆ. ಅಲ್ಲಿ ಕ್ರೌಚ-ಪಕ್ಷಿಗಳ ಕಲರವ ನಿನಾದಿಸುತ್ತಿದೆ. ಚಕ್ರವಾಕ ಪಕ್ಷಿಗಳು ಎಲ್ಲೆಡೆ ತುಂಬಿಕೊಂಡಿವೆ. ಹೀಗೆ ಆ ಜಲಾಶಯಗಳು ತುಂಬಾ ಶೋಭಿಸುತ್ತಿವೆ.॥59॥
ಮೂಲಮ್ - 60
ಅನ್ಯೋನ್ಯಂ ಬದ್ಧವೈರಾಣಾಂ ಜಿಗೀಷೂಣಾಂ ನೃಪಾತ್ಮಜ ।
ಉದ್ಯೋಗಸಮಯಃ ಸೌಮ್ಯ ಪಾರ್ಥಿವಾನಾಮುಪಸ್ಥಿತಃ ॥
ಅನುವಾದ
ರಾಜಕುಮಾರ! ಪರಸ್ಪರ ಬದ್ಧ ವೈರಿಗಳಾದ, ಒಬ್ಬರು ಮತ್ತೊಬ್ಬರನ್ನು ಗೆಲ್ಲಬೇಕೆಂದು ಇಚ್ಛಿಸುವ ರಾಜರಿಗಾಗಿ ಈಗ ಯುದ್ಧೋದ್ಯೋಗ ಕೈಗೊಳ್ಳುವ ಸಮಯ ಉಪಸ್ಥಿತವಾಗಿದೆ.॥60॥
ಮೂಲಮ್ - 61
ಇಯಂ ಸಾ ಪ್ರಥಮಾ ಯಾತ್ರಾ ಪಾರ್ಥಿವಾನಾಂ ನೃಪಾತ್ಮಜ ।
ನ ಚ ಪಶ್ಯಾಮಿ ಸುಗ್ರೀವಮುದ್ಯೋಗಂ ವಾ ತಥಾವಿಧಮ್ ॥
ಅನುವಾದ
ನರೇಶನಂದನ! ರಾಜರ ವಿಜಯಯಾತ್ರೆಯ ಇದು ಮೊದಲ ಅವಕಾಶವಾಗಿದೆ, ಆದರೆ ಸುಗ್ರೀವನು ಇಲ್ಲಿಗೆ ಬಂದಿರುವುದಿರಲೀ, ಆವನ ಯಾವುದೇ ಅಂತಹ ಉದ್ಯೋಗ ನನಗೆ ಕಾಣುವುದಿಲ್ಲ.॥61॥
ಮೂಲಮ್ - 62
ಅಸನಾಃ ಸಪ್ತಪರ್ಣಾಶ್ಚ ಕೋವಿದಾರಾಶ್ಚ ಪುಷ್ಟಿತಾಃ ।
ದೃಶ್ಯಂತೇ ಬಂಧುಜೀವಾಶ್ಚ ಶ್ಯಾಮಾಶ್ಚ ಗಿರಿಸಾನುಷು ॥
ಅನುವಾದ
ಪರ್ವತಗಳ ಶಿಖರಗಳಲ್ಲಿ ಕೆಂಪು ಮುತ್ತುಗದ ಮರಗಳೂ, ಏಳೆಲೆ ಬಾಳೆಗಿಡಗಳೂ, ಕಂಚವಾಳ, ದಾಸವಾಳ ಗಿಡಗಳೂ, ಹೊಂಗೆಮರಗಳೂ ಅರಳಿದ ಹೂವುಗಳಿಂದ ಶೋಭಿಸುತ್ತಿವೆ.॥62॥
ಮೂಲಮ್ - 63
ಹಂಸಸಾರಸಚಕ್ರಾಹ್ವೈಃ ಕುರರೈಶ್ಚ ಸಮಂತತಃ ।
ಪುಲೀನಾನ್ಯವಕೀರ್ಣಾನಿ ನದೀನಾಂ ಪಶ್ಯ ಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ನದೀತೀರಗಳಲ್ಲಿ ಎಲ್ಲೆಡೆ ಹಂಸ, ಸಾರಸ, ಚಕ್ರವಾಕ, ಕುಕರ ಮುಂತಾದ ಪಕ್ಷಿಗಳು ತುಂಬಿರುವುದನ್ನು ನೋಡು.॥63॥
ಮೂಲಮ್ - 64
ಚತ್ವಾರೋ ವಾರ್ಷಿಕಾ ಮಾಸಾ ಗತಾವರ್ಷಶತೋಪಮಾಃ ।
ಮಮ ಶೋಕಾಭಿತಪ್ತಸ್ಯ ತಥಾ ಸೀತಾಮಪಶ್ಯತಃ ॥
ಅನುವಾದ
ಸೀತೆಯನ್ನು ನೋಡದೆ ನಾನು ಶೋಕದಿಂದ ಸಂತಪ್ತನಾಗಿದ್ದೇನೆ; ಆದ್ದರಿಂದ ಈ ಮಳೆಗಾಲದ ನಾಲ್ಕು ತಿಂಗಳು ನನಗೆ ನೂರು ವರ್ಷಗಳಂತೆ ಕಳೆದುಹೋಗಿವೆ.॥64॥
ಮೂಲಮ್ - 65
ಚಕ್ರವಾಕೀವ ಭರ್ತಾರಂ ಪೃಷ್ಠತೋಽನುಗತಾ ವನಮ್ ।
ವಿಷಮಂ ದಂಡಕಾರಣ್ಯಮುದ್ಯಾನಮಿವ ಚಾಂಗನಾ ॥
ಅನುವಾದ
ಹೆಣ್ಣು ಚಕ್ರವಾಕ ತನ್ನ ಸ್ವಾಮಿಯನ್ನು ಅನುಸರಿಸುವಂತೆಯೇ, ಕಲ್ಯಾಣೀ ಸೀತೆಯು ಈ ಭಯಂಕರ, ದುರ್ಗಮ ದಂಡಕಾರಣ್ಯ ವನ್ನು ಉದ್ಯಾನವನವೆಂದು ತಿಳಿದು ನನ್ನ ಹಿಂದೆ ಇಲ್ಲಿಯ ವರೆಗೆ ಬಂದಿದ್ದಳು.॥65॥
ಮೂಲಮ್ - 66
ಪ್ರಿಯಾವಿಹೀನೇ ದುಃಖಾರ್ತೇ ಹೃತರಾಜ್ಯೇ ವಿವಾಸಿತೇ ।
ಕೃಪಾಂ ನ ಕುರುತೇ ರಾಜಾ ಸುಗ್ರೀವೋ ಮಯಿ ಲಕ್ಷ್ಮಣ ॥
ಅನುವಾದ
ಲಕ್ಷ್ಮಣ! ನಾನು ನನ್ನ ಪ್ರಿಯತಮೆಯಿಂದ ಅಗಲಿರುವೆನು. ನನ್ನ ರಾಜ್ಯ ಕಸಿದುಕೊಳ್ಳಲಾಗಿದೆ, ದೇಶಭ್ರಷ್ಟವಾಗಿದ್ದೇನೆ. ಈ ಸ್ಥಿತಿಯಲ್ಲಿಯೂ ಸುಗ್ರೀವರಾಜನು ನನ್ನ ಮೇಲೆ ಕೃಪೆ ಮಾಡುತ್ತಿಲ್ಲ.॥66॥
ಮೂಲಮ್ - 67
ಅನಾಥೋ ಹೃತರಾಜ್ಯೋಽಹಂ ರಾವಣೇನ ಚ ಧರ್ಷಿತಃ ।
ದೀನೋ ದೂರಗೃಹಃ ಕಾಮೀ ಮಾಂ ಚೈವ ಶರಣಂ ಗತಃ ॥
ಮೂಲಮ್ - 68
ಇತ್ಯೇತೈಃ ಕಾರಣೈಃ ಸೌಮ್ಯ ಸುಗ್ರೀವಸ್ಯ ದುರಾತ್ಮನಃ ।
ಅಹಂ ವಾನರರಾಜಸ್ಯ ಪರಿಭೂತಃ ಪರಂತಪಃ ॥
ಅನುವಾದ
ಸೌಮ್ಯ ಲಕ್ಷ್ಮಣ! ನಾನು ಅನಾಥ ನಾಗಿದ್ದೇನೆ. ರಾಜ್ಯಭ್ರಷ್ಟನಾಗಿದ್ದೇನೆ. ರಾವಣನು ನನಗೆ ಅಪಮಾನಮಾಡಿರುವನು. ದೀನನಾದ ನನ್ನ ಮನೆ ಇಲ್ಲಿಂದ ಬಹಳ ದೂರವಿದೆ. ಕಾಮನೆ ಇರಿಸಿಕೊಂಡು ನಾನು ಇಲ್ಲಿಗೆ ಬಂದಿದ್ದೆ, ರಾಮನು ನನ್ನ ಆಶ್ರಯಕ್ಕೆ ಬಂದಿರುವನೆಂದೂ ಸುಗ್ರೀವನು ತಿಳಿಯುತ್ತಿದ್ದಾನೆ. ಇವೆಲ್ಲ ಕಾರಣಗಳಿಂದ ವಾನರರಾಜ ದುರಾತ್ಮಾ ಸುಗ್ರೀವನು ನನ್ನನ್ನು ತಿರಸ್ಕರಿಸುತ್ತಿದ್ದಾನೆ; ಆದರೆ ನಾನು ಶತ್ರುಗಳಿಗೆ ಸದಾ ಸಂತಾಪ ಕೊಡುವವನು ಎಂಬುದು ಅವನಿಗೆ ತಿಳಿಯದು.॥67-68॥
ಮೂಲಮ್ - 69
ಸ ಕಾಲಂ ಪರಿಸಂಖ್ಯಾಯ ಸೀತಾಯಾಃ ಪರಿಮಾರ್ಗಣೇ ।
ಕೃತಾರ್ಥಃ ಸಮಯಂ ಕೃತ್ವಾ ದುರ್ಮತಿರ್ನಾವಬುಧ್ಯತೇ ॥
ಅನುವಾದ
ಸೀತೆಯನ್ನು ಹುಡುಕಲು ಅವನು ಸಮಯವನ್ನು ನಿಶ್ಚಿತಗೊಳಿಸಿದ್ದನು. ಆದರೆ ಅವನ ಕೆಲಸ ಮುಗಿದುಹೋಗಿದೆ, ಅದಕ್ಕಾಗಿ ಆ ದುರ್ಬುದ್ಧಿ ವಾನರನು ಪ್ರತಿಜ್ಞೆ ಮಾಡಿಯೂ ಅದರ ಕಡೆ ಗಮನಕೊಡುವುದಿಲ್ಲ.॥69॥
ಮೂಲಮ್ - 70
ಸ ಕಿಷ್ಕಿಂಧಾ ಪ್ರವಿಶ್ಯ ತ್ವಂ ಬ್ರೂಹಿ ವಾನರಪುಂಗವಮ್ ।
ಮೂರ್ಖಂ ಗ್ರಾಮ್ಯಸುಖೇ ಸಕ್ತಂ ಸುಗ್ರೀವಂ ವಚನಾನ್ಮಮ ॥
ಅನುವಾದ
ಆದ್ದರಿಂದ ಲಕ್ಷ್ಮಣ! ನೀನು ನನ್ನ ಆಜ್ಞೆಯಂತೆ ಕಿಷ್ಕಿಂಧೆಗೆ ಹೋಗು. ವಿಷಯ ಭೋಗದಲ್ಲಿ ಸಿಕ್ಕಿಹಾಕಿಕೊಂಡ ಮೂರ್ಖ ವಾನರರಾಜ ಸುಗ್ರೀವನಲ್ಲಿ ಈ ಪ್ರಕಾರ ಹೇಳು.॥70॥
ಮೂಲಮ್ - 71
ಅರ್ಥಿನಾಮುಪಪನ್ನಾನಾಂ ಪೂರ್ವಂ ಚಾಪ್ಯುಪಕಾರಿಣಾಮ್ ।
ಆಶಾಂ ಸಂಶ್ರುತ್ಯ ಯೋ ಹಂತಿ ಸ ಲೋಕೇ ಪುರುಷಾಧಮಃ ॥
ಅನುವಾದ
ಬಲ-ಪರಾಕ್ರಮದಿಂದ ಸಂಪನ್ನ ಹಾಗೂ ಮೊದಲೇ ಉಪಕಾರ ಮಾಡಿದ ಕಾರ್ಯಾರ್ಥಿ ಪುರುಷರಿಗೆ ಪ್ರತಿಜ್ಞಾಪೂರ್ವಕ ಆಸೆಯನ್ನು ತೋರಿಸಿ ಮತ್ತೆ ಅದನ್ನು ಮುರಿಯುವವನು ಜಗತ್ತಿನ ಎಲ್ಲ ಪುರುಷರಲ್ಲಿ ನೀಚನಾಗಿದ್ದಾನೆ.॥71॥
ಮೂಲಮ್ - 72
ಶುಭಂ ವಾ ಯದಿ ವಾ ಪಾಪಂ ಯೋ ಹಿ ವಾಕ್ಯಮುದೀರಿತಮ್ ।
ಸತ್ಯೇನ ಪರಿಗೃಹ್ಣಾತಿ ಸ ವೀರಃ ಪುರುಷೋತ್ತಮಃ ॥
ಅನುವಾದ
ಪ್ರತಿಜ್ಞಾರೂಪದಲ್ಲಿ ಆಡಿದ ಒಳ್ಳೆಯ ಅಥವಾ ಕೆಟ್ಟ ಎಲ್ಲ ರೀತಿಯ ಮಾತುಗಳನ್ನು ಅವಶ್ಯವಾಗಿ ಪಾಲನೀಯವೆಂದು ತಿಳಿದು ಸತ್ಯದ ರಕ್ಷಣೆಗಾಗಿ ಅದನ್ನು ಪಾಲಿಸುವವ ವೀರನು ಸಮಸ್ತ ಪುರುಷರಲ್ಲಿ ಶ್ರೇಷ್ಠನೆಂದು ತಿಳಿಯಲಾಗುತ್ತದೆ.॥72॥
ಮೂಲಮ್ - 73
ಕೃತಾರ್ಥಾ ಹ್ಯಕೃರ್ಥಾನಾಂ ಮಿತ್ರಾಣಾಂ ನ ಭವಂತಿ ಯೇ ।
ತಾನ್ಮೃತಾನಪಿ ಕ್ರವ್ಯಾದಾಃ ಕೃತಘ್ನಾನ್ನೋಪಭುಂಜತೇ ॥
ಅನುವಾದ
ತನ್ನ ಸ್ವಾರ್ಥ ಸಿದ್ಧವಾದ ಮೇಲೆ ಯಾರ ಕಾರ್ಯ ಪೂರ್ಣವಾಗಿಲ್ಲವೋ ಆ ಮಿತ್ರರಿಗೆ ಸಹಾಯಕನಾಗುವುದಿಲ್ಲವೋ, ಅವನ ಕಾರ್ಯವನ್ನು ಸಿದ್ಧಗೊಳಿಸಲು ಪ್ರಯತ್ನಿಸುವುದಿಲ್ಲವೋ, ಆ ಕೃತಘ್ನ ಪುರುಷನು ಸತ್ತುಹೋದ ಮೇಲೆಯೂ ಮಾಂಸಾಹಾರಿ ಪ್ರಾಣಿಗಳೂ ಕೂಡ ಅವನ ಮಾಂಸವನ್ನು ತಿನ್ನುವುದಿಲ್ಲ.॥73॥
ಮೂಲಮ್ - 74
ನೂನಂ ಕಾಂಚನಪೃಷ್ಠಸ್ಯ ವಿಕೃಷ್ಟಸ್ಯ ಮಯಾ ರಣೇ ।
ದ್ರಷ್ಟುಮಿಚ್ಛತಿ ಚಾಪಸ್ಯ ರೂಪಂ ವಿದ್ಯುದ್ಗಣೋಪಮಮ್ ॥
ಅನುವಾದ
ಸುಗ್ರೀವನೇ! ಯುದ್ಧದಲ್ಲಿ ನಾನು ಸೆಳೆದ ಚಿನ್ನದ ಬೆನ್ನು ಉಳ್ಳ ಧನುಷ್ಯವನ್ನು, ಹೊಳೆಯುವ ಮಿಂಚಿನಂತೆ ನೋಡಲು ನೀನು ನಿಶ್ಚಯವಾಗಿಯೂ ಬಯಸುತ್ತಿರುವೆ.॥74॥
ಮೂಲಮ್ - 75
ಘೋರಂ ಜ್ಯಾತಲನಿರ್ಘೋಷಂ ಕ್ರುದ್ಧಸ್ಯ ಮಮ ಸಂಯುಗೇ ।
ನಿರ್ಘೋಷಮಿವ ವಜ್ರಸ್ಯ ಪುನಃ ಸಂಶ್ರೋತುಮಿಚ್ಛಸಿ ॥
ಅನುವಾದ
ಸಿಡಿಲಿನ ಗರ್ಜನೆಯಂತೆ ಗರ್ಜಿಸುವ ಕುಪಿತನಾದ ನನ್ನ ಘೋರವಾದ ಮೌರ್ವಿಯ ಠೇಂಕಾರ ಶಬ್ದವನ್ನು ಯುದ್ಧದಲ್ಲಿ ಪುನಃ ಕೇಳಲು ಬಯಸುತ್ತಿರುವೆ; ಎಂದು ಸುಗ್ರೀವನಿಗೆ ಹೇಳು.॥75॥
ಮೂಲಮ್ - 76
ಕಾಮಮೇವಂಗತೇಽಪ್ಯಸ್ಯ ಪರಿಜ್ಞಾತೇ ಪರಾಕ್ರಮೇ ।
ತ್ವತ್ಸಹಾಯಸ್ಯ ಮೇ ವೀರ ನ ಚಿಂತಾ ಸ್ಯಾನ್ನೃಪಾತ್ಮಜ ॥
ಅನುವಾದ
ವೀರರಾಜಕುಮಾರ! ನಿನ್ನಂತಹ ಸಹಾಯಕನು ಜೊತೆಗಿರುವ ನನ್ನ ಪರಾಕ್ರಮದ ಪರಿಚಯ ಸುಗ್ರೀವನಿಗೆ ಆಗಿದೆಯಾದರೂ ಇಂತಹ ಸ್ಥಿತಿಯಲ್ಲಿ ಇವನು ವಾಲಿಯಂತೆ ನನ್ನನ್ನು ಕೊಲ್ಲಬಲ್ಲನು ಎಂಬ ಚಿಂತೆ ಅವನಿಗೆ ಇಲ್ಲದಿರುವುದು ಆಶ್ಚರ್ಯದ ಮಾತಾಗಿದೆ.॥76॥
ಮೂಲಮ್ - 77
ಯದರ್ಥಮಯಮಾರಂಭಃ ಕೃತಃ ಪರಪುರಂಜಯ ।
ಸಮಯಂ ನಾಭಿಜಾನಾತಿ ಕೃತಾರ್ಥಃ ಪ್ಲವಗೇಶ್ವರಃ ॥
ಅನುವಾದ
ಶತ್ರುನಗರದ ಮೇಲೆ ವಿಜಯ ಪಡೆಯುವ ಲಕ್ಷ್ಮಣನೇ! ಯಾವುದಕ್ಕಾಗಿ ಈ ಮಿತ್ರತೆ ಮೊದಲಾದ ಎಲ್ಲ ಆಯೋಜನ ವಾಗಿದೆಯೋ, ಸೀತೆಯನ್ನು ಹುಡುಕುವ ವಿಷಯದ ಆ ಪ್ರತಿಜ್ಞೆಯನ್ನು ಈಗ ವಾನರರಾಜ ಸುಗ್ರೀವನು ಮರೆತು ಹೋಗಿರುವನು; ಏಕೆಂದರೆ ಅವನ ಕಾರ್ಯಸಿದ್ಧವಾಗಿ ಹೋಗಿದೆ.॥77॥
ಮೂಲಮ್ - 78
ವರ್ಷಾಃ ಸಮಯಕಾಲಂ ತು ಪ್ರತಿಜ್ಞಾಯ ಹರೀಶ್ವರಃ ।
ವ್ಯತೀತಾಂಶ್ಚತುರೋ ಮಾಸಾನ್ ವಿಹರನ್ನಾವಬುಧ್ಯತೇ ॥
ಅನುವಾದ
ಮಳೆಗಾಲ ಮುಗಿದಾಕ್ಷಣ ಸೀತಾನ್ವೇಷಣೆ ಪ್ರಾರಂಭಿಸುವುದಾಗಿ ಸುಗ್ರೀವನು ಪ್ರತಿಜ್ಞೆ ಮಾಡಿದ್ದನು; ಆದರೆ ಕ್ರೀಡಾವಿಹಾರದಲ್ಲಿ ತಿಂಗಳು ಕಳೆದುಹೋದುದು ಅವನಿಗೆ ತಿಳಿಯದಷ್ಟು ತನ್ಮಯನಾಗಿ ಹೋಗಿದ್ದಾನೆ.॥78॥
ಮೂಲಮ್ - 79
ಸಾಮಾತ್ಯಪರಿಷತ್ಕ್ರಿಡನ್ ಪಾನಮೇವೋಪಸೇವತೇ ।
ಶೋಕದೀನೇಷು ನಾಸ್ಮಾಸು ಸುಗ್ರೀನಃ ಕುರುತೇ ದಯಾಮ್ ॥
ಅನುವಾದ
ಮಂತ್ರಿಗಳ ಹಾಗೂ ಪರಿಜನರೊಂದಿಗೆ ಸುಗ್ರೀವನು ಕ್ರೀಡಾ ಜನಿತ ಆಮೋದ-ಪ್ರಮೋದದಲ್ಲಿ ಸಿಕ್ಕಿಹಾಕಿಕೊಂಡು ಪೇಯ ಪದಾರ್ಥಗಳನ್ನು ಸೇವಿಸುತ್ತಾ ಇರುವನು. ನಾವು ಶೋಕದಲ್ಲಿ ವ್ಯಾಕುಲರಾಗಿದ್ದರೂ ಅವನಿಗೆ ನಮ್ಮ ಮೇಲೆ ದಯೆ ಬಂದಿಲ್ಲ.॥79॥
ಮೂಲಮ್ - 80
ಉಚ್ಯತಾಂ ಗಚ್ಛ ಸುಗ್ರೀವಸ್ತ್ವಯಾ ವೀರ ಮಹಾಬಲ ।
ಮಮ ರೋಷಸ್ಯ ಯದ್ರೂಪಂ ಬ್ರೂಯಾಶ್ಚೈನಮಿದಂ ವಚಃ ॥
ಅನುವಾದ
ಮಹಾಬಲೀ ವೀರ ಲಕ್ಷ್ಮಣ! ನೀನು ಹೋಗು, ಸುಗ್ರೀವನಲ್ಲಿ ಮಾತನಾಡು. ನನ್ನ ರೋಷದ ಸ್ವರೂಪವನ್ನು ಅವನಿಗೆ ತಿಳಿಸು ಹಾಗೂ ನನ್ನ ಈ ಸಂದೇಶವನ್ನು ತಿಳಿಸು.॥80॥
ಮೂಲಮ್ - 81
ನ ಚ ಸಂಕುಚಿತಃ ಪಂಥಾ ಯೇನ ವಾಲೀ ಹತೋ ಗತಃ ।
ಸಮಯೇತಿಷ್ಠ ಸುಗ್ರೀವ ಮಾ ವಾಲಿಪಥಮನ್ವಗಾಃ ॥
ಅನುವಾದ
ಸುಗ್ರೀವನೇ! ವಾಲಿಯು ಸತ್ತುಹೋದ ದಾರಿಯು ಇಂದೂ ಮುಚ್ಚಿಲ್ಲ. ಅದಕ್ಕಾಗಿ ನೀನು ನಿನ್ನ ಪ್ರತಿಜ್ಞೆಯಲ್ಲಿ ಸ್ಥಿರವಾಗಿರು. ವಾಲಿಯ ಮಾರ್ಗವನ್ನು ಅನುಸರಿಸಬೇಡ.॥81॥
ಮೂಲಮ್ - 82
ಏಕ ಏವ ರಣೇ ವಾಲೀ ಶರೇಣ ನಿಹತೋ ಮಯಾ ।
ತ್ವಾಂ ತು ಸತ್ಯಾದತಿಕ್ರಾಂತಂ ಹನಿಷ್ಯಾಮಿ ಸಬಾಂಧವಮ್ ॥
ಅನುವಾದ
ವಾಲಿಯಾದರೋ ರಣರಂಗದಲ್ಲಿ ಒಬ್ಬನೇ ನನ್ನ ಬಾಣದಿಂದ ಸತ್ತುಹೋಗಿದ್ದನು, ಆದರೆ ನೀನು ಸತ್ಯದಿಂದ ವಿಚಲಿತನಾದರೆ ನಾನು ನಿನ್ನನ್ನು ಬಂಧುಬಾಂಧವರ ಸಹಿತ ಕಾಲಕ್ಕೆ ತುತ್ತಾಗಿಸುವೆ.॥82॥
ಮೂಲಮ್ - 83
ತದೇವಂ ವಿಹಿತೇ ಕಾರ್ಯೇ ಯದ್ಧಿತಂ ಪುರುಷರ್ಷಭ ।
ತತ್ ತದ್ ಬ್ರೂಹಿ ನರಶ್ರೇಷ್ಠ ತ್ವರ ಕಾಲವ್ಯತಿಕ್ರಮಃ ॥
ಅನುವಾದ
ಪುರುಷಪ್ರವರ! ನರಶ್ರೇಷ್ಠ ಲಕ್ಷ್ಮಣ! ಈ ರೀತಿ ಕಾರ್ಯಕೆಟ್ಟು ಹೋಗುವ ಸಂದರ್ಭದಲ್ಲಿ, ಯಾವುದನ್ನು ಹೇಳಿದರೆ ನಮ್ಮ ಹಿತವಾಗುವುದೋ ಅದೆಲ್ಲವನ್ನು ನೀನು ಅವನಿಗೆ ಹೇಳು. ಕಾರ್ಯ ಪ್ರಾರಂಭಿಸುವ ಸಮಯ ಕಳೆದು ಹೋಗುತ್ತಾ ಇದೆ. ಈಗ ತಡ ಮಾಡಬೇಡ.॥83॥
ಮೂಲಮ್ - 84
ಕುರುಷ್ವ ಸತ್ಯಂ ಮಮ ವಾರನೇಶ್ವರ
ಪ್ರತಿಶ್ರುತಂ ಧರ್ಮಮವೇಕ್ಷ್ಯ ಶಾಶ್ವತಮ್ ।
ಮಾ ವಾಲಿನಂ ಪ್ರೇತಗತೋ ಯಮಕ್ಷಯೇ
ತ್ವಮದ್ಯ ಪಶ್ಯೇರ್ಮಮ ಚೋದಿತಃ ಶರೈಃ ॥
ಅನುವಾದ
ಸುಗ್ರೀವನಲ್ಲಿ ಹೇಳು - ವಾನರರಾಜನೇ! ನೀನು ಸನಾತನ ಧರ್ಮದಲ್ಲಿ ದೃಷ್ಟಿ ಇರಿಸಿ, ತಾನು ಮಾಡಿದ ಪ್ರತಿಜ್ಞೆಯನ್ನು ಸತ್ಯವಾಗಿಸಿ ತೋರಿಸು; ಇಲ್ಲದಿದ್ದರೆ ನೀನು ಇಂದೇ ನನ್ನ ಬಾಣಗಳಿಂದ ಪ್ರೇರಿತನಾಗಿ ಪ್ರೇತಭಾವವನ್ನು ಪಡೆದು ಯಮಲೋಕದಲ್ಲಿ ವಾಲಿಯ ದರ್ಶನ ಮಾಡುವುದು ಆಗದಿರಲಿ.॥84॥
ಮೂಲಮ್ - 85
ಸ ಪೂರ್ವಜಂ ತೀವ್ರವಿವೃದ್ಧಕೋಪಂ
ಲಾಲಪ್ಯಮಾನಂ ಪ್ರಸಮೀಕ್ಷ್ಯ ದೀನಮ್ ।
ಚಕಾರ ತೀವ್ರಾಂ ಮತಿಮುಗ್ರತೇಜಾ
ಹರೀಶ್ವರೇ ಮಾನವ ವಂಶವರ್ಧನಃ ॥
ಅನುವಾದ
ಮಾನವ ವಂಶದ ವೃದ್ಧಿ ಮಾಡುವ ಉಗ್ರ ತೇಜಸ್ವೀ ಲಕ್ಷ್ಮಣನು ದುಃಖಿಯಾಗಿರುವ, ತೀವ್ರರೋಷ ಯುಕ್ತನಾದ ಹಾಗೂ ಹೆಚ್ಚು ಮಾತನಾಡುವ ಅಣ್ಣನನ್ನು ನೋಡಿದಾಗ ವಾನರರಾಜ ಸುಗ್ರೀವನ ಕುರಿತು ಕಠೋರ ಭಾವವನ್ನು ತಾಳಿದನು.॥85॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಮೂವತ್ತನೆಯ ಸರ್ಗ ಸಂಪೂರ್ಣವಾಯಿತು.॥30॥