०२८ प्रावृड्वर्णनम्

वाचनम्
ಭಾಗಸೂಚನಾ

ಶ್ರೀರಾಮನು ವರ್ಷಾಋತುವನ್ನು ವರ್ಣಿಸಿದುದು

ಮೂಲಮ್ - 1

ಸ ತದಾ ವಾಲಿನಂ ಹತ್ಯಾ ಸುಗ್ರೀವಮಭಿಷಿಚ್ಯ ಚ ।
ವಸನ್ಮಾಲ್ಯವತಃ ಪೃಷ್ಠೇ ರಾಮೋ ಲಕ್ಷ್ಮಣಮಬ್ರವೀತ್ ॥

ಅನುವಾದ

ಈ ಪ್ರಕಾರ ವಾಲಿಯ ವಧೆ ಮತ್ತು ಸುಗ್ರೀವನ ಪಟ್ಟಾಭಿಷೇಕದ ಬಳಿಕ ಮಾಲ್ಯವಂತ ಪರ್ವತದ ತಪ್ಪಲಿನಲ್ಲಿ ವಾಸಿಸುತ್ತಾ ಶ್ರೀರಾಮಚಂದ್ರನು ಲಕ್ಷ್ಮಣನಲ್ಲಿ ಹೇಳಿದನು .॥1॥

ಮೂಲಮ್ - 2

ಅಯಂ ಸ ಕಾಲಃ ಸಂಪ್ರಾಪ್ತಃ ಸಮಯೋಽದ್ಯ ಜಲಾಗಮಃ ।
ಸಂಪಶ್ಯ ತ್ವಂ ನಭೋ ಮೇಘೈಃ ಸಂವೃತಂ ಗಿರಿಸನ್ನಿಭೈಃ ॥

ಅನುವಾದ

ಸುಮಿತ್ರಾನಂದನ! ಈಗ ನೀರನ್ನು ಕೊಡುವ ಪ್ರಸಿದ್ಧ ವರ್ಷಾಕಾಲ ಬಂದಿದೆ. ನೋಡು, ಪರ್ವತದಂತೆ ಕಂಡು ಬರುವ ಮೇಘಗಳಿಂದ ಆಕಾಶವು ಮುಚ್ಚಿಹೋಗಿದೆ.॥2॥

ಮೂಲಮ್ - 3

ನವಮಾಸಧೃತಂ ಗರ್ಭಂ ಭಾಸ್ಕರಸ್ಯ ಗಭಸ್ತಿಭಿಃ ।
ಪೀತ್ವಾ ರಸಂ ಸಮುದ್ರಾಣಾಂ ದ್ಯೌಃ ಪ್ರಸೂತೇ ರಸಾಯನಮ್ ॥

ಅನುವಾದ

ಈ ಆಕಾಶರೂಪೀ ತರುಣಿಯು ಸೂರ್ಯನ ಕಿರಣಗಳಿಂದ ಸಮುದ್ರಗಳ ನೀರನ್ನು ಕುಡಿದು ಕಾರ್ತಿಕಾದಿ ಒಂಭತ್ತು ತಿಂಗಳವರೆಗೆ ಧರಿಸಿದ ಗರ್ಭರೂಪದಲ್ಲಿ ಜಲರೂಪೀ ರಸಾಯನಕ್ಕೆ ಜನ್ಮನೀಡುತ್ತಿದೆ.॥3॥

ಮೂಲಮ್ - 4

ಶಕ್ಯಮಂಬರಮಾರುಹ್ಯ ಮೇಘಸೋಪಾನಪಂಕ್ತಿಭಿಃ ।
ಕುಟಜಾರ್ಜುನಮಾಲಾಭಿರಲಂಕರ್ತುಂ ದಿವಾಕರಃ ॥

ಅನುವಾದ

ಈ ಸಮಯದಲ್ಲಿ ಮೇಘರೂಪೀ ಸೋಪಾನಪಂಕ್ತಿ (ಮೆಟ್ಟಿಲು)ಗಳಿಂದ ಆಕಾಶಕ್ಕೆ ಹತ್ತಿ ಗಿರಿಮಲ್ಲಿಕಾ ಮತ್ತು ಅರ್ಜುನ ಪುಷ್ಪಗಳಿಂದ ಸೂರ್ಯದೇವನನ್ನು ಅಲಂಕರಿಸುವುದು ಸುಲಭವಾದಂತಾಗಿದೆ.॥4॥

ಮೂಲಮ್ - 5

ಸಂಧ್ಯಾರಾಗೋತ್ಥಿತೈಸ್ತಾಮ್ರೈರಂತೇಷ್ವಪಿ ಚ ಪಾಂಡುಭಿಃ ।
ಸ್ನಿಗ್ಧೈರಭ್ರಪಟಚ್ಛೇದೈರ್ಬದ್ಧವ್ರಣಮಿವಾಂಬರಮ್ ॥

ಅನುವಾದ

ಸಂಧ್ಯಾಕಾಲದಲ್ಲಿ ಪ್ರಕಟವಾದ ಕೆಂಪಾದ ಬಣ್ಣದ ನಡುವೆ ಕಿರಣಗಳ ಶ್ವೇತ-ಸ್ನಿಗ್ಧವಾಗಿ ಕಂಡುಬರುವ ಮೇಘಗಳಿಂದ ಆಚ್ಛಾದಿತವಾದ ಆಕಾಶವು ತನ್ನ ಗಾಯಕ್ಕೆ ರಕ್ತರಂಜಿತ ಬಿಳಿಯ ಬಟ್ಟೆಯ ಪಟ್ಟಿ ಕಟ್ಟಿದಂತೆ ಅನಿಸುತ್ತಿದೆ.॥5॥

ಮೂಲಮ್ - 6

ಮಂದಮಾರುತನಿಃಶ್ವಾಸಂ ಸಂಧ್ಯಾಚಂದನರಂಜಿತಮ್ ।
ಆಪಾಂಡುಜಲದಂ ಭಾತಿ ಕಾಮಾತುರಮಿವಾಂಬರಮ್ ॥

ಅನುವಾದ

ಮಂದ-ಮಂದವಾದ ಗಾಳಿಯು ನಿಃಶ್ವಾಸದಂತೆ ಕಾಣುತ್ತಿದೆ, ಸಂಧ್ಯಾರಾಗವೆಂಬ ಕೆಂಪುಚಂದನದಿಂದ ತಿಲಕವಿಟ್ಟು, ಮೇಘರೂಪೀ ಕಪೋಲಗಳು ಸ್ವಲ್ಪ ಬೆಳ್ಳಗಾಗಿ ಕಾಣುತ್ತಿದೆ. ಹೀಗೆ ಈ ಆಕಾಶವು ಕಾಮಾತುರ ಪುರುಷನಂತೆ ಅನಿಸುತ್ತಿದೆ.॥6॥

ಮೂಲಮ್ - 7

ಏಷಾ ಘರ್ಮಪರಿಕ್ಲಿಷ್ಟಾ ನವವಾರಿಪರಿಪ್ಲುತಾ ।
ಸೀತೇವ ಶೋಕಸಂತಪ್ತಾ ಮಹೀ ಭಾಷ್ಪಂ ವಿಮುಂಚತಿ ॥

ಅನುವಾದ

ಗ್ರೀಷ್ಮಋತುವಿನ ಸೆಕೆಯಿಂದ ಕಾದಿರುವ ಈ ಭೂಮಿಯು ವರ್ಷಾಕಾಲದಲ್ಲಿ ನೂತನ ಜಲದಿಂದ ನೆನೆದು (ಸೂರ್ಯ ಕಿರಣಗಳಿಂದ ಕಾದ, ಕಣ್ಣೀರಿನಿಂದ ನೆನೆದ) ಶೋಕಸಂತಪ್ತ ಸೀತೆಯಂತೆ ಭಾಷ್ಪವಿಮೋಚನ (ಉಷ್ಣತೆಯ ತ್ಯಾಗ ಅಥವಾ ಅಶ್ರುಪಾತ) ಮಾಡುತ್ತಿದೆ.॥7॥

ಮೂಲಮ್ - 8

ಮೇಘೋದರವಿನಿರ್ಮುಕ್ತಾಃ ಕರ್ಪೂರದಲಶೀತಲಾಃ ।
ಶಕ್ಯಮಂಜಲಿಭಿಃ ಪಾತುಂ ವಾತಾಃ ಕೇತಕಗಂಧಿನಃ ॥

ಅನುವಾದ

ಮೇಘಗಳ ಮಧ್ಯದಿಂದ ಹೊರಟ ಕರ್ಪೂರದ ದಾರದಂತೆ ತಣ್ಣಗಿರುವ ಹಾಗೂ ಕೇದಿಗೆಯ ಸುಗಂಧದಿಂದ ಕೂಡಿದ ಈ ಮಳೆಗಾಲದ ಗಾಳಿಯನ್ನು ಬೊಗಸೆಯಿಂದ ಕುಡಿಯಬಹುದೇನೋ ಅನಿಸುತ್ತದೆ.॥8॥

ಮೂಲಮ್ - 9

ಏಷ ಫುಲ್ಲಾರ್ಜುನಃ ಶೈಲಃ ಕೇತಕೈರಭಿವಾಸಿತಃ ।
ಸುಗ್ರೀವ ಇವ ಶಾಂತಾರಿರ್ಧಾರಾಭಿರಭಿಷಿಚ್ಯತೇ ॥

ಅನುವಾದ

ಅರಳಿದ ಅರ್ಜುನ ವೃಕ್ಷಗಳಿಂದ ಕೂಡಿದ, ಕೇದಗೆಯ ಪರಿಮಳದಿಂದ ಸುವಾಸಿತವಾದ, ಶತ್ರುಗಳು ಶಾಂತರಾದ ಸುಗ್ರೀವನಂತೆ ಈ ಪರ್ವತವು ಜಲಧಾರೆಗಳಿಂದ ಅಭಿಷಿಕ್ತವಾಗುತ್ತಾ ಇದೆ.॥9॥

ಮೂಲಮ್ - 10

ಮೇಘಕೃಷ್ಣಾಜಿನಧರಾ ಧಾರಾಯಜ್ಞೋಪವೀತಿನಃ ।
ಮಾರುತಾಪೂರಿತಗುಹಾಃ ಪ್ರಾಧೀತಾ ಇವ ಪರ್ವತಾಃ ॥

ಅನುವಾದ

ಮೇಘರೂಪೀ ಕೃಷ್ಣಮೃಗ ಚರ್ಮ ಹಾಗೂ ಮಳೆಯ ಧಾರೆಯಂತೆ ಯಜ್ಞೋಪವೀತ ಧರಿಸಿದ, ವಾಯುವು ತುಂಬಿದ ಗುಹೆ (ಹೃದಯ)ಗಳುಳ್ಳ ಈ ಪರ್ವತವು ಬ್ರಹ್ಮಚಾರಿಯಂತೆ ವೇದಾಧ್ಯಯನ ಪ್ರಾರಂಭಿಸಿದಂತಿದೆ.॥10॥

ಮೂಲಮ್ - 11

ಕಶಾಭಿರಿವ ಹೈಮೀಭಿರ್ವಿದ್ಯುದ್ಭಿರಭಿತಾಡಿತಮ್ ।
ಅಂತಃಸ್ತನಿತರ್ಘೋಷಂ ಸವೇದನಮಿವಾಂಬರಮ್ ॥

ಅನುವಾದ

ಆಕಾಶವು ಮಿಂಚುಗಳೆಂಬ ಚಾವಟಿಗೆಯ ಏಟುತಿಂದು ಗಂಭೀರ ಮೇಘಧ್ವನಿರೂಪದಲ್ಲಿ ರೋದಿಸುತ್ತಾ ಅಂತರಂಗದ ವೇದನೆಯಿಂದ ಕೂಡಿರುವಂತಿದೆ.॥11॥

ಮೂಲಮ್ - 12

ನೀಲಮೇಘಾಶ್ರಿತಾ ವಿದ್ಯುತ್ ಸ್ಫ್ಫುರಂತೀ ಪ್ರತಿಭಾತಿ ಮೇ ।
ಸ್ಫುರಂತೀ ರಾವಣಸ್ಯಾಂಕೇ ವೈದೇಹೀವ ತಪಸ್ವಿನೀ ॥

ಅನುವಾದ

ನೀಲಮೇಘವನ್ನು ಆಶ್ರಯಿಸಿ ಪ್ರಕಾಶಿತವಾದ ಈ ವಿದ್ಯುಲ್ಲತೆಯು ರಾವಣನ ಅಂಕದಲ್ಲಿ ಒದ್ದಾಡುತ್ತಿರುವ ತಪಸ್ವಿನೀ ಸೀತೆಯಂತೆ ನನಗೆ ಕಂಡು ಬರುತ್ತಿದೆ.॥12॥

ಮೂಲಮ್ - 13

ಇಮಾಸ್ತಾ ಮನ್ಮಥವತಾಂ ಹಿತಾಃ ಪ್ರತಿಹತಾ ದಿಶಃ ।
ಅನುಲಿಪ್ತಾ ಇವ ಘನೈರ್ನಷ್ಟಗ್ರಹನಿಶಾಕರಾಃ ॥

ಅನುವಾದ

ಮೋಡಗಳ ಲೇಪದಿಂದ ಗ್ರಹ, ನಕ್ಷತ್ರ ಮತ್ತು ಚಂದ್ರನು ಅದೃಶ್ಯವಾಗಿ ನಾಶವಾದಂತಾಗಿದೆ, ಪೂರ್ವ, ಪಶ್ಚಿಮ ಮೊದಲಾದ ಭೇದಗಳೇ ಲುಪ್ತವಾದಂತಾದ ದಿಕ್ಕುಗಳು - ಪ್ರೇಯಸಿಯ ಸಂಯೋಗ ಸುಖವು ಹಿತಕರವಾಗಿ ಕಾಣುವ ಕಾಮಿಗಳಂತೆ ಕಂಡು ಬರುತ್ತಿದೆ.॥13॥

ಮೂಲಮ್ - 14

ಕ್ವಚಿದ್ಭಾಷ್ಪಾಭಿಸಂರುದ್ಧಾನ್ ವರ್ಷಾಗಮಸಮುತ್ಸುಕಾನ್ ।
ಕುಟಜಾನ್ಪಶ್ಯ ಸೌಮಿತ್ರೇ ಪುಷ್ಟಿತಾನ್ ಗಿರಿಸಾನುಷು ।
ಮಮ ಶೋಕಾಭಿಭೂತಸ್ಯ ಕಾಮಸಂದೀಪನಾನ್ಸ್ಥ್ಥಿತಾನ್ ॥

ಅನುವಾದ

ಸುಮಿತ್ರಾನಂದನ! ಈ ಪರ್ವತ ಶಿಖರದಲ್ಲಿ ಅರಳಿದ ಕುಟಜಪುಷ್ಪಗಳು ಹೇಗೆ ಶೋಭಿಸುತ್ತಿವೆ ನೋಡು. ಕೆಲವೆಡೆ ಮೊದಲ ಸಲ ಮಳೆಯಿಂದಾಗಿ ಭೂಮಿಯಿಂದ ಹೊರಟ ಆವಿಯಿಂದ ವ್ಯಾಪ್ತವಾಗಿದೆ, ಕೆಲವೆಡೆ ಮಳೆಯ ಆಗಮನದಿಂದ ಅತ್ಯಂತ ಉತ್ಸುಕ (ಹರ್ಷೋತ್ಫುಲ್ಲ)ವಾಗಿ ಕಂಡು ಬರುತ್ತಿದೆ. ನಾನಾದರೋ ಪ್ರಿಯೆಯ ವಿರಹಶೋಕದಿಂದ ಪೀಡಿತನಾಗಿದ್ದೇನೆ ಮತ್ತು ಈ ಕುಟಜಪುಷ್ಪಗಳು ನನ್ನ ಪ್ರೇಮಾಗ್ನಿಯನ್ನು ಉದ್ದೀಪಿಸುತ್ತಿವೆ.॥14॥

ಮೂಲಮ್ - 15

ರಜಃ ಪ್ರಶಾಂತಂ ಸಹಿಮೋಽದ್ಯ ವಾಯು-
ರ್ನಿದಾಘದೋಷಪ್ರಸರಾಃ ಪ್ರಶಾಂತಾಃ ।
ಸ್ಥಿತಾ ಹಿ ಯಾತ್ರಾ ವಸುಧಾಧಿಪಾನಾಂ
ಪ್ರವಾಸಿನೋ ಯಾಂತಿ ನರಾಃ ಸ್ವದೇಶಾನ್ ॥

ಅನುವಾದ

ಭೂಮಿಯ ಧೂಳು ಶಾಂತವಾಯಿತು. ಈಗ ವಾಯುವಿನಲ್ಲಿ ಶೀತಲತೆ ಬಂದಿದೆ. ಸೆಕೆಯ ದೋಷಗಳ ಪ್ರಸಾರ ನಿಂತುಹೋಯಿತು. ರಾಜರ ಯುದ್ಧಯಾತ್ರೆ ನಿಂತುಹೋಯಿತು. ಪರದೇಶಿ ಜನರು ತಮ್ಮ-ತಮ್ಮ ಊರಿಗೆ ಮರಳುತ್ತಿದ್ದಾರೆ.॥15॥

ಮೂಲಮ್ - 16

ಸಂಪ್ರಸ್ಥಿತಾ ಮಾನಸವಾಸಲುಬ್ಧಾಃ
ಪ್ರಿಯಾನ್ವಿತಾಃ ಸಂಪ್ರತಿ ಚಕ್ರವಾಕಾಃ ।
ಅಭೀಕ್ಷ್ಣವರ್ಷೋದಕವಿಕ್ಷತೇಷು
ಯಾನಾನಿ ಮಾರ್ಗೇಷು ನ ಸಂಪತಂತಿ ॥

ಅನುವಾದ

ಮಾನಸ ಸರೋವರದಲ್ಲಿ ವಾಸಿಸುವ ಲೋಭಿಹಂಸಗಳು ಅಲ್ಲಿಗೆ ಹೋಗುತ್ತಿದ್ದಾರೆ. ಈಗ ಚಕ್ರವಾಕಗಳು ತನ್ನ ಪ್ರಿಯೆ ಯೊಂದಿಗೆ ಸೇರುತ್ತಿವೆ. ನಿರಂತರ ಮಳೆಯಿಂದಾಗಿ ಮಾರ್ಗಗಳು ಹಾಳಾಗಿ ಅದರಲ್ಲಿ ರಥಗಳು ಓಡಾಡುವುದಿಲ್ಲ.॥16॥

ಮೂಲಮ್ - 17

ಕ್ವಚಿತ್ಪ್ರಕಾಶಂ ಕ್ವಚಿದಪ್ರಕಾಶಂ
ನಭಃ ಪ್ರಕೀರ್ಣಾಂಬುಧರಂ ವಿಭಾತಿ ।
ಕ್ವಚಿತ್ಕ್ವಚಿತ್ ಪರ್ವತಸಂನಿರುದ್ಧಂ
ರೂಪಂ ಯಥಾ ಶಾಂತಮಹಾರ್ಣವಸ್ಯ ॥

ಅನುವಾದ

ತರಂಗಮಾಲೆಗಳು ಶಾಂತವಾದ ಮಹಾಸಾಗರವು ಕೆಲವೆಡೆ ತೋರುವಂತೆ, ಕೆಲವೆಡೆ ಪರ್ವತ ಪಂಕ್ತಿಗಳಿಂದ ಕಾಣದಿರುವಂತೆ, ಕೆಲವು ಕಡೆ ಪರ್ವತಗಳ ಆವರಣ ಇಲ್ಲದ್ದರಿಂದ ಕಂಡುಬರುವಂತೆ, ಆಕಾಶದಲ್ಲಿ ಮೋಡಗಳು ಎಲ್ಲೆಡೆ ಹರಡಿಕೊಂಡಿವೆ. ಕೆಲವೆಡೆ ಮೋಡಗಳು ಮುಚ್ಚಿ ಹೋಗಿದ್ದರಿಂದ ಆಕಾಶವೇ ಕಾಣುವುದಿಲ್ಲ, ಕೆಲವು ಕಡೆ ಅವು ಸರಿದುದರಿಂದ ಅದು ಸ್ಪಷ್ಟವಾಗಿ ಕಾಣುತ್ತಿದೆ.॥17॥

ಮೂಲಮ್ - 18

ವ್ಯಾಮಿಶ್ರಿತಂ ಸರ್ಜಕದಂಬಪುಷ್ಪೈ-
ರ್ನವಂ ಜಲಂ ಪರ್ವತಧಾತುತಾಮ್ರಮ್ ।
ಮಯೂರಕೇಕಾಭಿರನುಪ್ರಯಾತಂ
ಶೈಲಾಪಗಾಃ ಶೀಘ್ರತರಂ ವಹಂತಿ ॥

ಅನುವಾದ

ಈಗ ಬೆಟ್ಟದ ನದಿಗಳು ಮಳೆಯ ಹೊಸ ನೀರಿನಿಂದ ವೇಗವಾಗಿ ಹರಿಯುತ್ತಿವೆ. ಆ ನೀರು ಬಿಳಿಮತ್ತಿಯ ಹೂವುಗಳಿಂದ ಮತ್ತು ಕದಂಬ ಪುಷ್ಪಗಳಿಂದ ಮಿಶ್ರಿತವಾಗಿ, ಪರ್ವತದ ಗೈರಿಕಾದಿ ಧಾತುಗಳಿಂದ ಕೆಂಪಾಗಿಹೋಗಿದೆ. ನವಿಲುಗಳ ಕೇಕಾರವ ಧ್ವನಿಯು ಆ ನೀರಿನ ಕಲ-ಕಲ ನಿನಾದವು ಅನುಸರಿಸುತ್ತಿದೆ.॥18॥

ಮೂಲಮ್ - 19

ರಸಾಕುಲಂ ಷಟ್ಪದ ಸಂನಿಕಾಶಂ
ಪ್ರಭುಜ್ಯತೇ ಜಂಬುಫಲಂ ಪ್ರಕಾಮಮ್ ।
ಅನೇಕವರ್ಣಂ ಪವನಾವಧೂತಂ
ಭೂಮೌ ಪತತ್ಯಾಮ್ರಫಲಂ ವಿಪಕ್ವಮ್ ॥

ಅನುವಾದ

ಕಪ್ಪು-ಕಪ್ಪಾದ ಭೃಂಗಗಳಂತೆ ತೋರುವ ನೇರಳೆಯ ಸರಸ ಫಲಗಳನ್ನು ಇಂದು ಜನರು ಮನಮೆಚ್ಚಿ ತಿನ್ನುತ್ತಿರುವರು. ಗಾಳಿಯ ಹೊಡೆತಕ್ಕೆ ಅಲುಗಾಡಿ ಹಣ್ಣಾದ, ಅನೇಕ ಬಣ್ಣದ ಮಾವಿನಹಣ್ಣುಗಳು ನೆಲಕ್ಕೆ ಬೀಳುತ್ತಿವೆ.॥19॥

ಮೂಲಮ್ - 20

ವಿದ್ಯುತ್ಪತಾಕಾಃ ಸಬಲಾಕಮಾಲಾಃ
ಶೈಲೇಂದ್ರ ಕೂಟಾಕೃತಿ ಸಂನಿಕಾಶಾಃ ।
ಗರ್ಜಂತಿ ಮೇಘಾಃ ಸಮುದೀರ್ಣನಾದಾ
ಮತ್ತಾ ಗಜೇಂದ್ರಾ ಇವ ಸಂಯುಗಸ್ಥಾಃ ॥

ಅನುವಾದ

ಯುದ್ಧರಂಗದಲ್ಲಿ ನಿಂತಿರುವ ಮತ್ತಗಜರಾಜನು ಗಟ್ಟಿಯಾಗಿ ಘೀಳಿಡುವಂತೆ, ಗಿರಿರಾಜನ ಶಿಖರದಂತೆ ಆಕೃತಿಯುಳ್ಳ ಮೇಘಗಳು ಜೋರಾಗಿ ಗರ್ಜಿಸುತ್ತಿವೆ. ಹೊಳೆಯುವ ಮಿಂಚುಗಳು ಈ ಮೇಘರೂಪೀ ಆನೆಗಳ ಮೇಲೆ ಪತಾಕೆಗಳಂತೆ ಹಾರಾಡುತ್ತಿವೆ ಮತ್ತು ಬೆಳ್ಳಕ್ಕಿಗಳ ಸಾಲುಗಳು ಮಾಲೆಗಳಂತೆ ಶೋಭಿಸುತ್ತಿವೆ.॥20॥

ಮೂಲಮ್ - 21

ವರ್ಷೋದಕಾಪ್ಯಾಯಿತ ಶಾದ್ವಲಾನಿ
ಪ್ರವೃತ್ತನೃತ್ತೋತ್ಸವ ಬರ್ಹಿಣಾನಿ ।
ವನಾನಿ ನಿರ್ವೃಷ್ಟಬಲಾಹಕಾನಿ
ಪಶ್ಯಾಪರಾಹ್ಣೇಷ್ವಧಿಕಂ ವಿಭಾಂತಿ ॥

ಅನುವಾದ

ನೋಡು, ಅಪರಾಹ್ಣಕಾಲದಲ್ಲಿ ಈ ವನದ ಶೋಭೆಯು ಹೆಚ್ಚುತ್ತದೆ. ಮಳೆಯ ನೀರಿನಿಂದಾಗಿ ಹಸುರಾದ ಹುಲ್ಲು ಬೆಳೆದಿದೆ. ತಂಡ-ತಂಡವಾಗಿ ನವಿಲುಗಳು ತಮ್ಮ ನೃತ್ಯೋತ್ಸವವನ್ನು ಪ್ರಾರಂಭಿಸಿವೆ ಮತ್ತು ಮೇಘಗಳು ವನದಲ್ಲಿ ನಿರಂತರವಾಗಿ ನೀರು ಸುರಿಸುತ್ತಿವೆ.॥21॥

ಮೂಲಮ್ - 22

ಸಮುದ್ವಹಂತಃ ಸಲಿಲಾತಿಭಾರಂ
ಬಲಾಕಿನೋ ವಾರಿಧರಾ ನದಂತಃ ।
ಮಹತ್ಸು ಶೃಂಗೇಷು ಮಹೀಧರಾಣಾಂ
ವಿಶ್ರಮ್ಯ ವಿಶ್ರಮ್ಯ ಪುನಃ ಪ್ರಯಾಂತಿ ॥

ಅನುವಾದ

ಬೆಳ್ಳಕ್ಕಿಗಳ ಸಾಲುಗಳಿಂದ ಶೋಭಿಸುತ್ತಿರುವ ಈ ಮೋಡಗಳು ನೀರಿನ ಭಾರವನ್ನು ಹೊರುತ್ತಾ, ಗರ್ಜಿಸುತ್ತಾ ದೊಡ್ಡ-ದೊಡ್ಡ ಪರ್ವತಗಳ ಶಿಖರಗಳಲ್ಲಿ ವಿಶ್ರಮಿಸಿಕೊಂಡು ಮುಂದರಿಯುವಂತಿದೆ.॥22॥

ಮೂಲಮ್ - 23

ಮೇಘಾಭಿಕಾಮಾ ಪರಿಸಂಪತಂತೀ
ಸಮ್ಮೋದಿತಾ ಭಾತಿ ಬಲಾಕಪಂಕ್ತಿಃ ।
ವಾತಾವಧೂತಾ ವರಪೌಂಡರೀಕೀ
ಲಂಬೇವ ಮಾಲಾ ರಚಿತಾಂಬರಸ್ಯ॥

ಅನುವಾದ

ಗರ್ಭಧಾರಣೆಗಾಗಿ ಮೇಘಗಳನ್ನು ಅಪೇಕ್ಷಿಸುತ್ತಾ, ಆನಂದಮಗ್ನವಾಗಿ ಆಕಾಶದಲ್ಲಿ ಹಾರುತ್ತಿರುವ ಬೆಳ್ಳಕ್ಕಿಗಳ ಸಾಲು ಆಕಾಶದ ಕೊರಳಲ್ಲಿ ಗಾಳಿಗೆ ಅಲುಗಾಡುತ್ತಿರುವ ಬಿಳಿಯ ಕಮಲಗಳ ಸುಂದರಮಾಲೆಯು ನೇತಾಡುತ್ತಿರುವಂತೆ ಅನಿಸುತ್ತಿದೆ.॥23॥

ಮೂಲಮ್ - 24

ಬಾಲೇಂದ್ರಗೋಪಾಂತರ ಚಿತ್ರಿತೇನ
ವಿಭಾತಿ ಭೂಮಿರ್ನವಶಾದ್ವಲೇನ ।
ಗಾತ್ರಾನುಪೃಕ್ತೇನ ಶುಕಪ್ರಭೇಣ
ನಾರೀವ ಲಾಕ್ಷೋಕ್ಷಿತಕಂಬಲೇನ ॥

ಅನುವಾದ

ಚಿಕ್ಕ-ಚಿಕ್ಕ ಮಿಣುಕು ಹುಳಗಳಿಂದ ಚಿತ್ರಿತವಾಗಿ ಕಾಣುವ ಹಚ್ಚಹಸುರಾದ ಗರಿಕೆ ಹುಲ್ಲಿನಿಂದ ಕೂಡಿದ ಭೂಮಿಯು ಗಿಳಿಯಂತೆ ಹಸಿರು ಬಣ್ಣವುಳ್ಳ, ನಡು-ನಡುವೆ ಲಾಕ್ಷಾರಸದ ಬಣ್ಣದಿಂದ (ಕೆಂಪು ಬಣ್ಣದಿಂದ) ಯುಕ್ತವಾದ ಕಂಬಳಿಯನ್ನು ಹೊದ್ದಿಕೊಂಡಿರುವ ನಾರಿಯಂತೆ ಪ್ರಕಾಶಿಸುತ್ತಿದೆ.॥24॥

ಮೂಲಮ್ - 25

ನಿದ್ರಾ ಶನೈಃ ಕೇಶವಮಭ್ಯುಪೈತಿ
ದ್ರುತಂ ನದೀ ಸಾಗರಮಭ್ಯುಪೈತಿ ।
ಹೃಷ್ಟಾ ಬಲಾಕಾ ಘನಮಭ್ಯುಪೈತಿ
ಕಾಂತಾ ಸಕಾಮಾ ಪ್ರಿಯಮಭ್ಯುಪೈತಿ ॥

ಅನುವಾದ

ಚಾತುರ್ಮಾಸ್ಯದ ಈ ಪ್ರಾರಂಭದಲ್ಲಿ ನಿದ್ರಾದೇವಿಯು ನಿಧಾನವಾಗಿ ಭಗವಾನ್ ವಿಷ್ಣುವಿನ ಬಳಿಗೆ ಹೋಗುತ್ತಿದೆ. ನದಿಯು ವೇಗವಾಗಿ ಸಮುದ್ರದ ಕಡೆಗೆ ಧಾವಿಸುತ್ತಿದೆ. ಸಂತೋಷಗೊಂಡ ಬೆಳ್ಳಕ್ಕಿಗಳು ಮೋಡಗಳ ಕಡೆಗೆ ಹಾರುತ್ತಿವೆ. ಪ್ರೇಯಸಿಯು ಕಾಮಾಸಕ್ತಳಾಗಿ ಪ್ರಿಯಕರನ ಬಳಿಗೆ ಸಾಗುತ್ತಿದ್ದಾಳೆ.॥25॥

ಮೂಲಮ್ - 26

ಜಾತಾ ವನಾಂತಾಃ ಶಿಖಿಸುಪ್ರನೃತ್ತಾ
ಜಾತಾಃ ಕದಂಬಾಃ ಸಕದಂಬಶಾಖಾಃ ।
ಜಾತಾಃ ವೃಷಾ ಗೋಷು ಸಮಾನಕಾಮಾ
ಜಾತಾ ಮಹೀ ಸಸ್ಯವನಾಭಿರಾಮಾ ॥

ಅನುವಾದ

ವನಪ್ರಾಂತಗಳು ನವಿಲುಗಳ ಸುಂದರ ದೃಶ್ಯಗಳಿಂದ ಸುಶೋಭಿತವಾಗಿದೆ. ಕದಂಬ ವೃಕ್ಷಗಳು ಕುಸುಮಗಳಿಂದಯುಕ್ತವಾದ ರೆಂಬೆಗಳಿಂದ ಕಂಗೊಳಿಸುತ್ತಿವೆ. ಹೋರಿಗಳು ಹಸುಗಳಂತೆ ಕಾಮಾಸಕ್ತವಾಗಿವೆ ಹಾಗೂ ಪೃಥಿವಿಯು ಸಸ್ಯಗಳಿಂದಲೂ, ವನಶ್ರೀಯಂದಲೂ ಕೂಡಿದ್ದು ಸುಮನೋಹರವಾಗಿ ಕಾಣುತ್ತಿದೆ.॥26॥

ಮೂಲಮ್ - 27

ವಹಂತಿ ವರ್ಷಂತಿ ನದಂತಿ ಭಾಂತಿ
ಧ್ಯಾಯಂತಿ ನೃತ್ಯಂತಿ ಸಮಾಶ್ವಸಂತಿ ।
ನದ್ಯೋ ಘನಾ ಮತ್ತಗಜಾ ವನಾಂತಾಃ
ಪ್ರಿಯಾವಿಹೀನಾಃ ಶಿಖಿನಃ ಪ್ಲವಂಗಮಾಃ ॥

ಅನುವಾದ

ನದಿಗಳು ತುಂಬಿ ಹರಿಯುತ್ತಿವೆ, ಮೋಡಗಳು ಮಳೆ ಸುರಿಸುತ್ತಿವೆ, ಮದಿಸಿದ ಆನೆಗಳು ಘೀಳಿಡುತ್ತಿವೆ. ಅರಣ್ಯಪ್ರಾಂತ್ಯವು ಶೋಭಾಸಂಪನ್ನ ವಾಗಿದೆ. ಪ್ರಿಯತಮೆಯ ಸಂಯೋಗದಿಂದ ವಂಚಿತರಾದ ವಿಯೋಗಿಗಳು ಚಿಂತಾಮಗ್ನರಾಗಿವೆ. ನವಿಲುಗಳು ಕುಣಿಯುತ್ತಿವೆ, ವಾನರರು ನಿಶ್ಚಿಂತರಾಗಿ ಸುಖಿಗಳಾಗಿದ್ದಾರೆ.॥27॥

ಮೂಲಮ್ - 28

ಪ್ರಹರ್ಷಿತಾಃ ಕೇತಕಿಪುಷ್ಪಗಂಧ-
ಮಾಘ್ರಾಯ ಮತ್ತಾ ವನನಿರ್ಝರೇಷು ।
ಪ್ರಪಾತಶಬ್ಧಾಕುಲಿತಾ ಗಜೇಂದ್ರಾಃ
ಸಾರ್ಧಂಮಯೂರೈಃ ಸಮದಾ ನದಂತಿ ॥

ಅನುವಾದ

ಕೇದಗೆ ಹೂವುಗಳ ವಾಸನೆಯನ್ನು ಆಘ್ರಾಣಿಸಿ ಪ್ರಹೃಷ್ಟರಾದ ಮದಗಜಗಳು ಅರಣ್ಯದ ಜಲಪಾತಗಳ ಶಬ್ದದಿಂದ ವ್ಯಾಕುಲ ಗೊಂಡು ಮದದಿಂದ ನೃತ್ಯಮಾಡುವ ನವಿಲುಗಳೊಡನೆ ಗರ್ಜಿಸುತ್ತಿವೆ.॥28॥

ಮೂಲಮ್ - 29

ಧಾರಾನಿಪಾತೈರಭಿಹನ್ಯಮಾನಾಃ
ಕದಂಬಶಾಖಾಸು ವಿಲಂಬಮಾನಾಃ ।
ಕ್ಷಣಾರ್ಜಿತಂ ಪುಷ್ಪರಸಾವಗಾಢಂ
ಶನೈರ್ಮದಂ ಷಟ್ಚರಣಾಸ್ತ್ಯಜಂತಿ ॥

ಅನುವಾದ

ಕದಂಬವೃಕ್ಷಗಳ ರೆಂಬೆಗಳಲ್ಲಿ ಜೋತು ಬಿದ್ದಿರುವ ದುಂಬಿಗಳು ಧಾರಾಕಾರವಾದ ಮಳೆಯ ಹೊಡೆತದಿಂದ ಆಗ ತಾನೇ ಕುಡಿದ ಪುಷ್ಪರಸದಿಂದ ಉಂಟಾದ ಮದವನ್ನು ಮೆಲ್ಲ-ಮೆಲ್ಲನೆ ತ್ಯಜಿಸುತ್ತಿವೆ.॥29॥

ಮೂಲಮ್ - 30

ಅಂಗಾರಚೂರ್ಣೋತ್ಕರ ಸಂನಿಕಾಶೈಃ
ಫಲೈಃ ಸುಪರ್ಯಾಪ್ತರಸೈಃ ಸಮೃದ್ಧೈಃ ।
ಜಂಬೂದ್ರುಮಾಣಾಂ ಪ್ರವಿಭಾಂತಿ ಶಾಖಾ
ನಿಪೀಯಮಾನಾ ಇವ ಷಟ್ಪದೌಘೈಃ ॥

ಅನುವಾದ

ಇದ್ದಲು ಪುಡಿಯ ರಾಶಿಯಂತೆ ಕಪ್ಪಾದ, ರಸದಿಂದ ತುಂಬಿರುವ ನೇರಳೆಹಣ್ಣಿನ ಭಾರದಿಂದ ಬಗ್ಗಿರುವ ರೆಂಬೆಗಳು ಭ್ರಮರಗಳ ಸಮುದಾಯವು ಅದರಲ್ಲಿ ಅಂಟಿಕೊಂಡು ರಸ ಕುಡಿಯುವಂತೆ ಅನಿಸುತ್ತದೆ.॥30॥

ಮೂಲಮ್ - 31

ತಡಿತ್ಪತಾಕಾಭಿರಂಕೃತಾನಾ-
ಮುದೀರ್ಣ ಗಂಭೀರಮಹಾರವಾಣಾಮ್ ।
ವಿಭಾಂತಿ ರೂಪಾಣಿ ಬಲಾಹಕಾನಾಂ
ರಣೋತ್ಸುಕಾನಾಮಿವ ವಾರಣಾನಾಮ್ ॥

ಅನುವಾದ

ವಿದ್ಯುಲ್ಲತೆಯ ಪತಾಕೆಗಳಂತೆ ಸಮಲಂಕೃತವಾದ, ಗರ್ವಯುಕ್ತ ಗಂಭೀರವಾಗಿ ಗರ್ಜಿಸುತ್ತಿರುವ ಮಹಾಮೇಘಗಳು ಯುದ್ಧಕ್ಕೆ ಹೊರಟಿರುವ ಮದಗಜಗಳಂತೆ ಕಾಣುತ್ತಿವೆ.॥31॥

ಮೂಲಮ್ - 32

ಮಾರ್ಗಾನುಗಃ ಶೈಲವನಾನುಸಾರೀ
ಸಂಪ್ರಸ್ಥಿತೋ ಮೇಘವರಂ ನಿಶಮ್ಯ ।
ಯುದ್ಧಾಭಿಕಾಮಃ ಪ್ರತಿನಾದಶಂಕೀ
ಮತ್ತೋ ಗಜೇಂದ್ರಃ ಪ್ರತಿಸಂನಿವೃತ್ತಃ ॥

ಅನುವಾದ

ಪರ್ವತ ತಪ್ಪಲುಗಳಲ್ಲಿ ಸಂಚರಿಸುವ ಮದಮತ್ತ ಗಜರಾಜನು ತನ್ನ ಪ್ರತಿದ್ವಂದ್ವಿಯೊಂದಿಗೆ ಯುದ್ಧದ ಇಚ್ಛೆ ಯಿಂದ ಮುಂದರಿಯುತ್ತಿರುವಾಗ, ಹಿಂದಿನಿಂದ ಮೇಘ ಗರ್ಜನೆಯನ್ನು ಕೇಳಿ ಪ್ರತಿಸ್ಪರ್ಧಿ ಆನೆಯ ಗರ್ಜನೆಯೋ ಎಂದು ತಿಳಿದು ಹಿಂದಿರುಗಿ ನೋಡತೊಡಗಿತು.॥32॥

ಮೂಲಮ್ - 33

ಕ್ವಚಿತ್ಪ್ರಗೀತಾ ಇವ ಷಟ್ಪದೌಘೈಃ
ಕ್ವಚಿತ್ಪ್ರನೃತ್ತಾ ಇವ ನೀಲಕಂಠೈಃ ।
ಕ್ವಚಿತ್ಪ್ರಮತ್ತಾ ಇವ ವಾರಣೇಂದ್ರೈ-
ರ್ವಿಭಾಂತ್ಯನೇಕಾಶ್ರಯಿಣೋ ವನಾಂತಾಃ ॥

ಅನುವಾದ

ಕೆಲವೆಡೆ ಭ್ರಮರಗಳು ಗುಂಜಾರವ ಮಾಡುತ್ತಿವೆ, ಕೆಲವೆಡೆ ನವಿಲುಗಳು ಕುಣಿಯುತ್ತಿವೆ. ಕೆಲವೆಡೆ ಗಜರಾಜರು ಮತ್ತರಾಗಿ ಸಂಚರಿಸುತ್ತಿವೆ, ಹೀಗೆ ಈ ಅರಣ್ಯಪ್ರಾಂತವು ಅನೇಕ ಭಾವಗಳ ಆಶ್ರಯವಾಗಿ ಶೋಭಿಸುತ್ತಿದೆ.॥33॥

ಮೂಲಮ್ - 34

ಕದಂಬಸರ್ಜಾರ್ಜುನಕಂದಲಾಢ್ಯಾ
ವನಾಂತ ಭೂಮಿರ್ಮಧುವಾರಿಪೂರ್ಣಾ ।
ಮಯೂರಮತ್ತಾಭಿರುತಪ್ರನೃತ್ತೈ -
ರಾಪಾನಭೂಮಿಪ್ರತಿಮಾ ವಿಭಾತಿ ॥

ಅನುವಾದ

ಈಚಲು, ಹೊನ್ನೆ, ಅರ್ಜುನ ವೃಕ್ಷಗಳ ಹೂವುಗಳಿಂದ, ನೆಲತಾವರೆಗಳಿಂದ ಸಂಪನ್ನ ವಾದ ವನದ ಆ ಪ್ರಾಂತವು ಮಧುಜಲದಿಂದ ತುಂಬಿದ್ದು, ಮದಯುಕ್ತ ನವಿಲುಗಳ ಕಲರವ ಮತ್ತು ನೃತ್ಯಗಳಿಂದ ಕೂಡಿದ್ದು ಮಧುಶಾಲೆಯಂತೆ ಕಂಡು ಬರುತ್ತಿದೆ.॥34॥

ಮೂಲಮ್ - 35

ಮುಕ್ತಾಸಮಾಭಂ ಸಲಿಲಂ ಪತದ್ ವೈ
ಸುನಿರ್ಮಲಂ ಪತ್ರಪುಟೇಷು ಲಗ್ನಮ್ ।
ಹೃಷ್ಟಾ ವಿವರ್ಣಚ್ಛದನಾ ವಿಹಂಗಾಃ
ಸುರೇಂದ್ರದತ್ತಂ ತೃಷಿತಾಃ ಪಿಬಂತಿ ॥

ಅನುವಾದ

ಆಕಾಶದಿಂದ ಬೀಳುವ ಮುತ್ತಿನಂತೆ ಸ್ವಚ್ಛ ಹಾಗೂ ನಿರ್ಮಲ ನೀರು ಎಲೆಗಳ ದೊನ್ನೆಗಳಲ್ಲಿ ಸಂಚಿತವಾಗಿರುವುದನ್ನು ನೋಡಿ ಬಾಯಾರಿದ ಪಕ್ಷಿಗಳು ಹರ್ಷಗೊಂಡು ದೇವೇಂದ್ರನು ಕೊಟ್ಟಿರುವ ಆ ನೀರನ್ನು ಕುಡಿಯುತ್ತಿವೆ. ಮಳೆಯಿಂದ ನೆನೆದ ಕಾರಣ ಅವುಗಳ ರೆಕ್ಕೆಗಳು ಬೇರೆ-ಬೇರೆ ಬಣ್ಣಗಳಿಂದ ಕಂಗೊಳಿಸುತ್ತಿವೆ.॥35॥

ಮೂಲಮ್ - 36

ಷಟ್ಪಾದತಂತ್ರೀ ಮಧುರಾಭಿಧಾನಂ
ಪ್ಲವಂಗಮೋದೀರಿತಕಂಠತಾಲಮ್ ।
ಆವಿಷ್ಕೃತಂ ಮೇಘಮೃದಂಗನಾದೈ-
ರ್ವನೇಷು ಸಂಗೀತಮಿವ ಪ್ರವೃತ್ತಮ್ ॥

ಅನುವಾದ

ಭ್ರಮರರೂಪೀ ವೀಣೆಯು ಮಧುರವಾಗಿ ಝೇಂಕರಿಸುತ್ತಿದೆ. ಕಪ್ಪೆಗಳ ಧ್ವನಿಗಳು ಕಂಠತಾಳಗಳಂತೆ ಅನಿಸುತ್ತದೆ. ಮೇಘಗಳ ಗರ್ಜನೆ ರೂಪದಲ್ಲಿ ಮೃದಂಗ ನುಡಿಯುತ್ತಿದೆ. ಈ ಪ್ರಕಾರ ವನಗಳಲ್ಲಿ ಸಂಗೀತೋತ್ಸವವು ಪ್ರಾರಂಭವಾದಂತಿದೆ.॥36॥

ಮೂಲಮ್ - 37

ಕ್ವಚಿತ್ಪ್ರನೃತ್ತೈಃ ಕ್ವಚಿದುನ್ನದದ್ಭಿಃ
ಕ್ವಚಿಚ್ಚ ವೃಕ್ಷಾಗ್ರನಿಷಣ್ಣಕಾಯೈಃ ।
ವ್ಯಾಲಂಬ ಬರ್ಹಾಭರಣೈರ್ಮಯೂರೈ-
ರ್ವನೇಷು ಸಂಗೀತಮಿವ ಪ್ರವೃತ್ತಮ್ ॥

ಅನುವಾದ

ಕೆಲವೆಡೆ ವಿಶಾಲ ಪಂಖಗಳ ಆಭೂಷಣಗಳಿಂದ ವಿಭೂಷಿತ ನವಿಲುಗಳು ವನಗಳಲ್ಲಿ ಕುಣಿಯುತ್ತಿವೆ. ಕೆಲವೆಡೆ ಜೋರಾಗಿ ಕೂಗುತ್ತಿವೆ, ಕೆಲವೆಡೆ ಮರಗಳ ಟೊಂಗೆಗಳ ಮೇಲೆ ಶರೀರದ ಭಾರವನ್ನು ಹಾಕಿ ಕುಳಿತಿರುವವು. ಹೀಗೆ ಅವುಗಳು ಸಂಗೀತ-ನೃತ್ಯದ ಆಯೋಜನ ಮಾಡಿದಂತಿದೆ.॥37॥

ಮೂಲಮ್ - 38

ಸ್ವನೈರ್ಘನಾನಾಂ ಪ್ಲವಗಾಃ ಪ್ರಬುದ್ಧಾ
ವಿಹಾಯ ನಿದ್ರಾಂ ಚಿರಸಂ ನಿರುದ್ಧಾಮ್ ।
ಅನೇಕರೂಪಾಕೃತಿವರ್ಣನಾದಾ
ನವಾಂಬುುಧಾರಾಭಿಹತಾ ನದಂತಿ ॥

ಅನುವಾದ

ಮೇಘಗಳ ಗರ್ಜನೆ ಕೇಳಿ ಚಿರಕಾಲದಿಂದ ತಡೆದಿರುವ ನಿದ್ದೆಯನ್ನು ತ್ಯಜಿಸಿ, ಎಚ್ಚರಗೊಂಡು ಅನೇಕ ಪ್ರಕಾರದ ರೂಪ, ಆಕಾರ, ವರ್ಣ ಮತ್ತು ಧ್ವನಿಗಳಿದ್ದ ಕಪ್ಪೆಗಳು ನೂತನ ಜಲದಿಂದ ನೆನೆದು ಜೋರುಜೋರಾಗಿ ಕೂಗುತ್ತಿವೆ.॥38॥

ಮೂಲಮ್ - 39

ನದ್ಯಃ ಸಮುದ್ವಾಹಿತಚಕ್ರವಾಕಾ-
ಸ್ತಟಾನಿ ಶೀರ್ಣಾನ್ಯಪವಾಹಯಿತ್ವಾ ।
ದೃಪ್ತಾ ವನಪ್ರಾವೃತಪೂರ್ಣಭೋಗಾ-
ದೃತಂ ಸ್ವಭರ್ತಾರಮುಪೋಪಯಾಂತಿ ॥

ಅನುವಾದ

ಕಾಮಾತುರ ಯುವತಿಯರಂತೆ ದರ್ಪ ತುಂಬಿದ ನದಿಗಳು ತಮ್ಮ ವೃಕ್ಷದ ಮೇಲೆ ಸುಳಿಗಳನ್ನು ಹೊತ್ತುಕೊಂಡಿವೆ. ನೂತನವಾಗಿ ಬಂದ ನೀರಿನ ಪೂರ್ಣ ಪ್ರವಾಹವೆಂಬ ಕುಪ್ಪಸಗಳಿಂದ ಆವೃತವಾದ ದೇಹದಿಂದ, ಜೀರ್ಣವಾಗಿದ್ದ ತೀರಪ್ರದೇಶವನ್ನು ಕೊಚ್ಚಿಕೊಂಡು ಪತಿಯಾದ ಸಮುದ್ರರಾಜನ ಕಡೆಗೆ ರಭಸದಿಂದ ಧಾವಿಸುತ್ತಿವೆ.॥39॥

ಮೂಲಮ್ - 40

ನೀಲೇಷು ನೀಲಾ ನವವಾರಿಪೂರ್ಣಾ
ಮೇಘೇಷು ಮೇಘಾಃ ಪ್ರವಿಭಾಂತಿ ಸಕ್ತಾಃ ।
ದವಾಗ್ನಿ ದಗ್ಧೇಷು ದವಾಗ್ನಿದಗ್ಧಾಃ
ಶೈಲೇಷು ಶೈಲಾ ಇವ ಬದ್ಧಮೂಲಾಃ ॥

ಅನುವಾದ

ನೂತನವಾದ ನೀರಿನಿಂದ ಪೂರ್ಣವಾದ ನೀಲ ಮೇಘಗಳು ನೀಲವಾಗಿರುವ ಇತರ ಮೇಘಗಳಲ್ಲಿ ಸೇರಿಕೊಂಡು, ಕಾಡುಗಿಚ್ಚಿನಿಂದ ಸುಟ್ಟುಹೋಗಿರುವ ಇತರ ಪರ್ವತಗಳು ದೃಢವಾಗಿ ಬಂದು ಸೇರಿಕೊಂಡಂತೆ ಪ್ರಕಾಶಿಸುತ್ತಿವೆ.॥40॥

ಮೂಲಮ್ - 41

ಪ್ರಮತ್ತಸಂನಾದಿತಬರ್ಹಿಣಾನಿ
ಸಶಕ್ರಗೋಪಾಕುಲಶಾದ್ವಲಾನಿ ।
ಚರಂತಿ ನೀಪಾರ್ಜುನವಾಸಿತಾನಿ
ಗಜಾಃ ಸುರಮ್ಯಾಣಿ ವನಾಂತರಾಣಿ ॥

ಅನುವಾದ

ಹರ್ಷಾತಿರೇಕದಿಂದ ಧ್ವನಿಮಾಡುತ್ತಿರುವ ನವಿಲುಗಳಿಂದಲೂ, ವಜ್ರಕೀಟಗಳಿಂದ ವ್ಯಾಪ್ತವಾದ ಗರಿಕೆ ಹುಲ್ಲುಗಳ ಪ್ರದೇಶದಿಂದಲೂ, ಕದಂಬ, ಅರ್ಜುನ ವೃಕ್ಷಗಳ ಸುವಾಸನೆಯಿಂದ ಕೂಡಿದ ಸುರಮ್ಯವಾದ ಅರಣ್ಯಗಳಲ್ಲಿ ಆನೆಗಳು ಸ್ವೇಚ್ಛೆಯಿಂದ ಸಂಚರಿಸುತ್ತಿವೆ.॥41॥

ಮೂಲಮ್ - 42

ನವಾಂಬುಧಾರಾಹತಕೇಸರಾಣಿ
ದ್ರುತಂ ಪರಿತ್ಯಜ್ಯ ಸರೋರುಹಾಣಿ ।
ಕದಂಬಪುಷ್ಪಾಣಿ ಸಕೇಸರಾಣಿ
ನವಾನು ಹೃಷ್ಟಾ ಭ್ರಮರಾಃ ಪಿಬಂತಿ ॥

ಅನುವಾದ

ದುಂಬಿಗಳು ನೂತನ ಜಲಧಾರೆ ಯಿಂದ ವಿನಾಶ ಹೊಂದಿದ ಕೇಸರವುಳ್ಳ ಕಮಲಪುಷ್ಪಗಳನ್ನು ಕೂಡಲೇ ತ್ಯಜಿಸಿ, ಕೇಸರಗಳುಳ್ಳ ಈಚಲ ಹೂವುಗಳ ರಸವನ್ನು ಪಾನಮಾಡುತ್ತಿವೆ.॥42॥

ಮೂಲಮ್ - 43

ಮತ್ತಾ ಗಜೇದ್ರಾ ಮುದಿತಾ ಗವೇಂದ್ರಾ
ವನೇಷು ವಿಕ್ರಾಂತತರಾ ಮೃಗೇಂದ್ರಾಃ ।
ರಮ್ಯಾ ನಗೇಂದ್ರಾ ನಿಭೃತಾ ನರೇಂದ್ರಾಃ
ಪ್ರಕ್ರೀಡಿತೋ ವಾರಿಧರೈಃ ಸುರೇಂದ್ರಃ ॥

ಅನುವಾದ

ಈ ಅರಣ್ಯದಲ್ಲಿ ಗಜೇಂದ್ರ (ಆನೆಗಳು) ಮತ್ತರಾಗುತ್ತಿದ್ದಾವೆ. ಗವೇಂದ್ರ (ಗೂಳಿಗಳು) ಆನಂದಮಗ್ನವಾಗಿವೆ, ಮೃಗೇಂದ್ರ (ಸಿಂಹಗಳು ಅತ್ಯಂತ ಪರಾಕ್ರಮ ಪ್ರಕಟಿಸುತ್ತಿವೆ. ನಗೇಂದ್ರ (ದೊಡ್ಡ-ದೊಡ್ಡ ಪರ್ವತ)ಗಳು ರಮಣೀಯವಾಗಿ ಕಂಡು ಬರುತ್ತಿವೆ. ನರೇಂದ್ರ (ರಾಜ)ರು ಯುದ್ಧದ ಕುರಿತಾದ ಉತ್ಸಾಹ ಬಿಟ್ಟು ಮೌನವಾಗಿ ಕುಳಿತಿದ್ದಾರೆ. ಸುರೇಂದ್ರ(ಇಂದ್ರ)ನು ಮೇಘಗಳೊಡನೆ ಕ್ರೀಡಿಸುತ್ತಿರುವನು.॥43॥

ಮೂಲಮ್ - 44

ಮೇಘಾಃ ಸಮುದ್ಭೂತಸಮುದ್ರನಾದಾ
ಮಹಾಜಲೌಘೈರ್ಗಗನಾವಲಂಬಾಃ ।
ನದೀಸ್ತಟಾಕಾನಿ ಸರಾಂಸಿ ವಾಪೀ-
ರ್ಮಹೀಂ ಚ ಕೃತ್ಸ್ನಾಮಪವಾಹಯಂತಿ ॥

ಅನುವಾದ

ಮೇಘಗಳು ಸಮುದ್ರದಂತೆ ಭೋರ್ಗರೆಯುತ್ತಾ ಜಲರಾಶಿಯನ್ನು ತುಂಬಿಕೊಂಡು ಅಂತರಿಕ್ಷವನ್ನು ಆಶ್ರಯಿಸಿ ನದೀ-ನದ-ತಟಾಕ-ಸರಸ್ಸುಗಳನ್ನು, ವಾಪೀ-ಕೂಪಗಳನ್ನು ನೀರಿನಿಂದ ತುಂಬಿಸಿ ಭೂಮಿಯನ್ನು ನೀರಿನಿಂದ ಮುಳುಗಿಸಿಬಿಡುತ್ತಿವೆ.॥44॥

ಮೂಲಮ್ - 45

ವರ್ಷಪ್ರವೇಗಾ ವಿಪುಲಾಃ ಪತಂತಿ
ಪ್ರವಾಂತಿ ವಾತಾಃ ಸಮುದೀರ್ಣವೇಗಾಃ ।
ಪ್ರಣಷ್ಟಕೂಲಾಃ ಪ್ರವಹಂತಿ ಶೀಘ್ರಂ
ನದ್ಯೋ ಜಲಂ ವಿಪ್ರತಿಪನ್ನಮಾರ್ಗಾಃ ॥

ಅನುವಾದ

ಈಗ ಧಾರಾಕಾರ ಮಳೆಯಾಗುತ್ತಿದೆ, ಗಾಳಿಯು ವೇಗವಾಗಿ ಬೀಸುತ್ತಿದೆ. ನದಿಗಳು ತಮ್ಮ ದಾರಿಯನ್ನು ತಡೆದಿರುವ ತೀರಪ್ರದೇಶಗಳನ್ನು ಕೊಚ್ಚಿಹಾಕಿ ಅತ್ಯಂತ ರಭಸದಿಂದ ಹರಿಯುತ್ತಿವೆ.॥45॥

ಮೂಲಮ್ - 46

ನರೈರ್ನರೇಂದ್ರಾ ಇವ ಪರ್ವತೇಂದ್ರಾಃ
ಸುರೇಂದ್ರದತ್ತೈಃ ಪವನೋಪನೀತೈಃ ।
ಘನಾಂಬುಕುಂಭೈರಭಿಷಿಚ್ಯಮಾನಾ
ರೂಪಂ ಶ್ರಿಯಂಸ್ವಾಮಿವ ದರ್ಶಯಂತಿ ॥

ಅನುವಾದ

ಮನುಷ್ಯರು ಜಲಕಲಶಗಳಿಂದ ಮಹಾರಾಜರ ಅಭಿಷೇಕ ಮಾಡುವಂತೆಯೇ ಇಂದ್ರನು ಕೊಟ್ಟಿರುವ, ವಾಯುವು ಹಾರಿಸಿಕೊಂಡು ಬಂದ ಮೇಘರೂಪೀ ಕಲಶಗಳಿಂದ ಅಭಿಷಿಕ್ತವಾದ ಪರ್ವತರಾಜನು ತನ್ನ ನಿರ್ಮಲರೂಪ ಹಾಗೂ ಶೋಭಾ ಸಂಪತ್ತನ್ನು ಪ್ರದರ್ಶಿಸಿದಂತಿದೆ.॥46॥

ಮೂಲಮ್ - 47

ಘನೋಪಗೂಢಂ ಗಗನಂ ನ ತಾರಾ
ನ ಭಾಸ್ಕರೋ ದರ್ಶನಮಭ್ಯುಪೈತಿ ।
ನವೈರ್ಜಲೌಘೈರ್ಧರಣೀ ವಿತೃಪ್ತಾ
ತಮೋವಿಲಿಪ್ತಾ ನ ದಿಶಃ ಪ್ರಕಾಶಾಃ॥

ಅನುವಾದ

ಮೇಘಗಳಿಂದ ಸಮಸ್ತ ಆಕಾಶವು ಆಚ್ಛಾದಿತವಾಗಿ ರಾತ್ರೆಯಲ್ಲಿ ನಕ್ಷತ್ರ ಗಳಾಗಲಿ, ಹಗಲಿನಲ್ಲಿ ಸೂರ್ಯನಾಗಲೀ ಕಾಣುತ್ತಿಲ್ಲ. ಹೊಸ ನೀರಿನಿಂದ ಭೂಮಿಯು ಪೂರ್ಣ ತಣಿದಿದೆ. ದಿಕ್ಕುಗಳಲ್ಲಿ ಅಂಧಕಾರ ತುಂಬಿ ಪ್ರಕಾಶಿಸುತ್ತಿಲ್ಲ ಅವುಗಳ ಸ್ಪಷ್ಟಜ್ಞಾನವಾಗುವುದಿಲ್ಲ.॥47॥

ಮೂಲಮ್ - 48

ಮಹಾಂತಿ ಕೂಟಾನಿ ಮಹೀಧರಾಣಾಂ
ಧಾರಾವಿಧೌ ತಾನ್ಯಧಿಕಂ ವಿಭಾಂತಿ ।
ಮಹಾಪ್ರಮಾಣೈರ್ವಿಪುಲೈಃ ಪ್ರಪಾತೈ-
ರ್ಮುಕ್ತಾಕಲಾಪೈರಿವ ಲಂಬಮಾನೈಃ ॥

ಅನುವಾದ

ಜಲಧಾರೆಯಿಂದ ತೊಳೆದು ಹೋದ ಪರ್ವತಗಳ ವಿಶಾಲ ಶಿಖರಗಳು ಅನೇಕ ಜಲಪಾತಗಳಿಂದಾಗಿ ಇಳಿಬಿಟ್ಟ ಮುತ್ತಿನ ಹಾರಗಳಂತೆ ಹೆಚ್ಚು ಶೋಭಿಸುತ್ತಿವೆ.॥48॥

ಮೂಲಮ್ - 49

ಶೈಲೋಪಲಪ್ರಸ್ಖಲಮಾನವೇಗಾಃ
ಶೈಲೋತ್ತಮಾನಾಂ ವಿಪುಲಾಃ ಪ್ರಪಾತಾಃ ।
ಗುಹಾಸು ಸಂನಾದಿತಬರ್ಹಿಣಾಸು
ಹಾರಾ ವಿಕೀರ್ಯಂತ ಇವಾವಭಾಂತಿ ॥

ಅನುವಾದ

ಪರ್ವತದ ಬಂಡೆಗಳ ಮೇಲೆ ಬೀಳುವುದರಿಂದ ವೇಗವನ್ನು ಕಳೆದುಕೊಂಡು, ಶ್ರೇಷ್ಠಪರ್ವತಗಳಲ್ಲಿನ ಅನೇಕ ಜಲಪಾತಗಳು ನವಿಲುಗಳ ಕೂಗಿನಿಂದ ನಿನಾದಿತವಾಗಿ ಗುಹೆಗಳಲ್ಲಿ ಮುತ್ತಿನ ಹಾರಗಳಂತೆ ನೀರ ಹನಿಗಳು ಕಂಡು ಬರುತ್ತಿವೆ.॥49॥

ಮೂಲಮ್ - 50

ಶೀಘ್ರಪ್ರವೇಗಾ ವಿಪುಲಾಃ ಪ್ರಪಾತಾ
ನಿರ್ಧೌತ ಶೃಂಗೋಪತಲಾ ಗಿರೀಣಾಮ್ ।
ಮುಕ್ತಾಕಲಾಪಪ್ರತಿಮಾಃ ಪತಂತೋ
ಮಹಾಗುಹೋತ್ಸಂಗತಲೈರ್ಧ್ರಿಯಂತೇ ॥

ಅನುವಾದ

ನೋಡಲು ಮುಕ್ತಾಮಾಲೆಗಳಂತೆ ಕಂಡುಬರುವ, ಶೀಘ್ರಗಾಮಿ ಅಸಂಖ್ಯ ಜಲಧಾರೆಗಳು ಪರ್ವತದ ಶಿಖರಗಳನ್ನು ತೊಳೆದು ಸ್ವಚ್ಛಗೊಳಿಸುತ್ತಾ ಜಲಪಾತವಾಗಿ ಧುಮುಕುವ ಪ್ರವಾಹವನ್ನು ದೊಡ್ಡ-ದೊಡ್ಡ ಗುಹೆಗಳು ತಮ್ಮ ಮಡಿಲಲ್ಲಿ ಧರಿಸಿಕೊಳ್ಳುತ್ತಿವೆ.॥50॥

ಮೂಲಮ್ - 51

ಸುರತಾಮರ್ದವಿಚ್ಛಿನ್ನಾಃ ಸ್ವರ್ಗಸ್ತ್ರೀಹಾರಮೌಕ್ತಿಕಾಃ ।
ಪತಂತೀ ಚಾತುಲಾ ದಿಕ್ಷು ತೋಯಧಾರಾಃ ಸಮಂತತಃ ॥

ಅನುವಾದ

ಸುರತ ಕ್ರೀಡೆಯಲ್ಲಿ ಪರಸ್ಪರ ಸಂಘರ್ಷದಿಂದ ಕಿತ್ತುಹೋದ ಸ್ವರ್ಗದ ಸ್ತ್ರೀಯರ ಮುತ್ತಿನ ಹಾರಗಳ ಮುಕ್ತಾಮಣಿಗಳೋ ಎಂಬಂತೆ ಎಲ್ಲ ದಿಕ್ಕುಗಳಲ್ಲಿ ವ್ಯಾಪ್ತವಾದ ಜಲಧಾರೆಗಳು ಸುತ್ತಲೂ ಬೀಳುತ್ತಿವೆ.॥51॥

ಮೂಲಮ್ - 52

ವಿಲೀಯಮಾನೈರ್ವಿಹಗೈರ್ನಿಮೀಲದ್ಭಿಶ್ಚ ಪಂಕಜೈಃ ।
ವಿಕಸಂತ್ಯಾ ಚ ಮಾಲತ್ಯಾ ಗತೋಽಸ್ತಂ ಜ್ಞಾಯತೇ ರವಿಃ ॥

ಅನುವಾದ

ಗೂಡುಗಳಲ್ಲಿ ಸೇರಿಕೊಳ್ಳುತ್ತಿರುವ ಪಕ್ಷಿಗಳಿಂದಲೂ, ಮುಚ್ಚಿಕೊಳ್ಳುತ್ತಿರುವ ಕಮಲದಳಿಂದಲೂ, ಅರಳುತ್ತಿರುವ ಮಾಲತೀ ಕುಸುಮಗಳಿಂದಲೂ, ಸೂರ್ಯನು ಅಸ್ತನಾಗುತ್ತಿರುವುದು ತಿಳಿದುಬರುತ್ತದೆ.॥52॥

ಮೂಲಮ್ - 53

ವೃತ್ತಾ ಯಾತ್ರಾ ನರೇಂದ್ರಾಣಾಂ ಸೇನಾ ಪಥ್ಯೇವವರ್ತತೇ ।
ವೈರಾಣಿ ಚೈವ ಮಾರ್ಗಾಶ್ಚ ಸಲಿಲೇನ ಸಮೀಕೃತಾಃ ॥

ಅನುವಾದ

ರಾಜರ ಯುದ್ಧಯಾತ್ರೆಯು ನಿಂತಿದೆ, ಸೈನ್ಯವೂ ಹಿಂದಿರುಗುತ್ತಿದೆ. ಮಳೆಗಾಲದ ನೀರಿನಿಂದಾಗಿ ರಾಜರ ವೈರವನ್ನು ಶಾಂತವಾಗಿಸಿತು ಮತ್ತು ಮಾರ್ಗವನ್ನು ತಡೆದುಬಿಟ್ಟಿದೆ. ಹೀಗೆ ವೈರ ಮತ್ತು ಮಾರ್ಗ ಎರಡರ ಸ್ಥಿತಿಯೂ ಒಂದೇ ರೀತಿಯಾಗಿಸಿದೆ.॥53॥

ಮೂಲಮ್ - 54

ಮಾಸಿ ಪ್ರೋಷ್ಠಪದೇ ಬ್ರಹ್ಮ ಬ್ರಾಹ್ಮಣಾನಾಂ ವಿವಕ್ಷತಾಮ್ ।
ಅಯಮಧ್ಯಾಯಸಮಯಃ ಸಾಮಗಾನಾಮುಪಸ್ಥಿತಃ ॥

ಅನುವಾದ

ಭಾದ್ರಪದಮಾಸ ಬಂದಿದೆ, ಇದು ವೇದಾಧ್ಯಯನದ ಇಚ್ಛೆಯುಳ್ಳ ಸಾಮಬ್ರಾಹ್ಮಣರಿಗೆ ಉಪಕ್ರಮದ ಸಮಯ ಉಪಸ್ಥಿತವಾಗಿದೆ. ವೇದಾಧ್ಯಯನಕ್ಕೆ ಇದೇ ಸಮಯವಾಗಿದೆ.॥54॥

ಮೂಲಮ್ - 55

ನಿವೃತ್ತಕರ್ಮಾಯತನೋ ನೂನಂ ಸಂಚಿತ ಸಂಚಯಃ ।
ಆಷಾಢೀಮಭ್ಯುಪಗತೋ ಭರತಃ ಕೋಸಲಾಧಿಪಃ ॥

ಅನುವಾದ

ಕೋಸಲದೇಶದ ರಾಜಾ ಭರತನು ನಾಲ್ಕು ತಿಂಗಳಿಗಾಗಿ ಆವಶ್ಯಕ ವಸ್ತುಗಳನ್ನು ಸಂಗ್ರಹಿಸಿ ಕಳೆದ ಆಷಾಢದ ಪೂರ್ಣಿಮೆಗೆ ಖಂಡಿತವಾಗಿ ಯಾವುದಾದರೂ ಉತ್ತಮ ವ್ರತದ ದೀಕ್ಷೆ ಕೈಗೊಂಡಿರಬಹುದು.॥55॥

ಮೂಲಮ್ - 56

ನೂನಮಾಪೂರ್ಯಮಾಣಾಯಾಃ ಸರಯ್ವಾ ವರ್ಧತೇ ರಯಃ ।
ಮಾಂ ಸಮೀಕ್ಷ್ಯ ಸಮಾಯಾಂತಮಯೋಧ್ಯಾಯಾ ಇವ ಸ್ವನಃ ॥

ಅನುವಾದ

ನಾನು ವನಕ್ಕೆ ಬರುವಾಗ ಅಯೋಧ್ಯೆಯ ಜನರು ಆರ್ತನಾದ ಮಾಡಿದಂತೆಯೇ ಈಗ ಮಳೆಗಾಲದ ನೀರಿನಿಂದ ಪರಿಪೂರ್ಣವಾದ ಸರಯೂ ನದಿಯ ವೇಗವೂ ಅವಶ್ಯವಾಗಿ ಹೆಚ್ಚಾಗಿರಬಹುದು.॥56॥

ಮೂಲಮ್ - 57

ಇಮಾಃ ಸ್ಫೀತಗುಣಾ ವರ್ಷಾಃ ಸುಗ್ರೀವಃ ಸುಖಮಶ್ನುತೇ ।
ವಿಜಿತಾರಿಃ ಸದಾರಶ್ಚ ರಾಜ್ಯೇ ಮಹತಿ ಚ ಸ್ಥಿತಃ ॥

ಅನುವಾದ

ಈ ವರ್ಷಾಋತು ಅನೇಕ ಗುಣಗಳಿಂದ ಸಂಪನ್ನವಾಗಿದೆ. ಈಗ ಸುಗ್ರೀವನು ತನ್ನ ಶತ್ರುಗಳನ್ನು ಸೋಲಿಸಿ ವಿಶಾಲ ವಾನರ ರಾಜ್ಯದಲ್ಲಿ ಪಟ್ಟಾಭಿಷಿಕ್ತನಾಗಿ, ತನ್ನ ಪತ್ನಿಯೊಂದಿಗೆ ಇದ್ದು ಸುಖ ಭೋಗಿಸುತ್ತಿರಬಹುದು.॥57॥

ಮೂಲಮ್ - 58

ಅಹಂ ತು ಹೃತದಾರಶ್ಚ ರಾಜ್ಯಾಚ್ಚ ಮಹತಶ್ಚ್ಯುತಃ ।
ನದೀಕೂಲಮಿವ ಕ್ಲಿನ್ನಮವಸೀದಾಮಿ ಲಕ್ಷ್ಮಣ ॥

ಅನುವಾದ

ಆದರೆ ಲಕ್ಷ್ಮಣ! ನಾನು ನನ್ನ ಮಹಾರಾಜ್ಯದಿಂದ ಭಷ್ಟನೇ ಆಗಿರುವೆನು, ನನ್ನ ಪತ್ನಿಯನ್ನು ಕದ್ದುಕೊಂಡು ಹೋಗಿರುವನು, ಇದರಿಂದ ನೀರಿನಿಂದ ನೆನೆದ ನದಿಯ ದಡದಂತೆ ಕಷ್ಟಪಡುತ್ತಿದ್ದೇನೆ.॥58॥

ಮೂಲಮ್ - 59

ಶೋಕಶ್ಚ ಮಮ ವಿಸ್ತೀರ್ಣೋ ವರ್ಷಾಶ್ಚ ಭೃಶದುರ್ಗಮಾಃ ।
ರಾವಣಶ್ಚ ಮಹಾನ್ ಶತ್ರುರಪಾರಃ ಪ್ರತಿಭಾತಿ ಮೇ ॥

ಅನುವಾದ

ನನ್ನ ಶೋಕ ಹೆಚ್ಚಾಗಿದೆ. ನನಗೆ ವರ್ಷಾಕಾಲದ ದಿನಗಳನ್ನು ಕಳೆಯುವುದು ಅತ್ಯಂತ ಕಠಿಣವಾಗಿದೆ. ನನ್ನ ಮಹಾಶತ್ರು ರಾವಣನೂ ಕೂಡ ಆಜೇಯನೆಂದು ನನಗೆ ಅನಿಸುತ್ತದೆ.॥59॥

ಮೂಲಮ್ - 60

ಅಯಾತ್ರಾಂ ಚೈವ ದೃಷ್ಟ್ವೇಮಾಂ ಮಾಗಾಂಶ್ಚ ಭೃಶದುರ್ಗಮಾನ್ ।
ಪ್ರಣತೇ ಚೈವ ಸುಗ್ರೀವೇ ನ ಮಯಾ ಕಿಂಚಿದೀರಿತಮ್ ॥

ಅನುವಾದ

ಒಂದೋ ಇದು ಯಾತ್ರೆಯ ಸಮಯವಲ್ಲ, ಇನ್ನೊಂದು ದಾರಿಗಳೂ ಅತ್ಯಂತ ದುರ್ಗಮವಾಗಿವೆ. ಅದಕ್ಕಾಗಿ ಸುಗ್ರೀವನು ನತಮಸ್ತಕನಾಗಿದ್ದರೂ ನಾನು ಅವನಲ್ಲಿ ಏನನ್ನು ಹೇಳಲಿಲ್ಲ.॥60॥

ಮೂಲಮ್ - 61

ಅಪಿ ಚಾಪಿ ಪರಿಕ್ಲಿಷ್ಟಂ ಚಿರಾದ್ದಾರೈಃ ಸಮಾಗತಮ್ ।
ಆತ್ಮಕಾರ್ಯಗರೀಯಸ್ತ್ವಾದ್ ವಕ್ತುಂ ನೇಚ್ಛಾಮಿ ವಾನರಮ್ ॥

ಅನುವಾದ

ವಾನರ ಸುಗ್ರೀವನು ಬಹಳ ದಿನಗಳಿಂದ ಕಷ್ಟ ಅನುಭವಿಸುತ್ತಿದ್ದನು ಮತ್ತು ದೀರ್ಘಕಾಲದ ಬಳಿಕ ಈಗ ತನ್ನ ಪತ್ನಿಯೊಂದಿಗೆ ಸೇರಿರುವನು. ನನ್ನ ಕಾರ್ಯವಾದರೋ ಭಾರೀ ದೊಡ್ಡದಾಗಿದೆ (ಸ್ವಲ್ಪ ದಿನಗಳಲ್ಲಿ ಮುಗಿಯು ವಂತಹುದಲ್ಲ); ಅದಕ್ಕಾಗಿ ನಾನು ಈಗ ಅವನಲ್ಲಿ ಏನನ್ನು ಹೇಳಲು ಬಯಸುವುದಿಲ್ಲ.॥61॥

ಮೂಲಮ್ - 62

ಸ್ವಯಮೇವ ಹಿ ವಿಶ್ರಮ್ಯಜ್ಞಾತ್ವಾ ಕಾಲಮುಪಾಗತಮ್ ।
ಉಪಕಾರಂ ಚ ಸುಗ್ರೀವೋ ವೇತ್ಸ್ಯತೇ ನಾತ್ರ ಸಂಶಯಃ ॥

ಅನುವಾದ

ಸ್ವಲ್ಪದಿನ ವಿಶ್ರಾಂತಿ ಪಡೆದಾಗ ಸರಿಯಾದ ಸಮಯ ಬಂತೆಂದು ತಿಳಿದು ಅವನು ಸ್ವತಃ ನನ್ನ ಉಪಕಾರವನ್ನು ತಿಳಿಯುವನು; ಇದರಲ್ಲಿ ಸಂಶಯವೇ ಇಲ್ಲ.॥62॥

ಮೂಲಮ್ - 63

ತಸ್ಮಾತ್ಕಾಲಪ್ರತೀಕ್ಷೋಽಹಂ ಸ್ಥಿತೋಽಸ್ಮಿ ಶುಭಲಕ್ಷಣ ।
ಸುಗ್ರೀವಸ್ಯ ನದೀನಾಂ ಚ ಪ್ರಸಾದಭಿಕಾಂಕ್ಷಯನ್ ॥

ಅನುವಾದ

ಆದ್ದರಿಂದ ಶುಭಲಕ್ಷಣ ಲಕ್ಷ್ಮಣ! ಸುಗ್ರೀವನ ಪ್ರಸನ್ನತೆಯನ್ನು ಮತ್ತು ನದಿಗಳ ನೀರಿನ ಸ್ವಚ್ಛತೆಯನ್ನು ಬಯಸುತ್ತಾ ಶರತ್ಕಾಲದ ಪ್ರತೀಕ್ಷೆಯಲ್ಲಿ ಸುಮ್ಮನೇ ಕುಳಿತಿರುವೆನು.॥63॥

ಮೂಲಮ್ - 64

ಉಪಕಾರೇಣ ವೀರೋ ಹಿ ಪ್ರತೀಕಾರೇಣ ಯುಜ್ಯತೇ ।
ಅಕೃತಜ್ಞೋಽಪ್ರತಿಕೃತೋ ಹಂತಿ ಸತ್ತ್ವವತಾಂ ಮನಃ ॥

ಅನುವಾದ

ಯಾರದಾದರೂ ಉಪಕಾರದಿಂದ ಉಪಕೃತನಾದ ವೀರ ಪುರುಷನು ಪ್ರತ್ಯುಪಕಾರ ಮಾಡಿ ಅದನ್ನು ಅವಶ್ಯವಾಗಿ ತೀರಿಸುವನು; ಆದರೆ ಯಾರಾದರೂ ಉಪಕಾರವನ್ನು ಮನ್ನಿಸದೆ ಅಥವಾ ಮರೆತು ಪ್ರತ್ಯುಪಕಾರದಿಂದ ಮುಖ ತಿರುಗಿಸಿದರೆ ಅವನು ಶ್ರೇಷ್ಠ ಪುರುಷರ ಮನಸ್ಸಿಗೆ ನೋವನ್ನುಂಟುಮಾಡುತ್ತಾನೆ.॥64॥

ಮೂಲಮ್ - 65

ಅಥೈವಮುಕ್ತಃ ಪ್ರಣಿಧಾಯ ಲಕ್ಷ್ಮಣಃ
ಕೃತಾಂಜಲಿಸ್ತತ್ಪ್ರತಿಪೂಜ್ಯ ಭಾಷಿತಮ್ ।
ಉವಾಚ ರಾಮಂ ಸ್ವಭಿರಾಮದರ್ಶನಂ
ಪ್ರದರ್ಶಯನ್ ದರ್ಶನಮಾತ್ಮನಃ ಶುಭಮ್ ॥

ಅನುವಾದ

ಶ್ರೀರಾಮಚಂದ್ರನು ಹೀಗೆ ಹೇಳಿದಾಗ ಲಕ್ಷ್ಮಣನು ವಿಚಾರ ಮಾಡಿ ಅವನನ್ನು ತುಂಬಾ ಪ್ರಶಂಸಿಸಿದನು ಮತ್ತು ಕೈಮುಗಿದುಕೊಂಡು ತನ್ನ ಶುಭದೃಷ್ಟಿಯ ಪರಿಚಯವನ್ನು ಕೊಡುತ್ತಾ ನಯನಾಭಿರಾಮ ಶ್ರೀರಾಮನಲ್ಲಿ ಇಂತೆಂದನು.॥65॥

ಮೂಲಮ್ - 66

ಯದುಕ್ತಮೇತತ್ತವ ಸರ್ವಮೀಪ್ಸಿತಂ
ನರೇಂದ್ರ ಕರ್ತಾ ನ ಚಿರಾದ್ಧರೀಶ್ವರಃ ।
ಶರತ್ಪ್ರತೀಕ್ಷಃ ಕ್ಷಮತಾಮಿದಂ ಭವಾನ್
ಜಲಪ್ರಪಾತಂ ರಿಪುನಿಗ್ರಹೇ ಧೃತಃ ॥

ಅನುವಾದ

ನರೇಶ್ವರ! ನೀವು ಹೇಳಿದಂತೆ ವಾನರರಾಜ ಸುಗ್ರೀವನು ಶೀಘ್ರವಾಗಿ ನಿನ್ನ ಈ ಎಲ್ಲ ಮನೋರಥಗಳನ್ನು ಸಿದ್ಧಗೊಳಿಸುವನು. ಆದ್ದರಿಂದ ನೀನು ಶತ್ರುವನ್ನು ಸಂಹರಿಸುವ ದೃಢನಿಶ್ಚಯ ಮಾಡಿ ಶರತ್ಕಾಲವನ್ನು ಪ್ರತೀಕ್ಷೆ ಮಾಡು ಹಾಗೂ ವರ್ಷಾಕಾಲದ ವಿಳಂಬವನ್ನು ಸಹಿಸು.॥66॥

ಅನುವಾದ (ಸಮಾಪ್ತಿಃ)

ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಇಪ್ಪತ್ತೆಂಟನೆಯ ಸರ್ಗ ಸಂಪೂರ್ಣವಾಯಿತು. ॥28॥