वाचनम्
ಭಾಗಸೂಚನಾ
ಪ್ರಸ್ರವಣಗಿರಿಯ ಮೇಲೆ ಶ್ರೀರಾಮ-ಲಕ್ಷ್ಮಣರ ಸಂಭಾಷಣೆ
ಮೂಲಮ್ - 1
ಅಭಿಷಿಕ್ತೇ ತು ಸುಗ್ರೀವೇ ಪ್ರವಿಷ್ಟೇ ವಾನರೇ ಗುಹಾಮ್ ।
ಆಜಗಾಮ ಸಹ ಭ್ರಾತ್ರಾಂ ರಾಮಃ ಪ್ರಸ್ರವಣಂ ಗಿರಿಮ್ ॥
ಅನುವಾದ
ವಾನರ ಸುಗ್ರೀವನ ಪಟ್ಟಾಭಿಷೇಕವಾಗಿ ಅವನು ಕಿಷ್ಕಿಂಧೆಯಲ್ಲಿ ಇರತೊಡಗಿದನು. ಆಗ ತಮ್ಮ ಲಕ್ಷ್ಮಣನೊಡನೆ ಶ್ರೀರಾಮನು ಪ್ರಸ್ರವಣಗಿರಿಗೆ ಹೋದನು.॥1॥
ಮೂಲಮ್ - 2
ಶಾರ್ದೂಲಮೃಗಸಂಘುಷ್ಟಂ ಸಿಂಹೈರ್ಭೀಮರವೈರ್ವೃತಮ್ ।
ನಾನಾಗುಲ್ಮಲತಾಗೂಢಂ ಬಹುಪಾದಪಸಂಕುಲಮ್ ॥
ಅನುವಾದ
ಅದು ಹುಲಿಗಳಿಂದಲೂ ಇತರ ಮೃಗಗಳಿಂದಲೂ ನಿನಾದಿತವಾಗಿತ್ತು. ಭಯಂಕರ ಗರ್ಜಿಸುವ ಸಿಂಹಗಳಿಂದ ಆ ಸ್ಥಾನ ತುಂಬಿಹೋಗಿತ್ತು. ನಾನಾ ಪ್ರಕಾರದ ಗಿಡಗಳಿಂದ, ಲತೆಗಳಿಂದ ಆ ಪರ್ವತವು ಆಚ್ಛಾದಿತವಾಗಿ, ದಟ್ಟವಾದ ವೃಕ್ಷಗಳಿಂದ ಅದು ಎಲ್ಲೆಡೆ ವ್ಯಾಪ್ತವಾಗಿತ್ತು.॥2॥
ಮೂಲಮ್ - 3
ಋಕ್ಷವಾನರಗೋಪುಚ್ಛೈರ್ಮಾರ್ಜಾರೈಶ್ಚ ನಿಷೇವಿತಮ್ ।
ಮೇಘರಾಶಿನಿಭಂ ಶೈಲಂ ನಿತ್ಯಂ ಶುಚಿಕರಂ ಶಿವಮ್ ॥
ಅನುವಾದ
ಕರಡಿಗಳು, ವಾನರರು, ಗೋಪುಚ್ಛರು, ಬೆಕ್ಕುಗಳು ಮೊದಲಾದ ಪ್ರಾಣಿಗಳು ಅಲ್ಲಿ ವಾಸಿಸುತ್ತಿದ್ದರು. ಆ ಪರ್ವತವು ಮೇಘ ಸಮೂಹದಂತೆ ಕಂಡುಬರುತ್ತಿತ್ತು. ಅದು ದರ್ಶಕರಿಗೆ ಮಂಗಲಮಯ ಮತ್ತು ಪವಿತ್ರವಾಗಿಸುವಂತಹುದಾಗಿತ್ತು.॥3॥
ಮೂಲಮ್ - 4
ತಸ್ಯ ಶೈಲಸ್ಯ ಶಿಖರೇ ಮಹತೀಮಾಯತಾಂ ಗುಹಾಮ್ ।
ಪ್ರತ್ಯಗೃಹ್ಣೀತ ವಾಸಾರ್ಥಂ ರಾಮಃ ಸೌಮಿತ್ರಿಣಾ ಸಹ ॥
ಅನುವಾದ
ಆ ಪರ್ವತ ಶಿಖರದ ಮೇಲೆ ಬಹಳ ದೊಡ್ಡದೊಂದು ವಿಸ್ತೃತವಾದ ಗುಹೆ ಇತ್ತು. ಲಕ್ಷ್ಮಣಸಹಿತ ಶ್ರೀರಾಮನು ವಾಸಿಸಲು ಅದನ್ನು ಆಶ್ರಯಿಸಿದನು.॥4॥
ಮೂಲಮ್ - 5½
ಕೃತ್ವಾ ಚ ಸಮಯಂ ರಾಮಃ ಸುಗ್ರೀವೇಣ ಸಹಾನಘಃ ।
ಕಾಲಯುಕ್ತಂ ಮಹದ್ವಾಕ್ಯಮುವಾಚ ರಘುನಂದನಃ ॥
ವಿನೀತಂ ಭ್ರಾತರಂ ಭ್ರಾತಾ ಲಕ್ಷ್ಮಣಂ ಲಕ್ಷ್ಮಿವರ್ಧನಮ್ ।
ಅನುವಾದ
ರಘುನಂದನ ನಿಷ್ಪಾಪ ಶ್ರೀರಾಮಚಂದ್ರನು ವರ್ಷಾಕಾಲ ಮುಗಿದಾಗ ಸುಗ್ರೀವನೊಡನೆ ರಾವಣನ ಮೇಲೆ ಆಕ್ರಮಣ ಮಾಡುವುದೆಂದು ನಿಶ್ಚಯಿಸಿ ಅಲ್ಲಿಗೆ ಬಂದಿದ್ದನು. ಅವನು ಲಕ್ಷ್ಮಿಯನ್ನು ವೃದ್ಧಿಗೊಳಿಸುವ ಲಕ್ಷ್ಮಣನಲ್ಲಿ ವಿನಯಯುಕ್ತ ಸಮಯೋಚಿತವಾಗಿ ಇಂತೆಂದೆನು.॥5½॥
ಮೂಲಮ್ - 6
ಇಯಂ ಗಿರಿಗುಹಾ ರಮ್ಯಾ ವಿಶಾಲಾ ಯುಕ್ತಮಾರುತಾ ॥
ಅಸ್ಯಾಂ ವತ್ಸ್ಯಾಮ ಸೌಮಿತ್ರೇ ವರ್ಷರಾತ್ರಮರಿಂದಮ ।
ಅನುವಾದ
ಶತ್ರುದಮನ ಸೌಮಿತ್ರಿಯೇ! ಪರ್ವತದ ಈ ಗುಹೆಯು ಬಹಳ ಸುಂದರ ಮತ್ತು ವಿಶಾಲವಾಗಿದೆ. ಇಲ್ಲಿ ಗಾಳಿಯು ಬಂದು ಹೋಗುವ ವ್ಯವಸ್ಥೆ ಇದೆ. ನಾವು ವರ್ಷಾಕಾಲದ ರಾತ್ರಿಗಳಲ್ಲಿ ಇದೇ ಗುಹೆಯಲ್ಲಿ ವಾಸಿಸುವಾ.॥6॥
ಮೂಲಮ್ - 7½
ಗಿರಿಶೃಂಗಮಿದಂ ರಮ್ಯಮುತ್ತಮಂ ಪಾರ್ಥಿವಾತ್ಮಜ ॥
ಶ್ವೇತಾಭಿಃ ಕೃಷ್ಣತಾಮ್ರಾಭಿಃ ಶಿಲಾಭಿರುಪಶೋಭಿತಮ್ ।
ಅನುವಾದ
ರಾಜಕುಮಾರ! ಪರ್ವತದ ಈ ಶಿಖರವು ಬಹಳ ರಮಣೀಯವಾಗಿದೆ. ಬಿಳಿಯ, ಕಪ್ಪಾದ, ಕೆಂಪಾದ ಎಲ್ಲ ರೀತಿಯ ಕಲ್ಲುಗಳಿಂದ ಇದು ಶೋಭಿಸುತ್ತಿದೆ.॥7½॥
ಮೂಲಮ್ - 8
ನಾನಾಧಾತುಸಮಾಕೀರ್ಣಂ ನದೀದರ್ದುರಸಂಯುತಮ್ ॥
ಮೂಲಮ್ - 9
ವಿವಿಧೈರ್ವೃಕ್ಷಷಂಡೈಶ್ಚ ಚಾರುಚಿತ್ರಲತಾಯುತಮ್ ।
ನಾನಾ ವಿಹಗಸಂಘುಷ್ಟಂ ಮಯೂರವರನಾದಿತಮ್ ॥
ಅನುವಾದ
ಇಲ್ಲಿ ನಾನಾ ಪ್ರಕಾರದ ಧಾತುಗಳ ಗಣಿಗಳಿವೆ. ಸನಿಹದಲ್ಲೇ ನದಿ ಹರಿಯುತ್ತಿದೆ. ಅದರಲ್ಲಿ ಇರುವ ಕಪ್ಪೆಗಳು ನೆಗೆಯುತ್ತಾ ಇಲ್ಲಿಗೂ ಬರುತ್ತಿವೆ. ನಾನಾ ಪ್ರಕಾರದ ವೃಕ್ಷಗಳು ಇದರ ಶೋಭೆಯನ್ನು ಹೆಚ್ಚಿಸಿವೆ. ಸುಂದರ ವಿಚಿತ್ರ ಲತೆಗಳಿಂದ ಈ ಶೈಲ ಶಿಖರವು ಹಸುರಾಗಿ ಕಾಣುತ್ತಿದೆ. ಬಗೆ-ಬಗೆಯ ಪಕ್ಷಿಗಳು ಕೂಗುತ್ತಿದ್ದು, ಸುಂದರ ನವಿಲುಗಳ ಕೇಕಾರವವು ನಿನಾದಿತವಾಗಿದೆ.॥8-9॥
ಮೂಲಮ್ - 10
ಮಾಲತೀಕುಂದಗುಲ್ಮೈಶ್ಚ ಸಿಂಧುವಾರೈಃ ಶಿರೀಷಕೈಃ ।
ಕದಂಬಾರ್ಜುನಸರ್ಜೈಶ್ಚ ಪುಷ್ಟಿತೈರುಪಶೋಭಿತಮ್ ॥
ಅನುವಾದ
ಮಾಲತಿ ಮತ್ತು ಕುಂದಪುಷ್ಪದ ಪೊದರುಗಳಿಂದ ಸುಪುಷ್ಟಿತವಾದ ಸಿಂಧುವಾರ, ಬಾಗೆ ಮರಗಳಿಂದ, ಕದಂಬ, ಅರ್ಜುನ, ಸರ್ಜವೃಕ್ಷಗಳಿಂದ ಈ ಸ್ಥಾನವು ಶೋಭಾಯಮಾನವಾಗಿದೆ.॥10॥
ಮೂಲಮ್ - 11
ಇಯಂ ಚ ನಲಿನೀ ರಮ್ಯಾ ಫುಲ್ಲಪಂಕಜಮಂಡಿತಾ ।
ನಾತಿದೂರೇ ಗುಹಾಯಾ ನೌ ಭವಿಷ್ಯತಿ ನೃಪಾತ್ಮಜ ॥
ಅನುವಾದ
ರಾಜಕುಮಾರ! ಈ ಪುಷ್ಕರಿಣಿಯು ಅರಳಿದ ಕಮಲಗಳಿಂದ ಅಲಂಕೃತವಾಗಿ ಬಹಳ ರಮಣೀಯವಾಗಿದೆ. ಈ ನಮ್ಮ ಗುಹೆಯು ಕಿಷ್ಕಿಂಧೆಗೆ ಹತ್ತಿರದಲ್ಲೇ ಇದೆ.॥11॥
ಮೂಲಮ್ - 12
ಪ್ರಾಗುದಕ್ಪ್ರವಣೇ ದೇಶೇ ಗುಹಾ ಸಾಧು ಭವಿಷ್ಯತಿ ।
ಪಶ್ಚಾಚ್ಚೈವೋನ್ನತಾ ಸೌಮ್ಯ ನಿವಾತೇಯಂ ಭವಿಷ್ಯತಿ ॥
ಅನುವಾದ
ಸೌಮ್ಯ! ಇಲ್ಲಿಯ ಸ್ಥಾನವು ಈಶಾನಕೋಣವು ತಗ್ಗಾಗಿ ಇದೆ; ಆದ್ದರಿಂದ ಈ ಗುಹೆಯು ನಮಗೆ ವಾಸಿಸಲು ಬಹಳ ಚೆನ್ನಾಗಿದೆ. ಪಶ್ಚಿಮ-ದಕ್ಷಿಣದ ಮೂಲೆಯು ಎತ್ತರವಾಗಿದ್ದು, ಈ ಗುಹೆ ಗಾಳಿ ಮತ್ತು ಮಳೆಯಿಂದ ರಕ್ಷಿಸಿಕೊಳ್ಳಲು ಉತ್ತಮವಾಗಿದೆ.॥12॥
ಮೂಲಮ್ - 13
ಗುಹಾದ್ವಾರೇ ಚ ಸೌಮಿತ್ರೇ ಶಿಲಾ ಸಮತಲಾ ಶಿವಾ ।
ಕೃಷ್ಣಾ ಚೈವಾಯತಾ ಚೈವ ಭಿನ್ನಾಂಜನಚಯೋಪಮಾ ॥
ಅನುವಾದ
ಸುಮಿತ್ರಾನಂದನ! ಈ ಗುಹೆಯ ಬಾಗಿಲಲ್ಲಿ ಸಮತಟ್ಟಾದ ಶಿಲೆ ಇದೆ, ಅದು ಹೊರಗೆ ಕುಳಿತುಕೊಳ್ಳಲು ಅನುಕೂಲವಾದ್ದರಿಂದ ಸುಖದಾಯಕವಾಗಿದೆ. ಇದು ಉದ್ದ-ಅಗಲ ಇರುವುದರ ಜೊತೆಗೆ ಗಣಿಯಿಂದ ಕಡಿದು ತೆಗೆದ ಇದ್ದಲಿನ ರಾಶಿಯಂತೆ ಕಪ್ಪಾಗಿದೆ.॥13॥
ಮೂಲಮ್ - 14
ಗಿರಿಶೃಂಗಮಿದಂ ತಾತ ಪಶ್ಯ ಚೋತ್ತರತಃ ಶುಭಮ್ ।
ಭಿನ್ನಾಂಗನಚಯಾಕಾರಮಂಭೋಧರಮಿವೋದಿತಮ್ ॥
ಅನುವಾದ
ಅಯ್ಯಾ! ನೋಡು, ಈ ಸುಂದರ ಪರ್ವತ ಶಿಖರವು ಉತ್ತರಕ್ಕೆ ತುಂಡರಿಸಿದ ಇದ್ದಲಿನ ರಾಶಿಯಂತೆ, ನೀರು ತುಂಬಿದ ಮೋಡಗಳಂತೆ ಕಪ್ಪಾಗಿ ಕಾಣುತ್ತಿದೆ.॥14॥
ಮೂಲಮ್ - 15
ದಕ್ಷಿಣಸ್ಯಾಮಪಿ ದಿಶಿ ಸ್ಥಿತಂ ಶ್ವೇತಮಿವಾಂಬರಮ್ ।
ಕೈಲಾಸಶಿಖರಪ್ರಖ್ಯಂ ನಾನಾಧಾತು ವಿರಾಜಿತಮ್ ॥
ಅನುವಾದ
ಹೀಗೆಯೇ ದಕ್ಷಿಣದ ಇದರ ಶಿಖರವು ಶ್ವೇತವಸ್ತ್ರ ಮತ್ತು ಕೈಲಾಸಶೃಂಗದಂತೆ ಬೆಳ್ಳಗಾಗಿ ಕಂಡುಬರುತ್ತಿದೆ. ನಾನಾ ಪ್ರಕಾರದ ಧಾತುಗಳು ಅದರ ಶೋಭೆ ಹೆಚ್ಚಿಸಿವೆ.॥15॥
ಮೂಲಮ್ - 16
ಪ್ರಾಚೀನವಾಹಿನೀಂ ಚೈವ ನದೀಂ ಭೃಶಮಕರ್ದಮಾಮ್ ।
ಗುಹಾಯಾಃ ಪೂರ್ವತಃ ಪಶ್ಯ ತ್ರಿಕೂಟೇ ಜಾಹ್ನವೀಮಿವ ॥
ಅನುವಾದ
ಅದೋ ನೋಡು, ಈ ಗುಹೆಯ ಒಂದು ಕಡೆ ಚಿತ್ರಕೂಟ ಪರ್ವತದ ಹತ್ತಿರ ಹರಿಯುವ ಮಂದಾಕಿನೀ ನದಿಯಂತೆ ತುಂಗಭದ್ರಾ ನದಿಯು ಹರಿಯುತ್ತಿದೆ. ಅದು ಪಶ್ಚಿಮದ ಕಡೆಗೆ ಹರಿಯುತ್ತಿದ್ದು, ಅದರಲ್ಲಿ ಕೆಸರಿನ ಹೆಸರೇ ಇಲ್ಲ.॥16॥
ಮೂಲಮ್ - 17
ಚಂದನೈಸ್ತಿಲಕೈಃ ಸಾಲೈಸ್ತಮಾಲೈರತಿಮುಕ್ತಕೈಃ ।
ಪದ್ಮಕೈಃ ಸರಲೈಶ್ಚೈವ ಅಶೋಕೈಶ್ಚೈವ ಶೋಭಿತಾಮ್ ॥
ಅನುವಾದ
ಚಂದನ, ತಿಲಕ, ಸಾಲ, ತಮಾಲ, ಹೊಂಗೆ ಮರಗಳಿಂದ, ಅಶೋಕ ಮೊದಲಾದ ನಾನಾ ಪ್ರಕಾರದ ವೃಕ್ಷಗಳಿಂದ ಆ ನದಿಯು ಹೇಗೆ ಶೋಭಿಸುತ್ತಿದೆ ನೋಡು.॥17॥
ಮೂಲಮ್ - 18
ವಾನೀರೈಸ್ತಿಮಿದೈಶ್ಚೈವ ಬಕುಲೈಃ ಕೇತಕೈರಪಿ ।
ಹಿಂತಾಲೈಸ್ತಿನಿಶೈರ್ನೀಪೈರ್ವೇತಸೈಃ ಕೃತಮಾಲಕೈಃ ॥
ಮೂಲಮ್ - 19
ತೀರಜೈಃ ಶೋಭಿತಾ ಭಾತಿ ನಾನಾ ರೂಪೈಸ್ತತಸ್ತತಃ ।
ವಸನಾಭರಣೋಪೇತಾ ಪ್ರಮದೇವಾಭ್ಯಲಂಕೃತಾ ॥
ಅನುವಾದ
ಎರಡೂ ತೀರಗಳಲ್ಲಿ ನೀರುವಂಜಿ, ಚಳ್ಳೆಗಿಡಗಳಿಂದಲೂ, ಬೆತ್ತ, ಕೇದಗೆ, ಹಿಂತಾಲ, ನೀಪ, ಬಿದಿರು, ಕೃತಮಾಲ, ಮೊದಲಾದ ಬಗೆ-ಬಗೆಯ ವೃಕ್ಷಗಳಿಂದ ಸುಶೋಭಿತವಾದ ಈ ನದಿಯು ವಸ್ತ್ರಾಭೂಷಣಗಳಿಂದ ಅಲಂಕೃತಳಾದ ಶೃಂಗಾರ ಸಜ್ಜಿತ ಯುವತಿಯಂತೆ ಅನಿಸುತ್ತದೆ.॥18-19॥
ಮೂಲಮ್ - 20
ಶತಶಃ ಪಕ್ಷಿಸಂಘೈಶ್ಚ ನಾನಾ ನಾದವಿನಾದಿತಾ
ಏಕೈಕಮನುರಕ್ತೈಶ್ಚ ಚಕ್ರವಾಕೈರಲಂಕೃತಾ ॥
ಅನುವಾದ
ಸಾವಿರಾರು ಪಕ್ಷಿ ಸಮೂಹಗಳಿಂದ ಕೂಡಿದ ಈ ನದಿಯು ಅವುಗಳ ನಾನಾ ರೀತಿಯ ಕಲರವಗಳಿಂದ ನಿನಾದಿಸುತ್ತಿದೆ. ಪರಸ್ಪರ ಅನುರಕ್ತ ಚಕ್ರವಾಕಗಳು ಈ ಸರಿತೆಯ ಶೋಭೆಯನ್ನು ಹೆಚ್ಚಿಸಿವೆ.॥20॥
ಮೂಲಮ್ - 21
ಪುಲಿನೈರತಿರಮ್ಯೈಶ್ಚ ಹಂಸಸಾರಸಸೇವಿತಾಃ ।
ಪ್ರಹಸಂತ್ಯೇವ ಭಾತ್ಯೇಷಾ ನಾರೀ ರತ್ನಸಮನ್ವಿತಾ ॥
ಅನುವಾದ
ಅತ್ಯಂತ ರಮಣೀಯ ದಡಗಳಿಂದ ಅಲಂಕೃತ, ನಾನಾ ಪ್ರಕಾರದ ರತ್ನಗಳಿಂದ ಸಂಪನ್ನ ಹಾಗೂ ಹಂಸ-ಸಾರಸಗಳಿಂದ ಸೇವಿತ ಈ ನದಿಯು ನಗುತ್ತಿರುವಂತೆ ಅನಿಸುತ್ತದೆ.॥21॥
ಮೂಲಮ್ - 22
ಕ್ವಚಿನ್ನೀಲೋತ್ಪಲೈಶ್ಛನ್ನಾ ಭಾತಿರಕ್ತೋತ್ಪಲೈಃ ಕ್ವಚಿತ್ ।
ಕ್ವಚಿದಾಭಾತಿ ಶುಕ್ಲೈಶ್ಚ ದಿವ್ಯೈಃ ಕುಮುದಕುಡ್ಮಲೈಃ ॥
ಅನುವಾದ
ಕೆಲವೆಡೆ ಇದು ನೀಲ ಕಮಲಗಳಿಂದ ಮುಚ್ಚಿದ್ದರೆ ಕೆಲವೆಡೆ ಕೆಂಪು ಕಮಲಗಳಿಂದ ಶೋಭಿಸುತ್ತಿದೆ; ಕೆಲವೆಡೆ ಬಿಳಿಯ ಹಾಗೂ ದಿವ್ಯಕುಮುದ ಮೊಗ್ಗುಗಳಿಂದ ಶೋಭಿಸುತ್ತಿದೆ.॥22॥
ಮೂಲಮ್ - 23
ಪಾರಿಪ್ಲವಶತೈರ್ಜುಷ್ಟಾ ಬರ್ಹಿಕ್ರೌಂಚವಿನಾದಿತಾ ।
ರಮಣೀಯಾ ನದೀ ಸೌಮ್ಯ ಮುನಿಸಂಘನಿಷೇವಿತಾ ॥
ಅನುವಾದ
ನೂರಾರು ಜಲ-ಪಕ್ಷಿಗಳಿಂದ ಸೇವಿತ ಹಾಗೂ ನವಿಲು, ಕ್ರೌಂಚಗಳ ಕಲರವಗಳಿಂದ ಹರಿಯುವ ಈ ಸೌಮ್ಯ ನದಿಯು ಬಹಳ ರಮಣೀಯವಾಗಿ ಕಂಡುಬರುತ್ತದೆ. ಮುನಿಗಳ ಸಮುದಾಯ ಈ ಜಲವನ್ನು ಸೇವಿಸುತ್ತಿದ್ದಾರೆ.॥23॥
ಮೂಲಮ್ - 24
ಪಶ್ಯ ಚಂದನವೃಕ್ಷಾಣಾಂ ಪಂಕ್ತೀಃ ಸುರಚಿರಾ ಇವ ।
ಕಕುಭಾನಾಂ ಚ ದೃಶ್ಯಂತೇ ಮನಸೈವೋದಿತಾಃ ಸಮಮ್ ॥
ಅನುವಾದ
ಅದೋ ನೋಡು, ಅರ್ಜುನ ಮತ್ತು ಚಂದನ ವೃಕ್ಷಗಳ ಪಂಕ್ತಿಗಳು ಎಷ್ಟು ಸುಂದರವಾಗಿ ಕಾಣುತ್ತದೆ. ಇದು ಮನಸ್ಸಿನ ಸಂಕಲ್ಪದೊಂದಿಗೇ ಪ್ರಕಟಳಾಗಿರುವಳು.॥24॥
ಮೂಲಮ್ - 25
ಅಹೋ ಸುರಮಣೀಯೋಽಯಂ ದೇಶಃ ಶತ್ರುನಿಷೂದನ ।
ದೃಢಂ ರಂಸ್ಯಾವ ಸೌಮಿತ್ರೇ ಸಾಧ್ವತ್ರ ನಿವಸಾವಹೇ ॥
ಅನುವಾದ
ಶತ್ರುಸೂದನ ಸುಮಿತ್ರಾಕುಮಾರ! ಈ ಸ್ಥಳವು ಅತ್ಯಂತ ರಮಣೀಯ ಮತ್ತು ಅದ್ಭುತವಾಗಿದೆ. ಇಲ್ಲಿ ನಮ್ಮ ಮನಸ್ಸು ಬಹಳ ರಮಿಸೀತು; ಆದ್ದರಿಂದ ಇಲ್ಲೇ ಇರುವುದು ಸರಿಯಾಗಬಹುದು.॥25॥
ಮೂಲಮ್ - 26
ಇತಶ್ಚ ನಾತಿದೂರೇ ಸಾ ಕಿಷ್ಕಿಂಧಾ ಚಿತ್ರಕಾನನಾ ।
ಸುಗ್ರೀವಸ್ಯ ಪುರೀ ರಮ್ಯಾ ಭವಿಷ್ಯತಿ ನೃಪಾತ್ಮಜ ॥
ಅನುವಾದ
ರಾಜಕುಮಾರ! ವಿಚಿತ್ರ ಕಾನನಗಳಿಂದ ಸುಶೋಭಿತವಾದ ಸುಗ್ರೀವನ ರಮಣೀಯ ಕಿಷ್ಕಿಂಧೆಯೂ ಇಲ್ಲಿಂದ ದೂರವಿಲ್ಲ.॥26॥
ಮೂಲಮ್ - 27
ಗೀತವಾದಿತ್ರನಿರ್ಘೋಷಃ ಶ್ರೂಯತೇ ಜಯತಾಂ ವರ ।
ನದತಾಂ ವಾನರಾಣಾಂ ಚ ಮೃದಂಗಾಡಂಬರೈಃ ಸಹ ॥
ಅನುವಾದ
ವಿಜಯೀ ವೀರರಲ್ಲಿ ಶ್ರೇಷ್ಠ ಲಕ್ಷ್ಮಣಾ! ಮೃದಂಗದ ಮಧುರ ಧ್ವನಿಯೊಂದಿಗೆ ಗರ್ಜಿಸುತ್ತಿರುವ ವಾನರರ ಗೀತೆ ಮತ್ತು ವಾದ್ಯಗಳ ಗಂಭೀರಘೋಷವೂ ಇಲ್ಲಿಂದ ಕೇಳಿ ಬರುತ್ತದೆ.॥27॥
ಮೂಲಮ್ - 28
ಲಬ್ಧ್ವಾ ಭಾರ್ಯಾಂ ಕಪಿವರಃ ಪ್ರಾಪ್ಯ ರಾಜ್ಯಂ ಸುಹೃದ್ವತಃ ।
ಧ್ರುವಂ ನಂದತಿ ಸುಗ್ರೀವಃ ಸಂಪ್ರಾಪ್ಯ ಮಹತೀಂ ಶ್ರಿಯಮ್ ॥
ಅನುವಾದ
ಕಪಿಶ್ರೇಷ್ಠ ಸುಗ್ರೀವನು ತನ್ನ ಪತ್ನಿಯನ್ನು ಪಡೆದು, ರಾಜ್ಯವನ್ನು ಹಸ್ತಗತಮಾಡಿಕೊಂಡು, ಭಾರೀ ಲಕ್ಷ್ಮಿಯ ಮೇಲೆ ಅಧಿಕಾರ ಪಡೆದು ನಿಶ್ಚಯವಾಗಿ ಸುಹೃದರೊಂದಿಗೆ ಆನಂದೋತ್ಸವ ಆಚರಿಸಬಹುದು.॥28॥
ಮೂಲಮ್ - 29
ಇತ್ಯುಕ್ತ್ವಾ ನ್ಯವಸತ್ತತ್ರ ರಾಘವಃ ಸಹಲಕ್ಷ್ಮಣಃ ।
ಬಹುದೃಶ್ಯದರೀಕುಂಜೇ ತಸ್ಮಿನ್ ಪ್ರಸ್ರವಣೇ ಗಿರೌ ॥
ಅನುವಾದ
ಹೀಗೆ ಹೇಳಿ ಶ್ರೀರಾಮಚಂದ್ರನು ಲಕ್ಷ್ಮಣನೊಂದಿಗೆ ಅನೇಕ ಕಂದಕಗಳಿಂದ, ಕುಂಜಗಳಿಂದ ಕೂಡಿದ ಆ ಪ್ರಸ್ರವಣ ಪರ್ವತದ ಮೇಲೆ ವಾಸಿಸತೊಡಗಿದನು.॥29॥
ಮೂಲಮ್ - 30½
ಸುಸುಖೇಹಿ ಬಹುದ್ರವ್ಯೇ ತಸ್ಮನ್ ಹಿ ಧರಣೀಧರೇ ।
ವಸತಸ್ತಸ್ಯ ರಾಮಸ್ಯ ರತಿರಲ್ಪಾಪಿ ನಾಭವತ್ ॥
ಹೃತಾಂ ಹಿ ಭಾರ್ಯಾಂ ಸ್ಮರತಃ ಪ್ರಾಣೇಭ್ಯೋಽಪಿ ಗರೀಯಸೀಮ್ ।
ಅನುವಾದ
ಆ ಪರ್ವತದಲ್ಲಿ ಪರಮ ಸುಖಪ್ರದವಾದ ಅನೇಕ ಫಲ ಮೂಲ ಮೊದಲಾದ ಆವಶ್ಯಕ ಪದಾರ್ಥಗಳಿದ್ದರೂ ರಾಕ್ಷಸನಿಂದ ಕದ್ದುಕೊಂಡು ಹೋದ ಪ್ರಾಣಕ್ಕಿಂತ ಮಿಗಿಲಾದ ಆದರಣೀಯ ಸೀತೆಯನ್ನು ಸ್ಮರಿಸುತ್ತಾ ಭಗವಾನ್ ಶ್ರೀರಾಮನಿಗೆ ಅಲ್ಲಿ ಸ್ವಲ್ಪವೂ ಸುಖ ಸಿಗುತ್ತಿರಲಿಲ್ಲ.॥30॥
ಮೂಲಮ್ - 31½
ಉದಯಾಭ್ಯುದಿತಂ ದೃಷ್ಟ್ವಾಶಶಾಂಕಂ ಚ ವಿಶೇಷತಃ ॥
ಆವಿವೇಶ ನ ತಂ ನಿದ್ರಾ ನಿಶಾಸು ಶಯನಂ ಗತಮ್ ।
ಅನುವಾದ
ವಿಶೇಷವಾಗಿ ಉದಯಾಚಲದಲ್ಲಿ ಉದಯಿಸಿದ ಚಂದ್ರನನ್ನು ದರ್ಶಿಸುತ್ತಾ ರಾತ್ರೆಯಲ್ಲಿ ಶಯ್ಯೆಯಲ್ಲಿ ಮಲಗಿದರೂ ಅವನಿಗೆ ನಿದ್ದೆ ಬರುತ್ತಿರಲಿಲ್ಲ.॥31॥
ಮೂಲಮ್ - 32
ತತ್ಸಮುತ್ಥೇನ ಶೋಕೇನ ಭಾಷ್ಪೋಪಹತಚೇತನಮ್ ॥
ಮೂಲಮ್ - 33
ತಂ ಶೋಚಮಾನಂ ಕಾಕುತ್ಸ್ಥಂ ನಿತ್ಯಂ ಶೋಕಪರಾಯಣಮ್ ।
ತುಲ್ಯದುಃಖೋಽಬ್ರವೀದ್ ಭ್ರಾತಾ ಲಕ್ಷ್ಮಣೋಽನುನಯಂ ವಚಃ ॥
ಅನುವಾದ
ಸೀತೆಯ ವಿಯೋಗ ಜನಿತ ಶೋಕದಿಂದ ಕಂಬನಿ ಹರಿಸುತ್ತಾ ಅವನು ನಿಶ್ಚೇಷ್ಟಿತನಂತಾಗಿದ್ದನು. ಶ್ರೀರಾಮನು ನಿರಂತರ ಶೋಕಮಗ್ನನಾಗಿ ಚಿಂತಿಸುತ್ತಿರುವುದನ್ನು ನೋಡಿ ಅವನ ದುಃಖದಲ್ಲಿ ಸಮಾನವಾಗಿ ಭಾಗಿಯಾದ ಲಕ್ಷ್ಮಣನು ಅವನಲ್ಲಿ ವಿನಯಪೂರ್ವಕ ಹೇಳಿದನು.॥32-33॥
ಮೂಲಮ್ - 34
ಅಲಂ ವೀರ ವೃಥಾಂ ಗತ್ವಾ ನ ತ್ವಂ ಶೋಚಿತುಮರ್ಹಸಿ ।
ಶೋಚತೋ ಹ್ಯವಸೀದಂತಿ ಸರ್ವಾರ್ಥಾ ವಿದಿತಂ ಹಿ ತೇ ॥
ಅನುವಾದ
ವೀರನೇ! ಹೀಗೆ ವ್ಯಥಿತನಾಗುವುದರಿಂದ ಯಾವುದೇ ಲಾಭವಿಲ್ಲ. ಆದ್ದರಿಂದ ನೀನು ಶೋಕಿಸಬಾರದು; ಏಕೆಂದರೆ ಶೋಕಿಸುವ ಪುರುಷನ ಎಲ್ಲ ಮನೋರಥಗಳು ನಾಶವಾಗುವವು, ಇದು ನಿನಗೆ ತಿಳಿದೇ ಇದೆ.॥34॥
ಮೂಲಮ್ - 35
ಭವಾನ್ಕ್ರಿಯಾಪರೋ ಲೋಕೇಭವಾನ್ ದೇವಪರಾಯಣಃ ।
ಆಸ್ತಿಕೋ ಧರ್ಮಶೀಲಶ್ಚ ವ್ಯವಸಾಯೀ ಚ ರಾಘವ ॥
ಅನುವಾದ
ರಘುನಂದನ! ನೀನು ಜಗತ್ತಿನಲ್ಲಿ ಕರ್ಮಠ ವೀರನಾಗಿದ್ದು, ದೇವತೆಗಳನ್ನು ಆದರಿಸುವವನಾಗಿರುವೆ; ಆಸ್ತಿಕ, ಧರ್ಮಾತ್ಮ ಮತ್ತು ಉದ್ಯೋಗಿಯಾಗಿರುವೆ.॥35॥
ಮೂಲಮ್ - 36
ನ ಹ್ಯವ್ಯವಸಿತಃ ಶತ್ರುಂ ರಾಕ್ಷಸಂ ತಂ ವಿಶೇಷತಃ ।
ಸಮರ್ಥಸ್ತ್ವಂ ರಣೇ ಹಂತುಂ ವಿಕ್ರಮೇ ಜಿಹ್ಮಕಾರಿಣಮ್ ॥
ಅನುವಾದ
ನೀನು ಶೋಕದಿಂದ ಉದ್ಯೋಗವನ್ನು ಬಿಟ್ಟು ಕುಳಿತುಕೊಂಡರೆ, ಪರಾಕ್ರಮದಸ್ಥಾನ ಸ್ವರೂಪವಾದ ಸಮರಾಂಗಣದಲ್ಲಿ ಕುಟಿಲಕರ್ಮ ಮಾಡುವ ಶತ್ರುವನ್ನು, ವಿಶೇಷವಾಗಿ ರಾಕ್ಷಸರನ್ನು ವಧಿಸಲು ಅಸಮರ್ಥನಾಗುವೆ.॥36॥
ಮೂಲಮ್ - 37
ಸಮುನ್ಮೂಲಯ ಶೋಕಂ ತ್ವಂ ವ್ಯವಸಾಯಂ ಸ್ಥಿರಂ ಕುರು ।
ತತಃ ಸಪರಿವಾರಂ ತಂ ರಾಕ್ಷಸಂ ಹಂತುಮರ್ಹಸಿ ॥
ಅನುವಾದ
ಆದ್ದರಿಂದ ನೀನು ನಿನ್ನ ಶೋಕದ ಬೇರನ್ನೇ ಕಿತ್ತು ಬಿಸಾಡು ಹಾಗೂ ಉದ್ಯೋಗದ ವಿಚಾರವನ್ನು ಸ್ಥಿರಗೊಳಿಸು. ಆಗಲೇ ನೀನು ಪರಿವಾರ ಸಹಿತ ಆ ರಾಕ್ಷಸರನ್ನು ವಿನಾಶಮಾಡಬಲ್ಲೆ.॥37॥
ಮೂಲಮ್ - 38
ಪೃಥಿವೀಮಪಿ ಕಾಕುತ್ಸ್ಥ ಸಸಾಗರವನಾಚಲಾಮ್ ।
ಪರಿವರ್ತಯಿತುಂ ಶಕ್ತಃ ಕಿಂ ಪುನಸ್ತಂ ಹಿ ರಾವಣಮ್ ॥
ಅನುವಾದ
ಕಾಕುತ್ಸ್ಥನೇ! ನೀನಾದರೋ ಸಮುದ್ರ, ವನ, ಪರ್ವತಸಹಿತ ಇಡೀ ಪೃಥಿವಿಯನ್ನು ಬುಡಮೇಲಾಗಿಸಬಲ್ಲೆ. ಹಾಗಿರುವಾಗ ಆ ರಾವಣನನ್ನು ಸಂಹರಿಸುವುದು ಯಾವ ದೊಡ್ಡ ಮಾತಾಗಿದೆ.॥38॥
ಮೂಲಮ್ - 39
ಶರತ್ಕಾಲಂ ಪ್ರತೀಕ್ಷಸ್ವ ಪ್ರಾವೃಟ್ಕಾಲೋಽಯಮಾಗತಃ ।
ತತಃ ಸರಾಷ್ಟ್ರಂ ಸಗಣಂ ರಾವಣಂ ತ್ವಂ ವಧಿಷ್ಯಸಿ ॥
ಅನುವಾದ
ಈಗ ವರ್ಷಾಕಾಲ ಬಂದಿದೆ. ಇನ್ನು ಶರದ್ ಋತುವನ್ನು ಪ್ರತೀಕ್ಷೆ ಮಾಡು. ಮತ್ತೆ ರಾಜ್ಯ ಮತ್ತು ಸೈನ್ಯಸಹಿತ ರಾವಣನ ವಧೆ ಮಾಡು.॥39॥
ಮೂಲಮ್ - 40
ಅಹಂ ತು ಖಲು ತೇ ವೀರ್ಯಂ ಪ್ರಸುಪ್ತಂ ಪ್ರತಿಬೋಧಯೇ ।
ದೀಪ್ತೈರಾಹುತಿಭಿಃ ಕಾಲೇ ಭಸ್ಮಚ್ಛನ್ನಮಿವಾನಲಮ್ ॥
ಅನುವಾದ
ಬೂದಿಯಲ್ಲಿ ಅಡಗಿದ್ದ ಅಗ್ನಿಯನ್ನು ಹವನಕಾಲದಲ್ಲಿ ಆಹುತಿಗಳ ಮೂಲಕ ಪ್ರಜ್ವಲಿತಗೊಲಿಸಿದಂತೆಯೇ ಮಲಗಿರುವ ನಿನ್ನ ಪರಾಕ್ರಮವನ್ನು ನಾನು ಎಬ್ಬಿಸುತ್ತಿದ್ದೇನೆ. ಮರೆತು ಹೋದ ವಿಕ್ರಮವನ್ನು ಜ್ಞಾಪಿಸುತ್ತಿದ್ದೇನೆ.॥40॥
ಮೂಲಮ್ - 41
ಲಕ್ಷ್ಮಣಸ್ಯ ತು ತದ್ವಾಕ್ಯಂ ಪ್ರತಿಪೂಜ್ಯ ಹಿತಂ ಶುಭಮ್ ।
ರಾಘವಃ ಸುಹೃದಂ ಸ್ನಿಗ್ಧಮಿದಂ ವಚನಮಬ್ರವೀತ್ ॥
ಅನುವಾದ
ಲಕ್ಷ್ಮಣನ ಈ ಶುಭ ಹಾಗೂ ಹಿತಕರ ಮಾತನ್ನು ಗೌರವಿಸುತ್ತಾ ಶ್ರೀರಘುನಾಥನು ತನ್ನ ಸ್ನೇಹೀ, ಸುಹೃತ್ ಸುಮಿತ್ರಾಕುಮಾರನಲ್ಲಿ ಈ ಪ್ರಕಾರ ಹೇಳಿದನು.॥41॥
ಮೂಲಮ್ - 42
ವಾಚ್ಯಂ ಯದನುರಕ್ತೇನ ಸ್ನಿಗ್ಧೇನ ಚ ಹಿತೇನ ಚ ।
ಸತ್ಯವಿಕ್ರಮಯುಕ್ತೇನ ತದುಕ್ತಂ ಲಕ್ಷ್ಮಣ ತ್ವಯಾ ॥
ಅನುವಾದ
ಲಕ್ಷ್ಮಣನೇ! ಅನುರಾಗೀ, ಸ್ನೇಹೀ, ಹಿತೈಷಿ ಮತ್ತು ಸತ್ಯ ಪರಾಕ್ರಮೀ ವೀರನು ಹೇಗೆ ಮಾತನಾಡಬೇಕೋ ಹಾಗೆಯೇ ನೀನು ಹೇಳಿರುವೆ.॥42॥
ಮೂಲಮ್ - 43
ಏಷಃ ಶೋಕಃ ಪರಿತ್ಯಕ್ತಃ ಸರ್ವಕಾರ್ಯಾವಸಾದಕಃ ।
ವಿಕ್ರಮೇಷ್ವಪ್ರತಿಹತಂ ತೇಜಃ ಪ್ರೋತ್ಸಾಹಯಾಮ್ಯಹಮ್ ॥
ಅನುವಾದ
ಎಲ್ಲ ರೀತಿಯ ಕಾರ್ಯವನ್ನು ಕೆಡಿಸುವ ಶೋಕವನ್ನು ನಾನು ತ್ಯಜಿಸಿಬಿಟ್ಟೆ ನೋಡು. ಈಗ ನಾನು ಪರಾಕ್ರಮ ವಿಷಯಕ ದುರ್ಧರ್ಷ ತೇಜವನ್ನು ಪ್ರೋತ್ಸಾಹಿಸುತ್ತಿದ್ದೇನೆ (ಹೆಚ್ಚಿಸುತ್ತಿದ್ದೇನೆ).॥43॥
ಮೂಲಮ್ - 44
ಶರತ್ಕಾಲಂ ಪ್ರತೀಕ್ಷಿಷ್ಯೇ ಸ್ಥಿತೋಽಸ್ಮಿ ವಚನೇ ತವ ।
ಸುಗ್ರೀವಸ್ಯ ನದೀನಾಂ ಚ ಪ್ರಸಾದಮನುಪಾಲಯನ್ ॥
ಅನುವಾದ
ನಿನ್ನ ಮಾತನ್ನು ಒಪ್ಪಿಕೊಳ್ಳುತ್ತೇನೆ. ಸುಗ್ರೀವನು ಪ್ರಸನ್ನನಾಗಿ ಸಹಾಯ ಮಾಡುವ ಮತ್ತು ನದಿಗಳ ನೀರು ಸ್ವಚ್ಛವಾಗುವ ದಾರಿ ನೋಡುತ್ತಾ, ನಾನು ಶರತ್ಕಾಲವನ್ನು ಪ್ರತೀಕ್ಷಿಸುತ್ತಿದ್ದೇನೆ.॥44॥
ಮೂಲಮ್ - 45
ಉಪಕಾರೇಣ ವೀರಸ್ತು ಪ್ರತಿಕಾರೇಣ ಯುಜ್ಯತೇ ।
ಅಕೃತಜ್ಞೋಽಪ್ರತಿಕೃತೋ ಹಂತಿ ಸತ್ತ್ವವತಾಂ ಮನಃ ॥
ಅನುವಾದ
ಯಾರದಾದರೂ ಉಪಕಾರದಿಂದ ಉಪಕೃತನಾದ ಮನುಷ್ಯನು ಪ್ರತ್ಯುಪಕಾರ ಮಾಡಿ ಅದನ್ನು ಅವಶ್ಯವಾಗಿ ತೀರಿಸುತ್ತಾನೆ; ಆದರೆ ಯಾವುದೇ ಉಪಕಾರವನ್ನು ಮನ್ನಿಸದೆ, ಮರೆತು ಪ್ರತ್ಯುಪಕಾರದಿಂದ ಹಿಂದೆಗೆಯುವವನು ಶಕ್ತಿಶಾಲಿ ಶ್ರೇಷ್ಠಪುರುಷನ ಮನಸ್ಸಿಗೆ ನೋವುಂಟುಮಾಡುತ್ತಾನೆ.॥45॥
ಮೂಲಮ್ - 46
ತದೇವ ಮುಕ್ತಃ ಪ್ರಣಿಧಾಯ ಲಕ್ಷ್ಮಣಃ
ಕೃತಾಂಜಲಿಸ್ತತ್ಪ್ರತಿಪೂಜ್ಯ ಭಾಷಿತಮ್ ।
ಉವಾಚ ರಾಮಂ ಸ್ವಭಿರಾಮದರ್ಶನಂ
ಪ್ರದರ್ಶಯನ್ ದರ್ಶನಮಾತ್ಮನಃ ಶುಭಮ್ ॥
ಅನುವಾದ
ಶ್ರೀರಾಮನ ಆ ಮಾತನ್ನು ಯುಕ್ತಿಯುಕ್ತವೆಂದು ತಿಳಿದು ಲಕ್ಷ್ಮಣನು ಭೂರಿ-ಭೂರಿ ಪ್ರಶಂಸಿಸುತ್ತಾ, ಎರಡೂ ಕೈಮುಗಿದು ತನ್ನ ಶುಭದೃಷ್ಟಿಯ ಪರಿಚಯ ಕೊಡುತ್ತಾ ಅವನು ನಯನಾಭಿರಾಮ ಶ್ರೀರಾಮನಲ್ಲಿ ಇಂತೆಂದನು.॥46॥
ಮೂಲಮ್ - 47
ಯಥೋಕ್ತಮೇತತ್ ತವ ಸರ್ವಮೀಪ್ಸಿತಂ
ನರೇಂದ್ರಕರ್ತಾ ನ ಚಿರಾತ್ ತು ವಾನರಃ ।
ಶರತ್ಪ್ರತೀಕ್ಷಃ ಕ್ಷಮತಾಮಿಮಂ ಭವಾನ್ ।
ಜಲಪ್ರಪಾತಂ ರಿಪು ನಿಗ್ರಹೇ ಧೃತಃ ॥
ಅನುವಾದ
ನರೇಶ್ವರನೇ! ನೀನು ಹೇಳಿದಂತೆ ವಾನರರಾಜ ಸುಗ್ರೀವನು ನಿನ್ನ ಎಲ್ಲ ಮನೋರಥಗಳನ್ನು ಸಿದ್ಧಗೊಳಿಸುವನು. ಆದ್ದರಿಂದ ನೀನು ಶತ್ರುವನ್ನು ಸಂಹಾರಮಾಡಲು ದೃಢ ನಿಶ್ಚಯಿಸಲು ಶರತ್ಕಾಲವನ್ನು ಪ್ರತೀಕ್ಷೆ ಮಾಡುತ್ತಿರು ಹಾಗೂ ಈ ವರ್ಷಾಕಾಲದ ವಿಳಂಬವನ್ನು ಸಹಿಸು.॥47॥
ಮೂಲಮ್ - 48
ನಿಯಮ್ಯ ಕೋಪಂ ಪ್ರತಿಪಾಲ್ಯತಾಂ ಶರತ್
ಕ್ಷಮಸ್ವ ಮಾಸಾಂಶ್ಚತುರೋ ಮಯಾ ಸಹ ।
ವಸಾಚಲೇಽಸ್ಮಿನ್ ಮೃಗರಾಜಸೇವಿತೇ
ಸಂವರ್ತಯನ್ಶತ್ರುವಧೇ ಸಮರ್ಥಃ ॥
ಅನುವಾದ
ಕ್ರೋಧವನ್ನು ಹತೋಟಿಯಲ್ಲಿಟ್ಟು ಶರತ್ಕಾಲದ ದಾರಿ ನೋಡುತ್ತಾ ಇರು. ಮಳೆಗಾಲದ ನಾಲ್ಕು ತಿಂಗಳುಗಳವರೆಗೆ ಅದರ ಕಷ್ಟಗಳನ್ನು ಸಹಿಸು. ಶತ್ರುವಧೆಯಲ್ಲಿ ಸಮರ್ಥನಾಗಿದ್ದರೂ ಈ ಮಳೆಗಾಲವನ್ನು ಕಳೆಯುತ್ತಾ ನನ್ನೊಂದಿಗೆ ಈ ಸಿಂಹಸೇವಿತ ಪರ್ವತದ ಮೇಲೆ ನಿವಾಸ ಮಾಡು.॥48॥
ಅನುವಾದ (ಸಮಾಪ್ತಿಃ)
ಶ್ರೀ ವಾಲ್ಮೀಕಿವಿರಚಿತ ಆರ್ಷರಾಮಾಯಣ ಆದಿಕಾವ್ಯದ ಕಿಷ್ಕಿಂಧಾಕಾಂಡದ ಇಪ್ಪತ್ತೇಳನೆಯ ಸರ್ಗ ಸಂಪೂರ್ಣವಾಯಿತು.॥27॥